Tag: Earrings

  • ಕಾಲ್ತುಳಿತಕ್ಕೆ ಬಲಿಯಾಗಿದ್ದ ಮಗಳ ಕಿವಿಯೋಲೆ ಕಳವು – ಬೌರಿಂಗ್ ಆಸ್ಪತ್ರೆಯ ವಿರುದ್ಧ ದೂರು

    ಕಾಲ್ತುಳಿತಕ್ಕೆ ಬಲಿಯಾಗಿದ್ದ ಮಗಳ ಕಿವಿಯೋಲೆ ಕಳವು – ಬೌರಿಂಗ್ ಆಸ್ಪತ್ರೆಯ ವಿರುದ್ಧ ದೂರು

    – ಡಿಕೆಶಿ ವಿರುದ್ಧ ಆಕ್ರೋಶ ಹೊರ ಹಾಕಿದ ದಿವ್ಯಾಂಶಿ ತಾಯಿ ಅಶ್ವಿನಿ

    ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ಪ್ರಕರಣದಲ್ಲಿ (Chinnaswamy Stadium Stampede) ಮೃತಪಟ್ಟಿದ್ದ ದಿವ್ಯಾಂಶಿ ತಾಯಿ ಅಶ್ವಿನಿ ಇಂದು ಕಮರ್ಶಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಮರಣೋತ್ತರ ಪರೀಕ್ಷೆ  ವೇಳೆ ಮಗಳ ಮೃತದೇಹದಿಂದ ಕಿವಿಯೋಲೆ (Earrings) ಕಳುವಾಗಿದೆ ಎಂದು ದೂರು ನೀಡಿದ್ದಾರೆ.

    ದೂರು ನೀಡಿದ ಬಳಿಕ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ತಾಯಿ ಅಶ್ವಿನಿ, ಮರಣೋತ್ತರ ಪರೀಕ್ಷೆಯ ಬಳಿಕ ಮಗಳ ಕಿವಿಯೋಲೆ ನಾಪತ್ತೆಯಾಗಿದೆ. ಹಾಗಾಗಿ ಬೌರಿಂಗ್ ಆಸ್ಪತ್ರೆಯ (Bowring Hospital) ವಿರುದ್ಧ ದೂರು ಕೊಟ್ಟಿದ್ದೇನೆ ಎಂದು ತಿಳಿಸಿದರು.

    ದಿವ್ಯಾಂಶಿಯ ಹುಟ್ಟುಹಬ್ಬದ ಸಂದರ್ಭದಲ್ಲಿ ಆಕೆಯ ಮಾವ ಓಲೆಯನ್ನು ಉಡುಗೊರೆಯಾಗಿ ನೀಡಿದ್ದರು. ಆ ಓಲೆಯ ಮೇಲೆ ಆಕೆಗೆ ತುಂಬಾ ಅಟ್ಯಾಚ್ಮೆಂಟ್ ಇತ್ತು. ಹಾಗಾಗಿ ಅದು ನನಗೆ ಬೇಕು ಅಂಥ ಕೇಳಿದ್ದೇನೆ ಎಂದರು. ಇದನ್ನೂ ಓದಿ: ಎಂಟ್ರಿ ಫ್ರೀ ಅಂತಾ ಹೇಳಿ ಸ್ಟೇಡಿಯಂ ಗೇಟ್ ಓಪನ್ ಮಾಡಿಲ್ಲ ಯಾಕೆ? ದಿವ್ಯಾಂಶಿ ತಾಯಿ ಪ್ರಶ್ನೆ

     

    ಮಗಳು ತುಂಬಾ ಆಸೆ ಪಟ್ಟು ಅದನ್ನು ಹಾಕಿಕೊಂಡಿದ್ದಳು. ಒಂದೂವರೆ ವರ್ಷದಿಂದ ಕಿವಿ ಓಲೆ ಬಿಚ್ಚಿರಲಿಲ್ಲ. ಹಾಗಾಗಿ ಅದು ನನಗೆ ಬೇಕು ಎಂದು ಕೇಳಿದ್ದೇನೆ. ಆಸ್ಪತ್ರೆಯಿಂದ ಯಾರು ಸರಿಯಾಗಿ ಪ್ರತಿಕ್ರಿಯೆ ನೀಡದ್ದಕ್ಕೆ ದೂರು ನೀಡಿದ್ದೇನೆ ಎಂದು ತಿಳಿಸಿದರು.

    ಡಿಕೆಶಿ ವಿರುದ್ಧ ಆಕ್ರೋಶ
    ದಿವ್ಯಾಂಶಿ ಕಿವಿಯೋಲೆ ಕಳವು ವಿಚಾರಕ್ಕೆ ದೂರು ನೀಡಿದ ನಂತರ ತಾಯಿ ಅಶ್ವಿನಿ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಘಟನೆ ಬಳಿಕ ಶವಾಗಾರದ ಬಳಿ ದಿವ್ಯಾಂಶಿ ಅಜ್ಜಿಗೆ ಒಳ್ಳೆಯ ಚಿಕಿತ್ಸೆಯನ್ನು ನೀಡುತ್ತೇವೆ ಎಂದು ಭರವಸೆ ನೀಡಿದರು. ಅಜ್ಜಿ ಜೊತೆ ಮಾತನಾಡುವ ಫೋಟೋ ಸಮೇತ ಸೋಶಿಯಲ್ ಮೀಡಿಯಾದಲ್ಲಿ ಡಿಸಿಎಂ ತಮ್ಮ ಅಧಿಕೃತ ಇನ್ಸ್ಟ್ರಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದರು. ಶವಾಗಾರದ ಬಳಿ ಕುಳಿತುಕೊಂಡು ಟ್ರೀಟ್ಮೆಂಟ್ ಬಗ್ಗೆ ಮಾತಾಡ್ತಾರೆ. ಶವಾಗಾರದಲ್ಲಿ ಏನ್ ಟ್ರೀಟ್ಮೆಂಟ್ ಕೊಡುತ್ತಾರೆ ಎಂದು ಪ್ರಶ್ನಿಸಿದರು.

  • Fashion | ಮತ್ತೆ ಟ್ರೆಂಡ್ ಸೆಟ್ ಮಾಡುತ್ತಿದೆ ‘ಮಾಟಿ’ ಕರ್ಣಾಭರಣ!

    Fashion | ಮತ್ತೆ ಟ್ರೆಂಡ್ ಸೆಟ್ ಮಾಡುತ್ತಿದೆ ‘ಮಾಟಿ’ ಕರ್ಣಾಭರಣ!

    – ಈ ಮಾಟಿಗಳು ಮಾಡ್ರನ್ ಗೂ ಸೈ, ಎತ್ನಿಕ್ ಗೂ ಸೈ

    ಗಿನ ಫ್ಯಾಶನ್‌ ಲೋಕದಲ್ಲಿ ಹುಡುಗಿರು ಡಿಫರೆಂಟ್‌ ಆಗಿ ಕಾಣಲು ಬಯಸುತ್ತಾರೆ. ಇತ್ತೀಚೆಗೆ ಚಿನ್ನದ ಆಭರಣಗಳನ್ನು ಇಷ್ಟ ಪಡದೆ ಹೆಚ್ಚಾಗಿ ಆರ್ಟಿಫೀಶಿಯಲ್‌ ಜ್ಯುವೆಲ್ಲರಿಗಳನ್ನು ಹಾಕಲು ಬಯಸುತ್ತಾರೆ. ಮಾರುಕಟ್ಟೆಗೆ ವಿವಿಧ ಬಗೆಯ ಆಭರಣಗಳು ಲಗ್ಗೆ ಇಟ್ಟಿವೆ. ಫ್ಯಾಶನ್‌ ಪ್ರಿಯರು ಆರ್ಟಿಫೀಶಿಯಲ್‌ ಜ್ಯುವೆಲ್ಲರಿಗಳನ್ನು ಪಾರ್ಟಿ, ಇತರ ಸಮಾರಂಭಗಳಿಗೆ ಧರಿಸಲು ಈ ಆಭರಣಗಳನ್ನು ಇಷ್ಟ ಪಡುತ್ತಾರೆ.

    ಇತ್ತೀಚೆಗೆ ಫ್ಯಾಷನ್ ಲೋಕದಲ್ಲಿ ಸಂಸ್ಕೃತಿಯ ಛಾಯೆ ಕಳೆದುಕೊಳ್ಳದೆ ಆಧುನಿಕತೆಯನ್ನು ತೋರಿಸುವ ಶೈಲಿ ಹೆಚ್ಚು ಮೆಚ್ಚುಗೆ ಪಡೆಯುತ್ತಿದೆ. ಆ ಶೈಲಿಯ ಉತ್ತಮ ಉದಾಹರಣೆ ಎಂದರೆ ಮಾಟಿ ಆಭರಣಗಳೊಂದಿಗೆ ಮಾಡ್ರನ್ ಡ್ರೆಸ್‌ಗಳ ಕಾಂಬಿನೇಷನ್.

    ಮಾಟಿ ಆಭರಣಗಳು ಮತ್ತೆ ಫ್ಯಾಷನ್ ಲೋಕದಲ್ಲಿ ಗಮನ ಸೆಳೆಯುತ್ತಿವೆ. ಇವು ಸಾಂಪ್ರದಾಯಿಕ ಸೀರೆಗಳಿಂದ ಹಿಡಿದು ಆಧುನಿಕ ಉಡುಪುಗಳವರೆಗೆ ಎಲ್ಲದಕ್ಕೂ ಒಪ್ಪುತ್ತದೆ. ಇತ್ತೀಚೆಗೆ, ಎರಡು ಅಥವಾ ಮೂರು ಎಳೆಯ ಮಾಟಿಗಳು ಹೆಚ್ಚು ಜನಪ್ರಿಯವಾಗಿವೆ. ಏಕೆಂದರೆ ಇವು ಮುಖದ ಆಕರ್ಷಕತೆಯನ್ನು ಹೆಚ್ಚಿಸುತ್ತವೆ ಅಲ್ಲದೇ ಹೆವಿ ವರ್ಕ್‌ಗಳಿರುವ ಮಾಟಿಗಳು ಗ್ರ್ಯಾಂಡ್ ಲುಕ್ ನೀಡುತ್ತವೆ. ಅಲ್ಲದೇ ಸ್ಟೋನ್ ಅಥವಾ ಮುತ್ತಿನ ಕೆಲಸದ ಮಾಟಿಗಳು ವಿಶೇಷವಾಗಿ ಆಕರ್ಷಕವಾಗಿವೆ.

    ಟ್ರೆಂಡಿಂಗ್ ಮಾಟಿಗಳನ್ನು ಧರಿಸುವುದರಿಂದ ದೊಡ್ಡ ನೆಕ್ಲೆಸ್‌ ಧರಿಸುವ ಅಗತ್ಯವಿಲ್ಲದೆ ರಿಚ್ ಲುಕ್ ಪಡೆಯಬಹುದು. ಚಿನ್ನದ ಜೊತೆಗೆ ಬೆಳ್ಳಿ ಮಾಟಿಗಳೂ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ವಿಭಿನ್ನ ಆಯ್ಕೆಗಳನ್ನು ನೀಡುತ್ತವೆ. 2025ರಲ್ಲಿ ಮಾಟಿ ಆಭರಣಗಳು ಮತ್ತೆ ಫ್ಯಾಷನ್‌ನಲ್ಲಿ ಪ್ರಮುಖ ಸ್ಥಾನ ಪಡೆದಿವೆ. ಹಳೆಯ ಕಾಲದ ಮಾಟಿಗಳು ಈಗ ನವೀಕೃತ ರೂಪದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಸಾಂಪ್ರದಾಯಿಕ ಹಾಗೂ ಆಧುನಿಕ ಉಡುಪುಗಳಿಗೆ ಹೊಂದಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ.

    ಸೀರೆ, ಗ್ರ್ಯಾಂಡ್‌ ಸೆಲ್ವಾರ್ ಅಥವಾ ಸ್ಕರ್ಟ್‌-ಬ್ಲೌಸ್‌ ಧರಿಸಿದಾಗ ಮಾಟಿ ಆಭರಣಗಳು ರಿಚ್‌ ಲುಕ್‌ ನೀಡುತ್ತವೆ. ಇವು ಫ್ರೀ ಹೇರ್ ಅಥವಾ ಬನ್‌ ಹೇರ್‌ಸ್ಟೈಲ್‌ಗೂ ಚೆನ್ನಾಗಿ ಹೊಂದುತ್ತವೆ. ಸಾಂಪ್ರದಾಯಿಕ ಉಡುಗೆಗಳಿಗೂ ವಿಭಿನ್ನ ರೀತಿಯ ಸ್ಟೈಲಿಶ್ ಮಾಟಿಗಳು ಹೊಸ ಲುಕ್ ಅನ್ನು ನೀಡುತ್ತದೆ. ಒಂದೆಳೆಯ ಮಾಟಿಗಳಿಂದ ಹಿಡಿದು ಎರಡು-ಮೂರೆಳೆಯ ಮಾಟಿಗಳವರೆಗೆ ವಿವಿಧ ವಿನ್ಯಾಸಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಬಜೆಟ್‌ ಮತ್ತು ಶೈಲಿಗೆ ಅನುಗುಣವಾಗಿ ಆಯ್ಕೆಮಾಡಬಹುದು. ಹೀಗಾಗಿ, ಮಾಟಿ ಆಭರಣಗಳು ಇಂದಿನ ಫ್ಯಾಷನ್‌ ಪ್ರಿಯರಿಗೆ ಹೊಸ ಆಯ್ಕೆಯಾಗಿ ಹೊರಹೊಮ್ಮಿವೆ.

    ಅದರಲ್ಲೂ ಫ್ಯಾಷನ್‌ ಕ್ಷೇತ್ರದಲ್ಲಿರುವ ಮಾಡೆಲ್‌ಗಳು, ಸೆಲೆಬ್ರೆಟಿಗಳು ಅತಿ ಹೆಚ್ಚಾಗಿ ಇಂತಹ ಆಭರಣಗಳನ್ನು ಧರಿಸುತ್ತಾರೆ. ಫೋಟೋಶೂಟ್‌ನಲ್ಲಿ ಧರಿಸುವ ಮಾಟಿ ಇಯರಿಂಗ್ ಇಡೀ ಲುಕ್‌ ಅನ್ನು ಬದಲಿಸುತ್ತವೆ ಹಾಗೂ ನೋಡಲು ಆಕರ್ಷಕವಾಗಿ ಬಿಂಬಿಸುತ್ತವೆ. ಈಗಿನ ಟ್ರೆಂಡ್‌ಗೆ ಮ್ಯಾಚ್‌ ಆಗುವಂತಾ ಮಾಟಿಗಳನ್ನು ಡಿಸೈನರ್ಸ್ ಮಾರುಕಟ್ಟೆಗೆ ಪರಿಚಯಿಸಿದ್ದಾರೆ

    ಮಾಡ್ರನ್ ಡ್ರೆಸ್‌ಗಳಿಗೆ ಒಪ್ಪುವ ಮಾಟಿಗಳು

    ಸಿಂಪಲ್ ಡ್ರೆಸ್‌ಗಳು, ಶರ್ಟ್ಸ್ ಅಥವಾ ವೆಸ್ಟರ್ನ್ ಗೌನ್ಸ್‌ಗಳಿಗೆ ಸ್ಟೈಲಿಶ್ ಮಾಟಿಗಳು ಎತ್ನಿಕ್ ಟಚ್ ಕೊಡುತ್ತವೆ. ಹಾಗೆಯೇ ಯುನೀಕ್ ಆಗಿ ಕೂಡ ಕಾಣಿಸುತ್ತದೆ. ಕಚೇರಿ, ಕಾಲೇಜು ಅಥವಾ ಕಾಫಿ ಡೇಟ್‌ಗೆ ಬಳಸಬಹುದಾದ ಮಾಟಿಗಳು ಲಭ್ಯವಿವೆ. ಹ್ಯಾಂಡ್‌ಪೈಂಟೆಡ್ ಅಥವಾ ಪ್ಯಾಟ್‌ಟರ್ನ್ಡ್ ಮಾಟಿಗಳು ಶರ್ಟ್‌ ಡ್ರೆಸ್‌ಗಳಿಗೆ ತುಂಬಾ ಆಕರ್ಷಕವಾಗಿ ಕಾಣುತ್ತದೆ.

    ಮಾಟಿ ಆಭರಣಗಳ ತೂಕವು ಕಡಿಮೆಯಿದ್ದು, ವಿನ್ಯಾಸದ ವೈವಿಧ್ಯತೆ ಹೆಚ್ಚಾಗಿದೆ. ಜೀನ್ಸ್‌-ಟಾಪ್‌ ಅಥವಾ ಜಂಪ್‌ಸೂಟ್‌ ಜೊತೆ ಕಲರ್ ಫುಲ್ ಮಾಟಿಗಳು ಹಾಗೂ ಮ್ಯಾಚಿಂಗ್ ಬಳೆ ಹಾಕಿದರೆ ಕ್ಲಾಸೀ ಲುಕ್ ನೀಡುತ್ತದೆ. ಈ ಸ್ಟೈಲ್‌ಗಳನ್ನು ಬಳಸುವುದರಿಂದ ನವೀನತೆಯ ಜೊತೆಗೆ ಸಂಸ್ಕೃತಿಯ ಹಳೆಯ ಆಭರಣಗಳ ವಿನ್ಯಾಸಗಳೂ ಚಾಲ್ತಿಯಲ್ಲಿರುತ್ತದೆ.

    ಸ್ಟೋನ್‌ ಅಥವಾ ಮುತ್ತಿನ ಮಾಟಿ

    ಸ್ಟೋನ್‌ ಅಥವಾ ಮುತ್ತಿನ (Pearl) ಮಾಟಿ ತುಂಬಾನೇ ಆಕರ್ಷಕವಾಗಿ ಕಾಣುವುದು. ಮುತ್ತಿನ ಡಿಸೈನ್‌ಗಳ ಮಾಟಿಗಳು ಸೀರೆ, ಲಂಗ ದಾವಣಿಗೆ ಹೇಳಿ ಮಾಡಿಸಿದ ಆಭರಣವಾಗಿದೆ. ಇದು ಉಡುಪಿನ ರೂಪುರೇಷೆಯನ್ನೇ ಬದಲಾಯಿಸುತ್ತದೆ. ಹಾಗಾಗಿ ತುಂಬಾ ಜನ ಮುತ್ತಿನ ಡಿಸೈನ್‌ನಲ್ಲಿ ಮಾಟಿ ಖರೀದಿಸಲು ಇಷ್ಟಪಡುತ್ತಾರೆ.

     ಮಾಟಿ ಆಭರಣಗಳು ನಾವಿನ್ಯತೆಯೊಂದಿಗೆ ಸಂಸ್ಕೃತಿಯ ಸೌಂದರ್ಯವನ್ನೂ ಪ್ರತಿಬಿಂಬಿಸುತ್ತವೆ. ವಿಭಿನ್ನ ವಿನ್ಯಾಸಗಳೊಂದಿಗೆ ಆಧುನಿಕ ಫ್ಯಾಶನ್‌ಗೂ ಸೂಕ್ತವಾಗಿವೆ. ಸ್ಟೈಲಿಶ್ ಆಯ್ಕೆಯಾಗಿರುವ ಈ ಆಭರಣಗಳು ನಿತ್ಯ ಉಡುಪುಗಳಿಗೆ ಆಕರ್ಷಕವಾಗಿವೆ. ನೀವು ಸಾಂಪ್ರದಾಯಿಕ ಉಡುಗೆ ಹಾಗೂ ಮಾಡನ್ ಡ್ರೆಸ್ ಗಳಲ್ಲಿ ರಿಚ್ ಲುಕ್ ನಲ್ಲಿ ಕಾಣಿಸಿಕೊಳ್ಳಬೇಕೆಂದರೆ ಇಂತಹ ಆಧುನಿಕ ಮಾಟಿಗಳನ್ನ ಬಳಸಿ.

  • ಮಗಳ ಆನ್‍ಲೈನ್ ಶಿಕ್ಷಣಕ್ಕಾಗಿ ಕಿವಿಯೊಲೆಯನ್ನು ಮಾರಿದ ತಾಯಿ

    ಮಗಳ ಆನ್‍ಲೈನ್ ಶಿಕ್ಷಣಕ್ಕಾಗಿ ಕಿವಿಯೊಲೆಯನ್ನು ಮಾರಿದ ತಾಯಿ

    ಬೆಳಗಾವಿ: ತನ್ನ ಮಗಳು ಎಸ್‍ಎಸ್‍ಎಲ್‍ಸಿ ಆನ್‍ಲೈನ್ ಶಿಕ್ಷಣಕ್ಕಾಗಿ ತಾಯಿಯೊಬ್ಬಳು ಕಿವಿಯೊಲೆ ಮಾರಿದ ಕಣ್ಣೀರಿನ ಕಥೆ ಬೆಳಗಾವಿಯಲ್ಲಿ ನಡೆದಿದೆ. ಮಹಾನಗರದ ಕ್ಲಬ್ ರಸ್ತೆಯಲ್ಲಿರುವ ತಗಡಿನ ಶೆಡ್‍ನಲ್ಲಿ ವಾಸವಿರುವ ದೇವದಾಸಿ ಜೋಗಮ್ಮ ಸರೋಜಿನಿ ಬೇವಿನಕಟ್ಟಿ ಮಕ್ಕಳಿಗಾಗಿ ಕಿವಿಯೊಲೆ ಮಾರಿ ಮೊಬೈಲ್ ತಂದುಕೊಟ್ಟಿದ್ದಾರೆ.

    ಜೋಗ ಬೇಡಿ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದ ಈ ಜೋಗಮ್ಮನ ಕುಟುಂಬಕ್ಕೆ ಕೊರೊನಾ ಬರಸಿಡಿಲು ಬಡಿದಂತಾಗಿದೆ. ಕಳೆದ ಐದು ತಿಂಗಳಿಂದ ತಾಯಿ ಸರೋಜಾಗೆ ಕೆಲಸ ಕೂಡ ಇಲ್ಲ ಇತ್ತ ಇದ್ದೊಬ್ಬ ಮಗ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದು, ಆತನ ಆರೈಕೆ ಕೂಡ ಸರೋಜಿನಿಯವರೇ ಮಾಡುತ್ತಿದ್ದಾರೆ. ಗಂಡ ಕೂಡ ಮೃತಪಟ್ಟಿದ್ದರಿಂದ ತಾನೊಬ್ಬಳೇ ದುಡಿದು ಮಕ್ಕಳನ್ನು ಸಾಕುತ್ತಿರುವ ಸರೋಜಿನಿ ಈಗ ತುತ್ತು ಅನ್ನಕ್ಕೂ ಪರದಾಡುತ್ತಿದ್ದಾರೆ.

    ಈ ಸಮಯದಲ್ಲಿ ಸರ್ಕಾರಿ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿರುವ ಮಗಳು ರೇಣುಕಾಗೆ ಆನ್‍ಲೈನ್ ಕ್ಲಾಸ್ ಶುರುವಾಗಿದ್ದು, ಶಾಲೆಯ ಶಿಕ್ಷಕರು ಕರೆ ಮಾಡಿ ಮೊಬೈಲ್ ಅಥವಾ ಚಂದನ ಟಿವಿಯಲ್ಲಿ ಕ್ಲಾಸ್ ಕೇಳಲು ಹೇಳಿದ್ದಾರೆ. ಆದರೆ ಮನೆಯಲ್ಲಿ ಟಿವಿ ಮತ್ತು ಮೊಬೈಲ್ ಕೂಡ ಇಲ್ಲದನ್ನು ಶಿಕ್ಷಕರ ಮುಂದೆ ರೇಣುಕಾ ಹೇಳಿದ್ದು, ಕಡೆ ಪಕ್ಷ ಮೊಬೈಲ್ ಆದರೂ ಕೊಂಡುಕೊಂಡು ಅದರಲ್ಲಿ ಪಾಠ ಕೇಳುವಂತೆ ಶಿಕ್ಷಕರು ಹೇಳಿದ್ದಾರೆ. ಇದನ್ನು ರೇಣುಕಾ ತಾಯಿ ಸರೋಜಿನಿಗೆ ಹೇಳಿದ್ದಾಳೆ. ಆಗ ಅವರು ತನ್ನ ಚಿನ್ನದ ಕಿವಿ ಓಲೆಯನ್ನ ಹತ್ತು ಸಾವಿರ ರೂಪಾಯಿಗೆ ಮಾರಿ ಅದರಲ್ಲಿ ಮಗಳಿಗೆ ಫೋನ್ ತಂದುಕೊಟ್ಟಿದ್ದಾರೆ.

    ಮನೆ ಕೂಡ ಇಲ್ಲದೇ ತಗಡಿನ ಶೆಡ್‍ವೊಂದರಲ್ಲಿರುವ ಇವರು ಇದೀಗ ಮಳೆಯ ನೀರು ಕೂಡ ಒಳಗೆ ಬರುತ್ತಿದ್ದು ಬದುಕು ಸಾಗಿಸುವುದೇ ದುಸ್ತಾರವಾಗಿ ಬಿಟ್ಟಿದೆ. ಮಗಳು ಕೆಲಸ ಮಾಡುತ್ತೇನೆ ಅಂದರೂ ಅವಳನ್ನ ಕೆಲಸಕ್ಕೆ ಕಳುಹಿಸದೇ ಓದಿ ಅಧಿಕಾರಿ ಆಗುವಂತೆ ಹೇಳಿ ತನ್ನ ಚಿನ್ನದ ಕಿವಿ ಓಲೆ ಮಾರಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯ ತವರು ಜಿಲ್ಲೆಯಲ್ಲಿ ಇಂತಹದ್ದೊಂದು ಘಟನೆ ನಡೆದಿದ್ದು, ಯಾವೊಬ್ಬ ಅಧಿಕಾರಿಗಳು ಕೂಡ ಇವರ ಸಹಾಯಕ್ಕೆ ಬಂದಿಲ್ಲ.

  • `ಕೈ’ ಸ್ಟಾರ್ ಪ್ರಚಾರಕಿ ನಟಿ ಖುಷ್ಬೂ `ಕಮಲ’ದ ಕಿವಿಯೋಲೆ ಫುಲ್ ವೈರಲ್!

    `ಕೈ’ ಸ್ಟಾರ್ ಪ್ರಚಾರಕಿ ನಟಿ ಖುಷ್ಬೂ `ಕಮಲ’ದ ಕಿವಿಯೋಲೆ ಫುಲ್ ವೈರಲ್!

    ಬೆಂಗಳೂರು: ಕೈ ಸ್ಟಾರ್ ಪ್ರಚಾರಕಿ, ಬಹುಭಾಷಾ ನಟಿ, ಕಾಂಗ್ರೆಸ್ ವಕ್ತಾರೆ ನಟಿ ಖುಷ್ಬೂ ಅವರ ಕಿವಿಯೋಲೆ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಶನಿವಾರ ನಡೆದ ಕೆಪಿಸಿಸಿ ಸಭೆಗೆ ಖುಷ್ಬೂ ಕಮಲದ ಹೂವಿನ ಕಿವಿಯೋಲೆ ಧರಿಸಿದ್ದು, ಸದ್ಯ ಈಗ ಸಾಕಷ್ಟು ವೈರಲ್ ಆಗಿದೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಜನರಲ್ಲಿ ಭಾರೀ ಕುತೂಹಲ ಉಂಟಾಗಿದೆ.

    ಇದಕ್ಕೂ ಮೊದಲು ಬಿಜೆಪಿ ಖುಷ್ಬೂ ಅವರ ಮೂಲ ಹೆಸರನ್ನಿಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ದಾಳಿ ಆರಂಭಿಸಿತ್ತು. ಖುಷ್ಬೂ ತಮ್ಮ ಗುರುತನ್ನು ಮರೆಮಾಚುತ್ತಿದ್ದು, ತಮ್ಮ ಧರ್ಮವನ್ನು ಕೀಳಾಗಿ ನೋಡುತ್ತಿದ್ದಾರೆ. ಅಷ್ಟೇ ಅಲ್ಲದೇ ಹೆಸರನ್ನು ಮುಚ್ಚಿಡುತ್ತಿದ್ದಾರೆ ಎಂದು ಬಿಜೆಪಿ ಫಾಲೋವರ್ಸ್ ಗಳು ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡತೊಡಗಿದರು.

    ಈ ಟೀಕೆಯ ಬಳಿಕ ಖುಷ್ಬೂ ಅವರು ಟ್ವೀಟರ್ ಖಾತೆಯಲ್ಲಿ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಖುಷ್ಬೂ ಸುಂದರ್ ಜೊತೆಗೆ ಬಿಜೆಪಿಗಾಗಿ ನಖಟ್ ಖಾನ್ ಎಂದು ಬರೆದುಕೊಂಡಿದ್ದಾರೆ.

    ಬಿಜೆಪಿಯ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಸಮಸ್ಯೆಗಳನ್ನು ಪರಿಹರಿಸಬೇಕಾದವರು ಬೇರೆಯವರ ವೈಯಕ್ತಿಕ ಜೀವನದಲ್ಲಿ ಚಿಲ್ಲರೆ ರಾಜಕೀಯ ಮಾಡುತ್ತಿದ್ದಾರೆ. ನನ್ನ ಪೋಷಕರು ನಖಟ್ ಎಂದು ಹೆಸರನ್ನು ಇಟ್ಟಿದ್ದರು. ಬಿಜೆಪಿಯವರಿಗೆ ಬುದ್ಧಿ ಕಲಿಸಲು ನಾನು ಹೆಸರು ಬದಲಾಯಿಸಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ.