Tag: drinks

  • ರೈತರ ಆತ್ಮಹತ್ಯೆಗೆ ಕುಡಿತ, ಜೂಜು ಕಾರಣ ಎಂದಿದ್ದ ಖೇಣಿ ಕಾಂಗ್ರೆಸ್ ಸೇರ್ಪಡೆ

    ರೈತರ ಆತ್ಮಹತ್ಯೆಗೆ ಕುಡಿತ, ಜೂಜು ಕಾರಣ ಎಂದಿದ್ದ ಖೇಣಿ ಕಾಂಗ್ರೆಸ್ ಸೇರ್ಪಡೆ

    ಬೆಂಗಳೂರು: ರೈತರ ಆತ್ಮಹತ್ಯೆಗೆ ಕುಡಿತ, ಜೂಜು ಕಾರಣ ಎಂದಿದ್ದ ನೈಸ್ ಸಂಸ್ಥೆಯ ಮಾಲೀಕ, ಕರ್ನಾಟಕ ಮಕ್ಕಳ ಪಕ್ಷದ ಶಾಸಕ ಅಶೋಕ್ ಖೇಣಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಸೇರ್ಪಡೆ ಕಾರ್ಯಕ್ರಮದಲ್ಲಿ ಅಧ್ಯಕ್ಷ ಪರಮೇಶ್ವರ್ ಅವರು ಶಾಲು ಹಾಕಿ ಖೇಣಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.

    ಈ ವೇಳೆ ಮಾತನಾಡಿದ ಖೇಣಿ, ನಾನು ಸ್ವತಂತ್ರವಾಗಿ ನಿಂತರೂ ಗೆಲ್ಲುತ್ತೇನೆ ಬೇರೆ ಪಕ್ಷದಿಂದ ನಿಂತರೂ ಗೆಲ್ಲುತ್ತೇನೆ. ನನ್ನ ಕ್ಷೇತ್ರಕ್ಕೆ ಸಿಎಂ 2 ಸಾವಿರ ಕೋಟಿ ನೀಡಿದ್ದಾರೆ. ರಾಜ್ಯದ ನಂಬರ್ ಒನ್ ಕ್ಷೇತ್ರವಾಗಿ ಅಭಿವೃದ್ದಿ ಪಡಿಸಿದ್ದೇನೆ. ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿ ಅವರ ಕೈ ಬಲ ಪಡಿಸೋಕೆ ಕಾಂಗ್ರೆಸ್ ಸೇರಿದ್ದೇನೆ ಎಂದು ಹೇಳಿದರು.

    ಈ ವೇಳೆ ನೈಸ್ ವಿವಾದದ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಗರಂ ಆದ ಖೇಣಿ ಸುಮ್ಮನೆ ಏನೇನೋ ಕೇಳಬೇಡಿ, ನ್ಯಾಯಾಲಯದಲ್ಲಿ ಎಲ್ಲವೂ ತೀರ್ಮಾನ ಆಗುತ್ತದೆ ಎಂದು ಹೇಳಿದರು.

    ಅಶೋಕ್ ಖೇಣಿ ಈ ಹಿಂದೆ ರೈತರು ಆತ್ಮಹತ್ಯೆ ಮಾಡಿಕೊಳ್ಳಲು ಕುಡಿತ, ಜೂಜು, ಮಕ್ಕಳ ಮದುವೆಯಾಗದೇ ಇರುವುದು ಕಾರಣ ಎಂದು ಈ ಹಿಂದೆ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ರಾಜ್ಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು.

    ಕಳೆದ ವರ್ಷ ಏಕಾಏಕಿ ನೈಸ್ ರಸ್ತೆಯ ಟೋಲ್ ದರವನ್ನು ಏರಿಸಲಾಗಿತ್ತು. ಈ ವಿಚಾರದ ಬಗ್ಗೆ ಅಂದು ಪಬ್ಲಿಕ್ ಟಿವಿಗೆ ಲೋಕೋಪಯೋಗಿ ಇಲಾಖೆಯ ಸಚಿವ ಮಹಾದೇವಪ್ಪ ಪ್ರತಿಕ್ರಿಯಿಸಿ ನೈಸ್ ಕಂಪೆನಿ ನಿಯಮಗಳನ್ನು ಉಲ್ಲಂಘಿಸಿ ರಸ್ತೆ ನಿರ್ಮಿಸಿದೆ ಎಂದು ಹೇಳಿದ್ದರು.

    2013ರ ಚುನಾವಣೆಯಲ್ಲಿ ಬೀದರ್ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿದ್ದ ಖೇಣಿ 15,788 ಮತಗಳ ಅಂತರದಿಂದ ಜಯಗಳಿಸಿದ್ದರು. ಖೇಣಿಗೆ 47,763 ಮತಗಳು ಬಿದ್ದಿದ್ದರೆ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಬಂಡೆಪ್ಪ ಕಾಶಂಪೂರ್ ಅವರಿಗೆ 31,975 ಮತಗಳು ಬಿದ್ದಿತ್ತು.

     

    https://www.youtube.com/watch?v=Zl-hLyqVbiM

    https://www.youtube.com/watch?v=9z4q6ugGYEQ

  • ಮದ್ಯದ ಅಮಲಿನಲ್ಲಿ ನಡುರಸ್ತೆಯಲ್ಲಿಯೇ ಮಹಿಳೆಯ ಡ್ಯಾನ್ಸ್

    ಮದ್ಯದ ಅಮಲಿನಲ್ಲಿ ನಡುರಸ್ತೆಯಲ್ಲಿಯೇ ಮಹಿಳೆಯ ಡ್ಯಾನ್ಸ್

    ಧಾರವಾಡ: ಮದ್ಯದ ಅಮಲಿನಲ್ಲಿ ತೇಲಾಡುತ್ತಿದ್ದ ಮಹಿಳೆಯೊಬ್ಬಳು ನಗರದ ಹೃದಯ ಭಾಗದಲ್ಲಿರುವ ಜ್ಯೂಬಿಲಿ ಸರ್ಕಲ್ ರಸ್ತೆಯಲ್ಲಿ ಡ್ಯಾನ್ಸ್ ಮಾಡುವ ಮೂಲಕ ಮನರಂಜನೆ ನೀಡಿದ್ದಾಳೆ.

    ಆದ್ರೆ ಮಹಿಳೆ ಯಾರೆಂದು ಗೊತ್ತಿಲ್ಲ, ಆದರೆ ನಗರದ ಜುಬ್ಲಿ ವೃತ್ತದಲ್ಲಿ ಮಹಿಳೆಯರ ಜೊತೆ ಮತ್ತು ಪ್ರಯಾಣಿಕರ ಜೊತೆ ಅನುಚಿತ ವರ್ತನೆ ಮಾಡುತ್ತಿರೋ ಈಕೆ, ನಡು ರಸ್ತೆಯಲ್ಲೇ ಕುಣಿಯುತ್ತಿದ್ದಳು.

    ಯಾವತ್ತೂ ಜನನಿಬಿಡ ಜನದಟ್ಟಣೆ ಇರುವ ಈ ವೃತ್ತದಲ್ಲಿ ಬರುವ ವಾಹನಗಳ ಮುಂದೆಯೇ ಡ್ಯಾನ್ಸ್ ಮಾಡುತ್ತಿದ್ದಳು. ತಲೆ ಮೇಲೆ ಟೋಪಿ ಹಾಕಿಕೊಂಡಿದ್ದ ಈ ಮಹಿಳೆ ಕೈಯಲ್ಲಿ ಬಾಳೆಹಣ್ಣು ಕೂಡಾ ಹಿಡಿದುಕೊಂಡಿದ್ದಳು.

    ಈ ದೃಶ್ಯವನ್ನು ಅಲ್ಲೆ ನಿಂತು ನೋಡುತ್ತಿದ್ದ ಪೊಲೀಸರು ಕೂಡಾ ನೋಡಿಯೂ ನೋಡದಂತೆ ಇದ್ದರು. ಕೆಲ ಸಮಯದ ನಂತರ ಇವಳು ಡಾನ್ಸ್ ಮಾಡುತ್ತಲೇ ಬೇರೆ ಕಡೆ ಹೋಗಿದ್ದಾಳೆ ಎಂಬುದಾಗಿ ವರದಿಯಾಗಿದೆ.

  • ಅಪರಿಚಿತರನ್ನು ಮನೆಗೆ ಕರೆತಂದು ಸಲುಗೆಯಿಂದ ಮಾತಾಡು, ಹಣ ವಸೂಲಿ ಮಾಡಿ ನನ್ನ ಕೈಗೆ ಕೊಡು ಎಂದ ಗಂಡ

    ಅಪರಿಚಿತರನ್ನು ಮನೆಗೆ ಕರೆತಂದು ಸಲುಗೆಯಿಂದ ಮಾತಾಡು, ಹಣ ವಸೂಲಿ ಮಾಡಿ ನನ್ನ ಕೈಗೆ ಕೊಡು ಎಂದ ಗಂಡ

    ಮೈಸೂರು: ಅಪರಿಚಿತರನ್ನು ಮನೆಗೆ ಕರೆತಂದು ಸಲುಗೆಯಿಂದ ಮಾತಾಡಿ ಹಣ ವಸೂಲಿ ಮಾಡುವಂತೆ ಪತಿಯೇ ಪತ್ನಿ ಮೇಲೆ ಒತ್ತಡ ಹೇರಿ ಕಿರುಕುಳ ನೀಡುತ್ತಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ನಂಜನಗೂಡು ತಾಲೂಕಿನ ಎಚಗುಡ್ಲ ಗ್ರಾಮದ ಅಯ್ಯಪ್ಪ ಎಂಬಾತನೇ ತನ್ನ ಪತ್ನಿ ರತ್ನಮ್ಮಗೆ ಈ ರೀತಿ ಕಿರುಕುಳ ನೀಡುತ್ತಿರುವ ಪತಿ. ಮೈಸೂರು ತಾಲೂಕಿನ ಉದ್ಭೂರು ಗ್ರಾಮದ ರತ್ನಮ್ಮ, ಎಚಗುಂಡ್ಲ ಗ್ರಾಮದ ಅಯ್ಯಪ್ಪನನ್ನು 6 ವರ್ಷಗಳ ಹಿಂದೆ ಮದುವೆಯಾಗಿದ್ದರು. ಒಂದು ಮಗುವಿನ ತಂದೆಯಾದ ಅಯ್ಯಪ್ಪ ಕುಡಿತದ ಚಟಕ್ಕೆ ದಾಸನಾಗಿದ್ದ. ಆಗಾಗ ಅಯ್ಯಪ್ಪ ಹಣಕ್ಕಾಗಿ ಪತ್ನಿಯನ್ನು ಪೀಡಿಸುತ್ತಿದ್ದು, ಅಪರಿಚಿತರನ್ನು ಮನೆಗೆ ಕರೆತಂದು ಸತ್ಕಾರ ಮಾಡುವ ನೆಪದಲ್ಲಿ ಸಲುಗೆಯಿಂದ ಮಾತಾಡಿ ಹಣ ವಸೂಲಿ ಮಾಡುವ ಪ್ಲಾನ್ ಮಾಡಿದ್ದ. ಅದಕ್ಕೆ ಪತ್ನಿಯನ್ನೇ ದಾಳವಾಗಿ ಬಳಸಿಕೊಳ್ಳಲು ಮುಂದಾಗಿದ್ದ.

    ಇದಕ್ಕೆ ಪತ್ನಿ ಒಪ್ಪದ ಕಾರಣ ಆಕೆಯ ಮೇಲೆಯೇ ಇಲ್ಲ ಸಲ್ಲದ ಆರೋಪಗಳನ್ನು ಹೊರೆಸಲು ಮುಂದಾಗಿದ್ದ. ಇದರಿಂದ ಹೆದರಿದ ರತ್ನಮ್ಮ ತವರು ಮನೆ ಸೇರಿದ್ದರು. ಗ್ರಾಮದ ಮುಖಂಡರಿಂದ ನ್ಯಾಯ ಸಿಗದ ಕಾರಣ ರತ್ನಮ್ಮ ಈಗ ಪೊಲೀಸರ ಮೊರೆ ಹೋಗಿದ್ದಾರೆ. ಕುಡುಕ ಪತಿಯಿಂದ ರಕ್ಷಣೆ ನೀಡಿ ತನ್ನ ಮಗುವನ್ನು ಕೊಡಿಸುವಂತೆ ಅಳಲು ತೋಡಿಕೊಂಡಿದ್ದಾರೆ.

  • ಇಬ್ಬರು ಮಕ್ಕಳಿಗೆ ವಿಷವುಣಿಸಿ ತಾನೂ ವಿಷ ಸೇವಿಸಿದ ತಾಯಿ -ಮಕ್ಕಳ ಸಾವು

    ಇಬ್ಬರು ಮಕ್ಕಳಿಗೆ ವಿಷವುಣಿಸಿ ತಾನೂ ವಿಷ ಸೇವಿಸಿದ ತಾಯಿ -ಮಕ್ಕಳ ಸಾವು

    ತುಮಕೂರು: ಮದ್ಯವ್ಯಸನಿ ಪತಿಯ ಕಿರುಕುಳಕ್ಕೆ ಬೇಸತ್ತ ಪತ್ನಿ ತನ್ನಿಬ್ಬರು ಮಕ್ಕಳಿಗೆ ವಿಷ ಉಣಿಸಿ ತಾನೂ ವಿಷ ಸೇವಿಸಿದ ಘಟನೆ ತುಮಕೂರು ಜಿಲ್ಲೆ ಶಿರಾದ ತಾವರೆಕೆರೆಯಲ್ಲಿ ನಡೆದಿದೆ.

    ಘಟನೆಯಲ್ಲಿ 9 ವರ್ಷದ ವಿದ್ಯಾ, 5 ವರ್ಷದ ಭವ್ಯಾ ಮೃತಪಟ್ಟಿದ್ದಾರೆ. ತಾಯಿ ಸುಹಾಸಿನಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಪತಿ ನಾಗೇಶ್ ಮದ್ಯವ್ಯಸನಿಯಾಗಿದ್ದು, ತೀವ್ರ ಕಿರುಕುಳ ನೀಡುತಿದ್ದ ಎನ್ನಲಾಗಿದೆ.

    ನಾಗೇಶ್ ದಂಪತಿಗೆ ಮೂವರು ಹೆಣ್ಣುಮಕ್ಕಳಿದ್ದು, ಅವರ ಪೋಷಣೆ ಕಷ್ಟವಾಗಿತ್ತು. ಇದರಿಂದ ನೊಂದ ಸುಹಾಸಿನಿ ಪತಿ ಹಾಗೂ ಮೊದಲ ಮಗಳು ಸಂಧ್ಯಾ ಮನೆಯಲ್ಲಿಲ್ಲದ ವಿಷ ಕುಡಿದು ಮಕ್ಕಳಿಗೂ ವಿಷ ಉಣಿಸಿದ್ದಾರೆ.

    ತಕ್ಷಣ ವಿಷ ಸೇವಿಸಿದ ಮೂವರನ್ನೂ ಸ್ಥಳೀಯರು ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮಕ್ಕಳು ತಡರಾತ್ರಿ ಅಸುನೀಗಿದ್ದಾರೆ.

    ಸದ್ಯ ತಾಯಿ ಸುಹಾಸಿನಿ ಸ್ಥಿತಿ ಗಂಭೀರವಾಗಿದೆ.

  • ಮೃತದೇಹ ಕೊಂಡೊಯ್ಯುವಾಗ ವಾಸನೆ ಬಂದಿತ್ತೆಂದು ಫುಲ್ ಬಾಟಲ್ ಕುಡಿದ ಆಂಬುಲೆನ್ಸ್ ಚಾಲಕನಿಗೆ ಫೈನ್

    ಮೃತದೇಹ ಕೊಂಡೊಯ್ಯುವಾಗ ವಾಸನೆ ಬಂದಿತ್ತೆಂದು ಫುಲ್ ಬಾಟಲ್ ಕುಡಿದ ಆಂಬುಲೆನ್ಸ್ ಚಾಲಕನಿಗೆ ಫೈನ್

    ಬೆಂಗಳೂರು: ಮೃತದೇಹವನ್ನ ಆಂಬುಲೆನ್ಸ್ ನಲ್ಲಿ ತೆಗೆದುಕೊಂಡು ಹೋಗುವಾಗ ವಾಸನೆ ಬಂದಿತ್ತು ಅಂತ ಫುಲ್ ಬಾಟಲ್ ಕುಡಿದು ವಾಹನ ಚಾಲನೆ ಮಾಡ್ತಿದ್ದ ಚಾಲಕನನ್ನು ಸಂಚಾರಿ ಪೊಲೀಸರು ತಡೆದು ದಂಡ ಹಾಕಿದ್ದಾರೆ.

    ಕುಡಿದು, ಸೈರನ್ ಬಳಸಿ ಆಂಬುಲೆನ್ಸ್ ಚಾಲನೆ ಮಾಡುತ್ತಿದ್ದ ಚಾಲಕನನ್ನು ನಗರದ ಹಲಸೂರು ಗೇಟ್ ಬಳಿ ಸಂಚಾರಿ ಪೊಲೀಸರು ತಡೆದಿದ್ದಾರೆ. ವಿಜಯನಗರದ ಪುಷ್ಪಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಆಂಬುಲೆನ್ಸ್ ಇದ್ದಾಗಿದ್ದು, ಯಶ್ವಂತ್ ಆಂಬುಲೆನ್ಸ್ ಚಾಲನೆ ಮಾಡುತ್ತಿದ್ದ. ಆಂಬುಲೆನ್ಸ್ ತಡರಾತ್ರಿ ಕೆಆರ್ ಸರ್ಕಲ್ ಮಾರ್ಗವಾಗಿ ಬರುವಾಗ ಪೊಲೀಸರು ತಡೆದಿದ್ದಾರೆ.

    ಇನ್ಸ್ ಪೆಕ್ಟರ್ ಮಹಮ್ಮದ್, ಆಂಬುಲೆನ್ಸ್ ತಡೆದು ತಪಾಸಣೆ ನಡೆಸಿದಾಗ ಮದ್ಯಪಾನ ಮಾಡಿರುವುದು ಖಚಿತವಾಗಿದೆ ಹಾಗೂ ಆಂಬುಲೆನ್ಸ್ ತಪಾಸಣೆ ನಡೆಸಿದಾಗ ಯಾವುದೇ ರೋಗಿ ಇರಲಿಲ್ಲ. ಪೊಲೀಸರು ಆಂಬುಲೆನ್ಸ್ ವಶಕ್ಕೆ ಪಡೆದು, ಚಾಲಕ ಯಶ್ವಂತ್ ಗೆ ಫೈನ್ ಹಾಕಿ ಕಳಿಸಿದ್ದಾರೆ.

     

  • ಕಲಬುರಗಿಯ ಈ ಗ್ರಾಮದಲ್ಲಿ ಮದ್ಯ, ಜೂಜಾಟ ಸಂಪೂರ್ಣ ಬಂದ್

    ಕಲಬುರಗಿಯ ಈ ಗ್ರಾಮದಲ್ಲಿ ಮದ್ಯ, ಜೂಜಾಟ ಸಂಪೂರ್ಣ ಬಂದ್

    ಕಲಬುರಗಿ: ಮದ್ಯ ನಿಷೇಧದ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಭಾರಿ ಚರ್ಚೆ ಆಯ್ತು. ಆದ್ರೆ ಸಂಪೂರ್ಣ ನಿಷೇಧ ಅಸಾಧ್ಯ ಅಂತ ಸಿಎಂ ಸಿದ್ದರಾಮಯ್ಯ ಘೋಷಿಸಿದ್ರು. ಕಲಬುರಗಿಯ ಚಿಂಚೋಳಿ ತಾಲೂಕಿನ ನೀಮಾಹೊಸಳ್ಳಿ ಗ್ರಾಮದಲ್ಲಿ ನೂರಾರು ವರ್ಷಗಳ ಹಿಂದೆಯೇ ಮದ್ಯ ಬ್ಯಾನ್ ಆಗಿದೆ.

    ಈ ಗ್ರಾಮದಲ್ಲಿ 2 ಸಾವಿರ ಜನಸಂಖ್ಯೆಯಿದ್ದು, ಯಾರೂ ದುಶ್ಚಟಕ್ಕೆ ದಾಸರಾಗಿಲ್ಲ. ನೂರಾರು ವರ್ಷಗಳಿಂದಲೂ ಈ ನಿಯಮವನ್ನ ಗ್ರಾಮಸ್ಥರು ಪಾಲಿಸಿಕೊಂಡು ಬರುತ್ತಿದ್ದಾರೆ. ಮದ್ಯದ ಜೊತೆಗೆ ಎಲ್ಲಾ ರೀತಿಯ ಜೂಜಾಟಕ್ಕೂ ಇಲ್ಲಿ ಬ್ರೇಕ್ ಹಾಕಲಾಗಿದೆ.

    ಮಂದಿರ, ಮಸೀದಿ ಮೇಲೆ ಭಾರೀ ನಂಬಿಕೆ ಹೊಂದಿರೋ ಗ್ರಾಮಸ್ಥರು ಮದ್ಯ ನಿಷೇಧವನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರುತ್ತಿದ್ದಾರೆ. ಅಂದಹಾಗೆ ಕೆಲ ದುಷ್ಟ ಶಕ್ತಿಗಳು ಗ್ರಾಮದ ಹೊರವಲಯದಲ್ಲಿ ಸಾರಾಯಿ ಅಂಗಡಿ ಓಪನ್ ಮಾಡಿದ್ರಂತೆ. ಈ ವೇಳೆ, ಇಡೀ ಗ್ರಾಮಸ್ಥರು ಒಗ್ಗೂಡಿ, ತೆರವು ಮಾಡಿಸಿದ್ದಾರೆ.

    ನೀಮಾ ಹೊಸಳ್ಳಿಯನ್ನ ಕಂಡ ಚಿಂಚೋಳಿ ತಾಲೂಕಿನ ಇತರೆ ಹಳ್ಳಿಗಳ ಜನ ಇದನ್ನ ಅನುಸರಿಸಲು ಮುಂದಾಗಿದ್ದಾರೆ. ಒಟ್ಟಿನಲ್ಲಿ, ಮದ್ಯವನ್ನ ನಿಷೇಧ ಮಾಡೋಕೆ ಆಗಲ್ಲ ಅಂತಿರೋ ಸರ್ಕಾರಕ್ಕೆ ಬಿಸಿ ಮುಟ್ಟಿಸುವಂತೆ ಈ ಗ್ರಾಮಸ್ಥರ ನಿರ್ಧಾರ ಇದೆ.

    https://www.youtube.com/watch?v=S_gpuS7h1AI

  • ಠಾಣೆ ಆವರಣದಲ್ಲೇ ಕುಡುಕನ ಗ್ರಹಚಾರ ಬಿಡಿಸಿದ ಮಹಿಳಾ ಎಸ್‍ಐ!

    ಠಾಣೆ ಆವರಣದಲ್ಲೇ ಕುಡುಕನ ಗ್ರಹಚಾರ ಬಿಡಿಸಿದ ಮಹಿಳಾ ಎಸ್‍ಐ!

    ಕೋಲಾರ: ಕುಡಿದು ಪ್ರತಿನಿತ್ಯ ಪತ್ನಿಗೆ ಟಾರ್ಚರ್ ನೀಡುತ್ತಿದ್ದ ಗಂಡನಿಗೆ ಮಹಿಳಾ ಠಾಣೆ ಎಸ್‍ಐ ಥರ್ಡ್ ಡಿಗ್ರಿ ಟ್ರೀಟ್‍ಮೆಂಟ್ ನೀಡಿರೋ ಘಟನೆ ಕೋಲಾರದಲ್ಲಿ ನಡೆದಿದೆ.

    ಕೋಲಾರ ಮಹಿಳಾ ಠಾಣೆಯ ಆವರಣದಲ್ಲಿ ಈ ಘಟನೆ ಕಳೆದ 1 ತಿಂಗಳ ಹಿಂದೆ ನಡೆದಿದ್ದು, ಹೇಮಾವತಿ ಎಂಬ ಎಸ್‍ಐ ಠಾಣೆ ಎದುರೇ ಕುಡುಕನಿಗೆ ಥಳಿಸಿದ್ದಾರೆ. ತನ್ನ ಪತಿ ಪ್ರತಿ ದಿನ ಕುಡಿದು ಬಂದು ಕಿರುಕುಳ ನೀಡುತ್ತಿದ್ದುದರಿಂದ ಮನನೊಂದ ಮಹಿಳೆಯೊಬ್ಬರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

    ಈ ಹಿನ್ನೆಲೆಯಲ್ಲಿ ಮಹಿಳಾ ಎಸ್‍ಐ ದೂರು ನೀಡಿದ ಮಹಿಳೆಯ ಪತಿಯನ್ನು ಠಾಣೆಗೆ ಕರೆಸಿದ್ದಾರೆ. ಬಳಿಕ ಆತನಿಗೆ ಬುದ್ಧಿ ಹೇಳಿ ಠಾಣೆ ಆವರಣದಲ್ಲೇ ಚೆನ್ನಾಗಿ ಥಳಿಸಿದ್ದಾರೆ.

    ವ್ಯಕ್ತಿಗೆ ಮಹಿಳಾ ಎಸ್‍ಐ ಲಾಠಿ ರುಚಿ ತೋರಿಸುತ್ತಿರುವ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿದು ಬಿಟ್ಟಿದ್ದಾರೆ. ವಿಡಿಯೋದಲ್ಲಿ ಹೀಗ್ ಮಾಡ್ತೀಯಾ.. ಮಾಡ್ತಿಯಾ ಎಂದು ವ್ಯಕ್ತಿಗೆ ಮಹಿಳಾ ಎಸ್‍ಐ ಥಳಿಸುವುದನ್ನು ಕಾಣಬಹುದು.

    ಎಸ್‍ಐ ದೌರ್ಜನ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಾಕ ಆಕ್ರೋಶ ವ್ಯಕ್ತವಾಗಿದೆ. ಘಟನೆಯ ಬಳಿಕ ಸದ್ಯ ಪತಿ ಹಾಗೂ ಪತ್ನಿ ಒಟ್ಟಾಗಿ ಚೆನ್ನಾಗಿಯೇ ಜೀವನ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

     

  • 10ರೂ. ಹೆಚ್ಚು ಪಡೆದಿದ್ದಕ್ಕೆ ಮದ್ಯ ಮಾರಾಟಗಾರ, ಗ್ರಾಹಕರ ಮಧ್ಯೆ ಜಗಳ

    10ರೂ. ಹೆಚ್ಚು ಪಡೆದಿದ್ದಕ್ಕೆ ಮದ್ಯ ಮಾರಾಟಗಾರ, ಗ್ರಾಹಕರ ಮಧ್ಯೆ ಜಗಳ

    ಕೊಪ್ಪಳ: ಎಂಆರ್ ಪಿ ದರಕ್ಕಿಂತ ಹೆಚ್ಚಿಗೆ ರೂ. ಪಡೆದು ಮದ್ಯ ಮಾರಾಟ ಮಾಡಿದ್ದಕ್ಕೆ ಗ್ರಾಹಕರು ಹಾಗೂ ಮಾರಾಟಗಾರ ನಡುವೆ ಮಾತಿನ ಚಕಮಕಿಯಾಗಿರೋ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದಿದೆ.

    ಇಲ್ಲಿನ ಜುಲಾಯ್ ನಗರದಲ್ಲಿರೋ ಸರಕಾರಿ ಸ್ವಾಮ್ಯದ ಎಂಎಸ್‍ಐಎಲ್ ಮಳಿಗೆಯಲ್ಲಿ ಎಂಆರ್ ಪಿ ದರಕ್ಕಿಂತ 10 ರೂಪಾಯಿ ಹೆಚ್ಚಿಗೆ ಪಡೆದಿದ್ದಾರೆ. ಆಗ ಗ್ರಾಹಕರು ನೀವು ಎಂಆರ್ ಪಿ ದರದಲ್ಲಿ ಮಾರಾಟ ಮಾಡಲಾಗುವುದು ಎಂದು ಬೋರ್ಡ್ ಹಾಕಿದ್ದೀರಿ ಅಂತ ಜಗಳ ಆರಂಭಿಸಿದ್ದಾರೆ.

    ಆದ್ರೆ ಎಂಆರ್ ಪಿ ದರಕ್ಕಿಂತ ಹೆಚ್ಚಿನ ದರದಲ್ಲಿ ಗ್ರಾಹಕರಿಗೆ ಮದ್ಯ ಮಾರಾಟ ಮಾಡುತ್ತಿದ್ದೀರಿ ಎಂದಾಗ ಮಳಿಗೆಯ ಮಾರಾಟಗಾರ ಶಾಸಕ ಇಕ್ಬಾಲ್ ಅನ್ಸಾರಿ, ಸಿಎಲ್ 2 ಮದ್ಯದಂಗಡಿಯಲ್ಲಿ ಎಂಆರ್ ಪಿ ದರಕ್ಕಿಂತ 40 ರೂಪಾಯಿ ಹೆಚ್ಚಿಗೆ ಕೊಟ್ಟು ಕುಡಿಯುತ್ತೀರಿ.ನಮಗೆ 10 ರೂಪಾಯಿ ಕೊಡೋಕೆ ಕಿರಿಕ್ ಮಾಡುತ್ತೀರಿ ಎಂದು ಮಾತಿಗೆ ಮಾತು ಬೆಳೆದು ದೊಡ್ಡ ಗಲಾಟೆ ಕೂಡಾ ನಡೆದಿದೆ. ಬಳಿಕ ಗ್ರಾಹಕರು ಅಂಗಡಿ ಬಂದ್ ಮಾಡಿಸಿದ್ದಾರೆ.

  • ಜೆಡಿಎಸ್ ಬಂಡಾಯ ಶಾಸಕರು ಗೆಲ್ತಾರೋ? ಇಲ್ವೋ?: ವೈರಲ್ ಆಯ್ತು ರಾಮನಗರದ ಬೆಟ್ಟಿಂಗ್ ವಿಡಿಯೋ

    ಜೆಡಿಎಸ್ ಬಂಡಾಯ ಶಾಸಕರು ಗೆಲ್ತಾರೋ? ಇಲ್ವೋ?: ವೈರಲ್ ಆಯ್ತು ರಾಮನಗರದ ಬೆಟ್ಟಿಂಗ್ ವಿಡಿಯೋ

    ರಾಮನಗರ: ಈಗಿನಿಂದಲೇ ರಾಮನಗರ ಜಿಲ್ಲೆಯಲ್ಲಿ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ರಾಮನಗರ ಜಿಲ್ಲೆ ಮಾಗಡಿಯ ಖಾಸಗಿ ಡಾಬಾವೊಂದರಲ್ಲಿ ಬಂಡಾಯ ಶಾಸಕರ ಬಗ್ಗೆ ಬೆಟ್ಟಿಂಗ್ ನಡೆದಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಮಾಗಡಿ ಶಾಸಕ ಬಂಡಾಯ ಶಾಸಕ ಎಚ್.ಸಿ ಬಾಲಕೃಷ್ಣ ಬೆಂಬಲಿಗ ಶ್ರೀನಿವಾಸ್ ಮತ್ತು ಜೆಡಿಎಸ್ ಬೆಂಬಲಿಗ ಬೋರೇಗೌಡ ಬೆಟ್ಟಿಂಗ್ ಕಟ್ಟಿಕೊಂಡಿದ್ದಾರೆ.

    ಶ್ರೀನಿವಾಸ್ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 4 ಜೆಡಿಎಸ್ ಬಂಡಾಯ ಶಾಸಕರು ಗೆಲ್ಲುತ್ತಾರೆ ಎಂದು ಬೆಟ್ಟಿಂಗ್ ಕಟ್ಟಿದರೆ, ಬೋರೇಗೌಡ ಯಾವುದೇ ಕಾರಣಕ್ಕೂ ಬಂಡಾಯ ಶಾಸಕರು ಗೆಲ್ಲುವುದಿಲ್ಲ ಎಂದು ಬೆಟ್ಟಿಂಗ್ ಕಟ್ಟಿದ್ದಾರೆ.

    ಇಬ್ಬರು ಸೇರಿ ತಲಾ 40 ಸಾವಿರ ಬೆಟ್ಟಿಂಗ್ ಕಟ್ಟಿಕೊಂಡಿದ್ದಾರೆ. ಅಲ್ಲದೇ ಮಾತುಕತೆ ನಡೆದು ಮಧ್ಯವರ್ತಿ ಒಬ್ಬರು ಹಣವನ್ನು ತನ್ನ ಬಳಿ ಇಟ್ಟುಕೊಳ್ಳುವ ದೃಶ್ಯ ಸೆರೆಯಾಗಿದೆ. ಚುನಾವಣೆಗೆ ಇನ್ನೂ ಸಮಯವಿದ್ದರೂ ಈಗಲೇ ಬೆಟ್ಟಿಂಗ್ ಶುರುವಾಗಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

  • ಬ್ಯಾಗ್‍ ನಲ್ಲಿ ಕಂತೆ ಕಂತೆ ಹಣ, ಅನುಮಾನಾಸ್ಪದವಾಗಿ ಓಡಾಡ್ತಿದ್ದ 3 ಯುವಕರು ಮಂಡ್ಯ ಪೊಲೀಸರ ವಶಕ್ಕೆ

    ಬ್ಯಾಗ್‍ ನಲ್ಲಿ ಕಂತೆ ಕಂತೆ ಹಣ, ಅನುಮಾನಾಸ್ಪದವಾಗಿ ಓಡಾಡ್ತಿದ್ದ 3 ಯುವಕರು ಮಂಡ್ಯ ಪೊಲೀಸರ ವಶಕ್ಕೆ

    – ಬೆಂಗ್ಳೂರು ಎಟಿಎಂ ಪ್ರಕರಣಕ್ಕೆ ನಂಟು?

    ಮಂಡ್ಯ: ದಾಖಲೆಯಿಲ್ಲದ ಲಕ್ಷಾಂತರ ರೂಪಾಯಿ ಹಣ ಇಟ್ಟುಕೊಂಡಿದ್ದ ಮೂವರು ಯುವಕರನ್ನು ಮಂಡ್ಯ ಜಿಲ್ಲೆ ಮಳವಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಮೂವರು ಯುವಕರು ಬ್ಯಾಗ್ ನಲ್ಲಿ ಲಕ್ಷಾಂತರ ರೂಪಾಯಿ ಹಣ ಇಟ್ಟುಕೊಂಡು ಮಳವಳ್ಳಿಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಮದ್ಯಪಾನ ಮಾಡಿ ಪರಸ್ಪರ ಜಗಳವಾಡುತ್ತಿದ್ದರು. ಇದನ್ನು ಗಮನಿಸಿದ ಪೊಲೀಸರು ಯುವಕರನ್ನು ವಿಚಾರಿಸಲು ಮುಂದಾದರು.

    ಈ ವೇಳೆ ಮೂವರು ಯುವಕರು ಅಲ್ಲಿಯೇ ಇದ್ದ ಬಟ್ಟೆ ಅಂಗಡಿಯೊಳಗೆ ಹೋಗಿ ಅವಿತುಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಮತ್ತು ಸ್ಥಳೀಯರು ಸೇರಿ ಯುವಕರನ್ನು ಹಿಡಿದು ಬ್ಯಾಗ್ ಪರಿಶೀಲನೆ ನಡೆಸಿದಾಗ ಕಂತೆ ಕಂತೆ ಹಣ ಪತ್ತೆಯಾಗಿದೆ.

    ಹಣದ ಬಗ್ಗೆ ಯಾರೂ ಸಮರ್ಪಕ ಉತ್ತರ ನೀಡಿಲ್ಲ. ಈ ಹಣಕ್ಕೆ ಬೆಂಗಳೂರಿನ ಜಾಲಹಳ್ಳಿ ಎಟಿಎಂ ದರೋಡೆ ಪ್ರಕರಣದ ನಂಟು ಇರಬಹುದು ಎಂದು ಶಂಕಿಸಲಾಗಿದೆ.

    ಬೆಂಗ್ಳೂರಲ್ಲಿ ಎಟಿಎಂ ಹಣ ದರೋಡೆ: ಎಟಿಎಂ ಗೆ ಹಣ ತುಂಬುವ ವೇಳೆ 18 ಲಕ್ಷ ರೂ. ಕಸಿದು ಪರಾರಿಯಾದ ಘಟನೆ ನಗರದ ಜಾಲಹಳ್ಳಿ ಕ್ರಾಸ್ ಬಳಿ ಸೋಮವಾರದಂದು ನಡೆದಿತ್ತು. ಬೆಳಗ್ಗೆ 6 ಗಂಟೆ ಸುಮಾರಿಗೆ ಐಸಿಐಸಿಐ ಬ್ಯಾಂಕ್ ಎಟಿಎಂಗೆ ಹಣ ತುಂಬಿಸುವ ವೇಳೆ 220 ಪಲ್ಸರ್ ಬೈಕ್‍ನಲ್ಲಿ ಹೆಲ್ಮಟ್ ಧರಿಸಿ ಬಂದಿದ್ದ ದುಷ್ರ್ಕಮಿಗಳು ಸೆಕ್ಯೂರ್ ವೆಲ್ ಏಜೆನ್ಸಿಯ ಮೂವರು ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದರು. ಪ್ರತಿರೋಧ ಒಡಿದ್ದಕ್ಕೆ ಕಸ್ಟೋಡಿಯನ್ ಮೋಹನ್ ಅವರಿಗೆ ಚಾಕುವಿನಿಂದ ಇರಿದ ದುಷ್ರ್ಕಮಿಗಳು 18 ಲಕ್ಷ ರೂ. ಕಸಿದು ಪರಾರಿಯಾಗಿದ್ದರು.

    ಮೋಹನ್, ಸಾಗರ್ ಹಾಗೂ ಪ್ರಸನ್ನ ಸೆಕ್ಯೂರ್ ವೆಲ್ ಏಜ್ಸೇನಿಯ ಸಿಬ್ಬಂದಿಗಳು. ಎಟಿಎಂಗೆ ಹಣ ತುಂಬಲು ಒಟ್ಟು 1 ಕೋಟಿ, 25 ಲಕ್ಷ ರೂ. ಹಣ ತಂದಿದ್ದರು. ದುಷ್ಕರ್ಮಿಗಳು ಅದರಲ್ಲಿ 18 ಲಕ್ಷ, 50 ಸಾವಿರ ರೂ. ಹಣದ ಬ್ಯಾಗ್ ಕಸಿದು ಪರಾರಿಯಾಗಿದ್ದರು. ಈ ಘಟನೆ ಕುರಿತು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.