Tag: dr. Paramesh

  • Loksabha Election: ಮಾಧುಸ್ವಾಮಿ ಬಳಿಕ ಮತ್ತೊಬ್ಬರಿಂದ ಸೋಮಣ್ಣ ಸ್ಪರ್ಧೆಗೆ ವಿರೋಧ!

    Loksabha Election: ಮಾಧುಸ್ವಾಮಿ ಬಳಿಕ ಮತ್ತೊಬ್ಬರಿಂದ ಸೋಮಣ್ಣ ಸ್ಪರ್ಧೆಗೆ ವಿರೋಧ!

    ತುಮಕೂರು: ಇಲ್ಲಿನ ಲೋಕಸಭಾ ಬಿಜೆಪಿ ಟಿಕೆಟ್ ಸಿಕ್ಕೇ ಬಿಡ್ತು ಎಂದು ಈಗಾಗಲೇ ಕ್ಷೇತ್ರ ಸಂಚಾರದಲ್ಲಿದ್ದ ವಿ.ಸೋಮಣ್ಣಗೆ (V Somanna) ಇನ್ನೊಂದು ತಡೆಗೋಡೆ ಎದುರಾಗಿದೆ. ಮಾಜಿ ಸಚಿವ ಮಾಧುಸ್ವಾಮಿ (Madhuswamy) ಬಳಿಕ ಇದೀಗ ಸ್ಥಳೀಯ ಪ್ರಭಾವಿ ಮುಖಂಡ ಮತ್ತೊಂದು ದಾಳ ಉರುಳಿಸಿದ್ದಾರೆ.

    ಹೌದು. ಸಿದ್ದಗಂಗಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರು, ಲಿಂಗಾಯತ ಸಮುದಾಯದ ಪ್ರಭಾವಿ ಮುಖಂಡ ಡಾ.ಪರಮೇಶ್ ಟಿಕೆಟ್‍ಗಾಗಿ ದೆಹಲಿ ಮಟ್ಟದಲ್ಲಿ ಲಾಬಿ ಶುರುಮಾಡಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಟಿಕೆಟ್ ಆಕಾಂಕ್ಷಿ ಡಾ.ಪರಮೇಶ್, ಸೋಮಣ್ಣಗೆ ಟಕೆಟ್ ಸಿಗಲ್ಲ.. ಹೈಕಮಾಂಡ್‍ಗೆ ಕಳುಹಿಸಿದ್ದ ನಾಲ್ವರ ಹೆಸರಲ್ಲಿ ನನ್ನ ಹೆಸರು ಮೊದಲಿದೆ ಎಂದು ಬಾಂಬ್ ಸಿಡಿಸಿದ್ದಾರೆ. ಅಲ್ಲದೇ ಹೊರಗಿನವರಿಗೆ ಟಿಕೆಟ್ ಕೊಡಬಾರದು ಎಂದು ಹೈಕಮಾಂಡ್‍ಗೆ ಪತ್ರ ಬರೆದಿದ್ದೇವೆ ಎಂದು ಡಾ.ಪರಮೇಶ್ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

    ಡಾ.ಪರಮೇಶ್‍ರವರ ತೀಕ್ಷ್ಣ ಮಾತುಗಳು ವಿ.ಸೋಮಣ್ಣರಿಗೆ ಕೊಂಚ ಗಲಿಬಿಲಿ ಮಾಡಿಸಿದೆ. ನಾನ್ಯಾಕೆ ವಲಸಿಗನಾಗ್ತೀನಿ, ಮೋದಿ ಅವರ ಕ್ಷೇತ್ರ ಗುಜರಾತ್ ಆದರೂ ವಾರಣಾಸಿಯಿಂದ ಸ್ಪರ್ಧೆ ಮಾಡಿಲ್ಲವೇ ಎಂದು ಪ್ರಶ್ನೆ ಹಾಕಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೋವಿಂದರಾಜು ನಗರ ಕ್ಷೇತ್ರದಲ್ಲಿ (Govindrajanagar Constituency) ನನಗೆ ಟಿಕೆಟ್ ಕೊಟ್ಟರೆ ನಾನ್ಯಾಕೆ ತುಮಕೂರಿಗೆ ಬರುತ್ತಿದ್ದೆ ಎಂದು ಮರು ಪ್ರಶ್ನೆ ಹಾಕಿದ್ದಾರೆ. ಇದನ್ನೂ ಓದಿ: ಹಾಸನ ಕ್ಷೇತ್ರದಲ್ಲಿ ಪ್ರಜ್ವಲ್ ರೇವಣ್ಣ ಫುಲ್ ಆಕ್ಟೀವ್- ದಿಶಾ ಸಭೆಯಲ್ಲಿ ಸಂಸದ ಕ್ಷಮೆ

    ಒಟ್ಟಾರೆ ಜಿಲ್ಲೆಯ ಪ್ರಬಲ ಸಮುದಾಯಗಳಾದ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳ ಮತ ಬೇಟೆ ಆರಂಭಿಸಿದ್ದ ಸೋಮಣ್ಣಗೆ ಡಾ.ಪರಮೇಶ್ ಕೊಂಚ ಶಾಕ್ ಕೊಟ್ಟಿರೋದು ಸುಳ್ಳಲ್ಲ.

  • ಗುರುವಾರದಿಂದ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಏನೆಲ್ಲ ಬದಲಾವಣೆ ಆಯ್ತು – ವೈದ್ಯ ಪರಮೇಶ್ ಹೇಳ್ತಾರೆ ಓದಿ

    ಗುರುವಾರದಿಂದ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಏನೆಲ್ಲ ಬದಲಾವಣೆ ಆಯ್ತು – ವೈದ್ಯ ಪರಮೇಶ್ ಹೇಳ್ತಾರೆ ಓದಿ

    – ಶನಿವಾರ ಮಧ್ಯಾಹ್ನದಿಂದ ಕಿಡ್ನಿಯಲ್ಲಿ ತೊಂದರೆ
    – ಸೋಮವಾರ ಕಿರಿಯ ಶ್ರೀಗಳನ್ನು 30 ಸೆಕೆಂಡ್ ದಿಟ್ಟಿಸಿ ನೋಡಿದ್ರು
    – ಆಸ್ಪತ್ರೆ ಹೇಗಿದೆ? ಹೇಗೆ ನಡೆಯುತ್ತಿದೆ? – ಪ್ರಶ್ನಿಸಿದ್ದ ಶ್ರೀಗಳು

    ಬೆಂಗಳೂರು: ಸುದೀರ್ಘ ಕಾಲದವರೆಗೂ ಸಿದ್ದಗಂಗಾ ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿದ್ದ ಡಾ.ಪರಮೇಶ್ ಅವರು, ಗುರುವಾರದಿಂದ ಭಾನುವಾರದವರೆಗೆ ಶ್ರೀಗಳ ಆರೋಗ್ಯದಲ್ಲಾದ ಬದಲಾವಣೆಗಳ ಕುರಿತು ಪಬ್ಲಿಕ್ ಟಿವಿಗೆ ವಿವರಣೆ ನೀಡಿದ್ದಾರೆ.

    ಬಿಗ್ ಬುಲೆಟಿನ್ ನಲ್ಲಿ ಮಾತನಾಡಿದ ಅವರು, ಶ್ರೀಗಳ ದೇಹದಲ್ಲಿ ಪ್ರೊಟೀನ್ ಅಂಶ ಉತ್ಪಾದನೆ ನಿಂತು ಹೋಗಿತ್ತು. ಶನಿವಾರ ಮಧ್ಯಾಹ್ನದಿಂದ ಶ್ರೀಗಳ ದೇಹದಲ್ಲಿ ಬಿಪಿ, ಪಲ್ಸ್ ರೇಟ್ ಕಡಿಮೆಯಾಗತೊಡಗಿತು. ಕಿಡ್ನಿ ಸರಿಯಾಗಿ ಕೆಲಸ ಮಾಡುವುದಿಲ್ಲ ಎನ್ನುವುದು ಗೊತ್ತಾಯಿತು. ಈ ಸಂದರ್ಭದಲ್ಲಿ ಗುರುಗಳನ್ನು ಮಠದಿಂದ ಆಸ್ಪತ್ರೆಗೆ ಶಿಫ್ಟ್ ಮಾಡಿದರೆ ಹೇಗೆ ಎನ್ನುವ ಪ್ರಶ್ನೆ ವೈದ್ಯರಲ್ಲಿ ಬಂತು. ಆದರೆ ಡಯಾಲಿಸಿಸ್ ಮಾಡಿದರೆ ಶ್ರೀಗಳಿಗೆ ನಾವು ಮತ್ತಷ್ಟು ನೋವು ನೀಡಿದಂತೆ ಆಗುತ್ತದೆ. ಮತ್ತಷ್ಟು ಕಷ್ಟ ನೀಡುವುದು ಸರಿಯಲ್ಲ ಎನ್ನುವ ತೀರ್ಮಾನಕ್ಕೆ ಬಂದೆವು. ನಾವು ಪ್ರಯತ್ನ ನಡೆಸಿದರೂ ಕಿಡ್ನಿ ಸಾಮಾನ್ಯ ಸ್ಥಿತಿಗೆ ಬರಲಿಲ್ಲ. ಇದು ಶ್ರೀಗಳ ಶಿವೈಕ್ಯದ ಮುನ್ಸೂಚನೆ ಎನ್ನುವುದನ್ನು ನಾವು ಅರಿತೆವು ಎಂದು ಹೇಳಿದರು. ಇದನ್ನೂ ಓದಿ:ನಡೆದಾಡುವ ದೇವರ ಅಂತಿಮ ದರ್ಶನಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ

    111 ವರ್ಷದಲ್ಲೂ ಸ್ವಾಮೀಜಿಗಳು ಈ ಎಲ್ಲ ಚಿಕಿತ್ಸೆಗೆ ಹೇಗೆ ಸ್ಪಂದನೆ ನೀಡುತ್ತಿದ್ದರು ಎನ್ನುವ ಪ್ರಶ್ನೆಗೆ, ನಾನು ಡಿಸೆಂಬರ್ 1 ರಿಂದ ದಿನವೂ ಹತ್ತಿರ 20 ಗಂಟೆ ಸ್ವಾಮೀಜಿಗಳ ಜೊತೆಯಲ್ಲೇ ಇರುತ್ತಿದ್ದೆ. ಅವರನ್ನು ಬಹಳ ವರ್ಷದಿಂದ ಹತ್ತಿರದಿಂದ ನೋಡಿದ್ದೇನೆ. 111 ವರ್ಷ ಬದುಕಿರುವುದು ಪವಾಡವಾದರೆ ಅವರ ದೇಹ ಚಿಕಿತ್ಸೆಗೆ ಸ್ಪಂದಿಸುತ್ತಿದ್ದ ರೀತಿಯೇ ಒಂದು ದೊಡ್ಡ ಪವಾಡ. ಒಮ್ಮೊಮ್ಮೊ ಬಿಪಿ, ಹೃದಯ ಬಡಿತ ಕಡಿಮೆ ಆಗುತ್ತಿದ್ದರೆ, ಒಮ್ಮೆ ದಿಢೀರ್ ಏರಿಕೆಯಾಗುತ್ತಿತ್ತು. 60, 70 ವರ್ಷದವರಿಗೆ ಈ ರೀತಿ ಆದರೆ ಅವರಿಗೆ ಕಾಯಿಲೆಯನ್ನು ತಡೆದುಕೊಳ್ಳಲು ಶಕ್ತಿ ಇರುವುದಿಲ್ಲ. ಆದರೆ ಸ್ವಾಮೀಜಿಯವರ ದೇಹದಲ್ಲಿ 140-150 ಹೃದಯ ಬಡಿತ ಆಗುತ್ತಿತ್ತು. ಆ ರೀತಿ ಹೃದಯ ಬಡಿತ ಜಾಸ್ತಿ ಆದರೆ ವ್ಯಕ್ತಿ ಬದುಕುವುದು ಕಷ್ಟ. ಮತ್ತೆ ನಾವು ಚಿಕಿತ್ಸೆ ನೀಡಿದಾಗ 70-80 ಹೃದಯ ಬಡಿತ ಇಳಿಕೆಯಾಗುತಿತ್ತು. ಇದು ನಮಗೆ ಅಚ್ಚರಿಯಾಗಿತ್ತು. ವೈದ್ಯ ಲೋಕಕ್ಕೆ ಇದೊಂದು ಪವಾಡವೇ ಸರಿ ಎಂದು ಡಾ.ಪರಮೇಶ್ ಹೇಳಿದರು. ಇದನ್ನೂ ಓದಿ: ಶ್ರೀಗಳು ಇಲ್ಲದ ರಾತ್ರಿ ಕಳೆದ ಮಠದ ಮಕ್ಕಳು- ಒಬ್ಬರಿಗೆ ಒಬ್ಬರು ಆಸರೆಯಾಗಿ ಮಲಗಿದ್ರು

    ಚೆನ್ನೈನಲ್ಲಿದ್ದಾಗ ಕಿರಿಯ ಶ್ರೀಗಳಲ್ಲಿ ವಯಸ್ಸು ಎಷ್ಟು ಎಂದು ಕೇಳಿದಾಗ 111 ಅಂದಿದ್ದಕ್ಕೆ ಇದು ಬಹಳ ಆಯ್ತು ಎಂದಿದ್ದರಂತೆ. ಇದು ಶ್ರೀಗಳು ಮಾತನಾಡಿದ ಕೊನೆಯ ಮಾತೇ ಎಂದು ಕೇಳಿದ ಪ್ರಶ್ನೆಗೆ, ನಾವು ಚೆನ್ನೈಯಿಂದ ವಾಪಸ್ ಬಂದಾಗ ಕೂಡ ಅವರು ಮಾತನಾಡಿದ್ದಾರೆ. ಬಳಿಕ ಅಲ್ಲಿಂದ ಅವರನ್ನು ಸಿದ್ದಗಂಗಾ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಆಸ್ಪತ್ರೆ ಹೇಗಿದೆ? ಆಸ್ಪತ್ರೆ ಹೇಗೆ ನಡೆಸುತ್ತಿದ್ದೀರಾ ಎಂದು ಪ್ರಶ್ನಿಸಿದ್ದರು. ಇತ್ತೀಚೆಗೆ ಹಳೆ ಮಠಕ್ಕೆ ಬಂದಾಗ 4-5 ದಿನಗಳಲ್ಲಿ ಅವರು ಬಹಳ ಆಯಾಸಗೊಂಡಿದ್ದರು. ಆಗ ಸ್ವಾಮೀಜಿ ಅವರು ಚೇತರಿಕೆ ಆಗುತ್ತಿಲ್ಲ ಎಂದು ಅನಿಸುತ್ತಿತ್ತು. ಆದರು ನಾವು ಚಿಕಿತ್ಸೆ ನೀಡುತ್ತಿದ್ದೇವು ಎಂದು ವಿವರಿಸಿದರು. ಇದನ್ನೂ ಓದಿ:ಜೀವಿತಾವಧಿಯಲ್ಲಿ 5 ಬಾರಿ ವಿಮಾನ ಪ್ರಯಾಣ – ಸರಳತೆಗೆ ಮತ್ತೊಂದು ಹೆಸರೇ ‘ನಡೆದಾಡುವ ದೇವರು’

    ಭಾನುವಾರ ಸಂಜೆಯಿಂದ ನಮಗೆ ಯಾವುದೇ ಭರವಸೆ ಇರಲಿಲ್ಲ. ಅಚ್ಚರಿ ಏನೆಂದರೆ ಸೋಮವಾರ ಚಿಕ್ಕ ಸ್ವಾಮೀಜಿ ಅವರು ಹಳೆ ಮಠಕ್ಕೆ ಬಂದು ಸ್ವಾಮೀಜಿ ಅವರ ಪಕ್ಕದಲ್ಲಿ ನಿಂತು ಇಷ್ಟಲಿಂಗದ ಪೂಜೆ ಮಾಡಿದ್ದರು. ಎರಡು ದಿನದಿಂದ ಸ್ವಾಮೀಜಿ ಕಣ್ಣು ಬಿಡದೇ ಗಾಢ ನಿದ್ರೆಯಲ್ಲಿದ್ದರು. ಸೋಮವಾರ ಕಿರಿಯ ಸ್ವಾಮೀಜಿ ಪೂಜೆ ಮಾಡಿದ ನಂತರ ಶ್ರೀಗಳು ಕಣ್ಣು ಬಿಟ್ಟು ಕಿರಿಯ ಸ್ವಾಮೀಜಿ ಅವರನ್ನು 30 ಸೆಕೆಂಡ್ ದಿಟ್ಟಿಸಿ ನೋಡುತ್ತಿದ್ದರು. ಅದೇ ಅವರು ಕೊನೆಯದಾಗಿ ಕಣ್ಣು ಬಿಟ್ಟಿದ್ದು, ಆದಾದ ಬಳಿಕ ಅವರು ಕಣ್ಣು ಬಿಡಲೇ ಇಲ್ಲ ಎಂದು ಶ್ರೀಗಳ ಆಪ್ತ ವೈದ್ಯ ಪರಮೇಶ್ ಮಾಹಿತಿ ನೀಡಿದರು.

    https://www.youtube.com/watch?v=mxA9HE4qgJQ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶ್ರೀಗಳ ಆರೋಗ್ಯದ ಕುರಿತು ಭಕ್ತರಲ್ಲಿ ಡಾ. ಪರಮೇಶ್ ಮನವಿ

    ಶ್ರೀಗಳ ಆರೋಗ್ಯದ ಕುರಿತು ಭಕ್ತರಲ್ಲಿ ಡಾ. ಪರಮೇಶ್ ಮನವಿ

    ತುಮಕೂರು: ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ ಆರೋಗ್ಯದಲ್ಲಿ ಬೆಳಗ್ಗಿಗಿಂತ ಈಗ ಸ್ವಲ್ಪ ಮಟ್ಟಿನ ಚೇತರಿಕೆ ಕಂಡುಬಂದಿದ್ದು, ಯಾರೂ ಕೂಡ ಮಠದತ್ತ ಬರಬೇಡಿ ಎಂದು ವೈದ್ಯ ಪರಮೇಶ್ ಅವರು ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಶ್ರೀಗಳ ಆರೋಗ್ಯದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾಮೀಜಿಗಳ ಆರೋಗ್ಯ ಸರಿಯಿಲ್ಲ ಎಂದು ಮಾಧ್ಯಮದ ಮೂಲಕ ತಿಳಿದುಕೊಂಡು ಎಲ್ಲರೂ ಬಂದು ಇಲ್ಲಿ ಇದ್ದುಕೊಂಡು ಅನಾನುಕೂಲ ಮಾಡಿಕೊಳ್ಳಬಾರದು. ಯಾಕಂದ್ರೆ ಇದರಿಂದ ಮಠದ ವ್ಯವಸ್ಥೆಗೂ ಅನಾನುಕೂಲವಾಗುತ್ತದೆ. ಹೀಗಾಗಿ ದಯವಿಟ್ಟು ಯಾರೂ ಮಠಕ್ಕೆ ಬಂದು ಶ್ರೀಗಳ ದರ್ಶನಕ್ಕಾಗಿ ಕಾಯಬೇಡಿ. ಮಠಕ್ಕೆ ದಯಮಾಡಿ ಯಾರೂ ಬರಬೇಡಿ. ಅಂತಹ ಏನಾದ್ರೂ ತೊಂದರೆಗಳಿದ್ದರೆ ನಾವೇ ಮಾಧ್ಯಮದ ಮುಖಾಂತರ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದ್ದಾರೆ.

    ಒಟ್ಟಿನಲ್ಲಿ ಸ್ವಾಮೀಜಿಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಎಲ್ಲಾ ರೀತಿಯಲ್ಲೂ ಪ್ರಯತ್ನ ಪಡುತ್ತಿದ್ದೇವೆ. ಹೀಗಾಗಿ ಭಕ್ತರು ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.

    ಬೆಂಗಳೂರಿನ ಬಿಜಿಎಸ್ ಹಾಗೂ ಕೆಲ ತಜ್ಞ ವೈದ್ಯರನ್ನು ಬರಲು ಹೇಳಿದ್ದೇವೆ. ಈ ಮೂಲಕ ಚಿಕಿತ್ಸೆಗೆ ಸಲಹೆ ಕೊಡುವಂತೆ ಕೇಳಿಕೊಂಡಿದ್ದೇವೆ. ಹೀಗಾಗಿ ಅವರು ಶ್ರೀಘ್ರವೇ ತುಮಕೂರಿಗೆ ಬರಲಿದ್ದಾರೆ. ಇದಕ್ಕಾಗಿ ಸ್ವಲ್ಪ ಸಮಯ ಬೇಕು. ಸ್ವಾಮೀಜಿಗಳ ಆರೋಗ್ಯ ಗಂಭೀರವಾಗಿದ್ದರೂ ನಮ್ಮ ಕೈಲಾದಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಆದ್ರೆ ಸದ್ಯಕ್ಕೆ ಭಕ್ತರು ಆತಂಕ ಪಡುವ ಅವಶ್ಯಕತೆ ಇಲ್ಲ. ಅಂತಹ ಏನಾದ್ರೂ ತೊಂದರೆಗಳಾದರೆ ಚಿಕಿತ್ಸೆಯಲ್ಲಿ ಸರಿಯಾಗಿಲ್ಲ ಅಥವಾ ಸಮಸ್ಯೆಗಳಾದ್ರೆ ಮಾಧ್ಯಮದ ಮೂಲಕ ಎಲ್ಲರಿಗೂ ತಿಳಿಸುತ್ತೇವೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಸ್ವಲ್ಪ ಏರುಪೇರು – ಮಠಕ್ಕೆ ಪೊಲೀಸ್ ಭದ್ರತೆ ಹೆಚ್ಚಳ

    ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಸ್ವಲ್ಪ ಏರುಪೇರು – ಮಠಕ್ಕೆ ಪೊಲೀಸ್ ಭದ್ರತೆ ಹೆಚ್ಚಳ

    ತುಮಕೂರು: ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದ್ದು, ಹಳೆ ಮಠದಲ್ಲೇ ಶ್ರೀಗಳಿಗೆ ಚಿಕಿತ್ಸೆ ಮುಂದುವರಿದಿದೆ.

    ಡಾ.ಪರಮೇಶ್ ನೇತೃತ್ವದ ತಂಡ ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿದ್ದು, ಶ್ರೀಗಳು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಬಗ್ಗೆ ವಿಷಯ ತಿಳಿದು ಮಠಕ್ಕೆ ದೊಡ್ಡ ಪ್ರಮಾಣದ ಭಕ್ತರು ಮತ್ತು ಮಕ್ಕಳು ಆಗಮಿಸುತ್ತಿದ್ದಾರೆ. ಆದ್ದರಿಂದ ಮುಂಜಾಗೃತ ಕ್ರಮವಾಗಿ ಸಿದ್ದಗಂಗಾ ಮಠಕ್ಕೆ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ.

    ಭಕ್ತರು ಶ್ರೀಗಳು ಚಿಕಿತ್ಸೆ ಪಡೆಯುತ್ತಿದ್ದ ಕೋಣೆಯ ಕಿಟಿಕಿಯ ಮೂಲಕ ದರ್ಶನ ಪಡೆದು ಹೋಗುತ್ತಿದ್ದರು. ಬೆಳಗ್ಗಿನ ಜಾವ ಸುಮಾರು 4 ಗಂಟೆಗೆ ಶ್ರೀಗಳಿಗೆ ರಕ್ತದ ಒತ್ತಡ ಮತ್ತು ಉಸಿರಾಟದಲ್ಲಿ ಕೊಂಚ ಏರುಪೇರು ಕಂಡು ಬಂದಿದ್ದು, ತಕ್ಷಣ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಆದರೂ ಮತ್ತೆ ಆರೋಗ್ಯದಲ್ಲಿ ಕೊಂಚ ಏರುಪೇರು ಕಂಡು ಬಂದಿದೆ. ಈಗ ಶ್ರೀಗಳಿಗೆ ಕೃತಕ ಉಸಿರಾಟ ನೀಡಲಾಗುತ್ತಿದೆ. ಆದರೆ ಶ್ರೀಗಳಿಗಳಿಗೆ ನಿಶ್ಯಕ್ತಿ ತುಂಬಾ ಕಡಿಮೆ ಇದ್ದು, ಕಳೆದ ದಿನ ಆರ್ಯುವೇದಿಕ್ ಚಿಕಿತ್ಸೆ ನೀಡಲಾಗಿದೆ. ಈಗ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಮಠಕ್ಕೆ ನಿಯೋಜನೆ ಮಾಡಲಾಗಿದೆ.

    ಕೆಲ ದಿನಗಳ ಹಿಂದೆ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ತಮ್ಮನ್ನು ನೋಡಲು ಬಂದ ಭಕ್ತರನ್ನು ಕಣ್ತೆರೆದು ವೀಕ್ಷಿಸಿದ್ದರು. ಅಷ್ಟೇ ಅಲ್ಲದೆ ಕಿರಿಯ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಶ್ರೀಗಳ ಪಾದ ಸ್ಪರ್ಶಿಸಿ ನಮಸ್ಕರಿಸಿದ ವೇಳೆ ಕಣ್ಣು ತೆರೆದು ಮುಗುಳ್ನಕ್ಕಿದ್ದರು. ಕಿರಿಯ ಶ್ರೀಗಳ ಸಹಾಯದೊಂದಿಗೆ ಇಷ್ಟಲಿಂಗ ಪೂಜೆಯಲ್ಲಿ ನಡೆದಾಡುವ ದೇವರು ಭಾಗಿಯಾಗಿ, ಅವರ ಪಕ್ಕದಲ್ಲೇ ಕುಳಿತು ಕಿರಿಯ ಶ್ರೀಗಳು ಇಷ್ಟಲಿಂಗ ಪೂಜೆ ನೆರವೇರಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪವಾಡ ರೀತಿಯಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ನಡೆದಾಡುವ ದೇವರು

    ಪವಾಡ ರೀತಿಯಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ನಡೆದಾಡುವ ದೇವರು

    ತುಮಕೂರು: ಅನಾರೋಗ್ಯದಿಂದ ಬಳಲುತ್ತಿರುವ ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳಿಗೆ ಸಿದ್ದಗಂಗಾ ಮಠದಲ್ಲೇ ಚಿಕಿತ್ಸೆ ಮುಂದುವರಿಸಲಾಗುತ್ತಿದ್ದು, ಪವಾಡ ರೀತಿಯಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರ ತಂಡ ತಿಳಿಸಿದೆ.

    ಶ್ರೀಗಳಿಗೆ ಸಿದ್ದಗಂಗಾ ಮಠದಲ್ಲಿಯೇ ಚಿಕಿತ್ಸೆ ಮುಂದುವರಿಸಲಾಗಿದ್ದು, ಉಸಿರಾಟದ ತೊಂದರೆ ಇರೋದ್ರಿಂದ ಕೃತಕ ಉಸಿರಾಟದ ವ್ಯವಸ್ಥೆಯನ್ನು ಮಾಡಲಾಗಿದೆ. ಡಾ. ರೇಲಾ, ಬಿಜಿಎಸ್ ಆಸ್ಪತ್ರೆ ವೈದ್ಯರು ಹಾಗೂ ಸಿದ್ದಗಂಗಾ ಆಸ್ಪತ್ರೆ ವೈದ್ಯರು ಶ್ರೀಗಳಿಗೆ ನಿರಂತರ ಚಿಕಿತ್ಸೆ ನೀಡುತ್ತಿದ್ದಾರೆ. ಇಂದು ಕೂಡ ವಿವಿಧ ಗಣ್ಯರು ರಾಜಕೀಯ ಮುಖಂಡರು ಶ್ರೀಗಳ ಭೇಟಿಗೆ ಆಗಮಿಸಿದ್ದಾರೆ. ಡಿಸಿಎಂ ಪರಮೇಶ್ವರ್, ಬಿ.ಎಸ್ ಯಡಿಯೂರಪ್ಪ ಸೇರಿದಂತೆ ವಿವಿಧ ರಾಜಕೀಯ ಪ್ರಮುಖರು ಸಿದ್ದಗಂಗಾ ಮಠಕ್ಕೆ ಆಗಮಿಸಿದ್ದಾರೆ. ಎಂದಿನಂತೆ ಮಠದ ಸುತ್ತಲೂ ಪೊಲೀಸರು ಬಿಗಿ ಭದ್ರತೆಯನ್ನು ಒದಗಿಸಿದ್ದಾರೆ.

    ಶ್ರೀಗಳ ಆಪ್ತ ವೈದ್ಯ ಡಾ.ಪರಮೇಶ್  ಮಾತನಾಡಿ, ಶ್ರೀಗಳ ಆರೋಗ್ಯದಲ್ಲಿ ಯಥಾಸ್ಥಿತಿ ಮುಂದುವರಿದಿದೆ. ಉಸಿರಾಟದ ಸಮಸ್ಯೆ ಹಾಗೆ ಇದೆ. ಶ್ವಾಸಕೋಶದ ಸೋಂಕು, ಕಫದ ಸಮಸ್ಯೆ ಕಡಿಮೆಯಾಗಿದೆ. ಬೆಳಗಿನ ಜಾವ ರಕ್ತ ಪರೀಕ್ಷೆ ಮಾಡಲಾಗಿದ್ದು, ಎಲ್ಲವು ಸರಿಯಾಗಿದೆ. ನಿನ್ನೆ ರಾತ್ರಿ ಶ್ರೀಗಳ ರಕ್ತದೊತ್ತಡದಲ್ಲಿ ತೀವ್ರ ಏರುಪೇರು ಉಂಟಾಗಿತ್ತು. ಹಾಗಾಗಿ ಆತಂಕಗೊಂಡಿದ್ದೇವು. ಸದ್ಯ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ. 2-3 ಗಂಟೆ ನಿದ್ರೆಯಲ್ಲಿ ಇರುತ್ತಾರೆ. ಬಳಿಕ ಆಗ ಆಗಾಗ ಕಣ್ಣು ಬಿಟ್ಟು ನೋಡುತ್ತಿದ್ದಾರೆ. ಇಷ್ಟಲಿಂಗ ಪೂಜೆಯನ್ನು ಶ್ರೀಗಳಿಗೆ ಮಾಡಲಾಗುತ್ತಿಲ್ಲ, ಆದ್ರೆ ಕಿರಿಯ ಶ್ರೀಗಳು ಅವರ ಎದುರಲ್ಲೆ ಪೂಜೆ ಮಾಡಿದ್ದಾರೆ. ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಸಿದ್ದಗಂಗಾ ಶ್ರೀಗಳ ಆರೋಗ್ಯ ವೈದ್ಯ ಲೋಕಕ್ಕೂ ಅಚ್ಚರಿ ಮೂಡಿಸುತ್ತಿದೆ. ಶ್ರೀಗಳು ಪವಾಡ ರೀತಿಯಲ್ಲಿ ಚಿಕಿತ್ಸೆಗೆ ಸ್ಪಂದಿಸುತಿದ್ದಾರೆ ಎಂದು ಸಿದ್ದಗಂಗಾ ಶ್ರೀಗಳಿಗೆ ಚಿಕಿತ್ಸೆ ನೀಡುವ ವೈದ್ಯರ ತಂಡ ವರದಿಯಲ್ಲಿ ಉಲ್ಲೇಖಿಸಿದ. “He has always Proved us wrong ” ಎಂದು ವೈದ್ಯರು ವರದಿಯಲ್ಲಿ ಒಕ್ಕಣೆ ಬರೆದಿದ್ದಾರೆ. ಈ ವಯಸ್ಸಿನಲ್ಲೂ ಎಲ್ಲಾ ರೀತಿಯ ಚಿಕಿತ್ಸೆಗೆ ಸ್ಪಂದಿಸುತ್ತಿರುವುದಕ್ಕೆ ಖುದ್ದು ವೈದ್ಯರೇ ಚಕಿತಗೊಂಡಿದ್ದಾರೆ ಅಂತ ಬಿಜಿಎಸ್ ಹಾಗೂ ಸಿದ್ದಗಂಗಾ ಆಸ್ಪತ್ರೆ ವೈದ್ಯರ ತಂಡ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸದ್ಯ ಮಠದ ಕಡೆ ಬರಲ್ಲ ನಡೆದಾಡುವ ದೇವರು

    ಸದ್ಯ ಮಠದ ಕಡೆ ಬರಲ್ಲ ನಡೆದಾಡುವ ದೇವರು

    ತುಮಕೂರು: ಸಿದ್ದಗಂಗಾ ಶ್ರೀಗಳಿಗೆ ತೀವ್ರವಾಗಿ ನಿಶ್ಯಕ್ತಿ ಕಾಡುತ್ತಿರುವ ಪರಿಣಾಮ ಅವರಿಗೆ ಉಸಿರಾಡಲು ತೊಂದರೆಯಾಗುತ್ತಿದೆ ಆದ್ದರಿಂದ ಶ್ರೀಗಳ ಆರೋಗ್ಯ ಸುಧಾರಿಸುವವರೆಗೆ ಮಠಕ್ಕೆ ಶಿಫ್ಟ್ ಮಾಡಲ್ಲ ಅಂತ ಡಾ. ಪರಮೇಶ್ ತಿಳಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶ್ರೀಗಳಿಗೆ ನಿಶಕ್ತಿ ಕಾಡುತ್ತಿದೆ. ಹಾಗಾಗಿ ಉಸಿರಾಡಲು ಕಷ್ಟ ಪಡುತ್ತಿದ್ದಾರೆ. ಕೇವಲ ಅರ್ಧಗಂಟೆಕಾಲ ಅಷ್ಟೇ ಶ್ರೀಗಳು ಸಹಜವಾಗಿ ಉಸಿರಾಡುತ್ತಿದ್ದಾರೆ. ಬಳಿಕ ಪುನಃ ವೆಂಟಿಲೇಟರ್ ಅಳವಡಿಸಬೇಕಾಗುತ್ತದೆ ಎಂದು ಶ್ರೀಗಳ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.

    ಶ್ರೀಗಳ ಶ್ವಾಸಕೋಶದ ಸೋಂಕು ಸಂಪೂರ್ಣ ಕಡಿಮೆಯಾಗಿದ್ದು, ಶ್ವಾಸಕೋಶದ ನೀರು ನಿನ್ನೆ ತೆಗೆದಿದ್ದೇವೆ. ಶ್ರೀಗಳ ದೇಹದಲ್ಲಿ ಪ್ರೋಟೀನ್ ಅಂಶವೂ 2.9 ಮಿಲಿ ಗ್ರಾಮ್‍ಗೆ ಏರಿಕೆಯಾಗಿದೆ. ನಿಶ್ಯಕ್ತಿ ಹೊರತುಪಡಿಸಿದರೆ ಬೇರೆ ಯಾವುದೇ ಏರುಪೇರು ಇಲ್ಲ. ಆದ್ರೆ ಸದ್ಯ ಸಿದ್ದಗಂಗಾ ಶ್ರೀಗಳನ್ನು ಮಠಕ್ಕೆ ಶಿಫ್ಟ್ ಮಾಡುವ ಯಾವುದೇ ಆಲೋಚನೆ ಇಲ್ಲ. ಕಿರಿಯ ಶ್ರೀಗಳ ಮಾರ್ಗದರ್ಶನದಂತೆ ಮುಂದಿನ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಡಾ. ಪರಮೇಶ್ ಸ್ಪಷ್ಟಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸನ್ನೆ ಮೂಲಕ ಮಾತನಾಡುತ್ತಿದ್ದಾರೆ ನಡೆದಾಡುವ ದೇವರು

    ಸನ್ನೆ ಮೂಲಕ ಮಾತನಾಡುತ್ತಿದ್ದಾರೆ ನಡೆದಾಡುವ ದೇವರು

    ತುಮಕೂರು: ನಡೆದಾಡುವ ದೇವರು ಎಂದೇ ಹೆಸರುವಾಸಿಯಾಗಿರುವ ಸಿದ್ದಗಂಗಾ ಶ್ರೀಗಳ ಆರೋಗ್ಯದ ಕುರಿತು ಶ್ರೀಗಳ ಆಪ್ತ ವೈದ್ಯ ಡಾ.ಪರಮೇಶ್ ಅವರು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಚೇತರಿಕೆ ಕಂಡುಬರುತ್ತಿಲ್ಲ. ಮತ್ತೆ ಅವರ ಶ್ವಾಸಕೋಶದ ಎರಡೂ ಭಾಗದಲ್ಲಿ ನೀರು ತುಂಬಿಕೊಂಡಿದೆ. ಈಗಾಗಲೇ ದೇಹದಿಂದ ನೀರನ್ನು ಹೊರಕ್ಕೆ ತೆಗೆಯಲಾಗಿದೆ. ಸದ್ಯ ಶ್ರೀಗಳು ಸನ್ನೆ ಮೂಲಕವೇ ಮಾತನಾಡುತ್ತಿದ್ದು, ಕಣ್ಣು ಬಿಟ್ಟು ನೋಡುತ್ತಿದ್ದಾರೆ. ಮಲಗಿದಲ್ಲಿಯೇ ಶ್ರೀಗಳು ಅವರ ಕೈಕಾಲುಗಳ ಚಲನವಲನ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

    ಶ್ರೀಗಳ ಆರೋಗ್ಯದಲ್ಲಿ ಮತ್ತೆ ಏರುಪೇರು ಆಗಿರುವುದರಿಂದ ಅವರಿಗೆ ದ್ರವರೂಪದ ಆಹಾರವನ್ನು ನೀಡಲಾಗುತ್ತಿದೆ. ಅವರಿಗೆ ಎಂದಿನಂತೆ ಪೂಜೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು. ಶ್ರೀಗಳಿಗೆ ಅಳವಡಿಸಿರುವ ಕೃತಕ ಉಸಿರಾಟದ ಸಾಧನ ತೆರವುಗೊಳಿಸಿ ಸಹಜ ಉಸಿರಾಟಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಎರಡು ಗಂಟೆಗಳ ಕಾಲ ಸಹಜ ಉಸಿರಾಟದ ನಂತರ ಮತ್ತೆ ತೊಂದರೆಯಾದಾಗ ಕೃತಕ ಉಸಿರಾಟ ಸಾಧನ ಅಳವಡಿಸುತ್ತಿದ್ದೇವೆ. ನಿನ್ನೆ ಶ್ರೀಗಳ ದೇಹದಲ್ಲಿ ಪ್ರೋಟೀನ್ ಅಂಶವು 3.1 ಇತ್ತು. ಆದ್ರೆ ಇಂದು ಪ್ರೋಟೀನ್ ಅಂಶ 2.6 ಮಿಲಿಗ್ರಾಮ್‍ಗೆ ಇಳಿಕೆಯಾಗಿದೆ ಎಂದು ಶ್ರೀಗಳ ಆರೋಗ್ಯದ ಕುರಿತು ಡಾ. ಪರಮೇಶ್ ಮಾಹಿತಿ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿದ್ದಗಂಗಾ ಆಸ್ಪತ್ರೆಯಿಂದ ಶ್ರೀಗಳ ಹೆಲ್ತ್ ಬುಲೆಟಿನ್ ಬಿಡುಗಡೆ

    ಸಿದ್ದಗಂಗಾ ಆಸ್ಪತ್ರೆಯಿಂದ ಶ್ರೀಗಳ ಹೆಲ್ತ್ ಬುಲೆಟಿನ್ ಬಿಡುಗಡೆ

    ತುಮಕೂರು: ಸಿದ್ದಗಂಗಾ ಆಸ್ಪತ್ರೆಯ ವೈದ್ಯ ಡಾ. ಪರಮೇಶ್ ಇಂದು ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಡಾ.ಪರಮೇಶ್, ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಎಡ ಶ್ವಾಸಕೋಶದಿಂದ 250 ಎಂ.ಎಲ್ ಹಾಗೂ ಬಲ ಶ್ವಾಸಕೋಶದಿಂದ 400 ಎಂ.ಎಲ್ ನೀರನ್ನು ಹೊರಕ್ಕೆ ತೆಗೆಯಲಾಗಿದೆ. ಅಲ್ಲದೆ ಶ್ರೀಗಳ ದೇಹದಲ್ಲಿನ ಪ್ರೋಟೀನ್ ಅಂಶ ಕೂಡಾ 2.6 ಗ್ರಾಂ ನಿಂದ 3 ಗ್ರಾಂ ಗೆ ಏರಿಕೆಯಾಗಿದೆ ಎಂದು ತಿಳಿಸಿದರು.

    ಶನಿವಾರ ರಾತ್ರಿ ಶ್ರೀಗಳಿಗೆ ಲೋ ಬಿಪಿಯಾಗಿದ್ದು, ಡಾ.ರೇಲಾ ಹಾಗೂ ಡಾ.ರವೀಂದ್ರರ ಮಾರ್ಗದರ್ಶನದಂತೆ ಚಿಕಿತ್ಸೆ ನೀಡಲಾಗಿತ್ತು. ಈಗ ರಕ್ತದೊತ್ತಡ ಸ್ಥಿರವಾಗಿದೆ. ಆದರೆ ಶ್ವಾಸಕೋಶದ ಸೋಂಕು ನಿನ್ನೆ ತನಕ ಪ್ರತಿದಿನ ಕಡಿಮೆಯಾಗುತಿತ್ತು. ಆದರೆ ಇಂದು ಕಡಿಮೆಯಾಗಿಲ್ಲ. ನಿನ್ನೆ ಎಷ್ಟಿತ್ತೋ ಅಷ್ಟೆ ಇದೆ. ಹಾಗಾಗಿ ಮತ್ತೆ ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಡಾ. ಪರಮೇಶ್ ಸ್ಪಷ್ಟಪಡಿಸಿದ್ದಾರೆ.

    ಕಳೆದ ಮೂರು ದಿನಗಳ ಹಿಂದೆ ಡಾ.ಸುಬ್ರಾ ಅವರ ಸಲಹೆಯಂತೆ ಶ್ರೀಗಳಿಗೆ ಆಂಟಿಬಯೋಟಿಕ್ ಬದಲಾವಣೆ ಮಾಡಲಾಗಿತ್ತು. ಇನ್ನೂ ನಾಲ್ಕು ದಿನಗಳ ಕಾಲ ಆಂಟಿಬಯೋಟಿಕ್ ನೀಡಲಾಗುತ್ತೆ ಆಗ ಸೋಂಕು ಕಡಿಮೆಯಾಗುತ್ತಾ ಅಂತ ಕಾದು ನೋಡಬೇಕಿದೆ. ಸಂಜೆ ವೇಳೆಗೆ ಬಿಜಿಎಸ್ ಗ್ಲೋಬಲ್ ವೈದ್ಯ ಡಾ.ರವೀಂದ್ರ ಸಿದ್ದಗಂಗಾ ಆಸ್ಪತ್ರೆಗೆ ಆಗಮಿಸುತ್ತಾರೆ ಎಂದು ಡಾ.ಪರಮೇಶ್ ಮಾಹಿತಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv