Tag: Drinking Water Grants

  • ಕುಡಿಯುವ ನೀರಿನ ಅನುದಾನ ಅಕ್ರಮದ ತನಿಖೆಗೆ ಸದನ ಸಮಿತಿ ರಚನೆ

    ಕುಡಿಯುವ ನೀರಿನ ಅನುದಾನ ಅಕ್ರಮದ ತನಿಖೆಗೆ ಸದನ ಸಮಿತಿ ರಚನೆ

    ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆಯ ಗ್ರಾಮೀಣ ಕುಡಿಯುವ ನೀರಿನ ಅನುದಾನದಲ್ಲಿ ನಡೆದಿರುವ ಅಕ್ರಮ ಬಗ್ಗೆ ತನಿಖೆಗೆ ರಾಜ್ಯ ಸರ್ಕಾರ ಮುಂದಾಗಿದೆ. ವಿಧಾನ ಪರಿಷತ್ ಸದಸ್ಯರ ಒಕ್ಕೊರಲ ಒತ್ತಾಯಕ್ಕೆ ಮಣಿದ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅಕ್ರಮ ತನಿಖೆಗೆ ಸದನ ಸಮಿತಿ ನೇಮಕ ಮಾಡಲು ಒಪ್ಪಿಗೆ ನೀಡಿದರು.

    ವಿಧಾನ ಪರಿಷತ್ ಇಂದಿನ ಕಲಾಪದ ಪ್ರಶ್ನೋತ್ತರ ಅವಧಿ ವೇಳೆ ಬಿಜೆಪಿ ಸದಸ್ಯ ರಘನಾಥ್ ಮಲ್ಕಾಪುರೆ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಕುಡಿಯುವ ನೀರು ಸೇರಿದಂತೆ ವಿವಿಧ ವಿಭಾಗಕ್ಕೆ ಬಿಡುಗಡೆಯಾದ ಅನುದಾನ ಬಳಕೆಯಲ್ಲಿ ಅಕ್ರಮ ಆಗಿದೆ. ಸುಮಾರು 600 ಕೋಟಿ ರೂ.ಗೂ ಹೆಚ್ಚು ಅಕ್ರಮ ಆಗಿದೆ ಅಂತ ಆರೋಪ ಮಾಡಿದರು. ಅಕ್ರಮದಲ್ಲಿ ಬ್ಯಾಂಕ್ ಅಧಿಕಾರಿಗಳು, ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದಾರೆ. ಅಕ್ರಮ ತನಿಖೆಗೆ ಸದನ ಸಮಿತಿ ನೇಮಕ ಮಾಡಬೇಕು ಅಂತ ಸಚಿವರನ್ನ ಒತ್ತಾಯ ಮಾಡಿದರು.

    ಈ ವೇಳೆ ಮಾತನಾಡಿದ ಸಚಿವ ಈಶ್ವರಪ್ಪ, ಯಾರನ್ನು ರಕ್ಷಣೆ ಮಾಡುವ ಕೆಲಸ ಸರ್ಕಾರ ಮಾಡುವುದಿಲ್ಲ. ಅಧಿಕಾರಿಗಳು ಇಲಾಖೆ ಸೂಚನೆ ನೀಡದೆ ಸಿಂಡಿಕೇಟ್ ಬ್ಯಾಂಕ್‍ನಲ್ಲಿ ಸುಮಾರು 90 ಖಾತೆ ಓಪನ್ ಮಾಡಿದ್ದಾರೆ. ಈಗಾಗಲೇ ಅಕ್ರಮದ ಕುರಿತು ತನಿಖೆ ಕೂಡ ಆಗಿದೆ. 200 ಕೋಟಿ ರೂ.ಗೂ ಅಧಿಕವಾಗಿ ಇದರಲ್ಲಿ ಅಕ್ರಮ ಆಗಿದೆ ಅಂತ ಮಾಹಿತಿ ನೀಡಿದರು. ಸರ್ಕಾರದ ಅನುಮತಿ ಇಲ್ಲದೆ ಖಾತೆ ಪ್ರಾರಂಭ ಆಗಿದೆ. ಡಮ್ಮಿ ಅಕೌಂಟ್ ಅಂತ ಖಾತೆಯಲ್ಲಿ 495 ಕೋಟಿ ರೂ. ಇಟ್ಟಿದ್ದಾರೆ. ಡಮ್ಮಿ ಅಕೌಂಟ್ ಮಾಡಿಡುವುದಕ್ಕೆ ಅನುಮತಿ ಪಡೆದಿಲ್ಲ. ಈ ಬಗ್ಗೆ ತನಿಖೆ ಒಂದು ಸೂಕ್ತ ತನಿಖೆ ಮಾಡಿಸುತ್ತೇವಿ ಅಂತ ತಿಳಿಸಿದರು.

    ಸಚಿವ ಈಶ್ವರಪ್ಪ ಮಾತಿಗೆ ಬಹುತೇಕ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಬಿಜೆಪಿಯ ರವಿಕುಮಾರ್, ಆಯನೂರು ಮಂಜುನಾಥ್ ಪ್ರಾರಂಭದಲ್ಲೇ ವಿರೋಧ ಮಾಡಿದರು. ಆಯನೂರು ಮಂಜುನಾಥ್ ಮಾತನಾಡಿ, ಅನುಮತಿ ಇಲ್ಲದೆ ಡಮ್ಮಿ ಅಕೌಂಟ್ ಪ್ರಾರಂಭ ಮಾಡುತ್ತಾರೆ ಅಂದ್ರೆ ಇದು ದೊಡ್ಡ ಅಕ್ರಮ. ಬ್ಯಾಂಕ್‍ನವರು ವಿರುದ್ಧವೂ ತನಿಖೆ ಮಾಡಿ ಅಂತ ಒತ್ತಾಯಿಸಿದರು.

    ಆಯನೂರು ಮಂಜುನಾಥ್ ಅವರ ಮಾತಿಗೆ ಇಡೀ ಸದನದ ಸದಸ್ಯರು ಪಕ್ಷಾತೀತವಾಗಿ ಸದನ ಸಮಿತಿ ರಚನೆ ಮಾಡಿವಂತೆ ಒತ್ತಾಯ ಮಾಡಿದರು. ಸದಸ್ಯರ ಮಾತಿಗೆ ಒಪ್ಪಿದ ಸಚಿವ ಈಶ್ವರಪ್ಪ ಅಕ್ರಮ ತನಿಖೆಗಾಗಿ ಸದನ ಸಮಿತಿ ರಚನೆ ಮಾಡುವುದಾಗಿ ಘೋಷಣೆ ಮಾಡಿದರು.