Tag: Drivers

  • ಹೆದ್ದಾರಿಯಲ್ಲಿ ಚಾಲಕರನ್ನು ಬೆದರಿಸಿ ಹಣ ದರೋಡೆ – ಆರೋಪಿಗಳ ಬಂಧನ

    ಹೆದ್ದಾರಿಯಲ್ಲಿ ಚಾಲಕರನ್ನು ಬೆದರಿಸಿ ಹಣ ದರೋಡೆ – ಆರೋಪಿಗಳ ಬಂಧನ

    ಹುಬ್ಬಳ್ಳಿ: ಜಿಲ್ಲೆಯ ಹೊರವಲಯದ ಗದಗ ರಿಂಗ್ ರೋಡ್‍ನಲ್ಲಿ ಎರಡು ಟಾಟಾ ಏಸ್ ವಾಹನಗಳ ಚಾಲಕರನ್ನು ಬೆದರಿಸಿ, ದರೋಡೆ ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧನ ಮಾಡುವಲ್ಲಿ ಬೆಂಡಿಗೇರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

    ಬಂಧಿತರನ್ನು ಹುಬ್ಬಳ್ಳಿಯ ಗಂಗಾಧರ ನಗರದ ವಿಶಾಲ್ ಕಾಶಿನಾಥ ಬಿಜವಾಡ ಹಾಗೂ ಕರ್ಣ ಮುಂಡಗೋಡ ಎಂದು ಗುರುತಿಸಲಾಗಿದೆ. ಪಲ್ಸರ್ ಬೈಕಿನಲ್ಲಿ ನಿನ್ನೆ ಈ ಇಬ್ಬರು ಆರೋಪಿಗಳು ರಿಂಗ್ ರೋಡ್‍ನಲ್ಲಿ ಹೋಗುತ್ತಿದ್ದ ಕೃಷ್ಣಾ ಹಾಗೂ ಫಾರೂಕ್ ಎಂಬುವವರ ಟಾಟಾ ಏಸ್ ವಾಹನವನ್ನು ನಿಲ್ಲಿಸಿ, 38 ಸಾವಿರ ರೂಪಾಯಿ ದೋಚಿಕೊಂಡು ಪರಾರಿಯಾಗಿದ್ದರು. ಇದನ್ನೂ ಓದಿ: ಬೃಹತ್ ಪೈಪ್ ಬಿದ್ದು ಸೂಪರ್ ವೈಸರ್ ಸಾವು

    ಘಟನೆಯ ಬಳಿಕ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬೆಂಡಿಗೇರಿ ಠಾಣೆಯ ಪೊಲೀಸರು ಐಟಿಸಿ ಗೋಡೌನ್ ಬಳಿಯಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯವನ್ನು ಪರಿಗಣಿಸಿ ಆರೋಪಿಗಳ ಜಾಡು ಹಿಡಿದಿದ್ದಾರೆ. ಹಳಿಯಾಳ ರಸ್ತೆಯಲ್ಲಿ ಪಾರ್ಟಿ ಮಾಡುತ್ತ ಕುಳಿತ ಸಮಯದಲ್ಲಿ ಪೊಲೀಸರು ಆರೋಪಿಗಳನ್ನು ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

  • ಸಾರಿಗೆ ಅಧಿಕಾರಿಗಳ ವಿರುದ್ಧ ಖಾಸಗಿ ಬಸ್ ಚಾಲಕರ ಆಕ್ರೋಶ

    ಸಾರಿಗೆ ಅಧಿಕಾರಿಗಳ ವಿರುದ್ಧ ಖಾಸಗಿ ಬಸ್ ಚಾಲಕರ ಆಕ್ರೋಶ

    ಮೈಸೂರು: ಸಾರಿಗೆ ಅಧಿಕಾರಿಗಳು ಮತ್ತು ಖಾಸಗಿ ಬಸ್‍ಗಳ ಚಾಲಕರು, ನಿರ್ವಾಹಕರ ನಡುವೆ ವಾಗ್ವಾದ ನಡೆದಿರುವ ಘಟನೆ ಮೈಸೂರಿನ ಕೇಂದ್ರಿಯ ಬಸ್ ನಿಲ್ದಾಣದಲ್ಲಿ ನಡೆದಿದೆ.

    ಸಾರಿಗೆ ನೌಕರರು ಮುಷ್ಕರ ಮುಂದುವರಿದ ಹಿನ್ನೆಲೆ ಕೆಎಸ್‌ಆರ್‌ಟಿಸಿ ಬಸ್‍ಗಳು ಇಲ್ಲದೇ ಖಾಸಗಿ ಬಸ್‍ಗಳು ಸೇವೆ ಸಲ್ಲಿಸುತ್ತಿವೆ. ಇದೀಗ ಒಂದೊಂದಾಗಿ ಕೆಎಸ್‌ಆರ್‌ಟಿಸಿ ಬಸ್‍ಗಳು ರಸ್ತೆಗಿಳಿಯುತ್ತಿದೆ.

    ಹಾಗಾಗಿ ಖಾಸಗಿ ಬಸ್‍ಗಳ ಚಾಲಕರು ಮತ್ತು ನಿರ್ವಾಹಕರು ನಾವು ಬೆಳಿಗ್ಗೆಯಿಂದಲೇ ನಮ್ಮ ಬಸ್‍ಗಳನ್ನು ತಂದು ನಿಲ್ಲಿಸಿ ಕಾದು ಕುಳಿತಿದ್ದೇವೆ. ನೀವು ಈಗ ಏಕಾಏಕಿ ಬಂದು ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಮಾಡಲಿ ಬಿಟ್ಟರೆ ನಮ್ಮ ಗತಿಯೇನು? ನಮ್ಮನ್ನ ಉಪಯೋಗಿಸಿಕೊಂಡು ಬಿಸಾಡುತ್ತೀರಾ? ಎಂದು ಆಕ್ರೋಶ ಹೊರಹಾಕಿದ್ದಾರೆ.

    ನಾಲ್ಕು ದಿನಗಳಿಂದ ನಾವು ಸೇವೆ ನೀಡುತ್ತಿದ್ದೇವೆ. ಆದರೆ ಈಗ ಬಂದಿರುವ ಕೆಎಸ್‌ಆರ್‌ಟಿಸಿ ಬಸ್ ಭರ್ತಿಯಾದರೆ ನಾವು ಏನು ಮಾಡುವುದು. ನಮ್ಮ ಬಸ್‍ಗಳನ್ನು ಮೊದಲು ಬಿಡಿ ಆಮೇಲೆ ನಿಮ್ಮ ಬಸ್‍ಗಳು ಹೊರಡಲಿ ಎಂದು ಖಾಸಗಿ ಬಸ್ ಚಾಲಕರು, ನಿರ್ವಾಹಕರ ಒತ್ತಾಯಿಸಿದ್ದಾರೆ.

    ಸದ್ಯ ಖಾಸಗಿ ಬಸ್‍ಗಳ ಸಂಚಾರಕ್ಕೆ ಮೊದಲ ಆದ್ಯತೆ ನೀಡಿ. ನಿಲ್ದಾಣ ತುಂಬಾ ಬಸ್ ಇದೆ. ಆದರೆ ಪ್ರಯಾಣಿಕರೇ ಇಲ್ಲದ ಸ್ಥಿತಿಯಾಗಿದೆ ಎಂದು ಕಿಡಿಕಾರಿದ್ದಾರೆ.

  • ರೈತರು, ಸಾರಿಗೆ ನೌಕರರು ಆಯ್ತು – ಈಗ ಆಟೋ, ಟ್ಯಾಕ್ಸಿ ಚಾಲಕರಿಂದ ಪ್ರತಿಭಟನೆ

    ರೈತರು, ಸಾರಿಗೆ ನೌಕರರು ಆಯ್ತು – ಈಗ ಆಟೋ, ಟ್ಯಾಕ್ಸಿ ಚಾಲಕರಿಂದ ಪ್ರತಿಭಟನೆ

    ಬೆಂಗಳೂರು: ರೈತರು, ಸಾರಿಗೆ ನೌಕರರು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಈಗ ಆಟೋ, ಟ್ಯಾಕ್ಸಿ ಚಾಲಕರು ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ.

    ತಿಂಗಳಿಗೊಮ್ಮೆ, ಎರಡೆರಡು ಬಾರಿ ಗ್ಯಾಸ್ ದರ ಏರಿಕೆಯಾಗುತ್ತಿದೆ. ಆದರೆ ಆಟೋ ಹಾಗೂ ಟ್ಯಾಕ್ಸಿಗಳ ಕನಿಷ್ಟ ಮೀಟರ್ ದರ ಮಾತ್ರ ಹೆಚ್ಚಳವಾಗುತ್ತಿಲ್ಲ. ಕೋವಿಡ್ ಬಂದ ಮೇಲೆ ವ್ಯಾಪಾರ ಫುಲ್ ಡಲ್ ಆಗಿ ಹೋಗಿದೆ. ಈ ಹಿನ್ನೆಲೆಯಲ್ಲಿ ಈಗ ಚಾಲಕರು ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಈಗ ಕೇಂದ್ರ, ರಾಜ್ಯದ ಮುಂದೆ ಬೇಡಿಕೆಗಳ ಪಟ್ಟಿ ಸಿದ್ಧಪಡಿಸಿದ್ದಾರೆ.

    ಕಳೆದ ನಾಲ್ಕು ತಿಂಗಳಲ್ಲಿ ಬರೋಬ್ಬರಿ 8 ರೂ.ವರೆಗೂ ಆಟೋ ಗ್ಯಾಸ್ ಬೆಲೆ ಬಹುತೇಕ ಏರಿಕೆಯಾಗಿದೆ. ಆದರೆ ಆಟೋ ಪ್ರಯಾಣ ದರ ಪರಿಷ್ಕರಣೆ ಆಗಿಲ್ಲ. ಸುಮಾರು ಐದು ವರ್ಷಗಳಿಂದ ಆಟೋ ಪ್ರಯಾಣ ದರ ಏರಿಕೆಯಾಗಿಲ್ಲ. ಆಟೋ ಹತ್ತಿದರೆ ಕನಿಷ್ಟ 25 ರೂ. ಕೊಡಬೇಕು. ಅದೇ ಕಿಮೀಗೆ 13 ರೂ. ಫಿಕ್ಸ್ ಆಗಿಬಿಟ್ಟಿದೆ. ಟ್ಯಾಕ್ಸಿ ಪ್ರಯಾಣ ದರ ಕಿ.ಮೀಗೆ 8.50ರೂ ಇದು ಟ್ಯಾಕ್ಸಿಗೆ ಕಿಮೀಗೆ 40 ರೂ. ಕೊಡಬೇಕಿದೆ.

    ಎಲ್ಲ ಆಟೋ, ಟ್ಯಾಕ್ಸಿ ಚಾಲಕರ ಸಂಘಗಳ ಬೇಡಿಕೆ ಕುರಿತು ಸರ್ಕಾರಕ್ಕೆ ಸಲ್ಲಿಕೆ ಮಾಡಲು ಪ್ಲ್ಯಾನ್ ಇದೆ ಎಂದು ಜಯ ಕರ್ನಾಟಕ ಜನಪರ ವೇದಿಕೆಯ ಆಟೋ ನಗರ ಘಟಕ ಅಧ್ಯಕ್ಷ ಜೈರಾಮ್ ತಿಳಿಸಿದರು. ಇದೇ ವೇಳೆ ಟ್ಯಾಕ್ಸಿ ಘಟಕ ಅಧ್ಯಕ್ಷ ವೇಣು ಮಾತನಾಡಿ, ಟ್ಯಾಕ್ಸಿ ಚಾಲಕರಿಗೂ ಅನ್ಯಾಯವಾಗುತ್ತಿರುವುದನ್ನ ಖಂಡಿಸಲು ಹೊರಾಟದ ದಾರಿ ಅನಿವಾರ್ಯ ಎಂದು ಹೇಳಿದ್ದಾರೆ.

    ಬೇಡಿಕೆಗಳೇನು?
    ಆಟೋ, ಟ್ಯಾಕ್ಸಿ ಮಿನಿಮಮ್ ದರ ಪರಿಷ್ಕರಣೆ ಮಾಡಬೇಕು. ಆಟೋ, ಟ್ಯಾಕ್ಸಿ ಚಾಲಕರಿಗೆ ಬೆಲೆ ಏರಿಕೆ ಹೊಡೆತ ಬೀಳದಂತೆ ನಿಗಾ ಇಡಬೇಕು. ಉಜ್ವಲ ಯೋಜನೆಯಲ್ಲಿ ಮನೆ ಅಡುಗೆ ಸಿಲಿಂಡರ್ ಸಬ್ಸಿಡಿ ಕೊಡುವಂತೆ ಆಟೋ ಗ್ಯಾಸ್‍ಗೂ ಸಬ್ಸಿಡಿ ಕೊಡಬೇಕು. ಕಮರ್ಷಿಯಲ್ ವೆಹಿಕಲ್‍ಗಳ ಸಂಚಾರಕ್ಕೆ ಸಬ್ಸಿಡಿ ತೈಲ ಕೊಡಬೇಕು. ಇಲ್ಲವಾದರೆ ಪ್ರಯಾಣದ ಮಿನಿಮಮ್ ದರ ಪರಿಷ್ಕರಣೆಗೆ ಕಮಿಟಿ ರಚನೆ ಮಾಡಬೇಕು. ಚಾಲಕರ ಹಿತರಕ್ಷಣೆ ದೃಷ್ಟಿಯಲ್ಲಿ ಪ್ರತಿ ಒಂದು ವರ್ಷಕ್ಕೊಮ್ಮೆ ಪ್ರಯಾಣ ದರ ಹಾಗೂ ತೈಲ ದರ ವೆಚ್ಚದ ಕುರಿತು ವರದಿ ನೀಡಲು ತಂಡ ರಚಿಸಬೇಕು.

    ಯಾವೆಲ್ಲ ಸಂಘಟನೆಗಳ ಬೆಂಬಲ?
    ಜಯ ಕರ್ನಾಟಕ ಜನಪರ ವೇದಿಕೆ, ಕರ್ನಾಟಕ ಚಾಲಕರ ಒಕ್ಕೂಟ, ಕರ್ನಾಟಕ ರಾಜ್ಯ ವಾಹನ ಚಾಲಕರು ಮತ್ತು ಮಾಲೀಕರ ಸಂಘ, ಜನಸೇವಾ ವಾಹನ ಚಾಲಕರ ವೇದಿಕೆ, ಹೊಯ್ಸಳ ಸಾರಥಿ ಸೇನೆ, ಸುವರ್ಣ ಸಾರಥಿ ಸೇನೆ, ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್ ಆರ್ಗನೈಸೇಶನ್, ಕರ್ನಾಟಕ ಚಾಲಕರ ಯುವ ಸೇನೆ, ಕರ್ನಾಟಕ ಚಾಲಕರ ಕಾರ್ಯಕಾರಿ ಸಮಿತಿ.

  • ಕೊರೊನಾಗೆ 108 ಅಂಬುಲೆನ್ಸ್ ಚಾಲಕ ಬಲಿ- ಅಧಿಕಾರಿಗಳ ನಿರ್ಲಕ್ಷ್ಯ ಆರೋಪ

    ಕೊರೊನಾಗೆ 108 ಅಂಬುಲೆನ್ಸ್ ಚಾಲಕ ಬಲಿ- ಅಧಿಕಾರಿಗಳ ನಿರ್ಲಕ್ಷ್ಯ ಆರೋಪ

    – ಸೂಕ್ತ ಸೌಲಭ್ಯ ಕಲ್ಪಿಸುವಂತೆ ಚಾಲಕರ ಮನವಿ

    ಬೆಂಗಳೂರು: ಮಹಾಮಾರಿ ಕೊರೊನಾಗೆ ವಾರಿಯರ್ಸ್‍ಗಳೂ ನಲುಗಿ ಹೋಗಿದ್ದು, ಇದೀಗ 108 ಅಂಬುಲೆನ್ಸ್ ಚಾಲಕ ಸಾವನ್ನಪ್ಪಿದ್ದಾರೆ. ಚಾಲಕನ ಸಾವಿಗೆ ಆರೋಗ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಲಾಗಿದೆ.

    ಕೊರೊನಾ ಸಮಯದಲ್ಲಿ ವಾರಿಯರ್ ಆಗಿ ಕೆಲಸ ಮಾಡುತ್ತಿದ್ದ ಚಾಲಕ ಜಗದೀಶ್ ಇಂದು ಸಾವನ್ನಪ್ಪಿದ್ದಾರೆ. ಮೃತ ಜಗದೀಶ್ ಅಗಲಿಕೆಗೆ 108 ವಾಹನ ಚಾಲಕರು ಕಂಬನಿ ಮಿಡಿದಿದ್ದಾರೆ. ಆರೋಗ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಚಾಲಕ ಬಲಿಯಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಚಾಲಕನಾಗಿ ಕಾರ್ಯ ನಿರ್ವಹಿಸ್ತಿದ್ದ ಜಗದೀಶ್, ಸೋಂಕಿನಿಂದ ಮೃತಪಟ್ಟಿದ್ದಾರೆ.

    ಕೋವಿಡ್ ಸಮಯದಲ್ಲಿ ಚಾಲಕರಿಗೆ ಕೊಡಬೇಕಾದ ಮುನ್ನೆಚ್ಚರಿಕೆ ಸಲಕರಣೆಗಳನ್ನ ಕೊಟ್ಟಿಲ್ಲ. ಹೀಗಾಗಿ ಕೊರೊನಾ ಪಾಸಿಟಿವ್ ರೋಗಿಗಳನ್ನು ಆಸ್ಪತ್ರೆಗೆ ಶಿಫ್ಟ್ ಮಾಡುವ ಸಮಯದಲ್ಲಿ ಸೋಂಕು ತಗುಲಿದೆ.ಬೆಂಗಳೂರಿನಲ್ಲಿ ಸಹ ಇದೇ ರೀತಿ ಹಲವು ಪ್ರಕರಣಗಳು ಬೆಳಕಿಗೆ ಬಂದಿದ್ದವು. ಈ ಕುರಿತು ಸರ್ಕಾರಕ್ಕೆ ಹಲವು ಬಾರಿ ಮನವಿ ಸಹ ಮಾಡಲಾಗಿತ್ತು, ಆದರೂ ಪ್ರಯೋಜನವಾಗಿಲ್ಲ. ಹೀಗಾಗಿ ರಾಜ್ಯದಲ್ಲಿ ಕೊರೊನಾ ವಾರಿಯರ್ಸ್ ಸಾವು ಸಂಭವಿಸುತ್ತಿವೆ.

    ಜೀವವನ್ನು ಪಣಕ್ಕಿಟ್ಟು ದುಡಿಯುವ ಚಾಲಕರ ಜೀವಕ್ಕೆ ಬೆಲೆ ಇಲ್ಲವೆ, ಆರೋಗ್ಯ ಸಚಿವರು ಈ ಕುರಿತು ಗಮನಹರಿಸಬೇಕು. ನಮ್ಮ ಪಾಡು, ತೀರ ದಯನೀಯ ಸ್ಥಿತಿ ತಲುಪಿದೆ. ಮಾಸ್ಕ್ ಇಲ್ಲ, ಕಿಟ್ ಇಲ್ಲ. ಹೀಗಾಗಿ ನಮ್ಮ ಜೀವಕ್ಕೆ ಗ್ಯಾರಂಟಿ ಇಲ್ಲದಂತಾಗಿದೆ. ಮೃತ ಜಗದೀಶ್ ಕುಟುಂಬಕ್ಕೆ ಪರಿಹಾರ ನೀಡಿ, ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳಬೇಕು. ಕೊರೊನಾ ಹೊಡೆತಕ್ಕೆ ಸಹಸ್ರಾರು ಕುಟುಂಬಗಳು ಬೀದಿ ಪಾಲಾಗುತ್ತಿವೆ ಎಂದು 108 ಅಂಬುಲೆನ್ಸ್ ರಾಜ್ಯ ಚಾಲಕರ ಸಂಘದ ಉಪಾಧ್ಯಕ್ಷ ಸೇರಿ 3 ಸಾವಿರ ಚಾಲಕರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

  • ಸಾಲ ಮಾಡಿ ರಿಕ್ಷಾ ಖರೀದಿ, ಸರ್ಕಾರದಿಂದ ಬ್ಯಾನ್- ಕಣ್ಣೀರಿಡುತ್ತಿದ್ದವನ ಕೈ ಹಿಡಿದ ಆಪತ್ಬಾಂಧವ

    ಸಾಲ ಮಾಡಿ ರಿಕ್ಷಾ ಖರೀದಿ, ಸರ್ಕಾರದಿಂದ ಬ್ಯಾನ್- ಕಣ್ಣೀರಿಡುತ್ತಿದ್ದವನ ಕೈ ಹಿಡಿದ ಆಪತ್ಬಾಂಧವ

    – ಸಾಲ ಮಾಡಿ 15 ದಿನಗಳ ಹಿಂದೆ ರಿಕ್ಷಾ ಖರೀದಿಸಿದ್ದ ಚಾಲಕ

    ಢಾಕಾ: ಬಾಂಗ್ಲಾದೇಶದ ಢಾಕಾದಲ್ಲಿ ಮನಕಲುಕುವ ಘಟನೆಯೊಂದು ನಡೆದಿದ್ದು, ಸರ್ಕಾರ ರಿಕ್ಷಾ ಸೀಜ್ ಮಾಡಿದೆ. ಇನ್ನೊಂದೆಡೆ ರಿಕ್ಷಾ ಕಳೆದುಕೊಂಡು ಚಾಲಕರು ಕಣ್ಣೀರಿಡುತ್ತಿದ್ದಾರೆ. ಇಂತಹ ಮೂವರಿಗೆ ಅಪರಿಚಿತರೊಬ್ಬರು ಮೂರು ಹೊಸ ಆಟೋ ಕೊಡಿಸುವ ಮೂಲಕ ಅವರ ಜೀವನಕ್ಕೆ ಆಸರೆಯಾಗಿದ್ದಾರೆ.

    ರಿಕ್ಷಾ ನಡೆಸುತ್ತಿದ್ದ ಫಜ್ಲೂರ್ ರಹಮಾನ್ ತಮ್ಮ ರಿಕ್ಷಾ ಕಳೆದುಕೊಂಡು ನಡು ರಸ್ತೆಯಲ್ಲಿ ಕಣ್ಣೀರಿಟ್ಟಿದ್ದಾರೆ. ಢಾಕಾ ಸೌತ್ ಸಿಟಿ ಕಾರ್ಪೋರೇಷನ್(ಡಿಎಸ್‍ಸಿಸಿ) ಅಧಿಕಾರಿಗಳು ರಹಮಾನ್ ಆಟೋವನ್ನು ಸೀಜ್ ಮಾಡಿದ್ದಾರೆ. ಢಾಕಾದಲ್ಲಿ ಆಟೋ ರಿಕ್ಷಾಗಳು ಹೆಚ್ಚುತ್ತಿರುವ ಕಾರಣ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಹೀಗಾಗಿ ಆಟೋಗಳ ನಿಷೇಧಕ್ಕೆ ಅಲ್ಲಿನ ಸರ್ಕಾರ ಮುಂದಾಗಿದೆ. ಹೀಗಾಗಿ ಅಧಿಕಾರಿಗಳು ರಿಕ್ಷಾ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.

    ಢಾಕಾದಲ್ಲಿ ಬ್ಯಾಟರಿ ಚಾಲಿತ, ಮೊಟರೈಸಡ್ ಸೇರಿದಂತೆ ಎಲ್ಲ ಬಗೆಯ ಆಟೋ ರಿಕ್ಷಾ ಹಾಗೂ ವ್ಯಾನ್‍ಗಳನ್ನು ನಿಷೇಧಿಸಲಾಗಿದೆ. ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ರಹಮಾನ್ ಅವರ ರಿಕ್ಷಾವನ್ನು ವಶಪಡಿಸಿಕೊಂಡ ಬಳಿಕ ನಡುರಸ್ತೆಯಲ್ಲೇ ಗೋಗರೆದಿದ್ದಾರೆ. ಸ್ಥಳೀಯರು ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ತಕ್ಷಣವೇ ವಿಡಿಯೋ ವೈರಲ್ ಆಗಿದ್ದು, ಸುಮಾರು 1 ಲಕ್ಷಕ್ಕೂ ಅಧಿಕ ಜನ ಈ ಕುರಿತು ಪ್ರತಿಕ್ರಿಯಿಸಿದ್ದಾರೆ.

    ಕೊರೊನಾ ವೈರಸ್ ಹಿನ್ನೆಲೆ ರಹಮಾನ್ ಅವರು ಕೆಲಸ ಕಳೆದುಕೊಂಡಿದ್ದರು. ನಂತರ 69 ಸಾವಿರ ರೂ. ಸಾಲ ಪಡೆದು ಜೀವನೋಪಾಯಕ್ಕಾಗಿ ಕೇವಲ 15 ದಿನಗಳ ಹಿಂದೆ ಬ್ಯಾಟರಿ ಚಾಲಿತ ರಿಕ್ಷಾ ಖರೀದಿಸಿದ್ದರು. ಆದರೆ ಖರೀದಿಸಿದ ಕೆಲವೇ ದಿನಗಳಲ್ಲಿ ಸರ್ಕಾರ ಇವರ ರಿಕ್ಷಾವನ್ನು ಸೀಜ್ ಮಾಡಿದೆ. ಹೀಗಾಗಿ ಗೋಳಾಡಿದ್ದಾರೆ.

    ভাইরাল রিক্সা চালকের সাথে আরও দুইজন রিক্সা চালক ছিলেন যাদের বুক ফাটা কান্না ক্যামেরার ফ্রেমে ধরা পড়েনি আর তাই তাদের…

    Posted by Ahsan Bhuiyan on Thursday, October 8, 2020

    ಇವರ ಕಷ್ಟದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಇವರ ಅರಿತ ಅಪರಿಚಿತ ವ್ಯಕ್ತಿ ಅಹ್ಸಾನ್ ಭುಯಾನ್, ರಹಮಾನ್‍ಗಾಗಿ ಹೊಸ ಆಟೋ ಬುಕ್ ಮಾಡಿದ್ದಾರೆ. ನಾವು ಬಯಸಿದರೆ ಬದಲಾಯಿಸಬಹುದು. ಹೊಸ ರಿಕ್ಷಾ ಆರ್ಡರ್ ಮಾಡಿ ಮನಗೆ ತೆರಳಿದ್ದೇನೆ. ನಂತರದ ದಿನವೇ ಡೆಲಿವರಿ ಆಗಿದೆ ಎಂದು ಭುಯಾನ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

    ಆನ್‍ಲೈನ್ ದಿನಸಿ ಮಾರಾಟ ಮಳಿಗೆ ಶ್ವಾಪ್ನೋ ಸಹ ರಹಮಾನ್‍ಗೆ ಸಹಾಯ ಮಾಡಲು ಮುಂದಾಗಿದ್ದು, ಇನ್ನೆರಡು ಆಟೋ ಖರೀದಿಸಿದೆ. ಹೀಗಾಗಿ ಹೋಮ್ ಡೆಲಿವರಿ ಸೇವೆಯನ್ನು ಸಹ ಆರಂಭಿಸಲು ರಹಮಾನ್ ಯೋಚಿಸಿದ್ದಾರೆ. ಅಲ್ಲದೆ ರಹಮಾನ್ ಜೊತೆಗಿದ್ದ ಇನ್ನಿಬ್ಬರು ಚಾಲಕರಿಗೂ ಭುಯಾನ್ ಅವರು ಆಟೋ ಬುಕ್ ಮಾಡಿದ್ದಾರೆ. ಈ ಮೂಲಕ ಕಷ್ಟದಲ್ಲಿರುವ ಚಾಲಕರ ನೆರವಿಗೆ ನಿಂತಿದ್ದಾರೆ.

  • ಆಟೋ, ಟ್ಯಾಕ್ಸಿ ಚಾಲಕರಿಗೆ 5 ಸಾವಿರ ರೂ. ಘೋಷಣೆ – ಯಾವೆಲ್ಲಾ ಚಾಲಕರು ಅರ್ಹರು?

    ಆಟೋ, ಟ್ಯಾಕ್ಸಿ ಚಾಲಕರಿಗೆ 5 ಸಾವಿರ ರೂ. ಘೋಷಣೆ – ಯಾವೆಲ್ಲಾ ಚಾಲಕರು ಅರ್ಹರು?

    ಬೆಂಗಳೂರು: ಕೊರೊನಾ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ರಾಜ್ಯ ಸರ್ಕಾರದಿಂದ 5 ಸಾವಿರ ರೂ. ಪರಿಹಾರ ನೀಡುವುದಾಗಿ ಸಿಎಂ ಘೋಷಣೆ ಮಾಡಿದ್ದಾರೆ.

    ಆಟೋ ಮತ್ತು ಟ್ಯಾಕ್ಸಿಯನ್ನು ಓಡಿಸಿಕೊಂಡು ಜೀವನ ಮಾಡುತ್ತಿದ್ದ ಚಾಲಕರು ಈ ಲಾಕ್‍ಡೌನ್ ಸಮಯದಲ್ಲಿ ಬಹಳ ಕಷ್ಟ ಅನುಭವಿಸಿದ್ದಾರೆ. ಹೀಗಾಗಿ ಅವರಿಗಾಗಿ ಸರ್ಕಾರ ಸಿಎಂ ಪರಿಹಾರ ನಿಧಿಯಿಂದ ಹಣ ಕೊಡಲು ತೀರ್ಮಾನ ಮಾಡಿದೆ. ಈ ಹಣವನ್ನು ವಿರತಣೆ ಮಾಡಲು ಸಾರಿಗೆ ಇಲಾಖೆಯ ಅಯುಕ್ತರು ಸರ್ಕಾರದ ನಡವಳಿಕೆಗಳ ಪಟ್ಟಿಯನ್ನು ತಯಾರಿಸಿದ್ದು ರಾಜ್ಯಪಾಲರ ಸಹಿಯೊಂದೇ ಬಾಕಿಯಿದೆ. ಈ ನಡವಳಿ ಪ್ರಕಾರ ಯಾವೆಲ್ಲಾ ಚಾಲಕರಿಗೆ ಈ ಹಣ ಸಿಗುತ್ತದೆ ಎಂಬುದರ ಮಾಹಿತಿ ಇಲ್ಲಿದೆ.

    ಯಾವೆಲ್ಲಾ ಚಾಲಕರು ಅರ್ಹರರು?
    1. ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲನೆ ಮಾಡಲು ಚಾಲನಾ ಅನುಜ್ಞಾ ಪತ್ರ ಮತ್ತು ಬ್ಯಾಡ್ಜ್ ಹೊಂದಿರುವವರು ಮಾತ್ರ ಈ ಯೋಜನೆಯ ಫಲಾನುಭವಿಗಳಾಗಿರುತ್ತಾರೆ.
    2. ಫಲಾನುಭವಿಗಳು ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಾಗಿದ್ದು, ದಿನಾಂಕ: 01-03-2020 ಕ್ಕೆ ಚಾಲ್ತಿಯಲ್ಲಿರುವ ಚಾಲನಾ ಅನುಜ್ಞಾ ಪತ್ರದ ವಿವರಗಳನ್ನು ಪೋರ್ಟಲ್ ನಲ್ಲಿ ನಮೂದಿಸಬೇಕಾಗಿರುತ್ತದೆ.
    3. ಚಾಲಕರ ಆಧಾರ್ ಕಾರ್ಡ್ ವಿವರಗಳನ್ನು ಪೋರ್ಟಲ್‍ನಲ್ಲಿ ನಮೂದಿಸಬೇಕಾಗಿರುತ್ತದೆ.


    4. ಚಾಲಕರ ಬ್ಯಾಂಕ್ ಅಕೌಂಟ್ ವಿವರ, ಸಂಬಂಧಪಟ್ಟ ಬ್ಯಾಂಕಿನ ಐಎಫ್‍ಎಸ್‍ಸಿ ಕೋಡ್, ಎಂಐಸಿಆರ್ ಕೋಡ್‍ಗಳ ವಿವರಗಳನ್ನು ಪೋರ್ಟಲ್‍ನಲ್ಲಿ ನಮೂದಿಸಬೇಕಾಗಿರುತ್ತದೆ.
    5. ಚಾಲಕರು ಚಾಲನೆ ಮಾಡುವ ವಾಹನದ ನೋಂದಣಿ ಸಂಖ್ಯೆ ವಿವರಗಳನ್ನು ಪೋರ್ಟಲ್‍ನಲ್ಲಿ ನಮೂದಿಸಬೇಕಾಗಿರುತ್ತದೆ. ವಾಹನ್-4 ತಂತ್ರಾಂಶದಿಂದ ವಿವರಗಳನ್ನು ನೇರವಾಗಿ ಪಡೆಯುವುದು.
    6. ಚಾಲನಾ ಅನುಜ್ಞಾ ಪತ್ರದ ವಿವರಗಳನ್ನು ಸಾರಿಗೆ ಇಲಾಖೆಯ ಸಾರಥಿ-4 ತಂತ್ರಾಂಶದಿಂದ ನೇರವಾಗಿ ಪಡೆದುಕೊಳ್ಳಬೇಕು.


    7. ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರು ತಮ್ಮ ದೈನಂದಿನ ಉದ್ಯೋಗವನ್ನು ನಡೆಸಲಾಗದ ಆದಾಯ ಕಳೆದುಕೊಂಡಿರುವ ಬಗ್ಗೆ ಸ್ವಯಂ ಘೋಷಣೆ ಮಾಡಬೇಕು.
    8. ಈ ಯೋಜನೆಯನ್ನು ಜಾರಿಗೊಳಿಸಲು ಅರ್ಹ ಚಾಲಕರು ತಮ್ಮ ಅರ್ಜಿಗಳನ್ನು ‘ಸೇವಾಸಿಂಧು’ವಿನ ಮುಖಾಂತರ ಸಲ್ಲಿಸಲು ವ್ಯವಸ್ಥೆ ಮಾಡಬೇಕಾಗಿರುತ್ತದೆ. ಈ ಬಗ್ಗೆ ‘ಸೇವಾಸಿಂಧು’ ವಿನಲ್ಲಿ ಸೂಕ್ತ ವ್ಯವಸ್ಥೆ ಮಾಡುವಂತೆ ಇ-ಆಡಳಿತ ಇಲಾಖೆಯನ್ನು ಕೋರಬಹುದಾಗಿದೆ.
    9. ಅರ್ಹ ಫಲಾನುಭವಿಗಳಿಗೆ ಆಧಾರ್ ಸಂಖ್ಯೆಯ ಮೂಲಕ ಡಿಬಿಟಿ ಮಾಡಬೇಕು ಅಥವಾ ಆನ್‍ಲೈನ್ ಮೂಲಕ ಬ್ಯಾಂಕಿಗೆ ಜಮಾ ಮಾಡಬೇಕು.
    10. ಫಲಾನುಭವಿಗಳು ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಲು ಅನುವಾಗುವಂತೆ ಅರ್ಹ/ಅನರ್ಹ ಅರ್ಜಿದಾರರ ಪಟ್ಟಿಯನ್ನು ತಂತ್ರಾಂಶದಲ್ಲಿ ಅಳವಡಿಸಿಕೊಳ್ಳಬೇಕು.

    ಈ ರೀತಿಯ ನಡವಳಿಕೆಗಳನ್ನು ಸಾರಿಗೆ ಆಯುಕ್ತರು ಸರ್ಕಾರಕ್ಕೆ ತಯಾರಿಸಿ ಕೊಟ್ಟಿದ್ದು, ಇಂದು ಅಥವಾ ನಾಳೆ ಸರ್ಕಾರದ ಆದೇಶ ಪ್ರಕಟವಾಗುವ ಸಾದ್ಯತೆ ಇದೆ.

  • ಆರ್ಥಿಕ ಸಂಕಷ್ಟದ ನಡುವೆ ಅತಿದೊಡ್ಡ ಪ್ಯಾಕೇಜ್- ಆಟೋ, ಟ್ಯಾಕ್ಸಿ ಚಾಲಕರು, ಕ್ಷೌರಿಕರಿಗೆ 5 ಸಾವಿರ ನೆರವು

    ಆರ್ಥಿಕ ಸಂಕಷ್ಟದ ನಡುವೆ ಅತಿದೊಡ್ಡ ಪ್ಯಾಕೇಜ್- ಆಟೋ, ಟ್ಯಾಕ್ಸಿ ಚಾಲಕರು, ಕ್ಷೌರಿಕರಿಗೆ 5 ಸಾವಿರ ನೆರವು

    – ಹೂ ಬೆಳೆಗಾರರಿಗೆ 25 ಸಾವಿರ ಪರಿಹಾರ

    ಬೆಂಗಳೂರು: ಕೊರೊನಾ ಲಾಕ್‍ಡೌನ್ ಆಗಿ 47 ದಿನಗಳು ಕಳೆದಿವೆ. ಲಾಕ್‍ಡೌನ್ ಅವಧಿಯಲ್ಲಿ ಅತೀ ಹೆಚ್ಚು ಸಂಕಷ್ಟಕ್ಕೆ ತುತ್ತಾದವರು ಆಯಾ ದಿನದ ಕೆಲಸವನ್ನೇ ನಂಬಿ ಜೀವನ ನಡೆಸುತ್ತಾ ಬಂದಿವರೇ ಆಗಿದ್ದಾರೆ. ವೃತ್ತಿನಿರತ ಕ್ಷೌರಿಕರು, ಅಗಸರು, ರೈತರು, ಆಟೋ ಟ್ಯಾಕ್ಸಿ ಚಾಲಕರು, ಹೂ, ಹಣ್ಣು ಬೆಳೆಗಾರರು ಸಾಕಷ್ಟು ಕಷ್ಟ ನಷ್ಟಗಳನ್ನು ಉಂಡಿದ್ದರು. ಉದ್ಯಮ ವಲಯವೂ ಸ್ತಬ್ಧ ಆಗಿ ಉದ್ಯಮಿಗಳು ಕಂಗಾಲಾಗಿದ್ದರು. ಇದೀಗ ಈ ವರ್ಗದವರ ನೆರವಿಗೆ ರಾಜ್ಯ ಸರ್ಕಾರ ಧಾವಿಸಿದೆ. 1,610 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಸಿಎಂ ಯಡಿಯೂರಪ್ಪ ಅವರು, ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದಿದ್ದರೂ ಕೆಲಸ ಇಲ್ಲದೇ ಸಂಕಷ್ಟದಲ್ಲಿರುವ ಶ್ರಮಿಕ ವರ್ಗಕ್ಕೆ ನೆರವಾಗುತ್ತಿದ್ದೇವೆ ಎಂದು ತಿಳಿಸಿದರು. ಸರ್ಕಾರದ ಈ ಪ್ಯಾಕೇಜ್ ಅನ್ನು ಕಾಂಗ್ರೆಸ್ ಸ್ವಾಗತಿಸಿದೆ. ಆದರೆ ಇದು ಸಾಲ್ದು, ಕನಿಷ್ಠ 10 ಸಾವಿರ ಕೋಟಿ ರೂಪಾಯಿಗಳ ಪ್ಯಾಕೇಜ್ ಘೋಷಿಸಿ ಶ್ರಮಿಕರಿಗೆ ನೆರವಾಗಬೇಕು. ಇದಕ್ಕಾಗಿ ವಿಶೇಷ ಅಧಿವೇಶನ ಕರೆದು ಅಲ್ಲಿಯೇ ಘೋಷಣೆ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಗ್ರಹಿಸಿದ್ದಾರೆ.

    ಶ್ರಮಿಕ ವರ್ಗಕ್ಕೆ ನೆರವು:
    ಅಗಸರು, ಕ್ಷೌರಿಕರಿಗೆ ತಲಾ 5 ಸಾವಿರ ರೂ. ನೆರವು ನೀಡಲಾಗುತ್ತದೆ. ಬಟ್ಟೆ ಒಗೆಯುವ, ಇಸ್ತ್ರಿ ಕೆಲಸದಲ್ಲಿ ತೊಡಗಿದ್ದ ಸುಮಾರು 60 ಸಾವಿರ ಅಗಸರು ಹಾಗೂ ಕ್ಷೌರಿಕ ವೃತ್ತಿ ಮಾಡುತ್ತಿರುವ 2.30 ಲಕ್ಷ ಮಂದಿಗೆ ತಲಾ 5 ಸಾವಿರ ರೂ. ಸಿಗಲಿದೆ.

    ಆಟೋ, ಟ್ಯಾಕ್ಸಿ ಚಾಲಕರು:
    ರಾಜ್ಯದಲ್ಲಿರುವ ಸರಿಸುಮಾರು 7.75 ಲಕ್ಷ ಮಂದಿ ಆಟೋ ಹಾಗೂ ಟ್ಯಾಕ್ಸಿ ಚಾಲಕರು ತಮ್ಮ ದೈನಂದಿನ ಉದ್ಯೋಗವನ್ನು ನಡೆಸಲಾಗಿದೇ ಒದ್ದಾಡುತ್ತಿದ್ದಾರೆ. ಅಂತಹ 7.75 ಲಕ್ಷ ಚಾಲಕರಿಗೆ ಒಂದು ಬಾರಿ ಪರಿಹಾರವಾಗಿ ಸರ್ಕಾರವು 5,000 ರೂ. ನೆರವು ನೀಡಲಿದೆ.

    ನೋಂದಾಯಿತ ಕಟ್ಟಡ ಕಾರ್ಮಿಕರು:
    ರಾಜ್ಯದಲ್ಲಿರುವ 15 ಲಕ್ಷ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಮೊದಲು 2 ಸಾವಿರ ರೂ. ನೆರವು ನೀಡಲಾಗುತ್ತಿತ್ತು. ಇದೀಗ ಇದಕ್ಕೆ 3 ಸಾವಿರ ರೂಪಾಯಿಗಳನ್ನು ಸೇರಿಸಿ ಒಟ್ಟು ಐದು ಸಾವಿರ ರೂ. ನೆರವು ನೀಡಲು ಸರ್ಕಾರ ತೀರ್ಮಾನಿಸಿದೆ. ಇದುವರೆಗೆ 11 ಲಕ್ಷ ಮಂದಿಗೆ 2 ಸಾವಿರ ರೂ. ನೆರವು ನೀಡಲಾಗಿತ್ತು. ಉಳಿದ 4 ಲಕ್ಷ ಕಾರ್ಮಿಕರ ಅಕೌಂಟ್ ಮಾಹಿತಿ ಪಡೆದು, ಎಲ್ಲರಿಗೂ ಐದು ಸಾವಿರ ರೂ. ನೆರವು ನೀಡಲಾಗುತ್ತದೆ.

    ಹೂ ಬೆಳೆಗಾರರು:
    ಲಾಕ್‍ಡೌನ್‍ನಿಂದಾಗಿ ದೇವಾಲಯಗಳು ಮುಚ್ಚಿವೆ. ಹಬ್ಬ ಮದುವೆ, ಸಭೆ-ಸಮಾರಂಭ ಸೇರಿ ಯಾವುದೇ ಚಟುವಟಿಕೆ ನಡೆದಿಲ್ಲ. ಹೀಗಾಗಿ ಹೂವುಗಳಿಗೆ ಬೇಡಿಕೆ ಇಲ್ಲದೇ ಹೂವು ಬೆಳೆಗಾರರು ತಾವು ಬೆಳೆದ ಹೂವುಗಳನ್ನು ನಾಶ ಮಾಡುವ ಸ್ಥಿತಿ ಏರ್ಪಟ್ಟಿದೆ. ರಾಜ್ಯದಲ್ಲಿ 11,687 ಹೆಕ್ಟೇರ್ ವಿಸ್ತೀರ್ಣದಲ್ಲಿ ಬೆಳೆದಿರುವ ಹೂವು ಮಾರಾಟವಾಗದೆ ರೈತರಿಗೆ ನಷ್ಟವಾಗಿದೆ. ಹೀಗಾಗಿ ಹೂ ಬೆಳೆಗಾರರಿಗೆ ಒಂದು ಹೆಕ್ಟೇರ್‌ಗೆ 25 ಸಾವಿರ ರೂ.ನಂತೆ ಪರಿಹಾರ ಹಣ ನೀಡಲಿದೆ. ರೈತರು ಎಷ್ಟೇ ಹೆಕ್ಟೇರ್ ಗಳಲ್ಲಿ ಹೂ ಬೆಳೆದಿದ್ದರೂ ಸರ್ಕಾರ ಪರಿಹಾರ ನೀಡುವುದು ಒಂದು ಹೆಕ್ಟೇರ್‌ಗೆ ಮಾತ್ರ.

    ನೇಕಾರರ ಹಣ ವಾಪಸ್!
    ಲಾಕ್‍ಡೌನ್‍ನಿಂದಾಗಿ ನೇಕಾರಿಗೆ ನಿಂತು ಹೋಗಿ, ಇದನ್ನೇ ನಂಬಿಕೊಂಡಿದ್ದರವರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಇವರ ನೆರವಿಗೂ ಸರ್ಕಾರ ಧಾವಿಸಿದೆ. ಒಟ್ಟು 109 ಕೋಟಿ ರೂಪಾಯಿಗಳನ್ನು ನೇಕಾರರ ಸಾಲ ಮನ್ನಾಗೆ ಸರ್ಕಾರ ಮೀಸಲಿಟ್ಟಿದೆ. ಈ ಮೊದಲು 29 ಕೋಟಿ ರೂ.ಗಳನ್ನು ಮನ್ನಾ ಮಾಡಲಾಗಿತ್ತು. ಶೀಘ್ರವೇ ಉಳಿದ 80 ಕೋಟಿ ರೂ. ಹಣವನ್ನ ಬಿಡುಗಡೆ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ತೀರ್ಮಾನಿಸಿದ್ದಾರೆ. 1 ಲಕ್ಷದ ಒಳಗಿನ ಸಾಲವನ್ನು ಕಟ್ಟಿದ ನೇಕಾರರರಿಗೆ, ಕಟ್ಟಿದ ಹಣ ವಾಪಾಸ್ ಕೊಡಲು ಸರ್ಕಾರ ಮುಂದಾಗಿದೆ. ಅಲ್ಲದೇ ನೇಕಾರ್ ಸಮ್ಮಾನ್ ಯೋಜನೆಯಡಿ ರಾಜ್ಯದ 54 ಸಾವಿರ ಕೈ ಮಗ್ಗ ನೇಕಾರರಿಗೆ ವರ್ಷಕ್ಕೆ 2 ಸಾವಿರ ರೂ. ನೆರವು ನೀಡುವುದಾಗಿ ಸಿಎಂ ಘೋಷಿಸಿದ್ದಾರೆ.

    ಕಂದಾಯ-ವಿದ್ಯುತ್‍ಬಿಲ್ ಪಾವತಿ:
    ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿರುವ ಮನೆ, ಸೈಟ್ ಸೇರಿ ಇತರೆ ಕಂದಾಯಗಳನ್ನು ಪಾವತಿ ಮಾಡಲು ಸಾರ್ವಜನಿಕರಿಗೆ ಸರ್ಕಾರ ಮೂರು ತಿಂಗಳ ಅವಕಾಶ ನೀಡಿದೆ. ಈ ಎರಡು ತಿಂಗಳ ಗೃಹ, ಅಂಗಡಿಗಳ ವಿದ್ಯುತ್ ಬಿಲ್ ಕಟ್ಟುವುದು ತಡವಾಗಿದ್ದರೆ ಚಿಂತೆ ಬಿಡಿ. ತಡವಾಗಿ ಬಿಲ್ ಪಾವತಿ ಮಾಡುವವರಿಗೆ ಯಾವುದೇ ದಂಡ ವಿಧಿಸದಿರಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಅಷ್ಟೇ ಅಲ್ಲದೆ ನಿಗದಿತ ಗಡುವಿನಲ್ಲಿ ಬಿಲ್ ಕಟ್ಟಿದವರಿಗೆ ಶೇಕಡಾ 1ರಷ್ಟು ರಿಯಾಯಿತಿ ಕೂಡ ಸರ್ಕಾರ ನೀಡಲಿದೆ.

    ಕರೆಂಟ್ ಬಿಲ್ ಮನ್ನಾ:
    ಕೊರೊನಾ ಲಾಕ್‍ಡೌನ್ ಕಾರಣದಿಂದ ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಸ್ತಬ್ಧ ಆಗಿದ್ದವು. ಉತ್ಪಾದಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲಾಗದೇ ನಷ್ಟ ಸಹ ಅನುಭವಿಸಿದ್ದಾರೆ. ಹೀಗಾಗಿ ಇವರ ನೆರವಿಗೂ ಸರ್ಕಾರ ಮುಂದಾಗಿದೆ. ಏಪ್ರಿಲ್ ಮತ್ತು ಮೇ ತಿಂಗಳ ಕರೆಂಟ್ ಬಿಲ್‍ನ್ನು ಮನ್ನಾ ಮಾಡಲು ಬಿಎಸ್‍ವೈ ಸರ್ಕಾರ ನಿರ್ಧರಿಸಿದೆ. ಜೊತೆಗೆ ಬೃಹತ್ ಕೈಗಾರಿಕೆಗಳ 2 ತಿಂಗಳ ವಿದ್ಯುತ್ ಬಿಲ್ ಪಾವತಿ ವಿಳಂಬ ಆಗಿದ್ದಲ್ಲಿ ಯಾವುದೇ ದಂಡ ವಿಧಿಸದಿರಲು, ಬಡ್ಡಿ ರಹಿತವಾಗಿ ಮುಂದೂಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

    ತರಕಾರಿ, ಹಣ್ಣು ಬೆಳೆಗಾರರಿಗೆ ಶೀಘ್ರವೇ ಪರಿಹಾರ:
    ಈ ವರ್ಷ ರಾಜ್ಯದಲ್ಲಿ ತರಕಾರಿ ಮತ್ತು ಹಣ್ಣು ಇಳುವರಿ ಉತ್ರಮವಾಗಿದೆ. ಆದರೆ ಲಾಕ್‍ಡೌನ್‍ನಿಂದ ಹಣ್ಣು, ತರಕಾರಿಗಳಿಗೆ ಸರಿಯಾದ ಬೆಲೆ ಸಿಕ್ಕಿಲ್ಲ. ಹೀಗಾಗಿ ಇವರ ನೆರವಿಗೂ ಧಾವಿಸಲು ಸರ್ಕಾರ ಮುಂದಾಗಿದೆ. ನಷ್ಟದ ಅಧ್ಯಯನ ನಡೆಯುತ್ತಿದ್ದು, ಇದು ಮುಗಿದ ತಕ್ಷಣ ನೆರವಿನ ಪ್ಯಾಕೇಜ್ ಘೋಷಣೆ ಮಾಡಲಾಗುವುದು ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.

  • ಆಟೋ, ಕ್ಯಾಬ್ ಚಾಲಕರಿಗೆ 5 ಸಾವಿರ ರೂಪಾಯಿ ನೆರವು – ಕೇಜ್ರಿವಾಲ್ ಘೋಷಣೆ

    ಆಟೋ, ಕ್ಯಾಬ್ ಚಾಲಕರಿಗೆ 5 ಸಾವಿರ ರೂಪಾಯಿ ನೆರವು – ಕೇಜ್ರಿವಾಲ್ ಘೋಷಣೆ

    ನವದೆಹಲಿ: ಲಾಕ್‍ಡೌನ್ ಹಿನ್ನೆಲೆ ಸಂಕಷ್ಟದಲ್ಲಿರುವ ಆಟೋ, ರಿಕ್ಷಾ, ಇ ರಿಕ್ಷಾ, ಕ್ಯಾಬ್ ಚಾಲಕರ ನೆರವಿಗೆ ನಿಂತಿರುವ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ.

    ರಿಕ್ಷಾ, ಆಟೋ, ಇ ರಿಕ್ಷಾ ಚಾಲಕರು, ಕ್ಯಾಬ್ ಚಾಲಕರಿಗೆ 5,000 ರೂಪಾಯಿಗಳ ನೆರವು ನೀಡುವುದಾಗಿ ಅರವಿಂದ್ ಕೇಜ್ರಿವಾಲ್ ಅವರು ಘೋಷಣೆ ಮಾಡಿದ್ದಾರೆ. ಇಂದು ಸಂಜೆ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಲಾಕ್‍ಡೌನ್ ಹಿನ್ನೆಲೆ ಆಟೋ ರಿಕ್ಷಾ ಚಾಲಕರಿಗೆ ಸಂಕಷ್ಟ ಎದುರಾಗಿದ್ದು, ಇವರ ನೆರವಿಗೆ ಸರ್ಕಾರ ನಿಲ್ಲಲಿದೆ ಎಂದರು.

    ಪ್ರತಿ ಚಾಲಕನಿಗೆ 5,000 ನೀಡಲು ಸರ್ಕಾರ ನಿರ್ಧರಿಸಿದ್ದು, ಮುಂದಿನ 7ರಿಂದ 10 ದಿನಗಳಲ್ಲಿ ಚಾಲಕರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದು ಕೇಜ್ರಿವಾಲ್ ಹೇಳಿದರು. ಚಾಲಕರ ಬ್ಯಾಂಕ್ ಖಾತೆಗಳ ಮಾಹಿತಿ ಸರ್ಕಾರದ ಬಳಿ ಇಲ್ಲ. ಹೀಗಾಗಿ ಚಾಲಕರ ಮಾಹಿತಿ ಪಡೆದು ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು. ಪ್ರತಿ ನಿತ್ಯ 6 ಲಕ್ಷಕ್ಕೂ ಅಧಿಕ ಜನರಿಗೆ ಊಟ ಮತ್ತು ರಾತ್ರಿ ಭೋಜನ ನೀಡಲಾಗುತ್ತಿದೆ ಎಲ್ಲ ರೀತಿಯ ನೆರವು ನೀಡಲು ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು.

    ದೆಹಲಿಯಲ್ಲಿ ಈವರೆಗೂ 209 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಈ ಪೈಕಿ 108 ಮಂದಿ ನಿಜಾಮುದ್ದೀನ್ ಮರ್ಕಜ್‍ನಿಂದ ಬಂದವರಾಗಿದ್ದಾರೆ. ನಿಜಾಮುದ್ದೀನ್ ಮರ್ಕಜ್‍ನಲ್ಲಿದ್ದ 2,346 ಮಂದಿ ಪೈಕಿ 1,810 ಮಂದಿಯನ್ನು ಕ್ವಾರಂಟೈನ್‍ನಲ್ಲಿ ಇಡಲಾಗಿದ್ದು, 536 ಮಂದಿಯನ್ನು ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಈವರೆಗೆ 4 ಮಂದಿ ಸಾವನ್ನಪ್ಪಿದ್ದು, ಅದರಲ್ಲಿ ಇಬ್ಬರು ಮರ್ಕಜ್‍ನೊಂದಿಗೆ ಸಂಪರ್ಕ ಇದ್ದವರು ಎಂದು ಕೇಜ್ರಿವಾಲ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

  • ಬಿಎಂಟಿಸಿಯ 18 ಸಿಬ್ಬಂದಿ ವಿರುದ್ಧ ಎಫ್‍ಐಆರ್

    ಬಿಎಂಟಿಸಿಯ 18 ಸಿಬ್ಬಂದಿ ವಿರುದ್ಧ ಎಫ್‍ಐಆರ್

    ಬೆಂಗಳೂರು: ದೀರ್ಘಕಾಲದ ರಜೆ ಮೇಲೆ ತೆರಳಿ ಬಳಿಕ ಕೆಲಸಕ್ಕೆ ವಾಪಾಸಾಗುವಾಗ ನಕಲಿ ವೈದ್ಯಕೀಯ ಸರ್ಟಿಫಿಕೇಟ್ ಸಲ್ಲಿಸಿದ ಸಿಬ್ಬಂದಿ ವಿರುದ್ಧ ಬಿಎಂಟಿಸಿ ಕಠಿಣ ಕ್ರಮಕ್ಕೆ ಮುಂದಾಗಿದೆ.

    ಸುದೀರ್ಘ ರಜೆಯ ಬಳಿಕ ನಕಲಿ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಿ ಕರ್ತವ್ಯಕ್ಕೆ ಹಾಜರಾದ 18 ಮಂದಿ ಡ್ರೈವರ್, ಕಂಡಕ್ಟರ್ ವಿರುದ್ಧ ಬಿಎಂಟಿಸಿಯ ಭದ್ರತಾ ಮತ್ತು ಜಾಗೃತ ದಳದ ಅಧಿಕಾರಿ ಸಿ.ಎಸ್ ಸ್ಮಿತಾ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿದ್ದಾರೆ.

    ಬಿಎಂಟಿಸಿಯ ಡಿಪೋಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಿಎಂಟಿಸಿ ಚಾಲಕರು ಹಾಗೂ ನಿರ್ವಾಹಕರು ಮೇಲಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡದೆ, ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ದೀರ್ಘಕಾಲದ ರಜೆ ಮೇಲೆ ತೆರಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಎಷ್ಟು ಬಾರಿ ನೋಟೀಸ್ ನೀಡಿದರೂ ಸೇವೆಗೆ ಮರಳದೆ ರಜೆ ಮುಗಿದ ಬಳಿಕ ಅನಾರೋಗ್ಯದ ನೆಪ ಹೇಳಿ ವೈದ್ಯಕೀಯ ಸರ್ಟಿಫಿಕೇಟ್ ಸಲ್ಲಿಸಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ.

    ಯಾವಾಗ ಇಂತಹ ಪ್ರಕರಣಗಳು ಪುನರಾವರ್ತನೆ ಆಗಲು ಶುರುವಾಯಿತೋ ಇದರಿಂದ ಎಚ್ಚೆತ್ತ ಬಿಎಂಟಿಸಿಯ ಭದ್ರತಾ ಮತ್ತು ಜಾಗೃತ ದಳ ವೈದ್ಯಕೀಯ ಸರ್ಟಿಫಿಕೇಟ್ ನೀಡಿದ ಆಸ್ಪತ್ರೆಗಳಲ್ಲಿ ಪರಿಶೀಲನೆ ನಡೆಸಿದಾಗ ಅದು ನಕಲಿ ಪ್ರಮಾಣ ಪತ್ರ ಎನ್ನುವುದು ತಿಳಿದು ಬಂದಿದೆ. ಹೀಗೆ ನಕಲಿ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಿ ಕರ್ತವ್ಯಕ್ಕೆ ಹಾಜರಾಗಿರುವ 18 ಮಂದಿ ಚಾಲಕರ ಹಾಗೂ ನಿರ್ವಾಹಕರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಈ ಮೂಲಕ ಬಿಎಂಟಿಸಿ, ರಜೆ ಮೇಲೆ ತೆರಳುವ ಎಲ್ಲಾ ಸಿಬ್ಬಂದಿಗೆ ಎಚ್ಚರಿಕೆ ನೀಡಿದೆ.

  • ಪರವಾನಿಗೆ ಇಲ್ಲದೆ ರಸ್ತೆಗಿಳಿದ 24ಕ್ಕೂ ಹೆಚ್ಚು ಖಾಸಗಿ ಅಂಬುಲೆನ್ಸ್‌ಗಳು ವಶ

    ಪರವಾನಿಗೆ ಇಲ್ಲದೆ ರಸ್ತೆಗಿಳಿದ 24ಕ್ಕೂ ಹೆಚ್ಚು ಖಾಸಗಿ ಅಂಬುಲೆನ್ಸ್‌ಗಳು ವಶ

    ಶಿವಮೊಗ್ಗ: ಪರವಾನಿಗೆ ಇಲ್ಲದೆ ರಸ್ತೆಗಿಳಿದಿದ್ದ 24ಕ್ಕೂ ಹೆಚ್ಚು ಖಾಸಗಿ ಅಂಬುಲೆನ್ಸ್‌ಗಳನ್ನು ಜಿಲ್ಲೆಯ ದೊಡ್ಡಪೇಟೆ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ರಸ್ತೆಯಲ್ಲಿ ಓಡಾಡುವಾಗ ಅಂಬುಲೆನ್ಸ್ ಸೈರನ್ ಕೇಳಿದರೆ ಸಾಕು ಜನ ಗಾಬರಿಯಿಂದ ದಾರಿ ಬಿಡುತ್ತಾರೆ. ಆದರೆ ಜನರ ಜೀವ ಉಳಿಸುವ ಅಂಬುಲೆನ್ಸ್‌ಗಳು ಇಂದು ಪರವಾನಿಗೆ(ಲೈಸೆನ್ಸ್) ಇಲ್ಲದೆ ರಸ್ತೆಯಲ್ಲಿ ಸಂಚಾರ ಮಾಡುತ್ತಿವೆ. ಶಿವಮೊಗ್ಗದಲ್ಲಿ ಸಂಚರಿಸುವ ಬಹುತೇಕ ಖಾಸಗಿ ಅಂಬುಲೆನ್ಸ್‌ಗಳಿಗೆ ಹಾಗೂ ಅದರ ಚಾಲಕರಿಗೆ ಪರವಾನಗಿಯೇ ಇಲ್ಲ.

    ಇದನ್ನು ಮನಗಂಡ ಪೊಲೀಸರು ಇಂದು ಖಾಸಗಿ ಅಂಬುಲೆನ್ಸ್‌ಗಳ ಲೈಸನ್ಸ್‌ಗಳನ್ನು ಪರಿಶೀಲನೆ ನಡೆಸಿದಾಗ, ಸುಮಾರು 24ಕ್ಕೂ ಹೆಚ್ಚು ಖಾಸಗಿ ಅಂಬುಲೆನ್ಸ್‌ಗಳು ಯಾವುದೇ ಪರವಾನಿಗೆ ಇಲ್ಲದೆ ಸಂಚರಿಸುತ್ತಿರುವುದು ಬೆಳಕಿಗೆ ಬಂದಿದೆ. ವಾಹನದ ಜೊತೆಗೆ ಅದರ ಚಾಲಕರ ಬಳಿಯೂ ಲೈಸನ್ಸ್ ಇಲ್ಲದಿರುವುದು ತಿಳಿದಿದೆ.

    ಈ ಹಿಂದೆ ದೊಡ್ಡಪೇಟೆ ಪೊಲೀಸರಿಗೆ ಸಾರ್ವಜನಿಕರಿಂದ ಈ ಬಗ್ಗೆ ದೂರು ಬಂದಿತ್ತು. ದೂರಿನ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಪರಿಶೀಲಿಸಿದಾಗ ಪೊಲೀಸರಿಗೆ ಖಾಸಗಿ ಅಂಬುಲೆನ್ಸ್‌ಗಳ ಪರವಾನಗಿ ಇಲ್ಲದಿರುವುದರ ಜೊತೆಗೆ ವಾಹನ ನಂಬರ್ ಸಹ ಸರಿಯಾಗಿಲ್ಲ ಎಂಬುದು ತಿಳಿದಿದೆ. ಅಷ್ಟೇ ಅಲ್ಲದೆ ಇವುಗಳನ್ನು ಚಲಾಯಿಸುವ ಚಾಲಕರು ಕೂಡ ರೋಗಿಗಳೂಂದಿಗೆ ಸರಿಯಾಗಿ ವರ್ತಿಸದಿರುವ ವಿಚಾರವೂ ಗೊತ್ತಾಗಿದೆ.

    ಆದ್ದರಿಂದ ಪೊಲೀಸರು ಸುಮಾರು 24ಕ್ಕೂ ಅಧಿಕ ಖಾಸಗಿ ಅಂಬುಲೆನ್ಸ್‌ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರ ಈ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.