Tag: drugs

  • ಜರ್ಮನಿಯಿಂದ ಮಾದಕ ವಸ್ತು ಅರ್ಡರ್ ಮಾಡಿದ್ದ ಮಲೇಷಿಯನ್ ಪ್ರಜೆ ಬಂಧನ

    ಜರ್ಮನಿಯಿಂದ ಮಾದಕ ವಸ್ತು ಅರ್ಡರ್ ಮಾಡಿದ್ದ ಮಲೇಷಿಯನ್ ಪ್ರಜೆ ಬಂಧನ

    – 3 ಲಕ್ಷ ರೂ. ಮೌಲ್ಯದ ಎಂಡಿಎಂಎ ಮಾತ್ರೆ ವಶ

    ಬೆಂಗಳೂರು: ಚೆನ್ನೈ ಮತ್ತು ಬೆಂಗಳೂರು ಏರ್ ಕಸ್ಟಮ್ಸ್ ಅಧಿಕಾರಿಗಳ ಜಂಟಿ ಕಾರ್ಯಾಚರಣೆ ನಡೆಸಿ ವಿದೇಶದಿಂದ ಮಾದಕ ವಸ್ತು ಅರ್ಡರ್ ಮಾಡಿದ್ದ ಆರೋಪಿಯನ್ನು ಬಂಧಿಸಿದ್ದಾರೆ.

    ಭಾರತೀಯ ಮೂಲದ ಮಲೇಷಿಯನ್ ಪ್ರಜೆಯ ಕವಿ ಕುಮಾರ್ (25) ಬಂಧಿತ ಆರೋಪಿಯಾಗಿದ್ದು, ಜರ್ಮನಿಯಿಂದ ಮಾದಕ ವಸ್ತು ಎಂಡಿಎಂಎ ಆರ್ಡರ್ ಮಾಡಿದ್ದ. ಕವಿ ಕುಮಾರ್ ತಾನು ವಾಸಿಸುತ್ತಿದ್ದ ಚೆನ್ನೈ ವಿಳಾಸಕ್ಕೆ ಮಾದಕ ವಸ್ತುಗಳನ್ನು ಅರ್ಡರ್ ಮಾಡಿದ್ದು, ಅಲ್ಲಿಗೆ ಮಾತ್ರೆಗಳಿದ್ದ ಪಾರ್ಸಲ್ ಬಂದಿತ್ತು. ಆದರೆ ಚೆನ್ನೈ ಏರ್ ಕಸ್ಟಮ್ಸ್ ಅಧಿಕಾರಿಗಳು ಏರ್ ಪೋರ್ಟಿನಲ್ಲಿ ಪಾರ್ಸಲನ್ನು ಜಪ್ತಿ ಮಾಡಿದ್ದರು.

    ಪಾರ್ಸಲ್ ಬಂದಿದ್ದ ವಿಳಾಸಕ್ಕೆ ತೆರಳಿ ಪರಿಶೀಲನೆ ನಡೆಸಿದ್ದ ಅಧಿಕಾರಿಗಳಿಗೆ ಆರೋಪಿ ಕವಿ ಕುಮಾರ್ ಬೆಂಗಳೂರಿನಲ್ಲಿರುವ ಮಾಹಿತಿ ಲಭಿಸಿತ್ತು. ಬೆಂಗಳೂರಿನ ಅಮೆಜಾನ್ ಘಟಕದಲ್ಲಿ ಕ್ವಾಲಿಟಿ ಅನಾಲಿಸಿಸ್ಟ್ ಆಗಿದ್ದ ಕವಿ ಕುಮಾರ್ ಜರ್ಮನಿಯಿಂದ ಮಾದಕ ವಸ್ತು ಎಂಡಿಎಂಎ ಆರ್ಡರ್ ಮಾಡಿದ್ದ. ಆದರೆ ಲಾಕ್‍ಡೌನ್ ಕಾರಣದಿಂದ ಆರೋಪಿಗೆ ಚೆನ್ನೈಗೆ ತೆರಳಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಕೋರಮಂಗಲದ ಅಪಾರ್ಟ್‍ಮೆಂಟ್‍ವೊಂದರಲ್ಲಿ ವಾಸವಿದ್ದ.

    ಆರೋಪಿ ಕವಿ ಕುಮಾರ್ ಬೆಂಗಳೂರಿನಲ್ಲಿ ಇರುವುದು ಖಚಿತ ಪಡಿಸಿಕೊಂಡ ಚೆನ್ನೈ ಏರ್ ಕಸ್ಟಮ್ಸ್ ಅಧಿಕಾರಿಗಳು ನಗರಕ್ಕೆ ಆಗಮಿಸಿದ್ದರು. ಅಲ್ಲದೇ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳೊಂದಿಗೆ ಸೇರಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಅರ್ಡರ್ ಮಾಡಿದ್ದ ಸುಮಾರು 3 ಲಕ್ಷ ಮೌಲ್ಯದ ಎಂಡಿಎಂಎ ಮಾತ್ರೆಗಳನ್ನು ಕಸ್ಟಮ್ಸ್ ಅಧಿಕಾರಿಗಲು ವಶಪಡಿಸಿಕೊಂಡಿದ್ದಾರೆ.

  • ಫುಡ್ ಬಾಕ್ಸ್‌ನಲ್ಲಿ ಗಾಂಜಾ ಸಾಗಿಸಿ ಪೊಲೀಸರನ್ನೇ ಯಾಮಾರಿಸಿದ ಡೆಲಿವರಿ ಬಾಯ್

    ಫುಡ್ ಬಾಕ್ಸ್‌ನಲ್ಲಿ ಗಾಂಜಾ ಸಾಗಿಸಿ ಪೊಲೀಸರನ್ನೇ ಯಾಮಾರಿಸಿದ ಡೆಲಿವರಿ ಬಾಯ್

    – ಲಾಕ್‍ಡೌನ್‍ನಲ್ಲಿ ಜಾಸ್ತಿ ಕೆಲಸ ಇಲ್ಲವೆಂದು ಗಾಂಜಾ ಮಾರಲು ಆರಂಭಿಸಿದ
    – ಫುಡ್ ಕೊಡುವ ನೆಪದಲ್ಲಿ ಗ್ರಾಹಕರಿಗೆ ಗಾಂಜಾ ಡೆಲಿವರಿ

    ಚೆನ್ನೈ: ಕೊರೊನಾ ವೈರಸ್ ಭೀತಿಗೆ ಆನ್‍ಲೈನ್‍ನಲ್ಲಿ ಹೆಚ್ಚು ಮಂದಿ ಫುಡ್ ಆರ್ಡರ್ ಮಾಡುವುದನ್ನ ನಿಲ್ಲಿಸಿದ್ದಾರೆ. ಹೀಗಾಗಿ ಕೆಲಸ ಕಡಿಮೆ ಆಯ್ತು ಎಂದು ಡೆಲಿವರಿ ಬಾಯ್‍ಯೋರ್ವ ಫುಡ್ ಬಾಕ್ಸ್‌ನಲ್ಲಿ ಗಾಂಜಾ ಸಾಗಾಟ ಮಾಡಿ, ಗ್ರಾಹಕರ ಮನೆಗೆ ಡೆಲಿವರಿ ನೀಡಿ ಪೊಲೀಸರ ಅತಿಥಿಯಾಗಿದ್ದಾನೆ.

    ತಮಿಳುನಾಡಿನ ಪೆರುಂಗುಡಿಯ ನಿವಾಸಿ ಗುಣಶೇಖರನ್(25) ಗಾಂಜಾ ಡೆಲಿವರಿ ಮಾಡಿದ ಆರೋಪಿ. ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ದೇಶಾದ್ಯಂತ ಲಾಕ್‍ಡೌನ್ ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ಅಗತ್ಯ ಸೇವೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಂದಿಗೆ ಮಾತ್ರ ಓಡಾಡಲು ಅವಕಾಶ ನೀಡಲಾಗಿದೆ. ಆನ್‍ಲೈನ್ ಫುಡ್ ಡೆಲಿವರಿ ಕೊಡುವ ಸೇವೆಯನ್ನು ಅಗತ್ಯ ಸೇವೆಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಫುಡ್ ಡೆಲಿವರಿ ಬಾಯ್ಸ್ ಡೆಲಿವರಿ ನೀಡಲು ಓಡಾಡಬಹುದಾಗಿದೆ. ಆದರೆ ಇದನ್ನೇ ಲಾಭವಾಗಿ ಪಡೆದ ಡೆಲಿವರಿ ಬಾಯ್ ಗುಣಶೇಖರನ್, ಹೇಗೋ ಆನ್‍ಲೈನ್ ಫುಡ್ ಆರ್ಡರ್ ಮಾಡುವವರು ಕಡಿಮೆ, ಹೆಚ್ಚು ಕೆಲಸ ಇಲ್ಲ ಎಂದು ಫುಡ್ ಬಾಕ್ಸ್‌ನಲ್ಲಿ ಗ್ರಾಹಕರಿಗೆ ಗಾಂಜಾ ಮಾರಾಟ ಮಾಡುವ ಕೆಲಸಕ್ಕೆ ಕೈಹಾಕಿದ.

    ಡೆಲಿವರಿ ಬಾಯ್ ಬಳಿ ಇರುವ ಫುಡ್ ಬಾಕ್ಸ್‌ನಲ್ಲಿ ಆಹಾರ ಇರುತ್ತೆ ಎಂದು ಪೊಲೀಸರು ಕೂಡ ಸುಮ್ಮನೆ ಆತನನ್ನು ಹೋಗಲು ಬಿಡುತ್ತಿದ್ದರು. ಹೀಗಾಗಿ ಹಲವು ದಿನಗಳಿಂದ ಈತ ಗಾಂಜಾ ಬೇಕು ಎಂದು ಕರೆ ಮಾಡುವ ಗ್ರಾಹಕರ ಮನೆ ಬಾಗಿಲಿಗೆ ಅದನ್ನು ಡೆಲಿವರಿ ನೀಡುತ್ತಿದ್ದನು. ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಡೆಲಿವರಿ ಬಾಯ್ ಅನ್ನು ಬಂಧಿಸಿದ್ದು, ಆತನ ಬಳಿ ಇದ್ದ 20 ಚಿಕ್ಕ ಚಿಕ್ಕ ಗಾಂಜಾ ಪ್ಯಾಕೆಟ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

    ಈ ಹಿಂದೆ ಡೆಲಿವರಿ ಬಾಯ್ ಓರ್ವ ಅಕ್ರಮವಾಗಿ ಫುಡ್ ಡೆಲಿವರಿ ಕೊಡುವ ನೆಪದಲ್ಲಿ ಗ್ರಾಹಕರಿಗೆ ಮದ್ಯ ನೀಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಸದ್ಯ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆತನಿಗೆ ಗಾಂಜಾ ಹೇಗೆ ಸಿಗುತ್ತಿತ್ತು? ಗ್ರಾಹಕರು ಹೇಗೆ ಆತನನ್ನು ಸಂಪರ್ಕಿಸುತ್ತಿದ್ದರು? ಆತನ ಜೊತೆ ಮತ್ತೆ ಯಾರ‍್ಯಾರು ಇದ್ದಾರೆ ಎನ್ನುವ ಬಗ್ಗೆ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

  • ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ – 50 ಲಕ್ಷ ಮೌಲ್ಯದ ಡ್ರಗ್ಸ್ ವಶ

    ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ – 50 ಲಕ್ಷ ಮೌಲ್ಯದ ಡ್ರಗ್ಸ್ ವಶ

    ಬೆಂಗಳೂರು: ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದವರನ್ನು ಸಿಲಿಕಾನ್ ಸಿಟಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

    ಬಂಧಿತ ಆರೋಪಿಗಳನ್ನು ಆಂಧ್ರಪ್ರದೇಶ ಮೂಲದ ಹರಿಕೃಷ್ಣನ್, ಮಹಮ್ಮದ್, ಫಿಬಿನ್, ಹರಿಶಂಕರ್, ರಾಹುಲ್ ಎಂದು ಗುರುತಿಸಲಾಗಿದೆ. ವಿಶೇಷ ಎಂದರೆ ಬಂಧಿತ ಆರೋಪಿಗಳೆಲ್ಲ ಎಂಎಸ್ಸಿ, ಬಿಎಸ್ಸಿ ಮತ್ತು ಮೆಕ್ಯಾನಿಕಲ್ ಎಂಜಿನಿಯರ್ ವಿದ್ಯಾರ್ಥಿಗಳಾಗಿರೋದು ದುರಂತ. ಆಂಧ್ರ ಪ್ರದೇಶದ ವಿಶಾಖಪಟ್ಟಣದಿಂದ ಡ್ರಗ್ಸ್ ಗಳನ್ನು ತರುತ್ತಿದ್ದ ಆರೋಪಿಗಳು, ನಗರದ ಶ್ರೀಮಂತರ ಮಕ್ಕಳನ್ನು ಟಾರ್ಗೆಟ್ ಮಾಡಿ ಮಾರಾಟ ಮಾಡುತ್ತಿದ್ದರು.

    ಬೆಂಗಳೂರು ಪೊಲೀಸರು ಡ್ರಗ್ಸ್ ಮಾರಾಟದ ವಿರುದ್ಧ ಎಷ್ಟೇ ಕಠಿಣ ಕ್ರಮ ಕೈಕೊಳ್ಳುತ್ತಿದ್ದರು, ಡ್ರಗ್ಸ್ ಮಾರಾಟ ದಂಧೆ ಮಾತ್ರ ನಿಲ್ಲುತ್ತಿರಲಿಲ್ಲ. ನಗರದ ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳಿಗೆ ಬೇರೆ ಬೇರೆ ರಾಜ್ಯದಿಂದ ವಿವಿಧ ರೀತಿಯ ಡ್ರಗ್ಸ್ ಗಳನ್ನು ಮಾರಾಟ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇತ್ತು. ಹೀಗಾಗಿ ನಗರ ಪೂರ್ವ ವಿಭಾಗದ ಪ್ರತಿಷ್ಠಿತ ಕಾಲೇಜುಗಳು, ಪಬ್‍ಗಳು, ಐಟಿಬಿಟಿ ಸೆಕ್ಟರ್ ಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಮಾಹಿತಿ ಬೆಂಗಳೂರು ಸಿಸಿಬಿ ಪೊಲೀಸರು ವಿವಿಧ ಕಡೆಗಳಲ್ಲಿ ದಾಳಿ ನಡೆಸಿದರು.

    ದಾಳಿ ವೇಳೆ ಕೆಆರ್ ಪುರ, ಮಾರತ್ತಹಳ್ಳಿ ಸುತ್ತಮುತ್ತಲಿನ ಕಾಲೇಜುಗಳ ಬಳಿ ಆಂಧ್ರದಿಂದ ವಿವಿಧ ಮಾದರಿಯ ಡ್ರಗ್ಸ್‍ಗಳನ್ನು ತಂದು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ನಾಲ್ವರು ಮಧ್ಯವರ್ತಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 50 ಲಕ್ಷ ಮೌಲ್ಯದ ಡ್ರಗ್ಸ್ ಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

    ಈ ಸಂಬಂಧ ಕೆಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಗರದ ಬೇರೆ ಯಾವ ಜಾಗಗಳಲ್ಲಿ ಇದನ್ನು ಮಾರಾಟ ಮಾಡುತ್ತಿದ್ದರು ಎನ್ನುವುದರ ಬಗ್ಗೆ ವಿಚಾರಣೆ ಮುಂದುವರಿದಿದೆ.

  • ಹಣ ಕೊಡಲ್ಲ ಎಂದ ತಂದೆಯ ತಲೆಯನ್ನೇ ಇಟ್ಟಿಗೆಯಿಂದ ಜಜ್ಜಿ ಪುಡಿಗೈದ ಮಗ

    ಹಣ ಕೊಡಲ್ಲ ಎಂದ ತಂದೆಯ ತಲೆಯನ್ನೇ ಇಟ್ಟಿಗೆಯಿಂದ ಜಜ್ಜಿ ಪುಡಿಗೈದ ಮಗ

    – ಡ್ರಗ್ಸ್ ನಶೆಗೆ ದಾಸನಾಗಿದ್ದ ಮಗನಿಂದ ಕೃತ್ಯ
    – ಕೂಲಿ ಮಾಡಿ ಮಕ್ಕಳನ್ನು ಸಾಕುತ್ತಿದ್ದ ತಂದೆ ಜೀವ ತೆಗೆದ

    ಚಂಡೀಗಢ: ಡ್ರಗ್ಸ್ ಖರೀದಿಸಲು ಹಣ ನೀಡದ್ದಕ್ಕೆ ತಂದೆಯ ತಲೆಯನ್ನೇ ಮಗ ಇಟ್ಟಿಗೆಯಿಂದ ಜಜ್ಜಿ, ತಲೆಬುರುಡೆ ಪುಡಿ ಮಾಡಿದ ಭಯಾಕನ ಘಟನೆ ಪಂಜಾಬ್ ರಾಜ್ಯದ ಮಂಡಿ ಖರಾರ್ ಗ್ರಾಮದಲ್ಲಿ ನಡೆದಿದೆ.

    ಆರೋಪಿ ಮಗನನ್ನು ರಿಂಕು ಎಂದು ಗುರುತಿಸಲಾಗಿದ್ದು, ಹಂಸ್ ರಾಜ್(50) ಮಗನಿಂದಲೇ ಭೀಕರವಾಗಿ ಕೊಲೆಯಾದ ದುರ್ದೈವಿ. ಹಂಸ್ ರಾಜ್‍ಗೆ ಇಬ್ಬರು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳಿದ್ದಾರೆ. ಹೆಣ್ಣು ಮಕ್ಕಳಿಬ್ಬರ ಮದುವೆಯಾಗಿದ್ದು, ಇಬ್ಬರು ಗಂಡು ಮಕ್ಕಳಾದ ರಿಂಕು, ಸೋನು ಜೊತೆ ಹಂಸ್ ರಾಜ್ ವಾಸವಾಗಿದ್ದರು. ಕೆಲ ವರ್ಷಗಳ ಹಿಂದೆ ರಿಂಕು ತಾಯಿ ಮೃತಪಟ್ಟಿದ್ದು, ತಂದೆಯೇ ಕೂಲಿ ಕೆಲಸ ಮಾಡಿ ತಮ್ಮ ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು.

    ಅತ್ತ ತಂದೆ ಕಷ್ಟಪಟ್ಟು ದುಡಿದು ಕುಟುಂಬವನ್ನು ಸಾಕುತ್ತಿದ್ದರೆ, ಇತ್ತ ಮಗ ರಿಂಕು ಡ್ರಗ್ಸ್ ಹಾಗೂ ಕೆಟ್ಟ ಚಟಗಳಿಗೆ ದಾಸನಾಗಿ ಹಣ ಕೊಡು ಎಂದು ಸದಾ ತಂದೆಯನ್ನು ಪೀಡಿಸುತ್ತಿದ್ದನು. ಗುರುವಾರ ಕೂಡ ಡ್ರಗ್ಸ್ ನಶೆಯಲ್ಲಿದ್ದ ರಿಂಕು ಮತ್ತಷ್ಟು ಡ್ರಗ್ಸ್ ಖರೀದಿಸಲು ತಂದೆ ಬಳಿ ಹಣ ಕೇಳಿದ್ದಾನೆ. ಆದರೆ ತಂದೆ ಹಣ ನೀಡಲು ನಿರಾಕರಿಸಿದ್ದಾರೆ. ಹೀಗೆ ಮಾತಿಗೆ ಮಾತು ಬೆಳೆದು ತಂದೆ, ಮಗನ ಮಧ್ಯೆ ಜಗಳ ನಡೆದಿದೆ. ಇದರಿಂದ ಸಿಟ್ಟಿಗೆದ್ದ ರಿಂಕು ತಂದೆ ಮೇಲೆ ಹಲ್ಲೆ ಮಾಡಿದನು. ಇಟ್ಟಿಗೆ ತಂದು ತಂದೆ ತಲೆಗೆ ಬಲವಾಗಿ ಹೊಡೆದ ಪರಿಣಾಮ ಅವರು ಸ್ಥಳದಲ್ಲಿಯೇ ಕುಸಿದು ಬಿದ್ದು, ಸಾವನ್ನಪ್ಪಿದ್ದಾರೆ.

    ಇಷ್ಟಾದ ಮೇಲೂ ಸುಮ್ಮನಿರದ ರಿಂಕು ಮತ್ತೆ ಮತ್ತೆ ತಂದೆ ತಲೆಗೆ ಇಟ್ಟಿಗೆಯಿಂದ ಜಜ್ಜಿ, ತಲೆಬುರುಡೆ ಪುಡಿ-ಪುಡಿ ಮಾಡಿ ವಿಕೃತಿ ಮೆರೆದಿದ್ದಾನೆ. ಇದನ್ನು ಕಣ್ಣಾರೆ ಕಂಡ ಸೋನು ಪೊಲೀಸರಿಗೆ ನಡೆದ ಘಟನೆ ಬಗ್ಗೆ ವಿವರಿಸಿ ಸಹೋದರ ರಿಂಕು ವಿರುದ್ಧ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಆತನ ವಿರುದ್ಧ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಈ ಬಗ್ಗೆ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, ರಿಂಕು ಡ್ರಗ್ಸ್‌ಗೆ ದಾಸನಾಗಿದ್ದನು. ಡ್ರಗ್ಸ್ ನಶೆಯಲ್ಲಿಯೇ ತಂದೆಯನ್ನು ಕೊಲೆ ಮಾಡಿದ್ದಾನೆ. ಹಂಸ್ ರಾಜ್ ಅವರ ಗುರುತು ಸಿಗದಿರುವ ಹಾಗೆ ತಲೆಯನ್ನು ಇಟ್ಟಿಗೆಯಿಂದ ಜಜ್ಜಿ ಜಜ್ಜಿ, ತಲೆಬುರುಡೆಯನ್ನು ಪುಡಿ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.

  • ಕೊಬ್ಬರಿ ಎಣ್ಣೆ ಡಬ್ಬಿಯಲ್ಲಿ ಡ್ರಗ್ಸ್ – ಪೊಲೀಸರ ದಾರಿ ತಪ್ಪಿಸಲು ಖತರ್ನಾಕ್ ಪ್ಲಾನ್

    ಕೊಬ್ಬರಿ ಎಣ್ಣೆ ಡಬ್ಬಿಯಲ್ಲಿ ಡ್ರಗ್ಸ್ – ಪೊಲೀಸರ ದಾರಿ ತಪ್ಪಿಸಲು ಖತರ್ನಾಕ್ ಪ್ಲಾನ್

    ಬೆಂಗಳೂರು: ಕೊಬ್ಬರಿ ಎಣ್ಣೆ ಡಬ್ಬಿಯಲ್ಲಿ ಡ್ರಗ್ಸ್ ಇಟ್ಟುಕೊಂಡು ಬೆಂಗಳೂರಿಗೆ ತರುತ್ತಿದ್ದ ಇಬ್ಬರು ಅಂತರರಾಜ್ಯ ಡ್ರಗ್ಸ್ ಪೆಡ್ಲರ್‌ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ಮಾದಕ ವಸ್ತುಗಳ ಸಾಗಾಟ ಮಾಡೋದಕ್ಕೆ ಪೊಲೀಸರು ಬಿಡುತ್ತಿಲ್ಲ. ಏನೇ ಮಾಡಿದರು ಪೊಲೀಸರ ಬಳಿ ಸಿಕ್ಕಿಬೀಳ್ತೀವಿ ಅಂತ ಖತರ್ನಾಕ್ ಉಪಾಯ ಮಾಡಿ ಆರೋಪಿಗಳು ಕೊಬ್ಬರಿ ಎಣ್ಣೆ ಡಬ್ಬಿಯಲ್ಲಿ ಡ್ರಗ್ಸ್ ಇಟ್ಟುಕೊಂಡು ಬೆಂಗಳೂರಿಗೆ ತರುತ್ತಿದ್ದರು. ಆದರೆ ಡ್ರಗ್ಸ್ ಪೆಡ್ಲರ್‌ಗಳಾದ ಸಿಂಟೋ ಥಾಮಸ್(35) ಹಾಗೂ ತಾಜುದ್ದೀನ್ ತಲಾತ್(29) ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರಿಗೆ ಅನುಮಾನ ಬರಬಾರದು ಎಂದು ಪ್ಯಾರಚೂಟ್ ಕೊಬ್ಬರಿ ಎಣ್ಣೆ ಡಬ್ಬಿಯಲ್ಲಿ ಡ್ರಗ್ಸ್ ಇಟ್ಟು ಆರೋಪಿಗಳು ಮಾರಾಟಕ್ಕೆ ಯತ್ನಿಸಿದ್ದರು.

    ವಿಶಾಖಪಟ್ಟಣಂನಿಂದ ಬೆಂಗಳೂರಿಗೆ ಡ್ರಗ್ಸ್ ತರಿಸಿ ಮಾರಾಟ ಮಾಡ್ತಿದ್ದ ಪೆಡ್ಲರ್‌ಗಳು, ಹ್ಯಾಶಿಶ್ ಆಯಿಲ್ ಎನ್ನುವ ಡ್ರಗ್ಸ್ ಮಾರಾಟ ಮಾಡುತ್ತಿದ್ದರು. 1 ಗ್ರಾಂ ಡ್ರಗ್ಸ್ ಅನ್ನು ಸುಮಾರು 3 ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಸಿಸಿಬಿ ಪೊಲೀಸರು ಆರೋಪಿಗಳ್ನು ಬಂಧಿಸಿ, ಅವರಿಂದ 4,500 ಗ್ರಾಂ ಹ್ಯಾಶಿಶ್ ಆಯಿಲ್ ವಶಪಡಿಸಿಕೊಂಡಿದ್ದಾರೆ. ಡ್ರಗ್ಸ್ ಜೊತೆಗೆ 22 ಕೆ.ಜಿ ಗಾಂಜಾವನ್ನು ಕೂಡ ವಶಕ್ಕೆಪಡೆದಿರುವ ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ.

  • 35 ಲಕ್ಷ ಮೌಲ್ಯದ ಮಾದಕ ವಸ್ತು ಸಾಗಾಟ – ಆರೋಪಿ ಬಂಧನ

    35 ಲಕ್ಷ ಮೌಲ್ಯದ ಮಾದಕ ವಸ್ತು ಸಾಗಾಟ – ಆರೋಪಿ ಬಂಧನ

    ಬೀದರ್: ಅಕ್ರಮವಾಗಿ ಮಾದಕ ವಸ್ತು(ಅಫೀಮು) ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಬೀದರ್ ಅಬಕಾರಿ ಪೊಲೀಸರು ಇಂದು ಬಂಧಿಸಿದ್ದಾರೆ.

    ಖಚಿತ ಮಾಹಿತಿ ಮೇರೆಗೆ ಮಿಂಚಿನ ಕಾರ್ಯಾಚರಣೆ ನಡೆಸಿದ ಬೀದರ್ ಅಬಕಾರಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 35 ಲಕ್ಷ ರೂ. ಬೆಲೆ ಬಾಳುವ ಅಫೀಮು ಹಾಗೂ ಲಾರಿಯನ್ನು ಅಬಕಾರಿ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಮಾದಕ ವಸ್ತುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪಿ ಸುಜೀತ್ ಸಿಂಗ್‍ನನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ.

    ಈ ಆರೋಪಿ ಮಾದಕ ವಸ್ತುಗಳನ್ನು ಲಾರಿಯಲ್ಲಿ ತುಂಬಿಕೊಂಡು ಹಿಮಾಚಲ ಪ್ರದೇಶದಿಂದ ಚೆನ್ನೈಗೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಎಂದು ಪಬ್ಲಿಕ್ ಟಿವಿಗೆ ಅಬಕಾರಿ ಪೊಲೀಸರು ಮಾಹಿತಿ ನೀಡಿದ್ದಾರೆ. ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ವನಮಾರಪ್ಪಳ್ಳಿ ಗ್ರಾಮದ ಬಳಿ ದಾಳಿ ಮಾಡಿದ ಅಬಕಾರಿ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ.

    ಬೀದರ್ ಜಿಲ್ಲೆ ಮಹಾರಾಷ್ಟ್ರ ಹಾಗೂ ತೆಲಂಗಾಣ ಎರಡು ರಾಜ್ಯಗಳ ಗಡಿ ಹೊಂದಿಕೊಂಡಿರುವುದರಿಂದ ಮಾದಕ ವಸ್ತುಗಳ ಅಕ್ರಮವಾಗಿ ಸಾಗಾಟ ಮಾಡಲು ಆರೋಪಿಗಳಿಗೆ ಸುಲಭ ಮಾರ್ಗವಾಗಿದೆ. ಹೀಗಾಗಿ ಈ ಭಾಗದಲ್ಲಿ ಅಕ್ರಮ ಮಾದಕ ವಸ್ತುಗಳ ಸಾಗಾಟ ನಡೆಯುತ್ತದೆ ಎನ್ನಲಾಗಿದೆ.

  • ಖರ್ಜೂರದ ಪ್ಯಾಕೆಟ್‍ಗಳಲ್ಲಿ ಡ್ರಗ್ಸ್ ಸಾಗಣೆ- 85 ಲಕ್ಷದ ಡ್ರಗ್ಸ್ ವಶಕ್ಕೆ

    ಖರ್ಜೂರದ ಪ್ಯಾಕೆಟ್‍ಗಳಲ್ಲಿ ಡ್ರಗ್ಸ್ ಸಾಗಣೆ- 85 ಲಕ್ಷದ ಡ್ರಗ್ಸ್ ವಶಕ್ಕೆ

    – ಅನುಮಾನ ಬಾರದಂತೆ ಪ್ಯಾಕ್ ಮಾಡುತ್ತಿದ್ದ ಆರೋಪಿಗಳು

    ಕೋಲ್ಕತ್ತಾ: ಅಂತರಾಷ್ಟ್ರೀಯ ಡ್ರಗ್ಸ್ ಸಾಗಾಣಿಕೆ ದಂಧೆಯನ್ನು ಕೋಲ್ಕತ್ತಾ ಪೊಲೀಸ್ ವಿಶೇಷ ಕಾರ್ಯಪಡೆ ಬೇಧಿಸಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.

    ಜಾಕೀರ್ ಹುಸೇನ್ ಹಾಗೂ ಈತನ ಸಹಚರರಾದ ಮಾಶುಕ್ ಅಹ್ಮದ್ ಹಾಗೂ ಪ್ರಶಾಂತ ದಾಸ್ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, 85 ಲಕ್ಷ ರೂ. ಬೆಲೆಯ 10 ಕೆ.ಜಿ. ಚರಸ್ ವಶಕ್ಕೆ ಪಡೆದಿದ್ದಾರೆ.

    ಡ್ರಗ್ಸ್ ಸಾಗಿಸಲು ಆರೋಪಿಗಳು ಖರ್ಜೂರದ ಚಿತ್ರವಿರುವ ಬಾಕ್ಸ್ ಹಾಗೂ ಕವರ್ ಗಳನ್ನು ಬಳಸುತ್ತಿದ್ದರು ಎಂದು ಆರೋಪಿಸಲಾಗಿದೆ. ಮೊದಲು ಜಾಕೀರ್ ಹುಸೇನ್‍ನನ್ನು ಪೊಲೀಸರು ಬಂಧಿಸಿದ್ದು, ಜಾಕೀರ್ ಹುಸೇನ್ ಸಹಾಯದಿಂದ ಉಳಿದ ಆರೋಪಿಗಳನ್ನು ಬಂಧಿಸಿದ್ದಾರೆ.

    ವಿಚಾರಣೆ ವೇಳೆ ಹುಸೇನ್‍ನಿಂದ ಪೊಲೀಸರು ಪ್ರಮುಖ ಮಾಹಿತಿಯನ್ನು ಕಲೆ ಹಾಕಿದ್ದು, ಈ ವೇಳೆ ನಗರದ ಬೆಹಲಾದ ಅಪಾರ್ಟ್ ಮೆಂಟಿನಲ್ಲಿ ದಂಧೆ ನಡೆಸಲಾಗುತ್ತಿದೆ ಎಂದು ಜಾಕೀರ್ ಪೊಲೀಸರಿಗೆ ತಿಳಿಸಿದ್ದಾನೆ. ನಂತರ ಪೊಲೀಸರು ಅಪಾರ್ಟ್ ಮೆಂಟ್ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಮಾಶುಕ್ ಅಹ್ಮದ್ ಹಾಗೂ ಪ್ರಶಾಂತ ದಾಸನನ್ನು ಪೊಲೀಸರು ಬಂಧಿಸಿದ್ದಾರೆ.

    ಈ ಕುರಿತು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿ, ಆರೋಪಿಗಳು ಡ್ರಗ್ಸ್ ಸಾಗಿಸಲು ಖರ್ಜೂರದ ಪ್ಯಾಕೆಟನ್ನು ಬಳಸುತ್ತಿದ್ದರು. ಯಾರಿಗೂ ತಿಳಿಯದ ಹಾಗೆ ಇವುಗಳನ್ನು ಪ್ಯಾಕ್ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಹೀಗೆ ಪ್ಯಾಕೆಟ್ ಹಾಗೂ ಬಾಕ್ಸ್ ಗಳಲ್ಲಿ ಪ್ಯಾಕ್ ಮಾಡಿ ಯಾರಿಗೂ ಅನುಮಾನ ಬಾರದಂತೆ ವಿದೇಶಕ್ಕೆ ಸಾಗಿಸುತ್ತಿದ್ದರು ಎಂದು ತಿಳಿಸಿದ್ದಾರೆ.

    ಪ್ಯಾಕ್ ಮಾಡಿದ ಡ್ರಗ್ಸನ್ನು ಚೀನಾಗೆ ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ. ಬಂಧಿತ ಮೂವರನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

  • ಗೆಳೆಯನ ಬರ್ತ್ ಡೇ ಪಾರ್ಟಿ ಮಾಡಿದ್ದ ಇಬ್ಬರು ಬಲಿ, 6 ಮಂದಿ ಸ್ಥಿತಿ ಗಂಭೀರ

    ಗೆಳೆಯನ ಬರ್ತ್ ಡೇ ಪಾರ್ಟಿ ಮಾಡಿದ್ದ ಇಬ್ಬರು ಬಲಿ, 6 ಮಂದಿ ಸ್ಥಿತಿ ಗಂಭೀರ

    – ಗಾಂಜಾ ಚಟಕ್ಕೆ ಯುವಕರು ಬಲಿಯಾಗಿರುವ ಶಂಕೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ತಡರಾತ್ರಿ ಗೆಳೆಯನ ಹುಟ್ಟುಹಬ್ಬದ ಪಾರ್ಟಿ ಮಾಡಿದ್ದ ಯುವಕರಲ್ಲಿ ಇಬ್ಬರು ಸಾವನ್ನಪ್ಪಿದ್ದು, 6 ಮಂದಿ ಸ್ಥಿತಿ ಗಂಭಿರವಾಗಿದೆ. ಯುವಕರು ಪಾರ್ಟಿ ವೇಳೆ ಗಾಂಜಾ ಸೇವನೆ ಮಾಡಿದ್ದಕ್ಕೆ ಈ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ.

    ಮಲ್ಲೇಶ್ವರಂ ಕೋದಂಡರಾಮಪುರದಲ್ಲಿ ಈ ಘಟನೆ ನಡೆದಿದೆ. ಪಾರ್ಟಿ ಮುಗಿಸಿ ಬಂದ ಅಭಿಲಾಷ್, ಗೋಪಿ ದುರ್ಮರಣ ಹೊಂದಿದ್ದು, ಮತ್ತೊಬ್ಬ ಯುವಕ ಕೂಡ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಆದರೆ ಈ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಹುಟ್ಟುಹಬ್ಬದ ಪಾರ್ಟಿಗೆ ಹೋಗಿದ್ದ ಚಿಟ್ಟೆ ಅಲಿಯಾಸ್ ಸುಮನ್ ಸೇರಿದಂತೆ 6 ಮಂದಿ ಯುವಕರ ಸ್ಥಿತಿ ಗಂಭೀರವಾಗಿದೆ.

    ಈ ಯುವಕರು ಮಂಗಳವಾರ ಗೆಳೆಯನ ಹುಟ್ಟುಹಬ್ಬದ ಪಾರ್ಟಿ ಮಾಡಿದ್ದರು. ಹುಟ್ಟುಹಬ್ಬದ ಸೆಲೆಬ್ರೇಷನ್ ಅಂತ ಯುವಕರು ಗಾಂಜಾ ಸೇವನೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ತಡರಾತ್ರಿವರೆಗೂ ಪಾರ್ಟಿ ಮಾಡಿ ಮನೆಗೆ ತೆರೆಳಿದ್ದ ಯುವಕರು ಅಸ್ವಸ್ಥಗೊಂಡಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ದುರಾದೃಷ್ಟವಶಾತ್ ಈ ಯುವಕರಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

    ಈ ಸಂಬಂಧ ವೈಯ್ಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿಯಲ್ಲಿ ಸಾವಿನ ರಹಸ್ಯ ಹೊರಬೀಳಲಿದೆ.

  • ಡಯಾಬಿಟಿಸ್ ಔಷಧಿ ನೀಡ್ತೀವಿ ಎಂದು ಲಕ್ಷಾಂತರ ರೂ ವಂಚನೆ – ಆರೋಪಿ ಅಂದರ್

    ಡಯಾಬಿಟಿಸ್ ಔಷಧಿ ನೀಡ್ತೀವಿ ಎಂದು ಲಕ್ಷಾಂತರ ರೂ ವಂಚನೆ – ಆರೋಪಿ ಅಂದರ್

    ಬೆಂಗಳೂರು: ಡಯಾಬಿಟಿಸ್ ಖಾಯಿಲೆಗೆ ಔಷಧಿ ನೀಡುತ್ತೇವೆ ಎಂದು ಲಕ್ಷಾಂತರ ರೂಪಾಯಿ ಹಣ ಪಡೆದು ವಂಚನೆ ಮಾಡಿದ್ದ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

    ರಾಮ್‍ಮೂರ್ತಿ ಬಂಧಿತ ಆರೋಪಿ. ವಾಸುದೇವ್ ಮೂರ್ತಿ ಎಂಬುವವರ ಬಳಿ ಆಯುರ್ವೇದ ಎಣ್ಣೆಗೆ ಚಿನ್ನ, ಬೆಳ್ಳಿ ಮತ್ತು ವಜ್ರ ಮಿಶ್ರಿತ ಭಸ್ಮವನ್ನು ಹಾಕಿ ಮಾಸಾಜ್ ಮಾಡಿದರೆ ಡಯಾಬಿಟಿಸ್ ಕಡಿಮೆಯಾಗುತ್ತದೆ ಎಂದು ಬುರುಡೆ ಬಿಟ್ಟು ಇದಕ್ಕಾಗಿ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಹಣ ಪಡೆದುಕೊಂಡಿದ್ದಾನೆ.

     

    ಶಾಂತಿನಗರದ ಕೆ.ಎಚ್ ರಸ್ತೆಯ ಆಯುರ್ವೇದ ಅಂಗಡಿಯಲ್ಲಿ ಎಣ್ಣೆ ಸಿಗುತ್ತೆ ಎಂದು ವಾಸುದೇವ್ ಅವರನ್ನು ಅಂಗಡಿ ಹತ್ತಿರ ಕರೆಸಿ ಅಲ್ಲಿಯೇ ಹಣ ಪಡೆದುಕೊಂಡಿದ್ದಾನೆ. ಇದಕ್ಕೆ ರಾಮ್ ಮೂರ್ತಿ ಮತ್ತು ಶಿವಾನಂದ್ ಬಾಲಾಜಿ ಎಂಬುವವರ ಕೂಡ ಸಾಥ್ ನೀಡಿದ್ದಾರೆ. ಆರೋಪಿಗಳ ಮಾತನ್ನು ನಂಬಿ ವಾಸುದೇವ್ ಹಣ ನೀಡಿದ್ದಾರೆ. ಆದರೆ ಆರೋಪಿಗಳು ಒಂದು ತಿಂಗಳಿನಲ್ಲಿ ಕಾಯಿಲೆಯೇ ವಾಸಿಯಾಗುತ್ತದೆ ಎಂದು ಹೇಳಿದ್ದರು. ಆದರೆ ಮೂರು ತಿಂಗಳಾದರೂ ಖಾಯಿಲೆ ವಾಸಿಯಾಗಿರಲ್ಲ.

    ಇದರಿಂದ ಅನುಮಾನಗೊಂಡ ವಾಸುದೇವ್ ಶಾಂತಿನಗರ ಆಯುರ್ವೇದ ಅಂಗಡಿಗೆ ಹೋದಾಗ ಅಂಗಡಿಗೆ ಬೀಗ ಹಾಕಿತ್ತು. ನಂತರ ಇದೊಂದು ಮೋಸದ ಜಾಲ ಎಂದು ಗೊತ್ತಾಗಿದೆ. ಇದೇ ರೀತಿ ಈ ಗ್ಯಾಂಗ್ ತುಂಬ ಜನರಿಗೆ ಮೋಸ ಮಾಡಿದೆ ಎನ್ನಲಾಗಿದೆ. ಸದ್ಯ ಓರ್ವ ಆರೋಪಿಯನ್ನು ಬಂಧಿಸಿರುವ ಪೊಲೀಸರು ಇನ್ನಿಬ್ಬರಿಗೆ ಬಲೆ ಬೀಸಿದ್ದಾರೆ.

  • ಡ್ರಗ್ಸ್ ನಶೆಯಲ್ಲಿ ಕುಟುಂಬದವರನ್ನೇ ಕೊಂದು ಫೇಸ್‍ಬುಕ್ ಲೈವ್ ಹೋದ

    ಡ್ರಗ್ಸ್ ನಶೆಯಲ್ಲಿ ಕುಟುಂಬದವರನ್ನೇ ಕೊಂದು ಫೇಸ್‍ಬುಕ್ ಲೈವ್ ಹೋದ

    ಕೋಲ್ಕತ್ತಾ: ಡ್ರಗ್ಸ್ ನಶೆಯಲ್ಲಿದ್ದ ಯುವಕನೊಬ್ಬ ತನ್ನ ಕುಟುಂಬದವರಿಗೆ ಚಾಕು ಇರಿದು ಹಲ್ಲೆ ನಡೆಸಿ, ತನ್ನ ಅಜ್ಜಿಯನ್ನು ಕೊಲೆ ಮಾಡಿ ಅದನ್ನ ಫೇಸ್‍ಬುಕ್ ಲೈವ್ ಮಾಡಿದ ಅಮಾನವೀಯ ಘಟನೆ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ನಡೆದಿದೆ.

    ಆರೋಪಿಯನ್ನು ಇಂದ್ರನೀಲ್ ರಾಯ್ (27) ಎಂದು ಗುರುತಿಸಲಾಗಿದೆ. ಭಾನುವಾರ ರಾತ್ರಿ ಡ್ರಗ್ಸ್ ನಶೆಯಲ್ಲಿದ್ದ ಯುವಕ ತನ್ನ ಕುಟುಂಬಸ್ಥರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಅಲ್ಲದೆ ಈ ವೇಳೆ ಇಂದ್ರನೀಲ್ ಅಜ್ಜಿ ಆರತಿ ರಾಯ್ (80) ಮೃತಪಟ್ಟಿದ್ದು, ಇತರರು ಗಾಯಗೊಂಡಿದ್ದಾರೆ. ಡ್ರಗ್ಸ್ ನಶೆಯಲ್ಲಿ ಮುಳುಗಿದ್ದ ಯುವಕ ತಾನು ಏನು ಮಾಡುತ್ತಿದ್ದೇನೆ ಎಂಬ ಅರಿವಿಲ್ಲದೆ ತಾನು ಮಾಡಿದ ದುಷ್ಕೃತ್ಯ ವನ್ನು ಫೇಸ್‍ಬುಕ್ ಲೈವ್ ಕೂಡ ಮಾಡಿದ್ದಾನೆ ಎಂದು ಮಾಹಿತಿ ದೊರಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಯುವಕನ ಹಲ್ಲೆಯಿಂದ ಅವರ ಪೋಷಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಆದರೆ ಈಗ ಅವರು ಕ್ಷೇಮವಾಗಿದ್ದಾರೆ. ಅಲ್ಲದೆ ಆರೋಪಿಯನ್ನು ನಾವು ಬಂಧಿಸಿ, ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

    ಇಂದ್ರನೀಲ್ ಡ್ರಗ್ಸ್ ನಶೆಯಲ್ಲಿ ಮುಳುಗಿಹೋಗಿದ್ದ. ಹೀಗಾಗಿ ಕೆಲವು ದಿನಗಳಿಂದ ವಿಚಿತ್ರವಾಗಿ ವರ್ತಿಸುತ್ತಿದ್ದನು. ಆದರೆ ಈ ರೀತಿ ಕುಟುಂಬಸ್ಥರ ಮೇಲೆಯೇ ಹಲ್ಲೆ ನಡೆಸುತ್ತಾನೆ ಎಂದು ನಾವು ಊಹಿಸಿರಲಿಲ್ಲ ಎಂದು ಪೋಷಕರು ಕಣ್ಣೀರಿಟ್ಟಿದ್ದಾರೆ.

    ಈ ಬಗ್ಗೆ ಮನೋರೋಗ ತಜ್ಞರೊಬ್ಬರು ಪ್ರತಿಕ್ರಿಯಿಸಿ, ಯುವಕ ಡ್ರಗ್ಸ್ ನಶೆಯಲ್ಲಿ ಈ ರೀತಿ ಮಾಡಿದ್ದಾನೋ ಅಥವಾ ಅವನು ಮಾನಸಿಕ ಅಸ್ವಸ್ಥನಾಗಿದ್ದನೊ ಎನ್ನುವ ಬಗ್ಗೆ ಪರಿಶೀಲಿಸಿ, ನಂತರ ಆತನ ವಿರುದ್ಧ ಕ್ರಮಕೈಗೊಳ್ಳಿ ಎಂದು ಪೊಲೀಸರಿಗೆ ಸಲಹೆ ನೀಡಿದ್ದಾರೆ.