Tag: drunk and drive

  • ವೀಕೆಂಡ್‍ನಲ್ಲಿ ಪೊಲೀಸ್ರಿಂದ ಶಾಕ್ – ಒಂದೇ ದಿನ 100 ಡ್ರಿಂಕ್ & ಡ್ರೈವ್ ಕೇಸ್ ದಾಖಲು

    ವೀಕೆಂಡ್‍ನಲ್ಲಿ ಪೊಲೀಸ್ರಿಂದ ಶಾಕ್ – ಒಂದೇ ದಿನ 100 ಡ್ರಿಂಕ್ & ಡ್ರೈವ್ ಕೇಸ್ ದಾಖಲು

    – ಹಾಸನದಲ್ಲೇ ವರ್ಷಕ್ಕೆ 420 ಜನ ಅಪಘಾತದಲ್ಲಿ ಸಾವು

    ಹಾಸನ: ವೀಕೆಂಡ್‍ನಲ್ಲಿ ಕುಡಿದು ವಾಹನ ಚಲಾಯಿಸುವವರಿಗೆ ಹಾಸನ ಪೊಲೀಸರು ಭರ್ಜರಿ ಶಾಕ್ ನೀಡಿದ್ದಾರೆ. ಶನಿವಾರ ಒಂದೇ ದಿನ ಸುಮಾರು 100 ಡ್ರಿಂಕ್ ಆ್ಯಂಡ್ ಡ್ರೈವ್ ಕೇಸ್ ದಾಖಲಿಸಿ ಬಿಸಿ ಮುಟ್ಟಿಸಿದ್ದಾರೆ.

    ಕಳೆದ ಮೂರು ದಿನಗಳಲ್ಲಿ ಹಾಸನ ಜಿಲ್ಲೆಯಾದ್ಯಂತ 200ಕ್ಕೂ ಹೆಚ್ಚು ಡ್ರಿಂಕ್ ಆ್ಯಂಡ್ ಡ್ರೈವ್ ಕೇಸ್ ದಾಖಲಾಗಿದ್ದು, ಇದರಿಂದ ಕುಡಿದು ವಾಹನ ಚಲಾಯಿಸುತ್ತಿದ್ದವರು ಈಗ ಹೆದರುವಂತಾಗಿದೆ. ಕಳೆದ ಕೆಲವು ವರ್ಷಗಳಿಂದ ಹಾಸನ ಜಿಲ್ಲೆಯೊಂದರಲ್ಲೇ ಅಪಘಾತದಿಂದಾಗಿ ವರ್ಷಕ್ಕೆ ಸರಾಸರಿ 420 ಜನ ಮೃತಪಟ್ಟಿದ್ದಾರೆ. ಇದು ಒಂದು ಜಿಲ್ಲೆಯ ಮಟ್ಟಿಗೆ ನೋಡುವುದಾದರೆ ದೊಡ್ಡ ಸಾವಿನ ಸಂಖ್ಯೆಯಾಗಿದೆ.

    ಈ ಹಿನ್ನೆಲೆಯಲ್ಲಿ ಜಿಲ್ಲೆಗೆ ನೂತನ ಎಸ್‍ಪಿಯಾಗಿ ಶ್ರೀನಿವಾಸ್‍ಗೌಡ ಅಧಿಕಾರ ವಹಿಸಿಕೊಂಡ ದಿನದಿಂದ ಅಪಘಾತದಿಂದ ಉಂಟಾಗುತ್ತಿರುವ ಸಾವು-ನೋವಿನ ಪ್ರಮಾಣ ತಗ್ಗಿಸಲು ಪಣ ತೊಟ್ಟಿದ್ದಾರೆ. ಆದ್ದರಿಂದ ಅಪಘಾತಕ್ಕೆ ಕಾರಣವಾಗುತ್ತಿರುವ ಅಂಶಗಳನ್ನು ಪಟ್ಟಿ ಮಾಡಿ, ಅವುಗಳನ್ನು ಸರಿ ಪಡಿಸಲು ಹಗಲು ರಾತ್ರಿ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆಗಿಳಿದಿದ್ದಾರೆ.

    ಅಪಘಾತದಲ್ಲಿ ಸಾವು ನೋವು ಹೆಚ್ಚಾಗುತ್ತಿರುವುದಕ್ಕೆ ಕುಡಿದು ವಾಹನ ಚಲಾಯಿಸುವುದು ಕೂಡ ಒಂದು ಪ್ರಮುಖ ಕಾರಣವಾಗಿದೆ. ಹೀಗಾಗಿ ಹಾಸನ ಜಿಲ್ಲಾ ಪೊಲೀಸರು ಜಿಲ್ಲೆಯಾದ್ಯಂತ ಕುಡಿದು ವಾಹನ ಚಲಾಯಿಸುತ್ತಿರುವವರನ್ನು ಹಿಡಿದು ಕೇಸ್ ಹಾಕುತ್ತಿದ್ದಾರೆ.

    ಕುಡಿದು ವಾಹನ ಚಲಾಯಿಸುವವರನ್ನು ಹಿಡಿದಾಗ ಕೆಲವರು ತಮ್ಮ ಪ್ರಭಾವ ಬಳಸಲು ಮುಂದಾಗುತ್ತಾರೆ. ಕೆಲವೊಮ್ಮೆ ಬೇರೆಯವರಿಂದಲೂ ಕರೆ ಮಾಡಿಸುತ್ತಾರೆ. ಆದರೆ ನಾವು ಒಂದು ಒಳ್ಳೆಯ ಕೆಲಸಕ್ಕಾಗಿ ಕುಡಿದು ವಾಹನ ಚಲಾಯಿಸದಂತೆ ಮನವಿ ಮಾಡುತ್ತಿದ್ದೇವೆ. ಈ ವಿಚಾರದಲ್ಲಿ ಯಾರೂ ಕೂಡ ತಮ್ಮ ಪ್ರಭಾವ ಬಳಸುವುದು ಸರಿಯಲ್ಲ ಎಂದು ಎಸ್‍ಪಿ ಶ್ರೀನಿವಾಸ್ ಗೌಡ ಹೇಳಿದ್ದಾರೆ. ಇತ್ತ ಸಾರ್ವಜನಿಕರು ಕೂಡ ಪೊಲೀಸರ ಕ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.

  • ಬೆಳ್ಳಂಬೆಳಗ್ಗೆ ಕಂಠಪೂರ್ತಿ ಮದ್ಯ ಕುಡಿದು ಮಿನಿ ಬಸ್ ಚಾಲನೆ- 4 ಆಟೋ, ಬೈಕ್ ಜಖಂ

    ಬೆಳ್ಳಂಬೆಳಗ್ಗೆ ಕಂಠಪೂರ್ತಿ ಮದ್ಯ ಕುಡಿದು ಮಿನಿ ಬಸ್ ಚಾಲನೆ- 4 ಆಟೋ, ಬೈಕ್ ಜಖಂ

    – ತಪ್ಪಿದ ಭಾರೀ ಅನಾಹುತ, ಮೂವರಿಗೆ ಗಂಭೀರ ಗಾಯ
    – ಮಿನಿ ಬಸ್ ಚಾಲಕನನ್ನು ವಶಕ್ಕೆ ಪಡೆದ ಪೊಲೀಸ್

    ಬೆಂಗಳೂರು: ಬೆಳ್ಳಂಬೆಳಗ್ಗೆ ಕಂಠಪೂರ್ತಿ ಮದ್ಯ ಕುಡಿದು ಮಿನಿ ಬಸ್ ಚಾಲಕನೊಬ್ಬ ಸರಣಿ ಅಪಘಾತ ನಡೆಸಿರುವ ಘಟನೆ ಬೆಂಗಳೂರಿನ ಯಶವಂತಪುರ ರೈಲ್ವೆ ಸ್ಟೇಷನ್ ಬಳಿ ನಡೆದಿದೆ.

    ವೆಂಕಟರಮಣಪ್ಪ ಮದ್ಯ ಕುಡಿದು ಮಿನಿ ಬಸ್ ಓಡಿಸಿದ ಚಾಲಕ. ಘಟನೆಯಲ್ಲಿ ಆಟೋ ಚಾಲಕರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಯಶವಂತಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಮಿನಿ ಬಸ್ ಚಾಲಕ ವೆಂಕಟರಮಣಪ್ಪ ಬೆಳಗ್ಗೆ ಎಂಟು ಗಂಟೆ ಸುಮಾರಿಗೆ ಪೀಣ್ಯ ಕಡೆಯಿಂದ ಯಶವಂತಪುರ ಕಡೆ ವೇಗವಾಗಿ ಹೋಗುತ್ತಿದ್ದ. ಆದರೆ ಯಶವಂತಪುರ ರೈಲ್ವೆ ನಿಲ್ದಾಣದ ಬಳಿ ಚಾಲಕನ ನಿಯಂತ್ರಣ ತಪ್ಪಿದ ಮಿನಿ ಬಸ್ ಆಟೋ ಸ್ಟ್ಯಾಂಡ್‍ಗೆ ನುಗ್ಗಿತ್ತು. ಪರಿಣಾಮ ನಾಲ್ಕು ಆಟೋ ಹಾಗೂ ಒಂದು ಬೈಕ್ ಜಖಂಗೊಂಡಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

    ಆಟೋ ಸ್ಟ್ಯಾಂಡ್‍ನಲ್ಲಿದ್ದ ಚಾಲಕರು ಮಿನಿ ಬಸ್ ಚಾಲಕ ವೆಂಕಟರಮಣಪ್ಪನನ್ನ ವಶಕ್ಕೆ ಪಡೆದು ವಿಚಾರಿಸಿದಾಗ ಎಣ್ಣೆ ಹೊಡೆದಿರುವುದು ಖಚಿತವಾಗಿತ್ತು. ಈ ಸಂಬಂಧ ಆಟೋ ಚಾಲಕರು ಯಶವಂತಪುರ ಸಂಚಾರಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣವೇ ಸ್ಥಳಕ್ಕೆ ಬಂದ ದೌಡಾಯಿಸಿದ ಪೊಲೀಸರು ವೆಂಕಟರಮಣಪ್ಪನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ಬಳಿಕ ವೆಂಕಟರಣಪ್ಪನನ್ನು ಆಸ್ಪತ್ರೆಗೆ ಕರೆದೊಯ್ದು ಆಲ್ಕೋ ಹಾಲ್ ಪರಿಶೀಲನೆ ಮಾಡಿಸಿದಾಗ ಆರೋಪಿಯು ಮದ್ಯ ಸೇವಿಸಿದ್ದು ದೃಡಪಟ್ಟಿದೆ. ಹೀಗಾಗಿ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ಮದ್ಯ ಸೇವಿಸಿ ಕಾರು ಓಡಿಸಿ ಆಟೋಗೆ ಡಿಕ್ಕಿ ಹೊಡೆದ ಆರ್‌ಟಿಓ ಇನ್ಸ್‌ಪೆಕ್ಟರ್

    ಮದ್ಯ ಸೇವಿಸಿ ಕಾರು ಓಡಿಸಿ ಆಟೋಗೆ ಡಿಕ್ಕಿ ಹೊಡೆದ ಆರ್‌ಟಿಓ ಇನ್ಸ್‌ಪೆಕ್ಟರ್

    ಬೆಂಗಳೂರು: ಸಂಚಾರ ನಿಯಮ ಪಾಲನೆ ಮಾಡದ ವಾಹನ ಸವಾರರಿಗೆ ಸರ್ಕಾರ ಭಾರೀ ಮೊತ್ತದ ದಂಡವನ್ನು ವಿಧಿಸುತ್ತಿದೆ. ಆದರೆ ಸಂಚಾರ ನಿಯಮ ಹೇಳಿಕೊಟ್ಟು, ವಾಹನ ಚಾಲನ ಕೌಶಲ್ಯವನ್ನು ಪರೀಕ್ಷಿಸುವ ಆರ್‌ಟಿಓ ಇನ್ಸ್‌ಪೆಕ್ಟರ್ ಒಬ್ಬರು ಕಂಠ ಪೂರ್ತಿ ಮದ್ಯ ಕುಡಿದು ವಾಹನ ಚಾಲನೆ ಮಾಡಿ, ಆಟೋಗೆ ಡಿಕ್ಕಿ ಹೊಡೆದಿದ್ದಾರೆ.

    ನಗರದ ಎಲೆಕ್ಟ್ರಾನಿಕ್ ಸಿಟಿಯ ಸೆಕೆಂಡ್ ಪೇಸ್‍ನಲ್ಲಿ ಘಟನೆ ನಡೆದಿದೆ. ಆನೇಕಲ್ ಸಮೀಪದ ಮರಸೂರು ಬಳಿಯ ಕೆಎ 59 ಹಾಗೂ ದೇವರಚಿಕ್ಕನಹಳ್ಳಿಯ ಕೆಎ 51ರ ಆರ್‌ಟಿಓ ಕಚೇರಿಯ ಮಂಜುನಾಥ್ ಇಂತಹ ಅವಾಂತರ ಸೃಷ್ಟಿಸಿದ ಇನ್ಸ್‌ಪೆಕ್ಟರ್. ಘಟನೆಯಲ್ಲಿ ಆಟೋ ಚಾಲಕ ಸೈಯದ್ ಇಮ್ರಾನ್ ಅವರ ಬಲಗೈ ಮೂಳೆ ಮುರಿದಿದೆ.

    ಮಂಜುನಾಥ್ ಕಂಠ ಪೂರ್ತಿ ಕುಡಿದು ಕಾರು ಚಾಲನೆ ಮಾಡುತ್ತಿದ್ದರು. ಈ ವೇಳೆ ಎಲೆಕ್ಟ್ರಾನಿಕ್ ಸಿಟಿಯ ಸೆಕೆಂಡ್ ಪೇಸ್‍ನಲ್ಲಿ ಮಂಜುನಾಥ್ ಅವರ ನಿಯಂತ್ರಣ ತಪ್ಪಿದ ಕಾರು ಆಟೋಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆಟೋ ಮುಂಭಾಗ ಜಖಂಗೊಂಡಿದ್ದು, ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದನ್ನು ನೋಡಿ ಸ್ಥಳೀಯರು ಹಾಗೂ ಆಟೋ ಚಾಲಕರು ಕಾರಿನಿಂದ ಮಂಜುನಾಥ್ ಅವರನ್ನು ಹೊರಗೆ ಎಳೆದು ತರಾಟೆ ತೆಗೆದುಕೊಂಡಿದ್ದಾರೆ.

    ಮದ್ಯ ಸೇವಿಸಿದ್ದ ಮಂಜುನಾಥ್ ಸಾರ್ವಜನಿಕರ ಮುಂದೆ ನಿಲ್ಲಲು ಸಾಧ್ಯವಾಗದೆ ಜೋಲಿ ಹೊಡೆಯುತ್ತಿದ್ದರು. ಈ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಅಷ್ಟೇ ಅಲ್ಲದೆ ಇನ್ಸ್‌ಪೆಕ್ಟರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

    ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸರು ಪರಿಸ್ಥಿತಿಯನ್ನು ನಿಬಾಯಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಆಟೋ ಚಾಲಕ ಸೈಯದ್ ಇಮ್ರಾನ್ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಂಜುನಾಥ್ ಅವರನ್ನು ವಶಕ್ಕೆ ಪಡೆದಿರುವ ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.

  • ಮದ್ಯದ ಅಮಲಿನಲ್ಲಿ ಪಾದಚಾರಿಗಳ ಮೇಲೆ ಕಾರು ಹತ್ತಿಸಿದ ಚಾಲಕ

    ಮದ್ಯದ ಅಮಲಿನಲ್ಲಿ ಪಾದಚಾರಿಗಳ ಮೇಲೆ ಕಾರು ಹತ್ತಿಸಿದ ಚಾಲಕ

    ಬೆಂಗಳೂರು: ಮದ್ಯದ ಅಮಲಿನಲ್ಲಿ ಚಾಲಕನೊಬ್ಬ ಪಾದಚಾರಿಗಳ ಮೇಲೆ ಕಾರು ಹತ್ತಿಸಿದ ಘಟನೆ ನಗರದ ಹೆಚ್‍ಎಸ್‍ಆರ್ ಲೇಔಟ್‍ನಲ್ಲಿ ನಡೆದಿದೆ.

    ಜೆಪಿ ನಗರದ ಕೊತ್ತನೂರು ದಿಣ್ಣೆ ನಿವಾಸಿ ರಾಜೇಂದ್ರ .ಕೆ ಮದ್ಯ ಸೇವಿಸಿ ಅಡ್ಡಾದಿಡ್ಡಿ ಕಾರು ಓಡಿಸಿದ ಚಾಲಕ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಹಲವರಿಗೆ ಗಂಭೀರ ಗಾಯವಾಗಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಆರೋಪಿ ರಾಜೇಂದ್ರ ಮದ್ಯ ಸೇವಿಸಿ ಕಾರು ಚಾಲನೆ ಮಾಡುತ್ತಿದ್ದ. ಈ ವೇಳೆ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ನಿಲ್ಲಿಸಿದ್ದ ಬೈಕ್‍ಗಳಿಗೆ ಡಿಕ್ಕಿ ಹೊಡೆದು ಫುಟ್‍ಪಾತ್ ಮೇಲೆ ಕಾರನ್ನು ಹತ್ತಿಸಿದ್ದಾನೆ. ಪರಿಣಾಮ ಫುಟ್‍ಪಾತ್ ಅಂಗಡಿಯ ಮುಂದೆ ನಿಂತಿದ್ದ ಹಾಗೂ ನಡೆದುಕೊಂಡು ಹೋಗುತ್ತಿದ್ದ ಒಟ್ಟು 8 ಜನರಿಗೆ ಡಿಕ್ಕಿಹೊಡೆದಿದ್ದಾನೆ. ಅದೃಷ್ಟವಶಾತ್ ಯಾವುದೇ ಸಾವು ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಘಟನೆಯನ್ನು ನೋಡಿ ಕೆಲವರು ತಕ್ಷಣವೇ ಕಾರಿನ ಬಳಿಗೆ ಬಂದು ಗಾಯಾಳುಗಳನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಚಾಲಕನನ್ನು ಥಳಿಸಿ, ನಮಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ, ಆರೋಪಿ ಚಾಕಲ ರಾಜೇಂದ್ರನನ್ನು ತಪಾಸಣೆಗೆ ಒಳಪಡಿಸಿದಾಗ ಮದ್ಯ ಸೇವಿಸಿರುವುದು ಖಚಿತವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಈ ಪ್ರಕರಣದ ಸಂಬಂಧ ಹೆಚ್‍ಎಸ್‍ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಚಾಲಕ ರಾಜೇಂದ್ರನನ್ನು ಬಂಧಿಸಿರುವ ಪೊಲೀಸರು ವಿಚಾರಗೆ ಒಳಪಡಿಸಿದ್ದಾರೆ.

  • ಕಂಠಪೂರ್ತಿ ಕುಡಿದು ಅಂಬುಲೆನ್ಸ್ ಚಾಲನೆ ಮಾಡಿದ್ದ ಚಾಲಕ ಪೊಲೀಸರ ವಶಕ್ಕೆ

    ಕಂಠಪೂರ್ತಿ ಕುಡಿದು ಅಂಬುಲೆನ್ಸ್ ಚಾಲನೆ ಮಾಡಿದ್ದ ಚಾಲಕ ಪೊಲೀಸರ ವಶಕ್ಕೆ

    ಬೆಂಗಳೂರು: ಕಂಠಪೂರ್ತಿ ಕುಡಿದು ವಾಹನ ಚಾಲನೆ ಮಾಡುತ್ತಿದ್ದ ಅಂಬುಲೆನ್ಸ್ ಚಾಲಕನನ್ನು ನಗರದ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    47 ವರ್ಷದ ರುದ್ರೇಶಪ್ಪ ಆಂಬುಲೆನ್ಸ್ ಚಾಲಕ. ರುದ್ರೇಶಪ್ಪ ಸುಂಕದಕಟ್ಟೆಯಿಂದ ಕೆಎಚ್‍ಬಿ ಜಂಕ್ಷನ್ ನಲ್ಲಿರುವ 108 ಅಂಬುಲೆನ್ಸ್ ಕಚೇರಿಗೆ ಆಗಮಿಸುತ್ತಿದ್ದನು. ಈ ವೇಳೆ ಪೊಲೀಸ್ ತಪಾಸಣೆ ಸಂದರ್ಭದಲ್ಲಿ ರುದ್ರೇಶಪ್ಪ ಮದ್ಯಪಾನ ಮಾಡಿರೋದು ಗೊತ್ತಾಗಿದೆ.

    ಟ್ರಾಫಿಕ್ ಪೊಲೀಸರು 108 ಅಂಬುಲೆನ್ಸ್ ವಾಹನವನ್ನು ಜಪ್ತಿ ಮಾಡಿ, ಚಾಲಕ ರುದ್ರೇಶಪ್ಪನ ವಿರುದ್ಧ ಡ್ರಂಕ್ ಆಂಡ್ ಡ್ರೈವ್ ಕೇಸ್ ದಾಖಲಿಸಿದ್ದಾರೆ.

  • ರಚನಾ ಕೊನೆಯ ಆಸೆ ಏನಾಗಿತ್ತು? ಅಪಘಾತ ಆಗಿದ್ದು ಹೇಗೆ?

    ರಚನಾ ಕೊನೆಯ ಆಸೆ ಏನಾಗಿತ್ತು? ಅಪಘಾತ ಆಗಿದ್ದು ಹೇಗೆ?

    ಬೆಂಗಳೂರು: ಧಾರಾವಾಹಿಗಳಲ್ಲಿ ಉದಯೋನ್ಮುಖ ನಟ, ನಟಿಯರಾಗಿದ್ದ ರಚನಾ((23) ಮತ್ತು ಜೀವನ್‍ನ್(25) ಗುರುವಾರ ತಡರಾತ್ರಿ ನೆಲಮಂಗಲದ ಸೋಲೂರು ಬಳಿಯ ಹೈವೆಯಲ್ಲಿ ಭೀಕರ ಅಪಘಾತಕ್ಕೆ ಬಲಿಯಾಗಿದ್ದಾರೆ.

    ಸಹನಟರ ಜೊತೆ ಚಿತ್ರೀಕರಣ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನಕ್ಕೆ ಕಾರ್‍ನಲ್ಲಿ ಎಲ್ಲರೂ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಹೆದ್ದಾರಿಯಲ್ಲಿ ಬಸ್ ಬಂತೆಂದು ಎಡಭಾಗಕ್ಕೆ ಕಾರನ್ನು ಚಲಾಯಿಸಿ ನಿಂತಿದ್ದ ಕ್ಯಾಂಟರ್ ಗೆ ಸಫಾರಿ ಕಾರು ಡಿಕ್ಕಿ ಹೊಡೆದಿದ್ದಾಗಿ ಗಾಯಾಳುಗಳು ಪೊಲೀಸರ ಬಳಿ ಹೇಳಿಕೆ ನೀಡಿದ್ದಾರೆ.

    ಘಟನೆಯಲ್ಲಿ ಗಾಯಗೊಂಡ ಸಹ ನಟರಾದ ಬಿಎಸ್ ರಂಜಿತ್, ಉತ್ತಮ್, ಹೊನ್ನೇಶ್, ಕಾರ್ತಿಕ್, ಮತ್ತು ಎರಿಕ್ ಈ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ. ಆದರೂ ಕಾರಿನಲ್ಲಿದ್ದವರು ಮದ್ಯಪಾನ ಮಾಡಿದ್ದರು ಎನ್ನಲಾಗಿದೆ. ಘಟನೆ ಸಂಬಂಧ ಮಾಗಡಿಯ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

    ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ಶವ ಒಪ್ಪಿಸಲಾಯಿತು. ಬಳಿಕ ಆರ್‍ಆರ್ ನಗರದ ರಚನಾ ನಿವಾಸದ ಬಳಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಬಳಿಕ ಕೆಂಗೇರಿಯ ವಿದ್ಯುತ್ ಚಿತಾಗಾರದಲ್ಲಿ ರಚನಾ ಮತ್ತು ಜೀವನ್ ಮೃತದೇಹವನ್ನು ಅಂತ್ಯ ಸಂಸ್ಕಾರ ಮಾಡಲಾಯಿತು.

    ತ್ರಿವೇಣಿ ಸಂಗಮ, ಮಹಾನದಿ ಧಾರಾವಾಹಿಗಳಲ್ಲಿ ರಚನಾ ನಟಿಸುತ್ತಿದ್ದರೆ, ಮಜಾ ಭಾರತ ರಿಯಾಲಿಟಿ ಶೋನಲ್ಲಿ ಜೀವನ್ ನಟಿಸುತ್ತಿದ್ದರು.

    ಕೊನೆಯ ಆಸೆ: ಖಾಸಗಿ ವಾಹಿನಿ ನಡೆಸಿಕೊಡುವ ಡ್ಯಾನ್ಸ್ ಡ್ಯಾನ್ಸ್ ಜ್ಯೂನಿಯರ್ ಕಾರ್ಯಕ್ರಮದಲ್ಲಿ ಕೊರಿಯೋಗ್ರಫರ್ ಕಮ್ ಜ್ಯೂರಿ ಸಲ್ಮಾನ್ ಭೇಟಿಯಾಗಿ ತಮ್ಮ ಮನದಾಳವನ್ನು ರಚನಾ ಹಂಚಿಕೊಂಡಿದ್ದರು. ಕೊನೆಯಾಸೆಯಂತೆ ಸಲ್ಮಾನ್ ಜೊತೆ ರಚನಾ ಡ್ಯಾನ್ಸ್ ಮಾಡಿದ್ದರು. ರಚನಾ ಡ್ಯಾನ್ಸ್ ನೋಡಿ ಟೆಡ್ಡಿಬೇರ್ ಗೊಂಬೆಯನ್ನು ಸಲ್ಮಾನ್ ಉಡುಗೊರೆಯಾಗಿ ನೀಡಿದ್ದರು.

    https://youtu.be/eU7SEeUcTJ8

    https://youtu.be/78wSqmIpRo0

    ಚಿತ್ರ ಕೃಪೆ: ಸ್ಟಾರ್ ಸುವರ್ಣ

  • ಡ್ರಂಕ್ ಅಂಡ್ ಡ್ರೈವ್ ತಪಾಸಣೆ ವೇಳೆ ಪೊಲೀಸರಿಗೆ ಯುವತಿಯರ ಅವಾಜ್

    ಡ್ರಂಕ್ ಅಂಡ್ ಡ್ರೈವ್ ತಪಾಸಣೆ ವೇಳೆ ಪೊಲೀಸರಿಗೆ ಯುವತಿಯರ ಅವಾಜ್

    ಬೆಂಗಳೂರು: ಡ್ರಂಕ್ ಅಂಡ್ ಡ್ರೈವ್ ತಪಾಸಣೆ ಮಾಡುತ್ತಿದ್ದ ವೇಳೆ ಯುವತಿಯರು ಪೊಲೀಸರಿಗೆ ಅವಾಜ್ ಹಾಕಿದ ಘಟನೆ ರಿಚ್ಮಂಡ್ ಸರ್ಕಲ್ ಬಳಿ ನಡೆದಿದೆ.

    ಇಲ್ಲಿನ ರಮಣಶ್ರೀ ಹೋಟೆಲ್ ಮುಂಭಾಗ ಡ್ರಂಕ್ ಆಂಡ್ ಡ್ರೈವ್ ತಪಾಸಣೆ ನಡೆಸುತ್ತಿದ್ದ ತಂಡಕ್ಕೆ ನಾಲ್ವರು ಯುವತಿಯರು ಅವಾಜ್ ಹಾಕಿದ್ದಾರೆ. ಅಷ್ಟೆ ಅಲ್ಲದೆ ತಾನೊಬ್ಬ ರಾಷ್ಟ್ರೀಯ ವಾಹಿನಿಯ ವರದಿಗಾರ್ತಿ ಅಂತಾ ಪೊಲೀಸರನ್ನ ನಿಂದಿಸಿದ್ದಾರೆ.

    ಮತ್ತೊಂದೆಡೆ ಕುಡಿದು ಗಾಡಿ ಓಡಿಸ್ತಿದ್ದ ಇರಾನಿ ಪ್ರಜೆಯನ್ನ ಚೆಕ್ ಮಾಡೋಕೆ ಹೋದಾಗ ಹೈಡ್ರಾಮ ನಡೆಸಿದ ಘಟನೆ ತಡರಾತ್ರಿ ಶಾಂತಿನಗರದ ಕೆಎಸ್‍ಆರ್‍ಟಿಸಿ ಬಸ್ ಸ್ಟಾಪ್ ಮುಂದೆ ನಡೆದಿದೆ. ಎಂಜಿ ರಸ್ತೆಯಲ್ಲಿ ಕಂಠ ಪೂರ್ತಿ ಕುಡಿದು ಕಾರು ಚಲಾಯಿಸಿಕೊಂಡು ಬರ್ತಿದ್ದ ಇರಾನಿ ಯುವಕ ಯುವತಿಯರ ಕಾರನ್ನು ತಡೆದು ಪೊಲೀಸರು ತಪಾಸಣೆ ನಡೆಸೋಕೆ ಮುಂದಾಗಿದ್ದಾರೆ. ಆದ್ರೆ ಕುಡಿದ ಅಮಲಿನಲ್ಲಿದ್ದ ಯುವಕ ಮತ್ತು ಯುವತಿಯನ್ನ ಆಲ್ಕೋಮಿಟರ್ ಊದುವಂತೆ ಪೊಲೀಸರು ಅದೆಷ್ಟು ಪರಿ ಪರಿಯಾಗಿ ಕೇಳಿಕೊಂಡರು ಕೂಡ ಅದಕ್ಕೆ ತಲೆಕೆಡಿಸಿಕೊಳ್ಳದೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ರು.

    ನಂತರ ಪೊಲೀಸರು ಅಲ್ಕೋಮೀಟರ್ ಊದುವಂತೆ ಉತ್ತಾಯ ಮಾಡಿದ್ದಕ್ಕೆ ಸಂಚಾರಿ ಪೊಲೀಸರ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗೋಕೆ ನೋಡಿದ್ದಾರೆ. ತಕ್ಷಣ ನೈಟ್ ರೌಂಡ್ಸ್ ನಲ್ಲಿದ್ದ ಹೊಯ್ಸಳ ವಾಹನ ಸ್ಥಳಕ್ಕೆ ಆಗಮಿಸಿ ಇಬ್ಬರು ಯುವಕ ಯುವತಿಯರನ್ನ ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆ ಮಾಡಿಸೋಕೆ ಕರೆದುಕೊಂಡು ಹೋಗಿದ್ದಾರೆ.