Tag: earthquake

  • ಭೂಕಂಪಕ್ಕೂ ಜಗ್ಗದಂತೆ ನಿರ್ಮಾಣವಾಗಲಿದೆ  ರಾಮ ಮಂದಿರ

    ಭೂಕಂಪಕ್ಕೂ ಜಗ್ಗದಂತೆ ನಿರ್ಮಾಣವಾಗಲಿದೆ ರಾಮ ಮಂದಿರ

    ಅಯೋಧ್ಯೆ: ಭೂಕಂಪ ಸಂಭವಿಸಿದರೂ ದೇವಾಲಯಕ್ಕೆ ಯಾವುದೇ ಹಾನಿ ಆಗದೇ ಇರುವ ಅತ್ಯುನ್ನತ ಮತ್ತು ಸಾಂಪ್ರದಾಯಿಕ ತಂತ್ರಜ್ಞಾನವನ್ನು ಬಳಸಿ ರಾಮ ಮಂದಿರವನ್ನು ನಿರ್ಮಿಸಲಾಗುತ್ತದೆ.

    ಯಾವುದೇ ದೊಡ್ಡ ಕಟ್ಟಡವನ್ನು ನಿರ್ಮಿಸಿದಾಗ ಆ ಪ್ರದೇಶದಲ್ಲಿ ಎಷ್ಟು ಪ್ರಮಾಣದ ಭೂಕಂಪ ಸಂಭವಿಸಬಹುದು? ಎಷ್ಟು ತೀವ್ರತೆಯ ಭೂಕಂಪ ಸಂಭವಿಸಿದರೆ ಯಾವ ರೀತಿ ಹಾನಿಯಾಗಬಹುದು ಎಂಬುದನ್ನು ಲೆಕ್ಕಾಚಾರ ಹಾಕಿ ನಿರ್ಮಾಣ ಮಾಡಲಾಗುತ್ತದೆ. ಈ ಲೆಕ್ಕಾಚಾರವನ್ನು ರಾಮಮಂದಿರ ನಿರ್ಮಾಣಕ್ಕೂ ಮಾಡಲಾಗಿದೆ.

    ರಿಕ್ಟರ್ ಮಾಪಕದಲ್ಲಿ 10ರಷ್ಟು ತೀವ್ರತೆ ದಾಖಲಾದರೂ ದೇವಾಲಯಕ್ಕೆ ಹಾನಿಯಾಗದಂತೆ ನಿರ್ಮಾಣ ಮಾಡಲಾಗುತ್ತದೆ. ಮಂದಿರ ನಿರ್ಮಾಣ ಸ್ಥಳದಲ್ಲಿ 200 ಅಡಿ ಅಗೆದು ಭೂಸಾರ ಪರೀಕ್ಷೆ ಮಾಡಲಾಗಿದೆ. ಸಾವಿರ ವರ್ಷವಾದರೂ ನಾಶವಾಗದ ರೀತಿಯಲ್ಲಿ ಮಂದಿರ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಇದನ್ನೂ ಓದಿ: ನಾಗರ ಶೈಲಿಯಲ್ಲಿ ರಾಮಮಂದಿರ- ಮೂರು ಅಂತಸ್ತಿನಲ್ಲಿ ಐದು ಗೋಪುರ ನಿರ್ಮಾಣ

    ಆಗಾಗ ಭೂಕಂಪ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಜಪಾನ್‌ ದೇಶದಲ್ಲಿ ದೊಡ್ಡ ಕಟ್ಟಡವನ್ನು ನಿರ್ಮಾಣ ಮಾಡುವಾಗ ಇವುಗಳನ್ನು ಜಾಸ್ತಿ ಲೆಕ್ಕಾಚಾರ ಹಾಕಲಾಗುತ್ತದೆ.

  • ಗುಜರಾತಿನ ರಾಜಕೋಟ್ ಬಳಿ ಭೂಕಂಪ

    ಗುಜರಾತಿನ ರಾಜಕೋಟ್ ಬಳಿ ಭೂಕಂಪ

    – ರಿಕ್ಟರ್ ಮಾಪಕದಲ್ಲಿ 5.8ರಷ್ಟು ತೀವ್ರತೆ

    ಗಾಂಧಿನಗರ: ಗುಜರಾತಿನ ರಾಜಕೋಟ್ ಬಳಿ ಭೂಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ 5.8ರಷ್ಟು ತೀವ್ರತೆ ದಾಖಲಾಗಿದೆ.

    ರಾಜಕೋಟ್ ನಿಂದ 122 ಕಿ.ಮೀ ದೂರದ ಉತ್ತರ, ವಾಯುವ್ಯ ಭಾಗದಲ್ಲಿ ಭೂಮಿ ಕಂಪಿಸಿದೆ. ಇಂದು ರಾತ್ರಿ 8.13 ನಿಮಿಷಕ್ಕೆ ಭೂಮಿ ಕಂಪಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರದ ಕೇಂದ್ರ ಹೇಳಿದೆ.

    ಕಛ್, ಸೌರಾಷ್ಟ್ರ ಮತ್ತು ಅಹಮದಾಬಾದ್ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿರುವ ಅನುಭವ ಸ್ಥಳೀಯರಿಗೆ ಆಗಿದೆ. ಭೂಕಂಪನದ ಬಳಿಕ ಯಾವುದೇ ಪ್ರಾಣಹಾನಿ ಆಗಿಲ್ಲ ಎಂದು ವರದಿಯಾಗಿದೆ. ಭೂ ಕಂಪನಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

  • ದೆಹಲಿಯಲ್ಲಿ ಮತ್ತೆ ಭೂಕಂಪ- ರಿಕ್ಟರ್ ಮಾಪಕದಲ್ಲಿ 2.1 ತೀವ್ರತೆ

    ದೆಹಲಿಯಲ್ಲಿ ಮತ್ತೆ ಭೂಕಂಪ- ರಿಕ್ಟರ್ ಮಾಪಕದಲ್ಲಿ 2.1 ತೀವ್ರತೆ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮತ್ತೊಂದು ಭೂಕಂಪನಕ್ಕೆ ಸಾಕ್ಷಿಯಾಗಿದೆ. ಸೋಮವಾರ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ದೆಹಲಿಯಲ್ಲಿ ಲಘು ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 2.1 ತೀವ್ರತೆ ಹೊಂದಿತ್ತು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಧೃಡಪಡಿಸಿದೆ.

    ದೆಹಲಿ-ಗುರುಗ್ರಾಮ ಗಡಿ ಭೂಕಂಪನದ ಕೇಂದ್ರ ಬಿಂದುವಿದ್ದು, ಭೂಮಿಯ 18 ಕಿ.ಮೀ ಆಳದಲ್ಲಿ ಭೂಮಿ ಕಂಪಿಸಿದೆ ಎಂದು ತಜ್ಞರು ತಿಳಿಸಿದ್ದಾರೆ. ದೆಹಲಿ-ಎನ್‍ಸಿಆರ್ ಪ್ರದೇಶವು ಕಳೆದ 2 ತಿಂಗಳುಗಳಲ್ಲಿ 10ಕ್ಕೂ ಹೆಚ್ಚು ಭೂಕಂಪಗಳಿಗೆ ಸಾಕ್ಷಿಯಾಗಿದೆ.

    ಬುಧವಾರ ರಾತ್ರಿ ನೋಯ್ಡಾ ಬಳಿ ಮಧ್ಯಮ ತೀವ್ರತೆಯ 3.0 ಭೂಕಂಪ ಸಂಭವಿಸಿತ್ತು. ದೆಹಲಿಯಲ್ಲಿನ ಭೂಕಂಪಗಳ ಸರಣಿಯು ಭವಿಷ್ಯದಲ್ಲಿ ದೊಡ್ಡ ಆಘಾತವನ್ನು ಸೃಷ್ಟಿಸುವ ಕಳವಳವನ್ನು ಹುಟ್ಟುಹಾಕಿದೆ. ಭೂಕಂಪಗಳನ್ನು ತಡೆಯಲು ಸಾಧ್ಯವಿಲ್ಲವಾದರೂ, ಭೂಕಂಪನ ಚಟುವಟಿಕೆಯು ಸಾಮಾನ್ಯ ವಿದ್ಯಮಾನವಾಗಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

  • 24 ಗಂಟೆಯಲ್ಲಿ ಎರಡು ಬಾರಿ ದೆಹಲಿಯಲ್ಲಿ ಲಘು ಭೂಕಂಪನ

    24 ಗಂಟೆಯಲ್ಲಿ ಎರಡು ಬಾರಿ ದೆಹಲಿಯಲ್ಲಿ ಲಘು ಭೂಕಂಪನ

    ನವದೆಹಲಿ: ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೋಮವಾರ ಮಧ್ಯಾಹ್ನ ಲಘು ಭೂಕಂಪನ ಅನುಭವಕ್ಕೆ ಬಂದಿದ್ದು, 24 ಗಂಟೆ ಅವಧಿಯಲ್ಲಿ ಎರಡು ಬಾರಿ ಭೂಮಿ ಕಂಪಿಸಿದೆ.

    ಮಧ್ಯಾಹ್ನ ಸಂಭವಿಸಿದ ಭೂಕಂಪನ ರಿಕ್ಟರ್ ಮಾಪಕದಲ್ಲಿ 2.7 ತೀವ್ರತೆ ದಾಖಲಾಗಿದೆ. ಮಧ್ಯಾಹ್ನ 1.26ಕ್ಕೆ 5 ಕಿಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಹೇಳಿದೆ. ಭೂಕಂಪದಿಂದ ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.

    ಇದಕ್ಕೂ ಮುನ್ನ ಭಾನುವಾರ ರಾತ್ರಿ 3.5 ತೀವ್ರತೆಯ ಭೂಕಂಪ ಸಂಭವಿಸಿದ್ದು, ಉತ್ತರ ದೆಹಲಿಯ ವಜೀರಾಬಾದ್ ಭೂಕಂಪದ ಕೇಂದ್ರ ಬಿಂದುವಾಗಿತ್ತು. ದೆಹಲಿ ಬಹುತೇಕ ಭಾಗದಲ್ಲಿ ಭಾರೀ ಸದ್ದಿನೊಂದಿಗೆ ನಡುಕದ ಅನುಭವವಾಗಿತ್ತು.

  • ಕೊರೊನಾ ಭೀತಿ ಮಧ್ಯೆ ದೆಹಲಿಯಲ್ಲಿ ಲಘು ಭೂಕಂಪ

    ಕೊರೊನಾ ಭೀತಿ ಮಧ್ಯೆ ದೆಹಲಿಯಲ್ಲಿ ಲಘು ಭೂಕಂಪ

    ನವದೆಹಲಿ: ದೆಹಲಿಯಲ್ಲಿ ಇಂದು ಸಂಜೆ ಸೌಮ್ಯ ತೀವ್ರತೆಯ ಭೂಕಂಪ ಸಂಭವಿಸಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

    ದೆಹಲಿ-ಉತ್ತರ ಪ್ರದೇಶ ಗಡಿಯನ್ನು ಭೂಕಂಪದ ಕೇಂದ್ರಬಿಂದು ಎಂದು ಗುರುತಿಸಲಾಗಿದ್ದು, ರಿಕ್ಟರ್ ಮಾಪಕದಲ್ಲಿ 3.5 ರಷ್ಟು ತೀವ್ರತೆ  ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರವು ತಿಳಿಸಿದೆ.

    ದೆಹಲಿ ಮತ್ತು ನೆರೆಯ ನಗರಗಳಾದ ನೋಯ್ಡಾ, ಗಾಜಿಯಾಬಾದ್‍ನಲ್ಲಿ ಭೂಕಂಪನ ಉಂಟಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿ ಹಾನಿ ಸಂಭವಿಸಿಲ್ಲ. ಈ ಬಗ್ಗೆ ಲಾಕ್‍ಡೌನ್‍ನಿಂದ ಮನೆಯಲ್ಲೇ ಇರುವ ದೆಹಲಿಯ ಜನರು ಸಾಮಾಜಿಕ ಜಾಲತಾಣದಲ್ಲಿ ಭೂಕಂಪದ ಅನುಭವ ಹಂಚಿಕೊಂಡಿದ್ದಾರೆ.

    ಭಾನುವಾರ ಸಂಜೆ 5.45ಕ್ಕೆ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ದೇಶದಲ್ಲಿ ಕೊರೊನಾ ವೈರಸ್ ಭೀತಿಯ ನಡುವೆ ಭೂಕಂಪ ಸಂಭವಿಸಿದ್ದು, ದೆಹಲಿ ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.

  • ಕದಂಬ ನೌಕಾನೆಲೆಯಲ್ಲಿ ಸ್ಫೋಟ – ಕಂಪಿಸುತ್ತಿದೆ ಕಾರವಾರ

    ಕದಂಬ ನೌಕಾನೆಲೆಯಲ್ಲಿ ಸ್ಫೋಟ – ಕಂಪಿಸುತ್ತಿದೆ ಕಾರವಾರ

    ಕಾರವಾರ: ನಗರದ ಹಲವು ಭಾಗಗಳಲ್ಲಿ ಭೂಕಂಪನದ ಅನುಭವ, ದೊಡ್ಡ ದೊಡ್ಡ ಸದ್ದುಗಳು. ಭೂಕಂಪವೇ ಆಯಿತೇನೋ ಎನ್ನುವಂತೆ ಮನೆಗಳು ಕಂಪಿಸುತ್ತಿವೆ. ಆರೇ ಏನಾಯಿತು ಎಂದು ಜನರು ಮನೆಯಿಂದ ಹೊರಗೆ ಬಂದು ನೋಡುವಷ್ಟರಲ್ಲಿ ಎಲ್ಲವೂ ಶಾಂತವಾಗಿದೆ.

    ಕಳೆದ ನಾಲ್ಕು ತಿಂಗಳಲ್ಲಿ ಮೂರು ಬಾರಿ ಕಾರವಾರ ನಗರದ ಜನರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಕೆಲವರು ಪೊಲೀಸರಿಗೆ ಸಹ ಕರೆ ಮಾಡಿ ಭೂಕಂಪವಾಗಿದೆ ಎಂದು ಹೇಳಿದ್ದಾರೆ. ಆದರೆ ಅದು ಯಾವ ಸದ್ದು? ಭೂಕಂಪನವೇ ಅಥವಾ ಇನ್ನೇನೋ ಆಗಿರಬಹುದೇ ಎಂಬ ಅನುಮಾನಗಳು ಜನರಲ್ಲಿ ಭಯ ಹುಟ್ಟಿಸಿತ್ತು.

    ಭೂಮಿ ಕಂಪಿಸಿದ್ದು ಹೇಗೆ?
    ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕದಂಬ ನೌಕಾನೆಲೆಯಲ್ಲಿ ಎರಡನೇ ಹಂತದ ಕಾಮಗಾರಿ ನಡೆಯುತ್ತಿದೆ. ನೌಕಾದಳದ ಹಡಗು ನಿಲ್ದಾಣ ಹಾಗೂ ಸಬ್‍ಮೆರಿನ್ ಗಳ ನಿಲ್ದಾಣಕ್ಕಾಗಿ ಅರಗಾ ಬಳಿ ಸಮುದ್ರ ತೀರದಲ್ಲಿ ದೊಡ್ಡ ಸುರಂಗಗಳನ್ನು ಕೊರೆಯಲಾಗುತ್ತಿದೆ. ಸುರಂಗಗಳಲ್ಲಿ ದೊಡ್ಡ ದೊಡ್ಡ ಬಂಡೆಗಳು ಇರುವುದರಿಂದಾಗಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆ ಕಂಪನಿ ಕಲ್ಲನ್ನು ತೆರವುಗೊಳಿಸಲು ದೊಡ್ಡ ಮಟ್ಟದ ಸ್ಫೋಟವನ್ನು ಮಾಡುತ್ತಿದೆ.

    ಈ ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಅಂಕೋಲ ಭಾಗದಿಂದ ಕಾರವಾರ ಹಾಗೂ ಗೋವಾ ಗಡಿಯಲ್ಲೂ ಭೂಮಿ ಕಂಪಿಸಿದೆ. ಇಂದು ಕೂಡ ಸ್ಫೋಟ ನಡೆಸಿದ್ದು ಅರಗಾ ದಿಂದ ಕಾರವಾರದ ಬಳಿ ದಟ್ಟ ಮಣ್ಣು ಮಿಶ್ರಿತ ಹೊಗೆಯ ಆವರಿಸಿದ್ದು ಮತ್ತೊಮ್ಮೆ ಜನರಲ್ಲಿ ಭಯ ಹುಟ್ಟುವಂತೆ ಮಾಡಿದೆ. ಕಾರವಾರದ ಸುತ್ತಮುತ್ತ ಪ್ರಾಚೀನ ಕಾಲದ ಏಕ ಶಿಲೆಗಳಿದ್ದು ಇವು ರಸ್ತೆ ಅಗಲೀಕರಣ ಕಾಮಗಾರಿ ಸಂದರ್ಭದಲ್ಲಿ ಸ್ಫೋಟಿಸಿ ರಸ್ತೆ ಅಗಲೀಕರಣ ಮಾಡಲಾಗಿತ್ತು. ಆದರೆ ಈಗ ನೌಕಾದಳ ಕೂಡ ತನ್ನ ನೆಲೆಯನ್ನು ವಿಸ್ತರಿಸುವ ಕಾಮಗಾರಿ ಪ್ರಾರಂಭಿಸಿದೆ.

    ನೌಕನೆಲೆ ಸ್ಫೋಟ ನಡೆಸಲು ಅನುಮತಿ ಸಹ ಪಡೆದಿದ್ದು ಮುಂಜಾನೆ ವೇಳೆಯಲ್ಲಿ ಮಾತ್ರ ಸ್ಫೋಟಿಸಲು ಹಾಗೂ ಲಘು ಸಿಡಿತಲೆ ಮಾಡುವಂತೆ ಷರತ್ತುಬದ್ಧ ಮಂಜೂರು ನೀಡಲಾಗಿತ್ತು. ಆದರೆ ಗುತ್ತಿಗೆ ಕಂಪನಿ ಕಾಮಗಾರಿಗೆ ಚುರುಕು ನೀಡುವ ನೆಪದಲ್ಲಿ ಅತೀ ಹೆಚ್ಚು ಸಾಂದ್ರತೆಯುಳ್ಳ ಸಿಡಿತಲೆ ಬಳಸಿ ಸುರಂಗ ಮಾರ್ಗದಲ್ಲಿ ಸ್ಫೋಟ ನಡೆಸುತ್ತಿದೆ. ಇದರಿಂದಾಗಿ ಕಾರವಾರ, ಅಂಕೋಲ ಹಾಗೂ ಗೋವಾ ಗಡಿ ಭಾಗದಲ್ಲಿಯೂ ಕಂಪನದ ಅನುಭವ ಆಗುತಿದ್ದು ಜನರು ಭಯ ಪಡುವಂತೆ ಮಾಡಿದೆ.

    ಈ ಕುರಿತು ಜಿಲ್ಲಾಡಳಿತಕ್ಕೆ ದೂರು ನೀಡಲಾಗಿದೆ. ಆದರೆ ಇದ್ಯಾವುದಕ್ಕೂ ಜಿಲ್ಲಾಡಳಿತ ತಲೆ ಕೆಡಿಸಿಕೊಂಡಿಲ್ಲ. ಮತ್ತೆ ದೊಡ್ಡ ಸ್ಫೋಟವನ್ನು ಬಳಸಿ ಸುರಂಗ ನಿರ್ಮಾಣ ಮಾಡಿದರೆ ಕಾರವಾರ ನಗರದ ಹಲವು ಮನೆಗಳು ಬಿರುಕು ಬಿಡುವ ಸಾಧ್ಯತೆಗಳಿದ್ದು, ತಕ್ಷಣ ಕ್ರಮ ಕೈಗೊಳ್ಳಬೇಕೆಂಬುದು ಕಾರವಾರ ನಗರದ ಜನತೆ ಆಗ್ರಹಿಸಿದ್ದಾರೆ.

  • ಮದ್ದೂರಿನಲ್ಲಿ ಕೇಳಿ ಬಂತು ಭಾರೀ ಶಬ್ದ- ಭಯ ಭೀತರಾದ ಜನರು

    ಮದ್ದೂರಿನಲ್ಲಿ ಕೇಳಿ ಬಂತು ಭಾರೀ ಶಬ್ದ- ಭಯ ಭೀತರಾದ ಜನರು

    ಮಂಡ್ಯ: ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ಇಂದು ಮಧ್ಯಾಹ್ನದ ವೇಳೆಯಲ್ಲಿ ಜನರಿಗೆ ಲಘು ಭೂಮಿ ಕಂಪಿಸಿದ ಅನುಭವದ ಜೊತೆ ಭಾರೀ ಶಬ್ದವು ಕೇಳಿ ಬಂದಿದೆ. ಇದರಿಂದ ಮದ್ದೂರು ಪಟ್ಟಣದ ಜನರು ಗಾಬರಿಗೊಂಡಿದ್ದಾರೆ.

    ಮದ್ದೂರು ಪಟ್ಟಣದಲ್ಲಿ ಇಂದು ಮಧ್ಯಾಹ್ನ 2 ಗಂಟೆ 7 ನಿಮಿಷದ ವೇಳೆ 3 ಸೆಕೆಂಡ್‍ಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದೆ. ಸುಮಾರು 20 ಸೆಕೆಂಡ್‍ಗಳ ಕಾಲ ಭಾರೀ ಶಬ್ದ ಕೇಳಿ ಬಂದಿದೆ. ಭೂ ಕಂಪನದಿಂದ ಮನೆ ಹಾಗೂ ಅಂಗಡಿಗಳ ಟೇಬಲ್, ಕುರ್ಚಿ ಸೇರಿದಂತೆ ಇತರೆ ವಸ್ತುಗಳು ತನ್ನ ಸ್ಥಳದಿಂದ ಜರಗಿದೆ. ಜೊತೆಗೆ ಭಾರೀ ಶಬ್ದ ಕೇಳಿ ಬಂದಿದ್ದರಿಂದ ಜನರು ಭಯ ಭೀತರಾಗಿದ್ದಾರೆ.

    ಈ ಹಿಂದೆಯೂ ಸಹ ಮದ್ದೂರು ಪಣ್ಣದ ಹಲವೆಡೆ ಇದೇ ರೀತಿಯ ಅನುಭವವಾಗಿತ್ತು. ಇದೀಗ ಮತ್ತೆ ಅದೇ ರೀತಿ ಅನುಭವ ಗೋಚರವಾಗಿದೆ. ಮದ್ದೂರು ಪಟ್ಟಣದ ಸುತ್ತ ಮುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆ ನಡೆತುತ್ತಿರುವುದೇ ಭೂ ಕಂಪನಕ್ಕೆ ಕಾರಣ ಎಂದು ಜನರು ಹೇಳುತ್ತಿದ್ದಾರೆ.

  • ಭಾರೀ ಶಬ್ದ, ಭೂ ಕಂಪನದ ಅನುಭವ- ಗ್ರಾಮಸ್ಥರಲ್ಲಿ ಆತಂಕ

    ಭಾರೀ ಶಬ್ದ, ಭೂ ಕಂಪನದ ಅನುಭವ- ಗ್ರಾಮಸ್ಥರಲ್ಲಿ ಆತಂಕ

    ವಿಜಯಪುರ: ಭಾರೀ ಶಬ್ದ ಹಾಗೂ ಭೂಮಿ ಕಂಪಿಸಿದ ಅನುಭವ ವಿಜಯಪುರದಲ್ಲಿ ಆಗಿದೆ.

    ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಪಡಗಾನೂರು ಗ್ರಾಮದಲ್ಲಿ ಮೂರು ದಿನದಿಂದ ನಿತ್ಯ ರಾತ್ರಿ ಭಾರೀ ಸದ್ದು ಮತ್ತು ಭೂಮಿ ನಡುಗಿದ ಅನುಭವಾಗಿದೆ. ಇದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

    ಭಾರೀ ಶಬ್ದದಿಂದ ಗ್ರಾಮಸ್ಥರು ಮೂರು ದಿನಗಳ ಕಾಲ ರಾತ್ರಿ ವೇಳೆ ನಿದ್ದೆ ಮಾಡದೆ ಭಯದ ವಾತಾವರಣದಲ್ಲಿ ಕಾಲ ಕಳೆದಿದ್ದಾರೆ. ಮೊದಲ ದಿನ ಗ್ರಾಮದ ಸುತ್ತಲಿನ ಜಲ್ಲಿ ಕಲ್ಲಿನ ಕಾರ್ಖಾನೆ ಶಬ್ದ ಇರಬಹುದು ಎಂದು ಸುಮ್ಮನಾಗಿದ್ದಾರೆ. ಆದರೆ ಈ ಕುರಿತು ಜಲ್ಲಿ ಕಲ್ಲಿನ ಕಾರ್ಖಾನೆಯ ಮಾಲೀಕರನ್ನು ವಿಚಾರಿಸಿದರೆ ನಾವು ಯಾವುದೇ ಬ್ಲಾಸ್ಟ್ ಮಾಡಿಲ್ಲ ಎಂದು ಹೇಳಿದ್ದಾರೆ. ಭಾರೀ ಸದ್ದು ಹಾಗೂ ಕಂಪನದಿಂದ ಮನೆಯಲ್ಲಿದ್ದ ಪಾತ್ರೆಗಳು ಕೆಳಗೆ ಬಿದ್ದಿವೆ. ಅಲ್ಲದೆ ಕೆಲ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ.

    ಇದು ಭೂಕಂಪನವೋ ಅಥವಾ ಜಲ್ಲಿ ಕಲ್ಲಿನ ಬ್ಲಾಸ್ಟ್ ಸದ್ದೋ ಎಂಬುದು ಗ್ರಾಮಸ್ಥರಿಗೆ ತಿಳಿಯುತ್ತಿಲ್ಲ. ಹೀಗಾಗಿ ಅನಾಹುತ ಆಗುವ ಮುನ್ನ ಜಿಲ್ಲಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಈ ಕುರಿತು ತಿಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

  • ಕೊಯ್ನಾದಲ್ಲಿ ಭೂಕಂಪ – ಕೃಷ್ಣಾ ನದಿ ತೀರದಲ್ಲಿ ಆತಂಕ

    ಕೊಯ್ನಾದಲ್ಲಿ ಭೂಕಂಪ – ಕೃಷ್ಣಾ ನದಿ ತೀರದಲ್ಲಿ ಆತಂಕ

    ಚಿಕ್ಕೋಡಿ: ಕೊಯ್ನಾ ಜಲಾಶಯದ ಪರಿಸರದಲ್ಲಿ ಮತ್ತೆ ಭೂಕಂಪನ ದಾಖಲಾಗಿದೆ. ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಪಾಟಣ ತಾಲೂಕಿನ ಕೊಯ್ನಾ ಜಲಾಶಯದ ಪರಿಸರದಲ್ಲಿ ಭೂಕಂಪನ ಸಂಭವಿಸಿದೆ.

    ಇಂದು ಬೆಳಗ್ಗೆ 6:42 ಕ್ಕೆ ಭೂಮಿ ಕಂಪಿಸಿದ್ದು, 2.8 ರಷ್ಟು ರಿಕ್ಟರ್ ಮಾಪನದಲ್ಲಿ ಭೂಕಂಪನ ದಾಖಲಾಗಿದೆ. ಕೊಯ್ನಾ ಜಲಾಶಯದ 8 ಕಿ.ಮೀಗಳವರೆಗೆ ಭೂಕಂಪನದ ಅನುಭವವಾಗಿದೆ ಎಂದು ಕೊಯ್ನಾ ಜಲಾಶಯದ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.

    105 ಟಿಎಂಸಿ ನೀರು ಸಂಗ್ರಹಣೆಯ ಕೊಯ್ನಾ ಜಲಾಶಯದಲ್ಲಿ ಈಗ 65 ಟಿಎಂಸಿಕ್ಕೂ ಹೆಚ್ಚು ಸಂಗ್ರಹ ಇದೆ. ಕೊಯ್ನಾ ಜಲಾಶಯದದಿಂದ ಹೆಚ್ಚಿನ ನೀರು ಹರಿದು ಬಂದು ಕೃಷ್ಣಾ ನದಿ ಸೇರಿಕೊಳ್ಳುತ್ತದೆ. ಕೊಯ್ನಾ ಜಲಾಶಯದಿಂದ ಹೆಚ್ಚಿನ ನೀರು ಹರಿದು ಬಂದಾಗ ಕೃಷ್ಣಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ. ಹೀಗಾಗಿ ಕೊಯ್ನಾ ಜಲಾಶಯದ ಪರಿಸರದಲ್ಲಿ ಭೂಕಂಪನ ಹಿನ್ನೆಲೆಯಲ್ಲಿ ಕೊಯ್ನಾ ಹಾಗೂ ಕೃಷ್ಣಾ ನದಿ ತೀರದಲ್ಲಿ ಆತಂಕ ಎದುರಾಗಿದೆ.

    ಕೊಯ್ನಾ ಜಲಾಶಯಕ್ಕೆ ಯಾವುದೇ ಧಕ್ಕೆ ಆದರೂ ಅದರ ನೇರ ಎಫೆಕ್ಟ್ ಕರ್ನಾಟಕ ಹಾಗೂ ಮಹಾರಾಷ್ಟ್ರದ ಕೃಷ್ಣಾ ನದಿ ತೀರದ ಮೇಲೆ ಆಗಲಿದೆ. ಹೀಗಾಗಿ ಈ ವರ್ಷದಲ್ಲಿ ಎರಡು ಬಾರಿ ಈ ಪರಿಸರದಲ್ಲಿ ಭೂಕಂಪನ ಸಂಭವಿಸಿರುವ ಕಾರಣ ಮತ್ತೆ ಆತಂಕಕ್ಕೆ ಕಾರಣವಾಗಿದೆ. ಸದ್ಯ ಭೂಕಂಪನ ಸಂಭವಿಸಿದ್ದರೂ ಹೆಚ್ಚಿನ ನೀರನ್ನ ಜಲಾಶಯದಿಂದ ಹೊರ ಬಿಟ್ಟಿಲ್ಲ ಎಂದು ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.

  • ಪಶ್ವಿಮಘಟ್ಟದಲ್ಲಿ ಭೂ ಸ್ತರಭಂಗ-ಭೂಕಂಪನದ ಬಗ್ಗೆ ಭೂ ವಿಜ್ಞಾನಿ ಎಚ್ಚರಿಕೆ

    ಪಶ್ವಿಮಘಟ್ಟದಲ್ಲಿ ಭೂ ಸ್ತರಭಂಗ-ಭೂಕಂಪನದ ಬಗ್ಗೆ ಭೂ ವಿಜ್ಞಾನಿ ಎಚ್ಚರಿಕೆ

    ಉಡುಪಿ: ಜಿಲ್ಲೆಯ ಬೈಂದೂರಿನಲ್ಲಿ ಶುಕ್ರವಾರ ಮಧ್ಯಾಹ್ನ ಅನುಭವವಾದ ಭೂಕಂಪನ ವಿಚಾರಕ್ಕೆ ಸಂಬಂಧಿಸಿದಂತೆ ಮಣಿಪಾಲದ ಭೂ ವಿಜ್ಞಾನಿ ಉದಯ ಶಂಕರ್ ಭಟ್ ಪ್ರತಿಕ್ರಿಯೆ ನೀಡಿದ್ದಾರೆ. ಭೂಮಿ ಮೇಲೆ ಮನುಷ್ಯನ ದಾಳಿಯಿಂದಲೇ ಇಂತಹ ಘಟನೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

    ಗಣಿಗಾರಿಕೆ, ಬುಲ್ಡೋಜರ್‍ಗಳ ಬಳಕೆ, ಕಾಡು ನಾಶದಂತಹ ವಿಪರೀತ ಆಟಾಟೋಪಕ್ಕೆ ಕಡಿವಾಣ ಹಾಕದಿದ್ದರೆ ಮುಂದೆ ನಾವು ಅಂದುಕೊಳ್ಳುವ ಹಾಗೆ ಪರಿಸ್ಥಿತಿ ಇರುವುದಿಲ್ಲ ಎಂದು ಭೂ ವಿಜ್ಞಾನಿ ಉದಯ ಶಂಕರ್ ಭಟ್ ಎಚ್ಚರಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಜಿಲ್ಲೆಯ ಗೋಳಿಬೇರು, ಕ್ಯಾರ್ತೂರು ಸಾರಂಗಿ, ಗಂಗನಾಡು, ಅತ್ಯಾಡಿಯಲ್ಲಿ ಭೂಕಂಪನದ ಮಾಹಿತಿ ಸಿಕ್ಕಿದೆ. ಪಶ್ಚಿಮ ಘಟ್ಟದಲ್ಲಿ ಆದ ಭೂ ಸ್ತರಭಂಗ(ಭೂ ಕುಸಿತ) ಇದಕ್ಕೆ ಕಾರಣ. ಪಶ್ಚಿಮ ಘಟ್ಟದ ಉದ್ದಕ್ಕೂ ಈ ಹಿಂದೆಯೇ ಸ್ತರಭಂಗವಾಗಿದೆ. ಈ ಜಾಗದಲ್ಲೇ ಮತ್ತೆ ಭೂಕುಸಿತ ಆಗಿರಬಹುದು. ಇದರಿಂದಾಗಿ ಭೂ ಕಂಪನದ ಅನುಭವ ಆಗುತ್ತದೆ. ಜೋರಾದ ಶಬ್ಧ ಕೇಳಿಬರುತ್ತದೆ ಎಂದು ಹೇಳಿದ್ದಾರೆ.

    ಭೂಕಂಪನ ಅನ್ನೋದು ಸ್ವಾಭಾವಿಕ ಪ್ರಕ್ರಿಯೆ. ಆ ಭಾಗದಲ್ಲಿ ಜೆಸಿಬಿ ಬಳಕೆ- ಕಲ್ಲುಕೋರೆಯ ಸ್ಫೋಟದಿಂದ ಸ್ತರಭಂಗ ಆಗಿರಬಹುದು. ಪಶ್ಚಿಮಘಟ್ಟದ ಸರಣಿಯಲ್ಲಿ ಈ ಹಿಂದೆಯೇ ಭೂಮಿ ಬಿರುಕು ಬಿಟ್ಟಿತ್ತು. ಸದ್ಯ ಆಗಿರೋದು ಭೂಮಿಯ ಸ್ಟ್ರೆಸ್ ರಿಲೀಸ್ ಪ್ರೊಸೀಜರ್ ಅಷ್ಟೆ. ಮನುಷ್ಯನ ಚಟುವಟಿಕೆಗಳು ಹಿಡಿತದಲ್ಲಿ ಇರಬೇಕು, ಭೂಮಿಯ ಮೇಲೆ ಅಟ್ಟಹಾಸ ಕಮ್ಮಿ ಮಾಡಿದರೆ ಇಂತಹ ಬೆಳವಣಿಗೆಯನ್ನು ತಡೆಗಟ್ಟಬಹುದು ಎಂದು ಉದಯ ಶಂಕರ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv