Tag: Drought relief fund

  • ಸುಪ್ರೀಂ ಕೋರ್ಟ್‌ಗೆ ಹೋಗಿ ರಾಜ್ಯ ಸರ್ಕಾರ ಬರ ಪರಿಹಾರ ಹಣ ಪಡೆದುಕೊಂಡು ಬಂದಿದೆ – ಕೃಷ್ಣಬೈರೇಗೌಡ

    ಸುಪ್ರೀಂ ಕೋರ್ಟ್‌ಗೆ ಹೋಗಿ ರಾಜ್ಯ ಸರ್ಕಾರ ಬರ ಪರಿಹಾರ ಹಣ ಪಡೆದುಕೊಂಡು ಬಂದಿದೆ – ಕೃಷ್ಣಬೈರೇಗೌಡ

    – ರಾಜ್ಯದಲ್ಲಿ 4,047 ಕೋಟಿ ರೂ. ಬರ ಪರಿಹಾರ ಕೊಟ್ಟಿದ್ದೇವೆ ಎಂದ ಸಚಿವ

    ಬೆಂಗಳೂರು: ರಾಜ್ಯದಲ್ಲಿ ಈವರೆಗೂ ಬರ ಪರಿಹಾರವಾಗಿ (Drought Relief) 4,047 ಕೋಟಿ ರೂ. ನೀಡಲಾಗಿದೆ ಅಂತ ಕಂದಾಯ ಸಚಿವ ಕೃಷ್ಣಬೈರೇಗೌಡ (Krishna Byregowda) ತಿಳಿಸಿದರು. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಛಲವಾದಿ ನಾರಾಯಣಸ್ವಾಮಿ ಬದಲಾಗಿ, ಬಿಜೆಪಿ ಸದಸ್ಯ ಕೇಶವ ಪ್ರಸಾದ್ ಪ್ರಶ್ನೆ ಕೇಳಿದ್ರು.

    ಸರ್ಕಾರ ಎಲ್ಲಾ ರೈತರಿಗೆ ಬರ ಪರಿಹಾರ ಇನ್ನೂ ಬಿಡುಗಡೆ ಮಾಡಿಲ್ಲ. ಕೇಂದ್ರದಿಂದ ಪರಿಹಾರ ಬಿಡುಗಡೆ ಆಗಿದೆ. ಆದರೂ ರಾಜ್ಯ ಸರ್ಕಾರ ಪರಿಹಾರ ನೀಡಿಲ್ಲ. ಬೆಳೆ ವಿಮೆ ಪರಿಹಾರ ಕೂಡ ಸರಿಯಾಗಿ ಸಿಗುತ್ತಿಲ್ಲ. ಈ ಬಗ್ಗೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಕೇಂದ್ರ ಸರ್ಕಾರದ ಜೊತೆಗೆ ರಾಜ್ಯ ಸರ್ಕಾರವೂ (Karnataka Govt) ಬರ ಪರಿಹಾರ ನೀಡಬೇಕು ಒತ್ತಾಯಿಸಿದರು. ಇದನ್ನೂ ಓದಿ: ಶಕ್ತಿ ಯೋಜನೆ ಅಡಿ ಸರ್ಕಾರದಿಂದ ಸಾರಿಗೆ ಇಲಾಖೆಗೆ 1,413 ಕೋಟಿ ರೂ. ಬಾಕಿ – ರಾಮಲಿಂಗಾರೆಡ್ಡಿ

    ಇದಕ್ಕೆ ಸಚಿವ ಕೃಷ್ಣಬೈರೇಗೌಡ ಉತ್ತರ ನೀಡಿ, ನಮ್ಮ ಸರ್ಕಾರ 38,78,525 ರೈತರಿಗೆ (Farmers) ಬರ ಪರಿಹಾರ ಕೊಟ್ಟಿದೆ. 3,535.30 ಕೋಟಿ ರೂ.ಗಳನ್ನ ಅರ್ಹ ರೈತಗೆ ಪರಿಹಾರ ನೀಡಲಾಗಿದೆ. ಡಿಜಿಟಲ್ ಸರ್ವೆ ಮೂಲಕ ಹಾನಿಯಾದ ರೈತರಿಗೆ ‌ಪರಿಹಾರ ಕೊಡಲಾಗಿದೆ. ಶೇ.33 ಕ್ಕಿಂತ ಹೆಚ್ಚು ಬೆಳೆ ಹಾನಿಯಾದ ರೈತರಿಗೆ ಪರಿಹಾರ ‌ನೀಡಲಾಗಿದೆ. ನಾಲೆಯಲ್ಲಿ ನೀರು ಹರಿಸಲು ಆಗದ ರೈತರಿಗೂ ಪರಿಹಾರ ಕೊಡಲಾಗಿದೆ. ಜೀವನೋಪಾಯಕ್ಕಾಗಿ 531 ಕೋಟಿ ರೂ.ಗಳನ್ನ 17 ಲಕ್ಷ ರೈತರಿಗೆ ಪಾವತಿ ಮಾಡ್ತಿದ್ದೇವೆ. 4,047 ಕೋಟಿ ರೂ. ಒಟ್ಟು ಪರಿಹಾರ ನೀಡಿದ್ದೇವೆ ಅಂತ ತಿಳಿಸಿದರು. ಇದನ್ನೂ ಓದಿ: ಯಾವ ರಾಜ್ಯವನ್ನೂ ಕಡೆಗಣಿಸಿಲ್ಲ, ಪ್ರತಿಪಕ್ಷಗಳ ಪ್ರತಿಭಟನೆ ದುರುದ್ದೇಶಪೂರ್ವಕ: ನಿರ್ಮಲಾ ಸೀತಾರಾಮನ್

    ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡದೇ ಇದ್ದಾಗ 1,296 ಕೋಟಿ ರೂ. ರಾಜ್ಯ ಸರ್ಕಾರದಿಂದ ಮೊದಲೇ ಬರ ಪರಿಹಾರ ಕೊಟ್ಟಿದ್ದೇವೆ. ಕೇಂದ್ರ ಸರ್ಕಾರ ಬರ ಪರಿಹಾರ ಕೊಟ್ಡಿರಲಿಲ್ಲ. ನಾವು ಸುಪ್ರೀಂ ಕೋರ್ಟ್‌ಗೆ ಹೋಗದೇ ಇದ್ದಿದ್ದರೇ ನಮಗೆ ಕೇಂದ್ರ ಪರಿಹಾರ ಕೊಡುತ್ತಿರಲಿಲ್ಲ. ಸುಪ್ರೀಂ ಕೋರ್ಟ್ ನಿಂದ ನಾವು ಪರಿಹಾರ ಪಡೆದಿದ್ದೇವೆ ಅಂತ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು. ಇದನ್ನೂ ಓದಿ: Nepal Plane Crash; ಟೇಕಾಫ್‌ ವೇಳೆ ವಿಮಾನ ಪತನ – 18 ಮಂದಿ ದಾರುಣ ಸಾವು

  • ರಾಜ್ಯಕ್ಕೆ ಬರಗಾಲ ಪರಿಹಾರ ಬಿಡುಗಡೆ ವಿಚಾರವಾಗಿ ಡಿ.23ಕ್ಕೆ ಕೇಂದ್ರದ ಸಭೆ: ಕೃಷ್ಣಬೈರೇಗೌಡ

    ರಾಜ್ಯಕ್ಕೆ ಬರಗಾಲ ಪರಿಹಾರ ಬಿಡುಗಡೆ ವಿಚಾರವಾಗಿ ಡಿ.23ಕ್ಕೆ ಕೇಂದ್ರದ ಸಭೆ: ಕೃಷ್ಣಬೈರೇಗೌಡ

    ನವದೆಹಲಿ: ರಾಜ್ಯಕ್ಕೆ ಬರ ಪರಿಹಾರ (Drought Relief Fund) ಬಿಡುಗಡೆಗೊಳಿಸುವ ಸಂಬಂಧ ಕೇಂದ್ರ ಸಚಿವ ಅಮಿತ್ ಶಾ (Amit Shah) ನೇತೃತ್ವದಲ್ಲಿ ಡಿ.23 ರಂದು ಉನ್ನತ ಮಟ್ಟದ ಸಭೆ ನಡೆಯಲಿದೆ ಎಂದು ಸಚಿವ ಕೃಷ್ಣಬೈರೇಗೌಡ (Krishna Byre Gowda) ತಿಳಿಸಿದ್ದಾರೆ.

    ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಹಾಗೂ ಕೇಂದ್ರ ಕೃಷಿ ಸಚಿವರಾದ ಅಜುರ್ನ್ ಮುಂಡಾ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ರಾಜ್ಯ ಈ ವರ್ಷ ಭೀಕರ ಬರಕ್ಕೆ ತುತ್ತಾಗಿದೆ. ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರಿಯಾದ ಸಮಯದಲ್ಲಿ ಅವರಿಗೆ ಪರಿಹಾರ ಧನ ನೀಡಬೇಕಿದೆ. ಹೀಗಾಗಿ ಕೇಂದ್ರ ಸರ್ಕಾರ ಶೀಘ್ರವಾಗಿ ಕರ್ನಾಟಕದ ಬರ ಪರಿಹಾರ ಮನವಿಯ ಬಗ್ಗೆ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಬೇಕು. ಆದಷ್ಟು ಶೀಘ್ರದಲ್ಲಿ ಹಣ ಬಿಡುಗಡೆ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಅವರ ಜೊತೆ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಅಮಿತ್ ಶಾ ಅವರು ಡಿ.23 ರಂದು ಉನ್ನತ ಮಟ್ಟದ ಸಭೆ ನಡೆಸಿ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡುವ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನಿಗಮ ಮಂಡಳಿಗಳಿಗೆ ಅಧ್ಯಕ್ಷರ ಆಯ್ಕೆ ಕಸರತ್ತು; 2-3 ದಿನದಲ್ಲಿ ಹೈಕಮಾಂಡ್ ತೀರ್ಮಾನ‌ ಮಾಡಲಿದೆ: ಸಿದ್ದರಾಮಯ್ಯ

    ರಾಜ್ಯದಲ್ಲಿರುವ ಸಣ್ಣ ರೈತರ ಸಂಖ್ಯೆಯ ನಿಖರ ಮಾಹಿತಿಯನ್ನು ಅಮಿತ್ ಶಾ ಅವರಿಗೆ ನೀಡಲಾಗಿದೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬಿಡುಗಡೆಯಾಗಲಿರುವ ಬರ ಪರಿಹಾರ ಹಣದ ಮೊತ್ತ ಸಣ್ಣ ರೈತರ ಸಂಖ್ಯೆಗೆ ಅನುಗುಣವಾಗಿರುತ್ತದೆ. ರಾಜ್ಯದ ಸಣ್ಣ ರೈತರ ಸಂಖ್ಯೆಯ ಬಗ್ಗೆ ಕೇಂದ್ರ ಸರ್ಕಾರದ ಬಳಿ ವಾಸ್ತವ ಅಂಕಿಅಂಶಗಳಿಲ್ಲ. ಕೇಂದ್ರ ಸರ್ಕಾರದ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿರುವ ಸಣ್ಣ ರೈತರ ಸಂಖ್ಯೆ ಕೇವಲ 44% ರಷ್ಟು ಮಾತ್ರ. ಬರ ಪರಿಹಾರ ಬಿಡುಗಡೆ ಸಂದರ್ಭದಲ್ಲಿ ಈ ಅಂಕಿಅಂಶವನ್ನು ಪರಿಗಣಿಸಿದರೆ ರಾಜ್ಯಕ್ಕೆ ನಷ್ಟವಾಗುತ್ತದೆ. ರಾಜ್ಯದ ಸಣ್ಣ ರೈತರ ವಾಸ್ತವ ಸಂಖ್ಯೆ 70% ರಿಂದ 75% ಇದೆ. ಈ ಬಗ್ಗೆ ರೈತರ ಆಧಾರ್ ಲಿಂಕ್ ಜೊತೆಗಿನ ನಿಖರ ಅಂಕಿಅಂಶವನ್ನು ನೀಡಲಾಗಿದೆ. ಬರ ಪರಿಹಾರ ಬಿಡುಗಡೆ ಮಾಡುವ ಸಂದರ್ಭದಲ್ಲಿ ಈ ಅಂಕಿಅಂಶವನ್ನು ಪರಿಗಣಿಸುವಂತೆ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ ಅವರನ್ನು ಭೇಟಿ ಮಾಡಿ, ಕೊಬ್ಬರಿ ಬೆಳೆಯನ್ನು ಕೇಂದ್ರ ಸರ್ಕಾರವೇ ನ್ಯಾಫೆಡ್ ಮುಖಾಂತರ ಖರೀದಿ ಮಾಡಬೇಕು. ರಾಜ್ಯದಲ್ಲಿ ಕೊಬ್ಬರಿ ಬೆಳೆಯುವ ರೈತರು ಅನೇಕರಿದ್ದಾರೆ. ಈಗ ಕೊಬ್ಬರಿ ಬೆಲೆ ತೀವ್ರ ಕುಸಿತ ಕಂಡಿದೆ. ಪರಿಣಾಮ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ನ್ಯಾಫೆಡ್ ಮುಖಾಂತರ ಮಾರುಕಟ್ಟೆಯಿಂದ ನೇರವಾಗಿ ಕೊಬ್ಬರಿ ಖರೀದಿಸಬೇಕು. ಈ ಪ್ರಕ್ರಿಯೆ ತಕ್ಷಣ ಆರಂಭವಾಗಬೇಕು. ನ್ಯಾಫೆಡ್ ಮೂಲಕ ಕೊಬ್ಬರಿ ಖರೀದಿಗೆ ಮುಂದಾದರೆ, ಬೆಲೆ ತಂತಾನೆ ನಿಯಂತ್ರಣವಾಗುತ್ತದೆ ಎಂದು ಮನವಿ ಮಾಡಿದ್ದಾರೆ.

    ಬರ ಪರಿಹಾರದ ಉನ್ನತ ಮಟ್ಟದ ಸಭೆಯಲ್ಲಿ ಕೇಂದ್ರ ಕೃಷಿ ಸಚಿವರೂ ಸಹ ಸದಸ್ಯರಾಗಿದ್ದು, ಕರ್ನಾಟಕಕ್ಕೆ ಶೀಘ್ರ ಪರಿಹಾರ ಹಣ ಬಿಡುಗಡೆ ಮಾಡುವ ಸಂಬಂಧ ಸಭೆಯಲ್ಲಿ ಮಾತನಾಡಲು ಕೋರಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಪತ್ರ ಬರೆದಿದ್ದಾರೆ. ಆ ಪತ್ರವನ್ನು ನಾನೇ ನೇರವಾಗಿ ಅರ್ಜುನ್ ಮುಂಡಾ ಅವರಿಗೆ ನೀಡಿದ್ದೇನೆ. ರೈತರ ಸಂಕಷ್ಟವನ್ನು ಬಗೆಹರಿಸಲು ಮನವಿ ಮಾಡಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ; ಬೆಂಗಳೂರು, ನೀರಾವರಿ ಯೋಜನೆಗಳಿಗೆ ಅನುಮತಿ & ಹಣಕಾಸು ನೆರವು ಕೋರಿದ ಡಿಸಿಎಂ

  • ಅಮಿತ್ ಶಾ ಭೇಟಿಯಾದ ಸಿಎಂ – ಬರ ಪರಿಹಾರ ಬಿಡುಗಡೆಗೆ ಆಗ್ರಹ

    ಅಮಿತ್ ಶಾ ಭೇಟಿಯಾದ ಸಿಎಂ – ಬರ ಪರಿಹಾರ ಬಿಡುಗಡೆಗೆ ಆಗ್ರಹ

    ನವದೆಹಲಿ: ಪ್ರಕೃತಿ ವಿಕೋಪ ಕುರಿತಂತೆ ಉನ್ನತ ಮಟ್ಟದ ಸಮಿತಿ ಸಭೆಯನ್ನು ಕೂಡಲೇ ಕರೆದು ರಾಜ್ಯಕ್ಕೆ ಬರ ಪರಿಹಾರ (Drought Relief Fund) ಬಿಡುಗಡೆ ಮಾಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಆಗ್ರಹಿಸಿದ್ದಾರೆ.

    ಸಂಸತ್‍ನಲ್ಲಿ ಅಮಿತ್ ಶಾ ಅವರನ್ನು ಭೇಟಿಯಾದ ಅವರು ರಾಜ್ಯದ ಬರ ಪರಿಸ್ಥಿತಿಯನ್ನು ವಿವರಿಸಿದರು. ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ತಲೆದೋರಿದ್ದು, 236 ತಾಲೂಕುಗಳ ಪೈಕಿ 223 ತಾಲೂಕುಗಳು ಬರ ಪೀಡಿತವಾಗಿವೆ. ಸುಮಾರು 48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ. ಇದರಿಂದಾಗಿ ರೈತರು, ಅದರಲ್ಲೂ ಹೆಚ್ಚಿನ ಸಂಖ್ಯೆಯ ಸಣ್ಣ ಮತ್ತು ಅತಿ ಸಣ್ಣ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರವು ಎನ್.ಡಿ.ಆರ್.ಎಫ್. ಮಾರ್ಗಸೂಚಿಯ ಅನ್ವಯ ಬರ ಪರಿಹಾರ ಬಿಡುಗಡೆಗಾಗಿ ಮೊದಲ ಪ್ರಸ್ತಾವನೆ ಸಲ್ಲಿಸಿ ಮೂರು ತಿಂಗಳು ಕಳೆದಿದೆ. ಆದ್ದರಿಂದ ಕೂಡಲೇ ಉನ್ನತಮಟ್ಟದ ಸಮಿತಿ ಸಭೆ ನಡೆಸಿ, 18,177.44 ಕೋಟಿ ರೂ. ಹಣವನ್ನು ಬರ ಪರಿಹಾರಕ್ಕೆ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಯಾವ ಸೀಟು ಹಂಚಿಕೆಯೂ ಇಲ್ಲ; ದೆಹಲಿಗೆ ವೈಯಕ್ತಿಕ ಕೆಲಸಕ್ಕೆ ಹೋಗುತ್ತಿದ್ದೇನೆ: ಹೆಚ್‌ಡಿಕೆ

    4663.12 ಕೋಟಿ ರೂ. ಇನ್‍ಪುಟ್ ಸಬ್ಸಿಡಿ, 12,577.86 ಕೋಟಿ ರೂ. ತುರ್ತು ಪರಿಹಾರ, 566.78 ಕೋಟಿ ರೂ. ಕುಡಿಯುವ ನೀರಿಗಾಗಿ ಹಾಗೂ 363.68 ಕೋಟಿ ರೂ. ಜಾನುವಾರುಗಳ ಸಂರಕ್ಷಣೆಗಾಗಿ ಒದಗಿಸುವಂತೆ ಕೋರಲಾಗಿದೆ. ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಪರಿಗಣಿಸುವಾಗ ಕೇಂದ್ರ ಸರ್ಕಾರವು 2015-16ರ ಕೃಷಿ ಗಣತಿಯ ದತ್ತಾಂಶವನ್ನು ಪರಿಗಣಿಸುತ್ತಿದೆ. ಇದು 8 ವರ್ಷಗಳ ಹಳೆಯ ಮಾಹಿತಿಯಾಗಿದ್ದು, ಆಸ್ತಿ ವಿಭಜನೆ ಮತ್ತಿತರ ಕಾರಣಗಳಿಂದ ಸಣ್ಣ ಮತ್ತು ಅತಿ ಸಣ್ಣ ರೈತರ ಸಂಖ್ಯೆ ಹೆಚ್ಚಾಗಿದ್ದು, 83 ಲಕ್ಷಕ್ಕೂ ಹೆಚ್ಚಿದೆ.

    ಪಿಎಂ-ಕಿಸಾನ್ ಯೋಜನೆಗೆ ರಾಜ್ಯದ ರೈತರ ದತ್ತಾಂಶ ಸಂಗ್ರಹಿಸುವ ತಂತ್ರಾಂಶ ಫ್ರೂಟ್ಸ್‌ನಲ್ಲಿ ದಾಖಲಿಸಿದ ಮಾಹಿತಿಯನ್ನು ಪರಿಗಣಿಸಲಾಗುತ್ತಿದೆ. ಅಂತೆಯೇ ಬೆಳೆ ಪರಿಹಾರ ವಿತರಣೆಗೂ ಈ ದತ್ತಾಂಶವನ್ನು ಪರಿಗಣಿಸುವಂತೆ ಮುಖ್ಯಮಂತ್ರಿಗಳು ಮನವಿ ಮಾಡಿದರು. ಬರ ಪರಿಹಾರಕ್ಕಾಗಿ ರಾಜ್ಯದ ಮೊದಲ ಪ್ರಸ್ತಾವನೆಯನ್ನು ಕೇಂದ್ರ ಕೃಷಿ ಸಚಿವಾಲಯಕ್ಕೆ 2023ರ ಸೆ.22 ರಂದು ಸಲ್ಲಿಸಲಾಗಿತ್ತು. ಭಾರತ ಸರ್ಕಾರದ ಬರ ಅಧ್ಯಯನ ತಂಡವು ಅಕ್ಟೋಬರ್ ತಿಂಗಳ 4 ರಿಂದ 9ರ ನಡುವೆ ಭೇಟಿ ನೀಡಿ, ವರದಿಯನ್ನು ಸಲ್ಲಿಸಿದೆ. ಅದರ ನಂತರ ಇನ್ನೂ 21 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ.

    ಅ.20 ರಂದು ಕೇಂದ್ರ ಕೃಷಿ ಸಚಿವಾಲಯಕ್ಕೆ ಎನ್.ಡಿ.ಆರ್.ಎಫ್. ಅಡಿ 17,901.73 ಕೋಟಿ ರೂ. ಪರಿಹಾರ ಒದಗಿಸುವಂತೆ ಪ್ರಸ್ತಾವನೆ ಸಲ್ಲಿಸಲಾಯಿತು. ಇದರಲ್ಲಿ ತುರ್ತು ಪರಿಹಾರದ 12,577.86 ಕೋಟಿ ರೂ. ಮೊತ್ತವೂ ಸೇರಿದೆ. ನ.4 ರಂದು ಹೆಚ್ಚುವರಿಯಾಗಿ 7 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಯಿತು. ಈ ಹಿನ್ನೆಲೆಯಲ್ಲಿ ಸಲ್ಲಿಸಿದ ಪೂರಕ ಮನವಿಯೊಂದಿಗೆ ಕೇಂದ್ರದಿಂದ 18,177.44 ಕೋಟಿ ರೂ. ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

    ಮೊದಲ ಮನವಿ ಸಲ್ಲಿಸಿ ಈಗಾಗಲೇ ಮೂರು ತಿಂಗಳು ಕಳೆದಿದ್ದು, ರೈತರು ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಬೆಳೆ ವಿಫಲವಾಗಿರುವ ಹಿನ್ನೆಲೆಯಲ್ಲಿ ರೈತರಿಗೆ ಇನ್‍ಪುಟ್ ಸಬ್ಸಿಡಿ ನೀಡುವುದು ಅತ್ಯಗತ್ಯವಾಗಿದೆ ಎಂದು ಮುಖ್ಯಮಂತ್ರಿಗಳು ಪ್ರತಿಪಾದಿಸಿದ್ದಾರೆ. ಈ ಸಂದರ್ಭದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಉಪಸ್ಥಿತರಿದ್ದರು. ಇದನ್ನೂ ಓದಿ: ಇಂದು ಮತ್ತಿಬ್ಬರು ಅಮಾನತು- ಸಂಸದರ ಸಸ್ಪೆಂಡ್ ಸಂಖ್ಯೆ 143ಕ್ಕೆ ಏರಿಕೆ

  • ಬರ ಪರಿಹಾರಕ್ಕೆ ರಾಜ್ಯ ಸರ್ಕಾರದಿಂದ 324 ಕೋಟಿ ಅನುದಾನ ಬಿಡುಗಡೆ – ಯಾವ ಜಿಲ್ಲೆಗೆ ಎಷ್ಟು?

    ಬರ ಪರಿಹಾರಕ್ಕೆ ರಾಜ್ಯ ಸರ್ಕಾರದಿಂದ 324 ಕೋಟಿ ಅನುದಾನ ಬಿಡುಗಡೆ – ಯಾವ ಜಿಲ್ಲೆಗೆ ಎಷ್ಟು?

    – ರಾಜ್ಯದಲ್ಲಿ ಕಳೆದ 125 ವರ್ಷಗಳಲ್ಲಿ ಅತಿ ಕಡಿಮೆ ಮಳೆ ದಾಖಲು

    ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ದ ಬರ ಪರಿಹಾರಕ್ಕೆ (Drought Relief) ಅನುದಾನ ಬಿಡುಗಡೆ ಮಾಡಿಲ್ಲ ಅಂತ ಆರೋಪ ಮಾಡುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಬರ ಪರಿಹಾರಕ್ಕೆ ಅನುದಾನ ಬಿಡುಗಡೆ ಮಾಡಿದೆ. SDRF ಅಡಿ ಅನುದಾನ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

    31 ಜಿಲ್ಲೆಗಳಿಗೆ 324 ಕೋಟಿ ರೂ. ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಈ ಬಾರಿ 235 ತಾಲೂಕುಗಳ ಪೈಕಿ 216 ತಾಲೂಕುಗಳು ಬರ ಪೀಡಿತ ಅಂತ ರಾಜ್ಯ ಸರ್ಕಾರ (Karnataka Govt) ಘೋಷಣೆ ಮಾಡಿತ್ತು. ಅಲ್ಲದೆ, ಕೇಂದ್ರ ಸರ್ಕಾರಕ್ಕೆ ಬರ ಪರಿಹಾರಕ್ಕೆ ಅಂತ 17 ಸಾವಿರ ಕೋಟಿ ರೂ. ಪರಿಹಾರ ಕೇಳಿದೆ. ಈವರೆಗೂ ಕೇಂದ್ರ ಸರ್ಕಾರ ಒಂದೂ ರೂಪಾಯಿ ಅನುದಾನ ಬಿಡುಗಡೆ ಮಾಡಿಲ್ಲ ಅಂತ ಸಿಎಂ ಹಾದಿಯಾಗಿ ಸಚಿವರು ಕೇಂದ್ರದ ವಿರುದ್ದ ವಾಗ್ದಾಳಿ ನಡೆಸಿದ್ದರು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಬರ ಪರಿಹಾರಕ್ಕೆ ಅಂತ 324 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ. ಇದನ್ನೂ ಓದಿ: ನಾನು ಯಾವತ್ತೂ ಮಂಡ್ಯ ಬಿಡಲ್ಲ, ರಕ್ತದಲ್ಲಿ ಬರೆದು ಕೊಡಬೇಕಾ: ಸುಮಲತಾ ಪ್ರಶ್ನೆ

    ಯಾವ ಜಿಲ್ಲೆಗೆ ಎಷ್ಟು ಅನುದಾನ?
    ಬೆಂಗಳೂರು ನಗರ- 7.50 ಕೋಟಿ.
    ಬೆಂಗಳೂರು ಗ್ರಾಮಾಂತರ- 6 ಕೋಟಿ.
    ರಾಮನಗರ-7.50 ಕೋಟಿ.
    ಕೋಲಾರ – 9 ಕೋಟಿ.
    ಚಿಕ್ಕಬಳ್ಳಾಪುರ- 9 ಕೋಟಿ.
    ತುಮಕೂರು-15 ಕೋಟಿ.
    ಚಿತ್ರದುರ್ಗ- 9 ಕೋಟಿ.
    ದಾವಣಗೆರೆ- 9 ಕೋಟಿ.
    ಚಾಮರಾಜನಗರ-7.50 ಕೋಟಿ
    ಮೈಸೂರು – 13.50 ಕೋಟಿ.
    ಮಂಡ್ಯ- 10.50 ಕೋಟಿ.
    ಬಳ್ಳಾರಿ- 7.50 ಕೋಟಿ.
    ಕೊಪ್ಪಳ- 10.50 ಕೋಟಿ.
    ರಾಯಚೂರು- 9 ಕೋಟಿ.
    ಕಲಬುರ್ಗಿ- 16.50 ಕೋಟಿ.
    ಬೀದರ್- 4.50 ಕೋಟಿ.
    ಬೆಳಗಾವಿ- 22.50 ಕೋಟಿ.
    ಬಾಗಲಕೋಟೆ- 13.50 ಕೋಟಿ.
    ವಿಜಯಪುರ- 18 ಕೋಟಿ.
    ಗದಗ-10.50 ಕೋಟಿ.
    ಹಾವೇರಿ-12 ಕೋಟಿ.
    ಧಾರವಾಡ-12 ಕೋಟಿ.
    ಶಿವಮೊಗ್ಗ-10.50 ಕೋಟಿ.
    ಹಾಸನ- 12 ಕೋಟಿ.
    ಚಿಕ್ಕಮಗಳೂರು-12 ಕೋಟಿ.
    ಕೊಡಗು-7.50 ಕೋಟಿ.
    ದಕ್ಷಿಣ ಕನ್ನಡ- 3 ಕೋಟಿ.
    ಉಡುಪಿ- 4.50 ಕೋಟಿ.
    ಉತ್ತರ ಕನ್ನಡ-16.50 ಕೋಟಿ.
    ಯಾದಗಿರಿ-9 ಕೋಟಿ.
    ವಿಜಯನಗರ-9 ಕೋಟಿ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೇಂದ್ರದಿಂದ ಕರ್ನಾಟಕಕ್ಕೆ ಒಟ್ಟು 1782.44 ಕೋಟಿ ರೂ. ಬರ ಅನುದಾನ ಬಿಡುಗಡೆ

    ಕೇಂದ್ರದಿಂದ ಕರ್ನಾಟಕಕ್ಕೆ ಒಟ್ಟು 1782.44 ಕೋಟಿ ರೂ. ಬರ ಅನುದಾನ ಬಿಡುಗಡೆ

    ನವದೆಹಲಿ: ಬರದಿಂದ ತತ್ತರಿಸಿರುವ ಕರ್ನಾಟಕ ಹಾಗೂ ತಮಿಳುನಾಡಿಗೆ ಕೇಂದ್ರ ಸರ್ಕಾರ ಬರ ಪರಿಹಾರ ಹಣವನ್ನು ಬಿಡುಗಡೆ ಮಾಡಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಒಟ್ಟು 1782.44 ಕೋಟಿ ರೂ. ಹಣ ಬರ ಪರಿಹಾರ ಹಣ ಮಂಜೂರು ಮಾಡಿದೆ. ಹಾಗೆ ತಮಿಳುನಾಡಿಗೆ 1793.63 ರೂ. ಬರ ಪರಿಹಾರ ಹಣ ಮಂಜೂರು ಮಾಡಲಾಗಿದೆ.

    ಈ ಮಂಜೂರಾತಿಯ ಆಧಾರದ ಮೇಲೆ ಕರ್ನಾಟಕಕ್ಕೆ ಈ ಹಿಂದೆ ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಲಾಗಿದ್ದ 450 ಕೋಟಿ ರೂ. ಹಾಗೂ ರಾಜ್ಯ ವಿಪತ್ತು ನಿರ್ವಹಣಾ ನಿಧಿ(ಎಸ್‍ಡಿಆರ್‍ಎಫ್)ನಲ್ಲಿ ಕರ್ನಾಟಕದೊಂದಿಗೆ ಬಾಕಿ ಉಳಿದಿದ್ದ 96.92 ಕೋಟಿ ರೂ. ಹೊಂದಿಸಿ ಒಟ್ಟು 1235.52 ಕೋಟಿ ರೂ. ಬಿಡುಗಡೆಯಾಗಿದೆ.

    ಅದೇ ರೀತಿ ತಮಿಳುನಾಡಿಗೆ ಎಸ್‍ಡಿಆರ್‍ಎಫ್‍ನಲ್ಲಿ ಬಾಕಿ ಉಳಿದಿದ್ದ 345.64 ಕೋಟಿ ರೂ. ಹೊಂದಿಸಿ ಒಟ್ಟು 1447.99 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇದರ ಜೊತೆಗೆ ತಮಿಳುನಾಡಿಗೆ 2016 ರ ಡಿಸೆಂಬರ್‍ನಲ್ಲಿ ಉಂಟಾದ ವಾರ್ಧಾ ಚಂಡಮಾರುತಕ್ಕಾಗಿ 264.11 ಕೋಟಿ ರೂ. ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದೆ.

    ಬರ ಪರಿಸ್ಥಿತಿಯ ಬಗ್ಗೆ ರಾಜ್ಯಗಳಿಂದ ವಿವರ ಪಡೆದ ಮೇಲೆ ಕೇಂದ್ರ ತಂಡವನ್ನು ಬರಪೀಡಿತ ಪ್ರದೇಶಗಳ ಪರಿಶೀಲನೆಗೆ ಕಳಿಸಲಾಗಿತ್ತು. ಈ ತಂಡ ಸಲ್ಲಿಸಿದ ವರದಿಯ ಆಧಾರದ ಮೇಲೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಪರಿಹಾರ ಹಣವನ್ನ ಬಿಡುಗಡೆ ಮಾಡಲಾಗಿದೆ.

    ಇದಲ್ಲದೆ ಕೇಂದ್ರ ತೆರಿಗೆ ವಿಕೇಂದ್ರೀಕರಣ ಸೂತ್ರದ ಅನ್ವಯ 2016-17ನೇ ಸಾಲಿಗೆ ಎಲ್ಲಾ ರಾಜ್ಯಗಳಿಗೆ 6.08 ಲಕ್ಷ ಕೋಟಿ ರೂ. ಬಿಡುಗಡೆ ಮಾಡಿದೆ. ಇದರಲ್ಲಿ ಕರ್ನಾಟಕಕ್ಕೆ 2,8750 ರೂ. ಬಂದಿದ್ದರೆ ತಮಿಳುನಾಡಿಗೆ 24,538 ಕೋಟಿ ರೂ. ಸಿಕ್ಕಿದೆ.

    ರೈತರ ನೆರವಿಗಾಗಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ, 2016-17ನೇ ಸಾಲಿಗೆ 13,240 ಕೋಟಿ ರೂ. ನೀಡಲಾಗಿದೆ. ಮನರೇಗಾ ಯೋಜನೆಗೆ 47,499 ಕೋಟಿ ರೂ ಸೇರಿದಂತೆ ಕೇಂದ್ರ ಪ್ರಾಯೋಜಿತ ಯೋಜನೆಗಳ ಅಡಿ ಒಟ್ಟು 2,45,435 ಕೋಟಿ ರೂ. ನೀಡಲಾಗಿದೆ.

    ಬರ ಪರಿಹಾರವಾಗಿ ರಾಜ್ಯಕ್ಕೆ ಕೇಂದ್ರ ಸರ್ಕಾರ ಆರಂಭದಲ್ಲಿ 1782 ಕೋಟಿ ರೂ. ಅನುದಾನ ನೀಡಲು ಒಪ್ಪಿಗೆ ನೀಡಿದ್ದು, ಅದರಲ್ಲಿ 450 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿತ್ತು. ಉಳಿದ ಹಣವನ್ನು ಬಿಡುಗಡೆ ಮಾಡಿರಲಿಲ್ಲ. ಆರಂಭದಲ್ಲಿ ಬಿಡುಗಡೆಯಾದ 450 ಕೋಟಿ ರೂ. ಖರ್ಚು ಮಾಡಿದ ಬಳಿಕ ಉಳಿದ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ಹೇಳಿದ್ದರೆ ರಾಜ್ಯ ಸರ್ಕಾರ ಒಂದೇ ಬಾರಿಗೆ ಈ ಹಣವನ್ನು ಬಿಡುಗಡೆ ಮಾಡಿ ಎಂದು ತನ್ನ ವಾದವನ್ನು ಮಂಡಿಸುತಿತ್ತು. ಎರಡೂ ಸರ್ಕಾರದ ಕಚ್ಚಾಟದಿಂದ ರೈತರಿಗೆ ಸಮಸ್ಯೆಯಾಗುತಿತ್ತು. ಈಗ ಕೇಂದ್ರ ಸರ್ಕಾರ ತನ್ನ ಪಾಲಿನ ಎಲ್ಲ ಹಣವನ್ನು ಬಿಡುಗಡೆ ಮಾಡಿದೆ.

    ಶುಕ್ರವಾರ ಮೋದಿ ಕರೆದಿದ್ದ ದಕ್ಷಿಣ ಭಾರತದ ಸಂಸದರ ಸಭೆಯಲ್ಲಿ ರಾಜ್ಯದ ಬಿಜೆಪಿ ನಾಯಕರು ಕರ್ನಾಟಕಕ್ಕೆ ಬರಬೇಕಾಗಿದ್ದ ಅನುದಾನದ ವಿಚಾರವನ್ನು ಪ್ರಸ್ತಾಪ ಮಾಡದೇ ಇರುವ ವಿಚಾರದ ಸುದ್ದಿ ಪಬ್ಲಿಕ್ ಟಿವಿ ವೆಬ್‍ಸೈಟ್‍ನಲ್ಲಿ ಪ್ರಕಟಗೊಂಡಿತ್ತು.

    ಇದನ್ನೂ ಓದಿ: ಪ್ರಧಾನಿ ಮೋದಿ ಸಭೆಯಲ್ಲಿ ರಾಜ್ಯದ ಹಿತವನ್ನು ಮರೆತ ಬಿಜೆಪಿ ಸಂಸದರು