Tag: Dowry

  • ಪ್ರೀತಿಸಿ, 4 ತಿಂಗಳ ಹಿಂದಷ್ಟೇ ಮದುವೆ – ನವವಿವಾಹಿತೆ ಆತ್ಮಹತ್ಯೆಗೆ ಶರಣು

    ಪ್ರೀತಿಸಿ, 4 ತಿಂಗಳ ಹಿಂದಷ್ಟೇ ಮದುವೆ – ನವವಿವಾಹಿತೆ ಆತ್ಮಹತ್ಯೆಗೆ ಶರಣು

    ಬೆಂಗಳೂರು: ಪ್ರೀತಿಸಿ ನಾಲ್ಕು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ನವವಿವಾಹಿತೆಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಶ್ರೀರಾಮಪುರದಲ್ಲಿ ನಡೆದಿದೆ.

    ಅಭಿಲಾಷ ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ. ಈಕೆ ವರದಕ್ಷಿಣೆ ಕಿರುಕುಳದಿಂದಲೇ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.

    ಕಳೆದ ನಾಲ್ಕು ತಿಂಗಳ ಹಿಂದೆ ಶಶಿಕುಮಾರ್ ಎಂಬಾತನನ್ನು ಪ್ರೀತಿಸಿ ಅಭಿಲಾಷ ಮದುವೆಯಾಗಿದ್ದಳು. ಪ್ರೀತಿಸಿ ಮದುವೆಯಾದ ಕಾರಣ ವರದಕ್ಷಿಣೆ ಕೊಟ್ಟಿಲ್ಲ ಅಂತ ಗಂಡನ ಮನೆಯವರು ಕಿರುಕುಳ ನೀಡಿದ್ದಾರೆ. ಇದೇ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಗಲಾಟೆ ನಡೆದು ದುರ್ಘಟನೆ ಸಂಭವಿಸಿದೆ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ.

    ಭಾನುವಾರ ಸಂಜೆ ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಅಭಿಲಾಷ ಶವ ಪತ್ತೆಯಾಗಿದೆ. ಅಭಿಲಾಷ ಪೋಷಕರಿಂದ ಶಶಿಕುಮಾರ್ ಕುಟುಂಬಸ್ಥರು ಕೊಲೆ ಮಾಡಿದ್ದಾರೆ ಅಂತ ಗಂಭೀರ ಆರೋಪ ಕೇಳಿಬಂದಿದೆ. ಸದ್ಯ ಶ್ರೀ ರಾಮಪುರ ಪೊಲೀಸರು ಮೃತಳ ಪತಿ ಶಶಿಕುಮಾರ್ ವಶಕ್ಕೆ ಪಡೆದಿದ್ದಾರೆ.

  • ಕಾಲ್ ಗರ್ಲ್, ಗಂಟೆಗೆ 3 ಸಾವಿರ- ಪತ್ನಿಯ ಖಾಸಗಿ ಫೋಟೋದೊಂದಿಗೆ ಪೋಸ್ಟ್ ಹರಿಬಿಟ್ಟ ಪತಿ

    ಕಾಲ್ ಗರ್ಲ್, ಗಂಟೆಗೆ 3 ಸಾವಿರ- ಪತ್ನಿಯ ಖಾಸಗಿ ಫೋಟೋದೊಂದಿಗೆ ಪೋಸ್ಟ್ ಹರಿಬಿಟ್ಟ ಪತಿ

    ಹೈದರಾಬಾದ್: ಆಂಧ್ರಪ್ರದೇಶದ ತಿರುಪತಿಯಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯೊಂದಿಗಿದ್ದ ಖಾಸಗಿ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಆಕೆಯನ್ನು ಕಾಲ್ ಗರ್ಲ್ ಎಂದು ಬಿಂಬಿಸಿದ್ದಾನೆ.

    ಪತಿಮಹಾಶಯ ತನ್ನ ಹೆಂಡತಿಗೆ ಪದೇ ಪದೇ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ. ಇದರಿಂದ ಬೆಸತ್ತು ಪತ್ನಿ ಮನೆ ಬಿಟ್ಟು ತವರು ಮನೆಗೆ ಬಂದಿದ್ದಳು. ಇದೀಗ ಪತ್ನಿಯು ಈ ರೀತಿ ದುವರ್ತನೆ ತೋರಿದ ಪತಿಯ ವಿರುದ್ಧ ಕುಟುಂಬಸ್ಥರೊಂದಿಗೆ ಸ್ಥಳೀಯ ಪೊಲೀಸ್ ಠಾಣೆಯ ಮುಂಭಾಗ ಪ್ರತಿಭಟನೆಗೆ ಮುಂದಾಗಿದ್ದಾಳೆ.

    ಆರೋಪಿ ತಿರುಪತಿಯ ಎಸ್‍ಜಿಎಸ್ ಕಾಲೇಜಿನಲ್ಲಿ ಜೂನಿಯರ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದಾನೆ. ಆಗಸ್ಟ್‍ನಲ್ಲಿ ಮಹಿಳೆಯನ್ನು ಮದುವೆಯಾಗಿದ್ದ ಆರೋಪಿ, ಮದುವೆಯಾದ ಮೂರನೇ ದಿನದಿಂದ ಆಕೆಗೆ ಕಿರುಕುಳ ನೀಡುತ್ತಿದ್ದನು ಎಂದು ದೂರಿದ್ದಾಳೆ.

    ಈ ವ್ಯಕ್ತಿ ತನ್ನ ಹೆಂಡತಿಯೊಂದಿಗೆ ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿದ್ದನು, ಕೊಡಲು ನಿರಾಕರಿಸಿದ ಕಾರಣ ಹಲ್ಲೆ ಮಾಡುತ್ತಿದ್ದನು. ಮದುವೆಯಾದ ನಂತರ ಗರ್ಭಿಣಿಯಾಗಿದ್ದ ಪತ್ನಿಗೆ ಹಲ್ಲೆ ನಡೆಸಿದ್ದರ ಪರಿಣಾಮ ಗರ್ಭಪಾತವಾಗಿತ್ತು. ಆರೋಪಿ ನಂತರ ಹೆಚ್ಚಿನ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಲು ಪ್ರಾರಂಭಿಸಿದಾಗ ಮಹಿಳೆ ಕಿರುಕುಳವನ್ನು ಸಹಿಸಲಾಗದೆ ತನ್ನ ತವರು ಮನೆ ಬೆಂಗಳೂರಿಗೆ ಮರಳಿದ್ದಳು. ತವರು ಮನೆಗೆ ಹೋಗಿದ್ದಾಗ ಆಕೆಯ 20 ಲಕ್ಷ ರೂ ಬೆಲೆಬಾಳುವ ಚಿನ್ನ ಮತ್ತು ನಗದನ್ನು ಕದ್ದಿರುವುದಾಗಿ ಮಹಿಳೆ ಆರೋಪಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿಯು ಕೆಲದಿನಗಳ ನಂತರ ತಮ್ಮ ಖಾಸಗಿ ಫೋಟೋಗಳನ್ನು ಕಾಲೇಜು ವಾಟ್ಸಾಪ್ ಗ್ರೂಪ್‍ಗೆ ಪೋಸ್ಟ್ ಮಾಡಿ, ಕಾಲ್ ಗರ್ಲ್ ಎಂದು ಅಡಿಬರಹ ಕೊಟ್ಟು ಗಂಟೆಗೆ 3,000 ಸಾವಿರ ರೂ. ಈ ಮಹಿಳೆಗೆಂದು ಬರೆದುಕೊಂಡಿದ್ದಾನೆ. ಇದನ್ನು ಗಮನಿಸಿದ ಮಹಿಳೆ ಈತನ ಉಪಟಳವನ್ನು ಸಹಿಸಲಾಗದೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಕೌಟುಂಬಿಕ ಹಿಂಸೆ ಮತ್ತು ವರದಕ್ಷಿಣೆ ಕಿರುಕುಳ ಸಂಬಂಧಿತ ಆರೋಪದಡಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೈಕ್, ಚಿನ್ನದ ಚೈನ್ ನೀಡದ್ದಕ್ಕೆ ಮಂಟಪಕ್ಕೆ ಬರದ ವರ

    ಬೈಕ್, ಚಿನ್ನದ ಚೈನ್ ನೀಡದ್ದಕ್ಕೆ ಮಂಟಪಕ್ಕೆ ಬರದ ವರ

    – ವಧುವಿನ ಕುಟುಂಬಸ್ಥರಿಂದ ದೂರು ದಾಖಲು

    ಲಕ್ನೋ: ಮದುವೆಯಲ್ಲಿ ಬೈಕ್ ನೀಡದಕ್ಕೆ ಕೋಪಗೊಂಡ ವರ ಮಂಟಪಕ್ಕೆ ಬರದಿರುವ ಘಟನೆ ಉತ್ತರ ಪ್ರದೇಶದ ಅಜಂಗಢ ಜಿಲ್ಲೆಯ ಸಿಧಾರಿ ಕ್ಷೇತ್ರದ ಸಮೇಂದಾ ಗ್ರಾಮದಲ್ಲಿ ನಡೆದಿದೆ. ಇದೀಗ ವಧು ಕುಟುಂಬಸ್ಥರು ವರ ಮತ್ತು ಆತನ ಪರಿವಾರದ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಅಂಬೇಡ್ಕರ್ ನಗರದ ಯವಕನ ಮದುವೆ ಎರಡು ದಿನಗಳ ಹಿಂದೆ ನಡೆಯಬೇಕಿತ್ತು. ಮದುವೆಗೆ ಮುನ್ನ ನಡೆದ ಮಾತುಕತೆಯಲ್ಲಿ 1 ಲಕ್ಷದ 30 ಸಾವಿರ ರೂ. ನೀಡಬೇಕೆಂದು ನಿಶ್ಚಯವಾಗಿತ್ತು. ಮದುವೆಗೂ ಮೊದಲು 1 ಲಕ್ಷ ರೂಪಾಯಿ ಮತ್ತು ಆರತಕ್ಷತೆಯ ದಿನದಂದು 30 ಸಾವಿರ ನೀಡುವ ಕುರಿತು ಕರಾರು ಆಗಿತ್ತು. ಒಪ್ಪಂದಂತೆ ವಧುವಿನ ಕುಟುಂಬಸ್ಥರು ಒಂದು ಲಕ್ಷ ರೂಪಾಯಿ ನೀಡಿದ್ದರು.

    ಮದುವೆಗೆ ಮೂರು ದಿನ ಇರುವಾಗ ವರನ ಕಡೆಯವರು ಒಂದು ಲಕ್ಷ ರೂ. ಮೌಲ್ಯದ ಬೈಕ್ ಮತ್ತು ಚಿನ್ನದ ಚೈನ್ ಬೇಕೆಂದು ಡಿಮ್ಯಾಂಡ್ ಮಾಡಿದ್ದರು. ಆದ್ರೆ ವಧು ಪಕ್ಷದವರು ಬೈಕ್ ಹಾಗೂ ಚಿನ್ನದ ಚೈನ್ ನೀಡಲು ಸಾಧ್ಯವಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದರು. ನಿಗದಿಯಾಗಿದ್ದ ಮುಹೂರ್ತ ಡಿಸೆಂಬರ್ 11ರಂದು ವಧುವಿನ ಕುಟುಂಬಸ್ಥರು ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದರು. ಆದ್ರೆ ವರನ ಮೆರವಣಿಗೆ ಬಂದಿಲ್ಲ.

    ಕಾದು ಕಾದು ಸುಸ್ತಾದ ಸಂಬಂಧಿಕರು ಡಿಸೆಂಬರ್ 12ರಂದು ವರನ ಮನೆಗೆ ನುಗ್ಗಿದ್ದಾರೆ. ಮದುವೆಗೆಯಾದ ಖರ್ಚು ಮತ್ತು ಮುಂಗಡವಾಗಿ ನೀಡಿದ ಹಣ ನೀಡುವಂತೆ ಆಗ್ರಹಿಸಿದ್ದಾರೆ. ಹಣ ನೀಡಲು ಒಪ್ಪದಿದ್ದಾಗ ವಧುವಿನ ಪಕ್ಷದವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ತವರಿನ ಮನೆಯವ್ರು ಚಿನ್ನ ಕೊಟ್ಟರೆ ಮಾತ್ರ ಸೀಮಂತ- ನೊಂದು ಆತ್ಮಹತ್ಯೆಗೆ ಶರಣಾದ ಗರ್ಭಿಣಿ

    ತವರಿನ ಮನೆಯವ್ರು ಚಿನ್ನ ಕೊಟ್ಟರೆ ಮಾತ್ರ ಸೀಮಂತ- ನೊಂದು ಆತ್ಮಹತ್ಯೆಗೆ ಶರಣಾದ ಗರ್ಭಿಣಿ

    – ಮದುವೆಯಾದ 5 ತಿಂಗಳಿಗೆ ಆತ್ಮಹತ್ಯೆ
    – ಹೆಚ್ಚುವರಿ ವರದಕ್ಷಿಣೆಗೆ ಕಿರುಕುಳದ ಆರೋಪ

    ಹೈದರಾಬಾದ್: ಮದುವೆಯಾದ ಐದು ತಿಂಗಳಿಗೆ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್‍ನ ಪಿಎಸ್ ಪಾಪಿರೆಡ್ಡಿ ನಗರದಲ್ಲಿ ನಡೆದಿದೆ.

    24 ವರ್ಷದ ಕೃಷ್ಣ ಪ್ರಿಯಾ ಆತ್ಮಹತ್ಯೆ ಶರಣಾದ ಯುವತಿಯಾಗಿದ್ದು, ಕಳೆದ ಜೂನ್ ತಿಂಗಳಿನಲ್ಲಿ ಜಿಮ್ ಟ್ರೈನರ್ ಆಗಿದ್ದ ಶ್ರವಣ್ ಕುಮಾರ್ ಎಂಬಾತನೊಂದಿಗೆ ಮದುವೆಯಾಗಿತ್ತು. ಮದುವೆ ಸಂದರ್ಭದಲ್ಲಿ ಪ್ರಿಯ ಕುಟುಂಬದವರು 5 ಲಕ್ಷ ರೂ. ವರದಕ್ಷಿಣೆಯನ್ನು ನೀಡಿದ್ದರು.

    ಆದರೆ ಮದುವೆಯಾದ ಸ್ವಲ್ಪ ಸಮಯದ ಬಳಿಕ ಹೆಚ್ಚುವರಿಯಾಗಿ 12 ಲಕ್ಷ ರೂ.ಗಳನ್ನು ತವರು ಮನೆಯಿಂದ ತರುವಂತೆ ಗಂಡ ಪ್ರಿಯ ಮೇಲೆ ಒತ್ತಡ ಹಾಕಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನೊಂದ ಪ್ರಿಯಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿಯಾಗಿದೆ.

    ಗಂಡನ ಮನೆಯಲ್ಲಿ ಕೃಷ್ಣ ಪ್ರಿಯಾ ಮೃತದೇಹ ಅನುಮಾನಸ್ಪದ ಸ್ಥಿತಿಯಲ್ಲಿ ಬೆಳಕಿಗೆ ಬಂದಿದ್ದು, ಆಕೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾಳೆ ಎಂದು ಮೃತಳ ಅತ್ತೆ-ಮಾವ ತಿಳಿಸಿದ್ದಾರೆ. ಆದರೆ ಹೆಚ್ಚುವರಿ ವರದಕ್ಷಿಣೆ ತರುವಂತೆ ಪುತ್ರಿಗೆ ಕಿರುಕುಳ ನೀಡಿದ್ದೆ ಆಕೆಯ ಸಾವಿಗೆ ಕಾರಣ ಎಂದು ಪ್ರಿಯಾ ಪೋಷಕರು ಆರೋಪಿಸಿದ್ದಾರೆ.

    ಹೆಚ್ಚುವರಿ 12 ಲಕ್ಷ ರೂ. ತರುವಂತೆ ಶ್ರವಣ್ ಪತ್ನಿಗೆ ಕಿರುಕುಳ ನೀಡುತ್ತಿದ್ದ, ಗರ್ಭಿಣಿಯಾಗಿದ್ದ ಕೃಷ್ಣ ಪ್ರಿಯ ಸೀಮಂತ ಕಾರ್ಯ ನಡೆಸಲು ಕೂಡ ರಾದ್ಧಾಂತ ಮಾಡಿದ್ದ. ಸೀಮಂತ ಕಾರ್ಯಕ್ರಮ ಮಾಡಬೇಕು ಎಂದರೇ ಬಂಗಾರ ತರಲೇ ಬೇಕು, ಆ ಬಳಿಕವಷ್ಟೇ ತವರು ಮನೆಗೆ ಕಳುಹಿಸುವುದಾಗಿ ಹೇಳಿದ್ದ. ಹೆಚ್ಚುವರಿ ವರದಕ್ಷಿಣೆಗಾಗಿ ಅನ್ಯಾಯವಾಗಿ ತಮ್ಮ ಮಗಳನ್ನು ಬಲಿ ಪಡೆದಿದ್ದಾರೆ ಎಂದು ಪ್ರಿಯ ಪೋಷಕರು ಕಣ್ಣೀರಿಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ವಿಚರಣೆ ಕೈಗೊಂಡಿದ್ದಾರೆ.

  • ಊಟನೂ ಕೊಡದೆ ಚಳಿಯಲ್ಲಿ ಪತ್ನಿ, ಮಗುವನ್ನ ಹೊರ ಹಾಕಿದ ಟೆಕ್ಕಿ ಪತಿ

    ಊಟನೂ ಕೊಡದೆ ಚಳಿಯಲ್ಲಿ ಪತ್ನಿ, ಮಗುವನ್ನ ಹೊರ ಹಾಕಿದ ಟೆಕ್ಕಿ ಪತಿ

    – ಮನೆ ಹೊರಭಾಗದ ಕಾರಿಡಾರಿನಲ್ಲೇ ರಾತ್ರಿ ಕಾಲ ಕಳೆದ ಟೆಕ್ಕಿ

    ಬೆಂಗಳೂರು: ಟೆಕ್ಕಿ ಪತಿಯೊಬ್ಬ ತನ್ನ ಪತ್ನಿ ಮತ್ತು ಎರಡು ವರ್ಷದ ಮಗುವನಿಗೆ ತಿನ್ನಲೂ ಆಹಾರವನ್ನು ಕೊಡದೆ ಮನೆಯಿಂದ ಹೊರ ಹಾಕಿ ಅಮಾನವೀಯವಾಗಿ ವರ್ತಿಸಿರುವ ಘಟನೆ ನಗರದಲ್ಲಿ ನಡೆದಿದೆ.

    ಹೈದರಾಬಾದ್ ಮೂಲದ ಟೆಕ್ಕಿ ವಾದಿಕಾ ಜತ್ಲಾಗೆ ಟೆಕ್ಕಿ ಪತಿ ಮತ್ತು ಕುಟುಂಬದವರು ಕಿರುಕುಳ ನೀಡುತ್ತಿದ್ದರು. ಆರೋಪಿ ಹರಿಪ್ರಸಾದ್ ತೋಟಾ ತನ್ನ 2 ವರ್ಷದ ಮಗುವಿನೊಂದಿಗೆ ಪತ್ನಿಗೆ ಆಹಾರವನ್ನು ನೀಡದೆ ಕಿರುಕುಳ ನೀಡುತ್ತಿದ್ದನು. ಇದರಿಂದ ನೊಂದ ಜತ್ಲಾ ತನ್ನ ಪತಿಯ ವಿರುದ್ಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಏನಿದು ಪ್ರಕರಣ?
    ಆರೋಪಿಯ ಪೋಷಕರು ಕೆಲ ವರ್ಷಗಳ ಹಿಂದೆ ಟೆಕ್ಕಿ ಹರಿಪ್ರಸಾದ್ ತೋಟಾ ಜೊತೆಗೆ ವಾದಿಕಾ ಜತ್ಲಾ ವಿವಾಹ ಮಾಡಿಸಿದ್ದರು. ಪತ್ನಿ ವಾದಿಕಾ ಜತ್ಲಾ ಕೂಡ ಟೆಕ್ಕಿಯಾಗಿದ್ದು, ಇಬ್ಬರು ಅಮೆರಿಕಾದಲ್ಲಿ ವಾಸಿಸುತ್ತಿದ್ದರು. ಕೆಲ ತಿಂಗಳ ಬಳಿಕ ಅಮೆರಿಕದಿಂದ ಬೆಂಗಳೂರಿಗೆ ಬಂದು ನೆಲೆಸಿದ್ದರು. ಆದರೆ ಆರೋಪಿ ಹರಿಪ್ರಸಾದ್ ತೋಟಾ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದನು. ಜೊತೆಗೆ ಆಕೆಯನ್ನು ಅನುಮಾನಿಸುತ್ತಿದ್ದನು.

    ಆಹಾರವನ್ನು ಕೊಡದೆ ಪತ್ನಿಯ ಜೊತೆಗೆ ಮಗುವನ್ನು ಮನೆಯಿಂದ ಹೊರ ಹಾಕಿ ಅಮಾನವೀಯವಾಗಿ ವರ್ತಿಸಿದ್ದನು. ಆಗ ಪತ್ನಿ ಕೊರೆಯುವ ಚಳಿಯಲ್ಲಿ ಮನೆ ಹೊರಭಾಗದ ಕಾರಿಡಾರಿನಲ್ಲೇ ಮಗು ಸಮೇತ ರಾತ್ರಿಯಿಡೀ ಕಳೆದಿದ್ದರು ಎಂದು ತಿಳಿದುಬಂದಿದೆ. ಆದರೆ ಕಳೆದ ಮೂರು ತಿಂಗಳಿನಿಂದ ಆರೋಪಿ ಪತ್ನಿ ಮಗುವನ್ನು ಬಿಟ್ಟುಹೋಗಿದ್ದಾನೆ. ಅಂದಿನಿಂದ ಬೆಂಗಳೂರಿನಲ್ಲಿ ಪತಿಗಾಗಿ ವಾದಿಕಾ ಜತ್ಲಾ ಹುಡುಕಾಡಿದ್ದಾರೆ. ಆದರೆ ಎಲ್ಲೂ ಪತ್ತೆಯಾಗಿಲ್ಲ. ಇತ್ತ ಅತ್ತೆ-ಮಾವ ಕೂಡ ಕಿರುಕುಳ ನೀಡುತ್ತಿದ್ದರು.

    ಕೊನೆಗೆ ವಾದಿಕಾ ಜಾತ್ಲಾ ಈ ಘಟನೆ ಸಂಬಂಧ ರಾಮಮೂರ್ತಿ ನಗರ ಠಾಣೆಗೆ ದೂರು ನೀಡಿದ್ದಾರೆ. ಪತಿ, ಮಾವ ಸುದರ್ಶನ್ ತೋಟಾ ಮತ್ತು ಅತ್ತೆ ಸುಗುತಾ ದೇವಿ ಸೇರಿದಂತೆ ನಾಲ್ವರ ವಿರುದ್ಧ ದೂರು ನೀಡಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಟೆಕ್ಕಿ ಪತಿ ಹರಿಪ್ರಸಾದ್ ತೋಟಾ ಸೇರಿದಂತೆ ಮನೆ ಸದಸ್ಯರ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

  • ಪತ್ನಿಯ ಗುಪ್ತಾಂಗಕ್ಕೆ ಪೆಟ್ರೋಲ್ ಸುರಿದು ಬೆಂಕಿಯಿಟ್ಟ ಪತಿ

    ಪತ್ನಿಯ ಗುಪ್ತಾಂಗಕ್ಕೆ ಪೆಟ್ರೋಲ್ ಸುರಿದು ಬೆಂಕಿಯಿಟ್ಟ ಪತಿ

    -ಸಾವು, ಬದುಕಿನ ಮಧ್ಯೆ ಪತ್ನಿ ಹೋರಾಟ

    ಬೆಂಗಳೂರು: ವ್ಯಕ್ತಿಯೊಬ್ಬ ಪತ್ನಿಯ ಗುಪ್ತಾಂಗಕ್ಕೆ ಪೆಟ್ರೋಲ್ ಸುರಿದು ಬೆಂಕಿಯಿಟ್ಟು ವಿಕೃತಿ ಮೆರೆದಿರುವ ಘಟನೆ ಬೆಂಗಳೂರಿನ ಟಿಸಿ ಪಾಳ್ಯದಲ್ಲಿ ನಡೆದಿದೆ.

    ಆರೋಪಿ ಸೂರಜ್ ಸಿಂಗ್ ಕೃತ್ಯಕ್ಕೆ ಪತ್ನಿ ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ. ಮಹಿಳೆಯ ಪೋಷಕರು ಮಗಳ ಉತ್ತಮ ಭವಿಷ್ಯಕ್ಕಾಗಿ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಅಲ್ಲದೇ ವರದಕ್ಷಿಣೆ ನೀಡಿ, 15 ಖರ್ಚು ಮಾಡಿ ಮದುವೆ ಮಾಡಿಕೊಟ್ಟಿದ್ದರು.

    ಪತಿ ಸೂರಜ್ ಸಿಂಗ್ ವಿವಾಹವಾದ ಆರಂಭದಿಂದಲೇ ತಂದೆಯ ಮನೆಯಿಂದ ಹಣ ತರುವಂತೆ ಹೆಂಡತಿಗೆ ಪೀಡಿಸುತ್ತಿದ್ದನು. ಪಾಪಿ ಪತಿಯ ಹಿಂಸೆ ತಾಳಲಾರದೇ ಪತ್ನಿ ಒಂದೇರಡು ಬಾರಿ ಹಣವನ್ನು ತಂದು ಕೊಟ್ಟಿದ್ದಳು. ಆದರೂ ಆರೋಪಿ ಸೂರಜ್‍ಗೆ ಹೆಂಡತಿಗಿಂತ ಅವಳ ಹಣ, ಆಸ್ತಿಯೇ ದೊಡ್ಡದಾಗಿದ್ದರಿಂದ ನಿತ್ಯ ಗಲಾಟೆ ಮಾಡುತ್ತಿದ್ದ. ಇತ್ತೀಚೆಗಷ್ಟೆ ಮತ್ತೆ ಸೂರಜ್ ಸಿಂಗ್ ಮತ್ತು ಆತನ ತಾಯಿ ಸೇರಿಕೊಂಡು ಗಲಾಟೆ ಮಾಡಿದ್ದಾರೆ.

    ಈ ವೇಳೆ ಗಲಾಟೆ ವಿಕೋಪಕ್ಕೆ ಹೋಗಿ ಪತ್ನಿಯ ಗುಪ್ತಾಂಗಕ್ಕೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟಿದ್ದಾನೆ. ಪತಿಯ ನೀಚ ಕೃತ್ಯಕ್ಕೆ ಬಲಿಯಾಗಿರೋ ಪತ್ನಿ ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಟ ಮಾಡುತ್ತಿದ್ದಾಳೆ. ಇತ್ತ ಪತ್ನಿಯ ಗುಪ್ತಾಂಗಕ್ಕೆ ಬೆಂಕಿ ಇಟ್ಟ ಪತಿರಾಯ ತಲೆ ಮರೆಸಿಕೊಂಡಿದ್ದಾನೆ.

    ಆರೋಪಿ ಪತಿ ಮತ್ತು ಪತ್ನಿ ಬೆಂಗಳೂರಿನ ಟಿಸಿ ಪಾಳ್ಯದಲ್ಲಿ ವಾಸಿಸುತ್ತಿದ್ದರು. ಸದ್ಯಕ್ಕೆ ಘಟನೆ ಬಳಿಕ ತಾಯಿ ಮಗ ಇಬ್ಬರು ತಲೆಮರಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಘಟನೆ ಸಂಬಂಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಹನಿಮೂನ್ ರಾತ್ರಿಯೇ ಸತ್ಯ ಬಿಚ್ಚಿಟ್ಟ ಡಾಕ್ಟರ್ – ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ

    ಹನಿಮೂನ್ ರಾತ್ರಿಯೇ ಸತ್ಯ ಬಿಚ್ಚಿಟ್ಟ ಡಾಕ್ಟರ್ – ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ

    – ಹನಿಮೂನ್‍ನಿಂದ ಬಂದು ತವರು ಮನೆಗೆ ಹೋದ ವಧು

    ಲಕ್ನೋ: ವೈದ್ಯನೊಬ್ಬ ಹನಿಮೂನ್ ರಾತ್ರಿಯೇ ತಾನೊಬ್ಬ ಸಲಿಂಗಕಾಮಿ, ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದೇನೆ ಎಂದು ಪತ್ನಿಯ ಮುಂದೆ ಸತ್ಯ ಬಾಯಿಬಿಟ್ಟಿದ್ದಾನೆ. ಅಲ್ಲದೇ ಪತಿಯ ಮನೆಯವರು ವರದಕ್ಷಿಣೆ ಕಿರುಕುಳ ನೀಡಿದ್ದು, ಇದೀಗ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

    ಮಹಿಳೆ ತನ್ನ ಪತಿಯ ವಿರುದ್ಧ ಆಗ್ರಾ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರ ದಾಖಲಿಸಿದ್ದಾಳೆ. ಮದುವೆ ನಂತರ ಹನಿಮೂನ್‍ಗಾಗಿ ಹೋಟೆಲ್‍ವೊಂದಕ್ಕೆ ಹೋಗಿದ್ದೆವು. ಆದರೆ ಆ ರಾತ್ರಿಯೇ ಪತಿ ಸತ್ಯ ಬಿಚ್ಚಿಟ್ಟಿದ್ದಾನೆ. ನಾನು ಸಲಿಂಗಕಾಮಿ ಮತ್ತು ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದಾನೆ ಎಂದು ಹೇಳಿದ್ದಾನೆ. ಅಷ್ಟೇ ಅಲ್ಲದೇ ನನ್ನನ್ನು ಕೊಲೆ ಮಾಡಲು ಯತ್ನಿಸಿದ. ಅತ್ತೆ ಕೂಡ ವರದಕ್ಷಿಣೆಗಾಗಿ ಕಿರುಕುಳ ನೀಡಿದ್ದಾರೆ ಎಂದು ಸಂತ್ರಸ್ತೆಯ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

    ಕೊತ್ವಾಲಿ ಪ್ರದೇಶದ ಮೂಲದ ಯುವತಿ 2019 ಮೇ ತಿಂಗಳಲ್ಲಿ ಹತ್ರಾಸ್ ಮೂಲದ ಹುಡುಗನ ಜೊತೆ ಮದುವೆಯಾಗಿದ್ದಳು. ಆತ ವೃತ್ತಿಯಲ್ಲಿ ವೈದ್ಯನಾಗಿದ್ದನು. ಮದುವೆಗಾಗಿ 30 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಆದರೂ ನಮ್ಮ ಅತ್ತೆ-ಮಾವ ಸಂತೋಷವಾಗಿರಲಿಲ್ಲ. ವಿವಾಹವಾದ ಎರಡು ದಿನಗಳ ನಂತರ ಪತಿ ಮನಾಲಿಗೆ ಹನಿಮೂನ್‍ಗೆ ಕರೆದುಕೊಂಡು ಹೋಗಿದ್ದನು. ಅಲ್ಲಿನ ರೆಸಾರ್ಟಿನಲ್ಲಿ ಉಳಿದುಕೊಂಡಿದ್ದೆವು ಎಂದು ಸಂತ್ರಸ್ತೆ ತಿಳಿಸಿದ್ದಾಳೆ.

    ಮಹಿಳೆ ಆರೋಪ:
    ಹನಿಮೂನ್ ರಾತ್ರಿಯೇ ನಾನು ಸಲಿಂಗಕಾಮಿ ಮತ್ತು ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದಾನೆ ಎಂದು ಹೇಳಿದ್ದನು. ಅಲ್ಲದೇ ಹೋಟೆಲ್‍ನಲ್ಲಿಯೇ ನನಗೆ ಥಳಿಸಿ, ಕೊಲೆ ಮಾಡಲು ಪ್ರಯತ್ನಿಸಿದನು.  ಜೊತೆಗೆ ಈ ವಿಚಾರವನ್ನು ಯಾರಿಗೂ ಹೇಳಬಾರದು ಎಂದು ಬೆದರಿಕೆ ಕೂಡ ಹಾಕಿದ್ದನು. ಇದಕ್ಕೆ ವಿರೋಧಿಸಿದಕ್ಕೆ ನನ್ನ ಮೊಬೈಲ್ ಫೋನ್ ಕಿತ್ತುಕೊಂಡು ಬಿಸಾಡಿದನು. ಈ ವೇಳೆ ಹೋಟೆಲ್ ಸಿಬ್ಬಂದಿ ನನ್ನ ರಕ್ಷಣೆ ಮಾಡಿದರು.

    ಈ ಬಗ್ಗೆ ಮಾಹಿತಿ ಪಡೆದು ಮನಾಲಿ ಪೊಲೀಸರು ಸ್ಥಳಕ್ಕೆ ಬಂದಿದ್ದರು. ಆದರೆ ಪತಿ ಪೊಲೀಸರೊಂದಿಗೆ ಶಾಂತವಾಗಿ ಮಾತನಾಡಿದನು. ಬಳಿಕ ಇಬ್ಬರೂ ವಾಪಸ್ ಮನೆಗೆ ಬಂದೆವು. ಆದರೆ ನಾನು ಪೋಷಕರ ಮನೆಗೆ ಹೋದೆ. ಕೆಲ ದಿನಗಳ ನಂತರ ಅತ್ತೆ ನಮ್ಮ ಮನೆಗೆ ಬಂದು 10 ಲಕ್ಷ ರೂಪಾಯಿ ವರದಕ್ಷಿಣೆ ಕೊಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

    ಮಹಿಳಾ ಪೊಲೀಸ್ ಠಾಣೆಯಲ್ಲಿ ಮಹಿಳೆ ಪತಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಆಕೆ ನೀಡಿದ ದೂರಿನ ಆಧಾರದ ಮೇರೆಗೆ ಪತಿಯ ವಿರುದ್ಧ ಅನೇಕ ಪ್ರಕರಣಗಳ ಅಡಿಯಲ್ಲಿ ಎಫ್‍ಐಆರ್ ದಾಖಲಿಸಿದ್ದೇವೆ. ತನಿಖೆಯ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

  • ಗೃಹಿಣಿ ಆತ್ಮಹತ್ಯೆ – ಡೈರಿ, ಪತಿ ಮೊಬೈಲ್ ವಶಕ್ಕೆ ಪಡೆದ ಪೊಲೀಸರು

    ಗೃಹಿಣಿ ಆತ್ಮಹತ್ಯೆ – ಡೈರಿ, ಪತಿ ಮೊಬೈಲ್ ವಶಕ್ಕೆ ಪಡೆದ ಪೊಲೀಸರು

    ಚಾಮರಾಜನಗರ: ವರದಕ್ಷಿಣೆ ಕಿರುಕುಳಕ್ಕೆ ಮನನೊಂದ ಗೃಹಿಣಿಯೊಬ್ಬಳು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ಅಂಕಶೆಟ್ಟಿಪುರದಲ್ಲಿ ಜರುಗಿದೆ.

    ಗೃಹಿಣಿಯನ್ನು ತ್ರಿವೇಣಿ ಎಂದು ಗುರುತಿಸಲಾಗಿದೆ. ಈಕೆಗೆ ಕಳೆದ ಒಂದು ವರ್ಷದ ಹಿಂದೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಮೂಗೂರು ಗ್ರಾಮದಿಂದ ಚಾಮರಾಜನಗರ ತಾಲೂಕಿನ ಅಂಕಶೆಟ್ಟಿಪುರ ಗ್ರಾಮದ ರಾಜೇಂದ್ರನೊಂದಿಗೆ ವಿವಾಹವಾಗಿತ್ತು.

    ವರದಕ್ಷಿಣೆ ವಿಚಾರವಾಗಿ ತನಗೆ ಪ್ರತಿನಿತ್ಯ ಗಂಡ ಸೇರಿದಂತೆ ಮನೆಯವರೆಲ್ಲರೂ ಕಿರುಕುಳ ನಿಡುತ್ತಿದ್ದರು ಎಂದು ನಮ್ಮ ಮಗಳು ತ್ರಿವೇಣಿ ಕೆಲದಿನಗಳ ಹಿಂದೆ ನಮಗೆ ತಿಳಿಸಿದ್ದಳು ಎಂದು ಗೃಹಿಣಿ ಕುಟುಂಬಸ್ಥರು ಆರೋಪಿಸಿದ್ದಾರೆ. ಹೀಗಾಗಿ ತ್ರಿವೇಣಿಯ ಪತಿ ರಾಜೇಂದ್ರ ಹಾಗೂ ಈತನ ಮನೆಯವರ ವಿರುದ್ಧ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

    ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ ತ್ರಿವೇಣಿ ತನ್ನ ಗಂಡ ಹಾಗೂ ಮನೆಯವರು ತನ್ನೊಂದಿಗೆ ಪ್ರತಿ ದಿನ ಹೇಗೆ ನಡೆದು ಕೊಳ್ಳುತ್ತಿದ್ದರು, ಹೇಗೆಲ್ಲಾ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಡೈರಿಯಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಈ ಡೈರಿಯನ್ನು ಹಾಗೂ ಪತಿ ರಾಜೇಂದ್ರನ ಮೊಬೈಲ್ ಅನ್ನು ಚಾಮರಾಜನಗರ ಪೂರ್ವ ಪೊಲೀಸ್ ಠಾಣೆ ಪೊಲೀಸರು ಸೀಜ್ ಮಾಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • 9 ತಿಂಗಳ ಹಿಂದೆ ಮದುವೆ – ನೇಣು ಬಿಗಿದ ಸ್ಥಿತಿಯಲ್ಲಿ ಗರ್ಭಿಣಿಯ ಶವ ಪತ್ತೆ

    9 ತಿಂಗಳ ಹಿಂದೆ ಮದುವೆ – ನೇಣು ಬಿಗಿದ ಸ್ಥಿತಿಯಲ್ಲಿ ಗರ್ಭಿಣಿಯ ಶವ ಪತ್ತೆ

    ಕೋಲಾರ: ನೇಣು ಬಿಗಿದ ಸ್ಥಿತಿಯಲ್ಲಿ ನಾಲ್ಕು ತಿಂಗಳ ಗರ್ಭಿಣಿಯ ಶವ ಅನುಮಾನಾಸ್ಪದವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಮಾಲೂರು ತಾಲೂಕಿನ ದೊಡ್ಡಕಲ್ಲಹಳ್ಳಿ ನಡೆದಿದೆ.

    ಮೇಘನಾ (22) ಮೃತ ಗರ್ಭಿಣಿ. ಪತಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೇಘನಾಳ ಮೃತದೇಹ ಪತ್ತೆಯಾಗಿದೆ. ವರದಕ್ಷಿಣೆ ಕಿರುಕುಳದಿಂದ ಮೇಘನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ.

    9 ತಿಂಗಳ ಹಿಂದೆಯಷ್ಟೇ ದೊಡ್ಡಕಲ್ಲಹಳ್ಳಿ ನಿವಾಸಿ ಮಹೇಶ್ ಜೊತೆ ಮೇಘನಾಳ ಮದುವೆಯಾಗಿತ್ತು. ಈಗ ಮೃತ ಮೇಘನಾ ನಾಲ್ಕು ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ. ಆದರೆ ಇಂದು ಮನೆಯಲ್ಲಿಯೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಇತ್ತ ಆಕೆಯ ಪೋಷಕರು ಪತಿಯ ಮನೆಯವರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.

    ಸದ್ಯಕ್ಕೆ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದು, ಮೇಘನಾಳ ಪತಿ ಮಹೇಶ್ ಹಾಗೂ ಮಾವವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಘಟನೆ ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • 7 ತಿಂಗ್ಳ ಹಿಂದೆ ಮದ್ವೆಯಾಗಿದ್ದ ಯುವತಿ ಸಾವು – ಪೊಲೀಸ್ ಮಗ ಅರೆಸ್ಟ್

    7 ತಿಂಗ್ಳ ಹಿಂದೆ ಮದ್ವೆಯಾಗಿದ್ದ ಯುವತಿ ಸಾವು – ಪೊಲೀಸ್ ಮಗ ಅರೆಸ್ಟ್

    – ಭರವಸೆಯೊಂದಿಗೆ ಗಂಡನ ಮನೆಗೆ ಕಳುಹಿಸಿದ್ದ ಪೋಷಕರು
    – ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

    ಭುವನೇಶ್ವರ: ವರದಕ್ಷಿಣೆಗಾಗಿ ಪತ್ನಿಯನ್ನು ಕೊಂದ ಆರೋಪದ ಮೇಲೆ ಪೇದೆಯ ಮಗನನ್ನು ಪೊಲೀಸರು ಬಂಧಿಸಿರುವ ಘಟನೆ ಒಡಿಶಾದಲ್ಲಿ ನಡೆದಿದೆ.

    ವಂದನಾ ಮೃತ ಮಹಿಳೆ. ಒಡಿಶಾದ ತಮಂಡೋ ಪೊಲೀಸ್ ಠಾಣೆಯ ಪೇದೆಯ ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಜಮಿನಿಕಾಂತ್ ಗೋಚಾಯತ್ ಎಂದು ಗುರುತಿಸಲಾಗಿದೆ. ಮೃತ ವಂದನಾಳ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಆತನನ್ನು ಪೊಲೀಸರು ಬಂಧಿಸಿದ್ದಾರೆ.

    ವರದಕ್ಷಿಣೆಗಾಗಿ ಜಮಿನಿಕಾಂತ್ ಮತ್ತು ಆತನ ತಂದೆ ಬಿಜಯ್ ಕುಮಾರ್ ನಮ್ಮ ಮಗಳನ್ನು ಕೊಲೆ ಮಾಡಿದ್ದಾರೆ ಎಂದು ಪೋಷಕರು ದೂರಿನಲ್ಲಿ ಆರೋಪಿಸಿದ್ದಾರೆ. ಇದೇ ವರ್ಷ ಫೆಬ್ರವರಿ 16 ರಂದು ಮೃತ ವಂದನಾ ಮತ್ತು ಜಮಿನಿಕಾಂತ್ ಮದುವೆಯಾಗಿತ್ತು. ಆದರೆ ಮದುವೆಯಾದ ದಿನದಿಂದಲೂ ಜಮಿನಿಕಾಂತ್, ಆತನ ತಂದೆ-ತಾಯಿ ಹೆಚ್ಚಿನ ವರದಕ್ಷಿಣೆಗಾಗಿ ಕಿರುಕುಳ ಮತ್ತು ಹಿಂಸೆ ನೀಡುತ್ತಿದ್ದರು ಎಂದು ವಂದನಾ ಪೋಷಕರು ಆರೋಪಿಸಿದ್ದಾರೆ.

    ಸೆಪ್ಟೆಂಬರ್ 19 ಶನಿವಾರ ವಂದನಾ ಪೇದೆಯ ಮನೆಯಲ್ಲಿ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ವಂದನಾಳ ಆರೋಗ್ಯ ಸರಿಯಿಲ್ಲ. ಹೀಗಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇನೆ ಎಂದು ಜಮಿನಿಕಾಂತ್ ನಮಗೆ ಫೋನ್ ಮಾಡಿ ಹೇಳಿದ್ದನು. ಆದರೆ ಆಸ್ಪತ್ರೆಗೆ ಹೋದ ನಂತರ ನಮ್ಮ ಮಗಳು ಸಾವನ್ನಪ್ಪಿದ್ದಾಳೆ ಅಂತ ಹೇಳಿರುವುದಾಗಿ ಮೃತಳ ತಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಅಷ್ಟೇ ಅಲ್ಲದೇ, “ನಮ್ಮ ಮಗಳ ಕುತ್ತಿಗೆಯಲ್ಲಿ ಹಗ್ಗದ ಗುರುತು ನೋಡಿದ್ದೇವೆ ಮತ್ತು ಅವಳ ದೇಹವು ನೀಲಿ ಬಣ್ಣಕ್ಕೆ ತಿರುಗಿತ್ತು. ಅವರು ನಮ್ಮ ಮಗಳನ್ನು ವರದಕ್ಷಿಣೆಗಾಗಿ ಕೊಲೆ ಮಾಡಿದ್ದಾರೆ. ನಂತರ ಅನುಮಾನಬರದಂತೆ ನೇಣು ಬಿಗಿದಿದ್ದಾರೆ. ನಮ್ಮ ಮಗಳು ಈ ಹಿಂದೆಯೂ ಕಿರುಕುಳ ನೀಡುತ್ತಿರುವ ಬಗ್ಗೆ ಹೇಳಿದ್ದಳು. ಆದರೆ ನಾವು ಸಮಸ್ಯೆ ಬಗೆಹರಿಯುತ್ತದೆ ಎಂಬ ಭರವಸೆಯೊಂದಿಗೆ ಅವಳನ್ನು ಮತ್ತೆ ಪತಿಯ ಮನೆಗೆ ಕಳುಹಿಸಿದ್ದೆವು. ಆದರೆ ಈ ರೀತಿ ಆಗುತ್ತದೆ ಎಂದು ನಮಗೆ ಗೊತ್ತಿರಲಿಲ್ಲ ಎಂದು ತಾಯಿ ಕಣ್ಣೀರು ಹಾಕಿದ್ದಾರೆ.

    ಸದ್ಯಕ್ಕೆ ಪೋಷಕರು ನೀಡಿದ ದೂರಿನ ಆಧಾರದ ಮೇರೆಗೆ ಈ ಕುರಿತು ಪ್ರಕರಣ ದಾಖಲಾಗಿದ್ದು, ಕೊಲೆ ಆರೋಪದ ಮೇರೆಗೆ ಪೊಲೀಸರು ಜಮಿನಿಕಾಂತ್‍ನನ್ನು ಬಂಧಿಸಿದ್ದಾರೆ.