Tag: e-Pharmacy

  • ಮೆಡಿಕಲ್ ಸ್ಟೋರ್ಸ್ ಬಂದ್ ಮಾಡಿದ್ರೆ, ಪರವಾನಗಿ ರದ್ದು ಮಾಡ್ತೀನಿ: ಡಿಕೆಶಿ

    ಮೆಡಿಕಲ್ ಸ್ಟೋರ್ಸ್ ಬಂದ್ ಮಾಡಿದ್ರೆ, ಪರವಾನಗಿ ರದ್ದು ಮಾಡ್ತೀನಿ: ಡಿಕೆಶಿ

    ಬೆಂಗಳೂರು: ಮೆಡಿಕಲ್ ಸ್ಟೋರ್ಸ್ ಗಳನ್ನು ಬಂದ್ ಮಾಡಿದರೆ ಅಂತಹ ಅಂಗಡಿಗಳ ಪರವಾನಗಿಯನ್ನು ರದ್ದು ಮಾಡುತ್ತೇನೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

    ಮೆಡಿಕಲ್ ಶಾಪ್ ಬಂದ್ ಬಗ್ಗೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ಅವರು, ಸರ್ಕಾರಿ ಆಸ್ಪತ್ರೆಗಳು ಹಾಗೂ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳ ಆವರಣದಲ್ಲಿರುವ ಔಷಧ ವ್ಯಾಪಾರ ಮಳಿಗೆಗಳು (ಮೆಡಿಕಲ್ ಸ್ಟೋರ್ಸ್) ಶುಕ್ರವಾರ ಎಂದಿನಂತೆ ಕಾರ್ಯನಿರ್ವಹಿಸಬೇಕು. ಒಂದೊಮ್ಮೆ ಯಾವುದಾದರೂ ಮಳಿಗೆಗಳು ಬಂದ್ ನಲ್ಲಿ ಪಾಲ್ಗೊಂಡಿದ್ದೇ ಆದಲ್ಲಿ, ಅಂತಹ ಮಳಿಗೆಗಳ ಪರವಾನಗಿ ರದ್ದುಪಡಿಸಿ, ಸರ್ಕಾರಿ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳ ಆವರಣದಿಂದ ತೆರವು ಮಾಡಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

    ಅಗತ್ಯ ಸೇವಾ ಕಾಯ್ದೆ ವ್ಯಾಪ್ತಿಯಲ್ಲಿ ಬರುವ ಔಷಧ ಮಳಿಗೆಗಳು ಯಾವುದೇ ಕಾರಣಕ್ಕೂ ಬಂದ್ ನಲ್ಲಿ ಭಾಗವಹಿಸುವಂತಿಲ್ಲ. ಭಾಗವಹಿಸಿದರೆ ಕಠಿಣ ಕ್ರಮ ಎದುರಿಸಬೇಕಾದೀತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇ-ಫಾರ್ಮಸಿಗೆ ವಿರೋಧ – ದೇಶಾದ್ಯಂತ ಮೆಡಿಕಲ್ ಶಾಪ್ ಬಂದ್!

    ಬಂದ್ ಯಾಕೆ?
    ಕೇಂದ್ರ ಸರ್ಕಾರ ನೂತನವಾಗಿ ಜಾರಿಗೆ ತರಲು ಹೊರಟಿರುವ ಇ-ಫಾರ್ಮಸಿ ವ್ಯವಸ್ಥೆಗೆ, ವಿರೋಧ ವ್ಯಕ್ತಪಡಿಸಿರುವ ಔಷಧಿ ಮಾರಾಟ ವ್ಯಾಪಾರಿಗಳು ಇಂದು ದೇಶಾದ್ಯಂತ ಬಂದ್‍ಗೆ ಕರೆ ನೀಡಿದ್ದಾರೆ. ಹೀಗಾಗಿ ಗುರುವಾರ ಮಧ್ಯರಾತ್ರಿಯಿಂದ ಶುಕ್ರವಾರ ಮಧ್ಯರಾತ್ರಿಯವರೆಗೆ ದೇಶದ ಯಾವುದೇ ಮೆಡಿಕಲ್ ಶಾಪ್‍ಗಳು ಕಾರ್ಯನಿರ್ವಹಿಸುತ್ತಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇ-ಫಾರ್ಮಸಿಗೆ ವಿರೋಧ – ದೇಶಾದ್ಯಂತ ಮೆಡಿಕಲ್ ಶಾಪ್ ಬಂದ್!

    ಇ-ಫಾರ್ಮಸಿಗೆ ವಿರೋಧ – ದೇಶಾದ್ಯಂತ ಮೆಡಿಕಲ್ ಶಾಪ್ ಬಂದ್!

    ಬೆಂಗಳೂರು: ಕೇಂದ್ರ ಸರ್ಕಾರ ಇ-ಫಾರ್ಮಸಿ ವ್ಯವಸ್ಥೆ ಜಾರಿಗೊಳಿಸಲು ಮುಂದಾಗಿರುವುದಕ್ಕೆ ವಿರೋಧಿಸಿ ಅಖಿಲ ಭಾರತೀಯ ಔಷಧಿ ಮಾರಾಟ ವ್ಯಾಪಾರಿಗಳ ಸಂಘ ರಾಷ್ಟ್ರವ್ಯಾಪಿ ಬಂದ್ ಗೆ ಕರೆ ನೀಡಿದೆ.

    ಹೌದು, ಕೇಂದ್ರ ಸರ್ಕಾರ ನೂತನವಾಗಿ ಜಾರಿಗೆ ತರಲು ಹೊರಟಿರುವ ಇ-ಫಾರ್ಮಸಿ ವ್ಯವಸ್ಥೆಗೆ, ವಿರೋಧ ವ್ಯಕ್ತಪಡಿಸಿರುವ ಔಷಧಿ ಮಾರಾಟ ವ್ಯಾಪಾರಿಗಳು ಇಂದು ದೇಶಾದ್ಯಂತ ಬಂದ್‍ಗೆ ಕರೆ ನೀಡಿದ್ದಾರೆ. ಹೀಗಾಗಿ ಗುರುವಾರ ಮಧ್ಯರಾತ್ರಿಯಿಂದ ಶುಕ್ರವಾರ ಮಧ್ಯರಾತ್ರಿಯ ವರೆಗೆ ದೇಶದ ಯಾವುದೇ ಮೆಡಿಕಲ್ ಶಾಪ್‍ಗಳು ಕಾರ್ಯನಿರ್ವಹಿಸುತ್ತಿಲ್ಲ.

    ಈ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗಿನಿಂದಲೇ ರಾಜಧಾನಿ ಬೆಂಗಳೂರಿನಲ್ಲಿಯೂ ಸಹ ಮೆಡಿಕಲ್ ಶಾಪ್ ಬಂದ್ ಬಿಸಿ ತಟ್ಟಿದೆ. ಮೆಡಿಕಲ್ ಶಾಪ್‍ಗಳು ಬಂದ್ ಆಗಿರುವ ಕಾರಣ, ತುರ್ತು ಔಷಧಿಗಾಗಿ ಜನರು ಪರದಾಟ ನಡೆಸುತ್ತಿದ್ದಾರೆ. ಅಲ್ಲದೇ ಕೆಲ ಆಸ್ಪತ್ರೆಗೆ ಹೊಂದಿಕೊಂಡಿರುವ ಮೆಡಿಕಲ್ ಶಾಪ್‍ಗಳು ಸಹ ಸಂಪೂರ್ಣವಾಗಿ ಸ್ಥಗಿತವಾಗಿದೆ.

    ಕರ್ನಾಟಕ ರಾಜ್ಯದಲ್ಲಿ ಒಟ್ಟು 24 ಸಾವಿರ ಮೆಡಿಕಲ್ ಹಾಗೂ ಬೆಂಗಳೂರಿನಲ್ಲಿ ಆರೂವರೆ ಸಾವಿರಕ್ಕೂ ಹೆಚ್ಚು ಮೆಡಿಕಲ್ ಶಾಪ್‍ಗಳು ಬಂದ್ ಆಗಲಿದೆ. ಇನ್ನು ದೇಶಾದ್ಯಂತ ಸುಮಾರು 85 ಲಕ್ಷ ಮೆಡಿಕಲ್ ಶಾಪ್ ಗಳು ಸಹ ಬಂದ್ ಸಂಪೂರ್ಣ ಬೆಂಬಲ ಸೂಚಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇಂದು ಮಧ್ಯ ರಾತ್ರಿಯಿಂದಲೇ ಮೆಡಿಕಲ್ ಶಾಪ್ ಬಂದ್- ಕೇಂದ್ರದ ವಿರುದ್ಧ ಪ್ರತಿಭಟನೆ ಯಾಕೆ?

    ಇಂದು ಮಧ್ಯ ರಾತ್ರಿಯಿಂದಲೇ ಮೆಡಿಕಲ್ ಶಾಪ್ ಬಂದ್- ಕೇಂದ್ರದ ವಿರುದ್ಧ ಪ್ರತಿಭಟನೆ ಯಾಕೆ?

    ಬೆಂಗಳೂರು: ಇ-ಫಾರ್ಮಸಿ ವ್ಯವಸ್ಥೆ ಜಾರಿ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಮೆಡಿಕಲ್ ಶಾಪ್ ಸಂಘಟನೆಗಳು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದು, ಗುರುವಾರ ಮಧ್ಯರಾತ್ರಿಯಿಂದ ಶುಕ್ರವಾರ ಮಧ್ಯರಾತ್ರಿಯ ವರೆಗೆ 24 ಗಂಟೆಗಳ ಕಾಲ ಕಾರ್ಯನಿರ್ವಹಿಸದಿರಲು ತೀರ್ಮಾನಿಸಿದೆ.

    ದೇಶದ್ಯಾಂತ ಒಂದು ದಿನ ಬಂದ್ ಮಾಡಲು ಅಖಿಲ ಭಾರತ ಔಷಧಿ ಮಾರಾಟ ವ್ಯಾಪಾರಿಗಳ ಸಂಘ (ಎಐಒಸಿಡಿ) ಕರೆ ನೀಡಿದೆ. ರಾಜ್ಯಾದ್ಯಂತ ಒಟ್ಟು 24 ಸಾವಿರ ಮೆಡಿಕಲ್ ಹಾಗೂ ಬೆಂಗಳೂರಿನಲ್ಲಿ ಆರೂವರೆ ಸಾವಿರಕ್ಕೂ ಹೆಚ್ಚು ಮೆಡಿಕಲ್ ಶಾಪ್‍ಗಳು ಬಂದ್ ಆಗಲಿದೆ.

    ಬಂದ್ ನಿಂದ ರೋಗಿಗಳಿಗೆ ಉಂಟಾಗಬಹುದಾದ ಅನಾನುಕೂಲಗಳ ಗಮನಿಸಿ ಆಸ್ಪತ್ರೆಯ ಆವರಣ ಹಾಗೂ ನರ್ಸಿಂಗ್ ಹೋಂಗಳ ಬಳಿ ಇರುವ ಮೆಡಿಕಲ್ ಶಾಪ್ ಗಳಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಕರ್ನಾಟಕದಲ್ಲಿಯೂ ಮೆಡಿಕಲ್ ಸಂಘಟನೆಯ ಬೆಂಬಲ ವ್ಯಕ್ತವಾಗಿದ್ದು, ಕರ್ನಾಟಕ ಕೆಮಿಸ್ಟ್ ಅಂಡ್ ಡ್ರಗಿಸ್ಟ್ ಅಸೋಸಿಯೇಷನ್ ಬೆಂಬಲ ನೀಡಿದೆ. ಆದರೆ ಬಂದ್ ಗೆ ಸುವರ್ಣ ಕರ್ನಾಟಕ ಕೆಮಿಸ್ಟ್ ಅಸೋಸಿಯೇಷನ್ ಬೆಂಬಲ ಇಲ್ಲ ನೀಡಿಲ್ಲ. ಇದರಿಂದ ಕರ್ನಾಟಕದಲ್ಲಿ ಯಾವ ಮಟ್ಟಿಗೆ ಬಂದ್ ಪರಿಣಾಮ ಬೀರಲಿದೆ ಎಂದು ಕಾದು ನೋಡಬೇಕಿದೆ.

    ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಕರ್ನಾಟಕ ಕೆಮಿಸ್ಟ್ ಅಂಡ್ ಡ್ರಗಿಸ್ಟ್ ಅಸೋಸಿಯೇಷನ್ ಸಂಘದ ಅಧ್ಯಕ್ಷ ರಘುನಾಥ್ ಸಿಂಗ್ ಅವರು, ಕೇಂದ್ರ ಸರ್ಕಾರ ಇ-ಫಾರ್ಮಸಿ ವ್ಯವಸ್ಥೆ ಜಾರಿ ಮಾಡಲು ಸಿದ್ಧತೆ ನಡೆಸಿದ್ದು, ನಮಗೇ 45 ದಿನಗಳ ಕಾಲ ಸಮಯವಕಾಶ ನೀಡಿದ್ದಾರೆ. ಆದರೆ ಈ ಕರಡಿನಲ್ಲಿ ಸಾಕಷ್ಟು ಲೋಪದೋಷಗಳಿದ್ದು, ಔಷಧಿಗಳ ಕುರಿತು ಸರಿಯಾದ ಮಾಹಿತಿ ಇಲ್ಲದೇ ವಿತರಣೆ ನಡೆಲಿದೆ. ಸಾರ್ವಜನಿಕರು ಆನ್ ಲೈನ್ ಮೂಲಕ ಖರೀದಿ ಮಾಡುವುದರಿಂದ ಅದರ ಪ್ರಮಾಣ, ಮಾಹಿತಿ, ಗುಣಮಟ್ಟ, ಔಷಧಿ ಪೂರೈಸಿದ ಮೂಲ ಯಾವುದರ ಬಗ್ಗೆಯೂ ಮಾಹಿತಿ ಲಭಿಸುವುದಿಲ್ಲ ಎಂದು ತಿಳಿಸಿದರು.

    ದೇಶದಲ್ಲಿ ಯುವ ಜನತೆಯೇ ಹೆಚ್ಚಾಗಿದ್ದು ಔಷಧಿಗಳನ್ನು ಆನ್ ಲೈನ್ ಮೂಲಕ ಪೂರೈಕೆ ಮಾಡುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡಿ ದೂರುಪಯೋಗ ಮಾಡಿಕೊಳ್ಳುವ ಅವಕಾಶ ಹೆಚ್ಚು. ಅಲ್ಲದೇ ವಿಶ್ವದ ಯಾವುದೇ ರಾಷ್ಟ್ರದಲ್ಲಿ ಇಂತಹ ವ್ಯವಸ್ಥೆ ಜಾರಿ ಮಾಡಿಲ್ಲ. ಇ-ಫಾರ್ಮಸಿ ಮಾಡುವವರಿಗೆ ಯಾವುದೇ ಕಾನೂನು ನಿಯಮಗಳು ಇಲ್ಲ. 2 ವರ್ಷಕ್ಕೆ ಒಮ್ಮೆ ಮಾತ್ರ ಸರ್ಕಾರ ಅಧಿಕಾರಿಗಳು ಪರಿಶೀಲನೆ ನಡೆಸಲು ಅವಕಾಶ ನೀಡಿದ್ದಾರೆ. ಇದರಿಂದ ಯಾವುದೇ ಪ್ರಯೊಜನ ಉಂಟಾಗುವುದಿಲ್ಲ. ಅಲ್ಲದೇ ಮೆಡಿಸನ್ ನಲ್ಲಿ ಸ್ಟೋರೆಜ್ ವ್ಯವಸ್ಥೆ ಹಾಗೂ ಶೆಡ್ಯೂಲ್ ಎಚ್, ಎಕ್ಸ್ ಸೇರಿದಂತೆ ಹಲವು ಔಷಧಿಗಳನ್ನು ವೈದ್ಯರ ಸಲಹೆ ಚೀಟಿ ಇದ್ದರೆ ಮಾತ್ರ ನೀಡಬೇಕು. ಆದರೆ ಇ-ಫಾರ್ಮಸಿಯಲ್ಲಿ ಇದಕ್ಕೆ ಅವಕಾಶವಿಲ್ಲ. ಈ ಎಲ್ಲಾ ಕಾರಣಗಳಿಂದ ದೇಶದ್ಯಾಂತ ಬಂದ್ ಮಾಡಲು ತೀರ್ಮಾನಿಸಲಾಗಿದೆ ಎಂದರು.

    ದೇಶದ್ಯಾಂತ ಮೆಡಿಕಲ್ ಶಾಪ್ ಗಳ ವ್ಯವಸ್ಥೆಯಲ್ಲಿ ಸುಮಾರು 1.5 ಕೋಟಿ ಜನರು ಕಾರ್ಯನಿರ್ವಹಿಸುತ್ತಿದ್ದಾರೆ. ಇ-ಫಾರ್ಮಸಿಗೆ ಅವಕಾಶ ನೀಡುವುದರಿಂದ ಹೆಚ್ಚಿನ ಜನರು ಉದ್ಯೋಗ ಕಳೆದುಕೊಳ್ಳುವ ಅವಕಾಶವಿದೆ. ಕೇಂದ್ರ ಸರ್ಕಾರದ ವಿರುದ್ಧ ನಾಳೆ ಬೆಂಗಳೂರಿನಲ್ಲಿ ಯಾವುದೇ ಪ್ರತಿಭಟನಾ ರ್‍ಯಾಲಿ ಇರುವುದಿಲ್ಲ. ದೆಹಲಿಯ ಜಂತರ್ ಮಂತರ್ ನಲ್ಲಿ ಮಾತ್ರ ಬೃಹತ್ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ ಎಂದರು.

    ಆನ್‍ಲೈನಲ್ಲಿ ಔಷಧಿಗಳ ಮಾರಾಟ ಕಲ್ಪಿಸಲು ಕೇಂದ್ರ ಸರ್ಕಾರ ಇ ಫಾರ್ಮಾಸಿ ಗಳನ್ನು ಕಾನೂನು ಬದ್ಧಗೊಳಿಸಲು ಸಿದ್ಧತೆ ನಡೆಸಿದೆ. ಶೆಡ್ಯೂಲ್ 10ರ ಪಟ್ಟಿಯಲ್ಲಿ ಸೂಚಿಸಲಾಗಿರುವ ನಿದ್ರೆ, ಉದ್ವೇಗ, ಉದ್ರೇಕ, ಖಿನ್ನತೆ ಮತ್ತು ಒತ್ತಡ ನಿವಾರಿಸುವ ಔಚಧಿ ಮಾರಾಟಕ್ಕೆ ಅವಕಾಶವಿಲ್ಲ. ಅಲ್ಲದೇ ವೈದ್ಯರ ಸಲಹೆ ಇಲ್ಲದೆ ಔಷಧ ಮಾರಾಟ ಮಾಡುವಂತಿಲ್ಲ. ಔಷಧಿ ಮಾರಾಟ ಮಾಡುವ ಮುನ್ನ ವೈದ್ಯರ ಸಲಹೆ ಚೀಟಿ ಪಡೆಯವುದು ಕಡ್ಡಾಯ. ಔಷಧ ಮಾರಾಟ ಮಾಡಿದ ಸಮಗ್ರ ಮಾಹಿತಿಯನ್ನು ಇ-ಫಾರ್ಮಸಿ ಪೋರ್ಟಲ್‍ನಲ್ಲಿ ಅಪ್‍ಲೋಡ್ ಮಾಡುವುದು ಕಡ್ಡಾಯವಾಗಿದೆ. ಇ-ಫಾರ್ಮಸಿ ಮಾರಾಟಕ್ಕೆ ಅವಕಾಶ ಕಲ್ಪಿಸಲು 1945ರ ಔಷಧ ಮತ್ತು ಸೌಂದರ್ಯ ವರ್ಧಕ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ಮಾಡಲು ಸಿದ್ಧತೆ ನಡೆದಿದೆ.

    ಕೇಂದ್ರದ ಅಧಿಸೂಚನೆಯಲ್ಲಿ ಏನಿದೆ:
    ಆನ್ ಲೈನ್ ಮಾರಾಟ ವ್ಯವಸ್ಥೆ ಮೂಲಕ ಔಷಧ ಮಾರಾಟ, ವಿತರಣೆ, ಸಂಗ್ರಹ, ಸರಬರಾಜು ವಹಿವಾಟು ನಡೆಸಲು ಇ-ಫಾರ್ಮಸಿ ವ್ಯವಸ್ಥೆಗೆ ಅವಕಾಶ ನೀಡಲಾಗಿದ್ದು, ಕಡಿಮೆ ಗುಣಮಟ್ಟದ ಔಷಧಿ ಪೂರೈಕೆ ಮಾಡಿದರೆ ರಾಜ್ಯ ಔಷಧಿ ನಿಯಂತ್ರಣ ಅಧಿಕಾರಿಗಳಿಗೆ ನೇರವಾಗಿ ದೂರು ಸಲ್ಲಿಸಬಹುದಾಗಿದೆ. ಈ ಮೂಲಕ ಔಷಧಿ ಖರೀದಿ ಮಾಡುವವರು ಪರಿಹಾರ ಪಡೆಯಬಹುದಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv