Tag: Dr. G Parameshwar

  • ಡಿಸಿಎಂ ಆಗಿ ಅಧಿಕಾರ ವಹಿಸಿಕೊಂಡ 15 ದಿನದಲ್ಲೇ ಶಾಸಕರಿಗೆ ಪರಂ ಬೇಡವಾದ್ರಾ?

    ಡಿಸಿಎಂ ಆಗಿ ಅಧಿಕಾರ ವಹಿಸಿಕೊಂಡ 15 ದಿನದಲ್ಲೇ ಶಾಸಕರಿಗೆ ಪರಂ ಬೇಡವಾದ್ರಾ?

    ಬೆಂಗಳೂರು: ಉಪಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ 15 ದಿನದಲ್ಲೇ ಪಕ್ಷದ ಶಾಸಕರಿಗೆ ಡಾ. ಜಿ ಪರಮೇಶ್ವರ್ ಬೇಡವಾದ್ರಾ ಎಂಬ ಪ್ರಶ್ನೆಯೊಂದು ರಾಜಕೀಯ ವಲಯದಲ್ಲಿ ಮೂಡಿದೆ. ಯಾಕಂದ್ರೆ ಬೆಂಗಳೂರಿನಲ್ಲಿ ಅತಿ ಹೆಚ್ಚು ಶಾಸಕರಿರುವುದು ಕಾಂಗ್ರೆಸ್ ನವರೆ. ಆದರೆ ಆ ಶಾಸಕರಿಗೆ ಪರಮೇಶ್ವರ್ ಸ್ಪಂದಿಸುತ್ತಿಲ್ಲ ಎಂಬ ಆರೋಪವೊಂದು ಇದೀಗ ಕೇಳಿಬರುತ್ತಿದೆ.

    ಸಿಟಿ ರೌಂಡ್ಸ್ ಮಾಡಿ ಅಂದ್ರೆ ತಮಗೆ ಇಷ್ಟ ಬಂದ ಎರಡು ಕ್ಷೇತ್ರಕ್ಕೆ ಭೇಟಿ ಕೊಟ್ಟು, ಹೀಗೆ ಬಂದು ಹಾಗೆ ಹೋದ್ರಂತೆ. ಇವರು ಹೀಗೆ ಮಾಡಿದ್ರೆ ನಮಗೆ ಕ್ಷೇತ್ರದಲ್ಲಿ ಕಷ್ಟ ಆಗುತ್ತೆ ಸಾರ್ ಅಂತ ನಗರದ ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಬಳಿ ಗೋಳು ತೋಡಿಕೊಂಡಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ಸಿಎಂ ಆಗಿದ್ದ ಸಿದ್ದರಾಮಯ್ಯ ಮಾದರಿಯಲ್ಲಿ ನಗರದ ಶಾಸಕರನ್ನ ಜೊತೆಯಲ್ಲಿಟ್ಟುಕೊಂಡು ಸಿಟಿ ರೌಂಡ್ಸ್ ಮಾಡಿ ಸಮಸ್ಯೆ ಆಲಿಸುವಂತೆ ಕಾಂಗ್ರೆಸ್ ಶಾಸಕರು ಪರಮೇಶ್ವರ್ ಗೆ ಒತ್ತಾಯಿಸಿದ್ದಾರೆ. ಆದರೆ ಬಿಜೆಪಿ ಶಾಸಕರಿರುವ ಸಿ.ವಿ ರಾಮನ್ ನಗರ ವ್ಯಾಪ್ತಿಯಲ್ಲಿ ಪರಮೇಶ್ವರ್ ಎರಡು ಕೆರೆ ವೀಕ್ಷಿಸಿದ್ದಾರೆ. ಎರಡು ದಿನದ ಹಿಂದೆ ಕಾಂಗ್ರೆಸ್ ಶಾಸಕರಿರುವ ಯಶವಂತಪುರದಲ್ಲಿ ಎರಡು ಗಾರ್ಬೆಜ್ ಡಂಪಿಂಗ್ ಯಾರ್ಡ್ ಗೆ ಭೇಟಿ ನೀಡಿದ್ದಾರೆ. ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಿಟಿ ರೌಂಡ್ಸ್ ಮಾಡಿ ಸಾರ್ ಅಂದ್ರೆ ಬರೋಣ ಬಿಡ್ರಿ ಎಂದು ಶಾಸಕರಿಗೆ ಪರಮೇಶ್ವರ್ ಉಡಾಫೆಯಿಂದ ಉತ್ತರಿಸಿದ್ದಾರಂತೆ.

    ಹೊರಗಿನವರಿಗೆ ಬೆಂಗಳೂರಿನ ಅಭಿವೃದ್ಧಿ ಖಾತೆ ಕೊಟ್ರೆ ನೋಡಿ ಹೀಗೆ ಆಗೋದು ಅಂತ ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಬಳಿ ದೂರು ನೀಡಿದ್ದಾರೆ. ಇದರ ಹಿಂದೆ ಬೆಂಗಳೂರು ಅಭಿವೃದ್ಧಿ ಖಾತೆ ಮೇಲೆ ಕಣ್ಣಿಟ್ಟಿರುವ ಪಕ್ಷದ ಹಿರಿಯ ಶಾಸಕರ ಲಾಬಿಯು ಇದೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲೇ ಕೇಳಿ ಬರುತ್ತಿದೆ. ಇದಕ್ಕೆಲ್ಲಾ ಕೆಲಸದ ಮೂಲಕವೇ ಉತ್ತರ ಕೊಡಬೇಕಿದ್ದ ಪರಮೇಶ್ವರ್, ಬರೋಣ ಬಿಡ್ರಿ ಅಂತಾರೆ ಅನ್ನೋದು ಶಾಸಕರ ಅಳಲಾಗಿದೆ.

    ಬೆಂಗಳೂರು ಅಭಿವೃದ್ಧಿ ಖಾತೆ ಮೇಲೆ ಕಣ್ಣಿಟ್ಟ ಶಾಸಕರುಗಳು ಆರೋಪ ಮಾಡಿದಾಗ ಸಿದ್ದರಾಮಯ್ಯ ಮಾತ್ರ ಎಲ್ಲಾ ಸರಿ ಆಗುತ್ತೆ ಸ್ವಲ್ಪ ಟೈಮ್ ಕಾಯ್ರಪ್ಪ ಅಂದಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

  • ಎಚ್‍ಡಿಕೆಗೆ ಶುಭ ಕೋರಿದ ಕಮಲ ಹಾಸನ್

    ಎಚ್‍ಡಿಕೆಗೆ ಶುಭ ಕೋರಿದ ಕಮಲ ಹಾಸನ್

    ಬೆಂಗಳೂರು: ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರದ ಪ್ರಮಾಣ ವಚನ ಕಾರ್ಯಕ್ರಮಕ್ಕೆ ನಟ ಕಮಲ ಹಾಸನ್ ಆಗಮಿಸಿ ಎಚ್‍ಡಿ ಕುಮಾರಸ್ವಾಮಿಯವರಿಗೆ ಶುಭಕೋರಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ಅವರು, ನನ್ನನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಕ್ಕೆ ಧನ್ಯವಾದಗಳು. ಎರಡು ರಾಜ್ಯಗಳ ನಡುವಿನ ಮಾತುಕತೆ ಉತ್ತಮ ಆರಂಭ ಇದು. ಅಲ್ಲದೇ ವಿವಿಧ ರಾಜಕೀಯ ನಾಯಕರ ಅಭಿಪ್ರಾಯವನ್ನು ಹಂಚಿಕೊಳ್ಳಲು ವೇದಿಕೆಯಾಗಿದೆ ಎಂದು ಬರೆದುಕೊಂಡಿದ್ದಾರೆ.

    ಕುಮಾರಸ್ವಾಮಿ ಅವರು ದೇವರು ಮತ್ತು ರಾಜ್ಯದ ಜನತೆ ಹೆಸರಲ್ಲೂ ಪರಮೇಶ್ವರ್ ಅವರು ದೇವರ ಹೆಸರಲ್ಲೂ ಪ್ರತಿಜ್ಞಾವಿಧಿ ಪಡೆದರು. ಈ ವೇಳೆ, ಅಭಿಮಾನಿಗಳು, ಕಾರ್ಯಕರ್ತರ ಶಿಳ್ಳೆ, ಚಪ್ಪಾಳೆ, ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಬಿಜೆಪಿಯ ಬಹುಮತ ಹೈಡ್ರಾಮಾ ಬಳಿಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಈ ಮೂಲಕ ಅಸ್ತಿತ್ವಕ್ಕೆ ಬಂದಿದೆ. 12 ವರ್ಷಗಳ ಬಳಿಕ ಕುಮಾರಸ್ವಾಮಿ ಇದೀಗ ಮತ್ತೆ ಸಿಎಂ ಕುರ್ಚಿ ಮೇಲೆ ಆಸೀನರಾಗಿದ್ದಾರೆ.

  • ಬಿಜೆಪಿಯಿಂದ ಕಾಂಗ್ರೆಸ್ಸಿಗೆ ಬರಲಿದ್ದಾರೆ 20 ಶಾಸಕರು: ಡಾ.ಜಿ.ಪರಮೇಶ್ವರ್ ಸ್ಫೋಟಕ ಹೇಳಿಕೆ

    ಬಿಜೆಪಿಯಿಂದ ಕಾಂಗ್ರೆಸ್ಸಿಗೆ ಬರಲಿದ್ದಾರೆ 20 ಶಾಸಕರು: ಡಾ.ಜಿ.ಪರಮೇಶ್ವರ್ ಸ್ಫೋಟಕ ಹೇಳಿಕೆ

    ಹಾಸನ: ಬಿಜೆಪಿ ಪಕ್ಷದಿಂದ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ 20 ಶಾಸಕರು ಬರಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ಇಂದು ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಬಿಜೆಪಿಯ 20ಕ್ಕೂ ಹೆಚ್ಚು ಶಾಸಕರು ಕಾಂಗ್ರೆಸ್ ಪಕ್ಷ ಸೇರಲು ಸಿದ್ಧರಿದ್ದಾರೆ. ಅವರೆಲ್ಲಾ ನಿರಂತರವಾಗಿ ನಮ್ಮ ಸಂಪರ್ಕದಲ್ಲಿದ್ದಾರೆ. ಆದರೆ ಯಾರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂಬುದನ್ನು ಇನ್ನೂ ನಿರ್ಧಾರ ಮಾಡಿಲ್ಲ ಎಂದು ಹೇಳಿದರು.

    ಇದೇ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾವಿಬ್ಬರು ಸೋದರರಂತೆ ಕಳೆದ ಏಳು ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದೇವೆ. ಕೆಲ ಸಮಯ ಸರ್ಕಾರ ಒಳಗೂ ಸೇವೆ ಸಲ್ಲಿಸಿದ್ದೇನೆ. ಈಗ ಪಕ್ಷ ಸಂಘಟಿಸಲು ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದರು.

    ಬಿಜೆಪಿಯವರು ಮೊದಲು ತಮ್ಮ ಪಕ್ಷದ ಆಂತರಿಕ ಗೊಂದಲಗಳನ್ನು ಬಗೆಹರಿಸಿಕೊಳ್ಳಲಿ. ಬಿಜೆಪಿ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದು ನಮ್ಮತ್ತ ಬೊಟ್ಟು ಮಾಡೋದು ಬೇಡ. ಬಿಜೆಪಿಯವರು ಏನೇ ಮಾಡಿದರು ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಬಿಜೆಪಿ ಪಕ್ಷದ ಪರಿವರ್ತನಾ ಯಾತ್ರೆ ಹಾಗೂ ಜೆಡಿಎಸ್ ಪಕ್ಷದ ವಿಕಾಸ ಯಾತ್ರೆಯಿಂದ ನಮಗೇನು ಭಯವಿಲ್ಲ. ಕಾಂಗ್ರೆಸ್ ಹೈಕಮಾಂಡ್ ಆದೇಶದಂತೆ ನಾವು ಚುನಾವಣೆ ಎದುರಿಸುತ್ತೇವೆ. ನಾನು ಸಿಎಂ ಹುದ್ದೆಯ ಆಕಾಂಕ್ಷಿ ಅಭ್ಯರ್ಥಿಯಲ್ಲ ಎಂದು ಸ್ಪಷ್ಟಪಡಿಸಿದರು.

    ಕಾಂಗ್ರೆಸ್ ಪಕ್ಷ ದಲಿತ, ಹಿಂದುಳಿದ ಪಕ್ಷವಾಗಿದೆ. ನಾವು ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದ ಮೂಲಕ ಜನರನ್ನು ತಲುಪುತ್ತೇವೆ. ಪಕ್ಷದ ಸಾಧನೆಯನ್ನು ಪುಸ್ತಕ ರೂಪದಲ್ಲಿ ಬಿಡುಗಡೆಗೊಳಿಸಲಾಗಿದೆ. ನಾವು ಯಾವುದೇ ಯಾತ್ರೆಗಳನ್ನು ಮಾಡುವುದಿಲ್ಲ. ಆದರೆ 224 ಕ್ಷೇತ್ರಗಳಲ್ಲಿಯೂ ನಮ್ಮ ಕಾರ್ಯಕರ್ತರನ್ನು ಚುನಾವಣೆಗೆ ಸಿದ್ಧಗೊಳಿಸುತ್ತೇವೆ ಎಂದರು.

  • ವಿಶ್ವನಾಥ್‍ಗೆ ಇರೋ ಮಾನ, ಮರ್ಯಾದೆಯನ್ನೆ ಹಂಚಿಕೊಳ್ಳೋಣ: ಪರಮೇಶ್ವರ್

    ಚಿಕ್ಕಮಗಳೂರು: ಜೆಡಿಎಸ್ ಮುಖಂಡ ಕಳಲೆ ಕೇಶವಮೂರ್ತಿ ಕಾಂಗ್ರೆಸ್ ಸೇರುವ ವಿಚಾರ ಹಾಗೂ ನಂಜನಗೂಡು ಟಿಕೆಟ್‍ಗೆ ಸಂಬಂಧಿಸಿದಂತೆ ಮಾಜಿ ಸಂಸದ ವಿಶ್ವನಾಥ್ ಹೇಳಿಕೆಗೆ ತೀಕ್ಷ್ಮವಾಗಿ ಪ್ರತಿಕ್ರಿಯಿಸಿದ ಪರಮೇಶ್ವರ್, ವಿಶ್ವನಾಥ್‍ಗೆ ಇರುವ ಮಾನ-ಮರ್ಯಾದೆ ಹಂಚಿಕೊಳ್ಳೋಣ ಅಂತಾ ಹೇಳಿದ್ದಾರೆ.

    ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ನಾನು ಸಿಎಂ ಆಗಬೇಕೆಂಬ ಆಪೇಕ್ಷೆ ಜನಾರ್ದನ ಪೂಜಾರಿಯವರದ್ದೇ ವಿನಾಃ ನನ್ನದಲ್ಲ. ಮಾಜಿ ಸಿಎಂ ಎಸ್.ಎಂ.ಕೃಷ್ಣ ರಾಜೀನಾಮೆ ಹಿಂಪಡೆಯುವಂತೆ ನಾನು ಮತ್ತು ಇಂಧನ ಸಚಿವ ಡಿಕೆ ಶಿವಕುಮಾರ್ ಮನವೊಲಿಸುವ ಪ್ರಯತ್ನ ನಡೆಸುತ್ತಿದ್ದು, ರಾಷ್ಟ್ರೀಯ ನಾಯಕರು ಕೂಡ ಮಾತುಕತೆ ನಡೆಸುತ್ತಿದ್ದಾರೆ ಎಂದರು.

    ಉಗಾಂಡ ಯುವತಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು ಈಗಾಗಲೇ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಆರೋಪ ಸಾಬೀತಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

    ಇದನ್ನೂ ಓದಿ: ಪರಮೇಶ್ವರ್‍ಗೆ ಮಾನ ಮರ್ಯಾದೆ ಇಲ್ವಾ: ವಿಶ್ವನಾಥ್ ಪ್ರಶ್ನೆ