Tag: dubare

  • ದುಬಾರೆ ಆನೆ ಶಿಬಿರದಿಂದ ‘ಕುಶ’ ಬಂಧ ಮುಕ್ತ- ಸಚಿವ ಅರವಿಂದ ಲಿಂಬಾವಳಿ

    ದುಬಾರೆ ಆನೆ ಶಿಬಿರದಿಂದ ‘ಕುಶ’ ಬಂಧ ಮುಕ್ತ- ಸಚಿವ ಅರವಿಂದ ಲಿಂಬಾವಳಿ

    ಬೆಂಗಳೂರು: ಕುಶ ಆನೆಯನ್ನು ದುಬಾರೆ ಶಿಬಿರದಿಂದ ಕರೆದೊಯ್ದು ನಿನ್ನೆ ಸಂಜೆ ಅರಣ್ಯ ಪ್ರದೇಶದಲ್ಲಿ ಬಿಡುಗಡೆ ಮಾಡಲಾಗಿದೆ. ಇದರಿಂದ ಕುಶ ಬಂಧಮುಕ್ತ ನಾಗಿದ್ದಾನೆ ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.

    ಅರಣ್ಯ ಇಲಾಖೆಯ ವಶದಲ್ಲಿದ್ದ ಆನೆ ಕುಶ ನನ್ನು ಸ್ವತಂತ್ರವಾಗಿ ಅರಣ್ಯದಲ್ಲಿ ಬಿಡಲು ಈ ಹಿಂದೆ ನಡೆದ ಸಭೆಯಲ್ಲಿ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

    ಅದರಂತೆ ಅಗತ್ಯ ಸಿದ್ಧತೆಗಳನ್ನು ನಡೆಸಿ ಕುಶನನ್ನು ಬಿಡುಗಡೆ ಮಾಡಬೇಕಾದ ಪ್ರದೇಶವನ್ನು ಗುರುತಿಸಿ, ಅದಕ್ಕೆ ರೇಡಿಯೋ ಕಾಲರ್ ಅಳವಡಿಸಿ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ದುಬಾರೆಯಲ್ಲಿದ್ದ ಆನೆಯ ಕಣ್ಣಿಗೆ ಕಡ್ಡಿ ಬಡಿದು ಕುರುಡ – ಸೊಂಡಿಲೇ ಈಗ ರಾಮನಿಗೆ ಆಧಾರ

    ವಲಯ ಅರಣ್ಯಾಧಿಕಾರಿ ಅನನ್ಯ ಕುಮಾರ್ ಜೆ, ಉಪವಲಯ ಅರಣ್ಯಾಧಿಕಾರಿ ಕೆ.ಪಿ ರಂಜನ್ ಹಾಗೂ ಅರಣ್ಯ ಪಶುವೈದ್ಯಾಧಿಕಾರಿ ಡಾಕ್ಟರ್ ವಾಸಿಂ ಮಿರ್ಜಾ ಹಾಗೂ ಅರಣ್ಯ ಇಲಾಖೆಯ ಇತರ ಅಧಿಕಾರಿಗಳು ಕುಶ ಬಿಡುಗಡೆಯ ಸಂದರ್ಭದಲ್ಲಿ ಹಾಜರಿದ್ದು, ಬೀಳ್ಕೊಟ್ಟರು.

  • ದುಬಾರೆಯಲ್ಲಿದ್ದ ಆನೆಯ ಕಣ್ಣಿಗೆ ಕಡ್ಡಿ ಬಡಿದು ಕುರುಡ – ಸೊಂಡಿಲೇ ಈಗ ರಾಮನಿಗೆ ಆಧಾರ

    ದುಬಾರೆಯಲ್ಲಿದ್ದ ಆನೆಯ ಕಣ್ಣಿಗೆ ಕಡ್ಡಿ ಬಡಿದು ಕುರುಡ – ಸೊಂಡಿಲೇ ಈಗ ರಾಮನಿಗೆ ಆಧಾರ

    – ಕಣ್ಣೀರು ತರಿಸುತ್ತೆ ದೈತ್ಯ ಜೀವಿಯ ಪರದಾಟ

    ಮಡಿಕೇರಿ: ಆನೆ ನಡೆದದ್ದೇ ದಾರಿ ಅನ್ನೋ ಗಾದೆ ಮಾತಿದೆ. ಅದರಲ್ಲೂ ಅಜಾನುಬಾಹುವಿನಂತ ದೇಹ, ನೋಡಿದರೆ ಎದೆನಡುಗಂತಹ ಅಷ್ಟು ಉದ್ದದ ಕೋರೆಯ ಇಂತಹ ಆನೆಗಳು ನಡೆದರೆ, ನಡೆದದ್ದೇ ದಾರಿಯಾಗದೇ ಇರದು. ಅಜಾನುಬಾಹು ಸಾಕಾನೆಗೆ ಎರಡು ಕಣ್ಣು ಕಾಣದೇ ಅಹಾರ ತಿನ್ನುಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

    ದೊಡ್ಡ ಗಾತ್ರದ ದೇಹ, ಊಹೆಗೂ ಮೀರಿದ ಕೋರೆ ಹೊಂದಿರುವ ಆನೆ ಹೆಸರು ರಾಮ. ರಾಮನಂತೆ ಸೌಮ್ಯ ಸ್ವಭಾವದವನು 65 ರ ಹರೆಯದ ಈ ಆನೆ. ಕೊಡಗು ಜಿಲ್ಲೆಯ ವಿಶ್ವ ಪ್ರಸಿದ್ಧ ದುಬಾರೆ ಸಾಕಾನೆ ಶಿಬಿರದಲ್ಲಿ ಈ ಆನೆ ಇದೆ. ತನ್ನ ಅಜಾನುಬಾಹು ದೇಹದಿಂದಲೇ ನಿತ್ಯ ದುಬಾರೆ ಸಾಕಾನೆ ಶಿಬಿರಕ್ಕೆ ಬರುವ ಸಾವಿರಾರು ಪ್ರವಾಸಿಗರ ಕಣ್ಮನ ಕೋರೈಸಿ ಮುದ ನೀಡುವ ಈ ಆನೆಗೆ ಎರಡು ಕಣ್ಣು ಕಾಣೋದೇ ಇಲ್ಲ.

    ಈ ಆನೆಯನ್ನು 2002 ರಲ್ಲಿ ಸೆರೆ ಹಿಡಿದು ದುಬಾರೆ ಸಾಕಾನೆ ಶಿಬಿರದಲ್ಲಿ ಪಳಗಿಸಿ ರಾಮ ಎಂದು ಹೆಸರಿಡಲಾಗಿತ್ತು. ಅದನ್ನು ಸೆರೆ ಹಿಡಿದಾಗಲೇ ಅದರ ಒಂದು ಕಣ್ಣು ಕಾಣುತ್ತಿರಲಿಲ್ಲ. ಒಂದೇ ಕಣ್ಣಿನಿಂದಲೇ ಗಜಗಾಂಭೀರ್ಯವಾಗಿ ಓಡಾಡಿಕೊಂಡಿದ್ದ ರಾಮನಿಗೆ ಹತ್ತು ವರ್ಷ ಎನ್ನುವಷ್ಟರಲ್ಲಿ ಶಿಬಿರದಲ್ಲಿ ಇರುವಾಗಲೇ ಕಡ್ಡಿಯೊಡೆದು ಇದ್ದ ಮತ್ತೊಂದು ಕಣ್ಣು ಕಾಣದಂತಾಗಿ ಶಾಶ್ವತ ಕುರುಡು ಆವರಿಸಿತು. ಅಂದಿನಿಂದ ಈ ಅಜಾನುಬಾನು ಆನೆ ಅಕ್ಷರಶಃ ಮಗುವಿನಂತಾಗಿದೆ. ಈಗ ಸೊಂಡಿಲ ಸಹಾಯದಿಂದಲೇ ಓಡಾಡುವ ಈ ಆನೆ ಚಿಕ್ಕ ಮರಿಯಾನೆ ಬಂದರೂ ಹೆದರಿ ನಿಲ್ಲುತ್ತದೆ. ಹೀಗಾಗಿಯೇ ಅದನ್ನು ಎಲ್ಲಿಯೂ ಹೊರಗೆ ಕರೆದೊಯ್ಯವುದಿಲ್ಲ. ಶಿಬಿರದಲ್ಲಿ ಜೋಪಾನವಾಗಿ ನೋಡಿಕೊಳ್ಳಲಾಗುತ್ತಿದೆ.

  • ಮೈಸೂರು ದಸರಾಕ್ಕೆ ದುಬಾರೆಯಿಂದ ನಾಲ್ಕೇ ಆನೆಗಳು

    ಮೈಸೂರು ದಸರಾಕ್ಕೆ ದುಬಾರೆಯಿಂದ ನಾಲ್ಕೇ ಆನೆಗಳು

    ಮಡಿಕೇರಿ: ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಭಾಗವಹಿಸಲು ಕೊಡಗಿನ ನಾಲ್ಕು ಆನೆಗಳು ಆಯ್ಕೆಯಾಗಿವೆ. ಆನೆಗಳ ದೇಹದಾಡ್ರ್ಯ ಮತ್ತು ಆರೋಗ್ಯ ಪರಿಶೀಲನೆ ಮಾಡಿರುವ ವಜ್ಯಜೀವಿ ವೈದ್ಯರು ಮತ್ತು ಅರಣ್ಯ ಇಲಾಖೆ, ಉನ್ನತ ಅಧಿಕಾರಿಗಳು ತಿಂಗಳಾಂತ್ಯಕ್ಕೆ ಆನೆಗಳನ್ನು ಮೈಸೂರಿಗೆ ಕರೆದೊಯ್ಯಲು ಒಪ್ಪಿಗೆ ಸೂಚಿಸಿದ್ದಾರೆ.

    ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಮೆರಗು ಅಂದ್ರೆ ಅದು ಜಂಬೂ ಸವಾರಿ. ಆದರೆ ಈ ಬಾರಿ ವಿಶ್ವಕ್ಕೆ ಬಂದೊದಗಿರುವ ಕೊರೊನಾ ಮಹಾಮಾರಿ ಮೈಸೂರು ದಸರಾದ ಜಂಬೂ ಸವಾರಿ ಮೇಲೂ ಕರಿನೆರಳು ಬೀರಿದೆ. ಹೀಗಾಗಿ ಈ ಬಾರಿ ನಡೆಯುತ್ತಿರುವ ಸರಳ ದಸರಾಕ್ಕೆ ಕೊಡಗಿನ ಆನೆ ಶಿಬಿರದ ನಾಲ್ಕು ಆನೆಗಳು ಆಯ್ಕೆಯಾಗಿವೆ.

    ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ದುಬಾರೆ ಸಾಕಾನೆ ಶಿಬಿರದಿಂದ ಕಾವೇರಿ, ಗೋಪಿ, ವಿಜಯ ಮತ್ತು ವಿಕ್ರಮ ಆನೆಗಳು ಈ ಬಾರಿಯ ದಸರಾಕ್ಕೆ ಆಯ್ಕೆಯಾಗಿವೆ. ಗೋಪಿ ಮತ್ತು ಕಾವೇರಿ ಆನೆಗಳು ತಲಾ ಒಂಬತ್ತು ಬಾರಿ ಮೈಸೂರು ದಸರಾದಲ್ಲಿ ಭಾಗವಹಿಸಿವೆ. ವಿಕ್ರಮ ಕೂಡ ಆರೇಳು ಬಾರಿ ದಸರಾದಲ್ಲಿ ಜಂಬೂ ಸವಾರಿಯಲ್ಲಿ ಭಾಗವಹಿಸಿದೆ. ವಿಕ್ರಮ ಆನೆಯೂ ಹತ್ತಕ್ಕೂ ಹೆಚ್ಚು ಬಾರಿ ಜಂಬೂ ಸವಾರಿಯಲ್ಲಿ ಭಾಗವಹಿಸಿದೆ. ಹೀಗಾಗಿ ಈ ಆನೆಗಳು ದಸರಾದಲ್ಲಿ ಭಾಗವಹಿಸುವುದು ಸೂಕ್ತವೆಂದು ನಿರ್ಧರಿಸಿ ಈ ತಿಂಗಳ ಅಂತ್ಯದೊಳಗೆ ಆನೆಗಳನ್ನು ಮೈಸೂರಿಗೆ ಸಾಗಿಸಲಿದ್ದಾರೆ.

    ಪ್ರತೀ ವರ್ಷ ಕೊಡಗಿನ ದುಬಾರೆ ಆನೆ ಶಿಬಿರದಿಂದ ಏಳು ಆನೆಗಳು ದಸರಾಕ್ಕೆ ಭಾಗವಹಿಸುತ್ತಿದ್ದವು. ಜೊತೆಗೆ ಅಷ್ಟೂ ಆನೆಗಳ ಮಾವುತ, ಕವಾಡಿಗ ಮತ್ತು ಅವರ ಕುಟುಂಬಗಳು ದಸಾರಕ್ಕೆ ಹೋಗುತ್ತಿದ್ದವು. ತಿಂಗಳುಗಟ್ಟಲೆ ಆ ಕುಟುಂಬಗಳು ಮೈಸೂರು ಅರಮನೆ ಆವರಣದಲ್ಲಿದ್ದು ಮೈಸೂರು ದಸರಾದ ಜಂಬೂ ಸವಾರಿಯನ್ನು ಕಣ್ತುಂಬಿಕೊಳ್ಳುತ್ತಿದ್ದವು. ಈ ಬಾರಿ ಅದ್ಯಾವುದಕ್ಕೂ ಅವಕಾಶವೇ ಇಲ್ಲ. ಬದಲಾಗಿ ನಾಲ್ಕು ಆನೆಗಳ ಮಾವುತರು ಮತ್ತು ಕವಾಡಿಗರು ಮಾತ್ರವೇ ಭಾಗವಹಿಸಲಿದ್ದಾರೆ.

  • ವಿಶ್ವವಿಖ್ಯಾತ ಮೈಸೂರು ದಸರಾದ ಬಗ್ಗೆ ಗೊಂದಲದಲ್ಲಿರೋ ಮಾವುತರು

    ವಿಶ್ವವಿಖ್ಯಾತ ಮೈಸೂರು ದಸರಾದ ಬಗ್ಗೆ ಗೊಂದಲದಲ್ಲಿರೋ ಮಾವುತರು

    ಮಡಿಕೇರಿ: ವಿಶ್ವವಿಖ್ಯಾತ ಮೈಸೂರು ದಸರಾ ನೋಡೋದಕ್ಕೆ ಬಲು ಸುಂದರ. ಈ ದಸರಾದ ಮೆರುಗನ್ನು ಹೆಚ್ಚಿಸುವುದೇ ಜಂಬೂಸವಾರಿ. ಆದರೆ ಕೊರೊನಾ ಮಹಾಮಾರಿಯಿಂದಾಗಿ ದಸರಾಕ್ಕೆ ಆನೆಗಳು ಹೋಗುವುದಕ್ಕೆ ಇಂದಿಗೂ ಸರ್ಕಾರದಿಂದ ಯಾವುದೇ ಮಾಹಿತಿ ಬಂದಿಲ್ಲ. ಹೀಗಾಗಿ ಮಾವುತರು, ಕಾವಾಡಿಗರು ಗೊಂದಲದಲ್ಲಿದ್ದಾರೆ.

    ಪ್ರತಿ ವರ್ಷ ಮೈಸೂರು ದಸರಾದ ಜಂಬೂಸವಾರಿಯಲ್ಲಿ ಕೊಡಗು ಜಿಲ್ಲೆಯ ದುಬಾರೆ ಸಾಕಾನೆ ಶಿಬಿರದ ಏಳು ಆನೆಗಳು ಭಾಗವಹಿಸಿದ್ದವು. ಸಾಕಾನೆ ಶಿಬಿರದ ಅರ್ಜುನ ಆನೆ ದಸರಾದ ಅಂಬಾರಿಯನ್ನು ಹೊರುತ್ತಿತ್ತು. ದಸರಾಕ್ಕೆ ಇನ್ನೂ ಎರಡೂವರೆ ತಿಂಗಳು ಇರುವಾಗಲೇ ಆನೆಗಳು ಮೈಸೂರು ಅರಮನೆ ಅಂಗಳದಲ್ಲಿ ಬೀಡು ಬಿಡುತ್ತಿದ್ದವು. ಆದರೆ ಈ ಬಾರಿ ಕೊರೊನಾ ಮಹಾಮಾರಿಯಿಂದಾಗಿ ಇದುವರೆಗೆ ಆನೆಗಳು ಹೋಗಲು ಯಾವುದೇ ಆದೇಶ ಬಂದಿಲ್ಲ.

    ಜಂಬೂ ಸವಾರಿಯಲ್ಲಿ ಭಾಗವಹಿಸಬೇಕಾದರೆ, ಆನೆಗಳು ನಿರ್ಭೀತಿಯಿಂದ ಭಾಗವಹಿಸಲು ಅವುಗಳು ಮೈಸೂರಿನಲ್ಲಿ ಪಳಗಬೇಕು. ಅದಕ್ಕಾಗಿ ಕನಿಷ್ಠ ಒಂದು ತಿಂಗಳು ತಾಲೀಮು ನಡೆಸಬೇಕು. ಕೊನೆ ಹಂತದಲ್ಲಿ ಆನೆಗಳನ್ನು ಕರೆದು ತರುವಂತೆ ಹೇಳಿದರೆ ತಾಲೀಮು ಕಷ್ಟವಾಗಬಹುದು. ಒಂದು ವೇಳೆ ಆನೆಗಳನ್ನು ಕರೆತರುವಂತೆ ಹೇಳಿದರೂ, ಮೈಸೂರಿಗೆ ಹೋಗಲು ನಮಗೂ ಆತಂಕವಿದೆ. ನಾವೇನೋ ಮಾಸ್ಕ್ ಗಳನ್ನು ಹಾಕಿಕೊಂಡು ರಕ್ಷಣೆ ಪಡೆಯಬಹುದು. ಆದರೆ ಆನೆಗಳ ರಕ್ಷಣೆಯೇ ಕಷ್ಟ. ಅವುಗಳಿಗೆ ಯಾವ ರೀತಿ ರಕ್ಷಣೆ ಮಾಡುವುದು ಎಂದು ಮಾವುತ ದೋಬಿ ಹೇಳಿದ್ದಾರೆ.

    ಪ್ರತೀ ವರ್ಷ ದಸರಾಕ್ಕೆ ಇನ್ನೂ ಮೂರು ತಿಂಗಳಿರುವಾಗಲೇ ಸಂಸಾರ ಸಮೇತರಾಗಿ ಮೈಸೂರಿಗೆ ತೆರಳುತಿದ್ದೆವು. ಬನ್ನಿ ಮಂಟಪ, ಅರಮನೆ ಸೇರಿದಂತೆ ಮೈಸೂರು ನಗರದ ಪ್ರಮುಖ ರಸ್ತೆಗಳಲ್ಲಿ ತಾಲೀಮು ನಡೆಯುತ್ತಿತ್ತು. ಆದರೆ ಈ ಬಾರಿ ಇನ್ನು ಒಂದುವರೆ ತಿಂಗಳಷ್ಟೇ ಬಾಕಿ ಇದ್ದರೂ ಇನ್ನೂ ಆನೆಗಳನ್ನು ಕರೆದೊಯ್ಯಲು ಯಾವುದೇ ಮಾಹಿತಿ ಬಂದಿಲ್ಲ. ಹೀಗಾಗಿ ಪ್ರತೀ ಬಾರಿ ದಸರಾದಲ್ಲಿ ಭಾಗವಹಿಸುತ್ತಿದ್ದ ನಾವು ಈ ಬಾರಿ ದಸರಾದಲ್ಲಿ ಭಾಗವಹಿಸುವುದು ಬಹುತೇಕ ಅನುಮಾನ ಎನ್ನುವಂತಾಗಿದೆ ಎಂದರು.

    ಜಿಲ್ಲೆಯಿಂದ ಹರ್ಷ, ಅರ್ಜುನ, ಕಾವೇರಿ, ಧನಂಜಯ ಸೇರಿದಂತೆ ಏಳು ಆನೆಗಳು ದಸರಾದಲ್ಲಿ ಭಾಗವಹಿಸುತ್ತಿದ್ದವು. ಆದರೆ ಈ ಭಾರೀ ಆನೆಗಳ ಆಯ್ಕೆ ಕೂಡ ನಡೆದಿಲ್ಲ. ವಿಶ್ವ ವಿಖ್ಯಾತ, ಮೈಸೂರು ದಸರಾಕ್ಕೆ ಇನ್ನು ಕೆಲವು ದಿನಗಳಷ್ಟೇ ಬಾಕಿ ಇದ್ದರೂ ದಸರಾದಲ್ಲಿ ಭಾಗವಹಿಸುವ ಆನೆಗಳ ಆಯ್ಕೆ ಇನ್ನೂ ಆಗಿಲ್ಲ. ಹೀಗಾಗಿ ಏನು ಮಾಡಬೇಕು ಎಂಬ ಗೊಂದಲದಲ್ಲಿ ಮಾವುತರಿದ್ದಾರೆ.

  • ದುಬಾರೆಯಿಂದ ನಾಪತ್ತೆಯಾದ ಆನೆ- ಶೋಧಕಾರ್ಯದಲ್ಲಿ ಅರಣ್ಯ ಇಲಾಖೆ

    ದುಬಾರೆಯಿಂದ ನಾಪತ್ತೆಯಾದ ಆನೆ- ಶೋಧಕಾರ್ಯದಲ್ಲಿ ಅರಣ್ಯ ಇಲಾಖೆ

    ಮಡಿಕೇರಿ: ಕೊಡಗಿನ ಪ್ರಮುಖ ಪ್ರವಾಸಿ ತಾಣ ದುಬಾರೆಯ ಸಾಕಾನೆ ಶಿಬಿರದಲ್ಲಿ ಇದ್ದಂತಹ ಕುಶ ಎಂಬ ಆನೆ ಕಳೆದ ನಾಲ್ಕು ಐದು ದಿನಗಳಿಂದ ನಾಪತ್ತೆಯಾಗಿರುವುದು ತಿಳಿದು ಬಂದಿದೆ.

    ಈ ಆನೆಯನ್ನು ಮೇಯಲು ಕಾಡಿಗೆ ಬಿಟ್ಟಂತಹ ಸಂದರ್ಭದಲ್ಲಿ ಶಿಬಿರಕ್ಕೆ ಮರಳದೇ ತಪ್ಪಿಸಿಕೊಂಡಿದೆ ಎನ್ನಲಾಗಿದೆ. ಅರಣ್ಯ ಇಲಾಖಾ ಸಿಬ್ಬಂದಿ ಮತ್ತು ಕಾವಾಡಿಗಳು ದುಬಾರೆಯ ಅರಣ್ಯದೊಳಗೆಲ್ಲ ಸುತ್ತಾಡಿ ಹುಡುಕಾಟ ನಡೆಸಿದರೂ ಕುಶ ಪತ್ತೆಯಾಗಿಲ್ಲ. ಕಳೆದ ಎರಡು ವರ್ಷಗಳ ಹಿಂದೆ ವೀರಾಜಪೇಟೆಯ ಬೀಟೆಕಾಡು ಎಸ್ಟೇಟ್‍ನಿಂದ ಎರಡು ಆನೆಗಳನ್ನು ಸೆರೆಹಿಡಿಯಲಾಗಿತ್ತು. ದುಬಾರೆ ಶಿಬಿರದಲ್ಲಿ ಪಳಗಿಸಿದ ಇವುಗಳಿಗೆ ಒಂದಕ್ಕೆ ಲವ ಎಂದು ಮತ್ತೊಂದಕ್ಕೆ ಕುಶ ಎಂದು ನಾಮಕರಣ ಮಾಡಲಾಗಿತ್ತು.

    ಲವ ಆನೆ ಶಿಬಿರದಲ್ಲೇ ಇದೆ, ಆದರೆ ಅಂದಾಜು 28ರ ಪ್ರಾಯದ ಕುಶ ಆನೆ ನಾಪತ್ತೆಯಾಗಿ ಅರಣ್ಯಾಧಿಕಾರಿಗಳ ನಿದ್ದೆ ಕೆಡಿಸಿದೆ. ದುಬಾರೆಯ ಸಾಕಾನೆ ಶಿಬಿರದ ಮೇಲ್ವಿಚಾರಕ ಉಪವಲಯ ಅರಣ್ಯಾಧಿಕಾರಿ ಹಗಲು, ರಾತ್ರಿ ಕುಶನ ಶೋಧದಲ್ಲಿ ತೊಡಗಿದ್ದಾರೆ.

  • ಬಂದ್ ಆಗಿದ್ದ ದುಬಾರೆ ಆನೆ ಕ್ಯಾಂಪ್ ಓಪನ್

    ಬಂದ್ ಆಗಿದ್ದ ದುಬಾರೆ ಆನೆ ಕ್ಯಾಂಪ್ ಓಪನ್

    ಮಡಿಕೇರಿ: ತನ್ನ ನೈಜ ಪ್ರಕೃತಿ ಸೌಂದರ್ಯದಿಂದ ಲಕ್ಷಾಂತರ ಮಂದಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿರುವ ಕರ್ನಾಟಕದ ಸ್ವಿಡ್ಜರ್ ಲ್ಯಾಂಡ್ ಕೊಡಗಿನಲ್ಲಿ ಈಗ ಪ್ರವಾಸಿಗರ ಅಬ್ಬರ ಜೋರಾಗಿದೆ. ಬಂದ್ ಆಗಿದ್ದ ದುಬಾರೆ ಆನೆ ಕ್ಯಾಂಪ್ ಓಪನ್ ಆಗಿದ್ದು, ಪ್ರವಾಸಿಗರು ಬೋಟ್ ಮೇಲೇರಿ ದುಬಾರೆ ಕ್ಯಾಂಪ್ ಕಡೆ ತೆರಳಿ ಆನೆಗಳ ಜೊತೆ ಸಖತ್ ಎಂಜಾಯ್ ಮಾಡುತ್ತಿದ್ದಾರೆ.

    ವೀಕೆಂಡ್ ಬಂದರೆ ಸಾಕು ಮಂಜಿನ ನಗರಿ ಮಡಿಕೇರಿ ಪ್ರವಾಸಿಗರಿಂದ ತುಂಬಿ ತುಳುಕುತ್ತದೆ. ದೇಶದ ನಾನಾ ಭಾಗಗಳಿಂದ ಆಗಮಿಸುತ್ತಿರುವ ಪ್ರವಾಸಿಗಳು ಕೊಡಗಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಅದರಲ್ಲೂ ದುಬಾರೆ ಸಾಕಾನೆ ಶಿಬಿರವಂತೂ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಈ ತಾಣಕ್ಕೆ ಬರುವ ಪ್ರವಾಸಿಗರು ಒಂದಷ್ಟು ಕಾಲ ಆನೆಗಳ ಜೊತೆ ಕಳೆಯಲೇ ಬೇಕು.

    ನದಿ ನೀರು ಹೆಚ್ಚಾಗಿದ್ದ ಪರಿಣಾಮ ದುಬಾರೆಗೆ ನಿಷೇಧ ಹೇರಲಾಗಿತ್ತು. ಯಾಕೆಂದರೆ ಒಂದು ತೀರದಿಂದ ಇನ್ನೊಂದು ತೀರದಲ್ಲಿರುವ ಸಾಕಾನೆ ಶಿಬಿರಕ್ಕೆ ಹೋಗಬೇಕು ಎಂದರೆ ಸುಮಾರು 300 ಮೀ. ಕಾವೇರಿ ನದಿಯಲ್ಲಿ ಬೋಟಿಂಗ್ ಮಾಡಿಕೊಂಡು ಹೋಗಬೇಕು. ಕಾವೇರಿ ನದಿಯ ನೀರು ಮುಂಗಾರು ಮಳೆಗೆ ಹೆಚ್ಚಾಗಿದ್ದ ಪರಿಣಾಮ ದುಬಾರೆ ಸಾಕಾನೆ ಶಿಬಿರಕ್ಕೆ ಪ್ರವೇಶ ಇರಲಿಲ್ಲ. ಜೊತೆಗೆ ಬೋಟ್ ವ್ಯವಸ್ಥೆ ಕೂಡ ಇಲ್ಲದೆ ಪ್ರವಾಸಿಗರು ಆನೆ ಶಿಬಿರದ ಕಡೆ ತೆರಳಲಾಗದೆ ಬೇಸರ ವ್ಯಕ್ತಪಡಿಸಿದರು.

    ಈ ಬಗ್ಗೆ ಪಬ್ಲಿಕ್ ಟಿವಿ ವಿಸ್ತೃತ ವರದಿ ಬಿತ್ತರಿಸಿತ್ತು. ಇದೀಗ ವರದಿಯಿಂದ ಎಚ್ಚೆತ್ತ ಅರಣ್ಯ ಇಲಾಖೆ ಮೂರು ಬೋಟ್ ವ್ಯವಸ್ಥೆ ಮಾಡುವ ಮೂಲಕ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಿದೆ. ಬೋಟ್ ಮೂಲಕ ಸಾಗುವ ಪ್ರವಾಸಿಗರು ಸಾಕಾನೆ ಶಿಬಿರ ತಲುಪಿ ಸಾಕಾನೆಗಳನ್ನು ನೋಡಿ ಎಂಜಾಯ್ ಮಾಡುತ್ತಿದ್ದಾರೆ.

  • ಸ್ನೇಹಿತನ ಹುಟ್ಟುಹಬ್ಬದ ಆಚರಣೆ ವೇಳೆ ದುಬಾರೆಯಲ್ಲಿ ಮುಳುಗಿ ಯುವಕ ಸಾವು

    ಸ್ನೇಹಿತನ ಹುಟ್ಟುಹಬ್ಬದ ಆಚರಣೆ ವೇಳೆ ದುಬಾರೆಯಲ್ಲಿ ಮುಳುಗಿ ಯುವಕ ಸಾವು

    ಮಡಿಕೇರಿ: ಸ್ನೇಹಿತರೊಂದಿಗೆ ನದಿ ದಂಡೆಯಲ್ಲಿ ಕಾಲ ಕಳೆಯುತ್ತಿದ್ದ ಯುವಕನೊಬ್ಬ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಜಲಸಮಾಧಿ ಆಗಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಪ್ರವಾಸಿ ತಾಣ ದುಬಾರೆಯಲ್ಲಿ ನಡೆದಿದೆ.

    ಸುಮನ್ (23) ಮೃತ ದುರ್ದೈವಿ. ಸುಮನ್ ಮೂಲತಃ ರಂಗ ಸಮುದ್ರ ನಿವಾಸಿಯಾಗಿದ್ದು, ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದನು. ಸುಮನ್ ತನ್ನ ಸ್ನೇಹಿತನ ಹುಟ್ಟುಹಬ್ಬ ಆಚರಿಸಲು ಕೊಡಗಿನಲ್ಲಿರುವ ದುಬಾರೆಗೆ ಬಂದಿದ್ದನು.

    ಶುಕ್ರವಾರ ಸುಮನ್ ಹಾಗೂ ಆತನ ಗೆಳೆಯರು ನಂಜರಾಯಪಟ್ಟಣ ಸಮೀಪದ ದಾಸವಾಳ ಎಂಬಲ್ಲಿ ಹರಿಯುತ್ತಿರುವ ಕಾವೇರಿ ನದಿಯ ತಟದಲ್ಲಿ ಕಾಲ ಕಳೆಯುತ್ತಿದ್ದರು. ಸಂಜೆ ಸುಮಾರು 5 ಗಂಟೆಯ ಸಮಯದಲ್ಲಿ ಸುಮನ್ ನದಿಗೆ ಇಳಿದಿದ್ದಾನೆ. ಆದರೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾನೆ. ಸುಮನ್ ಮೇಲಕ್ಕೆ ಬರಲಾಗದೇ ಅಲ್ಲಿಯೇ ಜಲ ಸಮಾಧಿಯಾಗಿದ್ದಾನೆ.

    ನಂತರ ಮೃತದೇಹನ್ನು ನದಿಯಿಂದ ಮೇಲಕ್ಕೆ ತರಲಾಯಿತು. ಈ ಬಗ್ಗೆ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ದಂತದಿಂದ ತಿವಿದ 9 ವರ್ಷದ ಸಾಕಾನೆ- ಮಾವುತನಿಗೆ ಗಂಭೀರ ಗಾಯ

    ದಂತದಿಂದ ತಿವಿದ 9 ವರ್ಷದ ಸಾಕಾನೆ- ಮಾವುತನಿಗೆ ಗಂಭೀರ ಗಾಯ

    ಮಡಿಕೇರಿ: ಕಾವಾಡಿಯೊರ್ವರನ್ನು ಸಾಕಾನೆಯೊಂದು ತನ್ನ ದಂತದಿಂದ ತಿವಿದು ತೀವ್ರ ಸ್ವರೂಪದಲ್ಲಿ ಗಾಯಗೊಳಿಸಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ದುಬಾರೆ ಸಾಕಾನೆ ಶಿಬಿರದಲ್ಲಿ ನಡೆದಿದೆ.

    ಶಿಬಿರದಲ್ಲಿ ನವೀನ್(30) ಕಾವಾಡಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಸಾಕಾನೆಯಿಂದ ತಿವಿತಕ್ಕೊಳಗಾಗಿದ್ದು ತೀವ್ರ ಸ್ವರೂಪದಲ್ಲಿ ಗಾಯಗೊಂಡಿದ್ದ ನವೀನ್ ನನ್ನು ಕುಶಾಲನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿಲಾಗಿದೆ. ಅಲ್ಲದೇ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲಾಗಿದೆ.

    ಇಂದು ಬೆಳಗ್ಗೆ ದುಬಾರೆಯ ಸಾಕಾನೆ ಶಿಬಿರದಲ್ಲಿ ಸಾಕಾನೆಯಾದ ಕಾರ್ತಿಕ್ ಎಂಬ 9 ವರ್ಷದ ಗಂಡಾನೆಗೆ ಈ ಗಾಯಾಳು ನವೀನ್ ನೀರು ಕುಡಿಸಲು ಹೋದ ಸಂದರ್ಭದಲ್ಲಿ ತನ್ನ ದಂತದಿಂದ ತಿವಿಯುವ ಮೂಲಕ ತನ್ನ ಪುಂಡತನವನ್ನು ಪ್ರದರ್ಶಿಸಿದೆ. ಈ ಮೊದಲು ಕೂಡ 2 ವರ್ಷಗಳ ಹಿಂದೆ ಇದೆ 9 ವರ್ಷದ ಸಾಕಾನೆ ಕಾರ್ತಿಕ್‍ನ ದಾಳಿಯಿಂದಾಗಿ ಇಬ್ಬರೂ ಮಾವುತರಾದ ಅಣ್ಣಿ ಮತ್ತು ಮಣಿಯಾ ಎಂಬ ಮಾವುತರು ಸಾವನ್ನಪ್ಪಿದರು. ಇನ್ನೂ ಕೂಡ ಮದದ ಪ್ರಾಯಕ್ಕೆ ಬಾರದ 9 ವರ್ಷ ವಯಸ್ಸಿನ ಕಾರ್ತಿಕ್ ಎಂಬ ಸಾಕಾನೆ ಆಗಾಗ ಇಂತಹ ಪುಂಡತನವನ್ನು ಪ್ರದರ್ಶಿಸುತ್ತಿರುವುದು ಮಾವುತರು ಹಾಗೂ ಕಾವಾಡಿಗಳಿಗೆ ಮಾತ್ರವಲ್ಲದೆ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೂ ಕೂಡ ತಲೆನೋವಾಗಿ ಪರಿಣಮಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದುಬಾರೆಯಲ್ಲಿ ರ‍್ಯಾಫ್ಟಿಂಗ್ ವೇಳೆ ಪ್ರವಾಸಿಗನ ಕೊಲೆ

    ದುಬಾರೆಯಲ್ಲಿ ರ‍್ಯಾಫ್ಟಿಂಗ್ ವೇಳೆ ಪ್ರವಾಸಿಗನ ಕೊಲೆ

    ಮಡಿಕೇರಿ: ಕೊಡಗು ಅಂದ್ರೆ ಎಲ್ಲರ ಮೈ ರೋಮಾಂಚನವಾಗುತ್ತದೆ. ಪ್ರಕೃತಿಯ ಮಡಿಲಲ್ಲಿ ಒಂದು ನಾಲ್ಕು ದಿನ ಕಳೆದು ಎಂಜಾಯ್ ಮಾಡಿ ಬರೋಣ, ಕೊಡಗಿನ ಪರಿಸರದಲ್ಲಿ ಸುತ್ತಾಡೋಣ ಅಂತೆಲ್ಲಾ ಜಿಲ್ಲೆಗೆ ಪ್ರವಾಸಿಗರು ದಿನನಿತ್ಯ ಸಾಗರೋಪಾದಿಯಲ್ಲಿ ಬರುತ್ತಾರೆ. ಪರಿಣಾಮ ಜಿಲ್ಲೆಯ ಪ್ರವಾಸೋದ್ಯಮವೂ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಆದ್ರೆ ಇಲ್ಲಿನ ಆಡಳಿತದ ವೈಫಲ್ಯ, ಪ್ರವಾಸಿಗರ ಅತಿರೇಕದ ವರ್ತನೆ ಮತ್ತು ಸ್ಥಳೀಯರ ದಬ್ಬಾಳಿಕೆಯಿಂದ ಕೊಡಗು ಜಿಲ್ಲೆಯ ಹೆಸರಿಗೆ ಕಳಂಕ ತರುವಂತವಾಗಿದೆ.

    ಇತ್ತೀಚೆಗೆ ಕೊಡಗಿನ ಪ್ರಸಿದ್ಧ ಪ್ರವಾಸಿ ತಾಣ ದುಬಾರೆಗೆ ಹೈದ್ರಾಬಾದಿನ ಕಂಪನಿಯ ಯುವಕರ ತಂಡವೊಂದು ಪ್ರವಾಸಕ್ಕೆಂದು ಬಂದಿದ್ದು, ರ‍್ಯಾಫ್ಟಿಂಗ್ ಗೆ ತೆರಳಿದ್ದಾಗ ರ‍್ಯಾಫ್ಟರ್ ನಡುವೆ ಅತಿರೇಕದಿಂದ ವರ್ತಿಸಿ ಜಗಳ ಮಾಡಿದ್ದಾರೆ. ಇದಾದ ಬಳಿಕ ರ‍್ಯಾಫ್ಟಿಂಗ್ ಸ್ಥಳದಲ್ಲಿ ಮತ್ತೆ ಪ್ರವಾಸಿ ಯುವಕರು ಹಾಗೂ ರ‍್ಯಾಫ್ಟರ್ ಗಳ ನಡುವೆ ಮಾತಿಗೆ ಮಾತು ಬೆಳೆದು ಹೊಡೆದಾಟವಾಗಿದೆ. ಈ ಸಂದರ್ಭ ರ‍್ಯಾಫ್ಟಿಂಗ್ ಗೆ ಬಳಸುವ ಪೆಡಲ್ ನಿಂದ ರ‍್ಯಾಫ್ಟರ್ ಹಲ್ಲೆ ಮಾಡಿದ್ದಾನೆ. ಪರಿಣಾಮ ಐದಾರು ಮಂದಿಗೆ ಗಾಯಗಳಾಗಿದ್ದು, ಪ್ರವಾಸಿ ಯುವಕ ರಜಿ ಅಹಮ್ಮದ್ ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣ ಆತನನ್ನು ಮೈಸೂರಿನ ಆಸ್ಪತ್ರೆಗೆ ಸಾಗಿಸಿತಾದರೂ ಆತ ಮೃತಪಟ್ಟಿದ್ದಾನೆ.

    ಯುವಕನ ಸಾವಿಗೆ ಕಾರಣರಾದ ರ‍್ಯಾಫ್ಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದ ದುಬಾರೆ ಹಾಗೂ ನಂಜರಾಯಪಟ್ಟಣ ಸುತ್ತಮುತ್ತಲಿನ ಸುಮಾರು 7 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

    ದುಬಾರೆ ರ‍್ಯಾಫ್ಟಿಂಗ್ ಹಿಂದಿನಿಂದಲೂ ವಿವಾದಿತ ವಿಚಾರವಾಗಿದ್ದು, ಖಾಸಗಿ ವ್ಯಕ್ತಿಗಳು ರ‍್ಯಾಫ್ಟಿಂಗ್ ನಡೆಸುತ್ತಿದ್ದಾರೆ. ಅದನ್ನು ವಶಕ್ಕೆ ಪಡೆದು ರ‍್ಯಾಫ್ಟಿಂಗ್ ನಿರ್ವಹಣೆ ಮಾಡುವುದರಲ್ಲಿ ಹಾಗೂ ಪ್ರವಾಸಿಗರಿಗೆ ಸೂಕ್ತ ರಕ್ಷಣೆ ನೀಡಿ, ಪ್ರವಾಸಿಗರ ಅತಿರೇಕದ ವರ್ತನೆಗೆ ಕಡಿವಾಣ ಹಾಕುವುದರಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಂಪೂರ್ಣವಾಗಿ ವಿಫಲವಾಗಿರುವುದೇ ಇಂತಹ ದುರ್ಘಟನೆಗಳಿಗೆ ಕಾರಣ ಎಂಬ ಮಾತುಗಳೂ ಕೇಳಿಬರುತ್ತಿವೆ. ಅಲ್ಲದೆ ಜಿಲ್ಲೆಯ ಇತರೆ ಜಲಪಾತಗಳಂತಹ ಪ್ರವಾಸಿ ತಾಣಗಳಲ್ಲೂ ಪ್ರವಾಸಿರಿಗೆ ಸೂಕ್ತ ರಕ್ಷಣೆ ಇಲ್ಲದಿರೋದು ಹಲವು ಅನಾಹುತಗಳಿಗೆ ಕಾರಣವಾಗಿದೆ.

     

  • ಸೆರೆಸಿಕ್ಕ ಕಾಡಾನೆಗಳಿಗೆ ದುಬಾರೆಯಲ್ಲಿ ಟ್ರೈನಿಂಗ್!

    ಸೆರೆಸಿಕ್ಕ ಕಾಡಾನೆಗಳಿಗೆ ದುಬಾರೆಯಲ್ಲಿ ಟ್ರೈನಿಂಗ್!

    ಮಡಿಕೇರಿ: ಮಂಜಿನ ನಗರಿಯ ಕಾಫಿತೋಟಗಳಲ್ಲಿ ಬೀಡುಬಿಟ್ಟು ಜನರಲ್ಲಿ ಆತಂಕ ಸೃಷ್ಟಿಸಿದ್ದ ಕಾಡಾನೆಗಳನ್ನು ಸೆರೆಹಿಡಿದು ಪಳಗಿಸುವ ಕಾರ್ಯ ನಡೀತಿದೆ. ದುಬಾರೆ ಆನೆ ಶಿಬಿರದ ಪ್ರತ್ಯೇಕ ಕ್ರಾಲ್‍ಗಳಲ್ಲಿ ಪುಂಡಾನೆಗಳನ್ನು ಕೂಡಿಟ್ಟು ತರಬೇತಿ ನೀಡಲಾಗುತ್ತಿದ್ದು, ಮಾವುತರು ನಿತ್ಯವೂ ಈ ಆನೆಗಳಿಗೆ ಪಾಠ ಮಾಡ್ತಿದ್ದಾರೆ.

    ಕೊಡಗು ಜಿಲ್ಲೆಯ ವಿರಾಜಪೇಟೆ ಹಾಗೂ ಸೋಮವಾರಪೇಟೆಯ ಸಿದ್ದಾಪುರ, ಪಾಲಿಬೆಟ್ಟ ಸುತ್ತಮುತ್ತ ಆತಂಕ ಸೃಷ್ಟಿಸಿದ್ದ ನಾಲ್ಕು ಪುಂಡಾನೆಗಳನ್ನು ಇತ್ತೀಚೆಗೆ ಸೆರೆ ಹಿಡಿಯಲಾಗಿತ್ತು. ಸದ್ಯ ಈ ಪುಂಡಾನೆಗಳಿಗೆ ದುಬಾರೆ ಸಾಕಾನೆ ಶಿಬಿರದಲ್ಲಿ ಟ್ರೈನಿಂಗ್ ನೀಡಲಾಗ್ತಿದೆ. ಪ್ರತಿನಿತ್ಯ ಹುಲ್ಲು, ಭತ್ತ, ಕಾಡು ಸೊಪ್ಪು ಕೊಟ್ಟು ಕಾಡಾನೆಗಳ ಆರ್ಭಟವನ್ನ ತಣ್ಣಗಾಗಿಸಲು ಪ್ರಯತ್ನಿಸಲಾಗ್ತಿದೆ.

    ಸೆರೆಹಿಡಿದ ಆನೆಗಳನ್ನು ಕ್ರಾಲ್‍ಗಳಲ್ಲಿ ಬಂಧಿಸಿಡಲಾಗಿದೆ. ಮೊದಲು ಮಾವುತರು ಆನೆಗಳ ಸ್ವಭಾವ ಅರಿತು ಹಂತ ಹಂತವಾಗಿ ತರಬೇತಿ ನೀಡುತ್ತಾರೆ. ಕನಿಷ್ಟ ಮೂರು ತಿಂಗಳ ತರಬೇತಿ ನಂತರ ಕಾಡಾನೆಗಳ ಆರ್ಭಟವನ್ನು ತಣ್ಣಗಾಗಿಸಲಾಗುತ್ತೆ. ಸಾಕಾನೆಗಳನ್ನು ಬಂಧಿಯಾದ ಕಾಡಾನೆಗಳ ಬಳಿ ಕರೆತಂದು ಮೃದುವಾಗಿಸಲಾಗುತ್ತಿದೆ.

    ಕಾಫಿ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಕೊಂದು ಅತಂಕಕ್ಕೆ ಕಾರಣವಾಗಿದ್ದ ಕಾಡಾನೆಗಳು ಬಂಧಿಯಾಗಿವೆ. ಆದ್ರೆ ಆನೆ, ಮಾನವ ಸಂಘರ್ಷ ದಿನೇ ದಿನೇ ಹೆಚ್ಚುತ್ತಲೇ ಇದೆ. ಇದಕ್ಕೆ ಶಾಶ್ವತವಾಗಿ ಮುಕ್ತಿ ಹಾಡಲು ಅರಣ್ಯ ಇಲಾಖೆ ಮುಂದಾಗಬೇಕು ಅಂತಾ ಜಿಲ್ಲೆಯ ಜನ ಆಗ್ರಹಿಸುತ್ತಿದ್ದಾರೆ.