Tag: drug mafia

  • ಸಾಂತ್ವನ ಕೇಂದ್ರದಲ್ಲಿ ರಾಗಿಣಿಯ ಮೊದಲ ರಾತ್ರಿ ವಾಸ- ಸೊಳ್ಳೆ ಕಾಟ, ನಿದ್ದೆ ಇಲ್ಲ

    ಸಾಂತ್ವನ ಕೇಂದ್ರದಲ್ಲಿ ರಾಗಿಣಿಯ ಮೊದಲ ರಾತ್ರಿ ವಾಸ- ಸೊಳ್ಳೆ ಕಾಟ, ನಿದ್ದೆ ಇಲ್ಲ

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿಯನ್ನು ಶುಕ್ರವಾರ ಸಂಜೆ ಸಿಸಿಬಿ ಪೊಲೀಸರು ಬಂಧಿಸಿದ್ದರು. ಮಹಿಳಾ ಸಾಂತ್ವನ ಕೇಂದ್ರದಲ್ಲಿ ನಟಿ ರಾಗಿಣಿ ಮೊದಲ ರಾತ್ರಿಯ ವಾಸ ಮಾಡಿದ್ದಾರೆ. ಇದನ್ನೂ ಓದಿ: ಇದೇ ಮೊದಲಲ್ಲ, ಕೆಪಿಎಲ್‌ ಟು ಡ್ರಗ್ಸ್‌ ಲಿಂಕ್‌- ರಾಗಿಣಿ ಮೇಲೆ ಇರೋ ಆರೋಪಗಳೇನು?

    ಪೊಲೀಸರು ಶುಕ್ರವಾರ ರಾತ್ರಿ ಬಿಗಿ ಭದ್ರತೆಯೊಂದಿಗೆ ಡೈರಿ ಸರ್ಕಲ್ ಬಳಿ ಇರುವ ಮಹಿಳಾ ಸಾಂತ್ವನ ಕೇಂದ್ರಕ್ಕೆ ರಾಗಿಣಿಯನ್ನು ಕರೆದುಕೊಂಡು ಹೋಗಿದ್ದರು. ರಾಗಿಣಿ ಜೊತೆ ಸಾಂತ್ವನ ಕೇಂದ್ರದಲ್ಲಿಯೇ ಇಬ್ಬರು ಮಹಿಳಾ ಪೊಲೀಸರು ಉಳಿದುಕೊಂಡಿದ್ದಾರೆ.

    ಸಾಂತ್ವನ ಕೇಂದ್ರದಲ್ಲಿ ಸೊಳ್ಳೆ ಕಾಟ ಇದ್ದುದ್ದರಿಂದ ಕೇವಲ ನಾಲ್ಕು ಗಂಟೆ ಮಾತ್ರ ನಟಿ ರಾಗಿಣಿಗೆ ನಿದ್ದೆ ಮಾಡಿದ್ದಾರೆ. 2 ಗಂಟೆಗೆ ಮಲಗಿ ಮುಂಜಾನೆ 6 ಗಂಟೆಗೆ ನಿದ್ದೆಯಿಂದ ಎದ್ದಿದ್ದಾರೆ. ನಂತರ ತಮ್ಮ ಕೋಣೆಯಿಂದ ಹೊರಬಂದು ಸೊಳ್ಳೆ ಕಾಟದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ರಾತ್ರಿ ಊಟವನ್ನು ಕೂಡ ಸರಿಯಾಗಿ ಮಾಡಲಿಲ್ಲ ಎಂದು ತಿಳಿದು ಬಂದಿದೆ. ಅಲ್ಲದೇ ಮಹಿಳಾ ಸಾಂತ್ವನ ಕೇಂದ್ರದ ಬಳಿಯ ಆವರಣದಲ್ಲೇ ನಟಿ ರಾಗಿಣಿ ವಾಕಿಂಗ್ ಮಾಡುತ್ತಿದ್ದಾರೆ.

    ರಾಗಿಣಿ ರಾತ್ರಿ ಕಳೆದಿದ್ದೇಗೆ?
    * ಸಾಂತ್ವನ ಕೇಂದ್ರದಲ್ಲಿ ರಾತ್ರಿ ಕಳೆಯಲು ನಟಿ ರಾಗಿಣಿ ಹರಸಾಹಸ
    * ಮೂರು ಜನ ಇರಬಹುದಾದ ಕೋಣೆಯಲ್ಲಿ ರಾತ್ರಿ ಕಳೆದ ರಾಗಿಣಿ
    * ತುಪ್ಪದ ಬೆಡಗಿಗೆ ಯಾವುದೇ ವಿಐಪಿ ಟ್ರೀಟ್ಮೆಂಟ್ ಇಲ್ಲ
    * ಸಾಮಾನ್ಯ ಆರೋಪಿಗಳ ರೀತಿ ರೂಂನಲ್ಲಿ ರಾತ್ರಿ ಮಲಗಿದ ರಾಗಿಣಿ
    * ರಾಗಿಣಿ ಜೊತೆಗೆ ಇಬ್ಬರು ಮಹಿಳಾ ಪೊಲೀಸ್ ಅಧಿಕಾರಿಗಳು
    * ರೂಂನಲ್ಲಿ ಮಂಚ, ಫ್ಯಾನ್, ರೆಸ್ಟ್ರೂಮ್ ವ್ಯವಸ್ಥೆ ಇದೆ
    * ಸಾಮಾನ್ಯರಂತೆ ರಾತ್ರಿ ಕಳೆದ ಹೈ ಫೈ ರಾಗಿಣಿ

    * ಊಟಕ್ಕೆ ಚಪಾತಿ, ಪಲ್ಯ, ಅನ್ನ ಸಂಬಾರ್, ಉಪ್ಪಿನಕಾಯಿ, ಹಪ್ಪಳ
    * ಕರ್ಲಾನ್ ಬೆಡ್ ಬಳಸುತ್ತಿದ್ದ ಬೆಡಗಿ ಸರ್ಕಾರಿ ಬೆಡ್ ಮೇಲೆ
    * ಮಹಿಳಾ ಪೊಲೀಸರ ಜೊತೆ ಮಾತಾಡುತ್ತಿದ್ದ ರಾಗಿಣಿ
    * ಇಂದಿನ ವಿಚಾರಣೆ ಎದುರಿಸುವ ಬಗ್ಗೆ ರಾತ್ರಿಯೆಲ್ಲಾ ಚಿಂತಿಸಿದ ರಾಗಿಣಿ
    * ಬೇರೆಯವರ ಜೊತೆ ಚರ್ಚಿಸಲು ಫೋನ್ ಇಲ್ಲದೇ ನಟಿ ಒದ್ದಾಟ
    * ಯಾವುದೇ ಲಗೇಜ್ ಇಲ್ಲದೇ ಬಂದಿದ್ದ ರಾಗಿಣಿ
    * ಬೆಳಗ್ಗೆ ಬಂದಾಗ ತೊಟ್ಟಿದ್ದ ಅದೇ ಸೀರೆಯಲ್ಲೇ ಮಲಗಿದ್ದ ರಾಗಿಣಿ

  • ಇದೇ ಮೊದಲಲ್ಲ, ಕೆಪಿಎಲ್‌ ಟು ಡ್ರಗ್ಸ್‌ ಲಿಂಕ್‌- ರಾಗಿಣಿ ಮೇಲೆ ಇರೋ ಆರೋಪಗಳೇನು?

    ಇದೇ ಮೊದಲಲ್ಲ, ಕೆಪಿಎಲ್‌ ಟು ಡ್ರಗ್ಸ್‌ ಲಿಂಕ್‌- ರಾಗಿಣಿ ಮೇಲೆ ಇರೋ ಆರೋಪಗಳೇನು?

    ಬೆಂಗಳೂರು: ನಟಿ ರಾಗಿಣಿ ವಿರುದ್ಧ ಆರೋಪಗಳು ಕೇಳಿ ಬರುತ್ತಿರುವುದು ಇದೇ ಮೊದಲೇನು ಅಲ್ಲ. ಎರಡು ವರ್ಷದ ಹಿಂದೆ ಗಂಭೀರ ಆರೋಪ ಕೇಳಿ ಬಂದಿತ್ತು.

    2016ರಲ್ಲಿ ರಾಗಿಣಿ ಬಳ್ಳಾರಿ ಟಸ್ಕರ್ಸ್ ತಂಡವನ್ನು ಖರೀದಿಸಿದ್ದರು.  ಕೆಪಿಎಲ್  ಟೂರ್ನಿಯ ವೇಳೆ  ಫಿಕ್ಸಿಂಗ್ ಆರೋಪ ಪ್ರಕರಣದಲ್ಲಿ ನಟಿ ರಾಗಿಣಿ ಹೆಸರು ಬಂದಿತ್ತು. ಆದರೆ ಸೂಕ್ತ ದಾಖಲೆ, ಸಾಕ್ಷ್ಯ ಸಿಗದ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣಕ್ಕೆ ಸು ಮ್ಮನಾಗಿದ್ದರು.

    ಪ್ರಬಲವಾದ ಸಾಕ್ಷ್ಯಗಳು ಸಿಗದೇ ಇದ್ದರೂ ರಾಗಿಣಿಯ ಚಟುವಟಿಕೆ ಮೇಲೆ ಒಂದು ಕಣ್ಣು ಇಟ್ಟಿದ್ದರು. ರಾಗಿಣಿ ಮತ್ತು ರವಿಶಂಕರ್ ಚಲನವಲನದ ಬಗ್ಗೆ ಪ್ರತಿಯೊಂದು ಮಾಹಿತಿಯನ್ನು ಸದ್ದಿಲ್ಲದೇ ಸಂಗ್ರಹಿಸುತ್ತಿದ್ದರು. ಇದನ್ನೂ ಓದಿ: 8 ಗಾಂಜಾ ತುಂಬಿದ್ದ ಸಿಗರೇಟ್‌ ಪತ್ತೆ – ಪೊಲೀಸರ ದಾಳಿ ವೇಳೆ ರಾಗಿಣಿ ಮನೆಯಲ್ಲಿ ಏನೇನು ಸಿಕ್ಕಿದೆ?

    ಡ್ರಗ್ ಪೆಡ್ಲರ್ ಪ್ರತೀಕ್ ಶೆಟ್ಟಿ, ಇಬ್ಬರು ನೈಜಿರಿಯನ್ ಪ್ರಜೆಗಳ ಬಂಧನ ನಂತರ ರವಿಶಂಕರ್, ರಾಗಿಣಿ ಸೇರಿ ಹದಿನೈದು ಜನ ಸೆಲೆಬ್ರಿಟಿಗಳಿಗೆ ಡ್ರಗ್ಸ್ ಪೂರೈಕೆ ಆಗ್ತಿದ್ದ ಮಾಹಿತಿ ಬಯಲಾಗಿತ್ತು ಈ ಸಂಬಂಧ ಮತ್ತಷ್ಟು ಸಾಕ್ಷ್ಯಗಳು ಸಿಕ್ಕ ನಂತರ ಕಾರ್ಯಚರಣೆ ತೀವ್ರಗೊಳಿಸಿದ ಸಿಸಿಬಿ, ಮೊನ್ನೆ ರವಿಶಂಕರ್ ಬಂಧಿಸಿತು ಎಂಬ ಮಾಹಿತಿ ಸಿಸಿಬಿ ಮೂಲಗಳಿಂದ ಸಿಕ್ಕಿದೆ.

    ಎರಡು ವರ್ಷದ ಹಿಂದೆ ರಾಗಿಣಿ ವಿಚಾರವಾಗಿ ಸ್ಟಾರ್ ಹೋಟೆಲ್ ಒಂದರಲ್ಲಿ ರವಿಶಂಕರ್ ಮತ್ತು ಶಿವಪ್ರಕಾಶ್ ಎಂಬುವರ ಮಧ್ಯೆ ತೀವ್ರ ಗಲಾಟೆ ಆಗಿತ್ತು. ಈ ಬಗ್ಗೆಯೂ ಇಂದು ಸಿಸಿಬಿ ಅಧಿಕಾರಿಗಳು ರಾಗಿಣಿಗೆ ಪ್ರಶ್ನೆ ಮೇಲೆ ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ.

  • ಡ್ರಗ್ ದಂಧೆಯಲ್ಲಿ ರಾಜಕಾರಣಿಗಳಾದ್ರೂ ಶಿಕ್ಷೆಯಾಗಲಿ: ಶಾಸಕ ಅಪ್ಪಚ್ಚು ರಂಜನ್

    ಡ್ರಗ್ ದಂಧೆಯಲ್ಲಿ ರಾಜಕಾರಣಿಗಳಾದ್ರೂ ಶಿಕ್ಷೆಯಾಗಲಿ: ಶಾಸಕ ಅಪ್ಪಚ್ಚು ರಂಜನ್

    ಮಡಿಕೇರಿ: ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಡ್ರಗ್ಸ್ ದಂಧೆಯಲ್ಲಿ ಕನ್ನಡ ಚಿತ್ರರಂಗದ ನಟ ನಟಿಯರು ಇದ್ದಾರೆ ಎನ್ನೋದು ಗೊತ್ತಾಗಿದೆ. ಇವರ ಜೊತೆ ರಾಜಕಾರಣಿಗಳಿದ್ದರೆ ಅವರಿಗೂ ಮುಲಾಜಿಲ್ಲದೆ ತಕ್ಕ ಶಿಕ್ಷೆಯಾಗಬೇಕು ಎಂದು ಮಡಿಕೇರಿ ಬಿಜೆಪಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಒತ್ತಾಯಿಸಿದ್ದಾರೆ.

    ಮಡಿಕೇರಿಯಲ್ಲಿ ಮಾತನಾಡಿದ ಅವರು ಚಿತ್ರರಂಗದವರಿರಲಿ, ರಾಜಕಾರಣಿಗಳಿರಲಿ ಯಾರು ತಪ್ಪು ಮಾಡಿದರೂ ಅದು ತಪ್ಪೇ. ಡ್ರಗ್ಸ್‍ನಿಂದಾಗಿ ನಮಗೆ ಉಳಿಗಾಲವಿಲ್ಲ. ಈ ವ್ಯವಸ್ಥೆಯನ್ನೇ ಡ್ರಗ್ಸ್ ಹಾಳುಮಾಡುತ್ತದೆ ಎಂದು ಕಿಡಿಕಾರಿದರು.

    ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ತಪ್ಪಿತಸ್ಥರನ್ನು ಸುಮ್ಮನೆ ಬಿಡಬಾರದು. 10 ವರ್ಷಗಳ ಹಿಂದೆ ಪಿಟೀಷನ್ ಕಮಿಟಿಯಲ್ಲಿ ನಾನೂ ಕೂಡ ಇದ್ದೆ. ಆ ವೇಳೆ ಡ್ರಗ್ಸ್ ರೀತಿಯ ಮಾರಾಟ ಚಟುವಟಿಕೆಗಳಿಗೆ ಹೇಗೆ ಕಡಿವಾಣ ಹಾಕಬೇಕು. ಎಲ್ಲೆಲ್ಲಿ ಕಾಲೇಜುಗಳಿಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಆ ಮೂಲಕ ಹೇಗೆ ಕಾನೂನು ಬಾಹಿರವಾದ ಈ ಚಟುವಟಿಕೆಯನ್ನು ಮಟ್ಟಹಾಕಬೇಕು ಎಂದು ಶಿಫಾರಸು ಮಾಡಿದ್ದೆವು ಎಂದರು.

    ಕೊಡಗಿನ ಹಲವೆಡೆ ಗಾಂಜಾ ಸೊಪ್ಪು ಬೆಳೆ ಮತ್ತು ಮಾರಾಟ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಅಂತಹವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆ ಎಂದು ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.

  • ವೃತ್ತಿಯಲ್ಲಿ ಟೆಕ್ಕಿ, ಪ್ರವೃತ್ತಿಯಲ್ಲಿ ಡ್ರಗ್ಸ್ ದಂಧೆಯ ಕಿಂಗ್ ಪಿನ್- ವಿರೇನ್ ಖನ್ನಾ ಬಂಧನ

    – ದೆಹಲಿಯಲ್ಲಿದ್ದುಕೊಂಡೇ ಡ್ರಗ್ ಪಾರ್ಟಿ ಆಯೋಜನೆ

    ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಸಿಸಿಬಿ ಪೊಲೀಸರು ದಂಧೆಯ ಕಿಂಗ್‍ಪಿನ್ ವೀರೇನ್ ಖನ್ನಾ ಎಂಬಾತನನ್ನು ಬಂಧಿಸಿದ್ದಾರೆ.

    ಬಂಧಿತ ಆರೋಪಿ ವಿರೇನ್ ಖನ್ನಾ ಡ್ರಗ್ ಪಾರ್ಟಿಗಳನ್ನು ಮಾಡಲು ಬೇಕಾದ ಅಗತ್ಯ ಸಿದ್ಧತೆಗಳನ್ನು ಮಾಡುತ್ತಿದ್ದ. ಈ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ದೆಹಲಿಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

    ಆರೋಪಿ ಕುರಿತು ಖಚಿತ ಮಾಹಿತಿಗಳನ್ನು ಕಲೆಹಾಕಿದ್ದ ಪೊಲೀಸರು ಆತನನ್ನು ಬಂಧಿಸಲು ಕಾರ್ಯಾಚರಣೆಯನ್ನು ನಡೆಸಿದ್ದರು. ಈ ವೇಳೆ ಆತ ದೆಹಲಿಯಲ್ಲಿರುವ ಮಾಹಿತಿ ಲಭಿಸಿತ್ತು. ಕೂಡಲೇ ದೆಹಲಿಗೆ ತೆರಳಿದ ಸಿಸಿಬಿಯ ಇಬ್ಬರು ಪಿಎಸ್‍ಐಗಳು ಆರೋಪಿಯನ್ನು ಬಂಧಿಸಿ ನಾಲ್ಕು ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

    ವೃತ್ತಿಯಲ್ಲಿ ಟೆಕ್ಕಿಯಾಗಿರುವ ಆರೋಪಿ ಖನ್ನಾ ದೊಡ್ಡ ಪಾರ್ಟಿ ಆರೆಂಜ್ ಮಾಡುತ್ತಿದ್ದ. ನಾಳೆಯೂ ಬೆಂಗಳೂರಿನಲ್ಲಿ ದೊಡ್ಡ ಪಾರ್ಟಿ ನಡೆಸಲು ವೇದಿಕೆ ಸಿದ್ಧ ಮಾಡಿದ್ದ. ಈ ಪಾರ್ಟಿಗೆ ಸಂಬಂಧಿಸಿದ ಫೋಟೋವನ್ನು ಬಿಡುಗಡೆ ಮಾಡಿದ್ದ. ಬಂಧಿತ ಖನ್ನಾ ಮೂಲತಃ ಬೆಂಗಳೂರಿನ ನಿವಾಸಿಯೇ ಆಗಿದ್ದು, ದೆಹಲಿಯ ಮಥೂರ ರಸ್ತೆಯ ನಿವಾಸಿದಲ್ಲಿದ್ದುಕೊಂಡೇ ಬೇರೆ ಬೇರೆ ಪಾರ್ಟಿಗಳನ್ನು ಏರ್ಪಡಿಸಲು ಸಿದ್ಧತೆ ನಡೆಸುತ್ತಿದ್ದ. ಇಂತಹ ಪಾರ್ಟಿಗಳಿಗೆ ಕೇವಲ ಸೆಲೆಬ್ರಿಟಿಗಳಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

  • ನನ್ಗೆ ಮಾತ್ರ ಅಲ್ಲ, ರಾಹುಲ್ ಸಾಕಷ್ಟು ಸಿನಿಮಾ ಸ್ಟಾರ್‌ಗಳಿಗೆ ಪರಿಚಯ: ಸಂಜನಾ ಸ್ಫೋಟಕ ಹೇಳಿಕೆ

    ನನ್ಗೆ ಮಾತ್ರ ಅಲ್ಲ, ರಾಹುಲ್ ಸಾಕಷ್ಟು ಸಿನಿಮಾ ಸ್ಟಾರ್‌ಗಳಿಗೆ ಪರಿಚಯ: ಸಂಜನಾ ಸ್ಫೋಟಕ ಹೇಳಿಕೆ

    ಬೆಂಗಳೂರು: ಸಿಸಿಬಿ ವಶದಲ್ಲಿರುವ ರಾಹುಲ್ ನನಗೆ ಮಾತ್ರವಲ್ಲ ಸಾಕಷ್ಟು ಸಿನಿಮಾ ಸ್ಟಾರ್ ಗಳಿಗೆ ಪರಿಚಯ ಇದ್ದಾರೆ ಎಂದು ನಟಿ ಸಂಜನಾ ಗಲ್ರಾನಿ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.

    ಡ್ರಗ್ ಮಾಫಿಯಾ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ನಟಿ ಸಂಜನಾಳ ಅಪ್ತ ರಾಹುಲ್‍ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವಿಚಾರವಾಗಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಂಜನಾ, ಮೂರು-ನಾಲ್ಕು ವರ್ಷಗಳಿಂದ ರಾಹುಲ್ ನನಗೆ ಪರಿಚಯ. ನನಗೆ ಮಾತ್ರ ಅಲ್ಲ ಸಾಕಷ್ಟು ಸಿನಿಮಾ ಸ್ಟಾರ್‌ಗಳಿಗೆ ಪರಿಚಯ ಇದ್ದಾರೆ. ಆಲ್ ಮೋಸ್ಟ್ ಇಡೀ ಬೆಂಗಳೂರಿಗೆ ರಾಹುಲ್ ಪರಿಚಯ ಎಂದರು.

    ರಾಹುಲ್ ತುಂಬಾ ಒಳ್ಳೆಯ ಹುಡುಗ, ಅವನು ರಿಯಲ್ ಎಸ್ಟೇಟ್ ಮಾಡುತ್ತಾನೆ. ಜೇಕರ್ಬ್ ವರ್ಗಿಸ್ ನಿರ್ದೇಶನದ ಚಂಬಲ್ ಸಿನಿಮಾದಲ್ಲಿ ರಾಹುಲ್ ಸಣ್ಣ ಪಾತ್ರ ಮಾಡಿದ್ದಾನೆ. ರಾಹುಲ್‍ನನ್ನು ನಾನು ರಾಖೀ ಭಾಯ್ ಅಂತಾನೇ ಕರೆಯುತ್ತೇನೆ. ನಾವು ತುಂಬಾ ಕ್ಲೋಸ್ ಫ್ರೆಂಡ್ ಅವನು ನನ್ನ ರಾಖೀ ಅಣ್ಣ. ರಾಹುಲ್ ಆದಷ್ಟು ಬೇಗ ಈ ಎಲ್ಲಾ ಸಮಸ್ಯೆಗಳಿಂದ ಹೊರಗಡೆ ಬರುತ್ತಾನೆ ಎಂದು ಸಂಜನಾ ತಿಳಿಸಿದ್ದಾರೆ. ಇದನ್ನು ಓದಿ: ದೃಷ್ಟಿ ನಿವಾರಣೆಗೆ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದೇನೆ: ಸಂಜನಾ

    ಪೊಲೀಸರ ಮೇಲೆ ನನಗೆ ನಂಬಿಕೆ ಇದೆ, ನಾನು ತನಿಖೆಗೆ ಸಹಕರಿಸುತ್ತೇನೆ. ನಾನು ಬೆಂಗಳೂರು ಬಿಟ್ಟು ಎಲ್ಲಿಯೂ ಹೋಗಿಲ್ಲ. ಕಳೆದ ಡಿಸೆಂಬರ್ ಆದಮೇಲೆ ನಾನು ಪಾರ್ಟಿಗಳಿಗೆ ಹೋಗುವುದನ್ನು ಬಿಟ್ಟಿದ್ದೇನೆ. ನಾನು ಅಟೆಂಡ್ ಆಗಿರೊ ಯಾವುದೇ ಪಾರ್ಟಿಗಳಲ್ಲೂ ಡ್ರಗ್ಸ್ ಇರಲಿಲ್ಲ. ಕ್ರಿಸ್ ಮಸ್ ಪಾರ್ಟಿ ಮಾಡಿದ್ದೆ ಲಾಸ್ಟ್ ನಾನು ಯಾವುದೇ ಪಾರ್ಟಿ ಮಾಡಿಲ್ಲ. ನನ್ನ ಗ್ರಹಚಾರ ನಾನು ಅಂದು ಆ ಜಾಗಕ್ಕೆ ಹೋಗಬೇಕಾಗಿ ಬಂತು ಎಂದು ಡ್ರಗ್ಸ್ ಆರೋಪವನ್ನು ಸಂಜನಾ ತಳ್ಳಿ ಹಾಕಿದ್ದಾರೆ.

  • ದೃಷ್ಟಿ ನಿವಾರಣೆಗೆ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದೇನೆ: ಸಂಜನಾ

    ದೃಷ್ಟಿ ನಿವಾರಣೆಗೆ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದೇನೆ: ಸಂಜನಾ

    – ಪ್ರಶಾಂತ್ ಸಂಬರಗಿ ವಿರುದ್ಧ ಕಿಡಿ

    ಬೆಂಗಳೂರು: ಹೀರೋಗಳ ಬಳಿ 50 ಕಾರು ಇದ್ದರೂ ಯಾರೂ ಪ್ರಶ್ನೆ ಮಾಡಲ್ಲ. ಆದರೆ ನಾಯಕಿಯರ ಬಳಿ ಎರಡು ಕಾರು ಇದ್ರೆ ಪ್ರಶ್ನೆ ಮಾಡುತ್ತಾರೆ ಎಂದು ನಟಿ ಸಂಜನಾ ಗಲ್ರಾನಿ ಅವರು ಹೇಳಿದ್ದಾರೆ.

    ಸ್ಯಾಂಡಲ್‍ವುಡ್ ಡ್ರಗ್ ಮಾಫಿಯಾ ಕೇಸಿನಲ್ಲಿ ಸಂಜನಾ ಅವರ ಹೆಸರು ಕೇಳಿ ಬರುತ್ತಿದೆ. ಈ ವಿಚಾರವಾಗಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು 16 ವರ್ಷದಿಂದ ದುಡಿದ ದುಡಿಮೆಯಲ್ಲಿ ಇಷ್ಟೆಲ್ಲಾ ಸಂಪಾದನೆ ಮಾಡಿದ್ದೇನೆ. ನನಗೆ ಕಣ್ಣು ದೃಷ್ಟಿ ಆಗಿರಬೇಕು. ಅದಕ್ಕೆ ಎಲ್ಲ ವಿದಾದ ನನ್ನನ್ನು ಸುತ್ತಿಕೊಳ್ಳುತ್ತಿದೆ. ಆ ದೃಷ್ಟಿ ನಿವಾರಣೆಗೆ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದೇನೆ ಎಂದು ಹೇಳಿದರು.

    ಇದೇ ವೇಳೆ ಪ್ರಶಾಂತ್ ಸಂಬರಗಿ ಬಗ್ಗೆ ಗರಂ ಆದ ಸಂಜನಾ, ನನ್ನ ಬಗ್ಗೆ ಪ್ರಶ್ನೆ ಮಾಡುವುದಕ್ಕೆ ಪ್ರಸಾಂತ್ ಸಂಬರಗಿ ಯಾರು? ನಾನು ಬೀದಿ ನಾಯಿಗೆ ಕೊಡುವಷ್ಟು ಬೆಲೆಯನ್ನು ಅವನಿಗೆ ಕೊಡುವುದಿಲ್ಲ. ನಾನು ಐವತ್ತಕ್ಕೂ ಹೆಚ್ಚು ಸಿನಿಮಾ ಮಾಡಿದ್ದೇನೆ. ಅದೆಲ್ಲಾ ಅವನ ಕಣ್ಣಿಗೆ ಕಾಣಿಸುವುದಿಲ್ವಾ? ಪ್ರಶಾಂತ್ ಸಂಬರಗಿ ಓರ್ವ ಹಂದಿ ಹಂದಿ. ಗಂಧದ ಗುಡಿ ಹೆಸರನ್ನು ಹಾಳು ಮಾಡುತ್ತಿದ್ದಾನೆ ಎಂದು ಕಿಡಿಕಾಡಿದರು.

    ನಾನು 50ಕ್ಕೂ ಸಿನಿಮಾಗಳನ್ನು ಮಾಡಿದ್ದೇನೆ. ಜೊತೆಗೆ ನಾನು ಪಂಚ ಭಾಷಾ ತಾರೆ. 16 ವರ್ಷಗಳ ನನ್ನ ಸಿನಿಮಾ ಜರ್ನಿಯಲ್ಲಿ ಇದನ್ನೆಲ್ಲಾ ಸಂಪಾದನೆ ಮಾಡಿದ್ದೇನೆ. ಬಾಹುಬಲಿ ಸೂಪರ್ ಸ್ಟಾರ್ ಪ್ರಭಾಸ್, ಪವನ್ ಕಲ್ಯಾಣ್, ದರ್ಶನ್, ಸುದೀಪ್, ಶಿವಣ್ಣ ಜೊತೆಗೆ ಸಿನಿಮಾ ಮಾಡಿದ್ದೇನೆ. ನೀವು ಹೀರೋಗಳ ಬಳಿ 50 ಕಾರು ಇದ್ದರೂ ಪ್ರಶ್ನೆ ಮಾಡಲ್ಲ. ಆದರೆ ನಾಯಕಿಯರ ಬಳಿ ಎರಡು ಕಾರು ಇದ್ರೆ ಪ್ರಶ್ನೆ ಮಾಡುತ್ತಾರೆ ಎಂದು ಸಂಜನಾ ಹೇಳಿದ್ದಾರೆ.

  • ಡ್ರಗ್‍ಗೆ ಚಿಕ್ಕನ್ ಪೀಸ್ ಎನ್ನುತ್ತಿದ್ದ ರಾಗಿಣಿ – ತುಪ್ಪದ ಬೆಡಗಿ ಕೋಡ್‍ವರ್ಡ್ ರೀವಿಲ್

    ಡ್ರಗ್‍ಗೆ ಚಿಕ್ಕನ್ ಪೀಸ್ ಎನ್ನುತ್ತಿದ್ದ ರಾಗಿಣಿ – ತುಪ್ಪದ ಬೆಡಗಿ ಕೋಡ್‍ವರ್ಡ್ ರೀವಿಲ್

    ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ ಮಾಫಿಯಾ ಕೇಸಿನಲ್ಲಿ ಸಿಕ್ಕಿಬಿದ್ದಿರುವ ನಟಿ ರಾಗಿಣಿಯವರು ಡ್ರಗ್ಸ್ ವಿಚಾರದಲ್ಲಿ ಕೋಡ್‍ವರ್ಡ್‍ಗಳನ್ನು ಬಳಸುತ್ತಿದ್ದರು ಎಂದು ತಿಳಿದು ಬಂದಿದೆ.

    ಡ್ರಗ್ ಮಾಫಿಯಾ ವಿಚಾರವಾಗಿ ಇಂದು ನಟಿ ರಾಗಿಣಿಯವರನ್ನು ಸಿಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಇಂದು ಬೆಳಗ್ಗೆ ರಾಗಿಣಿ ಮನೆ ಮೇಲೆ ದಿಢೀರ್ ದಾಳಿ ಮಾಡಿದ ಅಧಿಕಾರಿಗಳು ಅವರ ಮೊಬೈಲ್ ಫೋನ್, ಲ್ಯಾಪ್‍ಟಾಪ್ ಮತ್ತು ಕಂಪ್ಯೂಟರ್‍ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದರಲ್ಲಿ ಕೆಲ ಮಹತ್ವದ ಸಾಕ್ಷಿಗಳು ಸಿಕ್ಕಿವೆ ಎನ್ನಲಾಗಿದೆ.

    ಇದರಲ್ಲಿ ರಾಗಿಣಿ ಮತ್ತು ಅವರ ಅಪ್ತ ರವಿಶಂಕರ್ ಕೋಡ್‍ವರ್ಡ್ ಉಪಯೋಗಿಸಿಕೊಂಡು ಡ್ರಗ್ ವಿಚಾರದ ಬಗ್ಗೆ ಚಾಟ್ ಮಾಡುತ್ತಿದ್ದರು ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಚಾಟ್ ವೇಳೆ ತಮ್‍ಸಪ್ ಸಿಂಬಲ್ ಸೆಂಡ್ ಮಾಡಿದ್ರೆ ಇವತ್ತು ಡ್ರಗ್ ಬೇಕು ಎಂದು, ಸ್ಟಾರ್ ಇಮೋಜಿ ಕಳುಹಿಸಿದರೆ ಫ್ಲಾಟ್‍ಗೆ ಬರಬೇಕು ಎಂದು ಅರ್ಥ. ಏರೋಪ್ಲೇನ್ ಸಿಂಬಲ್ ಕಳುಹಿಸಿದರೆ ಊರಿಂದ ಹೊರಗಡೆ ಹೋಗುವುದು ಎಂಬಂತೆ ಕೋಡ್‍ವರ್ಡ್ ಸೆಟ್ ಮಾಡಿಕೊಂಡಿದ್ದಾರೆ.

    ಅಂತಯೇ ರವಿಶಂಕರ್ 3 ಚಿಕನ್ ಪೀಸ್, 1 ಕಾಲಿ ಫ್ಲವರ್ ಕಳುಹಿಸಿದರೆ ಕೊಕೈನ್ ಎಂಡಿಎಂಎ, ಎಲ್‍ಎಸ್‍ಡಿ ರೆಡಿ ಇದೆ ಎಂಬ ಅರ್ಥವನ್ನು ಸೂಚಿಸುತ್ತದೆ ಎಂಬುದು ತನಿಖೆ ವೇಳೆ ಗೊತ್ತಾಗಿದೆ. ಈ ರೀತಿಯ ಚಾಟ್‍ಗಳು ಪೊಲೀಸರು ವಶಕ್ಕೆ ಪಡೆದಿರುವ ರವಿಶಂಕರ್ ಮತ್ತು ರಾಗಿಣಿ ಮೊಬೈಲ್‍ನಲ್ಲಿ ಸಿಕ್ಕಿವೆ. ಜೊತೆಗೆ ಇದೇ ರೀತಿಯ ಕೋಡ್‍ವರ್ಡ್‍ಗಳನ್ನು ಬಳಸುತ್ತಿದ್ದರು ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ.

  • ಮಂಡ್ಯದಲ್ಲಿ ಡ್ರಗ್ಸ್ ದಂಧೆ ಇಲ್ಲ, ಗಾಂಜಾ ಮಾರಾಟ ನಡೆದಿರೋದು ನಿಜ: ಎಸ್‍ಪಿ ಸ್ಪಷ್ಟನೆ

    ಮಂಡ್ಯದಲ್ಲಿ ಡ್ರಗ್ಸ್ ದಂಧೆ ಇಲ್ಲ, ಗಾಂಜಾ ಮಾರಾಟ ನಡೆದಿರೋದು ನಿಜ: ಎಸ್‍ಪಿ ಸ್ಪಷ್ಟನೆ

    ಮಂಡ್ಯ: ಜಿಲ್ಲೆಯಲ್ಲಿ ಡ್ರಗ್ಸ್ ದಂಧೆ ಇಲ್ಲ. ಆದರೆ ಗಾಂಜಾ ಮಾರಾಟ ನಡೆದಿರುವುದು ನಿಜ ಎಂದು ಮಂಡ್ಯ ಎಸ್‍ಪಿ ಪರಶುರಾಮ್ ಸ್ಪಷ್ಟನೆ ಕೊಟ್ಟಿದ್ದಾರೆ. ಇದನ್ನೂ ಓದಿ:  ಪೊಲೀಸರ ಸಹಕಾರ ಇಲ್ಲದೆ ಡ್ರಗ್ಸ್ ದಂಧೆ ನಡೆಯೋದಿಲ್ಲ: ಡಿಸಿ ತಮ್ಮಣ್ಣ ಗಂಭೀರ ಆರೋಪ 

    ಸುದ್ದಿಗಾರರೊಂದಿಗೆ ಮಾತನಾಡಿದ ಎಸ್‍ಪಿ, ಇದುವರೆಗೆ ಮಂಡ್ಯ ಜಿಲ್ಲೆಯಲ್ಲಿ ಡ್ರಗ್ಸ್ ಮಾರಾಟ ಕಂಡುಬಂದಿಲ್ಲ. ಆದರೆ ಗಾಂಜಾ ಮಾರಾಟ ಪ್ರಕರಣಗಳು ಸಿಕ್ಕಿವೆ ಎಂದು ತಿಳಿಸಿದ್ದಾರೆ. ಮಂಡ್ಯದಲ್ಲಿ ಡ್ರಗ್ಸ್ ಸಿಗುತ್ತೇ ಎಂದು ಮಾಜಿ ಎಂಪಿ ಶಿವರಾಮೇಗೌಡ ಹಾಗೂ ಶಾಸಕ ಡಿ.ಸಿ.ತಮ್ಮಣ್ಣ ಆರೋಪಿಸಿದ್ದರು.

    ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ 43 ಗಾಂಜಾ ಪ್ರಕರಣಗಳು ಪತ್ತೆಯಾಗಿವೆ. 5 ವರ್ಷದಲ್ಲಿ 145 ಕೆಜಿ ಗಾಂಜಾವನ್ನು ಸೀಜ್ ಮಾಡಿದ್ದೇವೆ. ಇದುವರೆಗೆ 64 ಮಂದಿ ಆರೋಪಿಗಳನ್ನು ಬಂಧನ ಮಾಡಿದ್ದೇವೆ. ಇದರಲ್ಲಿ ಪೆಡ್ಲರ್, ಗ್ರಾಹಕರು ಮತ್ತು ಮಾರಾಟ ಮಾಡುವವರು ಇದ್ದಾರೆ. ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಹೆಚ್ಚು ಗಾಂಜಾ ಮಾರಾಟವಾಗುತ್ತಿತ್ತು. ಕಳೆದ ವರ್ಷ 7 ಪ್ರಕರಣಗಳ ದಾಖಲಾಗಿವೆ. ಒಂಭತ್ತು ಆರೋಪಿಗಳನ್ನು ಬಂಧಿಸಿದ್ದೇವೆ ಎಂದರು.

    ನಾಗಮಂಗಲಕ್ಕೆ ಆಂಧ್ರ ಪ್ರದೇಶದ ಲಿಂಕ್ ಇದೆ. ನಾಗಮಂಗಲಕ್ಕೆ ಆಂಧ್ರ ಪ್ರದೇಶದಿಂದ ಗಾಂಜಾ ಬರುತ್ತಿತ್ತು. ಆ ಲಿಂಕ್‍ನನ್ನು ಈಗ ಬ್ರೇಕ್ ಮಾಡಿದ್ದೇವೆ. ಮಂಡ್ಯ ಜಿಲ್ಲೆಗೆ ಮೈಸೂರು, ಬಳ್ಳಾರಿ ಹಾಗೂ ಆಂಧ್ರದ ಲಿಂಕ್ ಹೆಚ್ಚಿದೆ. ಇಲ್ಲಿಂದ ಹೆಚ್ಚು ಗಾಂಜಾ ಸಪ್ಲೈ ಆಗುತ್ತಿದೆ. ಗಾಂಜಾ ಮಾರಾಟ ಹಾಗೂ ಸೇವನೆ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಎಸ್‍ಪಿ ಪರಶುರಾಮ್ ಹೇಳಿದರು.

  • ನಟಿ ರಾಗಿಣಿ ಸಿಸಿಬಿ ಪೊಲೀಸರ ವಶಕ್ಕೆ

    ನಟಿ ರಾಗಿಣಿ ಸಿಸಿಬಿ ಪೊಲೀಸರ ವಶಕ್ಕೆ

    ಬೆಂಗಳೂರು: ಡ್ರಗ್ಸ್ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಇಂದು ಬೆಳ್ಳಂಬೆಳಗ್ಗೆ ಸಿಸಿಬಿ ಪೊಲೀಸರು ಯಲಹಂಕದಲ್ಲಿರುವ ನಟಿ ರಾಗಿಣಿಯ ಫ್ಲ್ಯಾಟ್ ಮೇಲೆ ದಾಳಿ ಮಾಡಿದ್ದಾರೆ. ಇದೀಗ ಸತತ ಮೂರು ಗಂಟೆಯ ಶೋಧ ಕಾರ್ಯದ ನಂತರ ಸಿಸಿಬಿ ಪೊಲೀಸರು ನಟಿ ರಾಗಿಣಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಒಂದೇ ಅಪಾರ್ಟ್‌ಮೆಂಟ್‌ನಲ್ಲಿ 2 ಫ್ಲ್ಯಾಟ್ ಇದ್ರೂ ಗೌಪ್ಯವಾಗಿಟ್ಟಿದ್ದ ನಟಿ

    ದಾಖಲೆ ಸಮೇತ ಸಿಸಿಬಿ ಕಚೇರಿಗೆ ನಟಿ ರಾಗಿಣಿಯನ್ನು ಕರೆದುಕೊಂಡು ಹೋಗಲಿದ್ದಾರೆ. ಯಲಹಂಕದ ಮನೆಯಿಂದ ಚಾಮಾರಾಜಪೇಟೆ ಕಚೇರಿಗೆ ಕರೆದುಕೊಂಡು ಹೋಗಲಿದ್ದೇವೆ ಎಂದು ಡಿಸಿಪಿ ರವಿಕುಮಾರ್ ಅಧಿಕೃತ ಮಾಹಿತಿ ನೀಡಿದ್ದಾರೆ.

    ದಾಳಿಯ ವೇಳೆ ಯಾವುದೇ ಡ್ರಗ್ ಪತ್ತೆಯಾಗಿಲ್ಲ. ಇದೇ ವೇಳೆ ರಾಗಿಣಿಯ ಇನ್ನೋವಾ ಕಾರಿನ ಪರಿಶೀಲನೆ ನಡೆಸಿದ್ದಾರೆ. ಆಗ ಕಾರಿನಲ್ಲಿ ಮದ್ಯದ ಬಾಟಲುಗಳು ಪತ್ತೆಯಾಗಿವೆ. ಬಹುತೇಕ ರಾಗಿಣಿ ಮನೆಯ ಸರ್ಚ್ ಮುಕ್ತಾಯವಾಗಿದ್ದು, ಮಹತ್ವದ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೇ ನಟಿ ರಾಗಿಣಿಯ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

  • ಒಂದೇ ಅಪಾರ್ಟ್‌ಮೆಂಟ್‌ನಲ್ಲಿ 2 ಫ್ಲ್ಯಾಟ್ ಇದ್ರೂ ಗೌಪ್ಯವಾಗಿಟ್ಟಿದ್ದ ನಟಿ

    ಒಂದೇ ಅಪಾರ್ಟ್‌ಮೆಂಟ್‌ನಲ್ಲಿ 2 ಫ್ಲ್ಯಾಟ್ ಇದ್ರೂ ಗೌಪ್ಯವಾಗಿಟ್ಟಿದ್ದ ನಟಿ

    – ಕೈ ಬೀಸಿ ಒಳಗೆ ಹೋದ ತುಪ್ಪದ ಬೆಡಗಿ

    ಬೆಂಗಳೂರು: ಡ್ರಗ್ಸ್ ಮಾಫಿಯಾ ವಿಚಾರವಾಗಿ ಇಂದು ಬೆಳ್ಳಂಬೆಳಗ್ಗೆ ನಟಿ ರಾಗಿಣಿ ಮನೆಯ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.

    ಯಲಹಂಕದಲ್ಲಿರುವ ಅನನ್ಯ ಅಪಾರ್ಟ್‌ಮೆಂಟ್‌ಗೆ ಇಂದು ಮುಂಜಾನೆ ಸುಮಾರು 6:34ಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಎರಡು ಕಾರಿನಲ್ಲಿ ಒಟ್ಟು 6 ಜನ ಪೊಲೀಸ್ ಅಧಿಕಾರಿಗಳು ರಾಗಿಣಿ ಮನೆಯಲ್ಲಿ ದಾಳಿ ಮಾಡಿದ್ದಾರೆ. ಒಂದು ವೇಳೆ ಪ್ರಕರಣದ ಸಂಬಂಧ ಸೂಕ್ತ ದಾಖಲೆಗಳು ಸಿಕ್ಕಿದರೆ ರಾಗಿಣಿಯನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ತುಪ್ಪದ ಬೆಡಗಿಗೆ ಶಾಕ್ – ರಾಗಿಣಿ ಮನೆಗೆ ಸಿಸಿಬಿ ದಾಳಿ

    ಸಿಸಿಬಿ ಪೊಲೀಸರ ಮುಂದೆ ಡ್ರಗ್ಸ್ ಮಾಫಿಯಾ ವಿಚಾರವಾಗಿ ರಾಗಿಣಿ ಆಪ್ತ ರವಿಶಂಕರ್ ಮಹತ್ವದ ಮಾಹಿತಿಗಳನ್ನು ಹೇಳಿದ್ದಾನೆ. ಈ ವೇಳೆ ರಾಗಿಣಿ ಮನೆಯಲ್ಲಿ ಪ್ರಕರಣ ಸಂಬಂಧ ಸಾಕ್ಷಿಗಳು ಇರೋದಾಗಿ ಹೇಳಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಇತ್ತ ಇಂದು ಕೂಡ ವಿಚಾರಣೆಯಿಂದ ವಿನಾಯಿತಿ ಕೇಳೋಕೆ ರಾಗಿಣಿ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಾಕ್ಷ್ಯಾ ನಾಶವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಕೋರ್ಟಿನಿಂದ ಸರ್ಚ್ ವಾರೆಂಟ್ ಪಡೆದು ಪೊಲೀಸರು ದಾಳಿ ನಡೆಸುತ್ತಿದ್ದಾರೆ.

    ರಾಗಿಣಿ ದಾಳಿ ವೇಳೆ ಮನೆಯಲ್ಲಿಯೇ ಇದ್ದು, ಪೊಲೀಸರ ದಾಳಿ ಕಂಡು ಶಾಕ್ ಆಗಿದ್ದಾರೆ. ಸಿಸಿಬಿ ಅಧಿಕಾರಿಗಳು ಎಲ್ಲರ ಮೊಬೈಲ್ ವಶಕ್ಕೆ ಪಡೆದು ರಾಗಿಣಿ ಸೇರಿದಂತೆ ಮನೆ ಮಂದಿಯನ್ನು ಒಂದು ಕಡೆ ಕೂರಿಸಿದ್ದಾರೆ. ಯಾರೂ ಕೂಡ ಯಾರಿಗೂ ಫೋನ್ ಮಾಡದಂತೆ ಹೇಳಿದ್ದು, ಐವರು ಇನ್‌ಸ್ಪೆಕ್ಟರ್‌ಗಳು ಇಡೀ ಮನೆಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

    ಮಹಿಳಾ ಪೊಲೀಸ್ ಅಧಿಕಾರಿಗಳು ಬಂದಿದ್ದು, ಬಾಲ್ಕನಿಯಲ್ಲಿ ಪಾಟ್, ಗಿಡಗಳ ನಡುವೆ ಹುಡುಕಾಡುತ್ತಿದ್ದಾರೆ. ಎರಡು ಲ್ಯಾಪ್‍ಟಾಪ್, ನಾಲ್ಕು ಮೊಬೈಲ್‍ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ನಟಿ ರಾಗಿಣಿ ಹೊರಗೆ ಬಂದು ಮಾಧ್ಯಮಗಳಿಗೆ ಕೈ ಬೀಸಿದ್ದಾರೆ. ಆಗ ತಕ್ಷಣ ಒಳಗೆ ಬರುವಂತೆ ಪೊಲೀಸರು ಸೂಚನೆ ನೀಡಿದ್ದು, ರಾಗಿಣಿ ಮನೆಯೊಳಗೆ ಹೋಗಿದ್ದಾರೆ.

    ದಾಳಿ ವೇಳೆ ಒಂದೇ ಅಪಾರ್ಟ್‌ಮೆಂಟ್‌ನಲ್ಲಿ ಎರಡು ಫ್ಲ್ಯಾಟ್ ಹೊಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಪಾರ್ಟ್‌ಮೆಂಟ್‌ನ ಎಂಟನೇ ಹಂತದಲ್ಲಿನ ರಾಗಿಣಿ ಮತ್ತೊಂದು ಫ್ಲ್ಯಾಟ್ ಹೊಂದಿದ್ದಾರೆ. ಇದೀಗ ಆ ಫ್ಲ್ಯಾಟ್ ಮೇಲೆ ಪೊಲೀಸರು ಕಣ್ಣಾಕಿದ್ದಾರೆ. ಆ ಮನೆಗೆ ಯಾರಿಗೂ ಎಂಟ್ರಿ ಇಲ್ಲ, ತೀರಾ ಆಪ್ತರು, ಸ್ನೇಹಿತರಿಗಷ್ಟೇ ಎಂಟ್ರಿ ಇತ್ತಂತೆ. ನಟಿ ರಾಗಿಣಿ ಎರಡನೇ ಮನೆಯ ಹೊಂದಿರುವ ವಿಚಾರವನ್ನು ಗೌಪ್ಯವಾಗಿ ಇಟ್ಟಿದ್ದರು.