Tag: drone camera

  • ಕದಂಬ ನೌಕಾನೆಲೆ ನಿಷೇಧಿತ ಪ್ರದೇಶದಲ್ಲಿ ರಾತ್ರಿ ಡ್ರೋನ್ ಹಾರಾಟ – ಗುಪ್ತಚರ ಇಲಾಖೆಯಿಂದ ತನಿಖೆ

    ಕದಂಬ ನೌಕಾನೆಲೆ ನಿಷೇಧಿತ ಪ್ರದೇಶದಲ್ಲಿ ರಾತ್ರಿ ಡ್ರೋನ್ ಹಾರಾಟ – ಗುಪ್ತಚರ ಇಲಾಖೆಯಿಂದ ತನಿಖೆ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕದಂಬ ನೌಕಾನೆಲೆಯ (Kadamba Naval Base) ಭಾಗದಲ್ಲಿ ರಾತ್ರಿ ಅಪರಿಚಿತ ಡ್ರೋನ್ ಕ್ಯಾಮೆರಾ (Drone Camera) ಹಾರಿಸಲಾಗಿದೆ.

    ನೌಕಾನೆಲೆಯ ಸರಹದ್ದಿನ ಭಾಗದಲ್ಲಿ ನಿಷೇಧವಿದ್ದರೂ ಡ್ರೋನ್ ಹಾರಿಸಿರುವುದು ಹಲವು ಅನುಮಾನ ಮೂಡಿಸಿದೆ.

    ಇತ್ತೀಚೆಗೆ ಹನಿಟ್ರಾಪ್ (Honey Trap) ಮೂಲಕ ಕದಂಬ ನೌಕಾನೆಲೆಯ ಫೋಟೋ ಮತ್ತು ಮಾಹಿತಿಯನ್ನು ಹೊರ ದೇಶದ ಗುಪ್ತಚರ ಸಂಸ್ಥೆಗೆ ನೀಡಿರುವ ಆರೋಪದಡಿ ರಾಷ್ಟ್ರೀಯ ತನಿಖಾ ದಳ(NIA) ಮೂವರನ್ನು ವಶಕ್ಕೆ ಪಡೆದು ತನಿಖೆ ನಡೆಸಿತ್ತು. ಇದರ ಬೆನ್ನಲ್ಲೇ ವಕ್ಕನಳ್ಳಿ ಭಾಗದಿಂದ ಐಎನ್ಎಸ್ ಪತಾಂಜಲಿ ಆಸ್ಪತ್ರೆ ಹಿಂಬದಿಯಿಂದ ಬಿಣಗಾ ಚತುಷ್ಪಥ ಹೆದ್ದಾರಿಯ ಸುರಂಗ ಮಾರ್ಗದವರೆಗೂ ಡ್ರೋನ್ ಹಾರಿದ್ದು ಬೈಕ್ ಅಥವಾ ಸನ್ ರೂಫ್ ಕಾರಿನ ಮೂಲಕ ತೆರಳುತ್ತಾ ಈ ಡ್ರೋನ್ ನಿಯಂತ್ರಣ ಮಾಡಿರುವ ಸಂಶಯ ವ್ಯಕ್ತವಾಗಿದೆ.

    ಡ್ರೋನ್ ಹಾರಿಸಿದ ಕುರಿತು ಸ್ಥಳೀಯರೊಬ್ಬರ ಮೊಬೈಲಿನಲ್ಲಿ ಈ ದೃಶ್ಯ ಸೆರೆಯಾಗಿದ್ದು, ಅದನ್ನು ನೌಕಾಪಡೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸುಮಾರು 2-3 ಕಿ.ಮೀ ದೂರದಿಂದ ಸೆರೆಯಾಗುವ ನೈಟ್ ವಿಶನ್ ಡ್ರೋನ್ ಬಳಕೆ ಮಾಡಿರುವುದು ದೃಢಪಟ್ಟಿದೆ. ಇದನ್ನೂ ಓದಿ: ಪಾಕ್‌ ಸೇರಿ ಇತರ ವಿದೇಶಿ ಏಜೆಂಟರಿಗೆ ನೌಕಾದಳದ ರಹಸ್ಯ ಫೋಟೋ ಹಂಚಿಕೆ – NIAಯಿಂದ ಮೂವರು ವಶಕ್ಕೆ

    ಹೆಚ್ಚಿನದಾಗಿ 600 ಮೀ. ಅಥವಾ 1,200 ಮೀ. ದೂರದವರೆಗೆ ಹಾರಾಡುವ ಸಾಮರ್ಥ್ಯದ ಡ್ರೋನ್ ಸ್ಥಳೀಯವಾಗಿ ಬಳಕೆಯಾಗುವುದು ಸಾಮಾನ್ಯ. ಆದರೆ ಈ ಡ್ರೋನ್ ಸುಮಾರು 3 ಕಿ.ಮೀ.ಗೂ ಹೆಚ್ಚು ದೂರ ಹಾರಿದ್ದು ನೌಕಾದಳ ಅಧಿಕಾರಿಗಳು, ಸ್ಥಳೀಯ ಪೊಲಿಸರು ಹಾಗೂ ಗುಪ್ತಚರ ಸಂಸ್ಥೆ ತನಿಖೆಗಿಳಿದಿದೆ.

    ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಹಾಗೂ ನೌಕಾದಳದ ಅಧಿಕಾರಿಗಳು ಅರಣ್ಯ ಇಲಾಖೆ, ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಐಆರ್‌ಬಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಸಂಪರ್ಕಿಸಿದಾಗ ನಾವು ಡ್ರೋನ್‌ ಬಳಸಿಲ್ಲ ಎಂದು ಹೇಳಿವೆ. ಹೀಗಾಗಿ ಈಗ ನೈಟ್ ವಿಷನ್ ಡ್ರೋನ್ ಬಳಸಿದವರು ಯಾರು ಎನ್ನುವ ಬಗ್ಗೆ ತನಿಖೆ ಆರಂಭಿಸಲಾಗಿದೆ.

    ನೌಕಾದಳದ 3ನೇ ಹಂತದ ಕಾಮಗಾರಿ ಮುಗಿಯುವ ಹಂತದಲ್ಲಿದ್ದು, ಈಗ ನಿಷೇಧಿತ ಪ್ರದೇಶದಲ್ಲಿ ಡ್ರೋನ್ ಹಾರಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

  • ಹಳ್ಳದಲ್ಲಿ ಕೊಚ್ಚಿ ಹೋದ ಯುವಕನ ಮೃತದೇಹ ಪತ್ತೆ ಮಾಡಲು ಡ್ರೋನ್ ಮೊರೆಹೋದ ಪೊಲೀಸರು

    ಹಳ್ಳದಲ್ಲಿ ಕೊಚ್ಚಿ ಹೋದ ಯುವಕನ ಮೃತದೇಹ ಪತ್ತೆ ಮಾಡಲು ಡ್ರೋನ್ ಮೊರೆಹೋದ ಪೊಲೀಸರು

    ಬೀದರ್: ಹಳ್ಳ ದಾಟುವಾಗ ನೀರಿನಲ್ಲಿ ಕೊಚ್ಚಿ ಹೋದ ಯುವಕನ ಮೃತದೇಹ 3 ದಿನಗಳಾದರೂ ಇನ್ನೂ ಪತ್ತೆಯಾಗದ ಕಾರಣ ಬೀದರ್ ಪೊಲೀಸರು (Bidar Police) ಡ್ರೋನ್ (Drone) ಮೊರೆ ಹೋಗಿದ್ದಾರೆ.

    3 ದಿನಗಳ ಹಿಂದೆ ಧಾರಾಕಾರ ಮಳೆಯಿಂದ ತುಂಬಿ ಹರಿಯುತ್ತಿದ್ದ ಸೇತುವೆ ದಾಟುವಾಗ 25 ವರ್ಷದ ಮಲ್ಲಪ್ಪ ಶರಣಪ್ಪ ಕರೆನವರ್ ನೀರಿನಲ್ಲಿ ಕೊಚ್ಚಿ ಹೋಗಿದ್ದ. ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಧನ್ನೂರಾ ಗ್ರಾಮದಲ್ಲಿ ಘಟನೆ ವರದಿಯಾಗಿದೆ.

    ಇದೀಗ ಎಸ್‌ಪಿ ಚೆನ್ನಬಸವಣ್ಣ ಲಂಗೋಟಿ ಸೂಚನೆಯಂತೆ ಯುವಕನ ಮೃತದೇಹವನ್ನು ಪತ್ತೆ ಮಾಡಲು ಡ್ರೋನ್ ಕ್ಯಾಮೆರಾ ಬಳಕೆ ಮಾಡಲಾಗುತ್ತಿದೆ. ಡ್ರೋನ್ ಕ್ಯಾಮೆರಾ ಬಳಸಿ ಹಳ್ಳದಲ್ಲಿ ಕೊಚ್ಚಿ ಹೋದ ಯುವಕನ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಸಿದ್ದಾರೆ. ಇದನ್ನೂ ಓದಿ: ಹುಡುಗಿಯರು ಪ್ರೀತಿ ಮಾಡ್ಬೇಡಿ ಪ್ಲೀಸ್ – ಪ್ರಿಯಕರನ ಕಿರುಕುಳಕ್ಕೆ ಬೇಸತ್ತು ಟೆಕ್ಕಿ ಆತ್ಮಹತ್ಯೆ!

    ಅಗ್ನಿಶಾಮಕ ದಳದ ಸಿಬ್ಬಂದಿ ಕಳೆದ 3 ದಿನಗಳಿಂದ ಶೋಧ ಕಾರ್ಯ ಮಾಡಿದರೂ ಮೃತದೇಹ ಮಾತ್ರ ಇನ್ನೂ ಪತ್ತೆಯಾಗಿಲ್ಲ. ಹೀಗಾಗಿ ಗುರುವಾರ ಬೀದರ್ ಪೊಲೀಸ್ ಇಲಾಖೆ ಡ್ರೋನ್ ಮೊರೆ ಹೋಗಿದೆ. ಇದನ್ನೂ ಓದಿ: ಮಂಡ್ಯದ ವಿಸಿ ನಾಲೆಗೆ ಕಾರು ಪಲ್ಟಿ – ಚಾಲಕ ನಾಪತ್ತೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 30 ವರ್ಷಗಳ ಬಳಿಕ ತುಂಬಿದ ಕೆರೆ – ಡ್ರೋನ್ ಕ್ಯಾಮೆರಾದಲ್ಲಿ ದೃಶ್ಯ ಸೆರೆ

    30 ವರ್ಷಗಳ ಬಳಿಕ ತುಂಬಿದ ಕೆರೆ – ಡ್ರೋನ್ ಕ್ಯಾಮೆರಾದಲ್ಲಿ ದೃಶ್ಯ ಸೆರೆ

    ಚಿಕ್ಕಬಳ್ಳಾಪುರ: ಬರದನಾಡು ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಈ ಬಾರಿ ಭಾರೀ ಮಳೆಯಾಗಿದ್ದು ಜಿಲ್ಲೆಯ ಬಹುತೇಕ ಕೆರೆ ಕುಂಟೆಗಳು ಮೈದುಂಬಿಕೊಂಡಿವೆ. ಈ ದೃಶ್ಯವನ್ನು ಡ್ರೋನ್ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ.

    chikkaballapur

    ಜಿಲ್ಲೆಯ ಜಲಾಶಯ ಜಲಪಾತಗಳು ನಳ ನಳಿಸುತ್ತಿವೆ. ನದಿಗಳಂತೂ ಉಕ್ಕಿ ಭೋರ್ಗೆರೆದು ಹರಿಯುತ್ತಿವೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬೆಳ್ಳೂಟಿ ಗ್ರಾಮದ ಕೆರೆ ಸಹ 30 ವರ್ಷಗಳ ನಂತರ ಕೋಡಿ ಹರಿದಿದ್ದು ಜನರಿಗೆ ಸಂತಸ ತಂದಿದೆ. 426 ಎಕರೆ ವಿಶಾಲವಾದ ವಿಸ್ತೀರ್ಣ ಹೊಂದಿರುವ ಈ ಕೆರೆ ತಾಲೂಕಿನಲ್ಲಿ ದೊಡ್ಡದಾದ ಕೆರೆಗಳಲ್ಲಿ ಒಂದಾಗಿದೆ. ಗ್ರಾಮದ ರೈತರ ಜಮೀನುಗಳಿಗೆ ಬೆಳ್ಳೂಟಿ, ಚೌಡಸಂದ್ರ, ಮೇಲೂರು, ಭಕ್ತರಹಳ್ಳಿ, ಕಾಕಚೊಕ್ಕಂಡಹಳ್ಳಿ ಕೆರೆಗಳು ನೀರಾವರಿ ಪ್ರಮುಖ ಮೂಲಗಳಾಗಿದೆ. ಇದನ್ನೂ ಓದಿ: ನಾಯಿ ಮೂತ್ರ ವಿರ್ಸಜನೆ ಮಾಡಿದ್ದಕ್ಕೆ ವೃದ್ಧನಿಗೆ ಕಲ್ಲಿನಿಂದ ಹೊಡ್ದ

    ಈ ಬಾರಿ ನದಿಗಳು ತುಂಬಿರುವುದರಿಂದ ರೈತರಿಗೆ 3-4 ವರ್ಷ ನೀರಿನ ಸಮಸ್ಯೆ ನೀಗಿದಂತಾಗಿದೆ. ಕೆರೆ ಕೋಡಿ ಹರಿದಿರುವುದರಿಂದ ಬೆಳ್ಳೂಟಿ ಚೌಡಸಂದ್ರ ಗ್ರಾಮದ ಕೆರೆ ಏರಿ ರಸ್ತೆ ಸಂಚಾರ ಬಂದ್ ಆಗಿದೆ. ಇನ್ನೂ ಈ ಕೆರೆಯ ದೃಶ್ಯಗಳು ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ನೋಡಲು ಆಕರ್ಷಕವಾಗಿದೆ. ಇದನ್ನೂ ಓದಿ: ಕೋಲಾರದಲ್ಲಿ ಉಕ್ಕಿ ಹರಿಯುತ್ತಿದೆ ಪಾಲಾರ್‌ ನದಿ – 19 ಗೇಟ್ ಓಪನ್

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ಗ್ರಾಮ ಪಂಚಾಯತಿ ಸದಸ್ಯ ಸಂತೋಷ್, ಕೆರೆಯನ್ನು ನರೇಗಾ ಯೋಜನೆ ಯಡಿ ಹೊಳೆತ್ತಲಾಗಿತ್ತು. ಕೆರೆಗೆ ಸಂಪರ್ಕಿಸುವ ಕಾಲುವೆಗಳನ್ನು ಮರು ನಿರ್ಮಾಣ ಮಾಡಲಾಗಿತ್ತು. ಪರಿಣಾಮ ಚಿಕ್ಕಬಳ್ಳಾಪುರದ ಕಂದವಾರ, ಅಮಾನಿಗೋಪಾಲಕೃಷ್ಣ ಕೆರೆ, ಜಾತವಾರ, ಕೇಶವಾರ ಕೆರೆಗಳು ತುಂಬಿ ಬೆಳ್ಳೂಟಿ ಕರೆ ಸಹ ಕೋಡಿ ಹರಿದಿದೆ. ಜನರಿಗೆ ಬಹಳಷ್ಟು ಖುಷಿ ತಂದಿದೆ ಅಂತ ಸಂತಸ ಹಂಚಿಕೊಂಡಿದ್ದಾರೆ.

  • ಲಾಕ್‍ಡೌನ್ ವೇಳೆ ಹೇಗಿದೆ ಕಾಡು- ಡ್ರೋನ್ ವೀಡಿಯೋ

    ಲಾಕ್‍ಡೌನ್ ವೇಳೆ ಹೇಗಿದೆ ಕಾಡು- ಡ್ರೋನ್ ವೀಡಿಯೋ

    ಮೈಸೂರು: ಲಾಕ್‍ಡೌನ್ ನಿಂದಾಗಿ ಕಾಡು ನೋಡುವುದನ್ನು ಮಿಸ್ ಮಾಡಿಕೊಂಡವರಿಗೆ ಕಾಡಿನ ಇವತ್ತಿನ ಚಿತ್ರಣವನ್ನು ತೋರಿಸುವ ವಿನೂತನ ಪ್ರಯತ್ನವನ್ನು ಅರಣ್ಯ ಇಲಾಖೆ ಮಾಡಿದೆ.

    ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅಧಿಕಾರಿಗಳು ಯೂಟ್ಯೂಬ್ ಮೂಲಕ ಜನರಿಗೆ ಕಾಡನ್ನು ತೋರಿಸುವ ಪ್ರಯತ್ನ ಮಾಡಿದ್ದಾರೆ. ವೀಡಿಯೋದಲ್ಲಿ ಹಸಿರಿನಿಂದ ಕೂಡಿರುವ ನಾಗರಹೊಳೆ ಕಾಡು, ವನ್ಯಪ್ರಾಣಿಗಳ ದರ್ಶನವಾಗುತ್ತಿದೆ. ನವಿಲುಗಳ ನರ್ತನ, ಜಿಂಕೆ ಹಾರಾಟ, ಕರಡಿ, ವಿವಿಧ ಪಕ್ಷಿಗಳು, ಆನೆಗಳು ಸೇರಿದಂತೆ ವಿವಿಧ ವನ್ಯಜೀವಿಗಳನ್ನು ಸೆರೆ ಹಿಡಿಯಲಾಗಿದೆ.

    ಲಾಕ್‍ಡೌನ್ ನಲ್ಲಿ ಕಾಡು ಹೇಗಿದೆ ಎಂಬುದನ್ನು ಡ್ರೋನ್ ಮೂಲಕ ತೋರಿಸುವ ಪ್ರಯತ್ನ ಇದಾಗಿದೆ. ಸಫಾರಿ ಮಿಸ್ ಮಾಡಿಕೊಂಡವರಿಗೆ ಅದ್ಭುತವಾದ ವೀಡಿಯೋ ತಯಾರಿಸಿ ಬಿಡುಗಡೆ ಮಾಡಲಾಗಿದ್ದು, ಇಲಾಖೆಯ ಕೆಲಸಕ್ಕೆ ಜನರಿಂದ ಶ್ಲಾಘನೆ ವ್ಯಕ್ತವಾಗಿದೆ.

  • ಲಾಕ್‍ಡೌನ್ ನಿಯಮ ಪಾಲನೆಗೆ ಡ್ರೋಣ್ ಕ್ಯಾಮೆರಾ ಕಣ್ಗಾವಲು- ಎಸ್‍ಪಿ ರಾಧಿಕಾ

    ಲಾಕ್‍ಡೌನ್ ನಿಯಮ ಪಾಲನೆಗೆ ಡ್ರೋಣ್ ಕ್ಯಾಮೆರಾ ಕಣ್ಗಾವಲು- ಎಸ್‍ಪಿ ರಾಧಿಕಾ

    ಚಿತ್ರದುರ್ಗ: ಕೊರೊನಾ ಎರಡನೇ ಹಿನ್ನೆಲೆ ಜಿಲ್ಲೆಯಾದ್ಯಂತ 12 ದಿನ ಕಠಿಣ ಲಾಕ್‍ಡೌನ್ ಜಾರಿಗೊಳಿಸಿದರೂ ಜನ ಮಾತ್ರ ಡೋಂಟ್‍ಕೇರ್ ಎನ್ನುತಿದ್ದಾರೆ. ಅನಗತ್ಯವಾಗಿ ಓಡಾಡುತ್ತ ಹಳ್ಳಿಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಿಸುತಿದ್ದಾರೆ. ಹೀಗಾಗಿ ಎಚ್ಚೆತ್ತಿರುವ ಚಿತ್ರದುರ್ಗ ಪೊಲೀಸ್ ಎಸ್‍ಪಿ ರಾಧಿಕಾ ಡ್ರೋಣ್ ಕ್ಯಾಮೆರಾ ಮೂಲಕ ಲಾಕ್‍ಡೌನ್ ಉಲ್ಲಂಘನೆಯ ದೃಶ್ಯಗಳನ್ನು ಸೆರೆ ಹಿಡಿಯುವ ಕಾರ್ಯಕ್ಕೆ ಇಂದು ಚಾಲನೆ ನೀಡಿದ್ದಾರೆ.

    ಲಾಕ್‍ಡೌನ್ ವೇಳೆ ಅನಾವಶ್ಯಕವಾಗಿ ರಸ್ತೆಗಿಳಿದು, ಕೊರೊನಾ ಹರಡಲು ಕಾರಣರಾಗುವವರ ಚಲನವಲನವನ್ನು ಡ್ರೋಣ್ ಕ್ಯಾಮೆರಾ ಮೂಲಕ ಸೆರೆ ಹಿಡಿದು, ದಂಡ ವಿಧಿಸಿ, ಕೇಸ್ ಧಾಖಲಿಸುವ ಕ್ರಮಕ್ಕೆ ಮುಂದಾಗಿದ್ದಾರೆ. ಈ ಡ್ರೋಣ್ ಕ್ಯಾಮೆರಾ ಸುಮಾರು 5 ಕಿ.ಮೀ. ವರೆಗೆ ನಡೆಯುವ ಎಲ್ಲ ಚಲನವಲನಗಳನ್ನು ಸೆರೆ ಹಿಡಿಯಲಿದ್ದು, ಉತ್ತಮ ಗುಣಮಟ್ಟದ ದೃಶ್ಯಗಳನ್ನು ಸೆರೆ ಹಿಡಿಯಲಿದೆ. ಇದರಿಂದಾಗಿ ಲಾಕ್‍ಡೌನ್ ಉಲ್ಲಂಘನೆಗೆ ಬ್ರೇಕ್ ಹಾಕಲು ಇದೊಂದು ಉತ್ತಮ ತಂತ್ರಜ್ಞಾನವಾಗಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿವೆ, ಲಾಕ್‍ಡೌನ್ ಅವಶ್ಯವಿಲ್ಲ: ಸೋಮಣ್ಣ

    ಅನವಶ್ಯಕವಾಗಿ ಓಡಾಡುವವರು, ಜೂಜುಕೋರರು ಹಾಗೂ ಲಾಕ್‍ಡೌನ್ ಉಲ್ಲಂಘಿಸುವವರಿಗೆ ಬ್ರೇಕ್ ಹಾಕಲು ಈ ಡ್ರೋಣ್ ಮೂಲಕ ವೀಡಿಯೋ ರೆಕಾರ್ಡ್ ಮಾಡಿ ಮತ್ತೊಮ್ಮೆ ತಪ್ಪಿ ಮಾಡದಂತೆ ಮೊದಲು ಎಚ್ಚರಿಕೆ ನೀಡಲಾಗುವುದು. ಒಮ್ಮೆ ಎಚ್ಚರಿಸಿದ ಬಳಿಕವೂ ಮತ್ತೆ ಕಾನೂನು ಉಲ್ಲಂಘಿಸಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

  • ಪ್ರವಾಹ ಭೀತಿ – ನದಿಪಾತ್ರದ ಗ್ರಾಮಗಳ ಸುತ್ತಮುತ್ತ ಡ್ರೋನ್ ಕಣ್ಗಾವಲು

    ಪ್ರವಾಹ ಭೀತಿ – ನದಿಪಾತ್ರದ ಗ್ರಾಮಗಳ ಸುತ್ತಮುತ್ತ ಡ್ರೋನ್ ಕಣ್ಗಾವಲು

    ಚಾಮರಾಜನಗರ: ಜಿಲ್ಲೆಯಲ್ಲಿ ಪ್ರವಾಹ ಭೀತಿಯಲ್ಲಿರುವ ನದಿಪಾತ್ರದ ಗ್ರಾಮಗಳ ಸುತ್ತಮುತ್ತ ಡ್ರೋನ್ ಕಣ್ಗಾವಲು ಇಡಲಾಗಿದೆ.

    ಕೆಆರ್‍ಎಸ್ ಹಾಗೂ ಕಬಿನಿ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದ ನೀರು ಬಿಡುಗಡೆ ಮಾಡಿರುವುದರಿಂದ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಇದರಿಂದ ಕೊಳ್ಳೇಗಾಲ ತಾಲೂಕಿನ ಮುಳ್ಳೂರು, ದಾಸನಪುರ, ಹಳೇಹಂಪಾಪುರ, ಹರಳೆ, ಹಳೇ ಅಣಗಳ್ಳಿ, ಹೊಸ ಅಣಗಳ್ಳಿ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.

    ಈಗಾಗಲೇ ಜಮೀನುಗಳಿಗೆ ನೀರು ನುಗ್ಗಿ ಅಲ್ಲಲ್ಲಿ ಬೆಳೆ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಈ ಗ್ರಾಮಗಳ ಸುತ್ತಮುತ್ತ ಡ್ರೋನ್ ಕಣ್ಗಾವಲು ಇಡಲಾಗಿದೆ. ಅಲ್ಲದೆ ಚಾಮರಾಜನಗರ ಜಿಲ್ಲಾ ಪೊಲೀಸ್ ವತಿಯಿಂದ ತುರ್ತು ಸಹಾಯವಾಣಿ ತೆರೆಯಲಾಗಿದೆ.

    ತೊಂದರೆ ಎದುರಾದಲ್ಲಿ ಸಾರ್ವಜನಿಕರು ಉಚಿತ ಕರೆ 100ಕ್ಕೆ ಫೋನ್ ಮಾಡಬಹುದು. ದೂರವಾಣಿ 08226-222398, ವಾಟ್ಸಪ್ ನಂಬರ್ 9480804600 ಈ ನಂಬರ್‌ಗಳಿಗೆ ಫೋನ್ ಮಾಡಿ. ಇಲ್ಲವಾದರೆ ಎಸ್‍ಎಂಎಸ್ ಅಥವಾ ವಾಟ್ಸಪ್ ಮಾಡಬಹುದಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಸಾರ ಥಾಮಸ್ ತಿಳಿಸಿದ್ದಾರೆ.

  • ತುಂಗೆಯ ರಮಣೀಯ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆ

    ತುಂಗೆಯ ರಮಣೀಯ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆ

    ಕೊಪ್ಪಳ: ತುಂಗಭದ್ರಾ ಜಲಾಶಯದಿಂದ 2 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ನದಿಗೆ ಬಿಟ್ಟಿದ್ದರಿಂದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಾದ್ಯಂತ ಹರಿದಿರುವ ತುಂಗೆಯ ರಮಣೀಯ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೇರಿಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಜನರ ಮನಸೆಳೆಯುತ್ತಿದೆ.

    ಗಂಗಾವತಿ ತಾಲೂಕಿನಾದ್ಯಂತ ಹರಿದಿರುವ ತುಂಗಭದ್ರಾ ನದಿಯ ದೃಶ್ಯಗಳು ಛಾಯಾಗ್ರಾಹಕ ಚರಣ್ ಬೊಲೆಂಪಲ್ಲಿ ಅವರು ತಮ್ಮ ಡ್ರೋನ್ ಕ್ಯಾಮೆರಾದಲ್ಲಿ ಅದ್ಭುತವಾಗಿ ಸೆರೆಯಿಡಿದಿದ್ದಾರೆ. ಗಂಗಾವತಿಯ ಚಿಕ್ಕ ಜಂತಕಲ್ ಗ್ರಾಮದ ಬಳಿ ಇರುವ ತುಂಗಭದ್ರಾ ನದಿಗೆ ಅಡ್ಡಲಾಗಿ ಕಟ್ಟಲಾದ ಸೇತುವೆಯು ನೀರಿನಲ್ಲಿ ಮುಳುಗಿರುವ ದೃಶ್ಯ ನೋಡುಗರನ್ನು ನಿಬ್ಬೆರಗಾಗುವಂತೆ ಮಾಡುತ್ತಿದೆ. ಅಷ್ಟೇ ಅಲ್ಲದೆ ಕಳೆದ ವರ್ಷವಷ್ಟೇ ಉದ್ಘಾಟನೆ ಆದ ತಾಲೂಕಿನ ಬುಕ್ಕಸಾಗರ-ಕಡೆಬಾಗಿಲು ಬಳಿ ನದಿಗೆ ಅಡ್ಡಲಾಗಿ ಕಟ್ಟಲಾದ ಸೇತುವೆಯ ದೃಶ್ಯ ನೋಡುಗರಿಗೆ ಆಶ್ಚರ್ಯವನ್ನುಂಟು ಮಾಡುತ್ತಿದೆ.

    ಜಿಲ್ಲೆಯ ಜನರು ಇದು ನಮ್ಮ ಸೇತುವೆನಾ ಎಂದುಕೊಳ್ಳುವಂತೆ ಮಾಡಿದೆ. ಇನ್ನೂ ಇತ್ತೀಚೆಗಷ್ಟೆ ರಾಜ್ಯಾದ್ಯಂತ ಸುದ್ದಿ ಮಾಡಿದ ವಿರುಪಾಪುರ ಗಡ್ಡಿ ಬಳಿಯ ದೃಶ್ಯವಂತೂ ಒಂದು ಕ್ಷಣ ಮೈಮರೆಯುವಂತೆ ಮಾಡುತ್ತದೆ. ಶ್ರೀ ಕೃಷ್ಣ ದೇವರಾಯ ಕಾಲದ ಸೇತುವೆಯ ಒಳಗಿಂದ ನೀರು ಧುಮ್ಮಿಕ್ಕಿ ಹರಿಯತ್ತಿರುವ ದೃಶ್ಯವನ್ನು ಡ್ರೋನ್ ಕ್ಯಾಮೆರಾದಲ್ಲಿ ಕಂಡ ಜನರು ಛಾಯಾಗ್ರಾಹಕ ಕಾರ್ಯಕ್ಕೆ ಹೊಗುಳಿಕೆಯ ಸುರಿಮಳೆಗೈದಿದ್ದಾರೆ.

    ತುಂಗಭದ್ರಾ ನದಿ ಹುಕ್ಕಿ ಹರಿಯುವ ವೇಳೆ ಡ್ರೋನ್ ಕ್ಯಾಮೆರಾದ ಮೂಲಕ ಅದ್ಭುತವಾದ ದೃಶ್ಯಗಳನ್ನು ಸೆರೆಹಿಡಿದು ಜನರಿಗೆ ಹೆಲಿಕಾಪ್ಟರ್ ಮೇಲೆ ಕುಳಿತು ನೊಡಿದಂತೆ ಮಾಡಿದ ಚರಣ್ ಬೊಲೆಂಪಲ್ಲಿ ಅವರಿಗೆ ಜನರು ಮೆಚ್ವುಗೆ ವ್ಯಕ್ತಪಡಿಸುತ್ತಿದ್ದಾರೆ.

  • ಡ್ರೋನ್ ಕಣ್ಣಲ್ಲಿ ಮುಳ್ಳಯ್ಯನಗಿರಿಯ ದೃಶ್ಯಕಾವ್ಯದ ಸೊಬಗನ್ನ ನೋಡಿ ಕಣ್ತುಂಬಿಕೊಳ್ಳಿ

    ಡ್ರೋನ್ ಕಣ್ಣಲ್ಲಿ ಮುಳ್ಳಯ್ಯನಗಿರಿಯ ದೃಶ್ಯಕಾವ್ಯದ ಸೊಬಗನ್ನ ನೋಡಿ ಕಣ್ತುಂಬಿಕೊಳ್ಳಿ

    ಚಿಕ್ಕಮಗಳೂರು: ಒಂದೇ ಬೆಟ್ಟ-ಗುಡ್ಡ ಆದರೆ ನೋಡೋ ಶೈಲಿ ಮಾತ್ರ ಹತ್ತಾರು. ಒಂದೇ ದಾರಿ, ಕೊಡೋ ಅನುಭವ ಭಿನ್ನ-ವಿಭಿನ್ನ. ಒಂದೇ ಪ್ರಕೃತಿ ಆದ್ರೆ, ಗೋಚರವಾಗೋ ರೀತಿ ನೂರಾರು. ಹೀಗೆ ಡ್ರೋನ್ ಕಣ್ಣಲ್ಲಿ ಸುಂದರ ಮುಳ್ಳಯ್ಯನಗಿರಿಯ ದೃಶ್ಯಕಾವ್ಯದ ಸೊಬಗನ್ನ ನೋಡಿದವರು ಎಷ್ಟು ಚಂದ ಪ್ರಕೃತಿಯ ಅಂದ ಎನ್ನುತ್ತಿದ್ದಾರೆ.

    ಹೌದು. ಭಾವನೆಗೆ ಬಿಟ್ಟಂತೆ ಲಕ್ಷಾಂತರ ಕಲ್ಪನೆಗಳು ಇವೆ. ಹೀಗೆ ನೋಡುಗನ ಕಲ್ಪನೆಗಳಿಗೆಲ್ಲಾ ಜೀವ ತುಂಬಿ, ಹಸಿರನ್ನೆ ಮೈದುಂಬಿಸಿಕೊಂಡು ತುಂಬು ಮುತ್ತೈದೆಯಂತೆ ಹಚ್ಚ-ಹಸಿರಿನಿಂದ ಕಂಗೊಳಿಸೋ ಕಾಫಿನಾಡಿನ ಪ್ರಕೃತಿ ಸೌಂದರ್ಯಕ್ಕೆ ಸರಿಸಾಟಿಯಾದದ್ದು ಮತ್ತೊಂದಿದ್ಯಾ ಅಂದರೆ, ಇದೆ ಅನ್ನೋರು ಯಾರೂ ಸಿಗಲ್ಲ. ಅದರಲ್ಲೂ, ಮಳೆಗಾಲದಲ್ಲಿ ಮಲೆನಾಡು ನವವಧುವಿನಂತೆ ನೈಸರ್ಗಿಕ ಸೊಬಗನ್ನೆ ಮುಡಿಯ ಮಲ್ಲಿಗೆಯನ್ನಾಗಿಸಿಕೊಂಡಂತೆ ಭಾಸವಾಗುತ್ತೆ.

    ಹೀಗೆ ಅಚ್ಚಹಸಿರಿನಿಂದ ಕಂಗೊಳಿಸುತ್ತಿರುವ ಕಾಫಿನಾಡಿನ ಮುಳ್ಯಯನಗಿರಿ ಪ್ರವಾಸಿಗರನ್ನ ತನ್ನತ್ತ ಕೈಬೀಸಿ ಕರೆಯುತ್ತಿಲ್ಲ, ಬದಲಾಗಿ ತನ್ನ ಸೌಂದರ್ಯದಿಂದಲೇ ಅವರನ್ನು ತನ್ನತ್ತ ಬರುವಂತೆ ಆಗ್ರಹಿಸುತ್ತಿದೆ. ಸಮುದ್ರಮಟ್ಟದಿಂದ 6 ಸಾವಿರ ಅಡಿಗೂ ಹೆಚ್ಚು ಎತ್ತರದಲ್ಲಿರೋ ಈ ಪರ್ವತದ ಸವಿಯನ್ನ ಸವಿಯಲು ಗಿರಿಗೆ ಪ್ರತಿನಿತ್ಯ ಪ್ರವಾಸಿಗರ ದಂಡೇ ಹರಿದು ಬರುತ್ತದೆ. ಸಮೃದ್ಧ ಮಳೆಯಿಂದ ಗಿರಿಶಿಖರಗಳಲ್ಲಿ ಹಸಿರು ಹಾಸಿದೆ. ಗಿಡ ಮರಗಳು ಚಿಗುರೊಡೆದು ಹಸಿರಿನಿಂದ ನಳನಳಿಸುತ್ತಿದ್ದರೆ, ಹಕ್ಕಿ-ಪಕ್ಷಿಗಳ ನಿನಾದ ಕೇಳೋರೆ ಪುಣ್ಯವಂತರು.

    ಅಂತಹಾ, ಅದ್ಭುತ, ಅನನ್ಯ ಪ್ರಕೃತಿಯ ಸೌಂದರ್ಯವನ್ನು ಹೇಳೋಕೆ ಪದ ಸಾಲದು. ಬರೆಯೋಕೆ ಪುಟ ಸಾಲದಂತ ಮುಳ್ಳಯ್ಯನಗಿರಿಯ ದೃಶ್ಯ ವೈಭವದ ಕಾವ್ಯ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪ್ರಕೃತಿಯ ನೈಜ ಚಿತ್ರಣಕ್ಕೆ ಸರಿಸಾಟಿ ಇಲ್ಲದಂತಾಗಿದೆ. ಈ ವೀಡಿಯೋ ನೋಡಿದವರು ನಿಜಕ್ಕೂ ನಿಸರ್ಗದ ಸುಂದರ ನೋಟಕ್ಕೆ ಮನ ಸೋತಿದ್ದಾರೆ.

  • ಮಂಜಿನ ನಾಡಾದ ಬಿಸಿಲನಾಡು ಕೊಪ್ಪಳ – ವೈಮಾನಿಕ ಕ್ಯಾಮೆರಾದಲ್ಲಿ ಸೆರೆಯಾಯ್ತು ಹಿಮದೃಶ್ಯ

    ಮಂಜಿನ ನಾಡಾದ ಬಿಸಿಲನಾಡು ಕೊಪ್ಪಳ – ವೈಮಾನಿಕ ಕ್ಯಾಮೆರಾದಲ್ಲಿ ಸೆರೆಯಾಯ್ತು ಹಿಮದೃಶ್ಯ

    ಕೊಪ್ಪಳ: ಬಿಸಿಲನಾಡು ಎಂದೇ ಹಣೆಪಟ್ಟಿಕಟ್ಟಿಕೊಂಡಿರೋ ಜಿಲ್ಲೆಯಲ್ಲಿ ಇದೀಗ ಬಿಸಿಲಿನ ಝಳಕ್ಕೆ ಜನ ಹೊರಗೆ ಬರೋಕು ಹೆದರುತ್ತಿದ್ದರು. ಆದ್ರೆ ಇದೀಗ ಈ ನಾಡು ಎರಡು ದಿನಗಳಿಂದ ಮಲೆನಾಡಾಗಿ ಪರಿವರ್ತನೆಯಾಗಿದೆ.

    ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಬಿದ್ದಿರೋ ಮಂಜಿನ ಎಫೆಕ್ಟ್ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಭತ್ತದ ನಾಡು ಗಂಗಾಗತಿಯಲ್ಲಿ ಉಂಟಾಗಿರೋ ಮಂಜಿನ ಎಫೆಕ್ಟ್ ಸ್ಥಳೀಯರಿಗೆ ಸಖತ್ ಖುಷಿ ನೀಡುತ್ತಿದೆ. ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿರುವ ಮಂಜಿನ ಸೊಬಗು ಇದೀಗ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದೆ.

    ಸುಡು ಬಿಸಿಲಿನಿಂದ ಕೂಡಿದ್ದ ಕೊಪ್ಪಳದಲ್ಲಿ ಇದೀಗ ಮಂಜು ಕವಿದಿದೆ. ಹೀಗಾಗಿ ಇಷ್ಟು ದಿನ ಬಿಸಿಲು ಬಿಸಿಲು ಎಂದು ಹೇಳುತ್ತಿದ್ದ ಜನ ಇಂದು ಮಂಜಿನಿಂದ ಕೂಡಿದ್ದರಿಂದ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಯ್ತು ಕಾಡಾನೆ ಕಾರ್ಯಚರಣೆ- ಕ್ಯಾಮೆರಾ ಕಣ್ಣಲ್ಲಿ ಅದ್ಭುತ ದೃಶ್ಯ

    ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಯ್ತು ಕಾಡಾನೆ ಕಾರ್ಯಚರಣೆ- ಕ್ಯಾಮೆರಾ ಕಣ್ಣಲ್ಲಿ ಅದ್ಭುತ ದೃಶ್ಯ

    ಚಾಮರಾಜನಗರ: ಬೇಸಿಗೆ ಆರಂಭವಾಗುತ್ತಿದ್ದಂತೆ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದಿಂದ ನಾಡಿನತ್ತ ಲಗ್ಗೆ ಇಡುತ್ತಿರುವ ಕಾಡಾನೆಗಳ ಹಿಂಡನ್ನು ಅರಣ್ಯ ಇಲಾಖೆ ಕಾಡಿಗೆ ಓಡಿಸಲು ಕಾರ್ಯಚರಣೆ ಮಾಡಿದ್ದಾರೆ. ಈ ಅದ್ಭುತ ವಿಡಿಯೋ ಡ್ರೋನ್ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು ನೋಡುಗರ ಮನ ಗೆದ್ದಿದೆ.

    ಬೇಸಿಗೆ ಆರಂಭವಾಗುತ್ತಿದ್ದಂತೆ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗುತ್ತದೆ. ಹಾಗೆಯೇ ಆಹಾರ ಅರಸಿ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದಿಂದ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಓಂಕಾರ ವಲಯದತ್ತ ಲಗ್ಗೆ ಇಟ್ಟ ಕಾಡಾನೆಗಳ ಗುಂಪೊಂದನ್ನು ಅರಣ್ಯ ಇಲಾಖೆ ಅವರು ಹರಸಾಹಸ ಪಟ್ಟು ಕಾಡಿಗಟ್ಟಿದ್ದಾರೆ. ಈ ಕಾರ್ಯಚರಣೆಯ ಒಂದು ಅದ್ಭುತ ನೋಟವನ್ನು ಡ್ರೋನ್ ಕ್ಯಾಮೆರಾದ ಸಹಾಯದಿಂದ ಸೆರೆಹಿಡಿಯಲಾಗಿದ್ದು, ಈ ವಿಡಿಯೋ ನೋಡಿದವರು ಅಬ್ಬಾ! ಎಂಥ ನೋಟ ಅಂತ ಪ್ರಕೃತಿಯ ಸೌದರ್ಯವನ್ನು ಹೊಗಳಿದ್ದರೆ.

    ಡ್ರೋನ್‍ನ ಶಬ್ಧಕ್ಕೆ ಕಾಡಿನತ್ತ ಆನೆಗಳ ಹಿಂಡು ಹೆಜ್ಜೆ ಹಾಕುತ್ತಿರುವ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಒಂದೆಡೆ ಹಿಂಡು ಹಿಂಡಾಗಿ ಬರುತ್ತಿರುವ ಕಾಡಾನೆಗಳನ್ನು ಓಡಿಸಲು ಅರಣ್ಯ ಇಲಾಖೆಯಿಂದ ಹರಸಾಹಸ ಪಡುತ್ತಿರುವ ದೃಶ್ಯವಾದರೆ, ಇನ್ನೊಂದೆಡೆ ಪ್ರಕೃತಿಯ ಸೌಂದರ್ಯದ ಚಿತ್ರಣವನ್ನು ಡ್ರೋನ್ ಕ್ಯಾಮೆರಾ ಸೆರೆಹಿಡಿದಿದೆ.

    https://www.youtube.com/watch?v=bmWfLrrF47s

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv