Tag: Eco Friendly Ganesha

  • ಪರಿಸರ ಸ್ನೇಹಿ ಗಣೇಶ ಹಬ್ಬಕ್ಕೆ ಬಿಬಿಎಂಪಿಯಿಂದ ಮಾರ್ಗಸೂಚಿ ಪ್ರಕಟ

    ಪರಿಸರ ಸ್ನೇಹಿ ಗಣೇಶ ಹಬ್ಬಕ್ಕೆ ಬಿಬಿಎಂಪಿಯಿಂದ ಮಾರ್ಗಸೂಚಿ ಪ್ರಕಟ

    ಬೆಂಗಳೂರು: ಗಣೇಶೋತ್ಸವಕ್ಕೆ ಇನ್ನೂ ಕೆಲವೇ ದಿನಗಳು ಬಾಕಿಯಿರುವ ಹಿನ್ನೆಲೆ ಬಿಬಿಎಂಪಿ (BBMP) ಮಾರ್ಗಸೂಚಿ ಪ್ರಕಟಿಸಿದೆ.

    ಬೆಂಗಳೂರಿನಾದ್ಯಂತ (Bengaluru) ವಲಯವಾರು 75 ಏಕಗವಾಕ್ಷಿ ಕೇಂದ್ರಗಳ ಸ್ಥಾಪನೆ ಮಾಡಲಾಗಿದ್ದು, ಇಲಾಖಾವಾರು ನೋಡಲ್ ಅಧಿಕಾರಿಗಳ ನಿಯೋಜನೆ ಮಾಡಲಾಗಿದೆ.ಇದನ್ನೂ ಓದಿ: UGCET/NEET: 2ನೇ ಸುತ್ತಿನ ಕೌನ್ಸೆಲಿಂಗ್ ಆರಂಭ – ಕೆಇಎ

    ಮಾರ್ಗಸೂಚಿಯಲ್ಲಿ ಏನಿದೆ?
    1.ಗಣೇಶ ಹಬ್ಬದ ನಿಮಿತ್ತ ಸಾರ್ವಜನಿಕವಾಗಿ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲು ಉಪವಿಭಾಗ ಮಟ್ಟದಲ್ಲಿ ನೋಡಲ್ ಅಧಿಕಾರಿಗಳಾಗಿ ನೇಮಿಸಲಾದ ಸಹಾಯಕ ಕಾರ್ಯಪಾಲಕ ಅಭಿಯಂತರರುಗಳ ಕಾರ್ಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಬೇಕು.

    2.ನೋಡಲ್ ಅಧಿಕಾರಿಗಳು ಪೊಲೀಸ್, ಬೆಸ್ಕಾಂ, ಅಗ್ನಿಶಾಮಕ ಹಾಗೂ ಸಂಬಂಧಪಟ್ಟ ಇಲಾಖೆಗಳ ಅಭಿಪ್ರಾಯ ಪಡೆದು ಏಕಗವಾಕ್ಷಿಯಲ್ಲಿ ತ್ವರಿತವಾಗಿ ಅನುಮತಿ ನೀಡಲು ಕ್ರಮಕೈಗೊಳ್ಳಬೇಕು.

    3.ಬಿಬಿಎಂಪಿ ವ್ಯಾಪ್ತಿಯಲ್ಲಿ ರಾಸಾಯನಿಕ ಬಣ್ಣಗಳು, ಥರ್ಮಾಕೋಲ್ ಹಾಗೂ ಪ್ಲಾಸ್ಟರ್ ಆಫ್ ಪ್ಯಾರೀಸ್ ವಸ್ತುಗಳನ್ನು ಬಳಸಿ ಗಣೇಶ ಮೂರ್ತಿಯ ತಯಾರಿಕೆಯನ್ನು ಸಂಪೂರ್ಣವಾಗಿ ನಿಷೇಧಗೊಳಿಸಬೇಕು.

    4.ಸದರಿ ವಸ್ತುಗಳನ್ನು ಬಳಸಿ ತಯಾರಿಸುವ, ಮಾರಾಟ ಮಾಡುವ ಪ್ರದೇಶಗಳನ್ನು ಸಂಬಂಧಪಟ್ಟ ಬಿಬಿಎಂಪಿಯ ಉಪವಿಭಾಗದ ನೋಡಲ್ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಅಗ್ನಿಶಾಮಕ ಅಧಿಕಾರಿಗಳು, ಬೆಸ್ಕಾಂ ಅಧಿಕಾರಿಗಳು ಈ ಬಗ್ಗೆ ಖುದ್ದಾಗಿ ಪರಿಶೀಲಿಸಿ ನೋಟಿಸ್ ನೀಡಬೇಕು.

    5.ರಾಸಾಯನಿಕ ಬಣ್ಣಗಳು, ಥರ್ಮಾಕೋಲ್ ಹಾಗೂ ಪ್ಲಾಸ್ಟರ್ ಆಫ್ ಪ್ಯಾರೀಸ್ ವಸ್ತುಗಳನ್ನು ಬಳಸಿ ಗಣೇಶ ಮೂರ್ತಿ ತಯಾರಿಸುತ್ತಿದ್ದಲ್ಲಿ ಹಾಗೂ ಮಾರಾಟ ಮಾಡುತ್ತಿದ್ದಲ್ಲಿ ದಂಡ ವಿಧಿಸಿ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿ, ನಿಷೇಧಿಸಿದ ವಸ್ತುಗಳನ್ನು ವಶಪಡಿಸಿಕೊಳ್ಳಲು ಕ್ರಮವಹಿಸಬೇಕು.

    6.ವಲಯ ಆಯುಕ್ತರು, ವಲಯ ಮಟ್ಟದಲ್ಲಿ ಮೇಲ್ವಿಚಾರಣೆ ನಡೆಸಬೇಕು. ವಶಪಡಿಸಿಕೊಳ್ಳಲಾದ ಮೇಲ್ಕಂಡ ವಸ್ತುಗಳನ್ನು ನಿಯಮಾನುಸಾರ ವಿಲೇವಾರಿಗೊಳಿಸಲು ಕ್ರಮವಹಿಸಬೇಕು.

    7.ಗಣೇಶಮೂರ್ತಿ ತಯಾರಿಕೆದಾರರಿಗೆ ಪರಿಸರ ಸ್ನೇಹಿ/ಮಣ್ಣಿನಿಂದ ಮಾಡಿದ ಮೂರ್ತಿಗಳನ್ನು ಮಾತ್ರ ತಯಾರಿಸಲು ಜಾಹೀರಾತು ನೀಡುಬೇಕು.

    8.ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಸಂಬಂಧಿಸಿದಂತೆ ಸಾರ್ವಜನಿಕರು ತಮ್ಮ ತಮ್ಮ ಮನೆಗಳಲ್ಲಿ, ಬಕೇಟ್‌ಗಳಲ್ಲಿ ವಿಸರ್ಜನೆಗೊಳಿಸಿ, ಬರುವ ಮಣ್ಣನ್ನು ಕೈತೋಟಗಳಿಗೆ, ಹೂವಿನ ಕುಂಡಗಳಿಗೆ ಬಳಸಲು ಅರಿವು ಮೂಡಿಸಬೇಕು.

    9.ದೊಡ್ಡ ಗಾತ್ರದ ಮೂರ್ತಿಗಳ ವಿಸರ್ಜನೆಗೆ ಬಿಬಿಎಂಪಿ ವ್ಯಾಪ್ತಿಯ ವಾರ್ಡ್ಗಳಲ್ಲಿ ವಿಸರ್ಜನೆ/ನಿಮಜ್ಜನ ಸ್ಥಳಗಳನ್ನು ಗುರುತಿಸಿ, ಸದರಿ ಸ್ಥಳಗಳ ಮಾಹಿತಿಯನ್ನು ಸಾರ್ವಜನಿಕರಿಗೆ ಪ್ರಚುರಪಡಿಸಬೇಕು.

    10.ವಾರ್ಡ್ ವ್ಯಾಪ್ತಿಯಲ್ಲಿ ಸಂಚಾರಿ ವಾಹನ ಮೂಲಕ ವಿಸರ್ಜನೆಗೆ ಅಗತ್ಯ ವ್ಯವಸ್ಥೆ ಕೈಗೊಳ್ಳಬೇಕು.

    11.ಪಾಲಿಕೆಯ ವ್ಯಾಪ್ತಿಯ ಕೆರೆ/ಕಲ್ಯಾಣಿಗಳಲ್ಲಿ ಗಣೇಶ ಮೂರ್ತಿ ವಿಸರ್ಜನೆಯಿಂದ ಉಂಟಾಗುವ ಮಾಲಿನ್ಯವನ್ನು ತಡೆಗಟ್ಟಲು ಸದರಿ ಸ್ಥಳಗಳ ಸಮೀಪದಲ್ಲಿ ತಾತ್ಕಾಲಿಕ ವಿಸರ್ಜನೆ ಸ್ಥಳಗಳನ್ನು ನಿರ್ಮಿಸಬೇಕು. ಸದರಿ ವಿಸರ್ಜನೆಯಿಂದ ಬರುವ ಮಣ್ಣು, ಪೂಜಾ ಹೂಗಳು ಹಾಗೂ ಪ್ಲಾಸ್ಟಿಕ್ ಇತ್ಯಾದಿ ವಸ್ತುಗಳನ್ನು ವಿಂಗಡಿಸಬೇಕು. ಹಸಿತ್ಯಾಜ್ಯವನ್ನು ಹಸಿತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ, ಒಣತ್ಯಾಜ್ಯವನ್ನು ಒಣತ್ಯಾಜ್ಯ ಸಂಗ್ರಹಣಾ ಕೇಂದ್ರಗಳಿಗೆ ರವಾನಿಸಬೇಕು. ವಿಸರ್ಜನಾ ಸ್ಥಳಗಳಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ಮೂರ್ತಿಗಳನ್ನು ವಿಸರ್ಜಿಸಲು ಪ್ರತ್ಯೇಕ ತಂಡಗಳನ್ನು ನೇಮಿಸಬೇಕು ಹಾಗೂ ಕಿಯಾಸ್, ಆಂಬ್ಯುಲೆನ್ಸ್ ವ್ಯವಸ್ಥೆ, ವೈದ್ಯರು ಮತ್ತು ಶುಶ್ರೂಷಕಿಯರನ್ನು ಪ್ರಾಥಮಿಕ ಚಿಕಿತ್ಸೆ ನೀಡಲು ನೇಮಿಸಿ, ಎಲ್ಲಾ ಪಿಹೆಚ್‌ಸಿಗಳ ಬಳಿಯಲ್ಲಿ ಹೆಚ್ಚುವರಿ ಆಂಬ್ಯುಲೆನ್ಸ್ ಹಾಗೂ ವೈದ್ಯರು ಸಿದ್ಧವಿರುವಂತೆ ಕ್ರಮವಹಿಸಬೇಕು. ಬೆಳಕಿನ ವ್ಯವಸ್ಥೆ, ಬ್ಯಾರಿಕೇಡ್ ನಿರ್ಮಾಣ, ಧ್ವನಿವರ್ಧಕ ವ್ಯವಸ್ಥೆ ಮತ್ತು ನುರಿತ ಈಜುಗಾರರನ್ನು ಒಳಗೊಂಡಂತೆ ಎನ್‌ಡಿಆರ್‌ಎಫ್ ತಂಡ ಸ್ಥಳದಲ್ಲಿ ಹಾಜರಿರುವಂತೆ ಕ್ರಮವಹಿಸಬೇಕು.

    12.ಪರಿಸರ ಸ್ನೇಹಿ ಗಣೇಶ ಆಚರಣೆಯ ನಿಮಿತ್ತ ವಲಯ ಆಯುಕ್ತರು ವಲಯಕ್ಕೆ ಒಬ್ಬರನ್ನು ಮೇಲುಸ್ತುವಾರಿ ಅಧಿಕಾರಿಯನ್ನಾಗಿ ನೇಮಿಸಿ, ಗಣೇಶ ವಿಸರ್ಜನೆಗೆ ಸಂಬಂಧಿಸಿದಂತೆ ವಾರ್ಡಿಗೆ ಒಬ್ಬರಂತೆ ನೋಡಲ್ ಅಧಿಕಾರಿಯನ್ನು ನೇಮಿಸಲು ಅಗತ್ಯ ಕ್ರಮವಹಿಸಬೇಕು.

    13.ಪ್ಲಾಸ್ಟಿಕ್ ನಿಷೇಧ ಆದೇಶ ಜಾರಿಯಲ್ಲಿದ್ದು, ವಲಯ ವ್ಯಾಪ್ತಿಯಲ್ಲಿ ತಂಡಗಳನ್ನು ರಚಿಸಿ ಪ್ಲಾಸ್ಟಿಕ್ ಮಾರಾಟ ಮತ್ತು ಬಳಕೆ ಕಂಡುಬಂದಲ್ಲಿ ನಿಯಮಾನುಸಾರ ದಂಡ ವಿಧಿಸಿ ಕ್ರಮಕೈಗೊಳ್ಳಬೇಕು.

    14.ಪರಿಸರ ಸ್ನೇಹಿ ಗಣೇಶ ಆಚರಣೆಗೆ ಪ್ರೋತ್ಸಾಹ ನೀಡುಬೇಕು ಹಾಗೂ ಬಿಬಿಎಂಪಿ, ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆ, ಬೆಸ್ಕಾಂ ಹಾಗೂ ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಹೊರಡಿಸುವ ಷರತ್ತುಗೊಳಪಡಿಸಿ, ಗಣೇಶ ಹಬ್ಬ ಆಚರಣೆಗೆ ಅನುಮತಿ ನೀಡಲು ಕ್ರಮವಹಿಸಬೇಕು.ಇದನ್ನೂ ಓದಿ: ನಾನು ಹಣಕ್ಕಾಗಿ ಹೀಗೆ ಮಾಡಿಲ್ಲ, ಮಗಳು ಇಲ್ಲ ಅಂತ ಕೊರಗುತ್ತಿದ್ದೀನಿ: ಸುಜಾತಾ ಭಟ್ ಕಣ್ಣೀರು

  • ಪರಿಸರ ಕಾಳಜಿ ಮೆರೆದ ದರ್ಶನ್ ಪತ್ನಿ-ಮಗ

    ಪರಿಸರ ಕಾಳಜಿ ಮೆರೆದ ದರ್ಶನ್ ಪತ್ನಿ-ಮಗ

    ಬೆಂಗಳೂರು: ಕೊರೊನಾ ಮಧ್ಯೆ ಗಣೇಶ ಹಬ್ಬದ ಪ್ರಯುಕ್ತ ಕನ್ನಡ ಚಿತ್ರರಂಗದ ನಟ-ನಟಿಯರು, ನಿರ್ದೇಶಕರು ತಮ್ಮ ಅಭಿಮಾನಿಗಳಿಗೆ ಶುಭಕೋರಿದ್ದಾರೆ. ಜೊತೆಗೆ ತಮ್ಮ ಮನೆಯಲ್ಲಿ ಪರಿಸರ ಸ್ನೇಹಿ ಗಣೇಶನ ವಿಗ್ರಹ ಕೂರಿಸಿ ಪೂಜೆ ಮಾಡುತ್ತಿದ್ದಾರೆ.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ತಮ್ಮ ಅಭಿಮಾನಿಗಳಿಗೆ ಶುಭ ಕೋರಿದ್ದಾರೆ. “ಶ್ರೀ ಗೌರಿ ಸುತನಾದ ಶ್ರೀ ಸಿದ್ಧಿ ವಿನಾಯಕನು, ನಿಮ್ಮ ಜೀವನದ ಎಲ್ಲಾ ಅಡೆತಡೆಗಳನ್ನು ದೂರಗೊಳಿಸಿ, ಮಂಗಳಕರ ಆರಂಭವನ್ನು ನೀಡಲೆಂದು ಹಾರೈಸುತ್ತೇನೆ. ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ಪರಿಸರ ಸ್ನೇಹಿ ಗೌರಿ ಗಣೇಶ ಮೂರ್ತಿಗಳನ್ನು ಬಳಸಿ ಪರಿಸರ ಸಂರಕ್ಷಣೆಯಲ್ಲಿ ಕೈಜೋಡಿಸಿ” ಎಂದು ಹಬ್ಬಕ್ಕೆ ವಿಶ್ ಮಾಡಿದ್ದಾರೆ.

    ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಹ ಗಣೇಶ ಹಬ್ಬಕ್ಕೆ ವಿಶೇಷವಾಗಿ ವಿಶ್ ಮಾಡಿದ್ದಾರೆ. ಅಲ್ಲದೇ ಪುತ್ರ ವಿನೀಶ್ ಜೊತೆ ಚಿಕ್ಕ ಗಣೇಶನ ವಿಗ್ರಹವನ್ನು ಹಿಡಿದು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋವನ್ನು ಟ್ವಿಟ್ಟರಿನಲ್ಲಿ ಹಂಚಿಕೊಳ್ಳುವ ಮೂಲಕ ವಿಜಯಲಕ್ಷ್ಮಿ ಪರಿಸರ ಸ್ನೇಹಿ ಗಣೇಶನ ಬಳಕೆಗೆ ಬೆಂಬಲ ಸೂಚಿಸಿದ್ದಾರೆ.

    ವಿಜಯಲಕ್ಷ್ಮಿ ಸ್ವತಃ ತಾವೇ ತಯಾರಿಸುವ ಗಣೇಶನನ್ನು ತಮ್ಮ ಮನೆಯಲ್ಲಿ ಕೂರಿಸಿ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ. “ಸುಂದರವಾದ ಗಣೇಶ ಮೂರ್ತಿಯನ್ನು ತಯಾರಿಸಲು ಸುಲಭವಿದ್ದಾಗ ಏಕೆ ಖರೀದಿಸಬೇಕು? ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ನಾಳಿನ ಆರೋಗ್ಯಕ್ಕಾಗಿ ಇಂದು ಪರಿಸರ ಸ್ನೇಹಿ ಗಣೇಶ ಬಳಸುವುದು ಉತ್ತಮ” ಎಂದು ಹಬ್ಬಕ್ಕೆ ವಿಶೇಷವಾಗಿ ವಿಶ್ ಮಾಡಿದ್ದಾರೆ.

    ಫೋಟೋದಲ್ಲಿ ದರ್ಶನ್ ಪತ್ನಿ ಮತ್ತು ಮಗ ವಿನೀಶ್ ಪ್ರತ್ಯೇಕವಾಗಿ ಎರಡು ಗಣೇಶನ ವಿಗ್ರಹ ತಯಾರಿಸಿದ್ದಾರೆ. ಈ ಎರಡರಲ್ಲಿ ಯಾವುದು ಚೆನ್ನಾಗಿದೆ ಎಂದು ವಿಜಯಲಕ್ಷ್ಮಿ ಅಭಿಮಾನಿಗಳಿಗೆ ತಮಾಷೆಯಾಗಿ ಪ್ರಶ್ನೆ ಕೇಳಿದ್ದಾರೆ.

  • ಚಿಕ್ಕಮಗಳೂರಿನಲ್ಲಿ ರಾಗಿಯನ್ನು ಬಳಸಿ ಪರಿಸರ ಸ್ನೇಹಿ ಗಣೇಶನ ಮೂರ್ತಿ ಪ್ರತಿಷ್ಠಾಪನೆ

    ಚಿಕ್ಕಮಗಳೂರಿನಲ್ಲಿ ರಾಗಿಯನ್ನು ಬಳಸಿ ಪರಿಸರ ಸ್ನೇಹಿ ಗಣೇಶನ ಮೂರ್ತಿ ಪ್ರತಿಷ್ಠಾಪನೆ

    ಚಿಕ್ಕಮಗಳೂರು: ರಾಸಾಯನಿಕ ಬಳಕೆಯಿಂದ ತಯಾರಾದ ಗಣೇಶನಿಂದ ನೀರು ವಿಷಪೂರಿತವಾಗೋದರ ಜೊತೆ ಜಲಚರಗಳಿಗೂ ತೊಂದರೆ ಎಂದು ಮಲೆನಾಡಿನ ಭಕ್ತರೊಬ್ಬರು ರಾಗಿಯನ್ನೇ ಬಳಸಿ ಪರಿಸರ ಸ್ನೇಹಿ ಗಣೇಶನ ಮೂರ್ತಿಯನ್ನೇ ಪ್ರತಿಷ್ಠಾಪಿಸಿದ್ದಾರೆ.

    ಚಿಕ್ಕಮಗಳೂರು ಜಿಲ್ಲೆ ಎನ್.ಆರ್ ಪುರ ತಾಲೂಕಿನ ಬಾಳೆಹೊನ್ನೂರಿನ ವೀರಭದ್ರೇಶ್ವರ ನಗರದ ನಿವಾಸಿಯಾದ ವೇದರಾಜ್ ಭಂಡಾರಿ ಮನೆಯಲ್ಲಿನ ಪೇಪರ್, ಮೈದಾ ಹಿಟ್ಟು ಹಾಗೂ ರಾಗಿ ಕಾಳಿನಿಂದ ತಯಾರಿಸಿದ ಗಣೇಶ ಮೂರ್ತಿಯನ್ನು ತಮ್ಮ ಮನೆಯಲ್ಲಿ ಕೂರಿಸಿದ್ದಾರೆ.

    ಪ್ರತಿ ವರ್ಷ ಒಂದೊಂದು ರೀತಿಯ ಪರಿಸರ ಸ್ನೇಹಿ ಗಣೇಶನನ್ನು ತಯಾರಿಸೋ ವೇದರಾಜ್ ಅವರು ಕಳೆದ ಬಾರಿ ಬಿಟ್ ರೂಟ್ ಗಣೇಶನನ್ನು ತಯಾರಿಸಿದ್ದರು. ಹೀಗೆ ಪ್ರತಿವರ್ಷವೂ ಕೊಬ್ಬರಿ ಬೆಲ್ಲ, ಪೇಪರ್ ಗಣೇಶ ಸೇರಿದಂತೆ ಒಂದೊಂದು ವಿನೂತನ ರೀತಿಯಲ್ಲಿ ಗಣೇಶನನ್ನು ನಿರ್ಮಿಸಿ ಪೂಜೆಸುತ್ತಾ ಬಂದಿದ್ದಾರೆ. ಇವರನ್ನು ನೋಡಿದ ಮೇಲೆ ಮಲೆನಾಡಿನ ಬಹುತೇಕ ಮಂದಿ ಈ ರೀತಿಯ ವಿಭಿನ್ನ ಹಾಗೂ ಪರಿಸರಕ್ಕೆ ಮಾರಕವಾಗದ ಗಣೇಶನನ್ನು ಕೂರಿಸಲು ಮುಂದಾಗಿದ್ದಾರೆ.

    ಗಣೇಶ ಚತುರ್ಥಿಯಂದು ಹಲವು ಕಡೆ ಪರಿಸರ ಸ್ನೇಹಿ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಯಿತು. ಆದರೆ ಪಂಜಾಬ್‍ನ ಲೂದಿಯಾನಾದಲ್ಲಿ ಬರೋಬ್ಬರಿ 65 ಕೆ.ಜಿ ಚಾಕಲೇಟ್ ಬಳಸಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಲಾಯಿತ್ತು. ಹರ್ಜಿಂದರ್ ಸಿಂಗ್ ಕುಕ್ರೇಜಾ ಅವರು ಬರೋಬ್ಬರಿ 65 ಕೆ.ಜಿ ಚಾಕಲೇಟ್ ಬಳಸಿ ಗಣೇಶ ಮೂರ್ತಿಯನ್ನು ತಯಾರಿಸಿದ್ದಾರೆ. ಸತತವಾಗಿ ಮೂರನೇ ವರ್ಷ ಚಾಕಲೇಟ್ ಗಣೇಶನನ್ನು ಮಾಡಿ ಪ್ರತಿಷ್ಠಾಪಿಸಿದ್ದಾರೆ. ಈ ಗಣೇಶ ಮೂರ್ತಿಯನ್ನು 20 ಶೇಫ್‍ಗಳು 10 ದಿನದಲ್ಲಿ ತಯಾರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv