Tag: Economists

  • ಶನಿವಾರ ಬೆಳಗ್ಗೆ ದೆಹಲಿ ಕಾಂಗ್ರೆಸ್ ಕಚೇರಿಯಲ್ಲಿ ಮನಮೋಹನ್ ಸಿಂಗ್ ಅಂತಿಮ ದರ್ಶನಕ್ಕೆ ವ್ಯವಸ್ಥೆ

    ಶನಿವಾರ ಬೆಳಗ್ಗೆ ದೆಹಲಿ ಕಾಂಗ್ರೆಸ್ ಕಚೇರಿಯಲ್ಲಿ ಮನಮೋಹನ್ ಸಿಂಗ್ ಅಂತಿಮ ದರ್ಶನಕ್ಕೆ ವ್ಯವಸ್ಥೆ

    – ಬೆಳಗ್ಗೆ 9.30ರ ಬಳಿಕ ಅಂತಿಮ ಯಾತ್ರೆ, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

    ನವದೆಹಲಿ: ದೇಶದ ಅಭಿವೃದ್ಧಿಯ ಹರಿಕಾರ, ಆರ್ಥಿಕತೆಯ ವಾಸ್ತುಶಿಲ್ಪಿ, ರಾಜಕಾರಣಿ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ (Manmohan Singh) ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ನಿವಾಸದಲ್ಲೇ ಚಿಕಿತ್ಸೆ ಕೊಡಲಾಗ್ತಿತ್ತು. ಆದರೆ, ಗುರುವಾರ ರಾತ್ರಿ 8 ಗಂಟೆ 06 ನಿಮಿಷದ ಸುಮಾರಿನಲ್ಲಿ ಪ್ರಜ್ಞಾಹೀನರಾದರು.

    ತಕ್ಷಣವೇ ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ರಾತ್ರಿ 9:51ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ ಅಂತ ಏಮ್ಸ್ ಆಸ್ಪತ್ರೆ ತಿಳಿಸಿದೆ. ಪತ್ನಿ ಗುರ್ಶನ್ ಕೌರ್, ಮೂವರು ಪುತ್ರಿಯರನ್ನು ಸಿಂಗ್ ಅಗಲಿದ್ದಾರೆ. ಅಮೆರಿಕದಲ್ಲಿರುವ ಪುತ್ರಿ ಆಗಮನಕ್ಕಾಗಿ ಕಾಯಲಾಗ್ತಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಅವಮಾನ – ಸಿಂಗ್‌ ಬೆಂಬಲಿಸಿ ಪಾಕ್‌ ಪ್ರಧಾನಿ ಷರೀಫ್‌ ವಿರುದ್ಧ ಗುಡುಗಿದ್ದ ಮೋದಿ

    ನಾಳೆ (ಶನಿವಾರ) ಬೆಳಗ್ಗೆ 8 ಗಂಟೆಗೆ ದೆಹಲಿ ಎಐಸಿಸಿ ಕಚೇರಿಗೆ ಪಾರ್ಥಿವ ಶರೀರವನ್ನ ರವಾನೆ ಮಾಡಿ ಬೆಳಗ್ಗೆ 9:30ರ ವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 9:30ರ ಬಳಿಕ ಅಂತಿಮ ಯಾತ್ರೆ ಆರಂಭವಾಗಲಿದ್ದು, ಸುಮಾರು 11:45ಕ್ಕೆ ನಿಗಮ್‌ ಬೋಧ ಘಾಟ್‌ನಲ್ಲಿ ಸರ್ಕಾರಿ ಮತ್ತು ಸೇನಾಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಅಂತ ಕೇಂದ್ರ ಗೃಹ ಇಲಾಖೆ ತಿಳಿಸಿದೆ. ಇದನ್ನೂ ಓದಿ: 2 ಬಾರಿ ಪ್ರಧಾನಿಯಾಗಿ ದೇಶ ಮುನ್ನಡೆಸಿದ್ದ ಸಿಂಗ್‌ ಎಂದೂ ಲೋಕಸಭೆ ಚುನಾವಣೆ ಗೆದ್ದಿಲ್ಲ

    ಸೇನಾಗೌರವಗಳಿಗೆ ಸೇನಾ ಇಲಾಖೆ ಕೂಡ ಸನ್ನದ್ಧವಾಗಿದೆ. 7 ದಿನ ದೇಶಾದ್ಯಂತ ಶೋಕಾಚರಣೆ ಘೋಷಿಸಲಾಗಿದೆ. ಇನ್ನು, ಜಾಗತಿಕ ಮಟ್ಟದಲ್ಲೂ ರಾಷ್ಟ್ರಗಳ ಮಧ್ಯೆ ಒಮ್ಮತ ಮೂಡಿಸ್ತಿದ್ದ ಚತುರನಾಗಿದ್ದ ಸಿಂಗ್ ಅಗಲಿಕೆಗೆ ಅಮೆರಿಕ, ರಷ್ಯಾ, ಚೀನಾ, ಪಾಕಿಸ್ತಾನ, ಮಲೇಷಿಯಾ, ಕೆನಡಾ ಕೂಡ ಸಂತಾಪ ಸೂಚಿಸಿವೆ. ಸಿನಿಗಣ್ಯರಾದ ರಜನಿಕಾಂತ್, ಚಿರಂಜೀವಿ, ಕಮಲ್‌ಹಾಸನ್ ಕೂಡ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ಗೆ ಅಂತಿಮ ನಮನ ಸಲ್ಲಿಸಿದ ಮೋದಿ

    ಡಾ. ಮನಮೋಹನ್ ಸಿಂಗ್ ಜೀವನಪಥ ಹೇಗಿದೆ?
    * ಸೆ. 16ರಂದು 1932 ರಂದು ಜನನ
    * ಪಶ್ಚಿಮ ಪಂಜಾಬ್‌ನ ಗಹ್‌ನಲ್ಲಿ ಜನನ – (ಈಗಿನ ಪಾಕಿಸ್ತಾನ. 2004ರಲ್ಲಿ ಪ್ರಧಾನಿಯಾದಾಗ ಈ ಗ್ರಾಮಸ್ಥರು ಸಂಭ್ರಮಿಸಿದ್ದರು. ಅಲ್ಲಿನ ಶಾಲೆಗೆ ಮನಮೋಹನ್ ಸಿಂಗ್ ಹೆಸರಿಡಲಾಗಿದೆ)
    * ದೇಶ ವಿಭಜನೆ ಬಳಿಕ ಭಾರತಕ್ಕೆ ವಲಸೆ
    * ಉರ್ದು ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ (ಅಮೃತಸರ, ಹೋಶಿಯಾರ್‌ಪುರದಲ್ಲಿ ಕಾಲೇಜು ಶಿಕ್ಷಣ, ಕೇಂಬ್ರಿಡ್ಜ್ ವಿವಿಯಲ್ಲಿ ಪದವಿ, ಆಕ್ಸ್‌ಫರ್ಡ್‌ ವಿವಿಯಲ್ಲಿ ಡಾಕ್ಟರೇಟ್)
    * 1966-69ಲ್ಲಿ ವಿಶ್ವಸಂಸ್ಥೆಯ ವಾಣಿಜ್ಯ, ಕೈಗಾರಿಕೆ ಇಲಾಖೆಯ ಸಲಹೆಗಾರರಾಗಿ ಸೇವೆ
    * 1972-76- ಮುಖ್ಯ ಆರ್ಥಿಕ ಸಲಹೆಗಾರರಾಗಿ ಸೇವೆ
    * 1982-85 – ಆರ್‌ಬಿಐ ಗೌರ್ನರ್ ಆಗಿ ಸೇವೆ
    * 1985-87 – ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಸೇವೆ
    * 1996-2004- ರಾಜ್ಯಸಭೆ ವಿಪಕ್ಷ ನಾಯಕರಾಗಿ ಸೇವೆ
    * 1999ರಲ್ಲಿ ದಕ್ಷಿಣ ದೆಹಲಿ ಲೋಕಸಭೆ ಕ್ಷೇತ್ರದಿಂದ ಸೋಲು
    * 2004-2014ರವರೆಗೆ ಪ್ರಧಾನ ಮಂತ್ರಿ (ಭಾರತದ 13ನೇ ಪ್ರಧಾನಿಯಾಗಿ ನೇಮಕ)
    * ನೆಹರೂ, ಇಂದಿರಾ ಬಳಿಕ ದೀರ್ಘಕಾಲದ ಪ್ರಧಾನಿ
    * ಸಿಖ್ ಸಮುದಾಯದ ಮೊದಲ ಪಿಎಂ ಎಂಬ ಗರಿಮೆ
    * ಯುಪಿಎ2 ಅವಧಿಯಲ್ಲಿ ಹಲವು ಹಗರಣ ಆರೋಪ (ಕಾಮನ್‌ವೆಲ್ತ್ ಗೇಮ್ಸ್, 2ಜಿ ಸ್ಪೆಕ್ಟ್ರಮ್‌, ಕಲ್ಲಿದ್ದಲು ಗಣಿ ಹಂಚಿಕೆ)
    * 2014ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲು
    * 1991-2019ರವರೆಗೆ ಅಸ್ಸಾಂನಿಂದ ರಾಜ್ಯಸಭೆಗೆ ಆಯ್ಕೆ
    * 2019-2024ರವರೆಗೂ ರಾಜಸ್ಥಾನದಿಂದ ರಾಜ್ಯಸಭೆ ಸದಸ್ಯ

  • Budget 2025 | 15 ಲಕ್ಷ ರೂ.ವರೆಗೆ ಆದಾಯ ತೆರಿಗೆ ಕಡಿತ ಸಾಧ್ಯತೆ – ಯಾರಿಗೆ ಲಾಭ?

    Budget 2025 | 15 ಲಕ್ಷ ರೂ.ವರೆಗೆ ಆದಾಯ ತೆರಿಗೆ ಕಡಿತ ಸಾಧ್ಯತೆ – ಯಾರಿಗೆ ಲಾಭ?

    ನವದೆಹಲಿ: ಫೆಬ್ರವರಿ 1 ರಂದು ಮಂಡನೆಯಾಗಲಿರುವ 2025-26ನೇ ಸಾಲಿನ ವಾರ್ಷಿಕ ಬಜೆಟ್‌ನಲ್ಲಿ 15 ಲಕ್ಷ ರೂ.ಗಳ ವರೆಗೆ ಆದಾಯ ತೆರಿಗೆ (Income Tax) ಕಡಿತಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಉನ್ನತ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

    ಮಧ್ಯಮ ವರ್ಗಗಳ ಮೇಲಿನ ಆರ್ಥಿಕ ಹೊರೆಯನ್ನು ತಗ್ಗಿಸುವ ಉದ್ದೇಶ ಹಾಗೂ ಆರ್ಥಿಕತೆ ವೇಗವಾಗಿ ಬೆಳೆಯಲು ಅವಕಾಶ ಮಾಡಿಕೊಡುವ ಉದ್ದೇಶದಿಂದ ಸರ್ಕಾರ ಈ ಚಿಂತನೆ ಮಾಡಿದೆ. ಸದ್ಯಕ್ಕೆ ಯಾವುದೇ ಕಡಿತದ ಗಾತ್ರವನ್ನು ನಿರ್ಧರಿಸಿಲ್ಲ. ಬಜೆಟ್‌ ಮಂಡನೆಗೆ ದಿನಾಂಕ ಸಮೀಪವಾಗುತ್ತಿದ್ದಂತೆ ನಿರ್ಧಾರ ಸ್ಪಷ್ಟವಾಗಲಿದೆ ಎಂದು ಹೆಸರು ಹೇಳಲಿಚ್ಚಿಸದ ಸರ್ಕಾರಿ ಮೂಲಗಳು ತಿಳಿಸಿವೆ ಎನ್ನಲಾಗಿದೆ. ಇದನ್ನೂ ಓದಿ: ಬಿಜೆಪಿಗೆ 2,244 ಕೋಟಿ, ಕಾಂಗ್ರೆಸ್‌ಗೆ 289 ಕೋಟಿ – ಯಾವ ಪಕ್ಷಕ್ಕೆ ಎಷ್ಟು ದೇಣಿಗೆ ಸಿಕ್ಕಿದೆ?

    ಪ್ರಮುಖವಾಗಿ ವಸತಿ ಬಾಡಿಗೆಗಳಂತಹ ವಿನಾಯಿತಿಗಳನ್ನು ತೆಗೆದುಹಾಕುವ 2020ರ ತೆರಿಗೆ ವ್ಯವಸ್ಥೆಯನ್ನು ಆರಿಸಿಕೊಂಡರೆ, ಈ ಕ್ರಮವು ಕೋಟ್ಯಂತರ ತೆರಿಗೆದಾರರಿಗೆ, ವಿಶೇಷವಾಗಿ ಹೆಚ್ಚಿನ ಜೀವನ ವೆಚ್ಚದಿಂದ ಹೊರೆಯಾಗಿರುವ ನಗರವಾಸಿಗಳಿಗೆ ಪ್ರಯೋಜನ ನೀಡುತ್ತದೆ. 2020ರ ತೆರಿಗೆ ಪದ್ದತಿಯಲ್ಲಿ 3 ಲಕ್ಷ ರೂ.ಗಳಿಂದ 15 ಲಕ್ಷ ರೂ.ಗಳ ವರೆಗಿನ ವಾರ್ಷಿಕ ಆದಾಯಕ್ಕೆ ಶೇ.5 ರಿಂದ ಶೇ.20ರ ವರೆಗೆ ತೆರಿಗೆ ವಿಧಿಸಲಾಗುತ್ತಿತ್ತು. ಈ ಪ್ರಮಾಣ ಗರಿಷ್ಠ 30% ರಷ್ಟಿತ್ತು.

    ಇದೀಗ ಕೇಂದ್ರ ಸರ್ಕಾರ ಮುಂದಿಟ್ಟಿರುವ ನೂತನ ಪ್ರಸ್ತಾಪದಲ್ಲಿ ದೇಶದ ತೆರಿಗೆದಾರರು 2 ತೆರಿಗೆ ವ್ಯವಸ್ಥೆಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದು. ಅದೇನೆಂದರೆ ವಸತಿ ಬಾಡಿಗೆ ಮತ್ತು ವಿಮೆಯ ಮೇಲೆ ವಿನಾಯಿತಿ ಅನುಮತಿಸುವ ಒಂದು ತೆರಿಗೆ ಪದ್ದತಿ ಮತ್ತು ಮತ್ತೊಂದು 2020ರಲ್ಲಿ ಪರಿಚಯಿಸಲಾದ ತೆರಿಗೆ ಪದ್ದತಿ. ಇದು ಸ್ವಲ್ಪ ಕಡಿಮೆ ತೆರಿಗೆ ದರಗಳನ್ನು ನೀಡುತ್ತದೆಯಾದರೂ ಪ್ರಮುಖ ವಿನಾಯಿತಿಗಳನ್ನ ಅನುಮತಿಸುವುದಿಲ್ಲ ಎಂದು ವರದಿ ಹೇಳಿದೆ.

    ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಅವರು ಅರ್ಥಶಾಸ್ತ್ರಜ್ಞರನ್ನು ಭೇಟಿಯಾಗಿದ್ದರು. ಈ ವೇಳೆ ತಜ್ಞರು ನಾಗರಿಕರ ಮೇಲಿನ ಹೊರೆ ಕಡಿಮೆ ಮಾಡಲು ಆದಾಯ ತೆರಿಗೆ ಕಡಿತಗೊಳಿಸುವಂತೆ ಮೋದಿ ಅವರಿಗೆ ಮನವಿ ಮಾಡಿಕೊಂಡಿದ್ದರು. ಅಲ್ಲದೇ ಕಸ್ಟಮ್ಸ್ ಸುಂಕಗಳನ್ನು ತರ್ಕಬದ್ಧಗೊಳಿಸಬೇಕು ಮತ್ತು ರಫ್ತುಗಳನ್ನು ಬೆಂಬಲಿಸುವ ಕ್ರಮಗಳನ್ನ ಪರಿಚಯಿಸಬೇಕು ಎಂದು ಸಹ ಮನವಿ ಮಾಡಿದ್ದರು.

    ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2025ರ ಫೆಬ್ರವರಿ 1 ರಂದು 2025-26ನೇ ಸಾಲಿನ ವಾರ್ಷಿಕ ಬಜೆಟ್‌ ಮಂಡಿಸಲಿದ್ದಾರೆ. ಇದನ್ನೂ ಓದಿ: ಮೈಗೆ ಬೆಂಕಿ ಹಚ್ಚಿಕೊಂಡು ಸಂಸತ್‌ ಭವನದ ಕಡೆ ಓಡಿದ ವ್ಯಕ್ತಿ – ದೇಹದ 95% ಭಾಗ ಸುಟ್ಟು ಆಸ್ಪತ್ರೆಗೆ ದಾಖಲು