Tag: Drought Study

  • ವಿಪಕ್ಷ ನಾಯಕರಾದ ಬೆನ್ನಲ್ಲೇ ಬರ ಅಧ್ಯಯನಕ್ಕೆ ಆರ್.ಅಶೋಕ್ ರಾಜ್ಯ ಪ್ರವಾಸ

    ವಿಪಕ್ಷ ನಾಯಕರಾದ ಬೆನ್ನಲ್ಲೇ ಬರ ಅಧ್ಯಯನಕ್ಕೆ ಆರ್.ಅಶೋಕ್ ರಾಜ್ಯ ಪ್ರವಾಸ

    – ಕಲಬುರಗಿಯಲ್ಲಿ ಬರ ವೀಕ್ಷಣೆ; ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಾಯ

    ಕಲಬುರಗಿ: ವಿಧಾನಸಭೆಯ ವಿಪಕ್ಷ ನಾಯಕನಾಗಿ ಆರ್.ಅಶೋಕ್ (R.Ashok) ಆಯ್ಕೆಯಾದ ಬೆನ್ನಲ್ಲೇ ರಾಜ್ಯದಲ್ಲಿ ಬರ ಅಧ್ಯಯನಕ್ಕೆ (Drought Study) ಪ್ರವಾಸ ಕೈಗೊಂಡಿದ್ದಾರೆ. ಇಂದು (ಮಂಗಳವಾರ) ಕಲಬುರಗಿ ಜಿಲ್ಲೆಗೆ ಪ್ರವಾಸ ಮಾಡಿ ಬರ ಅಧ್ಯಯನ ಮಾಡಿದರು.

    ಬೆಳಗ್ಗೆ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶ್ರೀನಿವಾಸ ಸರಡಗಿಯಲ್ಲಿ ಬರ ವೀಕ್ಷಣೆಗಾಗಿ ರೈತರ ಹೊಲಗಳಿಗೆ ಅಶೋಕ್ ಭೇಟಿ ನೀಡಿದರು. ಮಧ್ಯಾಹ್ನ ಆಳಂದ ತಾಲೂಕಿನ ಕಡಗಂಚಿ ಗ್ರಾಮಕ್ಕೆ ಭೇಟಿ ನೀಡಿ ರೈತರೊಂದಿಗೆ ಸಂವಾದ ನಡೆಸಿದರು. ನಂತರ ಬರ ಪರಿಸ್ಥಿತಿ ಬಗ್ಗೆ ಸುದ್ದಿಗೋಷ್ಠಿ ನಡೆಸಿದರು. ಇದನ್ನೂ ಓದಿ: ವಿಜಯೇಂದ್ರ ಪಾಪ ಇನ್ನೂ ಮಗು: ಚಲುವರಾಯಸ್ವಾಮಿ

    ಸುರೇಶ್ ರಾಠೋಡ್ ಎಂಬವರ ಜಮೀನನಲ್ಲಿ ತೊಗರಿ ಬೆಳೆ ವೀಕ್ಷಿಸಿದರು. ಬೆಳೆ ಹಾನಿ ಕುರಿತು ರೈತರಿಂದ ಮಾಹಿತಿ ಪಡೆದರು. ಅನಾವೃಷ್ಟಿಯಿಂದ ತೊಗರಿ ಬೆಳೆ ಸಂಪೂರ್ಣ ಹಾಳಾಗಿತ್ತು. ಕಲಬುರಗಿ ಜಿಲ್ಲೆಯಾದ್ಯಂತ 8.81 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ, 2.76 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆ ನಾಶವಾಗಿದೆ. ಆರ್.ಅಶೋಕ್ ಅವರಿಗೆ ಶಾಸಕ ಬಸವರಾಜ್ ಮತ್ತಿಮೂಢ ಸೇರಿದಂತೆ ಹಲವು ನಾಯಕರು ಸಾಥ್ ನೀಡಿದರು.

    ಬೆಳೆ ಹಾನಿ ಕುರಿತು ಮಾತನಾಡಿದ ಅಶೋಕ್, ಕಲಬುರಗಿ ಜಿಲ್ಲೆಯ ತೊಗರಿ ಬೆಳೆ ಸಂಪೂರ್ಣ ಹಾನಿಯಾಗಿದೆ. ಹೀಗಾಗಿ ಬೆಳೆ ಪರಿಹಾರಕ್ಕೆ ಆಗ್ರಹಿಸಿದರೂ ಒಂದು ರೂಪಾಯಿ ಸರ್ಕಾರ ನೀಡಿಲ್ಲ. ಕಳೆದ ಬಾರಿ ಪ್ರವಾಹ ಬಂದಾಗ 180 ಕೋಟಿ ರೂ. ಹಣ ನೀಡಿದ್ದೇವೆ. ನಾವು ಕೇಂದ್ರ ಸರ್ಕಾರ ನೋಡಿಕೊಂಡ ಕೂರಲಿಲ್ಲ. ಸದ್ಯ ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ. ಹೀಗಾಗಿ ಪರಿಹಾರ ನೀಡುತ್ತಿಲ್ಲ. ರೈತರಿಗೆ ನೀಡಿದ ಪರಿಹಾರದಲ್ಲಿ ಹಣವೇ ನಮೂದು ಮಾಡಿಲ್ಲ. ಈ ಬಗ್ಗೆ ನಿಖರತೆ ಇಲ್ಲ. ಹೀಗಾಗಿ ಅಧಿಕಾರಿಗಳಿಗೆ ನಾಟಕ ಆಟಬೇಡಿ ಅಂತಾ ಹೇಳಿದ್ದೇನೆ. ಇಲ್ಲಿನ ರೈತರಿಗೆ ನ್ಯಾಯ ಸಿಗಬೇಕು. ರೈತರ ಸಾಲ ಮನ್ನಾ ಸಹ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು. ಇದನ್ನೂ ಓದಿ: ಮೋದಿ ಸರ್ಕಾರ ಕೊಟ್ಟ ಅನುದಾನದಲ್ಲಿ ರಾಜ್ಯದಲ್ಲಿ ಕೆಲಸ ಆಗ್ತಿದೆ: ಕಟೀಲ್

    ಬೆಳಗಾವಿ ಅಧಿವೇಶನದಲ್ಲಿ ಇದೇ ವಿಷಯ ನಿಲುವಳಿ ಮಾಡಿ ಚರ್ಚೆ ಮಾಡುತ್ತೇವೆ. ಆದರೆ ಸರ್ಕಾರ ಪಂಚ ರಾಜ್ಯಗಳ ಚುನಾವಣೆಯಲ್ಲಿ ಬ್ಯುಸಿ ಆಗಿದ್ದಾರೆ. ರೈತರಿಗೆ ಸರಿಯಾಗಿ ಕರೆಂಟ್ ಕೊಟ್ಟಿಲ್ಲ. ಈಗ ಬೆಳೆ ಹಾನಿ ಆದ ಮೇಲೆ ಕರೆಂಟ್ ಕೊಡಲು ಮುಂದಾಗಿದ್ದಾರೆ. ಮೋದಿ ಅವರು ಕಿಸಾನ್ ಯೋಜನೆಯಡಿ 6 ಸಾವಿರ ಮತ್ತು ರಾಜ್ಯದ ನಾಲ್ಕು ಸಾವಿರ ಸೇರಿಸಿ 10 ಸಾವಿರ ಕೊಡುತ್ತಿದ್ದೇವೆ. ಆದರೆ ರಾಜ್ಯ ಸರ್ಕಾರ ಅದನ್ನು ನಿಲ್ಲಿಸಿದೆ. ರೈತರ ಮಕ್ಕಳ ಉನ್ನತ ಶಿಕ್ಷಣ, ವಿದ್ಯಾಭ್ಯಾಸಕ್ಕೆ ನೀಡುವ ಹಣ ನಿಲ್ಲಿಸಲಾಗಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.

    ಕೇಂದ್ರ ಸರ್ಕಾರ ಏನ ಕೊಡಬೇಕು ಅದು ಬರುತ್ತದೆ. ಮನಮೋಹನ್ ಸಿಂಗ್ ಅವರು ಮಾಡಿದ ನೀತಿ ಇದು. ಈ ಹಿಂದೆ ನಾಲ್ಕು ವರ್ಷ ನಾವೇ ಕೊಟ್ಟಿದ್ದೇವೆ. ಆದರೆ ಇವರು ಖಜಾನೆಯಲ್ಲಿ ಹಣ ಇಲ್ಲ. ಎಲ್ಲಾ ಫ್ರೀ ಫ್ರೀ ಅಂತಾ ಹೇಳಿ ಅದು ಸಹ ಕೊಡುತ್ತಿಲ್ಲ. ಹಿಂದಿನ ಸರ್ಕಾರದ ದಾಖಲೆ ನೋಡಿ ನಮ್ಮದು ತಪ್ಪು ಎಂದರೆ ಒಪ್ಪಿಕೊಳ್ಳುತ್ತೇವೆ ಎಂದು ಸವಾಲು ಹಾಕಿದರು. ಕಲಬುರಗಿ ಪ್ರವಾಸ ಮುಗಿಸಿ ನಂತರ ಬೀದರ್‌ಗೆ ಬರ ಅಧ್ಯಯನಕ್ಕೆ ಆರ್.ಅಶೋಕ್ ಪ್ರಯಾಣ ಬೆಳಸಲಿದ್ದಾರೆ. ಇದನ್ನೂ ಓದಿ: ಬ್ರಿಜ್ ಭೂಷಣ್ ಸಿಂಗ್‌ ಬೆಂಗಳೂರು ಕಂಬಳಕ್ಕೆ ಬರಲ್ಲ: ವಿವಾದಕ್ಕೆ ತೆರೆ ಎಳೆದ ಅಶೋಕ್‌ ರೈ

  • ರಾಜ್ಯ ಸರ್ಕಾರ 10 ಸಾವಿರ ಕೋಟಿ ಬರ ಪರಿಹಾರ ಘೋಷಣೆ ಮಾಡದಿದ್ರೆ ಬಿಜೆಪಿಯಿಂದ ವಿಧಾನಸೌಧ ಮುತ್ತಿಗೆ: ಕೋಟ ಎಚ್ಚರಿಕೆ

    ರಾಜ್ಯ ಸರ್ಕಾರ 10 ಸಾವಿರ ಕೋಟಿ ಬರ ಪರಿಹಾರ ಘೋಷಣೆ ಮಾಡದಿದ್ರೆ ಬಿಜೆಪಿಯಿಂದ ವಿಧಾನಸೌಧ ಮುತ್ತಿಗೆ: ಕೋಟ ಎಚ್ಚರಿಕೆ

    ರಾಮನಗರ: ರಾಜ್ಯ ಸರ್ಕಾರ ಈ ಕೂಡಲೇ 10 ಸಾವಿರ ಕೋಟಿ ರೂ. ಬರ (Drought) ಪರಿಹಾರ ಘೋಷಣೆ ಮಾಡಿ. ಇಲ್ಲದೇ ಹೋದರೆ ಬಿಜೆಪಿಯಿಂದ (BJP) ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಎಚ್ಚರಿಕೆ ನೀಡಿದ್ದಾರೆ.

    ಗುರುವಾರ ರಾಮನಗರಕ್ಕೆ ಆಗಮಿಸಿದ್ದ ಬಿಜೆಪಿ ಬರ ಅಧ್ಯಯನ ತಂಡ (Drought Study Team) ತಾಲೂಕಿನ ವಿಭೂತಿಕೆರೆ ಗ್ರಾಮದಲ್ಲಿ ಮಾಜಿ ಸಚಿವ ಕೋಟಾ ಶ್ರೀನಿವಾಸಪೂಜಾರಿ ನೇತೃತ್ವದಲ್ಲಿ ಬರ ಪರಿಶೀಲನೆ ಮಾಡಿದರು. ಈ ವೇಳೆ ಮಾತನಾಡಿದ ಮಾಜಿ ಸಚಿವ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.

    ರಾಜ್ಯ ಸರ್ಕಾರ ಬರ ಪರಿಹಾರ ನೀಡುವಲ್ಲಿ ವಿಫಲವಾಗಿದೆ. ಈವರೆಗೂ ಯಾವೊಬ್ಬ ರೈತನಿಗೂ ಪರಿಹಾರ ನೀಡಿಲ್ಲ. ಕೇವಲ 324 ಕೋಟಿ ರೂ. ಅನುದಾನ ಬಿಡುಗಡೆ ಮಾಡ್ತೀವಿ ಎಂದು ಸಿಎಂ ಹೇಳಿದ್ದಾರೆ. ಮೊದಲು ಸೂಕ್ತ ಪರಿಹಾರ ನೀಡದೇ ಕೇಂದ್ರದ ಕಡೆ ಕೈ ತೋರಿಸುತ್ತಿದ್ದಾರೆ. ಸುಖಾ ಸುಮ್ಮನೆ ಕೇಂದ್ರದ ಕಡೆ ಬೊಟ್ಟು ಮಾಡುವುದು ಬಿಟ್ಟು ಮೊದಲು ಪರಿಹಾರ ನೀಡಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ಶುಕ್ರವಾರ ಬಳ್ಳಾರಿ ಬಂದ್‌ಗೆ ಕರೆ – ಬಹುತೇಕ ಸಂಘಟನೆಯ ಬೆಂಬಲ

    ರಾಜ್ಯದಲ್ಲಿ 39 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಹಾಳಾಗಿದೆ. 3 ಲಕ್ಷ ತೋಟಗಾರಿಕೆ ಬೆಳೆ ಹಾಳಾಗಿದೆ. 33 ಸಾವಿರ ಕೋಟಿ ನಷ್ಟ ಆಗಿರೋ ಬಗ್ಗೆ ಸಿದ್ದರಾಮಯ್ಯ ಹೇಳಿದ್ರು. ಮೊದಲು ನೀವು 10 ಸಾವಿರ ಕೋಟಿ ರೂ. ಬಿಡುಗಡೆ ಮಾಡಿ. ಆಮೇಲೆ ಪ್ರಧಾನಿಯನ್ನು ಕೇಳೋಣ. ಆಗ ನಾವು ಜೊತೆಗೆ ಬರುತ್ತೇವೆ ಎಂದು ಹೇಳಿದರು.

    ಜಾನುವಾರುಗಳ ಮೇವು ಹಾಗೂ ಗೋಶಾಲೆಗಳ ಸಮಸ್ಯೆ ಆಗಿದೆ. ರೈತರು ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಇದೆ. ಕೂಡಲೇ 10 ಸಾವಿರ ಕೋಟಿ ರೂ. ಪರಿಹಾರ ಘೋಷಣೆ ಮಾಡಿ. ಇಲ್ಲವಾದರೆ ಮಾಜಿ ಸಿಎಂ ಬಿಎಸ್‌ವೈ, ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಲಿಂಗಾಯತ ನಾಯಕರು ಕಾಂಗ್ರೆಸ್‌ನಲ್ಲಿ ಅಲೆಮಾರಿಗಳಾಗಿದ್ದಾರೆ: ಗೋವಿಂದ ಕಾರಜೋಳ

  • ಡಿಕೆಶಿಗೆ ನಾಳೆಯೇ ಸಿಎಂ ಆಗಬೇಕೆಂಬ ತವಕ: ಕಾಗೇರಿ

    ಡಿಕೆಶಿಗೆ ನಾಳೆಯೇ ಸಿಎಂ ಆಗಬೇಕೆಂಬ ತವಕ: ಕಾಗೇರಿ

    ಚಿತ್ರದುರ್ಗ: ಡಿಸಿಎಂ ಡಿಕೆ ಶಿವಕುಮಾರ್‌ಗೆ (DK Shivakumar) ನಾಳೆಯೇ ಸಿಎಂ (CM) ಆಗಬೇಕೆಂಬ ತವಕವಿದೆ ಎಂದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಹೇಳಿದರು.

    ಚಿತ್ರದುರ್ಗದ (Chitradurga) ಕೊಳಾಳ್ ಗ್ರಾಮದಲ್ಲಿ ಬರ ಅಧ್ಯಯನ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯಗೆ (Siddaramaiah) ಅಧಿಕಾರದಲ್ಲಿ 2 ದಿನ ಇರ್ತೀನೋ ಬಿಡ್ತೀನೋ ಎಂಬ ಭಾವವಿದೆ. ಅಲ್ಲದೇ ಕಾಂಗ್ರೆಸ್‌ನಲ್ಲಿ ಸಿಎಂ, ಡಿಸಿಎಂ ಯಾರಾಗಬೇಕೆಂಬ ಸ್ಪರ್ಧೆ ನಡೆಯುತ್ತಿದ್ದು, ಅಧಿಕಾರದ ದಾಹ ಹೆಚ್ಚಾಗಿದೆ. ಅಧಿಕಾರ ಹಂಚಿಕೆ ವಿಚಾರದಲ್ಲಿ ಸ್ಪರ್ಧೆ ಏರ್ಪಟ್ಟಿದ್ದು, ಈ ಸರ್ಕಾರಕ್ಕೆ ಜನರ ಹಿತ ಕಾಪಾಡುವಲ್ಲಿ ಕಾಳಜಿಯೇ ಕಾಣುತ್ತಿಲ್ಲ ಎಂದು ಆರೋಪಿಸಿದರು.

    ಕಾವೇರಿ ನೀರು ಈಗಲೂ ತಮಿಳುನಾಡಿಗೆ ಹರಿಯುತ್ತಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಶಿವಮೊಗ್ಗ, ಕೋಲಾರದಲ್ಲಿ ಖಡ್ಗ ಹಿಡಿದು ಟಿಪ್ಪು ಮೆರವಣಿಗೆ ನಡೆದಿದ್ದು, ಕೋಮು ಭಾವನೆ ಕೆರಳಿಸುವ ಮತ್ತು ದ್ವೇಷ ಭಾವನೆ ಹಬ್ಬಿಸುವ ಕೆಲಸಕ್ಕೆ ಸರ್ಕಾರದ ರಕ್ಷಣೆ ನೀಡುತ್ತಿದೆ ಎಂದು ಆಕ್ರೋಶ ಹೊರಹಾಕಿದರು.

    ಎಲ್ಲೆಡೆ ಬರ ತಾಂಡವವಾಡ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾದ್ಯಂತ 17 ತಂಡ ರಚಿಸಿಕೊಂಡು ಬರ ಅಧ್ಯಯನ ನಡೆಸುತ್ತಿದೆ. ಇಂದು ಚಿತ್ರದುರ್ಗ ಜಿಲ್ಲೆಯಾದ್ಯಂತ ನಮ್ಮ ತಂಡ ಅಧ್ಯಯನ ನಡೆಸಲಿದ್ದು, ಈ ಭಾಗದಲ್ಲಿ ಜೋಳ, ಮೆಕ್ಕೆಜೋಳ ಬೆಳೆಗಳು ಸಂಪೂರ್ಣ ಹಾನಿಯಾಗಿವೆ. ಓರ್ವ ರೈತ ಎಕರೆಗೆ 30 ಸಾವಿರ ರೂ. ಖರ್ಚು ಮಾಡಿದ್ದು, ಆತನಿಗೆ 2 ಸಾವಿರ ರೂ. ಕೂಡ ಕೈಗೆ ಸಿಗುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಶೀಘ್ರವೇ ರೈತರಿಗೆ ಬೆಳೆ ಪರಿಹಾರ ನೀಡಬೇಕು. ಜಾನುವಾರುಗಳಿಗೆ ಮೇವು, ನೀರು ಪೂರೈಕೆಗೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದರು.

    ರಾಜ್ಯದ ರೈತರು, ಸಾಕಿ ಸಲಹಿದ ದನ-ಕರುಗಳನ್ನು ಮಾರಾಟ ಮಾಡಲು ಮುಂದಾಗಿದ್ದು, ಬದುಕನ್ನು ಕಟ್ಟಿಕೊಳ್ಳಲು, ಗುಳೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಆದರೆ ರಾಜ್ಯದ ಸಿಎಂ, ಡಿಸಿಎಂ, ಸಚಿವರು ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಗುತ್ತಿಗೆದಾರರ ಹಣ ಬಿಡುಗಡೆಗೊಳಿಸಿ, ಆ ಹಣ ಪಡೆಯುವಲ್ಲಿ ತಲ್ಲೀನರಾಗಿದ್ದಾರೆಂದು ಆರೋಪಿಸಿದರು. ಇದನ್ನೂ ಓದಿ: ಪಂಪ್‌ಸೆಟ್‌ಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಭರವಸೆ – ಉಪವಾಸ ಸತ್ಯಾಗ್ರಹ ಕೈಬಿಟ್ಟ ಬಿಜೆಪಿ ಸಂಸದ

    ಸರ್ಕಾರದಿಂದ ರಾಜ್ಯದ ಜನರ ಕಷ್ಟಕ್ಕೆ ಸ್ಪಂದಿಸುವ ಚಟುವಟಿಕೆ ನಡೆದಿಲ್ಲ. ಬಿಜೆಪಿ ಅಧ್ಯಯನದ ಬಳಿಕ ಸರ್ಕಾರ ಎಚ್ಚೆತ್ತು ಜಿಲ್ಲಾ ಸಚಿವರಿಗೆ ಪ್ರವಾಸ ಮಾಡಲು ಸಿಎಂ ಸೂಚಿಸಿದ್ದು, ಪ್ರತಿ ಜಿಲ್ಲೆಗಳಿಗೆ 5, 10, 12 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. ಆದರೆ ಈವರೆಗೆ ಜಿಲ್ಲೆಗೆ ತಲುಪಿಲ್ಲ. ಹಣ ನೀಡುವುದಾಗಿ ಘೋಷಿಸಿದ್ದಾರಷ್ಟೇ ಎಂದು ಕಿಡಿಕಾರಿದರು.

    ನಮ್ಮ ಬಿಜೆಪಿ ಸರ್ಕಾರದಲ್ಲಿ ಸಮರ್ಪಕ ವಿದ್ಯುತ್ ಪೂರೈಸಿದ್ದು, ಕಾಂಗ್ರೆಸ್ ಸರ್ಕಾರದಲ್ಲಿ ವಿದ್ಯುತ್ ಕಡಿತದಿಂದ ರೈತರಿಗೆ ಸಮಸ್ಯೆಯಾಗುತ್ತಿದೆ. ರಾತ್ರಿ ವಿದ್ಯುತ್ ಆನ್ ಹಾಗೂ ಆಫ್ ಮಾಡುವ ವೇಳೆ ರೈತರಿಗೆ ಸಮಸ್ಯೆಯಾಗುತ್ತಿದ್ದು, ಕಾಡು ಪ್ರಾಣಿಗಳಿಂದ ರೈತರಿಗೆ ಅನೇಕ ಕಡೆ ಸಮಸ್ಯೆ ಉದ್ಭವವಾಗಿದೆ. ಹೀಗಾಗಿ ನಿರಂತರ 7 ಗಂಟೆ ವಿದ್ಯುತ್ ಅನ್ನು ರೈತರ ಜಮೀನಿಗೆ ಸರಬರಾಜು ಮಾಡಬೇಕೆಂದು ಆಗ್ರಹಿಸಿದರು. ಇದನ್ನೂ ಓದಿ: ಸಮರ್ಪಕ ಬಿಸಿ ಊಟ, ಪೌಷ್ಟಿಕ ಆಹಾರ ನೀಡದ್ದಕ್ಕೆ ಮಕ್ಕಳೇ ಶಾಲೆಗೆ ಬೀಗ ಹಾಕಿ ಆಕ್ರೋಶ

    ಕೇಂದ್ರ ಸರ್ಕಾರ ಈಗಾಗಲೇ ಅಧಿಕಾರಿಗಳಿಂದ ಬರ ಅಧ್ಯಯನ ನಡೆಸಿದೆ. ಕೇಂದ್ರ ಸರ್ಕಾರಕ್ಕೆ ಅಧಿಕಾರಿಗಳು ವರದಿ ನೀಡುತ್ತಿದ್ದಾರೆ. ಈ ಕಾಂಗ್ರೆಸ್ ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರದತ್ತ ಬೆರಳು ಮಾಡಿ ತೋರಿಸಲಾಗುತ್ತಿದೆ. 2014 ರಿಂದ 23 ರವರೆಗೆ 13.488 ಕೋಟಿ ರೂ. ಹಣ ಬಂದಿದೆ. ಆದರೂ ಕೇಂದ್ರದತ್ತ ಬೆರಳು ಮಾಡುವ ರಾಜ್ಯ ಸರ್ಕಾರಕ್ಕೆ ನಾಚಿಕೆ ಆಗಬೇಕು. ಮೋದಿ ಸರ್ಕಾರ ರಾಜ್ಯಕ್ಕೆ ಯಾವತ್ತೂ ಅನ್ಯಾಯ ಮಾಡಿಲ್ಲ. ಸಿದ್ದರಾಮಯ್ಯ ಈ ರೀತಿ ಆಡಳಿತ ಮಾಡಿದರೆ ಜನ ಸಹಿಸಲ್ಲ. ಮುಂದಿನ ದಿನಗಳಲ್ಲಿ ಜನ ಸೂಕ್ತ ಉತ್ತರ ಕೊಡುತ್ತಾರೆ ಎಂದರು.

  • ದುರಾಡಳಿತ ಪ್ರಶ್ನೆ ಮಾಡಿದ್ದಕ್ಕೆ ನನ್ನನ್ನು ಬರ ಅಧ್ಯಯನ ತಂಡದಿಂದ ಹೊರಗಿಟ್ಟಿದ್ದಾರೆ: ರೇಣುಕಾಚಾರ್ಯ ಅಸಮಾಧಾನ

    ದುರಾಡಳಿತ ಪ್ರಶ್ನೆ ಮಾಡಿದ್ದಕ್ಕೆ ನನ್ನನ್ನು ಬರ ಅಧ್ಯಯನ ತಂಡದಿಂದ ಹೊರಗಿಟ್ಟಿದ್ದಾರೆ: ರೇಣುಕಾಚಾರ್ಯ ಅಸಮಾಧಾನ

    ದಾವಣಗೆರೆ: ನಾನು 2018 ರ ಚುನಾವಣಾ ಪೂರ್ವದಲ್ಲಿ ರಾಜ್ಯದ 15 ಜಿಲ್ಲೆಗಳಲ್ಲಿ ಬರ ಅಧ್ಯಯನ (Drought Study) ಮಾಡಿದ್ದೆ. ಆದರೆ ಈ ಬಾರಿ ನನ್ನನ್ನು ಬರ ಅಧ್ಯಯನ ತಂಡದಿಂದ ಹೊರ ಇಟ್ಟಿದ್ದಾರೆ. ಪಕ್ಷದ ಕೆಲ ನಾಯಕರ ದುರಾಡಳಿತ ಪ್ರಶ್ನೆ ಮಾಡಿದ್ದಕ್ಕೆ ಈ ರೀತಿ ಮಾಡಿದ್ದಾರೆ ಎಂದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ (MP Renukacharya) ಅಸಮಾಧಾನ ಹೊರಹಾಕಿದ್ದಾರೆ.

    ಹೊನ್ನಾಳಿಯಲ್ಲಿ ಮಾತನಾಡಿದ ರೇಣುಕಾಚಾರ್ಯ, ಇದ್ದಿದ್ದು ಇದ್ದಹಾಗೆ ಹೇಳಿದ್ರೆ ಎದ್ದು ಬಂದು ಎದೆಗೆ ಒದ್ರಂತೆ ಹಂಗಾಗಿದೆ. ಪಕ್ಷದಲ್ಲಿರುವ ಲೋಪವನ್ನು ನೇರವಾಗಿ ಹೇಳಿದ್ದಕ್ಕೆ ಕೆಲ ನಾಯಕರು ನನ್ನನ್ನು ಹೊರಗಿಟ್ಟಿದ್ದಾರೆ. ನಮ್ಮ ಬಿಜೆಪಿಯಲ್ಲಿ ಒಂದು ತಂಡ ಇದೆ ಅದು ಈ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

    ಈ ಚುನಾವಣಾ ಪೂರ್ವದಲ್ಲಿ ಜೆಡಿಎಸ್ ಬಿಜೆಪಿ (BJP) ಹೊಂದಾಣಿಕೆ ಮಾಡಿಕೊಂಡಿದ್ರು. ಆದ್ದರಿಂದ ನಮ್ಮ ಪಕ್ಷದ ಹಿರಿಯ ನಾಯಕರನ್ನು ಕಡೆಗಣಿಸಿದ್ದಾರೆ. ಯಡಿಯೂರಪ್ಪರನ್ನು ಕೆಳಗೆ ಇಳಿಸಿದ್ರು. ಈಶ್ವರಪ್ಪ, ಜಗದೀಶ್ ಶೆಟ್ಟರ್, ಸವದಿ ಸೇರಿದಂತೆ ಫ್ರಂಟ್ ಲೈನ್ ನಾಯಕರನ್ನು ಮುಗಿಸಿದರು. ಒಬ್ಬ ವ್ಯಕ್ತಿ ದೆಹಲಿಯಲ್ಲಿ ಕೂತು ಸಿಎಂ ಆಗಲು ಇದೆಲ್ಲ ಮಾಡಿದ್ದಾನೆ ಎಂದು ಪರೋಕ್ಷವಾಗಿ ಬಿಎಲ್ ಸಂತೋಷ್ ವಿರುದ್ಧ ರೇಣುಕಾಚಾರ್ಯ ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಕೃಷಿ ಪಂಪ್‌ಸೆಟ್‌ಗಳಿಗೆ ಪ್ರತಿದಿನ 7 ಗಂಟೆ ವಿದ್ಯುತ್‌ – ಸಿಎಂ ಮಹತ್ವದ ಸಭೆಯಲ್ಲಿ ನಿರ್ಧಾರ

    ಯಡಿಯೂರಪ್ಪರವರ ಪರವಾಗಿ ಮಾತನಾಡಿದ್ದಕ್ಕೆ ಈ ರೀತಿ ಮಾಡ್ತಾ ಇದ್ದಾರೆ. ಪರವಾಗಿ ಮಾತನಾಡಿದರೆ ನೋಟಿಸ್, ಅವರ ವಿರುದ್ಧವಾಗಿ ಮಾತನಾಡಿದರೆ ನೋಟೀಸ್ ಇಲ್ಲ. ಇದು ಯಾವ ನ್ಯಾಯ? ಎಂದು ಎಂಪಿ ರೇಣುಕಾಚಾರ್ಯ ಕಿಡಿಕಾರಿದರು. ಇದನ್ನೂ ಓದಿ: ಚುನಾವಣಾ ಹೊಸ್ತಿಲಲ್ಲೇ ʼಕೈʼಗೆ ಶಾಕ್-‌ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ಶಾಸಕ

  • ಬರ ಅಧ್ಯಯನ ಪ್ರವಾಸ – ತಹಸೀಲ್ದಾರರಿಗೆ ಕಪಾಳಕ್ಕೆ ಹೊಡೆಯುತ್ತೇನೆ ಎಂದ ಬಿಎಸ್‍ವೈ

    ಬರ ಅಧ್ಯಯನ ಪ್ರವಾಸ – ತಹಸೀಲ್ದಾರರಿಗೆ ಕಪಾಳಕ್ಕೆ ಹೊಡೆಯುತ್ತೇನೆ ಎಂದ ಬಿಎಸ್‍ವೈ

    ರಾಯಚೂರು: ರಾಜ್ಯದಲ್ಲಿ ಬರ ಅಧ್ಯಯನ ಪ್ರವಾಸ ಕೈಗೊಂಡಿರುವ ಮಾಜಿ ಸಿಎಂ ಯಡಿಯೂರಪ್ಪನವರು ಇಂದು ಜನರಿಗೆ ಮೂಲಭೂತ ಸೌಕರ್ಯಗಳನ್ನು ನೀಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಇಂದು ಯಡಿಯೂರಪ್ಪ ಜಿಲ್ಲೆಯ ಲಿಂಗಸುಗೂರಿನ ಛತ್ತರ ತಾಂಡಾದಲ್ಲಿ ಬರ ಅಧ್ಯಯನ ಮಾಡಿದರು. ಈ ವೇಳೆ ಅಧಿಕಾರಿಗಳು ಕುಡಿಯುವ ನೀರು, ಉದ್ಯೋಗಗಳನ್ನು ಸರಿಯಾಗಿ ನೀಡಿಲ್ಲ ಎಂದು ಗ್ರಾಮಸ್ಥರು ಅಹವಾಲುಗಳನ್ನು ನೀಡಿದ್ದಾರೆ. ಇದಕ್ಕೆ ಕೋಪಗೊಂಡ ಬಿಎಸ್‍ವೈ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

    ಈ ಸಮಯದಲ್ಲಿ ಕುಡಿಯುವ ನೀರಿನ ಪೂರೈಕೆ ಸರಿಯಾಗಿ ಆಗುತ್ತಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ. ಇದಕ್ಕೆ ಸ್ಥಳದಲ್ಲಿ ಇದ್ದ ತಹಶೀಲ್ದಾರ್ ಚಂದ್ರಕಾಂತ್ ಅವರ ಮೇಲೆ ಕೋಪಗೊಂಡ ಯಡಿಯೂರಪ್ಪ ತಹಶೀಲ್ದಾರ್ ಕಪಾಳಕ್ಕೆ ಹೊಡೆಯುತ್ತೇನೆ ಎಂದು ಎಚ್ಚರಿಕೆ ನೀಡಿದರು. ನಂತರ ಸರಿಯಾಗಿ ನೀರು ಪೂರೈಕೆ ಮಾಡುವಂತೆ ತಾಕೀತು ಮಾಡಿದರು.

    ಇದೇ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಯಾವ ಕಾರಣಕ್ಕೆ ಮಾಡುತ್ತಿದ್ದಾರೆ ಎನ್ನುವುದು ಗೊತ್ತಿಲ್ಲ. ಇಲ್ಲಿ ಸಾಕಷ್ಟು ಸಮಸ್ಯೆಗಳಿವೆ ಆದರೂ ಗ್ರಾಮ ವಾಸ್ತವ್ಯ ಮಾಡಲು ಹೊರಟಿದ್ದಾರೆ. ಕೇವಲ ಶಾಲೆಯಲ್ಲಿ ವಾಸ್ತವ್ಯ ಹೂಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ರಾಜ್ಯ ಸರ್ಕಾರದ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಮೈತ್ರಿ ಸರಕಾರ ಬರ ನಿರ್ವಹಣೆ, ಕುಡಿಯುವ ನೀರು ಹಾಗು ಉದ್ಯೋಗ ನೀಡಲು ವಿಫಲವಾಗಿದೆ ಎಂದು ವಾಗ್ದಾಳಿ ಮಾಡಿದರು.

    https://www.youtube.com/watch?v=ICaTbsE2JyA

    ಮಾಧ್ಯಮಗಳ ವಿರುದ್ಧ ಮುಖ್ಯಮಂತ್ರಿಗಳ ಕ್ರಮದ ಬಗ್ಗೆ ಕೇಳಿದಾಗ, ಸಿಎಂ ಮಾಧ್ಯಮಗಳಿಗೆ ಏನು ಮಾಡಲು ಸಾಧ್ಯವಿಲ್ಲ. ನಿಮ್ಮೊಂದಿಗೆ ನಾವು ಇದ್ದೇವೆ, ಮುಂದೆ ಸದನದಲ್ಲಿ ಮಾಧ್ಯಮಗಳ ಪರವಾಗಿ ನಾನು ಮಾತನಾಡುತ್ತೇನೆ ಎಂದು ಹೇಳಿದರು.

  • ಸಿಎಂ ಎಚ್‍ಡಿಕೆ ಗ್ರಾಮವಾಸ್ತವ್ಯ ಹೊಸ ನಾಟಕ – ಬಿಎಸ್‍ವೈ ಕಿಡಿ

    ಸಿಎಂ ಎಚ್‍ಡಿಕೆ ಗ್ರಾಮವಾಸ್ತವ್ಯ ಹೊಸ ನಾಟಕ – ಬಿಎಸ್‍ವೈ ಕಿಡಿ

    ಬೆಂಗಳೂರು: ಕಳೆದ ಒಂದು ವರ್ಷದಿಂದ ಪಂಚತಾರಾ ಹೋಟೆಲ್‍ನಲ್ಲಿ ವಾಸ್ತವ್ಯ ಮಾಡಿದ್ದ ಸಿಎಂ ಕುಮಾರಸ್ವಾಮಿ ಅವರು ಇಂದು ಗ್ರಾಮವಾಸ್ತವ್ಯ ಎಂಬ ಹೊಸ ನಾಟಕವನ್ನು ಶುರು ಮಾಡಿದ್ದಾರೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕಿಡಿಕಾರಿದ್ದಾರೆ.

    ನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂಗೆ ಒಂದು ಕಿವಿಮಾತು ಹೇಳುತ್ತೇನೆ. ಮುಖ್ಯಮಂತ್ರಿಗಳು ಒಂದು ವರ್ಷ ಫೈವ್ ಸ್ಟಾರ್ ನಲ್ಲಿ ಉಳಿದುಕೊಂಡಿದ್ದರು. ಈ ಬಗ್ಗೆ ನಾವು ಎಷ್ಟೇ ಹೇಳಿದರು ಅವರು ಕೇಳಲಿಲ್ಲ. ಒಂದು ವರ್ಷ ವ್ಯರ್ಥ ಆಯ್ತು. ಈಗ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಒಳಜಗಳ. ಕಾಂಗ್ರೆಸ್ ಪಕ್ಷದ ಆಂತರಿಕ ಕಿತ್ತಾಟದಿಂದ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ ಎಂದು ಸಿಎಂ ಹೆದರಿ ಈಗ ಸ್ವಂತ ಮನೆಗೆ ಹೋಗುವುದಾಗಿ ಹೇಳಿದ್ದಾರೆ ಎಂದು ವ್ಯಂಗ್ಯವಾಡಿದರು.

    ಸಿಎಂ ಕುಮಾರಸ್ವಾಮಿ ಅವರ ಗ್ರಾಮವಾಸ್ತವ್ಯಕ್ಕೆ ನಮ್ಮ ಅಭ್ಯಂತರ ಏನೂ ಇಲ್ಲ. ಆದರೆ ಅವರು ನಿಜಕ್ಕೂ ಮಾಡಬೇಕಾಗಿದ್ದದ್ದು ಬರಗಾಲದಿಂದ ತತ್ತರಿಸುತ್ತಿರುವ ರಾಜ್ಯದ ಜಿಲ್ಲೆಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳಿಗೆ ಸ್ಫದಿಸುವಂತೆ ಅಧಿಕಾರಿಗಳಿಗೆ ಚಾಟಿ ಬೀಸಿ ಜಿಲ್ಲಾ ಪ್ರವಾಸ ಕೈಗೊಳ್ಳುವಂತೆ ಕಳಿಸಲಿ. ಖುದ್ದು ಸಿಎಂ ಸಹ ಜಿಲ್ಲೆಗಳಿಗೆ ಭೇಟಿ ಮಾಡಲಿ. ಈ ಕಾರ್ಯವನ್ನು ಮಾಡದೇ ಸಿಎಂ ಕೇವಲ ಗ್ರಾಮ ವಾಸ್ತವ್ಯವನ್ನು ಜನ ಮೆಚ್ಚಲ್ಲ ಎಂದು ತಿಳಿಸಿದರು.

    ಜೂನ್ 5 ರ ನಂತರ ಬಿಜೆಪಿ ನಾಯಕರು ಬರಪರಿಶೀಲನೆ ಮಾಡುತ್ತೇವೆ. ಬರಪೀಡಿತ ಜಿಲ್ಲೆಗಳಿಗೆ ನಾವು ಪ್ರವಾಸ ಮಾಡಿ ವರದಿ ಸಿದ್ಧಪಡಿಸಿ ಸರ್ಕಾರದ ಮುಂದಿಡುತ್ತೇವೆ ಎಂದರು.

    ಇದೇ ವೇಳೆ ಮಾತನಾಡಿದ ಮಾಜಿ ಸಚಿವ ವಿ.ಸೋಮಣ್ಣ ಅವರು, ಒಂದು ವರ್ಷ ಆದ ಮೇಲೆ ಸಿಎಂಗೆ ಜ್ಞಾನೋದಯವಾಗಿದೆ. ಒಂದು ವರ್ಷದಿಂದ ಯಾವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಜಿಲ್ಲಾ ಪ್ರವಾಸ ಕೈಗೊಂಡಿಲ್ಲ. ಮೊದಲು ಬರ ಪೀಡಿತ ಪ್ರದೇಶಗಳಿಗೆ ಸಿಎಂ ಪ್ರವಾಸ ಮಾಡಲಿ. ಆ ನಂತರ ಅವರು ಗ್ರಾಮವಾಸ್ತವ್ಯವಾದರೂ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದರು.

  • 5 ನಿಮಿಷದಲ್ಲೇ ಇಡೀ ಜಿಲ್ಲೆಯ ಬರ ಅಧ್ಯಯನ ಮಾಡಿದ ಯಡಿಯೂರಪ್ಪ!

    5 ನಿಮಿಷದಲ್ಲೇ ಇಡೀ ಜಿಲ್ಲೆಯ ಬರ ಅಧ್ಯಯನ ಮಾಡಿದ ಯಡಿಯೂರಪ್ಪ!

    ಚಿಕ್ಕಬಳ್ಳಾಪುರ: ಬರೀ ಐದೇ ನಿಮಿಷದಲ್ಲಿ ಇಡೀ ಚಿಕ್ಕಬಳ್ಳಾಪುರ ಜಿಲ್ಲೆಯ ಬರ ಪರಿಶೀಲನೆಯನ್ನ ಮಾಜಿ ಸಿಎಂ ಯಡಿಯೂರಪ್ಪ ಮುಗಿಸಿದ್ದಾರೆ.

    ಕೋಲಾರ ಜಿಲ್ಲೆಯ ಬರ ಪ್ರವಾಸ ಮುಗಿಸಿ ಸಂಜೆ 5 ಗಂಟೆ 10 ನಿಮಿಷ ಸುಮಾರಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಬರ ಪ್ರವಾಸಕ್ಕೆ ಆಗಮಿಸಿದ ಯಡಿಯೂರಪ್ಪ ಮತ್ತು ತಂಡ ಚಿಕ್ಕಬಳ್ಳಾಪುರ ತಾಲ್ಲೂಕಿನ ಗಿಡ್ನಹಳ್ಳಿ ಬಳಿ ರಸ್ತೆ ಬದಿಯೇ ಇರುವ ರೈತ ಜಯರಾಮ್ ರವರ ಹಿಪ್ಪುನೇರಳೆ ತೋಟಕ್ಕೆ ಭೇಟಿ ನೀಡಿ ಬರ ಪರಿಶೀಲನೆ ನಡೆಸಿದರು. ವಿಫಲ ಕೊಳವೆಬಾವಿಯ ಬಗ್ಗೆ ರೈತನ ಬಳಿ ಮಾಹಿತಿ ಪಡೆದ ಯಡಿಯೂರಪ್ಪ ವಿದ್ಯುತ್ ಸಮಸ್ಯೆ ಬಗ್ಗೆ ಮಾಹಿತಿ ಪಡೆದು ಓಣಗಿದ ರಾಗಿ ಬೆಳೆ ವೀಕ್ಷಣೆ ಮಾಡಿದರು. ಇದೆಲ್ಲವೂ ಕೇವಲ 5 ನಿಮಿಷದಲ್ಲಿ ನೋಡಿದ್ದಾರೆ ಅನ್ನೋದು ವಿಶೇಷ.

    ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ನೇರವಾಗಿ ಚಿಕ್ಕಬಳ್ಳಾಪುರ ಜಿಲ್ಲಾಢಳಿತ ಭವನಕ್ಕೆ ಅಗಮಿಸಿದ ಯಡಿಯೂರಪ್ಪ ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್ ಜೊತೆ ಜಿಲ್ಲೆಯ ಬರದ ಬಗ್ಗೆ ಚರ್ಚಿಸಿ ಅಂಕಿ ಸಂಖ್ಯೆಗಳ ಮಾಹಿತಿ ಪಡೆದುಕೊಂಡರು. ಹೀಗಾಗಿ ಬರೀ ಕೇವಲ ಜಿಲ್ಲೆಯ ಒಂದು ಕಡೆ ಮಾತ್ರ ಬರ ಪರಿಶೀಲನೆ ನಡೆಸಿ, ಅದು 5 ನಿಮಿಷದಲ್ಲಿಯೇ ಇಡೀ ಜಿಲ್ಲೆಯ ಬರ ಅಧ್ಯಯನ ಮಾಡಿದ ಯಡಿಯೂರಪ್ಪ ನವರ ನಡೆ ಇದೆಂಥಾ ಬರ ಅಧ್ಯಯನ ಅಂತ ಹಲವರಲ್ಲಿ ಪ್ರಶ್ನೆ ಮೂಡುವಂತೆ ಮಾಡಿತ್ತು.

    ಜಿಲ್ಲೆಯ ಗಡಿ ತಾಲೂಕುಗಳಾದ ಬಾಗೇಪಲ್ಲಿ, ಚಿಂತಾಮಣಿ, ಗುಡಿಬಂಡೆ ಭಾಗದಲ್ಲಿ ತೀವ್ರತರವಾದ ಬರದಿಂದ ಜನ ಕಂಗೆಟ್ಟಿದ್ದರು. ಆ ಕಡೆಗೆ ರಾಜ್ಯ ಸರ್ಕಾರದ ಬರ ಸಂಪುಟದ ಉಪಸಮಿತಿ ಸಹ ಭೇಟಿ ನೀಡಿರಲಿಲ್ಲ. ಈಗ ವಿರೋಧ ಪಕ್ಷದ ನಾಯಕರಾದ ಯಡಿಯೂರಪ್ಪ ನವರು ಭೇಟಿ ಮಾಡಲಿಲ್ಲ. ಹೀಗಾಗಿ ಬರ ಅಧ್ಯಯನ ಅನ್ನೋದು ಕಾಟಚಾರಕ್ಕೆ ಮಾಡಿದ್ರಾ ಅನ್ನೋ ಪ್ರಶ್ನೆ ಎದುರಾಗುವಂತೆ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv