Tag: Drinking Water Unit

  • ಅಶುದ್ಧಗೊಂಡಿದೆ ಶುದ್ಧ ಕುಡಿಯುವ ನೀರಿನ ಘಟಕ

    ಅಶುದ್ಧಗೊಂಡಿದೆ ಶುದ್ಧ ಕುಡಿಯುವ ನೀರಿನ ಘಟಕ

    ಮಡಿಕೇರಿ: ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಒಂದು. ಆದರೆ ಮಡಿಕೇರಿ ತಾಲೂಕಿನ ಕರಿಕೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಾಣಗೊಂಡ ಶುದ್ಧ ಕುಡಿಯುವ ನೀರಿನ ಘಟಕದ ಕಾಮಗಾರಿ ಅಪೂರ್ಣವಾಗಿ, ಶವಾಗಾರದಂತೆ ಬಾಗಿಲು ಮುಚ್ಚಿದೆ.

    ಶುದ್ಧ ಕುಡಿಯುವ ನೀರಿನ ಅಶುದ್ಧ ಘಟಕವೊಂದನ್ನು ಕರಿಕೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಳ್ಳುಕೊಚ್ಚಿ ಮರಾಠಿ ಮೂಲೆ ಪ್ರದೇಶದಲ್ಲಿ ಇದೆ. ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕರಿಕೆ ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ಮಂಜೂರಾಗಿದ್ದು, ಇದಕ್ಕೆ ಸ್ಥಳೀಯ ಗ್ರಾಮ ಪಂಚಾಯ್ತಿ ಜಾಗ ಗುರುತಿಸಿ ಒಂದೂವರೆ ವರ್ಷಗಳ ಹಿಂದೆ ಘಟಕ ಸ್ಥಾಪನೆ ಮಾಡಿತ್ತು. ಆದರೆ ಈ ನೀರಿನ ಘಟಕದ ಬಾಗಿಲು ಮುಚ್ಚಲಾಗಿದೆ.

    ಭಾಗಮಂಡಲ-ಕರಿಕೆ ಅಂತರರಾಜ್ಯ ಹೆದ್ದಾರಿ ಬದಿಯಲ್ಲೇ ಈ ಶುದ್ಧ ಕುಡಿಯುವ ನೀರಿನ ಘಟಕವಿದ್ದು ರಸ್ತೆ ಅಗಲೀಕರಣ ಸಂದರ್ಭ ಅಡಚಣೆಯಾಗಿ ತೆರವುಗೊಳಿಸುವ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ಅರಿವಿದ್ದರೂ ಕೂಡ ನಿರ್ಮಾಣವಾಗಿರುವ ನೀರಿನ ಘಟಕ ಪ್ರಸ್ತುತ ನಿಷ್ಪ್ರಯೋಜಕವಾಗಿದೆ. ಇದರಿಂದದಾಗಿ ಈ ಘಟಕದ ನೀರು ಬಳಸಲು ಯೋಗ್ಯವಾಗಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

  • ಹಣ ಹಾಕಿದ್ರೂ ನೀರು ಬರಲ್ಲ- ಬಾಗಿಲು ಮುಚ್ಚಿತು ಕುಡಿಯುವ ನೀರಿನ ಘಟಕ

    ಹಣ ಹಾಕಿದ್ರೂ ನೀರು ಬರಲ್ಲ- ಬಾಗಿಲು ಮುಚ್ಚಿತು ಕುಡಿಯುವ ನೀರಿನ ಘಟಕ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೆಗಡೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗುನಗನಕೊಪ್ಪ ಎಸ್.ಸಿ ಕೇರಿಯಲ್ಲಿ 2017-18ನೇ ಸಾಲಿನಲ್ಲಿ ಸ್ಥಾಪನೆಗೊಂಡಿದ್ದ ಶುದ್ಧ ಕುಡಿಯುವ ನೀರಿನ ಘಟಕ ಕೇವಲ ಒಂದೇ ವರ್ಷದಲ್ಲಿ ಬಾಗಿಲು ಮುಚ್ಚಿದೆ. ಸಮರ್ಪಕವಾಗಿ ಕಾರ್ಯ ನಿರ್ವಹಿಸದೆ, ಸಾರ್ವಜನಿಕರಿಗೆ ಉಪಯೋಗಕ್ಕೂ ಬಾರದೆ ಹಾಳು ಬಿದ್ದಿದೆ.

    ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯಿಂದ 8.5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಈ ಘಟಕ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ ಸರ್ಕಾರ ಹೆಗಡೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಮಂಜೂರು ಮಾಡಿತ್ತು.

    ಸಾರ್ವಜನಿಕರು 1 ರೂ. ನಾಣ್ಯವನ್ನು ಬಳಸಿ 20 ಲೀಟರ್ ಶುದ್ಧ ಕುಡಿಯುವ ನೀರನ್ನು ಈ ಘಟಕದಿಂದ ಪಡೆಯಲು ಸೌಲಭ್ಯವಿತ್ತು. ಆದರೆ, ಇದರ ಜವಾಬ್ದಾರಿಯನ್ನು ಪಡೆದ ಇಲಾಖೆ ಮಾತ್ರ ಶುದ್ಧ ಕುಡಿಯುವ ನೀರಿನ ಘಟಕದ ಪ್ರಯೋಜನವನ್ನು ಸಾರ್ವಜನಿಕರಿಗೆ ದೊರೆಯದಂತೆ ಮಾಡಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.

    ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಾಣ ಮಾಡಿ ವರ್ಷಗಳೇ ಕಳೆದಿದೆ. ಇದುವರೆಗೂ ಜನರಿಗೆ ಮಾತ್ರ ಇದರ ಪ್ರಯೋಜನ ಸರಿಯಾಗಿ ದೊರೆಯುತ್ತಿಲ್ಲ. ಅಲ್ಲದೇ ಈ ಘಟಕಕ್ಕೆ ನೀರಿನ ಸರಬರಾಜು ಸಮರ್ಪಕವಾಗಿ ನಡೆಯುತ್ತಿಲ್ಲ. ನೀರಿನ ಘಟಕದ ನಿರ್ಮಾಣಕ್ಕೂ ಪೂರ್ವದಲ್ಲೇ ಈ ಬಗ್ಗೆ ಚಿಂತಿಸಿ, ಸೂಕ್ತ ಸ್ಥಳವನ್ನು ನಿಗದಿಗೊಳಿಸಬಹುದಿತ್ತು ಅಥವಾ ಪರ್ಯಾಯವಾಗಿ ಈಗಿರುವ ಸ್ಥಳದಲ್ಲೇ ಕೊಳವೆಬಾವಿ ಕೊರೆಸಿ, ಕುಡಿಯುವ ನೀರಿನ ಘಟಕಕ್ಕೆ ನೀರಿನ ಪೂರೈಕೆ ಮಾಡಬಹುದಿತ್ತು. ಈ ಕುರಿತು ಸಂಬಂಧಿಸಿದ ಇಲಾಖೆ ಸೂಕ್ತ ಕ್ರಮ ಕೈಗೊಂಡು ಆದಷ್ಟು ಶೀಘ್ರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಪ್ರಯೋಜನವನ್ನು ಸಾರ್ವಜನಿಕರಿಗೆ ಲಭಿಸುವಂತೆ ಮಾಡಬೇಕೆಂಬುದು ಸ್ಥಳೀಯರ ಒತ್ತಾಯವಾಗಿದೆ.

    ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ನಿರ್ಮಾಣಗೊಂಡಿರುವ ಈ ಘಟಕವನ್ನು ಇದುವರೆಗೂ ಗ್ರಾಮ ಪಂಚಾಯ್ತಿಗೆ ಹಸ್ತಾಂತರ ಮಾಡಿಲ್ಲ. ಹಸ್ತಾಂತರದ ಬಳಿಕವೇ ಪಂಚಾಯ್ತಿ ನಿರ್ವಹಣೆ ಮಾಡಬೇಕೆಂಬ ನಿಬಂಧನೆ ಇದೆ. ಇಲಾಖೆ ಇದೀಗ ಕೊಳವೆಬಾವಿ ಕೊರೆಸುವ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ, ಕಾಮಗಾರಿಗೆ ಚಿಂತನೆ ನಡೆಸಲಾಗಿದೆ ಎಂದು ಹೆಗಡೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಂಜುನಾಥ್ ಪಟಗಾರ ತಿಳಿಸಿದರು.

    ನಿರ್ಮಾಣಗೊಂಡು ವರ್ಷ ಕಳೆದರು ಸಾರ್ವಜನಿಕರಿಗೆ ನೀರಿನ ಘಟಕದ ಪ್ರಯೋಜನ ದೊರೆಯುತ್ತಿಲ್ಲ. ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾಗುತ್ತದೆ. ಅಂತಹ ಸಂದರ್ಭದಲ್ಲಿ ಸ್ಥಳೀಯರು ಈ ಘಟಕದ ಪ್ರಯೋಜನವನ್ನು ಪಡೆಯುವಂತಾಗಲು ಸಂಬಂಧಿಸಿದ ಇಲಾಖೆ ಶೀಘ್ರದಲ್ಲಿ ಇದನ್ನು ಬಳಕೆಗೆ ಬರುವಂತೆ ಮಾಡಬೇಕಿದೆ ಎಂದು ಹೆಗಡೆ ನಿವಾಸಿ ಲಿಂಗು ಗದ್ದೆಮನೆ ಅವರು ಹೇಳಿದರು.