ಬೆಂಗಳೂರು: ಇಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರ 47ನೇ ವರ್ಷದ ಜನ್ಮದಿನವಾಗಿದ್ದು, ಮಧ್ಯರಾತ್ರಿ ಪತ್ನಿ ಹಾಗೂ ಮಗಳು ಆಸ್ಪತ್ರೆಯಿಂದಲೇ ಶುಭಾಶಯ ತಿಳಿಸಿದ್ದಾರೆ.
ಟಿಕ್ ಟಾಕ್ ವಿಡಿಯೋ ಮಾಡಿರುವ ಮಾಡಿರುವ ಸಚಿವರ ಪತ್ನಿ ಹಾಗೂ ಮಗಳು, ಹುಟ್ಟುಹಬ್ಬದ ಶುಭಾಶಯಗಳು ಎಂದು ತಿಳಿಸಿದ್ದಾರೆ. ಅಪ್ಪ ನೀನು ಎಲ್ಲಾ ಸಮಯದಲ್ಲೂ ಖುಷಿಯಾಗರಬೇಕು. ಲವ್ ಯೂ ಅಪ್ಪ. ನಿಮ್ಮ ಪ್ರೀತಿಯನ್ನಿ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ವಿಡಿಯೋದಲ್ಲಿ ಬರೆದುಕೊಳ್ಳುವ ಮೂಲಕ ಅಪ್ಪನ ಹುಟ್ಟುಹಬ್ಬಕ್ಕೆ ಮಗಳು ಪ್ರೀತಿಯಿಂದ ಶುಭ ಕೋರಿದ್ದಾಳೆ.
ಆಸ್ಪತ್ರೆಯಿಂದ ರಾತ್ರಿ ೧೨ ಗಂಟೆಗೆ ನನ್ನ ಮಗಳು ಮತ್ತು ನನ್ನ ಪತ್ನಿ ನನ್ನ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನ ತಿಳಿಸಿದ್ದಾರೆ. ಈ ವಿಡಿಯೋ ಉಡುಗೊರೆ ನನ್ನ ಜೀವನದಲ್ಲೇ ಮದುರವಾದದ್ದು, ಪವಿತ್ರಪ್ರೀತಿಯ ಸಂಕೇತ. ಮಿಸ್ ಯು ಮೈ ಏಂಜಲ್ಸ್ 🥰❤️🥰 pic.twitter.com/epxpGYfSEA
ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವರು, ಆಸ್ಪತ್ರೆಯಿಂದ ರಾತ್ರಿ 12 ಗಂಟೆಗೆ ನನ್ನ ಮಗಳು ಮತ್ತು ನನ್ನ ಪತ್ನಿ ನನ್ನ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನ ತಿಳಿಸಿದ್ದಾರೆ. ಈ ವಿಡಿಯೋ ಉಡುಗೊರೆ ನನ್ನ ಜೀವನದಲ್ಲೇ ಮಧುರವಾದದ್ದು, ಪವಿತ್ರ ಪ್ರೀತಿಯ ಸಂಕೇತ. ಮಿಸ್ ಯು ಮೈ ಏಂಜಲ್ಸ್ ಅಂತ ಬರೆದುಕೊಂಡಿದ್ದಾರೆ.
ಇದಕ್ಕೂ ಮೊದಲು ಟ್ವೀಟ್ ಮಾಡಿರುವ ಸಚಿವರು, ಆತ್ಮೀಯ ಬಂಧುಗಳೇ, ತಮ್ಮೆಲ್ಲರ ಶುಭಹಾರೈಕೆ, ಆಶೀರ್ವಾದಗಳಿಂದ ನನ್ನ ಕುಟುಂಬ ಸದಸ್ಯರು ಕ್ಷೇಮದಿಂದಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ನಾನು ಪ್ರಾಥಮಿಕ ಸಂಪರ್ಕಿತನಾಗಿ ಕ್ವಾರಂಟೈನ್ ನಲ್ಲಿರುವುದರಿಂದ, ನಾಳೆ ನನ್ನ ಜನ್ಮದಿನದಂದು ನೀವು ಇರುವಲ್ಲಿಂದಲೇ ಹಾರೈಸಿ, ಆಶೀರ್ವದಿಸಿ, ನಿಮ್ಮೆಲ್ಲರ ಪ್ರೀತಿ ಅಭಿಮಾನಗಳಿಗೆ ನಾನು ಚಿರಋಣಿಯಾಗಿದ್ದೇನೆ ಎಂದು ತಿಳಿಸಿದ್ದರು.
ಆತ್ಮೀಯ ಬಂಧುಗಳೇ, ತಮ್ಮೆಲ್ಲರ ಶುಭಹಾರೈಕೆ, ಆಶೀರ್ವಾದಗಳಿಂದ ನನ್ನ ಕುಟುಂಬ ಸದಸ್ಯರು ಕ್ಷೇಮದಿಂದಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ನಾನು ಪ್ರಾಥಮಿಕ ಸಂಪರ್ಕಿತನಾಗಿ ಕ್ವಾರಂಟೈನ್ ನಲ್ಲಿರುವುದರಿಂದ, ನಾಳೆ ನನ್ನ ಜನ್ಮದಿನದಂದು ನೀವು ಇರುವಲ್ಲಿಂದಲೇ ಹಾರೈಸಿ, ಆಶೀರ್ವದಿಸಿ, ನಿಮ್ಮೆಲ್ಲರ ಪ್ರೀತಿ ಅಭಿಮಾನಗಳಿಗೆ ನಾನು ಚಿರಋಣಿಯಾಗಿದ್ದೇನೆ.🙏 pic.twitter.com/Xycswv51zj
ಸಚಿವರ ಪತ್ನಿ ಹಾಗೂ ಮಗಳಿಗೆ ಕೊರೊನಾ ಪಾಸಿಟಿವ್ ದೃಢವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಚಿವರು ಹಾಗೂ ಇನ್ನಿಬ್ಬರು ಗಂಡು ಮಕ್ಕಳ ಟೆಸ್ಟ್ ವರದಿಯಲ್ಲಿ ನೆಗೆಟಿವ್ ಬಂದಿದ್ದು, ಹೀಗಾಗಿ ಅವರು ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ. ಸಚಿವರ ಕುಟುಂಬಕ್ಕೆ ಕೊರೊನಾ ಒಕ್ಕರಿಸಿದೆ ಎಂದು ತಿಳಿದ ತಕ್ಷಣ ಕಾಂಗ್ರೆಸ್ ಹಾಗೂ ಬಿಜೆಪಿಯ ನಾಯಕರು ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ವಿರೋಧ ಪಕ್ಷದ ನಾಯಕರಾದಂತ ಶ್ರೀ ಸಿದ್ದರಾಮಯ್ಯ ನವರು, ಡಾ ಪರಮೇಶ್ವರ ರವರು ,ಆರ್ ವಿ ದೇಶಪಾಂಡೆ,ಕೆ ಚ್ ಮುನಿಯಪ್ಪ ನವರು,hk ಪಾಟೀಲ್ ರವರು,ರಮೇಶಕುಮಾರ್ ರವರು ಹಾಗು ಅನೇಕ ಕಾಂಗ್ರೆಸ್ ನಾಯಕರು ಫೋನ್ ಮೂಲಕ ನನ್ನ ಕುಟುಂಬ ಸದಸ್ಯರ ಯೋಗಕ್ಷೇಮವನ್ನು ವಿಚರಿಸಿ ಆತ್ಮಸ್ಥ್ಯ್ರ್ಯ ವನ್ನು ತುಂಬಿದ್ದಾರೆ. ನಿಮಗೆಲ್ಲ ನನ್ನ ಕೃತಜ್ಞತೆಗಳು. pic.twitter.com/RSZO8PEe8V
ಬೆಂಗಳೂರು: ಕೋವಿಡ್ ಸೋಂಕಿತರಿಗೆ ಹೆಚ್ಚು ಪರಿಣಾಮಕಾರಿ ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿರುವ ಪ್ಲಾಸ್ಮಾ ಚಿಕಿತ್ಸೆಗೆ ಇಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಾಲನೆ ನೀಡಲಾಗಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಅವರು ಈ ಉಪಕ್ರಮಕ್ಕೆ ಚಾಲನೆ ನೀಡಿದರು. ಗಂಭೀರ ಪರಿಸ್ಥಿತಿಯಲ್ಲಿರುವ ಕೊರೊನಾ ಸೋಂಕಿತ ವ್ಯಕ್ತಿಗಳಿಗೆ ಪ್ಲಾಸ್ಮಾ ಚಿಕಿತ್ಸೆ ಪರಿಣಾಮಕಾರಿಯಾಗಿ ಇರುವುದು ಕಂಡು ಬಂದಿದೆ. ಇದೀಗ ರಾಜ್ಯದಲ್ಲಿ ಕೂಡ ಈ ಪ್ರಕ್ರಿಯೆ ಲಭ್ಯವಾದಂತಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಅವರು, ಕರ್ನಾಟಕ ರಾಜ್ಯಕ್ಕೆ ಇದೊಂದು ಐತಿಹಾಸಿಕ ಕ್ಷಣವಾಗಿದ್ದು, ಪ್ಲಾಸ್ಮಾ ಚಿಕಿತ್ಸೆಯಿಂದ ಸೋಂಕಿತರು ಗುಣಮುಖರಾದರೆ ಅತ್ಯಂತ ಸಂತೋಷದ ಸಂಗತಿ ಎಂದು ಹೇಳಿದರು. ಇಂದಿನಿಂದ ಇದರ ಕ್ಲಿನಿಕಲ್ ಪ್ರಯೋಗ ಆರಂಭವಾಗಿದ್ದು, ವೆಂಟಿಲೇಟರ್ ನಲ್ಲಿರುವ ಪೀಡಿತರಿಗೆ ಈ ಚಿಕಿತ್ಸೆ ನೀಡಲಾಗುವುದು. ಕೋವಿಡ್‍ನಿಂದ ಗುಣಮುಖರಾಗಿರುವ ವ್ಯಕ್ತಿಯೊಬ್ಬರು ಚಿಕಿತ್ಸೆಗೆ ಸಹಕರಿಸಲು ಮುಂದೆ ಬಂದಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಚಿವರು ತಿಳಿಸಿದ್ದಾರೆ.
ಈ ಚಿಕಿತ್ಸೆಗೆ ಗುಣಮುಖರಾಗಿರುವ ವ್ಯಕ್ತಿಗಳು ಸ್ವಯಂಪ್ರೇರಿತರಾಗಿ ಬಂದು ಸಹಕಾರ ನೀಡಬೇಕಾಗಿದೆ. ಗುಣಮುಖರಾಗಿರುವ ವ್ಯಕ್ತಿಗಳು 2 ವಾರದ ಅಂತರದಲ್ಲಿ ಕನಿಷ್ಠ ಇಬ್ಬರು ಅಥವಾ ಮೂವರಿಗೆ ಈ ನೆರವು ನೀಡಬಹುದಾಗಿದ್ದು, ಈ ನಿಟ್ಟಿನಲ್ಲಿ ಸಹಕರಿಸಬೇಕೆಂದು ಸಚಿವ ಸುಧಾಕರ್ ಹೇಳಿದರು
ವಿಕ್ಟೋರಿಯಾ ಆಸ್ಪತ್ರೆಯ ಡೀನ್ ಡಾ.ಸಿ.ಆರ್ ಜಯಂತಿ, ಬೆಂಗಳೂರು ಇನ್‍ಸ್ಟಿಟ್ಯೂಟ್ ಆಫ್ ಆಂಕಾಲಜಿಯ ಡಾ. ವಿಶಾಲ್ ರಾವ್ ಹಾಗೂ ಬೆಂಗಳೂರು ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ರಮೇಶ್ ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ಲಾಸ್ಮಾ ಥೆರಪಿ:
ಪ್ಲಾಸ್ಮಾ ಥೆರಪಿಯು ನೆರೆಯ ಕೇರಳ ರಾಜ್ಯದಲ್ಲಿ ಅತ್ಯಂತ ಯಶಸ್ವಿಯಾಗಿದ್ದು, ಕರ್ನಾಟಕದಲ್ಲೂ ಇದನ್ನು ನಡೆಸಲು ಅನುಮತಿ ನೀಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಸರ್ಕಾರ ಮನವಿ ಸಲ್ಲಿಸಿತ್ತು. ಇತ್ತೀಚೆಗಷ್ಟೇ ಕೇಂದ್ರ ಸಾರ್ವಜನಿಕ ಆರೋಗ್ಯ ನಿರ್ದೇಶನಾಲಯವು ಬೆಂಗಳೂರು ಇನ್‍ಸ್ಟಿಟ್ಯೂಟ್ ಆಫ್ ಆಂಕಾಲಜಿಯ ವೈದ್ಯ ಡಾ. ವಿಶಾಲ್ ರಾವ್ ಅವರಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲು ಅನುಮತಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಪ್ಲಾಸ್ಮಾ ಥೆರಪಿಯನ್ನು ಈ ಹಿಂದೆಯೂ ಕೂಡ ಎಬೋಲಾ ಮತ್ತು ಸ್ವೈನ್ ಫ್ಲೂ ನಂತಹ ಕಾಯಿಲೆಗಳಿಗೆ ಯಶಸ್ವಿಯಾಗಿ ಉಪಯೋಗಿಸಲಾಗಿದ್ದು, ಕೋವಿಡ್ ಸೋಂಕಿತರಿಗೆ ಪರಿಣಾಮಕಾರಿ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಇದೊಂದು ಮಹತ್ವದ ಬೆಳವಣಿಗೆ ಎಂದೇ ಹೇಳಬಹುದಾಗಿದೆ.
ಏನಿದು ಪ್ಲಾಸ್ಮಾ ಥೆರಪಿ?
* ಪ್ಲಾಸ್ಮಾ ಎಂದರೆ ರಕ್ತದ ಕಣ (ಹಳದಿ ದ್ರವಾಂಶ). ರಕ್ತದಲ್ಲಿರುವ ರೋಗ ನಿರೋಧಕ ಅಂಶ ಇರುವುದು ಪ್ಲಾಸ್ಮಾದಲ್ಲಿ
* ಪ್ಲಾಸ್ಮಾ ಥೆರಪಿ ಎಂದರೆ ಗುಣಮುಖರಾಗಿರುವ ವ್ಯಕ್ತಿಯ ರಕ್ತದಲ್ಲಿರುವ ಪ್ಲಾಸ್ಮಾವನ್ನು ಚಿಂತಾಜನಕ ಸ್ಥಿತಿಯಲ್ಲಿರುವ ರೋಗಿಯ ರಕ್ತಕ್ಕೆ ಇಂಜೆಕ್ಟ್ ಮಾಡುವುದು.
* ಗುಣಮುಖರಾದವರ ರಕ್ತದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತೆ. ಇದೇ ರಕ್ತದಲ್ಲಿರುವ ಪ್ಲಾಸ್ಮಾವನ್ನು ರೋಗಿಗೆ ನೀಡಿದರೆ ಆಗ ಆ ರೋಗಿಯ ರೋಗ ನಿರೋಧಕ ಶಕ್ತಿಯೂ ಹೆಚ್ಚಾಗಿ ಶೀಘ್ರ ಗುಣಮುಖರಾಗುತ್ತಾರೆ.
* ಕೊರೊನಾದಿಂದ ಗುಣಮುಖರಾಗಿರುವ ವ್ಯಕ್ತಿಯ ಪ್ಲಾಸ್ಮಾವನ್ನು ಕೊರೊನಾದಿಂದಾಗಿ ಚಿಂತಾಜನಕ ಸ್ಥಿತಿಯಲ್ಲಿರುವ ರೋಗಿಗೆ ಇಂಜೆಕ್ಟ್ ಮಾಡಿದರೆ ಆ ರೋಗಿಯ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಶೀಘ್ರ ಗುಣಮುಖರಾಗುತ್ತಾರೆ.
* ಪ್ಲಾಸ್ಮಾ ಚಿಕಿತ್ಸೆಯಿಂದ ರೋಗಿಗಳು 3 ರಿಂದ 7 ದಿನದೊಳಗೆ ಗುಣಮುಖರಾಗುವ ನಿರೀಕ್ಷೆ
ಯಾರು ಪ್ಲಾಸ್ಮಾ ದಾನ ಮಾಡಬಹುದು?
* ಕೊರೊನಾದಿಂದ ಗುಣಮುಖರಾಗಿರುವ ವ್ಯಕ್ತಿ ಪ್ಲಾಸ್ಮಾ ದಾನ ಮಾಡಬಹುದು
* ಕೊರೊನಾದಿಂದ ಗುಣಮುಖರಾದ ವ್ಯಕ್ತಿ 28 ದಿನಗಳ ಬಳಿಕ ಪ್ಲಾಸ್ಮಾ ದಾನ ಮಾಡಬಹುದು
* ಒಬ್ಬ ರೋಗಿಯನ್ನ ಗುಣಪಡಿಸಲು 200-250 ಮಿಲಿ ಲೀಟರ್ ಪ್ಲಾಸ್ಮಾ ಅಗತ್ಯ
* ಒಬ್ಬ ದಾನಿಯಿಂದ ಇಬ್ಬರಿಂದ ಐವರು ರೋಗಿಗಳನ್ನು ಗುಣಪಡಿಸಬಹುದು
* ರಕ್ತದಾನಕ್ಕಿಂತ ಪ್ಲಾಸ್ಮಾ ದಾನ ಭಿನ್ನ
* ರಕ್ತದಲ್ಲಿರುವ ಪ್ಲಾಸ್ಮಾವನ್ನಷ್ಟೇ ಸಂಗ್ರಹಿಸಿ ರಕ್ತವನ್ನು ಮತ್ತೆ ದಾನಿಗಳ ದೇಹಕ್ಕೆ ಬಿಡಲಾಗುತ್ತದೆ
* ಒಬ್ಬ ದಾನಿ ವಾರದಲ್ಲಿ ಎರಡು ಬಾರಿ ಪ್ಲಾಸ್ಮಾ ದಾನ ಮಾಡಬಹುದು
– ರಾಜ್ಯದಲ್ಲಿ ಎಲ್ಲೆಲ್ಲಿ ರೆಡ್ ಝೋನ್?
– ಬೆಂಗ್ಳೂರು ಕೊರೊನಾ ಸೋಂಕಿತರಿಗೆ ಹೈಫೈ ಫುಡ್!
ಬೆಂಗಳೂರು: ರಾಜ್ಯದ ರೆಡ್ ಝೋನ್‍ಗಳಲ್ಲಿ ಲಾಕ್‍ಡೌನ್ ಮುಂದುವರಿಸುವ ಬಗ್ಗೆ ನಾವು ಯೋಜನೆ ಮಾಡುತ್ತಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವರ ಡಾ.ಸುಧಾಕರ್ ಹೇಳಿದ್ದಾರೆ.
ಲಾಕ್‍ಡೌನ್ ವಿಸ್ತರಣೆ ವಿಚಾರವಾಗಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಸಚಿವರು, ಬೆಂಗಳೂರಿನ ಕೆಲ ಪ್ರದೇಶ, ಮೈಸೂರು, ನಂಜನಗೂಡು, ಗೌರಿಬಿದನೂರು, ಬೀದರ್, ಮಂಗಳೂರನ್ನು ರೆಡ್ ಝೋನ್ ಎಂದು ಗುರುತಿಸಿದ್ದೇವೆ. ಏಪ್ರಿಲ್ 14ರ ಬಳಿಕ ಬಳಿಕ ಸಿಎಂ ಹಾಗೂ ಕೇಂದ್ರ ಸರ್ಕಾರದ ಜೊತೆಗೆ ಸಭೆ ನಡೆಸಿ ರೆಡ್ ಝೋನ್‍ಗಳಲ್ಲಿ ಲಾಕ್‍ಡೌನ್ ಮುಂದುವರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದೇವೆ. ಹಂತ ಹಂತವಾಗಿ ಇಲ್ಲಿ ನಿರ್ಬಂಧ ಹೇರುವ ಬಗ್ಗೆ ಚಿಂತನೆ ನಡೆಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ನಂಜನಗೂಡು ನಮ್ಮ ನಿರೀಕ್ಷೆ ಮೀರಿ ಹೋಗಿದೆ. ಅದನ್ನು ರೆಡ್ ಝೋನ್ ಅಂತ ಘೋಷಣೆ ಮಾಡುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ಪಬ್ಲಿಕ್ ಟಿವಿ ಇಂಪ್ಯಾಕ್ಟ್:
ವಿಕ್ಟೋರಿಯಾ ಆಸ್ಪತ್ರೆಯ ನರ್ಸ್ ಗಳಿಗೆ ನ್ಯೂಟ್ರಿಷನ್ ಆಹಾರ ಕೊರತೆ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಈ ಬೆನ್ನಲ್ಲೆ ಆಹಾರ ಪೂರೈಕೆಗೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಈಗಾಗಲೇ ವೈದ್ಯರ ಹಾಗೂ ನರ್ಸ್ ಗಳ ಜೊತೆಗೆ ಸಭೆ ನಡೆಸಿದ್ದು, ಯಾವುದೇ ಕೊರತೆ ಬಾರದಂತೆ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಇನ್ಮುಂದೆ ಕೋವಿಡ್ ವಾರ್ಡ್ ನಲ್ಲಿ ಸೇವೆ ಸಲ್ಲಿಸುವ ಬೆಂಗಳೂರಿನ ನರ್ಸ್, ವೈದ್ಯರು ಹಾಗೂ ರೋಗಿಗಳಿಗೆ ತಾಜ್ ಹೋಟೆಲ್‍ನಿಂದ ಆಹಾರ ಸರಬರಾಜು ಮಾಡಲಾಗುತ್ತದೆ. ಊಟ ಸರಬರಾಜು ಮಾಡಲು ತಾಜ್ ಹೋಟೆಲ್ ಮುಂದೆ ಬಂದಿದೆ. ಜೊತೆಗೆ ರಾಜ್ಯಾದ್ಯಂತ ಎಲ್ಲಾ ರೋಗಿಗಳಿಗೆ ನ್ಯೂಟ್ರಿಷನ್ ಊಟದ ವ್ಯವಸ್ಥೆಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಚಿಕ್ಕಬಳ್ಳಾಪುರ: ಅನರ್ಹ ಶಾಸಕರನ್ನು ಸೋಲಿಸಲು ಬಿಜೆಪಿಯಲ್ಲೇ ಟೀಮ್‍ಗಳು ಸಿದ್ಧವಾಗಿವೆ ಎಂದು ಮಾಜಿ ಸಚಿವ ಕೃಷ್ಣಬೈರೇಗೌಡ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಬಳ್ಳಾಪುರ ಹೊರವಲಯದ ಕೆ.ವಿ.ಕ್ಯಾಂಪಸ್‍ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯ ಬಳಿಕ ಮಾತನಾಡಿದ ಅವರು, ರಾಜ್ಯ ಸರ್ಕಾರ ಹಾಗೂ ಬಿಜೆಪಿ ಪಕ್ಷ ಒಡೆದ ಮನೆಯಾಗಿದೆ. ಅನರ್ಹ ಶಾಸಕರು ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ, ಸಿಬಿಐ ದಾಳಿಗೆ ಹೆದರಿ ಬಿಜೆಪಿಗೆ ಪಕ್ಷಾಂತರಗೊಂಡಿದ್ದಾರೆ. ಆದರೆ ಅವರನ್ನು ಸೋಲಿಸಲು ಬಿಜೆಪಿಯ ಕೆಲವರು ಪ್ಲ್ಯಾನ್ ರೂಪಿಸಿದ್ದಾರೆ ಎಂದು ಹರಿಹಾಯ್ದರು.
ಬಿಜೆಪಿಯಲ್ಲಿ ಉಂಟಾಗಿರುವ ಭಿನ್ನಮತ ಹಾಗೂ ಅನರ್ಹ ಶಾಸಕರನ್ನು ಸಂಭಾಳಿಸುವುದರಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಾಕಾಗಿದೆ. ಅವರು ಆಪರೇಷನ್ ಕಮಲ ಮಾಡಿ ಅದರಲಲ್ಲೇ ಪಿಎಚ್ ಡಿ ಪೂರೈಸಿದ್ದಾರೆ. ರಾಜ್ಯ ಸರ್ಕಾರವು ರಾಜ್ಯದ ಜ್ವಲಂತ ಸಮಸ್ಯೆಗಳ ಕಡೆ ಗಮನ ಕೊಡುತ್ತಿಲ್ಲ. ಕೇವಲ ಉಪ ಚುನಾವಣೆಯಲ್ಲಿ ತಲ್ಲಿನವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಚಿಕ್ಕಬಳ್ಳಾಪುರ ಉಪ ಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಪಣತೊಟ್ಟಿದೆ. ಚಿಕ್ಕಬಳ್ಳಾಪುರ ಸುಧಾಕರ್ ಕಾಂಗ್ರೆಸ್‍ನಲ್ಲಿ ಎಲ್ಲ ರೀತಿಯಲ್ಲಿ ಅಧಿಕಾರ ಪಡೆದಿದ್ದಾರೆ. ಎಲ್ಲವನ್ನೂ ಪಡೆದುಕೊಂಡು ಇತ್ತೀಚೆಗೆ ಪಕ್ಷ ಬಿಟ್ಟು ಹೋಗಿದ್ದಾರೆ. ಇವರ ತಂದೆ ಕೇಶವರೆಡ್ಡಿ ಅವರಿಗೆ ಸದಸ್ಯರ ವಿರೋಧದ ನಡುವೆಯೂ ಜಿಲ್ಲಾ ಪಂಚಾಯತಿ ಅಧ್ಯಕ್ಷರನ್ನಾಗಿ ಮಾಡಿದ್ದೇವೆ ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಆಪ್ತ ಮಹದೇವಪ್ಪ ಅವರು ಅನರ್ಹ ಶಾಸಕ ಸುಧಾಕರ್ ಅವರಿಗೆ ಸಾಕಷ್ಟು ಶಕ್ತಿ ತುಂಬಿದ್ದರು. ಸುಧಾಕರ್ ಅವರಿಗೆ ನಾವು ಏನು ಅನ್ಯಾಯ ಮಾಡಿದ್ವಿ? ಕಾಂಗ್ರೆಸ್ ಮತ್ತು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಸಾಕಷ್ಟು ಕೆಲಸಗಳಾಗಿವೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಯಾಪೈಸೆ ಕೂಡ ಬಂದಿಲ್ಲ. ಇವರಿಗೆ ಮಂತ್ರಿ ಆಗಬೇಕು ಎನ್ನುವ ಆಸೆ ಇತ್ತು. ಇದನ್ನು ಸಿದ್ದರಾಮಯ್ಯ ಕೂಡ ಹೇಳಿದ್ದರು. ಜನವರಿಗೆ ಸುಧಾಕರ್ ಅವರನ್ನು ಮಂತ್ರಿ ಮಾಡುವುದಕ್ಕೆ ವೇದಿಕೆ ಸಿದ್ಧವಾಗಿತ್ತು. ಆದರೂ ಸಿದ್ದರಾಮಯ್ಯನವರಿಗೆ ವಂಚಿಸಿ ಸುಧಾಕರ್ ಪಕ್ಷ ಬಿಟ್ಟು ಹೋದರು. ಪಕ್ಷದಲ್ಲಿ ಎಲ್ಲವನ್ನೂ ಪಡೆದುಕೊಂಡು ಈಗ ಅಧಿಕಾರದ ಲಾಲಸೆಗೊಸ್ಕರ ಬಿಜೆಪಿಗೆ ಹೋಗಿದ್ದಾರೆ ಎಂದು ಆರೋಪಿಸಿದರು.
ಸುಧಾಕರ್ ಅವರು ಮಾಜಿ ಸಿಎಂ ಕುಮಾರಸ್ವಾಮಿ, ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರಿಗೂ ಮಾತು ಕೊಟ್ಟು ಈಗ ದ್ರೋಹ ಮಾಡಿ ಬಿಜೆಪಿಗೆ ಹೋಗಿದ್ದಾರೆ. ತಾಲೂಕಿನ ಜನ ಕಾಂಗ್ರೆಸ್ ಪಕ್ಷ ನಂಬಿ ಸುಧಾಕರ್ ಅವರಿಗೆ ಮತ ಹಾಕಿದರೆ, ಅವರು ಜನರ ಮತಗಳನ್ನು ಮಾರಿಕೊಂಡರು. ಇವರು ಅನರ್ಹರು ಎಂದು ಸುಪ್ರೀಂಕೋರ್ಟ್ ಹೇಳಿದೆ. ಈಗ ಅನರ್ಹರನ್ನು ಜನತಾ ನ್ಯಾಯಾಲಯಕ್ಕೆ ಕಳುಹಿಸಲಾಗಿದೆ. ಇವರನ್ನು ಮತ್ತೆ ಗೆಲ್ಲಿಸಿದರೆ ನಮ್ಮಂತಹ ಮೂರ್ಖರು ಇನ್ನೊಬ್ಬರು ಇರಲ್ಲ ಎಂದು ಕಿಡಿಕಾರಿದರು.
– ಅನರ್ಹ ಶಾಸಕರ ಮೇಲೆ ಬಿಎಸ್‍ವೈಗೆ ಪ್ರೀತಿ
– ಮೈತ್ರಿಯಲ್ಲಿ ಗಂಡ ಹೆಂಡತಿಯನ್ನು ನಂಬಲಿಲ್ಲ, ಹೆಂಡತಿ ಗಂಡನನ್ನು ನಂಬಲಿಲ್ಲ
ಚಿಕ್ಕಬಳ್ಳಾಪುರ: ನಮ್ಮ ತ್ಯಾಗದಿಂದ ಬಿಜೆಪಿಯವರು ಅಧಿಕಾರಕ್ಕೆ ಅನುಭವಿಸುತ್ತಿದ್ದಾರೆ. ಇಲ್ಲದಿದ್ದರೆ ಅವರು ಅಧಿಕಾರದಲ್ಲಿ ಇರುತ್ತಿರಲಿಲ್ಲ ಎಂದು ಅನರ್ಹ ಶಾಸಕ ಸುಧಾಕರ್ ಹೇಳಿದ್ದಾರೆ.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮಂಚೇನಹಳ್ಳಿ ಹೋಬಳಿಯಲ್ಲಿ ಜನಾಭಿಪ್ರಾಯ ಸಂಗ್ರಹ ಸಭೆ ನಡೆಸಿ ಮಾತನಾಡಿದ ಸುಧಾಕರ್, ಬಿಜೆಪಿಯ ಕೆಲ ನಾಯಕರು ಅನರ್ಹ ಶಾಸಕರ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ. ನಾವು ಯಾರನ್ನ ಮೆಚ್ಚಿಸಲು ರಾಜೀನಾಮೆ ಕೊಟ್ಟಿಲ್ಲ. ಅಂತಃಕರಣದಿಂದ ನಾವು ಈ ತೀರ್ಮಾನವನ್ನ ಕೈಗೊಂಡಿದ್ದೇವೆ. ಅವರ ಹೇಳಿಕೆಗಳನ್ನು ದೇವರು ಹಾಗೂ ಜನ ನೋಡುತ್ತಾರೆ. ಟೀಕೆ ಟಿಪ್ಪಣಿಗಳಿಗೆ ಅನರ್ಹ ಶಾಸಕರು ಯಾವುದೇ ಮಾನ್ಯತೆ ಕೊಡುವುದಿಲ್ಲ. ಡಿಸಿಎಂ ಲಕ್ಷಣ್ ಸವದಿ ಅಂತಷ್ಟೇ ಅಲ್ಲ. ಯಾರೇ ಆಗಲಿ, ಎಷ್ಟೇ ದೊಡ್ಡ ಹುದ್ದೆಯಲ್ಲಿ ಇರಲಿ ಅವರು ಮಾಡುವ ಪದಬಳಕೆ ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದರು.
ಬಿಎಸ್‍ವೈಗೆ ಧನ್ಯವಾದ: ಇದೇ ವೇಳೆ ಇದು ಚುನಾವಣಾ ಪ್ರಚಾರ ಅಲ್ಲ ಎಂದು ಸ್ಪಷ್ಟಪಡಿಸಿದ ಸುಧಾಕರ್, ನನ್ನ ಕ್ಷೇತ್ರದ ಜನರಿಗೆ ನಾನು ಏಕೆ ರಾಜೀನಾಮೆ ಕೊಟ್ಟೆ ಎಂದು ಕಾರಣ ಹೇಳಲು ಬಂದಿದ್ದೇನೆ. ಕ್ಷೇತ್ರದಲ್ಲಿ ಪ್ರತಿ ಪಂಚಾಯತಿವಾರು ಪ್ರವಾಸ ಕೈಗೊಂಡಿದ್ದೇನೆ ಎಂದು ತಿಳಿಸಿದರು. ಅಲ್ಲದೇ ಸಿಎಂ ಯಡಿಯೂರಪ್ಪ ಅನರ್ಹ ಶಾಸಕರು ಬಿಜೆಪಿಯಿಂದ ಸ್ಪರ್ಧೆ ಮಾಡಬೇಕು ಎಂದು ಅಹ್ವಾನ ನೀಡಿದ್ದಾರೆ. ಅವರಿಗೆ ನಾನು ಧನ್ಯವಾದಗಳನ್ನು ಹೇಳುತ್ತೇನೆ. ಅನರ್ಹ ಶಾಸಕರ ಮೇಲೆ ಬಿಎಸ್‍ವೈ ಪ್ರೀತಿ ಇಟ್ಕೊಂಡಿದ್ದಾರೆ. ಆದರೆ ನಾನು ನಮ್ಮ ಜನರ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಉಳಿಸಲು ಸಮ್ಮಿಶ್ರ ಸರ್ಕಾರವನ್ನು ತೆಗೆದಿದ್ದೇವೆ. ನಂಬಿಕೆ ಇಲ್ಲದ ಸರ್ಕಾರ, ನಂಬಿಕೆ ಇಲ್ಲದ ಸಂಸಾರ ಊರ್ಜಿತವಾಗಲ್ಲ. ಹೊಸ ಸರ್ಕಾರ ರಚನೆ ಆಗಿದ್ದು, ನಾವು ಬಿಜೆಪಿ ಸರ್ಕಾರ ರಚನೆ ಮಾಡಬೇಕು ಎಂದು ರಾಜೀನಾಮೆ ಕೊಡಲಿಲ್ಲ. ಸಮ್ಮಿಶ್ರ ಸರ್ಕಾರ ತೆಗೆಯಬೇಕೆಂವುದು ನಮ್ಮ ಉದ್ದೇಶವಾಗಿತ್ತು. ನಾನು ಚುನಾವಣಾ ಪ್ರಚಾರ ಮಾಡುತ್ತಿಲ್ಲ. ರಾಜೀನಾಮೆ ಕಾರಣ ಹೇಳಲು ಜನರ ಬಳಿ ಬಂದಿದ್ದೇನೆ.
ಇದೇ ವೇಳೆ ಜನರ ಬಳಿ ನನ್ನ ಮುಂದಿನ ನಡೆ ಬಗ್ಗೆ ಹೇಳಲು ಬಂದಿದ್ದೇನೆ. ರಮೇಶ್ ಕುಮಾರ್ ತೀರ್ಪು ರಾಜಕೀಯ ದುರದ್ದೇಶದ ತೀರ್ಪು. ಸಂವಿಧಾನಬದ್ದವಾಗಿ ತೀರ್ಪು ಕೊಟ್ಟಿದ್ದರೆ ನಾವು ಅನರ್ಹರಾಗುತ್ತಿರಲಿಲ್ಲ. ಸುಪ್ರೀಂಕೋರ್ಟಿನಲ್ಲಿ ತೀರ್ಪು ನಮ್ಮ ಪರವಾಗಿ ಬರಲಿದೆ. ನ್ಯಾಯಾಲಯ ಅನರ್ಹತೆ ರದ್ದು ಮಾಡಿದರೆ ಚುನಾವಣೆ ನಡೆಯಲ್ಲ. ಶಾಸಕ ಸ್ಥಾನವನ್ನು ಮತ್ತೆ ಪಡೆಯುತ್ತೇವೆ. ಆಗ ರಾಜೀನಾಮೆ ವಿಚಾರ ಸ್ಫೀಕರ್ ಬಳಿ ಬರುತ್ತೆ. ಆಗ ಸ್ಪೀಕರ್ ಮಾತನಾಡಲಿದ್ದಾರೆ. ಅಂದು ನಾವು ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಚಿಕ್ಕಬಳ್ಳಾಪುರ ದಲ್ಲಿ ಒಂದು ಬಾರಿ ಗೆದ್ದವರು ಎರಡನೇ ಬಾರಿ ಗೆದ್ದಿಲ್ಲ. ಮೊದಲು 15 ಸಾವಿರ ಮತ ಲೀಡ್ ಕೊಟ್ಟ ಜನರು, 2ನೇ ಅವಧಿಗೆ 30 ಸಾವಿರ ಮತಗಳ ಲೀಡ್ ಕೊಟ್ಟರು. ಎಲ್ಲವೂ ಜನರ ಕೈಯಲ್ಲಿದೆ. ಎರಡನೇ ಬಾರಿ 5 ವರ್ಷಕ್ಕೆ ನನ್ನ ಶಾಸಕನಾಗಿ ಆಯ್ಕೆ ಮಾಡಿದ್ದರು. ಆದರೆ ನಾನು 14 ತಿಂಗಳಿಗೆ ರಾಜೀನಾಮೆ ಕೊಟ್ಟೆ. ಜೆಡಿಎಸ್ ವಿರುದ್ಧ ಗೆದ್ದ ನಾನು ಜೆಡಿಎಸ್ ನೊಂದಿಗೆ ಹೋಗುವ ಕೆಲಸ ಕಾಂಗ್ರೆಸ್ ಮಾಡಿತು. 79 ಸ್ಥಾನ ಕಾಂಗ್ರೆಸ್ ಪಡೆದರೂ ನಾವು ಸೋತೆವು. ರಾಜ್ಯದ ಜನ ಕಾಂಗ್ರೆಸ್ ಪಕ್ಷಕ್ಕೆ ಹೇಳಿದ್ದು ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಿ ಎಂದರು. ಆದರೆ ನಾವು ಅಧಿಕಾರದ ದುರಾಸೆಯಿಂದ ಜೆಡಿಎಸ್ ನವರ ಜೊತೆ ಸೇರಿದವು. ಅನೈತಿಕವಾಗಿ ಸಂಬಂಧ ಮಾಡಿಕೊಂಡೆವು. ಇದು ನನಗೆ ವೈಯುಕ್ತಿಕವಾಗಿ ಇಷ್ಟ ಇರಲಿಲ್ಲ. ಇದು ಅನೈತಿಕ ಸರ್ಕಾರ ಎಂದು ಮೊದಲು ಹೇಳಿದ್ದು ನಾನೇ. ಜನರ ತೀರ್ಪಿಗೆ ವಿರುದ್ಧವಾಗಿ ರಚನೆಯಾದ ಸರ್ಕಾರಕ್ಕೆ ಜನ ಮನ್ನಣೆನೂ ಇರಲಿಲ್ಲ. ಆಗ ರಾಜಕೀಯವಾಗಿ ಕಾಂಗ್ರೆಸ್ ಮುಗಿದು ಹೋಗುತ್ತೆ ಎಂದು ಹೇಳಿದ್ದೆ ಎಂದು ತಮ್ಮ ರಾಜೀನಾಮೆ ಹಿಂದಿನ ವಿವರಣೆಯನ್ನು ಜನರಿಗೆ ತಿಳಿಸಿದರು.
ಕಾಂಗ್ರೆಸ್, ಜೆಡಿಎಸ್ ಬದ್ದ ವೈರಿಗಳು: ಜನತಾ ಪಕ್ಷ ಹುಟ್ಟಿದ್ದೆ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳ ವಿರುದ್ಧವಾಗಿ, ಆದರೆ 37 ಸ್ಥಾನ ಪಡೆದ ಜೆಡಿಎಸ್ ಗೆ ಕಾಂಗ್ರೆಸ್ ಶರಣಾದರೆ ಪಕ್ಷದ ಗತಿ ಏನು? ವಿರೋಧ ಪಕ್ಷದಲ್ಲಿ ಕೂತು ರಚನಾತ್ಮಕ ಕೆಲಸ ಮಾಡಿದ್ದರೆ ಜನರಿಗೆ ಮತ್ತಷ್ಟು ಹತ್ತಿರ ಆಗುತ್ತಿದ್ದೇವು. ಆದರೆ ಆ ಕೆಲಸ ಮಾಡಲಿಲ್ಲ. ಬಳ್ಳಾರಿ ಪಾದಯಾತ್ರೆಯಿಂದಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಅಂದು ಶಿವಶಂಕರರೆಡ್ಡಿ ಪಾದಯಾತ್ರೆ ಮಾಡಿದ್ರಾ? ಕಾಂಗ್ರೆಸ್ ಪಕ್ಷ ಕಟ್ಟಿದ್ದೀರಾ? ನಾನು ಕಾಂಗ್ರೆಸ್ ಪಕ್ಷಕ್ಕೆ ವಿರುದ್ಧವಾಗಿ ರಾಜೀನಾಮೆ ನೀಡಿಲ್ಲ. ಸರ್ಕಾರಚ ವಿರುದ್ಧ ಮಾತನಾಡಿ ರಾಜೀನಾಮೆ ಕೊಟ್ಟಿದ್ದೇನೆ ಎಂದರು.
ಕಾಂಗ್ರೆಸ್ ಪರವಾಗಿ ಉತ್ತಮ ಕೆಲಸ ಮಾಡಿದ್ದಕ್ಕೆ ನನ್ನನ್ನು ಅನರ್ಹ ಮಾಡಿದ್ದರು. ಕಾಂಗ್ರೆಸ್ ಪಕ್ಷದಿಂದ ನಾನು ಹೊರಬಂದಿಲ್ಲ ಪಕ್ಷವೇ ನನ್ನ ಹೊರ ಹಾಕಿದೆ. ಸಮ್ಮಿಶ್ರ ಸರ್ಕಾರದಲ್ಲಿ ಚೇಳೂರು ತಾಲೂಕು ಮಾಡುತ್ತಾರೆ. ಮಂಚೇನಹಳ್ಳಿ ಯಾಕೆ ಮಾಡಿಲ್ಲ? ಶಿವಶಂಕರರೆಡ್ಡಿಯನ್ನ ಹೇಗೆ ಸಹಿಸಿಕೊಂಡಿದ್ದೀರಿ? ಒಂದೇ ತಿಂಗಳಲ್ಲಿ ಮಂಚೇನಹಳ್ಳಿ ಯನ್ನ ಹೊಸ ತಾಲೂಕು ಕೇಂದ್ರ ಮಾಡಿಸುತ್ತೇನೆ ಎಂದು ಜನರಿಗೆ ಆಶ್ವಾಸನೆ ನೀಡಿದರು. ಇದೇ ವೇಳೆ ಮಾಜಿ ಸಚಿವ ಶಿವಶಂಕರರೆಡ್ಡಿ ವಿರುದ್ಧ ಸುಧಾಕರ್ ವಾಗ್ದಾಳಿ ನಡೆಸಿದರು.
ಮಾಜಿ ಸಚಿವರ ವಿರುದ್ಧ ವಾಗ್ದಾಳಿ: ಮಾಜಿ ಸಚಿವ ಶಿವಶಂಕರರೆಡ್ಡಿ ಇಷ್ಟು ದಿನ ಗೌರಿಬಿದನೂರು ಟು ಬೆಂಗಳೂರು ನಾನ್ ಸ್ಟಾಪ್ ಆಗಿ ಓಡಾಡ್ತಿದ್ದರು. ಈಗ ಎಲ್ಲಾ ಹಳ್ಳಿಗಳಿಗೂ ಹೋಗಿ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ನಾನು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಎಂದು ಶಿವಶಂಕರರೆಡ್ಡಿಯನ್ನು ಸೋಲಿಸಲಿಲ್ಲ. ಬೇರೆ ಪಕ್ಷದವರಿಗೆ ನಾನು ಸಹಕಾರ ಕೊಡಲಿಲ್ಲ. ಆದರೆ ಶಿವಶಂಕರರೆಡ್ಡಿ ಜೆಡಿಎಸ್ ನವರ ಗೆ ಸಹಕಾರ ಕೊಟ್ಟರು ಎಂದು ಆರೋಪಿಸಿದರು. ಅಲ್ಲದೇ ಇಂತಹವರಿಂದಲೇ ಪಕ್ಷ ನಿಷ್ಠವಂತರು ಕಾಂಗ್ರೆಸ್‍ನಿಂದ ಹೊರ ಬಂದಿದ್ದಾರೆ ಎಂದರು.
ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಒಂದು ರೂಪಾಯಿ ಹಣ ಕೊಡಲಿಲ್ಲ. ನನಗೆ ಹೆಸರು ಬಂದು ಬಿಡುತ್ತೆ ಎಂದು ಅನುದಾನ ಕೊಡಲಿಲ್ಲ. ನಾನು ರಾಜೀನಾಮೆ ಕೊಟ್ಟಿರುವ ಕಾರಣ ಹೊಸ ಸರ್ಕಾರ ಬಂದಿದೆ. ನಾನು ದುಡ್ಡಿಗಾಗಿ ಮಾರಾಟವಾಗಿಲ್ಲ. ಕ್ಷೇತ್ರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಲು ಹೋರಾಡಿದ್ದೇನೆ. ನನ್ನ ಜನರಿಗಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ತ್ಯಾಗ ಮಾಡಿದ್ದೇನೆ. ಜಯಪ್ರಕಾಶ್ ನಾರಾಯಣ ರ ಆಶಯ ಎನ್ನುತ್ತಿದ್ದ ಜೆಡಿಎಸ್ ನಾಯಕರು ಏಕೆ ಈ ರೀತಿ ಮಾಡಿದ್ದೀರಿ ಎಂದು ಸುಧಾಕರ್ ಪ್ರಶ್ನಿಸಿದರು.
ಗಂಡ ಹೆಂಡತಿನ ನಂಬಲಿಲ್ಲ, ಹೆಂಡತಿ ಗಂಡನನ್ನು ನಂಬಲಿಲ್ಲ. ಇದೇ ರೀತಿ ಸಮ್ಮಿಶ್ರ ಸರ್ಕಾರ ನಡೆಸಿದರು. ಆದರೆ ಹೊರಗಡೆ ಹೆಗಲ ಮೇಲೆ ಕೈ ಹಾಕಿಕೊಂಡು ಓಡಾಡುತ್ತಿದ್ದರು. ಆದರೆ ಕೊಠಡಿಯ ಒಳ ಹೋದ ಮೇಲೆ ಬೈದು ಕೊಳ್ಳುತ್ತಿದ್ದರು ಎಂದು ಸಮ್ಮಿಶ್ರ ಸರ್ಕಾರದ ನಡೆ ಬಗ್ಗೆ ಟೀಕಿಸಿದರು. ಇದೇ ವೇಳೆ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿತ ಅಭ್ಯರ್ಥಿಗಳಿಗೂ ಟಾಂಗ್ ನೀಡಿ, ಒಬ್ಬ ರೌಡಿ ಶೀಟರ್, ಮತ್ತೊಬ್ಬ ಸಾರಾಯಿ ಮಾರುವವ. ಇಬ್ರು ಎಂಎಲ್‍ಎ ಆಗಬೇಕಂತೆ ಹುಷಾರಾಗಿರಿ ಎಂದು ಜನರಿಗೆ ಕರೆ ನೀಡಿದರು.
ನವದೆಹಲಿ: ಬಿಜೆಪಿ ರಾಷ್ಟ್ರಧ್ಯಕ್ಷ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಯಾರು ಅಂತ ನನಗೆ ಗೊತ್ತೇ ಇಲ್ಲ. ನಾವು ಅಮಿತ್ ಶಾ ಅವರನ್ನ ಭೇಟಿ ಮಾಡುವುದಕ್ಕೆ ಹೋಗುತ್ತಿಲ್ಲ ಎಂದು ಅನರ್ಹ ಶಾಸಕ ಡಾ. ಸುಧಾಕರ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ನಾವು ದೆಹಲಿಗೆ ಹೋಗುತ್ತಿರುವುದು ಕೋರ್ಟ್ ಗೆ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಮಾತ್ರ. ಬಿಜೆಪಿ ನಾಯಕರನ್ನು ಭೇಟಿ ಮಾಡುವುದಕ್ಕಲ್ಲ. ನಾನು ಶುಕ್ರವಾರ ದೆಹಲಿಗೆ ಹೋಗಿ ನಮ್ಮ ಸ್ನೇಹಿತರ ಜೊತೆ ಸೇರಿಕೊಳ್ಳುತ್ತೇನೆ. ಶನಿವಾರ ವಕೀಲರ ಜೊತೆ ಅರ್ಜಿ ವಿಚಾರವಾಗಿ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬೇಡ, ಬೇರೆ ಯಾರಾದರೂ ಸರ್ಕಾರ ರಚಿಸಲಿ ಅಂತ ನಾವು ರಾಜೀನಾಮೆ ನೀಡಿದ್ದೇವೆ. ನಾನು ಪಕ್ಷದ ಬಗ್ಗೆ ಯಾವತ್ತೂ ಮಾತನಾಡಿಲ್ಲ. ಆದರೂ ನನ್ನನ್ನು ಅನರ್ಹಗೊಳಿಸಿದ್ದಾರೆ. ಈ ವಿಚಾರವಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದೇನೆ. ಸುಪ್ರೀಂ ತೀರ್ಪು ಏನು ಬರುತ್ತೆ ಅಂತ ಕಾದು ನೋಡುಬೇಕಿದೆ ಎಂದರು.
ಬಿಜೆಪಿಯಲ್ಲಿ ಸಚಿವ ಸ್ಥಾನಕ್ಕೆ ಉಂಟಾಗಿರುವ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯೆ ನೀಡಿದರ ಅವರು, ಅಸಮಾಧಾನ ಎಲ್ಲಿಲ್ಲ ಹೇಳಿ. ಎಲ್ಲಾ ಕ್ಷೇತ್ರದಲ್ಲಿಯೂ ಅಸಮಾಧಾನ ಇರುತ್ತೆ. ಅದು ಹೇಗೆ ಪರಿಣಾಮ ಬೀರುತ್ತೆ ಎನ್ನುವುದು ಮುಖ್ಯ ಎಂದು ಹೇಳಿದರು.
ಮಾಜಿ ಸಿಎಂ ಕುಮಾರಸ್ವಾಮಿ ಅವರು ಕಾಂಗ್ರೆಸ್ ಮುಖಂಡರ ಕಿರುಕುಳದಿಂದ ನಿತ್ಯ ಕಣ್ಣೀರು ಹಾಕುತ್ತಿದ್ದರು ಅಂತ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಆರೋಪಿಸಿದ್ದಾರೆ. ಅವರು ಮಾಜಿ ಪ್ರಧಾನಿಗಳು, ಹಿರಿಯರು, ಅವರ ಹೇಳಿಕೆ ಬಗ್ಗೆ ಏನು ಉತ್ತರ ಕೊಡುವುದಿಲ್ಲ. ದೇವೇಗೌಡ ಅವರು ಆರೋಪ ಮಾಡುತ್ತಿರುವುದು ಸಿಎಲ್‍ಪಿ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮೇಲೆ. ಈ ಆರೋಪಕ್ಕೆ ಸಿದ್ದರಾಮಯ್ಯನವರೇ ಉತ್ತರ ಕೊಟ್ಟರೆ ಉತ್ತಮ ಎಂದರು.
ಬೆಂಗಳೂರು: ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನದಿಂದ ರಾಜೀನಾಮೆ ನೀಡಿರುವ ಸಚಿವ ಎಂಟಿಬಿ ನಾಗರಾಜ್ ಅವರ ಮನವೊಲಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಅವರು ವಿಫಲರಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇಂದು ಬೆಳಗ್ಗೆ ಸಚಿವ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಸಂಧಾನಕ್ಕೆ ಪ್ರಯತ್ನ ನಡೆಸಿದ್ದರು. ಆ ಬಳಿಕ ಸಿದ್ದರಾಮಯ್ಯ ನಿವಾಸಕ್ಕೆ ಎಂಟಿಬಿ ನಾಗರಾಜ್ ಆಗಮಿಸಿದ್ದರು.
ಸಿದ್ದರಾಮಯ್ಯ ನಿವಾಸಕ್ಕೆ ಒಂದೇ ಕಾರಿನಲ್ಲಿ ಬಂದ ಡಿಸಿಎಂ ಪರಮೇಶ್ವರ್, ಸಚಿವ ಡಿ.ಕೆ ಶಿವಕುಮಾರ್ ಹಾಗೂ ಎಂಟಿಬಿ ನಾಗರಾಜ್ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರ ಮನವೊಲಿಕೆ ಮಾಡಲು ಸುಮಾರು 3 ಗಂಟೆಗಳ ಕಾಲ ಚರ್ಚೆ ನಡೆಸಿದ್ದರು. ಆದರೆ ಈಗಲೂ ಸಿದ್ದರಾಮಯ್ಯ ಅವರೇ ನಮ್ಮ ನಾಯಕರು ಎನ್ನುತ್ತಿರುವ ಎಂಟಿಬಿ ನಾಗರಾಜ್, ಸಂಪೂರ್ಣವಾಗಿ ಸಿದ್ದರಾಮಯ್ಯ ಅವರ ಮಾತಿಗೆ ಒಪ್ಪಿಗೆ ಸೂಚಿಸದೆ ತೆರಳಿದ್ದಾರೆ. ನನ್ನೊಂದಿಗೆ ರಾಜೀನಾಮೆ ನೀಡಿರುವ ಇತರೆ ಶಾಸಕರ ಅಭಿಪ್ರಾಯವೂ ಪಡೆಯಬೇಕು ಎಂದು ಎಂಟಿಬಿ ತಿಳಿಸಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ. ಈ ಮೂಲಕ ಎಂಟಿಬಿ ನಾಗರಾಜ್ ಅವರು ಮತ್ತೊಮ್ಮೆ ಅಡ್ಡಗೋಡೆ ದೀಪ ಇಟ್ಟಂತೆ ಕಾಣುತ್ತಿದೆ.
ಎಂಟಿಬಿ ನಾಗರಾಜ್ ಅವರು ಸಿದ್ದರಾಮಯ್ಯ ನಿವಾಸಕ್ಕೆ ಬರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ಜಮೀರ್ ಅಹಮದ್ ಕೂಡ ಆಗಮಿಸಿದ್ದರು. ಎಂಟಿಬಿ ನಾಗರಾಜ್ ಅವರೊಂದಿಗೆ ಆಗಮಿಸಿದ್ದ ಡಿಕೆಶಿ ಅಲ್ಲಿಂದ ನೇರವಾಗಿ ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್ ನಿವಾಸಕ್ಕೆ ತೆರಳಿದ್ದರು. ಆದರೆ ಸುಧಾಕರ್ ಅವರು ಮನೆಯಲ್ಲಿ ಇರಲಿಲ್ಲ. ಈ ಮೂಲಕ ಇಬ್ಬರು ಶಾಸಕರನ್ನು ಸಿದ್ದರಾಮಯ್ಯ ಅವರ ಮನೆಗೆ ಕರೆತಂದು ಸಂಧಾನ ಮಾಡವ ಅವರ ಪ್ರಯತ್ನ ಫಲ ನೀಡಿಲ್ಲ. ಇಂದು ಬೆಳಗ್ಗೆ ಶಾಸಕ ಸುಧಾಕರ್ ಅವರು ತಮ್ಮ ನಿವಾಸದಿಂದ ಹೊರಗೆ ತೆರಳಿದ್ದ ಕಾರಣ ಡಿಕೆ ಶಿವಕುಮಾರ್ ಅವರ ಭೇಟಿ ಸಾಧ್ಯವಾಗಿಲ್ಲ. ಇತ್ತ ಫೋನ್ ಮೂಲಕ ಸಂಪರ್ಕ ಮಾಡುವ ಪ್ರಯತ್ನವೂ ವಿಫಲವಾಗಿದೆ ಎನ್ನಲಾಗಿದೆ.
Veteran leaders like MTB Nagaraj are integral part of our Congress family. Differences & discontentments arise naturally within families but they are also sorted out within the family itself. I'm confident he and other MLAs will reconsider their resignations & back our government
— Dr. G Parameshwara (@DrParameshwara) July 13, 2019
ಇದಕ್ಕೂ ಮುನ್ನ ಮಾತನಾಡಿದ ದಿನೇಶ್ ಗುಂಡೂರಾವ್ ಅವರು, ವಿಶ್ವಾಸ ಮತವನ್ನು ಹೇಗೆ ಸಾಬೀತು ಮಾಡುತ್ತೇವೆ ಎಂಬುದನ್ನು ನೋಡುತ್ತಾ ಇರಿ. ಈಗ ಎಂಟಿಬಿ ನಾಗರಾಜ್, ಸುಧಾಕರ್ ಎಲ್ಲಾ ಸಿದ್ದರಾಮಯ್ಯ ಮನೆಗೆ ಬರುತ್ತಾರೆ. ಎಷ್ಟು ಜನ ವಾಪಸ್ ಬರುತ್ತಾರೆ ಎಂಬುದು ಗೊತ್ತಾಗಲಿದೆ ಎಂದು ಆತ್ಮ ವಿಶ್ವಾಸ ವ್ಯಕ್ತಪಡಿಸಿದ್ದರು. ಅಲ್ಲದೆ ಡಿಕೆ ಶಿವಕುಮಾರ್ ಮಾತನಾಡಿ, ಎಂಟಿಬಿ ಮನವೊಲಿಸಿದ್ದೇವೆ ಎಂದು ಹೇಳಿದ್ದರು.
ಬೆಂಗಳೂರು: ಮೈತ್ರಿ ಸರ್ಕಾರದ ನಾಯಕತ್ವದಲ್ಲಿ ಅಸಮಾಧಾನ ವ್ಯಕ್ತಪಡಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸಚಿವ ಎಂಟಿಬಿ ನಾಗರಾಜ್ ಅವರ ಮನವೊಲಿಕೆ ಬಹುತೇಕ ಯಶಸ್ವಿಯಾಗಿದೆ. ಆದರೆ ಈ ಸಂದರ್ಭದಲ್ಲಿ ಎಂಟಿಬಿ ಅವರು ಕೆಲ ಷರತ್ತುಗಳನ್ನು ಹಾಕಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಎಂಟಿಬಿ ನಿವಾಸದ ಬಳಿ ಮಾತನಾಡಿದ ಸಚಿವ ಡಿಕೆ ಶಿವಕುಮಾರ್, ಕಳೆದ 30 ವರ್ಷಗಳಿಂದ ಎಂಟಿಬಿ ನಾಗರಾಜ್ ಸೇರಿದಂತೆ ನಮ್ಮ ನಾಯಕರು ಪಕ್ಷದ ಸಂಘಟನೆಯನ್ನು ಮಾಡಿದ್ದಾರೆ. ಆದರೆ ಇಂದು ಕೆಲ ಸಣ್ಣ ಸಮಸ್ಯೆಗಳ ಕಾರಣದಿಂದ ಅಸಮಾಧಾನಗೊಂಡಿದ್ದಾರೆ. ಅವರ ಅಸಮಾಧಾನ ಬಗೆಹರಿಸಲು ಡಿಸಿಎಂ ಪರಮೇಶ್ವರ್ ಸೇರಿದಂತೆ ನಾವು ಒಟ್ಟಿಗೆ ಜವಾಬ್ದಾರಿಗಳನ್ನು ತೆಗೆದುಕೊಂಡಿದ್ದೇವೆ ಎಂದರು.
ಎಂಟಿಬಿ ನಾಗರಾಜ್ ಅವರು ನಮ್ಮ ಮನವೊಲಿಕೆಗೆ ಬಹುತೇಕ ಒಪ್ಪಿಗೆ ಸೂಚಿಸಿದ್ದಾರೆ. ಅಲ್ಲದೆ ಇತರೆ ಅಸಮಾಧಾನಿತ ಶಾಸಕರ ಮನವೊಲಿಕೆಗೂ ಮುಂದಾಗಲಿದ್ದಾರೆ. ಇದ್ದರೆ ಒಟ್ಟಿಗೆ ಇರೋಣ, ಒಟ್ಟಿಗೆ ಸಾಯೋಣ ಎಂಬ ಚರ್ಚೆ ಮಾಡಿದ್ದೇವೆ. ಇದಕ್ಕೆ ಅವರು ಕೂಡ ಸಮ್ಮತಿ ಸೂಚಿಸಿದ್ದಾರೆ. ಪಕ್ಷದಲ್ಲೇ ಅವರು ಉಳಿಯಲಿದ್ದಾರೆ ಎಂಬ ನಂಬಿಕೆ ಇದೆ ಎಂದರು.
ಇದಕ್ಕೂ ಮುನ್ನ ಮಾತನಾಡಿದ ಎಂಟಿಬಿ ನಾಗರಾಜ್, ಪಕ್ಷದ ನಾಯಕರಿಗೆ ಅಭಿಮಾನ ಪೂರ್ವಕವಾಗಿ ಸ್ವಾಗತ ಬಯಸಿದ್ದೇನೆ. ನಾನು ಅವರ ಮಾರ್ಗದರ್ಶನದಲ್ಲಿ ರಾಜಕೀಯವಾಗಿ ಬೆಳೆದು ಬಂದವನು. ಆದ್ದರಿಂದ ಕಾಂಗ್ರೆಸ್ ನಲ್ಲಿಯೇ ಉಳಿಯಬೇಕು ಎಂದು ಸಿದ್ದರಾಮಯ್ಯ ಅವರು ಸೇರಿದಂತೆ ಪಕ್ಷದ ಎಲ್ಲಾ ನಾಯಕರು ಮನವೊಲಿಕೆ ಮಾಡಿದ್ದಾರೆ. ನಾನು, ಶಾಸಕ ಸುಧಾಕರ್ ಸೇರಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆ. ಈ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಸಮಯಾವಕಾಶ ಕೇಳಿದ್ದೇನೆ. ಸುಧಾಕರ್ ಸೇರಿದಂತೆ ಎಲ್ಲರೂ ಇಲ್ಲೇ ಉಳಿಯುವ ಪ್ರಯತ್ನ ಮಾಡುತ್ತೇವೆ ಎಂದರು.
ಎಂಟಿಬಿ ನಾಗರಾಜ್ ಮನವೊಲಿಕೆಗೆ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಡಿ.ಕೆ ಶಿವಕುಮಾರ್ ಅವರ ನಿವಾಸಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರನ್ನು ಸಿಎಂ ಮಾಡುವ ಬೇಡಿಕೆಯನ್ನ ನಾಗರಾಜ್ ಅವರು ಇಟ್ಟಿದ್ದಾರೆ ಎನ್ನಲಾಗಿದೆ. ಅಲ್ಲದೆ ಈ ಹಿಂದೆ ಸಮಸ್ಯೆಗಳ ಬಗ್ಗೆ ಬಂದು ಹೇಳಿದಾಗ ಒಬ್ಬರೂ ಕಿವಿಗೆ ಹಾಕಿ ಕೊಳ್ಳಲಿಲ್ಲ. ಈಗ ಬಂದು ಕಥೆ ಹೇಳುತ್ತೀರಾ ಎಂದು ಎಂಟಿಬಿ ನಾಗರಾಜ್ ಅವರು ಗರಂ ಆಗಿದ್ದರು.
ನನಗೆ ಜೀವನದಲ್ಲಿ ಒಂದು ಬಾರಿ ಸಚಿವನಾಗಬೇಕು ಎಂಬ ಆಸೆ ಇತ್ತು. ಸಚಿವನಾಗಿದ್ದೇನೆ ಸಾಕು. ಬಿಜೆಪಿಗೆ ಹೋಗಬೇಕು ಮತ್ತೆ ಸಚಿವನಾಗಬೇಕು ಎಂಬ ಆಸೆ ಇಲ್ಲ. ಆದರೆ ಯಾರಿಗೆ ಪ್ರಯೋಜನ, ನೆಮ್ಮದಿ ಕೊಡದ ಈ ಸರ್ಕಾರ ಬೇಡ ಅಷ್ಟೇ ಎಂದು ಖಡಕ್ ಆಗಿ ಹೇಳಿದ್ದರು ಎನ್ನಲಾಗಿತ್ತು. ಆದರೆ ಡಿಕೆ ಶಿವಕುಮಾರ್ ಬಳಿಕ ಕಾಂಗ್ರೆಸ್‍ನ ಎಲ್ಲಾ ನಾಯಕರು ಎಂಟಿಬಿ ನಾಗರಾಜ್ ಅವರ ಮನವೊಲಿಕೆ ಅಲ್ಪಮಟ್ಟಿಗೆ ಯಶಸ್ಸು ಕಂಡಿದ್ದಾರೆ ಎನ್ನಲಾಗಿದೆ.
ಚಿಕ್ಕಬಳ್ಳಾಪುರ: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಮಾತಿಗೆ ಇಲ್ಲಿ ಬೆಲೆ ಇಲ್ಲ. ರಾಹುಲ್ ಗಾಂಧಿಗೆ ಬೆಲೆ ಇದ್ದಿದ್ದರೆ ನನಗೆ ಸಚಿವ ಸ್ಥಾನ ಸಿಗಬೇಕಾಗಿತ್ತು ಎಂದು ಶಾಸಕ ಡಾ. ಸುಧಾಕರ್ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಸಚಿವ ಸ್ಥಾನ ನೀಡುವುದಾಗಿ ಈ ಹಿಂದೆ ರಾಹುಲ್ ಗಾಂಧಿ ಅವರೇ ಭರವಸೆ ನೀಡಿದ್ದರು. ಆದರೆ ಇದೀಗ ಅದು ನೆರವೇರಲಿಲ್ಲ. ಪಕ್ಷದಲ್ಲಿ ರಾಹುಲ್ ಗಾಂಧಿ ಅವರ ಮಾತಿಗೆ ಬೆಲೆ ಇಲ್ಲ. ಬೆಲೆ ಇದ್ದಿದ್ದರೆ ಈ ಹಿಂದೆ ಅವರು ಭರವಸೆ ನೀಡಿದಾಗಲೇ ನನಗೆ ಸಚಿವ ಸ್ಥಾನ ಕೊಡಿಸುತ್ತಿದ್ದರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಂಪುಟ ವಿಸ್ತರಣೆಯಲ್ಲಿ ಯಾರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ನನ್ನ ಗಮನಕ್ಕೆ ಬಂದಿಲ್ಲ. ಇನ್ನು ಮುಂದೆ ನಾನು ಯಾವ ಮುಖಂಡರನ್ನೂ ಭೇಟಿ ಮಾಡುವುದಿಲ್ಲ. ಅದರ ಅಗತ್ಯವೂ ನನಗಿಲ್ಲ. ಈ ಹಿಂದೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನವನ್ನು ಹಿಂಪಡೆದಿದ್ದರು. ಮತ್ತೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನ ನೀಡುತ್ತಾರೆ ಎಂಬ ಕುರಿತು ಮಾಹಿತಿ ಇಲ್ಲ. ಆದರೆ, ನಾನು ಆ ಹುದ್ದೆಗೆ ಅರ್ಹನಾಗಿದ್ದೇನೆ ಎಂದು ಸುಧಾಕರ್ ತಿಳಿಸಿದರು.
ಇದೇ ವೇಳೆ ಮಧ್ಯಂತರ ಚುನಾವಣೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಧ್ಯಂತರ ಚುನಾವಣೆಗೆ ಯಾರು ಸಿದ್ಧರಿದ್ದಾರೆ. ಲೋಕಸಭೆಯಲ್ಲಿ ಹೀನಾಯವಾಗಿ ಸೋತ ಮೇಲೂ ಗೆಲ್ಲುವ ಭರವಸೆ ಎಳ್ಳಷ್ಟೂ ಇಲ್ಲ. ಕೋಳಿವಾಡ ಹಿರಿಯರು ಅದ್ಯಾವ ನೆಲೆಗಟ್ಟಿನಲ್ಲಿ ಈ ಮಾತು ಹೇಳಿದ್ದಾರೆಯೋ ಗೊತ್ತಿಲ್ಲ ಎಂದರು.
ಕಾಂಗ್ರೆಸ್ ಪಕ್ಷ ಸದ್ಯದ ಪರಿಸ್ಥಿತಿಯಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೆ ಹೋಗೋದೆಲ್ಲ ಸಾಧ್ಯವೇ ಇಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಚಿಕ್ಕಬಳ್ಳಾಪುರ: ಮುಂಬೈಗೆ ಹಾರಿದ್ದ ಶಾಸಕ ಡಾ. ಸುಧಾಕರ್ ಅವರು ಇಂದು ಬೆಳ್ಳಂಬೆಳಗ್ಗೆ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.
ಇಂದು ಬೆಳಗ್ಗೆ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರು ಮಾಧ್ಯಮಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಅಲ್ಲದೆ ನೀವೇ ಎಲ್ಲ ಹಾಕ್ಕೊಟ್ಟಿದ್ದು ಎಂದು ಬೇಸರ ವ್ಯಕ್ತಪಡಿಸಿ ಬೆಂಗ್ಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ.
ಅಸಮಾಧಾನಿತರ ಪಟ್ಟಿಯಲ್ಲಿ ಡಾ. ಸುಧಾಕರರ್ ಅವರು ಕೂಡ ಇದ್ದು, ಎರಡು ದಿನದಿಂದ ಸದನಕ್ಕೆ ಹಾಜರಾಗಿರಲಿಲ್ಲ. ನಿನ್ನೆ ಮುಂಬೈಗೆ ತೆರಳಿದ್ದ ಅವರು ಇಂದು ಬೆಳಗ್ಗೆ ದಿಢೀರ್ ಎಂದು ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಬಳಿಕ ಬೆಂಗಳೂರಿಗೆ ವಾಪಸ್ಸಾಗಿದ್ದು, ಇದೀಗ ಸುಧಾಕರ್ ನಡೆ ತೀವ್ರ ಅನುಮಾನಕ್ಕೀಡು ಮಾಡಿದೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ಭಾಗಿಯಾಗಲಿದ್ದಾರೆ. ಈ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಖಡಕ್ ಸೂಚನೆಯಿಂದ ಹೆದರಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ ಎನ್ನಲಾಗಿದೆ.
ಇತ್ತ ರಾಯಚೂರು ಗ್ರಾಮಾಂತರ ಶಾಸಕ ಬಸವನಗೌಡ ದದ್ದಲ್‍ಗೆ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಠ ಪಂಗಡಗಳ ಅಭಿವೃದ್ಧಿ ನಿಗಮ ನೀಡಿ ಆದೇಶ ಹೊರಡಿಸಿದ್ದಾರೆ. ಪ್ರತಾಪ್‍ಗೌಡ ಹಾಗೂ ಬಸವನಗೌಡ ಈ ಇಬ್ಬರೂ ಶಾಸಕರು ಬಿಜೆಪಿ ಕಡೆಗೆ ವಾಲುವ ಅನುಮಾನ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಇಬ್ಬರಿಗೂ ಸಂಪುಟ ದರ್ಜೆ ಸ್ಥಾನಮಾನ ನೀಡಿದ್ದಾರೆ. ಆದರೆ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಡಾ.ಸುಧಾಕರ್‍ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಇನ್ನೂ ಮರೀಚಿಕೆಯಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನದ ಬಗ್ಗೆ ಇನ್ನೂ ಸಸ್ಪೆನ್ಸ್ ಇರಿಸಿದ್ದು, ಸುಧಾಕರ್ ನಡೆ ಕುತೂಹಲ ಮೂಡಿಸಿದೆ.