Tag: Dynasty

  • ಹಿಂದಿದ್ದ ಭ್ರಷ್ಟಾಚಾರ, ವಂಶ ರಾಜಕಾರಣ, ಸಾರ್ವಜನಿಕರ ಹಣ ಲೂಟಿ ಈಗಿಲ್ಲ: ಮೋದಿ

    ಹಿಂದಿದ್ದ ಭ್ರಷ್ಟಾಚಾರ, ವಂಶ ರಾಜಕಾರಣ, ಸಾರ್ವಜನಿಕರ ಹಣ ಲೂಟಿ ಈಗಿಲ್ಲ: ಮೋದಿ

    – ಫ್ರಾನ್ಸ್ ಮಿನಿ ಭಾರತದಂತೆ ಕಾಣುತ್ತಿದೆ
    – ಮೋದಿಯನ್ನ ಅದ್ಧೂರಿಯಾಗಿ ಸ್ವಾಗತಿಸಿದ ಮುಸ್ಲಿಮರು

    ಪ್ಯಾರಿಸ್: ಭಾರತದಲ್ಲಿ ಹಿಂದಿದ್ದ ಭ್ರಷ್ಟಾಚಾರ, ವಂಶ ರಾಜಕಾರಣ, ಸಾರ್ವಜನಿಕರ ಹಣ ಲೂಟಿ ಹಾಗೂ ಭಯೋತ್ಪಾದನೆ ಈಗ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಫ್ರಾನ್ಸ್ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ ಅವರು ಪ್ಯಾರಿಸ್‍ನಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿ, ನಾನು ಫುಟ್ಬಾಲ್ ಪ್ರಿಯರ ರಾಷ್ಟ್ರಕ್ಕೆ ಬಂದಿದ್ದೇನೆ. ಫುಟ್ಬಾಲ್‍ನಲ್ಲಿ ಪ್ರತಿ ಗೋಲ್‍ನ ಮಹತ್ವ ನಿಮಗೆ ಗೊತ್ತಿದೆ. ಅದರಂತೆ ಅಸಾಧ್ಯವೆಂದು ಪರಿಗಣಿಸಲಾಗಿದ್ದ ಗುರಿಗಳನ್ನು ಈಡೇರಿಸಲು ನಮ್ಮ ಸರ್ಕಾರ ಮುಂದಾಗಿದ್ದೇವೆ. ಹೊಸ ಸರ್ಕಾರ ಅಧಿಕಾರಕ್ಕೆ ಬಂದ 75 ದಿನಗಳಲ್ಲಿ ನಾವು ಅನೇಕ ಧೃಡ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.

    ಭಾರತವು ಈಗ ಅಭಿವೃದ್ಧಿಯ ಕಡೆಗೆ ಸಾಗುತ್ತಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಸಿಕ್ಕ ಜನಾದೇಶವು ಕೇವಲ ಸರ್ಕಾರ ರಚನೆಗಾಗಿ ಅಲ್ಲ. ಅದು ಭವ್ಯ ಭಾರತ ನಿರ್ಮಾಣಕ್ಕೆ ಸಿಕ್ಕ ಉತ್ತಮ ಅವಕಾಶವಾಗಿದೆ ಎಂದು ಹೇಳಿದರು.

    1950 ಹಾಗೂ 1966ರಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ಅಪಘಾತ ನೆನೆದ ಪ್ರಧಾನಿ ಮೋದಿ, ಭಾರತೀಯ ಪರಮಾಣು ಭೌತಶಾಸ್ತ್ರಜ್ಞ ಹೋಮಿ ಜಹಾಂಗೀರ್ ಬಾಬಾ ಅವರು ಸೇರಿದಂತೆ ವಿಮಾನ ಅಪಘಾತದಲ್ಲಿ ಮೃತಪಟ್ಟ ಎಲ್ಲರಿಗೂ ನಾನು ವಂದಿಸುತ್ತೇನೆ ಎಂದರು.

    ಪ್ಯಾರಿಸ್‍ನ ಸಾಂಸ್ಕೃತಿಕ ಕ್ಯಾಲೆಂಡರ್ ನಲ್ಲಿ ಗಣೇಶ ಮಹೋತ್ಸವ ಒಂದು ಪ್ರಮುಖ ಭಾಗವಾಗಿದೆ ಅಂತ ಕೆಲವರು ತಿಳಿಸಿದರು. ಇಲ್ಲಿನ ಸಂಸ್ಕೃತಿ, ಆಚಾರ, ವಿಚಾರ ನೋಡಿದರೆ ಪ್ಯಾರಿಸ್ ಮಿನಿ ಇಂಡಿಯಾದಂತೆ ಕಾಣುತ್ತದೆ. ಪ್ಯಾರಿಸ್‍ನಲ್ಲಿ ಗಣಪತಿ ಬಪ್ಪಾ ಮೋರಿಯಾ ಘೋಷಣೆ ಕೇಳಿಬರಲಿದೆ ಎಂದು ಹೇಳಿದರು.

    ಫ್ರಾನ್ಸ್ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಪ್ಯಾರಿಸ್‍ನಲ್ಲಿಯು ಯುನೆಸ್ಕೋ ಕೇಂದ್ರ ಕಚೇರಿಗೆ ಇಂದು ಭೇಟಿ ನೀಡಿದರು. ಯುನೆಸ್ಕೋ ಮಹಾ ನಿರ್ದೇಶಕಿ ಅಡ್ರೆ ಅಜೌಲೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಾರತೀಯ ಸಂಪ್ರದಾಯದಂತೆ ಅದ್ಧೂರಿಯಾಗಿ ಸ್ವಾಗತಿಸಿದರು. ಇದಕ್ಕೂ ಮುನ್ನ (ಗುರುವಾರ)  ಪ್ಯಾರಿಸ್ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಅವರು, ಆಗಮಿಸುತ್ತಿದ್ದಂತೆ ಅಲ್ಲಿ ನೆಲೆಸಿರುವ ಗುಜರಾತ್‍ನ ವೊಹ್ರಾ ಮುಸ್ಲಿಮರು ತ್ರಿವರ್ಣ ಧ್ವಜ ಹಿಡಿದು, ‘ಭಾರತ್ ಮಾತಾ ಕೀ ಜೈ’ ಘೋಷಣೆ ಕೂಗಿ ಅದ್ಧೂರಿಯಾಗಿ ಸ್ವಾಗತ ಕೋರಿದರು.