Tag: E Hospital

  • ಚಿಕ್ಕಬಳ್ಳಾಪುರದಲ್ಲಿ ರಾಜ್ಯದ ಪ್ರಪ್ರಥಮ ಕಾಗದರಹಿತ ಇ ಆಸ್ಪತ್ರೆ ಪ್ರಾಯೋಗಿಕ ಕಾರ್ಯಕ್ರಮಕ್ಕೆ ಚಾಲನೆ

    ಚಿಕ್ಕಬಳ್ಳಾಪುರದಲ್ಲಿ ರಾಜ್ಯದ ಪ್ರಪ್ರಥಮ ಕಾಗದರಹಿತ ಇ ಆಸ್ಪತ್ರೆ ಪ್ರಾಯೋಗಿಕ ಕಾರ್ಯಕ್ರಮಕ್ಕೆ ಚಾಲನೆ

    ಚಿಕ್ಕಬಳ್ಳಾಪುರ: ಸರ್ಕಾರಿ ಆಸ್ಪತ್ರೆಗಳು ತಂತ್ರಜ್ಞಾನ ಬಳಕೆ ಮಾಡಿಕೊಳ್ಳುವುದರ ಮೂಲಕ ಪಾರದರ್ಶಕ ಆಡಳಿತದ ಸೇವೆಯ ಜೊತೆ ಜೊತೆಗೆ ಕಾಗದ ರಹಿತ ಪರಿಸರ ಸ್ನೇಹಿಯಾಗಬೇಕು ಎಂಬುದು ಸರ್ಕಾರದ ಮಹತ್ತರವಾದ ಆಶಯವಾಗಿದೆ. ಸರ್ಕಾರದ ಈ ನಿಲುವಿಗೆ ತಕ್ಕಂತೆ ಇಂದು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ರಾಜ್ಯದ ಪ್ರಪ್ರಥಮ ಇ ಆಸ್ಪತ್ರೆಗೆ ಚಾಲನೆ ಕೊಡಲಾಗಿದೆ.

    ಸರ್ಕಾರಿ ಆಸ್ಪತ್ರೆಗಳಲ್ಲಿ ಕಾಗದರಹಿತ ಇ ಆಸ್ಪತ್ರೆ ಸೌಲಭ್ಯ ಜಾರಿ ಮಾಡುವುದಕ್ಕೆ ಸರ್ಕಾರ ಮುಂದಾಗಿದ್ದು, ಇಂದು ಪ್ರಾಯೋಗಿಕವಾಗಿ ರಾಜ್ಯದಲ್ಲಿ ಪ್ರಪ್ರಥಮವಾಗಿ ಆರೋಗ್ಯ ಸಚಿವ ಸುಧಾಕರ್ ತವರೂರು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇ ಆಸ್ಪತ್ರೆ ಜಾರಿಯಾಗಿದೆ.

    ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ಕಾಗದರಹಿತ ಇ ಆಸ್ಪತ್ರೆ ಸೌಲಭ್ಯ ತೆರೆಯಲು ರಾಜ್ಯ ಸರ್ಕಾರ ಮುಂದಾಗುತ್ತಿದೆ. ಹೀಗಾಗಿ ಆರೋಗ್ಯ ಸಚಿವರ ತವರು ಜಿಲ್ಲೆಯಲ್ಲಿ ಇಂದಿನಿಂದ ಇ ಆಸ್ಪತ್ರೆ ವ್ಯವಸ್ಥೆ ಆರಂಭವಾಗಿದ್ದು, ಚಿಕ್ಕಬಳ್ಳಾಪುರದ ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ಆರ್ ಲತಾ ಚಾಲನೆ ನೀಡಿದರು. ಇದರೊಂದಿಗೆ ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ನಗರ ಆರೋಗ್ಯ ಕೇಂದ್ರ. ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಇಂದಿನಿಂದ ಇ ಆಸ್ಪತ್ರೆ ಕಾರ್ಯಕ್ರಮ ಆರಂಭವಾಗಿದೆ.

    ಸರ್ಕಾರಿ ಆಸ್ಪತ್ರೆಗೆ ಬರುವ ಎಲ್ಲಾ ರೋಗಿಗಳ ಸಂಪೂರ್ಣ ಮಾಹಿತಿಯನ್ನು ಒಂದೇ ಕಡೆ ಗಣೀಕರಣಗೊಳಿಸುವುದು ಇ ಆಸ್ಪತ್ರೆಯ ಮುಖ್ಯ ಉದ್ದೇಶವಾಗಿದ್ದು, ಇದರಿಂದ ಕಾಗದರಹಿತ ಮಾಡಿ ಪರಿಸರಸ್ನೇಹಿಯಾಗಿ ಸರ್ಕಾರಿ ಆಸ್ಪತ್ರೆಗಳನ್ನ ಮಾರ್ಪಾಡು ಮಾಡುವ ಯೋಜನೆ ರೂಪಿಸಲಾಗಿದೆ.

    ಇ ಆಸ್ಪತ್ರೆ ಸೇವೆಯಿಂದ ಆಸ್ಪತ್ರೆಗೆ ಬರೋ ರೋಗಿಯ ಸಂಪೂರ್ಣ ಮಾಹಿತಿಯನ್ನು ಗಣೀಕರಣ ಮಾಡಿ ಬಾರ್ ಕೋಡ್ ಮುದ್ರೆ ಇರುವ ಪುಸ್ತಕ ನೀಡಲಾಗುವುದು. ಇದರೊಂದಿಗೆ ಆಸ್ಪತ್ರೆಗೆ ಬರುವ ರೋಗಿಯ ಮೊಬೈಲ್ ಸಂಖ್ಯೆ ಸಹ ನಮೂದಿಸಲಾಗುವುದು. ವೈದ್ಯರ ಪರೀಕ್ಷೆ ನಂತರ ಪರೀಕ್ಷಾ ವರದಿಗಳು ಹಾಗೂ ಔಷಧಿ ಮಾಹಿತಿ ಎಲ್ಲವೂ ಗಣಕೀಕರಣ ಮಾಡಲಾಗುವುದು. ಇದರಿಂದಾಗಿ ವೈದ್ಯರಿಗೆ ಸಕಾಲಕ್ಕೆ ರೋಗಿಯ ಪೂರ್ವಪರ ಮಾಹಿತಿ ಪಡೆದುಕೊಂಡು ಸೂಕ್ತ ಚಿಕಿತ್ಸೆ ನೀಡಲು ನೆರವಾಗಲಿದೆ ಎಂದು ಇ ಆಸ್ಪತ್ರೆಯ ಬಗ್ಗೆ ವೈದ್ಯರು ಮಾಹಿತಿ ನೀಡಿದರು.