Tag: drug mafia

  • ಕೊಡಗಿಗೆ ಅಗಮಿಸುವ ಪ್ರವಾಸಿಗರ ಮೇಲೆ ಪೊಲೀಸರ ಹದ್ದಿನ ಕಣ್ಣು

    ಕೊಡಗಿಗೆ ಅಗಮಿಸುವ ಪ್ರವಾಸಿಗರ ಮೇಲೆ ಪೊಲೀಸರ ಹದ್ದಿನ ಕಣ್ಣು

    ಮಡಿಕೇರಿ: ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣದ ಬೆನ್ನಲ್ಲೇ ಕೊಡಗು ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಪ್ರವಾಸೋದ್ಯಮಕ್ಕೆ ಫೇಮಸ್ ಆಗಿರುವ ಜಿಲ್ಲೆಯಲ್ಲಿ ಸಾವಿರಾರು ಹೋಂ ಸ್ಟೇ, ರೆಸಾರ್ಟ್‍ಗಳಿದ್ದು, ಹೊರಜಿಲ್ಲೆ ಮತ್ತು ಹೊರರಾಜ್ಯಗಳಿಂದ ಬರುವ ಸಾವಿರಾರು ಪ್ರವಾಸಿಗರ ಮೇಲೆ ಕೊಡಗು ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

    ಹೌದು ಬೆಂಗಳೂರಿನಲ್ಲಿ ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆ ಪ್ರಕರಣ ಸದ್ದು ಮಾಡುತ್ತಿದ್ದಂತೆ ಕೊಡಗು ಎಸ್ ಪಿ ಕ್ಷಮಾ ಮಿಶ್ರಾ ಜಿಲ್ಲೆಯ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಎಲ್ಲ ಚೆಕ್ ಪೋಸ್ಟ್ ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಮಾಡಬೇಕು. ಬೀಟ್‍ಗಳಲ್ಲಿ ಎಚ್ಚರವಹಿಸಿ ಡ್ರಗ್ಸ್ ಮತ್ತು ಗಾಂಜಾ ಸಾಗಾಟಕ್ಕೆ ಅವಕಾಶ ನೀಡಬಾರದು ಎಂದು ಸೂಚಿಸಿದ್ದಾರೆ.

    ಅಂತರ್ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಚೆಕ್ ಪೋಸ್ಟ್ ಗಳಲ್ಲಿ ಕೊಡಗಿನ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಜಿಲ್ಲೆಗೆ ಬರುವ ಎಲ್ಲ ವಾಹನಗಳ ತಪಾಸಣೆ ಮಾಡುತ್ತಿದ್ದಾರೆ. ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಿಗೂ ಸೂಚನೆ ನೀಡಿರುವ ಎಸ್‍ಪಿ ಹಗಲು ರಾತ್ರಿ ರೌಂಡ್ಸ್ ಹಾಕುತ್ತಿದ್ದಾರೆ. ಹೋಂ ಸ್ಟೇ ಮತ್ತು ರೆಸಾರ್ಟ್‍ಗಳ ಮಾಲೀಕರಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

    ಒಂದು ವೇಳೆ ಇಂತಹ ಯಾವುದೇ ಅಕ್ರಮ ಚಟುವಟಿಕೆಗಳ ನಡೆದರೆ ಹೋಂ ಸ್ಟೇ ಮತ್ತು ರೆಸಾರ್ಟ್ ಮಾಲೀಕರ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಸ್‍ಪಿ ಕ್ಷಮಾ ಮಿಶ್ರಾ ಎಚ್ಚರಿಕೆ ನೀಡಿದ್ದಾರೆ. ಒಟ್ಟಿನಲ್ಲಿ ಬೆಂಗಳೂರಿನಲ್ಲಿ ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪ್ರವಾಸಿ ಜಿಲ್ಲೆಯಾಗಿರುವ ಕೊಡಗಿನಲ್ಲಿ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಎಲ್ಲೆಡೆ ಹದ್ದಿನ ಕಣ್ಣಿಟ್ಟು ಸರ್ಚ್ ಮಾಡುತ್ತಿರುವ ಪೊಲೀಸರು ಅಕ್ರಮ ಚಟುವಟಿಕೆಗೆ ಬ್ರೇಕ್ ಹಾಕಲು ಮುಂದಾಗಿದ್ದಾರೆ.

  • ರಾಜ್ಯದ ಇತಿಹಾಸದಲ್ಲೇ ಫಸ್ಟ್- 4 ಕೋಟಿ ಮೌಲ್ಯದ ಹಸಿ ಗಾಂಜಾ ಬೇಟೆ

    ರಾಜ್ಯದ ಇತಿಹಾಸದಲ್ಲೇ ಫಸ್ಟ್- 4 ಕೋಟಿ ಮೌಲ್ಯದ ಹಸಿ ಗಾಂಜಾ ಬೇಟೆ

    -4 ಎಕರೆ 20 ಗುಂಟೆ ನೀರಾವರಿ ಜಮೀನಿನಲ್ಲಿ ಗಾಂಜಾ ಗಿಡ

    ಚಿತ್ರದುರ್ಗ: ರಾಜ್ಯದಾದ್ಯಂತ ಪೊಲೀಸರು ಡ್ರಗ್ಸ್ ಮಾಫಿಯಾ ವಿರುದ್ಧ ಸಮರ ಸಾರಿದ್ದು, ಪ್ರತಿದಿನ ಗಾಂಜಾವನ್ನು ವಶಕ್ಕೆ ಪಡೆದ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಸದ್ಯ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಂಪುರ ಠಾಣೆ ಪೊಲೀಸರು ಬರೋಬ್ಬರಿ ನಾಲ್ಕು ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡು, ನಾಲ್ವರನ್ನು ಬಂಧಿಸಿದ್ದಾರೆ.

    ಡಿ.ಬಿ.ಮಂಜುನಾಥ್, ವೈ.ಜಂಬುನಾಥ್, ಡಿ.ವೈ.ಮಂಜುನಾಥ್, ಸುಮಂತ್ ಗೌಡ ಬಂಧಿತ ಆರೋಪಿಗಳಿದ್ದಾರೆ. ಸೆ.3ರ ನಸುಕಿನ ಜಾವ ಬೀಟ್ ಹೊರಟ ಕೋಟೆನಾಡಿನ ಪೊಲೀಸ್ ಪೇದೆಗೆ ಒಂದು ಖಚಿತ ಮಾಹಿತಿ ಬಂದಿತ್ತು. ಈ ಮಾಹಿತಿ ಮೇರೆಗೆ ಮರುದಿನ ಬೆಳಗ್ಗೆಯೇ ಭರ್ಜರಿ ಶಿಕಾರಿಗೆ ಪೊಲೀಸರು ಅಖಾಡ ರೆಡಿ ಮಾಡಿ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಅತಿ ದೊಡ್ಡ ಗಾಂಜಾ ದಂಧೆಯನ್ನು ಬಯಲಿಗೆಳೆದಿದ್ದಾರೆ.

    ಆಂಧ್ರ ಗಡಿಭಾಗದಲ್ಲಿ ಬಳ್ಳಾರಿಯಿಂದ ಬಂದಿದ್ದ ಆರೋಪಿಗಳು ವಡೇರಹಳ್ಳಿಯಲ್ಲಿ ಬರೋಬ್ಬರಿ 4 ಎಕರೆ 20 ಗುಂಟೆ ಜಮೀನಿನಲ್ಲಿ ಗಾಂಜಾ ಬೆಳೆದಿದ್ದರು. ಹೊಲದ ಮೇಲೆ ದಾಳಿ ಮಾಡಿದ ಪೊಲೀಸರು ನಾಲ್ವರು ಆರೋಪಿಗಳನ್ನು ಸೆ.4 ರಂದು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. ಪೊಲೀಸರು ದಾಳಿ ಮಾಡಿದ ಜಮೀನಿನಲ್ಲಿ ಬರೋಬ್ಬರಿ 9,871 ಕೆ.ಜಿ ತೂಕದ ಗಾಂಜಾ ಪತ್ತೆಯಾಗಿದೆ. ಈ ದಿಸೆಯಲ್ಲಿ ನೋಡಿರೆ ರಾಜ್ಯದ ಅತಿದೊಡ್ಡ ಗಾಂಜಾ ಪ್ರಕರಣ ಚಿತ್ರದುರ್ಗ ಜಿಲ್ಲೆಯಲ್ಲಿ ದಾಖಲಾದಂತಾಗಿದೆ. ಅಲ್ಲದೇ ಜಿಲ್ಲೆಯಲ್ಲಿ ನಡೆದಿದ್ದ ಗಾಂಜಾ ವಹಿವಾಟಿನಲ್ಲಿ ವಿದ್ಯಾರ್ಥಿಗಳು ಕೂಡ ಅಮಲೇರಿಸಿಕೊಳ್ತಿದ್ದ ಶಾಕಿಂಗ್ ವಿಚಾರ ಬೆಳಕಿಗೆ ಬಂದಿದೆ.

    ಪೊಲೀಸರು ವಶಕ್ಕೆ ಪಡೆದ ಗಾಂಜಾದ ಬೆಲೆ ಬರೋಬ್ಬರಿ ನಾಲ್ಕು ಕೋಟಿ ರೂ. ಅಧಿಕ ಎಂದು ಅಂದಾಜು ಮಾಡಲಾಗಿದೆ. 4 ಎಕರೆ 20 ಗುಂಟೆ ಜಮೀನಿನಲ್ಲಿ ಪಕ್ಕ ಪ್ಲಾನ್ ಮಾಡಿ ಬಳ್ಳಾರಿ ಮೂಲದ ರುದ್ರೇಶ್ ಅಕ್ರಮವಾಗಿ ಗಾಂಜಾ ಬೆಳೆದಿದ್ದ. ಈತ ಮಧ್ಯವರ್ತಿ ಸುಮಂತ್ ಗೌಡನಿಂದ ಜಮೀನು ಪಡೆದಿದ್ದ, ರುದ್ರೇಶ್ ಹಾಗೂ ಆತನ ಸಂಗಡಿಗರಾದ ಡಿ.ಬಿ.ಮಂಜುನಾಥ್, ಶಿಕ್ಷಕ ವೈ.ಜಂಬುನಾಥ್, ಡಿ.ವೈ.ಮಂಜುನಾಥ್ ವಡೇರಹಳ್ಳಿ ಗ್ರಾಮಸ್ಥರನ್ನು ಯಾಮಾರಿಸಿ ಗಾಂಜಾ ಬೆಳೆದಿದ್ದಾರೆ.

    ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ರುದ್ರೇಶ್ ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗೆ ಬಲೆ ಬೀಸಿದ್ದಾರೆ. ಆದರೆ ಈ ವೇಳೆ ಕಿಡಿಗೇಡಿಗಳು ಬೆಳೆದ ಗಾಂಜಾ ತೂಕದ ಲೆಕ್ಕಹಾಕಲು ಪೊಲೀಸರು ತೆಗೆದುಕೊಂಡ ಸಮಯವು ದಾಖಲೆಯಾಗಿದ್ದೂ, ಗಾಂಜಾ ಗಿಡಗಳನ್ನು ವಶಕ್ಕೆ ಪಡೆದ ಪೊಲೀಸರು ಬರೋಬ್ಬರಿ 9 ದಿವಸಗಳ ಕಾಲ ತೂಕ ಮಾಡಿದ್ದಾರೆ. ರಾಜ್ಯದಲ್ಲೇ ಅತಿ ದೊಡ್ಡ ಗಾಂಜಾ ಪ್ರಕರಣವನ್ನು ಬೇಧಿಸಿ ಚಿತ್ರದುರ್ಗ ಪೊಲೀಸರು ಸೈ ಎನಿಸಿಕೊಂಡಿದ್ದಾರೆ. ಆದರೆ ದೊಡ್ಡ ಅಕ್ರಮ ಬಯಲಾದ ಬೆನ್ನಲ್ಲೇ ಕೋಟೆನಾಟಿನ ಜನರು ಸಹ ಬಾರಿ ಆತಂಕಕ್ಕೀಡಾಗಿದ್ದಾರೆ.

    ಪ್ರಕರಣದ ತನಿಖೆಯನ್ನು ಮುಂದುವರಿಸಿದ ಪೊಲೀಸರು ಈ ಜಾಲ ಹೇಗೆ ಕಾರ್ಯನಿರ್ವಹಿಸುತ್ತಿತ್ತು. ಬೆಳದ ಗಾಂಜಾವನ್ನು ಹೇಗೆ, ಯಾರಿಗೆ ಮಾರಾಟ ಮಾಡುತ್ತಿದ್ದರು ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ದಂಧೆಯನ್ನು ಬೇರು ಸಮೇತ ಕಿತ್ತೆಸೆಯಲು ಕಾರ್ಯಾಚರಣೆ ನಡೆಸಿದ್ದಾರೆ.

  • ಅದಿತ್ಯ ಆಳ್ವಾ ಮನೆ ಮೇಲೆ ಸಿಸಿಬಿ ಪೊಲೀಸರ ದಾಳಿ

    ಅದಿತ್ಯ ಆಳ್ವಾ ಮನೆ ಮೇಲೆ ಸಿಸಿಬಿ ಪೊಲೀಸರ ದಾಳಿ

    ಬೆಂಗಳೂರು: ಡ್ರಗ್ಸ್ ಮಾಫಿಯಾದ ಪ್ರಮುಖ ಆರೋಪಿ ಆದಿತ್ಯ ಆಳ್ವಾ ನಿವಾಸದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.

    ಬೆಂಗಳೂರಿನ ಹೆಬ್ಬಾಳದಲ್ಲಿರುವ ಹೌಸ್ ಆಫ್ ಲೀವ್ಸ್ ಮನೆಯ ಮೇಲೆ ಇನ್‍ಸ್ಪೆಕ್ಟರ್ ಗಳಾದ ಅಂಜುಮಾಲಾ ನಾಯ್ಕ್, ಪನೀತ್ ನೇತೃತ್ವದಲ್ಲಿ ದಾಳಿ ನಡೆದಿದೆ. ಆರೋಪಿ ಆದಿತ್ಯ ಆಳ್ವಾ ಮಾಜಿ ಸಚಿವ ಜೀಬರಾಜ್ ಆಳ್ವಾ ಅವರ ಪುತ್ರನಾಗಿದ್ದಾನೆ. ನಟ ವಿವೇಕ್ ಓಬೇರಾಯ್ ಅವರ ಮೈದುನ. ಬರೋಬ್ಬರಿ ಆರು ಎಕರೆ ವಿಸ್ತೀರ್ಣದಲ್ಲಿ ಆದಿತ್ಯ ಆಳ್ವಾ ಮನೆ ಇದೆ. ಇದೇ ಮನೆಯಲ್ಲಿ ವೀಕೆಂಡ್ ಪಾರ್ಟಿಗಳು ನಡೆಯುತ್ತಿರುವ ಬಗ್ಗೆ ಆರೋಪಿ ರವಿಶಂಕರ್ ತಪ್ಪೊಪ್ಪಿಕೊಂಡಿದ್ದನು. ಸಿಸಿಬಿ ಬಂಧಿಸಿರುವ ಆರು ಆರೋಪಿಗಳು ಆದಿತ್ಯ ಆಳ್ವಾ ಹೆಸರನ್ನು ಉಲ್ಲೇಖಿಸಿರುವ ಬಗ್ಗೆ ತಿಳಿದು ಬಂದಿದೆ.

    ಡ್ರಗ್ಸ್ ಪ್ರಕರಣದಲ್ಲಿ ರವಿಶಂಕರ್ ಬಂಧನವಾಗುತ್ತಿದ್ದಂತೆ ಆದಿತ್ಯ ಆಳ್ವಾ ನಾಪತ್ತೆಯಾಗಿದ್ದು, ಮುಂಬೈ ಅಥವಾ ದೆಹಲಿಯಲ್ಲಿರೋ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಆದಿತ್ಯ ಆಳ್ವಾ ಮನೆಯಲ್ಲಿ ನಡೆಯುತ್ತಿದ್ದ ಪಾರ್ಟಿಗಳಿಗೆ ರಾಜಕಾರಣಿ ಮತ್ತು ಉದ್ಯಮಿಗಳ ಮಕ್ಕಳು ಸೇರಿದಂತೆ ಹಲವು ತಾರೆಯರು ಭಾಗಿಯಾಗುತ್ತಿದ್ದಾರೆ. ಪಾರ್ಟಿಗಳಲ್ಲಿ ಡ್ರಗ್ಸ್ ಹೊಳೆ ಹರಿಯುತ್ತಿತ್ತು ಎಂದು ತಿಳಿದು ಬಂದಿದೆ.

    ಸದ್ಯ ಇಂದು ಬೆಳಗ್ಗೆ ಆದಿತ್ಯ ಆಳ್ವಾ ಮನೆಯಲ್ಲಿ ದಾಳಿ ನಡೆಸಿರುವ ಅಧಿಕಾರಿಗಳು ಶೋಧ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈ ಮೊದಲು ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಮನೆಯ ಮೇಲೆಯೂ ಸಿಸಿಬಿ ದಾಳಿ ನಡೆಸಿತ್ತು.

    ರವಿಶಂಕರ್ ಹೇಳಿದ್ದೇನು?: ಪಾರ್ಟಿಗಳಿಗೆ ಬರುತ್ತಿದ್ದ ಶ್ರೀಮಂತ ಪರಿಚತರಿಗೆ ECSTASY PILL ಮಾತ್ರೆಗಳನ್ನು ವೈಭವ್ ಜೈನ್ ಸರಬರಾಜು ಮಾಡುತ್ತಿದ್ದನು. ಆದಿತ್ಯ ಆಳ್ವಾಗೆ ಸೇರಿದ ಹೌಸ್ ಆಫ್ ಲೈಫ್ ಮಾನ್ಯತಾ ಟೆಕ್ ಪಾರ್ಕ್ ಪಕ್ಕದ ಫಾರಂ ಹೌಸ್ ಮತ್ತು ಕಿಟಿಕೊ ಕ್ಲಬ್ ಗಳಲ್ಲಿ ಪಾರ್ಟಿ ಆಯೋಜನೆ ಮಾಡಲಾಗುತ್ತಿತ್ತು. ಪಾರ್ಟಿ ಆಯೋಜನೆ ಸ್ಥಳ, ಬರೋರ ಹೆಸರುಗಳನ್ನ ವಾಟ್ಸಪ್ ಮೂಲಕ ಮೊದಲೇ ತಿಳಿಸಲಾಗುತ್ತಿತ್ತು ಎಂದು ಆರೋಪಿ ರವಿಶಂಕರ್ ಹೇಳಿದ್ದನು.

  • ಆರ್ ಅಶೋಕ್, ಕೆ ಮಂಜು, ಉಪೇಂದ್ರ ಜೊತೆ ಡ್ರಗ್ ಡೀಲರ್ ರಾಹುಲ್

    ಆರ್ ಅಶೋಕ್, ಕೆ ಮಂಜು, ಉಪೇಂದ್ರ ಜೊತೆ ಡ್ರಗ್ ಡೀಲರ್ ರಾಹುಲ್

    – ಹಲವು ಸೆಲೆಬ್ರಿಟಿಗಳ ಜೊತೆ ಇತ್ತು ರಾಹುಲ್‍ಗೆ ನಂಟು

    ಬೆಂಗಳೂರು: ಡ್ರಗ್ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಡ್ರಗ್ ಡೀಲರ್ ರಾಹುಲ್ ಜೊತೆ ಕಂದಾಯ ಸಚಿವರಾದ ಆರ್ ಅಶೋಕ್ ಇರುವ ಫೋಟೋ ಪಬ್ಲಿಕ್ ಟಿವಿಗೆ ದೊರಕಿದೆ.

    ಡ್ರಗ್ ಪ್ರಕರಣದಲ್ಲಿ ನಟಿ ಸಂಜನಾ ಆಪ್ತನಾಗಿದ್ದ ರಾಹುಲ್ ನನ್ನು ಸಿಸಿಬಿ ಪೊಲೀಸರು ಸೆಪ್ಟಂಬರ್ 3ರಂದು ಬಂಧಿಸಿದ್ದರು. ಈ ಪ್ರಕರಣ ಈಗ ಬಗೆದಷ್ಟು ಬಯಲಾಗುತ್ತಿದ್ದು, ರಾಹುಲ್ ಶ್ರೀಮಂತ ಲೋಕ ಅನಾವರಣಕೊಂಡಿದೆ. ಸ್ಯಾಂಡಲ್‍ವುಡ್‍ನ ಬಹುತೇಕ ನಟ-ನಟಿಯರ ಜೊತೆಗೆ ರಾಹುಲ್‍ಗೆ ನಂಟಿರುವುದು ಬಟಾಬಯಲಾಗಿದೆ. ಇದನ್ನು ಓದಿ: ರಾಗಿಣಿ ಡ್ರಗ್ಸ್ ಸೇವಿಸಿರೋದಕ್ಕೆ ‘ಬಿಗ್’ ಸಾಕ್ಷ್ಯ – ಆರೋಪಿ ರವಿಶಂಕರ್ ತಪ್ಪೊಪ್ಪಿಗೆ

    ವೀಕೆಂಡ್‍ಗಳಲ್ಲಿ ಪಾರ್ಟಿ ಆಯೋಜನೆ ಮಾಡುತ್ತಿದ್ದ ರಾಹುಲ್, ಸ್ಯಾಂಡಲ್‍ವುಡ್‍ನ ಎಲ್ಲ ತಾರೆಯರನ್ನು ಆಹ್ವಾನ ಮಾಡುತ್ತಿದ್ದ. ಈತನ ಜೊತೆ ನಟ ಉಪೇಂದ್ರ ಮತ್ತು ಕ್ರಿಕೆಟಿಗ ಮತ್ತು ನಟ ಶ್ರೀಶಾಂತ್, ಶ್ರೀನಗರ ಕಿಟ್ಟಿ, ನಿರ್ಮಾಪಕ ಕೆ.ಮಂಜು, ರಘು ಮುಖರ್ಜಿ, ಸಂಗೀತ ನಿರ್ದೇಶಕ ಗುರುಕಿರಣ್, ನಟಿಯರಾದ ಐಂದ್ರಿತಾ ರೇ, ಪ್ರಿಯಾಂಕ ಉಪೇಂದ್ರ, ಹರ್ಷಿಕಾ ಪೂಣಚ್ಚ, ಸಂಜನಾ ಗಲ್ರಾನಿ, ನಿವೃತ್ತ ಐಜಿ ಬಿಎನ್‍ಎಸ್ ರೆಡ್ಡಿಯವರ ಜೊತೆಯೂ ರಾಹುಲ್ ಫೋಟೋ ತೆಗೆಸಿಕೊಂಡಿದ್ದಾರೆ.

    ಇದೇ ವೇಳೆ ನಿರ್ಮಾಪಕ ಕೆ. ಮಂಜು ಅವರು ರಾಹುಲ್‍ಗೆ ಕೈತುತ್ತು ತಿನ್ನಿಸುತ್ತಿರುವ ಫೋಟೋ ವೈರಲ್ ಆಗಿದ್ದು, ಇದರ ಬಗ್ಗೆ ಪಬ್ಲಿಕ್ ಟಿವಿಯ ಜೊತೆ ಮಾತನಾಡಿರುವ ಕೆ.ಮಂಜು ಅವರು, ಆತ ನನಗೆ ಬಹಳ ವರ್ಷದಿಂದ ಪರಿಚಯ. ಆತ ನನ್ನ ಗೆಳೆಯರೊಬ್ಬರ ಆಫೀಸ್‍ನಲ್ಲಿ ಪರಿಚಯವಾಗಿದ್ದ. ಬಹಳ ಒಳ್ಳೆಯ ಹುಡುಗ, ಒಂದು ಪಾರ್ಟಿಗೆ ಹೋದಾಗ ಆತನ ಬಳಿ ಒಂದು ಫೋಟೋ ತೆಗೆಸಿಕೊಂಡಿದ್ದೆ ಎಂದು ಹೇಳಿದ್ದಾರೆ.

    ಇದರ ಜೊತೆಗೆ ರಾಹುಲ್ ಶ್ರೀಲಂಕಾದ ಕ್ಯಾಸಿನೋವೊಂದಕ್ಕೆ ಇಲ್ಲಿಂದ ಸೆಲೆಬ್ರಿಟಿಗಳನ್ನು ಕಳುಹಿಸುತ್ತಿದ್ದ ಎನ್ನಲಾಗಿದೆ. ರಾಹುಲ್ ಜೊತೆಗೆ ಸಚಿವ ಆರ್ ಅಶೋಕ್ ಅವರ ಫೋಟೋ ಕೂಡ ವೈರಲ್ ಆಗಿದ್ದು, ಈ ಫೋಟೋದಲ್ಲಿ ರಾಹುಲ್‍ಗೆ ಅಶೋಕ್ ಕೇಕ್ ತಿನ್ನಿಸುತ್ತಿದ್ದಾರೆ. ಇನ್ನು ರ್ಯಾಪರ್ ಚಂದನ್ ಶೆಟ್ಟಿ, ನಟಿ ಕಾರಣ್ಯ ರಾವ್ ಅವರ ಜೊತೆ ಕೂಡ ರಾಹುಲ್ ಫೋಟೋ ಕ್ಲಿಕಿಸಿಕೊಂಡಿದ್ದಾನೆ. ಇದನ್ನು ಓದಿ: ಖನ್ನಾ ಪೂಲ್ ಪಾರ್ಟಿಯಲ್ಲಿ ಮತ್ಸ್ಯಕನ್ಯೆಯಂತೆ ಈಜಿದ್ದ ಸಂಜನಾ

    ಈ ಹಿಂದೆ ರಾಹುಲ್ ಬಗ್ಗೆ ಮಾತನಾಡಿದ್ದ ನಟಿ ಸಂಜನಾ, ರಾಹುಲ್ ತುಂಬಾ ಒಳ್ಳೆಯ ಹುಡುಗ, ಅವನು ರಿಯಲ್ ಎಸ್ಟೇಟ್ ಮಾಡುತ್ತಾನೆ. ಜೇಕರ್ಬ್ ವರ್ಗಿಸ್ ನಿರ್ದೇಶನದ ಚಂಬಲ್ ಸಿನಿಮಾದಲ್ಲಿ ರಾಹುಲ್ ಸಣ್ಣ ಪಾತ್ರ ಮಾಡಿದ್ದಾನೆ. ರಾಹುಲ್‍ನನ್ನು ನಾನು ರಾಖೀ ಭಾಯ್ ಅಂತಾನೇ ಕರೆಯುತ್ತೇನೆ. ನಾವು ತುಂಬಾ ಕ್ಲೋಸ್ ಫ್ರೆಂಡ್ ಅವನು ನನ್ನ ರಾಖೀ ಅಣ್ಣ. ರಾಹುಲ್ ಆದಷ್ಟು ಬೇಗ ಈ ಎಲ್ಲಾ ಸಮಸ್ಯೆಗಳಿಂದ ಹೊರಗಡೆ ಬರುತ್ತಾನೆ ಎಂದು ಸಂಜನಾ ತಿಳಿಸಿದ್ದರು.

  • ಡ್ರಗ್ಸ್ ವಿಚಾರಣೆಯ ದಾರಿ ತಪ್ಪಿಸಲು ನನ್ನ ಹೆಸರು ಬಳಕೆ: ಹೆಚ್‍ಡಿಕೆ

    ಡ್ರಗ್ಸ್ ವಿಚಾರಣೆಯ ದಾರಿ ತಪ್ಪಿಸಲು ನನ್ನ ಹೆಸರು ಬಳಕೆ: ಹೆಚ್‍ಡಿಕೆ

    – ನಾನು 1982ರಲ್ಲೇ ಕ್ಯಾಸಿನೋ ನೋಡಿದ್ದೇನೆ

    ಬೆಂಗಳೂರು: ಡ್ರಗ್ಸ್ ವಿಚಾರಣೆಯ ದಾರಿ ತಪ್ಪಿಸಲು ನನ್ನ ಹೆಸರನ್ನು ಬಳಕೆ ಮಾಡಲಾಗುತ್ತಿದೆ ಎಂದು ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿಯವರು ಆರೋಪ ಮಾಡಿದ್ದಾರೆ.

    ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕುಮಾರಸ್ವಾಮಿ, 2014ರಲ್ಲಿ ಪಕ್ಷದ ಸಭೆ ಮಾಡಲು ಶ್ರೀಲಂಕಾಕ್ಕೆ ಹೋಗಿದ್ದೆವು. ಗೋವಾ ಬೇರೆ ಕಡೆಗಿಂತ ಅಲ್ಲಿ ಕಡಿಮೆ ಬೆಲೆಯಾಗುತ್ತೆ ಎಂದು ಅಲ್ಲಿ ಸಭೆ ಮಾಡಿದ್ದೆವು. ಆ ವಿಚಾರವನ್ನು ಈಗ ಯಾಕೆ ಪ್ರಸ್ತಾಪ ಮಾಡುತ್ತಿದ್ದಾರೆ ಎಂಬುದನ್ನು ಅವರನ್ನೇ ಕೇಳಬೇಕು ಎಂದರು.

    ಇದೇ ವೇಳೆ ಜಮೀರ್ ಅವರು ನಿಮ್ಮನ್ನು ಕರೆದುಕೊಂಡು ಹೋಗಿದ್ರಾ ಎಂಬ ಪ್ರಶ್ನೆಗೆ ಉತ್ತರಿಸಿದ ಹೆಚ್‍ಡಿಕೆ, ಅವರು ನನ್ನ ಯಾಕೆ ಕರೆದುಕೊಂಡು ಹೋಗುತ್ತಾರೆ. ನಮಗೆ ಹೋಗೊದಕ್ಕೆ ಬರೋಲ್ವಾ ಎಂದು ಟಾಂಗ್ ನೀಡಿದರು. ಡ್ರಗ್ಸ್ ದಂಧೆ ಕೇವಲ ಸ್ಯಾಂಡಲ್‍ವುಡ್ ಮಾತ್ರವಲ್ಲ ಎಲ್ಲ ಕಡೆ ಇದೆ. ನಾನು ಕೂಡ ಸಿನಿಮಾ ಕ್ಷೇತ್ರದಲ್ಲಿ ಇದ್ದವನು. ಆಗ ನನ್ನ ಗಮನಕ್ಕೆ ಡ್ರಗ್ಸ್ ವಿಚಾರ ಬಂದಿಲ್ಲ. ಕ್ಯಾಸಿನೋದಲ್ಲೇ ಡ್ರಗ್ಸ್ ಇರುತ್ತೆ ಅಂತ ಹೇಳುವುಕ್ಕೆ ಆಗಲ್ಲ ಎಂದು ತಿಳಿಸಿದರು.

    ಡ್ರಗ್ಸ್ ಅನ್ನೋದು ನಮ್ಮ ಬೆಂಗಳೂರಿನಲ್ಲಿ ನೈಟ್ ಬಾರ್ ಗಳಲ್ಲೂ ಇದೆ. ಸಂಜೆ ನಂತರ ಮಲ್ಯ ರೋಡ್ ಮತ್ತು ಎಂಜಿ ರೋಡ್‍ಗೆ ಹೋದರೆ ನಿಮಗೆ ಗೋತಾಗುತ್ತೆ. ಈಗಲೂ ಅದೇ ರೀತಿ ಇದ್ಯಾ ನನಗೆ ಗೊತ್ತಿಲ್ಲ. ಬೆಂಗಳೂರಿನಲ್ಲಿ ಸಂಜೆ ಮೇಲೆ ನೈಟ್ ಪಾರ್ಟಿಗಳು ನಡೆಯುತ್ತೆ. ಡ್ರಗ್ಸ್ ಮಾಫಿಯಾದ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು. ಅದನ್ನು ದಿಕ್ಕು ತಪ್ಪಿಸೋ ಕೆಲಸ ನೆಡೆಯುತ್ತಿದೆ ಎಂದು ಆರೋಪ ಮಾಡಿದರು.

    ನಾನು ನಿನ್ನೆಯೆ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದೇನೆ. ನಾನು 1982ರಲ್ಲೇ ಕ್ಯಾಸಿನೋ ನೋಡಿದ್ದೇನೆ. ನಾನು ನನ್ನ ಧರ್ಮಪತ್ನಿ ಮಲೇಶಿಯಾಗೆ ಟೂರ್ ಹೋಗಿದ್ದೆವು. ಈ ವೇಳೆ ಅಲ್ಲಿನ ಗೈಡ್ ಕರೆದುಕೊಂಡು ಹೋಗಿದ್ದರು. ಅಲ್ಲಿ ಡ್ರಗ್ಸ್ ಇರಲಿಲ್ಲ. ಆದರೆ ಡ್ರಗ್ಸ್ ಅನ್ನೋದು ಕ್ಯಾಸಿನೋದಲ್ಲಿ ಮಾತ್ರ ನಡೆಯುತ್ತೆ ಅನ್ನೋದಲ್ಲ, ಬೆಂಗಳೂರಿನಲ್ಲಿ ನೈಟ್ ಬಾರ್ ಗಳು ಮತ್ತು ಪಾರ್ಟಿಗಳಲ್ಲೂ ಕಾಣಿಸುತ್ತಿದೆ. 5 ಸ್ಟಾರ್ ಹೋಟಲ್‍ಗಳಲ್ಲಿ ಬೆಳಗ್ಗೆ 5 ಗಂಟೆವರೆಗೂ ಮ್ಯಾಸಿಕ್ ಹಾಕಿಕೊಂಡು ನಡೆಸೋ ಪಾರ್ಟಿಗಳಲ್ಲಿ ಡ್ರಗ್ಸ್ ಇರುತ್ತೆ ಎಂದಿದ್ದಾರೆ.

    ಐಪಿಎಲ್, ಕೆಪಿಎಲ್ ಮತ್ತು ಕೆಲವರು ಅವಾರ್ಡ್ ಕಾರ್ಯಕ್ರಮಗಳಿಗೆ ಸೆಲೆಬ್ರಿಟಿ ನಟರನ್ನು ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಕಾರ್ಯಕ್ರಮ ಮಾಡಿ ಅವಾರ್ಡ್ ಕೊಡುತ್ತಾರೆ. ಈ ರೀತಿಯ ಕಾರ್ಯಕ್ರಮಗಳು ಪ್ರಾರಂಭವಾದ ನಂತರ ಡ್ರಗ್ಸ್ ದಂಧೆ ಪ್ರಾರಂಭವಾಗಿದೆ. ಜಮೀರ್ 2014ರ ವಿಚಾರವನ್ನು ಈಗ ಯಾಕೆ ತಗೆದ್ದಿದ್ದಾರೆ ಗೊತ್ತಿಲ್ಲ, ನೀವು ಅದನ್ನು ಅವರನ್ನೆ ಕೇಳಬೇಕು ಎಂದು ಹೇಳಿದರು.

  • ವೈಭವ್ ಜೈನ್ ವೈಭವಕ್ಕೆ ತುಪ್ಪದ ಹುಡ್ಗಿ ಫುಲ್ ಸೈಲೆಂಟ್

    ವೈಭವ್ ಜೈನ್ ವೈಭವಕ್ಕೆ ತುಪ್ಪದ ಹುಡ್ಗಿ ಫುಲ್ ಸೈಲೆಂಟ್

    ಬೆಂಗಳೂರು: ಸಿಸಿಬಿ ಪೊಲೀಸರು ಶನಿವಾರ ಡ್ರಗ್ಸ್ ಪ್ರಕರಣದ ಮತ್ತೋರ್ವ ಪ್ರಮುಖ ಆರೋಪಿ ವೈಭವ್ ಜೈನ್ ಅನ್ನು ವಶಕ್ಕೆ ಪಡೆದುಕೊಂಡಿದ್ದು, ಇದರಿಂದ ನಟಿ ರಾಗಿಣಿಗೆ ಸಂಕಷ್ಟ ಶುರುವಾಗಿದೆ.

    ಸ್ಯಾಂಡಲ್‍ವುಡ್ ಡ್ರಗ್ಸ್ ಮಾಫಿಯಾ ವಿಚಾರವಾಗಿ ಈಗಾಗಲೇ ನಟಿಮಣಿಯಾರದ ರಾಗಿಣಿ ಮತ್ತು ಸಂಜನಾ ಗಲ್ರಾನಿ ಅರೆಸ್ಟ್ ಆಗಿದ್ದಾರೆ. ಇದರ ಜೊತೆಗೆ ನಟಿಯರ ಜೊತೆ ನಂಟು ಹೊಂದಿದ್ದ ವ್ಯಕ್ತಿಗಳನ್ನು ಪೊಲೀಸರು ಖೆಡ್ಡಾಗೆ ಬೀಳಿಸುತ್ತಿದ್ದಾರೆ. ಅಂತೆಯೇ ಶನಿವಾರ ವೈಭವ್ ಜೈನ್ ಎಂಬ ಚಿನ್ನದ ವ್ಯಾಪಾರಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.

    ಶನಿವಾರ ನಡೆದ ಸಿಸಿಬಿ ತನಿಖೆಯಲ್ಲಿ ವೈಭವ್ ಜೈನ್ ರವಿಶಂಕರ್ ಮತ್ತು ರಾಗಿಣಿಗೆ ನಾನೇ ಎಲ್‍ಎಸ್‍ಡಿ ಪಿಲ್ಸ್ ತಂದುಕೊಟ್ಟಿದ್ದೇ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಜೊತೆಗೆ ನಟಿ ರಾಗಿಣಿ, ರವಿಶಂಕರ್, ವೀರೇನ್ ಖನ್ನಾ ಹಾಗೂ ಇತರ ಡ್ರಗ್ಸ್ ಪೆಡ್ಲರ್ ಗಳ ಜೊತೆಗೆ ಪಾರ್ಟಿಯಲ್ಲಿ ಭಾಗಿಯಾಗಿದ್ದೆ. ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆ ಪಾರ್ಟಿಗಳು ನಡೆದಿದ್ದವು ಎಂದು ವೈಭವ್ ಜೈನ್ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

    ಈಗಾಗಲೇ ಪೊಲೀಸರು ಪಾರ್ಟಿ ಮಾಡಿರುವ ಬಗ್ಗೆ ಮೊಬೈಲ್ ತಾಂತ್ರಿಕ ತಜ್ಞರಿಂದ ವರದಿ ಪಡೆದುಕೊಂಡಿದ್ದಾರೆ. ವಿಚಾರಣೆ ವೇಳೆ ನಾನು ಏನೂ ಮಾಡೇ ಇಲ್ಲ ಎಂದು ನಾಟಕವಾಡುತ್ತಿದ್ದ ರಾಗಿಣಿಗೆ ವೈಭವ್ ಜೈನ್ ತಪ್ಪೊಪ್ಪಿಕೊಂಡಿರುವ ವಿಡಿಯೋವನ್ನು ಪೊಲೀಸರು ತೋರಿಸಿದ್ದಾರೆ. ಇದನ್ನು ಕಂಡು ರಾಗಿಣಿ ಫುಲ್ ಸೈಲೆಂಟ್ ಆಗಿ ಹೋಗಿದ್ದಾರೆ. ಈ ಸಾಕ್ಷಿಗಳೇ ತುಪ್ಪದ ಹುಡ್ಗಿಗೆ ಮುಳುವಾಗಲಿವೆ ಎಂದು ಹೇಳಲಾಗಿದೆ.

    ಈ ಹಿಂದೆ ವಿದೇಶಿ ಡ್ರಗ್ಸ್ ಪೆಡ್ಲರ್ ಲೂಮ್ ಪೆಪ್ಪರ್ ಬಗ್ಗೆ ಕೇಳಿದಾಗಲೂ ರಾಗಿಣಿ ನನಗೆ ಏನೂ ಗೊತ್ತೇ ಇಲ್ಲ ಎಂದು ಡ್ರಾಮಾ ಮಾಡಿದ್ದರು. ಆದರೆ ಸಿಸಿಬಿ ಪೊಲೀಸರು ಲೂಮ್ ಪೆಪ್ಪರ್ ರಾಗಿಣಿ ಮಾಡಿರುವ ಮೆಸೇಜ್‍ಗಳ ಕಾಪಿ ತೋರಿಸಿದಾಗ ಸೈಲೆಂಟ್ ಆಗಿದ್ದರು. ರಾಗಿಣಿ ತನಿಖೆಗೆ ಸಹಕರಿಸದಿರುವುದೇ ಆಕೆಗೆ ಮುಳುವಾಗಲಿದೇ ಎಂದು ಹೇಳಲಾಗಿದೆ. ಇಂದು ಸಿಸಿಬಿ ಪೊಲೀಸರು ರಾಗಿಣಿಯನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಲಿದ್ದಾರೆ.

  • ಡ್ರಗ್ಸ್ ಮಾಫಿಯಾದಲ್ಲಿ 32 ರಾಜಕಾರಣಿಗಳಿದ್ದಾರೆ: ಮುತಾಲಿಕ್

    ಡ್ರಗ್ಸ್ ಮಾಫಿಯಾದಲ್ಲಿ 32 ರಾಜಕಾರಣಿಗಳಿದ್ದಾರೆ: ಮುತಾಲಿಕ್

    – ಡ್ರಗ್ ಜಿಹಾದ್, ಲವ್ ಜಿಹಾದ್ ಎರಡು ಒಂದೇ

    ಮಂಡ್ಯ: ನಮ್ಮ ರಾಜ್ಯದಲ್ಲಿ 32 ಮಂದಿ ರಾಜಕಾರಣಿಗಳು ಡ್ರಗ್ಸ್ ಮಾಫಿಯಾದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

    ಮಂಡ್ಯದಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್, ಈ ಬಗ್ಗೆ ನನಗೆ ಮಾಹಿತಿ ಇದೆ. ಸಂಪೂರ್ಣ ಮಾಹಿತಿ ಸಮೇತ ನಾನು ಇನ್ನೊಂದು ವಾರದಲ್ಲಿ ಆ ಲಿಸ್ಟ್ ನ್ನು ಹೋಂ ಮಿನಿಸ್ಟರ್ ಗೆ ಕೊಡುತ್ತೇನೆ. ನಾನು ಹಿಟ್ ಅಂಡ್ ರನ್ ಕೆಲಸ ಮಾಡಲ್ಲ. ಆಧಾರ ಸಹಿತವಾಗಿ ನಾನು ಬರುತ್ತೇನೆ. ನಟ ನಟಿಯರ ವಿಚಾರಕ್ಕಿಂತ ನಮಗೆ ನಮ್ಮ ಯುವ ಶಕ್ತಿ ಡ್ರಗ್ಸ್ ಕುರಿತು ಹಾಳಾಗಿ ಹೋಗುತ್ತಿರುವುದು ಆತಂಕ ಉಂಟು ಮಾಡಿದೆ. ಈ ಡ್ರಗ್ಸ್ ಮಾಫಿಯಾವನ್ನು ಬುಡ ಸಹಿತ ಕಿತ್ತು ಹಾಕುವಲ್ಲಿ ಬಿಜೆಪಿ ಧಮ್ ತೋರಿಸಬೇಕು ಎಂದು ಆಗ್ರಹಿಸಿದರು.

    ಈ ಡ್ರಗ್ಸ್ ದಂಧೆಯಲ್ಲಿ ಜಮೀರ್ ಇರುವುದು ನೂರಕ್ಕೆ ನೂರು ಸತ್ಯ. ಜಮೀರ್ ಗೆ ರಾಜಕೀಯವಾಗಿ ಶಕ್ತಿ ಇದೆ ಈ ಕಾರಣಕ್ಕೆ ಆತನನ್ನು ಪೊಲೀಸರು ಬಂಧನ ಮಾಡುತ್ತಿಲ್ಲ. ಜಮೀರ್ ಮಾತ್ರವಲ್ಲ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಲ್ಲೂ ಡ್ರಗ್ಸ್ ದಂಧೆಯಲ್ಲಿ ಇರುವ ರಾಜಕೀಯ ನಾಯಕರು ಇದ್ದಾರೆ. ರಾಜಕಾರಣಿಗಳದ್ದೇ ಹಲವಾರು ಪಬ್, ಕ್ಲಬ್, ಬಾರ್ ಗಳು ಇವೆ. ರಾಜಕಾರಣಿಗಳಿಗೆ ಸಾವಿರಾರು ಕೋಟಿ ವ್ಯಾಪಾರ ಆಗುತ್ತಿರುವುದೇ ಡ್ರಗ್ಸ್ ನಿಂದ, ವೈನ್ ಲಾಬಿ ಹಾಗೂ ಡ್ರಗ್ಸ್ ಲಾಬಿ ಇಡೀ ರಾಜಕೀಯವನ್ನು ಹಿಡಿದುಕೊಂಡಿದೆ ಎಂದು ಆರೋಪಿಸಿದರು.

    ಡ್ರಗ್ಸ್ ಮಾಫಿಯಾ ಹಾಗೂ ಲವ್ ಜಿಹಾದ್‍ಗೆ ಸಂಬಂಧ ಇದೆ. ಡ್ರಗ್ ಜಿಹಾದ್ ಮತ್ತು ಲವ್ ಜಿಹಾದ್ ಎರಡು ಒಂದೇ. ನಟಿ ಸಂಜನಾ ಗಂಡ ಡಾ.ಅಜೀಜ್ ಸಹ ಡ್ರಗ್ಸ್ ದಂಧೆಯಲ್ಲಿ ಇದ್ದಾನೆ. ಇದರಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ದಾವೂದ್ ಇಬ್ರಾಹಿಂ ಈ ಎರಡಕ್ಕೂ ಮೂಲ ಪುರುಷನಾಗಿದ್ದಾನೆ. ಆಜೀಮಸ್ತಾನ ಎಂಬ ದೇಶ ದ್ರೋಹಿ ಇದ್ದ ಆತ ಈ ಡ್ರಗ್ಸ್ ದಂಧೆ ಮೂಲಕ ಇಡೀ ಚಿತ್ರರಂಗವನ್ನು ಆವರಿಸಿಕೊಂಡಿದ್ದಾನೆ ಎಂದರು.

  • ಸಾರಾ, ರಾಕುಲ್ ಡ್ರಗ್ ಸೇವಿಸ್ತಿದ್ದಾರೆ – ಬಾಲಿವುಡ್‍ನಲ್ಲಿ ಬಿರುಗಾಳಿ ಎಬ್ಬಿಸಿದ ರಿಯಾ

    ಸಾರಾ, ರಾಕುಲ್ ಡ್ರಗ್ ಸೇವಿಸ್ತಿದ್ದಾರೆ – ಬಾಲಿವುಡ್‍ನಲ್ಲಿ ಬಿರುಗಾಳಿ ಎಬ್ಬಿಸಿದ ರಿಯಾ

    – ಬಾಲಿವುಡ್‍ನಲ್ಲಿ ಶೇ.80 ಜನ ಡ್ರಗ್ ಅಡಿಕ್ಟ್ಸ್

    ಮುಂಬೈ: ನನ್ನ ಜೊತೆ ನಟಿಯರಾದ ಸಾರಾ ಅಲಿ ಖಾನ್, ರಾಕುಲ್ ಪ್ರೀತ್ ಸಿಂಗ್ ಕೂಡ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು ಎಂದು ನಟಿ ರಿಯಾ ಚಕ್ರವರ್ತಿ ಎನ್‍ಸಿಬಿ ತನಿಖೆ ವೇಳೆ ಒಪ್ಪಿಕೊಂಡಿದ್ದಾಳೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿವೆ.

    ಡ್ರಗ್ ಮಾಫಿಯಾ ಪ್ರಕರಣ ಇಡೀ ಭಾರತ ಚಿತ್ರರಂಗಕ್ಕೆ ದೊಡ್ಡ ತಲೆನೋವಾಗಿ ತೋರುತ್ತಿದೆ. ದಿನಕ್ಕೊಂದು ನಟಿಮಣಿಯರ ಹೆಸರು ಈಗ ಈ ಪ್ರಕರಣದಲ್ಲಿ ಕೇಳಿ ಬರುತ್ತಿವೆ. ಬಾಲಿವುಡ್‍ನಲ್ಲಿ ರಿಯಾ ಚಕ್ರವರ್ತಿ ಅರೆಸ್ಟ್ ಆಗಿದ್ದರೆ, ಇತ್ತ ಸ್ಯಾಂಡಲ್‍ವುಡ್‍ನಲ್ಲಿ ನಟಿ ರಾಗಿಣಿ ಮತ್ತು ಸಂಜನಾ ಅರೆಸ್ಟ್ ಆಗಿದ್ದಾರೆ.

    ಸದ್ಯ ನ್ಯಾಯಾಂಗ ಬಂಧನದಲ್ಲಿರುವ ರಿಯಾ ಎನ್‍ಸಿಬಿ ಅಧಿಕಾರಿಗಳ ವಿಚಾರಣೆ ವೇಳೆ ಹಲವು ನಟಿಯರ ಹೆಸರು ಹೇಳಿದ್ದು, ನಟಿಯರಾದ ಸಾರಾ ಅಲಿ ಖಾನ್ ಮತ್ತು ರಕುಲ್ ಪ್ರೀತ್ ಸಿಂಗ್, ಡಿಸೈನರ್ ಸಿಮೋನೆ ಖಂಬಟ್ಟಾ, ಸುಶಾಂತ್ ಸಿಂಗ್ ರಜಪೂತ್ ಅವರ ಸ್ನೇಹಿತೆ ಮತ್ತು ಮಾಜಿ ಮ್ಯಾನೇಜರ್ ರೋಹಿಣಿ ಅಯ್ಯರ್ ಮತ್ತು ಚಲನಚಿತ್ರ ನಿರ್ಮಾಪಕ ಮುಖೇಶ್ ಛಭ್ರಾ ಎಲ್ಲರೂ ಡ್ರಗ್ ತೆಗೆದುಕೊಂಡಿದ್ದಾರೆ ಎಂದು ಬಾಯ್ಬಿಟ್ಟಿದ್ದಾಳೆ ಎಂದು ಟೈಮ್ಸ್ ನೌ ವರದಿ ವರದಿ ಮಾಡಿದೆ.

    ಸಾರಾ ಅಲಿ ಖಾನ್ ನಟ ಸೈಫ್ ಅಲಿ ಖಾನ್ ಪುತ್ರಿಯಾಗಿದ್ದು, ಈಕೆ 2018ರಲ್ಲಿ ತೆರೆಕಂಡ ಕೇದಾರನಾಥ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಇದರಲ್ಲಿ ಸುಶಾಂತ್ ಸಿಂಗ್ ರಾಜಪೂತ್ ನಾಯಕನಾಗಿ ನಟಿಸಿದ್ದರು. ಈ ವಿಚಾರವಾಗಿ ಎನ್‍ಸಿಬಿ ತನಿಖೆಯಲ್ಲಿ ಮಾಹಿತಿ ನೀಡಿರುವ ರಿಯಾ, ಕೇದಾರನಾಥ್ ಸಿನಿಮಾ ಸಮಯದಲ್ಲಿ ಸಾರಾ ಅಲಿ ಖಾನ್, ಸುಶಾಂತ್ ಮತ್ತು ಅವರ ಸ್ನೇಹಿತರು ಥೈಲ್ಯಾಂಡ್‍ಗೆ ಟ್ರಿಪ್ ಹೋಗಿ 70 ಲಕ್ಷ ಖರ್ಚು ಮಾಡಿಕೊಂಡು ಬಂದಿದ್ದರು ಎಂದು ಹೇಳಿದ್ದಾಳೆ. ಇದನ್ನೂ ಓದಿ: ಜಾಮೀನು ಅರ್ಜಿ ವಜಾ – ರಿಯಾ ಚಕ್ರವರ್ತಿಗೆ ಜೈಲೇ ಗತಿ

    ಈ ಹಿಂದೆ ಮಾತನಾಡಿದ್ದ ನಟ ಸುಶಾಂತ್ ಸಿಂಗ್ ಸ್ನೇಹಿತ ಸ್ಯಾಮ್ಯುಯೆಲ್ ಹಾಕಿಪ್, ಕೇದಾರನಾಥ್ ಸಿನಿಮಾ ಶೂಟಿಂಗ್ ವೇಳೆ ಸಾರಾ ಅಲಿ ಖಾನ್ ಮತ್ತು ಸುಶಾಂತ್ ಪರಸ್ಪರ ಪ್ರೀತಿಸುತ್ತಿದ್ದರು ಎಂದು ಹೇಳಿದ್ದರು. ಈಗ ಈ ವಿಚಾರ ಸಾಮಾಜಿಕ ಜಾಲತಾಣದಲ್ಲೂ ಚರ್ಚೆಯಾಗುತ್ತಿದ್ದು, ಮಗಳನ್ನು ಪ್ರೀತಿಸಿದಕ್ಕೆ ತಂದೆ ಸೈಫ್ ಅಲಿ ಖಾನ್ ಸುಶಾಂತ್‍ಗೆ ಬೆದರಿಕೆ ಹಾಕಿದ್ದರು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಡ್ರಗ್ಸ್ ಅಡಿಕ್ಟ್ ಸುಶಾಂತ್‍ನನ್ನು ಪ್ರೀತಿಸಿದ್ದಕ್ಕೆ ಈ ಶಿಕ್ಷೆ: ರಿಯಾ ಪರ ವಕೀಲ

    ಮೂಲಗಳ ಪ್ರಕಾರ ಎನ್‍ಸಿಬಿ ತನಿಖೆ ವೇಳೆ ರಿಯಾ ಚಕ್ರವರ್ತಿ ಡ್ರಗ್ ತೆಗೆದುಕೊಳ್ಳುತ್ತಿದ್ದ ಮತ್ತು ಸಂಗ್ರಹಿಸುತ್ತಿದ್ದ ಹಲವಾರು ಬಾಲಿವುಡ್ ತಾರೆಯರ ಹೆಸರನ್ನು ಬಾಯ್ಬಿಟ್ಟಿದ್ದಾಳೆ ಎನ್ನಲಾಗಿದೆ. ಇದರಲ್ಲಿ ಈಗಾಗಲೇ 15 ಮಂದಿಯ ಮೇಲೆ ಎನ್‍ಸಿಬಿ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ. ಬಾಲಿವುಡ್‍ನಲ್ಲಿ 80% ಜನ ಡ್ರಗ್ ತೆಗೆದುಕೊಳ್ಳುತ್ತಾರೆ ಎಂದು ರಿಯಾ ಹೇಳಿದ್ದಾಳೆ. ಇದರಲ್ಲಿ 25 ಮಂದಿಗೆ ಎನ್‍ಸಿಬಿ ಸಮನ್ಸ್ ನೀಡಲು ಸಿದ್ಧತೆ ನಡೆಸಿದೆ. ವಿಚಾರಣೆ ವೇಳೆ ತಾನು ತಪ್ಪು ಮಾಡಿದ್ದನ್ನು ಒಪ್ಪಿಕೊಂಡಿರುವ ರಿಯಾ, ನನಗೆ ಸುಶಾಂತ್ ಕೂಡ ಆರ್ಥಿಕವಾಗಿ ಸಹಾಯ ಮಾಡುತ್ತಿದ್ದರು ಎಂದು ಹೇಳಿದ್ದಾಳೆ ಎಂದು ವರದಿಯಾಗಿದೆ.

    ಜೂನ್ 14 ರಂದು ಮೃತಪಟ್ಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆಗೆ ಸಂಬಂಧಿಸಿದ ಡ್ರಗ್ಸ್ ಆರೋಪದ ಮೇಲೆ ನಟಿ ರಿಯಾ ಚಕ್ರವರ್ತಿಯನ್ನು ಮಂಗಳವಾರ ಬಂಧಿಸಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸಾವನ್ನಪ್ಪಿದ ನಟ ಸುಶಾಂತ್‍ಗೆ ರಿಯಾ ಚಕ್ರವರ್ತಿ ಗಾಂಜಾ ಸೇವನೆ ಮಾಡಲು ಗಾಂಜಾ ಖರೀದಿಸುತ್ತಿದ್ದಳು ಎಂಬ ಆರೋಪದ ಮೇಲೆ ಎನ್‍ಸಿಬಿ ರಿಯಾಳನ್ನು ಅರೆಸ್ಟ್ ಮಾಡಿತ್ತು. ನಂತರ ಆಕೆ ಸ್ಥಳೀಯ ಕೋರ್ಟಿನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಳು ಅದು ಕೂಡ ವಜಾಗೊಂಡಿತ್ತು. ಮತ್ತೆ ಮುಂಬೈ ಕೋರ್ಟಿಗೆ ಆಕೆ ಅರ್ಜಿ ಸಲ್ಲಿಸಿದ್ದಳು.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ವಾದವನ್ನು ಆಲಿಸಿದ್ದ ಕೋರ್ಟ್, ಶುಕ್ರವಾರಕ್ಕೆ ತೀರ್ಪನ್ನು ಕಾಯ್ದಿರಿಸಿತ್ತು. ಶುಕ್ರವಾರ ಈ ತೀರ್ಪು ಬಂದಿದ್ದು, ರಿಯಾ ಮತ್ತು ಆಕೆಯ ಸಹೋದರ ಶೌವಿಕ್ ಚಕ್ರವರ್ತಿ ಸೇರಿದಂತೆ ಎಂಟು ಮಂದಿ ಆರೋಪಿಗಳ ಜಾಮೀನು ಅರ್ಜಿಯನ್ನು ಕೋರ್ಟ್ ವಜಾ ಮಾಡಿತ್ತು. ಈ ಮೂಲಕ ಮತ್ತೆ ಸೆಪ್ಟೆಂಬರ್ 22ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಸದ್ಯ ರಿಯಾ ಬೈಕುಲ್ಲಾ ಜೈಲಿನಲ್ಲಿ ಇದ್ದಾಳೆ.

  • ಡ್ರಗ್ ಡೀಲರ್ ಆದಿತ್ಯ ಆಗರ್ವಾಲ್‍ಗೆ ಬರುತ್ತಿತ್ತು 4 ಲಕ್ಷ ಸಂಬಳ

    ಡ್ರಗ್ ಡೀಲರ್ ಆದಿತ್ಯ ಆಗರ್ವಾಲ್‍ಗೆ ಬರುತ್ತಿತ್ತು 4 ಲಕ್ಷ ಸಂಬಳ

    – ಲೈಫ್ ಈಸ್ ಶಾರ್ಟ್, ನೋ ಮ್ಯಾರೇಜ್ ಎಂಜಾಯ್ ಇಟ್ ಅಜೆಂಡಾ

    – ಬೆಂಗಳೂರಿನ ಪ್ರತಿಷ್ಟಿತ ಸಾಫ್ಟ್ ವೇರ್ ಕಂಪನಿಯಲ್ಲಿ ಟೆಕ್ಕಿ

    ಬೆಂಗಳೂರು: ಡ್ರಗ್ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಡ್ರಗ್ ಡೀಲರ್ ಆದಿತ್ಯ ಆಗರ್ವಾಲ್‍ಗೆ ತಿಂಗಳಿಗೆ ನಾಲ್ಕು ಲಕ್ಷ ಸಂಬಳ ಬರುತ್ತಿತ್ತು ಎಂಬುದು ತನಿಖೆ ವೇಳೆ ಬಯಲಾಗಿದೆ.

    ಡ್ರಗ್ ಮಾಫಿಯಾ ಪ್ರಕರಣದಲ್ಲಿ ದೆಹಲಿಯಲ್ಲಿ ಅರೆಸ್ಟ್ ಆದ ಡ್ರಗ್ ಕಿಂಗ್‍ಪಿನ್ ವೀರೇನ್ ಖನ್ನಾನ ಬಲಗೈ ಬಂಟನಾಗಿದ್ದ ಆದಿತ್ಯ ಆಗರ್ವಾಲ್, ಬೆಂಗಳೂರಿನ ಪ್ರತಿಷ್ಟಿತ ಸಾಫ್ಟ್ ವೇರ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ. ಟೆಕ್ಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಈತನಿಗೆ ತಿಂಗಳಿಗೆ 4 ಲಕ್ಷ ರೂ. ಸಂಬಳ ಬರುತ್ತಿತ್ತು. ಆದರೂ ಲೈಫ್ ಎಂಜಾಯ್ ಮಾಡಲು ಡ್ರಗ್ ದಂಧೆಗೆ ಇಳಿದಿದ್ದ.

    ವೀರೇನ್ ಖನ್ನ ಮತ್ತು ಆದಿತ್ಯ ಆಗರ್ವಾಲ್ ಇಬ್ಬರು ಸೇರಿ ಬೆಂಗಳೂರಿನಲ್ಲಿ ಹೈಟೆಕ್ ಪಾರ್ಟಿಗಳನ್ನು ಆಯೋಜನೆ ಮಾಡುತ್ತಿದ್ದರು. ವೀರೇನ್ ಖನ್ನಾ ಇಲ್ಲದ ದಿನಗಳಲ್ಲಿ ಪಾರ್ಟಿಯನ್ನು ಆದಿತ್ಯ ಆಗರ್ವಾಲ್ ನೋಡಿಕೊಳ್ಳುತ್ತಿದ್ದ. ಜೊತೆಗೆ ಪಾರ್ಟಿಗಳಿಗೆ ಲಕ್ಷ ಲಕ್ಷ ಹಣ ಖರ್ಚು ಮಾಡುತ್ತಿದ್ದ. ನಾಲ್ಕು ಲಕ್ಷ ಸಂಬಳವನ್ನು ಈತ ಎರಡು ವಾರದಲ್ಲಿ ಉಡೀಸ್ ಮಾಡುತ್ತಿದ್ದ. ವೀರೇನ್ ಖನ್ನಾ ಇವನು ಒಟ್ಟಿಗೆ ಸೇರಿದ್ದರೆ, ಮೋಜು ಮಸ್ತಿಗೆ ದಿನಕ್ಕೆ ಲಕ್ಷದ ತನಕ ಖರ್ಚು ಮಾಡುತ್ತಿದ್ದರು ಎಂಬುದು ಗೊತ್ತಾಗಿದೆ.

    ಜೊತೆಗೆ ಈ ಇಬ್ಬರು ಲೈಫ್ ಈಸ್ ವೆರಿ ಶಾರ್ಟ್, ಎಂಜಾಯ್ ಇಟ್ ಎಂಬ ಅಜೆಂಡಾವನ್ನು ಇಟ್ಟುಕೊಂಡು ಜೀವನ ಮಾಡುತ್ತಿದ್ದರು. ನಾನು ಮದುವೆ ಆಗಲ್ಲ, ನೀನು ಮದುವೆ ಆಗಬೇಡ ಎಂದು ಇಬ್ಬರು ಮಾತನಾಡಿಕೊಂಡಿದ್ದರಂತೆ. ಬಂದ ಸಂಬಳವನ್ನು ಎರಡೇ ವಾರಕ್ಕೆ ಮುಗಿಸಿ ತಿಂಗಳ ಕೊನೆಯಲ್ಲಿ ಹಣಕ್ಕಾಗಿ ಇಬ್ಬರು ಡ್ರಗ್ ಡೀಲ್ ಮಾಡುತ್ತಿದ್ದರಂತೆ. ಈ ಕಾರಣಕ್ಕೆ 35 ವರ್ಷವಾದರೂ ಈ ಇಬ್ಬರು ಮದುವೆಯಾಗಿಲ್ಲ.

    ಕಳೆದ ವಾರ ವೀರೇನ್ ಖನ್ನಾನನ್ನು ಸಿಸಿಬಿ ಪೊಲೀಸರು ದೆಹಲಿಯಲ್ಲಿ ಬಂಧಿಸಿ ಕರೆತಂದಿದ್ದರು, ಸದ್ಯ ಆತ ಪೊಲೀಸರ ವಶದಲ್ಲಿದ್ದಾನೆ. ಈತನ ಮಾಹಿತಿ ಮೇರೆಗೆ ಆದಿತ್ಯ ಆಗರ್ವಾಲ್‍ನನ್ನು ಸಿಸಿಬಿ ಪೊಲೀಸರು ಹರಿಯಾಣದಲ್ಲಿ ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ.

  • ವಶಪಡಿಸಿಕೊಂಡ ಡ್ರಗ್ಸ್, ಗಾಂಜಾ ವಿಲೇವಾರಿ ಹೇಗೆ? ನಿಯಮ ಏನು?

    ವಶಪಡಿಸಿಕೊಂಡ ಡ್ರಗ್ಸ್, ಗಾಂಜಾ ವಿಲೇವಾರಿ ಹೇಗೆ? ನಿಯಮ ಏನು?

    ಬೆಂಗಳೂರು: ನಗರ ಪೊಲೀಸರು ಗುರುವಾರ ಕಲಬುರಗಿಯಲ್ಲಿ ಒಂದು ಟನ್‍ಗೂ ಅಧಿಕ ಗಾಂಜಾವನ್ನು ಕುರಿ ಸಾಕುವ ಕೊಟ್ಟಿಗೆಯಲ್ಲಿ ವಶಪಡಿಸಿಕೊಂಡಿದ್ದಾರೆ. ಇಷ್ಟು ಬೃಹತ್ ಪ್ರಮಾಣದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದ ಬಳಿಕ ಅದರ ವಿಲೇವಾರಿಯನ್ನು ಹೇಗೆ ಮಾಡಲಾಗುತ್ತದೆ ಎಂಬ ಪ್ರಶ್ನೆ ಏಳುವುದು ಸಹಜ ಸಂದರ್ಭದಲ್ಲಿ

    2018ಕ್ಕೂ ಮುನ್ನ ಬೆಂಗಳೂರು ಪೊಲೀಸರು ನ್ಯಾಯಾಲಯದ ಆದೇಶವನ್ನು ಪಡೆದು ಸೀಜ್ ಮಾಡಿದ್ದ ಮಾದಕ ವಸ್ತುಗಳನ್ನು ಆಯಾ ಪೊಲೀಸ್ ಠಾಣೆಗಳ ಬಳಿ ಸುಡುತ್ತಿದ್ದರು. ಆದರೆ ಬೃಹತ್ ಪ್ರಮಾಣದ ಮಾದಕ ದ್ರವ್ಯಗಳನ್ನು ಸುಡುವುದು ನಾರ್ಕೊಟಿಕ್ ಡ್ರಗ್ಸ್ ಆ್ಯಂಡ್ ಸೈಕೊಟ್ರಾಫಿಕ್ ಸಬ್‍ಸ್ಟೆನ್ಸಸ್ (ಎನ್‍ಡಿಪಿಎಸ್) ಕಾಯ್ದೆಗೆ ವಿರುದ್ಧವಾಗಿದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಮತ್ತು ಉಪ ಪೊಲೀಸ್ ಆಯುಕ್ತರು ನೋಡಲ್ ಅಧಿಕಾರಿಗಳೊಂದಿಗೆ ಮಾದಕ ವಸ್ತುಗಳನ್ನು ಪರಿಸರ ಸ್ನೇಹಿಯಾಗಿ ವಿಲೇವಾರಿ ಮಾಡುತ್ತಾರೆ. ಇದನ್ನೂ ಓದಿ: ಕೋತಿ ಮೊಸರು ತಿಂದು ಮೇಕೆಯ ಮೂತಿಗೆ ಮೆತ್ತಿದಂತೆ- ಬಿಜೆಪಿಗೆ ಕೈ ಟಾಂಗ್

    ಬೃಹತ್ ಪ್ರಮಾಣದ ಮಾದಕ ವಸ್ತು ಸೀಜ್ ಮಾಡಿದಾಗ ಏನಾಗುತ್ತೆ?
    2015ರಲ್ಲಿ ಕೇಂದ್ರ ಹಣಕಾಸು ಸಚಿವಾಲಯದ ಅಧೀನದಲ್ಲಿರುವ ಕಂದಾಯ ಇಲಾಖೆಯ ಎಲ್ಲಾ ರಾಜ್ಯ ಸರ್ಕಾರಗಳಿಗೆ ಯಾವುದೇ ಸಂದರ್ಭದಲ್ಲಿ ವಶಪಡಿಸಿಕೊಂಡ ಮಾದಕ ವಸ್ತುಗಳನ್ನು ತಕ್ಷಣವೇ ವಿಲೇವಾರಿ ಮಾಡಬೇಕು ಎಂದು ಆದೇಶ ಹೊರಡಿಸಿದೆ. ಮಾದಕ ವಸ್ತುಗಳ ದುರುಪಯೋಗ ತಪ್ಪಿಸಲು ಕೇಂದ್ರ ಆದೇಶ ನೀಡಿದೆ. ಸಣ್ಣ ಪ್ರಮಾಣದಲ್ಲಿ ಮಾದಕ ವಸ್ತುಗಳನ್ನು ವಶಕ್ಕೆ ಪಡೆದ ಸಂದರ್ಭದಲ್ಲಿ ಸಂಗ್ರಹಿಸಿಟ್ಟ ಸ್ಥಳದಿಂದಲೇ ಹಲವು ಬಾರಿ ಅವು ನಾಪತ್ತೆಯಾಗಿರುವ ಉದಾಹರಣೆಗಳಿವೆ. ಆದ್ದರಿಂದ ವಶಪಡಿಸಿಕೊಂಡ ವಸ್ತುಗಳ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ ನಂತರ ಅದನ್ನು ನಾಶಪಡಿಸಬೇಕಿದೆ.

    ಸದ್ಯ ಬೆಂಗಳೂರಿನ ಪೊಲೀಸರು ವಶಕ್ಕೆ ಪಡೆದಿರುವ ಮಾದಕ ದ್ರವ್ಯಗಳನ್ನು ಪೊಲೀಸ್ ಆಯುಕ್ತರ ಕಟ್ಟಡದಲ್ಲಿ ಸಂಗ್ರಹಿಸಿಡಲಾಗಿದೆ. ಈ ರೀತಿ ಸಂಗ್ರಹಿಸಿದ ಎಲ್ಲಾ ವಸ್ತುಗಳ ಫೋಟೋ ಹಾಗೂ ವಿಡಿಯೋ ಮಾಡಿ ಮ್ಯಾಜಿಸ್ಟ್ರೇಟರ್ ಗೆ ಸಲ್ಲಿಸಲಾಗುತ್ತದೆ. ಆ ಬಳಿಕ ಅವರು ಮಾದಕ ವಸ್ತುಗಳನ್ನು ವಿಲೇವಾರಿ ಮಾಡಲು ಆದೇಶ ನೀಡುತ್ತಾರೆ. ನ್ಯಾಯಾಲಯದ ಆದೇಶವಿಲ್ಲದೇ ವಶಕ್ಕೆ ಪಡೆದ ಮಾದಕ ವಸ್ತುಗಳನ್ನು ನಾಶಪಡಿಸಲು ಅವಕಾಶವಿಲ್ಲ ಎಂದು 2015ರ ಸರ್ಕಾರದ ಆದೇಶ ತಿಳಿಸುತ್ತದೆ. ಇದನ್ನೂ ಓದಿ: 6 ಕೋಟಿ ಗಾಂಜಾ ಪ್ರಕರಣದ ಪ್ರಮುಖ ಆರೋಪಿ ಬಿಜೆಪಿ ಕಾರ್ಯಕರ್ತ

    ವಿಲೇವಾರಿ ಪ್ರಕ್ರಿಯೆ ಹೇಗೆ?
    2015ರ ಆದೇಶದ ಅನ್ವಯ ಮಾಲಿನ್ಯ ನಿಯಂತ್ರಣ ಮಂಡಳಿ ಮಾನದಂಡಗಳಿಗೆ ಅನುಗುಣವಾಗಿ ಮಾದಕ ವಸ್ತುಗಳ ವಿಲೇವಾರಿ ಪ್ರತಿಕ್ರಿಯೆ ನಡೆಯುತ್ತದೆ. ಈ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲು ಸಮಿತಿಯನ್ನು ಸ್ಥಾಪಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಸಮಿತಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ, ಕಸ್ಟಮ್ಸ್ ಮತ್ತು ಕೇಂದ್ರ ಅಬಕಾರಿ ಜಂಟಿ ಆಯುಕ್ತರು ಹಾಗೂ ಪಿಸಿಬಿ ಅಧಿಕಾರಿಗಳೊಂದಿಗೆ ಕಂದಾಯ ಇಲಾಖೆಯ ಗುಪ್ತಚರ ನಿರ್ದೇಶನಾಲಯದ ಜಂಟಿ ನಿರ್ದೇಶಕರು ಇರುತ್ತಾರೆ. ಮಾದಕ ವಸ್ತುಗಳು ನಿಗದಿತ ಪ್ರಮಾಣಕ್ಕಿಂತ ಕಡಿಮೆ ಹೊಂದಿದ್ದಾರೆ ಮಾತ್ರ ಪೊಲೀಸರಿಗೆ ವಿಲೇವಾರಿ ಮಾಡಲು ಅನುಮತಿ ಇದೆ.

    ಮಾದಕ ವಸ್ತುಗಳಾದ ಹೆರಾಯಿನ್ 5 ಕೆಜಿ, ಚರಸ್ 100 ಕೆಜಿ, ಹಶೀಶ್ ಆಯಿಲ್ 20 ಕೆಜಿ, ಗಾಂಜಾ 1 ಟನ್, ಕೊಕೇನ್ 2 ಕೆಜಿ, ಮ್ಯಾಂಡ್ರಾಕ್ಸ್ 3 ಟನ್, ಪೋಪಿಪಿ ಸ್ಟ್ರಾ 3 ಟನ್ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಂಡರೆ ನಿಯಮಗಳ ಅನ್ವಯ ವಿಲೇವಾರಿ ಮಾಡಬೇಕಾಗುತ್ತದೆ.

    ವಿಲೇವಾರಿ ಹೇಗೆ?
    2018ರಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಾಯದಿಂದ ಮಾಗಡಿಯಲ್ಲಿ ಕಾರ್ಖಾನೆಯನ್ನು ಗುರುತಿಸಲಾಗಿದ್ದು, ಅಲ್ಲಿ ಮಾದಕ ವಸ್ತುಗಳ ವಿಲೇವಾರಿ ಮಾಡಲಾಗುತ್ತದೆ. ಇಲ್ಲಿ ಸುಮಾರು 1000 ಡಿಗ್ರಿ ತಾಪಮಾನ ಹೊಂದಿರುವ ಬಾಯ್ಲರ್ ಬಳಸಿ ವಿಲೇವಾರಿ ಮಾಡಲಾಗುತ್ತದೆ. ಆದರೆ ಸಿಂಥೆಟಿಕ್ ಡ್ರಗ್ಸ್ ಗಳನ್ನು ಮರುಬಳಕೆ ಮಾಡಲು ಎನ್‍ಡಿಪಿಎಸ್ ಕಾಯ್ದೆಯ ಅನ್ವಯ ಹರಾಜು ಹಾಕಲು ಅವಕಾಶವಿದೆ. ಆದರೆ ಡ್ರಗ್ಸ್ ದುರುಪಯೋಗವಾಗುವ ಭಯದಿಂದ ನಾವು ಹರಾಜು ಹಾಕಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದನ್ನೂ ಓದಿ: ‘ಕೆಜಿಎಫ್’ ರೌಡಿ ತಂಗಂ ಕುಟುಂಬದವರಿಂದ ಗಾಂಜಾ ದಂಧೆ

    ಉಳಿದಂತೆ ಸಣ್ಣ ಪ್ರಮಾಣದಲ್ಲಿ ಪೊಲೀಸರು ವಶಪಡಿಸಿಕೊಳ್ಳುವ, ಅಂದರೆ 100 ಅಥವಾ 200 ಗ್ರಾಂ ತೂಕದ ಗಾಂಜಾ, ಹಶೀಶ್ ಅಥವಾ ಹ್ಯಾಶ್ ಆಯಿಲ್ ಗಳಂತಹ ಮಾದಕ ವಸ್ತುಗಳನ್ನು ಪೊಲೀಸರೇ ವಿಲೇವಾರಿ ಮಾಡುತ್ತಾರೆ. ಈ ಪ್ರಕ್ರಿಯೆಯನ್ನು ಖಾಲಿ ಸ್ಥಳದಲ್ಲಿ, ಅದು ತಡರಾತ್ರಿಯಲ್ಲಿ ಮಾಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.