Tag: Drugs Case

  • ಮುಂಬೈಯಿಂದ ವಸ್ತುಗಳನ್ನು ಖರೀದಿಸಿ ಮಂಗ್ಳೂರಲ್ಲಿ ಮಾರಾಟ: ಪೊಲೀಸ್ ಆಯುಕ್ತ

    ಮುಂಬೈಯಿಂದ ವಸ್ತುಗಳನ್ನು ಖರೀದಿಸಿ ಮಂಗ್ಳೂರಲ್ಲಿ ಮಾರಾಟ: ಪೊಲೀಸ್ ಆಯುಕ್ತ

    – ಪ್ರಖ್ಯಾತ ಆಂಕರ್ ಕಂ ನಟಿ ಜೊತೆಯೂ ಪಾರ್ಟಿ
    – ಬಂಧಿತರಿಂದ ನಿಷೇಧಿತ ಮಾದಕ ವಸ್ತುಗಳ ವಶ

    ಮಂಗಳೂರು: ಡ್ರಗ್ಸ್ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಮಂಗಳೂರಿನಲ್ಲಿ ಇಂದು ಕುಳಾಯಿ ನಿವಾಸಿ ಬಾಲಿವುಡ್ ನಟ, ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

    ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್, ಮಂಗಳೂರು ಸಿಸಿಬಿ ಪೋಲಿಸರು, ಇಕಾನಾಮಿಕ್ &ನಾರ್ಕೋಟಿಕ್ ಠಾಣೆಯ ಪೊಲೀಸರ ಕಾರ್ಯಾಚರಣೆ ನಡೆಸಿ ಡ್ಯಾನ್ಸರ್ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇಂದು ಬೆಳಗ್ಗಿನ ಜಾವ ಮಂಗಳೂರು ನಗರದ ಕದ್ರಿ ಪದವು ಪರಿಸರದಲ್ಲಿ ಆರೋಪಿಗಳ ಬಂಧನವಾಗಿದೆ ಎಂದರು.

    ಆರೋಪಿಗಳನ್ನು ಮಂಗಳೂರು ಸುರತ್ಕಲ್ ಕಾನ ನಿವಾಸಿ ಅಕೀಲ್ ನೌಶೀಲ್ (28) ಹಾಗೂ ಕುಳಾಯಿ ನಿವಾಸಿ ಕಿಶೋರ್ ಅಮನ್ ಶೆಟ್ಟಿ(30) ಎಂದು ಗುರುತಿಸಲಾಗಿದೆ. ಆರೋಪಿಗಳ ಬಳಿಯಿಂದ ಎಂಡಿಎಂ ಪೌಡರ್, ಬೈಕ್, 2 ಮೊಬೈಲ್ ಫೋನ್ ಸೇರಿದಂತೆ 1 ಲಕ್ಷ ಮೌಲ್ಯದ ವಸ್ತು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಕೆಲ ಆರೋಪಿಗಳಿದ್ದಾರೆ. ಇವರ ಚೈನ್ ಲಿಂಕ್ ಬಗ್ಗೆ ಸಂಪೂರ್ಣ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದರು.

    ಆರೋಪಿಗಳು ಮುಂಬೈಯಿಂದ ವಸ್ತುಗಳನ್ನು ಖರೀದಿಸಿ ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು. ಇಬ್ಬರ ಮೇಲೆ ಸೇವನೆ ಮತ್ತು ಮಾರಾಟ ಎರಡೂ ಪ್ರಕರಣ ದಾಖಲಿಸಿದ್ದೇವೆ. ಆರೋಪಿ ಅಕೀಲ್ ನೌಶೀಲ್ ಈ ಹಿಂದೆ ವಿದೇಶದಲ್ಲಿ ಸೇಫ್ಟಿ ಆಫೀಸರ್ ಆಗಿದ್ದ. ಒಂದು ವರ್ಷದ ಊರಿಗೆ ಬಂದಿದ್ದ ಈತ, ಕಿಶೋರ್ ಅಮನ್ ಶೆಟ್ಟಿ ಜೊತೆ ಡ್ಯಾನ್ಸರ್, ಕೋರಿಯೋಗ್ರಾಫರ್ ಆಗಿ ಕೆಲಸ ಮಾಡಿಕೊಂಡಿದ್ದ. ಅಲ್ಲದೆ ಅಕೀಲ್ ನೌಶೀಲ್ ಜೊತೆ ಸೇರಿ ಮಾದಕ ವಸ್ತು ಖರೀದಿಸಿ ಮಾರಾಟ ಮಾಡುತ್ತಿದ್ದ. ಬೆಂಗಳೂರು, ಮುಂಬೈಯಿಂದ ಮಾದಕ ವಸ್ತುಗಳನ್ನು ತಂದು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.

    ಖ್ಯಾತ ಡ್ಯಾನ್ಸರ್ ಆಗಿರುವ ಕಿಶೋರ್ ಶೆಟ್ಟಿ, ಹಿಂದಿಯ ಎಬಿಸಿಡಿ ಸಿನಿಮಾದಲ್ಲಿ ನಟಿಸಿದ್ದ. ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ನಲ್ಲೂ ಸ್ಪರ್ಧಿಯಾಗಿದ್ದ ಕಿಶೋರ್ ಶೆಟ್ಟಿ, ಇದೀಗ ಮಂಗಳೂರು ಸಿಸಿಬಿ ಪೊಲೀಸರ ಬಲೆಯಲ್ಲಿದ್ದಾರೆ. ಈತ ಬಹಳ ಮಂದಿ ಹುಡುಗಿಯರಿಗೆ ಡ್ರಗ್ಸ್ ಕೊಟ್ಟು ಪಾರ್ಟಿ ಮಾಡ್ತಾ ಇದ್ದ. ಬೆಂಗಳೂರಿನ ಪ್ರಖ್ಯಾತ ಆಂಕರ್ ಕಂ ನಟಿ ಜೊತೆ ಕೂಡ ಪಾರ್ಟಿ ಮಾಡಿದ್ದು, ಇತ್ತೀಚೆಗಷ್ಟೆ ಮಂಗಳೂರಿನಲ್ಲಿ ಒಂದು ಡ್ರಗ್ ಪಾರ್ಟಿ ಕೂಡ ಆಯೋಜಿಸಿದ್ದ. ಈ ಪಾರ್ಟಿಯಲ್ಲಿ ನಟಿ ಕಂ ಆಂಕರ್ ಭಾಗವಹಿದ್ದರು.

    ಒಟ್ಟಿನಲ್ಲಿ ನೃತ್ಯ ಸಂಯೋಜಕರಾಗಿರುವ ಕಿಶೋರ್, ಮುಂಬೈ ಸಂಪರ್ಕ ಹೊಂದಿದ್ದಾರೆ. ಮಂಗಳೂರು ಮೂದವನಾಗಿದ್ದರೂ ಮುಂಬೈನಲ್ಲಿ ಹೆಚ್ಚಿನ ಸಂಪರ್ಕ ಹೊಂದಿದ್ದಾರೆ. ಕಿಶೋರ್ ಡ್ರಗ್ಸ್ ದಂಧೆ ಮಾಡುವ ಬಗ್ಗೆ ಮುಂಬೈ ಎನ್‍ಸಿಎಯಿಂದಲೇ ಮಾಹಿತಿ ಬಂದಿದ್ದು, ಆ ಮಾಹಿತಿ ಮೇರಗೆ ದಾಳಿ ನಡೆಸಿದ ಇವರನ್ನ ಬಂಧನ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

  • ರಾಗಿಣಿಗಾಗಿ ರಕ್ತ, ಪ್ರಾಣ ಕೊಡಲು ಸಿದ್ಧ – ಅಭಿಮಾನಿ ವಿಡಿಯೋ ವೈರಲ್

    ರಾಗಿಣಿಗಾಗಿ ರಕ್ತ, ಪ್ರಾಣ ಕೊಡಲು ಸಿದ್ಧ – ಅಭಿಮಾನಿ ವಿಡಿಯೋ ವೈರಲ್

    – ಆಕೆ ನನ್ನ ದೇವತೆ, ಕನಸಿನ ರಾಣಿ

    ಚಿತ್ರದುರ್ಗ: ಡ್ರಗ್ಸ್ ಮಾಫಿಯಾದಲ್ಲಿ ಸಿಲುಕಿ ನಟಿ ರಾಗಿಣಿ ಜೈಲುಪಾಲಾಗಿರುವ ಬೆನ್ನಲ್ಲೇ ಕೋಟೆನಾಡು ಚಿತ್ರದುರ್ಗದ ರಾಗಿಣಿ ಅಭಿಮಾನಿಯೋರ್ವ ರಾಗಿಣಿಗಾಗಿ ರಕ್ತ, ಪ್ರಾಣ ಕೊಡಲು ಸಿದ್ಧ ಎಂದಿರುವ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.

    ಆರ್‍ಟಿಐ ಕಾರ್ಯಕರ್ತ ಎಂದು ಹೇಳಿಕೊಂಡಿರುವ ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ಬಿ.ಸುಧಾಕರ್ ವೀಡಿಯೋ ಮಾಡಿ ಅದನ್ನು ಎಲ್ಲೆಡೆ ವೈರಲ್ ಮಾಡಿದ್ದಾರೆ.

    ನಟಿ ರಾಗಿಣಿ ನನ್ನ ದೇವತೆ, ಕನಸಿನ ರಾಣಿ ಎಂದು ಅಭಿಮಾನವ್ಯಕ್ತಪಡಿಸಿದ್ದಾನೆ. ಅಲ್ಲದೇ ರಾಗಿಣಿಗೆ ಡ್ರಗ್ಸ್ ಅಡಿಕ್ಟ್ ಮಾಡಿದವರಿಗೆ ಗಲ್ಲು ಶಿಕ್ಷೆ ಆಗಬೇಕು. ನಾನು ರಾಗಿಣಿ ಅಭಿಮಾನಿ, ಅವಳು ನನ್ನ ಕನಸಿನ ರಾಣಿ ಎನಿಸಿದ್ದಾಳೆ. ಅವಳ ಜೀವ ಉಳಿಸಲು ಅವಳಿಗೆ ನನ್ನ ರಕ್ತ ಬೇಕಿದ್ದರೆ ಕೊಡುವೆ. ಹಾಗೆಯೇ ನನ್ನದು O+ve ಬ್ಲಡ್ ಗ್ರೂಪ್ ಆಗಿದ್ದು, ಅವಳಿಗೆ ನನ್ನ ರಕ್ತ ಕೊಡಲು ಸಿದ್ಧನಿದ್ದೇನೆ. ಯಾಕಂದ್ರೆ ರಾಗಿಣಿಯನ್ನು ಉಳಿಸುವುದೇ ನನ್ನ ಧ್ಯೇಯವಾಗಿರೋದ್ರಿಂದ ಆಕೆಗೆ ನನ್ನ ಪ್ರಾಣ ಬೇಕಾದರೂ ಕೊಡ್ತೀನಿ ಅಂತ ಪುನರುಚ್ಚರಿಸಿದ್ದಾರೆ.

    ಈ ಸಮಾಜದಲ್ಲಿ ಅನ್ಯಾಯ ಅದವರಿಗೆ ಸಹಾಯ ಮಾಡುವುದು ನನ್ನ ಕರ್ತವ್ಯ ಆಗಿದೆ. ರಾಜಕೀಯದಲ್ಲಿ ಯಾರು ಯಾರು ಏನ್ ಮಾಡಿದರೆಂದು ನನಗೆ ಗೊತ್ತಿದೆ. ಹೀಗಾಗಿ ಆರ್.ಟಿ.ಐ ನಲ್ಲಿ ಎಲ್ಲಾ ರೆಕಾರ್ಡ್ ತೆಗಿಸಿ, ಡ್ರಗ್ಸ್ ಮಾಫಿಯಾ ಏನಾಗಿದೆ ಎಂಬುದನ್ನು ಪತ್ತೆ ಹಚ್ಚಿ ಮಟ್ಟಹಾಕ್ತಿನಿ. ಆದರೆ ನನಗೆ ರಾಗಿಣಿ ಬೇಕು, ನಾನು ರಾಗಿಣಿ ಅಭಿಮಾನಿ ಅಂತ ತನ್ನ ಹುಚ್ಚು ಅಭಿಮಾನವನ್ನು ವ್ಯಕ್ತಪಡಿಸಿರುವ ವೈರಲ್ ಆಗಿದೆ. ಇದನ್ನೂ ಓದಿ: ನನಗೆ ಸಿಗರೇಟ್ ಕೊಡಿ- ಜೈಲಿನಲ್ಲಿ ಸಂಜನಾ ಮತ್ತೆ ಕಿರಿಕ್

    ಕಳೆದ ಸೋಮವಾರ ನ್ಯಾಯಾಲಯ ನಟಿ ರಾಗಿಣಿ ದ್ವಿವೇದಿಯನ್ನ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಬುಧವಾರ ಜಾಮೀನು ಕೋರಿ ರಾಗಿಣಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದ ಮುಂದೆ ಬಂದಿತ್ತು. ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಬೇಕೆಂದು ಸಿಸಿಬಿ ಪರ ವಕೀಲರು ನ್ಯಾಯಾಧೀಶರ ಮುಂದೆ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆ ಜಾಮೀನು ಅರ್ಜಿಯ ವಿಚಾರಣೆಯನ್ನ ಸೆ.19ಕ್ಕೆ ಮುಂದೂಡಿ ನ್ಯಾಯಾಧೀಶರು ಆದೇಶಿಸಿದ್ದರು. ಹೀಗಾಗಿ ನಾಳೆ ರಾಗಿಣಿಯ ಬೇಲ್ ಅರ್ಜಿ ವಿಚಾರಣೆ ಇದ್ದು ಎಲ್ಲರ ಚಿತ್ತ ಶನಿವಾರದತ್ತ ನೆಟ್ಟಿದೆ. ನಾಳೆ ಬೇಲ್ ಆಗುತ್ತಾ ಅಥವಾ ಜೈಲಿನಲ್ಲಿಯೇ ನಟಿ ಇರ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

  • ಜನ್ರಿಂದ ಸೈ ಎನಿಸಿಕೊಳ್ಳೋದಕ್ಕಿಂತ ಬೆಸ್ಟ್ ಡ್ರಗ್ ಇಲ್ಲ: ಅಕುಲ್

    ಜನ್ರಿಂದ ಸೈ ಎನಿಸಿಕೊಳ್ಳೋದಕ್ಕಿಂತ ಬೆಸ್ಟ್ ಡ್ರಗ್ ಇಲ್ಲ: ಅಕುಲ್

    – ಪಾರ್ಟಿಗೆ ಹೋಗೋ ಅಭ್ಯಾಸವೇ ಇಲ್ಲ
    – ಪುಣ್ಯ ಮಾಡಿದ್ರಿಂದ ಭೂಮಿ ಸಂಪಾದಿಸಿದ್ದೇನೆ

    ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಟ, ಖ್ಯಾತ ನಿರೂಪ್ ಅಕುಲ್ ಬಾಲಾಜಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ನೀಡಿದೆ. ಈ ಸಂಬಂಧ ಅಕುಲ್ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದಾರೆ.

    ನನಗೆ ವಾಟ್ಸಪ್ ಮೂಲಕ ಸಿಸಿಬಿ ಅಧಿಕಾರಿಳು ಮೆಸೇಜ್ ಕಳುಹಿಸಿ ನಾಳೆ ಬೆಳಗ್ಗೆ 10 ಗಂಟೆಗೆ ಹಾಜರಾಗುವಂತೆ ತಿಳಿಸಿದ್ದಾರೆ. ಹಾಗೆಯೇ ವಿಚಾರಣೆಗೆ ನಾಳೆ ಹಾಜರಾಗುವುದಾಗಿ ತಿಳಿಸಿದರು.

    ನಾನು ಪಾರ್ಟಿಗಳಿಗೆ ಹೋಗಲ್ಲ. ಹೀಗಾಗಿ ಈ ನೋಟಿಸ್‍ನಿಂದ ನನಗೂ ಶಾಕ್ ಆಗಿದೆ. ನಾನು ಯಾವುದೇ ತಪ್ಪು ಮಾಡಿಲ್ಲ. ವೀರೇನ್ ಖನ್ನಾ ನನಗೆ ಗೊತ್ತಿಲ್ಲ. ಅವರ ಪಾರ್ಟಿಗಳಿಗೆ ನಾನು ಹೋಗಿಲ್ಲ. ನ್ಯೂಸ್ ಚಾನೆಲ್ ಗಳ ಮೂಲಕವೇ ಅವರು ಏನೆಲ್ಲ ಪಾರ್ಟಿ ಆಯೋಜಿಸುತ್ತಿದ್ದರು ಎಂಬುದನ್ನು ತಿಳಿದಿರೋದು ಎಂದರು.

    ನನ್ನದೊಂದು ಫಾರ್ಮ್ ಹೌಸ್ ಇದೆ. ಆದರೆ ಅದನ್ನು ನಾನು ಬಾಡಿಗೆಗೆ ಕೊಟ್ಟಿದ್ದೇನೆ. ಈ ಹಿಂದೆ ಲಾಕ್‍ಡೌನ್ ಸಂದರ್ಭದಲ್ಲಿ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಅದು ಸುದ್ದಿಯಾಗಿತ್ತು. ಆ ಸಂದರ್ಭದಲ್ಲಿಯೂ ನಾನು ಸ್ಪಷ್ಟನೆ ಕೊಟ್ಟಿದ್ದೆ. ನನಗೂ, ಇದಕ್ಕೂ ಸಂಬಂಧವಿಲ್ಲ. ಆ ಜಾಗ ನನ್ನದು ಹೌದು ಎಂದು ತಿಳಿಸಿದರು. ಇದನ್ನೂ ಓದಿ: ಆಫ್ಟರ್ ಪಾರ್ಟಿಗೆ ಪ್ರತ್ಯೇಕ ಆಹ್ವಾನ ಇರುತ್ತೆ, ಭಾರೀ ಹಣ ಖರ್ಚು ಮಾಡ್ತಾರೆ- ನಟ ಸಂತೋಷ್ ಕುಮಾರ್

    ಕರ್ನಾಟಕದಲ್ಲಿ ಒಂದು ಹೆಜ್ಜೆ ಭೂಮಿ ಸಂಪಾದನೆ ಮಾಡಬೇಕು ಅಂದರೆ ಆತ ಪುಣ್ಯ ಮಾಡಿರಬೇಕು. ಆ ಪುಣ್ಯ ಹಾಗೂ ಸೌಭಾಗ್ಯವನ್ನು ಕನ್ನಡದ ಜನತೆ ನನಗೆ ಕೊಟ್ಟಿದ್ದಾರೆ. ಅದಕ್ಕೆ ಸಂತಸ ವ್ಯಕ್ತಪಡಿಸುತ್ತೇನೆ. ಆದರೆ ಅದು ಈ ರೀತಿ ಕೆಟ್ಟ ವಿಚಾರಕ್ಕೆ ಉಪಯೋಗ ಪಡೆದುಕೊಂಡಿದೆಯಾ ಎಂಬುದು ನನಗೆ ಗೊತ್ತಿಲ್ಲ. ಆ ಸಂದರ್ಭದಲ್ಲಿಯೇ ನನಗೆ ತುಂಬಾ ಬೇಜಾರಾಗಿತ್ತು. ಲಾಕ್‍ಡೌನ್ ಸಮಯ ಆಗಿದ್ದರಿಂದ ಅಲ್ಲಿಗೆ ಭೇಟಿ ನೀಡಲು ಆಗಿಲ್ಲ. ಹೀಗಾಗಿ ನನಗೂ, ಇದಕ್ಕೂ ಸಂಬಂಧ ಇಲ್ಲ ಎಂದು ಫೋನ್ ಮಾಡಿ ಬೇಕಿದ್ದರೆ ಅಗ್ರಿಮೆಂಟ್ ನೋಡಿ ಅಂತ ಹೇಳಿದ್ದೆ. ನನ್ನ ಜಾಗದಲ್ಲಿ ಪಾರ್ಟಿ ನಡೆದಿರುವುದಕ್ಕೆ ಸಿಸಿಬಿ ನೋಟಿಸ್ ಕಳುಹಿಸಿರಬಹುದು ಬಿಟ್ಟರೆ ನನಗೆ ಬೇರೆ ಯಾವ ಲಿಂಕ್ ಕೂಡ ಇಲ್ಲ. ನನಗೆ ಪಾರ್ಟಿಗೆ ಹೋಗುವ ಅಭ್ಯಾಸವೇ ಇಲ್ಲ ಎಂದು ಸ್ಪಷ್ಟಪಡಿಸಿದರು.

    ಡ್ರಗ್ಸ್ ತಗೋತಿರಾ ಅಂತ ಇದೂವರೆಗೂ ನನ್ನ ಯಾರೂ ಕೇಳಿಲ್ಲ, ಕೇಳೋದು ಇಲ್ಲ. ಯಾಕೆಂದರೆ ಈ ಮುಸುಡಿಗೆ ಸಿನಿಮಾನೇ ಇಲ್ಲ ಅಂತ ಹೇಳಿ ಹೋಗುತ್ತಾರೆ. ನಾನು ಕರ್ನಾಟಕ್ಕೆ ಬರೀ ಹೊಟ್ಟೆಯನ್ನು ಕೈಯಲ್ಲಿ ಹಿಡಿದುಕೊಂಡು ಬಂದವನು. ಇಂದು ಈ ಮಟ್ಟಕ್ಕೆ ಹೆಸರು ಮಾಡಿದ್ದೀನಿ ಅಂದರೆ ಅದಕ್ಕೆ ಕರ್ನಾಟಕ ಜನತೆಯ ಪ್ರೀತಿಯೇ ಕಾರಣ. ಕಷ್ಟಪಟ್ಟು ಬಂದವನು ಇಂತಹ ತಪ್ಪು ಮಾಡಲು ಸಾಧ್ಯವೇ ಇಲ್ಲ ಎಂದರು. ಇದನ್ನೂ ಓದಿ: ಡ್ರಗ್ಸ್ ಪ್ರಕರಣ – ಅಕುಲ್ ಬಾಲಾಜಿಗೆ ಸಿಸಿಬಿ ನೋಟಿಸ್

    ಐಷಾರಾಮಿ ಜೀವನ ಟಕ್ ಅಂತ ಬಂದ್ಬಿಡ್ತು ಅಂತ ಇಟ್ಟುಕೊಳ್ಳಿ. ಅವನು ಬದಲಾಗಬಹುದೇನೋ. ಆದರೆ ದುಡ್ಡಿನ ಬೆಲೆ ಗೊತ್ತಿದ್ದವನು ಯಾವತ್ತೂ ಇಂತಹ ಕೆಲಸಕ್ಕೆ ಕೈ ಹಾಕಲ್ಲ. ನಮಗೆ ಕುಟುಂಬ ಇದೆ. ಬಿಗ್ ಬಾಸ್ ನಲ್ಲಿ 99 ದಿನ ಇದ್ದೆ. ಒಂದಿನಾನು ನಾನು ಸ್ಮೋಕಿಂಗ್ ರೂಮಿಗೆ ಹೋಗಿಲ್ಲ. ನಾವು ಆಯ್ತು ನಮ್ಮ ಕೆಲಸ ಹಾಗೂ ಜನರ ನಗಿಸೋದೇ ಆಯ್ತು ಅಂತ ಇದ್ದೇನೆ. ಮನೆಗೆ ಬಂದ ಬಳಿಕವೂ ಕುಟುಂಬದ ಜೊತೆ ಸಮಯ ಕಳೆದಿದ್ದೂ ಆಯ್ತು ಅಷ್ಟೇ ನನ್ನ ಜೀವನ ಎಂದರು.

    ಅತ್ತೆ-ಮಾವ ಪ್ರತ್ಯೇಕವಾಗಿದ್ದರಿಂದ ಅವರ ಸಹಾಯಕ್ಕಾಗಿ ಕಳೆದ 3-4 ತಿಂಗಳ ಹಿಂದೆ ಹೈದರಾಬಾದ್ ಗೆ ಬಂದಿದ್ದೇನೆ. ನಾನು, ನನ್ನ ಕುಟುಂಬ ಅಂತ ನಾನು ಇರೋನು. ವೇದಿಕೆಯ ಮೇಲೆ ಹೋಗಿ ಸಾವಿರಾರು ಜನರ ಮುಂದೆ ಶೋ ಮಾಡಿ ಅವರಿಂದ ಸೈ ಅನಿಸಿಕೊಳ್ಳುತ್ತೇವೆ ಅಲ್ವ ಅದಕ್ಕಿಂತ ಬೆಸ್ಟ್ ಡ್ರಗ್ ಯಾವುದೂ ಇಲ್ಲ ಎಂದು ಹೇಳಿದರು.

    ನಮ್ಮನ್ನು ನೋಡಿ ನಮ್ಮ ಮಕ್ಕಳು ಕಲಿಯುತ್ತಾರೆ. ನನಗೂ 10 ವರ್ಷದ ಒಬ್ಬ ಮಗನಿದ್ದಾನೆ. ನಾನೇದರೂ ಈ ರೀತಿ ಕೆಟ್ಟ ಕೆಲಸದಲ್ಲಿ ಕೈ ಜೋಡಿಸಿದರೆ ನಾಳೆ ಅವನು ಕೂಡ ಫಾಲೋ ಮಾಡುತ್ತಾನೆ. ಅಷ್ಟೊಂದು ಬೇಜವಾಬ್ದಾರಿ ತಂದೆ ನಾನಲ್ಲ. ನಾಳೆ ನಾನು ವಿಚಾರಣೆಗೆ ಹಾಜರಾಗುತ್ತೇನೆ. ನನ್ನ ಜೊತೆ ಇರುವ ದಾಖಲೆಗಳನ್ನು ಕೊಡುತ್ತೇನೆ. ನಾನು ಸ್ವಂತ ದುಡಿಮೆಯಿಂದ ಮೇಲೆ ಬಂದಿದ್ದೇನೆ ಎಂದು ನುಡಿದರು.

    ಇದು ಚಿತ್ರರಂಗಕ್ಕೆ ಮಾತ್ರ ಸೀಮಿತವಲ್ಲ. ಚಿತ್ರರಂಗದಲ್ಲಿ ಎಲ್ಲರೂ ಬರ್ತಾರೆ ಅವರ ಕೆಲಸ ಮಾಡಿಕೊಂಡು ಹೋಗುತ್ತಿರುತ್ತಾರೆ. ಅದರಲ್ಲಿ ಒಬ್ಬರೋ, ಇಬ್ಬರೋ ಕಾಂಟ್ಯಾಕ್ಟ್ ನಲ್ಲಿ ತಗ್ಲಾಕ್ಕೊಳ್ತಾರೆ. ಆದರೆ ಇದರ ಹಿಂದೆ ದೊಡ್ಡ ಮಟ್ಟದ ಮಾಫಿಯಾವೇ ಇದೆ ಎಂದು ಅಕುಲ್ ಪ್ರತಿಕ್ರಿಯಿಸಿದರು.

  • ಜೈಲಿನಲ್ಲಿ ಸೊಳ್ಳೆ ಕಚ್ತಿದೆಂದು ನಿದ್ರಿಸದೆ ಸಂಜನಾ ರಂಪಾಟ!

    ಜೈಲಿನಲ್ಲಿ ಸೊಳ್ಳೆ ಕಚ್ತಿದೆಂದು ನಿದ್ರಿಸದೆ ಸಂಜನಾ ರಂಪಾಟ!

    ಬೆಂಗಳೂರು: ಕಳೆದ ನಾಲ್ಕು ದಿನಗಳಿಂದ ಪರಪ್ಪನ ಅಗ್ರಹಾರ ಜೈಲು ಸೇರಿರುವ ತುಪ್ಪದ ಬೆಡಗಿ ಏನು ಮಾಡಬೇಕೆಂದು ತಿಳಿಯದೇ ಒದ್ದಾಡುತ್ತಿದ್ದಾರೆ. ಈಗ ಸಂಜನಾ ಕೂಡ ಅವರಿಗೆ ಸಾಥ್ ಕೊಟ್ಟಿದ್ದಾರೆ. ಇಬ್ಬರೂ ಒಂದೇ ಕೋಣೆಯಲ್ಲಿ ವಾಸ ಮಾಡುತ್ತಿದ್ದಾರೆ.

    ಇಷ್ಟು ದಿನ ಸುಪ್ಪತ್ತಿಗೆಯಲ್ಲಿದ್ದ ನಟಿಮಣಿಯರು ಈಗ ಜೈಲು ಸೇರಿ ಪಡಬಾರದ ಕಷ್ಟ ಪಡುತ್ತಿದ್ದಾರೆ. ರಾಗಿಣಿ ಜೈಲುವಾಸ 4ನೇ ದಿನಕ್ಕೆ ಕಾಲಿಟ್ಟಿದ್ದರೆ, ಸಂಜನಾ ಜೈಲುವಾಸ ಒಂದು ದಿನ ಪೂರೈಸಿದೆ. ಜೈಲು ಅಧಿಕಾರಿಗಳು ಸಂಜನಾ-ರಾಗಿಣಿಯನ್ನು ಕ್ವಾರಂಟೈನ್ ಕೇಂದ್ರದ ಒಂದೇ ಕೊಠಡಿಯಲ್ಲಿ ಇರಿಸಿದ್ದಾರೆ. ಕಳೆದ ರಾತ್ರಿ 2 ಗಂಟೆ ತನಕ ನಟಿ ಸಂಜನಾ ನಿದ್ದೆ ಮಾಡದೇ ಅರಚಿ ರಂಪಾಟ ನಡೆಸಿದ್ದಾರೆ. ಸೊಳ್ಳೆ ಕಚ್ಚುತ್ತಿದೆ, ನಿದ್ದೆ ಬರ್ತಿಲ್ಲ, ತಲೆ ನೋವು ಜಾಸ್ತಿ ಆಗಿದೆ, ಟ್ರೀಟ್ಮೆಂಟ್ ಕೊಡಿಸಿ ಎಂದು ಮಧ್ಯರಾತ್ರಿ ಕಿರುಚಾಡಿದ್ದಾರೆ. ಈ ವೇಳೆ, ನಟಿ ರಾಗಿಣಿ, ಸಂಜನಾರನ್ನು ಸಂತೈಸಿದ್ದಾರೆ ಎಂದು ತಿಳಿದುಬಂದಿದೆ.

    ಮೇಕಪ್ ಕಿಟ್ ತರಿಸಿಕೊಂಡ್ರಾ ತುಪ್ಪದ ಬೆಡಗಿ?
    ನಟಿ ರಾಗಿಣಿ ಬಾಕಿ ದಿನಗಳನ್ನು ಇದೇ ಕೋಣೆಯಲ್ಲಿ ಹೇಗೆ ಕಳೆಯಬೇಕೆಂದು ಚಿಂತಿಸುತ್ತಿದ್ದಾರೆ. ಲೈಫೇ ಸುಟ್ಟು ಹೋಯ್ತಲ್ಲ ಎನ್ನುತ್ತಾ ಅಳುತ್ತಿದ್ದಾರೆ. ಸಂಜನಾ ಕೂಡ ಈಗ ರಾಗಿಣಿಗೆ ಸಾಥ್ ಕೊಟ್ಟಿದ್ದಾರೆ. ಒಂದೇ ಕೋಣೆಯಲ್ಲಿ ಇಬ್ಬರೂ ನಟಿಯರು ಕಷ್ಟ ಸುಖ ಹಂಚಿಕೊಳ್ಳುತ್ತಿದ್ದಾರೆ. ಜೈಲಿನ ಕೋಣೆ ಹೊರಗೆ ಸುತ್ತಾಡಲು ಅವಕಾಶ ಇದ್ದರೂ ರಾಗಿಣಿ ನಾಲ್ಕು ದಿನಗಳಿಂದ ಹೊರಗೆ ಬಂದಿಲ್ವಂತೆ. ಜೈಲೂಟವನ್ನೇ ಮೃಷ್ಟಾನ್ನವೆಂದು ತಿನ್ನುತ್ತಿದ್ದಾರೆ. ಮನೆಯಿಂದ ತರಿಸಿಕೊಂಡ ಇಂಗ್ಲಿಷ್ ಪುಸ್ತಕಗಳನ್ನು ಓದುತ್ತಿದ್ದಾರೆ. ಅಪ್ಪ-ಅಮ್ಮ ನೋಡಲು ಬಂದರೂ ಅದಕ್ಕೆ ಪೊಲೀಸರು ಅವಕಾಶ ಕೊಟ್ಟಿಲ್ಲ. ಇದೆಲ್ಲದರ ನಡುವೆ ರಾಗಿಣಿ ಮನೆಯಿಂದ ಮೇಕಪ್ ಕಿಟ್ ತರಿಸಿಕೊಂಡಿದ್ದಾರೆ ಎಂಬ ಸುದ್ದಿಯೊಂದು ಹಬ್ಬಿದೆ.

    ಜೈಲಲ್ಲಿರುವ ಸಂಜನಾಗೆ ಬಿಗ್ ಶಾಕ್!
    ಡ್ರಗ್ ಪೆಡ್ಲರ್ ಪ್ರಶಾಂತ್ ರಂಕಾ ಜೊತೆಗೆ ಡ್ರಗ್ಸ್ ಸರಬರಾಜಿನಲ್ಲಿ ನಟಿ ಸಂಜನಾ ಕೂಡ ಪಾಲುದಾರರಾಗಿದ್ದರು ಎಂಬ ಅಂಶ ಸಿಸಿಬಿ ತನಿಖೆಯಲ್ಲಿ ಬಯಲಾಗಿದೆ ಎನ್ನಲಾಗಿದೆ. ಖುದ್ದು ಡ್ರಗ್ ಪೆಡ್ಲರ್ ಪ್ರಶಾಂತ್ ರಂಕಾ ಈ ವಿಚಾರವನ್ನು ಸಿಸಿಬಿ ಅಧಿಕಾರಿಗಳ ಮುಂದೆ ಹೇಳ್ಕೊಂಡು ತಪ್ಪೊಪ್ಪಿಕೊಂಡಿದ್ದಾನೆ. ಕೇರಳ, ಪಂಜಾಬ್, ಗೋವಾ, ಮುಂಬೈ ಹೀಗೆ ಬೇರೆ ಬೇರೆ ಕಡೆಯಿಂದ ಡ್ರಗ್ಸ್ ತರಿಸಿಕೊಂಡು ತಾವು ಪಾಲ್ಗೊಳ್ಳುವ ಪಾರ್ಟಿಗಳಿಗೆ ಇಬ್ಬರು ಮಾದಕ ವಸ್ತು ಸರಬರಾಜು ಮಾಡ್ತಿದ್ರು. ಪಾರ್ಟಿಗೆ ಬರುವ ಉದ್ಯಮಿಗಳಿಗೆ, ರಾಜಕಾರಣಿಗಳು, ಚಿತ್ರನಟರಿಗೆ ಮಾದಕ ವಸ್ತುವನ್ನ ಮಾರಾಟ ಮಾಡಿದ್ರು. ಅಲ್ಲದೇ, ಪ್ರಶಾಂತ್ ರಂಕಾ ಕೂಡ ಸಂಜನಾ ಜೊತೆ ವಿದೇಶಗಳಲ್ಲೂ ಡ್ರಗ್ಸ್ ಪಾರ್ಟಿ ಮಾಡಿದ್ದಾನಂತೆ. ಇದೆಲ್ಲಾ ವಿಚಾರ ಸಿಸಿಬಿ ಕೋರ್ಟ್‍ಗೆ ಸಲ್ಲಿಸಿರುವ ರಿಮ್ಯಾಂಡ್ ಅರ್ಜಿಯಲ್ಲಿ ನಮೂದಾಗಿದೆ.

    ಸಂಜನಾ-ವಂದನಾ ಗಲಾಟೆ ಸೀಕ್ರೆಟ್ ರಿವೀಲ್!
    ಶೇಖ್ ಫಾಝಿಲ್‍ನ ಕ್ಯಾಸಿನೋ ಬೆಳವಣಿಗೆಗೆ ನಟಿ ಸಂಜನಾ ಮತ್ತು ವಂದನಾ ಜೈನ್ ಫುಲ್ ಸಪೋರ್ಟ್ ಮಾಡಿದ್ರು ಅನ್ನೋ ಮಾಹಿತಿ ಬಹಿರಂಗವಾಗಿದೆ. ಫಾಝಿಲ್‍ನ ಶ್ರೀಲಂಕಾದ ಬ್ಯಾಲ್ಲೆ ಕ್ಯಾಸಿನೋದಲ್ಲಿ ನಡೆಯುತ್ತಿದ್ದ ನೈಟ್ ಪಾರ್ಟಿಗಳು ಮುಂಬೈಗೂ ವಿಸ್ತರಣೆಯಾಗಿದ್ದವು. ಬಾಂಬೆಯಲ್ಲಿ ನಡೆಯುತ್ತಿದ್ದ ಕಲರ್‍ಫುಲ್ ಪಾರ್ಟಿಗಳಿಗೆ ಸಂಜನಾ-ವಂದನಾ ಫುಲ್ ಸಪೋರ್ಟ್ ಮಾಡಿದ್ರು ಅಂತ ತಿಳಿದುಬಂದಿದೆ. ಶೇಖ್ ಫಾಝಿಲ್ ಖುದ್ದಾಗಿ ಸಂಜನಾ ಹಾಗೂ ವಂದನಾಗೆ ಥ್ಯಾಂಕ್ಯೂ ಅಂತಾ ಸೋಷಿಯಲ್ ಮೀಡಿಯಾ ಮೂಲಕ ಹೇಳಿಕೊಂಡಿದ್ದ. ಇತ್ತ ಸಿಸಿಬಿ ವಿಚಾರಣೆಗೆ ಹಾಜರಾದ ಶೇಖ್ ಫಾಝಿಲ್ ಪತ್ನಿ, ನನ್ನ ಗಂಡನ ಪ್ರಾಣಕ್ಕೆ ಆಪತ್ತು ಇದೆ. ನನ್ನ ಗಂಡ ಏನಾದ್ರೂ ಸಿಕ್ಕಿದ್ರೆ ಕೊಂದೇ ಬಿಡ್ತಾರೆ. ದೊಡ್ಡವರು ಯಾರೋ ಕರೆದುಕೊಂಡು ಹೋಗಿರ್ತಾರೆ ಅಂತ ಸಿಸಿಬಿ ಪೊಲೀಸರ ಮುಂದೆ ಕಣ್ಣೀರು ಹಾಕಿದ್ದಾರೆ.

    ನಾಳೆ ಸಂಜನಾ ನ್ಯಾಯಾಂಗ ಬಂಧನದ ಅವಧಿ ಮುಗಿಯಲಿದ್ದು, ಅವರನ್ನು 33ನೇ ಸಿಸಿಹೆಚ್ ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತದೆ. ಇದೇ ವೇಳೆ, ಸಂಜನಾ ಜಾಮೀನು ಅರ್ಜಿಯೂ ವಿಚಾರಣೆಗೆ ಬರಲಿದೆ. ಒಟ್ನಲ್ಲಿ ಇಬ್ಬರು ನಟಿಯರು ಈಗ ಜೈಲಲ್ಲಿ ಪಡಬಾರದ ಪಾಡು ಪಡ್ತಿದ್ದಾರೆ. ಇದರ ಮಧ್ಯೆ ಇಬ್ಬರ ಒಂದೊಂದೇ ಸೀಕ್ರೆಟ್ ಬಯಲಾಗ್ತಿದ್ದು, ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿದೆ.

  • ಇಷ್ಟು ಚಿಕ್ಕ ಗೇಟ್‍ನಲ್ಲಿ ನಾನು ಹೋಗಲ್ಲ – ಜೈಲಿನಲ್ಲೂ ಸಂಜನಾ ಕಿರಿಕ್

    ಇಷ್ಟು ಚಿಕ್ಕ ಗೇಟ್‍ನಲ್ಲಿ ನಾನು ಹೋಗಲ್ಲ – ಜೈಲಿನಲ್ಲೂ ಸಂಜನಾ ಕಿರಿಕ್

    ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ನೋಟಿಸ್ ಕೊಟ್ಟಾಗಿನಿಂದಲೂ ತಗಾದೆ ತೆಗೆಯುತ್ತಿದ್ದ ನಟಿ ಸಂಜನಾ ಗಲ್ರಾನಿ ಇಂದು ಪರಪ್ಪನ ಅಗ್ರಹಾರ ಜೈಲಿನೊಳಗೆ ಹೋಗುವ ವೇಳೆಯೂ ಕಿರಿಕ್ ಮುಂದುವರಿಸಿದ್ದಾರೆ.

    ಹೌದು. ಜೈಲಿಗೆ ಎಂಟ್ರಿ ಕೊಡುವಾಗಲೂ ಕಿರಿಕ್ ಮಾಡಿರುವ ಸಂಜನಾ, ಇಷ್ಟು ಚಿಕ್ಕ ಗೇಟ್‍ನಲ್ಲಿ ನಾನು ಹೋಗಲ್ಲ. ನಾನು ಹೋಗಲ್ಲ..ಹೋಗಲ್ಲ ಎಂದು ಹಠಕ್ಕೆ ಬಿದ್ದಿದ್ದರು. ಈ ವೇಳೆ ಅಲ್ಲಿನ ಸಿಬ್ಬಂದಿ ಒಳಗೆ ಹೋಗಿ ಎಂದು ಹೇಳಿದ್ದಾರೆ. ನಂತರ ಒಂದು ನಿಮಿಷದ ಬಳಿಕ ಸಂಜನಾ ಒಳಗೆ ಹೋಗಿದ್ದಾರೆ.

    ಸಂಜನಾರನ್ನು ಎರಡು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುತ್ತಿದ್ದಂತೆಯೇ ಇತ್ತ ಪರಪ್ಪನ ಅಗ್ರಹಾರದ ಮುಂದೆ ಫುಲ್ ಟೈಟ್ ಪೊಲೀಸ್ ಸೆಕ್ಯೂರಿಟಿ ಕೈಗೊಳ್ಳಲಾಗಿತ್ತು. ಜೈಲು ಆವರಣದಿಂದ 500 ಮೀಟರ್ ದೂರದಲ್ಲಿಯೇ ಬ್ಯಾರಿಕೇಡ್ ಹಾಕಲಾಗಿತ್ತು. ಒಳಗಡೆ ಯಾರಿಗೂ ಪ್ರವೇಶ ನೀಡದೆ ಸಾರ್ವಜನಿಕರನ್ನೂ ಮುಖ್ಯ ರಸ್ತೆಯಲ್ಲೇ ತಡೆದಿದ್ದರು. ಇದನ್ನೂ ಓದಿ: ಸಂಜನಾಗೆ 2 ದಿನ, ಇಬ್ಬರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ಯಾಕೆ?

    ಸಾಂತ್ವನ ಕೇಂದ್ರದಿಂದ ಸಂಜನಾರನ್ನು ಲಗೇಜ್ ಸಮೇತ ಪರಪ್ಪನ ಅಗ್ರಹಾರಕ್ಕೆ ಸಿಸಿಬಿ ಪೊಲೀಸರು ಕಳುಹಿಸಿದರು. ಈಕೆಯ ಜೊತೆಗೆ ವೀರೇನ್ ಖನ್ನಾ ಮತ್ತು ರವಿಶಂಕರ್ ನನ್ನೂ ಕೂಡ ಸಿಸಿಬಿ ಪೊಲೀಸರು ಕರೆದೊಯ್ದಿದ್ದಾರೆ. ರಾಜ್ಯ ಮಹಿಳಾ ನಿಲಯದಿಂದ ಪರಪ್ಪನ ಅಗ್ರಹಾರ ರೂಮ್ ನಂ.4ರಲ್ಲಿ ಸಂಜನಾರನ್ನು ಸಿಸಿಬಿ ಪೊಲೀಸರು ಬಿಟ್ಟು ಬಂದಿದ್ದಾರೆ. ಈ ಮೂಲಕ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ ಕನ್ನಡದ ಎರಡನೇ ನಟಿಯಾಗಿದ್ದಾರೆ.

    ಇನ್ನು ಸಿಸಿಬಿ ಪೊಲೀಸರು ಸಾಂತ್ವನ ಕೇಂದ್ರದಿಂದ ಕರೆದುಕೊಂಡು ಬರುವಾಗ ವಾಹನದಲ್ಲಿ ಸಂಜನಾ ಮಲಗಿಕೊಂಡೇ ಬಂದಿದ್ದಾರೆ. ಮಾಧ್ಯಮಗಳ ಕಣ್ತಪ್ಪಿಸೋದರ ಜೊತೆಗೆ ತೀವ್ರ ಅಸ್ವಸ್ಥರಾದಂತೆ ಬಿಂಬಿಸಿಕೊಳ್ಳುವ ಮೂಲಕ ಮತ್ತೆ ಹೈಡ್ರಾಮ ಶುರು ಮಾಡಿದ್ದರು.

     

  • ರಾತ್ರೋ ರಾತ್ರಿ ವಕೀಲರ ಮೊರೆ ಹೋದ ದಿಗಂತ್- ಐಂದ್ರಿತಾ!

    ರಾತ್ರೋ ರಾತ್ರಿ ವಕೀಲರ ಮೊರೆ ಹೋದ ದಿಗಂತ್- ಐಂದ್ರಿತಾ!

    ಬೆಂಗಳೂರು: ಸಿಸಿಬಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ ಹಿನ್ನೆಲೆ ಸ್ಟಾರ್ ದಂಪತಿ ದಿಗಂತ್ ಮತ್ತು ಐಂದ್ರಿತಾ ರೇ ವಕೀಲರನ್ನ ಭೇಟಿಯಾಗಿ ಸಲಹೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

    ತಡರಾತ್ರಿ ವಕೀಲರನ್ನು ಸಂಪರ್ಕಿಸಿರುವ ಮನಸಾರೆ ಜೋಡಿ, ವಿಚಾರಣೆಯನ್ನ ಹೇಗೆ ಎದುರಿಸಬೇಕು? ವಿಚಾರಣೆಗೆ ಹೆಚ್ಚಿನ ಕಾಲಾವಕಾಶ ಕೇಳುವ ಬಗ್ಗೆಯೂ ಮಾಹಿತಿ ಪಡೆದುಕೊಂಡಿದ್ದಾರೆ. ಹಾಗೇ ಕಾನೂನಿನಲ್ಲಿರುವ ಅವಕಾಶಗಳು ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ. ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ನೀಡಿತ್ತು. ಬುಧವಾರ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುತ್ತೇವೆ ಎಂದು ದಿಗಂತ್ ಮತ್ತು ಐಂದ್ರಿತಾ ಸ್ಪಷ್ಟನೆ ನೀಡಿದ್ದು, ತಾವು ಎಲ್ಲಿದ್ದೀವಿ ಎಂಬುದರ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ. ಇತ್ತ ದಿಗಂತ್ ತಾಯಿ, ಮಗ ಹಾಗೂ ಸೊಸೆ ಕೇರಳಕ್ಕೆ ಹೋಗಿದ್ದಾರೆ ಎಂದು ಹೇಳಿದ್ದಾರೆ.

    ಇಂದು ಬೆಳಗ್ಗೆ 11 ಗಂಟೆಗೆ ಸ್ಟಾರ್ ಜೋಡಿ ವಿಚಾರಣೆಗೆ ಆಗಮಿಸುವ ಹಿನ್ನೆಲೆ ಸಿಸಿಬಿ ಕಚೇರಿ ಸುತ್ತಮುತ್ತ ಹೆಚ್ಚಿನ ಭದ್ರತೆ ನಿಯೋಜನೆ ಮಾಡಲಾಗಿದೆ. ಕಾಟನ್ ಪೇಟೆ ಪೊಲೀಸರ ನೇತೃತ್ವದಲ್ಲಿ ಹೆಚ್ಚಿನ ಭದ್ರತೆ ನಿಯೋಜಿಸಲಾಗಿದ್ದು, ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಎಲ್ಲ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇದನ್ನೂ ಓದಿ: ನಾನೊಬ್ಬಳೇ ಅಲ್ಲ ಐಂದ್ರಿತಾ ಕೂಡ ಹೋಗಿ ಬರುತ್ತಿದ್ದಳು

    ಸಂಜನಾ-ರಾಗಿಣಿಗೆ ಮುನ್ನವೇ ನಟ ದಿಗಂತ್ ಹೆಸರು ಕೇಳಿಬಂದಿತ್ತು. ಆರಂಭದಲ್ಲೇ ನಟ ದಿಗಂತ್‍ರನ್ನು ಎನ್‍ಸಿಬಿ ವಿಚಾರಣೆಗೆ ಒಳಪಡಿಸಿತ್ತು ಎನ್ನಲಾಗಿತ್ತು. ಮೂರು ದಿನಗಳ ಹಿಂದಷ್ಟೇ ನಟಿ ಶೇಖ್ ಫಾಝಿಲ್, ರಾಹುಲ್ ಶೆಟ್ಟಿ ಜೊತೆ ಐಂದ್ರಿತಾ ರೇ ಕಾಣಿಸಿಕೊಂಡ ಫೋಟೋಗಳು ವೈರಲ್ ಆಗಿದ್ದವು. 2018ರಲ್ಲಿ ಎರಡು ಬಾರಿ ಶ್ರೀಲಂಕಾದ ಕೊಲಂಬೋದಲ್ಲಿರುವ ಬ್ಯಾಲೆ ಕ್ಯಾಸಿನೋಗೆ ನಟಿ ಐಂದ್ರಿತಾ ರೇ ಹೋಗಿ ಬಂದಿದ್ದರು. ಹಬ್ಬಕ್ಕೆ ನಾನು ಹೋಗ್ತಿದ್ದೀ, ನೀವು ಬನ್ನಿ. ನನಗೆ ಆಹ್ವಾನ ನೀಡಿರೋ ಶೇಖ್ ಫಾಝಿಲ್‍ಗೆ ಧನ್ಯವಾದ ಎಂದಿದ್ದ ವಿಡಿಯೋ ಸಹ ವೈರಲ್ ಆಗಿತ್ತು. ಈ ಬಗ್ಗೆ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ್ದ ನಟಿ ಐಂದ್ರಿತಾ ರೇ, ಸಿನಿಮಾ ಪ್ರಮೋಷನ್‍ಗಾಗಿ ಆ ಕ್ಯಾಸಿನೋಗೆ ಹೋಗಿದ್ದೇ ಅಷ್ಟೇ. ನನಗೂ ಫಾಝಿಲ್‍ಗೂ ಯಾವುದೇ ಸಂಬಂಧ ಇಲ್ಲ. ಅವರೇನು ಅಂತಾ ಈಗಷ್ಟೇ ಗೊತ್ತಾಗಿದೆ. ನನಗೂ ಡ್ರಗ್ಸ್ ಕೇಸ್‍ಗೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಶೇಖ್ ಫಾಝಿಲ್ ನನಗೆ ಪರಿಚಯವಿಲ್ಲ: ಐಂದ್ರಿತಾ ರೇ

  • ಜಮೀರ್ ಅಹ್ಮದ್ ಪೊಲಿಟಿಕಲ್ ಟ್ರಯಲ್- ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಕಿಡಿ

    ಜಮೀರ್ ಅಹ್ಮದ್ ಪೊಲಿಟಿಕಲ್ ಟ್ರಯಲ್- ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಕಿಡಿ

    ಉಡುಪಿ: ಸಾಂಕ್ರಾಮಿಕ ರೋಗ ಕೊರೊನಾ ಚಿಕಿತ್ಸೆ ವಿಚಾರದಲ್ಲಿ ದೊಡ್ಡ ಗೋಲ್ಮಾಲ್ ಆಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಡಿಜೆಹಳ್ಳಿ ಮತ್ತು ಡ್ರಗ್ಸ್ ಜಾಲದ ಕಾರ್ಯಾಚರಣೆ ಇದಕ್ಕೆ ಸಾಕ್ಷಿ ಎಂದು ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ದೂರಿದರು.

    ಡ್ರಗ್ಸ್ ಬೆಳವಣಿಗೆಯನ್ನು ಚರ್ಚೆಗೆ ತಂದು ಉಳಿದೆಲ್ಲಾ ವೈಫಲ್ಯ ಮರೆ ಮಾಚಿಸುವ ಯತ್ನ ನಡೆಯುತ್ತಿದೆ. ದಿಕ್ಕು ತಪ್ಪಿಸುವ ಯತ್ನದಲ್ಲಿ ರಾಜ್ಯ ಸರ್ಕಾರ ತಲ್ಲೀನ ಆಗಿದೆ. ಸಿಟಿ ರವಿಗೆ ಯಾರಿಂದ ಒತ್ತಡ ಇದೆ ಹೇಳಲಿ. ನೀವು ಸಿಎಂ ಅಲ್ಲ, ಗೃಹ ಸಚಿವ ಕೂಡಾ ಅಲ್ಲ. ಕಾಂಗ್ರೆಸ್ ಒತ್ತಡ ಯಾವತ್ತೂ ಹೇರಲ್ಲ. ಕೇಂದ್ರ ರಾಜ್ಯದಲ್ಲಿ ನಿಮ್ಮದೇ ಸರ್ಕಾರ ಇದೆ ತನಿಖೆ ಮಾಡಿ. ತನಿಖೆಗೆ ಬೆಂಬಲ ಕೊಡುತ್ತೇವೆ. ಕೇವಲ ಹೇಳಿಕೆಯಿಂದ ವ್ಯವಸ್ಥೆ ಸರಿ ಮಾಡಲು ಸಾಧ್ಯವಿಲ್ಲ. ರಾಗಿಣಿ ಬಿಜೆಪಿಯ ಕಾರ್ಯಕರ್ತೆ. ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದರು.

    ನೆರೆ ಹಾವಳಿ ಪರಿಹಾರ ಬಂದಿಲ್ಲ. ನಮ್ಮ ರಾಜ್ಯದ ಎಂಪಿಗಳು ಇಲ್ಲಿ ಹುಲಿಯಂತೆ ವರ್ತಿಸುತ್ತೀರಿ. ಮೋದಿ ಮುಂದೆ ಬೆಕ್ಕಿನ ನಿಲ್ಲುತ್ತೀರಿ. ಮೊದಲು ಮಾತನಾಡಲು ಕಲಿಯಿರಿ. ರಾಜ್ಯದ ಹಿತಾಸಕ್ತಿ ಕಾಪಾಡಿ ಪಲಾಯನ ವಾದ ಮಾಡುದರಲ್ಲಿ ಕಾಲ ಕಳೆಯಬೇಡಿ. ರಾಜ್ಯ ಸರ್ಕಾರದ ಹಗರಣ, ವೈಫಲ್ಯ ವಿಚಾರದಲ್ಲಿ ಜೆಡಿಎಸ್ ಮೌನದ ಬಗ್ಗೆ ಅವರನ್ನೇ ಕೇಳಿ. ಯಡಿಯೂರಪ್ಪ ಕುಮಾರಸ್ವಾಮಿ ಭೇಟಿ ಬಗ್ಗೆ ಅವರೇ ಬಹಿರಂಗಪಡಿಸಲಿ ಎಂದರು.

    ಕಾಂಗ್ರೆಸ್ ಸರ್ಜರಿ ನ್ಯಾಚುರಲ್ ಪ್ರಾಸೆಸ್. ಬದಲಾವಣೆ ಆಗುತ್ತಿರಬೇಕು. ಹೊಸಬರ ಆಗಮನ ಆಗಬೇಕು. ಹಿರಿಯರ ಮಾರ್ಗದರ್ಶನ ಜೊತೆಗಿರಬೇಕು. ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ನಮ್ಮ ಶಾಸಕ. ಅವರ ತಂದೆ ಕೂಡಾ ಕಾಂಗ್ರೆಸ್ ಮುಖಂಡ. ಅವರಿಗೆ ಕಾಂಗ್ರೆಸ್ ಮುಂದೆನೂ ಸಪೋರ್ಟ್ ಮಾಡುತ್ತದೆ. ಅವರು ಕಾಂಗ್ರೆಸ್ ಬಿಟ್ಟು ಹೋಗಲ್ಲ ಎಂದರು.

    ಜಮೀರ್ ವಿಚಾರದಲ್ಲಿ ಮಾಧ್ಯಮಗಳ ಮೂಲಕ ದಾರಿ ತಪ್ಪಿಸಲಾಗುತ್ತಿದೆ. ಯಾರು ತಪ್ಪು ಮಾಡಿದರೂ ಶಿಕ್ಷೆ ಆಗಬೇಕು. ಮೀಡಿಯಾ ಟ್ರಯಲ್ ಸರಿಯಲ್ಲ. ಡ್ರಗ್ಸ್ ಪೊಲಿಟಿಕಲ್ ಟ್ರಯಲ್ ಆಗಬಾರದು. ಬಿಜೆಪಿ ನಾಯಕರು ಪೊಲೀಸರ ತರ, ತನಿಖಾಧಿಕಾರಿಗಳ ತರ ವರ್ತಿಸುತ್ತಾರೆ. ಸ್ಟೇಟ್ ಮೆಂಟ್ ಸಾಕು, ಕೆಲಸ ಮಾಡಿ ಎಂದು ಸಲೀಂ ಹೇಳಿದರು.

  • ಮಾದಕ ವ್ಯಸನಗಳಿಗೆ ಯುವಕರು ದಾಸರಾಗಬಾರದು: ಹಿರೇಮಠ ಶ್ರೀ

    ಮಾದಕ ವ್ಯಸನಗಳಿಗೆ ಯುವಕರು ದಾಸರಾಗಬಾರದು: ಹಿರೇಮಠ ಶ್ರೀ

    ನೆಲಮಂಗಲ: ಚಿತ್ರರಂಗದ ಚಂದನವನದಲ್ಲಿ ಡ್ರಗ್ಸ್ ಪ್ರಕರಣದ ಸದ್ದು ದಿನೇ ದಿನೇ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ತುಮಕೂರಿನ ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಯವಕರಿಗೆ ಮಾದಕ ವ್ಯಸನದಿಂದ ದೂರವಿರಿ ಎಂದು ಕರೆ ನೀಡಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಹಳೆನಿಜಗಲ್ಲಿನ ಕೆರೆ ಭರ್ತಿಯಾದ ಹಿನ್ನೆಲೆಯಲ್ಲಿ, ಕೆರೆಗೆ ಬಾಗಿನ ಸಮರ್ಪಿಸಿದ ಹಿರೇಮಠದ ಶ್ರೀಗಳು, ನಂತರ ಮಾಧ್ಯಮಗಳೊಂದಿಗೆ ಪ್ರಸ್ತುತ ಸನ್ನಿವೇಶದ ಬಗ್ಗೆ ಮಾತನಾಡಿದರು. ಮಾದಕ ವ್ಯಸನಿಗಳಿಗೆ ಯುವಕರು ದಾಸರಾಗಬಾರದು ಎಂದರು.

    ಆಧುನಿಕ ಸಮಾಜದಲ್ಲಿ ತಂತ್ರಜ್ಞಾನ ಬೆಳೆದಿದೆ. ಎಲ್ಲವೂ ಅನ್‍ಲೈನ್ ಕಾಲ ಎಂಬಾಂತಾಗಿದೆ. ಯುವಕರು ತಮ್ಮ ವ್ಯಕ್ತಿತ್ವ ಕಟ್ಟಿಕೊಳ್ಳಬೇಕು. ಅಂದಿನ ಯುವಕರು ಸುಶಿಕ್ಷತರಿರುತ್ತಿರಲಿಲ್ಲ. ಇಂದು ಯವಕರು ಸುಶಿಕ್ಷತರಾಗಿದ್ದಾರೆ. ಆದರೆ ಯುವಕರು ಸಾಮಾಜಿಕ ಜಾಲತಾಣದಿಂದ ಕೆಟ್ಟಿಲ್ಲ. ಪ್ರಕೃತಿಯನ್ನು ನೋಡಿ ಯುವಕರು ಕಲಿಯಬೇಕು. ವಿವೇಚನೆ ಬಳಸಬೇಕು. ಯುವಕರು ವಿವೇಚನೆ ಗಳಿಸಬೇಕು ಎಂದು ತಿಳಿಸಿದರು.

    ವ್ಯಸನಗಳಿಂದ ಯುವ ಪೀಳಿಗೆ ದೂರವಾಗಬೇಕು. ವ್ಯಸನಗಳಿಂದಲೇ ಯುವಕರು ಯೌವ್ವನ ಕಳೆದುಕೊಳ್ಳತ್ತಿರುವುದು ವಿಷಾದನೀಯ ಎಂದರು. ಈ ವೇಳೆಯಲ್ಲಿ ಹೊನ್ನಮ್ಮಗವಿ ಶ್ರೀ ಮತ್ತು ವನಕಲ್ಲು ಶ್ರೀ ಹಾಜರಿದ್ದರು, ಗ್ರಾಮದ ಯುವಕರು ಮತ್ತು ಮಕ್ಕಳು ಕೆರೆ ಬಾಗಿನ ಮತ್ತು ಬಲಿಹರಣ ನೀಡಿ, ಗ್ರಾಮಕ್ಕೆ ಯಾವುದೇ ತೊಂದರೆಯಾಗಬಾರದೆಂದು ದೇವರಲ್ಲಿ ಪ್ರಾರ್ಥಿಸಿದರು.

  • ಡ್ರಗ್ಸ್ ಕೇಸ್ ತನಿಖೆಗೆ ಟ್ವಿಸ್ಟ್- ಶುರುವಾಯ್ತು ಮೂವರು ಸ್ಟಾರ್ ನಟರಿಗೆ ಢವ ಢವ!

    ಡ್ರಗ್ಸ್ ಕೇಸ್ ತನಿಖೆಗೆ ಟ್ವಿಸ್ಟ್- ಶುರುವಾಯ್ತು ಮೂವರು ಸ್ಟಾರ್ ನಟರಿಗೆ ಢವ ಢವ!

    ಬೆಂಗಳೂರು: ಸ್ಯಾಂಡಲ್‍ವುಡ್ ನಶೆ ನಂಟಿನ ಘಾಟು ದಿನೇದಿನೇ ಹೆಚ್ಚಾಗ್ತಾ ಇದೆ. ಸಿಸಿಬಿ ವಿಚಾರಣೆ ವೇಳೆ ನಟಿಯರಾದ ಸಂಜನಾ ಮತ್ತು ನಟಿ ರಾಗಿಣಿ ದೊಡ್ಡದೊಡ್ಡವರ ಹೆಸರು, ರಾಜಕಾರಣಿಗಳ ಮಕ್ಕಳ ಹೆಸರು, ವಿವಿಐಪಿಗಳ ಹೆಸರುಗಳನ್ನ ಹೇಳಿದ್ದಾರೆ ಎನ್ನಲಾಗಿದೆ. ಇದೀಗ ಚಂದನವನದ ಮೂರು ಸ್ಟಾರ್ ನಟರು ಡ್ರಗ್ಸ್ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಡ್ರಗ್ಸ್ ಪ್ರಕರಣದಲ್ಲಿ ಬಂಧನವಾಗಿರುವ ಮಾದಕ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾಣಿ ಒಂದ್ಕಡೆ ವಿಚಾರಣೆ ಎದುರಿಸುತ್ತಿದ್ದಾರೆ. ಇªಬ್ಬರ ಹೇಳಿಕೆಯಿಂದ ಸ್ಯಾಂಡಲ್‍ವುಡ್‍ನ ಮೂವರು ಬಿಗ್ ಸ್ಟಾರ್‍ಗಳಿಗೆ ಆತಂಕ ಹೆಚ್ಚಾಗಿದೆ. ಸ್ಯಾಂಡಲ್‍ವುಡ್‍ನ ಮೂವರು ಬಿಗ್ ಬಜೆಟ್ ಹೀರೋಗಳಿಗೆ ಡ್ರಗ್ಸ್ ಜಾಲ ಉರುಳಾಗುವ ಸಾಧ್ಯತೆ ಇದೆ. ರಾಗಿಣಿ, ಗಲ್ರಾಣಿ ಅರೆಸ್ಟ್ ಆಗಿರೋ ಬೆನ್ನಲ್ಲೇ ಈಗ ಡ್ರಗ್ಸ್ ಜಾಲದ ಚೆಂಡು ಈ ಮೂವರು ಸ್ಟಾರ್ ಹೀರೋಗಳ ಅಂಗಳದಲ್ಲಿದೆ ಅಂತ ತಿಳಿದು ಬಂದಿದೆ.

    ಯಾರು ಮೂವರು ನಟರು?: ಕನ್ನಡದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನ ನೀಡಿರುವ ಮೂವರು ನಟರು ಪದೇ ಪದೇ ಶ್ರೀಲಂಕಾದ ಕ್ಯಾಸಿನೋಗೆ ಭೇಟಿ ನೀಡಿದ್ದಾರೆ. ಈ ನಟರ ಓಡಾಟದ ಮಾಹಿತಿ ಜಾರಿ ನಿರ್ದೇಶನಾಲಯಕ್ಕೆ ಲಭ್ಯವಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ‘ಗಂಡ-ಹೆಂಡತಿ’ ನಟಿ ಮದುವೆ ಸೀಕ್ರೆಟ್- ಮ್ಯಾರೇಜ್ ಆಗಿಲ್ಲ ಅಂತ ಸುಳ್ಳು ಹೇಳಿದ್ರಾ ಸಂಜನಾ?

    ಇದರ ನಡುವೆ, ಹಣಕಾಸು ಅವ್ಯವಹಾರ, ಹವಾಲ ದಂಧೆ ನಡೆದಿರುವ ಬಗ್ಗೆ ಆರೋಪಗಳು ಕೇಳಿ ಬಂದಿದೆ. ಈ ಕಾರಣದಿಂದಾಗಿ, ಎನ್‍ಸಿಬಿ, ಸಿಸಿಬಿ ಜೊತೆಗೆ ಈಗ ಜಾರಿ ನಿರ್ದೇಶನಾಲಯವೂ ಎಂಟ್ರಿಯಾಗಲು ಸಿದ್ಧತೆ ನಡೆಸಿದೆ. ಸ್ಯಾಂಡಲ್‍ವುಡ್ ನಲ್ಲಿ ಹವಾಲಾ ಹಣ ಸದ್ದು ಮಾಡುತ್ತಿದೆ. ಅಕ್ರಮವಾಗಿ ಕೋಟ್ಯಂತರ ರೂಪಾಯಿ ಹಣ ವರ್ಗಾವಣೆ ಆಗಿರುವ ಆರೋಪಗಳು ಕೇಳಿ ಬಂದಿವೆ. ಈ ಹಿನ್ನೆಲೆ ಜಾರಿ ನಿರ್ದೇಶನಾಲಯ ಪ್ರಕರಣ ಕೈಗೆತ್ತಿಕೊಳ್ಳುವ ಸಾಧ್ಯತೆಗಳಿವೆ. ಇದನ್ನೂ ಓದಿ: ರಾಗಿಣಿ, ಸಂಜಾನಾಗೆ ಶಾಕ್- ಸಿಸಿಬಿ ಕಚೇರಿಗೆ ಇಡಿ ಅಧಿಕಾರಿಗಳ ಎಂಟ್ರಿ

  • ದೇಶದ ಇತಿಹಾಸದಲ್ಲೇ ಡ್ರಗ್ಸ್ ಪ್ರಕರಣದಲ್ಲಿ ಯಾರೂ ಈ ರೀತಿ ಕ್ರಮ ಕೈಗೊಂಡಿಲ್ಲ: ಬಿಎಸ್‍ವೈ

    ದೇಶದ ಇತಿಹಾಸದಲ್ಲೇ ಡ್ರಗ್ಸ್ ಪ್ರಕರಣದಲ್ಲಿ ಯಾರೂ ಈ ರೀತಿ ಕ್ರಮ ಕೈಗೊಂಡಿಲ್ಲ: ಬಿಎಸ್‍ವೈ

    ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ ಇತಿಹಾಸದಲ್ಲಿಯೇ ಈ ರೀತಿ ಯಾರೂ ಕ್ರಮ ಕೈಗೊಂಡಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.

    ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ವಿಚಾರದಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಕೆಲವರ ಬಣ್ಣ ಈಗ ಬಯಲಾಗ್ತಿದೆ. ಹಿಂದಿನ ಸರ್ಕಾರ ಕಣ್ಮುಚ್ಚಿ ಕುಳಿತಿತ್ತು. ದೇಶದ ಇತಿಹಾಸದಲ್ಲಿ ಯಾರೂ ಕೂಡ ಈ ರೀತಿ ಕ್ರಮ ಕೈಗೊಂಡಿರಲಿಲ್ಲ. ಸಿಸಿಬಿ ತನಿಖೆ ಮಾಡ್ತಿದೆ. ಎಲ್ಲರ ಬಣ್ಣ ಬಯಲಾಗುತ್ತೆ ಎಂದು ತಿಳಿಸಿದರು.

    ಡ್ರಗ್ಸ್ ಕೇಸ್ ಸಂಬಂಧ ತನಿಖೆ ಆಗ್ತಿದೆ. ಇದರಲ್ಲಿ ಯಾರನ್ನೂ ಸೇವ್ ಮಾಡುವ ಪ್ರಶ್ನೆಯೇ ಇಲ್ಲ. ದೇಶದ ಇತಿಹಾಸದಲ್ಲಿ ಕಳೆದ 10 ವರ್ಷಗಳಿಂದ ಈ ರೀತಿಯ ಘಟನೆ ನಡೆಯುತ್ತಿದ್ದರೂ ಹಿಂದಿನ ಸರ್ಕಾರಗಳು ಏನು ಕ್ರಮಗಳನ್ನು ಕೈಗೊಳ್ಳದೇ ಕೈಕಟ್ಟಿ ಕುಳಿತಿದ್ದವು. ಆದರೆ ಈ ಸಾರಿ ನಾವು ಆ ಬಗ್ಗೆ ಸಮಗ್ರವಾಗಿ ತನಿಖೆ ಮಾಡಿಸ್ತಿದ್ದೇವೆ ಎಂದರು.

    ಇದೇ ವೇಳೆ ಕೊರೊನಾ ವೈರಸ್ ಸಂಬಂಧ ಮಾತನಾಡಿದ ಸಿಎಂ, ಕೋವಿಡ್ ನಿಯಂತ್ರಣದ ಬಗ್ಗೆ ಡಿಸಿಗಳು, ಸಿಇಓಗಳ ಜತೆ ಸಭೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಟೆಸ್ಟ್ ಗೆ ಸೂಚಿಸಿದ್ದೇವೆ. ಮನೆ ಮನೆ ಸರ್ವೆ ಮುಂದುವರಿಸುವಂತೆ ಸೂಚನೆ ನೀಡಲಾಗಿದೆ. ಯಾವ ಜಿಲ್ಲೆಯಲ್ಲೂ ವೆಂಟಿಲೇಟರ್, ಅಕ್ಸಿಜೆನ್ ಬೆಡ್ ಕೊರತೆ ಇಲ್ಲ ಎಂದು ಮಾಹಿತಿ ನೀಡಿದರು.

    ಕೋವಿಡ್ ಮತ್ತು ಮಳೆ ಹಾನಿ ಸಂಬಂಧ ಡಿಸಿಗಳ ಜೊತೆ ವಿಸ್ತೃತವಾಗಿ ಚರ್ಚೆ ನಡೆಸಲಾಯ್ತು. ಎಲ್ಲಾ ಡಿಸಿಗಳ ಅಕೌಂಟ್ ನಲ್ಲಿ 25 ರಿಂದ 30 ಕೋಟಿ ಹಣವಿದೆ. ಯಾವುದೇ ಹಣದ ಕೊರೆತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

    ಸಂಪುಟ ವಿಸ್ತರಣೆ ಸಂಬಂಧ ಪ್ರತಿಕ್ರಿಯಿಸಿ, ನಾಲ್ಕೈದು ದಿನದಲ್ಲಿ ದೆಹಲಿಗೆ ತೆರಳುತ್ತೇನೆ. ಹೈಕಮಾಂಡ್ ಟೈಂ ಕೊಟ್ಟ ತಕ್ಷಣ ಹೊರಡುತ್ತೇನೆ. ಸಂಪುಟ ವಿಸ್ತರಣೆ ವಿಚಾರ, ನೆರೆ ಪರಿಹಾರ ವಿಚಾರವಾಗಿ ಚರ್ಚೆ ನಡೆಸುತ್ತೇನೆ ಎಂದರು.