Tag: drama

  • ಹೆಣ್ಣು ಎಂದು ಸುಮ್ಮನೆ ಮನೆಯಲ್ಲಿ ಕೂರಲಿಲ್ಲ-ಪೌರಾಣಿಕ ನಾಟಕ ಕಲಿಸುವ ಮೇಷ್ಟ್ರು ಆದ್ರು

    ಹೆಣ್ಣು ಎಂದು ಸುಮ್ಮನೆ ಮನೆಯಲ್ಲಿ ಕೂರಲಿಲ್ಲ-ಪೌರಾಣಿಕ ನಾಟಕ ಕಲಿಸುವ ಮೇಷ್ಟ್ರು ಆದ್ರು

    -ನೇರಲೇಕೆರೆಯ ಸವಿತಾ ನಮ್ಮ ಪಬ್ಲಿಕ್ ಹೀರೋ

    ಹಾಸನ: ಪುರುಷ ಪ್ರಧಾನ ಸಮಾಜದಲ್ಲಿ ಹಲವು ಮಹಿಳೆಯರು ವಿಶೇಷ ಸಾಧನೆ ಮೂಲಕ ಗಮನ ಸೆಳೆದಿದ್ದಾರೆ. ಅದೇ ರೀತಿ ಹಾಸನದ ಮಹಿಳೆಯೊಬ್ಬರು ಬಡತನವನ್ನು ಮೆಟ್ಟಿನಿಂತು ಕೆಲಸ ಗಿಟ್ಟಿಸಿದ್ದಲ್ಲದೆ, ಬಿಡುವಿನ ಸಮಯದಲ್ಲಿ ಪುರುಷರಂತೆ ಹಾರ್ಮೋನಿಯಂ ನುಡಿಸುತ್ತ, ಹಳ್ಳಿಗಳಲ್ಲಿ ಪೌರಾಣಿಕ ನಾಟಕ ಕಲಿಸುತ್ತ ಕಲಾ ಸೇವೆ ಮಾಡುತ್ತಿದ್ದಾರೆ. ಈ ಮೂಲಕ ತಮ್ಮ ಕೈಯಲ್ಲಿ ಏನು ಮಾಡಲು ಸಾಧ್ಯ ಎನ್ನುವವರಿಗೆ ಸ್ಪೂರ್ತಿ ಆಗಿದ್ದಾರೆ.

    ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ ನೇರಲೇಕೆರೆಯ ನಿವಾಸಿ ಸವಿತಾ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಹಿಂದಿ ಬಿಎಡ್ ಪದವಿಧರೆಯಾಗಿರುವ ಸವಿತಾ ಅವರು ಪ್ರಾಥಮಿಕ ಕೃಷಿ ಸಹಕಾರ ಪತ್ತಿನಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡಿಕೊಂಡಿದ್ದಾರೆ. ಬಿಡುವಿನ ವೇಳೆ ಪೌರಾಣಿಕ ನಾಟಕ ಕಲಿಸುತ್ತಾರೆ. ಚಿಕ್ಕಂದಿನಿಂದಲ್ಲೂ ಸವಿತಾ ಅವರಿಗೆ ಪೌರಾಣಿಕ ನಾಟಕ ಅಂದ್ರೆ ಇಷ್ಟ. ಹಾರ್ಮೋನಿಯಂ ಕಲಿಬೇಕೆಂಬುದು ಅಪಾರ ಆಸೆ. ಅದರಂತೆ ತಮ್ಮ ಕೆಲಸದ ಬಿಡುವಿನಲ್ಲಿ ಹಾರ್ಮೋನಿಯಂ ಕಲಿತರು. ಕುರುಕ್ಷೇತ್ರ, ರಾಜ ಸತ್ಯವ್ರತ ನಾಟಕಗಳನ್ನು ಕರಗತ ಮಾಡಿಕೊಂಡರು. ಇದೀಗ ರಾಮಾಯಣ ನಾಟಕವನ್ನು ಅಭ್ಯಾಸ ಮಾಡುತ್ತಿದ್ದಾರೆ. ತಾವು ಸಂಪೂರ್ಣವಾಗಿ ಕಲಿತ ನಾಟಕಗಳನ್ನು ಇತರರಿಗೆ ಕಲಿಸುವ ಮೂಲಕ ಕಲಾಸೇವೆಯಲ್ಲಿ ತೊಡಗಿಕೊಂಡಿದ್ದಾರೆ.

    ನಾಟಕ ಕಲಿಸಲು ಹಳ್ಳಿಯ ಜನ ಇವರಿಗೆ ಹಣ ನೀಡುತ್ತಾರಾದರೂ ಅವರು ನೀಡುವ ದುಡ್ಡು ಸವಿತಾರ ಓಡಾಟಕ್ಕೆ ಸಾಕಾಗುತ್ತದೆ. ಕೆಲವೊಮ್ಮೆ 50 ಕಿಲೋಮೀಟರ್ ವರೆಗೂ ತಮ್ಮ ಸ್ಕೂಟರ್ ನಲ್ಲಿ ಹೋಗಿ ನಾಟಕ ಕಲಿಸಿದ್ದುಂಟು. ಹಣಕ್ಕಾಗಿ ನಾನು ನಾಟಕ ಕಲಿಸುತ್ತಿಲ್ಲ. ಇದೊಂದು ಕಲಾ ಸೇವೆ ಎಂದು ಸವಿತಾ ಹೇಳುತ್ತಾರೆ.

  • ಬಾದಾಮಿ ಬನಶಂಕರಿ ಜಾತ್ರಾ ಮಹೋತ್ಸವ – ಕುತೂಹಲ ಹೆಚ್ಚಿಸಿದ ‘ಹೌದು ಹುಲಿಯಾ’ ನಾಟಕ

    ಬಾದಾಮಿ ಬನಶಂಕರಿ ಜಾತ್ರಾ ಮಹೋತ್ಸವ – ಕುತೂಹಲ ಹೆಚ್ಚಿಸಿದ ‘ಹೌದು ಹುಲಿಯಾ’ ನಾಟಕ

    ಬಾಗಲಕೋಟೆ: ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿರುವ ಬಾದಾಮಿ ಬನಶಂಕರಿ ದೇವಾಲಯದ ಜಾತ್ರಾ ಮಹೋತ್ಸವವು ಇದೇ ಜನವರಿ 10 ರಂದು ನಡೆಯಲಿದೆ.

    ಒಂದು ತಿಂಗಳ ಕಾಲ ನಡೆಯುವ ಜಾತ್ರೆಯಲ್ಲಿ ನಾಟಕಗಳ ಪ್ರದರ್ಶನ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದೆ. ಹಗಲು- ರಾತ್ರಿ ನಡೆಯುವ ಏಕೈಕ ಮನರಂಜನೆ ಜಾತ್ರೆ ಆಗಿದ್ದು, ಎಲ್ಲಾ ಬಗೆಯ ಸಾಮಾಗ್ರಿಗಳು ದೊರಕುವುದು ಜಾತ್ರೆಯ ವಿಶೇಷತೆಯಾಗಿದೆ. ಜಾತ್ರೆಯ ಮುಂಚೆಯೇ ನಾಟಕ ಕಂಪನಿಗಳು ಯಾವುವು? ಅದರಲ್ಲಿ ಯಾವ ನಾಟಕಗಳ ಪ್ರದರ್ಶನ ಇದೆ ಎಂಬುದು ಕುತೂಹಲಕಾರಿ ಆಗಿರುತ್ತದೆ.

    ಈ ವರ್ಷದ ಜಾತ್ರೆಯಲ್ಲಿ ಎಂಟು ನಾಟಕ ಕಂಪನಿಗಳು ಭಾಗವಹಿಸಲಿದೆ. ಸಿದ್ದರಾಮಯ್ಯನವರ ಭಾಷಣದಲ್ಲಿ ಫುಲ್ ವೈರಲ್ ಆಗಿರುವ ‘ಹೌದು ಹುಲಿಯಾ’ ಡೈಲಾಗ್‍ನನ್ನೇ ಒಂದು ನಾಟಕಕ್ಕೆ ಹೆಸರಿಡಲಾಗಿದೆ. ಬಾದಾಮಿ ಕ್ಷೇತ್ರದ ಶಾಸಕರು ಆಗಿರುವ ಸಿದ್ದರಾಮಯ್ಯನವರ ಕ್ಷೇತ್ರದಲ್ಲಿ ‘ಹೌದು ಹುಲಿಯಾ’ ನಾಟಕ ಈ ಬಾರಿ ಹೆಚ್ಚು ಗಮನ ಸೆಳೆದಿದೆ. ಇದರ ಜೊತೆಗೆ ‘ಗೌರಿ ಹೋದಳು ಗಂಗೆ ಬಂದಳು’, ‘ನಿಶೆ ಏರಿಶ್ಯಾಳ ನವರಂಗಿ’, ‘ಹೌದಲೇನ ರಂಗಿ ಉದಲೇನ ಪುಂಗಿ’, ‘ರಕ್ತ ರಾತ್ರಿ’, ‘ಬಂದರ ಬಾರ ಬಸಣ್ಣಿ’, ‘ಮನಸ್ಯಾಕ ಕೊಟ್ಟಿ ಕೈಯರ ಬಿಟ್ಟಿ’, ‘ಸಿಂಪಲ್ ಹುಡುಗ ಡಿಂಪಲ್ ಹುಡುಗಿ’ ನಾಟಕಗಳ ಪ್ರದರ್ಶನ ನಡೆಯಲಿದೆ.

    ಜನವರಿ 9 ರಂದು ಪ್ರತಿ ಮೂರು ಪ್ರದರ್ಶನಗಳು ನಡೆಯಲಿದೆ. ಸಂಜೆ ಪ್ರಾರಂಭವಾಗಿ ಬೆಳಗಿನ ಜಾವದವರೆಗೆ ನಾಟಕ ಪ್ರದರ್ಶನ ನಡೆಯಲಿದ್ದು, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಿಂದ ಈ ಬನಶಂಕರಿ ದೇವಾಲಯ ಜಾತ್ರೆಯನ್ನು ನೋಡಲು ಸಾವಿರಾರು ಮಂದಿ ಬರುತ್ತಾರೆ.

  • ಬೈಎಲೆಕ್ಷನ್ ಫಲಿತಾಂಶದ ನಂತ್ರ ಹೊಸ ನಾಟಕಗಳು ಶುರುವಾಗಲಿದೆ: ಹೆಚ್‍ಡಿಕೆ

    ಬೈಎಲೆಕ್ಷನ್ ಫಲಿತಾಂಶದ ನಂತ್ರ ಹೊಸ ನಾಟಕಗಳು ಶುರುವಾಗಲಿದೆ: ಹೆಚ್‍ಡಿಕೆ

    ಮೈಸೂರು: ಮುಂದಿನ ತಿಂಗಳು ನಡೆಯುವ ಉಪಚುನಾವಣೆಯ ಫಲಿತಾಂಶ ಬಂದ ನಂತರ ರಾಜ್ಯದ ರಾಜಕೀಯದಲ್ಲಿ ಹೊಸ ನಾಟಕಗಳು ಶುರುವಾಗಲಿವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

    ಮೈಸೂರಿನಲ್ಲಿ ಜೆಡಿಎಸ್ ಮುಖಂಡ ನಾರಾಯಣಗೌಡ (48) ಮೃತಪಟ್ಟ ಹಿನ್ನೆಲೆಯಲ್ಲಿ ಇಂದು ಅಂತಿಮ ದರ್ಶನಕ್ಕೆ ಹೆಚ್‍ಡಿಕೆ ಆಗಮಿಸಿದ್ದರು. ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಇನ್ನೆರಡು ದಿನಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಫೈನಲ್ ಮಾಡುತ್ತೇವೆ ಎಂದು ತಿಳಿಸಿದರು.

    ಈ ಚುನಾವಣೆ ಎಲ್ಲಾ ಪಕ್ಷಗಳಿಗೂ ಅಗ್ನಿ ಪರೀಕ್ಷೆ. ಚುನಾವಣೆ ನಡೆದೇ ನಡೆಯುತ್ತದೆ ಇದರಲ್ಲಿ ಯಾವುದೇ ಸಂಶಯ ಬೇಡ. ಗೆಲುವು ಸಾಧಿಸಲು ಜೆಡಿಎಸ್ ತನ್ನದೇ ಆದ ರಾಜಕೀಯ ತಂತ್ರಗಾರಿಕೆ ಮಾಡಿದೆ. ಚುನಾವಣೆ ಫಲಿತಾಂಶ ಬಂದ ನಂತರ ರಾಜ್ಯದ ರಾಜಕೀಯದಲ್ಲಿ ಹೊಸ ನಾಟಕಗಳು ಶುರುವಾಗಲಿದೆ ಎಂದು ಹೇಳಿದರು.

    ಅಕ್ಟೋಬರ್ 21ರಂದು ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುತ್ತದೆ. ಅಕ್ಟೋಬರ್ 24ರಂದು ಚುನಾವಣಾ ಫಲಿತಾಂಸ ಹೊರಬೀಳಲಿದೆ.

  • ಸರ್ಕಾರಿ ದುಡ್ಡು ಜೆಡಿಎಸ್ ಜಾತ್ರೆ – ಗ್ರಾಮ ವಾಸ್ತವ್ಯಕ್ಕೆ ರವಿಕುಮಾರ್ ವ್ಯಂಗ್ಯ

    ಸರ್ಕಾರಿ ದುಡ್ಡು ಜೆಡಿಎಸ್ ಜಾತ್ರೆ – ಗ್ರಾಮ ವಾಸ್ತವ್ಯಕ್ಕೆ ರವಿಕುಮಾರ್ ವ್ಯಂಗ್ಯ

    – ಸಿಎಂ ಕನಸಿನಲ್ಲೂ ಮೋದಿ ಕಾಡ್ತಿದ್ದಾರೆ

    ಯಾದಗಿರಿ: ಸರ್ಕಾರದ ದುಡ್ಡಿನಲ್ಲಿ ಜೆಡಿಎಸ್ ಗ್ರಾಮ ವಾಸ್ತವ್ಯ ಎಂಬ ಜಾತ್ರೆ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ವ್ಯಂಗ್ಯವಾಡಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಕನಸಿನಲ್ಲೂ ಮೋದಿ ಕಾಡುತ್ತಿದ್ದಾರೆ. ವೈಟಿಪಿಎಸ್ ಸಿಬ್ಬಂದಿಗೆ ಲಾಠಿ ಬೀಸಲು ಹೇಳುತ್ತಿರಾ. ಕರ್ನಾಟಕದಲ್ಲಿ ಪೊಲೀಸ್ ರಾಜ್ಯ ನಿರ್ಮಿಸಲು ನೀವು ಹೊರಟಿದ್ದೀರಾ ಎಂದು ಪ್ರಶ್ನಿಸಿ ಮುಖ್ಯಮಂತ್ರಿಗಳ ವಿರುದ್ಧ ಗುಡುಗಿದರು.

    ಸರ್ಕಾರದ ದುಡ್ಡಿನಲ್ಲಿ ಸಿಎಂ ಜೆಡಿಎಸ್ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಈ ಬಗ್ಗೆ ಸ್ಪಷ್ಟನೆಯನ್ನು ಕೊಡಬೇಕು. ಮಾಜಿ ಪ್ರಧಾನಿ ದೇವೇಗೌಡರು ಪುತ್ರನ ವ್ಯಾಮೋಹದಲ್ಲಿದ್ದಾರೆ. ಸಿಎಂ ಏನೇ ತಪ್ಪು ಮಾಡಿದರೂ ದೊಡ್ಡಗೌಡರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಶಾಲೆಗಳಿಗೆ ಮೂಲ ಸೌಕರ್ಯವನ್ನು ನೀಡದೆ. ಸಿಎಂ ‘ಗ್ರಾಮ ಡ್ರಾಮ’ ಮಾಡುತ್ತಿದ್ದಾರೆ. ನಾಟಕ ಮಾಡೋದನ್ನು ಬಿಟ್ಟು ನಿಜವಾದ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ಹೇಳಿದರು.

    ಹೊಳೆನರಸೀಪುರಕ್ಕೆ ಮೆಡಿಕಲ್ ಕಾಲೇಜು ಮಂಜೂರು ಮಾಡಿದ್ದಾರೆ. ಆದರೆ ಯಾದಗಿರಿಗೆ ಸಿಎಂ ಮೆಡಿಕಲ್ ಕಾಲೇಜು ಬೇಡ ಎನ್ನುತ್ತಾರೆ. ಸಿಎಂ ಗ್ರಾಮ ವಾಸ್ತವ್ಯಕ್ಕೆ ನಿಂಬೆಹಣ್ಣಿನ ಶಕ್ತಿ ಅಡ್ಡಿ ಮಾಡುತ್ತಿದೆ ಎಂದು ದೇವೇಗೌಡರ ಕಾಲೆಳೆದ ರವಿಕುಮಾರ್, ಒಂದು ವರ್ಷ ರೆಸಾರ್ಟ್ ವಾಸವಾಯ್ತು, ಈಗ ಗ್ರಾಮ ಡ್ರಾಮ ನಂತರ ಅಮೆರಿಕಾಗೆ ಸಿಎಂ ತೆರಳಲಿದ್ದಾರೆ ಎಂದು ವ್ಯಂಗ್ಯವಾಡಿದರು.

  • ಅಳಿವಿನಂಚಿನಲ್ಲಿರುವ ಗ್ರಾಮೀಣ ರಂಗಕಲೆಗೆ ಜೀವ ತುಂಬಿದ ಜನಪ್ರತಿನಿಧಿಗಳು

    ಅಳಿವಿನಂಚಿನಲ್ಲಿರುವ ಗ್ರಾಮೀಣ ರಂಗಕಲೆಗೆ ಜೀವ ತುಂಬಿದ ಜನಪ್ರತಿನಿಧಿಗಳು

    ಬೆಂಗಳೂರು: ಸಾಮಾಜಿಕ ಜಾಲತಾಣಗಳ ಮೋಡಿಗೆ ಒಳಗಾಗಿರುವ ಯುವಕರನ್ನು ಪೌರಾಣಿಕತೆ ಕಡೆಗೆ ಮುಖಮಾಡಲು ನೆಲಮಂಗಲದ ಗ್ರಾಮಪಂಚಾಯತ್ ಸದಸ್ಯರ ತಂಡವೊಂದು ವಿಭಿನ್ನ ಪ್ರಯತ್ನ ಮಾಡಿದೆ.

    ಅಳಿವಿನಂಚಿನಲ್ಲಿರುವ ಗ್ರಾಮೀಣ ಪೌರಾಣಿಕ ರಂಗಕಲೆಗೆ ಯುವಕರು ಒತ್ತು ನೀಡಿದ್ದಾರೆ. ಅಲ್ಲದೆ ಮಹಾಭಾರತದ ನೀತಿಸಾರುವ ಕುರುಕ್ಷೇತ್ರ ಪೌರಾಣಿಕ ನಾಟಕವನ್ನು ಅಭಿನಯಿಸಿದ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ನಾಟಕದ ನಡುವೆಯು ಶಿಕ್ಷಣದ ಮಹತ್ವ ಸಾರಿದ್ದಾರೆ. ಹಾಗೆಯೇ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಗ್ರಾಮೀಣ ಪ್ರತಿಭೆಗೆ ಸನ್ಮಾನ ಮಾಡಿ ಪ್ರೋತ್ಸಾಹಿಸಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಅರೇಬೊಮ್ಮನಹಳ್ಳಿ ಗ್ರಾಮ ಪಂಚಾಯತಿ ಸದಸ್ಯರು ಕುರುಕ್ಷೇತ್ರ ನಾಟಕ ಅಭಿನಯಿಸಿದ್ದಾರೆ. ರಾಮಾಯಣ ಮತ್ತು ಮಹಾಭಾರತವನ್ನು ಯುವಜನತೆಗೆ ತಿಳಿಸಲು ಈ ಮೂಲಕ ಪ್ರಯತ್ನ ಮಾಡಿದ್ದಾರೆ. ಅದರಲ್ಲೂ ಎಲ್ಲಾ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಸಿಬ್ಬಂದಿ ಸೇರಿ ನಾಟಕ ಪ್ರದರ್ಶನ ಮಾಡಿದ್ದು ವಿಶೇಷವಾಗಿತ್ತು.

    ಈ ಬಗ್ಗೆ ಮಾತನಾಡಿದ ಗ್ರಾಮ ಪಂಚಾಯತಿ ಸದಸ್ಯರು, ಆಡಳಿತ ವ್ಯವಸ್ಥೆಯ ಮೂಲವಾದ ಗ್ರಾಮ ಪಂಚಾಯತಿಯ ಆಡಳಿತದ ಜೊತೆಗೆ, ಬಿಡುವಿನ ವೇಳೆಯಲ್ಲಿ ಕಲೆಯನ್ನು ಕಲಿತಿದ್ದು ಸಂತಸವಾಗಿದೆ ಎಂದರು. ಕಲೆಯ ಜೊತೆಗೆ ಶಿಕ್ಷಣಕ್ಕೂ ಪ್ರೋತ್ಸಾಹ ನೀಡುವ ಉದ್ದೇಶದಿಂದ, ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.98 ರಷ್ಟು ಫಲಿತಾಂಶ ಪಡೆದ ಗ್ರಾಮೀಣ ಪ್ರತಿಭೆ ಸಿಂಚನಾಳನ್ನು ಸನ್ಮಾನಿಸಿ ನಾಟಕ ಮಂಡಳಿಯವರು ಪ್ರಶಂಸೆಗೆ ಪಾತ್ರವಾದರು.

    ದಿನನಿತ್ಯದ ಕೆಲಸದ ಜೊತೆಗೆ ಗ್ರಾಮ ಪಂಚಾಯತಿಯಲ್ಲಿ ರಾಜಕೀಯವನ್ನು ಮರೆತು ಕೌರವ ಮತ್ತು ಪಾಂಡವರಾಗಿ ಸದಸ್ಯರು ಅಭಿನಯಿಸಿದರು. ಯುವಜನತೆ ಮೊಬೈಲನ್ನು ಅತೀಯಾಗಿ ಬಳಕೆ ಮಾಡುತ್ತಿರುವುರಿಂದ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆ ಕಡಿಮೆ ಮಾಡುವ ಸಲುವಾಗಿ ಈ ಕಲೆಯನ್ನು ಪ್ರದರ್ಶಿಸಿದ್ದೇವೆ. ನಮ್ಮ ಮುಂದಿನ ಪೀಳಿಗೆ ಈ ಬಯಲುಸೀಮೆ ಕಲೆಯನ್ನು ನೋಡಿ ಈಗ ಕಲಿಯಲು ಮುಂದಾಗಿರುವುದು ಹೆಮ್ಮೆಯ ವಿಚಾರ ಎಂದು ಪಾತ್ರಧಾರಿಗಳು ಸಂತಸ ವ್ಯಕ್ತಪಡಿಸಿದರು.

  • ಗದೆ ಹಿಡಿದು ಭೀಮನಾದ ಶಾಸಕ ಕೆ.ಎಂ.ಶಿವಲಿಂಗೇಗೌಡ

    ಗದೆ ಹಿಡಿದು ಭೀಮನಾದ ಶಾಸಕ ಕೆ.ಎಂ.ಶಿವಲಿಂಗೇಗೌಡ

    ಹಾಸನ: ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ ಗದೆ ಹಿಡಿದು ಭೀಮನ ಪಾತ್ರದ ಡೈಲಾಗ್ ಹೊಡೆದು ಆಭಿಮಾನಿಗಳನ್ನು ರಂಜಿಸಿದ್ದಾರೆ.

    ತಾಲೂಕಿನ ಬಾಗೇಶಪುರ ಎಂಬ ಗ್ರಾಮದಲ್ಲಿ ನಡೆದ ಜಾತ್ರಾ ಮಹೋತ್ಸವದಲ್ಲಿ ಆಯೋಜಿಸಿದ್ದ ಕುರುಕ್ಷೇತ್ರ ನಾಟಕದಲ್ಲಿ ಗದೆ ಹಿಡಿದು ಭೀಮನ ಪಾತ್ರದಲ್ಲಿ ಕೆ.ಎಂ.ಶಿವಲಿಂಗೇಗೌಡ ಅವರು ಘರ್ಜಿಸಿದ್ದಾರೆ.

    ಈ ಜಾತ್ರಾ ಮಹೋತ್ಸವಕ್ಕೆ ಕೆ.ಎಂ.ಶಿವಲಿಂಗೇಗೌಡ ಅವರನ್ನು ಮುಖ್ಯ ಆತಿಥಿಯಾಗಿ ಆಹ್ವಾನ ನೀಡಲಾಗಿತ್ತು. ಆ ಜಾತ್ರೆಯ ಪ್ರಯುಕ್ತ ಕುರುಕ್ಷೇತ್ರ ನಾಟಕವನ್ನು ಗ್ರಾಮಸ್ಥರು ಆಯೋಜಿಸಿದ್ದರು. ಜಾತ್ರೆಯಲ್ಲಿ ಭಾಗವಹಿಸಿದ ಶಾಸಕರು ನಂತರ ವೇದಿಕೆಯ ಮೇಲೆ ಹೋಗಿ ಗದೆ ಹಿಡಿದು ಭೀಮನ ಡೈಲಾಗ್ ಹೊಡೆದು ಜನರನ್ನು ರಂಜಿಸಿದ್ದಾರೆ. ತಮ್ಮ ನೆಚ್ಚಿನ ಶಾಸಕರು ಅಭಿನಯ ನೋಡಿದ ಊರಿನ ಗ್ರಾಮಸ್ಥರು ಮತ್ತು ಆಭಿಮಾನಿಗಳು ಶಿಳ್ಳೆ ಚಪ್ಪಾಳೆ ಹೊಡೆದರು.

  • ಮನೆ ಮನೆಗೆ ಪತ್ರಿಕೆ ಹಂಚಿ ಪರೀಕ್ಷೆ ಶುಲ್ಕ ಕಟ್ಟಿದ್ದ ಮಾಸ್ಟರ್ ಹಿರಣ್ಣಯ್ಯ

    ಮನೆ ಮನೆಗೆ ಪತ್ರಿಕೆ ಹಂಚಿ ಪರೀಕ್ಷೆ ಶುಲ್ಕ ಕಟ್ಟಿದ್ದ ಮಾಸ್ಟರ್ ಹಿರಣ್ಣಯ್ಯ

    ಬೆಂಗಳೂರು: ರಂಗಭೂಮಿ ಕಲಾವಿದ 84 ವರ್ಷದ ಮಾಸ್ಟರ್ ಹಿರಣ್ಣಯ್ಯ ವಯೋಸಹಜ ಕಾಯಿಲೆಯಿಂದ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಇಂದು ವಿಧಿವಶರಾಗಿದ್ದಾರೆ.

    ಬಾಲ್ಯ:
    ಮಾಸ್ಟರ್ ಹಿರಣ್ಣಯ್ಯ ಅವರು ಫೆಬ್ರವರಿ 15, 1934 ರಂದು ಮೈಸೂರಿನಲ್ಲಿ ಜನಿಸಿದರು. ಇವರ ಮೂಲ ಹೆಸರು ನರಸಿಂಹಮೂರ್ತಿ. ಕಲ್ಚರ್ಡ್ ಕಮೆಡಿಯನ್ ಎಂದು ಪ್ರಖ್ಯಾತರಾಗಿದ್ದ ಕೆ. ಹಿರಣ್ಣಯ್ಯ ಮತ್ತು ಶಾರದಮ್ಮ ದಂಪತಿಯ ಒಬ್ಬನೇ ಮಗನಾಗಿದ್ದರು. ಹಿರಣ್ಣಯ್ಯ ಅವರು ಇಂಟರ್ ಮೀಡಿಯೆಟ್‍ವರೆಗೆ(ಪಿಯುಸಿ) ವ್ಯಾಸಂಗ ಮಾಡಿದ್ದಾರೆ. 1952ರಲ್ಲಿ ತಂದೆಯೊಂದಿಗೆ ಕೂಡಿಕೊಂಡು ಅವರಿಂದಲೇ ರಂಗ ಶಿಕ್ಷಣ ಪಡೆದರು. ಮಾಸ್ಟರ್ ಹಿರಣ್ಣಯ್ಯನವರು ಬಾಲ್ಯದಲ್ಲಿರುವಾಗ ಅವರ ತಂದೆ ಮದರಾಸಿನಲ್ಲಿ ಬದುಕನ್ನರಸಿ ತಮ್ಮ ಕುಟುಂಬವನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದರು. ಹೀಗಾಗಿ ಅವರು ತಮಿಳು, ತೆಲುಗು ಮತ್ತು ಇಂಗ್ಲಿಷ್ ಭಾಷೆಗಳನ್ನು ಕಲಿತ್ತಿದ್ದರು.

    ಜೊತೆಗೆ ಮನೆಯಲ್ಲಿ ಕನ್ನಡದ ಬಾಯಿಪಾಠ ಮತ್ತು ಸಂಸ್ಕೃತದ ಸ್ತೋತ್ರ ಪಾಠ ಕೂಡ ಮಾಡಿದ್ದರು. ನಂತರದಲ್ಲಿ ಮೈಸೂರಿಗೆ ಬಂದು ಬನುಮಯ್ಯ ಮಾಧ್ಯಮಿಕ ಶಾಲೆಗೆ ಸೇರಿದ್ದರು. ನಂತರ `ಸಾಧ್ವಿ’, `ಮೈಸೂರು ಪತ್ರಿಕೆ’ಯನ್ನು ಮನೆ ಮನೆಗೆ ಹಂಚಿ ಆ ಸಂಪಾದನೆಯಿಂದ ಶಾಲಾ ಪರೀಕ್ಷೆಗಳ ಶುಲ್ಕಕ್ಕೆ ದಾರಿ ಮಾಡಿಕೊಂಡಿದ್ದರು. ಮುಂದೆ ಇಂಟರ್ ಮೀಡಿಯೆಟ್ ಓದಿಗಾಗಿ ಶಾರದಾವಿಲಾಸ ಕಾಲೇಜು ಸೇರಿದ್ದರು.

    ರಂಗಭೂಮಿ:
    ಇವರ ತಂದೆ ಕೆ. ಹಿರಣ್ಣಯ್ಯನವರು 1940ರಲ್ಲಿ ರಚಿಸಿ, ನಿರ್ದೇಶಿಸಿದ ಚಲನಚಿತ್ರ `ವಾಣಿ’ಯಲ್ಲಿ ಹಿರಣ್ಣಯ್ಯನವರು ನಟಿಸುವ ಮೂಲಕ ಬಣ್ಣದ ಬದುಕಿಗೆ ಪಾದಾರ್ಪಣೆ ಮಾಡಿದ್ದರು. 1948ರಲ್ಲಿ ರಂಗಭೂಮಿಯಲ್ಲಿ ಚಿಕ್ಕ ಪಾತ್ರಮಾಡಲು ಹೋಗಿ ಸೋತಿದ್ದರು. ಆದರೂ ಛಲದಿಂದ ಕಾಲೇಜಿನಲ್ಲಿ ಸಂಘ ಕಟ್ಟಿ `ಆಗ್ರಹ’ ಎಂಬ ನಾಟಕವನ್ನು ಪ್ರದರ್ಶಿಸಿ ಅದ್ಭುತ ಅಭಿನಯದಿಂದ ನಾಟಕ ಗೆದ್ದಿತ್ತು. 1953ರಲ್ಲಿ ತಂದೆ ಕೆ. ಹಿರಣ್ಣಯ್ಯ ಅವರು ನಿಧನರಾದ್ದು, ತಂದೆಯ ನಿಧನದ ನಂತರ ಅ.ನ.ಕೃ. ಮತ್ತು ಮಿತ್ರರ ಸಹಾಯದಿಂದ ನಾಟಕ ಕಂಪನಿ ಕಟ್ಟಿದ್ದರು. ಆದರೆ ಅದರಲ್ಲೂ ನಷ್ಟ ಅನುಭವಿಸಿದರು. ಬಳಿಕ ತಂದೆ ನಡೆಸುತ್ತಿದ್ದ `ಹಿರಣ್ಣಯ್ಯ ಮಿತ್ರ ಮಂಡಳಿ’ ಯನ್ನು ಪುನಃ ಆರಂಭಿಸಿ `ಲಂಚಾವತಾರ’ ನಾಟಕವನ್ನು ರಚಿಸಿ ರಂಗ ಪ್ರಯೋಗ ಮಾಡಿದರು. ಜನಪ್ರಿಯತೆಯ ಜೊತೆಗೆ ಮಹಾರಾಜರಿಂದ ಸನ್ಮಾನ ಮತ್ತು `ನಟರತ್ನಾಕರ’ ಎಂದು ಬಿರುದನ್ನು ಪಡೆದುಕೊಂಡರು.

    `ನಡುಬೀದಿ ನಾರಾಯಣ’ದಲ್ಲಿ ತೀರ್ಥರೂಪುವಾಗಿ, `ಭ್ರಷ್ಟಾಚಾರ’ದಲ್ಲಿ ಧಫೇದಾರ್ ಮುರಾರಿಯಾಗಿ, `ಸದಾರಮೆ’ಯಲ್ಲಿ ಕಳ್ಳನಾಗಿ, ಆದಿಮೂರ್ತಿಯಾಗಿ, `ಕಪಿಮುಷ್ಠಿ’ಯಲ್ಲಿ ಜಾರ್ಜ್ ಆಗಿ, ಕಸ್ತೂರಿಯಾಗಿ, `ಮಕ್ಮಲ್ ಟೋಪಿ’ಯಲ್ಲಿ ನಾಣಿಯಾಗಿ ಹಿರಣ್ಣಯ್ಯನವರು ಜನರನ್ನು ಆಕರ್ಷಿಸಿದರು. ಈ ನಾಟಕಗಳೇ ಅಲ್ಲದೆ `ದೇವದಾಸಿ’, `ಅನಾಚಾರ’, `ಅತ್ಯಾಚಾರ’, `ಕಲ್ಕ್ಯಾವತಾರ’, `ಅಮ್ಮಾವ್ರ ಅವಾಂತರ’, `ಪುರುಷಾಮೃಗ’ ಹೀಗೆ 25ಕ್ಕೂ ಹೆಚ್ಚು ನಾಟಕಗಳನ್ನು ರಂಗಕ್ಕೆ ತಂದು ಅಪಾರ ಕೀರ್ತಿಗಳಿಸಿದರು. ಅವರ `ಲಂಚಾವತಾರ’ ನಾಟಕವೊಂದೇ 10,000ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡ ದಾಖಲೆಯನ್ನು ನಿರ್ಮಿಸಿದೆ.

    ಪ್ರಶಸ್ತಿ ಗೌರವಗಳು:
    ಮಾಸ್ಟರ್ ಹಿರಣ್ಣಯ್ಯನವರಿಗೆ ಹಲವಾರು ಬಿರುದುಗಳೂ ಅತ್ಯುನ್ನತ ರಂಗ ಪ್ರಶಸ್ತಿಯಾದ ಡಾ. ಗುಬ್ಬೀ ವೀರಣ್ಣ ಪ್ರಶಸ್ತಿಯೂ ಸೇರಿದಂತೆ ಪ್ರಶಸ್ತಿಗಳು ಲಭ್ಯವಾಗಿವೆ. ಇವೆಲ್ಲಕ್ಕೂ ಮಿಗಿಲಾಗಿ ದೇಶ ವಿದೇಶಗಳಲ್ಲಿರುವ ಕನ್ನಡಿಗರು ಅವರನ್ನು ಗೌರವಿಸಿದ್ದಾರೆ.

    ಪ್ರಮುಖ ನಾಟಕಗಳು: ಮಕ್ಮಲ್ ಟೋಪಿ, ಕಪಿಮುಷ್ಟಿ, ದೇವದಾಸಿ, ನಡುಬೀದಿ ನಾರಾಯಣ, ಲಂಚಾವತಾರಮ ಪಶ್ಚಾತ್ತಾಪ, ಭ್ರಷ್ಟಾಚಾರ, ಚಪಲಾವತಾರ, ಡಬ್ಬಲ್ ತಾಳಿ, ಲಾಟರಿ ಸರ್ಕಾರ, ಸನ್ಯಾಸಿ ಸಂಸಾರ, ಸದಾರಮೆ, ಎಚ್ಚಮ ನಾಯಕ ಪ್ರಮುಖ ನಾಟಕಗಳಾಗಿವೆ.

    ಚಲನಚಿತ್ರಗಳಲ್ಲಿ ಹಿರಣ್ಣಯ್ಯ:
    ಹಿರಣ್ಣಯ್ಯ ಮಿತ್ರ ಮಂಡಳಿ ಪ್ರಮುಖ ನಾಟಕಗಳಲ್ಲೊಂದಾದ ‘ದೇವದಾಸಿ’ ಚಲನಚಿತ್ರವಾಗಿದ್ದು, ಅದರಲ್ಲಿ ಹಿರಣ್ಣಯ್ಯನವರು ಅಭಿನಯಿಸಿದ್ದರು. ಸಂಪ್ರದಾಯ, ಆನಂದ ಸಾಗರ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಅಷ್ಟೇ ಅಲ್ಲದೇ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಪುಣ್ಯಕೋಟಿ’, ‘ಅಮೃತ ವಾಹಿನಿ’ ಧಾರಾವಾಹಿಗಳಲ್ಲಿಯೂ ಮಾಸ್ಟರ್ ಹಿರಣ್ಣಯ್ಯನವರು ಅಭಿನಯಿಸಿದ್ದಾರೆ.

    ಪ್ರಶಸ್ತಿ-ಪುರಸ್ಕಾರಗಳ:
    ರಾಜ್ಯೋತ್ಸವ ಪ್ರಶಸ್ತಿ, ನಾಟಕ ಅಕಾಡೆಮಿ ಪ್ರಶಸ್ತಿ, ರಂಗಭೂಮಿ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ ಮತ್ತು ನವರತ್ನ ರಾಂ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಜೊತೆಗೆ ಕಲಾಗಜ ಸಿಂಹ ಮತ್ತು ನಟ ರತ್ನಾಕರ ಎಂದ ಬಿರುವುದನ್ನು ಪಡೆದುಕೊಂಡಿದ್ದಾರೆ.

  • ಅಸಭ್ಯ ವರ್ತನೆ- ನಾಟಕ ಕಲಾವಿದೆಯಿಂದ ಯುವಕನಿಗೆ ಚಪ್ಪಲಿ ಏಟು!

    ಅಸಭ್ಯ ವರ್ತನೆ- ನಾಟಕ ಕಲಾವಿದೆಯಿಂದ ಯುವಕನಿಗೆ ಚಪ್ಪಲಿ ಏಟು!

    ಬಾಗಲಕೋಟೆ: ನಾಟಕ ಪ್ರದರ್ಶನ ನಡೆಯುತ್ತಿದ್ದ ವೇಳೆ ಕಲಾವಿದೆ ಜೊತೆ ಅನುಚಿತವಾಗಿ ವರ್ತಿಸಿದ ಯುವಕನೊಬ್ಬ ಚಪ್ಪಲಿ ಏಟು ತಿಂದ ಘಟನೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ನಡೆದಿದೆ.

    ಸೋಮವಾರ ರಾತ್ರಿ ಹಿಪ್ಪರಗಿ ಗ್ರಾಮದಲ್ಲಿ “ಸೇಡಿಗಾಗಿ ಸಿಡಿದೆದ್ದ ಬಡವ” ಎಂಬ ನಾಟಕ ಪ್ರದರ್ಶನ ನಡೆಯುತ್ತಿತ್ತು. ನಾಟಕಕ್ಕೂ ಮುನ್ನ ಹಿಪ್ಪರಗಿ ಗ್ರಾಮದ ನಿವಾಸಿ ಬಸವರಾಜ್ ನಾಟಕ ಕಲಾವಿದೆ ರೇಖಾ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಅಲ್ಲದೆ ನನ್ನನ್ನು ಚುಂಬಿಸಲು ಬಂದಿದ್ದ ಎಂದು ಆರೋಪಿಸಿ ಕಲಾವಿದೆ ಬಸವರಾಜ್‍ಗೆ ಚಪ್ಪಲಿಯಿಂದ ಭರ್ಜರಿಯಾಗಿ ಥಳಿಸಿದ್ದಾರೆ. ಇದನ್ನೂ ಓದಿ:ನಾಟಕದ ವೇದಿಕೆಯ ಮೇಲೆಯೇ ಮೈ ಮರೆತು ಜೋಡಿಯಿಂದ ಲಿಪ್‍ಲಾಕ್

    ಬಳಿಕ ಈ ವಿಷಯ ತಿಳಿದ ಗ್ರಾಮಸ್ಥರು ಇಂದು ಬೆಳಿಗ್ಗೆ ಇದೇ ವಿಚಾರವಾಗಿ ಗುರುಹಿರಿಯರ ಸಮ್ಮುಖದಲ್ಲಿ ಮಾತುಕತೆ ನಡೆಸಿದ್ದರು. ಈ ವೇಳೆ ಕೂಡ ಯುವಕನಿಗೆ ಕಲಾವಿದೆ ಚಪ್ಪಲಿ ಏಟು ನೀಡಿದ್ದಾರೆ. ನಂತರ ಗ್ರಾಮಸ್ಥರು ಯುವಕನಿಗೆ ಬುದ್ಧಿವಾದ ಹೇಳಿ, ಕಲಾವಿದೆಯ ಕಾಲಿಗೆ ಬೀಳಿಸಿ, ಕ್ಷಮೆ ಕೇಳಿಸಿ, ಪರಿಸ್ಥಿತಿ ಶಾಂತಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

  • ನಾಟಕದ ವೇದಿಕೆಯ ಮೇಲೆಯೇ ಮೈ ಮರೆತು ಜೋಡಿಯಿಂದ ಲಿಪ್‍ಲಾಕ್

    ನಾಟಕದ ವೇದಿಕೆಯ ಮೇಲೆಯೇ ಮೈ ಮರೆತು ಜೋಡಿಯಿಂದ ಲಿಪ್‍ಲಾಕ್

    ಭೋಪಾಲ್: ಜೋಡಿಯೊಂದು ವೇದಿಕೆಯ ಮೇಲೆ ನಾಟಕವಾಡುವಾಗ ಕಿಸ್ ಮಾಡುವ ದೃಶ್ಯವಿಲ್ಲದಿದ್ದರೂ ಮೈ-ಮರೆತೂ ಒಬ್ಬರಿಗೊಬ್ಬರು ಲಿಕ್‍ಲಾಕ್ ಮಾಡಿರುವ ಘಟನೆ ನಡೆದಿದೆ.

    ಭೋಪಾಲ್ ನ ರವೀಂದ್ರ ರಂಗಮಂದಿರದಲ್ಲಿ ಈ ಘಟನೆ ನಡೆದಿದೆ. ರೋಮಿಯೋ-ಜೂಲಿಯಟ್ ನಾಟಕದ ದೃಶ್ಯದ ವೇಳೆ ಲಿಪ್ ಲಾಕ್ ಮಾಡಲಾಗಿದೆ. ನಿಶಾಂತ್ ರಘವಂಶಿ ರೋಮಿಯೋ ಪಾತ್ರವನ್ನು, ಮೃಣಾಲಿ ಪಾಂಡೆ ಜೂಲಿಯಟ್ ಪಾತ್ರವನ್ನು ಮಾಡುತ್ತಿದ್ದರು.

    ರೋಮಿಯೋ-ಜೂಲಿಯಟ್ ನಾಟಕ:
    ನಾಟಕದಲ್ಲಿ ಜೂಲಿಯಟ್ ವಿಷ ಸೇವಿಸಿ ಸಾಯುವ ನಾಟಕ ಮಾಡುತ್ತಾಳೆ. ಆದರೆ ರೋಮಿಯೋ ನಿಜವಾಗಿಯೂ ಜೂಲಿಯಟ್ ಮೃತಪಟ್ಟಿದ್ದಾಳೆ ಎಂದು ದುಃಖಿತನಾಗಿ ತಾನೂ ಸಾಯಲು ಮುಂದಾಗುತ್ತಾನೆ. ಈ ವೇಳೆ ರೋಮಿಯೋ ಪಾತ್ರಧಾರಿ ನಿಶಾಂತ್ ರಘವಂಶಿ ವೇದಿಕೆ ಮೇಲೆಯೇ ಜೂಲಿಯಟ್ ಪಾತ್ರಧಾರಿ ಮೃಣಾಲಿ ಪಾಂಡೆಗೆ ಕಿಸ್ ಕೊಟ್ಟಿದ್ದಾನೆ. ಇತ್ತ ಸಾಯುವಂತೆ ನಟಿಸಿದ್ದ ಜೂಲಿಯಟ್ ಎದ್ದು ಆಕೆಯೂ ನಿಶಾಂತ್ ರಘವಂಶಿಗೆ ಲಿಪ್‍ಲಾಕ್ ಕಿಸ್ ಮಾಡಿದ್ದಾಳೆ. ಇಬ್ಬರು ಕಿಸ್ ಮಾಡುತ್ತಿದ್ದಂತೆ ಪ್ರೇಕ್ಷಕರು ಗಲಾಟೆ ಮಾಡಿದ್ದಾರೆ.

    ನಾಟಕದಲ್ಲಿ ಈ ದೃಶ್ಯವು ಇರಲಿಲ್ಲ. ಆದರೆ ಲಿಪ್-ಲಾಕ್ ದೃಶ್ಯವನ್ನು ನೋಡಿ ನನಗೆ ಆಶ್ಚರ್ಯವಾಯಿತು. ನಿಶಾಂತ್ ರಘುವಂಶಿ ಮತ್ತು ಮೃಣಾಲಿ ಪಾಂಡೆ ರೋಮಿಯೋ-ಜೂಲಿಯೆಟ್ ಪಾತ್ರದಲ್ಲಿ ಅಭಿನಯಿಸುತ್ತಿದ್ದರು. ನಾನು ಈ ನಾಟಕ ಮಾಡಲು ಫೇಸ್‍ಬುಕ್‍ನಲ್ಲಿ ಆಡಿಷನ್ ಬಗ್ಗೆ ಮೆಸೇಜ್ ಮಾಡಿದ್ದೆ. ಅದನ್ನು ನೋಡಿ ಈ ನಾಟಕ ಮಾಡಲು ಬಂದಿದ್ದರು. ನಾವು ಇಂಗ್ಲಿಷ್‍ನಲ್ಲಿ ರೋಮಿಯೋ-ಜೂಲಿಯೆಟ್ ಮಾಡಿದ್ದರೆ ಬಹುಶಃ ಲಿಪ್-ಲಾಕ್ ದೃಶ್ಯಗಳನ್ನು ಇರುತ್ತಿತ್ತು ಎಂದು ನಾಟಕದ ನಿರ್ದೇಶಕರಾದ ವಾಸಿಮ್ ಅಲಿ ಹೇಳಿದ್ದಾರೆ.

    ನಾನು ವೇದಿಕೆಯ ಮೇಲೆ ಇದೇ ಮೊದಲ ಬಾರಿಗೆ ನಾಟಕ ಮಾಡಿದ್ದು, ನಾಟಕದ ಮೊದಲು ಅಭ್ಯಾಸ ಮಾಡುವಾಗ ಅಂತಹ ಯಾವುದೇ ದೃಶ್ಯ ಇರಲಿಲ್ಲ. ಆದರೆ ವೇದಿಕೆಯಲ್ಲಿದ್ದಾಗ ಭಾವಾನಾತ್ಮಕವಾದ ನಟನೆ ಮಾಡಿದ್ದೇವೆ. ಆದರೆ ಅದು ಲಿಪ್-ಲಾಕ್ ದೃಶ್ಯವಲ್ಲ. ನಾವು ದೃಶ್ಯದಲ್ಲಿ ಹತ್ತಿರದಲ್ಲಿದ್ದೇವೆ ಅಷ್ಟೇ. ನಾನು ರಂಗಮಂದಿರದಲ್ಲಿ ಈ ದೃಶ್ಯವನ್ನು ಇಷ್ಟಪಡುವುದಿಲ್ಲ ಎಂದು ನಿಶಾಂತ್ ರಘುವಂಶಿ ತಿಳಿಸಿದ್ದಾರೆ.

  • ಶಾಸಕನ ಶ್ರೀಕೃಷ್ಣನ ಪಾತ್ರಕ್ಕೆ ಪ್ರೇಕ್ಷಕರು ಫುಲ್ ಫಿದಾ

    ಶಾಸಕನ ಶ್ರೀಕೃಷ್ಣನ ಪಾತ್ರಕ್ಕೆ ಪ್ರೇಕ್ಷಕರು ಫುಲ್ ಫಿದಾ

    ಕೋಲಾರ: ಇಷ್ಟು ದಿನ ಜನಪ್ರತಿನಿಧಿಗಳು ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಪಾಲ್ಗೊಂಡು ಜನರ ಗಮನ ಸೆಳೆದಿದ್ದರು. ಆದ್ರೆ ಈಗ ಶಾಸಕರೊಬ್ಬರು ನಾಟಕವೊಂದಕ್ಕೆ ಬಣ್ಣ ಹಚ್ಚಿ ಶ್ರೀಕೃಷ್ಣನ ಪಾತ್ರದಲ್ಲಿ ಸಖತ್ ಮಿಂಚಿದ್ದಾರೆ.

    ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಗ್ರಾಮದಲ್ಲಿ ನಡೆದ ಪೌರಾಣಿಕ ನಾಟಕದಲ್ಲಿ ಇಲ್ಲಿನ ಶಾಸಕ ಎಸ್. ಎನ್.ನಾರಾಯಣಸ್ವಾಮಿ ಬಣ್ಣ ಹಚ್ಚಿದ್ದಾರೆ. ಅವರ ಶ್ರೀಕೃಷ್ಣನ ಪಾತ್ರಕ್ಕೆ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ. ಅಲ್ಲದೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ, ತಾಲೂಕು ಪಂಚಾಯ್ತಿ ಅಧ್ಯಕ್ಷ ಹಾಗೂ ಗ್ರಾಮದ ಮುಖಂಡರು ನಾಟಕದಲ್ಲಿ ವಿವಿಧ ಪಾತ್ರದಲ್ಲಿ ಮಿಂಚಿದ್ದಾರೆ.

    ಬೂದಿಕೋಟೆ ಗ್ರಾಮದ ಲಕ್ಷ್ಮಿವೆಂಕಟರಮಣ ಸ್ವಾಮಿ ದೇವಾಲಯದ ಪುಷ್ಪ ಪಲ್ಲಕ್ಕಿ ಹಾಗೂ ಕರಗ ಮಹೋತ್ಸವದ ಪ್ರಯುಕ್ತ ನಾಟಕ ಹಮ್ಮಿಕೊಳ್ಳಲಾಗಿತ್ತು. ಸಾಮ್ರಾಟ್ ಸುಯೋಧನ ನಾಟಕದಲ್ಲಿ ಶ್ರೀಕೃಷ್ಣನ ಪಾತ್ರ ಹಾಕಿ ಶಾಸಕ ನಾರಾಯಣಸ್ವಾಮಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಶಾಸಕರು ಹಾಗೂ ಗ್ರಾಮದ ಮುಖಂಡರುಗಳ ಅಭಿನಯಕ್ಕೆ ಪ್ರೇಕ್ಷಕರು ಫುಲ್ ಖುಷ್ ಆಗಿದ್ದು, ಅವರ ಕಲೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.