Tag: Duty

  • ಕೈಯಲ್ಲಿ ಮಗು ಹಿಡಿದು ಕರ್ತವ್ಯಕ್ಕೆ ಹಾಜರಾದ ಪೊಲೀಸ್

    ಕೈಯಲ್ಲಿ ಮಗು ಹಿಡಿದು ಕರ್ತವ್ಯಕ್ಕೆ ಹಾಜರಾದ ಪೊಲೀಸ್

    – ಉರಿ ಬಿಸಿಲಿನಲ್ಲಿ ಕರ್ತವ್ಯ ನಿರ್ವಹಿಸಿದ ಮಹಿಳೆ

    ಚಂಡೀಗಢ: ಪುಟ್ಟ ಕಂದಮ್ಮನನ್ನು ಭುಜದ ಮೇಲೆ ಮಲಗಿಸಿಕೊಂಡು ರಸ್ತೆಯಲ್ಲಿ ನಿಂತು ಟ್ರಾಫಿಕ್ ನಿಯಂತ್ರಣ ಮಾಡಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದರ ಜೊತೆಗೆ ಚರ್ಚೆ ಆಗುತ್ತಿದೆ.

    ವೀಡಿಯೋದಲ್ಲಿ ಏನಿದೆ
    ಟ್ರಾಫಿಕ್ ಪೊಲೀಸ್ ಪ್ರಿಯಾಂಕ ಅವರು ಚಂಡೀಗಢ ಸೆಕ್ಟರ್ 15/23ರ ಸ್ತೆಯಲ್ಲಿ ತಮ್ಮ ಕಂದಮ್ಮನನ್ನು ಹೆಗಲೆ ಮೇಲೆ ಮಲಗಿಸಿಕೊಂಡು ಸಂಚಾರ ನಿಂಯತ್ರಣವನ್ನು ಮಾಡುತ್ತಿದ್ದರು. ಉರಿ ಬಿಸಿಲಿನಲ್ಲಿ ಒಂದು ಕೈಯಲ್ಲಿ ಮಗು ಹಿಡಿದುಕೊಂಡು ಕೆಲಸ ಮಾಡಲು ಪರದಾಡಿದ್ದಾರೆ. ಅಲ್ಲೇ ಸುತ್ತ ಮುತ್ತ ಇದ್ದ ಸ್ಥಳೀಯರು ಈ ವೀಡಿಯೋವನ್ನು ಚಿತ್ರೀಕರಿಸಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಈ ವೀಡಿಯೋಗೆ ಭಾರೀ ಲೈಕ್, ರಿಟ್ವೀಟ್ ಮತ್ತು ಕಾಮೆಂಟ್ ಪಡೆದುಕೊಂಡಿದೆ.

    ಈ ವೀಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಟ್ರಾಫಿಕ್ ಪೊಲೀಸ್ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಹಲವು ಮಹಿಳೆಯರಿಗೆ ಇದು ಸ್ಪೂರ್ತಿದಾಯಕವಾಗಿದೆ ಎಂದು ಹೇಳಿದ್ದಾರೆ. ಇನ್ನು ಹಲವರು ಮಗುವನ್ನು ಬಿಸಿಲಿನಲ್ಲಿ ಹಿಡಿದು ಮಹಿಳೆ ಕೆಲಸ ಮಾಡುತ್ತಿದ್ದಾರೆ ಎಂದು ಮೇಲಾಧಿಕಾರಿಯ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ.

  • 18 ತಿಂಗಳ ಹಿಂದೆಯಷ್ಟೇ ಭಾರತೀಯ ಸೇನೆಗೆ ಸೇರಿದ್ದ ಯೋಧ ನಿಧನ

    18 ತಿಂಗಳ ಹಿಂದೆಯಷ್ಟೇ ಭಾರತೀಯ ಸೇನೆಗೆ ಸೇರಿದ್ದ ಯೋಧ ನಿಧನ

    ಬೆಳಗಾವಿ/ಚಿಕ್ಕೋಡಿ: ಸೇನೆಯಲ್ಲಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿಯ ಗ್ರಾಮದ ಯೋಧರೊಬ್ಬರು ನಿಧನರಾಗಿದ್ದಾರೆ.

    ಕರೋಶಿಯ ಗ್ರಾಮದ ನಿವಾಸಿ ಅನಿಲ ಶಿವಾಜಿ ಶಿಂಗಾಯಿ (23) ಅವರು ದೆಹಲಿಯಲ್ಲಿ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ನಿಧನರಾಗಿದ್ದಾರೆ. ಸಾವಿಗೆ ಇನ್ನೂ ನಿಖರವಾದ ಕಾರಣ ತಿಳಿದುಬಂದಿಲ್ಲ.

    ಅನಿಲ ಶಿವಾಜಿ ಶಿಂಗಾಯಿ 18 ತಿಂಗಳ ಹಿಂದೆಯಷ್ಟೇ ಸೇನೆಗೆ ಸೆರ್ಪಡೆಯಾಗಿದ್ದರು. ಆದರೆ ಲಾಕ್‍ಡೌನ್ ಇದ್ದ ಪರಿಣಾಮ ಯೋಧ ಊರಲ್ಲಿದ್ದರು. ಕಳೆದ ಒಂದು ತಿಂಗಳ ಹಿಂದೆ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ ಇದ್ದಕ್ಕಿದ್ದಂತೆ ಯೋಧ ಸೇವೆಯಲ್ಲಿ ಇದ್ದಾಗಲೇ ನಿಧನರಾಗಿದ್ದಾರೆ.

    ಸಾವಿನ ಸುದ್ದಿ ತಿಳಿಯುತ್ತಿದಂತೆ ಕುಟುಂಬಸ್ಥರು ದೆಹಲಿಗೆ ದೌಡಾಯಿಸಿದ್ದಾರೆ. ಮುಂದಿನ ಎರಡು ದಿನಗಳಲ್ಲಿ ಕರೋಶಿಯತ್ತ ಯೋಧನ ಪಾರ್ಥಿವ ಶರೀರ ಬರಲಿದೆ ಎಂದು ಹೇಳಲಾಗಿದೆ.

  • ಕೊರೊನಾ ಡ್ಯೂಟಿ ಮಾಡಿ – ಸೋಂಕಿತ ವೈದ್ಯನಿಗೆ ಅಧಿಕಾರಿಗಳ ಸೂಚನೆ

    ಕೊರೊನಾ ಡ್ಯೂಟಿ ಮಾಡಿ – ಸೋಂಕಿತ ವೈದ್ಯನಿಗೆ ಅಧಿಕಾರಿಗಳ ಸೂಚನೆ

    – ಆರೋಗ್ಯ ಇಲಾಖೆಯಿಂದ ಮತ್ತೊಂದು ಎಡವಟ್ಟು

    ಬೆಂಗಳೂರು: ಬಿಬಿಎಂಪಿ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದು, ಕೊರೊನಾ ಸೋಂಕಿತ ವೈದ್ಯರಿಗೆ ಡ್ಯೂಟಿ ಮಾಡಿ ಎಂದು ಸೂಚಿಸಿದ್ದಾರೆ

    ಮಿನಾಜ್ ನಗರದ ನಿವಾಸಿ ಹನುಮಂತನಗರ ಡಿಸ್ಪೆನ್ಸರಿ ಬಿಬಿಎಂಪಿ ಆಸ್ಪತ್ರೆಯ ಗುತ್ತಿಗೆ ಡಾಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಇವರಿಗೆ ಕೊರೊನಾ ಪಾಸಿಟಿವ್‌ ಬಂದಿದೆ. ಪಾಸಿಟಿವ್ ಇರುವವರು ಹೋಂ ಐಸೋಲೇಷನ್ ಇರಬೇಕು. ಇಲ್ಲ ಕೋವಿಡ್ ಕೇರ್ ಸೆಂಟರ್ ನಲ್ಲಿರಬೇಕು. ಆದರೆ ಅವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

    ಕೊರೊನಾ ಸೋಂಕಿತ ವೈದ್ಯ ಕೆಲಸ ಮಾಡಲು ಬಂದಿರುವುದರಿಂದ ಅಲ್ಲಿ ಸಿಬ್ಬಂದಿ ಕೆಲಸ ಮಾಡಲು ಹಿಂಜರಿಯುತ್ತಿದ್ದಾರೆ. ಜೊತೆಗೆ ನೀವು ಮನೆಗೆ ಹೋಗಿ ಹೋಂ ಐಸೊಲೇಷನ್ ಆಗಿ ಎಂದು ಪಟ್ಟುಹಿಡಿದಿದ್ದಾರೆ. ಆದರೆ ಸೋಂಕಿತ ವೈದ್ಯ ಮಾತ್ರ ಹಿರಿಯ ಅಧಿಕಾರಿಗಳು ನನಗೆ ಡ್ಯೂಟಿ ಮಾಡಲು ಸೂಚಿಸಿದ್ದಾರೆ. ಬೇಕಿದ್ದರೆ ನೀವು ಮನೆಗೆ ಹೋಗಿ ಎಂದು ಮೊಂಡುವಾದ ಮಾಡುತ್ತಿದ್ದಾರೆ.

  • ಹೋಂ ಕ್ವಾರಂಟೈನ್‍ಲ್ಲಿದ್ರೂ ಕರ್ತವ್ಯ ನಿಭಾಯಿಸಿದ ಸಚಿವ ಸುಧಾಕರ್

    ಹೋಂ ಕ್ವಾರಂಟೈನ್‍ಲ್ಲಿದ್ರೂ ಕರ್ತವ್ಯ ನಿಭಾಯಿಸಿದ ಸಚಿವ ಸುಧಾಕರ್

    ಬೆಂಗಳೂರು: ಹೋಂ ಕ್ವಾರಂಟೈನ್‍ಲ್ಲಿದ್ದರೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಅವರು ಕೊರೊನಾ ನಿಯಂತ್ರಣ ಸಂಬಂಧ ಕರ್ತವ್ಯ ಮಾಡುತ್ತಿದ್ದಾರೆ.

    ಸುಧಾಕರ್ ಅವರ ತಂದೆ, ಪತ್ನಿ ಹಾಗೂ ಮಗಳಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಜೊತೆಗೆ ಅವರ ಮನೆಕೆಲಸದವರಿಗೂ ಸೋಂಕು ಇರುವುದು ಖಚಿತವಾಗಿತ್ತು. ಇವರೆಲ್ಲರ ಜೊತೆ ಪ್ರಾಥಮಿಕ ಸಂಪರ್ಕದಲ್ಲಿ ಇದ್ದ ಸುಧಾಕರ್ ಅವರು ಸದ್ಯ ಹೋಂ ಕ್ವಾರಂಟೈನ್‍ನಲ್ಲಿ ಇದ್ದಾರೆ.

    ಹೋಂ ಕ್ವಾರಂಟೈನ್ ಅದರೂ ತನ್ನ ಕೊರೊನಾ ವಿರುದ್ಧದ ಹೋರಾಟ ನಿಲ್ಲಿಸದ ಸುಧಾಕರ್, ಸಾಮಾಜಿಕ ಜಾಲತಾಣವನ್ನು ಉಪಯೋಗಿಸಿಕೊಂಡು ಮನೆಯಲ್ಲೇ ಕುಳಿತು ಕೆಲಸ ಮಾಡುತ್ತಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ಗೃಹ ಕ್ವಾರಂಟೈನ್‍ನಲ್ಲಿರುವ ನಾನು ಇಂದು ಮನೆಯಿಂದಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತ ಮಂಡಳಿ ಸಭೆಯಲ್ಲಿ ಪಾಲ್ಗೊಂಡಿದ್ದೆ. ಅನೇಕ ಮಹತ್ವಪೂರ್ಣ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು ಎಂದು ತಿಳಿಸಿದ್ದಾರೆ.

    ಜೊತೆಗೆ ಹಿರಿಯ ಅಧಿಕಾರಿಗಳು ಮತ್ತು ವಿಕ್ಟೋರಿಯಾ, ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆ, ಬೌರಿಂಗ್ ಮೊದಲಾದ ಕೋವಿಡ್ ಆಸ್ಪತ್ರೆಗಳ ನಿರ್ದೇಶಕರ ಜೊತೆಗೆ ಮಂಗಳವಾರ ನನ್ನ ಮನೆಯಿಂದಲೇ ವಿಡಿಯೋ ಸಂವಾದ ನಡೆಸಿದ್ದೇನೆ. ರೋಗಿಗಳ ದಾಖಲಾತಿ, ಆಹಾರ, ಸ್ವಚ್ಛತೆ, ಚಿಕಿತ್ಸೆಗಳಲ್ಲಿ ಲೋಪಗಳ ದೂರು ಬಂದಲ್ಲಿ ನಿರ್ದೇಶಕರುಗಳನ್ನೇ ಹೊಣೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದೇನೆ ಎಂದು ಸುಧಾಕರ್ ಟ್ವೀಟ್ ಮಾಡಿದ್ದಾರೆ.

  • 2 ತಿಂಗಳು ಸೇವೆ ಸಲ್ಲಿಸಿ, ನಿವೃತ್ತಿ ಪಡೆದು ಬರುತ್ತೇನೆಂದಿದ್ದ ಯೋಧ ಇನ್ನಿಲ್ಲ

    2 ತಿಂಗಳು ಸೇವೆ ಸಲ್ಲಿಸಿ, ನಿವೃತ್ತಿ ಪಡೆದು ಬರುತ್ತೇನೆಂದಿದ್ದ ಯೋಧ ಇನ್ನಿಲ್ಲ

    ಹಾಸನ: ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಹಾಸನ ತಾಲೂಕಿನ ಈಚಲಹಳ್ಳಿ ಗ್ರಾಮದ ಸಿಆರ್‍ಪಿಎಫ್ ಯೋಧ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

    ಈಚಲಹಳ್ಳಿಯ ಹೇಮಂತ್ ಕುಮಾರ್ (42) ಮೃತ ಯೋಧ. ಸಿಆರ್‌ಪಿಎಫ್ 150ನೇ ಬಟಾಲಿಯನ್‍ನಲ್ಲಿ ಸೇವೆಸಲ್ಲಿಸುತ್ತಿದ್ದ ಹೇಮಂತ್ ಕುಮಾರ್, ಛತ್ತೀಸ್ ಗಢದ ಸುಕ್ಮಾದಲ್ಲಿ ಕರ್ತವ್ಯದಲ್ಲಿದ್ದಾಗ ಹೃದಯಾಘಾತ ಸಂಭವಿಸಿದೆ.

    ಕಳೆದ 19 ವರ್ಷಗಳಿಂದ ಸಿಆರ್‌ಪಿಎಫ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಹೇಮಂತ್ ಕುಮಾರ್, ಎರಡು ತಿಂಗಳು ಸೇವೆ ಸಲ್ಲಿಸಿ ನಿವೃತ್ತಿ ಪಡೆದು ವಾಪಸ್ ಬರುವುದಾಗಿ ಕುಟುಂಬಸ್ಥರಿಗೆ ತಿಳಿಸಿದ್ದರು. ಆದರೆ ವಿಧಿಯ ಕ್ರೂರ ಆಟಕ್ಕೆ ಯೋಧ ಬಲಿಯಾಗಿದ್ದಾರೆ. ನಾಳೆ ಅಥವಾ ನಾಡಿದ್ದು ಯೋಧನ ಮೃತದೇಹ ಹಾಸನಕ್ಕೆ ಆಗಮಿಸಲಿದ್ದು, ಕುಟುಂಬಸ್ಥರಲ್ಲಿ ಶೋಕ ಮಡುಗಟ್ಟಿದೆ.

  • ಮಧ್ಯರಾತ್ರಿ 12 ಗಂಟೆಯವರೆಗೂ ಕರ್ತವ್ಯ ನಿರ್ವಹಿಸಿ ಆಯುಷ್ ಅಧಿಕಾರಿಯಿಂದ ಅಧಿಕಾರ ಹಸ್ತಾಂತರ

    ಮಧ್ಯರಾತ್ರಿ 12 ಗಂಟೆಯವರೆಗೂ ಕರ್ತವ್ಯ ನಿರ್ವಹಿಸಿ ಆಯುಷ್ ಅಧಿಕಾರಿಯಿಂದ ಅಧಿಕಾರ ಹಸ್ತಾಂತರ

    ಧಾರವಾಡ: ಜಿಲ್ಲಾ ಆಯುಷ್ ಅಧಿಕಾರಿಯೊಬ್ಬರು ತಮ್ಮ ಸೇವಾ ನಿವೃತ್ತಿ ದಿನದ ಕೊನೆ ಗಳಿಗೆಯವರೆಗೂ ಕರ್ತವ್ಯ ನಿರ್ವಹಿಸಿ ಅಧಿಕಾರ ಹಸ್ತಾಂತರಿಸಿದರು.

    ನಿರ್ಗಮಿತ ಜಿಲ್ಲಾ ಆಯುಷ್ ಅಧಿಕಾರಿ ಡಾ.ಸಂಗಮೇಶ್ ಕಲಹಾಳ ಅವರು ಕರ್ತವ್ಯದ ಅವಧಿಯ ಕೊನೆಯ ಗಳಿಗೆಯವರೆಗೂ ಜವಾಬ್ದಾರಿ ನಿರ್ವಹಿಸಿ, ಸರ್ಕಾರದ ಋಣ ತೀರಿಸಬೇಕೆಂಬ ಆದರ್ಶ ಹೊಂದಿದ್ದರು. ಅದೇ ರೀತಿ ಮೇ 31ರ ಮಧ್ಯರಾತ್ರಿ 12 ಗಂಟೆಗೆ ಅಧಿಕಾರ ಹಸ್ತಾಂತರಿಸಿದರು.

    ತಮ್ಮ ನಿವೃತ್ತಿಯ ದಿನ ಮಾತನಾಡಿರುವ ಇವರು, ಸರ್ಕಾರದ ನಿಯಮದಂತೆ ಒಂದು ದಿನವೆಂದರೆ ಮಧ್ಯರಾತ್ರಿ 12 ಗಂಟೆಯಿಂದ ಮುಂದಿನ ದಿನದ ಮಧ್ಯರಾತ್ರಿ 12 ರವರೆಗೆ ಎಂದು ಸೂಚಿಸಲಾಗಿದೆ. ಒಂದು ದಿನದ ವೇತನವೆಂದರೆ 24 ತಾಸುಗಳಿಗೆ ನೀಡುವಂತಹದ್ದಾಗಿದೆ ಎಂದರು.

    ನೌಕರರು ಸಮರ್ಥವಾಗಿ ಕಾರ್ಯನಿರ್ವಹಿಸಲು ದೈಹಿಕ, ಮಾನಸಿಕ ಆರೋಗ್ಯದೃಷ್ಟಿಯಿಂದ ಕೆಲಸದ ವೇಳೆಯನ್ನು ನಿಗದಿಪಡಿಸಲಾಗಿರುತ್ತದೆ. ಹೀಗಿದ್ದರೂ ಅತ್ಯವಶ್ಯಕ ಮತ್ತು ತುರ್ತು ಸ್ಥಿತಿಯಲ್ಲಿ ದಿನದ ಯಾವುದೇ ಸಂದರ್ಭದಲ್ಲಿ ಕಾರ್ಯನಿರ್ವಹಿಸಬೇಕಾಗಿರುತ್ತದೆ. ಸರ್ಕಾರದ ಉದಾತ್ತವಾದ ಧೋರಣೆಯಂತೆ ನೌಕರರ ನಿವೃತ್ತಿ ವರ್ಗಾವಣೆ ಸಂದರ್ಭದಲ್ಲಿ ಕಾರ್ಯಭಾರ ವಹಿಸಲು ಕಾರ್ಯಭಾರ ವಹಿಸಿಕೊಡುವ ದಿನ ಸರ್ಕಾರಿ ರಜೆ ಇದ್ದಲ್ಲಿ ಹಿಂದಿನ ಕೆಲಸದ ದಿನ ಕಾರ್ಯಭಾರ ವಹಿಸಿಕೊಡಬಹುದಾಗಿದೆ ಎಂದು ಹೇಳಿದರು.

  • ಹುಟ್ಟಿದ ಮಗು ನೋಡದೆ ಕರ್ತವ್ಯ ನಿರ್ವಹಿಸ್ತಿರೋ ಕೊರೊನಾ ವಾರಿಯರ್

    ಹುಟ್ಟಿದ ಮಗು ನೋಡದೆ ಕರ್ತವ್ಯ ನಿರ್ವಹಿಸ್ತಿರೋ ಕೊರೊನಾ ವಾರಿಯರ್

    – ಮಗುವನ್ನು ನೋಡಲಾಗದೆ ಕಣ್ಣೀರಿಟ್ಟಿದ್ದ ವೈದ್ಯ

    ಚಾಮರಾಜನಗರ: ಒಂದೆಡೆ ತಂದೆಯಾದ ಸಂಭ್ರಮ ಇನ್ನೊಂದೆಡೆ ಕರ್ತವ್ಯ ನಿಷ್ಠೆ. ಯಾವುದೇ ವ್ಯಕ್ತಿ ತಂದೆಯಾದಾಗ ಅದೊಂದು ಅವಿಸ್ಮರಣೀಯ ಕ್ಷಣ. ಆ ಕ್ಷಣದಲ್ಲಿ ಪತ್ನಿಯ ಜೊತೆಗಿರಬೇಕು. ತನ್ನ ಮಗುವನ್ನು ನೋಡಬೇಕು ಎಂದು ಆಸೆ, ಆಕಾಂಕ್ಷೆ ಸಹಜ.

    ಆದರೆ ಚಾಮರಾಜನಗರ ಕೋವಿಡ್ 19 ಆಸ್ಪತ್ರೆಯಲ್ಲಿ ಕೊರೊನಾ ವಾರಿಯಾರ್ ಆಗಿ ಸೇವೆ ಮಾಡುತ್ತಿರುವ ವೈದ್ಯರೊಬ್ಬರು ಮಗು ಜನಿಸಿದರೂ ನೋಡಲು ಹೋಗದೆ ಕರ್ತವ್ಯ ಪ್ರಜ್ಞೆ ಮೆರೆಯುತ್ತಿದ್ದಾರೆ. ಚಾಮರಾಜನಗರ ಮೆಡಿಕಲ್ ಕಾಲೇಜಿನ ಕೋವಿಡ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಾ. ಯದುಕುಲ್ ಅವರ ಪತ್ನಿಗೆ ಕಳೆದ ಏಪ್ರಿಲ್ 15 ರಂದು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿದೆ.

    ಮಗು ಜನಿಸಿ 17 ದಿನ ಕಳೆದರೂ ನೋಡಲು ಹೋಗದೆ ಡಾ. ಯದುಕುಲ್ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ. ಹೆರಿಗೆ ಸಂದರ್ಭದಲ್ಲಿ ಪತ್ನಿಯ ಜೊತೆಗಿರಬೇಕು. ಮಗುವನ್ನು ಹೇಗೆಲ್ಲಾ ನೋಡಕೊಳ್ಳಬೇಕು ಎಂದು ಕನಸು ಕಂಡಿದ್ದ ಡಾ.ಯದುಕುಲ್‍ಗೆ ಅದು ಸಾಧ್ಯವಾಗಲೇ ಇಲ್ಲ. ಮಗುವಾದಾಗ ಒಂದು ಕಡೆ ಸಂತಸವಾದರೂ ಅದನ್ನು ಆ ಕ್ಷಣದಲ್ಲಿ ನೋಡಲಾಗದೆ ಈ ವೈದ್ಯ ಅತ್ತಿದ್ದರಂತೆ. ಬಿಡುವಾದಾಗ ವಿಡಿಯೋ ಕಾಲ್ ಮೂಲಕವೇ ಮಗು ನೋಡಿ ಬೇಸರ ಮರೆಯುತ್ತಿದ್ದಾರೆ.

  • 55 ವರ್ಷ ಮೇಲ್ಪಟ್ಟ ಪೊಲೀಸ್ರನ್ನ ಕೋವಿಡ್ ಡ್ಯೂಟಿಗೆ ಹಾಕುವಂತಿಲ್ಲ

    55 ವರ್ಷ ಮೇಲ್ಪಟ್ಟ ಪೊಲೀಸ್ರನ್ನ ಕೋವಿಡ್ ಡ್ಯೂಟಿಗೆ ಹಾಕುವಂತಿಲ್ಲ

    ಬೆಂಗಳೂರು: ಹೆಮ್ಮಾರಿ ಕೊರೊನಾ ವೈರಸ್ ಹರಡದಂತೆ ತಡೆಯಲು ಪೊಲೀಸರು ಶ್ರಮಿಸುತ್ತಿದ್ದಾರೆ. ಇದೀಗ ಡಿಜಿ ಅಂಡ್ ಐಜಿಪಿ ಪ್ರವೀಣ್ ಸೂದ್ ಅವರು, 55 ವರ್ಷ ಮೇಲ್ಪಟ್ಟ ಪೊಲೀಸರನ್ನ ಕೋವಿಡ್ ಡ್ಯೂಟಿಗೆ ಹಾಕುವಂತಿಲ್ಲ ಎಂದು ಆದೇಶ ಹೊರಡಿಸಿದ್ದಾರೆ.

    ಮಧುಮೇಹ, ಬಿಪಿ, ಅಸ್ತಮಾ, ಕಿಡ್ನಿ ಹಾಗೂ ಯಕೃತ್ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರೊ ಸಿಬ್ಬಂದಿಗೆ ರೋಡ್ ಮೇಲೆ ಡ್ಯೂಟಿ ಹಾಕುವಂತಿಲ್ಲ. ಠಾಣೆಯ ಒಳಗೆ ಅಥವಾ ಸುರಕ್ಷಿತ ಸ್ಥಳಗಳಲ್ಲಿ ಡ್ಯೂಟಿ ಹಾಕಬೇಕು ಎಂದು ಪ್ರವೀಣ್ ಸೂದ್ ಆದೇಶದಲ್ಲಿ ತಿಳಿಸಿದ್ದಾರೆ.

    ವಯಸ್ಸಾದವರನ್ನು ಹಾಗೂ ಕಾಯಿಲೆ ಇರುವವರನ್ನ ಕೋವಿಡ್ ಬಾಧಿಸುತ್ತದೆ. ಸಿಬ್ಬಂದಿಯ ಆರೋಗ್ಯ ಕಾಪಾಡುವುದು ನಮ್ಮ ಕೆಲಸವಾಗಿದೆ. ಹೀಗಾಗಿ 55 ವರ್ಷ ಮೇಲ್ಪಟ್ಟವರನ್ನ ರಸ್ತೆ, ಚೆಕ್ ಪೋಸ್ಟ್ ಗಳಲ್ಲಿ ಕೋವಿಡ್ ಡ್ಯೂಟಿಗೆ ಹಾಕಬಾರದು. ಸ್ಟೇಷನ್ ಒಳಗೆ ಅಥವಾ ಸುರಕ್ಷಿತ ಸ್ಥಳಗಳಲ್ಲಿ ಡ್ಯೂಟಿ ಒದಗಿಸಬೇಕು ಎಂದು ರಾಜ್ಯದ ಎಲ್ಲಾ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

  • ಡ್ಯೂಟಿ ಫಸ್ಟ್, ಮದ್ವೆ ನೆಕ್ಸ್ಟ್ – ಇಬ್ಬರು ಮಹಿಳಾ ಪೊಲೀಸರಿಂದ ಮದ್ವೆ ಮುಂದೂಡಿಕೆ

    ಡ್ಯೂಟಿ ಫಸ್ಟ್, ಮದ್ವೆ ನೆಕ್ಸ್ಟ್ – ಇಬ್ಬರು ಮಹಿಳಾ ಪೊಲೀಸರಿಂದ ಮದ್ವೆ ಮುಂದೂಡಿಕೆ

    ಭುವನೇಶ್ವರ: ಕೊರೊನಾದಿಂದ ಇಡೀ ದೇಶವೇ ಭಯಭೀತವಾಗಿದ್ದು, ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಆದರೆ ಪೊಲೀಸರು ತಮ್ಮ ಕುಟುಂಬದವರಿಂದ ದೂರ ಉಳಿದು ಜನರ ಆರೋಗ್ಯ ಕಾಪಾಡುವ ಕೆಲಸ ಮಾಡುತ್ತಿದ್ದಾರೆ. ಆದರೆ ಒಡಿಶಾದ ಇಬ್ಬರು ಮಹಿಳಾ ಪೊಲೀಸರು ಕೊರೊನಾ ವೈರಸ್ ಹೋರಾಟಕ್ಕಾಗಿ ತಮ್ಮ ಮದುವೆಯನ್ನೇ ಮುಂದೂಡಿಕೆ ಮಾಡಿದ್ದಾರೆ.

    ಕಾನ್‍ಸ್ಟೇಬಲ್ ಸುನೀತಾ ಅಧಾ ಮತ್ತು ಮಹಿಳಾ ಹೋಮ್ ಗಾರ್ಡ್ ತಿಲೋಟಮ್ಮ ಮೆಹರ್ ತಮ್ಮ ವಿವಾಹ ಸಮಾರಂಭವನ್ನು ಮುಂದೂಡಿದ್ದಾರೆ.

    ಕೊರೊನಾ ವೈರಸ್ ಕರ್ತವ್ಯದಿಂದ ಮಹಿಳಾ ಕಾನ್‍ಸ್ಟೇಬಲ್ ಮತ್ತು ಹೋಮ್ ಗಾರ್ಡ್ ತಮ್ಮ ಮದುವೆಯನ್ನು ಮುಂದೂಡಿದ್ದಾರೆ. ಈ ಮೂಲಕ ಇಬ್ಬರು ಮಹಿಳಾ ಪೊಲೀಸರು ಕರ್ತವ್ಯಕ್ಕಾಗಿ ತಮ್ಮ ವೈಯಕ್ತಿಕ ಸಂತೋಷವನ್ನು ತ್ಯಾಗ ಮಾಡಿದ್ದಾರೆ ಎಂದು ಒಡಿಶಾ ಡಿಜಿಪಿ ಅಭಯ್ ಅವರನ್ನು ಶ್ಲಾಘಿಸಿದ್ದಾರೆ.

    ಇಬ್ಬರು ತಮ್ಮ ತಮ್ಮ ಮದುವೆಗಾಗಿ ರಜೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಕಳೆದ ವಾರ ಜಿಲ್ಲೆಯಲ್ಲಿ ಕನಿಷ್ಠ ಮೂರು ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿವೆ. ಹೀಗಾಗಿ ಇಬ್ಬರೂ ತಮ್ಮ ಮದುವೆಯನ್ನು ಮೂಂದೂಡುವ ಮೂಲಕ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಡಿಜಿಪಿ ಅಭಯ್, “ಕಾನ್‍ಸ್ಟೇಬಲ್ ಸುನೀತಾ ಅಧಾ ಅವರ ಮದುವೆ ಏಪ್ರಿಲ್ 25 ರಂದು ನಿಶ್ಚಯವಾಗಿತ್ತು. ಆದರೆ ಒಡಿಶಾದ ಬಿರ್ಮಿತ್ರಪುರ ಪ್ರದೇಶದಲ್ಲಿ ಡ್ಯೂಟಿ ಮಾಡುವ ಮೂಲಕ ತಮ್ಮ ಮದುವೆಯನ್ನು ಮುಂದೂಡಿದ್ದಾರೆ” ಎಂದು ಹೇಳಿದ್ದಾರೆ.

    ಮತ್ತೊಂದು ಟ್ವೀಟ್ ಮಾಡಿ, “ಮಹಿಳಾ ಹೋಮ್ ಗಾರ್ಡ್ ತಿಲೋಟಮ್ಮ ಮೆಹರ್ ಅವರ ಮದುವೆ ಏಪ್ರಿಲ್ 12 ರಂದು ನಿಗದಿಯಾಗಿತ್ತು. ಆದರೆ ಕೊರೊನಾ ವೈರಸ್ ಕರ್ತವ್ಯಕ್ಕಾಗಿ ತಮ್ಮ ಮದುವೆಯನ್ನು ಮುಂದೂಡಿದ್ದಾರೆ. ಈ ಮೂಲಕ ಇಬ್ಬರು ಮಹಿಳಾ ಪೊಲೀಸರು ತಮ್ಮ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ” ಎಂದು ಡಿಜಿಪಿ ಅಭಯ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • 1 ತಿಂಗಳ ಕಂದನನ್ನ ಕೈಯಲ್ಲಿ ಹಿಡಿದುಕೊಂಡೇ ಕೆಲಸಕ್ಕೆ IAS ಅಧಿಕಾರಿ ಹಾಜರ್

    1 ತಿಂಗಳ ಕಂದನನ್ನ ಕೈಯಲ್ಲಿ ಹಿಡಿದುಕೊಂಡೇ ಕೆಲಸಕ್ಕೆ IAS ಅಧಿಕಾರಿ ಹಾಜರ್

    – ಮಾತೃತ್ವ ರಜೆ ನಿರಾಕರಣೆ
    – ಮಗು ಹುಟ್ಟಿದ 22 ದಿನಗಳಲ್ಲೇ ಕರ್ತವ್ಯಕ್ಕೆ ವಾಪಸ್

    ಹೈದರಾಬಾದ್: ಕೊರೊನಾ ವೈರಸ್ ವಿರುದ್ಧ ಅನೇಕ ಪೊಲೀಸ್ ಅಧಿಕಾರಿಗಳು, ವೈದ್ಯರು, ನರ್ಸ್ ಗಳು ತಮ್ಮ ಕುಟುಂಬದಿಂದ ದೂರವಿದ್ದು ಜನರ ಜೀವವನ್ನು ಕಾಪಾಡುತ್ತಿದ್ದಾರೆ. ತುಂಬು ಗರ್ಭಿಣಿಯಾಗಿದ್ದರು ಮಹಿಳಾ ವೈದ್ಯೆ ಕೊರೊನಾ ಟೆಸ್ಟ್ ಕಿಟ್ ತಯಾರಿಸಿ ಮರುದಿನ ಮಗುವಿಗೆ ಜನ್ಮ ನೀಡಿದ್ದರು. ಇದೀಗ ಐಎಎಸ್ ಅಧಿಕಾರಿಯೊಬ್ಬರು ಮಾತೃತ್ವ ರಜೆಯನ್ನು ನಿರಾಕರಿಸಿ ಕರ್ತವ್ಯಕ್ಕೆ ಹಾಜರಾಗಿ ಕೆಲಸ ಮಾಡುತ್ತಿದ್ದಾರೆ.

    ಜಿ.ಸೃಜನಾ ಮಾತೃತ್ವ ರಜೆಯನ್ನು ತೆಗೆದುಕೊಳ್ಳದೇ ಕರ್ತವ್ಯ ನಿರ್ವಹಿಸಿದ್ದಾರೆ. ಸೃಜನಾ ಅವರು ಆಂಧ್ರಪ್ರದೇಶದ ಗ್ರೇಟರ್ ವಿಶಾಖಪಟ್ಟಣಂ ಮುನ್ಸಿಪಲ್ ಕಾರ್ಪೊರೇಷನ್ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸೃಜನಾ ಅವರಿಗೆ ಗಂಡು ಮಗು ಜನಿಸಿದೆ. ಆದರೆ ಮಗು ಜನಿಸಿದ 22 ದಿನಗಳಲ್ಲೇ ಕೆಲಸಕ್ಕೆ ವಾಪಸ್ ಆಗಿದ್ದಾರೆ.

    ಸೃಜನಾ ಅವರು 1 ತಿಂಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದರು. ಅವರಿಗೆ ಆರು ತಿಂಗಳ ಕಾಲ ಮಾತೃತ್ವ ರಜೆ ಪಡೆಯುವ ಅವಕಾಶವಿದೆ. ಆದರೆ ದೇಶದಲ್ಲಿ ಕೊರೊನಾ ಹಾಗೂ ಅದನ್ನು ತಡೆಗಟ್ಟಲು ವಿಧಿಸಲಾಗಿರುವ ಲಾಕ್‍ಡೌನ್‍ನಿಂದ ಉಂಟಾಗಿರುವ ಪರಿಸ್ಥಿತಿಯ ಕಾರಣದಿಂದ ಅವರು ಕೆಲಸಕ್ಕೆ ಹಾಜರಾಗಿದ್ದಾರೆ. ಜೊತೆಗೆ ಒಂದು ತಿಂಗಳ ಮಗುವನ್ನು ಕೈಯಲ್ಲಿ ಹಿಡಿದುಕೊಂಡು ಕೆಲಸ ಮಾಡುತ್ತಿದ್ದಾರೆ.

    ಈ ಬಗ್ಗೆ ಮಾತನಾಡಿದ ಸೃಜನಾ ಅವರು, ತನ್ನ ಪತಿ ಮತ್ತು ತಾಯಿ ನನಗೆ ತುಂಬಾ ಸಂಪೋರ್ಟ್ ಮಾಡುತ್ತಿದ್ದಾರೆ. ನಾನು 4 ಗಂಟೆಗೊಮ್ಮೆ ಮನೆಗೆ ಹೋಗಿ ಮಗುವಿಗೆ ಹಾಲುಣಿಸಿ ಮತ್ತೆ ಕೆಲಸಕ್ಕೆ ಬರುತ್ತೇನೆ. ಈ ವೇಳೆ ತನ್ನ ಪತಿ ಮತ್ತು ತಾಯಿ ಮಗುವನ್ನು ನೋಡಿಕೊಳ್ಳುತ್ತಾರೆ ಎಂದು ತಿಳಿಸಿದರು.

    ನಾನೊಬ್ಬ ಜವಾಬ್ದಾರಿಯುತ ಅಧಿಕಾರಿಯಾಗಿ ಇಂತಹ ಲಾಕ್‍ಡೌನ್ ಪರಿಸ್ಥಿತಿಯಲ್ಲಿ ಕೆಲಸ ಮಾಡುವುದು ಅಗತ್ಯವಾಗಿದೆ. ವೈರಸ್ ಭೀತಿಯನ್ನು ಹೋಗಲಾಡಿಸಲು ಜಿಲ್ಲಾಡಳಿತವು ಒಟ್ಟಾಗಿ ಪ್ರಯತ್ನಿಸುತ್ತಿದೆ. ಕ್ಷೇತ್ರದಲ್ಲಿ ಸ್ವಚ್ಛತೆಯ ಕಾರ್ಯಗಳನ್ನು ಮಾಡುವುದು, ಬಡವರಿಗೆ ಅಗತ್ಯ ಅಗತ್ಯಗಳನ್ನು ಒದಗಿಸುವುದು ಮತ್ತು ವೈರಸ್ ಇರುವುದನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸುವುದು ನನ್ನ ಕೆಲಸವಾಗಿದೆ ಎಂದು ತಮ್ಮ ಕರ್ತವ್ಯದ ಬಗ್ಗೆ ಮಾತನಾಡಿದರು.

    ಕೊರೊನಾ ಹೋರಾಟದಲ್ಲಿ ನನ್ನ ಪಾತ್ರವು ಒಂದು ಸಣ್ಣ ಭಾಗವಾಗಿದೆ. ಅನೇಕ ಅಧಿಕಾರಿಗಳು ಇದೇ ರೀತಿ ಕೆಲಸ ಮಾಡುತ್ತಿದ್ದಾರೆ. ನಾನು ಕೆಲಸ ಮಾಡಲು ನನ್ನ ಇಡೀ ಕುಟುಂಬವು ನನಗೆ ಶಕ್ತಿಯನ್ನು ನೀಡಿದೆ ಎಂದು ಸಂತೋಷದಿಂದ ಹೇಳಿದ್ದಾರೆ. ಸಾರ್ವಜನಿಕರ ಹಿತಕ್ಕಾಗಿ ಮಾತೃತ್ವ ರಜೆಯನ್ನೂ ಲೆಕ್ಕಿಸದೇ ಕರ್ತವ್ಯಕ್ಕೆ ಹಾಜರಾಗಿರುವ ಐಎಎಸ್ ಅಧಿಕಾರಿಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.