Tag: drone camera

  • ಕೊಡವರ ನಾಡಲ್ಲಿ ತಗ್ಗಿದ ವರುಣನ ಆರ್ಭಟ- ಡ್ರೋನ್ ಬಳಸಿ ನಾಪತ್ತೆಯಾದವರ ಶೋಧ

    ಕೊಡವರ ನಾಡಲ್ಲಿ ತಗ್ಗಿದ ವರುಣನ ಆರ್ಭಟ- ಡ್ರೋನ್ ಬಳಸಿ ನಾಪತ್ತೆಯಾದವರ ಶೋಧ

    -ಮಂಗಳೂರು- ಬೆಂಗಳೂರು ರೈಲು ಯಾನ ಆರಂಭ

    ಮಡಿಕೇರಿ: ಕೊಡಗಿನಲ್ಲಿ ವರುಣನ ಆರ್ಭಟ ಕೊಂಚ ಇಳಿಮುಖವಾಗಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ರಕ್ಷಣಾ ಕಾರ್ಯ ಅಂತಿಮ ಹಂತ ತಲುಪುತ್ತಿದ್ದು, ಇದೂವರೆಗೆ ಒಟ್ಟು 4,320 ಮಂದಿಯನ್ನು ರಕ್ಷಿಸಿ ಜಿಲ್ಲೆಯ 41 ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.

    ಸುಮಾರು 50 ಮಂದಿ ನಾಪತ್ತೆಯಾಗಿರುವ ಅಥವಾ ಪ್ರವಾಹದಲ್ಲಿ ಸಿಲುಕಿರುವ ಸಾಧ್ಯತೆ ಇದ್ದು, ಅವರಿಗಾಗಿ ಶೋಧ ಕಾರ್ಯ ನಡೆದಿದೆ. ಭಾರತೀಯ ಸೇನೆ ಮತ್ತು ನೌಕಾಪಡೆ ಸಿಬ್ಬಂದಿ ಹಳ್ಳಿಗಳಿಗೆ ಭೇಟಿ ನೀಡಿ ಯಾರಾದರೂ ಪ್ರವಾಹದಲ್ಲಿ ಸಿಲುಕಿದ್ದಾರಾ? ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೇ ಡ್ರೋನ್ ಕ್ಯಾಮೆರಾ ಬಳಸಿ ನಾಪತ್ತೆಯಾದವರ ಶೋಧ ನಡೆಸಲಾಗುತ್ತಿದೆ.

    ಪ್ರಕೃತಿ ವಿಕೋಪಕ್ಕೆ ನಲುಗಿರುವ ಕೊಡುಗು ಜಿಲ್ಲೆಯಲ್ಲಿ ಹಲವು ಪ್ರವಾಸಿಗರು ರೆಸಾರ್ಟ್ ಮತ್ತು ಹೋಟೆಲ್‍ಗಳಲ್ಲಿ ಸಿಲುಕಿರುವ ಹಿನ್ನೆಲೆಯಲ್ಲಿ, ಆಗಸ್ಟ್ 31ರ ವರೆಗೆ ಎಲ್ಲಾ ಹೋಟೆಲ್‍ಗಳ ಬುಕ್ಕಿಂಗ್ ಅನ್ನು ರದ್ದುಗೊಳಿಸಲಾಗಿದೆ. ಪ್ರವಾಸಿಗರು ಹೋಟೆಲ್, ಹೋಮ್ ಸ್ಟೇ ಮತ್ತು ರೆಸಾರ್ಟ್ ಗಳಲ್ಲಿ ಆಗಸ್ಟ್ 31ರ ವರೆಗೆ ಮಾಡಿದ್ದ ಬುಕ್ಕಿಂಗ್ ಗಳನ್ನು ರದ್ದುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸಿದ್ದಾರೆ.

    ಇತ್ತ ಮಂಗಳೂರು-ಬೆಂಗಳೂರು ರೈಲು ಯಾನ ಮತ್ತೆ ಆರಂಭವಾಗಿದೆ. ಇದರಿಂದ ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ಪ್ರಯಾಣಿಕರು ಸ್ವಲ್ಪ ಮಟ್ಟಿಗೆ ಉಸಿರು ಬಿಡುವಂತಾಗಿದೆ. ಈ ನಡುವೆ ಪ್ರವಾಹದಿಂದ ತತ್ತರಿಸಿದ ಕೇರಳದ ರೈಲು ಹಳಿಗಳು ಶೇ.90ರಷ್ಟು ದುರಸ್ತಿಗೊಂಡಿದೆ ಎಂದು ರೈಲ್ವೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೈಸೂರಿನಲ್ಲಿ ಪ್ರವಾಹದ ದೃಶ್ಯಗಳು ಡ್ರೋನ್ ಕ್ಯಾಮೆರಾದಲ್ಲಿ ಸೆರೆ

    ಮೈಸೂರಿನಲ್ಲಿ ಪ್ರವಾಹದ ದೃಶ್ಯಗಳು ಡ್ರೋನ್ ಕ್ಯಾಮೆರಾದಲ್ಲಿ ಸೆರೆ

    ಮೈಸೂರು: ಕಬಿನಿಯಿಂದ ನದಿಗೆ ದಾಖಲೆ ಪ್ರಮಾಣದಲ್ಲಿ ನೀರು ಬಿಟ್ಟ ಹಿನ್ನೆಲೆಯಲ್ಲಿ ಜಿಲ್ಲೆಯ ನಂಜನಗೂಡು ತಾಲೂಕಿನ ಹಲವೆಡೆ ಪ್ರವಾಹ ಉಂಟಾಗಿದ್ದು, ಪ್ರವಾಹದ ದೃಶ್ಯಗಳು ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಸುತ್ತೂರು ಶ್ರೀ ಕ್ಷೇತ್ರದ ಸುತ್ತ ಕಪಿಲಾ ನದಿಯ ನೀರು ಹರಿಯುತ್ತಿದೆ. ಪರಿಣಾಮ ಗದ್ದೆಗಳಿಗೆ ನೀರು ನುಗ್ಗಿ ಅಪಾರ ಬೆಳೆ ನಷ್ಟವಾಗಿದೆ. ಸೇತುವೆ ಮೇಲೆ ಹರಿಯುತ್ತಿರುವ ನೀರಿನ ದೃಶ್ಯ ಮತ್ತು ಗದ್ದೆಗಳ ಮೇಲೆ ಹರಿಯುತ್ತಿರುವ ನೀರಿನ ದೃಶ್ಯಗಳು ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಕೆಲವು ದಿನಗಳಿಂದ ಸುರಿಯುತ್ತಿದ್ದ ಮಳೆ ಇಂದು ಮೈಸೂರಿನ ನಂಜನಗೂಡಿನಲ್ಲಿ ಕೊಂಚ ಪ್ರಮಾಣದಲ್ಲಿ ತಗ್ಗಿದೆ. ಕಬಿನಿ ಜಲಾಶಯದಿಂದ ಬರೋಬ್ಬರಿ 80 ಸಾವಿರ ಕ್ಯೂಸೆಕ್ಸ್ ನೀರು ಹೊರಕ್ಕೆ ಬಿಡಲಾಗುತ್ತಿತ್ತು. ಆದರೆ ಕೇರಳದ ವೈನಾಡಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ ಕಬಿನಿ ಡ್ಯಾಂನಿಂದ 40 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆಯಾಗುತ್ತಿದೆ. ನೀರಿನ ಪ್ರಮಾಣ 80 ಸಾವಿರದಿಂದ 40 ಸಾವಿರ ಕ್ಯೂಸೆಕ್ಸ್ ಗೆ ಇಳಿದಿದೆ. ಆದರೂ ರಸ್ತೆ ಮೇಲೆ ನೀರು ಹರಿಯುತ್ತಿದೆ. ಸದ್ಯಕ್ಕೆ ಮೂರು ದಿನಗಳ ನಂತರ ನಂಜನಗೂಡು ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಮುಕ್ತವಾಗಿದೆ.

    ಕಳೆದ 4 ದಿನಗಳಿಂದ ಕಬಿನಿ ಜಲಾಶಯದಿಂದ ಅತಿ ಹೆಚ್ಚು ನೀರನ್ನು ನದಿಗೆ ಬಿಟ್ಟ ಹಿನ್ನೆಲೆಯಲ್ಲಿ ಜಿಲ್ಲೆಯ ಸೇತುವೆಗಳು ಬಿರುಕು ಬಿಟ್ಟಿವೆ. ಮೈಸೂರಿನ ಹೆಚ್.ಡಿ.ಕೋಟೆಯ ಹರದನಹಳ್ಳಿ ಶಂಕರಹಳ್ಳಿ ಮಾರ್ಗದ ಸೇತುವೆಯಲ್ಲಿ ಬಿರುಕು ಮೂಡಿದೆ. ಸೇತುವೆ ಮೇಲ್ಛಾವಣಿಯಲ್ಲಿ ಬಿರುಕು ಬಿಟ್ಟ ಹಿನ್ನೆಲೆಯಲ್ಲಿ ಸೇತುವೆ ಮೇಲೆ ತೆರಳಲು ಗ್ರಾಮಸ್ಥರು ಹಿಂದೇಟು ಹಾಕುತ್ತಿದ್ದಾರೆ. ಸೇತುವೆ ಮೇಲೆ ತೇಲಿ ಬಂದಿರುವ ಕಸಗಳನ್ನು ತೆಗೆದುಹಾಕಲು ಗ್ರಾಮಸ್ಥರ ಹರಸಾಹಸ ಪಡುತ್ತಿದ್ದಾರೆ. ಗ್ರಾಮಸ್ಥರೆಲ್ಲ ಒಗ್ಗೂಡಿ ಕಸ ತೆಗೆಯಲು ಮುಂದಾಗಿದ್ದಾರೆ.

    ನೀರಿನ ಪ್ರವಾಹ ಪರಿಣಾಮ ಸೇತುವೆ ಪಕ್ಕದ ನೂರಾರು ಏಕರೆ ಬೆಳೆ ಹಾನಿಯಾಗಿದೆ. ರೈತರು ಬೆಳೆದಿದ್ದ ಕಬ್ಬು, ರಾಗಿ, ಭತ್ತದ ಬೆಳೆ ನಾಶವಾಗಿದೆ. ಸಿದ್ದರಾಮಯ್ಯ ತಮ್ಮ ಅಧಿಕಾರವಧಿಯಲ್ಲಿ ಕೊನೆಯಲ್ಲಿ ಉದ್ಘಾಟಿಸಿದ್ದ ನಂಜನಗೂಡು ಬಳಿಯ ಹೆಜ್ಜಿಗೆ ಸೇತುವೆ ಬಿರುಕು ಮೂಡಿದೆ. ಕಪಿಲ ನದಿಯ ನೀರಿನ ರಭಸಕ್ಕೆ ಸೇತುವೆ ಬಿರುಕು ಬಿಟ್ಟಿದೆ. ಸುಮಾರು 18 ಕೋಟಿ ವೆಚ್ಚದಲ್ಲಿ ಈ ಸೇತುವೆ ನಿರ್ಮಿಸಲಾಗಿದ್ದು, ಈ ಸೇತುವೆ ಸುಮಾರು 230ಮೀ ಉದ್ದವಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಯ್ತು ತುಂಗಭದ್ರಾ ನದಿಯ ರಮಣೀಯ ದೃಶ್ಯ

    ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಯ್ತು ತುಂಗಭದ್ರಾ ನದಿಯ ರಮಣೀಯ ದೃಶ್ಯ

    ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಕಡೇ ಬಾಗಿಲು ಸೇತುವೆ ಮೇಲಿನ ತುಂಗಭದ್ರಾ ನದಿಯ ರಮಣೀಯ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಫ್ಲೈಯಿಂಗ್ ಐ ಬೈ ಅರ್ಜುನ್ ಎಂಬ ಹೆಸರಿನ ಡ್ರೋನ್ ಕ್ಯಾಮೆರಾ ಮೂಲಕ ತುಂಗಭದ್ರಾ ನದಿಗೆ ನಿರ್ಮಿಸಿದ ಸೇತುವೆ ಮೇಲಿಂದ ದೃಶ್ಯವನ್ನು ಸೆರೆ ಹಿಡಿಯಲಾಗಿದೆ. ಬರೋಬ್ಬರಿ 5 ವರ್ಷದ ನಂತರ ತುಂಗಭದ್ರಾ ಜಲಾಶಯದಿಂದ ಸಾವಿರಾರು ಕ್ಯೂಸೆಕ್ ನೀರು ನದಿಗೆ ಹೊರ ಬಿಡಲಾಗಿದೆ.

    ಈ ಹಿನ್ನೆಲೆಯಲ್ಲಿ ಡ್ರೋನ್ ಕ್ಯಾಮೆರಾ ಮೂಲಕ ನದಿಯ ಮತ್ತು ಸುತ್ತಲಿನ ನಿಸರ್ಗ ಪ್ರದೇಶವನ್ನು ಸೆರೆ ಹಿಡಿಯಲಾಗಿದೆ. ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾದ ವಿಹಂಗಮ ದೃಶ್ಯವನ್ನು ಅರ್ಜುನ್ ಅವರು ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದಾರೆ. ನಂತರ ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ.

    ಸತತ ನಾಲ್ಕು ವರ್ಷಗಳಿಂದ ಬರಗಾಲದಿಂದ ತತ್ತರಿಸಿ ಹೋಗಿದ್ದ ತುಂಗಾಭದ್ರಾ ಜಲಾಶಯ ಈ ಬಾರಿ ಮತ್ತೆ ಮೈದುಂಬಿ ಹರಿಯುತ್ತಿದೆ. ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಾಭದ್ರಾ ಜಲಾಶಯವೀಗ ಮೈದುಂಬಿಕೊಂಡಿದೆ. ಕಳೆದ ದಿನದಿಂದ 32 ಕ್ರಷ್ಟ್ ಗೇಟ್ ಗಳ ಪೈಕಿ 20 ಗೇಟ್ ಗಳಿಂದ 60 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಬಿಡಲಾಗುತ್ತಿದೆ. ಆದ್ದರಿಂದ ಜಲಾಶಯದಿಂದ ನೀರು ಬಿಟ್ಟ ದೃಶ್ಯವನ್ನ ನೋಡಲು ಜನರು ತಂಡೋಪತಂಡವಾಗಿ ಆಗಮಿಸಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದರು.

  • ಡ್ರೋನ್‍ನಲ್ಲಿ ಮೈಸೂರು ದಸರಾ ಶೂಟಿಂಗ್‍ಗೆ ಬ್ರೇಕ್

    ಡ್ರೋನ್‍ನಲ್ಲಿ ಮೈಸೂರು ದಸರಾ ಶೂಟಿಂಗ್‍ಗೆ ಬ್ರೇಕ್

    ಮೈಸೂರು: ವಿಶ್ವವಿಖ್ಯಾತ ದಸರಾವನ್ನು ಡ್ರೋನ್ ಕ್ಯಾಮೆರಾದಲ್ಲಿ ಚಿತ್ರೀಕರಣ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರ ರಾವ್ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಖಾಸಗಿಯವರು ಹಾಗೂ ಮಾಧ್ಯಮಗಳು ಡ್ರೋನ್ ಕ್ಯಾಮೆರಾ ಬಳಸುವಂತಿಲ್ಲ. ಭದ್ರತೆಯ ದೃಷ್ಟಿಯಿಂದ ಒಂದು ಡ್ರೋನ್ ಕ್ಯಾಮೆರಾವನ್ನು ಬಳಸಲು ಪೊಲೀಸ್ ಇಲಾಖೆ ಮುಂದಾಗಿದೆ ಎಂದು ಅವರು ತಿಳಿಸಿದರು.

    ದಸರಾ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮವಾಗಿ 720 ರೌಡಿಶೀಟರ್, ಹಳೆಯ ಪಿಕ್ ಪ್ಯಾಕೇಟರ್‍ಗಳನ್ನು ವಶಕ್ಕೆ ಪಡೆಯಲಾಗುವುದು. 40 ಮೊಬೈಲ್ ಪ್ಯಾಟ್ರೋಲ್ ಹಾಗೂ 100ಕ್ಕೂ ಹೆಚ್ಚು ಮಫ್ತಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

    ಸೆ. 22 ರಿಂದ 24ರ ವರೆಗೆ ಹಾಗೂ ಸೆ. 28ರಿಂದ ಅಕ್ಟೋಬರ್ 2ರವರೆಗೆ ಬೆಳಗ್ಗೆ 6 ರಿಂದ ರಾತ್ರಿ 9.30 ರವರೆಗೆ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಹೀಗಾಗಿ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಲಲಿತಮಹಲ್ ಹೆಲಿಪ್ಯಾಡ್‍ನಿಂದ ಉಚಿತ ಸಾರಿಗೆ ಬಸ್‍ಗಳ ವ್ಯವಸ್ಥೆ ಮಾಡಲಾಗುತ್ತದೆ. ಸಾರ್ವಜನಿಕರು ತಮ್ಮ ವಾಹನಗಳನ್ನು ಲಲಿತಮಹಲ್ ಹೆಲಿಪ್ಯಾಡ್ ಬಳಿ ನಿಲುಗಡೆಗೆಯ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.