Tag: dr

  • 6 ರಿಂದ 8 ವಾರ ಲಾಕ್‍ಡೌನ್ ಮಾಡುವುದು ಉತ್ತಮ: ಕೇಂದ್ರಕ್ಕೆ ಐಸಿಎಂಆರ್ ಸಲಹೆ

    6 ರಿಂದ 8 ವಾರ ಲಾಕ್‍ಡೌನ್ ಮಾಡುವುದು ಉತ್ತಮ: ಕೇಂದ್ರಕ್ಕೆ ಐಸಿಎಂಆರ್ ಸಲಹೆ

    ನವದೆಹಲಿ: ಕೊರೊನಾ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಹೆಚ್ಚು ಸೋಂಕಿರುವ ಜಿಲ್ಲೆಗಳಲ್ಲಿ ಎರಡು ತಿಂಗಳ ಕಾಲ ಲಾಕ್‍ಡೌನ್‍ಗೊಳಿಸುವುದು ಉತ್ತಮ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಮುಖ್ಯಸ್ಥ ಡಾ. ಬಲರಾಂ ಭಾರ್ಗವ್ ಅವರು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

    ಈ ಕುರಿತಂತೆ ಮಾತನಾಡಿದ ಅವರು, ಪ್ರತಿ ದಿನ ಶೇ.10ಕ್ಕಿಂತ ಹೆಚ್ಚು ಕೋವಿಡ್ ಪರೀಕ್ಷೆಗಳು ದಾಖಲಾಗುತ್ತಿರುವ ಜಿಲ್ಲೆಗಳಲ್ಲಿ ಲಾಕ್‍ಡೌನ್ ಮುಂದುವರೆಸುವುದು ಸೂಕ್ತ ಎಂದು ಹೇಳಿದ್ದಾರೆ.

    ದೇಶದ 718 ಜಿಲ್ಲೆಗಳಲ್ಲಿ ಮೂರು-ನಾಲ್ಕು ಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಶೇ.10ಕ್ಕಿಂತ ಹೆಚ್ಚಾಗುತ್ತಿದ್ದು, ಮುಖ್ಯವಾಗಿ ನವದೆಹಲಿ, ಮುಂಬೈ ಹಾಗೂ ಬೆಂಗಳೂರಿನಲ್ಲಿ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿದೆ.

    ಕೋವಿಡ್ ಸಂಕ್ರಾಮಿಕ ರೋಗಕ್ಕೆ ದೇಶವು ಸಿಲುಕಿದೆ. ಈ ಮುನ್ನ ನಿರ್ಧಾರವನ್ನು ಕಾರ್ಯರೂಪಕ್ಕೆ ತರುವಷ್ಟರಲ್ಲಿ ವಿಳಂಬವಾಗಿತ್ತು. ಸದ್ಯ ಚಿಕಿತ್ಸೆ ಸಿಗುತ್ತಿಲ್ಲ, ಬೆಡ್ ಸಿಗುತ್ತಿಲ್ಲ. ವೈದ್ಯಕೀಯ ಸುಧಾರಿಸಬೇಕಾಗಿದೆ. ಲಸಿಕೆ ಸರಿಯಾಗಿ ಸಿಗುತ್ತಿಲ್ಲ. ಸಾವಿನ ಪ್ರಕರಣ ಹೆಚ್ಚಾಗುತ್ತಿದೆ. ಹೀಗಾಗಿ ಇನ್ನಷ್ಟು ಸಂಕಷ್ಟಕ್ಕೆ ಸಿಲುಕುವ ಮುನ್ನ 6 ರಿಂದ 8 ವಾರಗಳ ಕಾಲ ಲಾಕ್‍ಡೌನ್ ಘೋಷಿಸುವುದು ಉತ್ತಮ ಎಂದಿದ್ದಾರೆ.

    ರಾಷ್ಟ್ರೀಯ ಕಾರ್ಯಪಡೆ ಏಪ್ರಿಲ್ 15ರ ಸಭೆಯ ಬಳಿಕ ಶೇ. 10 ರಷ್ಟು ಪಾಸಿಟಿವ್ ರೇಟ್ ಅಧಿಕವಾಗಿ ಹೊಂದಿರುವ ಪ್ರದೇಶಗಳನ್ನು ಲಾಕ್‍ಡೌನ್ ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಿದೆ ಎಂದು ತಿಳಿಸಿದರು.

  • ಕೆಎಎಸ್ ಅಧಿಕಾರಿ ಮನೆಯಲ್ಲಿ ಸಿಕ್ತು ಕೆಜಿಗಟ್ಟಲೆ ಚಿನ್ನ, ನಗದು!

    ಕೆಎಎಸ್ ಅಧಿಕಾರಿ ಮನೆಯಲ್ಲಿ ಸಿಕ್ತು ಕೆಜಿಗಟ್ಟಲೆ ಚಿನ್ನ, ನಗದು!

    – ಖಜಾನೆ ನೋಡಿ ಅಧಿಕಾರಿಗಳು ಶಾಕ್
    – ಸರ್ಕಾರಿ ಅಧಿಕಾರಿಯ ಹೈಫೈ ಲೈಫ್

    ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಕೆಎಎಸ್ ಅಧಿಕಾರಿ ಡಾ. ಸುಧಾ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಪರಿಶೀಲನೆ ವೇಳೆ ಖಜಾನೆ ನೋಡಿ ಅಧಿಕಾರಿಗಳೇ ದಂಗಾಗಿದ್ದಾರೆ.

    ಕೊಡಿಗೇಹಳ್ಳಿಯ ಭವ್ಯ ಬಂಗಲೆಯಲ್ಲಿ ವಾಸವಾಗಿರುವ ಸುಧಾ ಬಳಿ ಕೆಜಿ ಗಟ್ಟಲೆ ಚಿನ್ನಾಭರಣ ಹಾಗೂ ಸುಮಾರು 10 ಲಕ್ಷ ನಗದು ಸಿಕ್ಕಿದೆ. ಚಿನ್ನದ ಡಾಬಾ, ಕಾಸಿನ ಸರ, ಉಂಗುರಗಳನ್ನು ಜಪ್ತಿ ಮಾಡಲಾಗಿದೆ. ಚಿನ್ನದ ಸರಗಳ ರಾಶಿ ಹಾಗೂ ಕಿವಿಯೋಲೆಗಳು ಪತ್ತೆಯಾಗಿವೆ.

    ಸತತ 5 ಗಂಟೆಯಿಂದ ಸುಧಾ ಮನೆಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಎಸಿಬಿ ದಾಳಿ ಮಾಡಿದಾಗ ಅಧಿಕಾರಿ ಸುಮಾರು ಅರ್ಧ ಗಂಟೆಗಳ ಕಾಲ ಡೋರ್ ಓಪನ್ ಮಾಡದೇ ಇದ್ದರು.

    ಸುಧಾ ಅವರ ಬೆಂಗಳೂರಿನ ಮನೆ, ಕಚೇರಿ ಸೇರಿದಂತೆ 6 ಕಡೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಜೊತೆಗೆ ಉಡುಪಿ ಜಿಲ್ಲೆಯ ಹೆಬ್ರಿ ಬಳಿಯ ತೆಂಕಬಟ್ಟಿನ ಮನೆ ಮೇಲೂ ದಾಳಿ ನಡೆಸಲಾಗಿದೆ. ಈ ಹಿಂದೆ ಬಿಡಿಎನಲ್ಲಿ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿದ್ದ ಡಾ. ಬಿ. ಸುಧಾ ಅವರ ವಿರುದ್ಧ ಎಸಿಬಿಯಲ್ಲಿ ಅಕ್ರಮ ಆಸ್ತಿ ಗಳಿಕೆ ಹಾಗೂ ಅವ್ಯವಹಾರದ ಕುರಿತಾಗಿ ದೂರು ದಾಖಲಾಗಿತ್ತು. ಸುಧಾ ಪ್ರಸ್ತುತ ಜೈವಿಕ ತಂತ್ರಜ್ಞಾನ ಇಲಾಖೆಯಲ್ಲಿ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಬಿಡಿಎಯಲ್ಲಿ ಭೂ ಸ್ವಾಧೀನಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ವೇಳೆ ಡಾ. ಸುಧಾ ಭೂ ಪರಿಹಾರ ನೀಡುವ ವಿಚಾರದಲ್ಲಿ ತಮ್ಮ ಗಂಡ ಮತ್ತು ದಲ್ಲಾಳಿಗಳ ಮೂಲಕ ಲಂಚ ಪಡೆಯುತ್ತಿದ್ದರು. ಅಲ್ಲದೆ ತಮ್ಮ ಸಂಬಳಕ್ಕಿಂತಲೂ ಆದಾಯದ ಮೊತ್ತ ಜಾಸ್ತಿ ಇದೆ ಎಂದು ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಾಹಾಂ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿ, ವರದಿ ಸಲ್ಲಿಸುವಂತೆ ಎಸಿಬಿಗೆ ಆದೇಶಿಸಲಾಗಿತ್ತು.

  • ಕೋವಿಡ್ ರೋಗಿಗಳಿಗೆ ತ್ವರಿತ ಮಾಹಿತಿ ನೀಡಲು ಕೇಂದ್ರೀಕೃತ ವ್ಯವಸ್ಥೆ

    ಕೋವಿಡ್ ರೋಗಿಗಳಿಗೆ ತ್ವರಿತ ಮಾಹಿತಿ ನೀಡಲು ಕೇಂದ್ರೀಕೃತ ವ್ಯವಸ್ಥೆ

    – ತಜ್ಞರು, ಅಧಿಕಾರಿಗಳೊಂದಿಗೆ ಸಚಿವ ಡಾ.ಕೆ.ಸುಧಾಕರ್ ಸಭೆ

    ಬೆಂಗಳೂರು: ಕೋವಿಡ್ ಪಾಸಿಟಿವ್ ಆದ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಬೇಕೆ. ಮನೆ ಆರೈಕೆಗೆ ಒಳಪಡಬೇಕೆ ಅಥವಾ ಕೋವಿಡ್ ಕೇರ್ ಕೇಂದ್ರಕ್ಕೆ ದಾಖಲಾಗಬೇಕೆ ಎಂದು ಕೂಡಲೇ ನಿರ್ಧರಿಸಲು ಸಾಧ್ಯವಾಗುವಂತಹ ತಂತ್ರಜ್ಞಾನ ಆಧಾರಿತ ಕೇಂದ್ರೀಕೃತ ವ್ಯವಸ್ಥೆ ನಿರ್ಮಿಸಲು ನಿರ್ಧರಿಸಲಾಗಿದೆ.

    ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಹಿರಿಯ ಅಧಿಕಾರಿಗಳು ಮತ್ತು ತಜ್ಞರೊಂದಿಗೆ ಮಂಗಳವಾರ ನಡೆಸಿದ ವೀಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಯಿತು.

    ಕೋವಿಡ್‍ಗೆ ಸಂಬಂಧಿಸಿದಂತೆ ಸರ್ಕಾರ ಬಳಸುತ್ತಿರುವ ಎಲ್ಲ ಆ್ಯಪ್, ತಂತ್ರಜ್ಞಾನಗಳನ್ನು ಒಟ್ಟು ಮಾಡಿ ಕೇಂದ್ರೀಕೃತ ವ್ಯವಸ್ಥೆ ನಿರ್ಮಿಸುವುದರಿಂದ ಕೋವಿಡ್ ರೋಗಿಯು ಎಲ್ಲಿ ದಾಖಲಾಗಬೇಕು ಅಥವಾ ಯಾವ ರೀತಿಯ ಚಿಕಿತ್ಸೆಗೆ ಒಳಪಡಬೇಕು ಎಂಬುದನ್ನು ತಕ್ಷಣ ತೀರ್ಮಾನಿಸಬಹುದು. ಇದರಿಂದಾಗಿ ಚಿಕಿತ್ಸೆ ಪಡೆಯುವಲ್ಲಿನ ಗೊಂದಲ ನಿವಾರಣೆಯಾಗಲಿದೆ ಎಂದು ಸಚಿವರು ಸಭೆಗೆ ಸೂಚಿಸಿದರು.

    ಸದ್ಯಕ್ಕೆ ಆಪ್ತಮಿತ್ರ ಸೇರಿದಂತೆ ಹಲವು ಆ್ಯಪ್‍ಗಳು ಬಳಕೆಯಲ್ಲಿವೆ. ರಾಜ್ಯದಲ್ಲಿ ಕೋವಿಡ್ ಅಂಕಿ ಅಂಶವನ್ನು ನೀಡುವ ಡ್ಯಾಶ್ ಬೋರ್ಡ್ ಕೂಡ ಇದೆ. ಆದರೆ ಡ್ಯಾಶ್ ಬೋರ್ಡ್ ನಲ್ಲಿ ರಿಯಲ್ ಟೈಮ್‍ನಲ್ಲಿ ಮಾಹಿತಿ ದೊರೆಯುವಂತಾಗಬೇಕು. ಯಾವ ಆಸ್ಪತೆಯಲ್ಲಿ ಎಷ್ಟು ಹಾಸಿಗೆ ಖಾಲಿ ಇದೆ. ಪ್ರತಿ ಆಸ್ಪತ್ರೆಯಲ್ಲಿರುವ ಕೋವಿಡ್ ಮತ್ತು ನಾನ್ ಕೋವಿಡ್ ರೋಗಿಗಳೆಷ್ಟು ಎಂಬುದು ಡ್ಯಾಶ್ ಬೋರ್ಡಿನಲ್ಲಿ ತಿಳಿಯುವಂತಾಗಬೇಕು. ಕೋವಿಡ್ ಖಚಿತಪಟ್ಟ ನಂತರ ವ್ಯಕ್ತಿಯು ದೂರವಾಣಿ ಕರೆ ಮಾಡಿದ ಕೂಡಲೇ ಆಸ್ಪತ್ರೆ ಅಥವಾ ಕೋವಿಡ್ ಕೇರ್ ಕೇಂದ್ರಕ್ಕೆ ದಾಖಲಾಗುವಂತೆ ಸಹಾಯ ದೊರೆಯಬೇಕು. ಇಂತಹ ಕೇಂದ್ರೀಕೃತ ವ್ಯವಸ್ಥೆಯನ್ನು ರಾಜ್ಯದಲ್ಲಿ ತರಬೇಕು ಎಂದು ಸೂಚಿಸಿದರು.

    ಹೊಸದೆಹಲಿ ಮತ್ತು ಮಧ್ಯ ಪ್ರದೇಶದಲ್ಲಿ ‘ಸ್ಟೆಪ್ 1’ ಎಂಬ ಸಂಸ್ಥೆ ಯಶಸ್ವಿಯಾಗಿ ಸೇವೆ ನೀಡುತ್ತಿದೆ. ಈ ಸಂಸ್ಥೆ ತನ್ನದೇ ಆದ ವೈದ್ಯ, ನರ್ಸ್ ಮತ್ತು ಅರೆವೈದ್ಯಕೀಯ ಸಿಬ್ಬಂದಿಯನ್ನು ಹೊಂದಿದ್ದು, ಕೋವಿಡ್ ರೋಗಿಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಲಭ್ಯವಾಗುವಂತೆ ಮಾಡುತ್ತಿದೆ. ಈ ಸಂಸ್ಥೆಯಿಂದ ಮಾಹಿತಿ ಪಡೆದುಕೊಂಡು ಆ ಮಾದರಿಯನ್ನು ಕೂಡ ರಾಜ್ಯದಲ್ಲಿ ಅನುಷ್ಠಾನಕ್ಕೆ ತರಬಹುದು ಎಂದು ಸಚಿವ ಡಾ.ಕೆ.ಸುಧಾಕರ್ ಸೂಚಿಸಿದರು.

    ನಂತರ ಮಾತನಾಡಿದ ಐಟಿಬಿಟಿ ಇಲಾಖೆಯ ಕಾರ್ಯದರ್ಶಿ ಅಜಯ್ ಸೇಠ್, ಕೇಂದ್ರೀಕೃತ ವ್ಯವಸ್ಥೆಯನ್ನು ಕಲ್ಪಿಸಲು ಶೀಘ್ರದಲ್ಲೇ ಸಭೆ ನಡೆಸಲಾಗುವುದು ಎಂದು ತಿಳಿಸಿದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಸಭೆಯಲ್ಲಿ ಪಾಲ್ಗೊಂಡಿದ್ದರು.

    ಇತರೆ ಅಂಶಗಳು:
    ಕೊರೊನಾ ರೋಗಿಯ ರೋಗದ ಗಂಭೀರತೆಯನ್ನು ನಿರ್ಧರಿಸಿ ಆತನನ್ನು ಕೋವಿಡ್ ಆರೈಕೆ ಕೇಂದ್ರ ಅಥವಾ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಲಕ್ಷಣ ರಹಿತ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಬಾರದು ಎಂದು ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ಸಭೆಗೆ ವಿವರಿಸಿದರು.

    ಕೊರೊನಾ ರೋಗಿಯ ರೋಗದ ಗಂಭೀರತೆಯನ್ನು ಅರಿತು ಅವರನ್ನು ಕೋವಿಡ್ ಆರೈಕೆ ಕೇಂದ್ರ ಅಥವಾ ಆಸ್ಪತ್ರೆಗೆ ದಾಖಲಿಸಲಾಗುವುದು. ರೋಗಿಯನ್ನು ಗೂಗಲ್ ಮ್ಯಾಪ್ ಸಹಾಯದಿಂದಲೇ ಪತ್ತೆ ಮಾಡಿ ಅವರಿರುವಲ್ಲಿಗೆ ವೈದ್ಯರನ್ನು ಕಳುಹಿಸಿ ರೋಗದ ಗಂಭೀರತೆಯನ್ನು ಪರೀಕ್ಷಿಸಲಾಗುವುದು. ನಂತರ ವೈದ್ಯರು ಅವರನ್ನು ಆಸ್ಪತ್ರೆ ಅಥವಾ ಆರೈಕೆ ಕೇಂದ್ರಕ್ಕೆ ದಾಖಲಿಸುವ ಕುರಿತು ನಿರ್ಧರಿಸುತ್ತಾರೆ. ಹೊಸ ಕೇಂದ್ರೀಕೃತ ವ್ಯವಸ್ಥೆಯು ಇದನ್ನು ಒಳಗೊಳ್ಳಲಿದೆ ಎಂದು ಅಧಿಕಾರಿಗಳು ವಿವರಿಸಿದರು.

    ಬೇರೆ ಜಿಲ್ಲೆಗಳಲ್ಲಿ ಕೊರೊನಾ ಪರೀಕ್ಷೆ ಸಂಖ್ಯೆ ಹೆಚ್ಚಿದೆ. ಆದರೆ ಬೆಂಗಳೂರಿನಲ್ಲಿ ಪರೀಕ್ಷೆ ಸಂಖ್ಯೆ ಕಡಿಮೆಯಾಗುತ್ತಿದೆ. ಪರೀಕ್ಷೆ ಸಂಖ್ಯೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಸಚಿವ ಡಾ.ಕೆ.ಸುಧಾಕರ್ ಸೂಚನೆ ನೀಡಿದರು.

    ನಿಯಮಗಳ ಕಟ್ಟನಿಟ್ಟು ಪಾಲನೆಗೆ ಸೂಚನೆ:
    ಈ ಸಭೆಗೂ ಮುನ್ನ ಖಾಸಗಿ ವೈದ್ಯಕೀಯ ಮೆಡಿಕಲ್ ಕಾಲೇಜುಗಳ ಮುಖ್ಯಸ್ಥರೊಂದಿಗೆ ಸಚಿವ ಡಾ.ಕೆ.ಸುಧಾಕರ್ ಸಭೆ ನಡೆಸಿದರು. ಪ್ರತಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಮೀಸಲಿಡುವ ಸಂಬಂಧ ಇರುವ ನಿಯಮಗಳನ್ನು ಪಾಲಿಸಬೇಕು. ಲಕ್ಷಣ ರಹಿತ ರೋಗಿಗಳನ್ನು (ಎ ಸಿಂಪ್ಟಮ್ಯಾಟಿಕ್) ಆಸ್ಪತ್ರೆಗೆ ಸೇರಿಸದಿರಲು ಕ್ರಮ ವಹಿಸಬೇಕು ಎಂದು ಸಚಿವರು ಸೂಚಿಸಿದರು.

  • ಕೊರೊನಾಗೆ ಆಯುರ್ವೇದ ರಾಮಬಾಣ: ಡಾ. ವಿನಯ್ ಎಸ್ ಸಿಂಗರಾಜಪುರ

    ಕೊರೊನಾಗೆ ಆಯುರ್ವೇದ ರಾಮಬಾಣ: ಡಾ. ವಿನಯ್ ಎಸ್ ಸಿಂಗರಾಜಪುರ

    ಬೆಂಗಳೂರು: ವಿಶ್ವದಾದ್ಯಂತ ಕೊರೊನಾ ಅಟ್ಟಹಾಸ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಭಾರತದಲ್ಲೂ ಕೊರೊನಾ ತನ್ನ ರೌದ್ರತೆಯನ್ನ ತೋರಿಸುತ್ತಿದೆ. ಕರ್ನಾಟಕದಲ್ಲಂತೂ ಕೊರೊನಾ ಸಮುದಾಯದ ಹಂತಕ್ಕೆ ತಲುಪಿ ಆತಂಕ ಸೃಷ್ಟಿಸಿದೆ. ದೊಡ್ಡ ದೊಡ್ಡ ವಿಜ್ಞಾನಿಗಳು ಲಸಿಕೆ ಕಂಡ ಹಿಡಿಯಲು ಹಗಲು- ರಾತ್ರಿ ಕೆಲ ಮಾಡ್ತಿದ್ದಾರೆ. ಆದರೆ ಇನ್ನೂ ಲಸಿಕೆ ಸಿಕ್ಕಿಲ್ಲ. ಆದ್ರೆ ಈ ಕೊರೊನಾಗೆ ಆಯುರ್ವೇದ ಔಷಧಿ ರಾಮಬಾಣವಾಗಿ ಕೆಲಸ ಮಾಡುತ್ತೆ ಅಂತ ಖ್ಯಾತ ಆಯುರ್ವೇದ ವೈದ್ಯ ಡಾ. ವಿನಯ್ ಎಸ್ ಸಿಂಗರಾಜಪುರ ಹೇಳುತ್ತಾರೆ.

    ಕೊರೊನಾ ರೋಗದ ವಿರುದ್ಧ ಹೋರಾಟ ಮತ್ತು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳುವ ಕುರಿತು ವಿಶೇಷ ಉಪನ್ಯಾಸವನ್ನ ಸರ್ಕಾರದ ಸಚಿವಾಲಯ ನೌಕರರಿಗೆ ಹಮ್ಮಿಕೊಳ್ಳಲಾಗಿತ್ತು. ಈ ಉಪನ್ಯಾಸ ಕಾರ್ಯಕ್ರಮದಲ್ಲಿ ಖ್ಯಾತ ಆರ್ಯುವೇದ ವೈದ್ಯ ಡಾ. ವಿನಯ್ ಎಸ್ ಸಿಂಗರಾಜಪುರ ಆಯುರ್ವೇದ ಶಕ್ತಿಯ ಬಗ್ಗೆ ಮಾಹಿತಿ ನೀಡಿದ್ರು. ಅಲ್ಲದೆ ಉಚಿತ ಆಯುರ್ವೇದ ಔಷಧಿಯನ್ನ ನೌಕರರಿಗೆ ವಿತರಣೆ ಮಾಡಿದ್ರು. ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ವಿನಯ್ ಎಸ್ ಸಿಂಗರಾಜಪುರ, ಕೊರೊನಾ ನಿಯಂತ್ರಣಕ್ಕೆ ಆಯುರ್ವೇದದಲ್ಲಿ ಔಷಧಿ ಇದೆ. ಅಗತ್ಯ ಆಯುರ್ವೇದ ಔಷಧಿ ಬಳಿಕೆ ಮಾಡಿದ್ರೆ ಕೊರೊನಾದಿಂದ ದೂರ ಉಳಿಯಬಹುದು ಅಂತ ತಿಳಿಸಿದರು.

    ಈಗಾಗಲೇ 10 ಸಾವಿರ ಕಿಟ್ ಗಳನ್ನು ನಾವು ಜನರಿಗೆ ನೀಡಿದ್ದೇವೆ. ಕಿಟ್ ಉಪಯೋಗಿಸಿದ ಎಲ್ಲರೂ ಆರೋಗ್ಯವಾಗಿ ಇದ್ದಾರೆ. ಕೊರೊನಾ ತಡೆಯುವ ನಿಟ್ಟಿನಲ್ಲಿ ನಮ್ಮ ಆಯುರ್ವೇದ ಔಷಧಿ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಅಂತ ತಿಳಿಸಿದ್ರು.

    ರೋಗ ನಿರೋಧಕ ಶಕ್ತಿ ವೃದ್ಧಿಸೋದು, ಉತ್ತಮ ಆರೋಗ್ಯ ಪದ್ದತಿಗೆ ಆಯುರ್ವೇದ ರಾಮಬಾಣವಾಗಿ ಕೆಲಸ ಮಾಡುತ್ತೆ. ವಿವಿಧ ಆಯುರ್ವೇದ ಔಷಧಿಗಳು ಕೊರೊನಾ ತಡೆಗೆ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೆ ಅಂತ ತಿಳಿಸಿದರು. ಜೀವನದಲ್ಲಿ ಆಯುರ್ವೇದ ಪದ್ದತಿ ಅಳವಡಿಕೆ ಮಾಡಿಕೊಂಡು ಎಚ್ಚರಿಕೆ ಜೀವನ ನಡೆಸಿದ್ರೆ ಕೊರೊನಾ ವಿರುದ್ದ ಗೆಲ್ಲೋಕೆ ಸಾಧ್ಯ ಅಂತ ತಿಳಿಸಿದರು.

  • ನಾನು ಆ್ಯಕ್ಟಿವ್ ಆಗಿದ್ದಿದ್ದರಿಂದ ಮನೆಯಲ್ಲಿ ಕಟ್ಟಿ ಹಾಕಿದಂತೆ ಭಾಸವಾಗ್ತಿತ್ತು: ಸುಧಾಕರ್

    ನಾನು ಆ್ಯಕ್ಟಿವ್ ಆಗಿದ್ದಿದ್ದರಿಂದ ಮನೆಯಲ್ಲಿ ಕಟ್ಟಿ ಹಾಕಿದಂತೆ ಭಾಸವಾಗ್ತಿತ್ತು: ಸುಧಾಕರ್

    ಬೆಂಗಳೂರು: ಕೊರೊನಾ ಭೀತಿಯಿಂದ ಹೋಂ ಕ್ವಾರಂಟೈನ್ ಮುಗಿಸಿ ಇಂದಿನಿಂದ ಮತ್ತೆ ತಮ್ಮ ಸೇವೆಗೆ ವೈದ್ಯಕೀಯ ಸಚಿವ ಡಾ. ಸುಧಾಕರ್ ಹಾಜರಾಗಿದ್ದಾರೆ. ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಅವರು, ಮನೆಯಲ್ಲಿ ಕಟ್ಟಿ ಹಾಕಿದಂತೆ ಭಾಸವಾಗ್ತಿತ್ತು ಎಂದು ತಮ್ಮ ಕ್ವಾರಂಟೈನ್ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

    ಇಷ್ಟು ದಿನ ಮನೆಯಲ್ಲಿ ಕ್ವಾರಂಟೈನ್ ನಲ್ಲಿದ್ದೆ. ಕ್ವಾರಂಟೈನ್ ನಲ್ಲಿದ್ರೂ ನಿತ್ಯ ಕೋವಿಡ್ ಕೆಲಸದಲ್ಲಿ ಮನೆಯಿಂದಲೇ ಭಾಗವಹಿಸ್ತಿದ್ದೆ. ಭೌತಿಕವಾಗಿ ಇವತ್ತಿಂದ ಹೊರಗೆ ಬದಿದ್ದೇನೆ ಎಂದು ತಿಳಿಸಿದ್ದಾರೆ.

    ನಾನು ಆ್ಯಕ್ಟಿವ್ ಆಗಿದ್ದಿದ್ದರಿಂದ ಮನೆಯಲ್ಲಿ ಕಟ್ಟಿ ಹಾಕಿದಂತೆ ಭಾಸವಾಗುತ್ತಿತ್ತು. ಇದೀಗ ಮತ್ತೆ ಜನರ ಸೇವೆ ಮಾಡುವ ಅವಕಾಶ ಬಂದಿದ್ದು ಸಂತಸ ತಂದಿದೆ. ಎಲ್ಲರ ಹಾರೈಕೆಯಿಂದ ಮತ್ತೆ ಎಲ್ಲರ ಸೇವೆಗೆ ಅವಕಾಶ ಸಿಕ್ಕಿದೆ. ಮತ್ತೆ ಎಂದಿನಂತೆ ಬದ್ಧತೆಯಿಂದ ಕೆಲಸ ಮಾಡುತ್ತೇನೆ ಎಂದಿದ್ದಾರೆ.

    ನನ್ನ ಕುಟುಂಬದಲ್ಲಿ ಯಾರಿಗೆಲ್ಲ ಪಾಸಿಟಿವ್ ಬಂದಿತ್ತೋ ಅವರೂ ಗುಣಮುಖರಾಗಿದ್ದಾರೆ. ಇನ್ನೆರಡು ದಿನಗಳಲ್ಲಿ ಅವರು ಡಿಸ್ಚಾರ್ಜ್ ಆಗುತ್ತಾರೆ ಎಂದು ಅವರು ಇದೇ ವೇಳೆ ತಿಳಿಸಿದರು.

    ಸುಧಾಕರ್ ಮನೆಯಲ್ಲಿ ಮೊದಲು ಅವರ ತಂದೆ ಕೊರೊನಾ ಪಾಸಿಟಿವ್ ಬಂದಿತ್ತು. ಈ ಬೆನ್ನಲ್ಲೇ ಮನೆಯವರೆಲ್ಲ ಟೆಸ್ಟ್ ಮಾಡಿಸಿದಾಗ ಸಚಿವರ ಪತ್ನಿ ಹಾಗೂ ಮಗಳಿಗೂ ಕೊರೊನಾ ಪಾಸಿಟಿವ್ ಬಂದಿತ್ತು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇತ್ತ ಸಚಿವರು ಹಾಗೂ ಅವರ ಇನ್ನಿಬ್ಬರು ಗಂಡು ಮಕ್ಕಳ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದ್ದು, ಮನೆಯಲ್ಲೇ ಕ್ವಾರಂಟೈನ್ ಆಗಿದ್ದರು.

  • ಕ್ಷೇತ್ರದ ಅನುದಾನಕ್ಕೆ ಮುಖ್ಯಮಂತ್ರಿಗಳ ಕಾಲು ಹಿಡಿಯಬೇಕು: ಜೆಡಿಎಸ್ ಶಾಸಕ

    ಕ್ಷೇತ್ರದ ಅನುದಾನಕ್ಕೆ ಮುಖ್ಯಮಂತ್ರಿಗಳ ಕಾಲು ಹಿಡಿಯಬೇಕು: ಜೆಡಿಎಸ್ ಶಾಸಕ

    ಬೆಂಗಳೂರು: ಜೆಡಿಎಸ್ ಶಾಸಕರಿಗೆ ಅನುದಾನ ಬಿಡುಗಡೆ ಮಾಡಬೇಕಾದರೆ ಯಡಿಯೂರಪ್ಪನವರ ಕಾಲು ಹಿಡಿಯಬೇಕೇ ಎಂಬ ಪ್ರಶ್ನೆಯನ್ನು ಜೆಡಿಎಸ್ ಶಾಸಕ ಡಾ.ಕೆ ಶ್ರೀನಿವಾಸಮೂರ್ತಿ ಅವರು ಹಿರಿಯ ನಟಿ ಡಾ.ಲೀಲಾವತಿ ಮುಂದೆ ನಗುತ್ತಲೇ ನೋವು ತೋಡಿಕೊಂಡಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಚೌಡಸಂದ್ರ ಹಾಗೂ ಬಿದನಪಾಳ್ಯ ನಡುವಿನ ಸೇತುವೆ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ ವೇಳೆ ಈ ಪ್ರಸಂಗ ನಡೆದಿದೆ.

    ಈ ಬಗ್ಗೆ ಮಾತನಾಡಿದ ಶಾಸಕ ಶ್ರೀನಿವಾಸ್, ಈಗಾಗಲೇ ಸಾಕಷ್ಟು ಕಾಮಗಾರಿಯ ಹಣವನ್ನು ವಾಪಸ್ ತೆಗೆದುಕೊಂಡಿದ್ದರು. ನಾನು ಹೋಗಿ ಕಾಲು ಹಿಡಿದುಕೊಂಡೆ, ಇಲ್ಲಾಂದ್ರೆ ಒದ್ದು ಬಿಡುವಂತ ಜನ ಅವರು. ಕ್ಷೇತ್ರದ ಅಭಿವೃದ್ಧಿ ಕೆಲಸಗಳು ಕುಂಠಿತವಾಗುತ್ತಿವೆ. ಜನರು ನಮ್ಮನ್ನು ಪ್ರಶ್ನೆ ಮಾಡುವ ಪರಿಸ್ಥಿತಿ ಎದುರಾಗಿದೆ. ಹಿಂದಿನ ಸರ್ಕಾರದಲ್ಲಿ ಬಿಡುಗಡೆಯಾದ ಎಲ್ಲ ಕಾಮಗಾರಿಯ ಹಣವನ್ನು ಈಗಾಗಲೇ ವಾಪಸ್ ಪಡೆದಿದ್ದು ಸರಿಯಲ್ಲ. ಕೂಡಲೇ ಶಾಸಕರ ಅನುದಾನವನ್ನು ತಾರತಮ್ಯ ಮಾಡದೇ ಕ್ಷೇತ್ರದ ಅಭಿವೃದ್ಧಿಗೆ ಮುಖ್ಯಮಂತ್ರಿ ಗಮನ ಹರಿಸಬೇಕು ಎಂದು ಮನವಿ ಮಾಡಿದರು.

    ಇದೇ ವೇಳೆ ಹಿರಿಯ ನಟಿ ಡಾ. ಲೀಲಾವತಿ ಮಾತನಾಡಿ, ನಮ್ಮ ಹಳ್ಳಿ ಜನರ ರಕ್ಷಣೆ ಹಾಗೂ ಅಭಿವೃದ್ಧಿಯ ನಿಟ್ಟಿನಲ್ಲಿ ಈ ಕಾಮಗಾರಿಗಾಗಿ ಸಾಕಷ್ಟು ಹೋರಾಟ ನಡೆಸಿದ್ದು ಇಂದಿಗೆ ಸಾರ್ಥಕವಾಗಿದೆ ಎಂದರು. ಈ ಕಾರ್ಯಕ್ರಮದಲ್ಲಿ ಶಾಸಕ ಡಾ.ಕೆ ಶ್ರೀನಿವಾಸ ಮೂರ್ತಿ, ಡಾ.ಲೀಲಾವತಿ, ನಟ ವಿನೋದ್ ರಾಜ್, ಹೇಮಂತ್ ಕುಮಾರ್, ಸಂಪತ್ ಕುಮಾರ್, ಸ್ಥಾಯಿ ಸಮಿತಿಯ ಅಧ್ಯಕ್ಷ ಡಾ. ರಂಗನಾಥ್, ಮಾಜಿ ಸೈನಿಕ ಮೂರ್ತಿ, ವೆಂಕಟೇಶ, ಮತ್ತಿತರ ಮುಖಂಡರು ಹಾಜರಿದ್ದರು.

  • ಬಿಜೆಪಿಯಲ್ಲೂ ಪೌರತ್ವ ಕಾಯ್ದೆ ವಿರೋಧಿಸೋರು ಇದ್ದಾರೆ: ಡಾ.ಎಚ್.ಸಿ. ಮಹದೇವಪ್ಪ

    ಬಿಜೆಪಿಯಲ್ಲೂ ಪೌರತ್ವ ಕಾಯ್ದೆ ವಿರೋಧಿಸೋರು ಇದ್ದಾರೆ: ಡಾ.ಎಚ್.ಸಿ. ಮಹದೇವಪ್ಪ

    ಮೈಸೂರು: ಬಿಜೆಪಿಯಲ್ಲೂ ಪೌರತ್ವ ಕಾಯ್ದೆ ವಿರೋಧಿಸುವವರು ಇದ್ದಾರೆ. ಆದರೆ ಅವರು ತಮ್ಮ ನಿಲುವುವನ್ನ ಅಂತಕರ್ಣದಲ್ಲೆ ಇಟ್ಟುಕೊಂಡಿದ್ದಾರೆ ಎಂದು ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ಹೇಳಿದ್ದಾರೆ.

    ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪೌರತ್ವ ಕಾಯ್ದೆಯಲ್ಲಿನ ಅಂಶಗಳು ಸಂವಿಧಾನ ಆಶಯದ ವಿರೋಧಿಯಾಗಿವೆ. ಸಂವಿಧಾನದ 14 ವಿಧಿಯ ಮೂಲತತ್ವಕ್ಕೆ ಈ ಕಾಯ್ದೆ ವಿರುದ್ಧವಾಗಿದೆ. ಪೌರತ್ವ ಕಾಯ್ದೆಯನ್ನು ವಿರೋಧಿಸಿ ಕೇವಲ ರಾಜಕೀಯ ಪಕ್ಷಗಳು ಪ್ರತಿಭಟನೆ ಮಾಡುತ್ತಿಲ್ಲ. ಎಲ್ಲರೂ ತಮ್ಮ ಹಕ್ಕಿಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಇಲ್ಲಿ ಕಾಂಗ್ರೆಸ್ ಪಿತೂರಿ ಮಾಡುವ ಅಗತ್ಯವೇ ಇಲ್ಲ ಎಂದ ಅವರು, ಇದು ಸಂವಿಧಾನ ವಿರೋಧಿ ಅಂತ ಹೇಳಲು ಪಿತೂರಿ ಬೇಕಾ ಎಂದು ಪ್ರಶ್ನಿಸಿದರು.

    ಮಂಗಳೂರು ಗಲಭೆ ಪ್ರಕರಣ ಸಂಬಂಧ ನ್ಯಾಯಾಂಗ ತನಿಖೆ ಆಗಬೇಕು. ಮೃತರ ಕುಟುಂಬಕ್ಕೆ ರಕ್ಷಣೆ ಜೊತೆ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಇದು ಸರ್ವಾಧಿಕಾರಿ ಧೋರಣೆಯ ಸಂಕೇತವಾಗುತ್ತೆ ಎಂದು ತಿಳಿಸಿದರು.

  • ಉಡುಪಿಯ ನಕಲಿ ಅಬ್ದುಲ್ ಕಲಾಂಗೆ ಶಿಕ್ಷೆ ಪ್ರಕಟ

    ಉಡುಪಿಯ ನಕಲಿ ಅಬ್ದುಲ್ ಕಲಾಂಗೆ ಶಿಕ್ಷೆ ಪ್ರಕಟ

    ಉಡುಪಿ: 9 ವರ್ಷಗಳ ಹಿಂದೆ ಮಾಜಿ ರಾಷ್ಟ್ರಪತಿ ದಿವಂಗತ ಡಾ. ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಸಹಿಯನ್ನು ಫೋರ್ಜರಿ ಮಾಡಿ ಅವರ ವ್ಯಕ್ತಿತ್ವ ಮತ್ತು ಗೌರವಕ್ಕೆ ಧಕ್ಕೆ ಉಂಟು ಮಾಡಿರುವ ಪ್ರಕರಣದ ಆರೋಪಿಗೆ ಉಡುಪಿ ಹೆಚ್ಚುವರಿ ಜೆಎಂಎಫ್‍ಸಿ ನ್ಯಾಯಾಲಯವು ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.

    ಉಡುಪಿಯ ಕೊಡವೂರು ಗ್ರಾಮದ ಮೂಡಬೆಟ್ಟು ನಿವಾಸಿ ನಿರಂಜನ್ ಚಿದಾನಂದ ಭಟ್ ಶಿಕ್ಷೆಗೆ ಗುರಿಯಾದ ಆರೋಪಿ. 2010ರಲ್ಲಿ ಈತ ವಂಚಿಸುವ ಮತ್ತು ತಾನೇ ಭಾರತ ದೇಶದ ರಾಷ್ಟ್ರಪತಿ ಡಾ. ಎ.ಪಿ.ಜೆ.ಅಬ್ದುಲ್ ಕಲಾಂ ಎಂದು ವ್ಯವಹರಿಸಿ ರಾಷ್ಟ್ರಪತಿಯ ವ್ಯಕ್ತಿತ್ವ ಮತ್ತು ಗೌರವಕ್ಕೆ ಧಕ್ಕೆ ಉಂಟು ಮಾಡುವ ಉದ್ದೇಶದಿಂದ ತನ್ನ ಮನೆಯಲ್ಲಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಸಹಿಯನ್ನು ನಕಲಿ ಮಾಡಿ, ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದನು.

    ಉಡುಪಿ ಕರಾವಳಿ ಬೈಪಾಸ್ ಬಳಿಯ ಸರ್ಫ್ ಆಂಡ್ ವೀವ್ ಎಂಬ ಹೆಸರಿನ ಸೈಬರ್ ಕೆಫೆಯಲ್ಲಿ ಅಬ್ದುಲ್ ಕಲಾಂ ಅವರ ಹೆಸರಿನಲ್ಲಿ ಈತ ನಕಲಿ ಇಮೇಲ್ ಐಡಿಯನ್ನು ತಯಾರಿಸಿ, ಅದರ ಮೂಲಕ ಅಬ್ದುಲ್ ಕಲಾಂ ಅವರಿಗೆ ಅಭಿನಂದನಾ ಪತ್ರ ವನ್ನು ಕಳುಹಿಸಿಕೊಟ್ಟಿದ್ದನು. ಅದಕ್ಕೆ ಉತ್ತರವಾಗಿ ಅಬ್ದುಲ್ ಕಲಾಂ ಕಳುಹಿಸಿದ್ದ ಕೃತಜ್ಞತಾ ಪತ್ರದಲ್ಲಿದ್ದ ಅವರ ಸಹಿಯನ್ನು ಆರೋಪಿ ನಕಲಿ ಮಾಡಿದ್ದ. ಮಾನವ ಕುಲಕ್ಕಾಗಿ ಅತ್ಯುನ್ನತ ಸೇವೆಗಳನ್ನು ಮಾಡಿದ ಎಂಜಿನಿಯರ್ಸ್ ಗಳಿಗೆ ಅಮೆರಿಕನ್ ಎಂಜಿನಿಯರಿಂಗ್ ಆರ್ಗನೈಝೇಶನ್ ನೀಡುವ ಹೂವೇರ್ ಪ್ರಶಸ್ತಿಗಾಗಿ ಆರೋಪಿಯು ನಾಮಪತ್ರವನ್ನು ಅಬ್ದುಲ್ ಕಲಾಂ ಅವರದ್ದು ಎನ್ನಲಾದ ನಕಲಿ ಶಿಫಾರಸ್ಸು ಪತ್ರದೊಂದಿಗೆ ಕಳುಹಿಸಿದ್ದನು.

    ಅಬ್ದುಲ್ ಕಲಾಂ ಅವರ ನಕಲಿ ಇಮೇಲ್ ಐಡಿಯಿಂದ ಗೋಸ್ವಾಮಿ ಡಿ.ಯೋಗಿ ನ್ಯೂಯಾರ್ಕ್ ಇವರಿಗೆ ಭಾರತ ದೇಶದಲ್ಲಿರುವ 50 ಎಂಡಬ್ಲ್ಯೂ ಸೋಲಾರ್ ಥರ್ಮಲ್ ಪ್ಲಾಂಟ್‍ನ ಪ್ರಾಜೆಕ್ಟ್ ರಿಪೋರ್ಟನ್ನು ಕಳುಹಿಸಿಕೊಡುವಂತೆ ಕೋರಿ, ತಾನು ಸೃಷ್ಟಿಸಿದ ದಾಖಲೆಗಳು ನೈಜ ದಾಖಲೆಗಳು ಎಂದು ಬಳಸಿದ್ದ. ಈ ಮೂಲಕ ಆತ ತಾನೇ ರಾಷ್ಟ್ರಪತಿ ಅಬ್ದುಲ್ ಕಲಾಂ ಎಂದು ವ್ಯವಹರಿಸಿ ಅವರ ವ್ಯಕ್ತಿತ್ವ ಹಾಗೂ ಗೌರವಕ್ಕೆ ಧಕ್ಕೆಯುಂಟು ಮಾಡಿದ್ದನು ಎಂದು ದೂರಲಾಗಿತ್ತು. ವಿಚಾರಣೆ ವೇಳೆ ನಿರಂಜನ್ ಚಿದಾನಂದ ಭಟ್ ಮೇಲಿದ್ದ ಆರೋಪ ಸಾಬೀತಾಗಿದ್ದು ಕೋರ್ಟ್ 3 ವರ್ಷ ಜೈಲು, 7 ಸಾವಿರ ರುಪಾಯಿ ದಂಡ ವಿಧಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪರಮೇಶ್ವರ್ ಕೈಯಿಂದ 10ರೂ. ತಗೊಂಡು ಅಜ್ಜಿ ಕ್ಯಾಂಟೀನ್ ನಲ್ಲಿ ಊಟ ಸವಿದ ರಾಹುಲ್!

    ಪರಮೇಶ್ವರ್ ಕೈಯಿಂದ 10ರೂ. ತಗೊಂಡು ಅಜ್ಜಿ ಕ್ಯಾಂಟೀನ್ ನಲ್ಲಿ ಊಟ ಸವಿದ ರಾಹುಲ್!

    ಬೆಂಗಳೂರು: ಬಹುನಿರೀಕ್ಷಿತ ಇಂದಿರಾ ಕ್ಯಾಂಟೀನ್ ಗೆ ಕನಕನ ಪಾಳ್ಯದಲ್ಲಿ ಇಂದು ಕಾಂಗ್ರೆಸ್ ನ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ಚಾಲನೆ ನೀಡಿದ್ದಾರೆ. ಬಳಿಕ ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಅವರ ಬಳಿಯಿಂದ 10 ರೂ, ತೆಗೆದುಕೊಂಡು ಟೋಕನ್ ಕೊಟ್ಟು ಊಟ ಮಾಡಿದ್ದಾರೆ.

    ಅನ್ನ ಸಾಂಬಾರ್ ಮತ್ತು ರೈಸ್ ಬಾತ್ ಸವಿಯುತ್ತಿರುವ ರಾಹುಲ್ ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಅವರು ಸಾಥ್ ನೀಡಿದ್ರು. ಕ್ಯಾಂಟೀನ್ ಒಳಹೊಕ್ಕು ವ್ಯವಸ್ಥೆಗಳನ್ನು ಪರಿಶೀಲಿಸಿದ ರಾಹುಲ್, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕ್ಯಾಂಟೀನ್ ಮೆನು ಬಗ್ಗೆಯೂ ತೃಪ್ತಿ ಪಟ್ಟಿದ್ದಾರೆ.

    ಕಾರ್ಯಕ್ರಮ ಉದ್ಘಾಟನೆಯ ಬಳಿಕ ಮಾತನಾಡಿದ ರಾಹುಲ್ ಗಾಂಧಿ, ಬೆಂಗಳೂರಿನಲ್ಲಿ ಯಾರು ಹಸಿವಿನಿಂದ ಇರಬಾರದು. ಊಟ ದೊಡ್ಡ ವಿಚಾರವಲ್ಲ ಹೋಟೆಲ್‍ಗೆ ಹೋಗಿ ಅವರಿಗೆ ಇಷ್ಟ ಇರೋ ಮೆನು ಹೇಳಿ ಊಟ ಮಾಡಬಹುದು. ಆದ್ರೇ ಯಾರು ದುಡ್ಡು ಇಲ್ಲದವರಿದ್ದಾರೋ ಆಟೋ ಡ್ರೈವರ್‍ಗಳು, ಕಾರ್ಮಿಕರು, ಬಡವರು ಅವರಿಗಾಗಿ ಈ ಇಂದಿರಾ ಕ್ಯಾಂಟೀನ್ ನೆರವಾಗುತ್ತದೆ. ನನಗೆ ಹೆಮ್ಮೆ ಇದೆ ಕಾಂಗ್ರೆಸ್ ಸರ್ಕಾರ ಐದು ರೂಪಾಯಿಗೆ ಬೆಳಗ್ಗೆ ಉಪಹಾರ ನೀಡುತ್ತೆ ಅಂತ ಹೇಳಿದ್ರು.

    ಇಂದಿರಾ ಕ್ಯಾಂಟೀನ್ ಬೆಂಗಳೂರಿಗೆ ಸೀಮಿತವಾಗಿರಲ್ಲ. ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ವಿಸ್ತರಿಸೋದಾಗಿ ಸಿಎಂ ನನ್ನ ಜೊತೆ ಚರ್ಚೆ ನಡೆಸಿದ್ದಾರೆ. 10 ರೂಪಾಯಿಗೆ ಊಟ ಕೊಡ್ತಾರೆ. ಜೊತೆಗೆ ಅಷ್ಟೇ ಶುಚಿತ್ವ ಹಾಗೂ ರುಚಿಯನ್ನು ಕಾಯ್ದು ಕೊಳ್ಳಲು ಶ್ರಮ ವಹಿಸುತ್ತಿದ್ದಾರೆ. ನಾನು ಸಹ ಇದ್ದನ್ನೆ ರಿಕ್ವೇಸ್ಟ್ ಮಾಡುತ್ತೇನೆ. ಇದು ಪ್ರಾರಂಭ, ಬೆಂಗಳೂರಿನಲ್ಲಿ ಮುಂದೆ ಕರ್ನಾಟಕದ ಹಲವು ನಗರಗಳಿಗೆ ಈ ಯೋಜನೆ ಸಿಗಲಿದೆ ಅಂತಾ ಈಗಾಗಲೇ ಸಿದ್ದರಾಮಯ್ಯ ಜೀ ಹೇಳಿದ್ದಾರೆ. ಈ ವಿಚಾರ ಕೇಳಿ ಸಂತಸವಾಗಿದೆ. ರಾಜ್ಯ ಸರ್ಕಾರದ ಈ ಸಾಧನೆಗೆ ನನ್ನ ಅಭಿನಂದನೆಗಳು ಅಂದ್ರು.

    ರಾಹುಲ್ ಗಾಂಧಿ ಬಾಷಣ ಮಾಡುತ್ತಿದ್ದಂತೆಯೇ ಕಾರ್ಯಕ್ರಮದಲ್ಲಿ ನೆರೆದಿದ್ದ ಮಂದಿ ಎದ್ದು ಹೋದ್ರು. ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ಇಂದಿರಾ ಕ್ಯಾಂಟೀನ್ ಲೋಗೋ ಡಿಸೈನ್ ಮಾಡಿದ ಕ್ರಿಯೇಟಿವ್ ಇನ್ಫ್ರಾ ಸಂಸ್ಥೆಗೆ ಒಂದು ಲಕ್ಷ ಬಹುಮಾನ ನೀಡಿದ್ರು. 770 ಲೋಗೋಗಳ ಪೈಕಿ ಕ್ರಿಯೇಟಿವ್ ಇನ್ಫ್ರಾ ಸಂಸ್ಥೆಯ ಲೋಗೋ ಆಯ್ಕೆಯಾಗಿದೆ.

    ಕಾರ್ಯಕ್ರಮದಲ್ಲಿ ಸಚಿವ ಕೆಜೆ ಜಾರ್ಜ್, ರಾಮಲಿಂಗರೆಡ್ಡಿ, ಡಿಕೆ ಶಿವ ಕುಮಾರ್, ಕೃಷ್ಣ ಬೈರೇಗೌಡ, ಯುಟಿ ಖಾದರ್, ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫೆರ್ನಾಂಡಿಸ್, ಎಂಎಲ್ ಎ ಆರ್ ವಿ ದೇವರಾಜ್, ಮುನ್ನಿರತ್ನ, ಮೇಯರ್ ಪದ್ಮಾವತಿ, ಎಂಎಲ್ ಸಿ ಪಿ ಆರ್ ರಮೇಶ್, ಎಚ್ ಎಂ ರೇವಣ್ಣ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ರಾಹುಲ್ ಗಾಂಧಿ ಬೆಂಗಳೂರಿಗೆ ಬರುವ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

     

  • ಮನ್‍ಕೀ ಬಾತ್‍ನಿಂದ ಜನ್ರ ಹೊಟ್ಟೆ ತುಂಬಲ್ಲ, ನಾವು ನೀಡೋ ವಾಂಗಿಬಾತ್‍ನಿಂದ ತುಂಬುತ್ತೆ: ಸಿಎಂ

    ಮನ್‍ಕೀ ಬಾತ್‍ನಿಂದ ಜನ್ರ ಹೊಟ್ಟೆ ತುಂಬಲ್ಲ, ನಾವು ನೀಡೋ ವಾಂಗಿಬಾತ್‍ನಿಂದ ತುಂಬುತ್ತೆ: ಸಿಎಂ

    ಬೆಂಗಳೂರು: ಮನ್‍ಕೀ ಬಾತ್‍ನಿಂದ ಜನ್ರ ಹೊಟ್ಟೆ ತುಂಬಲ್ಲ, ನಾವು ನೀಡೋ ವಾಂಗಿಬಾತ್‍ನಿಂದ ತುಂಬುತ್ತದೆ. ಇಂದಿರಾ ಕ್ಯಾಂಟೀನ್ ಚುನಾವಣೆ ವರ್ಷದಲ್ಲಿ ಬಂದ ಯೋಜನೆ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

    ಕ್ಯಾಂಟೀನ್ ಉದ್ಘಾಟನೆಯ ಬಳಿಕ ಮಾತನಾಡಿದ ಅವರು, ಇಂದು ಬೆಂಗಳೂರು ನಗರಕ್ಕೆ ಐತಿಹಾಸಿಕ ದಿನ ಹಾಗೂ ಸ್ಮರಣೀಯ ದಿನವಾಗಿದೆ. ಇಂದಿರಾ ಕ್ಯಾಂಟೀನ್ ರಾಜಕೀಯ ಲಾಭಕ್ಕೋಸ್ಕರ ಆರಂಭಿಸಿಲ್ಲ. ಶೇ 28 ರಷ್ಟು ಅಪೌಷ್ಠಿಕತೆ ಆಹಾರ ಸೇವಿಸುವವರಿದ್ದಾರೆ. ಶೇ.03 ರಷ್ಟು ಮಹಿಳೆಯರಿಗೆ 3 ಹೊತ್ತು ಆಹಾರ ಸಿಗುತ್ತಿಲ್ಲ. ಬೇರೆ ರಾಜ್ಯಕ್ಕೆ ಹೋಲಿಕೆ ಮಾಡಿದ್ರೆ ನಮ್ಮ ರಾಜ್ಯದಲ್ಲಿ ಹಸಿವಿನಿಂದ ಬಳಲುತ್ತಿರುವವರು ಹೆಚ್ಚಿದ್ದಾರೆ. ಹೀಗಾಗಿ ಇಂದಿರಾ ಕ್ಯಾಂಟೀನ್ ಆರಂಭಿಸಿದ್ದೇವೆ ಎಂದರು.

    ಇಂದೇ 198 ಕ್ಯಾಂಟೀನ್ ಗಳನ್ನು ಸಹ ಪ್ರಾರಂಭಿಸಬೇಕಿತ್ತು. ಆದ್ರೆ ಜಾಗದ ಕೊರತೆಯಿಂದ 101 ಕ್ಯಾಂಟೀನ್ ಪ್ರಾರಂಭಿಸುತ್ತಿದ್ದೇವೆ. ಈ ವರ್ಷದ ಬಜೆಟ್ ನಲ್ಲಿ 198 ಕ್ಯಾಂಟೀನ್ ಪ್ರಾರಭಿಸೋದಾಗಿ ಘೋಷಣೆ ಮಾಡಿದ್ದೆವು. ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಹೆಸರನ್ನು ಇಡೋದಾಗಿ ಬಜೆಟ್ ನಲ್ಲಿ ಹೇಳಿದ್ದೇವು ಎಂದರು.

    ನಮ್ಮ ಸರ್ಕಾರ ಬಂದ ಮೇಲೆ ಒಂದು ಕೋಟಿ 8 ಲಕ್ಷ ಜನರಿಗೆ 7 ಕೆ.ಜಿ ಅಕ್ಕಿ ಕೊಡ್ತಾ ಇದ್ದೇವೆ. ಅನ್ನ ಭಾಗ್ಯ, ಇಂದಿರಾ ಕ್ಯಾಂಟೀನ್ ಬಗ್ಗೆ ವಿರೋಧ ಮಾಡಿದವರೆ ಹೆಚ್ಚು ಅಂತ ಅವರು ವಿಷಾದ ವ್ಯಕ್ತಪಡಿಸಿದ್ರು.

    ಅನ್ನ ಭಾಗ್ಯ ಯೋಜನೆಯಿಂದ ಗುಳೇ ಹೋಗುವುದು ಕಡಿಮೆಯಾಗಿದೆ. ಬರಗಾಲ ಇದ್ದರೂ ಉಚಿತ ಅಕ್ಕಿ ವಿತರಣೆ ಮಾಡುತ್ತಿದ್ದೇವೆ. ಬರಗಾಲ ಇದ್ದರೂ ಜನ ಹಸಿವಿನಿಂದ ಬಳಲದಂತೆ ನಮ್ಮ ಸರಕಾರ ನೋಡಿಕೊಂಡಿದೆ. ಸರಕಾರದ ಯೋಜನೆಗಳಿಗೆ ವಿರೋಧ ಇದೆ. ಆಟದ ಮೈದಾನದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಿಲ್ಲ. ಸರಕಾರಿ ಜಾಗದಲ್ಲೇ ಕ್ಯಾಂಟೀನ್ ನಿರ್ಮಾಣ ಮಾಡಿದ್ದೇವೆ ಎಂದು ತಿಳಿಸಿದರು.

    ಕೆಲವರಿಗೆ ಮೊಸರಲ್ಲಿ ಕಲ್ಲು ಹುಡುಕುವ ಬುದ್ಧಿ ಇದೆ. ಹೊಟ್ಟೆ ತುಂಬಿದವರಿಗೆ ಹಸಿವಿನ ಬೆಲೆ ಗೊತ್ತಿಲ್ಲ. ನಾವು ಬಡವರ ಪರ ಇರುವವರು. ಇಂದಿರಾ ಗಾಂಧಿ ಬಡತನದ ವಿರುದ್ಧ ಹೋರಾಡಿದ ಉಕ್ಕಿನ ಮಹಿಳೆ. ಅವರ `ಗರೀಬಿ ಹಟಾವೋ’ ಮಹತ್ವದ ಕಾರ್ಯಕ್ರಮವಾಗಿದೆ. ಬಡವರ ಹಸಿವು ಅರ್ಥ ಮಾಡಿಕೊಳ್ಳದವರೇ ಇಂದಿರಾ ಕ್ಯಾಂಟೀನ್ ವಿರೋಧಿಸ್ತಿದ್ದಾರೆ ಅಂತ ಟಾಂಗ್ ನೀಡಿದ ಅವರು ಮುಂದಿನ ದಿನಗಳಲ್ಲಿ ಬೇರೆ ಜಿಲ್ಲೆಗಳಿಗೂ ಇಂದಿರಾ ಕ್ಯಾಂಟೀನ್ ವಿಸ್ತರಣೆ ಮಾಡುವುದಾಗಿ ಭರವಸೆ ನೀಡಿದರು.

    ಕಾರ್ಯಕ್ರಮದಲ್ಲಿ ಸಚಿವ ಕೆಜೆ ಜಾರ್ಜ್, ರಾಮಲಿಂಗರೆಡ್ಡಿ, ಡಿಕೆ ಶಿವ ಕುಮಾರ್, ಕೃಷ್ಣ ಬೈರೇಗೌಡ, ಯುಟಿ ಖಾದರ್, ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫೆರ್ನಾಂಡಿಸ್, ಎಂಎಲ್ ಎ ಆರ್ ವಿ ದೇವರಾಜ್, ಮುನ್ನಿರತ್ನ, ಮೇಯರ್ ಪದ್ಮಾವತಿ, ಎಂಎಲ್ ಸಿ ಪಿ ಆರ್ ರಮೇಶ್, ಎಚ್ ಎಂ ರೇವಣ್ಣ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ರಾಹುಲ್ ಗಾಂಧಿ ಬೆಂಗಳೂರಿಗೆ ಬರುವ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.