Tag: Dr Umesh Jadhav

  • Kalaburagi Lok Sabha 2024: ಖರ್ಗೆ ತವರಲ್ಲಿ ಮತ್ತೆ ಮೋಡಿ ಮಾಡುತ್ತಾ ಬಿಜೆಪಿ?

    Kalaburagi Lok Sabha 2024: ಖರ್ಗೆ ತವರಲ್ಲಿ ಮತ್ತೆ ಮೋಡಿ ಮಾಡುತ್ತಾ ಬಿಜೆಪಿ?

    – ಲಕ್ಕಿ ಕ್ಷೇತ್ರ ಕಲಬುರಗಿಯಿಂದಲೇ ‘ಲೋಕ’ಸಮರಕ್ಕೆ ಕಹಳೆ ಊದಿದ ಮೋದಿ
    – ಉಮೇಶ್‌ ಜಾಧವ್‌ಗೆ ‘ಕೈ’ ಎದುರಾಳಿ ಯಾರು?

    ಕಲಬುರಗಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ತವರು ಕಲಬುರಗಿ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲೇ ಕ್ಷೇತ್ರ ಹೆಚ್ಚು ಕುತೂಹಲ ಮೂಡಿಸುತ್ತದೆ. ಸ್ವಾತಂತ್ರ್ಯ ನಂತರದಲ್ಲಿ ನಾಲ್ಕು ದಶಕಗಳ ಕಾಲ ಕಲಬುರಗಿ ಕಾಂಗ್ರೆಸ್ ತೆಕ್ಕೆಯಲ್ಲಿತ್ತು. 1996 ಜೆಡಿಎಸ್ ಅಭ್ಯರ್ಥಿ ಕಮರ್ ಉಲ್ ಇಸ್ಲಾಂ ಗೆಲುವು ದಾಖಲಿಸಿ ‘ಕೈ’ ತೆಕ್ಕೆಯಿಂದ ಕ್ಷೇತ್ರವನ್ನು ಮೊದಲ ಬಾರಿಗೆ ಬಿಡಿಸಿದರು. ಅದಾದ ಬಳಿಕ ಒಮ್ಮೆ ಬಿಜೆಪಿ ಕೂಡ ಕ್ಷೇತ್ರದಲ್ಲಿ ಜಯ ಸಾಧಿಸಿತು. ಮತ್ತೆ ಎರಡು ದಶಕಗಳ ಕಾಲ ಕ್ಷೇತ್ರ ಕಾಂಗ್ರೆಸ್ ತೆಕ್ಕೆಗೆ ಸೇರಿತು. ಈಗ ಬಿಜೆಪಿ ಹಿಡಿತಕ್ಕೆ ಸಿಕ್ಕಿದೆ.

    1999 ರಿಂದ ಎರಡು ಅವಧಿಗೆ ಕಾಂಗ್ರೆಸ್‌ನ (Congress) ಇಕ್ಬಾಲ್ ಅಹ್ಮದ್ ಸರಡಗಿ (1999, 2004) ಸಂಸದರಾಗಿದ್ದರು. ನಂತರ 2009 ರಲ್ಲಿ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದರು. ಮನಮೋಹನ್ ಸಿಂಗ್ (Manmohan Singh) ಸಂಪುಟದಲ್ಲಿ ಕೇಂದ್ರ ಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದರು. ಖರ್ಗೆ 2009, 2014 ಎರಡು ಬಾರಿ ಗೆದ್ದು ಪಾರ್ಲಿಮೆಂಟ್ ಪ್ರವೇಶಿಸಿದ್ದರು. ಆದರೆ 2019 ರಲ್ಲಿ ಬಿಜೆಪಿಯ ಉಮೇಶ್ ಜಾಧವ್ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡರು. ಈಗ ಮತ್ತೆ ಚುನಾವಣೆಗೆ ಅಖಾಡ ಸಜ್ಜಾಗಿದೆ. ಇದನ್ನೂ ಓದಿ: Uttara Kannada Lok Sabha 2024: ಬಿಜೆಪಿ ನಾಗಾಲೋಟಕ್ಕೆ ಕಾಂಗ್ರೆಸ್‌ ಹಾಕುತ್ತಾ ಬ್ರೇಕ್?‌

    ಕ್ಷೇತ್ರ ಪರಿಚಯ
    ಗುಲ್ಬರ್ಗ ಲೋಕಸಭಾ ಕ್ಷೇತ್ರವನ್ನು 1951 ರಲ್ಲಿ ಅಂದರೆ ಸಾರ್ವತ್ರಿಕ ಚುನಾವಣೆಗೂ ಮೊದಲು ರಚಿಸಲಾಯಿತು. 1952 ರಲ್ಲಿ ಕ್ಷೇತ್ರಕ್ಕೆ ನಡೆದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ವಾಮಿ ರಮಾನಂದ ತೀರ್ಥರು ಸ್ಪರ್ಧಿಸಿ ಜಯಗಳಿಸಿದ್ದರು.

    ವಿಧಾನಸಭಾ ಕ್ಷೇತ್ರಗಳೆಷ್ಟು?
    ಕಲಬುರಗಿ (Kalaburagi Lok Sabha 2024) ಎಸ್‌ಸಿ ಮೀಸಲು ಕ್ಷೇತ್ರದಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿವೆ. ಕಲಬುರಗಿ ಉತ್ತರ, ಕಲಬುರಗಿ ದಕ್ಷಿಣ, ಕಲಬುರಗಿ ಗ್ರಾಮೀಣ, ಸೇಡಂ, ಚಿತ್ತಾಪುರ, ಅಫಜಲಪುರ್, ಜೇವರ್ಗಿ ಹಾಗೂ ಗುರುಮಠಕಲ್ ಕ್ಷೇತ್ರಗಳನ್ನು ಒಳಗೊಂಡಿದೆ.

    ಒಟ್ಟು ಮತದಾರರು ಎಷ್ಟು?
    ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 22,79,426 ಮತದಾರರು ಇದ್ದಾರೆ. ಪುರುಷರು 10,40,615 ಹಾಗೂ ಮಹಿಳೆಯರು 10,38,532 ಮತದಾರರಿದ್ದಾರೆ. ಇದನ್ನೂ ಓದಿ: Haveri-Gadag Lok Sabha 2024: ಬಿಜೆಪಿ v/s ಕಾಂಗ್ರೆಸ್‌ – ಗೆಲುವು ಯಾರಿಗೆ?

    ಕಳೆದ ಚುನಾವಣೆಯಲ್ಲಿ ಏನಾಗಿತ್ತು?
    2019 ರಲ್ಲಿ ನಡೆದ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಸ್ಪರ್ಧಿಸಿದ್ದರು. ಅವರ ಎದುರಿಗೆ ಆಪರೇಶನ್ ಕಮಲ ಮೂಲಕ ಚಿಂಚೋಳಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಲಬುರಗಿ ಲೋಕಸಭೆಯ ಬಿಜೆಪಿ ಅಭ್ಯರ್ಥಿಯಾಗಿ ಡಾ.ಉಮೇಶ್ ಜಾಧವ್ (Umesh Jadhav) ಸ್ಪರ್ಧಿಸಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮೊದಲ ಬಾರಿಗೆ ಸೋಲಿನ ರುಚಿ ತೋರಿಸಿದ್ದರು. ಖರ್ಗೆ 95,457 ಮತಗಳ ಅಂತರದಿಂದ ಸೋತಿದ್ದರು. ಆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿದ್ದರೂ ಜೆಡಿಎಸ್‌ಗೆ ತನ್ನದೆ ಆದ ಅಸ್ವಿತ್ವ ಇಲ್ಲದ ಹಿನ್ನೆಲೆ ಅಷ್ಟು ಪ್ರಮಾಣದಲ್ಲಿ ಕಾಂಗ್ರೆಸ್‌ಗೆ ಲಾಭ ಆಗಲಿಲ್ಲ.

    ಮೀಸಲು ಕ್ಷೇತ್ರ ಕಲಬುರಗಿ
    ಸಂಸದೀಯ ಕ್ಷೇತ್ರಗಳ ವಿಂಗಡಣೆಯ ನಂತರ ಕಲಬುರಗಿ ಲೋಕಸಭಾ ಕ್ಷೇತ್ರ 2008ರಲ್ಲಿ ಎಸ್‌ಸಿ ಮೀಸಲು ಕ್ಷೇತ್ರವಾಗಿ ಮಾರ್ಪಟ್ಟಿತು. ನಂತರ 2009ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆ ಸಂಸದರಾಗಿ ಆಯ್ಕೆಯಾಗಿದ್ದರು. ನಂತರ 2013ರಲ್ಲಿ ಮೋದಿ ಅಬ್ಬರದ ಮಧ್ಯೆಯೂ ಸಹ ಖರ್ಗೆ ಅವರು ಸುಮಾರು 63 ಸಾವಿರ ಮತಗಳ ಅಂತರದಿಂದ ಬಿಜೆಪಿಯ ರೇವುನಾಯಕ ಬೆಳಮಗಿಗೆ ಸೋಲಿನ ರುಚಿ ತೋರಿಸಿದ್ದರು. ಆದರೆ 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಳ ಜಗಳ ಹಾಗೂ ಸಚಿವ ಸ್ಥಾನದಿಂದ ವಂಚಿತರಾಗಿದ್ದ ಮಾಲೀಕಯ್ಯ ಗುತ್ತೇದಾರ್, ಬಾಬುರಾವ್ ಚಿಂಚನಸೂರ್,ಮಾಜಿ ಶಾಸಕರಾದ ವಿಶ್ವನಾಥ ಪಾಟೀಲ್ ಹೆಬ್ಬಾಳ, ಮಾಲಕರೆಡ್ಡಿ ಸೇರಿದಂತೆ ಹಲವು ನಾಯಕರು ಖರ್ಗೆ ವಿರುದ್ಧ ತೊಡೆ ತಟ್ಟಿ ಚಿಂಚೋಳಿಯ ಡಾ.ಉಮೇಶ್ ಜಾಧವ್‌ಗೆ ಶಾಸಕ ಸ್ಥಾನದಿಂದ ರಾಜೀನಾಮೆ ಕೊಡಿಸಿ ಖರ್ಗೆ ವಿರುದ್ಧ ಕಣಕ್ಕೆ ಇಳಿಸಿದ್ದರು. ಪರಿಣಾಮವಾಗಿ ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹಿನಾಯ ಸೋಲಾಯಿತು.

    ಉಮೇಶ್‌ ಜಾಧವ್‌ ಬಿಜೆಪಿ ಟಿಕೆಟ್‌
    ಸೋಲಿಲ್ಲದ ಸರದಾರನನ್ನು 2019 ರ ಚುನಾವಣೆಯಲ್ಲಿ ಮಣಿಸಿದ್ದ ಬಿಜೆಪಿ ಸಂಸದ ಉಮೇಶ್‌ ಜಾಧವ್‌ಗೆ ಬಿಜೆಪಿ ಮತ್ತೆ ಟಿಕೆಟ್‌ ಕೊಟ್ಟಿದೆ. 2019 ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಿ ಚುನಾವಣೆ ಎದುರಿಸಿದ್ದವು. ಆದರೆ ಈ ಸಲ ಉಲ್ಟಾ ಆಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯಾಗಿವೆ. ಬಿಜೆಪಿಯಿಂದ ಹಾಲಿ ಸಂಸದ ಡಾ.ಉಮೇಶ್ ಜಾಧವ್ ಈಗಾಗಲೇ ಕಾಂಗ್ರೆಸ್ ವಿರುದ್ಧ ತೊಡೆ ತಟ್ಟಿ ನಿಂತಿದ್ದಾರೆ. ಇದನ್ನೂ ಓದಿ: Dharwad Lok Sabha 2024: ಬಿಜೆಪಿ ನಾಗಾಲೋಟಕ್ಕೆ ಕಡಿವಾಣ ಹಾಕುತ್ತಾ ‘ಕೈ’?

    ‘ಕೈ’ ಟಿಕೆಟ್‌ ಕಗ್ಗಂಟು
    ಕಾಂಗ್ರೆಸ್‌ನಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಭ್ಯರ್ಥಿ ಆದರೆ ಮಾತ್ರ ಟಫ್ ಫೈಟ್ ಆಗುವುದರಲ್ಲಿ ಎರಡು ಮಾತಿಲ್ಲ. ಆದರೆ ಎಐಸಿಸಿ ಅಧ್ಯಕ್ಷರಾದ ಹಿನ್ನೆಲೆ ದೇಶ ಸುತ್ತಿ ಪಕ್ಷವನ್ನು ಅಧಿಕಾರಕ್ಕೆ ತರಲು ಖರ್ಗೆ ಪಣ ತೊಟ್ಟಿದ್ದು, ಕಲಬುರಗಿ ಲೋಕಸಭೆಯಿಂದ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ. ಒಂದು ವೇಳೆ ಅವರು ಸ್ಪರ್ಧೆಗೆ ನಿರಾಕರಿಸಿದರೆ ಅವರ ಅಳಿಯ ರಾಧಾಕೃಷ್ಣ, ಪುತ್ರ ಪ್ರಿಯಾಂಕ್ ಖರ್ಗೆ, ಮಾಜಿ ಸಚಿವ ರೇವುನಾಯಕ, ಬೆಳಮಗಿ ಬಂಜಾರಾ ಮುಖಂಡ ಸುಭಾಶ್ ರಾಠೋಡ್ ಪೈಕಿ ಯಾರಾದರು ಒಬ್ಬರಿಗೆ ಟಿಕೆಟ್‌ ಪಕ್ಕ ಎನ್ನಲಾಗುತ್ತಿದೆ. ಖರ್ಗೆ ಅಳಿಯ ರಾಧಾಕೃಷ್ಣ ಅವರಿಗೆ ಟಿಕೆಟ್‌ ಸಿಗಬಹುದು ಎಂಬ ಮಾತು ಕೇಳಿಬರುತ್ತಿದೆ.

    ಮೈತ್ರಿಯಿಂದ ಬಿಜೆಪಿಗೆ ಲಾಭ?
    ಕಾಂಗ್ರೆಸ್ ಭದ್ರಕೋಟೆಯಾಗಿರುವ ಕಲಬುರಗಿ ಲೋಕಸಭೆಯಲ್ಲಿ ಜೆಡಿಎಸ್ ಹೇಳಿಕೊಳ್ಳುವಷ್ಟು ತಳಮಟ್ಟದಲ್ಲಿ ಪಕ್ಷ ಸಂಘಟನೆ ಇಲ್ಲ. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೇವರ್ಗಿಯಿಂದ ದೊಡಪ್ಪಗೌಡ ಪಾಟೀಲ್ ಹಾಗೂ ಸೇಡಂ ಕ್ಷೇತ್ರದ ಪರಾಜಿತ ಅಭ್ಯರ್ಥಿ ಬಾಲರಾಜ್ ಗುತ್ತೇದಾರ್ ತಮ್ಮದೆ ಆದ ಛಾಪು ಹೊಂದಿದ್ದಾರೆ. ಹೀಗಾಗಿ ಇದು ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಿದೆ. ಇದನ್ನೂ ಓದಿ: Hassan Lok Sabha 2024: ದೊಡ್ಡಗೌಡ್ರ ಭದ್ರಕೋಟೆ ಭೇದಿಸಲು ಕಾಂಗ್ರೆಸ್‌ ಕಸರತ್ತು!

    ಯಾವ ಅವಧಿಯಲ್ಲಿ ಯಾವ ಪಕ್ಷ ಗೆದ್ದಿತ್ತು?
    2009: ಮಲ್ಲಿಕಾರ್ಜುನ ಖರ್ಗೆ – ಕಾಂಗ್ರೆಸ್ (13,404 ಮತ, ಗೆಲುವಿನ ಅಂತರ)
    2014: ಮಲ್ಲಿಕಾರ್ಜುನ ಖರ್ಗೆ – ಕಾಂಗ್ರೆಸ್ (74,733 ಮತ, ಗೆಲುವಿನ ಅಂತರ)
    2019: ಡಾ.ಉಮೇಶ್ ಜಾಧವ್ – ಬಿಜೆಪಿ (95,452 ಗೆಲುವಿನ ಅಂತರ)

    ಜಾತಿವಾರು ಲೆಕ್ಕಾಚಾರ
    ಲಿಂಗಾಯತ – 5,30,000
    ಎಸ್‌ಸಿ/ಎಸ್‌ಟಿ – 3,80,000
    ಮುಸ್ಲಿಂ – 3,10,000
    ಕೊಲಿ – 2,70,000
    ಲಂಬಾಣಿ – 2,20,000
    ಕುರುಬ – 1,90,000
    ಬ್ರಾಹ್ಮಣ – 90,000
    ಗಾಣಿಗ – 80,000
    ರೆಡ್ಡಿ – 75,000
    ಇತರೆ – 1,23,000

  • ಸಿಪಿಐ ಇಲ್ಲಾಳ್‍ ಮೇಲೆ ಹಲ್ಲೆ ಪ್ರಕರಣ- ಆಸ್ಪತ್ರೆಗೆ ಸಂಸದ ಜಾಧವ್ ಭೇಟಿ

    ಸಿಪಿಐ ಇಲ್ಲಾಳ್‍ ಮೇಲೆ ಹಲ್ಲೆ ಪ್ರಕರಣ- ಆಸ್ಪತ್ರೆಗೆ ಸಂಸದ ಜಾಧವ್ ಭೇಟಿ

    ಕಲಬುರಗಿ: ಮಹಾರಾಷ್ಟ್ರದಲ್ಲಿ ಗಾಂಜಾ (Ganja) ಆರೋಪಿಗಳನ್ನು ಬಂಧಿಸಲು ತೆರಳಿದಾಗ ಮಾರಣಾಂತಿಕವಾಗಿ ಹಲ್ಲೆಗೊಳಗಾದ ಸಿಪಿಐ (CPI) ಶ್ರೀಮಂತ್ ಇಲ್ಲಾಳ್ ಅವರನ್ನು ಇಂದು ಸಂಸದ ಉಮೇಶ್ ಜಾಧವ್ (Dr Umesh Jadhav) ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.

    ಸಿಪಿಐ ಶ್ರೀಮಂತ್ ಇಲ್ಲಾಳ್ ಅವರು ನಗರದ ಯುನೈಟೆಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಗತ್ಯ ಬಿದ್ದರೆ ಹೆಚ್ಚಿನ ಚಿಕಿತ್ಸೆಗಾಗಿ ಏರ್ ಲಿಫ್ಟ್ ಮಾಡಲಾಗುವುದು. ಸಿಪಿಐಗೆ ಯಾವುದೇ ಕುಂದುಕೊರತೆಯಾಗದಂತೆ ಸಿಎಂ ಬಸವರಾಜ್‌ ಬೊಮ್ಮಾಯಿ (Basavaraj Bommai) ಸೂಚನೆ ನೀಡಿದ್ದಾರೆ ಎಂದು ಡಾ ಉಮೇಶ್ ಜಾಧವ್ ಹೇಳಿದ್ದಾರೆ. ಇದೇ ವೇಳೆ ಕುಟುಂಬಸ್ಥರನ್ನ ಭೇಟಿಯಾಗಿ ಸಂಸದರು ಸಾಂತ್ವನ ಹೇಳಿದರು.

    ಪ್ರಕರಣ ಸಂಬಂಧ 40 ಮಂದಿ ಮೇಲೆ ಎಫ್‍ಐಆರ್ ದಾಖಲು ಮಾಡಲಾಗಿದೆ. ಇದನ್ನೂ ಓದಿ: ಗಾಂಜಾ ದಂಧೆಕೋರರಿಂದಲೇ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ – ICUನಲ್ಲಿ ಸಿಪಿಐ

    ಏನಿದು ಗಾಂಜಾ ಕೇಸ್?
    ಗಾಂಜಾ ದಂಧೆ ಕೇಸ್‌ನಲ್ಲಿ ಕಾರ್ಯಾಚರಣೆಗೆ ಹೋಗಿದ್ದ ಇಲ್ಲಾಳ ನೇತೃತ್ವದ ಪೊಲೀಸ್ ತಂಡ, ಕಳೆದ 2-3 ದಿನಗಳ ಹಿಂದೆ ಆರೋಪಿ ಸಂತೋಷ ಸೇರಿದಂತೆ ಅನೇಕ ಗಾಂಜಾ ದಂಧೆಕೋರರನ್ನೂ ಬಂಧಿಸಲಾಗಿತ್ತು.  ಶುಕ್ರವಾರ ಮಧ್ಯಾಹ್ನವು ಸಹ ಗಾಂಜಾ ದಂಧೆ ಬೇಧಿಸಲು ಸಿಪಿಐ ಶ್ರೀಮಂತ ಇಲ್ಲಾಳ್ ನೇತೃತ್ವದಲ್ಲಿ 10 ಜನರ ಪೊಲೀಸ್ ತಂಡ ಮಹಾರಾಷ್ಟ್ರಕ್ಕೆ (Maharashtra) ಹೋಗಿತ್ತು.

    ಗಾಂಜಾ ಬೆಳೆಯುವ ಹೊಲಗಳಿಗೆ (Ganja Plant) ಹೋಗಿದ್ದ ಪೊಲೀಸರ ಮೇಲೆ ರಾತ್ರಿ 9:30ರ ವೇಳೆಗೆ ಸುಮಾರು 30-40 ಮಂದಿ ಗಾಂಜಾ ದಂಧೆಕೋರರು ಕಟ್ಟಿಗೆಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ದಾಳಿ ಮಾಡುತ್ತಿದ್ದಂತೆ ಸಿಪಿಐ ಶ್ರೀಮಂತ ಇಲ್ಲಾಳ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ಗಾಂಜಾ ದಂಧೆಕೋರರು ಪೊಲೀಸರನ್ನೆ ಅಟ್ಟಾಡಿಸಿದ್ದಾರೆ. ಕೊನೆಗೆ ಪ್ರಾಣ ಉಳಿಸಿಕೊಳ್ಳಲು ಪೊಲೀಸರು ಚೆಲ್ಲಾಪಿಲ್ಲಿಯಾಗಿ ಓಡಿಹೋಗಿದ್ದಾರೆ. ಗಂಭೀರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಿಪಿಐ ಇಲ್ಲಾಳ ಅವರನ್ನ ಮಧ್ಯರಾತ್ರಿ 2:30ರ ವೇಳೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಸಂಸದ ಡಾ.ಉಮೇಶ್ ಜಾಧವ್ ಆಸ್ಪತ್ರೆಗೆ ದಾಖಲು

    ಸಂಸದ ಡಾ.ಉಮೇಶ್ ಜಾಧವ್ ಆಸ್ಪತ್ರೆಗೆ ದಾಖಲು

    ಬೆಂಗಳೂರು: ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಇಂದು ಬೆಳಗ್ಗೆ ಸಣ್ಣದಾಗಿ ಎದೆ ನೋವು ಕಾಣಿಸಿಕೊಂಡ ಪರಿಣಾಮ ಅವರು ನಗರದ ಜಯದೇವ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ಸಂಸದರು, ಇಂದು ಬೆಳಗ್ಗೆ ಸಣ್ಣದಾಗಿ ಎದೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆ ದಾಖಲಾಗಿದ್ದೇನೆ. ಈ ಬಗ್ಗೆ ಯಾರೂ ಆತಂಕ ಪಡುವ ಅಗತ್ಯ ಇಲ್ಲ ಎಂದು ಮಾಹಿತಿ ನೀಡಿದ್ದಾರೆ.

    ಕಳೆದ ಆಗಸ್ಟ್ ತಿಂಗಳಲ್ಲಿ ಉಮೇಶ್ ಜಾಧವ್ ಹಾಗೂ ಅವರ ಪುತ್ರ, ಚಿಂಚೋಳಿ ಶಾಸಕ ಡಾ. ಅವಿನಾಶ್ ಜಾಧವ್ ಅವರಿಗೆ ಕೊರೊನಾ ದೃಢಪಟ್ಟಿತ್ತು. ಕೂಡಲೇ ತಂದೆ- ಮಗ ಖಾಸಗಿ ಆಸ್ಪತ್ರೆಯತ್ತ ಮುಖ ಮಾಡದೆ ಬೆಂಗಳೂರಿನ ಸರ್ಕಾರಿ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.

    ತಮಗೆ ಕೋವಿಡ್ 19 ದೃಢಪಟ್ಟ ಕೂಡಲೇ ಸಂಪರ್ಕಕ್ಕೆ ಬಂದ ಎಲ್ಲರೂ ಪರೀಕ್ಷೆ ಮಾಡಿಸಿಕೊಳ್ಳುವಂತೆ ಹೇಳಿದ್ದಲ್ಲದೇ, ತಮ್ಮ ಜೊತೆ ಇದ್ದ 40ಕ್ಕೂ ಹೆಚ್ಚು ಜನರ ತಪಾಸಣೆ ಮಾಡಿಸಿದ್ದರು.

  • ಆಸ್ಪತ್ರೆಗೆ ಬರೀ ಭೇಟಿ ಕೊಟ್ರೆ ಪ್ರಯೋಜನವಿಲ್ಲ, ಕ್ರಮ ತಗೊಳ್ಬೇಕು: ದತ್ತಾತ್ರೇಯ ಪಾಟೀಲ್ ಕಿಡಿ

    ಆಸ್ಪತ್ರೆಗೆ ಬರೀ ಭೇಟಿ ಕೊಟ್ರೆ ಪ್ರಯೋಜನವಿಲ್ಲ, ಕ್ರಮ ತಗೊಳ್ಬೇಕು: ದತ್ತಾತ್ರೇಯ ಪಾಟೀಲ್ ಕಿಡಿ

    ಕಲಬುರಗಿ: ಜಿಮ್ಸ್ ಆಸ್ಪತ್ರೆ ಅವ್ಯವಸ್ಥೆ ಕಂಡು ಸಿಬ್ಬಂದಿ ಮತ್ತು ಪಾಲಿಕೆ ಅಧಿಕಾರಿಗಳನ್ನು ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ತರಾಟೆ ತೆಗೆದುಕೊಂಡಿದ್ದಾರೆ. ಜೊತೆಗೆ ಆಸ್ಪತ್ರೆಗೆ ಬರೀ ಭೇಟಿ ಕೊಟ್ಟರೆ ಪ್ರಯೋಜನವಿಲ್ಲ, ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಂಸದ ಡಾ.ಉಮೇಶ್ ಜಾಧವ್ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.

    ಸ್ವಚ್ಛತಾ ಅಭಿಯಾನ ಕಾಮಗಾರಿಗೆ ತೆರಳಿದಾಗ ಅಲ್ಲಿನ ಅವ್ಯವಸ್ಥೆ ಕಂಡು ಸಂಸದ ಡಾ.ಉಮೇಶ್ ಜಾಧವ್ ಮತ್ತು ಶಾಸಕ ದತ್ತಾತ್ರೇಯ ಪಾಟೀಲ್ ಕೆಂಡಾಮಂಡಲರಾದರು. ಈ ವೇಳೆ ಶಾಸಕರು, ಜಾಧವ್ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟು ಸಂಸದರ ಎದುರೇ ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡರು.

    ನೀವು ಬರೀ ವಿಸಿಟ್ ಮಾಡಿದ್ರೆ ಪ್ರಯೋಜನವಿಲ್ಲ. ನಿರ್ಲಕ್ಷ್ಯ ತೋರಿದ ಒಂದಿಬ್ಬರು ಅಧಿಕಾರಿ, ಸಿಬ್ಬಂದಿ ಸಂಸ್ಪೆಂಡ್ ಮಾಡಿದರೆ ಮಾತ್ರ ಎಲ್ಲವೂ ಸರಿ ಹೋಗುತ್ತೆ. ಇಲ್ಲ ಅಂದರೆ ನೀವು ಬರೀ ಭೇಟಿ ನೀಡುತ್ತೀರಿ ಎಂದು ಅಧಿಕಾರಿಗಳು ಸಮ್ಮನಾಗುತ್ತಾರೆ ಎಂದು ಸಂಸದರ ಎದುರೇ ಹರಿಹಾಯ್ದಿದ್ದಾರೆ. ಇದನ್ನೂ ಓದಿ:ಕಾರಿಡಾರ್‌ನಲ್ಲೇ ರೋಗಿಗಳಿಗೆ ಚಿಕಿತ್ಸೆ- ಗದಗ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆ

    ಇದೇ ವೇಳೆ ದತ್ತಾತ್ರೇಯ ಪಾಟೀಲ್‍ಗೆ ದನಿಗೂಡಿಸಿದ ಜಾಧವ್ ಸಹ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು. ಸ್ಥಳಕ್ಕಾಗಮಿಸಿದ ಪಾಲಿಕೆ ಎಂಜಿನಿಯರನ್ನೂ ಸಖತ್ ತರಾಟೆಗೆ ತೆಗೆದುಕೊಂಡರು. ನಾವಿಲ್ಲಿ ಕೆಲಸ ಮಾಡಲು ಬಂದ್ರೆ ಮುಖಕ್ಕೆ ಪೌಡರ್ ಹಚ್ಚಿಕೊಳ್ಳಲು ಹೋಗಿದ್ರಾ ಎಂದು ಸ್ಥಳಕ್ಕೆ ತಡವಾಗಿ ಬಂದ ಅಧಿಕಾರಿಗೆ ಮಂಗಳಾರತಿ ಮಾಡಿದ್ದಾರೆ.

  • ಈ ಚುನಾವಣೆ ನನ್ನ ಜೀವನದ ಅತಿ ಮುಖ್ಯ ಘಟ್ಟ – ಸುಭಾಷ್ ರಾಥೋಡ್

    ಈ ಚುನಾವಣೆ ನನ್ನ ಜೀವನದ ಅತಿ ಮುಖ್ಯ ಘಟ್ಟ – ಸುಭಾಷ್ ರಾಥೋಡ್

    ಕಲಬುರಗಿ: ಈ ಚುನಾವಣೆ ನನ್ನ ಜೀವನದ ಅತಿ ಮುಖ್ಯ ಘಟ್ಟ ಎಂದು ಚಿಂಚೋಳಿ ಉಪಚುನಾವಣೆಯ ಮೈತ್ರಿ ಅಭ್ಯರ್ಥಿ ಸುಭಾಷ್ ರಾಥೋಡ್ ಅವರು ಹೇಳಿದ್ದಾರೆ.

    ಚಿಂಚೋಳಿಯ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ಮೈತ್ರಿ ಸಮಾವೇಶದಲ್ಲಿ ಮಾತನಾಡಿದ ಅವರು, ಉಮೇಶ್ ಜಾಧವ್ ಅವರಿಗೆ ಗರ್ವ ಹೆಚ್ಚಾಗಿದೆ ಎಂದು ಕಿಡಿಕಾರಿದರು.

    ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್‍ಗೆ ಕ್ಷೇತ್ರದ ಯಾವ ಪ್ರದೇಶದ ಬಗ್ಗೆಯೂ ಗೊತ್ತಿಲ್ಲ. ಕೇವಲ ಅವನಿಗಷ್ಟೇ ಅಲ್ಲ ಅವರಪ್ಪ ಉಮೇಶ್ ಜಾಧವ್‍ಗೂ ಕ್ಷೇತ್ರದ ಬಗ್ಗೆ ಅರಿವಿಲ್ಲ. ಕೊಂಚಾವರಂನಲ್ಲಿ ಇಸ್ಪಿಟ್ ಆಡಿಸಿದ್ದು ಬಿಟ್ಟರೇ ಅವರು ಯಾವ ಅಭಿವೃದ್ಧಿಯನ್ನು ಮಾಡಿಲ್ಲ. ಉಮೇಶ್ ಜಾಧವ್‍ಗೆ ಗರ್ವ ಎಷ್ಟು ಹೆಚ್ಚಾಗಿದೆ ಅಂದರೆ ಮಲ್ಲಿಕಾರ್ಜುನ ಖರ್ಗೆ ವಿರುದ್ಧವೇ ಸ್ಪರ್ಧಿಸುವ ಭಸ್ಮಾಸುರನಾಗಿದ್ದಾನೆ. ಈ ಭಸ್ಮಾಸುರನಿಗೂ ಒಂದು ದಿನ ಅಂತ್ಯವಿದೆ  ಎಂದು ಏಕವಚನದಲ್ಲಿಯೇ ತರಾಟೆಗೆ ತೆಗೆದುಕೊಂಡರು.

    ಈ ಚುನಾವಣೆಯಲ್ಲಿ ಸುಭಾಷ್ ರಾಥೋಡ್ ಮತ್ತು ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್ ಮಧ್ಯೆ ನಡೆಯುತ್ತಿದೆ. ಆದರೆ ಬಿಜೆಪಿಯವರು ಜಾಧವ್ ವರ್ಸಸ್ ಖರ್ಗೆ ಚುನಾವಣೆ ಎಂದು ಹೇಳುತ್ತಿದ್ದಾರೆ. ಚಿಂಚೋಳಿಯ ಹಲವು ಹೋರಾಟಗಳಲ್ಲಿ ಭಾಗವಹಿಸಿ ಕ್ಷೇತ್ರದ ಬಗ್ಗೆ ತಿಳಿದುಕೊಂಡಿದ್ದೇನೆ. 2008ರಲ್ಲಿ ಮೀಸಲು ಕ್ಷೇತ್ರವಾದ ಬಳಿಕವೂ ಸ್ಪರ್ಧೆಗೆ ಇಚ್ಚಿಸದೇ ಹಲವಾರು ಜನಪರ ಕೆಲಸಗಳನ್ನು ಮಾಡಿದ್ದೇನೆ. ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಅವಕಾಶ ಸಿಕ್ಕಿದೆ ಎಂದು ಸಂತೋಷ ವ್ಯಕ್ತಪಡಿಸಿದರು.

  • ಕಲಬುರಗಿಯಲ್ಲೂ ಆರಂಭವಾಯ್ತು ಜಾತಿ ಅಸ್ತ್ರ!

    ಕಲಬುರಗಿಯಲ್ಲೂ ಆರಂಭವಾಯ್ತು ಜಾತಿ ಅಸ್ತ್ರ!

    ಕಲಬುರಗಿ: ಮಂಡ್ಯದಲ್ಲಿ ಗೌಡ್ತಿ ವರ್ಸಸ್ ನಾಯ್ಡು ಜಾತಿ ರಾಜಕೀಯದ ಕೆಸರೆರಚಾಟ ನಡೆಯುತ್ತಿದ್ದರೆ, ಇತ್ತ ಕಲಬುರಗಿಯಲ್ಲಿ ಕೂಡ ಜಾಧವ್ ಜಾತಿ ಯಾವುದು ಅನ್ನೋ ಚರ್ಚೆ ನಡೆದಿದೆ.

    ನಾಮಪತ್ರ ಪರಿಶೀಲನೆ ವೇಳೆ ಕಾಂಗ್ರೆಸ್ ಅಭ್ಯರ್ಥಿ ಕಡೆಯವರು ಜಾಧವ್ ನಾಮಪತ್ರದ ಕಾಲಂ ನಂಬರ್ 7 ತುಂಬಿಲ್ಲ. ಅಲ್ಲದೆ ಅವರ ಜಾತಿ ಲಂಬಾಣಿನಾ ಅಥವಾ ಬಂಜಾರಾನಾ ಎಂದು ಕ್ಯಾತೆ ತೆಗೆದಿದ್ದಾರೆ.

    ಇದಕ್ಕೆ ಜಾಧವ್ ಕೂಡ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ನವರು ಜಾತಿ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅಷ್ಟೇ ಅಲ್ಲ ನನ್ನನ್ನ ಸೋಲಿಸೋಕೆ ಏನೆಲ್ಲ ಕುತಂತ್ರ ಬೇಕೋ ಅದನ್ನೆಲ್ಲ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಅಲ್ಲದೆ ಜಾತಿ ಎಳೆಯೋ ಮೂಲಕ ಕಾಂಗ್ರೆಸ್ ನ ಮಲ್ಲಿಕಾರ್ಜುನ ಖರ್ಗೆ ಸಿಲ್ಲಿ ಪಾಲಿಟಿಕ್ಸ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇತ್ತ ಖರ್ಗೆ ಕೂಡ ಜಾಧವ್‍ಗೆ ಟಾಂಗ್ ಕೊಟ್ಟಿದ್ದಾರೆ.

    ಒಂದೇ ಹೆಸರಿನ ಮೂವರು ಅಭ್ಯರ್ಥಿಗಳು:
    ಮತದಾರರಲ್ಲಿ ಗೊಂದಲ ಮೂಡಿಸಲು ಮಂಡ್ಯದಲ್ಲಿ ಮೂರು ಜನ ಸುಮಲತಾ ಎಂಬವರು ನಾಮಪತ್ರ ಸಲ್ಲಿಸಿದ್ದರು. ಅದೇ ರೀತಿ ಇತ್ತ ಕಲಬುರಗಿ ಜಿಲ್ಲೆಯಲ್ಲೂ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಮತ ವಿಭಜಿಸಲು, ಜಾಧವ್ ಹೆಸರಿನ ಮೂವರು ಅಭ್ಯರ್ಥಿಗಳು ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ಕಲಬುರಗಿ ಲೋಕಸಭಾ ಕಣದಲ್ಲಿ ಶಂಕರ್ ಜಾಧವ್, ವಿಠಲ್ ಜಾಧವ್ ಹಾಗೂ ವಿಜಯ್ ಜಾಧವ್ ಎಂಬವರು ನಾಮಪತ್ರ ಸಲ್ಲಿಸಿದ್ದಾರೆ. ಈ ಮೂಲಕ ಡಾ.ಉಮೇಶ್ ಜಾಧವ್ ಮತಗಳು ಒಡೆಯಲು ವಿಪಕ್ಷಗಳು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ ಎಂದು ಹೇಳಲಾಗುತ್ತಿದೆ.

  • ರೇವಣ್ಣ ಆಯ್ತು, ಇದೀಗ ಸಂಖ್ಯಾಶಾಸ್ತ್ರದ ಮೊರೆ ಹೋದ ಉಮೇಶ್ ಜಾಧವ್!

    ರೇವಣ್ಣ ಆಯ್ತು, ಇದೀಗ ಸಂಖ್ಯಾಶಾಸ್ತ್ರದ ಮೊರೆ ಹೋದ ಉಮೇಶ್ ಜಾಧವ್!

    ಕಲಬುರಗಿ: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್ ಸಂಖ್ಯಾ ಶಾಸ್ತ್ರದ ಮೊರೆ ಹೋಗಿದ್ದಾರೆ. ಹೀಗಾಗಿ ಇಂದು ನಿಗದಿಯಾಗಿದ್ದ ನಾಮಪತ್ರ ಸಲ್ಲಿಕೆ ನಾಳೆಗೆ ಮುಂದೂಡಿಕೆಯಾಗಿದೆ.

    ಹೌದು. ಇತ್ತೀಚೆಗೆ ಕಲಬುರಗಿಯ ಬಿಜೆಪಿ ಮಹಿಳಾ ಮುಖಂಡೆ ಮಹೇಶ್ವರಿ ವಾಲಿ ಅವರ ಮನೆಗೆ ಶ್ರೀ ಕೇದಾರ ಜಗದ್ಗುರುಗಳು ಭೇಟಿ ನೀಡಿದ್ದರು. ಜಾಧವ್ ಶ್ರೀಗಳ ಆಶೀರ್ವಾದ ಪಡೆಯಲು ಅವರ ಮನೆಗೆ ತೆರಳಿದ್ದಾಗ ಏ.2 ನಿಮಗೆ ಒಳ್ಳೆಯ ದಿನವಲ್ಲ. ಏ.3ರಂದು ನಿಮಗೆ ಒಳ್ಳೆಯ ದಿನವಾಗಿದೆ. ಹೀಗಾಗಿ ಅಂದೇ ನಾಮಪತ್ರ ಸಲ್ಲಿಸಿ ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.

    ಏ.3 ರಂದು ನಾಮಪತ್ರ, ಏ. 23ರಂದು ಮತದಾನ ಹಾಗೂ ಮೇ23 ರಂದು ಮತ ಏಣಿಕೆಯಿದೆ. ಹೀಗಾಗಿ 3, 23, 23ರ ಅಂಕಿಯ ಜೊತೆ ಹೋಗಿ ಉಜ್ವಲ ಭವಿಷ್ಯವಿದೆ ಎಂದು ಶ್ರೀಗಳು ಆಶೀರ್ವಾದಿಸಿದ್ದಾರೆ. ಹೀಗಾಗಿ ಉಮೇಶ್ ಜಾಧವ್ ಏ.3 ರಂದು ನಾಮಪತ್ರ ಸಲ್ಲಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.

    ಮಾಜಿ ಸಚಿವ ಗಂಭೀರ ಆರೋಪ:
    ಇತ್ತ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಬಾಬುರಾವ್ ಚೌವ್ಹಾಣ್, ಡಾ. ಉಮೇಶ್ ಜಾಧವ್ ಬಳಿ ಯಡಿಯೂರಪ್ಪನವರು ಹಣ ಪಡೆದು ಲೋಕಸಭೆಗೆ ಟಿಕೆಟ್ ಮಾರಾಟ ಮಾಡಿದ್ದಾರೆ. ಎಸ್‍ವೈಗೆ ದುಡ್ಡು ಬೇಕು ಅಷ್ಟೇ. ಅವರಿಗೆ ಪಾರ್ಟಿ ಮುಖ್ಯವಲ್ಲ. ಬಿಎಸ್‍ವೈಗೆ ಹಣ ನೀಡಿ ಟಿಕೆಟ್ ಪಡೆಯಲು ಜಾಧವ್ ಮುಂಬೈನಿಂದ ಕಂತೆ ಕಂತೆ ಹಣ ತಂದಿದ್ದು, ಆ ಹಣವನ್ನ ನೇರವಾಗಿ ಯಡಿಯೂರಪ್ಪ ಅವರಿಗೆ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೂಡ ಕಲಬುರಗಿ ಗ್ರಾಮೀಣ ಕ್ಷೇತ್ರದ ಟಿಕೆಟ್ ಅನ್ನು ಐಪಿಎಲ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಬಸವರಾಜ್ ಮತ್ತಿಮೂಡ್‍ಗೆ ಮಾರಾಟ ಮಾಡಿದ್ದಾರೆ. ನಿಮ್ಮನ್ನು ನಂಬಿಕೊಂಡು ನಿಮ್ಮ ಜೊತೆ ಕೆಜೆಪಿಗೆ ಬಂದೆ, ನಂತರ ಬಿಜೆಪಿಗೂ ಬಂದೆ. ಆದರೆ ನೀವು ನಮ್ಮನ್ನ ನಿರ್ಲಕ್ಷ್ಯ ಮಾಡುತ್ತಾ ಬಂದಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ನಾಳೆ ಕಾಂಗ್ರೆಸ್‍ಗೆ ಸೇರ್ಪಡೆ:
    ನಾನು ಬಿಜೆಪಿಗೆ ಹೋದಮೇಲೆ ಪಕ್ಷಕ್ಕಾಗಿ ಸುಮಾರು 2 ಕೋಟಿ ರೂ. ಹಣ ಖರ್ಚು ಮಾಡಿದ್ದೇನೆ. ಬಿಜೆಪಿಯಲ್ಲಿದ್ದ ರೇವುನಾಯಕ್ ಬೆಳಮಗಿ ಅವರನ್ನ ಸೋಲಿಸಲು ನನ್ನನ್ನು ಚೆನ್ನಾಗಿ ಬಳಸಿಕೊಂಡರು. ಮುಂದೆ ಜಾಧವ್ ಪರಿಸ್ಥಿತಿ ಇದೇ ರೀತಿ ಆಗಲಿದ್ದು, ಹರಕೆಯ ಕುರಿಯಾಗ್ತಾರೆ ಎಂದ ಅವರು, ನಾಳೆ ಮಲ್ಲಿಕಾರ್ಜುನ್ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ ಎಂದು ಇದೇ ವೇಳೆ ಚೌವ್ಹಾಣ್ ತಿಳಿಸಿದ್ರು.

  • ಬಿಜೆಪಿ ಬಾಗಿಲ ಬಳಿ ಕಾಂಗ್ರೆಸ್ ಶಾಸಕ

    ಬಿಜೆಪಿ ಬಾಗಿಲ ಬಳಿ ಕಾಂಗ್ರೆಸ್ ಶಾಸಕ

    -ಉಮೇಶ್ ಜಾಧವ್ ಫ್ಲೆಕ್ಸ್ ಗಳಲ್ಲಿ ಕಮಲ ನಾಯಕರ ಫೋಟೋ ಮಿಂಚಿಂಗ್

    ಕಲಬುರಗಿ: ಕಾಂಗ್ರೆಸ್‍ಗೆ ಕೈ ಕೊಟ್ಟು ಬಿಜೆಪಿ ಸೇರಲು ಡಾ.ಉಮೇಶ್ ಜಾಧವ್‍ಗೆ ಬಂಜಾರಾ ಸಮುದಾಯದ ಮುಖಂಡರು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದ್ದು, ಇತ್ತ ಕಲಬುರಗಿಯಲ್ಲಿ ಜಾಧವ್ ವರ್ಸಸ್ ಖರ್ಗೆ ಬೆಂಬಲಿಗರ ಫ್ಲೆಕ್ಸ್ ವಾರ್ ಮುಂದುವರಿದಿದೆ.

    ಕಲಬುರಗಿ ಜಿಲ್ಲೆಯ ಚಿಂಚೋಳಿ ಕ್ಷೇತ್ರದ ಅತೃಪ್ತ ಕಾಂಗ್ರೆಸ್ ಶಾಸಕ ಡಾ.ಉಮೇಶ್ ಜಾಧವ್ ಫೋಟೋ ಇರುವ ಬ್ಯಾನರ್‍ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಫೋಟೋ ನಾಪತ್ತೆಯಾಗಿದೆ. ಬ್ಯಾನರ್ ಅಷ್ಟೇ ಅಲ್ಲ ಡಾ.ಜಾಧವ್ ಅಧ್ಯಕ್ಷತೆಯ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲೂ ಪ್ರಿಯಾಂಕ್ ಹೆಸರು ಇಲ್ಲವಾಗಿದೆ.

    ಸ್ವಾಗತ ಬ್ಯಾನರ್‍ನಲ್ಲಿ ಡಾ.ಉಮೇಶ್ ಜಾಧವ್ ಜೊತೆ ಬಿಜೆಪಿ ಮುಖಂಡರ ಫೋಟೋಗಳು ರಾರಾಜಿಸುತ್ತಿವೆ. ಬಿಜೆಪಿ ಮುಖಂಡ ಸುಭಾಷ್ ರಾಠೋಡ್ ಸೇರಿದಂತೆ ಹಲವು ನಾಯಕರ ಫೋಟೋಗಳನ್ನು ಹಾಕಲಾಗಿದೆ.

    ಫೆಬ್ರವರಿ 24ರಂದು ಕಲಬುರಗಿ ಜಿಲ್ಲೆಯ ಕಾಳಗಿಯಲ್ಲಿ ಸಂತ ಸೇವಾಲಾಲ ಮಹಾರಾಜರ 280ನೇ ಜಯಂತ್ಯೋತ್ಸವ ಕಾರ್ಯಕ್ರಮ ಇದೆ. ಈ ಕಾರ್ಯಕ್ರಮವನ್ನು ಕಾಳಗಿ ಪಟ್ಟಣದ ಸಂತ ಸೇವಾಲಾಲ ಜಯಂತ್ಯೋತ್ಸವ ಸಮಿತಿಯಿಂದ ಆಯೋಜನೆ ಮಾಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮುನಿಸಿಕೊಂಡಿದ್ದ ಪ್ರತಾಪ್ ಗೌಡ, ಬಸವರಾಜ್ ದದ್ದಲ್‍ಗೆ ಪವರ್ – ಡಾ.ಸುಧಾಕರ್ ಸ್ಥಾನ ಇನ್ನೂ ಸಸ್ಪೆನ್ಸ್

    ಮುನಿಸಿಕೊಂಡಿದ್ದ ಪ್ರತಾಪ್ ಗೌಡ, ಬಸವರಾಜ್ ದದ್ದಲ್‍ಗೆ ಪವರ್ – ಡಾ.ಸುಧಾಕರ್ ಸ್ಥಾನ ಇನ್ನೂ ಸಸ್ಪೆನ್ಸ್

    ಬೆಂಗಳೂರು: ಹೇಗಾದ್ರೂ ಮಾಡಿ ಸರ್ಕಾರವನ್ನು ಉಳಿಸಿಕೊಳ್ಳಬೇಕು ಎಂದು ಪಣ ತೊಟ್ಟಿರುವ ಸಿಎಂ ಕುಮಾರಸ್ವಾಮಿ ಅತೃಪ್ತ ಶಾಸಕ ಡಾ.ಉಮೇಶ್ ಜಾಧವ್‍ಗೆ ಬಿಸಿ ಮುಟ್ಟಿಸಿದ್ದಾರೆ.

    ರಾಜ್ಯ ಉಗ್ರಾಣ ನಿಗಮಕ್ಕೆ ಉಮೇಶ್ ಜಾಧವ್ ನೇಮಕಾತಿಯನ್ನ ರದ್ದು ಮಾಡಿದ್ದಾರೆ. ಉಮೇಶ್ ಜಾಧವ್ ಬದಲಾಗಿ ಉಗ್ರಾಣ ನಿಗಮಕ್ಕೆ ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್‍ರನ್ನ ಅಧ್ಯಕ್ಷರನ್ನಾಗಿ ನೇಮಿಸಿ ಸಿಎಂ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಅತೃಪ್ತರ ಓಲೈಕೆಗೂ ಸಿಎಂ ಮುಂದಾಗಿದ್ದಾರೆ.

    ರಾಯಚೂರು ಗ್ರಾಮಾಂತರ ಶಾಸಕ ಬಸವನಗೌಡ ದದ್ದಲ್‍ಗೆ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಠ ಪಂಗಡಗಳ ಅಭಿವೃದ್ಧಿ ನಿಗಮ ನೀಡಿ ಆದೇಶ ಹೊರಡಿಸಿದ್ದಾರೆ. ಪ್ರತಾಪ್‍ಗೌಡ ಹಾಗೂ ಬಸವನಗೌಡ ಈ ಇಬ್ಬರೂ ಶಾಸಕರು ಬಿಜೆಪಿ ಕಡೆಗೆ ವಾಲುವ ಅನುಮಾನ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಇಬ್ಬರಿಗೂ ಸಂಪುಟ ದರ್ಜೆ ಸ್ಥಾನಮಾನ ನೀಡಿದ್ದಾರೆ.  

    ಆದರೆ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಡಾ.ಸುಧಾಕರ್‍ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಇನ್ನೂ ಮರೀಚಿಕೆಯಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನದ ಬಗ್ಗೆ ಇನ್ನೂ ಸಸ್ಪೆನ್ಸ್ ಇರಿಸಿದ್ದು, ಸುಧಾಕರ್ ನಡೆ ಕುತೂಹಲ ಮೂಡಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಿಗಮ ಮಂಡಳಿ ಸ್ಥಾನ ಬೇಡ- ಅಸಮಾಧಾನ ಹೊರ ಹಾಕಿದ ಚಳ್ಳಕೆರೆ ಕಾಂಗ್ರೆಸ್ ಶಾಸಕ

    ನಿಗಮ ಮಂಡಳಿ ಸ್ಥಾನ ಬೇಡ- ಅಸಮಾಧಾನ ಹೊರ ಹಾಕಿದ ಚಳ್ಳಕೆರೆ ಕಾಂಗ್ರೆಸ್ ಶಾಸಕ

    ಚಿತ್ರದುರ್ಗ: ಜಿಲ್ಲೆಯ ಸಮಸ್ಯೆಗಳು ಬಗೆಹರಿಸಲು ಸಚಿವ ಸ್ಥಾನ ಕೇಳಿದ್ದು, ಆದರೆ ನಿಗಮ ಮಂಡಳಿ ಸ್ಥಾನ ನೀಡಿದ್ದಾರೆ. ಅದ್ದರಿಂದ ನಾನು ಮಂಡಳಿಯ ಸ್ಥಾನಮಾನ ಬೇಡ ಎಂದು ಹೈಕಮಾಂಡ್‍ಗೆ ಹೇಳುವುದಾಗಿ ಚಳ್ಳಕೆರೆ ಶಾಸಕ ರಘುಮೂರ್ತಿ ತಿಳಿಸಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ ಅವರು, ಸಚಿವ ಸ್ಥಾನ ಸಿಗದೇ ನಿರಾಸೆಯಾಗಿದ್ದು, ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಬೇಡ ಎಂದು ಹೇಳುತ್ತೇನೆ. ಜಿಲ್ಲೆಯಲ್ಲಿ ಒಬ್ಬರಿಗಾದರು ಸಚಿವ ಸ್ಥಾನ ನೀಡಬೇಕು ಎಂಬುವುದು ಮಾತ್ರ ನಮ್ಮ ಬೇಡಿಕೆ ಆಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.

    ನನಗೆ ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಸ್ಥಾನ ನೀಡುವ ಸಾಧ್ಯತೆ ಇದೆ. ಆದರೆ ಬರದನಾಡು ಅಭಿವೃದ್ಧಿಗಾಗಿ ಸಚಿವ ಸ್ಥಾನ ನೀಡಬೇಕಿತ್ತು. ಸ್ಥಳೀಯ ಕಾಂಗ್ರೆಸ್ ಶಾಸಕ ಒಬ್ಬರು ಇರುವುದರಿಂದ ಚಿತ್ರದುರ್ಗಕ್ಕೆ ಆದ್ಯತೆ ನೀಡಬೇಕಿತ್ತು. ಆದರೆ ಈ ಬಾರಿ ಜಿಲ್ಲೆಯನ್ನು ಕಡೆಗಣಿಸಲಾಗಿದೆ. ನನಗೆ ನಿಗಮ ಮಂಡಳಿ ಸ್ಥಾನಮಾನ ಬೇಡ. ನಾನು ಕೇವಲ ಕ್ಷೇತ್ರದ ಶಾಸಕನಾಗಿ ಉಳಿಯುತ್ತೇನೆ. ಮುಂದೇ ಯಾವುದೇ ಕಾರಣಕ್ಕೂ ಸಚಿವ ಸ್ಥಾನಕ್ಕಾಗಿ ಪ್ರಯತ್ನ ಮಾಡುವುದಿಲ್ಲ ಎಂದರು.

    ಇತ್ತ ಕಲಬುರಗಿಯ ಚಿಂಚೊಳ್ಳಿ ಶಾಸಕ ಡಾ. ಉಮೇಶ್ ಜಾಧವ್‍ಗೆ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಚಿಂಚೊಳ್ಳಿಯಲ್ಲೂ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು. ಸಚಿವ ಸ್ಥಾನ ಕೈ ತಪ್ಪಿದ್ದನ್ನ ಖಂಡಿಸಿ ಚಿಂಚೊಳ್ಳಿ ಪಟ್ಟಣದಲ್ಲಿ ಪಕ್ಷದ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಟೈರ್‍ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv