Tag: Dr Ashwaththanarayana

  • ಮನೆಯಲ್ಲೇ ಕ್ವಾರಂಟೈನ್ ಆದ ಸೋಂಕಿತರಿಗೆ ವೈದ್ಯಕೀಯ ನೆರವು: ಡಾ.ಅಶ್ವತ್ಥನಾರಾಯಣ

    ಮನೆಯಲ್ಲೇ ಕ್ವಾರಂಟೈನ್ ಆದ ಸೋಂಕಿತರಿಗೆ ವೈದ್ಯಕೀಯ ನೆರವು: ಡಾ.ಅಶ್ವತ್ಥನಾರಾಯಣ

    ಬೆಂಗಳೂರು: ಮನೆಗಳಲ್ಲಿಯೇ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಸೋಂಕಿತರಿಗೆ ದೂರವಾಣಿ ಮೂಲಕ ವೈದ್ಯಕೀಯ ಸಲಹೆ (ಟೆಲಿ ಕನ್ಸೆಲ್ಟೆನ್ಸಿ) ನೀಡುವುದಕ್ಕೆ ವೈದ್ಯಕೀಯ ವಿದ್ಯಾರ್ಥಿಗಳನ್ನು ನಿಯೋಜನೆ ಮಾಡುವ ಪೂರ್ಣ ಜವಾಬ್ದಾರಿಯನ್ನು ಆಯಾ ವೈದ್ಯಕೀಯ ಕಾಲೇಜುಗಳ ಡೀನ್ ಗಳಿಗೇ ವಹಿಸಲಾಗುತ್ತಿದೆ. ಇದರಲ್ಲಿ ಕರ್ತವ್ಯ ಲೋಪವಾದರೆ ಅವರನ್ನೇ ಹೊಣೆ ಮಾಡಲಾಗುವುದು ಎಂದು ರಾಜ್ಯ ಕೋವಿಡ್ ಉಸ್ತುವಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಎಚ್ಚರಿಕೆ ನೀಡಿದರು.

    ಬೆಂಗಳೂರಿನಲ್ಲಿ ಗುರುವಾರ ಕೋವಿಡ್ ಹೋಮ್ ಐಸೋಲೇಷನ್ ವಿಭಾಗದ ಉಸ್ತುವಾರಿಯೂ ಆಗಿರುವ ಹಿರಿಯ ಐಎಎಸ್ ಅಧಿಕಾರಿ ಪಂಕಜ್ ಕುಮಾರ್ ಪಾಂಡೆ ಸೇರಿದಂತೆ ಇತರ ಹಿರಿಯ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ ನಂತರ ಈ ವಿಷಯ ತಿಳಿಸಿದರು ಡಿಸಿಎಂ.

    ಒಂದು ವೇಳೆ ಟೆಲಿ ಕನ್ಸೆಲ್ಟೆನ್ಸಿ ಸೇವೆಗೆ ವೈದ್ಯ ವಿದ್ಯಾರ್ಥಿಗಳು ಹಾಜರಾಗದಿದ್ದರೆ ಆಯಾ ಮೆಡಿಕಲ್ ಕಾಲೇಜ್ ಪ್ರಾಂಶುಪಾಲರು, ಡೀನ್ ಅಥವಾ ಮುಖ್ಯಸ್ಥರನ್ನೇ ಹೊಣೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದರು.

    ಈಗಾಗಲೇ ಟೆಲಿ ಕನ್ಸೆಲ್ಟೆನ್ಸಿ ಸೇವೆ ನೀಡಲು 7,000 ವೈದ್ಯಕೀಯ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದೆ. ಈ ಪೈಕಿ 4,000 ಈ ಸೇವೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಆದರೆ, ಕೇವಲ 700 ವಿದ್ಯಾರ್ಥಿಗಳು ಮಾತ್ರ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಉಳಿದವರೂ ಈ ಸೇವೆಗೆ ಕಡ್ಡಾಯವಾಗಿ ಹಾಜರಾಗಬೇಕು. ಈ ಜವಾಬ್ದಾರಿಯನ್ನು ಆಯಾ ಕಾಲೇಜುಗಳ ಪ್ರಾಂಶುಪಾಲರು ವಹಿಸಿಕೊಳ್ಳಬೇಕು ಹಾಗೂ ಕೆಲಸವನ್ನೇ ಆಯಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮುಖ್ಯಸ್ಥರೇ ಹಂಚಿಕೆ ಮಾಡಬೇಕು ಎಂದು ಡಿಸಿಎಂ ಹೇಳಿದರು.

    ವೈದ್ಯಕೀಯ ವಿದ್ಯಾರ್ಥಿಗಳೇ ದೂರವಾಣಿ ಕರೆ ಮೂಲಕ ಸೋಂಕಿತರನ್ನು ಸಂಪರ್ಕಿಸಿ ಸಲಹೆ ನೀಡಿದರೆ ಹೆಚ್ಚು ಅನುಕೂಲವಾಗುತ್ತದೆ. ಸಾಮಾನ್ಯ ಕಾಲ್‍ಸೆಂಟರ್‍ಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯಿಂದ ಇದು ಸಾಧ್ಯವಾಗುವುದಿಲ್ಲ ಎಂದರು ಡಿಸಿಎಂ.

    ಪರೀಕ್ಷೆಗೆ ಮತ್ತಷ್ಟು ವೇಗ
    ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ರಾಜೇಂದ್ರ ಚೋಳನ್ ಜತೆ ಚರ್ಚಿಸಿದರು ಡಿಸಿಎಂ, ಲ್ಯಾಬ್‍ಗಳನ್ನು ಮತ್ತಷ್ಟು ಬಲಪಡಿಸಬೇಕು. ಈಗಾಗಲೇ ಮಲ್ಲೇಶ್ವರದಲ್ಲಿ ಸ್ಯಾಂಪಲ್ ಕೊಟ್ಟ 24 ಗಂಟೆ ಒಳಗೇ ಫಲಿತಾಂಶ ಬರುತ್ತಿದೆ. ಈ ವೇಗ ಇಡೀ ಬೆಂಗಳೂರಿಗೆ ವಿಸ್ತರಿಸಬೇಕು. ಎಷ್ಟು ಬೇಗ ಫಲಿತಾಂಶ ಹೊರಬಿದ್ದು ಚಿಕಿತ್ಸೆ ವೇಗಗತಿಯಲ್ಲಿ ನೀಡಲಾಗುತ್ತದೋ ಅಷ್ಟು ಬೇಗ ಸಾವುಗಳನ್ನು ತಡೆಯಬಹುದು. ಈ ಬಗ್ಗೆ ಉಪೇಕ್ಷ ಬೇಡ ಎಂದು ಡಿಸಿಎಂ ಅವರು ಚೋಳನ್ ಅವರಿಗೆ ಸೂಚಿಸಿದರು.

    ಸ್ಟೆಪ್ ಡೌನ್ ಆಸ್ಪತ್ರೆಗಳನ್ನು ಹೆಚ್ಚು ಪ್ರಮಾಣದಲ್ಲಿ ಮಾಡಲು ಕ್ರಮ ಕೈಗೊಳ್ಳಬೇಕು. ಆಸ್ಪತ್ರೆಯಲ್ಲಿ ಐದು ದಿನ ಚಿಕಿತ್ಸೆ ಪಡೆದ ಸೋಂಕಿತರನ್ನು ಇಂಥ ಆಸ್ಪತ್ರೆಗಳಿಗೆ ಶಿಫ್ಟ್ ಮಾಡಬೇಕು ಎಂದು ಡಿಸಿಎಂ ಸೂಚಿಸಿದರು.

    ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ, ಹಿರಿಯ ಐಎಎಸ್ ಅಧಿಕಾರಿ ತುಷಾರ್ ಗಿರಿನಾಥ, ಡಿಸಿಎಂ ಅವರ ಕಾರ್ಯದರ್ಶಿ ಪಿ.ಪ್ರದೀಪ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.

  • ಪ್ರೇಕ್ಷಣೀಯ ತಾಣವಾಗಿ ಬಾಣಂದೂರಿನ ಮರುವಿನ್ಯಾಸಕ್ಕೆ ಡಾ.ಅಶ್ವತ್ಥನಾರಾಯಣ ಸೂಚನೆ

    ಪ್ರೇಕ್ಷಣೀಯ ತಾಣವಾಗಿ ಬಾಣಂದೂರಿನ ಮರುವಿನ್ಯಾಸಕ್ಕೆ ಡಾ.ಅಶ್ವತ್ಥನಾರಾಯಣ ಸೂಚನೆ

    ಬೆಂಗಳೂರು: ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾಗಿದ್ದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಹುಟ್ಟೂರು, ಬಿಡದಿ ಹೋಬಳಿಯ ಬಾಣಂದೂರನ್ನು ಪ್ರೇಕ್ಷಣೀಯ ತಾಣವಾಗಿ ಅಭಿವೃದ್ಧಿಪಡಿಸಲು ಸರ್ಕಾರ ಮುಂದಾಗಿದ್ದು. ಈ ಹಿನ್ನೆಲೆಯಲ್ಲಿ ಯೋಜನೆಯನ್ನು ಮರುವಿನ್ಯಾಸಗೊಳಿಸುವಂತೆ ಗುತ್ತಿಗೆ ಪಡೆದಿರುವ ಖಾಸಗಿ ಸಂಸ್ಥೆಗೆ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಸೂಚಿಸಿದ್ದಾರೆ.

    ಬಾಣಂದೂರನ್ನು ಸಾಂಸ್ಕೃತಿಕ ಹಾಗೂ ಪಾರಂಪರಿಕ ತಾಣವಾಗಿ ಅಭಿವೃದ್ಧಿಪಡಿಸುವ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆ ಸಂಸ್ಥೆ ಮುಖ್ಯಸ್ಥರ ಜತೆ ಸೋಮವಾರ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಸುದೀರ್ಘ ಚರ್ಚೆ ನಡೆಸಿದರು. ಸಭೆಯಲ್ಲಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಪಾಲ್ಗೊಂಡಿದ್ದರು.

    ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಹುಟ್ಟೂರಿನಲ್ಲಿ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕೇಂದ್ರ ಅಭಿವೃದ್ಧಿಪಡಿಸುವ ಕುರಿತು ಮತ್ತು ವೀರಾಪುರದಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀ ಶಿವಕುಮಾರ ಸ್ವಾಮೀಜಿಯವರ ಪ್ರತಿಮೆ, ಮ್ಯೂಸಿಯಂ ನಿರ್ಮಾಣ ಹಾಗೂ ಸಂಬಂಧ ಸಭೆಯಲ್ಲಿ ಚರ್ಚಿಸಲಾಯಿತು. ಬಾಣಂದೂರಿನ ಪಾರಂಪರಿಕ ಕೇಂದ್ರದ ಪರಿಕಲ್ಪನೆ, ವಿನ್ಯಾಸ ಮಾಡುತ್ತಿರುವ ಆರ್.ಆರ್ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆಯ ವರದಿ ಪರಿಶೀಲಿಸಿದ ಡಾ. ಅಶ್ವತ್ಥನಾರಾಯಣ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಸ್ವಾಮೀಜಿ ಹಾಗೂ ಸಾರ್ವಜನಿಕರ ಜತೆ ಈ ಸಂಬಂಧ ಸಮಾಲೋಚನೆ ನಡೆಸಿ ಸೂಕ್ತ ಬದಲಾವಣೆ ಮಾಡಿಕೊಳ್ಳಲು ಸೂಚಿಸಿದರು.

    ರಾಜ್ಯದ ಎಲ್ಲ ಭಾಗಗಳ ಜನರು ಭೇಟಿ ನೀಡುವ ತಾಣವಾಗಿ ಬಾಣಂದೂರು ಅಭಿವೃದ್ಧಿ ಆಗಬೇಕು. ಗ್ರಂಥಾಲಯ, ಸಭಾಂಗಣ, ಮ್ಯೂಸಿಯಂ ಸೇರಿದಂತೆ ಹಲವು ಆಕರ್ಷಣೆಗಳು ಅಲ್ಲಿರಬೇಕು. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಪೂರ್ವಜರ ಮನೆಯ ಮೂಲ ಸ್ವರೂಪ ಮರುಸೃಷ್ಟಿ ಮುಂತಾದ ಯೋಜನೆಗಳ ಮೂಲಕ ಬಾಣಂದೂರನ್ನು ಪ್ರೇಕ್ಷಣೀಯ ಸ್ಥಳವನ್ನಾಗಿ ಅಭಿವೃದ್ಧಿಪಡಿಸಲು ಆರ್.ಆರ್ ಇನ್ಫ್ರಾಸ್ಟ್ರಕ್ಚರ್‍ನ ಮುಖ್ಯಸ್ಥರಿಗೆ ಸಚಿವರು ಸಲಹೆ ನೀಡಿದರು.

    ಮಠದ ಜಾಗದಲ್ಲಿ ನಿರ್ಮಾಣವಾಗಲಿರುವ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕೇಂದ್ರಕ್ಕೆ ನಿಗದಿಪಡಿಸಿರುವ 25 ಕೋಟಿ ರೂಪಾಯಿಯನ್ನು ನಿಗದಿತ ಉದ್ದೇಶಕ್ಕೆ ಮಾತ್ರ ಬಳಸಿಕೊಳ್ಳಬೇಕು. ಊರಿನಲ್ಲಿ ಇತರ ಮೂಲಸೌಕರ್ಯ ಕಲ್ಪಿಸುವ ಕಾರ್ಯಕ್ರಮಗಳಿಗೆ ಇಲಾಖೆಗಳ ಹಣ ಬಳಸಿಕೊಳ್ಳಬಹುದು ಎಂದು ಡಾ. ಅಶ್ವತ್ಥನಾರಾಯಣ ಸಭೆಯಲ್ಲಿ ತಿಳಿಸಿದರು.

    ಸಭೆಯಲ್ಲಿ ಆದಿಚುಂಚನಗಿರಿಯ ಶಾಖಾ ಮಠದ ಅನ್ನದಾನೇಶ್ವರ ಸ್ವಾಮೀಜಿ, ರಾಮನಗರ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಮಾಗಡಿ ಶಾಸಕ ಎ.ಮಂಜುನಾಥ್, ವಿಧಾನಪರಿಷತ್ ಸದಸ್ಯ ಅ.ದೇವೇಗೌಡ ಉಪಸ್ಥಿತರಿದ್ದರು.