Tag: Eclipse

  • ಮಳೆ ಮೋಡದ ಮರೆಯಲ್ಲಿ ವರ್ಷದ ಮೊದಲ ಕೌತುಕ- ಉಡುಪಿಯಲ್ಲಿ ಸೂರ್ಯಗ್ರಹಣ ದರ್ಶನ

    ಮಳೆ ಮೋಡದ ಮರೆಯಲ್ಲಿ ವರ್ಷದ ಮೊದಲ ಕೌತುಕ- ಉಡುಪಿಯಲ್ಲಿ ಸೂರ್ಯಗ್ರಹಣ ದರ್ಶನ

    ಉಡುಪಿ: ಜಿಲ್ಲೆಯಲ್ಲಿ ವರ್ಷದ ಮೊದಲ ಸೂರ್ಯಗ್ರಹಣ ಗೋಚರವಾಗಿದೆ. ಬೆಳಗ್ಗೆ 10.04 ನಿಮಿಷಕ್ಕೆ ಸರಿಯಾಗಿ ಸೂರ್ಯಗ್ರಹಣ ಆರಂಭವಾಗಿದೆ. ಮಳೆ ಮೋಡದ ನಡುವೆ ಗ್ರಹಣದ ಸೂರ್ಯ ಆಗಾಗ ದರ್ಶನ ಕೊಟ್ಟಿದ್ದಾನೆ.

    ಈ ವರ್ಷದ ಮೊದಲ ಕಂಕಣ ಸೂರ್ಯಗ್ರಹಣ ಆರಂಭವಾಗಿದೆ. ಉಡುಪಿ ಜಿಲ್ಲೆಯಲ್ಲಿ ಕಳೆದ ಹತ್ತು ದಿನಗಳಿಂದ ನಿರಂತರವಾಗಿ ಮುಂಗಾರು ಅಬ್ಬರಿಸುತ್ತಿದೆ. ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣ ಇರುವುದರಿಂದ ಸೂರ್ಯ ಮೋಡದ ಮರೆಯಿಂದ ಆಗಾಗ ಹೊರಬಂದು ಕಾಣಿಸಿಕೊಳ್ಳುತ್ತಿದ್ದಾನೆ. ನಿಗದಿತ ಸಮಯಕ್ಕೆ ಅಂದರೆ 10.04ಕ್ಕೆ ಗ್ರಹಣ ಆರಂಭವಾಗಿದ್ದು, ಲಕ್ಷಾಂತರ ಜನ ಗ್ರಹಣವನ್ನು ವೀಕ್ಷಣೆ ಮಾಡಿದ್ದಾರೆ.

    11.37ಕ್ಕೆ ಉಡುಪಿ ಜಿಲ್ಲೆಯಲ್ಲಿ ಶೇ.40ರಷ್ಟು ಗ್ರಹಣ ಕಾಣಿಸಿಕೊಳ್ಳಲಿದೆ. ಮಧ್ಯಾಹ್ನ 1.22 ಗ್ರಹಣ ಮೋಕ್ಷ ಕಾಲ. ದಕ್ಷಿಣ ಭಾರತದಲ್ಲಿ ಸಂಪೂರ್ಣ ಸೂರ್ಯಗ್ರಹಣ ಗೋಚರವಾಗುವುದಿಲ್ಲ. ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಹೆಚ್ಚು ಅಂಶ ಗೋಚರವಾಗುತ್ತದೆ. ಕುರುಕ್ಷೇತ್ರದಲ್ಲಿ ಇಡೀ ದೇಶದ ಅತಿ ಹೆಚ್ಚು ಸೂರ್ಯ ಗ್ರಹಣ ಗೋಚರವಾಗಲಿದೆ ಎಂದು ಹಿರಿಯ ಭೌತಶಾಸ್ತ್ರಜ್ಞ ಎ.ಪಿ.ಭಟ್ ಮಾಹಿತಿ ನೀಡಿದರು.

  • ಶುಕ್ರವಾರ ಸಂಭವಿಸಲಿದೆ ಚಂದ್ರ ಗ್ರಹಣ – ವರ್ಷದ 2ನೇ ಚಂದ್ರಗ್ರಹಣ ಹೇಗಿರಲಿದೆ?

    ಶುಕ್ರವಾರ ಸಂಭವಿಸಲಿದೆ ಚಂದ್ರ ಗ್ರಹಣ – ವರ್ಷದ 2ನೇ ಚಂದ್ರಗ್ರಹಣ ಹೇಗಿರಲಿದೆ?

    ಬೆಂಗಳೂರು: ಶುಕ್ರವಾರ ಚಂದ್ರಗ್ರಹಣ ಸಂಭವಿಸಲಿದೆ. ಈ ಬಾರಿಯ ಚಂದ್ರಗ್ರಹಣವೂ ಸಂಪೂರ್ಣವಾಗಿ ಭಿನ್ನವಾಗಿರಲಿದ್ದು, ಚಂದ್ರನ ಆಕಾರದಲ್ಲಿ ಯಾವುದೇ ಬದಲಾವಣೆ ಇರಲ್ಲ. ಗ್ರಹಣದ ಸಮಯದಲ್ಲಿ ಚಂದ್ರನು ಅರ್ಧಾಕಾರದಲ್ಲಿ ಕಾಣದೇ ತನ್ನ ಪೂರ್ಣ ಗಾತ್ರದಲ್ಲೇ ಚಲಿಸಲಿದ್ದಾನೆ.

    ಈ ಚಂದ್ರಗ್ರಹಣವೂ ಕೂಡ ಪೂರ್ಣ ಅಥವಾ ಭಾಗಶಃ ಚಂದ್ರಗ್ರಹಣವಲ್ಲ. ಇದು ಆರಂಭದ ಎರಡು ಗ್ರಹಣಗಳಂತೆ ನೆರಳು ಚಂದ್ರಗ್ರಹಣವಾಗಿರುತ್ತದೆ. ಆದ್ದರಿಂದ ಈ ಗ್ರಹಣವು ಭಾರತದಲ್ಲಿ ಹೆಚ್ಚು ಪರಿಣಾಮ ಬೀರುವುದಿಲ್ಲ. ಈ ಗ್ರಹಣ ಅಷ್ಟೊಂದು ಪ್ರಭಾವಶಾಲಿಯಾಗಿಲ್ಲ ಎಂದು ನಂಬಲಾಗುತ್ತಿದ್ದು, ದೇಗುಲ ಬಂದ್ ಮಾಡೋದು, ಆಹಾರ ಸೇವನೆ ಮುಂತಾದ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧ ಇರಲ್ಲ. ಅರೆನೆರಳಿನ ಚಂದ್ರಗ್ರಹಣವನ್ನು ಸೂತಕ ಎಂದು ತಿಳಿಯಲ್ಲ ಎಂದು ಜ್ಯೋತಿಷಿಗಳು ಹೇಳುತ್ತಾರೆ.

    ಗ್ರಹಣ ಕಾಲ: 2020ರ ಮೊದ ಚಂದ್ರಗ್ರಹಣ ಜನವರಿ 10ರಂದು ಸಂಭವಿಸಿತ್ತು. ಜೂನ್ 5ರಂದು ಮತ್ತೊಂದು ಚಂದ್ರ ಗ್ರಹಣ ಸಂಭವಿಸಲಿದೆ. ಇದೇ ತಿಂಗಳಿನಲ್ಲಿ ಜೂನ್ 21ರಂದು ಸೂರ್ಯ ಗ್ರಹಣ ಸಂಭವಿಸಲಿದೆ. ನಾಳೆಯ ಚಂದ್ರಗ್ರಹಣ ರಾತ್ರಿ 11.16ಕ್ಕೆ ಆರಂಭಗೊಂಡು 02.32ಕ್ಕೆ ಅಂತ್ಯವಾಗಲಿದೆ. ರಾತ್ರಿ 12.54ಕ್ಕೆ ಪೂರ್ಣ ಗ್ರಹಣ ಘೋಚರವಾಗಲಿದೆ. ಇದೇ ವರ್ಷ ಡಿಸೆಂಬರ್ 14ರಂದು ಇನ್ನೊಂದು ಸೂರ್ಯಗ್ರಹಣ ಗತಿಸಲಿದೆ.

    ಎಲ್ಲೆಲ್ಲಿ ಗೋಚರ?: ಭಾರತ, ಏಷ್ಯಾದ ಕೆಲವು ಭಾಗ, ಆಸ್ಟ್ರೇಲಿಯಾ, ದಕ್ಷಿಣ ಅಮೆರಿಕಾ, ಯುರೋಪ್, ಆಫ್ರಿಕಾದಲ್ಲೂ ಚಂದ್ರಗ್ರಹಣ ಗೋಚರವಾಗಲಿದೆ. ಅರೆ ನೆರಳಿನ ಚಂದ್ರಗ್ರಹಣ ಇದಾಗಿದ್ದರಿಂದ ಚಂದ್ರನ ಆಕಾರದಲ್ಲಿ ಯಾವುದೇ ಬದಲಾವಣೆಗಳು ಇರಲ್ಲ. ಆದ್ರೆ ಚಂದ್ರನ ಚಿತ್ರಣವು ಅಥಾವ ಪ್ರಭಾವಳಿ ನಮಗೆ ಮುಸುಕಾಗಿ ಕಾಣುತ್ತದೆ.

    ಗ್ರಹಣಕ್ಕೂ ಮುನ್ನ ಚಂದ್ರ ಭೂಮಿಯ ನೆರಳನ್ನು ಪ್ರವೇಶ ಮಾಡುತ್ತಾನೆ. ಈ ಪ್ರವೇಶಕ್ಕೆ ಚಂದ್ರ ಮಾಲಿನ್ಯ (ಪೆನುಂಬ್ರಾ) ಎನ್ನಲಾಗುತ್ತೆ. ಚಂದ್ರ ಭೂಮಿಯ ನೆರಳನ್ನು ಪ್ರವೇಶಿಸಿದಾಗ ಸಹಜವಾಗಿ ಶಶಿಯ ಕಾಂತಿಯ ಕಡಿಮೆಯಾದಂತೆ ಕಾಣುತ್ತದೆ.

  • ಗ್ರಹಣದಂದೇ ಉಡಸಲಮ್ಮ ದೇವಸ್ಥಾನದ ಅರ್ಚಕ ನೇಣಿಗೆ ಶರಣು

    ಗ್ರಹಣದಂದೇ ಉಡಸಲಮ್ಮ ದೇವಸ್ಥಾನದ ಅರ್ಚಕ ನೇಣಿಗೆ ಶರಣು

    ತುಮಕೂರು: ಸೂರ್ಯ ಗ್ರಹಣದಂದೇ ದೇವಾಲಯದ ಅರ್ಚಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ತಿಪಟೂರು ತಾಲೂಕಿನ ಹೊನ್ನವಳ್ಳಿಯಲ್ಲಿ ನಡೆದಿದೆ.

    ತಾಲೂಕಿನ ಪ್ರಮುಖ ದೇವಾಲಯಗಳಲ್ಲಿ ಒಂದಾಗಿರೋ ಹೊನವಳ್ಳಿ ಉಡಸಲಮ್ಮ ದೇವಾಲಯದ ಪೂಜಾರಿ ಕೆಂಪರಾಜು (29) ಆತ್ಮಹತ್ಯೆಗೆ ಶರಣಾಗಿದ್ದಾರೆ. ತಮ್ಮ ಮನೆಯ ರೂಮಿನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಕಳೆದ ತಿಂಗಳು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿ ಇವರ ಬಳಿ ಭವಿಷ್ಯ ಕೇಳಿ ಹೋಗಿದ್ದರು. ಅರ್ಚಕರ ಸಾವಿನ ವಿಷಯ ತಿಳಿದು ಸುತ್ತಮುತ್ತಲಿನ ನೂರಾರು ಮಂದಿ ಗ್ರಾಮಸ್ಥರು ಮನೆ ಮುಂದೆ ಜಮಾಯಿಸಿದ್ದಾರೆ. ದೇವಿಯ ಅರ್ಚಕರೇ ಸೂರ್ಯ ಗ್ರಹಣದ ದಿನವೇ ಅನುಮಾನಾಸ್ಪದವಾಗಿ ಮೃತಪಟ್ಟಿರೋದು ಸ್ಥಳೀಯರ ಆತಂಕ ಹೆಚ್ಚಿಸಿದೆ.

    ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಮೃತರಿಗೆ ಪತ್ನಿ, ಹೆಣ್ಣು ಮಗುವಿದೆ. ಘಟನಾ ಸ್ಥಳಕ್ಕೆ ಹೊನವಳ್ಳಿ ಪೊಲೀಸ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

  • ಅಧಿಕಾರಕ್ಕಾಗಿ ಬಿಎಸ್‍ವೈಯಿಂದ ಮಹಾ ರುದ್ರಯಾಗ

    ಅಧಿಕಾರಕ್ಕಾಗಿ ಬಿಎಸ್‍ವೈಯಿಂದ ಮಹಾ ರುದ್ರಯಾಗ

    ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಮತ್ತೆ ಮುಖ್ಯಮಂತ್ರಿ ಸ್ಥಾನಕ್ಕೇರಲಿ ಎಂದು ಇಂದು ಗವಿಗಂಗಾಧರ ದೇಗುಲದಲ್ಲಿ ಮಹಾ ರುದ್ರಯಾಗ ಮಾಡಲಿದ್ದಾರೆ.

    ಗ್ರಹಣ ದೋಷ ಮುಕ್ತಿ ಹಾಗೂ ಅಧಿಕಾರ ಸಿದ್ಧಿಗಾಗಿ ಮೂರು ಗಂಟೆಗಳ ಕಾಲ ಯಡಿಯೂರಪ್ಪ ಅವರು ಮಹಾ ರುದ್ರಯಾಗ ಮಾಡಲಿದ್ದು, ಈಗಾಗಲೇ ದೇಗುಲದ ಹೊರಭಾಗದಲ್ಲಿ ಹೋಮಕ್ಕೆ ಸಿದ್ಧತೆ ಮಾಡಲಾಗಿದೆ.

    ಬಿಎಸ್‍ವೈ ನಡೆಸಲಿರುವ ಮಹಾರುದ್ರ ಯಾಗದ ಮಹತ್ವ ತಿಳಿಸಿರುವ ಗವಿ ಗಂಗಾಧರ ಸಹಾಯಕ ಅರ್ಚಕ ಶ್ರೀಕಂಠದೀಕ್ಷಿತ್, ಈ ಯಾಗದಿಂದ ಅಂದುಕೊಂಡಿರುವುದನ್ನು ಸಾಧಿಸಬಹುದು. ಅಧಿಕಾರ ಪ್ರಾಪ್ತಿಯ ಬಗ್ಗೆ ಅವರು ಅಂದುಕೊಂಡರೆ ಅದು ಕೂಡ ನೆರವೇರಲಿದೆ. ಲೋಕಕಲ್ಯಾಣದ ಕಾರಣದ ಜೊತೆಗೆ ಅವರ ಮನಸ್ಸಿನ ಇಷ್ಟಾರ್ಥ ನೆರವೇರಿಕೆಗಾಗಿ ಮಹಾ ರುದ್ರಯಾಗ ನಡೆಯಲಿದೆ ಎಂದು ಹೇಳಿದ್ದಾರೆ.

  • ರಕ್ತ ಚಂದ್ರಗ್ರಹಣ

    ರಕ್ತ ಚಂದ್ರಗ್ರಹಣ

    https://www.youtube.com/watch?v=tqwGF6hB1EU

  • ಸೋಮವಾರ ರಕ್ತ ಚಂದ್ರಗ್ರಹಣ: ವಿಶೇಷತೆ ಏನು? ಅವಧಿ ಎಷ್ಟು? ಭಾರತಕ್ಕೆ ಎಫೆಕ್ಟ್ ಆಗುತ್ತಾ?

    ಸೋಮವಾರ ರಕ್ತ ಚಂದ್ರಗ್ರಹಣ: ವಿಶೇಷತೆ ಏನು? ಅವಧಿ ಎಷ್ಟು? ಭಾರತಕ್ಕೆ ಎಫೆಕ್ಟ್ ಆಗುತ್ತಾ?

    ಬೆಂಗಳೂರು: ಮೊನ್ನೆಯಷ್ಟೇ ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಿತ್ತು. ಈಗ ಚಂದ್ರಗ್ರಹಣ ಬಂದಿದೆ. ಅದು ಅಂತಿಂಥ ಚಂದ್ರಗ್ರಹಣವಲ್ಲ. ಸೂಪರ್ ಬ್ಲಡ್ ವೂಲ್ಫ್ ಮೂನ್. ಅಂದ್ರೆ ರಕ್ತಚಂದ್ರಗ್ರಹಣ. ಹೆಸರಲ್ಲೇ ಭಯಾನಕತೆ ಹೊಂದಿರುವ ರಕ್ತಚಂದ್ರಗ್ರಹಣದ ಸೋಮವಾರ ನಡೆಯಲಿದೆ.

    ಪ್ರಶ್ನೆಗಳ ಸಾಗರದಂತಿರುವ ಬ್ರಹ್ಮಾಂಡದಲ್ಲಿ ನಡೆಯೋ ಪ್ರತಿಯೊಂದು ಪ್ರಕ್ರಿಯೆಯೂ ಮನುಷ್ಯನಿಗೆ ಕುತೂಹಲ ಹುಟ್ಟಿಸುತ್ತದೆ. ಕಣ್ಣರಳಿಸಿ ನೋಡುವಂತೆ ಮಾಡುತ್ತದೆ. ಇದರ ಜೊತೆಗೆ ಸಣ್ಣ ಆತಂಕವನ್ನೂ ಭಯವನ್ನೂ ಹುಟ್ಟಿಸುತ್ತದೆ. ಕೆಲವೊಂದು ಪ್ರಕ್ರಿಯೆಗಳ ನೈಜ ಕಾರಣವನ್ನ ಮನುಷ್ಯ ಕಾಲಾಂತರದಲ್ಲಿ ಅರ್ಥಮಾಡಿಕೊಳ್ಳುತ್ತಾ ಬಂದಿದ್ದಾನೆ. ಆದರೆ ಇನ್ನು ಕೆಲವು ಆಕಾಶದಲ್ಲಿ ನಡೆಯುವ ವಿದ್ಯಮಾನಗಳ ಇವತ್ತಿಗೂ ಭಯ ಹುಟ್ಟಿಸುತ್ತದೆ.

    ಅಮಾವಾಸ್ಯೆ ಸೂರ್ಯ ಗ್ರಹಣ ಕಳೆದು ಹುಣ್ಣಿಮೆಗೆ ಈಗ ಚಂದ್ರ ಗ್ರಹಣ ಬಂದಿದೆ. ಇದು ಸಾಮಾನ್ಯವಾದ ಚಂದ್ರಗ್ರಹಣವಾದ್ರೆ ಯಾರೂ ಭಯಪಡುತ್ತಿರಲಿಲ್ಲ. ಆದ್ರೆ ಇದನ್ನ ವಿಜ್ಞಾನಿಗಳು ರಕ್ತಚಂದ್ರಗ್ರಹಣ ಅಂತಾನೆ ಕರೆದಿದ್ದಾರೆ. ಚಂದ್ರ ಗ್ರಹಣದ ಸಮಯದಲ್ಲಿ ಕಂಡು ಕೆಂಪು ಬಣ್ಣದಲ್ಲಿ ಗೋಚರವಾಗಲಿದ್ದಾನೆ. 2018ರಲ್ಲಿಯೂ ಇದೇ ಸಂದರ್ಭದಲ್ಲಿ ಭೂಮಿ ರಕ್ತ ಚಂದ್ರಗ್ರಹಣಕ್ಕೆ ಸಾಕ್ಷಿಯಾಗಿತ್ತು.

    ಗ್ರಹಣ ಅವಧಿ:
    ರಕ್ತ ಚಂದ್ರಗ್ರಹಣವು ಭಾರತೀಯ ದಿನಮಾನದ ಪ್ರಕಾರ ಜನವರಿ 21ನೇ ತಾರೀಕು ಸೋಮವಾರ ನಡೆಯಲಿದೆ. ಸ್ಥಳೀಯ ಕಾಲಮಾನದ ಪ್ರಕಾರ ಬೆಳಗ್ಗೆ 8 ಗಂಟೆ 6 ನಿಮಿಷಕ್ಕೆ ಆರಂಭವಾಗಲಿದೆ. ಮಧ್ಯಾಹ್ನ 1 ಗಂಟೆ 18 ನಿಮಿಷಕ್ಕೆ ರಕ್ತ ಚಂದ್ರಗ್ರಹಣವು ಸಮಾಪ್ತಿಯಾಗಲಿದೆ. ಬೆಳಗ್ಗೆ 10 ಗಂಟೆ 11 ನಿಮಿಷದಿಂದ 11 ಗಂಟೆ 13 ನಿಮಿಷದವರೆಗೆ ಅಂದ್ರೆ 62 ನಿಮಿಷಗಳ ಕಾಲ ಚಂದ್ರ ಸಂಪೂರ್ಣ ಗ್ರಹಣಕ್ಕೆ ಒಳಗಾಗಿ ರಕ್ತಾವತಾರದಲ್ಲಿ ಕಾಣಿಸಿಕೊಳ್ಳಲಿದ್ದಾನೆ. ಭಾರತದಲ್ಲಿ ಈ ಸಂದರ್ಭದಲ್ಲಿ ಹಗಲು ಇರೋದ್ರಿಂದ ಎಲ್ಲೂ ಕೂಡ ಸೂಪರ್ ಬ್ಲಡ್ ಮೂನ್ ಗೋಚರವಾಗುವುದಿಲ್ಲ.

    ಈ ಬಾರಿಯ ರಕ್ತಚಂದ್ರಗ್ರಹಣ ಭಾರತದಲ್ಲಿ ಗೋಚರವಾಗದೇ ಇದ್ದರೂ ಭಾರತಕ್ಕೆ ಎಫೆಕ್ಟ್ ಇಲ್ವಾ ಅಂತ ಕೇಳಿದ್ರೆ ಚಂದ್ರ ಇಡೀ ಭೂಮಿಗೆ ಒಬ್ಬನೆ ಎನ್ನುವ ಉತ್ತರವನ್ನ ಜ್ಯೋತಿಷಿಗಳು ನೀಡುತ್ತಾರೆ. ಗ್ರಹಣ ನಡೆಯೋದು ಚಂದ್ರನಿಗೆ. ಅದು ಭೂಮಿಯ ಯಾವ ಭಾಗದಲ್ಲಿ ಗೋಚರವಾದರೂ ಇಡೀ ಭೂಮಿಗೆ ಸಂಚಕಾರ ತರಬಹುದು ಎನ್ನಲಾಗುತ್ತದೆ.

    ಎಲ್ಲಿ ಗ್ರಹಣ ಗೋಚರ?
    ಭಾರತದ ಕಾಲಮಾನದ ಪ್ರಕಾರ ಸೋಮವಾರ ಗ್ರಹಣ ನಡೆಯುತ್ತದೆ. ಗ್ರಹಣ ಗೋಚರವಾಗುವ ಪ್ರದೇಶಗಳಲ್ಲಿ ಆಗಿನ್ನೂ ಭಾನುವಾರ ರಾತ್ರಿಯಾಗಿರುತ್ತದೆ. ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಗ್ರೀನ್‍ಲ್ಯಾಂಡ್, ಐಸ್‍ಲ್ಯಾಂಡ್, ಐರ್ಲೆಂಡ್, ಗ್ರೇಟ್ ಬ್ರಿಟನ್, ನಾರ್ವೆ, ಸ್ವೀಡನ್, ಪೋರ್ಚುಗಲ್ ಹಾಗೂ ಫ್ರಾನ್ಸ್ ಮತ್ತು ಸ್ಪೇನ್‍ನ ಕರಾವಳಿ ಭಾಗಗಳಲ್ಲಿ ರಕ್ತಚಂದ್ರಗ್ರಹಣ ಗೋಚರವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭೂಮಿ ಮೇಲಾಗ್ತಿದೆಯಾ 2019ರ ಗ್ರಹಣದ ಎಫೆಕ್ಟ್..!?

    ಭೂಮಿ ಮೇಲಾಗ್ತಿದೆಯಾ 2019ರ ಗ್ರಹಣದ ಎಫೆಕ್ಟ್..!?

    ಬೆಂಗಳೂರು: ವರ್ಷದ ಮೊದಲ ತಿಂಗಳಾದ ಜನವರಿಯಲ್ಲೇ ತಲಾ ಒಂದು ಸೂರ್ಯಗ್ರಹಣ ಮತ್ತು ಚಂದ್ರಗ್ರಹಣ ಜರುಗಲಿದೆ. ಜನವರಿ 6ರಂದು ಸೂರ್ಯಗ್ರಹಣ ಮತ್ತು 21ರಂದು ಚಂದ್ರಗ್ರಹಣ ಘಟಿಸಲಿವೆ. ಹಾಗಾಗಿ ನಭೋಮಂಡಲದ ಈ ವಿದ್ಯಮಾನ ಭೂಮಿಗೆ ಕಂಟಕಗಳನ್ನ ಹೊತ್ತು ಬರಲಿದೆಯಾ ಅನ್ನೋ ಅನುಮಾನ ಮೂಡೋದಕ್ಕೆ ಶುರುವಾಗಿದೆ. ಮುಂದಿನ ದಿನಗಳ ಆಸುಪಾಸಿನಲ್ಲಿ ಪ್ರಕೃತಿ ಯಾವ ರೀತಿ ಕೆರಳಲಿದೆಯೋ ಎಂಬ ಭೀತಿ ಕಾಡೋದಕ್ಕೆ ಶುರುವಾಗಿದೆ.

    ಹೊಸ ವರ್ಷದ ಗ್ರಹಣಗಳ ಬಗ್ಗೆ ಜೋತಿಷ್ಯ ಲೋಕ ಕೂಡಾ ಸಾಕಷ್ಟು ಕುತೂಹಲದಿಂದ ಇದ್ದು, 2019ರ ಭಯಾನಕ ಜಾತಕ ಬಿಚ್ಚಿಟ್ಟ ಆನಂದ ಗುರೂಜಿ ಈ ವಿದ್ಯಮಾನ ಅಪಾಯಕಾರಿ ಅಂತಾರೆ. ಭಾರತಕ್ಕೆ ಗ್ರಹಣ ಗೋಚರವಾಗುತ್ತೋ ಇಲ್ವೋ ಅನ್ನೋದಕ್ಕಿಂತ, ಗ್ರಹಣ ಸಮಯದಲ್ಲಿ ಭೂಮಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಇದೆಲ್ಲದರ ಮುನ್ಸೂಚನೆ ಎಂಬಂತೆಯೇ ಈಗಾಗಲೇ ವಿಶ್ವದಲ್ಲಿ ಕೆಲ ವಿನಾಶಕಾರಿ ಘಟನೆಗಳು ನಡೆಯುತ್ತಿವೆ ಅನ್ನೋದು ಅವರ ಅಭಿಪ್ರಾಯವಾಗಿದೆ.

    2019ರ ಹೊಸ್ತಿಲಲ್ಲೆ ಸೌರಮಂಡಲದಲ್ಲಿ ಕೌತುಕದ ವಿದ್ಯಮಾನ ಏರ್ಪಡುತ್ತಿದೆ. ಇದು ಸಾಮಾನ್ಯ ವಿದ್ಯಮಾನದಂತೆ ಕಂಡು ಬಂದರೂ ಕರಾಳತೆಯನ್ನ ಪ್ರದರ್ಶಿಸುವ ಸಾಧ್ಯತೆಗಳು ಹೆಚ್ಚಿವೆ. ಹೊಸ ವರ್ಷದ ಆರಂಭದಲ್ಲೇ ಪೂರ್ಣ ಚಂದ್ರ ಗ್ರಹಣ ಬಂದಿದೆ. ಈ ಪೂರ್ಣ ಪ್ರಮಾಣದ ರಕ್ತ ಚಂದ್ರ ಗ್ರಹಣ ಪೂರ್ಣ ಪ್ರಮಾಣದಲ್ಲೇ ಅಪಾಯಗಳ ಆತಂಕವನ್ನ ಹುಟ್ಟುಹಾಕೋ ಸೂಚನೆಗಳು ನೀಡಿದಂತಿದೆ. 2019ರಲ್ಲೂ ಸಾಲು ಸಾಲು ಗ್ರಹಣಗಳಿದ್ದು, ಈ ಗ್ರಹಣಗಳೇ ಗಂಡಾಂತರಗಳನ್ನ ಹೊತ್ತು ಬರಲಿವೆ ಎನ್ನಲಾಗುತ್ತಿದೆ.

    ಹೊಸ ವರ್ಷದಲ್ಲಿ 5 ಗ್ರಹಣಗಳಿದ್ದು, ಜನವರಿಯಲ್ಲೇ ಭೀಕರವಾದ ರಕ್ತ ಚಂದ್ರಗ್ರಹಣ ಎದುರಾಗಲಿದೆ. ಇದು ಜನರನ್ನ ಆತಂಕದ ಕೂಪಕ್ಕೆ ತಳ್ಳಿದೆ. ಈಗ ಭುಗಿಲೆದ್ದಿರುವ ಭೀಕರ ಭೂಕಂಪ, ಜಲಪ್ರಳಯಗಳಂತಹ ಪ್ರಾಕೃತಿಕ ವಿಕೋಪಗಳ ಮೇಲೆ ರಕ್ತ ಚಂದ್ರ ಗ್ರಹಣ ಪ್ರಭಾವ ಬೀರುವ ಎಲ್ಲಾ ಲಕ್ಷಣಗಳು ಇವೆ ಎಂಬ ಮಾತುಗಳು ಕೇಳಿ ಬರುತ್ತಿವೆ.

    ವರ್ಷದ ಆರಂಭದಲ್ಲಿ ಗ್ರಹಣ ಎಫೆಕ್ಟ್:
    ನಭೋಮಂಡಲದ ಪ್ರಕ್ರಿಯೆ ಭೂಮಿ ಮೇಲೆ ವ್ಯತಿರಿಕ್ತ ಪರಿಣಾಮವನ್ನ ಬೀರಲಿದೆ ಅನ್ನೋದನ್ನ ಸಾಕಷ್ಟು ಮಂದಿ ಹೇಳುತ್ತಾ ಬಂದಿದ್ದಾರೆ. ಈಗ ಭೂಮಿ ಮೇಲೆ ಆಗುತ್ತಿರುವ ಬೆಳವಣಿಗೆಗಳನ್ನ ನೋಡಿದ್ರೆ ನಿಜಕ್ಕೂ ಇವೆಲ್ಲಾ ವಿನಾಶಕಾರಿ ಬೆಳವಣಿಗೆಯಾ ಅಂತಾ ಅನ್ನಿಸದೇ ಇರೋದಿಲ್ಲ. ಮುಂದಾಗೋ ಗ್ರಹಣದ ಪ್ರಭಾವಕ್ಕೆ ಈಗಲೇ ಪ್ರಕೃತಿ ಕೆರಳಿ ನಿಂತಿದೆಯಾ ಅನ್ನೋ ಸಂಶಯನೂ ಕಾಡುತ್ತಿದೆ.

    ಇತ್ತೀಚಿನ ದಿನಗಳಲ್ಲಿ ಭೂಮಿ ಮೇಲೆ ಯಾವಾಗ ಏನಾಗುತ್ತೆ ಅನ್ನೋದನ್ನ ಕರಾರುವಕ್ಕಾಗಿ ಹೇಳೋಕಾಗ್ತಿಲ್ಲ. ಅಂತಹದರಲ್ಲಿ ಹೊಸ ವರ್ಷಕ್ಕೆ ಕಾಲಿಡುವ ಹೊಸ್ತಿಲಲ್ಲೇ ಪ್ರಕೃತಿ ಪದೇ ಪದೇ ಕೆರಳುತ್ತಿದೆ ಶಾಂತವಾಗಿದ್ದ ಕಡಲು ಏಕಾಏಕಿ ಕೆರಳಿ ಅಬ್ಬರಿಸೋದಕ್ಕೆ ಶುರವಾಗುತ್ತೆ. ಸಮುದ್ರ ದಡಕ್ಕೆ ದೈತ್ಯ ಅಲೆಗಳು ಬಂದು ಅಪ್ಪಳಿಸಿ ಸಿಕ್ಕಿದ್ದನ್ನೆಲ್ಲಾ ರಕ್ಕಸ ಅಲೆ ಎಳೆದೊಯ್ಯುತ್ತಿದೆ. ಸುಪ್ತವಾಗಿರೋ ಅಗ್ನಿಪರ್ವತಗಳು ಏಕಾಏಕಿ ಸ್ಫೋಟವಾಗ್ತಿವೆ. ನಿಂತ ನೆಲವೇ ಕುಸಿದು ಬೀಳುವಂತೆ ಭೂಮಿ ಕಂಪಿಸುತ್ತಿದೆ.


    ಗ್ರಹಣದ ಎಫೆಕ್ಟ್ ಗೆನೇ ವಿಶ್ವದೆಲ್ಲೆಡೆ ಭಯಾನಕವಾದಂತಹ, ವಿಚಿತ್ರವಾದ ಘಟನೆಗಳು ನಡೆಯುತ್ತಿವೆಯಂತೆ. ಪದೇ ಪದೇ ಇಂಡೋನೇಷ್ಯಾ ಮೇಲೆ ಸುನಾಮಿ ಉಗ್ರರೂಪ ತಾಳಿ ದಾಳಿ ಮಾಡುತ್ತಿದೆ. ಅಬ್ಬರಿಸಿದ ಸಮುದ್ರ ಸ್ವಲ್ಪವೂ ಗ್ಯಾಪ್ ಕೊಡದೇ ಪದೇ ಪದೇ ಕೆರಳುತ್ತಿದೆ. ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ರಕ್ಕಸ ಅಲೆಗಳ ರಣಭೀಕರ ದಾಳಿಗೆ ಇಡೀ ವಿಶ್ವವೇ ಬೆಚ್ಚಿಬಿದ್ದಿದೆ. ಹುಣ್ಣಿಮೆ, ಜ್ವಾಲಾಮುಖಿ ಸ್ಫೋಟದಿಂದ ಕೆರಳಿದ ಅಲೆಗಳು ಸುನಾಮಿ ರೂಪ ತಾಳಿ ಅವಾಂತರ ಸೃಷ್ಟಿ ಮಾಡಿದೆ. ಕೆಲ ದಿನಗಳ ಹಿಂದಷ್ಟೇ ದಕ್ಷಿಣ ಪಿಲಿಫೈನ್‍ನಲ್ಲಿರುವ ಮಿಂಡನೌ ದ್ವೀಪದಲ್ಲಿ ಭೂಕಂಪನ ಉಂಟಾಗಿದೆ. ಸುಮಾರು 7 ಮ್ಯಾಗ್ನಿಟ್ಯೂಡ್ ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಈ ಭೂಕಂಪನ ಉಂಟಾದ ಬೆನ್ನಲ್ಲೇ ಸಮುದ್ರದ ಅಲೆಗಳಲ್ಲಿ ಬದಲಾವಣೆ ಆಗಿ ಭಯಾನಕ ಅನುಭವ ನೀಡಿದೆ.

    ಹೊಸ ವರ್ಷದ ಮೊದಲ ತಿಂಗಳಲ್ಲಿ ಚಂದ್ರ ಗ್ರಹಣ ಸಂಭವಿಸುತ್ತಿದ್ದು ವರ್ಷಪೂರ ಅದ್ಯಾವ ಗ್ರಹಗತಿಗಳು ಈ ದೇಶವನ್ನ ಕಾಡಲಿದೆಯೋ ಅನ್ನೋದು ಮತ್ತೊಂದು ಆತಂಕ. ಅಲ್ಲದೇ ಜನವರಿ 21ರಂದು ಸೌರ ಮಂಡಲದಲ್ಲಿ ನಡೆಯೋ ಕೌತುಕ ಮುಂದಿನ ದಿನಗಳಲ್ಲಿ ಭಾರೀ ಗಂಡಾತರವನ್ನು ಸೃಷ್ಟಿಸಲಿದ್ಯಂತೆ. ವಿಜ್ಞಾನಿಗಳೇನೋ ಎಂದಿನಂತೆ ಇಂದೊಂದು ಕ್ರಿಯೆ ಭಯ ಪಡೋ ಅಗತ್ಯವೇ ಇಲ್ಲ ಅಂತ ಸುಮ್ಮನಾದ್ರೂ ಕೂಡಾ, ಸಂಖ್ಯಾಶಾಸ್ತ್ರಜ್ಞರು, ಜೋತಿಷ್ಯಿಗಳು ಮಾತ್ರ ವಿನಾಶ ಕಾಲ ಹತ್ತಿರವಾಯ್ತು ಅಂತಲೇ ಭವಿಷ್ಯ ನುಡಿಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಂಜುಡೇಶ್ವರ ದರ್ಶನ ಪಡೆದ ನಾದಬ್ರಹ್ಮ ಹಂಸಲೇಖ

    ನಂಜುಡೇಶ್ವರ ದರ್ಶನ ಪಡೆದ ನಾದಬ್ರಹ್ಮ ಹಂಸಲೇಖ

    ಚಾಮರಾಜನಗರ/ಮೈಸೂರು: ಸಂಗೀತ ನಿರ್ದೇಶಕ, ನಾದಬ್ರಹ್ಮ ಹಂಸಲೇಖ ಅವರು ಮೈಸೂರು ಜಿಲ್ಲೆಯ ನಂಜನಗೂಡಿನ ನಂಜುಡೇಶ್ವರನ ದೇವಾಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡಿದ್ದಾರೆ.

    ಶುಕ್ರವಾರ ಕೇತುಗ್ರಸ್ಥ ಚಂದ್ರ ಗ್ರಹಣದ ಹಿನ್ನೆಲ್ಲೆಯಲ್ಲಿ ಜಿಲ್ಲಾದ್ಯಂತ ದೇವಾಲಯಗಳಲ್ಲಿ ವಿಶೇಷ ಪೂಜೆ-ಹವನ ನಡೆಯುತ್ತಿತ್ತು. ಅದೇ ರೀತಿ ನಗರದ ನಂಜುಡೇಶ್ವರ ದೇವರಿಗೆ ವಿಶೇಷ ಪೂಜೆ ನಡೆಯುತ್ತಿತ್ತು. ಈ ವೇಳೆ ಸಂಗೀತ ನಿರ್ದೇಶಕ ಹಂಸಲೇಖ ಅವರು ದೇವಾಲಯಕ್ಕೆ ಭೇಟಿ ನೀಡಿ ನಂಜುಡೇಶ್ವರನಿಗೆ ಅರ್ಚನೆ ಮಾಡಿಸಿ ಪೂಜೆ ಸಲ್ಲಿಸಿದ್ದಾರೆ.

    ಶುಕ್ರವಾರ ಪೂರ್ಣಿಮೆ ಹಾಗೂ ಚಂದ್ರ ಗ್ರಹಣ ಹಿನ್ನೆಲೆಯಲ್ಲಿ ನಂಜಗೂಡಿನಲ್ಲಿ ನಂಜುಡೇಶ್ವರನ ರಥೋತ್ಸವ ನಡೆದಿದ್ದು, ಉತ್ಸವ ಮೂರ್ತಿಯನ್ನು ರಥದ ಮೇಲಿರಿಸಿ ರಥೋತ್ಸವ ಮಾಡಿದ್ದಾರೆ. ಭಕ್ತರಿಗೆ ಹಾಗೂ ರಾಜ್ಯದ ಜನತೆ ಒಳಿತಾಗುವಂತೆ ನಂಜುಡೇಶ್ವರನ ರಥೋತ್ಸವ ನರೆವೇರಿದೆ. ಬಳಿಕ ಗ್ರಹಣದ ಹಿನ್ನೆಲೆಯಲ್ಲಿ ರಥೋತ್ಸವದ ನಂತರ ಅರ್ಚಕರು ದೇವಸ್ಥಾನದ ಬಾಗಿಲು ಹಾಕಿದ್ದಾರೆ.

    ಎಂದಿನಂತೆ ಶುಕ್ರವಾರ ರಾತ್ರಿ 8.30ಕ್ಕೆ ದೇವಸ್ಥಾನದ ಬಾಗಿಲು ಬಂದ್ ಆಗಿದ್ದು, ಎಂದಿನಂತೆ ಇಂದು ಬೆಳಗ್ಗೆ 6.00 ಗಂಟೆಗೆ ಅರ್ಚಕರು ದೇವಸ್ಥಾನದ ಬಾಗಿಲು ತೆರೆದಿದ್ದಾರೆ. ದೇವಾಲಯದ ಬಾಗಿಲು ತೆರದ ನಂತರ ಕಪಿಲ ನದಿ ನೀರಿನಿಂದ ದೇವಸ್ಥಾನದ ಶುದ್ಧಿ ಕಾರ್ಯ ಮಾಡಿದ್ದಾರೆ. ಬಳಿಕ ನಂಜುಡೇಶ್ವರನಿಗೆ ವಿವಿಧ ಅಭಿಷೇಕಗಳ ನಂತರ ಮಹಾಮಂಗಳಾರತಿ ನಡೆಯಲಿದೆ.

  • ಗ್ರಹಣ ಎಫೆಕ್ಟ್ – ಗರಿಕೆ ತಿಂದು ದೋಷ ನಿವಾರಣೆ ಮಾಡ್ಕೊಂಡ ಶ್ವಾನ!

    ಗ್ರಹಣ ಎಫೆಕ್ಟ್ – ಗರಿಕೆ ತಿಂದು ದೋಷ ನಿವಾರಣೆ ಮಾಡ್ಕೊಂಡ ಶ್ವಾನ!

    ಗದಗ: ದೇಶಾದ್ಯಂತ ಗ್ರಹಣದ ಸುದ್ದಿಯೇ ಇರುವಾಗ ಜಿಲ್ಲೆಯ ಮದಗಾನೂರ ಗ್ರಾಮದ ನಾಯಿಯೊಂದು ಗ್ರಹಣ ಆಚರಣೆ ಮಾಡಿ ಕುತೂಹಲ ಮೂಡಿಸಿದೆ. ಸದ್ಯ ನಾಯಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಮನೆಯ ಅಂಗಳದಲ್ಲಿ ನಾಯಿಯ ಮಾಲೀಕರು ಸೇರಿದಂತೆ ಗ್ರಾಮದ ಕೆಲವರು ಗ್ರಹಣದ ಬಗ್ಗೆ ಮಾತನಾಡುತ್ತಾ ಕೂತಿದ್ದರು. ನೆರೆದವರು ಗ್ರಹಣದಿಂದಾಗುವ ಲಾಭ, ನಷ್ಟ, ಪರಿಹಾರಗಳ ಬಗ್ಗೆ ಚರ್ಚೆ ಮಾಡುತ್ತಿದ್ದರು. ಈ ವೇಳೆ ಗ್ರಹಣ ಕಾಲದಲ್ಲಿ ಮನೆಯೊಳಗಿನ ನೀರಿಗೆ ಗರಿಕೆ ಹಾಕಿದರೆ ಅದರಿಂದ ಯಾವುದೇ ರೀತಿಯ ದೋಷ ಬರುವುದಿಲ್ಲ ಎಂಬ ಮಾತಿನ ಮೇಲೆ ಚರ್ಚೆ ಏರ್ಪಟ್ಟಿತ್ತು. ಆಗ ಓರ್ವ ತಮ್ಮ ಮನೆಗೆ ಗರಿಕೆ ತಗೆದುಕೊಂಡು ಹೋಗುತ್ತಿದ್ದನು.

    ವ್ಯಕ್ತಿ ಗರಿಕೆ ತೆಗೆದುಕೊಂಡು ಹೋಗುವಾಗ ಕೈ ಜಾರಿ ಗರಿಕೆ ಎಸಳುಗಳು ಕೆಳಗೆ ಬಿದ್ದಿವೆ. ಕೂಡಲೇ ನಾಯಿಯೊಂದು ಓಡಿ ಬಂದು ಗರಿಕೆಯ ಎಳೆಯನ್ನು ತಿನ್ನುವ ಮೂಲಕ ಅಲ್ಲಿದ್ದವರ ಗಮನ ಸೆಳೆದಿದೆ. ಕೂಡಲೇ ಅಲ್ಲಿನ ಯುವಕರು ಗರಿಕೆ ತಿಂದ ಆ ನಾಯಿಯ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿ ವೈರಲ್ ಮಾಡಿದ್ದಾರೆ.

    ಮನುಷ್ಯರೆಲ್ಲರೂ ತಮ್ಮ ಮನೆಯೊಳಗಿನ ನೀರಿನ ಪಾತ್ರೆ ಸೇರಿದಂತೆ ಇತರೆ ವಸ್ತುಗಳಲ್ಲಿ ಗರಿಕೆ ಹಾಕಿದರೆ ದೋಷ ಹೋಗುತ್ತದೆ ಅನ್ನೋ ನಂಬಿಕೆಯಲ್ಲಿದ್ದರು. ಆದರೆ ಈ ನಾಯಿ ತನ್ನ ಹೊಟ್ಟೆಯೊಳಗೆನೇ ಗರಿಕೆ ಹಾಕಿಕೊಂಡಿದ್ದು, ನಾಯಿ ಮನುಷ್ಯ ಜೀವನಕ್ಕೆ ಹತ್ತಿರವಿದೆಯಾ ಎಂದು ಗ್ರಾಮಸ್ಥರು ಮಾತನಾಡಿಕೊಂಡಿದ್ದಾರೆ.

  • ಗ್ರಹಣ ದಿನದ ಪೂಜೆ ಮಾಡಿಸಲು ಹೋದವರ ಮನೆಯಲ್ಲಿ ಕಳ್ಳತನ!

    ಗ್ರಹಣ ದಿನದ ಪೂಜೆ ಮಾಡಿಸಲು ಹೋದವರ ಮನೆಯಲ್ಲಿ ಕಳ್ಳತನ!

    ಶಿವಮೊಗ್ಗ: ಗ್ರಹಣ ದಿನದಂದು ಪೂಜೆ ಮಾಡಿಸಿದರೆ ಶುಭವಾಗಲಿದೆ ಎಂದು ದೇವಾಲಯಕ್ಕೆ ಹೋಗಿ ಬರುವಷ್ಟರಲ್ಲಿಯೇ ನಗರದ ಎರಡು ಮನೆಗಳಲ್ಲಿ ಕಳ್ಳತನ ನಡೆದಿದೆ.

    ನಗರದ ಎಂಆರ್‌ಎಸ್‌ ಸಮೀಪದ ಮೆಸ್ಕಾಂ ಕ್ವಾಟ್ರಸ್‍ನ ಮೆಸ್ಕಾಂ ಎಂಜಿನಿಯರ್ ಶಿವಸ್ವಾಮಿ ಹಾಗೂ ಜೆಇ ಮಂಜು ಅವರ ಮನೆಗಳಲ್ಲಿ ಹಾಡಹಗಲೇ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ. ಕಳ್ಳತನ ಮಾಡಿದ್ದಷ್ಟೇ ಅಲ್ಲದೆ ಶಿವಸ್ವಾಮಿ ಅವರ ಮನೆಯಲ್ಲಿದ್ದ ಬೆಡ್, ಸೋಫಾ ಬೀರುಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.

    ಗ್ರಹಣ ನಿಮಿತ್ತ ಇಂದು ಬೆಳಗ್ಗೆ 11 ಗಂಟೆಗೆ ನಗರದಲ್ಲಿರುವ ದೇವಸ್ಥಾನಗಳಿಗೆ ಶಿವಸ್ವಾಮಿ ಹಾಗೂ ಮಂಜು ಕುಟುಂಬ ಒಟ್ಟಿಗೆ ಪೂಜೆ ಮಾಡಿಸಲು ಕಾರಿನಲ್ಲಿ ಹೋಗಿದ್ದರು. ಮನೆಯಲ್ಲಿ ಯಾರು ಇಲ್ಲದಿರುವುದು ಗೊತ್ತಾಗುತ್ತಿದ್ದಂತೆ ಕಳ್ಳರು ಮನೆಯ ಹಿಂದಿನ ಬಾಗಿಲು ಮುರಿದು ಒಳ ಬಂದಿದ್ದರು. ಮನೆಯಲ್ಲಿ ಚಿನ್ನಾಭರಣ ಹಾಗೂ ನಗದು ಹಣವನ್ನು ತೆಗೆದುಕೊಂಡು ಕಾಲುಕಿತ್ತಿದ್ದಾರೆ.

    ಪೂಜೆ ಮುಗಿಸಿ ಮನೆಗೆ ಬರುತ್ತಿದ್ದಂತೆ ಪ್ರಕರಣ ಬೆಳಕಿಗೆ ಬಂದಿದ್ದು, ಶಿವಸ್ವಾಮಿ ಅವರ ಮನೆಯಲ್ಲಿದ್ದ 7 ಗ್ರಾಂ ಬಂಗಾರ, 250 ಗ್ರಾಂ ಬೆಳ್ಳಿ ಹಾಗೂ ಮಂಜು ಅವರ ಮನೆಯಲ್ಲಿದ್ದ 58 ಗ್ರಾಂ ಚಿನ್ನ, 300 ಗ್ರಾಂ ಬೆಳ್ಳಿ, 35 ಸಾವಿರ ನಗದನ್ನು ಕಳುವಾಗಿದೆ. ಈ ಕುರಿತು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.