Tag: ED Office

  • ಇಡಿ ಅಧಿಕಾರಿಗಳಿಗೂ ಕೊರೊನಾ ಸೋಂಕು

    ಇಡಿ ಅಧಿಕಾರಿಗಳಿಗೂ ಕೊರೊನಾ ಸೋಂಕು

    – 6 ಅಧಿಕಾರಿಗಳಿಗೆ ಪಾಸಿಟಿವ್
    – 10 ಅಧಿಕಾರಿಗಳು ಕ್ವಾರಂಟೈನ್

    ನವದೆಹಲಿ: ಜಾರಿ ನಿರ್ದೇಶನಾಲಯ(ಇಡಿ)ದ ಆರು ಜನ ಅಧಿಕಾರಿಗಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಎರಡು ದಿನಗಳ ಕಾಲ ಇಡಿ ಕೇಂದ್ರ ಕಚೇರಿಯನ್ನು ಸೀಲ್‍ಡೌನ್ ಮಾಡಲಾಗಿದೆ ಎಂದು ವರದಿಯಾಗಿದೆ.

    ಒಟ್ಟು 6 ಜನ ಅಧಿಕಾರಿಗಳಿಗೆ ಸೋಂಕು ತಗುಲಿದ್ದು, ಕೊರೊನಾ ಪಾಸಿಟಿವ್ ಕಾಣಿಸಿಕೊಂಡ 6 ಜನ ಅಧಿಕಾರಿಗಳ ಸಂಪರ್ಕದಲ್ಲಿದ್ದ 10 ಅಧಿಕಾರಿಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಇತ್ತೀಚೆಗೆ ಇಡಿ ಕೇಂದ್ರ ಕಚೇರಿಯ ಸ್ಥಾಪನ ಶಾಖೆಯ ಕಿರಿಯ ದರ್ಜೆಯ ಅಧಿಕಾರಿಗೆ ಸೋಂಕು ಕಾಣಿಸಿಕೊಂಡಿತ್ತು. ಇವರು ಕೇಂದ್ರ ಅರೆ ಸೈನ್ಯ ಪಡೆಯಿಂದ ಇಡಿ ನಿಯೋಗದಲ್ಲಿದ್ದರು ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

    ಅಕ್ರಮ ಹಣ ವರ್ಗಾವಣೆ ಮತ್ತು ಹವಾಲಾ ದಂಧೆ ಕುರಿತ ಅಪರಾಧಗಳ ಕುರಿತು ತನಿಖೆ ನಡೆಸುವ ಕೇಂದ್ರ ಸಂಸ್ಥೆ ಇಡಿ, ಕೊರೊನಾ ಕುರಿತು ಕಟ್ಟೆಚ್ಚರ ವಹಿಸಿತ್ತು. ಕೇಂದ್ರ ಕಚೇರಿಯನ್ನು ವಾರದಲ್ಲಿ ಎರಡು ಬಾರಿ ಸ್ಯಾನಿಟೈಸ್ ಮಾಡುತ್ತಿತ್ತು. ಅಲ್ಲದೆ ನಿರ್ದಿಷ್ಟ ದಿನದ ಕೆಲಸಕ್ಕೆ ಅಗತ್ಯವಿರುವ ನೌಕರರನ್ನು ಮಾತ್ರ ಕಚೇರಿಗೆ ಬರುವಂತೆ ಸೂಚಿಸಲಾಗಿತ್ತು. ಇಷ್ಟೆಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಂಡರೂ ಇದೀಗ 6 ಜನ ಅಧಿಕಾರಿಗಳಿಗೆ ಸೋಂಕು ತಗುಲಿದೆ.

    ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಒಂದೇ ದಿನ 9,887 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಈ ವರಗೆ ಒಂದು ದಿನದಲ್ಲಿ ಪತ್ತೆಯಾದ ಪ್ರಕರಣಗಳ ಪೈಕಿ ಇದು ಅತೀ ಹೆಚ್ಚು ಎನ್ನಲಾಗಿದೆ. ಅಲ್ಲದೆ ಒಂದೇ ದಿನ 294 ಜನ ಸಾವನ್ನಪ್ಪಿದ್ದು, ಈ ವರೆಗೆ 6,642 ಜನ ಕೊರೊನಾದಿಂದ ಕೊನೆಯುಸಿರೆಳೆದಿದ್ದಾರೆ. ದೇಶಲ್ಲಿ ಒಟ್ಟು 2.3 ಲಕ್ಷ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. 1.14 ಲಕ್ಷ ಜನ ಗುಣಮುಖರಾಗಿದ್ದಾರೆ. ಕೊರೊನಾ ಪ್ರಕರಣಗಳ ಪೈಕಿ ಭಾರತ ಇಟಲಿಯನ್ನು ಹಿಂದಿಕ್ಕಿದ್ದು, ವಿಶ್ವದಲ್ಲೇ ಅತೀ ಹೆಚ್ಚು ಕೊರೊನಾ ಪ್ರಕರಣ ಹೊಂದಿದ ದೇಶಗಳ ಪೈಕಿ 6ನೇ ಸ್ಥಾನಕ್ಕೇರಿದೆ.

  • ಹಬ್ಬದ ದಿನವೇ ಗಳಗಳನೆ ಅತ್ತ ಡಿಕೆಶಿ

    ಹಬ್ಬದ ದಿನವೇ ಗಳಗಳನೆ ಅತ್ತ ಡಿಕೆಶಿ

    ನವದೆಹಲಿ: ಮೂರನೇ ದಿನವಾದ ಇಂದು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗುವ ಮುನ್ನ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಕಣ್ಣೀರು ಹಾಕಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಕಣ್ಣಲ್ಲಿ ನೀರು ಹಾಕುತ್ತಿರೋದು ನಮ್ಮ ತಂದೆಗೆ ಪೂಜೆ ಮಾಡುವ ಅವಕಾಶವನ್ನು ನನ್ನ ಬಿಜೆಪಿ ಸ್ನೇಹಿತರು ಅಧಿಕಾರದ ಮುಖಾಂತರ ಕೊಟ್ಟಿಲ್ಲ. ನನಗೆ ದುಃಖ ಯಾಕೆ ಆಗುತ್ತಿದೆ ಎಂದರೆ ಇವತ್ತು ತಂದೆ ಹಾಗೂ ಹಿರಿಯರಿಗೆ ನಾನು, ನನ್ನ ತಮ್ಮ ಪೂಜೆ ಮಾಡಬೇಕಿತ್ತು. ಆದರೆ ಅವರಿಗೆ ಎಡೆ ಇಡಲು ಕೂಡ ಇವರು ನನಗೆ ಕೊಟ್ಟಿಲ್ಲ. ಪರವಾಗಿಲ್ಲ, ಇಡಿ ಕಚೇರಿಯಲ್ಲೇ ಎಲ್ಲರನ್ನೂ ಸ್ಮರಿಸಿಕೊಳ್ಳುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪಾರ್ಥಿಸುತ್ತೇನೆ ಎಂದು ಡಿಕೆಶಿ ಕಣ್ಣೀರಿಟ್ಟಿದ್ದಾರೆ.

    ಉಪ್ಪು ತಿಂದವರು ನೀರು ಕುಡಿಬೇಕು ಎಂದು ನನ್ನ ಸ್ನೇಹಿತರು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೋಸ್ಕರ, ನಮ್ಮ ನಾಯಕರಿಗೋಸ್ಕರ, ನನ್ನನ್ನು ನಂಬಿದ ಜನಕ್ಕೋಸ್ಕರ ಹೋರಾಟ ಮಾಡಿಕೊಂಡು ನಾನು ಬಂದಿದ್ದೇನೆ. ಇಂದು ನಮ್ಮ ಅನೇಕ ಸ್ನೇಹಿತರು, ಕಾರ್ಯಕರ್ತರು, ನಾಯಕರು ಪಕ್ಷ ಬೆಳೆಸಿರುವುದರಿಂದ ಇಲ್ಲಿಯವರೆಗೆ ಬಂದಿದ್ದೇನೆ. ಇದನ್ನೆಲ್ಲಾ ಎದುರಿಸುವಂತಹ ಶಕ್ತಿ ದೇವರು ನನಗೆ ಕೊಟ್ಟಿದ್ದಾನೆ. ನಾನು ಯಾರಿಗೂ ಮೋಸ ಮಾಡಿಲ್ಲ, ಕಳ್ಳತನ ಮಾಡಿಲ್ಲ, ಜಮೀನನ್ನು ಒತ್ತುವರಿ ಮಾಡಿಕೊಂಡಿಲ್ಲ, ಲಂಚದ ಆರೋಪವಿಲ್ಲ, ಅಧಿಕಾರ, ಸರ್ಕಾರದ ಹಣ ದುರುಪಯೋಗ ಮಾಡಿಕೊಂಡಿಲ್ಲ. ನೇರವಾಗಿ ನುಡಿದಂತೆ ನಡೆದಿದ್ದೇನೆ.

    ಈ ಹಿಂದೆ ಎಲ್ಲಾ ನಾಯಕರುಗಳು ಮಾತನಾಡಿದ್ದು ಈಗಲೂ ನನ್ನ ಮನದಲ್ಲಿ ಉಳಿದಿದೆ. ಅನೇಕ ಉದಾಹರಣೆಗಳು ಇದ್ದರು ಕೂಡ ಯಾರ ಮೇಲೂ ಒಂದು ತನಿಖೆಯನ್ನು ಮಾಡಿಲ್ಲ. ಸಿಎಂ ಯಡಿಯೂರಪ್ಪ ಅವರ ಅನೇಕ ದಾಖಲೆಗಳು ನಮ್ಮ ಮನೆಯಲ್ಲಿ ಸಿಕ್ಕರು ಕೂಡ ಯಾವುದನ್ನು ತನಿಖೆ ಮಾಡದೆ, ನನ್ನನ್ನು ಮಾತ್ರ ಈ ಸ್ಥಿತಿಗೆ ತಂದಿದ್ದಾರೆ. ಇದರ ಹಿಂದೆ ಯಾರಿದ್ದಾರೆ ಎನ್ನುವ ಎಲ್ಲಾ ಸಂಗತಿ ನನಗೆ ಗೊತ್ತು. ಏನು ಮಾಡಬೇಕು ಎನ್ನುವುದು ನನಗೆ ತಿಳಿದಿದೆ. ಯಾವುದಕ್ಕೂ ನಾನು ಹೆದರಲ್ಲ, ಎಲ್ಲದ್ದಕ್ಕೂ ಸಿದ್ಧನಾಗಿಯೇ ನಾನು ಇಲ್ಲಿಗೆ ಬಂದ್ದಿದ್ದೇನೆ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಪ್ರತಿವರ್ಷ ಮಗಳ ಜೊತೆ ಗಣೇಶ ಚತುರ್ಥಿ ಮಾಡುತ್ತಿದ್ದೆ. ಸ್ಯಾಂಕಿ ಕೆರೆಯಲ್ಲಿ ಗಣಪತಿ ವಿಸರ್ಜನೆ ಮಾಡುತ್ತಿದ್ದೆವು. ಈ ವರ್ಷ ಹಬ್ಬದಿಂದ ನನ್ನ ದೂರ ಮಾಡಿದ್ದಾರೆ. ಕನಿಷ್ಠ ಹಿರಿಯರ ಪೂಜೆಗೂ ಅವಕಾಶ ಕೊಟ್ಟಿಲ್ಲ. ದೇವರಿಗೆ ಪೂಜಿಸುವ ಅವಕಾಶ ಸಿಕ್ಕಿಲ್ಲ. ಕಾರ್ಯಕರ್ತರು ನನ್ನ ಪರಿಸ್ಥಿತಿ ನೋಡಿ ದೆಹಲಿಗೆ ಬರುತ್ತಿದ್ದಾರೆ. ಯಾರು ದೆಹಲಿಗೆ ಬರುವುದು ಬೇಡ, 50-60 ಸಾವಿರ ಖರ್ಚು ಮಾಡಿ ಬರಬೇಡಿ. ನಿಮ್ಮೆಲ್ಲರ ಹಾರೈಕೆ ನನ್ನ ಜೊತೆ ಇದೆ. ಕುಮಾರಸ್ವಾಮಿ ಸೇರಿ ಹಲವು ನಾಯಕರು ಧೈರ್ಯ ತುಂಬಿದ್ದಾರೆ ಅವರಿಗೆಲ್ಲ ಅಭಿನಂದನೆಗಳು ಎಂದು ಹೇಳಿದರು.