Tag: Dr. G Parameshwar

  • ಒಬಿಸಿ ಪಟ್ಟಿಗೆ ಪಂಚಮಸಾಲಿ ಸೇರಿಸುವಂತೆ ಬ್ಲ್ಯಾಕ್ ಮೇಲ್ ಮಾಡಬಾರದು: ಪರಮೇಶ್ವರ್

    ಒಬಿಸಿ ಪಟ್ಟಿಗೆ ಪಂಚಮಸಾಲಿ ಸೇರಿಸುವಂತೆ ಬ್ಲ್ಯಾಕ್ ಮೇಲ್ ಮಾಡಬಾರದು: ಪರಮೇಶ್ವರ್

    ತುಮಕೂರು: ಪಂಚಮಸಾಲಿ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸುವಂತೆ ಬ್ಲ್ಯಾಕ್ ಮೇಲ್ ಮಾಡಬಾರದು ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.

    ಒಬಿಸಿ ಪಟ್ಟಿ ಸಿದ್ಧತೆ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ರಾಜ್ಯಗಳಿಗೆ ಕೊಟ್ಟಿರುವುದನ್ನು ಸ್ವಾಗತಿಸಿ ನಗರದಲ್ಲಿ ಮಾತನಾಡಿದ ಅವರು, ಪಂಚಮಸಾಲಿಗಳು ಸೆಪ್ಟೆಂಬರ್ ಒಳಗಡೆ ತಮ್ಮನ್ನು ಒಬಿಸಿ ಪಟ್ಟಿಗೆ ಸೇರಿಸಿ ಅನ್ನೋದು ಬ್ಲ್ಯಾಕ್ ಮೇಲ್ ಆಗುತ್ತದೆ. ಹಾಗೇ ಎಲ್ಲರೂ ಬ್ಲ್ಯಾಕ್ ಮೇಲ್ ಮಾಡಲು ಹೋದರೆ ಸಂವಿಧಾನಕ್ಕೆ ಬೆಲೆ ಇರುವುದಿಲ್ಲ. ಕಾನೂನಿಗೂ ಬೆಲೆ ಇರುವುದಿಲ್ಲ. ಅದೇ ರೀತಿ ಜನರ ಒತ್ತಾಯ ತಡೆದುಕೊಳ್ಳುವ ಶಕ್ತಿ ಸರ್ಕಾರಕ್ಕೆ ಇರಬೇಕು ಎಂದರು.

    ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ಯೋಜನೆಯ ಕೋಟ್ಯಂತರ ರೂ.ಗಳನ್ನು ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ಕೊಡದೆ ಬಾಕಿ ಉಳಿಸಿಕೊಂಡಿದೆ. ಜನರಿಗೆ ಉಪಕಾರ ಮಾಡಲು ಹೋಗಿ ಖಾಸಗಿ ಆಸ್ಪತ್ರೆಗಳು ಮುಚ್ಚುವ ಹಂತಕ್ಕೆ ತಲುಪಿವೆ. ಕಳೆದ 7-8 ತಿಂಗಳಿಂದ ಆರೋಗ್ಯ ಕಾರ್ಡ್ ಹಣ ಸರ್ಕಾರ ಬಿಡುಗಡೆ ಮಾಡಿಲ್ಲ. ಸಿದ್ದಾರ್ಥ ಮೆಡಿಕಲ್ ಕಾಲೇಜಿಗೆ ಸರ್ಕಾರದಿಂದ 4.5 ಕೋಟಿ ರೂ. ಬಾಕಿ ಇದೆ ಎಂದು ವಾಗ್ದಾಳಿ ನಡೆಸಿದರು.

    ಸಿಎಂ ಬೊಮ್ಮಾಯಿ ದೇವೇಗೌಡರ ಮನೆಗೆ ಭೇಟಿ ಕೊಟ್ಟಿರೋದು ಸಹಜ, ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ದೇವೇಗೌಡರು ಹಲವು ಸಂದರ್ಭಗಳಲ್ಲಿ ಬೊಮ್ಮಾಯಿಯವರಿಗೆ ಮಾರ್ಗದರ್ಶನ ಮಾಡುತ್ತಾರೆ. ನಾವು ಉನ್ನತ ಹುದ್ದೆಗೆ ಹೋದಾಗ ಆ ಕ್ಷೇತ್ರದ ಹಿರಿಯರನ್ನು ಭೇಟಿ ಮಾಡೋದು ಒಂದು ಸಂಪ್ರದಾಯ ಎಂದರು.

  • ಮಹಿಳೆಯರಿಗೆ ಬಳೆ ತೊಡಿಸಿದ ಪರಮೇಶ್ವರ್

    ಮಹಿಳೆಯರಿಗೆ ಬಳೆ ತೊಡಿಸಿದ ಪರಮೇಶ್ವರ್

    ತುಮಕೂರು: ಜಿಲ್ಲೆಯ ಕೊರಟಗೆರೆ ತಾಲೂಕಿನ ತುಂಬಾಡಿ ಗ್ರಾಮದಲ್ಲಿ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಮಹಿಳೆಯರಿಗೆ ಬಳೆ ತೊಡಿಸಿ ಸಂಭ್ರಮಿಸಿದರು.

    ಗ್ರಾಮದಲ್ಲಿ ನಡೆದ ಮಾರಮ್ಮ ದೇವಿಯ ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಪರಮೇಶ್ವರ್, ಅಲ್ಲಿ ನೆರೆದಿದ್ದ ಮಹಿಳೆಯರಿಗೆ ಬಳೆ ಕೊಡಿಸಿ, ಅಣ್ಣನ ಸ್ಥಾನ ತುಂಬಿದರು. ಅಲ್ಲದೆ ತಾವೇ ತಮ್ಮ ಕೈಯಾರೆ ಬಳೆ ತೊಡಿಸಿ ಸಂತಸಪಟ್ಟರು. ಮಾಜಿ ಉಪ ಮುಖ್ಯಮಂತ್ರಿಯೊಬ್ಬರು ಅಣ್ಣನಾಗಿ ಬಳೆ ತೊಡಿಸಿದ್ದಕ್ಕೆ ಗ್ರಾಮದ ಮಹಿಳೆಯರು ಸಂತೋಷ ವ್ಯಕ್ತಪಡಿಸಿದರು.

    ಇಡಿ ದಾಳಿಯ ಕಾರಣ ಗೊತ್ತಿಲ್ಲ
    ಶಾಸಕ ಜಮೀರ್ ಅಹ್ಮದ್ ಖಾನ್ ಮನೆ ಮೇಲೆ ಇಡಿ ದಾಳಿ ನಡೆದಿರುವುದಕ್ಕೆ ಕಾರಣ ತಿಳಿದುಬಂದಿಲ್ಲ. ಆದರೆ ಕೇಂದ್ರ ಸರ್ಕಾರ ಮೊದಲಿನಿಂದಲೂ ಇಡಿ, ಸಿಬಿಐ, ಐಟಿಯನ್ನು ಬಳಕೆ ಮಾಡಿಕೊಳ್ಳುತ್ತದೆ ಎಂದು ಹೇಳುತ್ತ ಬಂದಿದ್ದೇವೆ. ಹೀಗಾಗಿ ಯಾವ ಉದ್ದೇಶಕ್ಕಾಗಿ ದಾಳಿ ನಡೆದಿದೆ ಎಂದು ಗೊತ್ತಿಲ್ಲ, ಅವರೂ ಸ್ಪಷ್ಟಪಡಿಸಿಲ್ಲ. ಮುಂದಿನ ದಿನಗಳಲ್ಲಿ ಯಾವ ಆಧಾರದ ಮೇಲೆ ದಾಳಿ ಮಾಡಿದರು ಎಂಬುದನ್ನು ತಿಳಿಸಲಿದ್ದಾರೆ. ಐಎಂಎ ಕೇಸ್ ಲಿಂಕ್ ಇರುವ ಆಧಾರದ ಮೇಲೆ ದಾಳಿ ಮಾಡಿದ್ದೇನೆ ಎಂದು ಅವರು ಹೇಳಿಲ್ಲ ಎಂದರು.

    ಇದೇ ವೇಳೆ ರಾಜ್ಯದ ನೂತನ ಸಚಿವ ಸಂಪುಟದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಂಪುಟದಲ್ಲಿ ಅನುಭವಿಗಳ ಕೊರತೆಯಿದ್ದು, ತಪ್ಪು ಮಾಡಿದರೆ ತಿದ್ದುವವರಿಲ್ಲದ ಸಂಪುಟ ರಚನೆಯಾಗಿದೆ ಎಂದರು.

  • ದೇಶದ ಜನ ಕೊರೊನಾ ಸಂಕಷ್ಟ ಎದುರಿಸಲು ಬಿಜೆಪಿ ಕಾರಣ: ಡಾ.ಜಿ ಪರಮೇಶ್ವರ್

    ದೇಶದ ಜನ ಕೊರೊನಾ ಸಂಕಷ್ಟ ಎದುರಿಸಲು ಬಿಜೆಪಿ ಕಾರಣ: ಡಾ.ಜಿ ಪರಮೇಶ್ವರ್

    ತುಮಕೂರು: ಕೊರೊನಾ ಎರಡನೇ ಅಲೆ ಬರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‍ಓ) ಎಚ್ಚರಿಕೆ ನೀಡಿತ್ತು. ಆದರೂ ಕೂಡ ರಾಜ್ಯ ಹಾಗೂ ಕೇಂದ್ರ ಸರ್ಕಾರ ನಿರ್ಲಕ್ಷಿಸಿದರ ಪರಿಣಾಮ ಇದೀಗ ಜನ ಸಂಕಷ್ಟ ಎದುರಿಸುತ್ತಿದ್ದಾರೆ. ಜನರ ಈ ಸ್ಥಿತಿಗೆ ಬಿಜೆಪಿ ಸರ್ಕಾರ ನೇರ ಹೊಣೆ ಎಂದು ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ವಾಗ್ದಾಳಿ ನಡೆಸಿದ್ದಾರೆ.

    ತುಮಕೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಾ.ಜಿ ಪರಮೇಶ್ವರ್, ಕೊರೊನಾ ಮೊದಲನೇ ಅಲೆಯಲ್ಲಿ ಸ್ವಲ್ಪಮಟ್ಟಿಗೆ ಸಾವು ನೋವು ಆಯ್ತು. ಜನರು ಅದನ್ನು ಹೇಗೋ ತಡೆದುಕೊಂಡರು. ಆದರೆ ಎರಡನೇ ಅಲೆ ಗಂಭೀರವಾಗಿ ಅಪ್ಪಳಿಸುತ್ತದೆ ಎಂದು ಡಬ್ಲ್ಯೂಎಚ್‍ಓ ಎಚ್ಚರಿಕೆ ನೀಡಿತ್ತು. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಅವರ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹಾಗಾಗಿ ರಾಜ್ಯ ಹಾಗೂ ದೇಶದ ಜನ ಈಗ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ:ಆಸ್ಪತ್ರೆಯಲ್ಲಿ ಕುಡುಕನ ರಂಪಾಟ- ಅಮಲಿನಲ್ಲಿ ಶರ್ಟ್ ಬಿಚ್ಚಿದ

    ಭಾರತ ಔಷಧ ತಯಾರಿಕೆಯಲ್ಲಿ ಉಳಿದ ದೇಶಕ್ಕಿಂತ ಅಗ್ರ ಸ್ಥಾನದಲ್ಲಿದೆ. ಹಾಗಾಗಿ ಎಲ್ಲಾ ಔಷಧಾ ತಾಯಾರಿಕಾ ಕಂಪನಿಗಳೂ ಚೆನ್ನಾಗಿ ಸಪೋರ್ಟ್ ಮಾಡಿದ್ದರಿಂದ ಫಾರ್ಮುಲಾ ಪಡೆದು ಕೋಟಿಗಟ್ಟಲೆ ಲಸಿಕೆಯನ್ನು ತಯಾರು ಮಾಡಿತ್ತು. ಆದರೆ ನಮ್ಮ ಪ್ರಧಾನಿ ಮೊದಲು ದೇಶದ ಪ್ರಜೆಗಳಿಗೆ ಲಸಿಕೆ ಕೊಡುವುದನ್ನು ಬಿಟ್ಟು ವಿದೇಶಕ್ಕೆ 6.63 ಕೋಟಿ ಲಸಿಕೆ ರವಾನೆ ಮಾಡಿದರು. ಈಗ ನಮ್ಮಲ್ಲಿ ವ್ಯಾಕ್ಸಿನ್ ಗಾಗಿ ಹಾಹಾಕಾರ ಶುರುವಾಗಿದೆ ಎಂದು ಕಿಡಿಕಾರಿದರು.

    ವಿದೇಶಕ್ಕೆ ಕಳುಹಿಸಿದ ವ್ಯಾಕ್ಸಿನ್ ನಮ್ಮ ದೇಶದ ಪ್ರಜೆಗಳಿಗೆ ಕೊಟ್ಟರೆ ಕೋವಿಡ್ ಚೈನ್ ಬ್ರೇಕ್ ಆಗುತಿತ್ತು. ಆದರೆ ಪ್ರಧಾನಿ ಲಸಿಕೆ ರಫ್ತು ಮಾಡಿದ್ದರಿಂದಾಗಿ ನಮ್ಮ ಪ್ರಜೆಗಳಿಗೆ ಫಸ್ಟ್ ಡೋಸ್ ಸಿಕ್ಕಲ್ಲ. ಸೆಕೆಂಡ್ ಡೋಸ್ ಕೂಡ ಸಿಗಲಿಲ್ಲ. ಇಲ್ಲಿಯವರೆಗೆ ದೇಶದ 21 ಕೋಟಿ ಜನರಿಗೆ ಮಾತ್ರ ವ್ಯಾಕ್ಸಿನೇಷನ್ ಕೊಡಲಾಗಿದೆ. ಈ ಮೂಲಕ ನಮ್ಮ ದೇಶದ ಒಟ್ಟು ಜನಸಂಖ್ಯೆಯ ಕೇವಲ ಶೇ.3.2 ರಷ್ಟು ಮಾತ್ರ ಲಸಿಕೆ ನೀಡಲಾಗಿದೆ. ಹಾಗೆ ಕೇಂದ್ರ ರಾಜ್ಯಕ್ಕೆ ಸಾಕಷ್ಟು ವೆಂಟಿಲೇಟರ್ ಕೊಟ್ಟಿದೆ ಎಂದು ಹೇಳುತ್ತಿದೆ ಆದರೆ ಇಲ್ಲಿ ಮಾತ್ರ ವೆಂಟಿಲೇಟರ್ ಇಲ್ಲ ಎಂದು ಕೂಗು ಕೇಳಿಸುತ್ತಿದೆ. ಹಾಗಾದರೆ ಕೇಂದ್ರ, ರಾಜ್ಯಕ್ಕೆ ಕೊಟ್ಟಿರುವ ವೆಂಟಿಲೇಟರ್ ಏನಾಯ್ತು ಎಂದು ರಾಜ್ಯ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.

  • ಜಾತ್ರೆಯಂತಾದ ಪಿ.ಟಿ.ಪರಮೇಶ್ವರ್ ನಾಯ್ಕ್ ಮಗನ ಮದ್ವೆ- ಸಾಮಾಜಿಕ ಅಂತರ ಮರೆತು ಸಚಿವ ಶ್ರೀರಾಮುಲು ಭಾಗಿ

    ಜಾತ್ರೆಯಂತಾದ ಪಿ.ಟಿ.ಪರಮೇಶ್ವರ್ ನಾಯ್ಕ್ ಮಗನ ಮದ್ವೆ- ಸಾಮಾಜಿಕ ಅಂತರ ಮರೆತು ಸಚಿವ ಶ್ರೀರಾಮುಲು ಭಾಗಿ

    – ಸಿದ್ದರಾಮಯ್ಯ, ಪರಮೇಶ್ವರ್ ಸಹ ಭಾಗಿ

    ಬಳ್ಳಾರಿ: ಕೊರೊನಾ ಅಟ್ಟಹಾಸದ ನಡುವೆಯೂ ರಾಜಕಾರಣಿಗಳು ಅದ್ಧೂರಿ ವಿವಾಹ ಮಾಡುತ್ತಿದ್ದು, ಇದರಿಂದಾಗಿ ರಾಜಕಾರಣಿಗಳಿಗೊಂದು ನಿಯಮ, ಜನಸಾಮಾನ್ಯರಿಗೊಂದು ನಿಯಮವೇ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನೂ ವಿಶೇಷವೆಂದರೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸಹ ವಿವಾಹದಲ್ಲಿ ಭಾಗಿಯಾಗಿದ್ದಾರೆ.

    ಜಿಲ್ಲೆಯ ಲಕ್ಷ್ಮೀಪುರದಲ್ಲಿ ನಡೆಯುತ್ತಿರುವ ಮಾಜಿ ಸಚಿವ, ಹಾಲಿ ಶಾಸಕ ಪಿ.ಟಿ.ಪರಮೇಶ್ವರ್ ನಾಯ್ಕ್ ಪುತ್ರ ಅವಿನಾಶ್ ಮದುವೆಗೆ ಗಣ್ಯರ ದಂಡೇ ಆಗಮಿಸಿದ್ದು, ಅದ್ಧೂರಿಯಾಗಿ ಜಾತ್ರೆಯಂತೆ ವಿವಾಹ ಮಾಡಿದ್ದಾರೆ. ನೂನಾರು ಜನ ವಿವಾಹದಲ್ಲಿ ಭಾಗಿಯಾಗಿದ್ದಾರೆ. ಇದೇ ವೇಳೆ ಸಚಿವ ಶ್ರೀರಾಮುಲು ಅವರು ಸ್ಟೇಜ್ ಮೇಲೆ ಹೋಗಿ ಕೈ ಕುಲುಕಿದ್ದಾರೆ. ಸಾಮಾಜಿಕ ಅಂತರ, ಮಾಸ್ಕ್ ಯಾವುದೂ ಇಲ್ಲದೆ ನೂರಾರು ಜನ ಸೇರಿದ ವಿವಾಹದಲ್ಲಿ ಪಾಲ್ಗೊಂಡಿದ್ದಾರೆ.

    ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಹೆಲಿಕಾಪ್ಟರ್ ನಲ್ಲಿ ಮದುವೆಗೆ ಆಗಮಿಸಿದ್ದು, ಇದೇ ವೇಳೆ ಹೆಲಿಕಾಪ್ಟರ್ ನೋಡಲು ಜನ ಮುಗಿ ಬಿದ್ದಿದ್ದಾರೆ. ಸಾಮಾಜಿಕ ಅಂತರವಿಲ್ಲದೆ ಜನ ಜಾತ್ರೆಯಂತೆ ಸೇರಿದ್ದಾರೆ. ಕಾಂಗ್ರೆಸ್ ಮುಖಂಡರು ಸಹ ಸಾಮಾಜಿಕ ಅಂತರವಿಲ್ಲದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಕೊರೊನೊಗೆ ಡೋಂಟ್ ಕೇರ್ ಎಂದು ಮದುವೆ ಕಾರ್ಯಕ್ರಮದಲ್ಲಿ ಜನಸ್ತೋಮವೇ ಸೇರಿದೆ.

    ನೂರಾರು ಜನ ಸೇರಿದ ಮದುವೆ ಸಮಾರಂಭದಲ್ಲಿ ಭಾಗಿಯಾಗುವ ಮೂಲಕ ಸಚಿವ ಶ್ರೀ ರಾಮುಲು, ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್ ಸೇರಿದಂತೆ ಕಾಂಗ್ರೆಸ್ ನಾಯಕರು ಲಾಕ್‍ಡೌನ್ ನಿಯಮವನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ ಆಕ್ರೋಶ ವ್ಯಕ್ತವಾಗುತ್ತಿದೆ.

  • ಸೋನಿಯಾ ಬಳಿ ಯಾರ ವಿರುದ್ಧವೂ ದೂರು ನೀಡಿಲ್ಲ – ಪರಮೇಶ್ವರ್

    ಸೋನಿಯಾ ಬಳಿ ಯಾರ ವಿರುದ್ಧವೂ ದೂರು ನೀಡಿಲ್ಲ – ಪರಮೇಶ್ವರ್

    ಬೆಂಗಳೂರು: ನಾನು ಸೋನಿಯಗಾಂಧಿಯವರ ಬಳಿ ಯಾರ ವಿರುದ್ಧವೂ ದೂರು ನೀಡಿಲ್ಲ. ನನ್ನ ಬಗ್ಗೆ ಸೋನಿಯಗಾಂಧಿಯವರಿಗೆ ಗೊತ್ತು. ಆದರೆ ಪಕ್ಷ ಸಂಘಟನೆಗೆ ಏನೇನು ಆಗಬೇಕು ಎನ್ನುವುದರ ಬಗ್ಗೆ ಎಲ್ಲಾ ವಿಷಯವನ್ನು ಸೋನಿಯ ಗಾಂಧಿಯವರಿಗೆ ತಿಳಿಸಿದ್ದೇನೆ ಎಂದು ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್ ತಿಳಿಸಿದ್ದಾರೆ.

    ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರಿಗೆ ಸೋನಿಯಾ ಗಾಂಧಿ ಮಾತುಕತೆಗೆ ಸಮಯ ನೀಡಿಲ್ಲ ಎನ್ನುವುದು ತಪ್ಪು. ಪಕ್ಷದ ಅಧ್ಯಕ್ಷರು ಕೇಳಿದಾಗ ತಕ್ಷಣವೇ ಸಮಯ ಸಿಗುತ್ತದೆ. ನಾನು ಅಧ್ಯಕ್ಷನಾಗಿದ್ದಾಗ ಅವರನ್ನು ಭೇಟಿ ಮಾಡಿದ್ದೇನೆ. ಅಧ್ಯಕ್ಷನಾಗಿ ಇರದಿದ್ದಾಗ ಎಷ್ಟೋ ಬಾರಿ ನನಗೆ ಭೇಟಿಗೆ ಅವಕಾಶವೇ ಸಿಕ್ಕಿರಲಿಲ್ಲ. ಅದನ್ನು ತಪ್ಪಾಗಿ ಆರ್ಥೈಸುವುದು ಬೇಡ ಎಂದು ತಿಳಿಸಿದರು.

    ಒಂದು ವರ್ಷದ ನಂತರ ಸೋನಿಯಾ ಗಾಂಧಿ ಅವರನ್ನು ಭೇಟಿಯಾದೆ. ಡಿಕೆಶಿ ವಿಚಾರದಲ್ಲಿ ಸೋನಿಯ ಗಾಂಧಿ ಸಹ ನೊಂದುಕೊಂಡಿದ್ದಾರೆ. ಕಾನೂನಾತ್ಮಕವಾಗಿ ಏನಾದರು ಮಾಡಲಿ. ದ್ವೇಷದ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ ಎಂದು ಪರಮೇಶ್ವರ್ ಹೇಳಿದರು.

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನನಗೆ ಶತೃತ್ವ ಇದೆ ಎಂದು ಬಿಂಬಿಸುವುದರಲ್ಲಿ ಯಾರದ್ದೋ ಕೈವಾಡ ಇದೆ. ನಾವಿಬ್ಬರು ಚೆನ್ನಾಗಿದ್ದರೆ ಕಾಂಗ್ರೆಸ್ ಪ್ರಬಲವಾಗುತ್ತದೆ. ಹೀಗಾಗಿ ಈ ರೀತಿ ನಮ್ಮ ನಡುವೆ ಭಿನ್ನಾಭಿಪ್ರಾಯ ಇದೆ ಎಂದು ಬಿಂಬಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಕ್ಷದ ವೇದಿಕೆಯಲ್ಲಿ ಇಬ್ಬರದ್ದೂ ಒಂದೇ ಅಭಿಪ್ರಾಯ ಇರಬೇಕು ಎಂದೇನಿಲ್ಲ. ಅಭಿಪ್ರಾಯ ಭೇದ ಸಹಜ. ಆದರೆ ಮೂಲ ಹಾಗೂ ವಲಸಿಗ ಕಾಂಗ್ರೆಸ್ ಅನ್ನುವುದು ತಪ್ಪು. ಪಕ್ಷದ ತತ್ವ ಸಿದ್ಧಾಂತ ಒಪ್ಪಿದ ಮೇಲೆ ಮುಗಿಯಿತು. ಹಾಗೆ ವಲಸಿಗ ಅನ್ನೋದಾದ್ರೆ ಸಿದ್ದರಾಮಯ್ಯನವರಿಗೆ ವಿಪಕ್ಷ ಸ್ಥಾನ ಸಿಎಂ ಹುದ್ದೆ ಯಾವುದು ಸಿಗುತ್ತಿರಲಿಲ್ಲ. ಮೂಲ ವಲಸಿಗ ಎಂದೇನಿಲ್ಲ, ಎಲ್ಲರೂ ಕಾಂಗ್ರೆಸ್ಸಿಗರೇ ಎಂದು ತಿಳಿಸಿದರು.

    ನಾವು ರಾಜ್ಯದ ನಾಯಕರೆಲ್ಲ ಒಟ್ಟಾಗಿ ಕೆಲಸ ಮಾಡಿದರೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಸಿಎಲ್‍ಪಿ ಸಭೆ ಬಗ್ಗೆ ನನಗೆ ಮಾಹಿತಿ ಇರಲಿಲ್ಲ. ನಾನು ದೆಹಲಿಗೆ ಹೋದ ಮೇಲೆ ದಿನೇಶ್ ಗುಂಡೂರಾವ್ ಕರೆ ಮಾಡಿ ನಾಳೆ ಸಿಎಲ್‍ಪಿ ಇದೆ ಬನ್ನಿ ಎಂದರು. ನಾನು ದೆಹಲಿಯಲ್ಲಿ ಇದ್ದೇನೆ ಬರೋಕೆ ಆಗಲ್ಲ ಎಂದು ತಿಳಿಸಿದೆ ಎಂದು ಸ್ಪಷ್ಟಪಡಿಸಿದರು.

    ನಮ್ಮ ಗೆಳೆಯ ಡಿಕೆಶಿಯವರನ್ನು ದೆಹಲಿಯ ಆಸ್ಪತ್ರೆಯಲ್ಲಿ ಭೇಟಿ ಮಾಡಿದೆ. ಇಡಿ ವಿಚಾರಣೆ ನ್ಯಾಯಯುತವಾಗಿ ನಡೆಯಬೇಕು. ನಾನು ಕಳ್ಳತನ, ತಪ್ಪು ಮಾಡಿಲ್ಲ ಅಕೌಂಟಿಂಗ್‍ನಲ್ಲಿ ಸ್ವಲ್ಪ ವ್ಯತ್ಯಾಸವಾಗಿದೆ. ಅದನ್ನು ಸರಿಪಡಿಸಿಕೊಂಡು ಆದಷ್ಟು ಬೇಗ ಸಂಕಷ್ಟದಿಂದ ಹೊರ ಬರುತ್ತೇನೆ ಎಂದು ತಿಳಸಿದ್ದಾರೆ ಎಂದು ಮಾಹಿತಿ ನೀಡಿದರು.

  • ನಾಯಕರ ಕಿತ್ತಾಟದಿಂದಲೇ ಲೋಕ ಸಮರದಲ್ಲಿ ಕಾಂಗ್ರೆಸಿಗೆ ಸೋಲು – ಪರಮೇಶ್ವರ್

    ನಾಯಕರ ಕಿತ್ತಾಟದಿಂದಲೇ ಲೋಕ ಸಮರದಲ್ಲಿ ಕಾಂಗ್ರೆಸಿಗೆ ಸೋಲು – ಪರಮೇಶ್ವರ್

    ತುಮಕೂರು: ಕಾಂಗ್ರೆಸ್ ನಾಯಕರ ನಡುವಿನ ಕಿತ್ತಾಟ, ಒಗ್ಗಟ್ಟು ಇಲ್ಲದಿರುವುದೇ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿಗೆ ಕಾರಣ ಎಂದು ಸತ್ಯಶೋಧನಾ ಸಮಿತಿ ವರದಿ ನೀಡಿರುವುದು ನಿಜ. ಈ ಕುರಿತು ಮುಂದೆ ಕ್ರಮ ಕೈಗೊಳ್ಳಲಾಗುವುದು ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

    ತುಮಕೂರಿನ ಹೆಗ್ಗೆರೆಯ ಸಿದ್ಧಾರ್ಥ ಮೆಡಿಕಲ್ ಕಾಲೇಜಿನ ಘಟಿಕೋತ್ಸವ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸತ್ಯಶೋಧನಾ ಸಮಿತಿ ವರದಿಯಲ್ಲಿ ಒಗ್ಗಟ್ಟಿನ ಕೊರತೆಯಿಂದಲೇ ಸೋಲುಂಟಾಗಿದೆ ಎಂದು ತಿಳಿದು ಬಂದಿದೆ. ನಾಯಕರ ನಡುವೆ ಯಾಕೆ ಭಿನ್ನಾಭಿಪ್ರಾಯ ಮೂಡಿತು ಎನ್ನುವುದರ ಕುರಿತು ಚರ್ಚೆ ಮಾಡುತ್ತೇವೆ. ಪಕ್ಷದ ಪ್ರಮುಖ ನಾಯಕತ್ವದಿಂದ ಆಗಿದೆಯೋ ಅಥವಾ ಸ್ಥಳೀಯ ಮುಖಂಡರಿಂದ ಆಗಿದೆಯೋ ಎಂಬುದನ್ನು ಚರ್ಚೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

    ಈ ಕುರಿತು ಸೆಪ್ಟೆಂಬರ್ 18ರಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ತಪ್ಪು ಮಾಡಿದವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಕ್ರಮ ಕೈಗೊಳ್ಳುವ ಕುರಿತು ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದರು.

    ಅದಷ್ಟು ಬೇಗ ಹೈಕಮಾಂಡ್ ವಿರೋಧ ಪಕ್ಷ ನಾಯಕರನ್ನು ಆಯ್ಕೆ ಮಾಡಲಿದೆ. ಸಿದ್ದರಾಮಯ್ಯ, ಎಚ್.ಕೆ.ಪಾಟೀಲ್ ಸೇರಿದಂತೆ ಹಲವರ ಹೆಸರು ಕೇಳಿ ಬಂದಿದೆ. ಯಾರೇ ಆದರೂ ನಮ್ಮ ನಾಯಕರೇ. ಹೈ ಕಮಾಂಡ್ ಯಾರನ್ನು ಆಯ್ಕೆ ಮಾಡುತ್ತದೆಯೋ ಗೊತ್ತಿಲ್ಲ. ನನಗೆ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೆನೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

    ಅನರ್ಹರಿಗೆ ತಪ್ಪಿನ ಅರಿವಾಗಿದೆ
    ಅನರ್ಹ ಶಾಸಕರಿಗೆ ತಮ್ಮ ತಪ್ಪಿನ ಅರಿವಾಗಿದೆ. ಮುಂದಿನ ದಿನದಲ್ಲಿ ಏನಾಗುತ್ತೋ ಕಾದು ನೋಡೋಣ. ಅನರ್ಹರನ್ನು ಮತ್ತೆ ಪಕ್ಷಕ್ಕೆ ಕರೆದುಕೊಳ್ಳುವ ಸನ್ನಿವೇಶ ಬರುವುದಿಲ್ಲ. ಒಂದು ವೇಳೆ ಬಂದರೆ, ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ. ರಾಜ್ಯ ಬಿಜೆಪಿ ಸರ್ಕಾರದ ಉಳಿವಿನ ಬಗ್ಗೆ ಸಮಯ ನಿಗದಿ ಮಾಡಲ್ಲ, ಆದರೆ ಹೆಚ್ಚು ಕಾಲ ಈ ಸರ್ಕಾರ ಉಳಿಯುವುದಿಲ್ಲ. ಮಧ್ಯಂತರ ಚುನಾವಣೆ ಕುರಿತು ನನಗೆ ತಿಳಿದಿಲ್ಲ. ಆದರೆ, ಮಧ್ಯಂತರ ಚುನಾವಣೆ ನಡೆದರೆ ನಾವು ತಯಾರಾಗುತ್ತಿದ್ದೇವೆ ಎಂದು ಪರಮೇಶ್ವರ್ ತಿಳಿಸಿದರು.

    ವರದಿಯಲ್ಲೇನಿದೆ?
    ಕಾಂಗ್ರೆಸ್ ಶಾಸಕರ ಸ್ವಪ್ರತಿಷ್ಠೆ, ಕೆಲವರ ಪಕ್ಷ ವಿರೋಧಿ ಚಟುವಟಿಕೆ, ನಾಯಕರ ನಡುವಿನ ಆಂತರಿಕ ಕಿತ್ತಾಟಗಳಿಂದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದೆ ಎಂದು ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ನೇತೃತ್ವದ ಸತ್ಯ ಶೋಧನಾ ಸಮಿತಿ ತಿಳಿಸಿದೆ. ತನ್ನ ವರದಿಯಲ್ಲಿ ಸಮಿತಿ ಕಾಂಗ್ರೆಸ್ ಕಾಯಕರ್ತರು ಕೆಲಸ ಮಾಡಿದ್ದರೂ ನಾಯಕರ ಒಳಜಗಳಿಂದಾಗಿ ಅಭ್ಯರ್ಥಿಗಳು ಸೋತಿದ್ದಾರೆ. ಚುನಾವಣೆ ಸೋಲಿಗೆ ಮೈತ್ರಿಯೂ ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಕ್ಟೋಬರ್ 2ರಂದು ಕೆಪಿಸಿಸಿಗೆ ಈ ವರದಿಯನ್ನು ಸಲ್ಲಿಸಲು ಸಮಿತಿ ತೀರ್ಮಾನಿಸಿದೆ.

  • 10 ಸಾವಿರ ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಿ- ಕೇಂದ್ರಕ್ಕೆ ಪರಮೇಶ್ವರ್ ಒತ್ತಾಯ

    10 ಸಾವಿರ ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಿ- ಕೇಂದ್ರಕ್ಕೆ ಪರಮೇಶ್ವರ್ ಒತ್ತಾಯ

    ಬೆಂಗಳೂರು: ರಾಜ್ಯದಲ್ಲಿ ನೆರೆ ಪರಿಸ್ಥಿತಿ ವಿಪರೀತವಾಗಿದ್ದು, ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಪ್ರಧಾನಿ ಅಥವಾ ಕೇಂದ್ರ ಸಚಿವರು ರಾಜ್ಯದಲ್ಲಿ ಉಂಟಾಗಿರುವ ನೆರೆ ಪರಿಸ್ಥಿತಿಯ ವೈಮಾನಿಕ ಸಮೀಕ್ಷೆ ನಡೆಸಿ, 10 ಸಾವಿರ ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಒತ್ತಾಯಿಸಿದ್ದಾರೆ.

    ಸದಾಶಿವನಗರದ ಬಿಡಿಎ ಕ್ವಾಟರ್ಸ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪರಿಸ್ಥಿತಿ ನಿಭಾಯಿಸಲು ರಾಜ್ಯದಲ್ಲಿ ಪೂರ್ಣ ಪ್ರಮಾಣದ ಸರ್ಕಾರವೇ ಇಲ್ಲ. ಸರ್ಕಾರ ಇಲ್ಲದ ಕಾರಣ ಅಧಿಕಾರಿಗಳು ಆರಾಮವಾಗಿ ಕುಳಿತಿದ್ದಾರೆ. ಯಾವ ನೋಡೆಲ್ ಅಧಿಕಾರಿಗಳು ಕ್ಯಾಂಪ್ ಮಾಡಿಲ್ಲ. ಯಡಿಯೂರಪ್ಪ ಅವರು ಸಂಪುಟ ವಿಸ್ತರಣೆ ಯಾಕೆ ಮಾಡಿಲ್ಲ ಎಂಬ ಕಾರಣ ಬಹಿರಂಗ ಪಡಿಸಬೇಕು ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

    ಕೇಂದ್ರದಿಂದ ತಂಡ ಆಗಮಿಸಿ ಸೂಕ್ತ ಸಮೀಕ್ಷೆ ನಡೆಸಬೇಕು. ತಕ್ಷಣವೇ ವಿಶೇಷ ಪ್ಯಾಕೇಜ್ ಘೋಷಿಸಬೇಕು. ರಾಜ್ಯದಲ್ಲಿ ಸಚಿವ ಸಂಪುಟ ಇಲ್ಲದೆ ಬಿಜೆಪಿ ಸರ್ಕಾರ ನಡೆಸುತ್ತಿದೆ. ತುಂಬಾ ಪ್ರಯತ್ನ ಮಾಡಿ ಪ್ರಜಾಪ್ರಭುತ್ವದ ವಿರುದ್ಧವಾಗಿ ಸರ್ಕಾರ ರಚನೆ ಮಾಡಿದ್ದಾರೆ. ಆದರೆ, ಸಂಪುಟ ರಚನೆ ಮಾಡಲು ವಿಳಂಬ ಮಾಡುತ್ತಿದ್ದಾರೆ. ರಾಜ್ಯದ ದೋಸ್ತಿ ಸರ್ಕಾರವನ್ನು ಮೋದಿ ಮತ್ತು ಅಮಿತ್ ಶಾ ಬೀಳಿಸಿದ್ದಾರೆ. ಇದೀಗ ಸಚಿವ ಸಂಪುಟ ರಚನೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಟೀಕಿಸಿದರು.

    ಕೆಲಸ ಆಗುತ್ತಿಲ್ಲ
    ರಾಜ್ಯದಲ್ಲಿ ಲಕ್ಷಾಂತರ ಜಾನುವಾರುಗಳು ಸಾವನ್ನಪ್ಪಿವೆ. ಹಲವು ಜನ ಸಹ ಮೃತಪಟ್ಟಿದ್ದಾರೆ. ಲಕ್ಷಾಂತರ ಜನ ನಿರಾಶ್ರಿತರಾಗಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಒಬ್ಬರೆ ಇಡೀ ರಾಜ್ಯವನ್ನು ಹೇಗೆ ನಡೆಸುತ್ತಾರೆ. ಸಚಿವರು ಇದ್ದಿದ್ದರೆ ಸಮಾರೋಪಾದಿಯಲ್ಲಿ ಕೆಲಸ ಆಗುತ್ತಿತ್ತು. ಈಗ ಯಾವ ಕೆಲಸವೂ ಅಗುತ್ತಿಲ್ಲ. ರಾಜ್ಯದಲ್ಲಿ ಯಾವ ಸರ್ಕಾರವೂ ಇಲ್ಲ. ಮುಖ್ಯಮಂತ್ರಿಗಳು ಇಳಿ ವಯಸ್ಸಿನಲ್ಲೂ ಕೆಲಸ ಮಾಡುತ್ತಿದ್ದಾರೆ. ಅದರೆ ಅವರಿಗೆ ಯಾವ ಸಹಕಾರ ಸಿಗುತ್ತಿಲ್ಲ. ಲಕ್ಷಾಂತರ ಜನ ನಿರಾಶ್ರಿತರಾದರೂ ಸಹ ಈವರೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅಥಾವ ಅಮಿತ್ ಶಾ ವೈಮಾನಿಕ ಸಮೀಕ್ಷೆ ಮಾಡಿಲ್ಲ ಎಂದು ಆರೋಪಿಸಿದರು.

    ಈ ಹಿಂದೆ ಮೈತ್ರಿ ಸರ್ಕಾರ ಇದ್ದಾಗ ಕೇಂದ್ರ ಮಲತಾಯಿ ಧೋರಣೆ ತಾಳಿತ್ತು. ಇದೀಗ ಅವರದ್ದೇ ಸರ್ಕಾರ ಇದೆ, ಆದರೂ ಮಲತಾಯಿ ಧೋರಣೆ ತೋರುತ್ತಿದ್ದಾರೆ. ಈವರೆಗೆ ಕೇಂದ್ರದಿಂದ ರಾಜ್ಯಕ್ಕೆ ಯಾವುದೇ ಸಹಕಾರ ಸಿಕ್ಕಿಲ್ಲ. ಇದು ರಾಜ್ಯ ಸರ್ಕಾರಕ್ಕೆ ಆದ ಅವಮಾನ. ತಕ್ಷಣವೇ ಅಧಿಕಾರಿಗಳಿಂದ ಕೇಂದ್ರ ಸರ್ಕಾರ ಸಮೀಕ್ಷೆ ನಡೆಸಿ, ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿದರು.

    ಬಿಜೆಪಿಯವರಿಗೆ ಕಾಂಗ್ರೆಸ್, ಜೆಡಿಎಸ್ ಶಾಸಕರಿಂದ ರಾಜೀನಾಮೆ ಕೊಡಿಸಲು ಹಾಗೂ ಸರ್ಕಾರ ಬೀಳಿಸಲು ಇದ್ದ ಆಸಕ್ತಿ ಸಂಪುಟ ರಚಿಸಲು ಇಲ್ಲ. ಹೀಗಾಗಿ ಸಚಿವ ಸಂಪುಟ ರಚನೆಗೆ ವಿಳಂಬವಾಗುತ್ತಿದೆ. ರಾಜ್ಯಪಾಲರು ಕಣ್ಣು ಮುಚ್ಚಿ ಕುಳಿತಿದ್ದಾರಾ? ಅನರ್ಹ ಶಾಸಕರ ಪ್ರಕರಣ ಸುಪ್ರೀಂ ಕೋರ್ಟ್‍ನಲ್ಲಿ ಇರುವುದರಿಂದ ಕಾಯುತ್ತಿದ್ದರೆ ಅದನ್ನು ಬಹಿರಂಗ ಪಡಿಸಿ. ಅವರನ್ನು ಸಚಿವರನ್ನಾಗಿ ಮಾಡುವ ಭರವಸೆ ನೀಡಿದ್ದೀರಾ ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

    ಸಂತ್ರಸ್ತರಿಗೆ ಪರಂ ಸಹಾಯ
    ನನ್ನ ಒಂದು ತಿಂಗಳ ಸಂಬಳ ಹಾಗೂ ಸಂಸ್ಥೆಯಿಂದ 10 ಲಕ್ಷ ರೂ.ಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುತ್ತೇನೆ. ನಮ್ಮ ವೈದ್ಯಕೀಯ ಕಾಲೇಜಿನಿಂದ ಚಿಕಿತ್ಸೆಗೆ ತಂಡ ಕಳುಹಿಸಲು ನಾವು ತಯಾರಿದ್ದೇವೆ. ಕಾಂಗ್ರೆಸ್‍ನ ಎಲ್ಲಾ ಶಾಸಕರು ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ ನೀಡಬೇಕು ಎಂದು ಈ ಮೂಲಕ ಕೆಪಿಸಿಸಿ ಅಧ್ಯಕ್ಷರು, ಶಾಸಕಾಂಗ ನಾಯಕರಲ್ಲಿ ವಿನಂತಿಸುತ್ತೇನೆ ಎಂದು ಇದೇ ವೇಳೆ ಪರಮೇಶ್ವರ್ ತಿಳಿಸಿದರು.

    ವಿಪಕ್ಷ ಸ್ಥಾನ-ಹೈ ಕಮಾಂಡ್ ನಿರ್ಧಾರ
    ಪ್ರತಿಪಕ್ಷ ಸ್ಥಾನದ ನಾಯಕರ ಆಯ್ಕೆ ವಿಚಾರದಲ್ಲಿ ಹೈಕಮಾಂಡ್ ಏನು ಹೇಳುತ್ತೊ ಅದನ್ನು ಕೇಳುತ್ತೇವೆ. ಪ್ರತಿಪಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಎಚ್.ಕೆ. ಪಾಟೀಲ್, ನನ್ನ(ಪರಮೇಶ್ವರ್) ಹಾಗೂ ಸಿದ್ದರಾಮಯ್ಯ ಅವರ ಹೆಸರು ಕೇಳಿ ಬರುತ್ತಿದೆ. ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಸ್ಪಷ್ಟಪಡಿಸಿದರು.

  • ಪರಮೇಶ್ವರ್ ಭಾಷಣದ ವೇಳೆ ಜೈ ಶ್ರೀರಾಮ್ ಘೋಷಣೆ

    ಪರಮೇಶ್ವರ್ ಭಾಷಣದ ವೇಳೆ ಜೈ ಶ್ರೀರಾಮ್ ಘೋಷಣೆ

    ಬೆಂಗಳೂರು: ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರ ಭಾಷಣದ ವೇಳೆಯೂ ವ್ಯಕ್ತಿಯೊಬ್ಬ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಾನೆ.

    ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆದ ಕೆಂಪೇಗೌಡ ಜಯಂತಿಯಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಮಾತನಾಡುತ್ತಿದ್ದಾಗ ವ್ಯಕ್ತಿಯೊಬ್ಬ ಜೈ ಶ್ರೀರಾಮ್ ಎಂದು ಕೂಗಿದ್ದಾನೆ. ಇವತ್ತು ಗಾಂಧಿ ಎಂದರೆ ಯಾರು? ಶ್ರೀರಾಮ ಅಂದರೆ ಯಾರು ಎಂದು ಕೇಳುವ ಸನ್ನಿವೇಶ ಇದೆ ಎಂದು ಪರಮೇಶ್ವರ್ ಹೇಳುತ್ತಿದ್ದಂತೆ ಸಭಿಕರ ಮಧ್ಯದಿಂದ ವ್ಯಕ್ತಿಯೋರ್ವ ಜೈ ಶ್ರೀರಾಮ್ ಎಂದು ಕೂಗಿದ್ದಾನೆ. ತಕ್ಷಣ ಪ್ರತಿಕ್ರಯಿಸಿದ ಡಿಸಿಎಂ,”ಇಷ್ಟೊತ್ತು ಚೆನ್ನಾಗಿದ್ದೆಯಲ್ಲಪ್ಪ, ಏನಾಯ್ತು ನಿನಗೆ” ಎಂದು ಪ್ರಶ್ನಿಸಿದ್ದಾರೆ. ಪರಮೇಶ್ವರ್ ಮಾತಿಗೆ ಜನ ನಗೆಗಡಲಲ್ಲಿ ತೇಲಿದರು.

    ಹೆಚ್ಚು ಜನರಿಗೆ ಪ್ರಶಸ್ತಿ: ಮುಂದಿನ ತಿಂಗಳು ನಮ್ಮ ಮೇಯರ್ ಜಯಂತಿ ಆಚರಿಸುತ್ತಾರೆ. ಬಹುದೊಡ್ಡ ಜಯಂತಿ ಆಚರಣೆ ಮಾಡುತ್ತಾರೆ. ಅದ್ಧೂರಿ ಜಯಂತಿ ಆಚರಿಸಿ 500 ಪ್ರಶಸ್ತಿ ನೀಡುತ್ತಾರೆ. ಸಾಧಕರಿರುತ್ತಾರೆ, ಆದರೆ ಅಷ್ಟು ಮಂದಿಗೆ ಕೆಂಪೇಗೌಡ ಪ್ರಶಸ್ತಿ ನೀಡುವುದು ಸರಿಯೇ. ಈ ಬಾರಿ ಕಡಿಮೆ ಮಾಡಲು ಸೂಚಿಸಿದ್ದೇನೆ. ಏನು ಮಾಡುತ್ತಾರೋ ನೋಡೋಣ ಎಂದು ಹೇಳಿದರು.

    ಕೆಂಪೇಗೌಡರ ಹೆಸರಿಡಿ: ಪಟ್ಟನಾಯಕನಹಳ್ಳಿ ನಂಜಾವಧೂತ ಸ್ವಾಮೀಜಿ ಮಾತನಾಡಿ, ನಾವು ಪ್ರತಿ ಬಾರಿಯ ಜಯಂತಿಯ ವೇಳೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಡುತ್ತೇವೆ. ಆದರೆ, ಆ ಬೇಡಿಕೆಗಳು ಹಾಗೇ ಉಳಿಯುತ್ತವೆ ಈ ಬಾರಿ ಹಾಗಾಗಬಾರದು, ನಮ್ಮ ಮೆಟ್ರೋಗೆ ಕೆಂಪೇಗೌಡ ಹೆಸರಿಡಬೇಕು ಎಂದು ಮನವಿ ಮಾಡಿದರು.

    ಕುಮಾರಸ್ವಾಮಿ ಮೆಟ್ರೋ ಯೋಜನೆ ತಂದವರು, ನಮ್ಮ ಮೆಟ್ರೋಗೆ ಕೆಂಪೇಗೌಡ ಹೆಸರಿಡಬೇಕು. ಈ ಕುರಿತು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಬೇಕು. ಪಠ್ಯ ಪುಸ್ತಕದಲ್ಲಿ ಕೆಂಪೇಗೌಡರ ಪಠ್ಯ ಅಳವಡಿಸಬೇಕು. ನಗರದಲ್ಲಿ ವಿಶ್ವವೇ ತಿರುಗಿನೋಡುವಂತಹ ಕೆಂಪೇಗೌಡರ ಬೃಹತ್ ಪ್ರತಿಮೆ ನಿರ್ಮಾಣ ಮಾಡಬೇಕು. ಎಷ್ಟೇ ನೋವು ಬಂದರೂ ಮುಖ್ಯಮಂತ್ರಿಗಳು ಕಾಳಜಿವಹಿಸಬೇಕು. ಡಿಕೆ ಶಿವಕುಮಾರ್ ಅವರು ಸಿಎಂ ಆರೋಗ್ಯದ ಕಾಳಜಿವಹಿಸಬೇಕು. ಕುಮಾರಸ್ವಾಮಿ ಅವರು ಹೃದಯ ವೈಶಾಲ್ಯತೆ ಇರುವ ವ್ಯಕ್ತಿ ಎಂದರು.

    ಇದೇ ವೇಳೆ, ಆಡಳಿತ ನಡೆಸುವವರ ಭಾಷೆ ಹುಷಾರಾಗಿರಬೇಕು, ಮತ್ತೊಬ್ಬರನ್ನು ನೋಯಿಸುವ ಭಾಷೆಯಾಗಬಾರದು, ಯಾವುದನ್ನೂ ಬಯಸದೆ ಕೆಲಸ ಮಾಡಬೇಕು ಎಂದು ಸಿಎಂ ಕುಮಾರಸ್ವಾಮಿಗೂ ಶ್ರೀಗಳು ಸಲಹೆ ನೀಡಿದರು.

  • ಸಮ್ಮಿಶ್ರ ಸರ್ಕಾರದಲ್ಲಿ ಮತ್ತೊಂದು ಸುತ್ತಿನ ವಾರ್-ಉಸ್ತುವಾರಿ ನೇಮಕ ಕಾದಾಟದಲ್ಲಿ ಮಾಜಿ ಸಿಎಂ ಫುಲ್ ಗರಂ

    ಸಮ್ಮಿಶ್ರ ಸರ್ಕಾರದಲ್ಲಿ ಮತ್ತೊಂದು ಸುತ್ತಿನ ವಾರ್-ಉಸ್ತುವಾರಿ ನೇಮಕ ಕಾದಾಟದಲ್ಲಿ ಮಾಜಿ ಸಿಎಂ ಫುಲ್ ಗರಂ

    ಬೆಂಗಳೂರು: ಮೊದಲ ಹಂತದ ಮಂತ್ರಿ ಸ್ಥಾನ ಹಂಚಿಕೆ, ಬಜೆಟ್ ಮುಗಿತು, ಈಗ ಜಿಲ್ಲಾ ಉಸ್ತುವಾರಿ ಸಚಿವರ ನೇಮಕಾತಿಗೆ ಸಂಬಂಧಸಿದಂತೆ ಸಮ್ಮಿಶ್ರ ಸರ್ಕಾರದಲ್ಲಿ ಅಸಮಾಧಾನ ಬುಗಿಲೆದ್ದಿದ್ದು, ವಿಧಾನಸಭೆಯ ಚುನಾವಣೆಯ ಪೈಪೋಟಿಯ ಕಾವು ಮತ್ತೆ ಮರುಕಳಿಸಿದೆ.

    ಮಂಗಳವಾರ ಸಮ್ಮಿಶ್ರ ಸರ್ಕಾರದ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಬಿಡುಗಡೆಯಾಗಿದ್ದು, ಇದರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಬಣಕ್ಕೆ ಹಿನ್ನಡೆಯಾಗಿದೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೆ ಮೈಸೂರು ಜಿಲ್ಲಾ ಉಸ್ತುವಾರಿಯನ್ನು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರಿಗೆ ನೀಡಿದ್ದಕ್ಕೆ ಸಿದ್ದರಾಮಯ್ಯ ಅವರು ಗರಂ ಆಗಿದ್ದಾರಂತೆ.

    ವೈದ್ಯಕೀಯ ಶಿಕ್ಷಣ ಸಚಿವ ಡಿಕೆ ಶಿವಕುಮಾರ್ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಂಡದ ಯೋಜನೆಯಂತೆಯೇ ಜಿಲ್ಲಾ ಉಸ್ತುವಾರಿ ನೇಮಕ ನಡೆದಿದೆ ಎನ್ನಲಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಮತಕ್ಷೇತ್ರದಿಂದ ಭಾರೀ ಪೈಪೋಟಿ ನೀಡಿ, ಜಯಗಳಿಸಿದ್ದ ಜಿ.ಟಿ.ದೇವೇಗೌಡ ಹಾಗೂ ಸಿದ್ದರಾಮಯ್ಯ ನಡುವೆ ಅಸಮಾಧಾನದ ಹೊಗೆ ಇನ್ನು ಶಮನಗೊಂಡಿಲ್ಲ. ಕಳೆದ ಕೆಲವು ದಿನಗಳಿಂದ ಸಿಂಡಿಕೇಟ್ ಸದಸ್ಯರ ನೇಮಕಾತಿಯಲ್ಲಿಯೂ ಇಬ್ಬರ ನಾಯಕರ ಮಧ್ಯೆ ಶೀತಲ ಸಮರ ಏರ್ಪಟ್ಟಿತ್ತು. ಈಗ ಮೈಸೂರು ಜಿಲ್ಲಾ ಉಸ್ತುವಾರಿಯೂ ಜಿ.ಟಿ.ದೇವೇಗೌಡರು ಅಂದು ಕೊಂಡಂತೆ ಆಗಿದೆ.

    ತಮ್ಮ ಆಪ್ತ ಹಾಗೂ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಕೆ.ಜೆ.ಜಾರ್ಜ್ ಗೆ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಕೊಟ್ಟಿರೋದಕ್ಕೆ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯವರ ಮಾತನ್ನೇ ಕೇಳುತ್ತಿಲ್ಲವಂತೆ. ಈಗ ಜಿಲ್ಲಾ ಉಸ್ತವಾರಿ ನೇಮಕದ ನಡೆ ಸಮ್ಮಿಶ್ರ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಹಂಚಿಕೆ ಅಸಮಾಧಾನಕ್ಕೆ ಕಾರಣವಾಗಿದೆ.

  • ಕಾಂಗ್ರೆಸ್ ಸಿಎಲ್‍ಪಿ ಸಭೆ: ಏನೇನು ಚರ್ಚೆ ಆಯ್ತು? ಇನ್‍ಸೈಡ್ ಸ್ಟೋರಿ ಇಲ್ಲಿದೆ

    ಕಾಂಗ್ರೆಸ್ ಸಿಎಲ್‍ಪಿ ಸಭೆ: ಏನೇನು ಚರ್ಚೆ ಆಯ್ತು? ಇನ್‍ಸೈಡ್ ಸ್ಟೋರಿ ಇಲ್ಲಿದೆ

    ಬೆಂಗಳೂರು: ವಿಧಾನಸೌಧದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಕಾಂಗ್ರೆಸ್ ಶಾಸಕಾಂಗ ಸಭೆ ನಡೆದಿದ್ದು, ಈ ವೇಳೆ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅವರಿಗೆ ಶಾಸಕರು ಕ್ಲಾಸ್ ತೆಗೆದುಕೊಂಡಿದ್ದಾರೆ.

    ಸಮ್ಮಿಶ್ರ ಸರ್ಕಾರ ರಚನೆಯಾದ ಬಳಿಕ ಮೊದಲ ಸಿಎಲ್‍ಪಿ ಸಭೆ ಇಂದು ನಡೆದಿದ್ದು, ಸಭೆಯಲ್ಲಿ ಬಜೆಟ್ ಮಂಡನೆಯಿಂದಾದ ಗೊಂದಲದ ಜೊತೆಗೆ ಸಭಾಪತಿ ಸ್ಥಾನ ಜೆಡಿಎಸ್‍ಗೆ ಬಿಟ್ಟುಕೊಡುವ ವಿಚಾರ, ಸಂಪುಟ ವಿಸ್ತರಣೆ, ಜಿಲ್ಲಾ ಉಸ್ತುವಾರಿ ಸಚಿವರ ನೇಮಕ, ನಿಗಮ ಮಂಡಳಿ ನೇಮಕ, ಪೆಟ್ರೋಲ್, ವಿದ್ಯುತ್ ದರ ಏರಿಕೆಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.

    ಕುಮಾರಸ್ವಾಮಿ ಹೇಳಿದ್ದಕ್ಕೆಲ್ಲಾ ನೀವು ತಲೆ ಅಲ್ಲಾಡಿಸುತ್ತೀರಿ. ಡಿಸಿಎಂ ಹುದ್ದೆ, ಅಧಿಕಾರ ಬರುತ್ತೆ ಹೋಗುತ್ತೆ. ಆದ್ರೆ ನಮಗೆ ಪಕ್ಷ ಮುಖ್ಯವಾಗುತ್ತದೆ. ಕಾಂಗ್ರೆಸ್ ಪಕ್ಷದ ಬುಡ ಅಲುಗಾಡದಂತೆ ನೋಡಿಕೊಳ್ಳಿ ಎಂದು ಕೈ ಶಾಸಕರು ಪರಮೇಶ್ವರ್ ಅವರನ್ನು ಪ್ರಶ್ನಿಸಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿ ಮೂಲಗಳು ತಿಳಿಸಿವೆ.

    ಸಭೆಯಲ್ಲಿ ಬಜೆಟ್ ನಲ್ಲಿ ಅಲ್ಪಸಂಖ್ಯಾತರ ಬಗ್ಗೆ ಒಂದೇ ಒಂದು ವಿಷಯ ಪ್ರಸ್ತಾಪಕ್ಕೆ ಮಾಡದ್ದಕ್ಕೆ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದು, ಇದರಿಂದ ಕೆಟ್ಟ ಸಂದೇಶ ರವಾನೆ ಆಗುತ್ತದೆ. ಬಜೆಟ್ ಉತ್ತರದಲ್ಲಿ ಇದನ್ನ ಸರಿಪಡಿಸಬೇಕು. ಕಾಂಗ್ರೆಸ್ ನಾಯಕರ ಜೊತೆಗೆ ಸಮಾಲೋಚನೆ ಮಾಡದೇ ಪೆಟ್ರೋಲ್ ಸೆಸ್ ಏರಿಕೆ ಮಾಡಿದ್ದಾರೆ. ಪೆಟ್ರೋಲ್ ಬೆಲೆ ಏರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಕೇಂದ್ರದ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಹೀಗಿರುವಾಗ ನಮ್ಮ ಸರ್ಕಾರದಲ್ಲೇ ಸೆಸ್ ಬೆಲೆ ಏರಿಕೆಗೆ ಸಮ್ಮತಿ ನೀಡಿದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಸರ್ಕಾರಕ್ಕೆ ಪೆಟ್ರೋಲ್ ಮೇಲಿನ ಸೆಸ್ ಗೆ ಸಾವಿರ ಕೋಟಿ ಹೊರೆಯಾಗಬಹುದು. ಹಾಗಂತ ಪೆಟ್ರೋಲ್ ಬೆಲೆ ಏರಿಕೆ ಮಾಡಿದ್ದು ಸರಿಯಿಲ್ಲ. ಇದನ್ನು ವಾಪಾಸ್ ಪಡೆಯಬೇಕು. ಈ ಬಗ್ಗೆ ಸಿಎಂ ಗಮನ ಸೆಳೆಯಲು ಕಾಂಗ್ರೆಸ್ ನಾಯಕರು ತೀರ್ಮಾನಿಸಬೇಕು. ಇನ್ನೂ ಅನ್ನಭಾಗ್ಯ ಯೋಜನೆಯಡಿ ನೀಡುತ್ತಿದ್ದ ಇದ್ದ ಏಳು ಕೆಜಿ ಅಕ್ಕಿಯನ್ನು ಕೊಡಬೇಕು. ಎರಡು ಕೆಜಿ 700 ಕೋಟಿ ರೂಪಾಯಿ ಹೆಚ್ಚಳವಾಗುತ್ತದೆ. ಅದು ಸರ್ಕಾರಕ್ಕೆ ಅಷ್ಟೊಂದು ಹೊರೆಯಾಗೋದಿಲ್ಲ. ಐದು ಕೆಜಿ ಯಿಂದ ಎರಡು ಕೆಜಿ ಗೆ ಇಳಿಸಿರೋದು ಸರಿಯಲ್ಲ. ಕಾಂಗ್ರೆಸ್ ಸರ್ಕಾರದ ಪ್ರಮುಖ ಯೋಜನೆಗೆ ಈ ರೀತಿ ಕತ್ತರಿ ಹಾಕಿದ್ದು ಸರಿಯೇ ಎಂದು ಸಭೆಯಲ್ಲಿ ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಅವರನ್ನು ಶಾಸಕರು ಪ್ರಶ್ನಿಸಿದ್ದಾರೆ. ನಾಳೆ ಬಜೆಟ್ ಮೇಲೆ ಸಿಎಂ ಉತ್ತರ ಕೊಡುವಾಗ ಇವೆಲ್ಲವನ್ನು ಹೇಳಬೇಕು. ಈ ಬಗ್ಗೆ ಕಾಂಗ್ರೆಸ್ ನಾಯಕರು ಒಟ್ಟಾಗಿ ಸಿಎಂ ಗಮನಕ್ಕೆ ತರಬೇಕು ಅಂತ ಶಾಸಕರು ಆಗ್ರಹಿಸಿದ್ದಾರೆ.

    ಈ ವೇಳೆ ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ ಭಾಗದ ಶಾಸಕರಿಂದ ಅಸಮಾಧಾನ ವ್ಯಕ್ತವಾಗಿದೆ. ಪೆಟ್ರೋಲ್ ಏರಿಕೆ ಬಗ್ಗೆ ನಾವೇ ಕೇಂದ್ರ ಸರ್ಕಾರದ ಹೋರಾಟ ಮಾಡಿದ್ವಿ. ಈಗ ನಾವೇ ಹೆಚ್ಚಳ ಮಾಡಿದ್ರೆ ನಾವು ಹೇಗೆ ಮುಂದೆ ಹೋರಾಟ ಮಾಡೋದು? ಜನ ಸಾಮಾನ್ಯರಿಗೆ ಹೊರೆ ಆಗುವಂತೆ ವಿದ್ಯುತ್ ಬೆಲೆ ಏರಿಕೆ ಮಾಡಿದ್ದು ಸರಿಯಲ್ಲ. ಹಿಂಗೆ ಆದ್ರೆ ನಾವು ಜನರ ಬಳಿ ಹೋಗೋದು ಹೇಗೆ ಅಂತ ಶಾಸಕರು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

    ಸಭೆಯ ಮಧ್ಯೆ ಕೆಪಿಸಿಸಿ ಅಧ್ಯಕ್ಷ, ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೊರನಡೆದಿದ್ದರು.

    ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎಚ್‍ಕೆ ಪಾಟೀಲ್, ಸಿಎಂ ಹಾಗೂ ಸಿದ್ದರಾಮಯ್ಯಗೆ ಬರೆದ ಪತ್ರದ ಬಗ್ಗೆ ಇವತ್ತಿನ ಸಭೆಯಲ್ಲಿ ಚರ್ಚೆ ಆಗಿದೆ. ಬಜೆಟ್ ನಲ್ಲಿ ಉತ್ತರ ಕರ್ನಾಟಕ ಹಾಗೂ ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿರುವ ಬಗ್ಗೆ ತಿಳಿಸಿದ್ದೇನೆ. ನನ್ನ ಅನಿಸಿಕೆಯನ್ನ ಸಭೆಯಲ್ಲಿ ತಿಳಿಸಿದ್ದು, ಅದನ್ನು ನಾಯಕರು ಗಂಭೀರವಾಗಿ ಪರಿಗಣಿಸಿದ್ದಾರೆ. ಸಂಪೂರ್ಣ ಕರ್ನಾಟಕಕ್ಕೆ ಒಳ್ಳೆಯಾದಾಗುವ ಕುರಿತು ನಿರ್ಧಾರ ಮಾಡ್ತಾರೆ ಅನ್ನೋ ಭರವಸೆ ಇದೆ. ನನ್ನ ಅನಿಸಿಕೆಯನ್ನು ಬಹುತೇಕ ಶಾಸಕರು ಕೂಡ ಒಪ್ಪಿಕೊಂಡ್ರು. ರೈತರ ಸಾಲಮನ್ನಾ ಎಲ್ಲಾ ಭಾಗದ ರೈತರಿಗೂ ಆಗಬೇಕು ಅನ್ನೊ ವಿಚಾರವನ್ನ ತಿಳಿಸಿದ್ದೇನೆ. ಪೆಟ್ರೋಲ್, ಡೀಸಲ್ ಬೆಲೆ ಹೆಚ್ಚಳ ವಿಚಾರವನ್ನೂ ಪ್ರಸ್ತಾಪ ಮಾಡಿದ್ದು, ಅದನ್ನ ಕಡಿಮೆ ಮಾಡಬೇಕು ಅಂತ ತಿಳಿಸಿದ್ದೇವೆ ಅಂತ ಹೇಳಿದ್ರು.

    ಮುಂದಿನ ಚುನಾವಣೆಗೆ ಶಿಸ್ತಿನಿಂದ ಕೆಲಸ ಮಾಡಲು ಸೂಚನೆ ಮಾಡಲಾಗಿದೆ. ಪರಿಷತ್ ಸಭಾಪತಿ ಸ್ಥಾನ ಬೇಗ ಮಾಡಬೇಕು ಅನ್ನೋದನ್ನ ಕೆಲವರು ಹೇಳಿದ್ದಾರೆ. ನಮ್ಮ ರಾಷ್ಟ್ರೀಯ ಕಾರ್ಯದರ್ಶಿ ಬಂದಿದ್ದಾರೆ. ಅವರು ಈ ಬಗ್ಗೆ ಚರ್ಚೆ ಮಾಡ್ತಾರೆ. ಮುಂದಿನ ಚುನಾವಣೆಗೆ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ ಅಂತ ಇದೇ ವೇಳೆ ಸಚಿವ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

    ಆರ್ ವಿ ದೇಶಪಾಂಡೆ, ಕೆ ಜೆ ಜಾರ್ಜ್, ಪುಟ್ಟರಂಗಶೆಟ್ಟಿ, ಹ್ಯಾರೀಸ್, ತನ್ವೀರ್ ಸೇಠ್, ಎಚ್ ಎಂ ರೇವಣ್ಣ,ಸೋಮಶೇಖರ್ ರಾಜಶೇಖರ್ ಪಾಟೀಲ್, ಸಚಿವೆ ಜಯಮಾಲ, ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಐವಾನ್ ಡಿಸೋಜಾ, ಬಿಸಿ ಪಾಟೀಲ್, ಎಸ್ ಆರ್ ಪಾಟೀಲ್, ಶಿವಶಂಕರ್ ರೆಡ್ಡಿ, ಪ್ರಿಯಾಂಕ ಖರ್ಗೆ ಮೊದಲಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.