Tag: Education Minister Suresh Kumar

  • ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಎನ್‍ಟಿಎಸ್  ಸ್ಕಾಲರ್ ಶಿಪ್ ಪರೀಕ್ಷೆ: ಸುರೇಶ್ ಕುಮಾರ್

    ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಎನ್‍ಟಿಎಸ್ ಸ್ಕಾಲರ್ ಶಿಪ್ ಪರೀಕ್ಷೆ: ಸುರೇಶ್ ಕುಮಾರ್

    ಬೆಂಗಳೂರು: ಎನ್ ಸಿ ಆರ್ ಟಿ ಮಾರ್ಗದರ್ಶನದಲ್ಲಿ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಕ್ಯು.ಎಸ್.ಕ್ಯು.ಎ..ಎ.ಸಿ. ವತಿಯಿಂದ ನಡೆಸಲಾಗುವ ಎನ್‍ಟಿಎಸ್ ಮೊದಲನೇ ಹಂತದ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ.

    ಪ್ರಸ್ತುತ ವರ್ಷದಲ್ಲಿ 10ನೇ ತರಗತಿಯಲ್ಲಿ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳು ಈ ಪರೀಕ್ಷೆ ತೆಗೆದುಕೊಳ್ಳಬಹುದಾಗಿದ್ದು, ಪರೀಕ್ಷೆ 2021ನೇ ಜನವರಿ 24ರಂದು ನಡೆಯಲಿದೆ. ವಿದ್ಯಾರ್ಥಿವೇತನ ಪಡೆಯುವ ಹಿನ್ನೆಲೆಯಲ್ಲಿ ನಡೆಯುವ ಈ ಪರೀಕ್ಷೆಯನ್ನು ಹೆಚ್ಚಿನ ವಿದ್ಯಾರ್ಥಿಗಳು ತೆಗೆದುಕೊಳ್ಳಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

    ಸರ್ಕಾರಿ, ಅನುದಾನಿತ, ಅನುದಾನ ರಹಿತ, ಸ್ಥಳೀಯ ಸಂಸ್ಥೆಗಳ ಹಾಗೆಯೇ ದೂರಶಿಕ್ಷಣದಲ್ಲಿ ಅಭ್ಯಸಿಸುತ್ತಿರುವ 10ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಬಹುದಾಗಿದೆ. ಈ ಕುರಿತು ಪರೀಕ್ಷೆ ಕುರಿತು ಯಾವುದೇ ಗೊಂದಲವಿಲ್ಲದೇ ಪರೀಕ್ಷೆ ಅರ್ಜಿ ಭರ್ತಿ ಮಾಡಲು ಕೆಎಸ್‍ಇಇಬಿ ವೆಬ್‍ಸೈಟ್‍ನಲ್ಲಿ ಅಪ್‍ಲೋಡ್ ಮಾಡಲಾಗಿದೆ. ಹೆಚ್ಚಿನ ವಿವರಗಳಿಗೆ ಶಾಲೆಗಳ ಮುಖ್ಯೋಪಾಧ್ಯಾಯರು kseeb.kar.nic.in ವೆಬ್‍ಸೈಟ್ ಮೂಲಕ ಲಾಗಿನ್ ಆಗಿ ಎನ್‍ಟಿಎಸ್ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಪರೀಕ್ಷೆ ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಬೌದ್ಧಿಕ ಸಾಮರ್ಥ್ಯ ಮತ್ತು ಪ್ರಾಸಂಗಿಕ ಪ್ರವೃತ್ತಿ ಪರೀಕ್ಷೆಗಳು ನಡೆಯಲಿದ್ದು, ಕನ್ನಡ, ಇಂಗ್ಲಿಷ್, ಉರ್ದು ಮತ್ತು ಮರಾಠಿ ಮಾಧ್ಯಮಗಳಲ್ಲಿ ತೆಗೆದುಕೊಳ್ಳಬಹುದಾಗಿದೆ. ಪರೀಕ್ಷೆಗೆ ನವೆಂಬರ್ 30ರೊಳಗೆ ಅರ್ಜಿ ಸಲ್ಲಿಸಬಹುದು.

    ಮೊದಲ ಹಂತದ ಪರೀಕ್ಷೆ ನಂತರ ದ್ವಿತೀಯ ಹಂತದ ಪರೀಕ್ಷೆ ನಡೆಯಲಿದ್ದು, ದ್ವಿತೀಯ ಹಂತದ ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪಿಯು ತರಗತಿಗಳ ಅಭ್ಯಾಸದಲ್ಲಿ ಮಾಸಿಕ 1200 ರೂ. ಮತ್ತು ಪದವಿ ಮತ್ತು ಸ್ನಾತಕೋತ್ತರ ಪದವಿ ಹಂತದಲ್ಲಿ ಮಾಸಿಕ 2000 ರೂ. ಮತ್ತು ಉನ್ನತ ಶಿಕ್ಷಣದ ಹಂತದಲ್ಲಿ ಯುಜಿಸಿ ನಿಯಮಾನುಸಾರ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಹೆಚ್ಚಿನ ವಿವರಗಳಿಗೆ 080-23341615 ಕರೆ ಮಾಡಬಹುದಾಗಿದೆ. ಕಳೆದ ವರ್ಷ ಈ ಪರೀಕ್ಷೆಗೆ 1,23,101 ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದರು ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

  • ಮಕ್ಕಳು ಆನ್‍ಲೈನ್‍ನಲ್ಲಿ ಶಿಕ್ಷಣ ಪಡೆಯಲು ಇಚ್ಛಿಸಿದರೆ ಏಕೆ ತಡೆಯುತ್ತೀರಿ: ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ

    ಮಕ್ಕಳು ಆನ್‍ಲೈನ್‍ನಲ್ಲಿ ಶಿಕ್ಷಣ ಪಡೆಯಲು ಇಚ್ಛಿಸಿದರೆ ಏಕೆ ತಡೆಯುತ್ತೀರಿ: ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ

    ಬೆಂಗಳೂರು: 5ನೇ ತರಗತಿ ಒಳಗಿನ ಮಕ್ಕಳು ಆನ್‍ಲೈನ್‍ನಲ್ಲಿ ಶಿಕ್ಷಣ ಪಡೆಯಲು ಇಚ್ಛಿಸಿದರೆ ಏಕೆ ತಡೆಯುತ್ತೀರಿ ಎಂದು ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ ಮಾಡಿದೆ.

    ಒಂದರಿಂದ ಐದನೇ ತರಗತಿವರೆಗೆ ಆನ್‍ಲೈನ್ ಶಿಕ್ಷಣವನ್ನು ಸರ್ಕಾರ ರದ್ದು ಪಡಿಸಿದ್ದನ್ನು ಪ್ರಶ್ನಿಸಿ ಪ್ರಶ್ನಿಸಿ ಹೈಕೋರ್ಟ್‍ನಲ್ಲಿ ಕೆಲ ಶಾಲಾ ಆಡಳಿತ ಮಂಡಳಿಗಳು ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಮಕ್ಕಳು ಆನ್‍ಲೈನ್‍ನಲ್ಲಿ ಶಿಕ್ಷಣ ಪಡೆಯಲು ಇಚ್ಛಿಸಿದರೆ ಯಾಕೆ ತಡೆಯುತ್ತೀರಿ ಎಂದು ಸರ್ಕಾರದ ಪರ ವಕೀಲರಿಗೆ ಪ್ರಶ್ನಿಸಿದೆ.

    ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಅರ್ಜಿದಾರರ ಪರ ಅಭಿಮತ ವ್ಯಕ್ತಪಡಿಸಿದ ನ್ಯಾಯಾಲಯ, ಮೇಲ್ನೋಟಕ್ಕೆ ಸರ್ಕಾರ ಏಕಾಏಕಿ ಇಂತಹ ರದ್ದು ಆದೇಶ ಹೊರಡಿಸಿರುವುದು ಸರಿಯಲ್ಲ ಎಂದು ಅಭಿಪ್ರಾಯ ಪಟ್ಟಿದೆ. ಅಲ್ಲದೇ ಮಕ್ಕಳು ಆನ್ ಲೈನ್ ಮೂಲಕ ಶಿಕ್ಷಣ ಪಡೆಯಲು ಇಚ್ಚಿದರೆ ಸರ್ಕಾರ ಏಕೆ ತಡೆಯಬೇಕು ಎಂದು ಪ್ರಶ್ನಿಸಿದೆ.

    ನ್ಯಾಯಾಲಯದ ಪ್ರಶ್ನೆಗೆ ಉತ್ತರಿಸಲು ಸರ್ಕಾರಿ ಅಭಿಯೋಜಕರು ಸಮಯಕ್ಕೆ ಕೋರಿದ ಹಿನ್ನೆಲೆಯಲ್ಲಿ ಕೋರ್ಟ್ ವಿಚಾರಣೆಯನ್ನು ಜೂನ್ 29ಕ್ಕೆ ಮುಂದೂಡಿತು.

    ಕೊರೊನಾ ಕಾರಣದಿಂದ ಶಾಲಾ, ಕಾಲೇಜುಗಳು ಬಂದ್ ಆಗಿದ್ದು, ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ಆನ್‍ಲೈನ್ ಮೂಲಕ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಆರಂಭಿಸಿದ್ದವು. ಆದರೆ ಖಾಸಗಿ ಶಾಲೆಗಳ ಕ್ರಮಕ್ಕೆ ಬ್ರೇಕ್ ಹಾಕಿದ ರಾಜ್ಯ ಸರ್ಕಾರ 5ನೇ ತರಗತಿವರೆಗೂ ಆನ್‍ಲೈನ್ ಶಿಕ್ಷಣ ನಡೆಸದಂತೆ ಸೂಚನೆ ನೀಡಿ ಆದೇಶ ಜಾರಿ ಮಾಡಿತ್ತು. ಸರ್ಕಾರದ ಕ್ರಮ ಪ್ರಶ್ನಿಸಿದ ಕೆಲ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿವೆ.

  • ಮೊಬೈಲ್ ನಮ್ಮ ಕಂಟ್ರೋಲ್‍ನಲ್ಲಿರಬೇಕು, ನಾವು ಅದ್ರ ಕಂಟ್ರೋಲ್‍ನಲ್ಲಿರಬಾರದು: ಸಚಿವ ಸುರೇಶ್ ಕುಮಾರ್

    ಮೊಬೈಲ್ ನಮ್ಮ ಕಂಟ್ರೋಲ್‍ನಲ್ಲಿರಬೇಕು, ನಾವು ಅದ್ರ ಕಂಟ್ರೋಲ್‍ನಲ್ಲಿರಬಾರದು: ಸಚಿವ ಸುರೇಶ್ ಕುಮಾರ್

    ಕಲಬುರಗಿ: ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಅಡಿಕ್ಷನ್‍ಗೆ ಗುರಿಯಾಗುತ್ತಿದ್ದಾರೆ. ಹೀಗಾಗಿ ನಾನು ಹಲವು ಬಾರಿ ಭಾಷಣದಲ್ಲಿ ಮೊಬೈಲ್ ನಮ್ಮ ಕಂಟ್ರೋಲ್‍ನಲ್ಲಿರಬೇಕು, ನಾವು ಮೊಬೈಲ್ ಕಂಟ್ರೋಲ್‍ನಲ್ಲಿರಬಾರದು ಎಂದು ಹೇಳಿದ್ದೇನೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಶಿಕ್ಷಣ ಸಚಿವರು, ಮೊಬೈಲ್‍ಗೆ ಮಕ್ಕಳು ಹೆಚ್ಚು ಒತ್ತು ನೀಡುವ ಕಾರಣ ಮಕ್ಕಳ ಶಿಕ್ಷಣದ ಮೇಲೆ ಕೆಟ್ಟ ಪರಿಣಾಮ ಬಿರುತ್ತಿದೆ. ಮನೆಯಲ್ಲಿ ಮೊಬೈಲ್ ಫ್ರೀ ಟೈಂ ಎಂದು ಪೋಷಕರು ಮಾಡಬೇಕು. ಆ ಸಮಯದಲ್ಲಿ ಮನೆಯಲ್ಲಿ ಹಾಗೂ ಮಗುವಿನ ಶಿಕ್ಷಣದ ಬೆಳವಣಿಗೆ ಬಗ್ಗೆ ಹೆಚ್ಚಿ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

    ರಾಜ್ಯ ಸರ್ಕಾರ ಪ್ರತಿ ಶನಿವಾರದ ಬ್ಯಾಗ್ ಲೆಸ್ ಡೇ ಮಾಡಿದೆ. ಆ ದಿನ ಶಾಲೆಯಲ್ಲಿ ಮಕ್ಕಳ ಜೊತೆ ಕಥೆಗಳನ್ನು ಹೇಳುವದು ಸೇರಿದಂತೆ ಇತರೆ ಚಟುವಟಿಕೆ ಮಾಡಲು ಯೋಚಿಸಲಾಗಿದೆ. ಆದರೆ ಪ್ರತಿ ಶನಿವಾರ ಬೇಡ ತಿಂಗಳಲ್ಲಿ 2 ಶನಿವಾರ ಮಾತ್ರ ಬ್ಯಾಗ್ ಲೇಸ್ ಡೇ ಮಾಡೋಣ ಎಂದರು ಕೆಲವರು ಸಲಹೆ ನೀಡಿದ್ದಾರೆ. ಹೀಗಾಗಿ ಇದರ ಬಗ್ಗೆ ಯೋಚನೆ ನಡೆಯುತ್ತಿದ್ದು ಮುಂದಿನ ಶೈಕ್ಷಣಿಕ ವರ್ಷದ ವೇಳೆಗೆ ಅಂತಿಮ ನಿರ್ಧಾರ ಮಾಡುತ್ತೇವೆ ಎಂದರು.

  • ಸರ್ಕಾರಿ ಶಾಲೆಯಲ್ಲಿ ಕರಾಟೆ ತರಬೇತಿ ಪ್ರಾರಂಭಿಸಲು ಸಚಿವರಿಗೆ ಮನವಿ

    ಸರ್ಕಾರಿ ಶಾಲೆಯಲ್ಲಿ ಕರಾಟೆ ತರಬೇತಿ ಪ್ರಾರಂಭಿಸಲು ಸಚಿವರಿಗೆ ಮನವಿ

    ಬಳ್ಳಾರಿ/ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಕರಾಟೆ ತರಬೇತಿ ಪುನರಾರಂಭಿಸಬೇಕೆಂದು ಹಿರಿಯ ಕರಾಟೆ ತರಬೇತುದಾರರು, ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.

    ಬೆಂಗಳೂರಿನ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯಲ್ಲಿಂದು ಸಚಿವ ಎಸ್.ಸುರೇಶ್ ಕುಮಾರ್ ಅವರನ್ನು ಭೇಟಿಯಾದ ಕರಾಟೆ ಹಿರಿಯ ತರಬೇತುದಾರರ ನಿಯೋಗ, ಪ್ರೌಢ ಶಾಲೆಗಳ ವಿದ್ಯಾರ್ಥಿನಿಯರಲ್ಲಿ ಆತ್ಮರಕ್ಷಣೆ ಹೆಚ್ಚಿಸುವ ಸಲುವಾಗಿ ಈ ಕರಾಟೆ ತರಬೇತಿ ಮುಖ್ಯವಾಗಿದೆ. ಹೀಗಾಗಿ ಕರಾಟೆ ತರಬೇತಿ ಪುನರಾರಂಭಿಸಬೇಕೆಂದು ಸಚಿವರಲ್ಲಿ ಕೋರಿದ್ದಾರೆ.

    ಹಿರಿಯ ತರಬೇತುದಾರರ ಮನವಿಯನ್ನು ಆಲಿಸಿದ ಸಚಿವ ಸುರೇಶ್ ಕುಮಾರ್, ಕರಾಟೆ ತರಬೇತಿ ಪುನರಾರಂಭಿಸಲು ಚಿಂತನೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಬಳ್ಳಾರಿಯ ಹಿರಿಯ ತರಬೇತುದಾರರಾದ ಕಟ್ಟೇಸ್ವಾಮಿ, ಸುಭಾಷ್ ಚಂದ್ರ, ಕೊಪ್ಪಳದ ಹಿರಿಯ ತರಬೇತುದಾರ ಮೌನೇಶ ವಡ್ಡಟಿ, ವಿಜಯಪುರದ ಹಿರಿಯ ತರಬೇತುದಾರ ಶಿವಕುಮಾರ ಶಾರದಳ್ಳಿ ಸೇರಿದಂತೆ ಅನೇಕರು ಸಚಿವರಿಗೆ ಈ ಮನವಿ ಮಾಡಿದ್ದಾರೆ.

  • ಮೈ ನವಿರೇಳಿಸಿದ ವಿದ್ಯಾರ್ಥಿಗಳ ಸಾಹಸ ಪ್ರದರ್ಶನ

    ಮೈ ನವಿರೇಳಿಸಿದ ವಿದ್ಯಾರ್ಥಿಗಳ ಸಾಹಸ ಪ್ರದರ್ಶನ

    – ಮುದ್ದೇನಹಳ್ಳಿಯಲ್ಲಿ ವಿದ್ಯಾರ್ಥಿಗಳ ಸಾಹಸಕ್ಕೆ ಶಿಕ್ಷಣ ಸಚಿವರ ಮೆಚ್ಚುಗೆ

    ಚಿಕ್ಕಬಳ್ಳಾಪುರ: ಮಕರ ಸಂಕ್ರಾಂತಿ ಹಬ್ಬದ ನಡುವೆ ಜಾಗತಿಕ ಒಲಂಪಿಕ್ ಕ್ರೀಡೋತ್ಸವವನ್ನು ನೆನಪಿಸುವಂತೆ ಶ್ರೀಸತ್ಯಸಾಯಿ ಲೋಕಸೇವಾ ಸಮೂಹ ಸಂಸ್ಥೆಗಳ ವಾರ್ಷಿಕ ಕಲಾ ಮತ್ತು ಕ್ರೀಡೋತ್ಸವ ಇಂದು ನಡೆಯಿತು.

    ತಾಲ್ಲೂಕಿನ ಸತ್ಯಸಾಯಿ ಗ್ರಾಮದಲ್ಲಿ ಆಯೋಜನೆಗೊಂಡ ಸಂಸ್ಥೆಗಳ 45ನೇ ವರ್ಷದ ಸಾಂಸ್ಕೃತಿಕ ಮತ್ತು ಕ್ರೀಡೋತ್ಸವವನ್ನು ರಾಜ್ಯದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಉದ್ಘಾಟಿಸಿದರು. ಶ್ರೀ ಸತ್ಯಸಾಯಿ ಸಮಾಗಮ್ ಕ್ರೀಡಾಂಗಣದ ಪಶ್ಚಿಮ ದಿಕ್ಕಿನಲ್ಲಿರುವ ಸಾನರಾಯಿ ಬೆಟ್ಟದ ಮೇಲೆ ಸ್ಥಾಪಿತವಾದ ಅಗ್ನಿ ಕುಂಡಕ್ಕೆ ಜ್ಯೋತಿರ್ ವಾಹನ ಶ್ವೇತ ನಂದಿ ಕ್ರೀಡಾ ಜ್ಯೋತಿಯನ್ನು ಹೊತ್ತೊಯ್ದು ನಿರಂತರ ಐದು ದಿನಗಳ ಕಾಲ ಪ್ರಜ್ವಲಿಸುವ ಪ್ರಕಾಶಕ್ಕೆ ಸಾಂಕೇತಿಕ ಚಾಲನೆ ನೀಡುವುದರೊಂದಿಗೆ ಕಾರ್ಯಕ್ರಮಗಳು ಆರಂಭವಾದವು.

    ಕರ್ನಾಟಕ ರಾಜ್ಯದ 17 ಜಿಲ್ಲೆಗಳು ಮತ್ತು ತೆಲಂಗಾಣ ರಾಜ್ಯದ ಒಂದು ಜಿಲ್ಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಒಟ್ಟು 30 ವಿದ್ಯಾಸಂಸ್ಥೆಗಳ 4 ಸಾವಿರ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕ್ರಮಬದ್ಧವಾಗಿ ವರ್ಣರಂಜಿತ ಸಮವಸ್ತ್ರದೊಂದಿಗೆ ಪಥಸಂಚಲನ ನಡೆಸಿ ಕ್ರೀಡೋತ್ಸವದಲ್ಲಿ ತಮ್ಮ ತಮ್ಮ ವಿದ್ಯಾನಿವೇಶನಗಳ ಪ್ರಾತಿನಿಧ್ಯವನ್ನು ಪ್ರದರ್ಶಿಸಿದರು. ಉತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮೂಕವಿಸ್ಮಿತರನ್ನಾಗಿಸುವ ಬಗೆಬಗೆಯ ಯೋಗ ಭಂಗಿಗಳು, ಪ್ರಾದೇಶಿಕ ಸೊಗಡನ್ನು ಬಿಂಬಿಸುವ ಜಾನಪದ ಕಲೆಗಳು, ಭಾರತದ ಸುಪ್ರಸಿದ್ಧ ನೃತ್ಯ ಪ್ರಕಾರಗಳು, ಕರಾಟೆ ಪ್ರದರ್ಶನ, ನೆರೆಯ ಕೇರಳ ರಾಜ್ಯದ ವೀರಕಲೆ ಕಲರಿ ಯುದ್ಧ ಪ್ರಾತ್ಯಕ್ಷಿಕೆ, ಜನರನ್ನು ತುದಿಗಾಲಲ್ಲಿ ನಿಲ್ಲಿಸಿರುವ ಜಾರುಗಾಲಿ ಚಮತ್ಕಾರ, ನೆಟ್ಟ ನೋಟವನ್ನು ಅತ್ತಿತ್ತ ಕದಲಿಸದೆ ಬೆರಗಿನಿಂದ ವೀಕ್ಷಿಸುವಂತೆ ನಡೆಯಿತು.

    ವಾಯುಕ್ರೀಡೆಯಲ್ಲಿ 120 ಅಡಿ ಎತ್ತರದಲ್ಲಿ ಚಮತ್ಕಾರಿಕ ವಿನ್ಯಾಸ ರಚನೆ, ಬಿಸಿಗಾಳಿ ಬುಗ್ಗೆಯಿಂದ ಹಗ್ಗದ ಸಹಾಯವನ್ನು ಪಡೆದು ಜಾರುತ್ತಾ ನೆಲ ಸ್ಪರ್ಶ ಮಾಡುವ ವಾಯುವೀರರ ಸಾಹಸ, ಪ್ಯಾರಾಗ್ಲೈಡಿಂಗ್ ವಾಯುವಿಹಾರ, ನಾಗಾಲೋಟದಲ್ಲಿ ಜಿಗಿಯುತ್ತಾ ಮಿಂಚಿನ ವೇಗದಲ್ಲಿ ಓಡುತ್ತಿದ್ದ ಕುದುರೆಯನ್ನು ನಿಯಂತ್ರಿಸುತ್ತಾ ಸಾಹಸದ ಭಂಗಿಯನ್ನು ಪ್ರದರ್ಶಿಸಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ನೋಡುಗರ ಉಸಿರನ್ನೇ ಬಿಗಿಹಿಡಿದು, ಕಣ್ಣುರೆಪ್ಪೆ ಮಿಟುಕಿಸದಂತೆ ಮಿಂಚಿನ ಸಂಚಾರದಲ್ಲಿ ಹೊಸ ಸಾಹಸ ಪ್ರಪಂಚವನ್ನು ಸೃಷ್ಟಿಸಿದರು.

    ಮೋಟಾರ್ ಸೈಕಲ್ ಸವಾರಿ, ಯಾವ ಸಾಹಸಕ್ಕೂ ಕಡಿಮೆಯಿಲ್ಲದಂತೆ ಕೌಶಲ್ಯವನ್ನು ಮೆರೆದ ಏಕ ಚಕ್ರ ಸೈಕಲ್ ಸವಾರಿ, ಬಗೆಬಗೆಯ ಯೋಗಾಂಗ ಸಾಧನೆಗಳು, ಕ್ರಿಕೆಟ್ ಆಟದ ಚಮತ್ಕಾರಿಕ ತಂತ್ರಗಳು, ಭೂಕೇಂದ್ರಿತ ಬಹುರೂಪಿ ಕಸರತ್ತುಗಳು, ವರ್ತುಲ ವಿನ್ಯಾಸದ ರಚನೆಯಲ್ಲಿ ಸಾಹಸ ಪ್ರದರ್ಶನ ಮುಂತಾದವುಗಳು ಆರಂಭೋತ್ಸವದಲ್ಲಿ ಪ್ರದರ್ಶನಗೊಂಡು ನೆರೆದ ಸಹಸ್ರಾರು ಮಂದಿಗೆ ಸಂಕ್ರಾಂತಿ ಶುಭಾಶಯ ಸಾರುವುದರೊಂದಿಗೆ ಮನೋರಂಜನೆ, ಮನೋಲ್ಲಾಸವನ್ನು ನೀಡುವಲ್ಲಿ ಯಶಸ್ವಿಯಾದವು.

    ಉದ್ಘಾಟನಾ ಸಮಾರಂಭದಲ್ಲಿ ಉತ್ತರಾಖಂಡ ರಾಜ್ಯದ ನಗರಾಭಿವೃದ್ಧಿ ಮಂತ್ರಿಗಳಾದ ಮದನ್ ಕೌಶಿಕ್, ಶಿಕ್ಷಣ ತಜ್ಞ ಅತುಲ್ ಕೊಠಾರಿ, ನಾನಾ ರಾಜ್ಯಗಳ ಹಲವಾರು ಶಾಸಕರು, ವಿನಯಾನಂದ ಸ್ವಾಮೀಜಿ, ಆಂಟನಿ ಟ್ಯಾನಿ, ಡೇವಿಡ್ ಕಾರ್ನ್‍ಸ್ವೀಟ್, ಪ್ರೊ. ಶಶಿಧರ್ ಪ್ರಸಾದ್, ಬಿ.ಎನ್.ನರಸಿಂಹಮೂರ್ತಿ, ಬಿ.ನಾರಾಯಣ ರಾವ್, ಕರಾಯ ಸಂಜೀವ ಶೆಟ್ಟಿ ಮೊದಲಾದ ಗಣ್ಯರು ಭಾಗವಹಿಸಿದ್ರು.

    ಇದೇ ವೇಳೆ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಸರಿ ಸಮಾರು 4 ಗಂಟೆಗಳ ಕಾಲ ನಡೆದ ವಿದ್ಯಾರ್ಥಿಗಳ ಭಿನ್ನ ವಿಭಿನ್ನ ಸಾಹಸಮಯ ಪ್ರದರ್ಶನಗಳನ್ನ ಕಂಡು ನಾನು ಮೂಕವಿಸ್ಮತನಾದೆ. ಇಲ್ಲಿ ಭಾಗವಹಿಸಿದ ಮಕ್ಕಳು ಯಾರೂ ಶ್ರೀಮಂತರಲ್ಲ, ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸದ ಜೊತೆ ಜೊತೆಗೆ ಈ ರೀತಿಯ ಸಾಹಸಮಯ ಪ್ರವೃತ್ತಿಗಳನ್ನು ಕಲಿಸುವುದರ ಮೂಲಕ ಸತ್ಯಸಾಯಿ ವಿದ್ಯಾಸಂಸ್ಥೆ ವಿಶೇಷವಾಗಿದೆ. ಹೀಗಾಗಿ ಜಿಲ್ಲೆಗೊಂದು ಸರ್ಕಾರಿ ಶಾಲೆಯಂತೆ ಈ ರೀತಿಯ ಸಾಹಸ ಪ್ರವೃತ್ತಿಗಳನ್ನು ವಿದ್ಯಾರ್ಥಿಗಳ ಕಲಿಸಿ ತಯಾರಿ ಮಾಡಿದರೆ ಬಹಳ ಅನೂಕೂಲ ಆಗುತ್ತೆ ಎಂದು ಅಭಿಪ್ರಾಯಪಟ್ಟರು.

    ನಾನು ಬಹಳಷ್ಟು ಶಾಲೆಗಳಗೆ ಆನೇಕ ಕಾರ್ಯಕ್ರಮಗಳಿಗೆ ಭೇಟಿ ಕೊಟ್ಟಿದ್ದೇನೆ. ಆದರೆ ಇವತ್ತಿನ ಈ ವಿದ್ಯಾರ್ಥಿಗಳ ಈ ಕಾರ್ಯಕ್ರಮ ಅವಿಸ್ಮರಣೀಯ. ಸತ್ಯ ಸಾಯಿ ವಿದ್ಯಾಸಂಸ್ಥೆಗಳು ಸಮಾಜಕ್ಕೆ ಉತ್ತಮ ಕೊಡುಗೆ ಕೊಡುತ್ತಿವೆ ಅನ್ನೋದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ ಎಂದರು.

  • ಶಾಲಾ ಮಕ್ಕಳಿಂದಲೇ ನೂತನ ಕಟ್ಟಡ ಉದ್ಘಾಟನೆ- ಶಿಕ್ಷಣ ಸಚಿವರ ಕ್ರಮಕ್ಕೆ ಮೆಚ್ಚುಗೆ

    ಶಾಲಾ ಮಕ್ಕಳಿಂದಲೇ ನೂತನ ಕಟ್ಟಡ ಉದ್ಘಾಟನೆ- ಶಿಕ್ಷಣ ಸಚಿವರ ಕ್ರಮಕ್ಕೆ ಮೆಚ್ಚುಗೆ

    – ಮುಂದಿನ ಶೈಕ್ಷಣಿಕ ವರ್ಷದಿಂದ ಬ್ಯಾಗ್ ಲೆಸ್ ಡೇ

    ಉಡುಪಿ: ಜಿಲ್ಲೆ ಕುಂದಾಪುರ ತಾಲೂಕಿನ ಮಣೂರು ಸರಕಾರಿ ಶಾಲೆಯ ನೂತನ ಕಟ್ಟಡ ಮತ್ತು ಸಭಾಂಗಣವನ್ನು ಉದ್ಘಾಟಿಸಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ಬೆಂಗಳೂರಿಂದ ಬಂದಿದ್ದರು. ರಾಜಧಾನಿಯಿಂದ ಬಂದರೂ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದು ಮಾತ್ರ ಸರಕಾರಿ ಶಾಲೆಯ ಮಕ್ಕಳು.

    ಸಚಿವರು ಸರಕಾರಿ ಶಾಲೆಯ ಮಕ್ಕಳ ಕೈಯಲ್ಲೇ ಪ್ರಮುಖ ಕಾರ್ಯಕ್ರಮ, ಕೊಠಡಿಗಳು, ಸಭಾಂಗಣವನ್ನು ಉದ್ಘಾಟನೆ ಮಾಡಿಸಿದರು. ಮಕ್ಕಳಿಗಾಗಿರುವ ಶಾಲೆಯನ್ನು ಮಕ್ಕಳೇ ಉದ್ಘಾಟಿಸಿದ್ದಾರೆ ಎಂದು ಸುರೇಶ್ ಕುಮಾರ್ ಹೇಳಿದರು. ಸಚಿವರ ಕ್ರಮಕ್ಕೆ ಪೋಷಕರು, ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಮುಂದಿನ ಶೈಕ್ಷಣಿಕ ವರ್ಷದಿಂದ ಇಲಾಖೆ ಮೂಲಕ ಶಾಲೆಗಳಿಗೆ ಸಂಬಂಧಿಸಿದಂತೆ ನಾಲ್ಕು ನಿರ್ಣಯ ತೆಗೆದುಕೊಂಡಿದ್ದೇವೆ. ವಾರಕ್ಕೊಂದು ದಿನ ಪಠ್ಯೇತರ ಚಟುವಟಿಕೆಗಳು ಕಡ್ಡಾಯ ಮಾಡುತ್ತೇವೆ. ಪಠ್ಯಪುಸ್ತಕ ಬಿಟ್ಟು ಏನಾದರೂ ಮಾಹಿತಿ, ಚಟುವಟಿಕೆ ಮಕ್ಕಳಿಗೆ ಶಿಕ್ಷಕರು, ಶಿಕ್ಷಕೇತರರಿಂದ ಸಿಗುವಂತಾಗಲಿದೆ. ಇದಕ್ಕೆ ಈಗಾಗಲೇ ರೂಪುರೇಷೆ ನಿರ್ಮಾಣ ಮಾಡಿದ್ದೇವೆ ಎಂದರು.

    2020 ಶೈಕ್ಷಣಿಕ ವರ್ಷದಿಂದ ಸ್ಕೂಲ್ ಬ್ಯಾಗ್ ಹೊರೆ ಕಡಿಮೆಯಾಗಲಿದೆ. ಸರಕಾರಿ ಮತ್ತು ಖಾಸಗಿ ಶಾಲೆಗಳಿಗೂ ವಿಸ್ತರಣೆ ಮಾಡುತ್ತೇವೆ. ಮಕ್ಕಳ ಶಿಕ್ಷಣ ಎಷ್ಟು ಮುಖ್ಯವೋ ಅದಕ್ಕಿಂತ ಅವರ ಆರೋಗ್ಯವೂ ಮುಖ್ಯ. ಖಂಡಿತಾ ಮುಂದಿನ ವರ್ಷಕ್ಕೆ ಪುಸ್ತಕಗಳ ಸಂಖ್ಯೆಯಲ್ಲಿ ಇಳಿಮುಖವಾಗಲಿದೆ ಎಂದರು.

    ಶಿಕ್ಷಕರಲ್ಲದ ವಿಷಯ ತಜ್ಞರು ಮಕ್ಕಳಿಗೆ ಪಾಠ ಮಾಡುವ ಅವಕಾಶ ಕಲ್ಪಿಸಲು ಆ್ಯಪ್ ಮಾಡಿರುವುದಾಗಿ ಸುರೇಶ್ ಕುಮಾರ್ ಹೇಳಿದರು. ರಜೆಯ ದಿನ ಹತ್ತಿರದ ಸರ್ಕಾರಿ ಶಾಲೆಗೆ ತೆರಳಿ ಅಲ್ಲಿ ಇಂಗ್ಲೀಷ್, ಹಿಂದಿ ಮತ್ತಿತರ ಯಾವುದಾದರೂ ಸಾಮಾನ್ಯ ಜ್ಞಾನದ ವಿಚಾರದಲ್ಲಿ ಪಾಠ ಮಾಡುವ ಅವಕಾಶ ಜನಸಾಮಾನ್ಯರಿಗೆ ಕಲ್ಪಿಸಲಾಗುವುದು. ಶಿಕ್ಷಕರು, ಪೋಷಕರು ಮತ್ತು ಮಕ್ಕಳ ಉಪಯೋಗಕ್ಕೆ ಮಾರ್ಚ್ ತಿಂಗಳಿನಲ್ಲಿ ಸಹಾಯವಾಣಿ ತೆರೆಯುತ್ತೇವೆ. ಅವರ ಸಮಸ್ಯೆ ಹಾಗೂ ಗೊಂದಲಗಳನ್ನು ವಿಚಾರಣೆ ಮಾಡೋದು ನಮ್ಮ ಉದ್ದೇಶ ಎಂದರು.

  • 7ನೇ ತರಗತಿ ಪಬ್ಲಿಕ್ ಪರೀಕ್ಷೆ ಮತ್ತೆ ಜಾರಿ – ಫೇಲ್ ಮಾಡಬಾರದೆಂಬ ನಿಯಮಕ್ಕೆ ತಿಲಾಂಜಲಿ

    7ನೇ ತರಗತಿ ಪಬ್ಲಿಕ್ ಪರೀಕ್ಷೆ ಮತ್ತೆ ಜಾರಿ – ಫೇಲ್ ಮಾಡಬಾರದೆಂಬ ನಿಯಮಕ್ಕೆ ತಿಲಾಂಜಲಿ

    – ಶನಿವಾರ ಬ್ಯಾಗ್‍ಲೆಸ್ ಡೇ
    – 50 ವರ್ಷ ದಾಟಿದ ಶಿಕ್ಷಕಿಯರಿಗೆ ಕಡ್ಡಾಯ ವರ್ಗಾವಣೆ ಇಲ್ಲ

    ಬೆಂಗಳೂರು: ಒಂದನೇ ತರಗತಿಯಿಂದ ಹತ್ತನೇ ತರಗತಿವರೆಗೂ ವಿದ್ಯಾರ್ಥಿಗಳನ್ನು ಅನುತ್ತೀರ್ಣ ಮಾಡಬಾರದೆಂಬ ನಿಯಮಕ್ಕೆ ಸರ್ಕಾರ ತಿಲಾಂಜಲಿ ಇಟ್ಟಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಬಹಳ ವರ್ಷಗಳ ಹಿಂದೆ ಇದ್ದ 7ನೇ ತರಗತಿ ಪಬ್ಲಿಕ್ ಪರೀಕ್ಷೆಯನ್ನು ಮತ್ತೆ ಜಾರಿಗೆ ತರಲು ಸರ್ಕಾರ ಮುಂದಾಗಿದೆ.

    ಸರ್ವ ಶಿಕ್ಷಣ ಅಭಿಯಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ ಕುಮಾರ್, ಮಕ್ಕಳನ್ನು 10ನೇ ತರಗತಿವರೆಗೆ ಫೇಲ್ ಮಾಡದೇ ಇದ್ದರೆ ಮಕ್ಕಳ ಶೈಕ್ಷಣಿಕ ಗುಣಮಟ್ಟಕ್ಕೆ ಹೊಡೆತ ಬೀಳುತ್ತದೆ. ಹೀಗಾಗಿ ಈ ವರ್ಷದಿಂದಲೇ 7ನೇ ತರಗತಿ ಪಬ್ಲಿಕ್ ಪರೀಕ್ಷೆ ಜಾರಿಗೆ ತರಲು ನಿರ್ಧಾರ ಮಾಡಲಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದ ಮಾರ್ಚ್‍ನಲ್ಲಿ ಪಬ್ಲಿಕ್ ಪರೀಕ್ಷೆ ನಡೆಸಲಾಗುತ್ತದೆ. ಎಸ್‍ಎಸ್‍ಎಲ್‍ಸಿ ಬೋರ್ಡ್ ಪ್ರಶ್ನೆ ಪತ್ರಿಕೆ ತಯಾರಿಸಲಿದೆ. ಉತ್ತರ ಪತ್ರಿಕೆಗಳನ್ನು ಆಯಾ ಜಿಲ್ಲಾ ಮಟ್ಟದಲ್ಲಿ ಮೌಲ್ಯಮಾಪನ ಮಾಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ವಿವರಿಸಿದರು.

    ಪರೀಕ್ಷೆಯಲ್ಲಿ ನಡೆಯುವ ಅಕ್ರಮಗಳನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಅನುತ್ತೀರ್ಣರಾದ ಮಕ್ಕಳಿಗೆ ಪೂರಕ ಪರೀಕ್ಷೆ ನಡೆಸುವ ವ್ಯವಸ್ಥೆ ಮಾಡುತ್ತೇವೆ. ಪ್ರಶ್ನೆ ಪತ್ರಿಕೆ ಮಾದರಿ, ಯಾವ ರೀತಿ ಅಂಕ ಪದ್ಧತಿ ಎಲ್ಲವನ್ನು ರಚನೆಗೆ ಶಿಕ್ಷಣ ತಜ್ಞರ ತಂಡವನ್ನು ರಚನೆ ಮಾಡುತ್ತೇವೆ. ಒಂದು ವೇಳೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪರೀಕ್ಷೆ ನಡೆಸಲು ಸಾಧ್ಯವಗದಿದ್ದರೆ, ಈ ಬಗ್ಗೆ ಚರ್ಚೆ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

    ವರ್ಗಾವಣೆ ನಿಯಮ ತಿದ್ದುಪಡಿ
    ತೀವ್ರ ಗೊಂದಲಕ್ಕೆ ಕಾರಣವಾಗಿದ್ದ ಕಡ್ಡಾಯ ವರ್ಗಾವಣೆ ನಿಯಮಕ್ಕೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಅಧಿಕಾರಿಗಳ ಜೊತೆ ಸಭೆ ನಡೆಸಿ ಅಂತಿಮವಾಗಿ ಕೆಲ ತಿದ್ದುಪಡಿ ತರಲು ಸರ್ಕಾರ ನಿರ್ಧಾರ ಮಾಡಿದೆ. ಹಿಂದೆ ಇದ್ದ ಕಠಿಣ ನೀತಿಯಿಂದ ಶಿಕ್ಷಕರಿಗೆ ಅನಾನುಕೂಲವಾಗಿತ್ತು. ಹೀಗಾಗಿ ಕಡ್ಡಾಯ ವರ್ಗಾವಣೆ ಎನ್ನುವ ಪದವನ್ನೇ ತೆಗೆದು ಹಾಕಲು ಇಲಾಖೆ ನಿರ್ಧಾರ ಮಾಡಿದೆ. ಇದರಲ್ಲಿದ್ದ ಕಠಿಣ ನಿಯಮಗಳನ್ನು ಸಡಿಲ ಮಾಡಿ ಹೊಸ ನಿಯಮಗಳನ್ನು ಜಾರಿಗೆ ತರಲು ಚಿಂತನೆ ನಡೆಸಲಾಗಿದೆ. ಈ ಸುರೇಶ್ ಕುಮಾರ್ ಶಿಕ್ಷಕರಿಗೆ ಅನುಕೂಲವಾಗುವ ವರ್ಗಾವಣೆ ನಿಯಮ ಜಾರಿಗೆ ತರುತ್ತೇವೆ. ಕಡ್ಡಾಯ ವರ್ಗಾವಣೆಯಲ್ಲಿ ಬದಲಾದ ನಿಯಮಗಳನ್ನು ಈಗಾಗಲೇ ಸಿದ್ಧಪಡಿಸಲಾಗಿದೆ ಎಂದರು.

    50 ವರ್ಷ ದಾಟಿದ ಶಿಕ್ಷಕಿಯರಿಗೆ ಕಡ್ಡಾಯ ವರ್ಗಾವಣೆ ಇಲ್ಲ, 55 ವರ್ಷ ದಾಟಿದ ಪುರುಷ ಶಿಕ್ಷಕರಿಗೆ ಕಡ್ಡಾಯ ವರ್ಗಾವಣೆಯಿಂದ ವಿನಾಯಿತಿ ನೀಡಲಾಗಿದೆ. ಸಿ(ಗ್ರಾಮೀಣ) ವಲಯದಲ್ಲಿ 15 ವರ್ಷ ಒಟ್ಟಿಗೆ ಕೆಲಸ ಮಾಡಿದ್ದರೆ ಅಥವಾ ಆಗಾಗ ಕೆಲಸ ಮಾಡಿದ್ದರೆ ಮತ್ತೆ ಸಿ ವಲಯಕ್ಕೆ ವರ್ಗಾವಣೆ ಮಾಡುವುದರಿಂದ ವಿನಾಯಿತಿ ನೀಡಲಾಗಿದೆ ಎಂದು ವಿವರಿಸಿದರು.

    ಕಡ್ಡಾಯ ವರ್ಗಾವಣೆ ನಿಯಮದ ಶೇ.20ರ ಮಿತಿಯನ್ನು ಶೇ.25ಕ್ಕೆ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ. ತೀವ್ರ ಖಾಯಿಲೆಗೆ ತುತ್ತಾದ ಮಕ್ಕಳ ಶಿಕ್ಷಕರಿಗೆ ಹಾಗೂ ವಿಧವೆ ಶಿಕ್ಷಕಿಯರಿಗೂ ಕಡ್ಡಾಯ ವರ್ಗಾವಣೆಯಿಂದ ವಿನಾಯಿತಿ ನೀಡಲಾಗಿದೆ ಎಂದು ಸುರೇಶ್‍ಕುಮಾರ್ ತಿಳಿಸಿದರು.

    ಶನಿವಾರ ಬ್ಯಾಗ್ ಲೆಸ್ ಡೇ
    ಇನ್ನು ಮುಂದೆ ಪ್ರತಿ ಶನಿವಾರ ಬ್ಯಾಗ್‍ಲೆಸ್ ಡೇ ಮಾಡಲು ನಿರ್ಧರಿಸಲಾಗಿದೆ. ಪಾಠ ಬಿಟ್ಟು ಎನ್‍ಜಿಓ ಸಹಾಯದಿಂದ ಪಠ್ಯೇತರ ಚಟುವಟಿಕೆ ಬಗ್ಗೆ ಮಕ್ಕಳಿಗೆ ಆಸಕ್ತಿ ಮೂಡಿಸಲು ತಿಳಿಸಲಾಗಿದೆ. ಗ್ರಾಮ್ ಎನ್ನುವ ಎನ್‍ಜಿಓ ನವೆಂಬರ್‍ನಲ್ಲಿ ಪ್ರಾತ್ಯಕ್ಷಿಕೆ ತೋರಿಸಲಿದೆ. ಇದನ್ನು ಪರಿಶೀಲಿಸಿದ ನಂತರ ಮುಂದುವರಿಸುವ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದರು.

    ಶಾಲೆಗಳಲ್ಲಿ ಮಕ್ಕಳ ಸುರಕ್ಷಿತೆ ಬಗ್ಗೆ ಮಹತ್ವದ ನಿರ್ಧಾರ ಮಾಡಿದ್ದೇವೆ. ನಿಮ್ಹಾನ್ಸ್‍ನಿಂದ ಕೆಲ ವರದಿ ಕೂಡ ಬಂದಿತ್ತು. ಪೊಲೀಸ್ ಇಲಾಖೆಯ ಡಿಸಿಪಿ ಮಟ್ಟದಲ್ಲಿ ಬಿಇಓ ಒಳಗೊಂಡ ತಂಡ ರಚನೆಗೆ ನಿರ್ಧಾರ ಮಾಡಲಾಗಿದೆ. ಮಕ್ಕಳ ಸುರಕ್ಷೆ ಬಗ್ಗೆ ಈ ಕಮಿಟಿ ಮಾನಿಟರ್ ಮಾಡುತ್ತದೆ. ಮಕ್ಕಳ ರಕ್ಷಣೆ ನಿಯಮಗಳನ್ನು ಈ ಸಮಿತಿ ಜಾರಿ ಮಾಡಲಿದೆ ಎಂದು ತಿಳಿಸಿದರು.