Tag: Drug Case

  • ಸ್ಯಾಂಡಲ್‍ವುಡ್ ನಟಿಯ ಸ್ನೇಹಿತ ವಂಚನೆ ಕೇಸಲ್ಲಿ ಅರೆಸ್ಟ್

    ಸ್ಯಾಂಡಲ್‍ವುಡ್ ನಟಿಯ ಸ್ನೇಹಿತ ವಂಚನೆ ಕೇಸಲ್ಲಿ ಅರೆಸ್ಟ್

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಕೇಸ್ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇದೀಗ ಡ್ರಗ್ಸ್ ಕೇಸ್‍ನಲ್ಲಿ ಸಿಲುಕಿದ್ದ ಚಂದನವನದ ನಟಿಯ ಸ್ನೇಹಿತ ಪೊಲೀಸರ ಬಲೆಗೆ ಬಿದ್ದಿದ್ದಾನೆ.

    ಸಿಸಿಬಿಯಲ್ಲಿ ಡ್ರಗ್ಸ್ ಕೇಸ್‍ನಲ್ಲಿ ಬಂಧನವಾಗಿ ಸದ್ದು ಮಾಡಿದ್ದ ಸ್ಯಾಂಡಲ್‍ವುಡ್ ನಟಿಯ ಆಪ್ತ, ಆರ್‍ಟಿಒ ಎಸ್‍ಡಿಎ ರವಿಶಂಕರ್ ವಂಚನೆ ಪ್ರಕರಣದಲ್ಲಿ ಮಲ್ಲೇಶ್ವರಂ ಪೊಲೀಸರ ಅತಿಥಿಯಾಗಿದ್ದಾನೆ. ವಾಹನ ಮಾಲೀಕರ ಬಳಿ ಒಂದು ವರ್ಷದ ಟ್ಯಾಕ್ಸ್ ಪಡೆದು ಟ್ಯಾಕ್ಸ್ ಕಟ್ಟದೇ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಆರೋಪದ ಮೇಲೆ ಅಜಯ್ ಹಾಗೂ ರವಿಶಂಕರ್ ಅನ್ನು ಬಂಧಿಸಲಾಗಿದೆ.  ಇದನ್ನೂ ಓದಿ: ಸಿದ್ದರಾಮೋತ್ಸವದಲ್ಲಿ ರಾಹುಲ್ ಪಾಲ್ಗೊಳ್ತಾರೆ, `ಸರಿಯಾಗಿ ನಡ್ಕೊಳಿ’ – ಕೆಪಿಸಿಸಿಗೆ ಹೈಕಮಾಂಡ್ ವಾರ್ನಿಂಗ್

    ಆರೋಪಿಗಳಾದ ರವಿಶಂಕರ್ ಹಾಗೂ ಅಜಯ್, ಆಶಾ ಯೋಗೇಶ್ ಬಳಿ ಲೈಫ್ ಟೈಮ್ ಟ್ಯಾಕ್ಸ್ ಮಾಡಿಸಿಕೊಡುವುದಾಗಿ 1,37,529 ರೂಪಾಯಿ ಪಡೆದು ಟ್ಯಾಕ್ಸ್ ಕಟ್ಟದೆ ವಂಚಿಸಿರುತ್ತಾರೆ. ಆರೋಪಿತರ ವಂಚನೆ ಬಗ್ಗೆ ಮಹಿಳೆ ಆಶಾ ಯೋಗೇಶ್ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಮಹಿಳೆ ಕೊಟ್ಟ ದೂರಿನ ಆಧಾರದ ಮೇಲೆ ಇಬ್ಬರನ್ನು ಪೊಲೀಸರು ಕಸ್ಟಡಿಗೆ ಪಡೆದು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ನಾಳೆಯಿಂದ ದುಬಾರಿ ದುನಿಯಾ – ಮೀನು, ಮಾಂಸ, ಗೋಧಿ ಸೇರಿ ಎಲ್ಲವೂ ಕಾಸ್ಟ್ಲಿ

    Live Tv
    [brid partner=56869869 player=32851 video=960834 autoplay=true]

  • ವಿಚಾರಣೆಗೆ ಹಾಜರಾದ ನಟಿ ಅನನ್ಯಾ ಪಾಂಡೆ – ಎರಡನೇ ದಿನವೂ NCB ಡ್ರಿಲ್‌

    ವಿಚಾರಣೆಗೆ ಹಾಜರಾದ ನಟಿ ಅನನ್ಯಾ ಪಾಂಡೆ – ಎರಡನೇ ದಿನವೂ NCB ಡ್ರಿಲ್‌

    ನವದೆಹಲಿ: ಡ್ರಗ್ ಪಾರ್ಟಿ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ಅನನ್ಯಾ ಪಾಂಡೆ ಅವರನ್ನು ಎನ್‍ಸಿಬಿ (NCB) ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ನಿನ್ನೆ ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿದ ಅಧಿಕಾರಿಗಳು, ಇಂದೂ ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಿದ್ದರು.

    ಎನ್‍ಸಿಬಿ ಸಮನ್ಸ್ ಹಿನ್ನಲೆಯಲ್ಲಿ ಇಂದು ಅನನ್ಯಾ ಪಾಂಡೆ ಮುಂಬೈನಲ್ಲಿರುವ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ. ಇಂದು ಸುಧೀರ್ಘ ವಿಚಾರಣೆ ನಡೆಯುವ ಸಾಧ್ಯತೆ ಇದ್ದು, ಆರ್ಯನ್ ಖಾನ್ ಜೊತೆಗಿನ ಸಂಬಂಧ ಕುರಿತು ಅಧಿಕಾರಿಗಳು ಮಾಹಿತಿ ಪಡೆಯಲಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ಆರ್ಯನ್ ಖಾನ್ ಮತ್ತು ಅನನ್ಯಾ ಪಾಂಡೆ ನಡುವೆ ಮಾದಕ ವಸ್ತುಗಳ ಹಂಚಿಕೆ ಸಂಬಂಧ ವ್ಯಾಟ್ಸಪ್‍ನಲ್ಲಿ ಚಾಟ್ ನಡೆದಿದೆ ಎನ್ನಲಾಗಿದೆ. ಈ ಹಿಂದೆ ಎನ್‍ಸಿಬಿ ಅಧಿಕಾರಿಗಳು ಇದೇ ವ್ಯಾಟ್ಸಪ್ ಚಾಟ್ ಅನ್ನೇ ಪ್ರಮುಖ ಸಾಕ್ಷಿಯನ್ನಾಗಿಸಿಕೊಂಡು ಕೋರ್ಟ್‍ನಲ್ಲಿ ವಾದ ಮಂಡಿಸಿತ್ತು. ಇದನ್ನೂ ಓದಿ: ಜೈಲೂಟ ತಿನ್ನಲು ಆರ್ಯನ್ ಪರದಾಟ – ಕ್ಯಾಂಟೀನ್ ಊಟಕ್ಕೆ ಮನಿ ಆರ್ಡರ್ ಕಳುಹಿಸಿದ ಶಾರೂಖ್

    ಈ ಸಾಕ್ಷ್ಯಗಳ ಮೇಲೆ ವಿಚಾರಣೆ ಮುಂದುವರಿಸಿರುವ ಎನ್‍ಸಿಬಿ ಅಧಿಕಾರಿಗಳು ಅನನ್ಯಾ ಪಾಂಡೆಯನ್ನು ವಿಚಾರಣೆ ನಡೆಸುತ್ತಿದ್ದಾರೆ. ಆರ್ಯನ್ ಖಾನ್ ಜೊತೆಗಿನ ವ್ಯಾಟ್ಸಪ್ ಮಾತುಕತೆಯಲ್ಲಿ ಗಾಂಜಾ ಬಗ್ಗೆ ಪ್ರಸ್ತಾಪಿಸಲಾಗಿದ್ದು ಆರ್ಯನ್ ಖಾನ್ ಬಾಲಿವುಡ್ ನ ಪ್ರಮುಖ ಜನರಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಇದನ್ನೂ ಓದಿ: ರಮೇಶ್‌ಕುಮಾರ್‌ನ ಜೈಲಿಗೆ ಕಳುಹಿಸುತ್ತೇನೆ – ಸುಧಾಕರ್ ಶಪಥ

    ಈ ಹಿಂದೆ ಕೋರ್ಟ್‍ನಲ್ಲಿವಾದ ಮಂಡಿಸಿದ್ದ ಎನ್‍ಸಿಬಿ ಪರ ವಕೀಲರು, ಆರ್ಯನ್ ಖಾನ್ ಅಂತರಾಷ್ಟ್ರೀಯ ಡ್ರಗ್ ಪೆಡ್ಲರ್ ಜೊತೆಗೆ ಸಂಪರ್ಕ ಹೊಂದಿದ್ದಾರೆ. ಅವರಿಂದ ಮಾಧಕ ವಸ್ತುಗಳನ್ನು ಖರೀದಿಸಿ ಬಾಲಿವುಡ್ ಮಂದಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. ಸದ್ಯ ಇದೇ ಅಂಶಗಳನ್ನು ಆಧರಿಸಿ ತನಿಖೆ ನಡೆಯುತ್ತಿದೆ ಎನ್ನಲಾಗಿದೆ. ಇದನ್ನೂ ಓದಿ:  ಡ್ರಗ್ಸ್ ಕೇಸ್ – ಶಾರೂಖ್ ನಿವಾಸದ ಮೇಲೆ ಎನ್‍ಸಿಬಿ ದಾಳಿ

  • ಸ್ಪಷ್ಟನೆ ಕೊಡಲು ಸಮಯವೂ ಇಲ್ಲ, ಅನಿವಾರ್ಯತೆಯೂ ಇಲ್ಲ, ಎಲ್ಲದಕ್ಕೂ ಸಮಯ ಉತ್ತರಿಸುತ್ತದೆ: ಸಂಜನಾ ಗಲ್ರಾನಿ

    ಸ್ಪಷ್ಟನೆ ಕೊಡಲು ಸಮಯವೂ ಇಲ್ಲ, ಅನಿವಾರ್ಯತೆಯೂ ಇಲ್ಲ, ಎಲ್ಲದಕ್ಕೂ ಸಮಯ ಉತ್ತರಿಸುತ್ತದೆ: ಸಂಜನಾ ಗಲ್ರಾನಿ

    ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯಾರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಅವರ ಎಫ್‍ಎಸ್‍ಎಲ್ ವರದಿಯಲ್ಲಿ ಇಬ್ಬರೂ ಡ್ರಗ್ಸ್ ಸೇವನೆ ಮಾಡಿರುವುದು ದೃಢವಾಗಿದೆ. ಈ ವರದಿ ಬೆನ್ನಲ್ಲೇ ನನಗೆ ಈಗ ವಿವರಣೆ ಹಾಗೂ ಸ್ಪಷ್ಟನೆ ಕೊಡಲು ಸಮಯವೂ ಇಲ್ಲ ಅನಿವಾರ್ಯತೆಯೂ ಇಲ್ಲ, ಎಲ್ಲದಕ್ಕೂ ಸಮಯ ಉತ್ತರಿಸುತ್ತದೆ ಎಂದು ಸಂಜನಾ ಗಲ್ರಾನಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ.

    ವರದಿ ದೃಡಪಟ್ಟ ಹಿನ್ನೆಲೆ ಸಂಜನಾ ಸೋಶಿಯಲ್ ಮೀಡಿಯಾದಲ್ಲಿ ಸ್ಟೇಟಸ್ ಹಾಕಿಕೊಂಡಿದ್ದು, ಸ್ನೇಹಿತರೇ ನನ್ನ ಮೇಲಿನ ನಿಮ್ಮೆಲ್ಲರ ಕಾಳಜಿಗೆ ಧನ್ಯವಾದಗಳು. ಒಂದು ಕಥೆಗೆ ಯಾವಾಗಲೂ ಎರಡು ಭಾಗ ಇರುತ್ತದೆ. ಆ ಒಂದು ಭಾಗಕ್ಕೆ ನೀವೆಲ್ಲರೂ ಈಗ ಸಾಕ್ಷಿಯಾಗುತ್ತಿದ್ದೀರಿ. ಇನ್ನೊಂದು ಭಾಗ ಸಮಯ ಬಂದಾಗ ಬಹಿರಂಗವಾಗುತ್ತದೆ. ನೀವೆಲ್ಲರೂ ಗಮನಿಸಿದಂತೆ ನಾನು ತುಂಬಾ ತುಂಬಾ ಬ್ಯುಸಿ ಲೈಫ್ ಲೀಡ್ ಮಾಡುತ್ತಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ಕೇಸ್ – ಸಂಜನಾ, ರಾಗಿಣಿ ದ್ವಿವೇದಿಗೆ ಸಂಕಷ್ಟ!

    ನನ್ನ ಕೆಲಸ, ನನ್ನ ಫೌಂಡೇಶನ್ ಕೆಲಸ, ಸಿನಿಮಾ ಕೆಲಸದ ಜೊತೆ ಜೊತೆಗೆ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದೇನೆ. ನನಗೆ ಈಗ ವಿವರಣೆ ಹಾಗೂ ಸ್ಪಷ್ಟನೆ ಕೊಡಲು ಸಮಯವೂ ಇಲ್ಲ, ಅನಿವಾರ್ಯತೆಯೂ ಇಲ್ಲ, ಸಮಯ ಉತ್ತರಿಸುತ್ತದೆ ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ.

    10 ತಿಂಗಳ ಬಳಿಕ ಹೈದರಾಬಾದ್‍ನ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಸಿಕ್ಕಿದ್ದು, ತಲೆಕೂದಲು ಪರೀಕ್ಷೆಯಲ್ಲಿ ನಟಿಯರ ಮಾದಕ ದ್ರವ್ಯ ಸೇವನೆ ದೃಢವಾಗಿದೆ. ಹೈದರಾಬಾದ್ ನ ಸಿಎಸ್‍ಎಫ್‍ಎಲ್‍ನ ಲ್ಯಾಬ್ ನೀಡಿರುವ ವರದಿಯನ್ನು ಸಿಸಿಬಿ ತರಿಸಿಕೊಂಡಿದೆ. ಈ ಹಿಂದೆ ಇಬ್ಬರು ನಟಿಯರನ್ನು ಬಂಧಿಸಿದ್ದಾಗ ತಲೆ ಕೂದಲು ಸಂಗ್ರಹಿಸಿ ಡ್ರಗ್ಸ್ ಸೇವನೆ ಪತ್ತೆ ಮಾಡಲು ಕಳುಹಿಸಲಾಗಿತ್ತು. ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ತಲೆ ಕೂದಲಿನ ಮಾದರಿ ಸಂಗ್ರಹ ಮಾಡಲಾಗಿತ್ತು. ಒಮ್ಮೆ ಸರಿಯಾದ ಕ್ರಮದಲ್ಲಿ ಮಾದರಿ ಸಂಗ್ರಹ ಆಗದೇ ರಿಜೆಕ್ಟ್ ಆಗಿತ್ತು. ಬಳಿಕ ಮತ್ತೊಮ್ಮೆ ಮಾದರಿ ಸಂಗ್ರಹ ಮಾಡಿ ಕಳುಹಿಸಲಾಗಿತ್ತು. ಈಗ ವರದಿ ದೃಢ ಎಂದು ಪ್ರಯೋಗಾಲಯದಿಂದ ವರದಿ ನೀಡಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಸುರುಳಿ ಸುತ್ತಿದ್ದ 100 ರೂ. ನೋಟಿನ ಮೂಲಕ ರಾಗಿಣಿ ಡ್ರಗ್ಸ್ ಸೇವನೆ

  • ಡ್ರಗ್ ಕೇಸ್ ರೀತಿ ಸಿಡಿ ಕೇಸ್ ಹಳ್ಳ ಹಿಡಿಯುತ್ತದೆ – ಶಿವರಾಮೇಗೌಡ

    ಡ್ರಗ್ ಕೇಸ್ ರೀತಿ ಸಿಡಿ ಕೇಸ್ ಹಳ್ಳ ಹಿಡಿಯುತ್ತದೆ – ಶಿವರಾಮೇಗೌಡ

    – ಕುಮಾರಸ್ವಾಮಿ ಅಧಿಕಾರಕ್ಕೆ ಬಂದ ಮೇಲೆ ಸಿಬಿಐಗೆ ನೀಡುತ್ತೇವೆ

    ಮಂಡ್ಯ: ರಾಜ್ಯದಲ್ಲಿ ಡ್ರಗ್ ಕೇಸ್ ಯಾವ ರೀತಿ ಹಳ್ಳ ಹಿಡಿದಿದೆ ಎಂದು ನಾವೆಲ್ಲ ನೋಡಿದ್ದೇವೆ. ಅದೇ ರೀತಿ ಸಿಡಿ ಕೇಸ್ ಸಹ ಹಳ್ಳ ಹಿಡಿಯುತ್ತದೆ ಎಂದು ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ಗುಡುಗಿದ್ದಾರೆ.

    ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವರಾಮೇಗೌಡ, ಡ್ರಗ್ ಕೇಸ್‍ನಲ್ಲಿ ಬಿಲ ಅಗೆದು ಹಿಡಿಯುವ ಹಾಗೆ ಬೇಕಾದವರನ್ನು ಬಿಟ್ಟು ಬೇಡವಾದವರನ್ನು ಹಿಡಿದರು. ಅದೇ ರೀತಿಯಲ್ಲಿ ಈ ಸಿಡಿ ಕೇಸ್ ಕೂಡ ಹಳ್ಳ ಹಿಡಿಯುತ್ತದೆ. ಪೊಲೀಸರು ಸರ್ಕಾರದ ಅನ್ನ ತಿನ್ನುತ್ತಿದ್ದೇವೆ ಎಂದು ಅಂದುಕೊಂಡಿದ್ದರೆ ಇಷ್ಟೊತ್ತಿಗೆ ರಮೇಶ್ ಜಾರಕಿಹೊಳಿಯನ್ನು ಬಂಧಿಸಬೇಕಿತ್ತು. ಆದರೆ ಇಲ್ಲಿಯವರಗೆ ಬಂಧಿಸುವ ಕೆಲಸ ಮಾತ್ರ ಆಗಿಲ್ಲ. ಮುಖ್ಯಮಂತ್ರಿಗಳು ಅತ್ಯಾಚಾರ ಆರೋಪಿಯನ್ನು ಉಪಚುನಾವಣೆಯ ಪ್ರಚಾರಕ್ಕೆ ಆಹ್ವಾನ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಈ ಕೇಸ್‍ಗೆ ನ್ಯಾಯವಾದರೂ ಹೇಗೆ ಸಿಗುತ್ತದೆ ಎಂದು ಸಿಎಂ ವಿರುದ್ಧ ಕಿಡಿಕಾರಿದರು.

    ಒಂದು ವೇಳೆ ಎಸ್‍ಐಟಿ ಅಧಿಕಾರಿಗಳು ಈ ಕೇಸ್‍ನ್ನು ಹಳ್ಳ ಹಿಡಿಸಿದರೆ, ನಾವು ಕೋರ್ಟ್‍ನಲ್ಲಿ ಈ ಬಗ್ಗೆ ದೂರು ದಾಖಲು ಮಾಡಿ ಸಿಬಿಐ ತನಿಖೆ ಆಗುವಂತೆ ಹೋರಾಟ ಮಾಡುತ್ತೇವೆ. ಮುಂದೆ ಕುಮಾರಸ್ವಾಮಿ ಅವರ ಸರ್ಕಾರ ಬಂದಾಗ ಈ ಕೇಸ್‍ನ್ನು ಸಿಬಿಐನಿಂದ ತನಿಖೆ ಮಾಡಿಸಿ ಸಂತ್ರಸ್ತೆಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ. ಅತ್ಯಾಚಾರಿ ಆರೋಪಿಯಾಗಿರುವ ರಮೇಶ್ ಜಾರಕಿಹೊಳಿ ತಲೆ ತಗ್ಗಿಸಿ ಇರಬೇಕಾಗಿತ್ತು. ಆದರೆ ಅವರು ಸರ್ಕಾರವನ್ನು ಬೀಳಿಸುತ್ತೇನೆ ಎಂದು ಬೆದರಿಸುತ್ತಿದ್ದಾರೆ. ಹೀಗೆ ಇರುವಾಗ ಈ ಕೇಸ್‍ನಲ್ಲಿ ಜಾರಕಿಹೊಳಿಗೆ ಕ್ಲೀನ್ ಚೀಟ್ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅಭಿಪ್ರಯಾಪಟ್ಟರು.

  • ಪೋಕರ್ ವೆಬ್‍ಸೈಟ್ ಹ್ಯಾಕ್ – ಕೋಟ್ಯಂತರ ಹಣ ಮಾಡಿದ್ದ ಕುಖ್ಯಾತ ಹ್ಯಾಕರ್ ಅರೆಸ್ಟ್

    ಪೋಕರ್ ವೆಬ್‍ಸೈಟ್ ಹ್ಯಾಕ್ – ಕೋಟ್ಯಂತರ ಹಣ ಮಾಡಿದ್ದ ಕುಖ್ಯಾತ ಹ್ಯಾಕರ್ ಅರೆಸ್ಟ್

    – ಹ್ಯಾಕ್ ಮಾಡಿ ಎದುರಾಳಿ ಆಟಗಾರರ ಕಾರ್ಡ್ ತಿಳಿಯುತ್ತಿದ್ದ
    – ಬೇಕಾದ ವ್ಯಕ್ತಿಗಳಿಗೆ ಸರ್ಕಾರಿ ಟೆಂಡರ್
    – ಚೀನಾ ಪೋಕರ್ ವೆಬ್‍ಸೈಟ್ ಮೇಲೆ ಕಣ್ಣು
    – ಸಿಸಿಬಿ ಪೊಲೀಸರಿಂದ ಶ್ರೀಕೃಷ್ಣ ಅರೆಸ್ಟ್

    ಬೆಂಗಳೂರು: ಸರ್ಕಾರದ ಮತ್ತು ಅಂತಾರಾಷ್ಟ್ರೀಯ ಮಟ್ಟದ ವೆಬ್‍ಸೈಟ್‍ಗಳನ್ನು ಹ್ಯಾಕ್ ಮಾಡಿ ಹಣ ಮಾಡುತ್ತಿದ್ದ ಕುಖ್ಯಾತ ಹ್ಯಾಕರ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ಬೆಂಗಳೂರಿನ ಜಯನಗರದ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ(25) ಬಂಧಿತ ಆರೋಪಿ. ಮಂಗಳವಾರ ಈತನನ್ನು ಬಂಧಿಸಿದ್ದು ಸುದ್ದಿಗೋಷ್ಠಿ ನಡೆಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್‍ ಪಂತ್‌ ಈತನ ಬಗ್ಗೆ ವಿವರಣೆ ನೀಡಿದ್ದಾರೆ.

    ಶ್ರೀಕೃಷ್ಣ ಬೆಂಗಳೂರಿನ ನಿವಾಸಿಯಾಗಿದ್ದು, 2014 ರಿಂದ 2017ರವರೆಗೆ ಈತ ನೆದರ್‌ಲ್ಯಾಂಡ್‌ ಆಮ್‌ಸ್ಟರ್‌ಡ್ಯಾಮ್ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‍ಸಿ ಪದವಿ ಪಡೆದ ಬಳಿಕ ವೆಬ್‍ಸೈಟ್ ಹ್ಯಾಕ್ ಮಾಡಲು ಆರಂಭಿಸಿದ್ದ. ಆರಂಭದಲ್ಲಿ ಸಣ್ಣ ಪಟ್ಟ ವೆಬ್‍ಸೈಟ್‍ಗಳನ್ನು ಹ್ಯಾಕ್ ಮಾಡಿ ಅನುಭವ ಪಡೆದ ಬಳಿಕ ದೊಡ್ಡ ವೆಬ್‍ಸೈಟ್‍ಗಳನ್ನು ಹ್ಯಾಕ್ ಮಾಡಿ ಇದನ್ನೇ ಉದ್ಯೋಗ ಮಾಡಿಕೊಂಡಿದ್ದ.

    ಹಣ ಹೇಗೆ?
    ಹ್ಯಾಕಿಂಗ್‍ನಲ್ಲಿ ಎಷ್ಟು ತಜ್ಞ ಆಗಿದ್ದ ಪೋಕರ್ ಗೇಮ್ ವೇಳೆ ಉಳಿದ ಆಟಗಾರರ ಬಳಿ ಯಾವ ಕಾರ್ಡ್ ಇದೆ ಎಂಬುದನ್ನು ಮೊದಲೇ ತಿಳಿದುಕೊಳ್ಳುತ್ತಿದ್ದ. ಈ ಮೂಲಕ ತನಗೆ ಬೇಕಾದಂತೆ ಕಾರ್ಡ್ ಹಾಕಿ ಆಟವನ್ನು ಆಡಿ ದುಡ್ಡು ಮಾಡುತ್ತಿದ್ದ. ಈ ಸಂಬಂಧ 2018ರಲ್ಲಿ ಬೆಂಗಳೂರಿನ ಸೈಬರ್ ಕ್ರೈಂ ಠಾಣೆಯನ್ನು ಅನಾಮಿಕ ವ್ಯಕ್ತಿಗಳ ವಿರುದ್ಧ ಪೋಕರ್‌ ಕಂಪನಿಯೊಂದು ದೂರು ನೀಡಿ ಪ್ರಕರಣ ದಾಖಲಾಗಿತ್ತು. ಇಷ್ಟೇ ಅಲ್ಲದೇ ಆನ್‍ಲೈನ್ ಗೇಮಿಂಗ್ ಆಪ್‍ಗಳನ್ನೇ ಹ್ಯಾಕ್ ಮಾಡಿ ಕೊನೆಗೆ ಡೆವಲಪರ್‌ಗಳ ಜೊತೆ ಸಂವಹನ ನಡೆಸಿ ಬೇಕಾದಷ್ಟು ಹಣವನ್ನು ಪಡೆದುಕೊಳ್ಳುತ್ತಿದ್ದ. ಸದ್ಯದ ಪ್ರಾಥಮಿಕ ತನಿಖೆಯ ವೇಳೆ ಹ್ಯಾಕ್ ಮಾಡಿ 350 ಕೋಟಿ ರೂ. ಹಣವನ್ನು ಶ್ರೀಕೃಷ್ಣ ಪಡೆದಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.  ಇದನ್ನೂ ಓದಿ: ಪ್ಲಾಸ್ಟಿಕ್ ಕುರ್ಚಿ ಒಡೆದಿದ್ದಕ್ಕೆ ವ್ಯಕ್ತಿಗೆ ಚಾಕು ಇರಿದ ಸಹೋದರರು

    ಟೆಂಡರ್ ಹ್ಯಾಕ್ ಹೇಗೆ?
    ಸರ್ಕಾರಗಳು ಟೆಂಡರ್ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಬೇಕು ಎನ್ನುವ ಕಾರಣಕ್ಕಾಗಿ ಆನ್‍ಲೈನ್‍ನಲ್ಲಿ ಟೆಂಡರ್ ಕರೆಯುವ ವ್ಯವಸ್ಥೆ ಮಾಡಿಕೊಂಡಿವೆ. ಈತ ಈ ಟೆಂಡರ್ ನಡೆಯುವ ವೆಬ್‍ಸೈಟ್‍ಗಳನ್ನೇ ಹ್ಯಾಕ್ ಮಾಡುತ್ತಿದ್ದ. ಟೆಂಡರ್ ವೇಳೆ ಬೇಕಾದ ವ್ಯಕ್ತಿಗಳಿಗೆ ಟೆಂಡರ್ ಸಿಗುವಂತೆ ಮಾಡುತ್ತಿದ್ದ. ಹೀಗಾಗಿ ಬಹಳಷ್ಟು ದೊಡ್ಡ ವ್ಯಕ್ತಿಗಳ ಈತನ ಹಿಂದೆ ಇರುವ ಅನುಮಾನ ವ್ಯಕ್ತವಾಗಿದೆ.

    ಬಿಟ್‍ಕಾಯಿನ್ ಬಳಕೆ:
    ವೆಬ್‍ಸೈಟ್‍ಗಳನ್ನು ಹ್ಯಾಕ್ ಮಾಡಿದ ಬಳಿಕ ಆತ ಬಿಟ್‍ಕಾಯಿನ್ ಬಳಸಿ ಹಣವನ್ನು ಪಡೆಯುತ್ತಿದ್ದ. ಈ ಎಲ್ಲ ಕೆಲಸಕ್ಕೆ ಡಾರ್ಕ್ ವೆಬ್ ಬಳಕೆ ಮಾಡುತ್ತಿದ್ದ. ಡಾರ್ಕ್ ವೆಬ್ ಬಳಕೆ ಮಾಡುತ್ತಿದ್ದ ಕಾರಣ ಈತನ ಮಾಹಿತಿಗಳು ಸಿಗುತ್ತಿರಲಿಲ್ಲ. ಬಿಟ್ ಕಾಯಿನ್ ಮೂಲಕ ಡ್ರಗ್ಸ್ ತರಿಸಿಕೊಂಡು ಬೇಕಾದ ವ್ಯಕ್ತಿಗಳಿಗೆ ನೀಡುತ್ತಿದ್ದ.

     

    ಪತ್ತೆಯಾಗಿದ್ದು ಹೇಗೆ?
    ಹೆಚ್ಚು ಸುದ್ದಿಯಾಗುತ್ತಿರುವ ಡ್ರಗ್ಸ್ ಪ್ರಕರಣವನ್ನು ಸಿಸಿಬಿ ಮತ್ತು ಎನ್‍ಸಿಬಿ ತನಿಖೆ ನಡೆಸುತ್ತಿದೆ. ಈ ತನಿಖೆಯಿಂದಾಗಿ ಕಳೆದ ವಾರ ಸಿಸಿಬಿ ಪೊಲೀಸರು ಸದಾಶಿವ ನಗರದಿಂದ ಸಂಜಯ್, ಸುನೀಶ್ ಹೆಗ್ಡೆ, ಹೇಮಂತ್ ಅವರನ್ನು ಬಂಧಿಸಿದ್ದರು. ಬಂಧಿತರ ವಿಚಾರಣೆಯ ಸಮಯದಲ್ಲಿ ಶ್ರೀಕೃಷ್ಣನನ್ನು ಬಳಸಿಕೊಂಡು ಡಾರ್ಕ್ ವೆಬ್ ಮೂಲಕ ಬಿಟ್ ಕಾಯಿನ್ ಬಳಸಿ ಡ್ರಗ್ಸ್ ತರಿಸುತ್ತಿದ್ದ ವಿವರವನ್ನು ತಿಳಿಸಿದ್ದರು. ಈ ಮಾಹಿತಿಯ ಹಿನ್ನೆಲೆಯಲ್ಲಿ ಈಗ ಬಂಧನವಾಗಿದೆ.

    ಜಾಮೀನು ತರುತ್ತಿದ್ದ:
    ಈತನ ವಿರುದ್ಧ ಈಗಾಗಲೇ ಪ್ರಕರಣಗಳು ದಾಖಲಾಗಿವೆ. ಅಷ್ಟೇ ಅಲ್ಲದೇ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಬಂಧನ ಮಾಡದ ಕಾರಣ ಈತ ಈ ಕೃತ್ಯ ಎಸಗಿದ್ದು ಇದಕ್ಕೆ ಪೊಲೀಸರ ಲೋಪವೇ ಕಾರಣ ಎಂಬ ಪ್ರಶ್ನೆಗೆ ಕಮಲ್ ಪಂತ್, ಬಂಧನಕ್ಕೂ ಮೊದಲೇ ಶ್ರೀಕೃಷ್ಣ ನ್ಯಾಯಾಲಯದಿಂದ ಜಾಮೀನು ತರುತ್ತಿದ್ದ. ಹೀಗಾಗಿ ಈತನ ಬಂಧನ ಸಾಧ್ಯವಾಗುತ್ತಿರಲಿಲ್ಲ. ಸದ್ಯಕ್ಕೆ ಈತನ ಮೇಲೆ ಮೂರು ಪ್ರಕರಣಗಳಿವೆ. ಮುಂದೆ ತನಿಖೆ ಮಾಡುತ್ತೇವೆ. ಈತ ಅತಿ ದೊಡ್ಡ ಹ್ಯಾಕರ್ ಎಂಬ ಕಾರಣಕ್ಕೆ ನಾನು ಸುದ್ದಿಗೋಷ್ಠಿ ನಡೆಸಿ ಈ ಮಾಹಿತಿಯನ್ನು ನೀಡಿದ್ದೇನೆ. ಇಲ್ಲದಿದ್ದರೆ ಈತನ ಬಗ್ಗೆ ಸುದ್ದಿಗೋಷ್ಠಿ ನಡೆಸುವ ಅಗತ್ಯವೇ ಇರಲಿಲ್ಲ. ಈಗ ಈತನನ್ನು ಬಂಧಿಸಿದ್ದಕ್ಕೆ ಸಿಸಿಬಿ ಪೊಲೀಸರನ್ನು ಅಭಿನಂದಿಸಬೇಕು. ಮುಂದಿನ ದಿನಗಳಲ್ಲಿ ಮತ್ತಷ್ಟು ವಿಚಾರಗಳು ಬೆಳಕಿಗೆ ಬರಲಿದೆ. ಎಲ್ಲವನ್ನು ಸಮಗ್ರವಾಗಿ ತನಿಖೆ ನಡೆಸುತ್ತೇವೆ ಎಂದು ಉತ್ತರಿಸಿದರು.

    ಚೀನಾ ಸೈಟ್ ಮೇಲೆ ಕಣ್ಣು:
    ಪೋಕರ್ ಅಪ್ಲಿಕೇಶನ್‍ಗಳನ್ನು ಹ್ಯಾಕ್ ಮಾಡಿದ ಬಳಿಕ ಶ್ರೀಕೃಷ್ಣ ಚೀನಾದ ಗುಡ್ ಗೇಮ್ ಪೋಕರ್ ವೆಬ್‍ಸೈಟ್ ಹ್ಯಾಕ್ ಮಾಡಲು ಪ್ರಯತ್ನ ನಡೆಸುತ್ತಿದ್ದ. ಕಳೆದ ಜುಲೈ ತಿಂಗಳಿನಿಂದ ಈತ ನಿರಂತರ ಪ್ರಯತ್ನ ನಡೆಸುತ್ತಿದ್ದ. ಈತನ ಎಲ್ಲ ಖರ್ಚುಗಳನ್ನು ಬೇರೆಯವರು ನೋಡಿಕೊಳ್ಳುತ್ತಿದ್ದರು. ಚಿಕ್ಕಮಗಳೂರು, ಕಬಿನಿ, ಗೋವಾಗಳಿಗೆ ಈತ ತೆರಳಿದ್ದ. ಹೋದ ಕಡೆ ಎಲ್ಲ ಹ್ಯಾಕಿಂಗ್ ಮಾಡುತ್ತಿದ್ದ. ಒಂದು ವೇಳೆ ಈತ ಚೀನಾದ ವೆಬ್‍ಸೈಟ್ ಹ್ಯಾಕ್ ಮಾಡಿದ್ದರೆ ಭಾರೀ ಹಣವನ್ನು ಗಳಿಸುವ ಸಾಧ್ಯತೆ ಇತ್ತು.

    ಪ್ರಭಾವಿಗಳ ನಂಟು:
    ಯುಬಿ ಸಿಟಿಯಲ್ಲಿ ನಡೆದ ಗಲಾಟೆಯ ಸಂದರ್ಭದಲ್ಲೂ ಈತನ ಹೆಸರು ಕೇಳಿ ಬಂದಿತ್ತು. ಆದರೆ ಪ್ರಭಾವಿ ವ್ಯಕ್ತಿಗಳಿಂದಾಗಿ ಈತ ಪಾರಾಗಿದ್ದ ಎಂಬ ಅನುಮಾನ ವ್ಯಕ್ತವಾಗಿದೆ. ಶ್ರೀಕೃಷ್ಣ ಹೋದ ಕಡೆಯೆಲ್ಲ ಫೈವ್ ಸ್ಟಾರ್ ಹೋಟೆಲ್‍ಗಳಲ್ಲಿ ತಂಗುತ್ತಿದ್ದು ಖರ್ಚುಗಳನ್ನು ಬೇರೆ ವ್ಯಕ್ತಿಗಳು ನೋಡಿಕೊಳ್ಳುತ್ತಿದ್ದರು. ಹೀಗಾಗಿ ಈತನನ್ನು ಬಳಸಿಕೊಂಡು ರಾಜಕೀಯದ ಪ್ರಭಾವಿ ವ್ಯಕ್ತಿಗಳು ಹ್ಯಾಕಿಂಗ್ ನಡೆಸುತ್ತಿರಬಹುದು ಎಂಬ ಅನುಮಾನ ಕೇಳಿ ಬಂದಿದ್ದು, ಈ ನಿಟ್ಟಿನಲ್ಲೂ ತನಿಖೆ ನಡೆಯುತ್ತಿದೆ.

  • ದೀಪಿಕಾರನ್ನು ವಿಚಾರಣೆಗೈದ ಎನ್‌ಸಿಬಿ ಅಧಿಕಾರಿಗೆ ಕೊರೊನಾ

    ದೀಪಿಕಾರನ್ನು ವಿಚಾರಣೆಗೈದ ಎನ್‌ಸಿಬಿ ಅಧಿಕಾರಿಗೆ ಕೊರೊನಾ

    ನವದೆಹಲಿ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರನ್ನು ವಿಚಾರಣೆ ನಡೆಸಿದ್ದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯುರೋ(ಎನ್‍ಸಿಬಿ) ಡೆಪ್ಯೂಟಿ ಡೈರೆಕ್ಟರ್ ಕೆಪಿಎಸ್ ಮಲ್ಹೋತ್ರಾ ಅವರಿಗೆ ಕೊರೊನಾ ಪಾಸಿಟಿವ್‌ ದೃಢಪಟ್ಟಿದೆ.

    ಜೂನ್‌ನಲ್ಲಿ ಮುಂಬೈನ ಬಾಂದ್ರಾದಲ್ಲಿರುವ ಸುಶಾಂತ್‌ ಸಿಂಗ್‌ ಸಾವಿನ ನಂತರ ಬಾಲಿವುಡ್‌ ಡ್ರಗ್ಸ್‌ ದಂಧೆಯ ಬಗ್ಗೆ ಎನ್‌ಸಿಬಿ ತನಿಖೆ ನಡೆಸುತ್ತಿದೆ. ನಟಿಯರಾದ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್ ಮತ್ತು ರಾಕುಲ್ ಪ್ರೀತ್ ಸಿಂಗ್ ಅವರನ್ನು ಎನ್‌ಸಿಬಿ ಪ್ರಶ್ನಿಸಿದ್ದು ಶೀಘ್ರದಲ್ಲೇ ಮತ್ತಷ್ಟು ಜನರಿಗೆ ನೋಟಿಸ್‌ ನೀಡುವ ಸಾಧ್ಯತೆಯಿದೆ.

    ವರದಿಗಳ ಪ್ರಕಾರ ಡ್ರಗ್‌ ಪೆಡ್ಲರ್‌ ಮತ್ತು ದೀಪಿಕಾ, ಕಪೂರ್‌, ಖಾನ್‌ ಮಧ್ಯೆ ಯಾವುದೇ ಸಂಪರ್ಕ ಕಂಡು ಬಂದಿಲ್ಲ. ಎನ್‌ಸಿಬಿ ಪ್ರಶ್ನೆಯ ವೇಳೆ ಮೂವರು ನಾವು ಡ್ರಗ್ಸ್‌ ಸೇವಿಸಿಲ್ಲ ಎಂದು ತಿಳಿಸಿದ್ದಾರೆ. ಎನ್‌ಸಿಬಿ ಮೂಲಗಳ ಪ್ರಕಾರ, ತನಿಖೆಯ ಸಮಯದಲ್ಲಿ ಯಾವುದೇ ಬಲವಾದ ಪುರಾವೆಗಳು ಕಂಡುಬಂದಲ್ಲಿ ಮಾತ್ರ ಅವರನ್ನು ಮತ್ತೆ ವಿಚಾರಣೆಗೆ ಕರೆಸಲಾಗುತ್ತದೆ.

    ಸುಶಾಂತ್‌ ಸಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಾ ಚಕ್ರವರ್ತಿ, ಆಕೆಯ ಸಹೋದರ ಶೋಯಿಕ್, ರಜಪೂತ್‌ ಮಾಜಿ ಮ್ಯಾನೇಜರ್ ಸ್ಯಾಮ್ಯುಯೆಲ್ ಮಿರಾಂಡಾ ಅವರನ್ನು ಬಂಧಿಸಿದ್ದಾರೆ.

  • ಈಗಾಗ್ಲೇ ಸಾಕಷ್ಟು ವಿಚಾರಣೆ ನಡೆಸಿದ್ದೀರಿ, ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿ – ಸ್ವಾಮೀಜಿಯಿಂದ ಒತ್ತಡ

    ಈಗಾಗ್ಲೇ ಸಾಕಷ್ಟು ವಿಚಾರಣೆ ನಡೆಸಿದ್ದೀರಿ, ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿ – ಸ್ವಾಮೀಜಿಯಿಂದ ಒತ್ತಡ

    ಬೆಂಗಳೂರು: ಡ್ರಗ್ಸ್‌ ಪ್ರಕರಣದಲ್ಲಿ ದಿಗಂತ್- ಐಂದ್ರಿತಾ ರಕ್ಷಣೆಗೆ ಪ್ರಭಾವಿ ಸ್ವಾಮೀಜಿಯೊಬ್ಬರು ನಿಂತಿದ್ದಾರೆ ಎಂಬ ಸುದ್ದಿ ಈಗ ಮುನ್ನೆಲೆಗೆ ಬಂದಿದೆ.

    ಬುಧವಾರ ವಿಚಾರಣೆ ಸಂದರ್ಭದಲ್ಲಿ ರಾಜಕಾರಣಿಗಳಿಗೆ ಕರೆ ಮಾಡಿದ್ದ ಪ್ರಭಾವಿ ಮಠಾಧೀಶರೊಬ್ಬರು, ದಿಗಂತ್-ಐಂದ್ರಿತಾ ನಮ್ಮ ಮಠದ ಭಕ್ತರು. ಅವರನ್ನು ಬಂಧಿಸಬೇಡಿ, ಈಗಾಗಲೇ ಸಾಕಷ್ಟು ವಿಚಾರಣೆ ನಡೆಸಿದ್ದೀರಿ. ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿ ಎಂದು ಒತ್ತಡ ಹೇರಿದ ವಿಚಾರ ಈಗ ರಾಜಕೀಯ ಮತ್ತು ಪೊಲೀಸ್‌ ವಲಯದಿಂದ ಕೇಳಿ ಬಂದಿದೆ.

    ಕಾಕತಾಳೀಯ ಎಂಬಂತೆ ದಿಗಂತ್-ಐಂದ್ರಿತಾರನ್ನು ಕೇವಲ ಮೂರೂವರೆ ಗಂಟೆ ಕಾಲ ವಿಚಾರಣೆಗೆ ಒಳಪಡಿಸಿದ ಸಿಸಿಬಿ ಪೊಲೀಸರು, ಇಬ್ಬರನ್ನು ಬಿಟ್ಟು ಕಳಿಸಿದ್ದಾರೆ. ಸೋಮವಾರ ಮನಸಾರೆ ದಂಪತಿಯ ಮೂರು ಮೊಬೈಲ್‍ಗಳ ರಿಟ್ರೀವ್‌ ವರದಿ ಬರುವ ಸಾಧ್ಯತೆ ಇದ್ದು, ನಂತರ ಸಿಸಿಬಿ ಇಬ್ಬರನ್ನು ಮತ್ತೊಮ್ಮೆ ವಿಚಾರಣೆಗೆ ಒಳಪಡಿಸುವ ಸಂಭವ ಇದೆ. ಇದನ್ನೂ ಓದಿ: ನಾವು ಏನೂ ಮಾತಾಡುವ ಹಾಗಿಲ್ಲ: ಐಂದ್ರಿತಾ ರೇ

    ಡ್ರಗ್ಸ್ ಪ್ರಕರಣವನ್ನು ಮುಚ್ಚಿ ಹಾಕಿಲು ಪ್ರಭಾವಿಗಳು ಪ್ರಯತ್ನ ಮಾಡುತ್ತಿರುವ ಸುದ್ದಿ ಹೊಸದೇನು ಅಲ್ಲ. 14 ದಿನಗಳ ಹಿಂದೆ ನಟಿ ರಾಗಿಣಿ ವಿಚಾರಣೆ ನಡೆಸಿದ್ದ ಸಂದರ್ಭದಲ್ಲಿ ಪ್ರಭಾವಿ ರಾಜಕಾರಣಿಯೊಬ್ಬರು ಫೋನ್ ಮಾಡಿ, ಎಷ್ಟು ವಿಚಾರಣೆ ಮಾಡುತ್ತೀರಿ. ಬಿಟ್ಟು ಕಳುಹಿಸಿ ಅಂತಾ ಸಿಸಿಬಿ ಅಧಿಕಾರಿಗಳ ಮೇಲೆ ಒತ್ತಡ ತಂದಿದ್ದರು.

  • ಸಂಜನಾಗೆ 2 ದಿನ, ಇಬ್ಬರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ಯಾಕೆ?

    ಸಂಜನಾಗೆ 2 ದಿನ, ಇಬ್ಬರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ಯಾಕೆ?

    ಬೆಂಗಳೂರು: ಡ್ರಗ್ಸ್ ಕೇಸಲ್ಲಿ ಸ್ಯಾಂಡಲ್‍ವುಡ್‍ನ ಮತ್ತೊಬ್ಬ ನಟಿ ಜೈಲು ಸೇರಿದ್ದಾರೆ. ರಾಗಿಣಿ ಪರಪ್ಪನ ಅಗ್ರಹಾರ ಸೇರಿದ ಬೆನ್ನಲ್ಲೇ, ಇಂದು ಪ್ರಕರಣದ 14ನೇ ಆರೋಪಿಯಾಗಿರುವ ನಟಿ ಸಂಜನಾ ಕೂಡ ಜೈಲು ಪಾಲಾಗಿದ್ದಾರೆ.

    ಸಿಸಿಬಿ ಕಸ್ಟಡಿ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಸಂಜನಾ, ವೀರೇನ್ ಖನ್ನಾ ಮತ್ತು ರವಿಶಂಕರ್‌ನನ್ನು 1ನೇ ಎಸಿಎಂಎಂ ಕೋರ್ಟ್ ಮುಂದೆ ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಿದರು. ವಿಚಾರಣೆ ನಡೆಸಿದ ಕೋರ್ಟ್ ನಟಿ ಸಂಜನಾರನ್ನು 2 ದಿನ, ವೀರೇನ್ ಖನ್ನಾ ಮತ್ತು ರವಿಶಂಕರ್‌ಗೆ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿತು. ಜೊತೆಗೆ ಸಂಜನಾ ಪ್ರಕರಣವನ್ನು 2 ದಿನಗಳ ಒಳಗಾಗಿ 33ನೇ ಸಿಸಿಹೆಚ್ ಕೋರ್ಟ್‍ಗೆ ವರ್ಗಾಯಿಸುವಂತೆ ಸೂಚನೆ ನೀಡಿತು.

    ಇಂದಿನ ವಿಚಾರಣೆಯಲ್ಲಿ ಸಂಜನಾ ಪರ ವಕೀಲ ಶ್ರೀನಿವಾಸ ರಾವ್‌ ಮಾತ್ರ ಹಾಜರಾಗಿದ್ದರು. ಪ್ರಬಲ ವಾದ ಮಂಡಿಸಿದ ಶ್ರೀನಿವಾಸ ರಾವ್‌, ನಮ್ಮ ಕಕ್ಷಿದಾರರಿಗೆ ಜಾಮೀನು ತಪ್ಪಿಸಲು ಬೇಕೆಂದೆ ಆರೋಪಿಗಳನ್ನು ಸಿಸಿಬಿ ಈ ಕೋರ್ಟ್‌ಗೆ ಹಾಜರುಪಡಿಸಿದೆ. ನಮಗೆ ಜಾಮೀನು ಕೇಳಲು ಇಲ್ಲಿ ಅವಕಾಶವಿತ್ತು. ಆದ್ರೆ ಈ ಕೋರ್ಟ್‍ಗೆ ಜಾಮೀನು ನೀಡುವ ಅಧಿಕಾರವಿಲ್ಲ. ಸಿಸಿಬಿ ನಮ್ಮ ಕಕ್ಷಿದಾರರ ಹಕ್ಕುಗಳನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡ್ತಿದೆ ಎಂದು ಆಪಾದಿಸಿದರು.

    ವಾದ ಆಲಿಸಿದ ನ್ಯಾಯಾಧೀಶರು, ಕೇವಲ ಎರಡು ದಿನಗಳ ಮಟ್ಟಿಗೆ ನಟಿ ಸಂಜನಾರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದರು. ಹೀಗಾಗಿ, ಸೆಪ್ಟೆಂಬರ್ 18ರವರೆಗೆ ಸಂಜನಾ ಜೈಲಲ್ಲಿ ಇರಬೇಕಾಗುತ್ತದೆ.

     

    ಕೋರ್ಟ್ ಆದೇಶದ ಬೆನ್ನಲ್ಲೇ ಸಾಂತ್ವನ ಕೇಂದ್ರದಲ್ಲಿ ಸಂಜನಾ ಕಣ್ಣೀರಿಟ್ಟರು. ಸಂಜೆ 7 ಗಂಟೆ ವೇಳೆಗೆ ನಟಿ ಸಂಜನಾ ಸೇರಿ ಮೂವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಸಿಸಿಬಿ ಪೊಲೀಸರು ಶಿಫ್ಟ್ ಮಾಡಿದರು. ಇದರೊಂದಿಗೆ ಡ್ರಗ್ಸ್ ಪ್ರಕರಣದಲ್ಲಿ 8 ಆರೋಪಿಗಳು ಜೈಲು ಸೇರಿದಂತಾಗಿದೆ.

    ಸಂಜನಾ ಪರ ವಕೀಲರ ವಾದ ಏನಾಗಿತ್ತು?
    ಈ ಪ್ರಕರಣದ ವಿಚಾರಣೆ ಎನ್‍ಡಿಪಿಎಸ್ ಕೋರ್ಟ್‍ನಲ್ಲಿ ನಡೆಯಬೇಕಿತ್ತು. ಎನ್‍ಡಿಪಿಎಸ್ ಕೋರ್ಟ್‍ನಲ್ಲಿ ನಮಗೆ ಜಾಮೀನು ಕೇಳಲು ಅವಕಾಶವಿತ್ತು. ಆದರೆ ಸಿಸಿಬಿ ಬೇಕಂತಲೇ ಕಕ್ಷಿದಾರರನ್ನು ಈ ಕೋರ್ಟ್‍ಗೆ ಹಾಜರುಪಡಿಸಿದೆ. ಈ ಕೋರ್ಟ್‍ಗೆ ಜಾಮೀನು ನೀಡಲು ಅಧಿಕಾರವಿಲ್ಲ. ಇದು ಗೊತ್ತಿದ್ದೇ ಸಿಸಿಬಿ ಆರೋಪಿಗಳನ್ನು ಇಲ್ಲಿಗೆ ಹಾಜರುಪಡಿಸಿದೆ. ನಮ್ಮ ಕಕ್ಷಿದಾರರಿಗೆ ಜಾಮೀನು ಸಿಗದಂತೆ ಮಾಡಲು ಸಿಸಿಬಿ ಹೀಗೆ ಮಾಡಿದೆ. ಇದನ್ನೂ ಓದಿ: ವಿಚಾರಣೆ ಮುಗಿಸಿ ಹೊರಟ ದಿಗಂತ್, ಐಂದ್ರಿತಾಗೆ ಮುಗಿದಿಲ್ಲ ಸಂಕಷ್ಟ

    ನಮ್ಮ ಕಕ್ಷಿದಾರರ ಹಕ್ಕುಗಳನ್ನು ಸಿಸಿಬಿ ಕಿತ್ತುಕೊಳ್ಳುವ ಪ್ರಯತ್ನ ನಡೆಸಿದೆ. ಇಲ್ಲಿ ಸಿಸಿಬಿ ಲೋಪ ಎಸಗಿರುವುದು ಸ್ಪಷ್ಟವಾಗಿದೆ. ಡ್ರಗ್ಸ್ ಕೇಸ್‍ನಲ್ಲಿ ಸಂಜನಾ ಪಾತ್ರ ಏನು ಎನ್ನುವುದನ್ನು ಸಿಸಿಬಿ ಇಲ್ಲಿಯವರೆಗೆ ತಿಳಿಸಿಲ್ಲ. ಯಾವ ಉದ್ದೇಶಕ್ಕೆ ಸಂಜನಾರನ್ನು ವಶಕ್ಕೆ ಪಡೆಯಲಾಗಿತ್ತು ಎಂಬುದನ್ನು ತಿಳಿಸಿಲ್ಲ. ಯಾವುದೇ ಕಾರಣ ಇಲ್ಲದೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವುದು ಎಷ್ಟು ಸರಿ? ಸಿಸಿಬಿ ಮಾಡಿರುವ ತಪ್ಪಿಗೆ ಕಕ್ಷಿದಾರರಿಗೆ ತೊಂದರೆ ಆಗಬಾರದು ಎಂದು ಶ್ರೀನಿವಾಸ ರಾವ್‌ ಪ್ರಬಲ ವಾದ ಮಂಡಿಸಿದರು.

  • ನಶೆ‌ ನಟಿಯರು ಅರೆಸ್ಟ್‌ – ಪಾರ್ಟಿಯಲ್ಲಿ ಪಾಲ್ಗೊಳ್ಳುತ್ತಿದ್ದ ನಟ – ನಟಿಯರು ಸೈಲೆಂಟ್‌

    ನಶೆ‌ ನಟಿಯರು ಅರೆಸ್ಟ್‌ – ಪಾರ್ಟಿಯಲ್ಲಿ ಪಾಲ್ಗೊಳ್ಳುತ್ತಿದ್ದ ನಟ – ನಟಿಯರು ಸೈಲೆಂಟ್‌

    ಬೆಂಗಳೂರು: ನಟಿಯರಾದ ರಾಗಿಣಿ, ಸಂಜನಾ ಬಂಧನದ ಬಳಿಕ ಇವರ ಜೊತೆ ಸದಾ ಪಾರ್ಟಿಯಲ್ಲಿ ಭಾಗವಹಿಸುತ್ತಿದ್ದ ಯುವ ನಟ, ನಟಿಯರು ಮೌನಕ್ಕೆ ಶರಣಾಗಿದ್ದಾರೆ.

    ಹೌದು. ಸ್ಯಾಂಡಲ್‌ವುಡ್‌ನ ಮೂರನೇ ತಲೆಮಾರಿನ ನಟ, ನಟಿಯರು ರಾಗಿಣಿ, ಸಂಜನಾ ಬಂಧನ ಬಳಿಕ ಡ್ರಗ್ಸ್‌ ವಿಚಾರಕ್ಕೆ ಸಂಬಂಧಿಸಿದಂತೆ ಅಂತರ ಕಾಯ್ದುಕೊಂಡಿದ್ದಾರೆ. ವಿಶೇಷ ಏನೆಂದರೆ ಇಬ್ಬರು ನಟಿಯರ ಜೊತೆ ಮೂರನೇ ತಲೆಮಾರಿನ ಹಲವು ನಟ, ನಟಿಯರಿಗೆ ಹೆಚ್ಚಿನ ಸಂಪರ್ಕವಿತ್ತು. ಅವರೆಲ್ಲರೂ ಈಗ ಡ್ರಗ್ಸ್‌ ಮಾಫಿಯಾಯದಲ್ಲಿ ನಮ್ಮ ಹೆಸರು ಬರಬಹುದು ಎಂಬ ಭಯಕ್ಕೆ ಬಿದ್ದು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.

    ಈ ಪ್ರಕರಣ ಬಯಲಿಗೆ ಬರುವ ಮೊದಲು ಇವರೆಲ್ಲ ಪಾರ್ಟಿಯಲ್ಲಿ ಭಾಗವಹಿಸುತ್ತಿದ್ದರು. ಯಾವಾಗ ಇಂದ್ರಜಿತ್‌ ಲಂಕೇಶ್‌ ಮತ್ತು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಸಂಬರಗಿ ಅವರು ಹೊಸ ತಲೆಮಾರಿನ ಯುವ ಕಲಾವಿದರು ಡ್ರಗ್ಸ್‌ ದಂಧೆಯಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರೋ ಅಲ್ಲಿಂದ ಇವರೆಲ್ಲರಿಗೂ ಭಯ ಮೂಡಲಾರಂಭಿಸಿದ್ಯಾ ಎಂಬ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: ಮಾಜಿ ಪರಿಷತ್‌ ಸದಸ್ಯರೊಬ್ಬರಿಗೆ ಲಂಕಾ ಕ್ಯಾಸಿನೋ ನಂಟು

    ಒಂದು ವೇಳೆ ಪ್ರತಿಕ್ರಿಯೆ ನೀಡಿದರೆ ಸುದ್ದಿಯಾಗುತ್ತದೆ. ಸುದ್ದಿಯಾದ ಕೂಡಲೇ ಪಾರ್ಟಿಯಲ್ಲಿ ಯಾರೋ ತೆಗೆದ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗುವ ಸಾಧ್ಯತೆಯಿದೆ. ಹೀಗಾಗಿ ಈ ವಿಚಾರಕ್ಕೆ ಹೋಗಿ ಕೈ ಸುಟ್ಟು ಕೊಳ್ಳುವುದು ಯಾಕೆ ಎಂದು ಭಾವಿಸಿ ತೆಪ್ಪಗಿದ್ದಾರೆ ಎನ್ನಲಾಗುತ್ತಿದೆ.

    ಈ ನಟ, ನಟಿಯರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಆದರೆ ಡ್ರಗ್ಸ್‌ ಪ್ರಕರಣ ಬೆಳಕಿಗೆ ಬಂದ ನಂತರ ಅಂತರ ಕಾಯ್ದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ನಟಿಯರ ವಿಚಾರಣೆ ಸಂದರ್ಭದಲ್ಲಿ ನಮ್ಮ ಹೆಸರನ್ನು ಬಾಯಿಬಿಟ್ಟರೆ ಏನು ಮಾಡುವುದು ಎಂಬ ಚಿಂತೆಯೂ ಇವರನ್ನು ಕಾಡುತ್ತಿದೆ.

  • ಮಾಜಿ ಪರಿಷತ್‌ ಸದಸ್ಯರೊಬ್ಬರಿಗೆ ಲಂಕಾ ಕ್ಯಾಸಿನೋ ನಂಟು

    ಮಾಜಿ ಪರಿಷತ್‌ ಸದಸ್ಯರೊಬ್ಬರಿಗೆ ಲಂಕಾ ಕ್ಯಾಸಿನೋ ನಂಟು

    ಬೆಂಗಳೂರು: ಚಾಮರಾಜಪೇಟೆಯ ಕಾಂಗ್ರೆಸ್‌ ಶಾಸಕ ಜಮೀರ್‌ ಅಹಮದ್‌ ಅವರಿಗೆ ಶ್ರೀಲಂಕಾದ ಕ್ಯಾಸಿನೋ ಜೊತೆ ನಂಟು ಇದೆ ಎಂಬ ಆರೋಪ ಕೇಳಿ ಬಂದ ಬಳಿಕ ಈಗ ರಾಜ್ಯದ ಮಾಜಿ ವಿಧಾನಪರಿಷತ್‌ ಸದಸ್ಯರೊಬ್ಬರಿಗೂ ಸಂಪರ್ಕವಿದೆ ಎಂಬ ಮಾತು ಕೇಳಿ ಬಂದಿದೆ.

    ಹೌದು. ಕರ್ನಾಟಕದ ರಾಜಕಾರಣಿಗಳಿಗೆ ಶ್ರೀಲಂಕಾದ ಕ್ಯಾಸಿನೋ ನಂಟು ಇದೆ. ಈಗಾಗಲೇ ಪ್ರಶಾಂತ್‌ ಸಂಬರಗಿ ಜಮೀರ್‌ ಅಹಮದ್‌ ಹೆಸರನ್ನು ತೇಲಿಬಿಟ್ಟಿದ್ದಾರೆ. ಆದರೆ ಹಲವು ರಾಜಕಾರಣಿಗಳಿಗೆ ಲಂಕಾ ಕ್ಯಾಸಿನೋ ನಂಟು ಇದ್ದು ಅದರಲ್ಲೂ ಉದ್ಯಮಿಯಾಗಿರುವ ಮಾಜಿ ಪರಿಷತ್‌ ಸದಸ್ಯರ ಹೆಸರು ಈಗ ಮುನ್ನೆಲೆಗೆ ಬಂದಿದೆ.

    ಈ ನಾಯಕ ಹಲವು ಬಾರಿ ಲಂಕಾಗೆ ಹೋಗಿದ್ದಾರೆ.ಈಗ ಡ್ರಗ್ಸ್‌ ಪ್ರಕರಣದಲ್ಲಿ ಅಕ್ರಮ ಹಣಕಾಸು ವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಎಂಟ್ರಿ ಕೊಟ್ಟಿದೆ. ಒಂದು ವೇಳೆ ತನಿಖೆಗೆ ಇಳಿದರೆ ಈ ನಾಯಕನಿಗೂ ಕಷ್ಟವಾಗುವ ಸಾಧ್ಯತೆಯಿದೆ.

    ವಿಶೇಷ ಏನೆಂದರೆ ಈ ವ್ಯಕ್ತಿ ಮಾತ್ರ ಹೋಗುತ್ತಿರಲಿಲ್ಲ. ಈ ವ್ಯಕ್ತಿಯ ಜೊತೆ ಹಲವು ರಾಜಕೀಯ ವ್ಯಕ್ತಿಗಳು ಹೋಗುತ್ತಿದ್ದರು. ಒಂದು ವೇಳೆ ಡ್ರಗ್ಸ್‌ ಪ್ರಕರಣದ ಆರೋಪಿಗಳಿಗೂ ಈ ರಾಜಕೀಯ ವ್ಯಕ್ತಿಗೂ ನಂಟು ಇದೆ ಎಂಬ ಸುಳಿವು ಸಿಕ್ಕರೆ ಈ ವ್ಯಕ್ತಿಯ ಸುತ್ತ ತನಿಖೆ ತಿರುಗಲಿದೆ. ಒಂದು ವೇಳೆ ಈ ವ್ಯಕ್ತಿಯನ್ನು ವಿಚಾರಣೆಗೆ ಒಳ ಪಡಿಸಿದರೆ ರಾಜ್ಯದ ಹಲವು ರಾಜಕೀಯ ನಾಯಕರಿಗೂ ಬಿಸಿ ತಟ್ಟಲಿದೆ. ಇದನ್ನೂ ಓದಿ: ಡ್ರಗ್ಸ್ ಕೇಸ್ ತನಿಖೆಗೆ ಟ್ವಿಸ್ಟ್- ಶುರುವಾಯ್ತು ಮೂವರು ಸ್ಟಾರ್ ನಟರಿಗೆ ಢವ ಢವ!

    ಕರ್ನಾಟಕದ ವ್ಯಕ್ತಿಗಳಿಗೆ ಗೋವಾ ಬಿಟ್ಟರೆ ಶ್ರೀಲಂಕಾ ಕ್ಯಾಸಿನೋದ ಮೇಲೆ ಮೋಹ ಜಾಸ್ತಿ. ಶ್ರೀಲಂಕಾದಲ್ಲಿ ಪ್ರೈವೆಸಿ ಜಾಸ್ತಿ. ಅಷ್ಟೇ ಅಲ್ಲದೇ ಯಾರಿಗೂ ಅಷ್ಟು ಸುಲಭವಾಗಿ ಗುರುತು ಹಿಡಿಯಲು ಆಗುವುದಿಲ್ಲ. ಹೀಗಾಗಿ ಬಹಳಷ್ಟು ಜನ ಶ್ರೀಲಂಕಾದ ಕ್ಯಾಸಿನೋಗೆ ಹೋಗುತ್ತಾರೆ.

    ಒಟ್ಟಿನಲ್ಲಿ ಸಿಸಿಬಿಯ ಡ್ರಗ್ಸ್‌ ತನಿಖೆಯ ಜೊತೆ ಕ್ಯಾಸಿನೋ ನಂಟು, ಅಕ್ರಮ ಹಣಕಾಸು ವ್ಯವಹಾರದ ವಾಸನೆ ಜೋರಾಗುತ್ತಿದೆ. ಹೀಗಾಗಿ ತನಿಖೆ ಮುಂದೆ ಹೇಗೆ ಸಾಗಲಿದೆ ಎಂಬ ಕುತೂಹಲ ಮೂಡಿದೆ.