Tag: Drishyam Cinema

  • ʻದೃಶ್ಯಂʼ ಸಿನಿಮಾ ಸ್ಟೈಲ್‌ನಲ್ಲಿ ಕೊಲೆ – ಪ್ರಿಯಕರನ ಜೊತೆಗೂಡಿ ಗಂಡನನ್ನ ಕೊಂದು ಟೈಲ್ಸ್‌ ಕೆಳಗೆ ಹೂತಿದ್ದ ಪತ್ನಿ

    ʻದೃಶ್ಯಂʼ ಸಿನಿಮಾ ಸ್ಟೈಲ್‌ನಲ್ಲಿ ಕೊಲೆ – ಪ್ರಿಯಕರನ ಜೊತೆಗೂಡಿ ಗಂಡನನ್ನ ಕೊಂದು ಟೈಲ್ಸ್‌ ಕೆಳಗೆ ಹೂತಿದ್ದ ಪತ್ನಿ

    ಮುಂಬೈ: ಪ್ರೀತಿ ಎಂಬುದು ಮಾಯೆ.. ಈ ಪ್ರೀತಿಗೆ ಕಣ್ಣಿಲ್ಲ ಅಂತಾರೆ ನಿಜ, ಆದ್ರೆ ಕೆಲವೊಮ್ಮೆ ಪ್ರೀತಿಗೆ ಹೃದಯವೂ ಇರೋದಿಲ್ಲ, ಅದು ತನ್ನ ಪ್ರೇಮಿಯನ್ನ (Lovers) ಬಿಟ್ಟು ಉಳಿದವರಿಗಾಗಿ ಕಲ್ಲಿನಷ್ಟೇ ಕಠೋರವಾಗಿರುತ್ತೆ. ಇದಕ್ಕೆ ಮಹಾರಾಷ್ಟ್ರದಲ್ಲಿ ನಡೆದಿರುವ ಮತ್ತೊಂದು ಪ್ರಕರಣ ಸಾಕ್ಷಿಯಾಗಿದೆ.

    ಯೆಸ್.‌ ʻದೃಶ್ಯಂʼ ಸಿನಿಮಾ ಶೈಲಿಯಲ್ಲಿ ಮಹಾರಾಷ್ಟ್ರದ (Maharashtr) ಪಾಲ್ಘರ್ ಜಿಲ್ಲೆಯ ಖತರ್ನಾಕ್‌ ಮಹಿಳೆ, ಪ್ರಿಯಕರನೊಂದಿಗೆ ಸೇರಿ ಗಂಡನನ್ನೇ ಕೊಂದು ಶವವನ್ನ ತನ್ನ ಮನೆಯೊಳಗೆ ಹೂತಿಟ್ಟಿದ್ದ ಪ್ರಕರಣ ಬೆಳಕಿಗೆ ಬಂದಿದೆ. 35 ವರ್ಷದ ವಿಜಯ್‌ ಚವಾಣ್‌ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಯುಎಇ ಅಪಾರ್ಟ್‌ಮೆಂಟ್‌ನಲ್ಲಿ ಕೇರಳದ ಮಹಿಳೆ ಶವವಾಗಿ ಪತ್ತೆ – ವರದಕ್ಷಿಣೆ ಕಿರುಕುಳ ಆರೋಪ

    ವರದಿಗಳ ಪ್ರಕಾರ, ವಿಜಯ್‌ ಚವಾಣ್‌ ಮುಂಬೈನಿಂದ (Mumbai) ಸುಮಾರು 70 ಕಿಮೀ ದೂರದಲ್ಲಿರುವ ನಲಸೋಪರ ಪೂರ್ವದ ಗಡ್ಗಪದ ಪ್ರದೇಶದಲ್ಲಿ ಪತ್ನಿ ಕೋಮಲ್ ಚವಾಣ್ (28) ಜೊತೆಗೆ ವಾಸವಿದ್ದ. ಆದ್ರೆ ಕಳೆದ 15 ದಿನಗಳಿಂದ ವಿಜಯ್‌ ನಾಪತ್ತೆಯಾಗಿದ್ದ. ಇದನ್ನೂ ಓದಿ: ಬಾಂಗ್ಲಾದೇಶದ ವಾಯುಪಡೆಯ ತರಬೇತಿ ವಿಮಾನ ದುರಂತ – ಪೈಲಟ್ ಸೇರಿ 16 ಜನ ಸಾವು

    ಸೋಮವಾರ ಚವಾಣ್‌ನನ್ನ ಹುಡುಕುತ್ತಿದ್ದ ಅವನ ಸಹೋದರರು ಕೋಮಲ್‌ ಮನೆಗೆ ಬಂದಿದ್ದರು. ಅಲ್ಲಿ ನೆಲಕ್ಕೆ ಹಾಕಿದ್ದ ಕೆಲ ಟೈಲ್ಸ್‌ಗಳ ಬಣ್ಣದಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಇದರಿಂದ ಅನುಮಾನಗೊಂಡ ವಿಜಯ್‌ ಸಹೋದರರು ವ್ಯತ್ಯಾಸ ಕಂಡುಬಂದ ಟೈಲ್ಸ್‌ಗಳನ್ನ ನೆಲದಿಂದ ಕಿತ್ತರು. ಅದರ ಕೆಳಗೆ ಹೂತಿಟ್ಟಿದ್ದ ವೇಸ್ಟೇಜ್‌ನಿಂದ ಕೆಟ್ಟ ದುರ್ವಾಸನೆ ಬರುತಿತ್ತು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಪರಿಶೀಲನೆ ನಡೆಸಿದ ಬಳಿಕ ಗಂಡನ ಶವ ಹೂತಿಟ್ಟಿದ್ದ ರಹಸ್ಯ ಬೆಳಕಿಗೆ ಬಂದಿತು.

    ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪತ್ನಿಯನ್ನ ಬಂಧಿಸಿದ್ದಾರೆ. ಈ ಬೆನ್ನಲ್ಲೇ ಕೋಮಲ್‌ ತನ್ನ ನೆರೆಯ ಮೋನು ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವಿಷಯ ತಿಳಿದುಬಂದಿದೆ. ಈತನ ಜೊತೆಗೂಡಿಯೇ ಕೊಲೆ ಮಾಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ SIT ಹೆಗಲಿಗೆ – ನಿಷ್ಪಕ್ಷಪಾತ ತನಿಖೆ ಬಗ್ಗೆ ಗೃಹ ಸಚಿವ ಪರಂ ಭರವಸೆ

  • ದುಡ್ಡಿಗಾಗಿ ಸ್ನೇಹಿತನಿಗೆ ಸ್ಕೆಚ್ ಹಾಕಿ ಕೊಲೆ – ದೃಶ್ಯಂ ಸಿನಿಮಾ ಶೈಲಿಯಲ್ಲಿ ಸಾಕ್ಷ್ಯನಾಶ; ಕೊನೆಗೂ ಹಂತಕ ಅಂದರ್

    ದುಡ್ಡಿಗಾಗಿ ಸ್ನೇಹಿತನಿಗೆ ಸ್ಕೆಚ್ ಹಾಕಿ ಕೊಲೆ – ದೃಶ್ಯಂ ಸಿನಿಮಾ ಶೈಲಿಯಲ್ಲಿ ಸಾಕ್ಷ್ಯನಾಶ; ಕೊನೆಗೂ ಹಂತಕ ಅಂದರ್

    – ಮರ್ಡರ್ ಮಾಡಿ ಹೂತಿಟ್ಟ, ಮತ್ತೆ ಪೆಟ್ರೋಲ್ ಹಾಕಿ ಸುಟ್ಟು, ಕೆರೆಗೆ ಬೂದಿ ಬಿಸಾಡಿದ್ದ
    – ಕೆರೆಯಲ್ಲಿ ಸಿಕ್ತು ಮೂಳೆ, ಒಂದೊಂದು ಹಂತವೂ ರೋಚಕ

    ಚಿಕ್ಕಬಳ್ಳಾಪುರ: ʻಸ್ನೇಹ ಸ್ನೇಹ ಅಂತ ಒಳಗೊಳಗೆ ಸ್ಕೆಚ್ಚು ಹಾಕ್ತಾರೋ, ಒಂದೇ ತಟ್ಟೆಯಲ್ಲಿ ಅನ್ನ ತಿಂದು ಮೂಹೂರ್ತ ಇಡ್ತಾರೋʼ ಅನ್ನೋ ಜೋಗಿ ಸಿನಿಮಾದ ಸಾಂಗ್‌ನ ಸಾಲುಗಳನ್ನ ಕೇಳೇ ಇರ್ತೀರಾ. ಸೇಮ್ ಟು ಸೇಮ್ ಇಲ್ಲೂ ಜೊತೆಯಲ್ಲೇ ಇದ್ದುಕೊಂಡೇ ಸ್ನೇಹಿತನ ಕೊಲೆ ಮಾಡಿಬಿಟ್ಟಿದ್ದಾನೆ ಭೂಪ.

    ಕೊಲೆ ಪ್ರಕರಣ ಮುಚ್ಚಿ ಹಾಕೋಕೆ ದೃಶ್ಯಂ ಸಿನಿಮಾ ಶೈಲಿಯಲ್ಲಿ (Drishyam Cinema) ಹತ್ತಾರು ಪ್ಲ್ಯಾನ್‌ಗಳನ್ನ ಮಾಡಿದ್ದಾನೆ. ಆದ್ರೂ ಗ್ರಹಚಾರ ಕೆಟ್ಟು ಮಾಡಿದ್ದುಣ್ಣೋ ಮಹರಾಯ ಅಂತ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಅಂದಹಾಗೆ ಈ ಘಟನೆ ನಡೆದಿರೋದು ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ. ಇನ್ನೂ ಸ್ನೇಹಿತನನ್ನೇ ಕೊಲೆ ಮಾಡಿರೋವನ ಹೆಸರು ರಾಜ್‍ಕುಮಾರ್ ಅಂತ ಕೊಲೆಯಾದವನು ದೇವರಾಜ್.

    ಇವರಿಬ್ಬರೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ (Doddaballapura) ನಿವಾಸಿಗಳು, ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿಯಲ್ಲಿ ದೇವರಾಜ್ ವಾಸವಾಗಿದ್ರೆ ರಘುನಾಥಪುರದಲ್ಲಿ ರಾಜ್ ಕುಮಾರ್ ವಾಸವಾಗಿದ್ದ. ಬಹಳಷ್ಟು ವರ್ಷಗಳಿಂದ ಪರಿಚಯವಾಗಿದ್ದ ಇಬ್ಬರು ಸ್ನೇಹಿತರಾಗಿ ಜೊತೆಯಾಗಿಯೇ ದೆಹಲಿಯಿಂದ ಸೆಕೆಂಡ್ ಹ್ಯಾಂಡ್ ಕಾರು ತಂದು ಮಾರಾಟ ಮಾಡ್ತಿದ್ರು. ಇನ್ನೂ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಸೇರಿದಂತೆ ಚೀಟಿ ವ್ಯವಹಾರಗಳನ್ನ ನಡೆಸುತ್ತಿದ್ರು. ಹಣಕಾಸು ವಿಚಾರದಲ್ಲಿ ಚೆನ್ನಾಗಿಯೇ ಇದ್ದ ದೇವರಾಜ್ ಬಳಿ ರಾಜ್ ಕುಮಾರ್ ಲಕ್ಷಾಂತರ ರೂಪಾಯಿ ಸಾಲ ಪಡ್ಕೊಂಡಿದ್ದ. ಲಕ್ಷ ಲಕ್ಷ ಸಾಲ ಮಾಡಿದ್ದ, ಅಲ್ಲದೇ ಚೀಟಿ ವ್ಯವಹಾರ ಸಹ ಮಾಡಿ ಆ ಹಣವನ್ನ ಸಹ ದೇವರಾಜ್‌ಗೆ ವಾಪಸ್ ಕೊಟ್ಟಿರಲಿಲ್ಲವಂತೆ, ಹೀಗಾಗಿ ಸ್ನೇಹ ಸಂಬಂಧದಲ್ಲಿ ಬಿರುಕು ಮೂಡಿತ್ತು. ಪದೇ ಪದೇ ದೇವರಾಜ್ ಕರೆ ಮಾಡಿ ನನ್ನ ಹಣ ವಾಪಸ್ ಕೊಡುವಂತೆ ದುಂಬಾಲು ಬೀಳ್ತಿದ್ದನಂತೆ. ಇದ್ರಿಂದ ದೇವರಾಜ್ ಬದುಕಿದ್ರೆ ತಾನೇ ಹಣ ಕೇಳೋದು ಅಂತ ಕೊನೆಗೆ ಕೊಲೆನೇ ಮಾಡಿಬಿಟ್ಟಿದ್ದಾನೆ.

    ಕೊಲೆ ಮಾಡಿದ್ದು ಹೇಗೆ..?
    ಅಂದಹಾಗೆ ರಾಜ್ ಕುಮಾರ್ ಕಳೆದ ಅಕ್ಟೋಬರ್‌ 17 ರಂದು ಪ್ಲ್ಯಾನ್‌ ಮಾಡಿದಂತೆ ದೇವರಾಜ್‌ಗೆ ಕರೆ ಮಾಡಿ ಬಾ ಚೀಟಿ ಹಣ ಕೊಡ್ತೀನಿ ಅಂತ ಕರೆಸಿಕೊಂಡಿದ್ದಾನೆ. ಸಹಾಯಕ್ಕಾಗಿ ಆಂಧ್ರದಿಂದ ಅನಿಲ್ ಎಂಬಾತನನ್ನ ಕರೆಸಿಕೊಂಡಿದ್ದಾನೆ. ಯುಪಿ ರಿಜಸ್ಟ್ರೇಷನ್‌ ಕಾರಲ್ಲಿ ಕೂರಿಸಿಕೊಂಡು ಹೋಗಿ ಹಿಂಬದಿ ಕೂತಿದ್ದ ರಾಜ್‌ಕುಮಾರ್ ಮುಂಬದಿ ಕೂತಿದ್ದ ದೇವರಾಜ್ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ತದನಂತರ ಮೃತದೇಹವನ್ನ ಇನ್ಫೋಸಿಸ್‌ ಖಾಸಗಿ ಬಡಾವಣೆಯ ತನ್ನದೇ ನಿವೇಶನದಲ್ಲಿ ಜೆಸಿಬಿ ಮೂಲಕ ಸಂಪು ತೆಗೆಯಬೇಕು ಅಂತ ಗುಂಡಿ ಹೊಡೆಸಿ ಅದೇ ಗುಂಡಿಗೆ ದೇವರಾಜ್ ಮೃತದೇಹ ಹಾಕಿ ಮುಚ್ಚಿ ಹಾಕಿದ್ದಾನೆ. ಇನ್ನೂ ವಾಸನೆ ಬರ್ತಿದೆ ಅಂತ ಮತ್ತೆ ತಿಂಗಳ ನಂತರ ಮೃತದೇಹವನ್ನ ಹೊರತೆಗೆದು ಪೆಟ್ರೋಲ್ ಹಾಕಿ ಸುಟ್ಟು ಹಾಕಿದ್ದಾನೆ. ನಂತರ ಅಳಿದುಳಿದ ಮೂಳೆ, ಬೂದಿ ಸಮೇತ ಮಧುರೆ ಕೆರೆಯಲ್ಲಿ ಬಿಸಾಡಿಬಂದಿದ್ದಾರೆ.

    ಕೊಲೆ ಮಾಡಿ ಕಂಪ್ಲೇಂಟ್ ಕೊಡಿಸಿದ್ದ ಭೂಪ:
    ಆರೋಪಿ ರಾಜ್‌ಕುಮಾರ್ ಕೊಲೆ ಮಾಡಿ ತನಗೇನು ಗೊತ್ತೆ ಇಲ್ಲ ಅನ್ನೋ ಹಾಗೆ ದೇವರಾಜ್ ಹೆಂಡತಿ ಮಗಳ ಜೊತೆಯಲ್ಲೇ ಬಂದು ಪೊಲೀಸರಿಗೆ ಮಿಸ್ಸಿಂಗ್ ಕಂಪ್ಲೇಂಟ್ ಕೊಡಿಸಿದ್ದ. ಆದ್ರೆ ಬರ್ತಾ ಬರ್ತಾ ರಾಜ್‍ಕುಮಾರ್ ನಡೆ ಬಗ್ಗೆ ಅನುಮಾನಗೊಂಡ ದೇವರಾಜ್ ಮನೆಯವರು ಆತನ ಬಗ್ಗೆ ಪೊಲೀಸರ ಬಳಿ ಸಂಶಯ ತೋಡಿಕೊಂಡಿದ್ರು. ಬಳಿಕ ಪೊಲೀಸರು ಕರೆಸಿ ಪೊಲೀಸ್ ಸ್ಟೈಲಲ್ಲಿ ವಿಚಾರಣೆ ಮಾಡಿದಾಗ ರಾಜ್ ಕುಮಾರ್ ಕೊಲೆ ಸತ್ಯ ಬಾಯ್ಬಿಟ್ಟಿದ್ದಾನೆ. ಕೊಲೆಗೆ ಸಹಕರಿಸದ ಅನಿಲ್ ಸಹ ಈಗ ದೊಡ್ಡಬಳ್ಳಾಪುರ ಪೊಲೀಸರ ಅತಿಥಿಯಾಗಿ ಜೈಲು ಸೇರಿದ್ದಾನೆ.

    ಕೆರೆಯಲ್ಲಿ ಸಿಕ್ತು ಮೂಳೆ:
    ದೊಡ್ಡಬಳ್ಳಾಪುರ ಸಿಪಿಐ ಸಾಧಿಕ್ ಪಾಷಾ ನೇತೃತ್ವದ ತನಿಖಾ ತಂಡ ಸ್ಥಳ ಮಹಜರು ನಡೆಸಿತ್ತು. ಆರಂಭದಲ್ಲಿ ಹೂತಿಟ್ಟ ಜಾಗದಲ್ಲಿ ಜೆಸಿಬಿ ಮೂಲಕ ಗುಂಡಿ ತೋಡಿ ಅಳಿದುಳಿದ ಮೃತದೇಹದ ಅವಶೇಷಗಳಾಗಿ ಹುಡುಕಾಡಿದ್ರು. ಏನೂ ಸಿಗಲಿಲ್ಲ ಅಂತ ಆಗ್ನಿಶಾಮಕ ಸಿಬ್ಬಂದಿ ಸಹಾಯದಿಂದ ಮಧುರೆ ಕೆರೆಯಲ್ಲಿ ಜಾಲಾಡಿಸಿ ಕೊನೆಗೆ ಮೂಳೆಗಳಿದ್ದ ಚೀಲ ಪತ್ತೆ ಹಚ್ಚಿತ್ತು ತನಿಖಾ ತಂಡ.