Tag: Dr.CN Aswathanarayana

  • ಮಲ್ಲೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಪಾಠ ಮಾಡಿದ `ರೋಬೋ’

    ಮಲ್ಲೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಪಾಠ ಮಾಡಿದ `ರೋಬೋ’

    ಬೆಂಗಳೂರು: ಪಾಠ-ಪ್ರವಚನಗಳಲ್ಲಿ ಬೋಧಕರಿಗೂ ವಿದ್ಯಾರ್ಥಿಗಳಿಗೂ ಸಹಕರಿಸಿ, ಕಲಿಕೆಯನ್ನು ಸುಲಭವಾಗಿಸುವಂತಹ `ಈಗಲ್’ ರೋಬೋ ಪರೀಕ್ಷಾರ್ಥ ಪ್ರಾತ್ಯಕ್ಷಿಕೆಯು ಬುಧವಾರದಂದು ಮಲ್ಲೇಶ್ವರಂ 13ನೇ ಅಡ್ಡರಸ್ತೆಯಲ್ಲಿರುವ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯಿತು.

    ಕ್ಷೇತ್ರದ ಶಾಸಕರಾಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. ಶಾಲೆಯ ಬೋಧಕರು ಮತ್ತು ವಿದ್ಯಾರ್ಥಿನಿಯರು ಇದರಲ್ಲಿ ಪಾಲ್ಗೊಂಡು, ರೋಬೋ ಕಾರ್ಯಕ್ಷಮತೆಗೆ ಸಾಕ್ಷಿಯಾದರು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ರೋಬೋಗೆ ಹಲವು ಪ್ರಶ್ನೆಗಳನ್ನು ಕೇಳಿದರು. ಹಾಗೆಯೇ, ಅದು ನೀಡಿದ ಉತ್ತರ ನೆರವನ್ನು ಕಂಡು ಬೆರಗಾದರು. ಇದನ್ನೂ ಓದಿ: ಮಲ್ಲೇಶ್ವರಂ 18ನೇ ಅಡ್ಡರಸ್ತೆ ಮೈದಾನದಲ್ಲಿ ವಾಕಿಂಗ್ ಪಥ ನಿರ್ಮಾಣ ಇಲ್ಲ: ಅಶ್ವತ್ಥನಾರಾಯಣ

    ರೋಬೋ ಬೋಧನೆ ನಂತರ ಮಾತನಾಡಿದ ಅಶ್ವತ್ಥನಾರಾಯಣ ಅವರು, ಇದು ಪ್ರಾಯೋಗಿಕ ಕಾರ್ಯಕ್ರಮವಾಗಿದ್ದು, ರೋಬೋದ ಕಾರ್ಯ ಸಾಮಥ್ರ್ಯವನ್ನು ವೀಕ್ಷಿಸಲಾಗಿದೆ. ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಜಾಗತಿಕ ಗುಣಮಟ್ಟದ ಬೋಧನೆಯ ಸಲುವಾಗಿ, ಇಂತಹ ರೋಬೋಗಳು ಇದ್ದರೆ ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.

    ರೋಬೋ ಶಿಕ್ಷಕರಿಗೆ ಪರ್ಯಾಯ ಅಲ್ಲ. ಆದರೆ ಶಿಕ್ಷಕರಿಗೆ ಬೋಧನೆಯಲ್ಲಿ ಸಹಕರಿಸುವ ಕೆಲಸ ಮಾಡಲಿದೆ. ಇದರಿಂದ ವಿದ್ಯಾರ್ಥಿಗಳ ಕಲಿಕೆಯ ಮಟ್ಟ ಕೂಡ ಹೆಚ್ಚಾಗಲಿದೆ ಎಂದು ಹೇಳಿದರು.

    21ನೇ ಶತಮಾನವು ತಂತ್ರಜ್ಞಾನದ ಯುಗವಾಗಿದ್ದು, ಬೋಧನೆಯಲ್ಲಿ ಇದರ ಅಳವಡಿಕೆ ಅಗತ್ಯವಾಗಿದೆ. ಇದರಿಂದಾಗಿ, ಸರ್ಕಾರಿ ಶಾಲಾ-ಕಾಲೇಜುಗಳು ಕೂಡ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕಡಿಮೆಯಿಲ್ಲದಂತೆ ವಿದ್ಯಾರ್ಥಿಗಳನ್ನು ಆಕರ್ಷಿಸಬಹುದು. ಇದರಿಂದ ಬಡಕುಟುಂಬಗಳ ಮಕ್ಕಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ನುಡಿದರು.

    ಮುಂದಿನ ದಿನಗಳಲ್ಲಿ `ಈಗಲ್’ ರೋಬೋವನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೂ ತೋರಿಸಲಾಗುವುದು. ನಂತರ ಅವರಿಂದಲೇ ಈ ಯೋಜನೆಗೆ ಚಾಲನೆ ಕೊಡಿಸುವ ಉದ್ದೇಶ ಇದೆ. ಮಲ್ಲೇಶ್ವರ ಕ್ಷೇತ್ರದ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಇದನ್ನು ಜಾರಿ ಮಾಡುವ ಉದ್ದೇಶ ಇದೆ ಎಂದು ಅವರು ವಿವರಿಸಿದರು. ಇದನ್ನೂ ಓದಿ: ಹುಡುಗಿ ಎಂದು ಅಪ್ಪನ ಜೊತೆಗೆ ಚಾಟ್ ಮಾಡಿ ಸಿಕ್ಕಿಬಿದ್ದ ಖ್ಯಾತ ನಿರ್ಮಾಪಕ!

    ಇಂಡಸ್ ಟ್ರಸ್ಟ್‌ನ ಸ್ಥಾಪಕ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ಲೆ.ಜನರಲ್ ಅರ್ಜುನ್ ರಾಯ್, ಮಲ್ಲೇಶ್ವರ ಬಿಇಒ ಉಮಾದೇವಿ, ಕಾಲೇಜಿನ ಪ್ರಾಂಶುಪಾಲರಾದ ಡಾ.ರವಿ, ಶಾಲೆ ಉಪ ಪ್ರಾಂಶುಪಾಲ ರವಿಕುಮಾರ್ ಈ ಸಂದರ್ಭದಲ್ಲಿ ಇದ್ದರು.

     

  • ಹಿಜಬ್ ಪರ ವಾದಿಗಳ ಬೆದರಿಕೆಗೆ ಸರ್ಕಾರ ಮಣಿಯದು: ಅಶ್ವತ್ಥನಾರಾಯಣ

    ಹಿಜಬ್ ಪರ ವಾದಿಗಳ ಬೆದರಿಕೆಗೆ ಸರ್ಕಾರ ಮಣಿಯದು: ಅಶ್ವತ್ಥನಾರಾಯಣ

    ರಾಮನಗರ: ಮೊದಲಿಗೆ ನಾವು ಭಾರತೀಯರು ಮತ್ತು ಕನ್ನಡಿಗರು. ಆದ್ದರಿಂದ ಪ್ರತಿಯೊಬ್ಬರೂ ಇಲ್ಲಿ ಇದನ್ನು ಅರಿತು ನಡೆಯಬೇಕು. ಹಿಜಬ್ ವಿಚಾರದಲ್ಲಿ ನ್ಯಾಯಾಲಯವು ತಮಗೆ ಬೇಕಾದಂತೆ ತೀರ್ಪು ಕೊಡಬೇಕಿತ್ತು ಎನ್ನುವ ಮೊಂಡು ವಾದ ಸರಿಯಲ್ಲ. ಇಂತಹ ಬೆದರಿಕೆಗಳಿಗೆಲ್ಲ ಸರ್ಕಾರ ಮಣಿಯುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

    ಹಿಜಬ್ ತೀರ್ಪಿನ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅತ್ಯಂತ ಪ್ರಜಾಸತ್ತಾತ್ಮಕ ದೇಶಗಳಲ್ಲಿ ಕೂಡ ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಉಡುಪುಗಳನ್ನು ನಿಷೇಧಿಸಲಾಗಿದೆ. ಇಷ್ಟಕ್ಕೂ ಶಾಲೆಗಳಲ್ಲಿ ಸಮವಸ್ತ್ರ ನಿಯಮವನ್ನು ತಂದಿದ್ದು ಬಿಜೆಪಿಯಲ್ಲ. ಹಿಜಬ್ ಪರ ಮಾತನಾಡುತ್ತಿರುವವರು ನಮ್ಮ ಪಕ್ಷಗಳೇ ಇದನ್ನೆಲ್ಲ ತಂದಿದೆ ಎಂದು ನಂಬಿಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಯಡಿಯೂರಪ್ಪ, ಸಿಎಂ ಏನೇ ಮಾತಾಡಲಿ, ರಾಜ್ಯದಲ್ಲಿ ಜನ ಬದಲಾವಣೆ ಬಯಸಿದ್ದಾರೆ: ಡಿಕೆಶಿ

    ನಮ್ಮಲ್ಲಿ ಯಾವುದೇ ವಿಚಾರಗಳಿಗೆ ಸಂಬಂಧಿಸಿದಂತೆ ಎಲ್ಲರೂ ಅವರವರ ಅಭಿಪ್ರಾಯ ಹೇಳಬಹುದು. ಬೇಕಿದ್ದವರು ಸುಪ್ರೀಂ ಕೋರ್ಟಿಗೆ ಹೋಗಲಿ. ಆದರೆ ನ್ಯಾಯಾಲಯದ ಆದೇಶವನ್ನು ಎಲ್ಲರೂ ಪಾಲಿಸಬೇಕು. ಇಲ್ಲದಿದ್ದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ಕೊಟ್ಟರು.

    ಸಮವಸ್ತ್ರದ ವಿಚಾರದಲ್ಲಿ ಸರ್ಕಾರವು ಹಿಜಬ್ ಮತ್ತು ಕೇಸರಿ ಶಾಲು ಎರಡನ್ನೂ ದೂರವಿಟ್ಟಿದೆ. ನ್ಯಾಯಾಲಯ ಕೂಡ ವಿಚಾರವನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿ, ವಿವೇಚನೆಯ ತೀರ್ಪು ಕೊಟ್ಟಿದೆ. ಹಿಜಬ್ ಕಡ್ಡಾಯವೆಂದು ಕುರಾನಿನಲ್ಲಿ ಕೂಡ ಹೇಳಿಲ್ಲ. ಇದನ್ನು ಅರ್ಥ ಮಾಡಿಕೊಂಡು ವಿದ್ಯಾರ್ಥಿಗಳು ತಮ್ಮ ಭವಿಷ್ಯದತ್ತ ಗಮನ ಕೊಡಬೇಕು. ಜೊತೆಗೆ ಎಲ್ಲರೂ ಸೌಹಾರ್ದದಲ್ಲಿ ನಂಬಿಕೆ ಇಡಬೇಕು ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಕರೀನಾ ಕಪೂರ್ ಕಮ್ ಬ್ಯಾಕ್ – ಜಪಾನಿ ಲೇಖಕನ ಕೃತಿಗೆ ಮಿಲ್ಕಿ ಬ್ಯೂಟಿ ಹೀರೋಯಿನ್