Tag: Economic Census

  • ಎನ್ಆರ್​ಸಿ, ಸಿಎಎ ಮೇನಿಯಾ- ಆರ್ಥಿಕ ಗಣತಿಗೆ ಮುಸ್ಲಿಮರಿಂದ ಅಡ್ಡಿ

    ಎನ್ಆರ್​ಸಿ, ಸಿಎಎ ಮೇನಿಯಾ- ಆರ್ಥಿಕ ಗಣತಿಗೆ ಮುಸ್ಲಿಮರಿಂದ ಅಡ್ಡಿ

    ತುಮಕೂರು: ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ಆರ್​ಸಿ) ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಮಾಹಿತಿ ಪಡೆಯಲು ಬಂದಿದ್ದಾರೆಂದು ಅನುಮಾನಿಸಿ ಮುಸ್ಲಿಮರು ಆರ್ಥಿಕ ಗಣತಿ ಮಾಡಲು ಬಂದಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಜಿಲ್ಲೆಯ ಮುಸ್ಲಿಮರಲ್ಲಿ ಈ ಹೊಸ ಕಾಯ್ದೆಯ ಮೇನಿಯಾ ಕಾಡುತ್ತಿದ್ದು, ಆರ್ಥಿಕ ಗಣತಿ ಮಾಡಲು ಬಂದಿದ್ದ ಸಿಎಸ್‍ಸಿ ಏಜೆನ್ಸಿ ಸಿಬ್ಬಂದಿ ಕಂಡು ಮುಸ್ಲಿಮರು ಆತಂಕಗೊಂಡಿದ್ದಾರೆ. ಮನೆಮನೆಗೆ ಭೇಟಿ ಕೊಟ್ಟು ಆರ್ಥಿಕ ಗಣತಿಗಾಗಿ ಮಾಹಿತಿ ಕಲೆ ಹಾಕುತ್ತಿದ್ದ ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡಿದ್ದಾರೆ. ಎನ್ಆರ್​ಸಿ ಜಾರಿ ಕುರಿತು ಸಮೀಕ್ಷೆ ಮಾಡುತ್ತಿರಬಹುದು ಎಂದು ಆತಂಕಗೊಂಡು ಸಿಬ್ಬಂದಿ ಐಡಿ ಕಾರ್ಡ್, ಮಾನ್ಯತಾ ಪತ್ರ ಎಲ್ಲವನ್ನೂ ಪರಿಶೀಲಿಸಿದ್ದಾರೆ. ಆದರೂ ಸಮಾಧಾನ ಆಗದೆ ಗಣತಿ ಮಾಡುತ್ತಿದ್ದ ಸಿಬ್ಬಂದಿಯನ್ನ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.

     

    ಸಿಎಸ್ಸಿ ಸಿಬ್ಬಂದಿ ಜಿ.ಸಿ.ಆರ್ ಕಾಲೋನಿ, ಪೂರ್ ಹೌಸ್ ಕಾಲೋನಿ ಹಾಗೂ ಬಿಬಿಜಾನ್ ಲೇಔಟ್‍ಗಳಲ್ಲಿ ಆರ್ಥಿಕ ಗಣತಿ ಮಾಡುತ್ತಿದ್ದರು. ಕೇವಲ ಮುಸ್ಲಿಮರು ಹೆಚ್ಚಾಗಿರುವ ಬಡಾವಣೆಗಳಲ್ಲೇ ಸರ್ವೆ ನಡೆಯುತ್ತಿದ್ದದ್ದು ಇನ್ನಷ್ಟು ಆತಂಕ್ಕೆ ಕಾರಣವಾಗಿತ್ತು. ಸಿಬ್ಬಂದಿ ಎಷ್ಟೇ ಮನವೊಲಿಸಿದರೂ ಸ್ಥಳೀಯರಿಗೆ ಸಮಾಧಾನ ತಂದಿಲ್ಲ. ಬಳಿಕ ಸಿಬ್ಬಂದಿಯನ್ನು ನಗರ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದ್ದು, ಆಗ ಸತ್ಯಾಸತ್ಯತೆ ತಿಳಿದಿದೆ. ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಸಿಎಸ್ಸಿ ಏಜೆನ್ಸಿ ರಾಷ್ಟ್ರೀಯ 7ನೇ ಆರ್ಥಿಕ ಗಣತಿ ಕಾರ್ಯಕ್ರಮದ ಅನ್ವಯ ಆರ್ಥಿಕ ಗಣತಿ ನಡೆಸುತ್ತಿದೆ ಎಂಬುದು ಸ್ಪಷ್ಟವಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಕಚೇರಿ ಮೂಲ ಕೂಡ ಸ್ಪಷ್ಟಪಡಿಸಿದೆ.

    2019ರ ನವೆಂಬರಿನಿಂದ ದೇಶಾದ್ಯಂತ ಆರ್ಥಿಕ ಗಣತಿ ಕಾರ್ಯ ನಡೆಯುತ್ತಿದೆ. ರಾಜ್ಯದಲ್ಲಿ ನವೆಂಬರ್ 6 ರಿಂದ ಆರಂಭಗೊಂಡಿದೆ. ಇದೇ ರೀತಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಆರ್ಥಿಕ ಗಣತಿ ನಡೆಯುತ್ತಿದೆ. ಆದರೆ ಎನ್ಆರ್​ಸಿ ಹಾಗೂ ಪೌರತ್ವ ಕಾಯ್ದೆ ಬಗ್ಗೆ ಪ್ರತಿಪಕ್ಷಗಳು ಭಯಹುಟ್ಟಿಸಿರುವುದು ಹಾಗೂ ಕೇಂದ್ರ ಸರ್ಕಾರ ಸಾರ್ವಜನಿಕರಲ್ಲಿ ಸರಿಯಾಗಿ ಅರಿವು ಮೂಡಿಸದಿರುವುದು ಅವಾಂತರಕ್ಕೆ ಕಾರಣವಾಗಿದೆ.

  • ಮೊಬೈಲ್ ಆ್ಯಪ್ ಮೂಲಕ 7ನೇ ಆರ್ಥಿಕ ಗಣತಿ

    ಮೊಬೈಲ್ ಆ್ಯಪ್ ಮೂಲಕ 7ನೇ ಆರ್ಥಿಕ ಗಣತಿ

    ಬಳ್ಳಾರಿ: ಸರ್ಕಾರದ ಆದೇಶದ ಮೇರೆಗೆ 7ನೇ ಆರ್ಥಿಕ ಗಣತಿ ಡಿ. 24ರಿಂದ ಪ್ರಾರಂಭವಾಗಿದ್ದು, ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗಣತಿಯ ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಯಿತು.

    ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್, ಗಣತಿಯಲ್ಲಿ ಮನೆ ಹಾಗೂ ವಾಣಿಜ್ಯ ಕಟ್ಟಡ, ಸಂಕೀರ್ಣಗಳಲ್ಲಿ ನಡೆಯುತ್ತಿರುವ ವ್ಯಾಪಾರ, ಉದ್ಯಮದ ಬಗ್ಗೆ ಮಾಹಿತಿಯನ್ನು ಗಣತಿದಾರರು ಕೇಳಲಿದ್ದಾರೆ ಎಂದು ತಿಳಿಸಿದರು. ಸದರಿ ಗಣತಿದಾರರಿಗೆ ಎಲ್ಲಾ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದರು.

    ಮನೆಗಳಲ್ಲಿ ನಡೆಯುವ ಹೈನುಗಾರಿಕೆ, ಹೊಲಿಗೆ, ಅಂಗಡಿ ಇತರೆ ಸಣ್ಣಪುಟ್ಟ ವ್ಯಾಪಾರ ಗಣತಿಯೊಂದಿಗೆ ವಾಣಿಜ್ಯ ಕಟ್ಟಡಗಳಲ್ಲಿನ ಉದ್ಯಮಗಳ ಬಗ್ಗೆ ಮಾಹಿತಿ ಕಲೆಹಾಕಲಿದ್ದು, ಸದರಿ ಮಾಹಿತಿ ಆಧರಿಸಿ ಮುಂದಿನ ದಿನಗಳಲ್ಲಿ ಸಂಬಂಧಿಸಿದ ಇಲಾಖೆಗಳ ಮೂಲಕ ನಿರ್ಧಿಷ್ಟ ಉದ್ಯಮಗಳಿಗೆ ನೀಡಬೇಕಾದ ಸೌಲಭ್ಯ, ಸಹಕಾರಗಳ ಬಗ್ಗೆ ಯೋಜನೆ ರೂಪಿಸಲು ಸಹಕಾರಿಯಾಗಲಿದೆ ಎಂದರು.

    ಸಾರ್ವಜನಿಕರು ಉದ್ಯಮಗಳ ಮಾಹಿತಿಯನ್ನು ನಿಖರವಾಗಿ ನೀಡಬೇಕು. ಸದರಿ ಗಣತಿಯನ್ನು ಮೊಬೈಲ್ ಆ್ಯಪ್ ಮೂಲಕ ನಡೆಸಲಾಗುವುದು ಹಾಗೂ ಎಲ್ಲಾ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು ಎಂದರು. ಹೀಗಾಗಿ ಯಾರು ಆತಂಕ ಪಡದೆ ಸರಿಯಾದ ಮಾಹಿತಿ ನೀಡಲು ಸಾರ್ವಜನಿಕರಲ್ಲಿ ಮನವಿ ಮಾಡಿದರು.