Tag: e kannada

  • ಬೆಂಗಳೂರಿನಲ್ಲಿ ಇ-ಕನ್ನಡ ಲೋಕ ಅನಾವರಣ

    ಬೆಂಗಳೂರಿನಲ್ಲಿ ಇ-ಕನ್ನಡ ಲೋಕ ಅನಾವರಣ

    ಬೆಂಗಳೂರು: ಕನ್ನಡದ ಮಟ್ಟಿಗೆ ವಿಶಿಷ್ಟ ಎನ್ನಬಹುದಾದ ಇ-ಕನ್ನಡ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮ ಮಾರ್ಚ್ 5 ರಂದು ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ನಡೆಯಿತು.

    ಕಲಾವಿದರ ಮಾಹಿತಿ ಕೋಶ, ಪದ ಬಂಧ, ಇಮೇಜ್ ನಿಂದ ಟೆಕ್ಸ್ಟ್, ಟೆಕ್ಸ್ಟ್ ನಿಂದ ಸ್ಪೀಚ್, ಸ್ಪೀಚ್ ನಿಂದ ಟೆಕ್ಸ್ಟ್, ಇ-ಬುಕ್ಸ್ ಸೇರಿದಂತೆ ವಿವಿಧ ತಂತ್ರಾಂಶಗಳು, ಮೊಬೈಲ್ ಆಪ್ ಗಳು, ಜಾಲತಾಣಗಳ ಮಾಹಿತಿ ನೀಡುವ 36 ಮಳಿಗೆಗಳು ಅಲ್ಲಿದ್ದವು.

    ಉದ್ಘಾಟನಾ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ದಯಾನಂದ್ ಮಾತನಾಡಿ, ತಂತ್ರಜ್ಞಾನದಲ್ಲಿ ಭಾಷೆ ಬಳಕೆಯಾದಾಗ ಮಾತ್ರ ಆ ಭಾಷೆಗೆ ಭವಿಷ್ಯ ಇರುತ್ತದೆ. ಈ ಕಾರಣಕ್ಕಾಗಿ ಇದೆ ಮೊದಲ ಬಾರಿಗೆ ಇಲಾಖೆಯ ವತಿಯಿಂದ ಒಂದೇ ವೇದಿಕೆಯಲ್ಲಿ ಕನ್ನಡವನ್ನು ಕಟ್ಟುತ್ತಿರುವ ಮಾಹಿತಿ ತಂತ್ರಜ್ಞಾನ ಮಳಿಗೆಗಳಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

    ಹಿರಿಯ ಪತ್ರಕರ್ತ ರವಿ ಹೆಗಡೆ ಮಾತನಾಡಿ, ಯಾವುದೇ ಕ್ಷೇತ್ರದ ಬೆಳವಣಿಗೆಯಾಗಬೇಕಾದರೆ ಅದಕ್ಕೆ ಆರ್ಥಿಕ ಸಹಾಯ ಬೇಕಾಗುತ್ತದೆ. ಸಾಫ್ಟ್ ವೇರ್ ದುಡ್ಡು ಕೊಡಬೇಕೇ? ಬೇಡವೇ? ಸಾಫ್ಟ್ ವೇರ್ ಅಭಿವೃದ್ಧಿ ಪಡಿಸಿದ ತಂತ್ರಜ್ಞರಿಗೆ ಸಂಭಾವನೆ ಸಿಗುತ್ತಿದೆಯೇ ಎನ್ನುವ ಪ್ರಶ್ನೆಗಳಿಗೆ ಉತ್ತರವನ್ನು ನಾವು ಕಂಡುಕೊಳ್ಳಬೇಕಿದೆ. ಯುನಿಕೋಡ್ ಬಳಕೆ ಸರ್ಕಾರ  ಎಲ್ಲ ಇಲಾಖೆಗಳಲ್ಲಿ  ಜಾರಿಯಾಗಬೇಕು. ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ  ಇಲಾಖೆ ಕಾರ್ಯಕ್ರಮವನ್ನು ಆಯೋಜಿಸಿ ಒಂದೇ ವೇದಿಕೆಯಲ್ಲಿ ಅವಕಾಶ ನೀಡಿರುವುದು ಶ್ಲಾಘನೀಯ ಕಾರ್ಯ ಎಂದರು.

    ಈ ಸಂದರ್ಭದಲ್ಲಿ ಇ-ಜ್ಞಾನ ವೆಬ್ ಸೈಟ್ ರೂವಾರಿ ಟಿ.ಜಿ. ಶ್ರೀನಿಧಿ ಬರೆದ 29 ಪುಟಗಳ ‘ಕನ್ನಡ ತಂತ್ರಜ್ಞಾನ ನಿನ್ನೆ ಇಂದು ನಾಳೆ’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

    ಈ ಮಳಿಗೆಗಳಿತ್ತು: ಕಣಜ, ವಿಕಿಪೀಡಿಯ, ಭಾರತವಾಣಿ, ಸಂಚಿ ಫೌಂಡೇಶನ್, ಪದ ತಂತ್ರಾಂಶ, ಕನ್ನಡ ಒಸಿಆರ್, ಜಸ್ಟ್ ಕನ್ನಡ, ಡೈಲಿ ಹಂಟ್, ಕನ್ನಡ ಗೊತ್ತಿಲ್ಲ, ಕನ್ನಡ ಸಂಪದ, ಕಲಾಸ್ಟೇಜ್.ಕಾಂ ಸೇರಿದಂತೆ ಅನೇಕ ಮಳಿಗೆಗಳಿತ್ತು.

    ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಭಾಷೆಗೆ ಸಂಬಂಧಿಸಿದ ಮತ್ತು ಕನ್ನಡ ಭಾಷೆಯಲ್ಲಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಹಲವು ಕೆಲಸಗಳು ನಡೆದಿದ್ದು, ಇಂತಹ ಕೆಲಸಗಳನ್ನು ಎಲ್ಲರಿಗೂ ಪರಿಚಯಿಸುವ ‘ಇ-ಕನ್ನಡ ಪ್ರದರ್ಶನ ಹಾಗೂ ಸಂವಾದ’ ಕಾರ್ಯಕ್ರವವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ‘ಕಣಜ’ ಜ್ಞಾನಕೋಶ ಹಾಗೂ ಇ-ಜ್ಞಾನ ಟ್ರಸ್ಟ್ ಜಂಟಿಯಾಗಿ ಆಯೋಜಿಸಿತ್ತು.

     

  • ಭಾನುವಾರ ಬೆಂಗಳೂರಿನಲ್ಲಿ ಇ-ಕನ್ನಡ ಪ್ರದರ್ಶನ ಹಾಗೂ ಸಂವಾದ

    ಭಾನುವಾರ ಬೆಂಗಳೂರಿನಲ್ಲಿ ಇ-ಕನ್ನಡ ಪ್ರದರ್ಶನ ಹಾಗೂ ಸಂವಾದ

    ಬೆಂಗಳೂರು: ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಭಾಷೆಗೆ ಸಂಬಂಧಿಸಿದ ಮತ್ತು ಕನ್ನಡ ಭಾಷೆಯಲ್ಲಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಹಲವು ಕೆಲಸಗಳು ನಡೆದಿದ್ದು, ಇಂತಹ ಕೆಲಸಗಳನ್ನು ಎಲ್ಲರಿಗೂ ಪರಿಚಯಿಸುವ ‘ಇ-ಕನ್ನಡ ಪ್ರದರ್ಶನ ಹಾಗೂ ಸಂವಾದ’ ಕಾರ್ಯಕ್ರಮ 2017ರ ಮಾರ್ಚ್ 5ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ‘ಕಣಜ’ ಜ್ಞಾನಕೋಶ ಹಾಗೂ ಇಜ್ಞಾನ ಟ್ರಸ್ಟ್ ಜಂಟಿಯಾಗಿ ಆಯೋಜಿಸಿವೆ.

    ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡಕ್ಕೆ ಸಂಬಂಧಪಟ್ಟ ಹಲವು ಚಟುವಟಿಕೆಗಳು ನಡೆಯುತ್ತಿವೆಯಾದರೂ ಅವುಗಳ ಪರಿಚಯ ಎಲ್ಲರಿಗೂ ಇರುವುದಿಲ್ಲ. ಈ ಕೊರತೆಯನ್ನು ಕೊಂಚಮಟ್ಟಿಗಾದರೂ ನಿವಾರಿಸುವ ಉದ್ದೇಶದಿಂದ ಈ ಪ್ರಾತಿನಿಧಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

    ಕನ್ನಡದ ಮಟ್ಟಿಗೆ ವಿಶಿಷ್ಟ ಎನ್ನಬಹುದಾದ ಈ ಪ್ರದರ್ಶನವನ್ನು ಭಾನುವಾರ ಬೆಳಿಗ್ಗೆ 10 ಗಂಟೆಗೆ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಉದ್ಘಾಟಿಸಲಾಗುವುದು. ಮಧ್ಯಾಹ್ನ 2:30ರವರೆಗೆ ನಡೆಯಲಿರುವ ಪ್ರದರ್ಶನದಲ್ಲಿ ಕನ್ನಡದ ವಿವಿಧ ತಂತ್ರಾಂಶಗಳು, ಮೊಬೈಲ್ ಆಪ್‍ಗಳು, ಜಾಲತಾಣಗಳು ಹಾಗೂ ತಂತ್ರಜ್ಞ ಸಮುದಾಯಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

    ಈ ಪ್ರದರ್ಶನವನ್ನು ವೀಕ್ಷಿಸಲು ಆಗಮಿಸುವ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿರಲಿದ್ದು ಅವರು ಯಾವುದೇ ನೋಂದಣಿ ಮಾಡಿಕೊಳ್ಳುವ ಅಗತ್ಯವಿಲ್ಲ. ಪ್ರದರ್ಶನದ ಅವಧಿಯಲ್ಲೇ ಕನ್ನಡ ಮತ್ತು ತಂತ್ರಜ್ಞಾನ ಕುರಿತ ಭಾಷಣ-ಸಂವಾದ ಕಾರ್ಯಕ್ರಮಗಳೂ ನಡೆಯಲಿವೆ.

    ಆಯೋಜಕರ ಕುರಿತು:
    * ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ವಹಿಸುತ್ತಿರುವ ‘ಕಣಜ’ ಅಂತರಜಾಲ ಕನ್ನಡ ಜ್ಞಾನಕೋಶ ಪ್ರಪಂಚದ ಎಲ್ಲ ಪ್ರಕಾರಗಳ ಮಾಹಿತಿಯನ್ನೂ ಕನ್ನಡ ಭಾಷೆಯಲ್ಲಿ ಮುಕ್ತವಾಗಿ ಒದಗಿಸುವ ಉದ್ದೇಶ ಹೊಂದಿದೆ. ಪುಸ್ತಕ, ಪತ್ರಿಕೆ, ಲೇಖನಗಳು, ಅಂಕಣ ಬರಹ, ನಿಘಂಟು, ಚಿತ್ರಗಳು – ಹೀಗೆ ವಿವಿಧ ರೂಪಗಳ ಕನ್ನಡ ಮಾಹಿತಿಯನ್ನು ಈ ತಾಣ ಕನ್ನಡದ ಓದುಗರಿಗೆ ಒದಗಿಸುತ್ತಿದೆ.

    * ಇಜ್ಞಾನ ಟ್ರಸ್ಟ್ ಸ್ವಯಂಸೇವಾ ಸಂಸ್ಥೆ ‘ಇಜ್ಞಾನ ಡಾಟ್ ಕಾಮ್’ ಜಾಲತಾಣವನ್ನು ನಿರ್ವಹಿಸುತ್ತಿದೆ. ಪುಸ್ತಕ, ಲೇಖನ, ಅಂಕಣಬರಹಗಳ ಮೂಲಕ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದ ಮಾಹಿತಿಯನ್ನು 2007ರಿಂದ ಕನ್ನಡದ ಓದುಗರಿಗೆ ನೀಡುತ್ತ ಬಂದಿರುವ ಹೆಗ್ಗಳಿಕೆ ಈ ತಾಣದ್ದು. ಜಾಲತಾಣದ ಜೊತೆಗೆ ಮೊಬೈಲ್ ಆಪ್‍ಗಳ ಮೂಲಕವೂ ಈ ಮಾಹಿತಿ ಓದುಗರನ್ನು ತಲುಪುತ್ತಿದೆ.