Tag: DROO

  • ಚುನಾವಣೆ ಸಮಯದಲ್ಲಿ ಮೋದಿ ‘ಮಿಶನ್ ಶಕ್ತಿ’ ಘೋಷಣೆ ಮಾಡಿದ್ದು ಸರಿಯೇ? ಬಿಜೆಪಿ, ಪ್ರತಿಪಕ್ಷಗಳು ಹೇಳೋದು ಏನು?

    ಚುನಾವಣೆ ಸಮಯದಲ್ಲಿ ಮೋದಿ ‘ಮಿಶನ್ ಶಕ್ತಿ’ ಘೋಷಣೆ ಮಾಡಿದ್ದು ಸರಿಯೇ? ಬಿಜೆಪಿ, ಪ್ರತಿಪಕ್ಷಗಳು ಹೇಳೋದು ಏನು?

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ವಿಜ್ಞಾನಿ ಮಾಡಿದ ಸಾಧನೆಯ ಬಗ್ಗೆ ಘೋಷಣೆ ಮಾಡುತ್ತಿದಂತೆ ಪ್ರತಿಪಕ್ಷಗಳು ವಾಗ್ದಾಳಿ ನಡೆಸಿದ್ದು, ಚುನಾವಣೆಯ ಸಂದರ್ಭದಲ್ಲಿ ಇಂತಹ ಘೋಷಣೆ ಮಾಡಿದ್ದೇಕೆ ಎಂದು ಪ್ರಶ್ನೆ ಮಾಡಿವೆ.

    ದೇಶದ ವಿಜ್ಞಾನಿಗಳು ವರ್ಷಗಳ ಕಾಲ ಶ್ರಮ ವಹಿಸಿ ಮಾಡಿದ ಸಾಧನೆಯನ್ನು ಚುನಾವಣೆಗೆ ಕೇವಲ 2 ವಾರಗಳು ಬಾಕಿ ಇರುವ ವೇಳೆ ತಿಳಿಸಿದ್ದು ಎಷ್ಟು ಸರಿ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದ್ದು, ‘ಮಿಶನ್ ಶಕ್ತಿ’ ಮೋದಿ ಮಾಡಿದ ಸಾಧನೆ ಅಲ್ಲ. ಅಷ್ಟಕ್ಕೂ ಉಪಗ್ರಹವನ್ನು ನರೇಂದ್ರ ಮೋದಿ ಹಾರಿಸಿದ್ದಲ್ಲ. ಮೋದಿ ಸಾಧನೆ ಎಂದು ಸುಮ್ಮನೆ ಬಿಂಬಿಸಲಾಗ್ತಿದೆ. ವಿಜ್ಞಾನಿಗಳು ತಮ್ಮ ಕೆಲಸ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

    ಇತ್ತ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರತಿಕ್ರಿಯೆ ನೀಡಿ, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪದ ಅಡಿ ಆಯೋಗಕ್ಕೆ ದೂರು ನೀಡುತ್ತೇವೆ. ಬಾಹ್ಯಾಕಾಶ ಅಭಿವೃದ್ಧಿ ಮತ್ತು ಸಂಶೋಧನೆ ಬಹುವರ್ಷಗಳಿಂದ ನಡೆಯುತ್ತಿದೆ. ಆದರೆ ಇಂದು ಮೋದಿ ಮತ್ತೊಂದು ನಾಟಕ ಮಾಡಿದ್ದಾರೆ ಎಂದು ದೂರಿದ್ದಾರೆ. ಯುಪಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಪ್ರಧಾನಿ ಮೋದಿಯವರು ಮತ್ತೊಮ್ಮೆ 1 ಗಂಟೆ ಸಮಯದ ಟಿವಿಯಲ್ಲಿ ಕಾಣಿಸಿಕೊಳ್ಳಲು ಹಾಗೂ ನಿರುದ್ಯೋಗ, ಗ್ರಾಮೀಣ ಸಮಸ್ಯೆ, ಮಹಿಳಾ ಸುರಕ್ಷತೆ ವಿಷಯಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಆಕಾಶದತ್ತ ತೋರಿಸಿದ್ದಾರೆ ಎಂದಿದ್ದಾರೆ.

    ಇತ್ತ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗೆ (ಡಿಆರ್‌ಡಿಒ) ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಶುಭಕೋರಿದ್ದು, ಭಾರತ ಮತ್ತೊಂದು ಮೈಲಿಗಲ್ಲನ್ನು ನಿರ್ಮಾಣ ಮಾಡಿದೆ ಎಂದು ಹೇಳಿ ನರೇಂದ್ರ ಮೋದಿ ಅವರಿಗೆ ವಿಶ್ವ ನಾಟಕ ದಿನಾಚರಣೆಯ ಶುಭಾಶಯವನ್ನು ತಿಳಿಸಿದ್ದಾರೆ.

    ಬಿಜೆಪಿ ಹೇಳೋದು ಏನು?
    ದೇಶದ ರಕ್ಷಣೆಗೆ ಸಂಬಂಧಿಸಿದ ವಿಷಯಗಳನ್ನು ಘೋಷಣೆ ಮಾಡಲು ಚುನಾವಣಾ ಆಯೋಗದ ಅನುಮತಿ ಪಡೆಯುವ ಅಗತ್ಯವಿಲ್ಲ. ಅಲ್ಲದೇ ಬಾಹ್ಯಾಕಾಶ ಸಂಶೋಧನೆ ಅಭಿವೃದ್ಧಿ ಇಲಾಖೆ ಜವಾಬ್ದಾರಿಯನ್ನು ಪ್ರಧಾನಿ ಅವರು ನಿರ್ವಹಣೆ ಮಾಡುತ್ತಿರುವುದರಿಂದ ಇಲಾಖೆಯ ಸಾಧನೆಯನ್ನು ಜನರ ಮುಂದಿಟ್ಟಿದ್ದಾರೆ ಎಂದು ಬಿಜೆಪಿ ಹೇಳಿದೆ. ಅಲ್ಲದೇ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷವರ್ಧನ್ ಸಿಂಗ್ ಕೂಡ ವಿಜ್ಞಾನಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ದೇವರು ಜನರಿಗೆ ನೀಡಿದ ‘ಡಿವೈನ್ ಗಿಫ್ಟ್’ ಮೋದಿ ಎಂದಿದ್ದಾರೆ.

    2014ರಲ್ಲಿ ಇಸ್ರೋ ಉಪಗ್ರಹ ಮಂಗಳ ಗ್ರಹಕ್ಕೆ ತಲುಪಿದ ಸಂದರ್ಭದಲ್ಲಿ ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸಿ ವಿಜ್ಞಾನಿಗಳನ್ನು ಅಭಿನಂದಿಸಿದ್ದರು. ಈಗ ಡಿಆರ್‌ಡಿಒ ವಿಜ್ಞಾನಿಗಳು ವಿಶೇಷ ಸಾಧನೆ ಮಾಡಿದ್ದಕ್ಕೆ ದೇಶವನ್ನು ಉದ್ದೇಶಿಸಿ ಮಾತನಾಡಿ ಅಭಿನಂದಿಸಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ಬಿಜೆಪಿ ಮಂದಿ ಪ್ರಶ್ನಿಸುತ್ತಿದ್ದಾರೆ.

    ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ ( ಡಿಆರ್‌ಡಿಒ) ಮಾಜಿ ಅಧ್ಯಕ್ಷ ವಿಕೆ ಸಾರಸ್ವತ್ ಪ್ರತಿಕ್ರಿಯಿಸಿ, 2012 ಮತ್ತು 2013 ರಲ್ಲಿ ನಾವು ಉಪಗ್ರಹ ವಿರೋಧಿ ಅಸ್ತ್ರಗಳ ಪರೀಕ್ಷಾರ್ಥ ಪ್ರಯೋಗಕ್ಕೆ ನಾವು ಸಿದ್ಧರಿದ್ದೇವೆ ಎಂದು ಸರ್ಕಾರಕ್ಕೆ ತಿಳಿಸಿದ್ದೇವು. ಆದರೆ ಸರ್ಕಾರ ಪ್ರಯೋಗ ನಡೆಸಲು ಸಂಪನ್ಮೂಲ ಮತ್ತು ಅನುಮತಿ ನೀಡಿರಲಿಲ್ಲ. ಕಳೆದ ನಾಲ್ಕು ವರ್ಷದಲ್ಲಿ ಕೇಂದ್ರ ಸರ್ಕಾರ ಡಿಆರ್‌ಡಿಒಗೆ ಬೇಕಾಗಿದ್ದ ಸಂಪೂರ್ಣ ಅನುಮತಿ ನೀಡಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಈ ವಿಚಾರದಲ್ಲಿ ಬಹಳ ಆಸಕ್ತಿ ವಹಿಸಿದ್ದರು. ಈ ಪರೀಕ್ಷೆ ಯಶಸ್ಸಿನ ಶ್ರೇಯಸ್ಸು ಡಿಆರ್‌ಡಿಒ ವಿಜ್ಞಾನಿಗಳು ಮತ್ತು ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದ್ದಾರೆ. ಬಿಜೆಪಿ ನಾಯಕರು ಈಗ ಸಾರಸ್ವತ್ ಹೇಳಿಕೆಯನ್ನು ಉಲ್ಲೇಖಿಸಿ ಮೋದಿಯನ್ನು ಟೀಕಿಸಿದವರಿಗೆ ಉತ್ತರಿಸುತ್ತಿದ್ದಾರೆ.