Tag: Dr. Veerendra Hegde

  • ಉಡುಪಿಯಲ್ಲಿ ಪೇಜಾವರ ಶ್ರೀಗಳ ಸ್ಮಾರಕಕ್ಕೆ ಸಾರ್ವಜನಿಕರ ಒತ್ತಾಯ

    ಉಡುಪಿಯಲ್ಲಿ ಪೇಜಾವರ ಶ್ರೀಗಳ ಸ್ಮಾರಕಕ್ಕೆ ಸಾರ್ವಜನಿಕರ ಒತ್ತಾಯ

    ಉಡುಪಿ: ರಾಷ್ಟ್ರಸಂತ ಪೇಜಾವರ ಶ್ರೀಗಳು ಕೃಷ್ಣೈಕ್ಯರಾಗಿ ಎಂಟು ದಿನಗಳು ಕಳೆದಿದೆ. ಉಡುಪಿಯಲ್ಲಿ ಶ್ರೀಗಳ ನುಡಿನಮನ, ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯುತ್ತಿದೆ.

    ವಿಶ್ವೇಶತೀರ್ಥರೇ ಕಟ್ಟಿಸಿದ ಮಠದ ರಾಜಾಂಗಣದಲ್ಲಿ ಶ್ರೀಗಳಿಗೆ ಉಡುಪಿಯ ಜನತೆ, ಜನಪ್ರತಿನಿಧಿಗಳು, ಗಣ್ಯರ ಕಡೆಯಿಂದ ನುಡಿನಮನ ನಡೆದಿದೆ. ನುಡಿನಮನ ಕಾರ್ಯಕ್ರಮದಲ್ಲಿ ಉಡುಪಿಯಲ್ಲಿ ಪೇಜಾವರ ಶ್ರೀಗಳ ಸ್ಮಾರಕಕ್ಕೆ ಸಾರ್ವಜನಿಕರಿಂದ ಒತ್ತಾಯ ಕೇಳಿಬಂದಿದೆ.

    ಸಾರ್ವಜನಿಕರ ಒತ್ತಾಯಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಶ್ರೀಗಳನ್ನು ಮಹಾತ್ಮನಿಗೆ ಹೋಲಿಸಿದರು. ಪೇಜಾವರ ಶ್ರೀಗಳ ಜೀವನವೇ ಒಂದು ಪಾಠ. ಅವರ ಪ್ರವಚನ ಅನುಸರಿಸುವ ಅಗತ್ಯವಿಲ್ಲ. ಅವರ ಜೀವನ ಪದ್ಧತಿ ಮತ್ತು ಬದ್ಧತೆ ಅನುಕರಣೆ ಮಾಡಿದರೆ ಸಾಕು ಎಂದರು.

    ಪೇಜಾವರ ಶ್ರೀಗಳು ಜನಮಾನಸದಲ್ಲಿ ಉಳಿಯಬೇಕು. ಅಷ್ಟ ಮಠದ ಶ್ರೀಗಳು ಈ ಬಗ್ಗೆ ಚರ್ಚೆ ಮಾಡುತ್ತೇವೆ. ಸ್ಮಾರಕ ನಿರ್ಮಾಣ, ಅದರ ರೂಪುರೇಷೆ ಬಗ್ಗೆ ಚರ್ಚೆ ಮಾಡುತ್ತೇವೆ. ಪೇಜಾವರ ಶ್ರೀಗಳನ್ನು ಪಡೆದ ಉಡುಪಿ ಧನ್ಯ. ಅವರನ್ನು ಕಳೆದುಕೊಂಡು ಎಲ್ಲಾ ಕ್ಷೇತ್ರಗಳಿಗೆ ಅನಾಥ ಪ್ರಜ್ಞೆ ಕಾಡುತ್ತಿದೆ ಎಂದು ಪರ್ಯಾಯ ಪಲಿಮಾರು ವಿದ್ಯಾಧೀಶ ಸ್ವಾಮೀಜಿ ನುಡಿನಮನ ಅರ್ಪಿಸಿದರು.

    ಸಾವಿರಾರು ಜನ ವಿಶ್ವೇಶತೀರ್ಥ ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಪೇಜಾವರ ಶ್ರೀಗಳ ಸ್ಮಾರಕ ಕೃಷ್ಣ ಮಠದಲ್ಲಿ ಸ್ಥಾಪನೆಯಾಗಬೇಕೋ, ಉಡುಪಿಯ ನಗರ ಪ್ರದೇಶದಲ್ಲಿ ಸ್ಥಾಪನೆ ಮಾಡಬೇಕೋ ಎಂಬ ಚರ್ಚೆ ಶುರುವಾಗಿದೆ. ಸ್ಮಾರಕ ನಿರ್ಮಾಣ ಮಾಡಬೇಕಾ ಅಥವಾ ಬೃಂದಾವನ ನಿರ್ಮಾಣ ಆಗಬೇಕಾ ಎಂಬ ಬಗ್ಗೆ ಕೂಡಾ ಚರ್ಚೆಗಳು ನಡೆಯುತ್ತಿವೆ.

  • ಪೇಜಾವರರನ್ನು ಭಗವಾನ್ ಕೃಷ್ಣನೇ ಕಾಪಾಡುತ್ತಾನೆ: ಡಾ. ವೀರೇಂದ್ರ ಹೆಗ್ಗಡೆ

    ಪೇಜಾವರರನ್ನು ಭಗವಾನ್ ಕೃಷ್ಣನೇ ಕಾಪಾಡುತ್ತಾನೆ: ಡಾ. ವೀರೇಂದ್ರ ಹೆಗ್ಗಡೆ

    ಉಡುಪಿ: ಪೂಜ್ಯ ಪೇಜಾವರ ಶ್ರೀಗಳು ಅನಾರೋಗ್ಯದಿಂದಿದ್ದಾರೆ. ಐಸಿಯುನಲ್ಲಿರೋದನ್ನು ನೋಡಿ ಬಂದಿದ್ದೇನೆ. ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

    ಉಡುಪಿಯಲ್ಲಿ ಮಾತನಾಡಿದ ಅವರು, ವಯೋಧರ್ಮ ಪ್ರಕಾರ ನಿಧಾನ ಸ್ಪಂದನೆ ಆಗ್ತಾಯಿದೆ. ಸ್ವಾಮೀಜಿಗಳಿಗೆ ಬೇರೆ ಯಾವುದೇ ಕಾಯಿಲೆ, ಅಡ್ಡ ರೋಗ ಇಲ್ಲ. ಚಿಕಿತ್ಸೆಗೆ ನಿಧಾನವಾಗಿ ಸ್ಪಂದಿಸುತ್ತಿದ್ದಾರೆ. ಸ್ವಾಮೀಜಿಗಳಿಗೆ ಶೀಘ್ರ ಆರೋಗ್ಯ ವೃದ್ಧಿಯಾಗಲಿ. ಇಡೀ ದೇಶ ಅವರಿಗಾಗಿ ಪ್ರಾರ್ಥನೆ ಮಾಡುತ್ತಿದೆ. ಅವರು ಸದಾ ದೇವರ ಸಾನಿಧ್ಯದಲ್ಲೇ ಇದ್ದವರು. ದೇವರು ಅವರನ್ನು ಶೀಘ್ರ ಗುಣಮುಖ ಮಾಡುತ್ತಾರೆ. ಅಗತ್ಯ ಇಲ್ಲದ ಅಪಪ್ರಚಾರ ಬೇಡ. ಯಾರೂ ಮನಸ್ಸನ್ನು ವ್ಯಸ್ಥ ಮಾಡಿಕೊಳ್ಳಬೇಡಿ. ಕೆಟ್ಟ ಸಂದೇಶ ಬರಲ್ಲ, ಒಳ್ಳೆ ಸಂದೇಶ ಬರುತ್ತದೆಯೆಂದು ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.

    ಆಸ್ಪತ್ರೆಗೆ ಆಗಮಿಸಿದ ಸಚಿವ ಈಶ್ವರಪ್ಪ:
    ಸಚಿವ ಕೆ.ಎಸ್.ಈಶ್ವರಪ್ಪ ಎರಡನೇ ಬಾರಿ ಪೇಜಾವರ ಶ್ರೀಗಳ ಆರೋಗ್ಯ ವಿಚಾರಿಸಿದರು. ಪೇಜಾವರ ಶ್ರೀಗಳ ಆರೋಗ್ಯ ಸಾಕಷ್ಟು ಸುಧಾರಣೆ ಆಗಿದೆ. ನಿನ್ನೆಗಿಂತ ಇಂದು ಹೆಚ್ಚಿನ ಸುಧಾರಣೆಯಾಗಿದೆ. ವೈದ್ಯರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಖುದ್ದು ನಾನೇ ನೋಡಿದಾಗಲೂ ನನಗೂ ಹಾಗೇ ಅನಿಸಿದೆ. ಅಯೋಧ್ಯೆ ರಾಮಮಂದಿರ ಆಗುವವರೆಗೆ ನಾನಿರಬೇಕು ಎಂಬ ಆಸೆ ಅವರಿಗಿತ್ತು. ಅವರ ಆಸೆಯನ್ನು ಉಡುಪಿಯ ಶ್ರೀ ಕೃಷ್ಣ ನೆರವೇರಿಸುತ್ತಾನೆ ಎಂಬ ವಿಶ್ವಾಸವಿದೆ ಎಂದು ಈಶ್ವರಪ್ಪ ಹೇಳಿದರು. ಸೋಷಿಯಲ್ ಮೀಡಿಯಾದಲ್ಲಿ ವದಂತಿಗಳನ್ನು ಸೃಷ್ಠಿ ಮಾಡಲಾಗುತ್ತಿದೆ. ವದಂತಿಗಳಿಗೆ ಯಾರು ಕಿವಿಗೊಡಬೇಡಿ. ಶ್ರೀಗಳ ಆರೋಗ್ಯ ಸಾಕಷ್ಟು ಸುಧಾರಣೆ ಆಗ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಈ ನಡುವೆ ಎರಡು ದಿನಗಳಿಂದ ಪೇಜಾವರ ಶ್ರೀಗಳ ಶಿಷ್ಯೆ ನೀರಾ ರಾಡಿಯಾ ಕೆಎಂಸಿಯಲ್ಲೇ ಇದ್ದಾರೆ. ಕಾರ್ಪೋರೇಟ್ ಜಗತ್ತಿನ ಪ್ರಭಾವಿ ಮಹಿಳೆ ಆಗಿರುವ ನೀರಾ ರಾಡಿಯಾ, ಶುಕ್ರವಾರ ರಾತ್ರಿ ಮತ್ತು ಶನಿವಾರ ಮುಂಜಾನೆಯಿಂದ ಆಸ್ಪತ್ರೆಯಲ್ಲಿದ್ದು, ತಜ್ಞ ವೈದ್ಯರ ಜೊತೆಗೆ ಕೆಎಂಸಿ ಗೆ ಬಂದು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ನೀರಾ ರಾಡಿಯಾ ಮಾತನಾಡಿ, ಶ್ರೀಗಳ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಇದೆ. ನಿನ್ನೆಗಿಂತ ಇವತ್ತು ಮತ್ತಷ್ಟು ಚೇತರಿಸಿಕೊಂಡಿದ್ದಾರೆ. ಮಣಿಪಾಲ ಆಸ್ಪತ್ರೆಯಲ್ಲಿ ಅವರಿಗೆ ಉತ್ತಮ ಚಿಕಿತ್ಸೆ ದೊರಕುತ್ತಿದೆ ಎಂದು ಹೇಳಿದರು.