Tag: drama

  • ಸಮ್ಮಿಶ್ರ ಸರ್ಕಾರ ಬೀಳುತ್ತೆ ಅನ್ನೋದು ಬರೀ ಡ್ರಾಮಾ: ಎಂಟಿಬಿ ನಾಗರಾಜ್

    ಸಮ್ಮಿಶ್ರ ಸರ್ಕಾರ ಬೀಳುತ್ತೆ ಅನ್ನೋದು ಬರೀ ಡ್ರಾಮಾ: ಎಂಟಿಬಿ ನಾಗರಾಜ್

    ಚಿಕ್ಕಬಳ್ಳಾಪುರ: ಸಮ್ಮಿಶ್ರ ಸರ್ಕಾರ ಬೀಳುತ್ತಿದೆ ಎನ್ನುವುದು ಒಂದು ದೊಡ್ಡ ಡ್ರಾಮಾ. ಕಳೆದ ಆರು ತಿಂಗಳಿಂದ ಸರ್ಕಾರ ಬೀಳಿಸುವ ಅಪರೇಷನ್ ಕಮಲ ಆರಂಭವಾಗಿದೆ. ದೀಪಾವಳಿ, ಯುಗಾದಿ ಶಿವರಾತ್ರಿ ಎಂದು ಹೇಳಿಕೊಂಡೇ ಬಂದಿದ್ದು, ಈಗ ಲೋಕಸಭಾ ಚುನಾವಣೆಯ ನಂತರ ಮತ್ತೆ ಆರಂಭವಾಗಿದೆ ಎಂದು ವಸತಿ ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.

    ಚಿಕ್ಕಬಳ್ಳಾಪುರ ತಾಲೂಕಿನ ಮಂಚನಬಲೆ ಗ್ರಾಮದಲ್ಲಿ ಬಿರೇಶ್ವರ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎಂಟಿಬಿ, ಸಮ್ಮಿಶ್ರ ಸರ್ಕಾರ ಯಾವ ಕಾರಣಕ್ಕೂ ಬೀಳೋದಿಲ್ಲ. 5 ವರ್ಷಗಳ ಕಾಲ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಸುಭದ್ರ ಆಡಳಿತ ನೀಡಲಿದ್ದೇವೆ ಎಂದರು.

    ಶಾಸಕ ರಮೇಶ್ ಜಾರಕಿಹೊಳಿ ಜೊತೆ 10 ಮಂದಿ ಶಾಸಕರ ಸಾಮೂಹಿಕ ರಾಜೀನಾಮೆ ನೀಡುವ ಹೇಳಿಕೆಗೆ ಪ್ರತಿಕ್ರಿಯಿಸಿದ ಎಂಟಿಬಿ, ಹೌದು 10 ಜನ ಸೇರಿ ಸಾಮೂಹಿಕವಾಗಿ ರಾಜೀನಾಮೆ ಕೊಡುವುದಾಗಿ ಹೇಳಿದ್ದಾರೆ. ಆದರೆ ಇವರು ಹೇಳೋದನ್ನು ಏನೂ ನಂಬಲು ಸಾಧ್ಯವಿಲ್ಲ ಕಾದು ನೋಡಬೇಕು. ಬಹಳ ದಿನಗಳಿಂದ ಈ ಡ್ರಾಮಾ ಮಾಡ್ತಿದ್ದಾರೆ. ಇದು ಬಣ್ಣ ಇಲ್ಲದ ಡ್ರಾಮಾ. ಬಣ್ಣ ಹಾಕ್ಕೊಂಡು ಡ್ರಾಮಾ ಮಾಡೋದು ಬೇರೆ. ಮೇ 23ರ ನಂತರ ಬಣ್ಣ ಇಲ್ಲದ ಇವರ ಡ್ರಾಮಾ ಬೀದಿಗೆ ಬರುತ್ತೆ ಎಂದರು.

    ಈ ಡ್ರಾಮಾದಲ್ಲಿ ಪಾತ್ರಕ್ಕೆ ಅನುಗುಣವಾಗಿ ಎಲ್ಲರೂ ಡ್ರಾಮಾದಲ್ಲಿ ಪಾತ್ರ ಮಾಡ್ತಿದ್ದಾರೆ. ಶಕುನಿ ಪಾತ್ರ ಮಾಡುವವರು ಶಕುನಿ ಪಾತ್ರ ಮಾಡುತ್ತಿದ್ದಾರೆ. ಭೀಮನ ಪಾತ್ರ ಮಾಡುವವರು ಭೀಮನ ಪಾತ್ರ ಮಾಡುತ್ತಿದ್ದಾರೆ. ದುರ್ಯೋಧನನ ಪಾತ್ರ ಮಾಡುವವರು ದುರ್ಯೋಧನನ ಪಾತ್ರ ಮಾಡುತ್ತಿದ್ದಾರೆ. ಅವರ ಆಸೆಗೆ ತಕ್ಕಂತೆ ಪಾತ್ರಗಳನ್ನು ಆರಂಭ ಮಾಡಿಬಿಟ್ಟಿದ್ದಾರೆ. ಈ ಡ್ರಾಮಾದಲ್ಲಿ ಶ್ರೀಕೃಷ್ಣ ಹಿಂದೆ ಇದ್ದಾನೆ. ಯಾರ ಕಣ್ಣಿಗೂ ಕಾಣ್ತಿಲ್ಲ ಎಂದು ಹೇಳಿದರು.

    ಇದೇ ವೇಳೆ ಮೇ 23ರ ನಂತರ ಸರ್ಕಾರ ಅದಲು ಬದಲು ವಿಚಾರ ಸಂಬಂಧವೂ ಮಾತನಾಡಿದ ಎಂಟಿಬಿ ನಾಗರಾಜ್, ದೇವೇಗೌಡರೇ ಹೇಳಿರುವ ಹಾಗೆ ಆದರೂ ಆಗಬಹುದು. ಸಿದ್ದರಾಮಯ್ಯ ಅಥವಾ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಬಹುದು. ಸಚಿವ ಎಚ್.ಡಿ ರೇವಣ್ಣ ಡಿಸಿಎಂ ಆಗಬಹದು. ಆದರೆ ದೇವೇಗೌಡರ ಮಾತನ್ನು ನಾನು ಸಂಪೂರ್ಣವಾಗಿ ನಂಬಲ್ಲ. ಆದರೆ ಆಗಲೂಬಹುದು ಆಗದೇನು ಇರಬಹುದು ಎಂದರು.

    ಇದೇ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿ ಮಾತನಾಡಿದ ಕೃಷಿ ಸಚಿವ ಶಿವಶಂಕಕರೆಡ್ಡಿ, 6 ತಿಂಗಳಿಂದ ಈ ಪ್ರಕ್ರಿಯೆ ನಡೆಯುತ್ತಲೆ ಇದೆ. ರಮೇಶ್ ಜಾರಕಿಹೊಳಿ ಯಾವಾಗ ರಾಜೀನಾಮೆ ಕೊಡ್ತೀನಿ ಎಂದು ಹೇಳುತ್ತಿಲ್ಲ. ಅವರು ಒಬ್ಬರು ರಾಜೀನಾಮೆ ಕೊಡೋದ್ರಿಂದ ಸರ್ಕಾರಕ್ಕೆ ಏನೂ ತೊಂದರೆ ಇಲ್ಲ. ಅವರ ಜೊತೆ ಕೂಡ ಬೇರೆ ಯಾವುದೇ ಶಾಸಕರಿಲ್ಲ. ಅವರ ವೈಯುಕ್ತಿಕ ಹಾಗೂ ಆಗ ಅವರ ಜಿಲ್ಲಾ ರಾಜಕಾರಣದಲ್ಲಿ ಭಿನ್ನಾಭಿಪ್ರಾಯಗಳಿವೆ. ಈ ಬಗ್ಗೆ ಸಿಎಂ ಕುಮಾರಸ್ವಾಮಿ ಕರೆದು ಮಾತನಾಡಿ ಬಗೆಹರಿಸುವ ವಿಶ್ವಾಸವಿದೆ ಎಂದರು.

  • ಮದ್ವೆ ಮನೆಯಲ್ಲಿ ಮಾಜಿ ಪ್ರಿಯಕರನ ಕಾಲು ಹಿಡಿದು ಗೋಳಾಡಿ ಯುವತಿಯಿಂದ ಹೈಡ್ರಾಮಾ – ವಿಡಿಯೋ

    ಮದ್ವೆ ಮನೆಯಲ್ಲಿ ಮಾಜಿ ಪ್ರಿಯಕರನ ಕಾಲು ಹಿಡಿದು ಗೋಳಾಡಿ ಯುವತಿಯಿಂದ ಹೈಡ್ರಾಮಾ – ವಿಡಿಯೋ

    ಬೀಜಿಂಗ್: ಯುವತಿಯೊಬ್ಬಳು ತನ್ನ ಮಾಜಿ ಪ್ರಿಯಕರನ ಮದುವೆಗೆ ವಧುವಿನ ರೀತಿ ಬಂದು, ಆತನ ಕಾಲು ಹಿಡಿದು ಗೋಳಾಡಿ ಹೈಡ್ರಾಮಾ ಮಾಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ಚೀನಾದ ಯುವತಿಯೊಬ್ಬಳು ತನ್ನ ಮಾಜಿ ಪ್ರಿಯಕರನ ಮದುವೆಗೆ ಬಂದು ಹೈಡ್ರಾಮಾ ಮಾಡಿದ್ದಾಳೆ. ಮದುವೆಯ ಶುಭಕಾರ್ಯ ನಡೆಯುತ್ತಿದ್ದ ವೇಳೆ ವಧು-ವರರು ನಿಂತಿದ್ದ ವೇದಿಕೆಯಲ್ಲೇ ರಂಪಾಟ ಮಾಡಿದ್ದಾಳೆ. ತನ್ನ ಮಾಜಿ ಪ್ರಿಯಕರ ಬೇರೊಬ್ಬ ಯುವತಿಯೊಂದಿಗೆ ಮದುವೆ ಮಾಡಿಕೊಳ್ಳುವುದನ್ನು ಸಹಿಸಲಾಗದೇ ಯುವತಿ ಈ ರೀತಿ ಮಾಡಿದ್ದಾಳೆ. ತಾನೂ ಕೂಡ ಮದುಮಗಳ ರೀತಿ ರೆಡಿಯಾಗಿ ಬಂದಿದ್ದ ಯುವತಿ, ಮದುವೆ ಸಮಾರಂಭದಲ್ಲಿ ಎಲ್ಲರ ಮುಂದೆಯೇ ಪ್ರಿಯಕರನ ಕಾಲು ಹಿಡಿದು ತಪ್ಪಾಯ್ತು ಕ್ಷಮಿಸು, ನನ್ನನ್ನೇ ಮದುವೆಯಾಗು ಎಂದು ಗೋಳಾಡಿದ್ದಾಳೆ.

    ಈ ವೇಳೆ ವಧು ಕೋಪಗೊಂಡು ವೇದಿಕೆಯಿಂದ ಹೋಗಿದ್ದಕ್ಕೆ, ಯುವಕನು ಕೂಡ ಆಕೆಯ ಹಿಂದೆಯೇ ಸಮಾಧಾನ ಪಡಿಸಲು ಹೋಗಿದ್ದಾನೆ. ತನ್ನ ಮಾಜಿ ಪ್ರೇಯಸಿಯ ಗೋಳಾಟಕ್ಕೆ ಕ್ಯಾರೆ ಅನ್ನದೆ ಯುವಕ ಹೋಗಿದ್ದನ್ನು ಸ್ಥಳದಲ್ಲಿದ್ದವರು ವಿಡಿಯೋ ಮಾಡಿದ್ದಾರೆ.

    ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಫುಲ್ ಲೈಕ್ ಕೊಟ್ಟಿದ್ದಾರೆ.

    https://www.youtube.com/watch?v=YeofeaxiN1c#action=share

  • ಚಿತ್ರದುರ್ಗ ಪೊಲೀಸರಿಂದ ನಾಟಕ ಪ್ರದರ್ಶನ – ಸಿಬ್ಬಂದಿ ಅಭಿನಯಕ್ಕೆ ಮನಸೋತ ಅಧಿಕಾರಿಗಳು

    ಚಿತ್ರದುರ್ಗ ಪೊಲೀಸರಿಂದ ನಾಟಕ ಪ್ರದರ್ಶನ – ಸಿಬ್ಬಂದಿ ಅಭಿನಯಕ್ಕೆ ಮನಸೋತ ಅಧಿಕಾರಿಗಳು

    ಚಿತ್ರದುರ್ಗ: ಪೊಲೀಸರು ಅಂದರೆ ಕೇವಲ ಕಾನೂನು ಪಾಲಕರು ಅಷ್ಟೇ ಅಂತ ಭಾವಿಸಿದ್ದೇವೆ. ಆದರೆ ಪೊಲೀಸರಲ್ಲೂ ಅದ್ಭುತ ಕಲಾವಿದರಿದ್ದಾರೆ ಎಂಬುದನ್ನ ಚಿತ್ರದುರ್ಗ ಪೊಲೀಸರು ಸಾಬೀತುಪಡಿಸಿದ್ದಾರೆ.

    ದಿನ ನಿತ್ಯ ಒತ್ತಡದಿಂದ ಕಾರ್ಯನಿರ್ವಹಿಸುತ್ತಿದ್ದ ಪೊಲೀಸರು ಅವರ ದೈನಂದಿನ ಒತ್ತಡದ ಬದುಕನ್ನು ಬದಿಗಿಟ್ಟು, ಮುಖಕ್ಕೆ ಬಣ್ಣ ಹಚ್ಚಿ ವೇದಿಕೆ ಮೇಲೆ ತಮ್ಮೊಳಗಿದ್ದ ಕಲೆಯನ್ನ ಹೊರಹಾಕುವ ಪ್ರಯತ್ನ ಮಾಡಿದ್ದಾರೆ. ಚಿತ್ರದುರ್ಗದ ಪೊಲೀಸ್ ಪೇದೆಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಕೂಡ ಮುಖಕ್ಕೆ ಬಣ್ಣ ಹಚ್ಚಿ  ಪೊಲೀಸ್ ಕವಾಯತು ಮೈದಾನದಲ್ಲಿ ನಾಟಕ ಪ್ರದರ್ಶಿಸಿದ್ದಾರೆ.

    ಪೊಲೀಸ್ ಸಿಬ್ಬಂದಿ ಸಾಮಾಜಿಕ ಕಳಕಳಿಯ ನಾಟಕವಾಡುವ ಮೂಲಕ ನೆರದಿದ್ದ ಜನರಿಗೆ ಜಾಗೃತಿ ಮೂಡಿಸುವ ನೆಪದಲ್ಲಿ ತಮ್ಮಲ್ಲಿರುವ ಪ್ರತಿಭೆಯನ್ನ ಹೊರಹಾಕಿದ್ದಾರೆ. ಈ ಸದಾವಕಾಶವನ್ನ ಚಿತ್ರದುರ್ಗ ಜಿಲ್ಲೆಗೆ ಹೊಸದಾಗಿ ಬಂದಿರುವ ಖಡಕ್ ಎಸ್‍ಪಿ ಡಾ.ಅರುಣ್ ಕಲ್ಪಿಸಿದ್ದರು.

    ಪೊಲೀಸ್ ಪೇದೆಗಳಿಗೆ ಮನರಂಜನೆ ನೀಡುವ ಮೂಲಕ ಅವರ ಒತ್ತಡವನ್ನ ನಿವಾರಣೆ ಮಾಡುವುದಕ್ಕೆ ಮುಂದಾದ ಎಸ್‍ಪಿ ಸಾಹೇಬ್ರು, ಆಡಿಶನ್ ಮಾಡಿ ಅವರಲ್ಲಿ ಸೂಕ್ತ ಪ್ರತಿಭೆ ಇರುವವರನ್ನು ಆಯ್ಕೆ ಮಾಡಿದ್ದರು. ಬಳಿಕ ಅವರಿಂದ `ಅಣ್ಣನ ಒಡಲು ಬಂಗಾರದ ಕಡಲು’ ಎಂಬ ಸಾಮಾಜಿಕ, ಕೌಟುಂಬಿಕ ಹಾಸ್ಯಭರಿತ ನಾಟಕವನ್ನ ಪ್ರದರ್ಶಿಸಿದ್ದರು.

    ಈ ಕೌಟುಂಬಿಕ ಸಮಸ್ಯೆ ಕುರಿತ ನಾಟಕ ವೀಕ್ಷಿಸಲು ಪೂರ್ವ ವಲಯದ ಡಿಐಜಿ ಬಿ.ದಯಾನಂದ್, ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎಸ್.ಬಿ.ವಸ್ತ್ರಮಠ್, ಜಿಲ್ಲಾಧಿಕಾರಿ ವಿನೋದ ಪ್ರಿಯಾ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಆಗಮಿಸಿದ್ದರು. ಈ ವೇಳೆ ಚಿತ್ರದುರ್ಗ ಡಿವೈಎಸ್‍ಪಿ ಸಂತೋಷ್ ಅವರ ನೃತ್ಯದ ಝಲಕ್ ವೀಕ್ಷಿಸಿ ಫುಲ್ ಎಂಜಾಯ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಷ್ಟದಲ್ಲಿದ್ದ ನಾಟಕ ಕಂಪನಿಯ ಕೈ ಹಿಡಿದ ನಟಿ ಉಮಾಶ್ರೀ – ದೊಡ್ಡಬಳ್ಳಾಪುರದಲ್ಲಿ ಹೌಸ್‍ಫುಲ್ ಪ್ರದರ್ಶನ

    ನಷ್ಟದಲ್ಲಿದ್ದ ನಾಟಕ ಕಂಪನಿಯ ಕೈ ಹಿಡಿದ ನಟಿ ಉಮಾಶ್ರೀ – ದೊಡ್ಡಬಳ್ಳಾಪುರದಲ್ಲಿ ಹೌಸ್‍ಫುಲ್ ಪ್ರದರ್ಶನ

    ಚಿಕ್ಕಬಳ್ಳಾಪುರ: ಬಣ್ಣದ ಬದುಕಿನಿಂದ ದೂರ ಉಳಿದಿದ್ದ ಮಾಜಿ ಸಚಿವೆ ಉಮಾಶ್ರೀ ಅವರು ನಷ್ಟದಲ್ಲಿದ್ದ ನಾಟಕ ಕಂಪನಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಮತ್ತೆ ಚಾಮುಂಡೇಶ್ವರಿ ಪಾತ್ರಕ್ಕೆ ಬಣ್ಣ ಹಚ್ಚಿ ಅಭಿಮಾನಿಗಳನ್ನು ರಂಜಿಸಿದ್ದಾರೆ.

    ಮೂಲತಃ ರಂಗಭೂಮಿ ಕಲಾವಿದೆಯಾಗಿರುವ ಉಮಾಶ್ರೀ ಅವರು, ಕುಮಾರೇಶ್ವರ ನಾಟಕ ಮಂಡಳಿಯ ಕಲಾವಿದೆಯಾಗಿದ್ದರು. ಆದರೆ ಈಗ ಈ ನಾಟಕಮಂಡಳಿ ನಷ್ಟದಲ್ಲಿದೆ ಎನ್ನುವ ವಿಚಾರ ತಿಳಿದ ಉಮಾಶ್ರೀ ಚಾಮುಂಡಿ ಪಾತ್ರಕ್ಕೆ ಬಣ್ಣ ಹಚ್ಚುವ ಮೂಲಕ ತಮ್ಮ ನಾಟಕ ಕಂಪನಿಯ ಕಷ್ಟದಲ್ಲಿ ಜೊತೆಯಾಗಿದ್ದಾರೆ.

    ಮಹಿಷಾಸುರ ಮರ್ಧಿನಿ ಪೌರಾಣಿಕ ನಾಟಕದಲ್ಲಿ ಚಾಮುಂಡಿಯ ಪಾತ್ರದಲ್ಲಿ ನಟಿಸಿದ ಉಮಾಶ್ರೀ ಅವರ ರೌದ್ರನಟನೆಯನ್ನು ನೋಡಿ ಪೇಕ್ಷಕರು ಮನಸೊರೆಗೊಂಡರು. ಚಾಮುಂಡಿ ಅವತಾರದಲ್ಲಿ ಉಮಾಶ್ರೀಯನ್ನ ಕಣ್ತುಂಬಿಕೊಂಡ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಖುಷಿಪಟ್ಟರು.

    ಚಿತ್ರದುರ್ಗ ಮೂಲದ ಕುಮಾರಸ್ವಾಮಿ ಮಾಲೀಕತ್ವದ ಕುಮಾರೇಶ್ವರ ನಾಟಕ ಕಂಪನಿ ದೊಡ್ಡಬಳ್ಳಾಪುರ ನಗರದ ಕೋರ್ಟ್ ಬಳಿ ಟೆಂಟ್ ಹಾಕಿ ನಾಟಕ ಪ್ರದರ್ಶನ ನಡೆಸುತ್ತದೆ. ಮೂರು ತಿಂಗಳಿಂದ ಪ್ರತಿದಿನ ಎರಡು ಪ್ರದರ್ಶನ ನಡೆಯುತ್ತಿದ್ದರೂ ನಾಟಕ ನೋಡಲು ಜನ ಮಾತ್ರ ಬರುತ್ತಿರಲಿಲ್ಲ. ಪ್ರತಿ ಪ್ರದರ್ಶನದಲ್ಲಿ ಬೆರಳೆಣಿಕೆಯ ಜನ ಮಾತ್ರ ನಾಟಕ ನೋಡಲು ಬರುತ್ತಿದ್ದರು. ಪ್ರತಿ ಪ್ರದರ್ಶನಕ್ಕೆ 10 ಸಾವಿರ ರೂ. ಖರ್ಚಾಗುತ್ತಿತ್ತು. ಆದರೆ ಪ್ರತಿ ಪ್ರದರ್ಶನದಲ್ಲಿ 2 ಸಾವಿರ ರೂ. ಮಾತ್ರ ಕಲೆಕ್ಷನ್ ಆಗುತ್ತಿತ್ತು. ಇದರಿಂದ 4 ಲಕ್ಷ ರೂ. ನಷ್ಟ ಉಂಟಾಗಿತ್ತು. ಒಂದೆಡೆ ಕಲಾವಿದರಿಗೆ ಸಂಬಳ ನೀಡಲು ಹಣ ಇಲ್ಲದೇ ಇದ್ದರೆ ಮತ್ತೊಂದೆಡೆ ಬೇರೆ ಊರಿಗೆ ನಾಟಕ ಸಾಮಗ್ರಿ ಸಾಗಿಸಲು ಸಹ ಹಣವಿರಲಿಲ್ಲ. ಈ ವಿಚಾರ ತಿಳಿದ ಉಮಾಶ್ರೀ ಅವರು ನಾಟಕ ಕಂಪನಿಗೆ ನೆರವು ನೀಡಲು ಬಣ್ಣ ಹಚ್ಚಿದ್ದಾರೆ.

    ಉಮಾಶ್ರೀ ಅವರು ಚಾಮುಂಡಿ ಪಾತ್ರದಲ್ಲಿ ಅಭಿನಯಿಸುತ್ತಿರುವ ವಿಷಯ ಕೇಳಿ ನಾಟಕ ಪ್ರದರ್ಶನಕ್ಕೆ ಜನಸಾಗರವೇ ಹರಿದು ಬಂದಿತ್ತು. ನಾಟಕ ಹೌಸ್ ಫುಲ್ ಪ್ರದರ್ಶನ ಕಂಡಿದ್ದು, ನಷ್ಟದಲ್ಲಿ ನಡೆಯುತ್ತಿದ್ದ ನಾಟಕ ಕಂಪನಿಯ ಕಲೆಕ್ಷನ್ ಜೋರಾಗಿತ್ತು. ಇದರ ಜೊತೆಗೆ ದೊಡ್ಡಬಳ್ಳಾಪುರ ನಗರದ ಕನ್ನಡಪರ ಸಂಘಟನೆಗಳು ಮತ್ತು ಕಲಾಭಿಮಾನಿಗಳ ನೆರವಿನ ಮಹಾಪೂರವೇ ಹರಿದು ಬಂದು ಉಮಾಶ್ರೀ ಅವರ ಅಭಿನಯವನ್ನು ಕಣ್ತುಬಿಕೊಂಡಿದ್ದಾರೆ. ಜನರ ಸಹಾಯದಿಂದ ತಮ್ಮ ನಾಟಕ ಕಂಪನಿಯನ್ನು ಉಮಾಶ್ರೀ ಅವರು ಬಹಳ ಸಂತೋಷದಿಂದ ದಾವಣಗೆರೆಗೆ ಕರೆದುಕೊಂಡು ಹೋಗಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 9.6 ಲಕ್ಷ ದರೋಡೆಯ ನಾಟಕವಾಡಿ ಕೊನೆಗೆ ತಾನೇ ಪೊಲೀಸ್ ಬಲೆಗೆ ಬಿದ್ದ!

    9.6 ಲಕ್ಷ ದರೋಡೆಯ ನಾಟಕವಾಡಿ ಕೊನೆಗೆ ತಾನೇ ಪೊಲೀಸ್ ಬಲೆಗೆ ಬಿದ್ದ!

    ಹಾಸನ: ದರೋಡೆ ನಾಟಕವಾಡಿ 9.5 ಲಕ್ಷ ರೂ. ಹಣವನ್ನು ಗುಳುಂ ಮಾಡಲು ಕ್ರಿಮಿನಲ್ ಐಡಿಯಾ ಮಾಡಿದ್ದ ಚಾಲಕಿ ವ್ಯಕ್ತಿಯೊಬ್ಬ ತಾನೇ ಪೊಲೀಸ್ ಬಲೆಗೆ ಬಿದ್ದಿರುವ ಘಟನೆ ಹಾಸನದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಹಾಸನ ಹೊರವಲಯದ ಹೊಸ ಕೊಪ್ಪಲು ನಿವಾಸಿಯಾಗಿರುವ ಕೋಳಿ ಫಾರಂ ಚಂದನ್ ಬಂಧಿತ ಆರೋಪಿ. ಹಾಸನದ ಬಡಾವಣೆ ಪೊಲೀಸರು ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಹೊರಂಬಿದಿದೆ.

    ಏನಿದು ಪ್ರಕರಣ?
    ನವೆಂಬರ್ 26 ರಂದು ಕೋಳಿ ಮಾರಾಟ ಮಾಡಿ ಅಂಗಡಿಗಳಿಂದ ಸಂಗ್ರಹಿಸಿದ್ದ 9.5 ಲಕ್ಷ ರೂ. ಹಣವನ್ನು ಚಂದನ್ ಹಾಸನದ ಕೈಗಾರಿಕಾ ಪ್ರದೇಶದಲ್ಲಿರುವ ಪೂಜಾ ಫೀಡ್ಸ್ ಮಾಲೀಕರಿಗೆ ತಲುಪಿಸಬೇಕಿತ್ತು. ಆದರೆ ಶುಂಠಿ ಬೆಳೆಯಲು ಐದಾರು ಲಕ್ಷ ರೂ. ಸಾಲ ಮಾಡಿಕೊಂಡಿದ್ದ ಚಂದನ್, ಹೇಗಾದರೂ ಮಾಡಿ ಇಷ್ಟೂ ಹಣ ಲಪಟಾಯಿಸಿದರೆ ನನ್ನ ಸಮಸ್ಯೆ ಬಗೆಹರಿಯಲಿದೆ ಎಂದು ಕ್ರಿಮಿನಲ್ ಐಡಿಯಾ ಮಾಡಿದ್ದ.

    ಅದರಂತೆಯೇ ನಾನು ಬೈಕಿನಲ್ಲಿ ಹಣದೊಂದಿಗೆ ಬರುವಾಗ ಇಬ್ಬರು ಅಪರಿಚಿತರು ನನ್ನನ್ನು ಅಡ್ಡಗಟ್ಟಿ ಚಾಕುವಿನಿಂದ ಇರಿದು ಹಣ ಕಸಿದು ಪರಾರಿಯಾದರು ಎಂದು ಬಿಂಬಿಸಿದ್ದಾನೆ. ನಂತರ ತಾನೇ ಆಸ್ಪತ್ರೆಗೆ ದಾಖಲಾಗಿದ್ದಲ್ಲದೇ, ಹಾಸನದ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದನು. ಪೊಲೀಸರಿಗೆ ಚಂದನ್ ನಡೆಯ ಬಗ್ಗೆ ಅನುಮಾನ ಬಂದಿದೆ. ಎಂದಿನಂತೆ ಠಾಣೆಯಲ್ಲಿ ತಮ್ಮ ಪೊಲೀಸ್ ಶೈಲಿಯಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿದಾಗ ದರೋಡೆಯ ನಾಟಕ ಬಯಲಾಗಿದೆ.

    ಆರೋಪಿ ಚಂದನ್ ತನಗೆ ಗೊತ್ತಿರುವ ಲೋಕಿ ಮತ್ತು ನವೀನ ಎಂಬವರೊಂದಿಗೆ ಸೇರಿ ಹಣ ದರೋಡೆ ಮಾಡಲು ಪ್ಲಾನ್ ಮಾಡಿದ್ದನು. ನನ್ನೊಂದಿಗೆ ಸಹಕಾರ ನೀಡಿದರೆ ನಿಮಗೆ ಎರಡೂ ಲಕ್ಷ ರೂ. ನೀಡುವೆ ಎಂದು ಆಮಿಷ ಕೂಡ ಒಡ್ಡಿದ್ದನು. ಅದರಂತೆಯೇ ಮೂವರೂ ಸೇರಿ ದರೋಡೆಯ ನಾಟಕವಾಡಿ ಯಾರದೋ ದುಡ್ಡನ್ನು ಯಾಮಾರಿಸಲು ಹೈಡ್ರಾಮವನ್ನು ಮಾಡಿದ್ದರು.

    ಚಂದನ್‍ನನ್ನು ಈಗ ಬಂಧಿಸಲಾಗಿದ್ದು ಉಳಿದ ಇಬ್ಬರು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಲೋಕಿ ಮತ್ತು ನವೀನ್ ಈ ಹಿಂದೆ ಹಲವು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪ ಎದುರಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮರ್ಡರ್ ಮಿಸ್ಟರಿಯನ್ನು `ವೆನಿಲ್ಲಾ’ ಐಸ್‍ಕ್ರೀಂನೊಂದಿಗೆ ಸವಿಯಿರಿ!

    ಮರ್ಡರ್ ಮಿಸ್ಟರಿಯನ್ನು `ವೆನಿಲ್ಲಾ’ ಐಸ್‍ಕ್ರೀಂನೊಂದಿಗೆ ಸವಿಯಿರಿ!

    ಮರ್ಡರ್ ಮಿಸ್ಟರಿಯ ಕಥೆಗಳಿಗೆ ಕೊರತೆಯಿಲ್ಲ. ಕನ್ನಡದಲ್ಲಿ ಸಾಕಷ್ಟು ಚಿತ್ರಗಳು ಬಂದಿದ್ದರೂ ಕಥೆಯನ್ನು ಸರಿಯಾಗಿ ನಿರೂಪಿಸದ ಕಾರಣ ಸಿನಿಮಾಗಳಿಗೆ ಸೋಲಾಗುತ್ತದೆ. ಆದರೆ ಸದಭಿರುಚಿಯ ಸಿನಿಮಾಗಳ ನಿರ್ದೇಶಕ ಎಂದೇ ಪ್ರಸಿದ್ಧರಾಗಿರುವ ಜಯತೀರ್ಥ ಅವರು ಸಿನಿ ಪ್ರಿಯರ ನಿರೀಕ್ಷೆಗಳನ್ನು ಹುಸಿಗೊಳಿಸದೇ ಸುಂದರವಾಗಿ ಸವಿಯಲು `ವೆನಿಲ್ಲಾ’ವನ್ನು ನಿಮ್ಮ ಮುಂದಿಟ್ಟಿದ್ದಾರೆ.

    ಒಂದು ಭಯಾನಕ ಕೊಲೆ, ಕ್ಷಣಕ್ಷಣಕ್ಕೂ ರೋಚಕ ಟ್ವಿಸ್ಟ್, ಕೊಲೆಗೂ ನಾಯಕ ನಟಿಗೂ ಇರೋ ಸಂಬಂಧ ಏನು? ಕೊಲೆ ಮಾಡಿದ್ದು ಯಾಕೆ? ಕೊಲೆ ಮಾಡಿದವರು ಯಾರು? ಈ ರೀತಿಯಾಗಿ ಪ್ರತಿಹಂತದಲ್ಲಿ ವೀಕ್ಷಕರಿಗೆ ರೋಚಕತೆಯನ್ನು ತೋರಿಸುವಲ್ಲಿ ಬ್ಯೂಟಿಫುಲ್ ಮನಸುಗಳು ಚಿತ್ರದ ಯಶಸ್ಸಿನಲ್ಲಿರುವ ನಿರ್ದೇಶಕ ಜಯತೀರ್ಥ ಯಶಸ್ವಿಯಾಗಿದ್ದಾರೆ.

    ಮರ್ಡರ್, ಒಂದು ಭಯಾನಕ ರೋಗ ಮತ್ತು ಎಂಥಾ ಕಾಯಿಲೆಗಳನ್ನೂ ವಾಸಿ ಮಾಡಬಲ್ಲ ಪ್ರಾಂಜಲ ಪ್ರೀತಿಯ ಸುತ್ತಾ ಸುತ್ತುವ ಈ ಕಥೆಯಲ್ಲಿ ನಾಯಕ ಮತ್ತು ನಾಯಕಿ ಬಾಲ್ಯ ಸ್ನೇಹಿತರು. ಈ ನಡುವೆ ನಾಯಕಿಯ ಕಡೆಯಿಂದ ಅಚಾನಕ್ಕಾಗುವ ಒಂದು ಆಕ್ಸಿಡೆಂಟ್, ಅದಕ್ಕೆ ತಲೆ ಕೊಟ್ಟು ಹೋರಾಡುವ ಹೀರೋ ಹೀಗೆ ಒಂದು ಚಿತ್ರಕ್ಕೆ ಏನೆಲ್ಲ ಫ್ಲೇವರ್ ಗಳು ಬೇಕೋ ಆ ಎಲ್ಲ ಫ್ಲೇವರ್ ಗಳ ಘಮ ವೆನಿಲ್ಲಾದಲ್ಲಿದೆ.

    ಮಂಡ್ಯ ರಮೇಶ್ ಗರಡಿಯಲ್ಲಿ ಪಳಗಿ ರಂಗಭೂಮಿಯಲ್ಲಿ ಸೈ ಎನಿಸಿ ಉತ್ತಮ ಕಥೆಯ ಮೂಲಕವೇ ಕನ್ನಡ ಚಿತ್ರದಲ್ಲಿ ಎಂಟ್ರಿಯಾಗಬೇಕು ಎಂದು ಕನಸು ಕಾಣುತ್ತಿದ್ದ ಅವಿನಾಶ್ ಅವರು ಅನುಭವಿ ನಟನಂತೆ ಅಭಿನಯಿಸಿದ್ದಾರೆ. ಅವಿನಾಶ್ ಮತ್ತು ಸ್ವಾತಿ ಕೊಂಡೆ ನಾಯಕ ನಾಯಕಿಯರಾಗಿ ಅಭಿನಯಿಸಿರುವ ಈ ಚಿತ್ರದಲ್ಲಿ ಪಯಣ ರವಿಶಂಕರ್ ಪೊಲೀಸ್ ಆಫಿಸರ್ ಆಗಿ ಕಾಣಿಸಿಕೊಂಡಿದ್ದಾರೆ. ಪ್ರತೀ ಪಾತ್ರಗಳೂ ಕಾಡುವಂತೆ ಮೂಡಿ ಬಂದಿದ್ದು ಕಿರಣ್ ಹಂಪಾಪುರ ಅವರ ಛಾಯಾಗ್ರಹಣ ಮತ್ತು ಹಿನ್ನಲೆ ಸಂಗೀತವಿದೆ. ಪ್ರತೀ ಕ್ಷಣವೂ ಕುತೂಹಲವನ್ನು ಮೂಡಿಸುವ `ವೆನಿಲ್ಲಾ’ವನ್ನು ಥಿಯೇಟರ್ ನಲ್ಲಿ ಕುಳಿತು ಚೆನ್ನಾಗಿ ಸವಿಯಬಹುದು.

     

  • ಮಂಡ್ಯದ ಎಸ್ಪಿ ಕಚೇರಿಯಲ್ಲಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯ ಅಸಲಿ ಡ್ರಾಮ ಬಯಲು!

    ಮಂಡ್ಯದ ಎಸ್ಪಿ ಕಚೇರಿಯಲ್ಲಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯ ಅಸಲಿ ಡ್ರಾಮ ಬಯಲು!

    ಮಂಡ್ಯ: ಇತ್ತೀಚೆಗೆ ನ್ಯಾಯ ಸಿಗುತ್ತಿಲ್ಲ, ಪೊಲೀಸರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಮಂಡ್ಯ ಎಸ್ಪಿ ಕಚೇರಿಯಲ್ಲಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯ ನಿಜ ರೂಪ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಮಂಡ್ಯದ ಹಲ್ಲೆಗೆರೆ ಗ್ರಾಮದ ಜಯಮ್ಮ(60) ವಿಷ ಕುಡಿದ ರೀತಿ ನಾಟಕವಾಡಿ ಈಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾಳೆ. ಈಕೆ ಮಾರ್ಚ್ 29 ರಂದು ಮಂಡ್ಯದ ಎಸ್ಪಿ ಕಚೇರಿಗೆ ಆಗಮಿಸಿದ್ದಳು. ಈ ಸಂದರ್ಭ ಕಚೇರಿಯ ಮೈನ್ ಡೋರ್ ಬಳಿ ಯಾರು ಇಲ್ಲದ್ದನ್ನು ಗಮನಿಸಿ ತನ್ನ ಮೈಮೇಲೆ ವಿಷ ಚೆಲ್ಲಿಕೊಂಡು ಅದನ್ನು ಕುಡಿದ ರೀತಿ ಕೆಳಗೆ ಬಿದ್ದು ನಾಟಕವಾಡಿದ್ದಳು.

    ಬಳಿಕ ಈಕೆಯ ಮಗ ಮಾಧ್ಯಮಗಳಿಗೆ ಕರೆ ಮಾಡಿ, ನಮಗೆ ಜಮೀನು ವಿಚಾರವಾಗಿ ನ್ಯಾಯ ಸಿಕ್ಕಿಲ್ಲ. ಪೊಲೀಸರು ಕೂಡ ನಮಗೆ ಸ್ಪಂದಿಸುತ್ತಿಲ್ಲ ಹೀಗಾಗಿ ನಮ್ಮ ತಾಯಿ ಎಸ್ಪಿ ಕಚೇರಿಯಲ್ಲಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಸುದ್ದಿಯೊಂದನ್ನು ನೀಡಿದ್ದನು. ಬಳಿಕ ಜಯಮ್ಮಳನ್ನ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

    ಆದರೆ ಈ ಸಂದರ್ಭ ವೈದ್ಯರು ಜಯಮ್ಮ ವಿಷ ಕುಡಿದಿಲ್ಲ ಅನ್ನೋ ಮಾಹಿತಿಯನ್ನ ಪೊಲೀಸರಿಗೆ ತಿಳಿಸಿದ್ದಾರೆ. ಇದರಿಂದ ಅನುಮಾನಗೊಂಡ ಪೊಲೀಸರು ಕಚೇರಿಯ ಸಿಸಿಟಿವಿ ಪರೀಕ್ಷಿಸಿದಾಗ ಜಯಮ್ಮಳ ಅಸಲಿ ಡ್ರಾಮ ಗೊತ್ತಾಗಿದೆ. ಇನ್ನು ಈ ದೃಶ್ಯವನ್ನ ನೋಡಿದ ಪೊಲೀಸರು ಜಯಮ್ಮಳ ಡ್ರಾಮಾ ಕಂಡು ದಂಗಾಗಿದ್ದಾರೆ.

  • ಯಡಿಯೂರಪ್ಪಗೆ ವಯಸ್ಸಾಗಿದೆ ಏನೇನೋ ಮಾತಾಡ್ತಾರೆ: ರಾಮಲಿಂಗಾರೆಡ್ಡಿ

    ಯಡಿಯೂರಪ್ಪಗೆ ವಯಸ್ಸಾಗಿದೆ ಏನೇನೋ ಮಾತಾಡ್ತಾರೆ: ರಾಮಲಿಂಗಾರೆಡ್ಡಿ

    ಚಿಕ್ಕಬಳ್ಳಾಪುರ: ಮಾಜಿ ಸಿಎಂ ಯಡಿಯೂರಪ್ಪಗೆ ವಯಸ್ಸಾಗಿದೆ, ಹೀಗಾಗಿ ಅವರು ಏನೇನೋ ಮಾತಾಡುತ್ತಾರೆ ಎಂದು ಚಿಕ್ಕಬಳ್ಳಾಪುರದಲ್ಲಿ ಗೃಹಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

    ಮಹದಾಯಿ ವಿಚಾರದಲ್ಲಿ ನೀರು ಬಿಡದಂತೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಒತ್ತಡ ಇದೆ ಎನ್ನುವ ಯಡಿಯೂರಪ್ಪನವರ ಆರೋಪ ಸಂಬಂಧ ಪ್ರತಿಕ್ರಿಯಿಸಿದ ಅವರು ಯಡಿಯೂರಪ್ಪನವರಿಗೆ ವಯಸ್ಸಾಗಿದೆ. ಹೀಗಾಗಿ ಏನೇನೋ ಮಾತಾಡ್ತಾರೆ. ಅವರ ಆರೋಪದಲ್ಲಿ ಯಾವುದೇ ಹುರಳಿಲ್ಲ ಎಂದು ತಿಳಿಸಿದರು.

    ಇದೇ ವೇಳೆ ಮಹದಾಯಿ ವಿಚಾರದಲ್ಲಿ ಬಿಜೆಪಿಯವರು ನಾಟಕ ಮಾಡುತ್ತಿದ್ದು, ಅವರದ್ದು ಡ್ರಾಮಾ ಟ್ರೂಪ್ ಇದ್ದಂತೆ. ರಾಜ್ಯದ ನಾಯಕರು ಕೇವಲ ಪಾತ್ರಧಾರಿಗಳು. ಡ್ರಾಮಾ ಟ್ರೂಪ್ ನ ಹೆಡ್ ದೆಹಲಿಯಲ್ಲಿದ್ದಾರೆ ಎಂದು ವ್ಯಂಗ್ಯವಾಡಿದರು.

    ಮಹದಾಯಿ ವಿಚಾರದಲ್ಲಿ ಸದ್ಯ ಗೋವಾ ಸಿಎಂ ಪರಿಕ್ಕರ್ ಗೆ ಸಿದ್ದರಾಮಯ್ಯ ಪತ್ರ ಬರೆದರೆ ಪ್ರತ್ಯುತ್ತರ ಇಲ್ಲ. ಆದರೆ ಯಡಿಯೂರಪ್ಪ ಪತ್ರ ಬರೆದ ಮಾರನೇ ದಿನವೇ ಪತ್ರ ಬರುತ್ತೆ. ಇದೆಲ್ಲಾ ಅಮಿತ್ ಶಾ ಹಾಗೂ ರಾಜ್ಯದ ಬಿಜೆಪಿ ನಾಯಕರು ನಡೆಸಿರೋ ಚುನಾವಣಾ ಗಿಮಿಕ್ ಎಂದು ವಾಗ್ದಾಳಿ ನಡೆಸಿದರು.

  • ಗ್ರಾಮೀಣ ರಂಗಕಲೆ ಉಳಿಸಲು ಪಣ- ಉಚಿತವಾಗಿ ಹಾರ್ಮೋನಿಯಂ ಕಲಿಸ್ತಿರೋ ನೆಲಮಂಗಲದ ಗಂಗರಾಜು

    ಗ್ರಾಮೀಣ ರಂಗಕಲೆ ಉಳಿಸಲು ಪಣ- ಉಚಿತವಾಗಿ ಹಾರ್ಮೋನಿಯಂ ಕಲಿಸ್ತಿರೋ ನೆಲಮಂಗಲದ ಗಂಗರಾಜು

    ಬೆಂಗಳೂರು: ಪಾಶ್ಚಾತ್ಯ, ಅಬ್ಬರದ ಸಂಗೀತದ ಸಾಧನಗಳ ಮಧ್ಯೆ ನಶಿಸಿ ಹೋಗಿರುವ ಗ್ರಾಮೀಣ ರಂಗಕಲೆಯ ಸಾಧನಗಳಲ್ಲಿ ಹಾರ್ಮೋನಿಯಂ ಸಹ ಒಂದು. ಆದ್ರೆ ನೆಲಮಂಗಲದ ಇವತ್ತಿನ ಪಬ್ಲಿಕ್ ಹೀರೋ ಗಂಗರಾಜು ದೃಷ್ಟಿ ಸಮಸ್ಯೆ ಹೊಂದಿದ್ರೂ ಹಾರ್ಮೋನಿಯಂ ಮೂಲಕ ಗಮನ ಸೆಳೆದಿದ್ದಾರೆ.

    ರಾಗಬದ್ಧವಾಗಿ ಹಾರ್ಮೋನಿಯಂ ನುಡಿಸೋ ಗಂಗರಾಜು ಇವತ್ತಿನ ಪಬ್ಲಿಕ್ ಹೀರೋ. ಬೆಂಗಳೂರು ಹೊರವಲಯದ ನೆಲಮಂಗಲದ ಚಿಕ್ಕಮಾರನಹಳ್ಳಿ ನಿವಾಸಿ. ಚಿಕ್ಕ ವಯಸ್ಸಿನಲ್ಲೇ ಹಾರ್ಮೋನಿಯಂ ಕಲಿತ ಇವರು ಆಸಕ್ತರಿಗೆ 15 ವರ್ಷಗಳಿಂದ ಉಚಿತವಾಗಿ ಹಾರ್ಮೋನಿಯಂ ಕಲಿಸಿಕೊಡ್ತಿದ್ದಾರೆ. ಅಲ್ಲದೆ ಹರಿಕಥೆ ಅಥವಾ ಸಾವಿನ ಮನೆಯ ಭಜನೆಗಳಲ್ಲಿ ಉಚಿತವಾಗಿ ಹಾರ್ಮೋನಿಯಂ ನುಡಿಸ್ತಾರೆ.

    ಹಲವು ಕಡೆ ಪೌರಾಣಿಕ ನಾಟಕ ಪ್ರದರ್ಶನ ಮಾಡಿಸುವುದರ ಜೊತೆಗೆ ಮಹಿಳೆಯರಿಗಾಗಿ ಹೊಸ ನಾಟಕ ತಂಡವನ್ನೇ ಕಟ್ಟಿದ್ದು, ಎರಡು ನಾಟಕಗಳನ್ನ ಆಡಿಸಿದ್ದಾರೆ. ವ್ಯವಸಾಯವನ್ನೂ ಮಾಡಿ ಜೀವನ ಸಾಗಿಸ್ತಿರೋ ಗಂಗರಾಜು ಸ್ವಚ್ಛ ಭಾರತ ಅಭಿಯಾನದ ಅಭಿಮಾನಿಯಾಗಿದ್ದಾರೆ.

    https://www.youtube.com/watch?v=cLaa02G9ygA

     

  • ನಾಟಕದ ನೃತ್ಯಗಾರ್ತಿಗೆ ಹಣ ನೀಡೋ ವಿಚಾರಕ್ಕೆ ಜಗಳ- ವ್ಯಕ್ತಿಯ ಕೊಲೆ

    ನಾಟಕದ ನೃತ್ಯಗಾರ್ತಿಗೆ ಹಣ ನೀಡೋ ವಿಚಾರಕ್ಕೆ ಜಗಳ- ವ್ಯಕ್ತಿಯ ಕೊಲೆ

    ಕಲಬುರಗಿ: ನಾಟಕದಲ್ಲಿ ನೃತ್ಯ ಮಾಡುವ ಯುವತಿಗೆ ಹಣ ನೀಡುವ ವಿಚಾರದಲ್ಲಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಲಿಹಾಳ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.

    48 ವರ್ಷದ ಸಿದ್ದಯ್ಯ ಮೃತ ದುರ್ದೈವಿ. ಶುಕ್ರವಾರ ರಾತ್ರಿ ಗ್ರಾಮದಲ್ಲಿ `ತಾಳಿ ಹರೀಲಿಲ್ಲ, ಶೀಲ ಉಳೀಲಿಲ್ಲ’ ಎಂಬ ನಾಟಕ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಸಿದ್ದಯ್ಯ ನಾಟಕದ ಕಲಾವಿದೆಯೊಬ್ಬರಿಗೆ ಪದೇ ಪದೇ ಹಣ ನೀಡುತ್ತಿದ್ದರು. ಇದಕ್ಕೆ ಅದೇ ಗ್ರಾಮದ ಅಯ್ಯಪ್ಪ ಆಕ್ಷೇಪ ವ್ಯಕ್ತಪಡಿಸಿ ಕಲ್ಲಿನಿಂದ ಹಲ್ಲೆ ಮಾಡಿದ್ದಾನೆ.

    ಇದನ್ನೂ ಓದಿ: ಮಗಳಿಗೆ ನ್ಯಾಯ ಕೊಡಿಸಲಾಗ್ಲಿಲ್ಲ ಎಂಬ ಪಶ್ಚಾತ್ತಾಪದಿಂದ ಆತ್ಮಹತ್ಯೆಗೆ ಶರಣಾದ ತಂದೆ

    ಗಾಯಗೊಂಡ ಸಿದ್ದಯ್ಯ ಮನೆಗೆ ತೆರಳಿದ್ದರು. ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿದ್ದರಿಂದ ಸಿದ್ದಯ್ಯ ಮನೆಯಲ್ಲಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಚಿತ್ತಾಪುರ ಠಾಣಾ ಪೊಲೀಸರು ಆಗಮಿಸಿದ್ದು, ಆರೋಪಿ ಅಯ್ಯಪ್ಪನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.