Tag: drinkingwater

  • ಚಿಕ್ಕಲ್ಲೂರು ಜಾತ್ರಾ ಮಹೋತ್ಸವಕ್ಕೆ ಅಗತ್ಯ ಸಿದ್ಧತೆ- ಕೊಳ್ಳೇಗಾಲದಲ್ಲಿ ಡಿಸಿ, ಶಾಸಕರ ನೇತೃತ್ವದಲ್ಲಿ ಸಭೆ

    ಚಿಕ್ಕಲ್ಲೂರು ಜಾತ್ರಾ ಮಹೋತ್ಸವಕ್ಕೆ ಅಗತ್ಯ ಸಿದ್ಧತೆ- ಕೊಳ್ಳೇಗಾಲದಲ್ಲಿ ಡಿಸಿ, ಶಾಸಕರ ನೇತೃತ್ವದಲ್ಲಿ ಸಭೆ

    ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ಕ್ಷೇತ್ರದಲ್ಲಿ ಇದೇ ತಿಂಗಳ ಜನವರಿ 10 ರಿಂದ 14ರ ವರೆಗೆ ಘನನೀಲ ಸಿದ್ದಪ್ಪಾಜಿಯವರ ಜಾತ್ರಾ ಮಹೋತ್ಸವ ನಡೆಯಲಿದೆ. ಇದಕ್ಕೆ ಆಗಮಿಸಲಿರುವ ಭಕ್ತಾದಿಗಳ ಸೌಲಭ್ಯಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಶಾಸಕರಾದ ಆರ್.ನರೇಂದ್ರ ಹಾಗೂ ಜಿಲ್ಲಾಧಿಕಾರಿ ಬಿ.ಬಿ ಕಾವೇರಿಯವರು ಹೇಳಿದರು.

    ಕೊಳ್ಳೇಗಾಲ ಪಟ್ಟಣದ ಉಪವಿಭಾಗಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿಂದು ಚಿಕ್ಕಲ್ಲೂರು ಜಾತ್ರಾ ಮಹೋತ್ಸವ ಸಿದ್ಧತೆ ಸಂಬಂಧ ಪೂರ್ವಭಾವಿ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದರು.

    ಚಿಕ್ಕಲ್ಲೂರು ಕ್ಷೇತ್ರಕ್ಕೆ ಜಾತ್ರಾ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಲಿದ್ದಾರೆ. ಇವರಿಗೆ ಯಾವುದೇ ಕೊರತೆಯಾಗದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ಅಧಿಕಾರಿಗಳಿಗೆ ಹಾಗೂ ದೇವಾಲಯದ ಆಡಳಿತ ಮಂಡಳಿಯವರಿಗೆ ತಿಳಿಸಲಾಗಿದೆ. ಕುಡಿಯುವ ನೀರು, ರಸ್ತೆ, ವಾಹನ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ತಿಳಿಸಲಾಗಿದೆ ಎಂದರು.

    ಶಾಸಕರಾದ ಆರ್.ನರೇಂದ್ರ ಅವರು ಮಾತನಾಡಿ, ಈ ಬಾರಿ ಜಾತ್ರೆಗಾಗಿ 150 ಕೆ.ಎಸ್.ಆರ್.ಟಿ.ಸಿ ಬಸ್ಸುಗಳ ವ್ಯವಸ್ಥೆ ಮಾಡಲಾಗುತ್ತಿದೆ. ಮುಡಿಕಟ್ಟೆಯಲ್ಲಿ ಸ್ವಚ್ಛತೆ ಹಾಗೂ ಸುರಕ್ಷತಾ ಕ್ರಮಗಳಿಗೆ ಸೂಚಿಸಲಾಗಿದೆ.ತಾತ್ಕಾಲಿಕ ಶೌಚಾಲಯ ಇನ್ನಿತರ ಅಗತ್ಯ ಕ್ರಮಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

    ಜಿಲ್ಲಾಧಿಕಾರಿ ಬಿ.ಬಿ ಕಾವೇರಿ ಅವರು ಮಾತನಾಡಿ, ದೇವರ ಹೆಸರಿನಲ್ಲಿ ಪ್ರಾಣಿಬಲಿ ನಡೆಸುವಂತಿಲ್ಲ. ಕರ್ನಾಟಕ ಪ್ರಾಣಿ ಬಲಿ ಪ್ರತಿಬಂಧಕ ಅಧಿನಿಯಮ 1963ರ ಮೇರೆಗೆ ಪ್ರಾಣಿಬಲಿ ಕೃತ್ಯಗಳು ಅಪರಾಧವಾಗಿದೆ. ಉಚ್ಛನ್ಯಾಯಾಲಯದ ನಿರ್ದೇಶನದಂತೆ ಪ್ರಾಣಿಬಲಿ ಹಾಗೂ ಮಾರಕಾಸ್ತ್ರ ತರುವುದನ್ನು ನಿಷೇಧಿಸಲಾಗಿದೆ. ಈ ಹಿನ್ನಲೆಯಲ್ಲಿ ಜನವರಿ 10ರಿಂದ 14ರ ಮಧ್ಯ ರಾತ್ರಿಯವರೆಗೆ ಚಿಕ್ಕಲ್ಲೂರು ಜಾತ್ರಾ ಪ್ರದೇಶ, ಹೊಸಮಠದ ದೇವಸ್ಥಾನದ ಪರಿಧಿ ವ್ಯಾಪ್ತಿಯಲ್ಲಿ ದೇವರ ಹೆಸರಿನಲ್ಲಿ ಯಾವುದೇ ಪ್ರಾಣಿಬಲಿ ನೀಡುವುದು ಹಾಗೂ ಮಾರಕಾಸ್ತ್ರಗಳನ್ನು ತರುವುದನ್ನು ತಡೆಗಟ್ಟಲು ಅಗತ್ಯಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿಯೇ ವಿವಿದ ಪ್ರದೇಶಗಳಲ್ಲಿ ಹೆಚ್ಚುವರಿ ಸೆಕ್ಟರ್ ಅಧಿಕಾರಿಗಳನ್ನಾಗಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ವಿವರಿಸಿದರು.

    ಶಾಸಕರಾದ ಆರ್.ನರೇಂದ್ರ ಮಾತನಾಡಿ, ವಿದ್ಯುತ್ ಪೂರೈಕೆ,ರಸ್ತೆಗಳ ಗುಂಡಿ ಮುಚ್ಚುವ ಕಾರ್ಯಕ್ಕೆ ಸೂಚಿಸಲಾಗಿದೆ. ಏಕಮುಖ ಸಂಚಾರಕ್ಕೆ ಅವಕಾಶ ನೀಡುವ ಮೂಲಕ ಸುಗಮವಾಗಿ ವಾಹನಗಳ ಓಡಾಟಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಹೆಚ್ಚು ಪೊಲೀಸರನ್ನು ನಿಯೋಜಿಸಿ ಅಗತ್ಯ ಭದ್ರತೆ ಒದಗಿಸಲಾಗುತ್ತಿದೆ. ಒಟ್ಟಾರೆ ಜಾತ್ರೆಗೆ ಅಗತ್ಯವಿರುವ ಎಲ್ಲಾ ಪೂರ್ವ ಸಿದ್ಧತೆಯನ್ನು ಸಮರ್ಪಕವಾಗಿ ಕೈಗೊಳ್ಳಲು ಇಂದಿನ ಸಭೆಯಲ್ಲಿ ನಿರ್ದೇಶನ ನೀಡಲಾಗಿದೆ ಎಂದರು.

  • ಮಂಡ್ಯದಲ್ಲಿ ಕುಡಿಯೋ ನೀರಿನಲ್ಲೂ ರಾಜಕೀಯ!

    ಮಂಡ್ಯದಲ್ಲಿ ಕುಡಿಯೋ ನೀರಿನಲ್ಲೂ ರಾಜಕೀಯ!

    – ಕೈ-ದಳ ನಡುವೆ ತಿಕ್ಕಾಟ

    ಮಂಡ್ಯ: ಜಿಲ್ಲೆಯಲ್ಲಿ ಕುಡಿಯುವ ನೀರಿನಲ್ಲೂ ರಾಜಕೀಯ ಶುರುವಾಗಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ತಿಕ್ಕಾಟ ನಡೆಯುತ್ತಿದೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿಗೆ ಕುಣಿಗಲ್ ಕಾಂಗ್ರೆಸ್ ಶಾಸಕ ಡಾ.ರಂಗನಾಥ್ ಅಡ್ಡಿಯುಂಟು ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ನಾಗಮಂಗಲ-ಕುಣಿಗಲ್ ಗಡಿಯ ಮಾರ್ಕೋನಹಳ್ಳಿ ಡ್ಯಾಂ ನಿಂದ ನೀರು ಪೂರೈಸುವ ಯೋಜನೆ ಇದಾಗಿದೆ. ಇದರ ಶೇ.95 ಕಾಮಗಾರಿ ಪೂರ್ಣಗೊಂಡಿದ್ದು, ಅಂತಿಮ ಹಂತದಲ್ಲಿ ಯೋಜನೆಗೆ ಕೈ ಶಾಸಕ ಅಡ್ಡಿಪಡಿಸಿದ್ದಾರೆ. ನೀರು ಪಂಪ್ ಮಾಡುವ ಜಾಕ್‍ವೆಲ್ ಅಳವಡಿಕೆಯಿಂದ ಡ್ಯಾಂಗೆ ಅಪಾಯವೆಂಬ ನೆಪವೊಡ್ಡಿದ್ದಾರೆ.

    168 ಕೋಟಿ ರೂ. ವೆಚ್ಚದ 128 ಗ್ರಾಮ, ಆದಿಚುಂಚನಗಿರಿ ಕ್ಷೇತ್ರಕ್ಕೆ ನೀರು ಪೂರೈಸುವ ಯೋಜನೆ ಜಾಕ್‍ವೆಲ್ ಅಳವಡಿಸೋದಾದ್ರೆ ನನ್ನ ಸಮಾಧಿ ಮೇಲೆ ಅಳವಡಿಸಿ ಎಂದು ರಂಗನಾಥ್ ಸವಾಲು ಹಾಕಿದ್ದರು. ಈ ಹಿನ್ನೆಲೆಯಲ್ಲಿ ಮಂಡ್ಯ ಡಿಸಿ, ತುಮಕೂರು ಎಡಿಸಿ ನೇತೃತ್ವದಲ್ಲಿ ಮಾರ್ಕೋನಹಳ್ಳಿ ಡ್ಯಾಂ ಬಳಿ ನಡೆದ ಸಂಧಾನ ಯತ್ನವೂ ವಿಫಲವಾಗಿದೆ.

    ಸಭೆಯಲ್ಲಿ ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ, ಕುಣಿಗಲ್ ಶಾಸಕ ರಂಗನಾಥ್ ಭಾಗಿಯಾಗಿದ್ದಾರೆ. ತಾಂತ್ರಿಕ ದೋಷ ಇಲ್ಲ, ಜಾಕ್ ವೆಲ್ ನಿಂದ ಅಣೆಕಟ್ಟೆಗೆ ಅಪಾಯವಿಲ್ಲ ಅಧಿಕಾರಿಗಳು ತಿಳಿಸಿದರು. ತಾಂತ್ರಿಕ ದೋಷ ಇಲ್ಲ ಎನ್ನುತ್ತಿದ್ದಂತೆ ಕುಣಿಗಲ್ ತಾಲೂಕಿಗೆ ನೀರಿಲ್ಲ. ಎಲ್ಲಿಂದ ನಿಮಗೆ ನೀರು ಕೊಡೋದು ಎಂದು ರಂಗನಾಥ್ ತಮ್ಮ ವರಸೆ ಬದಲಿಸಿದ ಪ್ರಸಂಗವೂ ನಡೆಯಿತು. ಅಂತಿಮವಾಗಿ ಸಂಸದರು, ಕ್ಷೇತ್ರದ ಮುಖಂಡರ ಜತೆ ಚರ್ಚಿಸುವುದಾಗಿ ಹೇಳಿ ರಂಗನಾಥ್ ಸಭೆಯಿಂದ ನಿರ್ಗಮಿಸಿದರು.

    ನನ್ನ ಕ್ಷೇತ್ರದಲ್ಲಿ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಮಾಡಿಯೇ ತೀರುತ್ತೇವೆಂದು ಇತ್ತ ನಾಗಮಂಗಲ ಶಾಸಕ ಸವಾಲು ಹಾಕಿದರು. ಗೌರವ ಕೊಡಬೇಕಿತ್ತು ಕೊಟ್ಟಿದ್ದೇವೆ. ಆದರೆ ಕಾಮಗಾರಿ ನಿಲ್ಲಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

  • 5 ರೂ. ಕುಡಿಯೋ ನೀರು ಡೇಂಜರ್- ಇದು ಶುದ್ಧೀಕರಣದ ನೀರಲ್ಲ, ಕೊಳಚೆ ನೀರು

    5 ರೂ. ಕುಡಿಯೋ ನೀರು ಡೇಂಜರ್- ಇದು ಶುದ್ಧೀಕರಣದ ನೀರಲ್ಲ, ಕೊಳಚೆ ನೀರು

    – ಪಬ್ಲಿಕ್ ಟಿವಿ ಸ್ಟಿಂಗ್ ಆಪರೇಷನ್‍ನಲ್ಲಿ ಬಯಲು

    ಬೆಂಗಳೂರು: ಸಿಲಿಕಾನ್ ಸಿಟಿಯ ಜನರ ಅನುಕೂಲಕ್ಕಾಗಿ ಬಿಬಿಎಂಪಿ ಹಾಗೂ ಸರ್ಕಾರ ಒಂದಿಲ್ಲೊಂದು ಯೋಜನೆಗಳನ್ನ ಮಾಡುತ್ತಾನೆ ಇರುತ್ತದೆ. ಅದೇ ರೀತಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭ ಮಾಡಿ ಹಲವು ವರ್ಷಗಳೇ ಕಳೆದಿದೆ. ಈ ಶುದ್ಧ ಕುಡಿಯುವ ನೀರಿನ ಶುದ್ಧತೆ ಬಗ್ಗೆ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ನಡೆಸಿದೆ.

    ಹೌದು. ಜನರಿಗಾಗಿ, ಅದರಲ್ಲೂ ಬಡ ಜನರಿಗೆ ಅಂತಾನೇ ಜನನಾಯಕರು ಸರ್ಕಾರದ ಹಣದಿಂದ ವಾಟರ್ ಆರ್.ಓ ಪ್ಲಾಂಟ್‍ಗಳನ್ನ ನಿರ್ಮಾಣ ಮಾಡಿಸಿ ತಮ್ಮ ಫೋಟೋಗಳನ್ನ ಹಾಕಿಸಿ ಈ ಶುದ್ಧ ನೀರಿನ ಘಟಕವನ್ನು ನಾನೇ ಮಾಡಿಸಿದ್ದು ಎಂದು ತೊರಿಸಿಕೊಳ್ಳುತ್ತಿದ್ದಾರೆ. ಆದರೆ ಆ ನೀರು ಕುಡಿಯೋದಕ್ಕೆ ಯೋಗ್ಯವಾ ಎಂಬುದರ ಬಗ್ಗೆ ರಿಯಾಲಿಟಿ ಚೆಕ್ ಮಾಡಲು ಮುಂದಾದ ಪಬ್ಲಿಕ್ ಟಿವಿ ತಂಡಕ್ಕೆ ಫುಲ್ ಶಾಕ್ ಕಾದಿತ್ತು. ನೀರಿನ ಗುಣಮಟ್ಟ ಅಳೆಯುವ ಟಿಡಿಎಸ್ ಮಾಪಕದಲ್ಲಿ ಬಿಬಿಎಂಪಿಯ ಶುದ್ಧ ನೀರಿನ ಘಟಕದ ನೀರನ್ನು ಪರೀಕ್ಷೆ ಮಾಡಿದಾಗ ಸತ್ಯ ಬಯಲಾಗಿದೆ.

    ಸ್ಥಳ: ರಾಜಾಜಿನಗರ
    ಇಲ್ಲಿ ಟಿಡಿಎಸ್ ಮೀಟರ್‍ನಲ್ಲಿ ನೀರಿನ ಟಿಡಿಎಸ್ ಕೇವಲ 13 ಇರುವುದು ಕಂಡುಬಂತು. ಮಾಜಿ ಮೇಯರ್ ಪದ್ಮಾವತಿ ಅವರು ಮಾಡಿಸಿರೋ ಶುದ್ಧ ನೀರು ಕುಡಿಯುವ ಘಟಕದ ಈ ನೀರನ್ನ ಕುಡಿಯೋ ಜನರ ಪಾಡು ಆ ದೇವರ ಬಲ್ಲ ಎಂಬಂತಾಗಿದೆ.

    ಸ್ಥಳ: ಮಹಾಲಕ್ಷ್ಮಿಲೇಔಟ್
    ಮಹಾಲಕ್ಷ್ಮಿ ಲೇಔಟ್‍ನಲ್ಲಿ ಶುದ್ಧ ನೀರಿನ ಘಟಕಕ್ಕೆ ಬರವೇ ಇಲ್ಲ. ಆದರೆ ಆ ನೀರಿಗೆ ಕ್ವಾಲಿಟಿ ಮಾತ್ರ ಇಲ್ಲ. ಯಾಕಂದರೆ ಇಲ್ಲಿನ ನೀರಿನ ಟಿಡಿಎಸ್ ಪ್ರಮಾಣ 22 ಮಾತ್ರ ಇದೆ.

    ಸ್ಥಳ: ಮಲ್ಲೇಶ್ವರಂ
    ರಾಜ್ಯ ಬಿಜೆಪಿಯ ಕೇಂದ್ರ ಕಚೇರಿಯ ಕೂಗಳತೆಯ ದೂರದಲ್ಲಿರೋ ಶುದ್ಧ ನೀರಿನ ಘಟಕವಿದು. ಇಲ್ಲಿ ಸುತ್ತಮುತ್ತ ಬರಿ ದೇವಾಲಯಗಳೇ ಇವೆ. ಇಲ್ಲಿನ ನೀರಿನ ಕ್ವಾಲಿಟಿ ಕೇವಲ 17 ಮಾತ್ರ ಇದೆ.

    ಹೀಗೆ ಪಬ್ಲಿಕ್ ಟಿವಿ ಎಲ್ಲೆಲ್ಲಿ ರಿಯಾಲಿಟಿ ಚೆಕ್ ನಡೆಸಿದೆಯೋ ಅಲ್ಲೆಲ್ಲ ನೀರು ಶುದ್ಧವಾಗಿಯೇ ಇಲ್ಲ. ಇದು ಬರೀ ಸ್ಯಾಂಪಲ್ ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ಈ ರೀತಿಯ ಶುದ್ಧ ನೀರಿನ ಘಟಕಗಳು ಇವೆ. ಸರಿಯಾದ ನಿರ್ವಹಣೆ ಇಲ್ಲದ ಕಾರಣ ಇಲ್ಲಿ ನೀರು ಶುದ್ಧೀಕರಣವಾಗುತ್ತಿಲ್ಲ. ಬಹುತೇಕ ಬೆಂಗಳೂರಿನ ಜನರು ಕುಡಿಯೋಕೆ ಈ ನೀರನ್ನೇ ಬಳಸುತ್ತಾರೆ.

    ಟಿಡಿಎಸ್ ಪ್ರಮಾಣ 0 ಇದ್ರೇ ಅದನ್ನ ಡಿಸ್ಟಿಲ್ ವಾಟರ್ ಅಂತಾರೇ. ಅಂದರೆ ಆ ನೀರನ್ನ ಬ್ಯಾಟರಿಗಳಿಗೆ ಬಳಸುತ್ತಾರೆ ಎನ್ನಲಾಗುತ್ತಿದೆ. ಇನ್ನೂ 50ಕ್ಕಿಂತ ಕಡಿಮೆ ಇರೋ ನೀರನ್ನ ಕುಡಿಯೋದರಿಂದ ಕೆಮ್ಮು, ನೆಗಡಿ, ಅಸಿಡಿಟಿ, ಬೋನ್ಸ್ ವೀಕ್, ವೀಪರೀತ ತಲೆನೋವು, ಜ್ವರ, ಸುಸ್ತು, ನಿಶಕ್ತಿ, ವಾಂತಿಯಾಗುತ್ತದೆ. ಹೀಗೆ ಈ ನೀರನ್ನ ಕುಡಿಯೋದ್ರಿಂದ ಅನೇಕ ರೋಗಗಳಿಗೆ ನಾವೇ ಆಹ್ವಾನ ನೀಡಿದಂತಾಗುತ್ತದೆ.

    ಟಿಡಿಎಸ್ ಎಂದರೇನು?
    ಕುಡಿಯುವ ನೀರಿನ ಗುಣಮಟ್ಟವನ್ನ ಅಳತೆ ಮಾಡಲು ಟಿಡಿಎಸ್(ಟೋಟಲ್ ಡಿಸ್ಲಾಡ್ ಸಾಲಿಡ್) ಉಪಕರಣವನ್ನ ಬಳಕೆ ಮಾಡಲಾಗುತ್ತದೆ. ನಾವು ಕುಡಿಯುವ ನೀರಿನ ಗುಣಮಟ್ಟದಲ್ಲಿ ಟಿಡಿಎಸ್ ಪ್ರಮಾಣ ಕನಿಷ್ಠ 50 ಗರಿಷ್ಠ 100 ಇರಬೇಕು. ಈ ಪ್ರಮಾಣ ಟಿಡಿಎಸ್ ಇರುವ ನೀರು ಕುಡಿಯಲು ಯೋಗ್ಯವಾದ ನೀರಾಗಿದೆ.

    ಸರಿಯಾದ ನಿರ್ವಹಣೆಯಾಗ್ತಿಲ್ಲ:
    ಬಿಬಿಎಂಪಿ ಅವರು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ, ಕೇವಲ 500 ರೂ. ನಲ್ಲಿ ಟಿಡಿಎಸ್ ಪ್ರಮಾಣವನ್ನ ಸರಿಯಾಗಿ ಮಾಡುವ ಶುದ್ಧೀಕರಣ ಉಪಕರಣವನ್ನ ಆಳವಡಿಸಬಹುದು. ಆದರೆ ಬಿಬಿಎಂಪಿಯವರು ಆ ಕೆಲಸ ಮಾಡುತ್ತಿಲ್ಲ. ಟಿಡಿಎಸ್ ಪ್ರಮಾಣ 10 ಕ್ಕಿಂತ ಕಡಿಮೆ ಇರೋ ಆರ್‍ಓ ಪ್ಲಾಂಟ್ ಗಳು ತುಂಬಾ ಇದೆ. ತಮ್ಮ ಫೋಟೋ ಹಾಕಿಸಿಕೊಂಡು ಪ್ರಚಾರ ಪಡೆಯೋ ನಾಯಕರು ನೀರಿನ ಗುಣಮಟ್ಟವನ್ನ ಉನ್ನತಿ ಮಾಡೋ ಕೆಲಸ ಮಾಡಬೇಕು. ಕೋಟ್ಯಂತ ರೂ. ವೆಚ್ಚದಲ್ಲಿ ಶುದ್ಧ ನೀರಿನ ಘಟಕಗಳನ್ನ ತೆರೆಯಲಾಗಿದೆ. ಆದರೆ ಸರಿಯಾದ ನಿರ್ವಹಣೆ ಆಗುತ್ತಿಲ್ಲ ಎಂದು ವಾಟರ್ ಎಕ್ಸ್ ಪರ್ಟ್ ಲೋಕೇಶ್ ಹಾಗೂ ಖಾಸಗಿ ವಾಟರ್ ಪ್ಲಾಂಟ್‍ನ ಜಯರಾಜ್ ನಾಯ್ಡು ಹೇಳುತ್ತಾರೆ.

    ಒಟ್ಟಿನಲ್ಲಿ ಇನ್ನು ಮುಂದಾದರೂ ಬಿಬಿಎಂಪಿಯ ನೂತನ ಮೇಯರ್ ಹಾಗೂ ಕಮಿಷನರ್ ಸೂಕ್ತ ಕ್ರಮ ಕೈಗೊಂಡು ಜನರ ಹಿತ ಕಾಪಡುತ್ತಾರಾ ಎಂಬುದನ್ನು ಕಾದು ನೋಡಬೇಕು.

    https://www.youtube.com/watch?v=HGSERFF2lSI

  • ಕೃಷಿಗೆ ನೀರು ಬಳಸೋದನ್ನ ನಿಲ್ಲಿಸಿ ಗ್ರಾಮಸ್ಥರಿಗೆ ಉಚಿತ ನೀರು ಕೊಟ್ಟ ರೈತ!

    ಕೃಷಿಗೆ ನೀರು ಬಳಸೋದನ್ನ ನಿಲ್ಲಿಸಿ ಗ್ರಾಮಸ್ಥರಿಗೆ ಉಚಿತ ನೀರು ಕೊಟ್ಟ ರೈತ!

    ಚಿಕ್ಕಬಳ್ಳಾಪುರ: ಜಿಲ್ಲೆಯ ಮಂಚನಬೆಲೆ ಗ್ರಾಮದ ರೈತರೊಬ್ಬರು ಕುಡಿಯಲು ನೀರು ಕೊಟ್ಟು ಭಗೀರಥ ಎನಿಸಿಕೊಂಡಿದ್ದಾರೆ. ಗ್ರಾಮದ ರೈತ ಲಕ್ಷ್ಮಣ್ ಕೃಷಿಗಾಗಿ ಕೊರೆಸಿದ್ದ ಕೊಳವೆ ಬಾವಿಯಿಂದ ಊರಿನ ಜನರಿಗೆ ಉಚಿತವಾಗಿ ನೀರು ಕೊಡುತ್ತಿದ್ದಾರೆ.

    ಜಿಲ್ಲಾ ಕೇಂದ್ರದಿಂದ ಕೂಗಳತೆ ದೂರದ ಮಂಚನಬಲೆ ಗ್ರಾಮದಲ್ಲಿ ನೀರೇ ಇಲ್ಲ. ಜಿಲ್ಲಾಡಳಿತದಿಂದ ಸಾವಿರಾರು ಅಡಿ ಆಳ ಕೊರೆಸಿರೋ ಕೊಳವೆ ಬಾವಿಗಳೆಲ್ಲ ಬತ್ತಿ ಹೋಗಿವೆ. ಹೀಗಾಗಿ ವಾರಕ್ಕೊಮ್ಮೆ ಗ್ರಾಮಪಂಚಾಯ್ತಿಯಿಂದ ಏರಿಯಾವಾರು ತಲಾ ಮನೆಗೆ 4-5 ಬಿಂದಿಗೆ ನೀರು ಬಿಡಲಾಗುತ್ತಿದೆ. ಆದರೆ ಒಂದು ವಾರಕ್ಕೆ 4-5 ಬಿಂದಿಗೆಯ ನೀರು ಕನಿಷ್ಠ ಕುಡಿಯೋಕು ಸಾಕಾಗುತ್ತಿಲ್ಲ. ಹೀಗಾಗಿ ಗ್ರಾಮದ ರೈತ ಲಕ್ಷ್ಮಣ್ ಎಂಬವರು ತಾನು ಕೃಷಿಕಾಯಕ ಮಾಡಲು ಕೊರೆಸಿದ್ದ ಕೊಳವೆಬಾವಿಯನ್ನ ಊರಿಗೆ ಮೀಸಲಿಟ್ಟಿದ್ದು ಪ್ರತಿದಿನ ಗ್ರಾಮಸ್ಥರಿಗೆ ಉಚಿತವಾಗಿ ನೀರು ಪೂರೈಸುತ್ತಿದ್ದಾರೆ.

    ಇಡೀ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಜನಸಂಖ್ಯೆ ಹೊಂದಿರೋ ಮಂಚನಬಲೆ ಗ್ರಾಮದಲ್ಲಿ ಗ್ರಾಮಪಂಚಾಯ್ತಿ ವತಿಯಿಂದ 1,000 ಅಡಿಯಿಂದ 2,000 ಅಡಿಯವರೆಗೂ ಕೊರೆಸಲಾಗಿರುವ ಎಲ್ಲಾ ಕೊಳವೆಬಾವಿಗಳು ಸಂಪೂರ್ಣ ಬತ್ತಿ ಹೋಗಿವೆ. ಟ್ಯಾಂಕರ್ ಮೂಲಕ ವಾರಕ್ಕೊಮ್ಮೆ ಸರಬರಾಜು ಮಾಡುತ್ತಿರೋ 4-5 ಬಿಂದಿಗೆ ನೀರು ಏನಕ್ಕೂ ಸಾಕಾಗುತ್ತಿಲ್ಲ ಎಂದು ಜನ ಗ್ರಾಮಪಂಚಾಯ್ತಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಕೂಡ ನಡೆಸಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಯವರನ್ನ ಕೇಳಿದರೆ ಸಮಸ್ಯೆ ಗಮನಕ್ಕೆ ಬಂದಿದೆ, ಆ ಗ್ರಾಮದಲ್ಲಿ ಕೊಳವೆಬಾವಿ ಕೊರೆದ್ರೂ ನೀರು ಸಿಗುತ್ತಿಲ್ಲ. ಅತೀ ಶೀಘ್ರವೇ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.

    ಒಟ್ಟಿನಲ್ಲಿ ಇಡೀ ಜಿಲ್ಲೆಯ ಹಲವು ಹಳ್ಳಿಗಳಲ್ಲಿ ಇದೇ ಪರಿಸ್ಥಿತಿ ಇದ್ದು ಜನ ನೀರಿಗಾಗಿ ಪರದಾಡುತ್ತಿದ್ದಾರೆ. ನದಿ, ನಾಲೆಗಳೂ ಇಲ್ಲ, ಇತ್ತ ಕೆರೆ ಕುಂಟೆಗಳಲ್ಲಿ ನೀರಿಲ್ಲ. ಮತ್ತೊಂದೆಡೆ ಮಳೆಯೂ ಬರುತ್ತಿಲ್ಲ. ಇದೆಲ್ಲದರ ನಡುವೆ ಕೊಳವೆಬಾವಿ ಕೊರೆದು ನೀರು ಕೊಡೋಣ ಅಂದರೆ ಸಾವಿರ ಅಲ್ಲ, ಎರಡು ಸಾವಿರ ಅಡಿ ಕೊರೆದ್ರೂ ನೀರೇ ಸಿಗುತ್ತಿಲ್ಲ. ಏನು ಮಾಡೋದು ಎಂದು ಜಿಲ್ಲಾಡಳಿತ ಕೂಡ ತಲೆ ಕೆಡಸಿಕೊಂಡಿದ್ದರೆ, ಇತ್ತ ಮಂಚನಬಲೆ ಗ್ರಾಮಕ್ಕೆ ಭಗೀರಥನಂತೆ ರೈತ ಲಕ್ಷಣ್ ಸದ್ಯ ಫ್ರೀ ವಾಟರ್ ಸಪ್ಲೈ ಮಾಡುತ್ತಿದ್ದು ಜನ ನಿಟ್ಟುಸಿರುಬಿಡುವಂತಾಗಿದೆ.