Tag: E.D enquiry

  • ಅಕ್ರಮ ಮರಳುಗಾರಿಕೆಯಲ್ಲಿ ಸೋದರಳಿಯ ಬಂಧನಕ್ಕೆ ಪಂಜಾಬ್ ಸಿಎಂ ಪ್ರತಿಕ್ರಿಯೆ

    ಅಕ್ರಮ ಮರಳುಗಾರಿಕೆಯಲ್ಲಿ ಸೋದರಳಿಯ ಬಂಧನಕ್ಕೆ ಪಂಜಾಬ್ ಸಿಎಂ ಪ್ರತಿಕ್ರಿಯೆ

    ಚಂಡೀಗಢ: ಅಕ್ರಮ ಮರಳುಗಾರಿಕೆಯಲ್ಲಿ ತನ್ನ ಸೋದರಳಿಯನನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಬಂಧಿಸಿರುವ ಕುರಿತು ಪಂಜಾಬ್ ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ. ಕಾನೂನು ತನ್ನ ಕೆಲಸವನ್ನು ಮಾಡುವುದಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

    ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಿರುವ ಸಂದರ್ಭದಲ್ಲೇ, ಅಕ್ರಮ ಮರಳು ಗಣಿಗಾರಿಕೆ ಪ್ರಕರಣದಲ್ಲಿ ತಮ್ಮ ಸೋದರಳಿಯ ಭೂಪೇಂದ್ರ ಸಿಂಗ್ ಹನಿ ಅವರನ್ನು ಬಂಧಿಸಿರುವ ಕುರಿತು ಪ್ರತಿಕ್ರಿಯಿಸಿದ್ದಾರೆ. ಕಾನೂನು ತನ್ನ ಕೆಲಸವನ್ನು ಮಾಡಿದೆ. ಅದಕ್ಕೆ ನಾವು ಯಾವುದೇ ಆಕ್ಷೇಪಣೆ ಮಾಡಲ್ಲ ಎಂದಿದ್ದಾರೆ. ಇದನ್ನೂ ಓದಿ: ಹಿಜಬ್ ವಿವಾದ- ಹೈಕೋರ್ಟ್ ತೀರ್ಪಿನ ನಂತರ ಕ್ರಮ: ಬಿಸಿ ನಾಗೇಶ್

    ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಚನ್ನಿ ಅವರ ಸೋದರಳಿಯನ ಬಂಧನದ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಇದೊಂದು ರಾಜಕೀಯ ಒತ್ತಡ ಸೃಷ್ಟಿಸಲು ಅವರನ್ನು ಬಂಧಿಸಲಾಗಿದೆ ಎಂದು ಕಿಡಿಕಾರಿದ್ದಾರೆ.

    ಬಂಧನದ ಬಗ್ಗೆ ಪ್ರತಿಕ್ರಿಯಿಸಿರುವ ಪಂಜಾಬ್ ಲೋಕ ಕಾಂಗ್ರೆಸ್ ಸಂಸ್ಥಾಪಕ ಕ್ಯಾಪ್ಟನ್ ಅಮರೀಂದರ್ ಸಿಂಗ್, ತನಿಖಾ ಸಂಸ್ಥೆ ತನ್ನ ಕೆಲಸವನ್ನು ಮಾಡಿದೆ. ಇದಕ್ಕೆ ರಾಜಕೀಯ ಪಕ್ಷವನ್ನು ಏಕೆ ದೂಷಿಸಬೇಕು ಎಂದು ಪ್ರಶ್ನಿಸಿದ್ದಾರೆ.

    ಅಕ್ರಮ ಮರಳು ಗಣಿಗಾರಿಕೆ ಪ್ರಕರಣದಲ್ಲಿ ಭೂಪೇಂದ್ರ ಸಿಂಗ್ ಹನಿ ಅವರನ್ನು ಇ.ಡಿ. ವಿಚಾರಣೆಗೆ ಒಳಪಡಿಸಿತ್ತು. ನಂತರ ಜಾರಿ ನಿರ್ದೇಶನಾಲಯ ಗುರುವಾರ ತಡರಾತ್ರಿ ಬಂಧಿಸಿದೆ. ಮನಿ ಲ್ಯಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‍ಎ)ಯ ನಿಬಂಧನೆಗಳ ಅಡಿಯಲ್ಲಿ ಅವರನ್ನು ಜಲಂಧರ್‍ನಿಂದ ಬಂಧಿಸಲಾಗಿದೆ. ಇದನ್ನೂ ಓದಿ: ನಾಳೆಯಿಂದ ಥಿಯೇಟರ್‌ ಹೌಸ್‌ ಫುಲ್‌- ಸರ್ಕಾರದಿಂದ ಅನುಮತಿ

    ಪಂಜಾಬ್‍ನಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ಕಳೆದ ತಿಂಗಳು ಭೋಪೇಂದ್ರ ಸಿಂಗ್ ಹನಿ ಅವರ ನಿವಾಸ ಹಾಗೂ ಕಚೇರಿ ಮೇಲೆ ಇ.ಡಿ. ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ 8 ಕೋಟಿ ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಆಸ್ತಿ ವಹಿವಾಟಿಗೆ ಸಂಬಂಧಿಸಿದ ದಾಖಲೆಗಳು, ಮೊಬೈಲ್ ಫೋನ್‍ಗಳು, 21 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನ ಮತ್ತು 12 ಲಕ್ಷ ಮೌಲ್ಯದ ರೋಲೆಕ್ಸ್ ವಾಚ್ ವಶಪಡಿಸಿಕೊಳ್ಳಲಾಗಿದೆ.

  • ಐಎಂಎ ವಂಚನೆ ಪ್ರಕರಣ- ಇಂದು ಇಡಿ ಅಧಿಕಾರಿಗಳಿಂದ ಜಮೀರ್ ವಿಚಾರಣೆ

    ಐಎಂಎ ವಂಚನೆ ಪ್ರಕರಣ- ಇಂದು ಇಡಿ ಅಧಿಕಾರಿಗಳಿಂದ ಜಮೀರ್ ವಿಚಾರಣೆ

    ಬೆಂಗಳೂರು: ಬಹುಕೋಟಿ ಐಎಂಎ ಜ್ಯುವೆಲ್ಸ್ ವಂಚನೆ ಪ್ರಕರಣ ಸಂಬಂಧ ಇಂದು ಸಚಿವ ಜಮೀರ್ ಅಹ್ಮದ್ ಖಾನ್ ಅವರು ಜಾರಿ ನಿರ್ದೇಶನಾಲಯ(ಇಡಿ)ದ ಮುಂದೆ ವಿಚಾರಣೆಗೆ ಹಾಜರಾಗಬೇಕಿದೆ.

    ರಿಚ್ಮಂಡ್ ಟೌನ್‍ನ ಸರ್ಫೆಂಟೈನ್ ರಸ್ತೆಯಲ್ಲಿರುವ ನಿವೇಶನವನ್ನ ಮನ್ಸೂರ್ ಖಾನ್‍ಗೆ ಸಚಿವ ಜಮೀರ್ ಮಾರಾಟ ಮಾಡಿದ್ದರು. ಈ ಬಗ್ಗೆ ವಿವರಣೆಗೆ ಹಾಜಾರಾಗುವಂತೆ ಇ.ಡಿ ಅಧಿಕಾರಿಗಳು ಜಮೀರ್ ಅವರಿಗೆ  ನೋಟೀಸ್ ನೀಡಿದ್ದರು. ಜೂನ್ 5ರಂದು ಖುದ್ದು ಹಾಜರಾಗಿ ಐಎಂಎ ಹಗರಣ ಆರೋಪಿ ಮನ್ಸೂರ್ ಖಾನ್ ಜೊತೆ ನಡೆಸಿದ ನಿವೇಶನ ಮಾರಾಟ ಸಂಬಂಧ ಮಾಹಿತಿ ನೀಡುವಂತೆ ನೋಟಿಸ್ ಜಾರಿಗೊಳಿಸಲಾಗಿತ್ತು.

    ಕಳೆದ ವಾರ ಸಚಿವರ ಸೆವೆನ್ ಮಿನಿಸ್ಟರ್ಸ್ ಕ್ವಾಟ್ರಸ್‍ನ ಸರ್ಕಾರಿ ಮನೆಗೆ ಹೋಗಿ ಸಚಿವರ ಕೈಗೆ ಇಡಿ ಅಧಿಕಾರಿಗಳು ನೋಟಿಸ್ ಕೊಟ್ಟಿದ್ದರು. ನೋಟಿಸ್ ತಲುಪಿದ ನಂತರ ಪ್ರತಿಕ್ರಿಯೆ ನೀಡಿದ್ದ ಜಮೀರ್ ಅವರು, ಕಾನೂನು ಪ್ರಕಾರವಾಗಿ ನಿವೇಶನ ಮಾರಾಟ ಮಾಡಿದ್ದೇನೆ. ಇಡಿ ವಿಚಾರಣೆಗೆ ಹಾಜರಾಗಿ ಎಲ್ಲಾ ದಾಖಲಾತಿಗಳನ್ನ ನೀಡಿ ವಿವರಣೆ ನೀಡುತ್ತೇನೆ ಎಂದಿದ್ದರು.

    ನೋಟೀಸ್ ನೀಡಿರುವ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಶಾಂತಿನಗರದ ಇಡಿ ಕಚೇರಿಗೆ ಸಚಿವರು ಹಾಜರಾಗಲಿದ್ದು, ಅಧಿಕಾರಿಗಳು ನಡೆಸುವ ವಿಚಾರಣೆ ಎದುರಿಸಲಿದ್ದಾರೆ ಎನ್ನಲಾಗಿದೆ.