ದಾವಣಗೆರೆ: ಕಾಂಗ್ರೆಸ್ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಒಡೆತನದ ಮೆಡಿಕಲ್ ಕಾಲೇಜುಗಳ ಮೇಲೆ ಇಂದು ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಗೋವಾ ಹಾಗೂ ಬೆಳಗಾವಿಯಿಂದ ಬಂದ ಆರು ಜನ ಐಟಿ ಅಧಿಕಾರಿಗಳ ತಂಡ ಶಾಮನೂರು ಶಿವಶಂಕರಪ್ಪ ಒಡೆತನದಲ್ಲಿರುವ ದಾವಣಗೆರೆಯ ಜೆಜೆಎಂ, ಎಸ್‍ಎಸ್ ಮೆಡಿಕಲ್ ಕಾಲೇಜ್ ಹಾಗೂ ಬಾಪೂಜಿ ಡೆಂಟಲ್ ಕಾಲೇಜ್‍ಗಳಲ್ಲಿ ಕಡತ ಪರಿಶೀಲನೆ ನಡೆಸುತ್ತಿದ್ದಾರೆ.
ಈ ವೇಳೆ ವಿದ್ಯಾರ್ಥಿಗಳ ಕಾಲೇಜ್ ಆಡಳಿತ ಮಂಡಳಿ ಸಂಗ್ರಹಿಸಿದ ಶುಲ್ಕ ಮತ್ತು ಸರ್ಕಾರ ನಿಗದಿ ಮಾಡಿದ ಶುಲ್ಕದ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಕೆಲ ವಿದ್ಯಾರ್ಥಿನ್ನು ಅನಿರೀಕ್ಷಿತವಾಗಿ ಭೇಟಿ ಮಾಡಿ ಶುಲ್ಕ ತುಂಬದ ವಿವರ ಪಡೆದಿದ್ದಾರೆ.
ನವದೆಹಲಿ: ತಿಹಾರ್ ಜೈಲು ಸೇರಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ಇಂದು ಒಂದಲ್ಲ ಎರಡಲ್ಲ ತ್ರಿಬಲ್ ಟೆನ್ಶನ್. ಒಂದೆಡೆ ಜಾಮೀನು ಸಿಗದೆ ಒದ್ದಾಡುತ್ತಿರುವ ಕನಕಪುರದ ಬಂಡೆ ಸಲ್ಲಿಸಿದ್ದ ಅರ್ಜಿ ಇಂದು ದೆಹಲಿ ಹೈಕೋರ್ಟಿನಲ್ಲಿ ವಿಚಾರಣೆಗೆ ಬರಲಿದೆ. ಇದರ ಜೊತೆಗೆ ನ್ಯಾಯಾಂಗ ಬಂಧನ ಅವಧಿಯೂ ವಿಸ್ತರಣೆ ಆಗಲಿದೆ. ಇದೆರಡು ಸಾಲದು ಎಂದು ಡಿಕೆಶಿ ತಾಯಿ ಗೌರಮ್ಮ ಅವರ ವಿಚಾರಣೆಯೂ ಇಂದೇ ನಡೆಯಲಿದೆ.
ಅಕ್ರಮ ಹಣ ವರ್ಗಾವಣೆ, ಬೇನಾಮಿ ಆಸ್ತಿ ಗಳಿಕೆ ಆರೋಪ ಹೊತ್ತು ನ್ಯಾಯಾಂಗ ಬಂಧನದಡಿ ಜೈಲು ಸೇರಿರುವ ಡಿ.ಕೆ ಶಿವಕುಮಾರ್ ಜಾಮೀನುಗಾಗಿ ಬಲಿಷ್ಠ ಕಾನೂನು ಹೋರಾಟ ಆರಂಭಿಸಿದ್ದಾರೆ. ಇಡಿ ವಿಶೇಷ ಕೋರ್ಟಿನಲ್ಲಿ ಜಾಮೀನು ರದ್ದು ಮಾಡಿದ್ದ ಆದೇಶ ಪ್ರಶ್ನಿಸಿ ದೆಹಲಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದು, ಇಂದು ಆ ಅರ್ಜಿ ವಿಚಾರಣೆ ನಡೆಯಲಿದೆ. ನ್ಯಾ. ಸುರೇಶ್ ಕುಮಾರ್ ಕೈಟಾ ನೇತೃತ್ವದ ಏಕ ಸದಸ್ಯ ಪೀಠದಲ್ಲಿ ಮಧ್ಯಾಹ್ನ 3.30ಕ್ಕೆ ವಿಚಾರಣೆ ನಡೆಸಲಿದೆ. ಸೋಮವಾರ ಬೆಳಗ್ಗೆ ವಿಚಾರಣೆ ನಡೆಸಿದ್ದ ಕೋರ್ಟ್ ಡಿಕೆಶಿ ಪರ ವಕೀಲರ ಗೈರು ಹಿನ್ನೆಲೆಯಲ್ಲಿ ಇಂದಿಗೆ ವಿಚಾರಣೆ ಮುಂದೂಡಿದ್ರು. ಈ ನಡುವೆ ಇಡಿ ಅಧಿಕಾರಿಗಳು ಹೆಚ್ಚುವರಿ ತನಿಖಾ ವರದಿ ಸಲ್ಲಿಸಿದ್ದರು. ಈ ವರದಿ ಆಧರಿಸಿ ಇಂದು ವಿಚಾರಣೆ ನಡೆಯಲಿದೆ.
ಬಹುತೇಕ ಡಿ.ಕೆ ಶಿವಕುಮಾರ್ ಪರ ವಕೀಲರು ವಾದ ಮಂಡಿಸಲಿದ್ದು ಬಳಿಕ ಇಡಿ ವಕೀಲರು ವಾದ ಮಂಡನೆ ಸಮಯ ನಿಗಧಿ ಆಗಲಿದೆ. ಈ ನಿಟ್ಟಿನಲ್ಲಿ ತಯಾರಿ ಮಾಡಿಕೊಂಡಿರುವ ಇಡಿ ಅಧಿಕಾರಿಗಳು ಕೋರ್ಟಿಗೆ ಹೆಚ್ಚುವರಿ ತನಿಖಾ ವರದಿಯನ್ನು ಸಲ್ಲಿಸಿದ್ದಾರೆ. ತನಿಖೆ ಪ್ರಾಥಮಿಕ ಹಂತದಲ್ಲಿದ್ದು, ಪ್ರಕರಣ ಸಂಬಂಧ ಸುಮಾರು 51 ಜನಕ್ಕೆ ಸಮನ್ಸ್ ನೀಡಿದೆ. ಈ ಹಿನ್ನೆಲೆಯಲ್ಲಿ ಅವರ ವಿಚಾರಣೆ ಅಡ್ಡಿ ಮತ್ತು ಸಾಕ್ಷಿ ನಾಶ ಆಗುವ ಹಿನ್ನೆಲೆ ಜಾಮೀನು ನೀಡಿದಂತೆ ಇಡಿ ಪರ ವಕೀಲರು ವಾದ ಮಂಡಿಸಲಿದ್ದಾರೆ. ಇಡಿ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕೆ.ಎನ್ ನಟರಾಜ್ ವಾದ ಅಮಿತ್ ಮಹಾಜನ್ ವಾದ ಮಂಡಿಸಲು ಸಿದ್ಧವಾಗಿದ್ದಾರೆ.
ಡಿ.ಕೆ ಶಿವಕುಮಾರ್‍ಗೆ ಎರಡನೇ ಬಾರಿ ವಿಧಿಸಲಾಗಿದ್ದ ನ್ಯಾಯಾಂಗ ಬಂಧನದ ಅವಧಿ ಇಂದು ಅಂತ್ಯವಾಗುವ ಹಿನ್ನೆಲೆ ಅವರನ್ನ ದೆಹಲಿಯ ರೋಸ್ ಅವೆನ್ಯೂನಲ್ಲಿರುವ ಇಡಿ ವಿಶೇಷ ನ್ಯಾಯಲಯದ ಮುಂದೆ ಹಾಜರು ಪಡಿಸಲಿದ್ದಾರೆ. ಮಧ್ಯಾಹ್ನ ಕೋರ್ಟ್ ಮುಂದೆ ಹಾಜರುಪಡಿಸಲಿದ್ದು, ಜಾಮೀನು ಸಿಗದ ಹಿನ್ನೆಲೆ ಅನಿವಾರ್ಯವಾಗಿ ನ್ಯಾಯಾಂಗ ಬಂಧನ ವಿಸ್ತರಣೆ ಆಗಲಿದೆ. ಹೀಗಾಗಿ ಬಹುತೇಕ ಬೆಳಕಿನ ಹಬ್ಬ ದೀಪಾವಳಿಯನ್ನು ಡಿ.ಕೆ ಶಿವಕುಮಾರ್ ಜೈಲಿನಲ್ಲಿ ಕಳೆಯಲಿದ್ದಾರೆ ಎನ್ನಲಾಗಿದೆ.
ಈ ಮಧ್ಯೆ ಇಡಿ ಕುಣಿಗೆ ಡಿಕೆಶಿ ಅವರ ಇಡೀ ಕುಟುಂಬಕ್ಕೆ ವಿಸ್ತರಣೆ ಆಗುತ್ತಿದೆ. ಸಹೋದರ ಡಿ.ಕೆ ಸುರೇಶ್, ಪುತ್ರಿ ಐಶ್ವರ್ಯ ಬಳಿಕ ತಾಯಿ ಗೌರಮ್ಮ ಹಾಗೂ ಪತ್ನಿ ಉಷಾಗೂ ವಿಚಾರಣೆ ಹಾಜರಾಗುವಂತೆ ಇಡಿ ಅಧಿಕಾರಿಗಳು ಸಮನ್ಸ್ ನೀಡಿದ್ದಾರೆ. ಇಂದು ಗೌರಮ್ಮ ಅವರಿಗೆ ದೆಹಲಿಯ ಇಡಿ ಕಚೇರಿಗೆ ವಿಚಾರಣೆಗೆ ಬರುವಂತೆ ಸೂಚಿಸಲಾಗಿದ್ದು, ಡಿ.ಕೆ ಶಿವಕುಮಾರ್ ಕುಟುಂಬದೊಳಗಿನ ಆರ್ಥಿಕ ವ್ಯವಹಾರಗಳ ಬಗ್ಗೆ ವಿಚಾರಣೆ ನಡೆಸಲಿದ್ದಾರೆ.
ಐಶ್ವರ್ಯಗೆ ಅಜ್ಜಿ ಗೌರಮ್ಮ ಕೊಟ್ಟಿದ್ದ ಆಸ್ತಿ-ಹಣದ ಬಗ್ಗೆ ವಿಚಾರಣೆ, 2001ರಲ್ಲಿ ಉತ್ತರಹಳ್ಳಿಯಲ್ಲಿ 3 ಎಕರೆ ಜಮೀನು ಗಿಫ್ಟ್ ಡೀಡ್, 2002ರಲ್ಲಿ ಹೊಸಕೆರೆಹಳ್ಳಿಯಲ್ಲಿ 3 ಎಕರೆ ಜಮೀನು ಗಿಫ್ಟ್ ಡೀಡ್, 2018 ಜೂನ್‍ನಲ್ಲಿ ಗೌರಮ್ಮ ಅಕೌಂಟ್‍ನಿಂದ ಐಶ್ವರ್ಯ ಖಾತೆಗೆ 3 ಕೋಟಿ ರೂ. ವರ್ಗಾವಣೆ, ಸಿಂಗಲ್ ಟ್ರಾಂಜಾಕ್ಷನ್ ಮೂಲಕ 193 ಕೋಟಿ ಐಶ್ವರ್ಯ ಅಕೌಂಟಿಗೆ ಕ್ರೆಡಿಟ್ ಮಾಡಿರುವುದು. ಹಾಗೆಯೇ ಪುತ್ರ ಡಿಕೆಶಿ ಅವರಿಂದ ಎರಡು ಹಂತದಲ್ಲಿ 22.11 ಕೋಟಿ ಹಾಗೂ 15 ಕೋಟಿ ರೂ. ಸಾಲ ಪಡೆದಿರುವುದು, ಇದರ ನಡುವೆ ಡಿಕೆಶಿಗೆ 35 ಲಕ್ಷ ಸಾಲ ನೀಡಿರುವುದು, ಮತ್ತೊಬ್ಬ ಪುತ್ರ ಡಿಕೆ ಸುರೇಶ್‍ಗೆ ಗೌರಮ್ಮ 4.89 ಕೋಟಿ ಸಾಲ ಕೊಟ್ಟಿರುವುದು, ಗೌರಮ್ಮರ ಹೆಸರಲ್ಲಿ 273 ಕೋಟಿ ಬೇನಾಮಿ ಆಸ್ತಿ ಇರುವ ಬಗ್ಗೆ ಶಂಕೆ ವ್ಯಕ್ತವಾಗಿರುವ ಬಗ್ಗೆ, ಶಿವಕುಮಾರ್, ಸುರೇಶ್, ಗೌರಮ್ಮ ನಡುವೆ ಒಟ್ಟು 43 ಕೋಟಿ ಸಾಲ ವ್ಯವಹಾರ ನಡೆದಿರುವ ಬಗ್ಗೆ ಇಡಿ ವಿಚಾರಣೆ ನಡೆಸಲಿದೆ.
2005ರಲ್ಲಿ ಹೊಸಕೆರೆಹಳ್ಳಿಯಲ್ಲಿ 1 ಕೋಟಿ 4.9 ಗುಂಟೆ ಜಮೀನುನನ್ನು ಗೌರಮ್ಮ ಹೆಸರಲ್ಲಿ ಖರೀದಿ ಮಾಡಲಾಗಿದ್ದು, ಆದರೆ ಅದಾದ 2ನೇ ವರ್ಷದಲ್ಲಿ ಅಂದರೆ 2007ರಲ್ಲಿ ಇದೇ ಜಮೀನನ್ನು 11 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ. ಉಳಿದಂತೆ ಗೌರಮ್ಮ ಅವರ ಹೆಸರಿನಲ್ಲಿ ಯಲಹಂಕದಲ್ಲಿ 20 ಎಕರೆ 9 ಗುಂಟೆ ಜಮೀನು, ಉತ್ತರಹಳ್ಳಿಯಲ್ಲಿ 1.7 ಗುಂಟೆ ಜಮೀನು, ಕನಕಪುರದಲ್ಲಿ 3 ಕಲ್ಲಿನ ಕ್ವಾರಿ, 23 ಗ್ರಾನೈಟ್ ಬ್ಯುಸಿನೆಸ್ ಸಂಸ್ಥೆಗಳಿದ್ದು ಇದೆಲ್ಲದರ ಆರ್ಥಿಕ ಮೂಲಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲಿದ್ದಾರೆ. ಹೀಗಾಗಿ ಡಿ.ಕೆ ಶಿವಕುಮಾರ್ ತನ್ನ ಕೇಸ್ ಟೆನ್ಶನ್ ಮಾತ್ರವಲ್ಲದೇ ಕುಟುಂಬಸ್ಥರ ವಿಚಾರಣೆ ಕೂಡ ಭೀತಿ ಹುಟ್ಟಿಸಿದೆ. ಇಡಿ ಅಧಿಕಾರಿಗಳ ಮುಂದೆ ಗೌರಮ್ಮ ಏನ್ ಹೇಳ್ತಾರೆ ಇದರಿಂದ ಪ್ರಕರಣ ಹೇಗೆ ತಿರುವು ಪಡೆದುಕೊಳ್ಳುತ್ತೆ ಕಾದು ನೋಡಬೇಕು.
ನವದೆಹಲಿ: ಇಡಿ ಅಧಿಕಾರಿಗಳ ಎದುರು 2ನೇ ದಿನ ವಿಚಾರಣೆಗೆ ಹಾಜರಾಗಿದ್ದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಇಂದು 6 ಗಂಟೆಗಳ ವಿಚಾರಣೆ ಎದುಸಿದ್ದಾರೆ.
ಮಧ್ಯಾಹ್ನ 12 ಗಂಟೆ ವೇಳೆಗೆ ಇಡಿ ಕಚೇರಿಗೆ ಆಗಮಿಸಿದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ನಗುಮುಖದೊಂದಿಗೆ ಕಂಡರು. ಆದರೆ ನಿನ್ನೆ ವಿಚಾರಣೆಗೆ ತೆರಳಿದ್ದ ವೇಳೆ ಅವರ ಮುಖದಲ್ಲಿ ಆತಂಕ ಕಂಡು ಬಂದಿತ್ತು. ನಿನ್ನೆ ವಿಚಾರಣೆಯ ಅಂತ್ಯವಾದ ಬಳಿಕ ಮತ್ತೆ ನಾಳೆ ವಿಚಾರಣೆಗೆ ಬರುವಂತೆ ಇಡಿ ಅಧಿಕಾರಿಗಳು ಸೂಚಿಸಿದ್ದರು.
ಇಂದಿನ ವಿಚಾರಣೆಗೆ ಲಕ್ಷ್ಮಿ ಹೆಬ್ಬಾಳ್ಕರ್ ಹಲವು ದಾಖಲೆಗಳೊಂದಿಗೆ ಹಾಜರಾಗಿದ್ದರು. ಇಡಿ ಅಧಿಕಾರಿಗಳು ಲಕ್ಷ್ಮಿ ಹೆಬ್ಬಾಳ್ಕರ್ ಅವರಿಂದ ದಾಖಲೆ ಸಮೇತ ಮಾಹಿತಿ ಪಡೆದಿದ್ದಾರೆ. ವಿಚಾರಣೆಯ ವೇಳೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರೊಂದಿಗೆ ನಡೆಸಿರುವ ಆರ್ಥಿಕ ವ್ಯವಹಾರಗಳ ಬಗ್ಗೆ ಇಡಿ ಅಧಿಕಾರಿಗಳು ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಪ್ರಶ್ನಿಸಿದ್ದಾರೆ. ಅಲ್ಲದೇ ವಿವಿಧ ಕಂಪನಿಗಳಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಹೂಡಿಕೆ ಹಾಗೂ ಹೂಡಿಕೆ ಮಾಡಿರುವ ಹಣದ ಮೂಲ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂಬ ಸಂಗತಿ ಮೂಲಗಳಿಂದ ಲಭಿಸಿದೆ.
ವಿಚಾರಣೆಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ನಾಳೆ ಮತ್ತೆ ವಿಚಾರಣೆಗೆ ಇಡಿ ಅಧಿಕಾರಿಗಳು ಸಮನ್ಸ್ ನೀಡಿಲ್ಲ. ಮುಂದೆ ವಿಚಾರಣೆ ಬರುವ ಬಗ್ಗೆ ಅಧಿಕಾರಿಗಳು ಏನು ಹೇಳಿಲ್ಲ. ಇಂದಿನ ವಿಚಾರಣೆ ವೇಳೆ ಇಡಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದು, ವಿಚಾರಣೆಗೆ ಸಹಕರಿಸಿದ್ದೇನೆ ಎಂದರು.
ಡಿಕೆ ಶಿವಕುಮಾರ್ ನನ್ನ ರಾಜಕೀಯ ಗುರು ಎಂದು ಹೇಳಿದ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ನನ್ನ ರಾಜಕೀಯವಾಗಿ ಡಿಕೆಶಿ ಬೆಳೆಸಿದ್ದಾರೆ. ಆದರೆ ನನ್ನ ಮತ್ತು ಡಿಕೆಶಿ ಅವರ ನಡುವೆ ಯಾವುದೇ ಹಣ ವರ್ಗಾವಣೆ ನಡೆದಿಲ್ಲ. ನಮ್ಮ ನಡುವೆ ವ್ಯವಹಾರಿಕ ಸಂಬಂಧ ಇಲ್ಲ. ಈ ಕುರಿತು ಇಡಿ ಅಧಿಕಾರಿಗಳು ಕೇಳಿದ ಪ್ರಶ್ನೆಗೆ ದಾಖಲೆ ನೀಡಿ ಉತ್ತರಿಸಿದ್ದೇನೆ. ಈ ಸಂದರ್ಭ ವಿಚಾರಣೆಗೆ ಸಂಬಂಧ ಇಷ್ಟು ಮಾತ್ರ ಹೇಳಬಲ್ಲೆ ಎಂದು ತಿಳಿಸಿದ್ದಾರೆ.
ತಪ್ಪದ ಸಂಕಷ್ಟ: ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿಚಾರಣೆಯನ್ನು ನಡೆಸಿರುವ ಇಡಿ ಅಧಿಕಾರಿಗಳು ಕೆಲ ದಿನಗಳ ಬಳಿಕ ಮತ್ತೆ ಸಮನ್ಸ್ ನೀಡಿ ವಿಚಾರಣೆಗೆ ಕರೆಯುವ ಕುರಿತ ಮಾಹಿತಿ ಇಡಿ ಉನ್ನತ ಮೂಲಗಳಿಂದ ಲಭಿಸಿದೆ. ಅಕ್ರಮ ಹಣ ವರ್ಗಾವಣೆ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಆರ್ಥಿಕ ವ್ಯವಹಾರಗಳ ಬಗ್ಗೆ ಮತ್ತಷ್ಟು ಆಳವಾದ ವಿಚಾರ ನಡೆಸಲು ಇಡಿ ಚಿಂತನೆ ನಡೆಸಿದೆ ಎನ್ನಲಾಗಿದೆ.
ಕಲಬುರಗಿ: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಹಾಗೂ ಅವರ ಪುತ್ರಿ ಐಶ್ವರ್ಯಗಾಗಿ ಅಭಿಮಾನಿಗಳು ಜಿಲ್ಲೆಯ ಶ್ರೀ ಕ್ಷೇತ್ರ ದೇವಲ ಗಾಣಗಾಪುರದ ದತ್ತಾತ್ರೇಯ ನಿರ್ಗುಣ ಪಾದುಕೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಡಿಕೆಶಿ ಹಾಗೂ ಅವರ ಪುತ್ರಿ ಇಬ್ಬರೂ ಇಡಿ ತನಿಖೆಯನ್ನು ಸಮರ್ಪಕವಾಗಿ ಎದುರಿಸಿ ಹೊರಬರಲಿ ಎಂದು ಅಭಿಮಾನಿಗಳು ದತ್ತನ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ್ದಾರೆ. ಈ ಹಿಂದೆ ಡಿಕೆಶಿ ಅವರು ಐಟಿ ದಾಳಿಗೆ ಒಳಗಾದಾಗ ರಾಜಕೀಯ ಗುರು ದ್ವಾರಕನಾಥ ಸೂಚನೆಯಂತೆ ಈ ಕ್ಷೇತ್ರಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿದ್ದರು. ನಮ್ಮ ನಾಯಕ ಹಾಗೂ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ಆಶಿಸಿ ಅಭಿಮಾನಿಗಳು ಪೂಜೆ ಸಲ್ಲಿಸಿ, ಪ್ರಾರ್ಥಿಸಿದ್ದಾರೆ. ಇದನ್ನೂ ಓದಿ:ಮನೆಗೋ? ಜೈಲಿಗೋ? ಇಡಿ ಕಸ್ಟಡಿಗೋ? – ಇಂದು ಡಿಕೆಶಿ ಭವಿಷ್ಯ ನಿರ್ಧಾರ
ಇನ್ನೊಂದೆಡೆ ಇಡಿ ಕಸ್ಟಡಿ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಶಿವಕುಮಾರ್ ಅವರನ್ನು ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ. ಇಂದೇ ಶಿವಕುಮಾರ್ ಸಲ್ಲಿಸಿದ ಜಾಮೀನು ಅರ್ಜಿಯ ವಿಚಾರಣೆಯೂ ನಡೆಯಲಿದೆ.
ಗುರುವಾರ ಒಂದು ಕಡೆ ಐಶ್ವರ್ಯ ವಿಚಾರಣೆ ನಡೆದಿದ್ದರೆ ಮಗದೊಂದು ಕಡೆ ಡಿಕೆಶಿ ವಿಚಾರಣೆ ನಡೆಯಿತು. ಆದರೆ, ವಿಚಾರಣೆ ವೇಳೆ ಡಿಕೆಶಿಗೆ ಹೈಬಿಪಿ ಹಾಗೂ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಲ್ಲೇ ಇದ್ದ ಸಂಬಂಧಿ ಶಾಸಕ, ಡಾ. ರಂಗನಾಥ್ ಅವರು ತಪಾಸಣೆ ಮಾಡಿದರು. ನಂತರ ಡಿಕೆಶಿ ಅವರನ್ನು ಹತ್ತಿರದ ಆರ್‍ಎಂಎಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆ, ಡಿಕೆ ಸುರೇಶ್ ಆಪ್ತ ವೈದ್ಯ ಜುಬಿನ್ ಸಲಹೆ ಮೇರೆಗೆ ಡಿಕೆಶಿಗೆ ಔಷಧಿ ತಂದುಕೊಟ್ಟರು. ಬಳಿಕ ಇಸಿಜಿ ಮಾಡಿದ್ದು, ಡಿಕೆಶಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಬೆಂಗಳೂರು: ಸದ್ಯ ಬಂಧನದಲ್ಲಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ತಮ್ಮ ಮಗಳ ಹೆಸರಿನಲ್ಲಿ ಇಟ್ಟಿದ್ದ ಹಣವೇ ಮುಳುವಾಗುತ್ತಿದೆ. ಮಗಳ ಹೆಸರಿನಲ್ಲಿಟ್ಟಿದ್ದ ಬರೋಬ್ಬರಿ 78 ಕೋಟಿ ಹಣದ ವಿಚಾರ ಸಂಬಂಧ ಇಡಿ ಅಧಿಕಾರಿಗಳು ಪ್ರಶ್ನೆ ಕೇಳುತ್ತಿದ್ದಾರೆ.
ಸೋಲ್ ಅಂಡ್ ಸೇಲ್ಸ್ ಪ್ರಾಜೆಕ್ಟ್ ಗೆ ಬರೋಬ್ಬರಿ 78 ಕೋಟಿ ವ್ಯವಹಾರ ನಡೆದಿತ್ತು. ಇದನ್ನು ಪ್ರಶ್ನಿಸಿದ್ರೆ ನನ್ನ ಹಿತೈಷಿಗಳು, ಕುಟುಂಬದವರು, ಸ್ನೇಹಿತರು ಕೊಟ್ಟ ಹಣ ಎಂದು ಡಿಕೆಶಿ ಉತ್ತರಿಸಿದ್ದರು. ಆದರೆ ಇದೂ ಕೂಡ ಅಕ್ರಮ ಹಣ ವರ್ಗಾವಣೆಯಿಂದಲೇ ಬಂದಿರುವ ಹಣ ಎಂದು ಇಡಿ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಈಗ ಈ ವಿಚಾರವನ್ನೇ ಇಟ್ಟುಕೊಂಡು ಡಿಕೆಶಿ ಅವರಿಗೆ ಇಡಿ ಡ್ರಿಲ್ ಮಾಡುತ್ತಿದೆ.
ಬಂಧನದಲ್ಲಿರುವ ಡಿಕೆಶಿಯನ್ನು ಬುಧವಾರ ಇಡಿ ಅಧಿಕಾರಿಗಳು ದೆಹಲಿಯ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಈ ಸಂದರ್ಭದಲ್ಲಿ ಇಡಿ ಪರ ವಕೀಲ ಹೆಚ್ಚುವರಿ ಸಾಲಿಸಿಟರ್ ಜನರಲ್ ನಟರಾಜ್ ಅವರು ಶಿವಕುಮಾರ್ ಅವರು 44 ಕೋಟಿ ಅಕ್ರಮ ವಹಿವಾಟು ನಡೆಸಿದ್ದಾರೆ ಎನ್ನುವುದಕ್ಕೆ ಸಾಕ್ಷ್ಯ ಸಿಕ್ಕಿದೆ. ಹೀಗಾಗಿ ಅವರನ್ನು ಮತ್ತಷ್ಟು ವಿಚಾರಣೆ ನಡೆಸಬೇಕಾಗಿರುವ ಕಾರಣ ಜಾಮೀನು ಮಂಜೂರು ಮಾಡಬಾರದು ಎಂದು ಮನವಿ ಮಾಡಿದ್ದರು. ಇದನ್ನೂ ಓದಿ:ಬೇನಾಮಿಯಾಗಿ ಅರಮನೆ ಆಸ್ತಿ ಖರೀದಿ – ಇಡಿ ಪ್ರಕರಣಕ್ಕೆ ತಿರುವು ಕೊಟ್ಟಿದ್ದೇ ವಿಶಾಲಾಕ್ಷಿ ದೇವಿ
2017ರ ನವೆಂಬರ್ ತಿಂಗಳಿನಲ್ಲಿ ಶಿವಕುಮಾರ್ ತಾಯಿ ಗೌರಮ್ಮ, ಪತ್ನಿ ಉಷಾ, ಪುತ್ರಿ ಐಶ್ವರ್ಯ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಆದಾಯ ತೆರಿಗೆ ಕಚೇರಿಯಲ್ಲಿ ಪ್ರತ್ಯೇಕವಾಗಿ ವಿಚಾರಣೆಗೆ ಹಾಜರಾಗಿ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ್ದರು.
ನಿಮ್ಮ ತಂದೆ ನಿಮ್ಮ ಹೆಸರಲ್ಲಿ ಎಷ್ಟು ಆಸ್ತಿ ಮಾಡಿದ್ದಾರೆ ಎನ್ನುವ ಪ್ರಶ್ನೆಗೆ ಅದೆಲ್ಲಾ ನನಗೆ ಗೊತ್ತಿಲ್ಲ. ಅವರು ಇದುವರೆಗೂ ಹೇಳಿಲ್ಲ ನಾನು ಕೇಳಿಲ್ಲ ಎಂದು ಐಶ್ವರ್ಯ ಹೇಳಿದ್ದರು. ಗ್ಲೋಬಲ್ ಕಾಲೇಜಿನಲ್ಲಿ ನಿಮ್ಮ ಪಾತ್ರ ಏನು? ನೀವು ಪಾಲುದಾರರಾ ಎಂದು ಕೇಳಿದ್ದಕ್ಕೆ ನಾನು ಪಾಲುದಾರಳಾಗಿ ಇಲ್ಲ. ಅಪ್ಪ ಮಾಡಿರಬಹುದು ಅದರ ಬಗ್ಗೆ ಗೊತ್ತಿಲ್ಲ ನಾನು ಅಲ್ಲಿ ಟ್ರಸ್ಟಿಯಾಗಿ ಇದ್ದೇನೆ ಎಂದು ಉತ್ತರ ನೀಡಿದ್ದರು ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿತ್ತು.
ಟ್ರಸ್ಟಿ ಎಂದರೆ ಏನು? ನಿಮ್ಮ ಕೆಲಸ ಏನಿರುತ್ತದೆ ಎಂದಿದ್ದಕ್ಕೆ ಇಡೀ ಕಾಲೇಜಿನ ಬಗ್ಗೆ ಶಿಕ್ಷಣ ಟ್ರಸ್ಟ್ ಅಂತ ಮಾಡಲಾಗಿದೆ. ಅದರಲ್ಲಿ ನಾನು ಒಬ್ಬಳು ಟ್ರಸ್ಟಿ ಅಷ್ಟೇ. ಸಲಹೆ ಸೂಚನೆಗಳನ್ನು ಕೊಡಲಾಗುತ್ತದೆ ಎಂದು ಉತ್ತರಿಸಿದ್ದರು. ಕಾಲೇಜಿನ ಹಣಕಾಸಿನ ವ್ಯವಹಾರದ ಬಗ್ಗೆ ಕೇಳಿದ ಪ್ರಶ್ನೆಗೆ ನಾವು ಮಾಡಿಕೊಂಡಿರುವುದು ಎಜ್ಯುಕೇಶನ್ ಟ್ರಸ್ಟ್ ಅಂತ ಅಲ್ಲಿ ಹಣಕಾಸಿನ ವ್ಯವಹಾರ ಬರುವುದಿಲ್ಲ ಎಂದು ಹೇಳಿದ್ದರು. ಕೋರ್ಸ್ ಗಳಿಗೆ ಶುಲ್ಕ ನಿಗದಿಯನ್ನು ನಿಮ್ಮ ಟ್ರಸ್ಟ್ ಮಾಡುತ್ತಾ ಎಂದು ಕೇಳಿದ್ದಕ್ಕೆ ನಾವು ಬೇರೆ ಬೇರೆ ಕಾಲೇಜಿನ ಮಾಹಿತಿ ಹೇಳ್ತೀವಿ. ಶುಲ್ಕ ನಿಗದಿ ಮಾಡುವುದು ನಿರ್ದೇಶಕರು ಎಂಬುದಾಗಿ ಉತ್ತರ ನೀಡಿದ್ದರು.
ಬೆಂಗಳೂರು: ಭಾವನಾತ್ಮಕವಾಗಿ ಅಳುವ ಮೂಲಕ ಅನುಕಂಪ ಗಿಟ್ಟಿಸುವ ಕೆಲಸವನ್ನು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಹರಿಹಾಯ್ದಿದ್ದಾರೆ.
ಸದಾಶಿವನಗರದಲ್ಲಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮನೆಗೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ರಾಜಕೀಯ ಮಾಡುವುದನ್ನು ಬಿಡಬೇಕು. ಯಾವುದೇ ಪಕ್ಷವನ್ನು ದೂಷಿಸುವ ಕೆಲಸ ಮಾಡಬಾರದು. ಅವರು ನಡೆದುಕೊಂಡು ಬಂದಿರುವ ರೀತಿ, ಕಾನೂನು ಉಲ್ಲಂಘನೆ, ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿರುವುದು ಇಡೀ ಸಮಾಜಕ್ಕೆ ಗೊತ್ತಿದೆ. ಕಾನೂನಿನ ರೀತಿ ಏನಾಗಬೇಕೋ ಅದು ಆಗುತ್ತದೆ ಎಂದು ತಿರುಗೇಟು ನೀಡಿದರು.
ಕಾನೂನಿನ ಚೌಕಟ್ಟಿನಲ್ಲಿ ಅವರು ಮಾಡಿರುವ ಕೆಲಸ ಒಳ್ಳೆಯದೋ ಅಥವಾ ಕೆಟ್ಟದ್ದೋ ಎಂದು ಪರಿಶೀಲಿಸಬೇಕು. ಅದನ್ನು ಇಡಿ ಅಧಿಕಾರಿಗಳು ಮಾಡುತ್ತಿದ್ದಾರೆ. ಅವರು ಮಾಡಿರುವ ಕರ್ಮಗಳಿಗೆ ಎಲ್ಲವೂ ಕಾಂಪ್ರಮೈಸ್ ಆದಲ್ಲಿ ಜನ ಎಲ್ಲಿಗೆ ಹೋಗಬೇಕು. ರಾಜಕಾರಣಿಗಳನ್ನು ಮಾತ್ರ ಟಾರ್ಗೆಟ್ ಮಾಡುತ್ತಿದ್ದಾರೆ, ಉದ್ಯಮಿಗಳ ವಿರುದ್ಧ ತನಿಖೆ ಮಾಡುತ್ತಿಲ್ಲ ಎಂಬ ಆರೋಪದ ಕುರಿತು ಉತ್ತರಿಸಿದ ಅವರು, ಹಾಗಾದರೆ ನೀವು ರಾಜಕೀಯ ಯಾಕೆ ಮಾಡುತ್ತೀರಾ, ನೀವು ವ್ಯಾಪಾರಿಗಳಾಗಿರಿ ಎಂದು ತಿರುಗೇಟು ನೀಡಿದರು.
ಈಗ ಅತ್ತು ಕರೆದು ಮಾಡಿದರೆ, ಏನೂ ಪ್ರಯೋಜನವಿಲ್ಲ. ಕಾನೂನಿನ ಅಡಿಯಲ್ಲಿ ಏನಾಗಬೇಕೋ ಅದು ಆಗುತ್ತಿದೆ. ಯಾರೇ ಉಪ್ಪು ತಿಂದವರು ನೀರು ಕುಡಿಯಲೇಬೇಕು, ಕುಡೀತಾ ಇದ್ದಾರೆ. ಕಳ್ಳಂಗೆ ಪಿಳ್ಳೆ ನೆಪ ಅನ್ನೋ ಹಾಗೆ ಮಾತಾಡುತ್ತಿದ್ದಾರೆ. ಇವರ ಭ್ರಷ್ಟಾಚಾರ, ಇಡೀ ಸಮಾಜಕ್ಕೆ ಗೊತ್ತಿದೆ. ಅದನ್ನು ನನ್ನ ಬಾಯಲ್ಲಿ ಯಾಕೆ ಹೇಳಿಸುತ್ತೀರಾ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಹರಿಹಾಯ್ದಿದ್ದಾರೆ.
ಮೂರನೇ ದಿನವಾದ ಇಂದು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗುವ ಮುನ್ನ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಕಣ್ಣೀರು ಹಾಕಿದ್ದರು. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಕಣ್ಣಲ್ಲಿ ನೀರು ಹಾಕುತ್ತಿರೋದು ನಮ್ಮ ತಂದೆಗೆ ಪೂಜೆ ಮಾಡುವ ಅವಕಾಶವನ್ನು ನನ್ನ ಬಿಜೆಪಿ ಸ್ನೇಹಿತರು ಅಧಿಕಾರದ ಮುಖಾಂತರ ಕೊಟ್ಟಿಲ್ಲ. ನನಗೆ ದುಃಖ ಯಾಕೆ ಆಗುತ್ತಿದೆ ಎಂದರೆ ಇವತ್ತು ತಂದೆ ಹಾಗೂ ಹಿರಿಯರಿಗೆ ನಾನು, ನನ್ನ ತಮ್ಮ ಪೂಜೆ ಮಾಡಬೇಕಿತ್ತು. ಆದರೆ ಅವರಿಗೆ ಎಡೆ ಇಡಲು ಕೂಡ ಇವರು ನನಗೆ ಕೊಟ್ಟಿಲ್ಲ. ಪರವಾಗಿಲ್ಲ, ಇಡಿ ಕಚೇರಿಯಲ್ಲೇ ಎಲ್ಲರನ್ನೂ ಸ್ಮರಿಸಿಕೊಳ್ಳುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪಾರ್ಥಿಸುತ್ತೇನೆ ಎಂದು ಡಿಕೆಶಿ ಕಣ್ಣೀರಿಟ್ಟಿದ್ದರು.
ಉಪ್ಪು ತಿಂದವರು ನೀರು ಕುಡಿಬೇಕು ಎಂದು ನನ್ನ ಸ್ನೇಹಿತರು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೋಸ್ಕರ, ನಮ್ಮ ನಾಯಕರಿಗೋಸ್ಕರ, ನನ್ನನ್ನು ನಂಬಿದ ಜನಕ್ಕೋಸ್ಕರ ಹೋರಾಟ ಮಾಡಿಕೊಂಡು ನಾನು ಬಂದಿದ್ದೇನೆ. ಇಂದು ನಮ್ಮ ಅನೇಕ ಸ್ನೇಹಿತರು, ಕಾರ್ಯಕರ್ತರು, ನಾಯಕರು ಪಕ್ಷ ಬೆಳೆಸಿರುವುದರಿಂದ ಇಲ್ಲಿಯವರೆಗೆ ಬಂದಿದ್ದೇನೆ. ಇದನ್ನೆಲ್ಲಾ ಎದುರಿಸುವಂತಹ ಶಕ್ತಿ ದೇವರು ನನಗೆ ಕೊಟ್ಟಿದ್ದಾನೆ. ನಾನು ಯಾರಿಗೂ ಮೋಸ ಮಾಡಿಲ್ಲ, ಕಳ್ಳತನ ಮಾಡಿಲ್ಲ, ಜಮೀನನ್ನು ಒತ್ತುವರಿ ಮಾಡಿಕೊಂಡಿಲ್ಲ, ಲಂಚದ ಆರೋಪವಿಲ್ಲ, ಅಧಿಕಾರ, ಸರ್ಕಾರದ ಹಣ ದುರುಪಯೋಗ ಮಾಡಿಕೊಂಡಿಲ್ಲ. ನೇರವಾಗಿ ನುಡಿದಂತೆ ನಡೆದಿದ್ದೇನೆ ಎಂದು ಕಿಡಿ ಕಾರಿದ್ದರು.