Tag: Dr. VK Paul

  • ಕೊರೊನಾ 3ನೇ ಅಲೆ ಮಕ್ಕಳನ್ನು ಬಾಧಿಸುವ ಬಗ್ಗೆ ಪುರಾವೆಗಳಿಲ್ಲ: ಡಾ.ವಿ.ಕೆ.ಪೌಲ್

    ಕೊರೊನಾ 3ನೇ ಅಲೆ ಮಕ್ಕಳನ್ನು ಬಾಧಿಸುವ ಬಗ್ಗೆ ಪುರಾವೆಗಳಿಲ್ಲ: ಡಾ.ವಿ.ಕೆ.ಪೌಲ್

    ನವದೆಹಲಿ: ಕೊರೊನಾ 3ನೇ ಅಲೆ ಮಕ್ಕಳನ್ನು ಬಾಧಿಸುವ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ಪ್ರಧಾನಿ ಮೋದಿಯವರ ಕೊರೊನಾ ನಿರ್ವಹಣೆ ತಂಡದ ಸದಸ್ಯ ಡಾ.ವಿ.ಕೆ.ಪೌಲ್ ಹೇಳಿದ್ದಾರೆ.

    ಈ ಕುರಿತು ಮಾಹಿತಿ ನೀಡಿರುವ ಅವರು, ಕಳೆದ 2 ಅಲೆಗಳಿಗಿಂತ ಕೊರೊನಾ 3ನೇ ಅಲೆ ಮಕ್ಕಳನ್ನು ಹೆಚ್ಚು ಬಾಧಿಸಲಿದೆ ಎಂಬ ಪೋಷಕರ ಆತಂಕದ ಕುರಿತು ಮಾತನಾಡಿದ್ದಾರೆ. ಮೂರನೇ ಅಲೆ ನಿರ್ದಿಷ್ಟವಾಗಿ ಮಕ್ಕಳ ಮೇಲೆಯೇ ಪರಿಣಾಮ ಬೀರಲಿದೆ ಎಂಬುದರ ಬಗ್ಗೆ ಖಚಿತವಾಗಿಲ್ಲ. ಇಲ್ಲಿಯವರೆಗೆ ವಯಸ್ಕರಂತೆ ಮಕ್ಕಳಿಗೂ ಸಹ ಕೊರೊನಾ ಸೋಂಕು ತಗುಲಿದೆ. ಅಂದರೆ ವಯಸ್ಕರಿಗೆ ಹೆಚ್ಚು ಪರಿಣಾಮ ಬೀರಿದ ರೀತಿಯಲ್ಲೇ ಮಕ್ಕಳಿಗೂ ಬೀರಿದೆ ಎಂದು ಅವರು ವಿವರಿಸಿದ್ದಾರೆ.

    ಡಿಸೆಂಬರ್ 2020 ರಿಂದ ಜನವರಿ 2021ರ ಅವಧಿಯಲ್ಲಿ ವಿವಿಧ ವಯಸ್ಸಿನವರಲ್ಲಿ ಎಷ್ಟು ಕೊರೊನಾ ಪ್ರಕರಣಗಳು ಪತ್ತೆಯಾಗಿವೆ ಎಂಬುದರ ಕುರಿತು ಆರೋಗ್ಯ ಇಲಾಖೆ ಮಾಹಿತಿ ಹಂಚಿಕೊಂಡಿದೆ. ‘ಬ್ಲಡ್ ಸೀರಮ್ ಆಧರಿಸಿ ಜನಸಂಖ್ಯೆಯಲ್ಲಿ ರೋಗಕಾರಕದ ಮಟ್ಟ’ವನ್ನು ತಿಳಿಸಿದ್ದು, ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಿದೆ.

    ದೆಹಲಿಯ ಏಮ್ಸ್ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಅವರು ಸಹ ಈ ಬಗ್ಗೆ ತಿಳಿಸಿದ್ದು, ಕೊರೊನಾ ಮೂರನೇ ಅಲೆಯಲ್ಲಿ ಮಕ್ಕಳಗೆ ಸೋಂಕು ಹೆಚ್ಚು ಕಾಣಿಸಿಕೊಳ್ಳುತ್ತದೆ ಎಂಬುದರ ಬಗ್ಗೆ ಯಾವುದೇ ದೃಢೀಕೃತ ಪುರಾವೆಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಕೊರೊನಾ ಮೂರನೇ ಅಲೆ ಮಕ್ಕಳನ್ನು ಕಾಡುತ್ತದೆ ಎಂಬ ವಿಚಾರ ಮುನ್ನೆಲೆಗೆ ಬರುತ್ತಿದ್ದಂತೆ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದ್ದು, ಈಗಾಲೇ ಕೊರೊನಾ ವ್ಯಾಕ್ಸಿನ್‍ನ್ನು ಮಕ್ಕಳ ಮೇಲೆ ಪ್ರಯೋಗ ಮಾಡಲಾಗುತ್ತಿದೆ. ಈ ಟ್ರಯಲ್ ಪೂರ್ಣಗೊಳ್ಳುತ್ತಿದ್ದಂತೆ ಮಕ್ಕಳಿಗೂ ಸಹ ಲಸಿಕೆಯನ್ನು ನೀಡಲಾಗುತ್ತದೆ. ಇದಕ್ಕಾಗಿ ಸರ್ಕಾರ ಎಲ್ಲ ಸಿದ್ಧತೆಗಳನ್ನು ಸಹ ಮಾಡಿಕೊಂಡಿದೆ.