Tag: Dr. Kalladka Prabhakar Bhat

  • ಕಲ್ಲಡ್ಕ ಪ್ರಭಾಕರ್ ಭಟ್‌ ಪರ ವಾದ ಮಾಡಿದ ವಕೀಲ ಕಾಂಗ್ರೆಸ್‌ನಿಂದ ಅಮಾನತು

    ಕಲ್ಲಡ್ಕ ಪ್ರಭಾಕರ್ ಭಟ್‌ ಪರ ವಾದ ಮಾಡಿದ ವಕೀಲ ಕಾಂಗ್ರೆಸ್‌ನಿಂದ ಅಮಾನತು

    ಮಂಡ್ಯ: ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಆರ್‌ಎಸ್‌ಎಸ್ (RSS) ಮುಖಂಡ ಕಲ್ಲಡ್ಕ ಪ್ರಭಾಕರ್‌ ಭಟ್ (Kalladka Prabhakar Bhat) ಪರ ವಕಾಲತ್ತು ವಹಿಸಿ, ನಿರೀಕ್ಷಣಾ ಜಾಮೀನು ಕೊಡಿಸಿದ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾನೂನು ಘಟಕದ ತಾಲೂಕು ಅಧ್ಯಕ್ಷ ಡಿ.ಚಂದ್ರೇಗೌಡ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಲಾಗಿದೆ.

    ಮುಸ್ಲಿಂ ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಭಾಷಣ ಮಾಡಿದ ಆರೋಪದಡಿ ಕಲಂ 354, 294, 509, 506, 295, 298 ಇತ್ಯಾದಿ ಅಡಿ ದಾಖಲಾಗಿರುವ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಕಲ್ಲಡ್ಕ ಪ್ರಭಾಕರ್ ಪರ ವಕೀಲ ಡಿ.ಚಂದ್ರೇಗೌಡ ವಕಾಲತ್ತು ವಹಿಸಿದ್ದರು. ಅವರಿಗೆ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಕೊಡಿಸಿದ್ದರು. ಇದನ್ನೂ ಓದಿ: ಶ್ರೀರಂಗಪಟ್ಟಣ ಕೋರ್ಟ್‌ನಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್‌ಗೆ ಜಾಮೀನು

    ಈ ನಡವಳಿಕೆಯು ಕಾಂಗ್ರೆಸ್ ಪಕ್ಷದ ಕಾನೂನು ಘಟಕದ ನಿಯಮ ನಿಬಂಧನೆಗಳಿಗೆ ವಿರುದ್ಧವಾಗಿರುವುದರಿಂದ ಅವರನ್ನು ಶ್ರೀರಂಗಪಟ್ಟಣ ತಾಲೂಕು ಕಾನೂನು ಘಟಕದ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಲಾಗಿದೆ ಎಂದು ಕಾನೂನು ಘಟಕದ ಮಂಡ್ಯ ಜಿಲ್ಲಾಧ್ಯಕ್ಷ ಎ.ಎಸ್.ಗೌರಿಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಶ್ರೀರಂಗಪಟ್ಟಣ ಸಂಕೀರ್ತನಾ ಯಾತ್ರೆ ಭಾಷಣ ವೇಳೆ ಮುಸ್ಲಿಂ ಸಮುದಾಯದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಆರೋಪ ಪ್ರಭಾಕರ್ ಭಟ್ ಮೇಲೆ ಇತ್ತು. ಶ್ರೀರಂಗಪಟ್ಟಣ ಟೌನ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿ ಕೋರ್ಟ್‌ಗೆ ಚಾರ್ಜ್ ಶೀಟ್ ಸಹ ಸಲ್ಲಿಕೆಯಾಗಿತ್ತು. ಇದನ್ನೂ ಓದಿ: ಮುಸ್ಲಿಂ ಮಹಿಳೆಯರ ವಿರುದ್ಧ ವಿವಾದಾತ್ಮಕ ಹೇಳಿಕೆ – ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಮತ್ತೆರಡು ದೂರು ದಾಖಲು

    ಈ ಪ್ರಕರಣ ಸಂಬಂಧ ವಿಚಾರಣೆ ನಡೆದು ಕಲ್ಲಡ್ಕ ಪ್ರಭಾಕರ್ ಭಟ್‌ಗೆ ನಿರೀಕ್ಷಣಾ ಜಾಮೀನು ಮಂಜೂರಾಗಿದ್ದು, ಇಬ್ಬರ ಶ್ಯೂರಿಟಿ ಜೊತೆಗೆ 2 ಲಕ್ಷ ರೂ. ಬಾಂಡ್ ಮೇಲೆ ನಿರೀಕ್ಷಣಾ ಜಾಮೀನು ನೀಡಲಾಗಿದೆ. ವಕೀಲ ಚಂದ್ರೇಗೌಡ, ಕಲ್ಲಡ್ಕ ಪ್ರಭಾಕರ್ ಪರ ವಾದ ಮಂಡಿಸಿದ್ದರು.

  • ರಾಮನಗರದಲ್ಲಿ ಆರ್‌ಎಸ್‌ಎಸ್ ಪಥಸಂಚಲನ- ನಗರವೆಲ್ಲ ಕೇಸರಿ ಮಯ

    ರಾಮನಗರದಲ್ಲಿ ಆರ್‌ಎಸ್‌ಎಸ್ ಪಥಸಂಚಲನ- ನಗರವೆಲ್ಲ ಕೇಸರಿ ಮಯ

    ರಾಮನಗರ: ರೇಷ್ಮೆನಗರಿ ರಾಮನಗರದ ನಗರವೆಲ್ಲ ಭಾನುವಾರ ಅಕ್ಷರಶಃ ಆರ್‌ಎಸ್‌ಎಸ್ ಪಥಸಂಚಲನದಿಂದ ಕೇಸರಿಮಯವಾಗಿತ್ತು. ಮಧ್ಯಾಹ್ನ 3 ಗಂಟೆ ಸುಮಾರಿಗೆ ನಗರದ ಬಾಲಗೇರಿ ಹಾಗೂ ಕೆಂಪೇಗೌಡ ಸರ್ಕಲ್‍ನಿಂದ ಎರಡು ಮಾರ್ಗಗಳಲ್ಲಿ ಪಥಸಂಚಲನವನ್ನ ನಡೆಸಿ ನಗರವನ್ನೆಲ್ಲ ಗಣವೇಷಧಾರಿಗಳ ಆಕರ್ಷಕ ಪಥಸಂಚಲನ ಕೇಸರಿ ಕಹಳೆ ಮೊಳಗಿತ್ತು.

    ಬಾಲಗೇರಿ ಹಾಗೂ ಕೆಂಪೇಗೌಡ ಸರ್ಕಲ್‍ನಿಂದ ಹೊರಟ ಎರಡು ಪಥಸಂಚಲನದ ಗುಂಪು ಎಂ.ಜಿ ರಸ್ತೆ ಸಮೀಪದ ಬಂಡಿಮಹಂಕಾಳಮ್ಮ ದೇವಾಲಯದ ಸಮೀಪ ಎರಡು ಪಥಸಂಚಲನಗಳು ಸಮ್ಮಿಲನಗೊಂಡು ಜಿಲ್ಲಾ ಕ್ರೀಡಾಂಗಣದತ್ತ ಸಾಗಿದವು.

    ನಗರದ ಬಾಲಗೇರಿ ಸರ್ಕಾರಿ ಶಾಲಾ ಆವರಣದಿಂದ ಆರಂಭವಾದ ಪಥಸಂಚಲನದಲ್ಲಿ ಆರ್‌ಎಸ್‌ಎಸ್‍ನ ದಕ್ಷಿಣ ಮಧ್ಯ ಕ್ಷೇತ್ರಿಯ ಕಾರ್ಯವಾಹ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಸಹ ಭಾಗವಹಿಸಿ ಗಣವೇಷಧಾರಿಗಳ ಜೊತೆ ತಾವು ಗಣವೇಷಧಾರಿಗಳಾಗಿ ಪಥಸಂಚಲನ ನಡೆಸಿದರು.

    ಕೆಂಪೇಗೌಡ ಸರ್ಕಲ್‍ನಿಂದ ಹೊರಟ ಪಥಸಂಚಲನದಲ್ಲಿ ಬಿಜೆಪಿ ಮುಖಂಡ, ಮಾಜಿ ಸಚಿವ ಸಿಪಿ ಯೋಗೇಶ್ವರ್ ತಮ್ಮ ಪುತ್ರರಾದ ಸಾಯಿಧ್ಯಾನ್, ಶ್ರವಣ್ ಜೊತೆಗೂಡಿ ಪಥಸಂಚಲನ ನಡೆಸಿದರು. ಅಲ್ಲದೇ ಬಿಜೆಪಿ ವಕ್ತಾರ ಅಶ್ವಥ್ ನಾರಾಯಣ್, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ರುದ್ರೇಶ್ ಸಹ ಪಥಸಂಚಲನದಲ್ಲಿ ಭಾಗವಹಿಸಿದ್ದರು.

    ಎಂ.ಜಿ ರಸ್ತೆಯಲ್ಲಿ ಸಾಗಿದ ಪಥಸಂಚಲನಕ್ಕೆ ಸ್ಥಳೀಯ ನಿವಾಸಿಗಳು ರಂಗೋಲಿ ಇಟ್ಟು ಹೂವಿನ ಅಲಂಕಾರದ ಜೊತೆಗೆ ಪಥಸಂಚಲನದಲ್ಲಿದ್ದ ಗಣವೇಷಧಾರಿಗಳ ಮೇಲೆ ಹೂವಿನ ಮಳೆಯನ್ನೇ ಸುರಿಸಿದರು. ನಂತರ ಜಿಲ್ಲಾ ಕ್ರೀಡಾಂಗಣಕ್ಕೆ ಆಗಮಿಸಿದ ಪಥಸಂಚಲನದ ವಿಶ್ರಾಂತಿ ಸಮಯದಲ್ಲಿ ಸಿ.ಪಿ.ಯೋಗೇಶ್ವರ್ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಗಣವೇಷಧಾರಿಗಳು ಮುಗಿಬಿದ್ದಿದ್ದರು. ಆಗ ಯೋಗೇಶ್ವರ್ ಅವರು ಕೆಲವರ ಸೆಲ್ಫಿ ಪೋಸ್ ನೀಡಿ, ಬಳಿಕ ದೂರ ಉಳಿದರು.