Tag: drinkers

  • ಕೊರೊನಾ ಬರುತ್ತೆ ಊದಲ್ಲ ಅಂದ್ರೆ ಊದಲ್ಲ- ಕುಡುಕರ ಪಟ್ಟು

    ಕೊರೊನಾ ಬರುತ್ತೆ ಊದಲ್ಲ ಅಂದ್ರೆ ಊದಲ್ಲ- ಕುಡುಕರ ಪಟ್ಟು

    ಬೆಂಗಳೂರು: ಕೊರೊನಾ ಎಫೆಕ್ಟ್, ಕುಡುಕರಿಗೂ ತಟ್ಟಿದ್ದು, ಮದ್ಯಪಾನ ಮಾಡಿ ವಾಹನ ಓಡಿಸುವವರು ಟ್ರಾಫಿಕ್ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದಾರೆ. ಸರ್.. ನಮ್ಮನ್ನ ಬಿಟ್ಬಿಡಿ. ಡ್ರಿಂಕ್ ಆಂಡ್ ಡ್ರೈವ್ ಮಷೀನ್‍ಗೆ ಊದಿದ್ರೆ ನಮ್ಗೂ ಕೊರೊನಾ ವೈರಸ್ ಬರುವ ಸಾಧ್ಯತೆ ಇದೆ. ನಾವು ಊದಲ್ಲ ಅಂದ್ರೆ ಊದಲ್ಲ ಎಂದು ಪಟ್ಟು ಹಿಡಿದಿದ್ದಾರೆ.

    ಬೆಂಗಳೂರಿನ ಹಲಸೂರು ರಸ್ತೆಯಲ್ಲಿ ಟ್ರಾಫಿಕ್ ಪೊಲೀಸರು ಡ್ರಿಂಕ್ ಆ್ಯಂಡ್ ಡ್ರೈವ್ ಪ್ರಕರಣಗಳ ಕುರಿತು ತಪಾಸಣೆ ಮಾಡುತ್ತಿದ್ದ ವೇಳೆ ಕೆಲವರು ಈ ರೀತಿ ಹೇಳುತ್ತಿದ್ದರು. ಕೆಲವರು ಮಷೀನ್‍ಗೆ ಊದಿ ಪೊಲೀಸರಿಗೆ ಸಹಕರಿಸಿದರೆ, ಇನ್ನೂ ಕೆಲವರು ಬಿಟ್ಬಿಡಿ ಸರ್.. ಊದಿದರೆ ನಮಗೂ ಕೊರೊನಾ ಬರುವ ಸಾಧ್ಯತೆ ಇದೆ ಎನ್ನುತ್ತಿದ್ದರು.

    ಉಸಿರಾಟ ಹಾಗೂ ಸ್ಪರ್ಶದಿಂದ ವೈರಸ್ ಹರಡಬಹುದು ಎಂಬ ಆತಂಕದಿಂದ ತಪಾಸಣಾ ಮಷೀನ್ ಗೆ ಊದಲು ಹಿಂದೇಟು ಹಾಕುತ್ತಿದ್ದಾರೆ. ಕೆಲ ದಿನಗಳಿಂದ ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆಯನ್ನು ಸಂಚಾರಿ ಪೊಲೀಸರು ತಾತ್ಕಾಲಿಕವಾಗಿ ನಿಲ್ಲಿಸಿದ್ದರು. ಹೀಗಾಗಿ ಕೆಲ ಕುಡುಕರು ಫುಲ್ ಬಿಂದಾಸ್ ಆಗಿದ್ದರು. ಆದರೆ ಸಂಚಾರಿ ಪೊಲೀಸರು ಇದೀಗ ಮತ್ತೆ ಫೀಲ್ಡ್ ಗೆ ಇಳಿದಿದ್ದು, ವಾಹನ ಸವಾರರು ಸಂಚಾರಿ ಪೊಲೀಸರಿಗೆ ಸಹಕರಿಸುತ್ತಿಲ್ಲ. ಹೀಗಾಗಿ ರಾತ್ರಿ ಕುಡುಕರನ್ನು ಮನವೋಲಿಸಿ ಊದಿಸೋದೇ ಸಂಚಾರಿ ಪೊಲೀಸರಿಗೆ ದೊಡ್ಡ ಕೆಲಸವಾಗಿದೆ.

  • ಬಾರ್ ಹಠಾವೋ ಮಠ ಬಚಾವೋ- ಬಾರ್ ವಿರುದ್ಧ ಬೀದಿಗಿಳಿದ ಮಹಿಳೆಯರು

    ಬಾರ್ ಹಠಾವೋ ಮಠ ಬಚಾವೋ- ಬಾರ್ ವಿರುದ್ಧ ಬೀದಿಗಿಳಿದ ಮಹಿಳೆಯರು

    ಗದಗ: ಅದು ಮುದ್ರಣಕಾಶಿ. ಸುಸಂಸ್ಕೃತರ ನೆಲ. ಆದರೀಗ ಇಲ್ಲಿ ಬಾರ್ ಗಳ ದರ್ಬಾರ್ ಜೋರು. ಹೀಗಾಗಿ ಬಾರ್ ಹಠಾವೋ ಮಠ ಬಚಾವೋ ಎಂದು ಬುಧವಾರದಂದು ಬಾರ್ ವಿರುದ್ಧ ಗದಗದ ಮಹಿಳೆಯರು ಸಿಡಿದೆದ್ದಿದ್ದರು.

    ಹೌದು. ಗದಗನ ತೋಂಟದಾರ್ಯ ಮಠದ ಸಮೀಪವೇ ಹಲವಾರು ಬಾರ್ ಗಳಿವೆ. ಅದರಿಂದ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದ್ದು, ಮಠದ ಬಳಿಯೇ ಬಾರ್ ಇರುವುದರಿಂದ ಭಕ್ತರಿಗೂ ಸಹ ಇರುಸು ಮುರುಸು ಉಂಟಾಗುತ್ತಿದೆ. ಕುಡುಕರ ಗಲಾಟೆಗೆ ಬೇಸತ್ತ ಆ ಬಾರ್ ಸುತ್ತಲಿನ ಸಾರ್ವಜನಿಕರು, ಮಹಿಳೆಯರು ಬುಧವಾರದಂದು ರೊಚ್ಚಿಗೆದ್ದಿದ್ದರು. ಅಬಕಾರಿ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತ ಬಾರ್ ಹಠಾವೋ ಮಠ ಬಾಚಾವೋ ಅಂತ ಪ್ರತಿಭಟನೆ ಮಾಡಿದ್ದಾರೆ. ಅಲ್ಲದೆ ಜಿಲ್ಲಾಧಿಕಾರಿಗಳ ಮುಂದೆ ಮಹಿಳೆಯರು ಕಣ್ಣೀರು ಸುರಿಸಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

    ಸುತ್ತಮುತ್ತಲಿನ ನಿವಾಸಿಗಳು ಮತ್ತು ಮಠದ ಪಕ್ಕದಲ್ಲೇ ಇರೋ ಮಹಿಳಾ ಹಾಸ್ಟೆಲ್‍ಗೂ ಕುಡುಕರ ಕಾಟ ತಡೆಯಲು ಆಗುತ್ತಿಲ್ಲ. ಅಲ್ಲದೆ ಬಾರ್ ಗಳಲ್ಲಿ ಕುಡಿದು ಬರೋ ಗಂಡಸರು ತಂದೆ, ತಾಯಿ, ಹೆಂಡತಿ ಅನ್ನೋದನ್ನೂ ನೋಡದೇ ಹೊಡೆದು ಹಿಂಸಿಸ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಈ ನರಕದಿಂದ ಸಿಟ್ಟಿಗೆದ್ದ ಸ್ಥಳೀಯರು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬಾರ್ ಹಠಾವೋ ಮಠ ಬಚಾವೋ ಹೋರಾಟ ಹಮ್ಮಿಕೊಂಡರು. ಪ್ರತಿಭಟನಾ ಮೆರವಣಿಗೆಗೆ ತೋಂಟದಾರ್ಯ ಮಠದ ತೋಂಟದ ಸಿದ್ದರಾಮ ಶ್ರೀಗಳು ಚಾಲನೆ ನೀಡಿದರು. ಮೆರವಣಿಗೆಯುದ್ದಕ್ಕೂ ಸಹ ಅಬಕಾರಿ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದರೆ ಉಗ್ರ ಹೊರಾಟ ನಡೆಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಗಳಿಗೂ ಎಚ್ಚರಿಕೆ ನೀಡಿದ್ದಾರೆ.

    ಪ್ರತಿಭಟನೆಯಲ್ಲಿ ಮುಸ್ಲಿಂ ಸಮಾಜದ ಧರ್ಮಗುರುಗಳೂ ಸಹ ಭಾಗವಹಿಸಿದ್ದು ವಿಶೇಷವಾಗಿತ್ತು. ಹಿಂದೂ ಮುಸ್ಲಿಂ ಎಂದು ಬೇದಭಾವ ಮಾಡದೆ ಎಲ್ಲಾ ಸ್ಥಳೀಯರು ಒಗ್ಗೂಡಿ ತೋಂಟದಾರ್ಯ ಮಠದ ಸುತ್ತಮುತ್ತಲಿನ ಬಾರ್ ಗಳನ್ನು ಸ್ಥಳಾಂತರಗೊಳಿಸಿ ಅಲ್ಲಿನ ಜನರನ್ನು ನರಕದಿಂದ ಪಾರು ಮಾಡಿ ಮನವಿ ಸಲ್ಲಿಸಿದ್ದಾರೆ.