ಚಿಕ್ಕಬಳ್ಳಾಪುರ: ಕಾರು ಚಾಲಕ ಬಾಬು ಆತ್ಮಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ (Congress Vs BJP) ನಡುವೆ ರಾಜಕೀಯ ಜಟಾಪಟಿ ಜೋರಾಗಿದೆ.
ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಹಾಗೂ ಸಂಸದ ಸುಧಾಕರ್ (Dr. K Sudhakar) ಬೆಂಬಲಿಗರ ನಡುವೆ ಫೋಸ್ಟರ್ ವಾರ್ ನಡೆದಿತ್ತು. ಇದೀಗ ಘಟನೆ ಸಂಬಂಧಿಸಿದಂತೆ ಸಂಸದ ಸುಧಾಕರ್ ಬೆಂಬಲಿಗ, ಮುನಿರಾಜು ಎಂಬಾತ ಶಾಸಕ ಪ್ರದೀಪ್ ಈಶ್ವರ್ ಬೆಂಬಲಿಗರಾದ ವಿನಯ್ ಬಂಗಾರಿ, ಹಮೀಮ್, ಸುಧಾಕರ್, ದೀಪು, ಸಲೀಂ ವಿರುದ್ಧ ಅವಾಚ್ಯ ಶಬ್ದಗಳಿಂದ ಜಾತಿನಿಂದನೆ ಮಾಡಿದ ಆರೋಪದಡಿ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ಶಾಸಕ ಪ್ರದೀಪ್ ಈಶ್ವರ್ ಬೆಂಬಲಿಗರ ವಿರುದ್ಧ ಆಟ್ರಾಸಿಟಿ ಕೇಸ್ ದಾಖಲಾಗಿದೆ. ಇದನ್ನೂ ಓದಿ: ಸಂಸದ ಸುಧಾಕರ್ ಹೆಸರು ಬರೆದಿಟ್ಟು ಚಾಲಕ ಆತ್ಮಹತ್ಯೆ ಕೇಸ್ – ಮೃತ ಬಾಬು ಮನೆಗೆ ಪ್ರದೀಪ್ ಈಶ್ವರ್ ಭೇಟಿ
ಸುಧಾಕರ್ ಬೆಂಬಲಿಗರ ವಿರುದ್ಧವೂ ಪ್ರತಿದೂರು
ಶಾಸಕ ಪ್ರದೀಪ್ ಈಶ್ವರ್ ಬೆಂಬಲಿಗರ ವಿರುದ್ಧ ದೂರು ದಾಖಲಾಗ್ತಿದ್ದಂತೆ ಇತ್ತ ಸಂಸದ ಸುಧಾಕರ್ ಬೆಂಬಲಿಗರ ವಿರುದ್ಧವೂ ದೂರು ದಾಖಲಿಸಲಾಗಿದೆ. ಸಂಸದ ಸುಧಾಕರ್ ಬೆಂಬಲಿಗರಾದ ನಗರಸಭೆ ಅಧ್ಯಕ್ಷ ಗಜೇಂದ್ರ ಆತನ ಸಹೋದರ ರವಿ, ಅತ್ತಿಗೆ ಶೋಭಾ ಸೇರಿ ಮುನಿರಾಜು ವಿರುದ್ಧ ದೂರು ದಾಖಲು ಮಾಡಲಾಗಿದೆ. ಇದನ್ನೂ ಓದಿ: ಆ.16ರಂದು ʻಧರ್ಮಸ್ಥಳ ಚಲೋʼ ಅಭಿಯಾನ – ಧರ್ಮಸ್ಥಳದೊಂದಿಗೆ ನಾವಿದ್ದೇವೆ ಎಂದ ಶಾಸಕ ಎಸ್.ಆರ್ ವಿಶ್ವನಾಥ್
– ಮೃತ ವ್ಯಕ್ತಿ ಕುಟುಂಬಸ್ಥರಿಗೆ ಕಾಂಗ್ರೆಸ್ ಶಾಸಕ ಸಾಂತ್ವನ
ಚಿಕ್ಕಬಳ್ಳಾಪುರ: ಜಿಲ್ಲಾ ಪಂಚಾಯಿತಿ ಗುತ್ತಿಗೆ ನೌಕರ ಕಾರು ಚಾಲಕ ಬಾಬು ಆತ್ಮಹತ್ಯೆ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ಇದರ ನಡುವೆ ಭಾನುವಾರ ಮೃತ ಬಾಬು ನಿವಾಸಕ್ಕೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಗೌರಿಬಿದನೂರು ತಾಲೂಕಿನ ಇಡಗೂರು ಗ್ರಾಮಕ್ಕೆ ಭೇಟಿ ನೀಡಿ ಮೃತ ಬಾಬು ಪತ್ನಿ ಶಿಲ್ಪಾ ಹಾಗೂ ತಾಯಿ ಕಾಳಮ್ಮ ಸೇರಿದಂತೆ ಸಹೋದರ ಲೋಕೇಶ್‌ಗೆ ಧೈರ್ಯ ಹೇಳಿದರು. ಈ ವೇಳೆ, ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕ ಪ್ರದೀಪ್ ಈಶ್ವರ್, ಸಂಸದ ಸುಧಾಕರ್‌ಗೆ ಸವಾಲು ಹಾಕಿದರು. ಇದನ್ನೂ ಓದಿ: ಗುತ್ತಿಗೆ ಕಾರು ಚಾಲಕ ಆತ್ಮಹತ್ಯೆ ಕೇಸ್ – ಸಂಸದ ಡಾ. ಕೆ.ಸುಧಾಕರ್ ವಿರುದ್ಧ FIR ದಾಖಲು
ಮೃತ ಬಾಬು ಪತ್ನಿ ಶಿಲ್ಪಾಗೆ ಸರ್ಕಾರಿ ಕೆಲಸ ಕೊಡಿಸುವಂತೆ ಸಂಬಂಧಿಕರು ಪ್ರದೀಪ್ ಈಶ್ವರ್‌ಗೆ ಬೇಡಿಕೆ ಇಟ್ಟಿದ್ದು, ಕೆಲಸ ಕೊಡಿಸುವುದಾಗಿ ಭರವಸೆ ನೀಡಿದರು. ತಾಯಿ ಕಾಳಮ್ಮಗೆ ಗುತ್ತಿಗೆ ಆಧಾರದಲ್ಲಿ ಸರ್ಕಾರಿ ಕಚೇರಿಯೊಂದರಲ್ಲಿ ಕೆಲಸ ಕೊಡಿಸುವ ಭರವಸೆ ಕೊಟ್ಟರು. ಸಹೋದರ ಲೋಕೇಶ್‌ಗೂ ಹೃದಯ ಸಂಬಂಧಿ ಸಮಸ್ಯೆ ಇದೆ ಅಂತ ತಿಳಿದು ಅವರ ಆರೋಗ್ಯಕ್ಕಾಗಿ ಸಹಾಯ ಹಾಗೂ ಕೆಲಸ ಕೊಡಿಸುವುದಾಗಿ ಹೇಳಿದರು. ಸರ್ಕಾರದಿಂದ ಎಸ್‌ಸಿ/ಎಸ್‌ಟಿ ದೌರ್ಜನ್ಯ ಪ್ರಕರಣದಡಿ ಬರುವ 8 ಲಕ್ಷ ರೂಪಾಯಿ ಪರಿಹಾರವನ್ನ ಅದಷ್ಟು ಬೇಗ ಕೊಡಿಸುತ್ತೇನೆ. ವೈಯುಕ್ತಿಕವಾಗಿ ಅರ್ಥಿಕವಾಗಿಯೂ ಸಹ ಕುಟುಂಬದ ಜೊತೆ ನಿಲ್ಲುವುದಾಗಿ ತಿಳಿಸಿದರು.
ಎಫ್‌ಐಆರ್‌ನಲ್ಲಿ ಸಂಸದ ಸುಧಾಕರ್ ಹೆಸರು ಸೇರ್ಪಡೆಗೆ ಬಿಜೆಪಿ ನಾಯಕರ ಅಕ್ಷೇಪಕ್ಕೆ ಪ್ರತಿಕ್ರಿಯಿಸಿದ ಪ್ರದೀಪ್ ಈಶ್ವರ್, ಬಿಜೆಪಿ ನಾಯಕರಿಗೆ ಕಾಮನ್‌ಸೆನ್ಸ್ ಇಲ್ಲ. ಗೌರಿಬಿದನೂರಿಗೆ ಬಂದು ಸುದ್ದಿಗೋಷ್ಟಿ ಮಾಡುವ ಬದಲು ಬಾಬು ಮನೆಗೆ ಬಂದು ಕಣ್ಣೀರು ಒರೆಸಬಹುದಿತ್ತಲ್ಲ? ಸಂಸದ ಸುಧಾಕರ್ ಅವರೇ, ನಮ್ಮ ಪೊಲೀಸರ ಮೇಲೆ ನಂಬಿಕೆ ಇಲ್ಲ ಅಂದ್ರೆ ನಿಮ್ಮದೇ ಕೇಂದ್ರ ಸರ್ಕಾರ ಇದೆಯಲ್ಲ. ಸಿಬಿಐ ತನಿಖೆ ಮಾಡಿಸಿ ಆರೋಪದಿಂದ ಮುಕ್ತರಾಗಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ನನ್ನ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಯಾರೆಂದು ಗೊತ್ತಿಲ್ಲ: ಡಾ.ಸುಧಾಕರ್ ರಿಯಾಕ್ಷನ್
ಮಗನ ನೆನೆದು ಕುಟುಂಬಸ್ಥರು ಶಾಸಕರ ಎದುರು ಕಣ್ಣೀರಿಟ್ಟರು. ಬಿಜೆಪಿಯವರು ಆರೋಪ ಮಾಡಿದಂತೆ ನಾವು ಯಾರು ಕೂಡ ಒತ್ತಡದಿಂದ ದೂರು ದಾಖಲಿಸಿಲ್ಲ. ನಮ್ಮ ಮಗ ಬರೆದಿರುವ ಡೆತ್‌ನೋಟ್ ಆಧಾರದ ಮೇಲೆಯೇ ದೂರು ನೀಡಿದ್ದೇವೆ. ರಾಜಕಾರಣಕ್ಕೂ ನಮಗೂ ಸಂಬಂಧ ಇಲ್ಲ ಎಂದು ಮೃತ ಬಾಬು ತಾಯಿ ಕಾಳಮ್ಮ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು: ವಿರೋಧ ಪಕ್ಷದ ನಾಯಕರಿಗೆ ಕಿರುಕುಳ ನೀಡಲು ಸರ್ಕಾರ ಪೊಲೀಸರನ್ನು ಬಳಸುತ್ತಿದೆ. ಚಾಲಕ ಬಾಬು ಆತ್ಮಹತ್ಯೆ ಪ್ರಕರಣದಲ್ಲಿ, ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ಅವರ ಪಾತ್ರ ಇಲ್ಲದಿದ್ದರೂ ಅವರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ (R Ashok) ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ಡಾ.ಕೆ.ಸುಧಾಕರ್ (K Sudhakar) ವಿರುದ್ಧ ಎಫ್‌ಐಆರ್ ಮಾಡಿ ಎ1 ಆರೋಪಿ ಮಾಡಿದ್ದಾರೆ. ಆತ್ಮಹತ್ಯೆಗೆ ಅವರೇ ಸಂಪೂರ್ಣ ಒತ್ತಡ ಹೇರಿದರೆ ಮಾತ್ರ ಈ ರೀತಿ ಎಫ್‌ಐಆರ್ ಮಾಡಬೇಕಾಗುತ್ತದೆ. ಆದರೆ ಸುಧಾಕರ್ ಚಾಲಕ ಬಾಬು ಅವರ ಜೊತೆ ಆಪ್ತ ಸಂಬಂಧವೇನೂ ಇಲ್ಲ. ಅಲ್ಲದೆ, ಈ ಪ್ರಕರಣದಲ್ಲಿ ಜಾತಿ ನಿಂದನೆಯ ಆರೋಪ ಬರುವುದೇ ಇಲ್ಲ. ಸುಧಾಕರ್ ಆ ವ್ಯಕ್ತಿಯನ್ನು ಎದುರಿಗೆ ನಿಲ್ಲಿಸಿಕೊಂಡು ನಿಂದಿಸಿಲ್ಲ, ಅಥವಾ ಸಂದೇಶ ಕಳುಹಿಸಿಲ್ಲ. ಕಾಂಗ್ರೆಸ್ ಸರ್ಕಾರ ವಿಪಕ್ಷಗಳ ನಾಯಕರನ್ನು ಗುರಿಯಾಗಿಸುವುದು ಸ್ಪಷ್ಟವಾಗಿದೆ ಎಂದರು. ಇದನ್ನೂ ಓದಿ: ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೃಷ್ಣಭೈರೇಗೌಡ ನೇಮಕ
ಈ ಹಿಂದೆ ಶಾಸಕ ಬೈರತಿ ಬಸವರಾಜ್ ಅವರ ಮೇಲೂ ಇದೇ ರೀತಿ ಕ್ರಮ ಕೈಗೊಳ್ಳಲಾಗಿದೆ. ಕೊಡಗಿನಲ್ಲಿ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಡೆತ್‌ನೋಟ್ ಬರೆದಿಟ್ಟು ಸತ್ತಿದ್ದರು. ಆದರೆ ಕಾಂಗ್ರೆಸ್ ಶಾಸಕರಾದ ಎ.ಎಸ್.ಪೊನ್ನಣ್ಣ ಹಾಗೂ ಮಂಥರ್ ಗೌಡ ಅವರ ಹೆಸರು ಎಫ್‌ಐಆರ್‌ನಲ್ಲಿ ಬರಲೇ ಇಲ್ಲ. ಪೊಲೀಸರು ಎಲ್ಲರಿಗೂ ಸಮಾನವಾಗಿ ಕೆಲಸ ಮಾಡಬೇಕು ಎಂದರು. ಇದನ್ನೂ ಓದಿ: ʻಕುಣಿಯಲು ಬಾರದೇ ನೆಲ ಡೊಂಕುʼ ರಾಹುಲ್ ಗಾಂಧಿ ಮತಗಳ್ಳತನ ಆರೋಪಕ್ಕೆ ಪ್ರಹ್ಲಾದ್ ಜೋಶಿ ವ್ಯಂಗ್ಯ
ಚಾಲಕ ಬಾಬು ಬೇರೆ ಬೇರೆ ಕಾರಣಗಳಿಂದ ಸಾಲ ಮಾಡಿದ್ದರು. ಅವರಿಗೆ ಕೆಲವರು ವಂಚನೆ ಮಾಡಿದ್ದರು. ಆದರೆ ಇದರಲ್ಲಿ ಡಾ.ಕೆ.ಸುಧಾಕರ್ ಪಾತ್ರವೇನು ಎಂಬುದು ಸ್ಪಷ್ಟವಾಗಿಲ್ಲ. ವಿರೋಧ ಪಕ್ಷದವರಿಗೆ ಕಿರುಕುಳ ಕೊಡಲು ಸರ್ಕಾರ ಹೀಗೆ ಮಾಡುತ್ತಿದೆ. ಈ ಪ್ರಕರಣದಲ್ಲಿ ಡೆತ್‌ನೋಟ್ ಮುಂಚಿತವಾಗಿಯೇ ಸಿಕ್ಕರೂ ಅದನ್ನು ಪೊಲೀಸರಿಗೆ ತಿಳಿಸಿಲ್ಲ. ಚಾಲಕ ಬಾಬು ಅವರ ಕುಟುಂಬದವರು ಡಾ.ಕೆ.ಸುಧಾಕರ್ ಹೆಸರು ಪ್ರಸ್ತಾಪ ಮಾಡಿಲ್ಲ ಎಂದು ಹೇಳಿದ್ದರೂ, ಅವರನ್ನು ಎ1 ಆರೋಪಿ ಮಾಡಿದ್ದಾರೆ ಎಂದು ದೂರಿದರು. ಇದನ್ನೂ ಓದಿ: ಮಂತ್ರಾಲಯದಲ್ಲಿ ರಾಯರ ಆರಾಧನಾ ಸಂಭ್ರಮ – ಸುಬುಧೇಂದ್ರ ತೀರ್ಥ ಶ್ರೀಗಳಿಂದ ಸಪ್ತರಾತ್ರೋತ್ಸವಕ್ಕೆ ಚಾಲನೆ
ಚಿಕ್ಕಬಳ್ಳಾಪುರ: ಜಿಲ್ಲಾ ಪಂಚಾಯಿತಿ ಕಾರು ಚಾಲಕ ಆತ್ಮಹತ್ಯೆ ಪ್ರಕರಣದಲ್ಲಿ ಸಂಸದ ಡಾ.ಕೆ.ಸುಧಾಕರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಡಾ.ಕೆ.ಸುಧಾಕರ್ ಹಾಗೂ ಅವರ ಬೆಂಬಲಿಗರ ಹೆಸರು ಬರೆದಿಟ್ಟು ಚಾಲಕ ಆತ್ಮಹತ್ಯೆ ಮಾಡಿಕೊಂಡಿದ್ದ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೆ.ಸುಧಾಕರ್ ಹಾಗೂ ಇಬ್ಬರು ಆರೋಪಿಗಳ ಮೇಲೆ ಎಫ್‌ಐಆರ್ ದಾಖಲಾಗಿದೆ.
ಮೃತನ ಪತ್ನಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. A1 ಸಂಸದ ಡಾ.ಕೆ.ಸುಧಾಕರ್, a2 ನಾಗೇಶ, a3 ಮಂಜುನಾಥ್. ಬಿಎನ್‌ಎಸ್ 2023 ( u/s 108, 352. 351(2), (3)(5) ಹಾಗೂ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಎಫ್‌ಐಆರ್ ಆಗಿದೆ.
ನವದೆಹಲಿ: ನನ್ನ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಯಾರೆಂದು ನನಗೆ ಗೊತ್ತಿಲ್ಲ. ನನ್ನ ಹೆಸರು ಯಾಕೆ ಉಲ್ಲೇಖ ಮಾಡಿದ್ದಾರೆ ಎಂಬುದೂ ಗೊತ್ತಿಲ್ಲ ಎಂದು ಸಂಸದ ಡಾ ಕೆ.ಸುಧಾಕರ್ (Dr K Sudhakar) ಹೇಳಿದ್ದಾರೆ.
ಜಿಲ್ಲಾ ಪಂಚಾಯಿತಿ ಸಿಇಎ ಅವರ ಕಾರು ಚಾಲಕ ಡೆತ್‌ನೋಟ್‌ನಲ್ಲಿ (Death Note) ತಮ್ಮ ಹೆಸರು ಬರೆದಿಟ್ಟು ನೇಣಿಗೆ ಶರಣಾದ ಬಗ್ಗೆ ಅವರು ನವದೆಹಲಿಯಲ್ಲಿ (New Delhi) ಪ್ರತಿಕ್ರಿಯೆ ನೀಡಿದ್ದಾರೆ. ಬಾಬು ಆತ್ಮಹತ್ಯೆ (Suicide) ನನಗೆ ನೋವು ತಂದಿದೆ. ನನಗೆ ಬಾಬು ಎಂಬ ವ್ಯಕ್ತಿ ಗೊತ್ತಿಲ್ಲ. ನಾನು ಆತನ ಮುಖ ಸಹ ನೋಡಿಲ್ಲ. ಈ ವ್ಯಕ್ತಿ ಯಾಕೆ ನನ್ನ ಹೆಸರು ಉಲ್ಲೇಖ ಮಾಡಿದ್ದಾರೋ ಗೊತ್ತಿಲ್ಲ. ನಾಗೇಶ್ ಅವರ ಮಾವ ಚಿಕ್ಕಾಡಗನಹಳ್ಳಿ ಕೃಷ್ಣಮೂರ್ತಿಯ ಪರಿಚಯ ಇದೆ ಎಂದಿದ್ದಾರೆ. ಇದನ್ನೂ ಓದಿ: ಕೆ ಸುಧಾಕರ್ ಹೆಸರು ಬರೆದು ಕಾರು ಚಾಲಕ ಆತ್ಮಹತ್ಯೆ
ಬಾಬು ಕುಟುಂಬದವರು ದೂರು ಕೊಡಲು ಠಾಣೆಗೆ ಹೋದಾಗ ಅಲ್ಲಿನ ಪಿಎಸ್‌ಐ ಡೆತ್‌ನೋಟ್‌ನಲ್ಲಿರುವಂತೆ ದೂರು ಕೊಡಿ ಎಂದಿದ್ದಾರೆ. ಇದರಲ್ಲಿ ಶಾಸಕರ, ಉಸ್ತುವಾರಿ ಸಚಿವರ ರಾಜಕೀಯ ಇದೆ. ನನ್ನನ್ನೂ ಒಳಗೊಂಡಂತೆ ಯಾರೇ ತಪ್ಪಿತಸ್ಥರು ಇದ್ದರೂ ಅವರಿಗೆ ಉಗ್ರ ಶಿಕ್ಷೆಯಾಗಲಿ. ಕಾನೂನು ಏನೇ ಇರಲಿ ತನಿಖೆ ಪಾರದರ್ಶಕವಾಗಿರಲಿ. ಇದು ಮಾಧ್ಯಮದ ಟ್ರಯಲ್ ಆಗೋದು ಬೇಡ. ಸರಿಯಾಗಿ ತನಿಖೆ ಆಗಲಿ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: 25 ಲಕ್ಷ ವಂಚನೆ, ಸುಧಾಕರ್ ಹೆಸರು ಬರೆದಿಟ್ಟು ಚಾಲಕ ಸೂಸೈಡ್ – ಡೆತ್‌ನೋಟ್‌ನಲ್ಲಿ ಏನಿದೆ?
ದೆಹಲಿಯಿಂದ ವಾಪಾಸ್ಸಾದ ಬಳಿಕ ಮೃತನ ಕುಟುಂಬ ಸದಸ್ಯರನ್ನು ನಾನು ಭೇಟಿ ಮಾಡುತ್ತೇನೆ. ಇದರ ಹಿಂದೆ ರಾಜಕೀಯ ಪಿತೂರಿ ಇದೆ. ಇದು ಜಗಜ್ಜಾಹೀರಾಗಿದೆ. ಕಾಂಗ್ರೆಸ್ ಶಾಸಕರ ಹೆಸರು ಬಂದ್ರೆ ಒಂದು ಕಾನೂನು. ಬಿಜೆಪಿ ಶಾಸಕರು, ಸಂಸದರು ಹೆಸರು ಬಂದ್ರೆ ಬೇರೆ ಕಾನೂನು. ಬಾಬು ಸಾವನ್ನು ರಾಜಕೀಯ ಕಾರಣಕ್ಕೆ ಎಳೆದು ತರುವುದು ಸರಿ ಅಲ್ಲ. ಕೊಡಗು ಪ್ರಕರಣದಲ್ಲಿ ಶಾಸಕರ ಹೆಸರು ಯಾಕೆ ಹಾಕಿಲ್ಲ ಎಂದು ಪ್ರಶ್ನಿಸಿದ್ದಾರೆ.
ಏನಿದು ಪ್ರಕರಣ?
ಚಿಕ್ಕಬಳ್ಳಾಪುರ (Chikkaballapura) ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿಯ ಗುತ್ತಿಗೆ ನೌಕರ ಕಾರು ಚಾಲಕ ಬಾಬು ಜಿಲ್ಲಾಡಳಿತ ಭವನದ ಆವರಣದಲ್ಲಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಇಂದು ಬೆಳಗ್ಗೆ ಜಿಲ್ಲಾ ಪಂಚಾಯತ್ ಸಭಾಂಗಣದ ಪಕ್ಕದ ಮರದಡಿಯಲ್ಲೇ ಸರ್ಕಾರಿ ಕಾರು ನಿಲ್ಲಿಸಿ ಕಾರಿನ ಮೇಲೆ ಹತ್ತಿ ಹೊಂಗೆ ಮರಕ್ಕೆ ನೇಣು ಹಾಕಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಬಾಬು ಅವರು ಡೆತ್‌ನೋಟ್ ಅನ್ನು ಮಹಿಳಾ ಸಿಬ್ಬಂದಿಗೆ ಕಳುಹಿಸಿದ್ದರು. ಡೆತ್‌ನೋಟ್‌ನಲ್ಲಿ 25 ಲಕ್ಷ ರೂ. ವಂಚನೆ ಆರೋಪ ಮಾಡಿ, ನನ್ನ ಸಾವಿಗೆ ಡಾ ಕೆ.ಸುಧಾಕರ್ ಹಾಗೂ ನಾಗೇಶ್ ಕಾರಣ ಎಂದು ಉಲ್ಲೇಖಿಸಿದ್ದಾರೆ.
– ಕೆಸಿ ವ್ಯಾಲಿ ಮತ್ತು ಹೆಚ್ಎನ್ ವ್ಯಾಲಿ 3ನೇ ಹಂತದ ಶುದ್ಧೀಕರಣ ಅಗತ್ಯವಿಲ್ಲ ಎಂಬ ಕಾಂಗ್ರೆಸ್ ಧೋರಣೆಗೆ ಖಂಡನೆ
ಚಿಕ್ಕಬಳ್ಳಾಪುರ: ಕೆ.ಸಿ.ವ್ಯಾಲಿ ಮತ್ತು ಹೆಚ್.ಎನ್ ವ್ಯಾಲಿ ಯೋಜನೆಗಳಡಿ (HN Valley Project) 3ನೇ ಹಂತದ ಶುದ್ಧೀಕರಣ ಅಗತ್ಯವಿಲ್ಲ ಎಂಬ ಕಾಂಗ್ರೆಸ್ ಸರ್ಕಾರದ ಧೋರಣೆಯನ್ನು ಸಂಸದ ಡಾ.ಕೆ ಸುಧಾಕರ್ (K Sudhakar) ಖಂಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್ ಸರ್ಕಾರವು (Congress Government) ಜನರು ಸುರಕ್ಷಿತವಲ್ಲದ ನೀರನ್ನ ಕುಡಿಯಬೇಕೆಂದು ಬಯಸುತ್ತಿದೆಯಾ? ಸಾರ್ವಜನಿಕ ಆರೋಗ್ಯ ಸುರಕ್ಷತೆ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ಕಾಳಜಿ ಇಲ್ಲವಾ? ಕೆ.ಸಿ ವ್ಯಾಲಿ (KC Valley Project) ಮತ್ತು ಹೆಚ್.ಎನ್ ವ್ಯಾಲಿ ಯೋಜನೆ ಕುಡಿತು ನೀಡಿದ ಹೇಳಿಕೆಗಳು ಕಳವಳ ಕಾರಿ ಮತ್ತು ಖಂಡನೀಯವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ ಸುಧಾಕರ್ ಅವರೇ, 3ನೇ ಹಂತದ ಶುದ್ಧೀಕರಣ ಇಲ್ಲದೇ ಈ ನೀರನ್ನ ಕುಡಿಯಲು ಬಳಸಬಹುದು ಎಂದು ಹೇಳಿದ್ದಾರೆ. ಈ ನೀರನ್ನು ಮೊದಲು ಸಚಿವರೇ ಕುಡಿದು ಹಾಗೂ ತಮ್ಮ ಮನೆಗಳಲ್ಲಿ ಉಪಯೋಗಿಸಿ ತೋರಿಸಲಿ. ಹಾಗೆಯೇ ಕಾಂಗ್ರೆಸ್ ಶಾಸಕರಿಗೆ ಮತ್ತು ಸಂಪುಟ ಸಹೋದ್ಯೋಗಿಗಳಿಗೆ ಕುಡಿಯಲು ಕೊಡಲಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ದಿವಾಳಿ ಆಗಿದೆ ಅಥವಾ 3ನೇ ಹಂತದ ಶುದ್ಧೀಕರಣ ಮಾಡಲು ಸರ್ಕಾರಕ್ಕೆ ರಾಜಕೀಯ ಇಚ್ಛಾಶಕ್ತಿ ಇಲ್ಲ ಎಂದು ಪ್ರಾಮಾಣಿಕತೆಯಿಂದ ಒಪ್ಪಿಕೊಳ್ಳಲಿ. ಅದು ಬಿಟ್ಟು 3ನೇ ಹಂತದ ಶುದ್ಧೀಕರಣವೇ ಅಗತ್ಯವಿಲ್ಲ ಎಂದು ಬೇಜವಾಬ್ದಾರಿ ಹೇಳಿಕೆ ನೀಡುವುದು ಯಾವ ಸೀಮೆ ನ್ಯಾಯ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಕಾಂಗ್ರೆಸ್‌ನ ದಿವಾಳಿ ಸರ್ಕಾರದ ಪಾಪಕ್ಕೆ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ ಜನತೆ ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳಬೇಕಾ? ತಮ್ಮ ಪಾಪರ್ ಸರ್ಕಾರದ ಅಯೋಗ್ಯತೆಗೆ ಅಮಾಯಕ ಜನರು ಬಲಿಯಾಗಬೇಕಾ? ಕಾಂಗ್ರೆಸ್ ಸರ್ಕಾರಕ್ಕೆ ಯೋಗ್ಯತೆ ಇದ್ದರೆ 3ನೇ ಹಂತದ ಶುದ್ಧೀಕರಣ ಮಾಡಿಸಲಿ. ಇಲ್ಲವಾದ್ರೆ 2028 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ 3ನೇ ಹಂತದ ಶುದ್ಧೀಕರಣ ಯೋಜನೆ ಜಾರಿ ಮಾಡಲಿದೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರು: ಎತ್ತಿನಹೊಳೆ ನೀರನ್ನು ಚಿಕ್ಕಬಳ್ಳಾಪುರ ಹಾಗೂ ಕೋಲಾರ ಭಾಗಕ್ಕೆ ಎರಡು ವರ್ಷಗಳಲ್ಲಿ ಹರಿಸಿದರೆ ಡಿಕೆ ಶಿವಕುಮಾರ್ (D K Shivakumar) ಅವರನ್ನು ಭಗೀರಥ ಎಂದು ಕರೆಯುತ್ತೇನೆ ಎನ್ನುವ ಸಂಸದ ಸುಧಾಕರ್ (Dr K Sudhakar) ಅವರ ಹೇಳಿಕೆಯ ಬಗ್ಗೆ ಕೇಳಿದಾಗ, ಕೆ.ಸುಧಾಕರ್ ಅವರು ಸವಾಲು ಹಾಕಿದ್ದಾರೆ. ಈ ಸವಾಲನ್ನು ನಾನು ಪ್ರೀತಿ, ಗೌರವಗಳಿಂದ ಸ್ವೀಕರಿಸುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ಇದು ನನ್ನ ಜವಾಬ್ದಾರಿ ಹಾಗೂ ಸಲಹೆ ಎಂದು ಭಾವಿಸುತ್ತೇನೆ. ಎತ್ತಿನಹೊಳೆ ಭೂಮಿ ಪೂಜೆಯಲ್ಲಿ ಅವರೂ ಇದ್ದರು. ಚಿಕ್ಕಬಳ್ಳಾಪುರ ಮತ್ತು ಕೋಲಾರ ಭಾಗಕ್ಕೆ ನೀರು ದೊರೆಯಲಿ ಎಂಬುದು ಅವರ ಆಸೆ. ಅವರ ಆಸೆ ಈಡೇರಿಸುವ ಕೆಲಸ ಮಾಡೋಣ ಎಂದರು. ಇದನ್ನೂ ಓದಿ: ರಸ್ತೆ ದಾಟುತ್ತಿದ್ದ ವ್ಯಕ್ತಿ ಮೇಲೆ ಹರಿದ ಕಾರು – 10 ಮೀಟರ್ ಎಳೆದೊಯ್ದು ಚಾಲಕ ಎಸ್ಕೇಪ್!
ಕೋಲಾರ ಭಾಗಕ್ಕೆ ಎತ್ತಿನಹೊಳೆ ನೀರು ತರಬೇಕು ಎಂದು ವೀರಪ್ಪ ಮೊಯಿಲಿ, ಕೆ.ಎಚ್.ಮುನಿಯಪ್ಪ, ಸುಬ್ಬಾರೆಡ್ಡಿ, ಶಿವಶಂಕರ್ ರೆಡ್ಡಿ, ರಮೇಶ್ ಕುಮಾರ್, ಕೃಷ್ಣಭೈರೇಗೌಡ ಹಾಗೂ ಸುಧಾಕರ್ ಸೇರಿದಂತೆ ಅನೇಕರು ಕುಡಿಯುವ ನೀರು ಹಾಗೂ ಶಾಶ್ವತ ನೀರಾವರಿಗಾಗಿ ಹೋರಾಟ ಮಾಡಿದ್ದಾರೆ. ಕೋಲಾರ ಭಾಗದ ಜನರ ನೀರಿನ ಸಂಕಷ್ಟ ನನಗೆ ಅರಿವಿದೆ ಎಂದರು. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ನಾನು ಸಿಎಂ ಆಗ್ತೀನಿ, ಸೀನಿಯಾರಿಟಿ ಬೇಕಿಲ್ಲ: ಎಂ.ಬಿ ಪಾಟೀಲ್
ಖಾಸಗಿ ಕಾರ್ಯಕ್ರಮದ ನಿಮಿತ್ತ ನಾನು ಊರಿನಲ್ಲಿ ಇರುವುದಿಲ್ಲ. ಅನಂತರ ಎತ್ತಿನಹೊಳೆ ಯೋಜನೆಯಲ್ಲಿ ತುಮಕೂರು, ದೊಡ್ಡಬಳ್ಳಾಪುರ ಭಾಗದ ಸಮಸ್ಯೆಗಳ ವಿವರಣೆ ಹಾಗೂ ಅರಣ್ಯ ಭೂಮಿ ಸ್ವಾಧೀನ ತೊಂದರೆಗಳನ್ನು ಮುಖ್ಯಮಂತ್ರಿಗಳ ಬಳಿ ಒಂದು ವಾರಗಳ ನಂತರ ಮಾತನಾಡಿ ಬಗೆಹರಿಸಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ಮಡಿಕೇರಿಯಲ್ಲಿ ಶ್ರೀಮಂತ ಗಣಪ ಮತ್ತಷ್ಟು ಸಿರಿವಂತ!
ಇನ್ನು ಒಂದು ತಿಂಗಳಲ್ಲಿ ಕೋವಿಡ್ ವರದಿಯನ್ನು ನೀಡುವಂತೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವಾಗಿರುವ ಕಾರಣಕ್ಕೆ ಸುಧಾಕರ್ ಅವರು ನಿಮ್ಮನ್ನು ಪದೇಪದೇ ಹೊಗಳುತ್ತಿದ್ದಾರೆಯೇ ಎಂದು ಕೇಳಿದಾಗ, ನನಗೆ ಕೋವಿಡ್ ವರದಿಯ ಬಗ್ಗೆ ಏನು ಗೊತ್ತಿಲ್ಲ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಾನು ಭಾಗವಹಿಸಿರಲಿಲ್ಲ. ಸಕಲೇಶಪುರದ ಎತ್ತಿನಹೊಳೆಯಲ್ಲಿದ್ದೆ ಎಂದರು. ಇದನ್ನೂ ಓದಿ: 500 ಮೀಟರ್ ಓಡಿ ರೈಲ್ವೆ ದುರಂತ ತಪ್ಪಿಸಿದ ನಿರ್ವಾಹಕ
ಸುಧಾಕರ್ ಈಗ ಎಂಪಿ ಅಲ್ಲವೇ?
ಮಾತಿನ ಮಧ್ಯೆ ಡಿಸಿಎಂ ಅವರು, ಸುಧಾಕರ್ ಈಗ ಎಂಪಿ ಅಲ್ಲವೇ? ಎಂದು ಮಾಧ್ಯಮದವರ ಬಳಿ ಪ್ರಶ್ನಿಸಿದರು. ನಮ್ಮಲ್ಲಿ ಇಬ್ಬರು ಸುಧಾಕರ್ ಇದ್ದಾರೆ. ಇವರೂ ಸೇರಿ ಮೂರು ಜನ ಆಗುತ್ತಾರೆ. ನಮ್ಮವರು ಇಬ್ಬರೂ ಮಂತ್ರಿಗಳು. ಇವರು ಸಂಸದರು ಎಂದಾಗ, ಮಾಧ್ಯಮದವರು ‘ಮಾಜಿ ಸಚಿವರು ಆಗಿದ್ದರು’ ಎಂದು ಹೇಳಿದಾಗ ಮಾಜಿ ಸಚಿವ ಸುಧಾಕರ್ ಎಂದರು. ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಹಳಿ ತಪ್ಪಿದ ರೈಲು – ತಪ್ಪಿದ ಭಾರೀ ಅನಾಹುತ
ಗೌರಿ ಹಬ್ಬದ ದಿನ ಗಂಗೆಯನ್ನು ಪೂಜೆ ಮಾಡಿ ಸಂಭ್ರಮ ಪಟ್ಟಿದ್ದೇವೆ. ಇದನ್ನು ಒಂದು ಒಂದಷ್ಟು ಜನ ನೋಡಿ ಸಂಭ್ರಮಪಟ್ಟಿದ್ದಾರೆ ಟೀಕೆ ಮಾಡಿದ್ದಾರೆ. ನಮ್ಮ ಕೆಲಸವನ್ನು ನಾವು ಮಾಡಿದ್ದೇವೆ. ಬರಗಾಲದ ಛಾಯೆ ದೂರವಾಗಿ, ಉತ್ತಮ ಮಳೆಬಿದ್ದು ಜಲಾಶಯಗಳು ತುಂಬಿವೆ. ಬಯಲು ಸೀಮೆಯಲ್ಲಿ ಒಂದಿಷ್ಟು ಕಡೆ ಮಳೆ ಕಡಿಮೆಯಾಗಿದೆ. ಮಂಡ್ಯ ಬೆಂಗಳೂರು ಗ್ರಾಮಾಂತರ ತುಮಕೂರು ಈ ಭಾಗದಲ್ಲಿ ಇನ್ನೂ ಕೆರೆಗಳು ತುಂಬಿಲ್ಲ. ಬಿಜೆಪಿ ಆಡಳಿತಾವಧಿಯಲ್ಲಿ ಎತ್ತಿನಹೊಳೆ ಯೋಜನೆ ಪ್ರಗತಿ ಕಂಡಿರಲಿಲ್ಲ. ಇದಕ್ಕೆ ನಾನಾ ಕಾರಣಗಳು ಇರಬಹುದು ಎಂದು ಹೇಳಿದರು. ಇದನ್ನೂ ಓದಿ: ರಷ್ಯಾ ವಿರುದ್ಧ ಉಕ್ರೇನ್ ಪ್ರತೀಕಾರದ ದಾಳಿ – ಬೆಂಕಿ ಉಂಡೆ ಉಗುಳುವ ʻಡ್ರ್ಯಾಗನ್ ಡ್ರೋನ್ʼ ಅಸ್ತ್ರ ಪ್ರಯೋಗ
– ಯೋಜನೆಯನ್ನು ತಾರ್ಕಿಕ ಹಂತಕ್ಕೆ ಕೊಂಡೊಯ್ದಿದ್ದಕ್ಕೆ ಡಿಕೆಶಿಗೆ ಅಭಿನಂದನೆ – ಕೋವಿಡ್ ವರದಿಯಲ್ಲಿ ಅಧಿಕಾರಿಗಳ ವ್ಯಾಖ್ಯಾನ ಕಾದು ನೋಡೋಣ
ಬೆಂಗಳೂರು: ಎತ್ತಿನಹೊಳೆ ಯೋಜನೆಯಲ್ಲಿ (Yettinahole Project) ನಾನು ಯಾವುದೇ ಕಾರಣಕ್ಕೂ ರಾಜಕೀಯ ಮಾಡಲು ಹೋಗುವುದಿಲ್ಲ ಎಂದು ಸಂಸದ ಡಾ.ಕೆ.ಸುಧಾಕರ್ (yettinahole project) ಹೇಳಿದ್ದಾರೆ.
ಎತ್ತಿನಹೊಳೆ ಯೋಜನೆಯ ಮೊದಲ ಹಂತಕ್ಕೆ ಇಂದು ಚಾಲನೆ ನೀಡಿದ ಹಿನ್ನೆಲೆ ನಗರದಲ್ಲಿ (Bengaluru) ಮಾತನಾಡಿದ ಅವರು, 2014 ರಲ್ಲಿ ಎತ್ತಿನಹೊಳೆ ಯೋಜನೆಗೆ ಸಿಎಂ ಸಿದ್ದರಾಮಯ್ಯ ಅವರು ನನ್ನ ಅಧ್ಯಕ್ಷತೆಯಲ್ಲೇ ಶಂಕುಸ್ಥಾಪನೆ ಮಾಡಿದರು. ಇವತ್ತು ಯೋಜನೆಯ ಮೊದಲ ಹಂತದ ಉದ್ಘಾಟನಾ ಕಾರ್ಯಕ್ರಮಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ನನಗೆ ವೈಯಕ್ತಿಕವಾಗಿ ಆಹ್ವಾನ ಕೊಟ್ಟಿದ್ದರು. ನಾನು ಅವರಿಗೆ ಆಭಾರಿ ಆಗಿರುತ್ತೇನೆ ಎಂದು ಹೇಳಿದರು.
ಈಗ ಎತ್ತಿನಹೊಳೆ ಯೋಜನೆಯ ಪರಿಷ್ಕೃತ ಅಂದಾಜು ಮೊತ್ತ 24 ಸಾವಿರ ಕೋಟಿ ರೂ. ಆಗಿದೆ. ಕೋಲಾರ-ಚಿಕ್ಕಬಳ್ಳಾಪುರಕ್ಕೆ ಮೊದಲ ಹಂತದಲ್ಲಿ ನೀರು ತರುವುದು ಸಾಧ್ಯವಾಗಲಿಲ್ಲ. ಇದಕ್ಕೆ ಇನ್ನೂ ಜಲಾಶಯ ನಿರ್ಮಾಣ ಬಾಕಿ ಇದೆ. ಇನ್ನೂ ಭೂಸ್ವಾಧೀನ ಕೆಲಸ ಬಾಕಿ ಇದೆ. ಮುಂದುವರೆಯಬೇಕಿರುವ ಕಾಮಗಾರಿಗಳನ್ನು ಆದಷ್ಟು ಪ್ರಾಶಸ್ತ್ಯ ರೂಪದಲ್ಲಿ ಕೈಗೊಳ್ಳಲಿ ಎಂದು ನಾನು ಡಿಕೆಶಿ ಅವರಿಗೆ ಮನವಿ ಮಾಡುತ್ತೇನೆ. ನಮ್ಮ ಜಿಲ್ಲೆಗಳಲ್ಲಿ ಎಸ್‌ಟಿಪಿ ನೀರು ಕುಡಿಯುತ್ತಿದ್ದೇವೆ. ಎಸ್‌ಟಿಪಿ ನೀರು ಕುಡಿಯುವಂತಹ ನಮ್ಮ ಅವಳಿ ಜಿಲ್ಲೆಗಳ ಜನರ ಶಾಪಕ್ಕೆ ನಾವು ಒಳಗಾಗಿದ್ದಾರೆ. ಈ ಶಾಪದಿಂದ ಈ ಸರ್ಕಾರ ನಮ್ಮನ್ನು ವಿಮುಕ್ತಿ ಮಾಡಲಿ ಎಂದು ಕೇಳಿಕೊಂಡರು. ಇದನ್ನೂ ಓದಿ: 2026-27 ರೊಳಗೆ ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸುವ ವಿಶ್ವಾಸ: ಸಿದ್ದರಾಮಯ್ಯ
ಎತ್ತಿನಹೊಳೆ ಯೋಜನೆ ಕೈಗೆತ್ತಿಕೊಂಡಿದ್ದು ಸಿದ್ದರಾಮಯ್ಯ ನೇತೃತ್ವದ ಅಂದಿನ ಕಾಂಗ್ರೆಸ್ ಸರ್ಕಾರ. ಇದರಲ್ಲಿ ಎರಡು ಮಾತಿಲ್ಲ. ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಗಡಿ ಭಾಗಕ್ಕೆ ಕೃಷ್ಣ ನೀರು ಬಂದಿದೆ. ಕೃಷ್ಣ ನೀರನ್ನು ಬಳಸಿಕೊಂಡರೆ ಶಾಶ್ವತ ಪರಿಹಾರ ಸಿಗುತ್ತದೆ. ಈ ಸಂಬಂಧ ಆಂಧ್ರ ಸಿಎಂ ಜೊತೆ ಮಾತನಾಡಿ, ಕೇಂದ್ರಕ್ಕೂ ಸರ್ವಪಕ್ಷ ನಿಯೋಗ ಕೊಂಡೊಯ್ದರೆ ಇದು ಸಾಧ್ಯವಾಗುತ್ತೆ. ಚಂದ್ರಬಾಬುನಾಯ್ಡು ನಮ್ಮ ಎನ್‌ಡಿಎ ಒಕ್ಕೂಟದ ಒಂದು ಭಾಗ. 10 ಟಿಎಂಸಿ ನೀರನ್ನು ನಾರಾಯಣಪುರ ಜಲಾಶಯದ ಮೂಲಕ ಆಂಧ್ರಕ್ಕೆ ಕೊಟ್ಟು, ಕೃಷ್ಣ ನೀರನ್ನು ಈ ಭಾಗದಲ್ಲಿ ಬಳಸಿಕೊಳ್ಳಬೇಕು. ಆರು ತಿಂಗಳೊಳಗೆ ಇದು ಸಾಧ್ಯವಾಗುತ್ತದೆ. ಶಾಶ್ವತ ಪರಿಹಾರವೂ ಸಿಗುತ್ತದೆ. ಎತ್ತಿನಹೊಳೆ ಎರಡನೇ ಹಂತದ ಕಾಮಗಾರಿ ಕೈಗೆತ್ತಿಕೊಳ್ಳಿ. ಅದಕ್ಕಿಂತ ಸುಲಭವಾಗಿ ಇದನ್ನ ಮಾಡಬಹುದು. ನೆರೆಯ ಆಂಧ್ರದ ಗಡಿಗೆ ಬಂದಿರುವ ಕೃಷ್ಣ ನೀರು ಬಳಕೆಗೆ ಕ್ರಮವಹಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಎತ್ತಿನಹೊಳೆ ಯೋಜನೆಯಲ್ಲಿ ಸಾವಿರಾರು ಕೋಟಿ ರೂ. ಭ್ರಷ್ಟಾಚಾರ ಆಗಿದೆ ಎಂಬ ಸಿ.ಟಿ.ರವಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿ, ಎತ್ತಿನಹೊಳೆ ಯೋಜನೆಯಲ್ಲಿ 24 ಟಿಎಂಸಿ ನೀರು ಸಿಗುವುದಿಲ್ಲ ಎನ್ನುವ ಚರ್ಚೆ ಹತ್ತು ವರ್ಷಗಳಿಂದಲೂ ಇದೆ. ಒಟ್ಟಾರೆ ನಮ್ಮ ಭಾಗದ ಜನರಿಗೆ ನೀರು ಸಿಕ್ಕರೆ ಸಾಕು. ಸಿ.ಟಿ.ರವಿ ಅವರು ಮಾಡಿರುವ ಭ್ರಷ್ಟಾಚಾರ ಆರೋಪದ ಬಗ್ಗೆ ನನಗೆ ಗೊತ್ತಿಲ್ಲ. ಎಲ್ಲಾ ಯೋಜನೆಗಳಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಪ್ರಶ್ನೆ ಮಾಡಿದರೆ ಅಭಿವೃದ್ಧಿಯೇ ಆಗುವುದಿಲ್ಲ. ಸಿ.ಟಿ.ರವಿ ಅವರು ಹಾಗೆ ಹೇಳಲು ಅವರ ಬಳಿ ಮಾಹಿತಿ ಏನಿದೆಯೋ ನನಗೆ ಗೊತ್ತಿಲ್ಲ. ಆದರೆ ಡಿಕೆಶಿ ಅವರು ಎತ್ತಿನಹೊಳೆ ಯೋಜನೆಯನ್ನು ತಾರ್ಕಿಕ ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಅದಕ್ಕೆ ನಾನು ಅವರನ್ನು ಅಭಿನಂದಿಸುತ್ತೇನೆ. ಎಲ್ಲರೂ ಎತ್ತಿನಹೊಳೆ ಯೋಜನೆಗೆ ಶ್ರಮಿಸಿದ್ದಾರೆ. ಎಲ್ಲರಿಗೂ ಇದರ ಯಶಸ್ಸಿನ ಕೀರ್ತಿ ಸಿಗಬೇಕು. ಪ್ರಮಾಣ ಸ್ವಲ್ಪ ಹೆಚ್ಚು ಕಡಿಮೆ ಆಗಬಹುದು ಅಷ್ಟೇ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕೋವಿಡ್ ಮಧ್ಯಂತರ ವರದಿ ಬಗ್ಗೆ ಅಧಿಕಾರಿಗಳ ಪರಿಶೀಲನೆಗೆ ಕೊಟ್ಟಿರುವ ವಿಚಾರ ತಿಳಿಸಿದ ಅವರು, ಕೋವಿಡ್‌ನ ದೊಡ್ಡ ಆಪತ್ಕಾಲದಲ್ಲಿ ನಾವು ಪರಿಸ್ಥಿತಿ ಎದುರಿಸಿದ್ದೇವೆ. ಸರ್ಕಾರ, ನಿವೃತ್ತ ನ್ಯಾಯಾಧೀಶರಿಂದ ಮಧ್ಯಂತರ ವರದಿ ತರಿಸಿಕೊಂಡಿದೆ. ಅದಕ್ಕೆ ನನ್ನ ಸ್ವಾಗತವಿದೆ. ಈ ವರದಿಯನ್ನು ಅಧಿಕಾರಿಗಳ ಪರಿಶೀಲನೆಗೆ ಕೊಟ್ಟಿದ್ದಾರೆ. ಇದನ್ನೂ ನಾನು ಸ್ವಾಗತಿಸುತ್ತೇನೆ. ಕೋವಿಡ್‌ನ್ನು ಒಬ್ಬ ವ್ಯಕ್ತಿ ನಿರ್ವಹಿಸಿಲ್ಲ, ಇಡೀ ಸರ್ಕಾರ ಕೋವಿಡ್ ನಿರ್ವಹಣೆ ಮಾಡಿದೆ. ನಾವೆಲ್ಲರೂ ಎಲ್ಲೂ ಹೋಗುವುದಿಲ್ಲ. ನಾನು, ಬೊಮ್ಮಾಯಿ, ಯಡಿಯೂರಪ್ಪ ಮತ್ತು ಅಂದಿನ ಸಚಿವರೆಲ್ಲರೂ ಕೋವಿಡ್ ನಿರ್ವಹಿಸಿದ್ದೇವೆ. ನಾವೆಲ್ಲರೂ ಎಲ್ಲೂ ಹೋಗುವುದಿಲ್ಲ, ಇಲ್ಲೇ ಇರುತ್ತೇವೆ. ಅವರು ಸುಧಾಕರ್ ವಿರುದ್ಧ ತನಿಖೆ ಎಂದು ಹೇಳಿದ್ದಾರಾ? ಇಲ್ವಲ್ಲ. ನಾನು ಇನ್ನೂ ಮಧ್ಯಂತರ ವರದಿ ಓದಲಿಲ್ಲ. ಅಧಿಕಾರಿಗಳ ವ್ಯಾಖ್ಯಾನ ಏನು ಬರುತ್ತೆ ಎಂದು ಕಾದು ನೋಡೋಣ ಎಂದು ತಿಳಿಸಿದರು.
ಅನೇಕರು ಶಂಕೆ ಉಂಟು ಮಾಡುವ ರೀತಿಯಲ್ಲಿ ಮಾತನಾಡಿದ್ದಾರೆ. ಆದಷ್ಟು ಬೇಗ ಕೋವಿಡ್ ಬಗ್ಗೆ ಅಧಿಕಾರಿಗಳ ವರದಿ ಬರಲಿ. ಯಡಿಯೂರಪ್ಪನವರ ಕಾಲದಲ್ಲಿ ಯಾವ ರೀತಿಯ ಕೋವಿಡ್ ನಿರ್ವಹಣೆಯಾಗಿತ್ತು ಎಂದು ಗೊತ್ತಾಗಲಿ. ಅಧಿಕಾರಿಗಳ ವರದಿ ಬಂದ ನಂತರವೇ ನಾನು ಇದರ ಬಗ್ಗೆ ಉತ್ತರ ಕೊಡುತ್ತೇನೆ. ಈಗ ನನ್ನ ಬಳಿ ಹೇಳಲು ಏನೂ ಇಲ್ಲ. ಅನೇಕರ ಪ್ರಾಣ ರಕ್ಷಣೆಯನ್ನು ಮಾಡುವ ಸಲುವಾಗಿ ಆವತ್ತಿನ ಒತ್ತಡದ ಕಾಲದಲ್ಲಿ ಕೆಲವು ನಿರ್ಣಯ ತೆಗೆದುಕೊಂಡಿದ್ದೆವು. ಇವತ್ತು ಅದನ್ನು ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ. ಮಾಡಲಿ ಸತ್ಯ ಎಲ್ಲರಿಗೂ ಗೊತ್ತಾಗುತ್ತೆ ಎಂದು ಪ್ರತಿಕ್ರಿಯಿಸಿದರು.
ಮುಡಾ/ವಾಲ್ಮೀಕಿ ಅಕ್ರಮಗಳ ಹಿನ್ನೆಲೆ ಕೋವಿಡ್ ಮೂಲಕ ಟಾರ್ಗೆಟ್ ಮಾಡಲಾಗುತ್ತಿದೆ ಎಂಬುದಕ್ಕೆ, ಇದರ ಬಗ್ಗೆ ನನಗೆ ಗೊತ್ತಿಲ್ಲ. ಇದಕ್ಕೆ ಉತ್ತರಿಸಲು ರಾಜ್ಯಾಧ್ಯಕ್ಷರಿದ್ದಾರೆ. ಪ್ರತಿಪಕ್ಷ ನಾಯಕರಿದ್ದಾರೆ. ಹೆಚ್.ಕೆ ಪಾಟೀಲ್‌ರ ಹೇಳಿಕೆಯನ್ನು ನಾನು ಗಮನಿಸಿಲ್ಲ. ಹೆಚ್.ಕೆ.ಪಾಟೀಲ್ ಹೇಳಿದಾಕ್ಷಣ ಎಲ್ಲವೂ ಮುಗಿಯುತ್ತಾ? ಅವರು ಸಚಿವ ಸಂಪುಟದ ವಕ್ತಾರರು ಅಷ್ಟೇ. ಅವರೇನು ನ್ಯಾಯಾಧೀಶರೇ? ಅವರು ವಕ್ತಾರರ ಕೆಲಸ ಮಾತ್ರ ಮಾಡಬೇಕೇ ಹೊರತು ನ್ಯಾಯಧೀಶರ ಕೆಲಸ ಯಾಕೆ ಮಾಡಬೇಕು ಎಂದು ಹೆಚ್.ಕೆ.ಪಾಟೀಲ್ ವಿರುದ್ಧ ಗರಂ ಆದರು. ಇದನ್ನೂ ಓದಿ: ಕರ್ನಾಟಕಕ್ಕೆ ಒಬ್ಬ ಯೋಗಿ ಆದಿತ್ಯನಾಥ್ ಬೇಕೇ ಹೊರತು ಜಾತಿವಾದಿ ನಾಯಕರಲ್ಲ: ಪ್ರತಾಪ್ ಸಿಂಹ
-ದ್ರಾಕ್ಷಿ ಬೆಳೆಗಾರರಿಗೆ ಕೇಂದ್ರ ಕೃಷಿ, ರೈತರ ಕಲ್ಯಾಣ ಸಚಿವಾಲಯದಿಂದ ಸಹಾಯ
ಬೆಂಗಳೂರು: ಚಿಕ್ಕಬಳ್ಳಾಪುರ (Chikkaballapur) ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ (Bengaluru rural district) ದ್ರಾಕ್ಷಿ ಕೃಷಿಯನ್ನು ಪ್ರೋತ್ಸಾಹಿಸಲು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಬೆಳೆಗಾರರಿಗೆ ಹನಿ ನೀರಾವರಿಗಾಗಿ ಸಾಮಾನ್ಯ ವರ್ಗಕ್ಕೆ ಶೇ.75 ಹಾಗೂ ಎಸ್‌ಸಿ/ಎಸ್‌ಟಿ ವರ್ಗಕ್ಕೆ 90% ಸಹಾಯಧನ ನೀಡಲಾಗುತ್ತಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಸಂಸದ ಡಾ.ಕೆ.ಸುಧಾಕರ್ (Dr. K. Sudhakar) ಅವರು ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಡಿ, ದ್ರಾಕ್ಷಿ ಬೆಳೆಗಾರರ ಸಂಕಷ್ಟಗಳನ್ನು ಸರ್ಕಾರದ ಗಮನಕ್ಕೆ ತಂದು ಪ್ರಶ್ನೆ ಕೇಳಿದ್ದಾರೆ. ಈ ಕುರಿತು ಕೇಂದ್ರ ಸರ್ಕಾರ ಲಿಖಿತ ಉತ್ತರ ನೀಡಿದೆ. ದ್ರಾಕ್ಷಿ ಬೆಳೆಗಾರರು ಇತ್ತೀಚಿನ ವರ್ಷಗಳಲ್ಲಿ ವಿವಿಧ ಕಾರಣಗಳಿಂದ ಅಪಾರ ನಷ್ಟ ಅನುಭವಿಸಿದ್ದಾರೆ. ಈ ಬೆಳೆಗಾರರಿಗೆ ಪ್ರೋತ್ಸಾಹ ನೀಡಲು ಸರ್ಕಾರ ಯಾವೆಲ್ಲ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಈ ಕುರಿತು ಉತ್ತರ ನೀಡಿರುವ ಸಚಿವಾಲಯ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ, ಸಾಮಾನ್ಯ ವರ್ಗದ ಬೆಳೆಗಾರರಿಗೆ ಹೆಕ್ಟೇರ್‌ಗೆ ಗರಿಷ್ಠ 24,000 ರೂ. ಹಾಗೂ ಎಸ್‌ಸಿ/ಎಸ್‌ಟಿ ಗೆ ಹೆಕ್ಟೇರ್‌ಗೆ ಗರಿಷ್ಠ 30,000 ರೂ. ಗೊಬ್ಬರ ಸಹಾಯಧನ ನೀಡಲಾಗುತ್ತಿದೆ. ಜೊತೆಗೆ ಪೌಷ್ಠಿಕಾಂಶ ಹಾಗೂ ರೋಗ ನಿಯಂತ್ರಣಕ್ಕಾಗಿ ಹೆಕ್ಟೇರ್‌ಗೆ ಗರಿಷ್ಠ 2,000 ರೂ. ನೀಡಲಾಗುತ್ತಿದೆ. ಕೀಟನಾಶಕ ಮತ್ತು ಗೊಬ್ಬರ ಸಿಂಪಡಣೆಗಾಗಿ ಯಂತ್ರ ಖರೀದಿಗೆ ಸಾಮಾನ್ಯ ವರ್ಗಕ್ಕೆ ಗರಿಷ್ಠ 76,000 ರೂ. ಹಾಗೂ ಎಸ್‌ಸಿ/ಎಸ್‌ಟಿ ಗೆ ಗರಿಷ್ಠ 95,000 ರೂ. ಸಹಾಯಧನ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದೆ.
2021-22 ಹಾಗೂ 2022-23ನೇ ಸಾಲಿನಲ್ಲಿ ಅತಿಯಾದ ಮಳೆ ಹಾಗೂ ರೋಗಗಳಿಂದಾಗಿ ದ್ರಾಕ್ಷಿ ಬೆಳೆ ಪ್ರದೇಶ ಹಾಗೂ ಉತ್ಪಾದನೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. 2022-23 ರಲ್ಲಿ ಚಿಕ್ಕಬಳ್ಳಾಪುರದಲ್ಲಿ 568 ಹೆಕ್ಟೇರ್‌ನಲ್ಲಿ ದ್ರಾಕ್ಷಿ ಬೆಳೆದಿದ್ದು, 13,113 ಟನ್ ಉತ್ಪಾದನೆಯಾಗಿದೆ. ಇದೇ ಸಾಲಿನಲ್ಲಿ ಬೆಂಗಳೂರು ಗ್ರಾಮಾಂತರದಲ್ಲಿ 1,712 ಹೆಕ್ಟೇರ್‌ನಲ್ಲಿ ದ್ರಾಕ್ಷಿ ಬೆಳೆದಿದ್ದು, 43,086 ಟನ್ ದ್ರಾಕ್ಷಿ ಉತ್ಪಾದನೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಬೆಳೆಗಾರರು ನಷ್ಟ ಪರಿಹಾರ ಪಡೆಯಲು, ಹವಾಮಾನ ಆಧಾರಿತ ಬೆಳೆ ಬಿಮೆ ಯೋಜನೆಗೆ (RWBCIS) ಹೆಸರು ನೋಂದಾಯಿಸಲು ಸಲಹೆ ನೀಡಲಾಗುತ್ತಿದೆ. ಈ ಯೋಜನೆಯಡಿ, 5% ರಷ್ಟು ಅಂದರೆ ಹೆಕ್ಟೇರ್‌ಗೆ 14,000 ರೂ. ವಿಮೆ ಪಾವತಿಸಬೇಕು. ನಷ್ಟವಾದಾಗ ಹೆಕ್ಟೇರ್‌ಗೆ 2.80 ಲಕ್ಷ ರೂ. ಪರಿಹಾರ ಸಿಗಲಿದೆ ಎಂದು ಸಚಿವಾಲಯ ತಿಳಿಸಿದೆ.
ಬೆಂಗಳೂರು: 20 ವರ್ಷದ ರಾಜಕಾರಣದಲ್ಲಿ ನಾನು ಎಂದೂ ಮದ್ಯ ಹಂಚಿ ರಾಜಕಾರಣ ಮಾಡಿಲ್ಲ ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ನೂತನ ಸಂಸದ ಡಾ.ಕೆ.ಸುಧಾಕರ್ ಗೆ (Dr Sudhakar) ನೆಲಮಂಗಲದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಬಾಡೂಟದ ಜೊತೆಯಲ್ಲಿ ಮದ್ಯ ಹಂಚಿದ್ದಾರೆಂಬ ಆರೋಪ ಕೇಳಿಬಂದಿತ್ತು. ಈ ಕುರಿತು ಚಿಕ್ಕಬಳ್ಳಾಪರ ಜಿಲ್ಲಾಡಳಿತ ಭವನದ ಸಂಸದರ ಕಚೇರಿಯಲ್ಲಿ ಜನಸ್ಪಂದನಾ ಕಾರ್ಯಕ್ರಮ ನಡೆಸಿ ಮಾತನಾಡಿದ ಡಾ.ಕೆ.ಸುಧಾಕರ್, ಈ ಬಗ್ಗೆ ನನಗೇನೂ ಗೊತ್ತಿಲ್ಲ. ಮಾಧ್ಯಮಗಳಲ್ಲಿ ಬಂದ ನಂತರ ಘಟನೆ ಬಗ್ಗೆ ತಿಳಿಯಿತು. ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ನನಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ಆಯೋಜನೆ ಮಾಡಿದ್ರು ಎಂದರು.
ನಮ್ಮದೇ ಕಾರ್ಯಕರ್ತರು ಮದ್ಯ ಹಂಚಿಕೆ ಮಾಡಿದ್ರೆ ಅದು ತಪ್ಪು. 20 ವರ್ಷದ ರಾಜಕಾರಣದಲ್ಲಿ ನಾನು ಎಂದೂ ಮದ್ಯ ಹಂಚಿ ರಾಜಕಾರಣ ಮಾಡಿಲ್ಲ, ಈ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ, ನನಗೂ ನೋವಾಗಿದೆ ಇದು ಅಕ್ಷಮ್ಯ ಅಪರಾಧ ಎಂದರು.