Tag: drainage water

  • ಕಲುಷಿತ ನೀರು ಕುಡಿದು ಮೂವರು ಮೃತಪಟ್ಟರೂ ಅಧಿಕಾರಿಗಳು ಡೋಂಟ್ ಕೇರ್!

    ಕಲುಷಿತ ನೀರು ಕುಡಿದು ಮೂವರು ಮೃತಪಟ್ಟರೂ ಅಧಿಕಾರಿಗಳು ಡೋಂಟ್ ಕೇರ್!

    ಯಾದಗಿರಿ: ಜಿಲ್ಲೆಯಲ್ಲಿ ಜೀವಜಲ, ಜೀವಕ್ಕೆ ಮಾರಕವಾಗ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ನೀರು ಕಲುಷಿತಗೊಂಡು, ಜನ ಸಾವಿಗೀಡಾಗ್ತಿದ್ದಾರೆ. ಮೂರು ಜನ ಸಾವನ್ನಪ್ಪಿದ್ರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು ಜನರ ಜೀವನದ ಜೊತೆ ಚೆಲ್ಲಾಟವಾಡ್ತಿದ್ದಾರೆ.

    ಯಾದಗಿರಿ (Yadagiri) ಜಿಲ್ಲೆಯಲ್ಲಿ ಜೀವ ಜಲ ಕಲುಷಿತವಾಗುತ್ತಿದೆ. ಗ್ರಾಮಗಳಿಗೆ ಪೊರೈಕೆ ಮಾಡೋ ನೀರು ಜನರ ಜೀವ ಬಲಿ ಪಡಿತಿದ್ರೆ, ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಂಡಿಲ್ಲ. ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಅನಪುರ ಗ್ರಾಮದಲ್ಲಿ ಪಂಚಾಯಿತಿ ಪೂರೈಕೆ ಮಾಡುವ ಪೈಪ್‍ಲೈನ್‍ನಲ್ಲಿ ಮಲಮಿಶ್ರಿತ ಕಲುಷಿತ ನೀರು ಪೂರೈಕೆಯಾಗಿ ಮೂರು ಜನ ಮೃತಪಟ್ಟ ಘಟನೆ ಮಾಸುವ ಮುನ್ನವೇ, ಮತ್ತದೇ ರೀತಿಯ ಅವಾಂತರ ಆಗೋ ಎಲ್ಲಾ ಸಾಧ್ಯತೆಗಳಿಗೆ ಅದೇ ಕ್ಷೇತ್ರ ವ್ಯಾಪ್ತಿಯ ಸೈದಾಪುರ ಗ್ರಾಮದಲ್ಲಿ ಕಂಡುಬಂದಿದೆ.

    ಸೈದಾಪುರ ಗ್ರಾಮಸ್ಥರಿಗೆ ಪೂರೈಕೆ ಮಾಡುವ ನೀರಿನ ಪೈಪ್ ಸೋರಿಕೆಯಾಗಿ. ಪೈಪ್ ಸೋರಿಕೆಯಿಂದ ಚರಂಡಿ ನೀರು ಮಿಕ್ಸ್ ಆಗುತ್ತಿದೆ. ಚರಂಡಿ ಪಕ್ಕದಲ್ಲಿರುವ ಪೈಪ್ ಲಿಕೇಜ್ ಆಗ್ತಿರೋದ್ರಿಂದ ಜನ ಜೀವ ಭಯದಲ್ಲೇ ನೀರು ಕುಡಿಯಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಹೀಗಾಗಿ ನೀರಿನ ಲಿಕೇಜ್ ತಡೆಗಟ್ಟುವ ಜೊತೆಗೆ ನೀರಿನ ಘಟಕ ಆರಂಭ ಮಾಡಿ ಶುದ್ಧ ನೀರು ಪೂರೈಕೆ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮಲಮಿಶ್ರಿತ ನೀರು ಕುಡಿದು ಮೂವರು ದುರ್ಮರಣ- ನೀರಿನ ಪರೀಕ್ಷೆಯಲ್ಲಿ ಬಹಿರಂಗವಾಯ್ತು ಸತ್ಯ

    ಅನಪುರ ಘಟನೆ ನಂತರ ಯಾದಗಿರಿ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪೂರೈಕೆಯಾಗೋ ನೀರಿನ ಲಿಕೇಜ್ ಅನ್ನು ತಡೆಗಟ್ಟುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಸರ್ಕಾರ ಕೋಟಿ ಕೋಟಿ ಹಣ ಖರ್ಚು ಮಾಡಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನ ನಿರ್ಮಾಣ ಮಾಡಿದ್ರೂ ಜನರಿಗೆ ಪ್ರಯೋಜನಕ್ಕಿಲ್ಲದಂತಾಗಿದೆ. ಪೈಪ್ ಲೈನ್ ಮೂಲಕವೇ ನೀರು ಪೂರೈಕೆ ಮಾಡ್ತಿದ್ರೂ, ಅದನ್ನ ಸರಿಯಾಗಿ ನಿರ್ವಹಣೆ ಮಾಡ್ತಿಲ್ಲ. ಪೈಪ್‍ಲೈನ್ ಲಿಕೇಜ್ ಆಗಿದ್ರೂ ಅದನ್ನ ಸರಿ ಮಾಡೋ ಕೆಲಸಕ್ಕೂ ಮುಂದಾಗ್ತಿಲ್ಲ.

    ಸೈದಾಪುರ ಗ್ರಾಮದಲ್ಲೂ ಲಕ್ಷಾಂತರ ರೂ. ಖರ್ಚು ಮಾಡಿ ಎರಡು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಕೆ ಮಾಡಿಲಾಗಿದೆ. ಆದರೆ ನೀರಿನ ಘಟಕಗಳನ್ನು ದುರಸ್ಥಿ ಮಾಡಿ ಪಂಚಾಯಿತಿ ಅಧಿಕಾರಿಗಳು ಶುದ್ಧ ನೀರು ಪೂರೈಕೆ ಮಾಡುವಲ್ಲಿ ವಿಫಲರಾಗಿದ್ದಾರೆ. ಈಗಾಗಲೇ ಯಾದಗಿರಿ ಜಿಲ್ಲೆಯಲ್ಲಿ ಸರಕಾರ 415 ನೀರಿನ ಘಟಕಗಳನ್ನು ಅಳವಡಿಕೆ ಮಾಡಿದೆ. ಹೀಗಾಗಿ ಸರ್ಕಾರ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿ, ಜನರಿಗೆ ಶುದ್ಧ ನೀರು ಪೂರೈಸಲು ನೀರಿನ ಘಟಕಗಳನ್ನ ರಾಜ್ಯಾದ್ಯಂತ ಅಳವಡಿಕೆ ಮಾಡಿದ್ರೂ ಉಪಯೋಗಕ್ಕಿಲ್ಲದಂತಾಗಿದೆ.

    ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ನಗರ-ಗ್ರಾಮೀಣ ಭಾಗಕ್ಕೆ ನೀರು ಪೂರೈಕೆ ಮಾಡುವ ಪೈಪ್‍ಲೈನ್ ಸೋರಿಕೆ ಪತ್ತೆ ಹಚ್ಚಿ ಸೋರಿಕೆ ಕಡಿವಾಣ ಹಾಕಬೇಕಿದೆ. ಹೀಗಾಗಿ ಬಂದ್ ಆಗಿರುವ ನೀರಿನ ಘಟಕಗಳನ್ನು ದುರಸ್ಥಿ ಮಾಡಿಸಿ, ಮತ್ತೊಂದು ಅನಪುರ ದುರಂತಕ್ಕೆ ಅವಕಾಶ ಮಾಡಿಕೊಡದಂತೆ ಕೂಡಲೇ ಎಚ್ಚೆತ್ತುಕೊಂಡು ಜನರಿಗೆ ಶುದ್ಧ ನೀರು ಪೂರೈಸುವ ಕೆಲಸವನ್ನ ಅಧಿಕಾರಿಗಳು ಮಾಡಬೇಕಿದೆ.

  • ಚರಂಡಿ ನೀರು ಮೈಮೇಲೆ ಸುರಿದುಕೊಂಡು ಸಫಾಯಿ ಕರ್ಮಚಾರಿಗಳ ಪ್ರತಿಭಟನೆ

    ಚರಂಡಿ ನೀರು ಮೈಮೇಲೆ ಸುರಿದುಕೊಂಡು ಸಫಾಯಿ ಕರ್ಮಚಾರಿಗಳ ಪ್ರತಿಭಟನೆ

    – ಗುರುತಿನ ಚೀಟಿಗಾಗಿ ಮಹಿಳೆಯರ ಹೋರಾಟ
    – ತುರ್ತು ಸಭೆ ಕರೆದು ಅಧಿಕಾರಿಗಳನ್ನ ತರಾಟೆ ತೆಗೆದುಕೊಂಡ ಡಿಸಿ

    ರಾಯಚೂರು: ಗುರುತಿನ ಚೀಟಿಗಾಗಿ ಮೈಮೇಲೆ ಚರಂಡಿ ನೀರು ಸುರಿದುಕೊಂಡು ಸಫಾಯಿ ಕರ್ಮಚಾರಿಗಳು ಪ್ರತಿಭಟನೆ ನಡೆಸಿದ ಘಟನೆ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದಿದೆ.

    raichuru women (3)

    ಸಫಾಯಿ ಕರ್ಮಾಚಾರಿ ಗೀತಾ ಸಿಂಗ್ ನೇತೃತ್ವದಲ್ಲಿ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಿದ ಮಹಿಳೆಯರು ಚರಂಡಿ ನೀರಲ್ಲಿ ಕುಳಿತು ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ಗೀತಾ ಸಿಂಗ್ ಮೈಮೇಲೆ ಚರಂಡಿ ನೀರನ್ನು ಸುರಿದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಗು ಪ್ರವೇಶಿಸಿ ಅಪವಿತ್ರವಾಯ್ತೆಂದು ಪೋಷಕರಿಗೆ ದೇಗುಲ ಶುದ್ಧೀಕರಣದ ಜೊತೆಗೆ 10 ಸಾವಿರ ದಂಡ!

    ಕೆಪಿಸಿಯಲ್ಲಿ ಲಕ್ಷಾಂತರ ರೂಪಾಯಿ ಸಂಬಳಕ್ಕೆ ಕೆಲಸ ಮಾಡುವವರಿಗೆ ಗುರುತಿನ ಚೀಟಿ ನೀಡಲಾಗಿದೆ. ಕಷ್ಟಪಟ್ಟು ದುಡಿಯುವ ನಿಜವಾದ ಸಫಾಯಿ ಕರ್ಮಚಾರಿಗಳಿಗೆ ಗುರುತಿನ ಚೀಟಿ ನೀಡಿಲ್ಲ ಅಂತ ಆರೋಪಿಸಿದ್ದಾರೆ. ಗುರುತಿನ ಚೀಟಿ ಇಲ್ಲದಿದ್ದರಿಂದ ಎಲ್ಲಾ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ ಅಂತ ಆಕ್ರೋಶ ವ್ಯಕ್ತಪಡಿಸಿ ಪೊಲೀಸರ ಮುಂದೆ ಚರಂಡಿ ನೀರು ಸುರಿದುಕೊಂಡು ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ನನಗೆ ಅವರ ಹೆಸರು ಹೇಳೋಕೆ ಬೇಜಾರಾಗುತ್ತೆ – ಸಿಂಧೂರಿ ವಿರುದ್ಧ ಸಾರಾ ಮಹೇಶ್ ಪರೋಕ್ಷ ವಾಗ್ದಾಳಿ

    ಘಟನೆ ಹಿನ್ನೆಲೆ ಜಿಲ್ಲಾಧಿಕಾರಿ ಬಿ.ಸಿ.ಸತೀಶ್ ಸಫಾಯಿ ಕರ್ಮಚಾರಿಗಳ ತುರ್ತು ಸಭೆ ಕರೆದು ಕುಂದು ಕೊರತೆ ಆಲಿಸಿದರು. 80 ಜನರಿಗೆ ಗುರುತಿನ ಚೀಟಿ ನೀಡುವ ಕುರಿತು ವಿಶೇಷ ವರದಿ ನೀಡಲು ನಗರಾಭಿವೃದ್ದಿ ಯೋಜನಾಧಿಕಾರಿಗೆ ಡಿ.ಸಿ ಖಡಕ್ ಸೂಚನೆ ನೀಡಿದರು ಮತ್ತು ಕೂಡಲೇ ಗುರುತಿನ ಚೀಟಿ ಸಿಗಲು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ.

  • ನೂರಾರು ಮನೆಗಳಿಗೆ ನುಗ್ಗಿದ ಮೋರಿ ನೀರು – ಗಬ್ಬು ವಾಸನೆಗೆ ಕಂಗೆಟ್ಟ ಬಳ್ಳಾರಿ ಜನ

    ನೂರಾರು ಮನೆಗಳಿಗೆ ನುಗ್ಗಿದ ಮೋರಿ ನೀರು – ಗಬ್ಬು ವಾಸನೆಗೆ ಕಂಗೆಟ್ಟ ಬಳ್ಳಾರಿ ಜನ

    ಬಳ್ಳಾರಿ: ಇದು ಯಾವುದೋ ಕೆರೆಯಲ್ಲ. ಜೋರಾಗಿ ಬಂದ ಮಳೆಯ ನೀರು ಸಹ ಅಲ್ಲ. ಬದಲಾಗಿ ಒಳಚರಂಡಿ ನೀರಿನ ದೃಶ್ಯವಿದು. ಬಳ್ಳಾರಿಯ ರಾಯಲ್ ಕಾಲೋನಿಯ ನೂರಾರು ಮನೆಗಳು ಇದೀಗ ಒಳಚರಂಡಿ ನೀರಿನಲ್ಲೇ ಮುಳುಗಿ ಹೋಗಿವೆ.

    ಮಹಾನಗರ ಪಾಲಿಕೆಯ ನಿರ್ಲಕ್ಷ್ಯದಿಂದ ಒಂದು ವಾರದಿಂದ ಚೇಂಬರ್ ಹಾಳಾಗಿ ನೂರಾರು ಮನೆಗೆ ಕೊಳಚೆ ನೀರು ನುಗ್ಗುತ್ತಿದೆ. ಈ ಚರಂಡಿ ನೀರನ್ನ ಹೊರ ಹಾಕುವುದೇ ಜನರಿಗೆ ಕಾಯಕವಾಗಿಬಿಟ್ಟಿದೆ.

    ಈ ಬಗ್ಗೆ ಈಗಾಗಲೇ ಪಾಲಿಕೆಗೆ ದೂರು ನೀಡಿದ್ರೂ ಪಾಲಿಕೆ ಅಧಿಕಾರಿಗಳು ಮಾತ್ರ ಒಳಚರಂಡಿ ಸರಿಪಡಿಸೋ ಕೆಲಸಕ್ಕೆ ಇದುವರೆಗೂ ಕೈಹಾಕಿಲ್ಲ. ಇದರಿಂದ ನೆಮ್ಮದಿಯಾಗಿ ಮನೆಯಲ್ಲಿ ಅಡುಗೆ ಮಾಡೋಕೆ ಆಗ್ತಿಲ್ಲ ಅಂತಾರೆ ಸ್ಥಳೀಯರು.

    ಇದೇ ರೀತಿ ಹಿಂದೆ 2-3 ಬಾರಿ ರಾಯಲ್ ಕಾಲೋನಿಯಲ್ಲಿ ಒಳಚರಂಡಿ ಸಮಸ್ಯೆಯಾದಾಗಲೇ ಜನ ದೂರು ಕೊಟ್ಟಿದ್ರು. ಆದ್ರೂ ಒಳಚರಂಡಿ ಸಮಸ್ಯೆಗೆ ಮುಕ್ತಿ ಕೊಡಿಸಿಲ್ಲ.

  • ತುಮಕೂರಿನ ಈ ವಾರ್ಡ್‍ನಲ್ಲಿ ಬರ್ತಿದೆ ಕುಡಿಯೋ ನೀರಿನ ಜೊತೆ ಟಾಯ್ಲೆಟ್ ನೀರು!

    ತುಮಕೂರಿನ ಈ ವಾರ್ಡ್‍ನಲ್ಲಿ ಬರ್ತಿದೆ ಕುಡಿಯೋ ನೀರಿನ ಜೊತೆ ಟಾಯ್ಲೆಟ್ ನೀರು!

    ತುಮಕೂರು: ರಾಜ್ಯದೆಲ್ಲೆಡೆ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ನೀರಿಲ್ಲದೇ ಜನ ಜಾನುವಾರಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆನೂ ಕುಡಿಯೋ ನೀರು ಸಾಗ್ತಿದ್ದು, ಆ ನೀರಿಗೆ ಟಾಯ್ಲೆಟ್ ನೀರು ಸೇರ್ಕೊಂಡು ಮನೆಗಳಿಗೆ ಸರಬರಾಜು ಆಗುತ್ತಿದೆ ಅಂತಾ ಸ್ಥಳೀಯರು ಆರೋಪಿಸಿದ್ದಾರೆ.

    ಹೌದು. ತುಮಕೂರು ನಗರದ 12ನೇ ವಾರ್ಡ್‍ನಲ್ಲಿ ಮನೆಯ ಸಂಪ್‍ಗಳಲ್ಲೂ ಕೊಳಚೆ ನೀರು, ಬಕೆಟ್‍ನಲ್ಲೂ ಕೊಳಚೆ ನೀರು. ವಾಟರ್ ಬಾಟೆಲ್‍ನಲ್ಲೂ ಕೊಳಚೆ ನೀರು ಬರುತ್ತಿದ್ದು, ಜನ ಈ ನೀರನ್ನೇ ಕುಡಿಯೋ ಪರಿಸ್ಥಿತಿ ಬಂದಿದೆ. ಇದಕ್ಕೆ ಕಾರಣ ಚರಂಡಿ ಪಕ್ಕದಲ್ಲಿ ನೀರಿನ ಪೈಪ್ ಒಡೆದಿರೋದು. ಇದ್ರಿಂದ ಗಲೀಜು ನೀರು ಮಿಶ್ರಿತವಾಗಿ ಬರುತ್ತಿದೆ. ಕೌನ್ಸಿಲರ್ ಈ ಕಡೆ ಬರ್ತಾ ಇಲ್ಲ. ಫೋನ್ ಮಾಡಿದ್ರೆ ರಿಸೀವ್ ಮಾಡಲ್ಲ ಅಂತಾ ಸ್ಥಳೀಯರಾದ ಮೋಸಿನಾ ಬಾನು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಮ್ಮ ಅಳಲು ತೋಡಿಕೊಂಡಿದ್ದಾರೆ.

    ಈ ಬಗ್ಗೆ ಮಹಾನಗರ ಪಾಲಿಕೆಗೆ ಹಲವು ಭಾರಿ ಸ್ಥಳೀಯರು ಮನವಿ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಕುಡಿಯುವ ನೀರು ಬರುವ ಪೈಪ್‍ಲೈನ್ ಅನ್ನು ಒಳಚರಂಡಿ ಪಕ್ಕದಲ್ಲಿ ಹಾಕಿರುವುದು ಕಲುಷಿತ ನೀರು ಬರೋಕೆ ಕಾರಣ ಅಂತಾ ರಿಯಾನ್ ಖಾನ್ ಕಿಡಿಕಾರಿದ್ದಾರೆ.

    ಭೀಕರ ಬರ ಬಂದಿರೋ ಈ ಟೈಮ್‍ನಲ್ಲಿ ನೀರು ಹೀಗೆ ವ್ಯರ್ಥವಾಗ್ತಿರೋದು ಸರಿಯಲ್ಲ. ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಸಮಸ್ಯೆ ಬಗೆಹರಿಸದಿದ್ರೆ ಜನ ಬೀದಿಗಿಳಿಯೋದು ಗ್ಯಾರಂಟಿ.

  • ಮಂಗಳೂರಿನ ಜನ ಶುದ್ಧ ನೀರಿನ ಬದಲು ಕುಡಿಯುತ್ತಿದ್ದಾರೆ ಡ್ರೈನೇಜ್ ನೀರು!

    ಮಂಗಳೂರಿನ ಜನ ಶುದ್ಧ ನೀರಿನ ಬದಲು ಕುಡಿಯುತ್ತಿದ್ದಾರೆ ಡ್ರೈನೇಜ್ ನೀರು!

    ಮಂಗಳೂರು: ನಗರದ ಜನರು ನೀರು ಕುಡಿಯೋ ಮೊದ್ಲು ಇನ್ಮುಂದೆ ಸ್ವಲ್ಪ ಯೋಚಿಸಬೇಕು. ಯಾಕಂದ್ರೆ ಮಂಗಳೂರು ನಗರವಾಸಿಗಳಿಗೆ ಶುದ್ದ ಕುಡಿಯುವ ನೀರಿಗೆ ಬದಲಾಗಿ ಡ್ರೈನೇಜ್ ನೀರನ್ನು ಕುಡಿಯುತ್ತಿದ್ದಾರೆ. ಪಾಲಿಕೆ ಡ್ರೈನೇಜ್ ನೀರು ಕುಡಿಸೋದರ ಜಾಡು ಹಿಡಿದು ಹೋದ ಪಬ್ಲಿಕ್ ಟಿವಿಗೆ ನಿಜ ಸಂಗತಿ ಗೊತ್ತಾಗಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ತುಂಬೆ ಡ್ಯಾಂನಿಂದ ಮಂಗಳೂರು ನಗರಕ್ಕೆ ಶುದ್ಧ ಕುಡಿಯೋ ನೀರು ಪೂರೈಕೆಯಾಗುತ್ತೆ. ಆದ್ರೆ ಇತ್ತೀಚೆಗೆ ನಗರದ ಜನರಿಗೆ ಹಲವು ರೋಗಗಳು ಕಾಣಿಸಿಕೊಂಡ ಪರಿಣಾಮ ನೀರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಆಗ ಕೊಲಿಫಾರಂ ಬ್ಯಾಕ್ಟೀರಿಯಾ ಇರೋದು ಪತ್ತೆಯಾಗಿದೆ. ಇದಕ್ಕೆಲ್ಲಾ ಕೊಳಚೆ ನೀರು ಡ್ಯಾಂಗೆ ಸೇರುತ್ತಿರೋದೇ ಕಾರಣ ಎಂಬ ವಿಷಯ ಗೊತ್ತಾಗಿದೆ.

    ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಕ್ಷೇತ್ರವಾಗಿರುವ ಬಂಟ್ವಾಳದಲ್ಲಿ ಕೊಳಚೆ ನೀರಿನ ಶುದ್ಧೀಕರಣ ಘಟಕ ಇಲ್ಲ. ಅಲ್ಲದೇ 38 ಕೋಟಿ ರೂಪಾಯಿ ವೆಚ್ಚದಲ್ಲಿ 2003ರಲ್ಲಿ ಆರಂಭವಾದ ಒಳಚರಂಡಿ ಕಾಮಗಾರಿ ಇನ್ನೂ ಪೂರ್ತಿಯಾಗದೇ ಇರೋದು ಸಮಸ್ಯೆಗೆ ಕಾರಣ. ಈ ಬಗ್ಗೆ ಪಾಲಿಕೆಗೆ ಗೊತ್ತಿದ್ರೂ ಬಾಯಿ ಮುಚ್ಚಿ ಕುಳಿತಿದೆ. ಸಮಸ್ಯೆ ಬಗ್ಗೆ ಕೇಳಿದ್ರೆ ಇದೇನು ಹೊಸತಲ್ಲ ಅಂತ ಮೇಯರ್ ಹರಿನಾಥ್ ಬೇಜವಾಬ್ದಾರಿಯ ಉತ್ತರ ಕೊಡ್ತಿದ್ದಾರೆ.

    ಒಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಗಳ ಜಾಣ ಕುರುಡುತನದಿಂದಾಗಿ ಮಂಗಳೂರಿನ ಜನ ಡ್ರೈನೇಜ್ ನೀರನ್ನ ಕುಡಿಯುವಂತಾಗಿದೆ. ಇನ್ನಾದ್ರು ಸಮಸ್ಯೆ ಬಗೆಹರಿಸದಿದ್ರೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ.